ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಕಾಮಾರಪುಕುರಕ್ಕೆ ಹೋಗಿ ಬಂದದ್ದು : ತೀರ್ಥಯಾತ್ರೆ

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (1919)  by ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ
ಕಾಮಾರಪುಕುರಕ್ಕೆ ಹೋಗಿ ಬಂದದ್ದು : ತೀರ್ಥಯಾತ್ರೆ

ಒಂಬತ್ತನೆಯ ಅಧ್ಯಾಯ.

ಕಾಮಾರಪುಕುರಕ್ಕೆ ಹೋಗಿ ಬಂದಿದ್ದು; ತೀರ್ಥಯಾತ್ರೆ.

ಆರುತಿಂಗಳಕಾಲ ಸರಿಯಾದ ಅನ್ನಾಹಾರಗಳಿಲ್ಲದೆ ನಿರ್ವಿಕಲ್ಪ ಸಮಾಧಿಯಲ್ಲಿ ಇದ್ದದ್ದರಿಂದಲೋ ಏನೋ ಪರಮಹಂಸರಿಗೆ ಈ ಸಮಯದಲ್ಲಿ ಒಂದು ಭಯಂಕರವಾದ ಹೊಟ್ಟೆಯನೋವು ಪ್ರಾಪ್ತ ವಾಯಿತು. ಏನೇನೋ ಚಿಕಿತ್ಸೆ ಮಾಡಿದರು. ರೋಗವು ಯಾವು ದಕ್ಕೂ ಜಗ್ಗದೆ ಸುಮಾರು ಆರು ತಿಂಗಳ ಕಾಲ ಅದನ್ನು ಅನುಭವಿಸ ಬೇಕಾಯಿತು. ಈಗ ಸ್ವಲ್ಪ ಶಮನವಾಯಿತು. ಮನಸ್ಸು ಭಾವಮುಖದಲ್ಲಿ ದ್ವ್ಯೆತಾದ್ವೆತ ಭೂಮಿಯಲ್ಲಿರುವುದಕ್ಕೆ ಅಭ್ಯಾಸವಾ ಗುತ್ತ ಬಂತು. ಆದರೆ ದೇಹಸ್ಥಿತಿ ಮಾತ್ರ ಮೊದಲಿನಂತೆ ಇರಲಿಲ್ಲ. ಮಳೆಗಾಲ ಬಂದು ಗಂಗಾನದಿಯ ನೀರೆಲ್ಲ ಕದಡಿಹೋಗಿ ಆ ನೀರನ್ನು ಕುಡಿದರೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಳ್ಳ ಬಹು ದೆಂಬ ಹೆದರಿಕೆಯಾಯಿತು. ಆದ್ದರಿಂದ 1867 ನೇ ಇಸವಿಯಲ್ಲಿ ಇನ್ನೂ ವರ್ಷಾಕಾಲ ಹುಟ್ಟುವುದಕ್ಕೆ ಸ್ವಲ್ಪ ಮುಂಚೆಯೇ ಪರಮ ಹಂಸರು ಜೊತೆಯಲ್ಲಿ ಹೃದಯನನ್ನೂ ಭೈರವಿ ಬ್ರಾಹ್ಮಣಿ[]ಯನ್ನೂ ಕರೆದುಕೊಂಡು ಕಾಮಾರಪುಕುರಕ್ಕೆ ಹೋದರು. []

ಬಹುಕಾಲದ ಮೇಲೆ ಪುನಃ ಅಲ್ಲಿಗೆ ಬಂದದ್ದನ್ನು ನೋಡಿ ಎಲ್ಲರಿಗೂ ಬಹು ಸಂತೋಷವಾಯಿತು. ಜಯರಾಮನಾಟಯಿ೦ದ ಶ್ರೀ ಶಾರದಾದೇವಿಯನ್ನು ಕರೆಸಬೇಕೆಂದು ಮನೆಯಲ್ಲಿ ಹೆಂಗಸರು ಮಾತನಾಡಿಕೊಂಡರು. ಇದು ಪರಮಹಂಸರ ಕಿವಿಗೆ ಬಿತ್ತು. ಆದರೂ ಅವರು ಮಾತ್ರ ಉದಾಸೀನಭಾವದಿಂದಿದ್ದರು. ಬೇಡವೆನ್ನದಿದ್ದರೆ ಸಮ್ಮತಿಸಿದ ಹಾಗೆಯೇ ಎಂದುಕೊಂಡು ಆಕೆಯನ್ನು ಕಾಮಾರಪುಕುರಕ್ಕೆ ಬರಮಾಡಿಕೊಂಡರು.

ಆಗ ಶಾರದಾದೇವಿಗೆ ಹದಿನಾಲ್ಕು ವರ್ಷ ತುಂಬಿ ಹದಿನೈದನೆಯ ವರ್ಷ ನಡೆಯುತ್ತಿತ್ತು. ಆಕೆಯು ಕಾಮಾರಪುಕುರಕ್ಕೆ ಬ೦ದ ಕೂಡಲೆ ಪರಮಹಂಸರು ಆಕೆಗೆ ಮನೆಗೆಲಸಮಾಡುವುದು ಮೊದಲುಗೊಂಡು ಜನಗಳ ಸ್ವಭಾವವನ್ನು ಹೇಗೆ ತಿಳದುಕೊಳ್ಳಿಬೇಕು, ದುಡ್ಡನ್ನು ಹೇಗೆ ಸದ್ಯವಹಾರ ಮಾಡಬೇಕು, ಈಶ್ವರನಿಗೆ ಸರ್ವಸ್ವವನ್ನೂ ಸಮರ್ಪಣೆ ಮಾಡಿ ಹೇಗೆ ಸಾಧನೆ ಭಜನೆಗಳನ್ನು ಮಾಡಬೇಕು ಎಂಬ ಪಠ್ಯಂತ ಸಮಸ್ತವಿಷಯಗಳನ್ನೂ ತಿಳಿಸಿದರು. ಆಕೆಯ ಪತಿಯು ಈಶ್ವರನಿಗಾಗಿ ತನುಮನಧನಗಳನ್ನು ಧಾರೆಯೆರೆದು ಕೊಟ್ಟಿದ್ದಕ್ಕೆ ಪೂರ್ಣ ಸಮ್ಮತಿಯನ್ನು ಕೊಟ್ಟು, ಅಲೌಕಿಕನಾದ ಸ್ವಾರ್ಥತ್ಯಾಗಮಾಡಿ, ಕಾಮಗಂಧರಹಿತವಾದ ಶುದ್ದನಾದ ದಿವ್ಯ ಪ್ರೇಮದಿಂದ ತೃಪ್ತಳಾಗಿ ಆತನನ್ನು ಸಾಕ್ಷಾತ್ ಇಷ್ಟದೇವತೆಯಂತೆ ಸೇವಿಸುತ್ತ ಬ೦ದಳು ಆಕೆಯ ಮಹತ್ವವನ್ನೂ ಪುಣ್ಯವನ್ನೂ ವರ್ಣಿಸಬಲ್ಲವರಾರು? ಪರಮಹಂಸರು ಕಾಮಾರಪು ಕುರದಲ್ಲಿ ಸುಮಾರು ಏಳುತಿ೦ಗ ಇದ್ದು ಆಮೇಲೆ ದಕ್ಷಿಣೇಶ್ವರಕ್ಕೆ ಹಿಂತಿರುಗಿ ಬಂದರು. (ಶಾರದಾ ದೇವಿಯನ್ನು ಅವರ ತೌರುಮನೆಯವರು ಬಂದು ಕರೆದುಕೊಂಡು ಹೋದರು.) ಅಲ್ಲಿಗೆ ಬಂದ ಸುಮಾರು ಮೂರು ತಿಂಗಳಿಗೆ ಮಧುರಾ ನಾಥನು ನವರಿವಾರನಾಗಿ ವರಮಹಂಸರನ್ನೂ ಜೊತೆಯಲ್ಲಿ ಕರೆದು ಕೊಂಡು ಕಾಶಿ, ಬೃಂದಾವನ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ತೀರ್ಥಯಾತ್ರೆ ಮಾಡಿಕೊಂಡು ಬಂದನು. ಈ ತೀರ್ಥ ಯಾತ್ರೆಯಲ್ಲಿ, ಸಾಧುಸಂತರು, ಗುರುಗಳು, ಮಹಾತ್ಮರು ಅಲ್ಲಲ್ಲಿ ಯಾರಾದರೂ ಇದ್ದರೆಂದು ಕೇಳಿದರೆ ಪರಮಹಂಸರು ಅವರನ್ನು ದರ್ಶನಮಾಡಿಕೊಂಡು ಬರುತ್ತಿದ್ದರು. ಅನೇಕ ಸಾಧಕರೂ ಪರಮ ಹಂಸರನ್ನು ಕಂಡು ಅವರಿಂದ ಸಹಾಯ ಪಡೆದು ಕೃತಾರ್ಥರಾದರು. ಈ ತೀರ್ಥಯಾತ್ರೆ ಮಾಡುತ್ತಿರುವಾಗಲೇ ಅವರು ಒಂದು ಹಳ್ಳಿ,ಯಲ್ಲಿ ಕೆಲವು ತೀರ ದರಿದ್ರರನ್ನು ನೋಡಿ ಕಣ್ಣೀರುಹಾಕಿ ಅವರಿಗೆಲ್ಲ ಅಭ್ಯಂಗನ ಸುಖವಾದಊಟಗಳನ್ನು ಮಾಡಿಸಿ ಒಂದೊಂದು ಬಟ್ಟೆಯನ್ನು ಕೊಟ್ಟ ಹೊರತು ತಾವು ಮುಂದಕ್ಕೆ ಹೊರಡುವುದಿಲ್ಲವೆಂದು ಹಟಮಾಡಿ ಅಳುತ್ತ ಕುಳಿತುಕೊಂಡರಂತೆ. ಆಗ ಮಧುರಾನಾಥನು ನಾವಿರಾರು ರೂಪಾಯಿ ವೆಚ್ಚ ಮಾಡಿ ಅವರ ಅಭಿಪ್ರಾಯದಂತೆ ನಡೆಸಿದ ಮೇಲೆ ಪ್ರಯಾಣವು ಮುಂದಕ್ಕೆ ಸಾಗಿತು.

ಇತ್ತ ಶಾರದಾದೇವಿಯು ಜಯರಾಮವಾಡಿಯಲ್ಲಿ ವಾಸಮಾಡುತ್ತ ತನ್ನ ಸ್ವಾಮಿಯು ಬಂದು ತನ್ನನ್ನು ಯಾವಾಗ ಕರೆದುಕೊ೦ಡು ಹೋಗುವನೋ ಎಂದು ಎದುರುನೋಡುತ್ತಿದ್ದಳು. ಅವರನ್ನು ಕಾಮಾರಪುಕುರದಲ್ಲಿ ನೋಡಿದ ಮೇಲೆ ನಾಲ್ಕು ವರ್ಷಗಳು ಕಳೆದು ಹೋದುವು. ಆದರೂ ಇನ್ನೂ ಕರೆಸಿಕೊಳ್ಳದ್ದನ್ನು ನೋಡಿ ಆಕೆಯ ಮನಸ್ಸಿಗೆ ಬಹಳ ಕೊರತೆಯಾಯಿತು. ಆದರೂ ಕಾಮಾರಪುಕುರದಲ್ಲಿ ಅವರ ಜೊತೆಗೆ ವಾಸಮಾಡುತ್ತಿದ್ದಾಗ ಪತಿಯು ತೋರಿಸುತ್ತಿದ್ದ ಪ್ರೀತಿ, ವಿಶ್ವಾಸಗಳನ್ನು ಜ್ಞಾಪಕ ಮಾಡಿ ಕೊ೦ಡು ತನ್ನನ್ನು ಎಂದಿಗೂ ಮರೆಯಲಾರರೆಂದೂ ತನ್ನನ್ನು ಎ೦ದಿಗೂ ನಿರಾಕರಿಸಲಾರರೆಂದೂ ಸಮಯವನ್ನು ನಿರೀಕ್ಷಿಸುತ್ತಿರಬಹುದೆಂದೂ ಸರಿಯಾದ ಅವಕಾಶ ಸಿಕ್ಕಿದಾಗ ಬಂದು ಕರೆದುಕೊಂಡು ಹೋಗಬಹುದೆಂದೂ ಸಮಾಧಾನ ಹೇಳಿಕೊಂಡಳು. ಊರಿನಲ್ಲಿ ಜನರು ತನ್ನ ಗಂಡನು ಮೈಮೇಲಿನ ಬಟ್ಟೆಯನ್ನು ಕೂಡ ಬಿಟ್ಟು “ ಹರಿಹರಿ” ಎಂದು ಅಲೆಯುತ್ತಾನೆಂದು ಆಗಾಗ ಅಂದು ಕೊಳ್ಳುವುದನ್ನೂ, ಹೆಂಗಸರು “ ಹುಚ್ಚನ ಹೆಂಡತಿ ” ಎಂದು ಅಂದು ಕೊಳ್ಳುವುದನ್ನೂ ಕೇಳಿ “ ಹಾಗಾದರೆ ಕಾಮಾರ ಪುಕುರದಲ್ಲಿದ ಹಾಗೆ ಈಗ ಇಲ್ಲವೆ ? ಜನಗಳು ಹೇಳುವ ಹಾಗೆ ಅವರಿಗೆ ಈ ಅವಸ್ಥೆಯಾಗಿರುವುದೇ? ಅದೃಷ್ಟವಶಾತ್‌ ಹಾಗಾಗಿದ್ದರೆ ನಾನು ಇಲ್ಲಿರುವುದುಯುಕ್ತವಲ್ಲ. ಅವರ ಹತ್ತಿರವೇ ಇದ್ದು ಸೇವೆ ಮಾಡುವುದು ಉಚಿತ " ಎಂದು ನಿರ್ಧರಮಾಡಿಕೊಂಡು ಈ ಮಾತನ್ನು ತನ್ನ ತಂದೆಗೆ ತಿಳಿಸಿದಳು. ಆತನು ಅದಕ್ಕೆ ಸಮ್ಮತಿಸಿ ಮಗಳು ಅಸ್ವಸ್ಥಳಾಗಿದ್ದರೂ ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋದನು. (1872)

