ಶ್ರೀಗುರುವಿನ ಹಸ್ತದಲ್ಲಿ ಉಪದೇಶವ ಪಡೆದು ಭಕ್ತರಾದುದು ಮೊದಲಾಗಿ ನಿಮ್ಮ ಲಿಂಗವಾರೋಗಣೆಯ ಮಾಡಿದ ದಿನವುಂಟೆ ? ಉಂಟಾದಡೆ ತೋರಿ
ಇಲ್ಲದಿದ್ರ್ದರೆ ನೀವು ಕೇಳಿ: ನಾನು ನಮ್ಮ ಗುರುವಿನ ಹಸ್ತದಲ್ಲಿ ಉಪದೇಶವಡೆದು ಭಕ್ತನಾದುದು ಮೊದಲಾಗಿ ನಮ್ಮ ಲಿಂಗವು ನಿರಂತರ ಆರೋಗಣೆಯ ಮಾಡಿ ಪ್ರಸಾದವ ಕರುಣಿಸುವುದು
ಅದು ಕಾರಣ ನಮಗೆ ಲಿಂಗವುಂಟು. ನಿಮ್ಮ ಲಿಂಗಕ್ಕೆ ಕರಚರಣ ಅವಯವಂಗಳಿಲ್ಲವಾಗಿ ನಿಮ್ಮ ಲಿಂಗವು ಸಕಲ ಭೋಗಂಗಳ ಭೋಗಿಸಲರಿಯದಾಗಿ ನಿಮಗೆ ಲಿಂಗವಿಲ್ಲ. ಪ್ರಸಾದವಿಲ್ಲವಾಗಿ ನಿಮಗೆ ಲಿಂಗವಿಲ್ಲವೆಂದೆನು. ಅದಕ್ಕೆ ನೀವು ಸಂಕೀರ್ಣಗೊಳ್ಳದಿರಿ. ಆ ವಿವರವನು ನಾನು ನಿಮಗೆ ಚೆನ್ನಾಗಿ ಕಾಣಿಸಿ ತೋರಿ ಹೇಳುವೆನು: ನಿಮ್ಮ ಶ್ರೀ ಗುರು ನಿಮಗೆ ಪ್ರಾಣಲಿಂಗ ಸಂಬಂಧವ ಮಾಡುವಲ್ಲಿ
ಆ ಲಿಂಗವೆ ಜಂಗಮದಂಗವು
ಆ ಜಂಗಮವ ಲಿಂಗದ ಪ್ರಾಣಚೈತನ್ಯದ ಕಳೆಯ ಮಾಡಿ ನಿಮ್ಮ ಶ್ರೀಗುರು ಕರಸ್ಥಲದಲ್ಲಿ ಆ ಲಿಂಗವ ಕೊಟ್ಟ ಕಾರಣ
ಇಂತಹ ಜಂಗಮ ಮುಖದಲ್ಲಿ ತ್ಯಪ್ತನಹೆನಲ್ಲದೆ ಲಿಂಗದ ಮುಖದಲ್ಲಿ ನಾನು ತೃಪ್ತನಹೆನೆಂದು ಹೇಳಿಕೊಟ್ಟನೆ ? ಶ್ರೀಗುರು ಲಿಂಗವನು ಹಾಗೆ ಕೊಟ್ಟುದಿಲ್ಲವಾಗಿ. ಅದೆಂತೆಂದಡೆ
ಶಿವರಹಸ್ಯದಲ್ಲಿ ಶಿವನ ವಾಕ್ಯ: ಸ್ಥಾವರಾರ್ಪಿತನೈವೇದ್ಯಾನ್ನ ಚ ತೃಪ್ತಿರ್ಮಹೇಶ್ವರಿ ಜಂಗಮಾರ್ಪಿತನೈವೇದ್ಯಾದಹಂ ತುಷ್ಟೋ ವರಾನನೇ ಎಂದುದಾಗಿ
ಇದಕ್ಕೆ ಉಪದೃಷ್ಟವಾಕ್ಯ: ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ವೃಕ್ಷಪಲ್ಲವಿಸುವುದೆ ಬೇರಿಂಗೆ ನೀಡಬೇಕಲ್ಲದೆ ? ಅದೆಂತೆಂದಡೆ: ವ್ಯಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ತು ಜಂಗಮಃ ಅಂತು ವ್ಯಕ್ಷದ ಕೊನೆಯ ಸ್ಥಾನವೆ ಲಿಂಗವು ಬೇರಿನ ಸ್ಥಾನವೆ ಜಂಗಮವು. ಮತ್ತೆಯೂ ದೃಷ್ಟ: ಗರ್ಭಿಣೀಸ್ತ್ರೀಗೆ ಉಣಲಿಕ್ಕಿದಡೆ ಆ ಗರ್ಭದೊಳಗಣ ಶಿಶು ತೃಪ್ತವಹುದಲ್ಲದೆ
ಆ ಸ್ತ್ರೀಯ ಗರ್ಭದ ಮೇಲೆ ಸಕಲಪದಾರ್ಥಂಗಳನಿಕ್ಕಿದಡೆ ಆ ಗರ್ಭದೊಳಗಣ ಶಿಶು ತೃಪ್ತವಾಗಬಲ್ಲುದೆ ? ಅದು ಕಾರಣ_ ಆ ಗರ್ಭದೊಳಗಣ ಶಿಶುವಿನ ಸ್ಥಾನವೆ ಲಿಂಗವು
ಆ ಗರ್ಭದ ಸ್ತ್ರೀಯ ಸ್ಥಾನವೆ ಜಂಗಮವು. ಅದಕ್ಕೆ ಮತ್ತೆಯೂ ದೃಷ್ಟ: ಪೃಥ್ವಿಗೆ ಚೈತನ್ಯವಾದಡೆ ಸಸಿಗಳು ಬೆಳೆವವಲ್ಲದೆ ಆ ಸಸಿಗಳ ಕೊನೆಯ ಮೇಲೆ ಮಳೆ ಸುರಿದಡೆ ಆ ಸಸಿಗಳು ಬೆಳೆಯಬಲ್ಲವೆ ? ಬೆಳೆಯಲರಿಯವಾಗಿ. ಅಂತು ಆ ಸಸಿಯ ಕೊನೆಯ ಸ್ಥಾನವೆ ಲಿಂಗವು ಆ ಪೃಥ್ವೀ ಸ್ಥಾನವೆ ಜಂಗಮವು. ಅದಕ್ಕೆ ಮತ್ತೆಯೂ ದೃಷ್ಟ: ದೇಹದ ಮೇಲೆ ಸಕಲ ಪದಾರ್ಥವ ತಂದಿರಿಸಿದಡೆ ಆತ್ಮನು ತೃಪ್ತನಾಗಬಲ್ಲನೆ
ಜಿಹ್ವೆಯ ಮುಖದಲ್ಲಿ ತೃಪ್ತನಹನಲ್ಲದೆ ? ಅಂತು ದೇಹಸ್ಥಾನವೆ ಲಿಂಗವು; ಜಿಹ್ವೆಯ ಸ್ಥಾನವೆ ಜಂಗಮವು. ಇಂತೀ ನಾನಾ ದೃಷ್ಟಂಗಳಲ್ಲಿ ತೋರಿ ಹೇಳಿದ ತೆರನಲ್ಲಿ ನಿಮ್ಮ ಲಿಂಗವು ನಮ್ಮ ಜಂಗಮದ ಸರ್ವಾಂಗದಲ್ಲಿ ಹೊಂದಿಹ ಕಾಣಾ ಕೂಡಲಚೆನ್ನಸಂಗಮದೇವಾ.