ಸಂಚಿಕೆ-೧೧/ಪಂಚವಟಿಯ ಪರ್ಣಕುಟಿ

<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


ಸಂಚಿಕೆ 11 – ಪಂಚವಟಿಯ ಪರ್ಣಕುಟಿ


ಮಹಾಟವಿಯ ವಟವರ ಶಿರಾಗ್ರದೊಳಿರೆ ಜಟಾಯು

ನೋಡಿದನ್, ಬಿಸಿಲು ನೆಳಲಿನ ರಂಗವಲ್ಲಿಯಿಂ

ರಾಜಿಸುವ ಪಸುರುವುಲ್ಲಿನ ಪಚ್ಚೆಯೊಳ್ನೆಲದೆ

ಸೊಬಗು ಕಣ್ಗೊಳಿಪರಂ, ಮೂವರಂ ಮನುಜರಂ,

ಪಂಚವಟ್ಯಭಿಮುಖಿಗಳಂ. ಬೃಹದ್ ಗಾತ್ರದಾ

ಭೀಮವಿಕ್ರಮ ವಿಹಂಗೇಂದ್ರನಂ ವೀಕ್ಷಿಸುತೆ

ಶಂಕೆ ಪುಟ್ಟಿತು ನಿಶಾಚರರೊಂದು ಛದ್ಮನೆಯ

ಭಯಕೆ. ಪೇಳ್, ಪಕ್ಷಿ, ನೀನಾರೆಂದು ಕೇಳಲ್

ಜಟಾಯು ನುಡಿದನು ಮಧುರವಾಕ್ಯಂಗಳಂ : “ವತ್ಸ, ನಾಂ

ನಿನಗನ್ಯನಲ್ಲಯ್ಯ ; ಪಿತೃಸಖಂ ! ಸಂಪಾತಿ ತಾಂ ೧೦

ಪಿರಿಯಣ್ಣನೆನಗೆ. ಪೆಸರಿಂದಾಂ ಜಟಾಯುವೆಂ.

ದುಷ್ಟ ರಾಕ್ಷಸ ಸೇವಿತಂ ಈ ದುರ್ಗಕಾನನಂ.

ನಿಮಗಾಂ ಸಹಾಯನೆಂ ನೀನನುಮತಿಯನೀಯೆ.”

ಪ್ರಿಯ ವಾಕ್ಯಮಂ ಕೇಳಿದೊಡನೆಯೆ ಮುದಂ ಮೊಳೆತು

ಮೂವರುಂ ನಮಿಸಿದರು ದಶರಥಸ್ನೇಹಿತಗೆ,

ಆ ಶ್ಯೇನಿಪುತ್ರಂಗೆ. ಮತ್ತಾತನುಂ ಕೂಡೆ

ಕಾವಲೈತರೆ ಮುಗಿಲವಟ್ಟೆಯ ಬೇಹಿನಾಳಾಗಿ,

ಬಟ್ಟೆವಿಡಿದರ್ ಪಂಚವಟಿಗೆ, ಗೋದಾವರಿಯ

ತಟಿಗೆ.

“ಕಂಗೊಳಿಸುತಿದೆ ಇದೊ ಮುಂದೆ, ಸೌಮಿತ್ರಿ,

ಆ ಅಗಸ್ತ್ಯನ ವರ್ಣನೆಯ ಮನೋಹರಂ ವನಂ. ೨೦

ಏಂ ಶಾನ್ತಿ ಸಾಮ್ರಾಜ್ಯವಾಳುತಿದೆ ನೋಡು, ಪ್ರಿಯೆ !

ಚಿತ್ರಕೂಟದ ಸೊಬಗಿಗಿರ್ಮಡಿ ಸೊಬಗಿದಲ್ತೆ ?

ಪಿಂತಾವಗಂ ನಾಂ ಪಡೆಯದೊಂದು ಸೊಗಮಿಲ್ಲಿ

ಕಾಯ್ದೆಮಗೆ ಬಯಸಿದಪ್ಪುದು ಸುಖಾಗಮನಮಂ :

ತರುಚಾಮರದ ಕರದ ತೋಳ್‌ವೀಸಿ, ಕಾಣ್, ಕರೆಯುತಿದೆ

ಗಿರಿ. ಸೂಸಿ ಪೂವಲಿಯನಾಹ್ವಾನಗೈವಳಿದೊ ಈ

ವಿಪಿನರಾಜೇಶ್ವರಿ. ತರಂಗ ಮಂಜುಳ ರುತಿಯ

ವಾಣಿಯಿಂದೆಮಗೆ ಸುಸ್ವಾಗತವನುಲಿವಳದೊ

ಚಂಚಲಾಂಚಲ ಗತಿಯ ಗೋದಾವರಿ !”

“ಅದೊ ಅಲ್ಲಿ,

ವೈಡೂರ್ಯಗಳೆ ರಾಸಿಗೊಂಡಂತೆ, ದಡಂಮುಚ್ಚಿ ೩೦

ಪಸುರ್ಮುಡಿದು ಸಾಲ್ಗೊಂಡಿಹವು ಹೊಂಗೆ !”

“ಪಡಿನೆಳಲ್,

ಕನ್ನಡಿವಿಡಿದ ತೆರದಿನೆಸೆಯಲ್ಕೆ, ಆಃ ಕಾಣ್ಬುದದೊ

ಗರಿಗರಿಯೆಲೆಯ ಬಿದಿರ ಮೆಳೆಚವರಿ !”

“ಅದೊ ನವಿಲ್ ;

ಹೊಳೆಯ ನೀರಿಗೆ ಬಾಗಿದೊಂದು ಕೊಂಬೆಯ ಮೇಲೆ

ಕುಳಿತೀಂಟುತಿಹುದೆಂತು !”

“ಅಗೊಗೊ ನೀರ್ವಕ್ಕಿಗಳ್ ;

ಏಂ ಕ್ರೀಡೆಯಿಂಚರಂ !”

“ಏನೆತ್ತರದ ಸಾಲಮಿದು !

ಕಣ್ಣೆತ್ತಿ ನೋಡಿ ಪೂರೈಸಲಾರದೆ ಕೊರಲ್

ದಣಿಯುತಿದೆ !”

“ನೋಡು ವಲ್ಮೀಕ ಗೋಪುರಮಿದಂ :”

“ಕೈಯ ಬಿಲ್ಲನ್ನೆತ್ತಿದೊಡಮದರ ಕೊಪ್ಪಿಗುಂ

ನೆತ್ತಿ ನಿಲುಕದು ಹುತ್ತದಾ !”

“ಅತ್ತ ನೋಡತ್ತಲ್ : ೪೦

ಕಳಿತ ಪಣ್ಮಳೆಗರೆದು ನೆಲಂ ಕೆಸರೇಳುತಿದೆ

ಸೋರ್ದ ರಸಕೆ.”