ಶಾರದಾದೇವಿಯು ರೋಗಪೀಡಿತಳಾಗಿರುವಾಗಲೇ ಹೊರಟು ಬಂದದ್ದನ್ನು ನೋಡಿ ಪರಮಹಂಸರಿಗೆ ಬಹುವ್ಯಥೆಯಾಯಿತು. ಆದ್ದರಿಂದ ತಮ್ಮ ಕೊಠಡಿಯಲ್ಲಿಯೇ ಬೇರೆಯೋಂದು ಹಾಸಿಗೆಯಲ್ಲಿ ಆಕೆಯು ಮಲಗುವಂತೆ ಏರ್ಪಾಡುಮಾಡಿ ಮೂರುನಾಲ್ಕು ದಿನ ಹಗಲು ರಾತ್ರಿ ಔಷಧಿ ಪಥಗಳನ್ನು ಕೊಟ್ಟು ತಾವೇ ಉಪಚಾರ ಮಾಡಿದರು. ಜ್ವರವು ವಾಸಿಯಾಗಲು ಆಕೆಯು ಅಲ್ಲಿಯೇ ಇರಬೇಕೆಂದು ನಿಶ್ಚಯವಾಯಿತು. ಆಕೆಯ ತಂದೆಯೂ ಸಂತೋಷದಿಂದ ಮಗಳನ್ನು ಬಿಟ್ಟು ತಮ್ಮ ಊರಿಗೆ ಹಿಂತಿರುಗಿ ಹೊರಟು ಹೋದನು.

ಇಲ್ಲಿಂದ ಮುಂದಕ್ಕೆ ಶಾರದಾದೇವಿಗೆ ದಕ್ಷಿಣೇಶ್ವರವೇ ಮನೆಯಾಯಿತು. ಆಕೆಗೂ ಪರಮಹಂಸರಿಗೂ ಇದ್ದ ಪರಸ್ಪರಸಂಬಂಧ, ಕಾಮಗಂಧ ಹೀನವಾದ ವಿಶುದ್ಧ ಪ್ರೇಮ, ಆಕೆಗೆ ಕೊಟ್ಟ ಶಿಕ್ಷಣ, ಅವರ ಆದರ್ಶಸ್ವರೂಪವಾದ ಸಾಂಸಾರಿಕ ಜೀವನ ಮುಂತಾದ ವಿಚಾರಗಳು ಕೇವಲ ಉಪಯುಕ್ತವಾಗಿದ್ದರೂ ಗ್ರಂಥವಿಸ್ತಾರ ಭಯದಿಂದ ಅವನ್ನು ಇಲ್ಲಿ ಬರೆಯಲು ಹಿಂತೆಗೆಯುವೆವು. “ ಶ್ರೀ ಶ್ರೀರಾಮಕೃಷ್ಣ ಲೀಲಾಪ್ರಸಂಗ” ವನ್ನು ಓದಿ ಪಾಠಕರು ಅವೆಲ್ಲವನ್ನೂ ತಿಳಿದುಕೊಳ್ಳಬಹುದು.




