ಮೂರನೆಯ ಅಧ್ಯಾಯ
ದಕ್ಷಿಣಲೇಶ್ವರದ ಕಾಳಿದೇವಸ್ಥಾನ.
ಕಲ್ಕತ್ತೆಯ ದಕ್ಷಿಣದಿಕ್ಕಿನಲ್ಲಿರುವ ಜಾನ್ಬಜಾರ್ ಎಂಬ ಗ್ರಾಮದಲ್ಲಿ ರಾಣಿರಾಸಮಣಿ ಎಂಬ ಒಬ್ಬ ಪ್ರಸಿದ್ಧಳಾದ ಶ್ರೀಮಂತಳು ವಾಸಮಾಡುತ್ತಿದ್ದಳು. ಆಕೆಯು ವಿಧವೆ. ಆದರೂ ಕಾರ್ಯಧಕ್ಷಳು; ಸಾಹಸಿ ; ಆದ್ದರಿಂದ ತನ್ನಗಂಡನು ಸ್ವರ್ಗಸ್ಥನಾದಂದಿನಿ೦ದ ಜರ್ಮಿದಾರಿಯ ಕಾರ್ಯಭಾಗಗಳನ್ನೆಲ್ಲ ತಾನೇ ಸ್ವಂತವಾಗಿನಡೆಸುತ್ತ ಬೇಕಾದಷ್ಟು ಐಶ್ವರ್ಯವನ್ನು ಗಳಿಸಿದ್ದಳು. ಸಂಪಾದನೆಮಾಡುವುದರಲ್ಲಿ ಹೇಗೆ ಶಕ್ತಿಯಿತ್ತೋ ಹಾಗೆಯೇ ಆಕೆಯಲ್ಲಿ ಕೈ ಬಿಟ್ಟು ಖರ್ಚುಮಾಡುವ ಔದಾರ್ಯವೂ ಇತ್ತು. ಬೆಸ್ತರ ಜಾತಿಯಲ್ಲಿ ಹುಟ್ಟಿದವಳಾದರೂ ಆಕೆಯು ತನ್ನ ಗುಣಕರ್ಮಗಳಿಂದ 'ರಾಣಿ' ಎಂಬ ಹೆಸರನ್ನು ಸಾರ್ಥಕಮಾಡಿಕೊಂಡಿದ್ದಳು. ಆಕೆಗೆ ಕಾಳಿಕಾ ದೇವಿಯಲ್ಲಿ ಬಹು ಭಕ್ತಿಯಿತ್ತು. ಕಾಶೀಕ್ಷೇತ್ರಕ್ಕೆ ಹೋಗಿ ವಿಶ್ವೇಶ್ವರನ ಮತ್ತು ಅನ್ನಪೂರ್ಣಾದೇವಿಯ ದರ್ಶನ ಸೇವೆಗಳನ್ನು ಮಾಡಬೇಕೆಂಬ ಆಶೆ ಬಹಳದಿನಗಳಿಂದ ಇತ್ತು. ಅದಕ್ಕಾಗಿ ಬಹಳ ಹಣವನ್ನು ಕೂಡಿಹಾಕಿದ್ದಳು. ಆದರೆ ಜರ್ಮೀಾದಾರಿಯ ಕೆಲಸವು ತನ್ನಕೊರಳಿಗೆ ಬಿದ್ದದ್ದರಿಂದ ಬಹುದಿನಗಳು ಕಾಶಿಗೆ ಹೋಗಲು ಸಮಯಸಿಕ್ಕಲಿಲ್ಲ. ಈ ಕಾಲದಲ್ಲಿ ಆಕೆಯ ಅಳಿಯನಾದ ಮಧುರಾನಾಥವಿಶ್ವಾಸನು ಜರ್ಮೀಾದಾರಿಯ ಆಡಳಿತಮಾಡುವುದರಲ್ಲಿ ಸಹಾಯಕನಾದ್ದರಿಂದ ಕಾಶೀಯಾತ್ರೆಗೆ ಹೊರಡಲು ಬೇಕಾದ ಸನ್ನಾಹಗಳನ್ನು ಮಾಡಿಕೊಂಡಳು. ಯಾತ್ರೆಗೆ ಹೊರಡಬೇಕೆಂದಿದ್ದದಿನದ ಹಿಂದಿನರಾತ್ರಿ ಸ್ವಪ್ನದಲ್ಲಿ ದೇವಿಯು ಆಕೆಗೆ ಪ್ರತ್ಯಕ್ಷಳಾಗಿ "ನೀನು ಕಾಶಿಗೆಹೋಗಬೇಕಾದ ಆವಶ್ಯಕವಿಲ್ಲ. ಬಾಗೀರಥಿಯತೀರದಲ್ಲಿ ಒಂದು ಮನೋಹರವಾದ ಸ್ಥಳದಲ್ಲಿ ನನ್ನ ವಿಗ್ರಹವನ್ನು ಪ್ರತಿಷ್ಠೆ ಮಾಡಿ ಪೂಜಾನೈವೇದ್ಯಗಳ ವ್ಯವಸ್ಥೆ ಮಾಡು. ನಾನು ಆ ಮೂರ್ತಿಯಲ್ಲಿ ಆವಿರ್ಭಾವವಾಗಿ ನಿನ್ನಿಂದ ಪೂಜೆಯನ್ನು ಗ್ರಹಣಮಾಡುತ್ತೇನೆ" ಎಂದು ಆಜ್ಞಾಪಿಸಿದಳಂತೆ. ಆದ್ದರಿಂದ ರಾಣಿಯು ಕಾಶಿಗೆ ಹೋಗುವುದನ್ನು ನಿಲ್ಲಿಸಿ ಅದಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲ ವ್ರಯಮಾಡಿ ಗಂಗಾ ತೀರದಲ್ಲಿ ದೇವಸ್ಥಾನವನ್ನು ಕಟ್ಟಿಸಬೇಕೆಂದು ಸಂಕಲ್ಪಮಾಡಿಕೊಂಡಳು.
ದೇವಸ್ಥಾನವು ಕಟ್ಟಿ ಮುಗಿಯಿತು. (1855.) ದೇವಿಯ ಸೇವೆಯೂ ಚಿರಕಾಲ ನಡೆಯಬೇಕೆಂಬ ಉದ್ದೇಶದಿಂದ ಬೇಕಾದಷ್ಟು ಆಸ್ತಿಯನ್ನು ದೇವಸ್ಥಾನದ ಹೆಸರಿನಲ್ಲಿ ಮಾಡಿದ್ದೂ ಆಯಿತು. ಆದರೆ ಆ ದೇವಿಯ ಅರ್ಚನೆಗೆ ಒಪ್ಪಿಕೊಳ್ಳುವವರಾರು? ಆಕೆಯು ಬೆಸ್ತರ ಜಾತಿಯವಳು. ಶೂದ್ರಪ್ರತಿಷ್ಠಿತವಾದ ಮೂರ್ತಿಯನ್ನು ಪೂಜೆಮಾಡುವವರಾರು ? ಶೂದ್ರರಿಂದ ಪ್ರತಿಷ್ಠಿತವಾದ ಮೂರ್ತಿಯನ್ನು ಪೂಜಿಸುವುದಿರಲಿ, ಅಂಥಮೂರ್ತಿಗಳಿಗೆ ಆಚಾರಶೀಲರಾದ ಬ್ರಾಹ್ಮಣರು ನಮಸ್ಕಾರವನ್ನು ಕೂಡ ಮಾಡುತ್ತಿರಲಿಲ್ಲ. ದೇವಿಗೆ ಯಥಾವಿಧಿಯಾಗಿ ಪೂಜೆನೈವೇದ್ಯಗಳು ಆಗದಿದ್ದರೆ ಏನು ಮಾಡಿ ಏನು ಪ್ರಯೋಜನ? ಆದ್ದರಿಂದ ರಾಣಿಗೆ ಚಿಂತೆಹತ್ತಿ ಆಕೆಯು ಸುತ್ತಮುತ್ತ ಇದ್ದ ಶಾಸ್ತ್ರಜ್ಞರ ಸಲಹೆಯನ್ನು ಕೇಳಿದಳು.ಆದರೆ ತನಗೆ ಅನುಕೂಲವಾಗಿ ಯಾರೂ ಹೇಳಲಿಲ್ಲ. ಆದರೂ ರಾಣಿಯು ನಿರಾಶಳಾಗದೆ ಕಂಡಕಂಡ ಶಾಸ್ತ್ರಜ್ಞರನ್ನೆಲ್ಲಾ ವಿಚಾರಿಸುತಿದ್ದಳು. ರಾಮಕುಮಾರನಿಗೂ ಒಂದು ಕಾಗದವನ್ನು ಬರೆದಳು. ರಾಮಕುಮಾರನು ಯೋಚನೆಮಾಡಿ "ಪ್ರತಿಷ್ಠೆಗೆ ಪೂರ್ವದಲ್ಲಿಯೇ ರಾಣಿಯು ದೇವಾಲಯವನ್ನೂ ಅದಕ್ಕೆ ಸಂಬಂಧಪಟ್ಟ ಆಸ್ತಿಯನ್ನೂ ಒಬ್ಬ ಬ್ರಾಹ್ಮಣನಿಗೆ ದಾನಮಾಡಿ, ಆತನಿಂದ ದೇವಿಯ ಪ್ರತಿಷ್ಠೆ ಮಾಡಿಸಿದರೆ ಶಾಸ್ತ್ರ ನಿಯಮಕ್ಕೆ ವಿರೋಧವಾದಂತಾಗುವುದಿಲ್ಲ. ಬ್ರಾಹ್ಮಣರೇ ಮೊದಲಾದ ಉಚ್ಚವರ್ಣದವರೂ ಆ ಮೂರ್ತಿಯ ಪೂಜೆಮಾಡಿದರೆ ಅಥವಾ ಪ್ರಸಾದಗ್ರಹಣಮಾಡಿದರೆ ದೋಷಭಾಗಿಗಳಾಗುವುದಿಲ್ಲ." ಎಂದು ಉತ್ತರ ಬರೆದನು. ಇದರಿಂದ ರಾಣಿಗೆ ಬಹುಆನಂದವಾಯಿತು. ದೇವಾಲಯವನ್ನೂ ಅದರ ಆಸ್ತಿಯನ್ನೂ ತನ್ನ ಕುಲಪುರೋಹಿತರಿಗೆ ದಾನಮಾಡಿ ದೇವಸ್ಥಾನದ ಕೆಲಸ ಕಾರ್ಯಗಳ ಮೇಲ್ವಿಚಾರಣೆಯ ಅಧಿಕಾರವನ್ನು ಅವರಿಂದ ಪಡೆದಳು.
ಅರ್ಚಕರು ಸಿಕ್ಕುವುದು ಕಷ್ಟವಾಯಿತು. ಶೂದ್ರರ ಮನೆಯಲ್ಲಿ ಪೌರೋಹಿತ್ಯ ನಡೆಸುತ್ತಿದ್ದ ಬ್ರಾಹ್ಮಣರನ್ನೂ ಒಂದು ವಿಧವಾದ ಶೂದ್ರರೆಂದು ಸದಾಚಾರ ನಿಷ್ಠರಾದ ಬ್ರಾಹ್ಮಣರು ಎಣಿಸುತ್ತಿದ್ದರು. ರಾಮಕುಮಾರನ ವ್ಯವಸ್ಥೆಯು ಶಾಸ್ತ್ರವಿರುದ್ದವೆಂದು ಯಾರೂ ಹೇಳಲಿಲ್ಲ. ಆದರೆ ಅದು ಸಮಾಜದ ಅನೂಚೀನವಾದ ಪದ್ದತಿಗೆ ವಿರುದ್ದವೆಂದು ಎಲ್ಲರೂ ಹೇಳತೊಡಗಿದರು. ರಾಣಿಗೆ ಪುನಃ ದಿಕ್ಕು ತೋಚದಂತಾಯಿತು. ಆದರೆ ಕಾರ್ಯದಕ್ಷಳಾದರಾಣಿಯು ಆಗಲೂ ನಿರುತ್ಸಾಹಿಯಾಗಲಿಲ್ಲ. ಅಲ್ಲಿ ಪ್ರತಿಷ್ಠೆ ಮಾಡ ಬೇಕಾಗಿದ್ದ ಎರಡು ದೇವರುಗಳಲ್ಲಿ, ಹಾಗೂ ಹೀಗೂ ' ರಾಧಾ ಗೋವಿಂದ ' ದೇವರ ಪೂಜೆಗೆ ಒಬ್ಬ ಅರ್ಚಕನು ಸಿಕ್ಕಿದ್ದನು. ಆದರೆ, ಕಾಳಿಕಾದೇವಿಯ ಪೂಜೆಗೆ ಯೋಗ್ಯನಾದ ಬ್ರಾಹ್ಮಣನು ದೊರೆಯಲಿಲ್ಲ. ಪ್ರತಿಷ್ಠೆ ಮಾಡಬೇಕೆಂದಿದ್ದ ದಿನವು ಸಮಿಾಪಿಸುತ್ತಾ ಬಂತು. ಆಗ ರಾಣಿರಾಸಮಣಿಯು ಬಹಳ ನಮ್ರಭಾವದಿಂದ ರಾಮಕುಮಾರನಿಗೆ ಹೀಗೆ ಕಾಗದ ಬರೆದಳು. "ಜಗನ್ಮಾತೆಯ ಪ್ರತಿಷ್ಠಾ ಕಾರ್ಯದಲ್ಲಿ ನಾನು ಉದ್ಯುಕ್ತಳಾದದ್ದು ತಮ್ಮ ವ್ಯವಸ್ಥೆಯ ಬಲದಿಂದಲೇ. ಬರುವ ಸ್ನಾನಯಾತ್ರೆಯದಿನ ದೇವಿಯ ಪ್ರತಿಷ್ಠೆ ಮಾಡಬೇಕೆಂದು ಸಂಕಲ್ಪಿಸಿ ಸಮಸ್ತ ಸಲಕರಣೆಗಳನ್ನೂ ಸಿದ್ಧಪಡಿಸಿದ್ದೇನೆ. ರಾಧಾ ಗೋವಿಂದನ ಪೂಜೆಗೆ ಒಬ್ಬ ಅರ್ಚಕರು ಸಿಕ್ಕಿದ್ದಾರೆ. ಆದರೆ ಜಗನ್ಮಾತೆಯ ಪೂಜೆಗೆ ತಕ್ಕವರು ಯಾರೂ ಸಿಕ್ಕಿಲ್ಲ. ಆದ್ದರಿಂದ ತಾವೇ ಈ ವಿಷಯದಲ್ಲಿ ಏನಾದರೂ ಒಂದು ವ್ಯವಸ್ಥೆ ಮಾಡಿ ಈ ವಿಪತ್ತಿನಿಂದ ನನ್ನನ್ನು ಉದ್ಧಾರ ಮಾಡಬೇಕು. ತಾವು ಪಂಡಿತರು ಮತ್ತು ಶಾಸ್ತ್ರಜ್ಞರು. ಆದ್ದರಿಂದ ಈ ಪೂಜಕ ಸ್ಥಾನಕ್ಕೆ ಯಾರುಸಿಕ್ಕಿದರವರನ್ನು ನಿಯಮಿಸಲಾಗುವುದಿಲ್ಲ ಎಂಬುದನ್ನು ತಮಗೆ ತಿಳಿಸುವುದು ಅನಾವಶ್ಯಕ."
ರಾಮಕುಮಾರನು ತಾಂತ್ರಿಕ ಸಾಧಕ: ಶಕ್ತಿ ಮಂತ್ರದ ಉಪದೇಶವನ್ನು ಪಡೆದಿದ್ದನು. ಅಲ್ಲದೆ ಅವನಿಗೆ ದೇವಿಯಲ್ಲಿ ಅಗಾಧ ವಾದ ಭಕ್ತಿಇತ್ತು. ಆದ್ದರಿಂದ ದೇವಿಯ ಪ್ರತಿಷ್ಠಾಪನೆಯಂಥ ಪುಣ್ಯಕೆಲಸವು ನಿಂತುಹೋಗುವುದೆಂಬ ಶಂಕೆಯಿಂದ ಬೇರೆ ಯಾವ ನಾದರೂ ಒಬ್ಬ ಯೋಗ್ಯನಾದ ಅರ್ಚಕನು ಸಿಕ್ಕುವವರೆಗೆ ಕಾಳಿಕಾ ಪೂಜೆಯ ಕೆಲಸವನ್ನು ತಾನೇ ವಹಿಸಿದನು. ಹಿಂದೆ ಗೊತ್ತಾಗಿದ್ದ ದಿವಸದಲ್ಲಿಯೇ ಜಗದಂಬೆಯ ಪ್ರತಿಷ್ಠೆಯು ನಡೆದುಹೋಯಿತು. ದೂರದೂರ ದೇಶಗಳಿಂದ ಸಾವಿರಾರು ಜನ ಬ್ರಾಹ್ಮಣರು ಬಂದಿದ್ದರು. ರಾಣಿಯು ಪ್ರತಿಯೊಬ್ಬ ಬ್ರಾಹ್ಮಣನಿಗೂ ಒಂದೊಂದು ಪಟ್ಟಿಯ ಮಡಿ, ಒಂದು ಉತ್ತರೀಯ, ಒಂದುವರಹ ಈ ಮೇರೆ ದಾನ ಮಾಡಿದಳು. ಆದಿನ ನಡೆದ ದಾನಧರ್ಮಕ್ಕೆ ನೆಲೆಯಿರಲಿಲ್ಲ. ಮೊದಲನೆಯದಿನದ ಖರ್ಚೇ ಒಂಬತ್ತು ಲಕ್ಷರೂಪಾಯಿಗೆ ಮೀರಿತ್ತು.