“ಏನಮಂಗಳಮೊ ? ಕಾಲ್ ಜಾರುತಿದೆ

ನನಗೆ !” ಮೈಥಿಲಿ ತನ್ನೊಳಗೆ ತಾನೆ ಗೊಣಗುತಿರೆ,

ಬಳಿಗೆ ಬಾರದೆ ದೂರ ಸಾರದೆ ಕುರಂಗಶಿಶು

ಸುಳಿದಡಗಿದುದ ಕಂಡಳೆಂದಳ್ ಮನಃಪ್ರಿಯಗೆ :

“ಈ ತಾಣಮೆಲೆವನೆಗೆ ನಲ್ದಾಣಮೇ ದಿಟಂ

ಸಾಧುಮೃಗದೀ ಸ್ಥಲಂ ತಾನೇಗಳುಂ ಸಾಧು !”

“ನಿನಗೆ ಕಾಲ್ದಣಿದೆಡೆಯೆ ನಮಗಕ್ಕುಮಾಶ್ರಮಂ !”

ಅತ್ತಿಗೆಯನಂತಣಕವಾಡಿದಣ್ಣಗೆ ಲಕ್ಷ್ಮಣಂ :

“ಮುನ್ನಿಸೆನ್ನಂ, ಜೀಯ. ದೇವಿಯರೆಣಿಕೆ ನನ್ನಿ. ೫೦

ಬಿತ್ತರಂ ಈ ನೋಟಮೀ ಪೀಠಮೆತ್ತರಂ ;

ವನ ರಾಮಣೀಯಕಂ, ಜಲ ರಾಮಣೀಯಕಂ,

ಪುಷ್ಪ ಫಲ ಮೂಲ ವಿಪುಲಂ. ಮೇಣ್ ಕ್ಷೇಮಸಂವೇದಿ :

ನಾತಿದೂರಂ ನಾತಿನಿಕಟಮದೊ ಕಾಳ್ಮಿಗಂ

ಸುಳಿಯುತಿವೆ ಮನಮೋಹಕಂ. ನಿನಗೆ ಬಗೆಯೊಪ್ಪೆ

ರಚಿಸುವೆನನುತ್ತಮಂ ಪರ್ನಕುಟಿಯಂ.” “ನಿಮಗೆ

ರುಚಿಸಿದುದೆ ನನಗೆ ಪಥ್ಯಂ. ಬನ್ನಿ, ನಾಮೆಲ್ಲರುಂ

ಕೂಡಿ ಕಟ್ಟುವಮದಂ ಪರ್ಣಪಾಥೇಯಮಂ !”

ಬನ್ನಿಗಂಬವ ಹೂಡಿ, ಬಿದಿರಗಳು ತೊಲೆಮಾಡಿ ೬೦

ಹುಲ್ಲೆಲೆಗಳಂ ಹೊದಿಸಿ, ಹೆಡಗೆವಳ್ಳಿಯ ಸೀಳಿ

ಸಲಕಂ ಬಿಗಿದು ಕಟ್ಟಿ, ಹಂಬು ಬೆತ್ತವ ಕಡಿದು,

ಸಿಗಿದು, ತಟ್ಟಿಯ ಹೆಣೆದು, ತಡಿಕೆ ಗೋಡೆಯನಿಟ್ಟು,

ಬೆಳಕಂಡಿಯಂ ಬಿಟ್ಟು ಹುತ್ತದೆರೆಯಂ ಮೆತ್ತಿ,

ಕಣೆ ನೆಯ್ದ ಬಾಗಿಲಂ ಬಲಿದು, ಸುತ್ತೆತ್ತಲುಂ

ಮುಳ್ಳೊಡ್ಡನಡಕಿ, ಮೇಣ್ ತಡಬೆಯುಣುಗೋಲ್ಗಳಂ

ಪೂಡಿ, ವಿರಚಿಸಿದರಾಶ್ರಮವನತಿಶ್ಲಾಘ್ಯಮಂ

ವನಭೋಗ್ಯಮಂ !

ಪರ್ಣಶಾಲೆಗೆ ಸಮೀಪಮಾ

ನಿಮ್ನದೊಳ್ ದೃಷ್ಟಿಸೀಮೆಗೆ ಸಲಿಲನೇಮಿಯಂ

ಸೃಷ್ಟಿಸುತ್ತನವರತಯಾತ್ರೆಯಂ ಪರಿದಿರ್ದ

ಗೋದಾವರಿಯ ತೆರದಿ ಪರಿದಿರಲ್ ಕಾಲನದಿ, ೭೦

ಬತ್ತಿಯುರಿಯಲ್ಕೆಣ್ಣೆ ಬತ್ತುವಂದದಿ ಬತ್ತಿ,

ಹತ್ತೆಸಾರುತ್ತಿರ್ದುದಯ್ ವನವಾಸದವಧಿ.

ಹೆಚ್ಚಿದುದು ಮನೆನೆನಹು ; ಮೇಣಯೋಧ್ಯೆಯ ಕುರಿತ

ಮಾತು ಮಿಗಿಲಾದುದು ; ಏನುತ್ತಮಂ ಕಂಡರದು

ಮನಕೆ ತಂದುದು ಉಪಮೆಯೋಲನ್ಯ ಚಿತ್ರಮಂ :

“ಗೋದಾವರಿಯ ಜಲಂ ರುಚಿರ ನಿರ್ಮಲವಲಾ ?”

“ಸರಯೂ ಸಲಿಲದಂತೆ !” “ಈ ತಾವರೆಯ ಹೂವು

ನೋಡೆನಿತು ಚೆಲ್ವು,” “ನೀನಂದು ಗಂಗಾನದಿಗೆ

ಮೀಯೆ ಹೋದಂದು ತಂದಲರಿನೋಲಿಹುದಿದರ

ಸೊಂಪು !” “ಕೇಳದೊ, ಕೊಂಚೆವಿಂಡುಲಿಯುತಿದೆ.” “ಅಹಾ ! ೮೦

ನಮ್ಮರಮನೆಯ ತೋಂಟದೊಳ್ ಕುಳಿತು ನಲಿವಂದು

ಈ ತೆರನ ದನಿಹನಿಯ ಸೋನೆಗಿಂತುಟಿ ವಲಂ

ಕಿವಿ ತಣಿದೆವಲ್ತೆ ?” “ನೋಡಾ ಮರದ ತಳಿತೆಸೆವ

ಪೆಂಪು.” “ಅಯೋಧ್ಯಾ ಪುರದ್ವಾರದೆಡೆಯಿರ್ಪ ತರುವುಂ

ಈ ಶರತ್ ಸಮಯದೊಳಗಿಂತೆ ಶೋಭಿಪುದಲಾ !” -

ಇಂತೆಲ್ಲಮುಂ ಪ್ರತೀಕಂಗೊಳ್ಳಲೊರ್ದಿನಂ

ಹೊಳೆಯ ನುಣ್ಮಳಲ ಬೆಣ್ಣೆಯ ದಿಣ್ಣೆಮೇಲಿರ್ದು,

ಸೀತೆ ತಾಂ ಪತಿ ಮೈದುನರ ಕೂಡೆ ಮಾತಾಡುತಿರೆ,

ಕಂಡು, ತೋರಿದಳಾಗಸದ ನೀಲಿಗೆದುರಾಗಿ

ಬೂರುಗದರಳೆರಾಸಿ ಹಂತಿಗೊಂಡೊಪ್ಪಿರ್ದ ೯೦

ತೆರದ ಶರದದ ಮುಗಿಲ ಬೆಳ್ಪಿನೊಡ್ಡಂ. “ನಮ್ಮ

ನಾಡಿನಾ ಹಸುರು ಹಬ್ಬಿದ ಬಯಲಮೇಲಿಂತೆ

ರೊಪ್ಪವಪ್ಪುವು ಬೆಳ್ಳಿಯುಣ್ಣೆಯ ಕುರಿಯ ಹಿಂಡಂ.”