ಶ್ರೇಷ್ಠ ಬಹುಳ ಅಮಾವಾಸ್ಯೆ. ಆ ದಿನ ಜಗದಂಬೆಯ ಪೂಜೆಗಾಗಿ ಬೇಕಾದ ಸಾಮಗ್ರಿಗಳೆಲ್ಲ ಸಿದ್ಧವಾಗಬೇಕಾದರೆ ರಾತ್ರಿ ಒಂಬತ್ತು ಗಂಟೆಯಾಯಿತು. ಪರಮಹಂಸರು ಪೂಜೆಮಾಡುವುದಕ್ಕೆ ಮೊದಲು ಶಾರದಾದೇವಿಗೆ ಹೇಳಿ ಕಳುಹಿಸಿದರು. ಆಕೆಯು ಒಂದ ನಂತರ ಪೂಜೆಗೆ ಆರಂಭವಾಗಿ ಕಲಶಾರ್ಚನೆ ಶ೦ಖಾರ್ಚನೆಗಳು ಮುಗಿದುವು. ಆಗ ಪರಮಹಂಸರು ಶಾರದಾದೇವಿಯನ್ನು ಪೂಜಾಸನದ ಮೇಲೆ ಹೋಗಿ ಕುಳಿತುಕೊಳ್ಳುವಂತೆ ಹೇಳಲು ಆಕೆಯ ಭಾವಾವಿಷ್ಟಳಾಗಿ ತಾನು ಏನು ಮಾಡುತ್ತೆನೆಂಬುದೇ ತಿಳಿಯದೆ ಹೋಗಿ ಕುಳಿತುಕೊಂಡಳು. ಪರಮಹಂಸರು ಯಥಾವಿಧಿಯಾಗಿ ಆಕೆಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಮಂತ್ರವನ್ನು ಉಚ್ಚರಿಸುತ್ತ ಉಚ್ಚರಿಸುತ್ತ ಸಮಾಧಿಮಗ್ನರಾದರು. ಪತ್ನಿಯನ್ನು ದೇವಭಾವದಿಂದ ಪೂಜೆ ಮಾಡಿದ ಪರಮಹಂಸರ ಮಹತ್ವವನ್ನು ಪಾಮರರಾದ ನಾವು ಗ್ರಹಿಸುವುದು ಹೇಗೆ?

ಸ್ವಲ್ಪ ಹೊತ್ತಾದಮೇಲೆ ಬಾಹ್ಯ ಜ್ಞಾನದ ಚಿಹ್ನೆಗಳು ಕಾಣಿಸಲಾರಂಭಿಸಿದುವು. ಎಚ್ಚರವಾದಮೇಲೆ ತಮ್ಮ ಸಾಧನಗಳ ಫಲವನ್ನೂ, ಜಪಮಾಲೆ ಮುಂತಾದ ಸಮಸ್ತ ಸಾಧನ ಸಾಮಗ್ರಿಗಳನ್ನೂ ದೇವಿಯ ಪಾದಪದ್ಮಗಳಲ್ಲಿ ವಿಸರ್ಜನೆಮಾಡಿ, “ ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೆ | ಶರಣ್ಯೇತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ ||” ಎಂದು ಮಂತ್ರ ಹೇಳಿ ಪ್ರಣಾಮ ಮಾಡಿದರು.

ಪೂಜೆ ಮುಗಿಯಿತು. ಪರಮಹಂಸರ ಸಾಧನಗಳೂ ಪರಿಸಮಾಪ್ತಿಯಾದುವು.