ಸೌಮಿತ್ರಿಯೆನೆ ರಾಮನೆಂದನ್ : “ಅಗ್ನಿಕ್ರಿಯಾ

ಚಿಹ್ನೆಯಿದು ಶರದೃತುಗೆ. ಪ್ರೇತಭೂಮಿಯೊಳಿಂತು

ಶ್ವೇತಭಸ್ಮವೆ ರಾಸಿಹಬ್ಬಿದೆ ಶರನ್ಮೇಘೌಘ

ವೇಷದಲಿ ! ಇನ್ನೇನದಿಂದೊ ನಾಳೆಯೊ ನೆಲಕೆ

ಮಂಜಾಗಿ ಬೀಳೆ, ಮೊದಲಹುದು ಹೇಮಂತಋತು !”

ಎಂದ ರಘನಂದನನ ಮುಖಭೀಷ್ಮತೆಗೆ ಸೀತೆ

ಬೆಚ್ಚುತಿರೆ “ತಂದೆಯಂ ನೆನೆದಿರ್ದೆನದರಿಂದೆ ೧೦೦

ಆ ಉಪಮೆ !” ಎಂದು ಸಂತೈಸುತಿರೆ ಭಾರ್ಯೆಯಂ,

ಕೆಂಪೆರಚಿದುದು ಬೈಗು ಆ ಮುಗಿಲ ಮೊತ್ತಕ್ಕೆ.

ಮೌನಗೌರವದಿಂದ ನೋಡುತಿರಲಾ ಚಿತಾ

ಪ್ರತಿಕೃತಿಯ ಚಿತ್ರಂ ವಿಚಿತ್ರತರಮಾದುದಯ್

ತಾಳ್ದು ನಾನಾಕೃತಿಗಳಂ: ಕಪಿಯಾಯಿತೆನ್ನುತಿರೆ,

ಪುಲಿಯಾಯ್ತು ! ಪುಲಿಯೆನ್ನುತಿರೆ ಕರಡಿಯಾಯ್ತು. ಕಾಣ್

ಕರಡಿಯೆಂಬನಿತರೊಳೆ ಭೀಮರಾಕ್ಷಸನಾಯ್ತು !

ಕಳ್ತಲೆಯ ಮರ್ಬಿನಲಿ ದುಶ್ಶಕುನ ಭೀಕರದ

ಮೇಘದೈತ್ಯಾಕೃತಿಗೆ ಕಂಪಿಸುತವನಿಜಾತೆ

ಕಣ್ದೆರುಹೆ, ಗೋಚರಿಸಿತಾಯು ತನ್ನೆಡೆಗಿಳಿದು ೧೧೦

ಬರ್ಪಂತೆ ಬಂದಾ ಜಟಾಯು ಧೈರ್ಯಾಕೃತಿ.

ನಭಃಪರ್ಯಟನದಿಂದಮಿಳಿದ ಪಕ್ಷೀಂದ್ರನಂ

ಸಖನನುತ್ಸಾಹದಿಂ ಸ್ವಾಗತಿಸಿ, ಕುಶಲಮಂ

ಕೇಳ್ದೊಸೆದು ನುಡಿಸಿ, ಸಂತೋಷದಿಂದೆಲ್ಲರುಂ

ಮೇಲೆಳ್ದು ತೆರಳ್ದರೆಲೆವನೆಗೆ….

ಕಳೆದತ್ತೊಂದು

ವಾರಂ. ಸಾರ್ತಂದುದಿನದಿನಂ. ಇನೋದಯಕೆ

ಮುನ್ನ ಮೈಥಿಲಿ ಪನ್ನಗುಡಿಯ ಕಣೆಯೆಲೆವಾಗಿಲಂ

ತೆರೆದು ನೋಡಿದಳಹಾ ! ಬೆಚ್ಚಿದಚ್ಚರಿವೆರಸಿ

ಮತ್ತೆ ನೋಡಿದಳು : ಕಂಡಳೆ ಜಗತ್ ಶೂನ್ಯತಾ

ದೃಶ್ಯಮಂ ? ಕೂಗಿ ಕರೆದಳ್ ಮಲಗಿದಿನಿಯನಂ. ೧೨೦

ತೋರಿದಳ್ ಬೇಗವೇಗೆಳ್ದು ಬಂದಾತಂಗೆ

ಒಡವೆ ಝಣಿರೆನೆ ಕೈಯ ಬೀಸಿ. ಪ್ರಕೃತಿಪ್ರಿಯಂ

ನೋಡಿದನು ಸೃಷ್ಟಿಯ ಅಭಾವವನೆ ಚಿತ್ರಿಸಿದವೋಲ್

ನೀಹಾರ ರಚಿತಮಾ ಹೇಮಂತ ಮಂಜುಕಲೆಯಂ :

ಗಿಡವಿಲ್ಲ, ಮರವಿಲ್ಲ ; ಮಲೆಯಿಲ್ಲ, ಕಾಡಿಲ್ಲ ;

ನೆಲವಿಲ್ಲ ; ಬಾನಿಲ್ಲ ; ಬಿಳಿಯ ಬಣ್ಣವನುಳಿದು

ನೋಟಕೇನೊಂದಿಲ್ಲ. ಬೆಳ್ಪೊಂದೆ ಜಗವೆಲ್ಲಮುಂ !

ಕಡಲ ಕಡೆಹದೊಳುದಿಸಿ, ಮಂಥನದ ರಭಸಕ್ಕೆ

ಸಿಡಿದು, ತುಂತುರು ತುಂತುರಾಗಿ, ನಾನಾ ದೆಸೆಗೆ

ಪರ್ವಿದಾ ಕೇಂದ್ರಾತಿಗಾಮೃತಂ ಪರ್ವತದ ಮೇಣ್ ೧೩೦

ಫಣಿಯ, ಮೇಣಸುರಾಮರಾಕಾರದಿಂ ಪ್ರವಹಿಸಿತೊ

ಶೀಕರ ತುಷಾರದೋಲೆಂಬಂತೆ ಬಿಳಿಮಂಜು ತಾಂ

ರೌಪ್ಯಧೂಳಿಯ ಸಾಂದ್ರ ಧೌತಧವಳವನೆರಚಿ

ಮುಚ್ಚಿ ಮುಸುಕಿದುದು ಗಿರಿವನ ಭುವನಮಂ. ಮೇಣ್ ಮಳಲೆ

ಹೊಗೆಯಾಯ್ತೊ, ನೊರೆಯೆ ಇಬ್ಬನಿಯಾಯ್ತೊ ತಾನೆಂಬ

ಕಡಲಾಗೆ ದಟ್ಟಿತೈಕಿಲ್ ಸೋನೆ, ಬಳಿಯಿರ್ದುಮಾ

ಬಳಸಿರ್ದ ಮುಳ್ಳಿನೊಡ್ಡುಂ ಮಂಜಿನೊಳ್ ಮಸುಳೆ,

ತೆಪ್ಪವಾದುದು ತೇಲ್ದುದವರಾಶ್ರಮಂ ! ಮತ್ತೆ,

ನೋಡುತಿರೆಯಿರೆ, ಕೊಡಹಿದರಳೆ ಪಸರಿಸುತುರ್ಬಿ

ಪರ್ಬುವೋಲೊಯ್ಯನೆ ಪಳಂಚುತಲೆದಾ ಹಿಮಂ ೧೪೦

ತಬ್ಬಿತೆಲೆವನೆಯನಂತೆಯೆ ತುಂಬಿತೊಳಗುಮಂ

ತೆರೆವಾಗಿಲಿಂದೆ ಬೆಳಕಂಡಿಯಿಂದೊಳವೊಕ್ಕು,

ಲೆಕ್ಕಿಸದೆ ಮಡದಿಯೊಡನೆಯೆ ಕಾಪುಗೊಂಡಿರ್ದ

ದಿನಕರ ಕುಲದ ಕಲಿ ಕುಮಾರನಂ !

“ಮೈದುನಂ

ಪೊಳೆಗೆ ಪೋದವನಿನ್ನುಮೈತರನೆ !” “ದಟ್ಟೈಸಿ

ಹಿಟ್ಟಿಳಿಯುವೈಕಿಲೊಳ್ ಬಟ್ಟೆದಪ್ಪಿದನೊ ? ಮೇಣ್ ….”

“ಏನೊ ಸದ್ದಾಗುತಿಹುದಾಲಿಸಿಂ.”

ಕಿವಿಗೊಟ್ಟು,

ತಡಬೆಯಿರ್ದೆಡೆಗೆ ಕಣ್ಣಾಲಿಯಾಗಿರೆ, ಸುಳಿದು

ಗೆಣ್ಟರಿಂ ಬಳಿಗೆ ಸಾರ್ತಂದುದಾಳ್ವರಿಜೊಂದು,

ಮಿದುಳ್‌ಬಿಳಿಯ ಮಂಜುವಗೆಯಿಂ ಮೂಡಿ ಬಂದುದೆನೆ ೧೫೦

ಬೆಳ್‌ಗನಸು. ಇರ್ಪಿಂದೆ ನಾರುಡೆ ತೊಯ್ದು, ಕೇಶಮಂ

ಮೀಸೆಯಂ ರಜತರಜಸಮ ಹಿಮಕಣಂ ಪತ್ತಿ

ಬೆಳ್ಪೆಸೆಯೆ ಮೈದೋರಿದುದು ಮೈದುನನ ಮೂರ್ತಿ :

“ಏನು ಮಂಜಿದೊ ಕಾಣೆ ! ಕಣ್ದಪ್ಪಿದತ್ತೆನಗುಮಾ

ನಿತ್ಯಪರಿಚಿತ ಪಥಂ : ಗೋದಾವರಿಯನರಸಿ

ತೊಳಲುವಂತಾಯ್ತಲಾ ! ಕಡೆಗೆ, ಕೊಂಚೆಗಳುಲಿಯ

ಮತ್ತೆ ಸಾರಸ ರುತಿಯ ಕೈಮರವನಾಲಿಸುತೆ

ತೊರೆಯ ದಡಕೈದಿದೆನ್ ಕಾಲೂಹೆಯಿಂ ! ಪುಳಿನ

ಶೈತ್ಯದಿಂದಮೆ ಸಲಿಲ ಶಿಶಿರತೆಯನನುಭವಿಸಿ

ಮಿಂದೆನಿಲ್ಲಾ ಚಳಿಗೆ ಸೆಡೆತು ! ಈ ಮರ್ಬಿನೊಳ್ ೧೬೦

ಬಟ್ಟೆಗೆಡುವುದೆ ದಿಟಂ ಪೊಳೆವೊನಲ್‌ಗುಂ ! ಹು ಹು ಹು !”

ನಡುನಡುಗಿ ನಡೆದನೊಲೆಯೆಡೆಗೆ, ಮುದುಗಿದ ಮೆಯ್ಯ

ಲಕ್ಷ್ಮಣಂ.

ಪೊಳ್ತಿನಿತನಂತರಂ ಪೊಳ್ತೇರೆ,

ಪೊಳ್ತರೆಯ ಕದಿರುಗಳಿಟ್ಟಣಿಸಿದೈಕಿಲಿಗೆ

ಗೊಟ್ಟಿಗಾಳೆಗವಾಗಿ, ಸೋಲ್ತ ಮಂಜಿನ ಸೇನೆ

ಸಾಂದ್ರತೆಯನುಳಿದು, ವಿರಳತೆಯಾಂತುಮೊಳಸೋರ್ದು

ಚೆದರಿ, ದಳದಳವಾಗಿ, ಗಿರಿಶಿಖರ ಸೀಮೆಯಿಂ

ಮೆಲ್ಲನೆ ಪೆಡಂಮೆಟ್ಟಿ ಸರಿಯತೊಡಗಿತು ಸಾನು

ನಿಮ್ನತೆಗೆ. ತೂಲಸಮ ಪೀಯೂಷ ಕೋಶದಿಂ

ಕೇಶ ತನುತರ ತಂತುವನ್ನೆಳೆದು ಕುಶಲದಿಂ ೧೭೦

ನೆಯ್ದಮೃತ ಕೌಶೇಯ ಯವನಿಕಾಚ್ಛಾದಿತಂ

ಮೆರೆದಿರೆ ಮನೋಹರಾಸ್ಪಷ್ಟ ಕಾನನ ಭೂಮಿ,

ಹೊಳೆಗಾಗಿ ಹೊರಹೊಂಟನಾಶ್ರಮವನಿನಕುಲಂ

ಸೀತಾ ಸಮೇತಂ. ಸಲಿಲ ಕಲಶಮಂ ಪಿಡಿದು

ಜೊತೆ ನಡೆದನೂರ್ಮಿಳೇಶಂ.