  1. ಭೈರವಿಬ್ರಾಹ್ಮಣಿಯು ಪರಮಹಂಸರನ್ನು ಇನ್ನೂ ಬಿಟ್ಟು ಹೋ ಗಿರಲಿಲ್ಲ ವೇದಾಂತ ಸಾಧನೆಯ ಕಾಲದಲ್ಲಿಯೂ ಆಕೆ ದಕ್ಷಿಣೇಶ್ವರ ದಲ್ಲಿಯೇ ಇದ್ದಳು; ಆದರೆ ವೇದಾಂತ ಮಾರ್ಗವು ಶುಷ್ಕಮಾರ್ಗ ವೆಂದೂ ಅದನ್ನು ಅಭ್ಯಾಸ ಮಾಡಲು ತೋತಾಪುರಿಯ ಹತ್ತಿರಕ್ಕೆ ಹೋಗಕೂಡದೆಂದೂ ಪರಮಹಂಸರಿಗೆ ಹೇಳುತ್ತಿದ್ದಳು. ಅವರು ಶ್ರೀ ಶಾರದಾ ದೇವಿಗೆ ಶ್ರದ್ಧೆ ವಹಿಸಿ ಶಿಕ್ಷಣವನ್ನು ಕೊಡುತ್ತಿದ್ದರೆ ಅದನ್ನು ಕಂಡು ಅವರ ಬ್ರಹ್ಮಚರ್ಯದಲ್ಲಿ ಸಂಶಯ ಹುಟ್ಟಿತಂತೆ. ಇದು ತನ್ನ ದೋಷವೆ೦ದು ಕೆಲವು ದಿನದ ಮೇಲೆ ಬ್ರಾಹ್ಮಣಿಯ ಮನಸ್ಸಿಗೆ ಬಂದು ಅವರ ಕ್ಷಮಾಪಣೆಯನ್ನು ಕೇಳಿಕೊಂಡಳು. ಮತ್ತು ಪರಮಹಂಸರ ಅನುಗ್ರಹದಿಂದ ವೇದಾ೦ತ ಮಾರ್ಗದ ಮೇಲಿದ್ದ ದುರಭಿಪ್ರಾಯವನ್ನು ಬಿಟ್ಟು ಎಲ್ಲಾ ಮಾರ್ಗಗಳ ಲಕ್ಷವೂ ಒ೦ದೇ ಎಂಬ ಅನುಭವವನ್ನು ತ೦ದುಕೊಳ್ಳಲು ತಪಸ್ಸು ಮಾಡುವುದಕ್ಕಾಗಿ ಕಾಶಿಗೆ ಹೊರಟು ಹೋದಳು. ಅ೦ತು ಆಕೆಯು ದಕ್ಷಿಣೇಶ್ವರದಲ್ಲಿ ಸುಮಾರು ಆರು ವರ್ಷವಿದ್ದಳು.
  2. ದೋಷವೆ೦ದು ಕೆಲವು ದಿನದ ಮೇಲೆ ಬ್ರಾಹ್ಮಣಿಯ ಮನಸ್ಸಿಗೆ ಬಂದು ಅವರ ಕ್ಷಮಾಪಣೆಯನ್ನು ಕೇಳಿಕೊಂಡಳು. ಮತ್ತು ಪರಮಹಂಸರ ಅನುಗ್ರಹದಿಂದ ವೇದಾ೦ತ ಮಾರ್ಗದ ಮೇಲಿದ್ದ ದುರಭಿಪ್ರಾಯವನ್ನು ಬಿಟ್ಟು ಎಲ್ಲಾ ಮಾರ್ಗಗಳ ಲಕ್ಷವೂ ಒ೦ದೇ ಎಂಬ ಅನುಭವವನ್ನು ತ೦ದುಕೊಳ್ಳಲು ತಪಸ್ಸು ಮಾಡುವುದಕ್ಕಾಗಿ ಕಾಶಿಗೆ ಹೊರಟು ಹೋದಳು. ಅ೦ತು ಆಕೆಯು ದಕ್ಷಿಣೇಶ್ವರದಲ್ಲಿ ಸುಮಾರು ಆರು ವರ್ಷವಿದ್ದಳು.