ಪಟ್ ಟಪಟ್ಟ್ ಎಂದು

ಹಿಮಸಿಕ್ತ ಪತ್ರದಿಂ ಬಿಳ್ದುವು ತುಹಿನಬಿಂದು,

ತೋರ ಮಳೆಹನಿಗಳೋಲ್. ತೂರಿ ಬಂದೆಳವಿಸಿಲ್

ಕೋಲುಕೋಲಾಗಿ ಕಾಡಿನ ನಡುವೆ ಚೆಲ್ವಾಯ್ತು,

ಛಾಯೆಮಾಯೆಯ ಸೃಜಿಸಿ. ನಿಡು ಬೆಳೆದ ಮರನೆಳಲ್

ನಸುನೀಲಿಯಾಗಿ ಮಂಜಿನ ಮೆಯ್ಗೆ ಚಿತ್ತಾರಮಂ ೧೮೦

ಕಂಡರಿಸಿದತ್ತು. ಮೂಡಿದುವು ಮಳೆಬಿಲ್ಗಳುಂ

ತಾಮಲ್ಲಲ್ಲಿ. ಋತದ ಕಲ್ಪಿತಮಿಳಿದು ನನಸಾಗೆ

ಪೊರಮಟ್ಟುಮರ್ಧಮಾರ್ಗದೊಳೆಂತೊ ನಿಂದವೋಲ್

ಇಂಬಾದಳಾ ತುಹಿನ ತನುವಸನೆ, ತನ್ವಂಗಿ,

ಸಸ್ಯಶಾಲಿನಿ ಪೃಥಿವಿ !

“ನೋಡು, ಮೈಥಿಲಿ, ಅಲ್ಲಿ !

ಪನಿ ತಳ್ತ ಶಾದ್ವಲ ಶ್ಯಾಮವೇದಿಕೆಯಲ್ಲಿ

ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ

ಮಿರುಮಿರುಗಿ ಮೆರೆವಾ ಹಿಮದ ಬಿಂದು ! ಜ್ವಲಿಸುತಿದೆ

ನೋಡೆಂತು ಬಣ್ಣದೆಣ್ಣೆಯ ಹಣತೆ ಸೊಡರಂತೆ

ಸಪ್ತರಾಗೋಜ್ವಲಂ ! ಸರ್ವಸೃಷ್ಟಿಯ ದೃಷ್ಟಿ ತಾಂ ೧೯೦

ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದಾ

ಪುಟ್ಟ ಜೋತಿಯಲಿ ! ದೇವರ ಮುಖದ ದರ್ಶನಕೆ

ಸಾಲದೇನಾ ಹನಿಯ ಕಿರುದರ್ಪಣಂ ? ನಿಲ್ಲಿಮ್ ; ಆ

ಇರ್ಬನಿಯ ಕಿಡಿಗುಡಿಯೊಳಾರಾಧನೆಯನೆಸಗಿ

ಮುಂಬರಿಯುವಂ !”

“ದೇವಿ, ಹೇಮಂತಮಿಷ್ಟಋತು

ತಾನೈಸೆ ! ದೂರಸೂರ್ಯನೆ ಚಂದ್ರನಾತಪಮೆ

ಕೌಮುದಿ. ಸುಖಾಸ್ಪದಂ ಹಿತಕರಂ ಶೀತಲಂ

ಮಧ್ಯಾಹ್ನಮುಂ. ಸುಭಗನಗ್ನಿ. ದುರ್ಭಗಮೈಸೆ

ನೆಳಲ್ ನೀರ್‌ಗಳೆರಡುಂ ….” “ಐಕಿಲಿರ್ಪಿಂ ತೊಯ್ದ

ಪೊನ್ದೆನೆಯ ಮುಡಿವೊರೆಗೆ ಬಾಗಿ ಶೋಭಿಪವಲ್ತೆ ೨೦೦

ಗದ್ದೆಗಳಯೋಧ್ಯೆಯೊಳ್ !” “ಕಾಣಿಮಾ ಕಾಡಾನೆ

ಜೊಂಡುವುಲ್ಗೆಳಸಿ ಸೊಂಡಿಲ ನೀಡಿ, ಮತ್ತೊಡನೆ

ಕರ್ಚ್ಚುವೈಕಿಲ್ ಕುಳಿರ್‌ಗಳುಕಿ ಸೆಡೆಯುತೆ, ಬಾಯ್ಗೆ

ಪುಗಿಸುತಿದೆ ರಿಕ್ತಹಸ್ತವನುಸಿರ ಬಿಸುಪಿಂಗೆ

ಬಯಸಿ !” “ಸರಯೂ ನದಿಯೊಳವಗಾಹನಂ ಗೆಯ್ಯೆ

ನೋಂತ ಭರತನದೆಂತೊ ಈವೊತ್ತಿನೀ ಚಳಿಗೆ

ಮನದಂದಪಂ !” “ಜಿತೇಂದ್ರಿಯನಾತಗಾ ವ್ರತಂ

ಅಪ್ರಿಯಮೆ ?” “ಧರ್ಮಜ್ಞನಾತನಾ ಕೈಕಯೀ

ಕ್ರೂರದರ್ಶಿನಿಯ ಗರ್ಭದಿನೆಂತುಟುದಿಸಿದನೊ

ಸೋಜಿಗಂ !” “ಸೌಮಿತ್ರಿ, ನಿಂದಿಸದಿರಂಬೆಯಂ. ೨೧೦

ನುಡಿಯುವೊಡೆ ನುತಿಸು ತಮ್ಮನ ಗುಣಗಣಂಗಳಂ.

ಈ ಪ್ರಕೃತಿಸೌಂದರ್ಯಮೆಮಗೆ ಪೇಸುವುದಲ್ತೆ

ನಿಂದಾ ರತರ್ಗೆ ! ನೋಡದೊ ಮಲೆಯ ನೆತ್ತಿಯಿಂ

ಹಿಂಜರಿದ ಮಂಜೆಂತು ಓಡುತಿದೆ ಆ ಹೊಳೆಯ

ಹರಿವ ಹೊನಲಿನ ಕಣಿವೆವಟ್ಟೆಯೊಳ್ ! ನೀರ್ವಕ್ಕಿಗಳ್

ಕೀರ್ತಿಸುತ್ತಿವೆ ಮೂಡುನೇಸರಂ. ಬಿಸಿಯುಸಿರಾವಿ

ಮರ್ಬುಗೈದೊಂದು ಮುಕುರಂಬೋಲೆ ಮಲಿನಮದೊ ಕಾಣ್

ತಪನ ಬಿಂಬಂ. ಮಗ್ನಮೆಂಬವೋಲಸ್ಫುಟಂ

ಸುಸ್ಥಿರಮಪುಷ್ಪ ವನರಾಜಿಗಳ್. ಅದೊ ನದಿಯ ನೀರ್

ಮಿರುಗಿತಿದೆ ಪಾದರಸದೊಲ್, ಪ್ರತಿಕೃತಿಸಿ ದಿವಾ ೨೨೦

ಕೀರ್ತಿಯಂ !”

ಮಿಂದು ನಾರ್ಮಡಿಯುಟ್ಟು ಹಿಂದಿರುಗಿ

ಬರ್ಪಾಗಳಗ್ರಜಂ ಜಲಪೂರ್ಣಕಲಶಮಂ

ಪೊತ್ತು ನಡೆದಿರ್ದವರಜಂಗೆ : “ನಾಮಿಲ್ಲಿಂದೆ

ಪಿಂತೆ ಮರುಳುವ ಪೊಳ್ತು ಸನಿಹಮಾದುದು, ತಮ್ಮ.

ನಾಳೆ ನಾಡಿದರೊಳಗೆ ಮಂಗಳ ಮುಹೂರ್ತಮಂ

ಪಾರ್ದು ಪೊರಮಟ್ಟರವಧಿಯ ಕೊನೆಗೆ, ಭರತಂಗೆ

ಪೂಣ್ಕೆನುಡಿಗೊಟ್ಟಂತೆ, ಮುಟ್ಟುವೆವಯೋಧ್ಯೆಯಂ.

ಬಂದ ಮಾರ್ಗಂಬಿಡಿದು ಋಷಿವರ್ಯರಂ ಕಂಡು,

ವಂದಿಸಿ ನುಡಿಸಿ ಮುಂದೆ ತೆರಳುವಂ.”

ದಾರಿಯೆಡೆ

ಹೊಮ್ಮಿದೆಳಹೊಂಬಿಸಿಲ್ ಬಿಳ್ದೊಂದು ಬಿದಿರ್ಮೆಳೆಯ ೨೩೦

ತುದಿಗಣೆಯೊಳಿರ್ದೊಂದು ಕಾಮಳ್ಳಿಗಳ ಹಿಂಡು

ಹಾರಿದುದು ಗುಂಪುಲಿಯನೆಸೆದು. ಆ ದನಿಯಿಂಪೆ,

ಹೆಪ್ಪುಗಟ್ಟುತ್ತೈಕಿಲಿಗೆ, ಹನಿಹನಿಯವೋಲೆ

ಹೊಳೆವ ಮುತ್ತಿನಮಳೆಯ ಸೂಸಿತೆನೆ, ಗರಿಗರಿಯೆಲೆಯ

ಹಿಮಮಣಿಗಳುದುರಿದುವು ಸೀತಾ ಶಿರೋರುಹಕೆ.

“ದೇವಿಯರನಭಿನಂದಿಸುತ್ತಿಹಳರಣ್ಯಸಖಿ !”

“ಅಲ್ತಲ್ತು. ತಂಗಿ ಊರ್ಮಿಳೆಯ ಕಣ್ಣೀರುಗಳ್, ಮುನ್

ಬರ್ಪ ಸೊಗಕುರ್ಕಿ, ಮುಂಗಾಣ್ಕೆಗಳನರ್ಪಿಸಿಹವೈ

ಪ್ರಾಣೇಶ್ವರನ ಚರಣತಲಕೆ !” “ಏಂ ಜಾಣ್ಮೆನುಡಿ !”

ಎನುತೆ ನಾಣ್ಚಿದ ಲಕ್ಷ್ಮಣಂ, ಮತ್ತೆ : “ಅಣ್ಣಯ್ಯ, ೨೪೦

ನಿಮ್ಮ ಪಟ್ಟಾಭಿಷೇಕಕ್ಕೆ ಇಂತುಟೆ ವಲಂ

ಮುತ್ತಿನ ಮಳೆಗಳಕ್ಕೆ ಎಂದು ಪರಸಿದಳಲ್ತೆ

ಸರ್ವಮಂಗಳೆ, ಜಗಜ್ಜನನಿ !” “ತಾತ್ಪರ್ಯಮಂ

ಪೇಳ್ವೆಯಾದೊಡಮೇಕೊ ತಳ್ಳಂಕಗೊಳ್ಳುತಿದೆ

ಮನ್ಮನಂ ! ಲೋಕದನುಭವಮಿಂತೆ : ಗುರಿ ಬಳಿಗೆ

ಸಾರಿ ಬರೆ, ಪೆರ್ಚಿದಪುದೆರ್ದೆಯ ಕುದಿದಾಟಮುಂ !”

ಮುಂದೆ ನುಡಿದೋರ್ದರಿಲ್ಲೊರ್ವರುಂ. ತಂತಮ್ಮ

ಚಿತ್ತ ಚಿಂತೆಯ ಭಾರಮಂ ಪೊತ್ತ ಮೌನದಿಂ

ಪೊಕ್ಕರಾ ನಿರ್ಜನ ಜನಸ್ಥಾನದಾ ಕುಟಿಗೆ.

ಪೂರಯಿಸಿ ಪೂರ್ವಾಹ್ನ ಕರ್ಮಂಗಳಂ, ಭುಜಿಸಿ ೨೫೦

ವನಜನ್ಯ ಪಲಫಲಂಗಳನೆಲೆವನೆಯ ಹೊರಗೆ

ಲಘುಕುಟ್ಟಿಮಸ್ಥಳದಿ ವಿಶ್ರಮಿಸಿಕೊಳ್ಳುತಿರೆ,

ರಘುಕುಲರೆಡೆಗೆ ಬಂದುದಾ ಜನಸ್ಥಾನಕ್ಕೆ

ಸುತ್ತಣ ತಪೋವನದೊಳಲ್ಲಲ್ಲಿ ನೆಲೆಸಿರ್ದ

ಕಿತ್ತಡಿಗಳೊಂದು ಕೂಟಂ :

“ಅಶುಭವಾರ್ತೆಯಂ

ಪೊತ್ತು ತಂದೆವೊ ನಿನಗೆ, ಶುಭದರ್ಶಿ. ನೀನಿಲ್ಲಿ

ನಿಂದ ಮೊದಲಿಂದಮಿಂದಿನವರೆಗೆ ನಮಗಾಯ್ತು

ನೆಮ್ಮದಿಯ ಬಾಳ್ಕೆ. ಮೊನ್ನೆಯ ಸಂಜೆ, ಬೇರ್ಗಳಂ

ತರವೋದ ನಮ್ಮವರನಾರೊ ಮಾಯಾವಿಗಳ್,

ಪೆಣ್ವರಿಜುವೊತ್ತವರ್, ತಿಣ್ಣನೆ ಬಡಿದರಲ್ತೆ ! ೨೬೦

ರಕ್ಕಸರ ಪೆರ್‌ತಂಡವೊಂದಿತ್ತೀಚೆಗಿತ್ತಣ್ಗೆ

ನುರ್ಗ್ಗುತಿರ್ಪಾಶಂಕೆಯೆಮಗೆ. ಪಿಂತಿರುಗಿ ನೀಂ

ಪೋಪೆಯಪ್ಪೊಡೆ, ಕೆಲದಿನಂಗಳಿಲ್ಲಿಯೆ ತಳುವಿ,

ಪೃಥಿವಿಪತಿ, ನಿನ್ನ ಬಿಲ್ಲಿನ ಜೇವೊಡೆಯ ದನಿಯ

ದುರ್ದಮ್ಯರಕ್ಷಣೆಯನೆಮಗಿತ್ತು ತೆರಳಯ್ಯ !”

ಅಭಯವಚನವನಿತ್ತು ಕಳುಹಿದನ್ ಬೆದರಿದಾ

ಜಡೆವೊತ್ತರಂ. ಕಳವಳವನುಳಿದು ತಮ್ಮನಂ

ಬೆಸಸಿದನ್ : “ಸೌಮಿತ್ರಿ, ಸುತ್ತಣ ಅರಣ್ಯಮಂ

ಸುತ್ತಿ ಬಾ …. ಬೆನ್ಗಿರಲಿ ಋಷಿ ಅಗಸ್ತ್ಯನ ಕೊಟ್ಟ

ಶರಧಿ…. ಶರಭಂಗಮುನಿಯಿತ್ತ ಕೋದಂಡಮಂ ೨೭೦

ಕೈಕೊಂಡು ನಡೆ…. ಮತ್ತೆ ಮೊದಲಾಗುವಂತೆವೋಲ್

ತೋರುತಿಹುದೆಮ್ಮ ಕಾಂತಾರ ಕಷ್ಟಂ !” ಸುಯ್‌ಸುಯ್ದು

ನುಡಿದಣ್ಣನಾಭೀಳ ಮುಖಮುದ್ರೆಯಂ ಕಂಡು

ಬೆಕ್ಕಸವಡುತೆ ಲಕ್ಷ್ಮಣಂ ಪೋದನಾಜ್ಞೆಯಂ

ಮೇಣಂತೆ ಪೊತ್ತು ಕೋದಂಡಮಂ.

ಕಾಡನಲೆದಾ

ಬೇಹುಕಾರಂ ಬಳಲಿ, ಬೈಗುದಂಪೆಲರ್ಗೆಳಸಿ

ಸೊಗಸಿ, ಮಲೆದಲೆಗೋಡಿನೊಂದರೆಯ ತುದಿಗೇರಿ

ಕುಳಿತು ವಿಶ್ರಮಿಸಿಕೊಳುತಿರ್ದೂರ್ಮಿಳಾಪ್ರಿಯಂ

ಬೆರಗಾದನೊಂದದ್ಭುತವನನುಭವಿಸಿ : ಕಿವಿಗೆ

ಜೇನಿಳಿದುದೊಂದು ಬಹುದೂರಗೇಯಂ ! ಮತ್ತೆ ೨೮೦

ತುಂಬಿತು ವಿಪುಷ್ಟವನರಾಜಿಯಂ ಪರಿಮಳಂ

ಹೇಮಂತದಾ ! ಅಂತೆ ಮೇಣ್ ಕಣ್ಗೊಳಿಸಿತಚ್ಚರಿಯ

ಸುರಚಾಪ ವರ್ಣಜಾಲಂ ಬೈಗಿನಾಕಾಶಮಂ

ಬಾಸಣಿಸುತದ್ರಿವನ ಪೃಥ್ವಿಯನಲಂಕರಿಸಿ !

ಏನಿದೇನೆಂದು ನೋಡುತಿರೆ, ದಕ್ಷಿಣ ದಿಶಾ

ವಾಯುಪಥಮಂ ನಡೆವ ರಥವೋ ಎನಲ್ಕೊಂದು

ಬಣ್ಣ ಬಣ್ಣದ ಮುಗಿಲ್, ಮಳೆಬಿಲ್ಲ ತೇರಿನೊಲ್,

ಬಳಿಸಾರ್ದುದೊಯ್ಯನೆ ತೇಲಿತೇಲಿ. ಬಳಿಬಳಿಗೆ

ಸಾರಿ ಬರೆವರೆ ಮುಗಿಲತೇರು, ನೆರೆಯೇರ್ದುದಾ

ಹೊನಲಿಂಚರಂ; ಕಮ್ಪುಮುಕ್ಕಿತುಜ್ವಲವಾಯ್ತು ೨೯೦

ಮಂಜು ಸಂಧ್ಯೆಯ ಕಾನ್ತಿಯುಂ. ನೋಡುತಿರ್ದಂತೆ

ಗಂಧಮಂ ಗಾನಮಂ ಸೋನೆ ಸೂಸುತ್ತಮಾ

ವರ್ಣಮಯ ಮೇಘಮಿಳಿದುದು ಜನಸ್ಥಾನದಾ

ಕಾಡುಕಣಿವೆಯೊಳಿರ್ದವರ ಪರ್ಣಕುಟಿಯಿರ್ದ

ದಿಕ್ಕಿನಲಿ : ಹಬ್ಬಿ ತುಂತುರ್ ಮಂಜು, ಮರ್ಬ್ಬಾಯ್ತು

ತುಹಿನರ್ತು ಸಂಧ್ಯೆ ! ಕಳವಳಗೊಂಡು ಲಕ್ಷ್ಮಣಂ

ಬೇಗಬೇಗನೆ ಇಳಿದನಾ ಅಚಲಚೂಡಮಂ

ತ್ಯಜಿಸಿ.

ಕೌತುಕದಿ ಸೀತಾರಾಮರೀಕ್ಷಿಸಿರೆ,

ಮಂಜಿನೊಲ್ ಪಸರಿಸಿದ ಮುಗಿಲ ತೇರಿಂದೊಂದು

ಮೂಡಿದುದು ಮಂಜುಮ ಸ್ತ್ರೀಮೂರ್ತಿ. ಒಯ್ಯನೆಯೆ, ೩೦೦

ನಯ ವಿನಯಮೊಯ್ಯಾರ ಸಂಸ್ಕೃತಿಗಳೊಂದಾಗಿ

ಮೆಯ್ವೆತ್ತವೊಲ್ ಬಂದಳಾ ವಿಯಚ್ಚರ ಯೋಷೆ,

ಪಜ್ಜೆಗೆಜ್ಜೆಗಳುಲಿಯ ಬಿಂಕಂ ಬಲೆಯ ಬೀಸೆ :

“ಸುಸ್ವಾಗತಂ ನಿನಗೆ, ಕೋಸಲೇಶ್ವರ. ನಮ್ಮ

ದಕ್ಷಿಣಾವನಿಗೆಮಗೆ ನೀನತಿಥಿ. ಚಂದ್ರನಖಿ ನಾಂ;

ಲಂಕೇಶ್ವರನ ಭಗಿನಿಯೆಂ !” ಕಳವಳಿಸಿ ಸೀತೆ

ಕಂಡಳಿನಿಯನ ಕಣ್ಣ ಭಾವಮಂ. ರಾವಣನ

ನಾಮಶ್ರವಣ ಮಾತ್ರದಿಂ ತನ್ನ ಮನಕೆಂತು

ತೋರ್ದುದೊ ಭಯಾನಕಂ, ತನ್ನ ರಮಣಂಗಂತೆ

ಮೊಗದೊಳೆಸೆದುದು ಮಚ್ಚರದ ಕಿಚ್ಚು. ತುಟಿಗೊಂಕಿ ೩೧೦

ಬೀಸಿದನ್ ನುಡಿಗತ್ತಿಯಂ : “ರಾವಣನ ತಂಗೆ,

ತಳುವಿ ಬಂದೆಯಲಾ ಸುಖಾಗಮನಮಂ ಬಯಸೆ !

ನಾಳೆಯೋ ನಾಡಿದೋ ಬೀಳ್ಕೊಂಡಪೆವು ನಿಮ್ಮ

ಈ ಅಡವಿ ಪೊಡವಿಯಂ. ಅಯ್ಯೊ, ಆತಿಥ್ಯಮಂ

ಸವಿವ ಸೌಭಾಗ್ಯಮೆನಗಿಲ್ಲಾಯ್ತಲಾ !” ನಕ್ಕು

ಮಾರ್ನುಡಿದಳಿಂತಾ ದನುಜನನುಜೆ : “ಹೊಣೆ ನಮತು,

ನಂಟರ ಮನೆಗೆ ಹೋಗುವನ್ನೆಗಂ ; ಹೋದಂದು

ನಾವವರ ಸೆರೆಯಲ್ತೆ ಬಿರ್ದ್ದನಿಕ್ಕುವವರೆಗೆ,

ಮೇಣವರೆ ಬೀಳುಕೊಡುವನ್ನೆಗಂ ? ನೀಮೆಂತು

ಪಿಂತಿರುಗುವಿರಿ ಬಿರ್ದ್ದನುಣ್ಣದೆಯೆ ನಾಮಿಕ್ಕುವಾ ? ೩೨೦

ನಿಮಗುಮದು ತಗದು ; ನಮಗಪಕೀರ್ತಿ !” “ವಿಚಿತ್ರಮೀ

ದಾಕ್ಷಿಣಾತಿಥ್ಯಂ ಬಲಾತ್ಕಾರ ಸತ್ಕಾರಂ !”

“ದಿಟದೊಲ್ಮೆ ಹಠವಾದಿ. ಔಪಚಾರಿಕಮಲ್ತು, ಕೇಳ್,

ರಾಕ್ಷಸಕುಲದ ಛಲದ ದೃಢನಿಶ್ಚಲ ಪ್ರೀತಿ.

ಊಟದೊಳ್ ಕದನದಾಟದೊಳಂತೆ ಬೇಟದೊಳ್

ಬಲನಿಷ್ಠೆಯೆಮ್ಮ ಸಲ್ಲಕ್ಷಣಂ ! ಮಾಳ್ಪುದಂ

ರಸಪೂರ್ಣಮೆನೆ ರಾಗಪೂರ್ವಕಮಾಗಿ ಮಾಳ್ಪುದದೆ

ನಮಗೆ ನಲ್ ! ಕೋಸಲೇಶ್ವರ, ನಮ್ಮ ಪ್ರೇಮಮಂ

ತಣಿಯುಣದೆ ನೀಂ ಪಿಂತಿರುಗಿ ಪೋಪುದಸದಳಂ !”

“ಬಿರ್ದ್ದಿನೌತಣಮೇಕೆ ? ಮೇಣರಸು ಸೊಗಮೇಕೆ ? ೩೩೦

ನಾಡಿನೊಳವೆಲ್ಲಮಂ ತೊರೆದು, ನೋಂಪಿಗೆ ನೋಂತು

ಕಾಡನಲೆವೆಮಗೆ ?” “ಮೈತ್ರಿಯೆ ಕೊಡುಗೆಯಾಗುವೊಡೆ

ನೋಂಪಿಗದರಿಂ ಕೇಡೆ ?” “ಉಂಟೆ ? ನೋಂಪಿಯ ಮುಡಿಗೆ

ಹಗೆತನವನಳಿಸುತಕ್ಕರೆಯನುಕ್ಕಿಸಲಿಕಾಂ

ತೊರೆದು ದೊರೆಗದ್ದುಗೆಯನಿಲ್ಲಿಗೈತಂದೆನೈಸೆ !”

“ನಿನ್ನವೋಲಾನುಮದನರಸಿ ಬಂದಿಹೆನಿಂದು

ನಿನ್ನೆಡೆಗೆ, ಕೇಳ್, ಸರಸಿ. ನೀಂ ಕರುಣಿ, ಧರ್ಮಮತಿ,

ದಾನರುಚಿ. ನಾಥನಿಲ್ಲದ ತರುಣಿಯಾಂ. ನನ್ನ ಬಾಳ್

ಬರಿಯ ಪಾಳ್. ಮಡಿದನೆನ್ನಾಣ್ಮನೆನ್ನಣ್ಣನಿಂ ೩೪೦

ತನ್ನ ಕಿರುವರೆಯದೊಳ್. ಪಾತಾಳಯುದ್ಧದೊಳ್

ತೊಡಗಿರ್ದರಿರ್ವರುಂ. ಕಳ್ತಲೆಯ ಕುರುಡಿಂದೆ

ಒರ್ವರೊರ್ವರನರಿಗೆ ಗೆತ್ತು ಪುರುಡಿಸಿ ಕಾದಿದರ್.

ಗಂಡನಳಿದನ್ ಗಂಡುಗಲಿ ರಾವಣನ ಕೈಯ

ಕೈದುವಲಿಯಾಗಿ. ನಾನಂದಿನಿಂದೀವರೆಗೆ

ಮಳೆಯ ನೀರ್ಗಾಣದೆಯೆ ಬಂಜರಾದೊಳ್ನೆಲದ

ಪಾಂಗಿಂದೆ ಬರ್ದುಕುತಿಹೆನೆಂತೊ ರಿಕ್ತತೆಗತ್ತು

ಸತ್ತು ಬೇಸತ್ತು. ನನ್ನೆರ್ದೆಯ ನೀರಸದಿಳೆಗೆ ನೀಂ

ಮಳೆಯಾಗಿ ಕರೆಯಯ್ಯ, ಹೊಳೆಯಾಗಿ ಹರಿಯಯ್ಯ ;

ಹಚ್ಚನೆಯ ಹಸುರು ಪಯಿರಿನ ಬೆಳೆಯ ಸಿರಿಯಾಗಿ ೩೫೦

ಬಾರಯ್ಯ. ಕಲ್ಪತರು ನೀನಲ್ತೆ ಬೇಳ್ಪರಿಗೆ ?”

ಮಿಂಚಿನಂಚಿನ ಮೋಡದೊಲ್ ಬಳಿಗೆ ಬರ್ಪಳಂ,

ಮೇಘಾಂಗಿಯಂ, ಪರ್ವತಂಬೋಲ್ ತಡೆದು : “ಅನಾರ್ಯೆ,

ನೀನನ್ಯಭಾರ್ಯೆ ! ರಾಕ್ಷಸ ವಿವಾಹಕ್ರಮಂ, ಕೇಳ್,

ನಮಗಸಹ್ಯಂ !” ರಾಮನಿಂತು ಕಿರುನಗೆವೆರಸಿ

ನುಡಿದು, ತನ್ನರಸಿಯಂ ನೋಡಿ, ಕಣ್ಣರಿತಂತೆ

ಪರಿಹಾಸ್ಯಮನನಾಗಿ ಚಂದ್ರನಖಿಯಂ ಕುರಿತು,

“ಪತ್ನಿಯಿಹಳೆನಗಿವಳ್; ಪ್ರಿಯೆಯುಂ ವಲಂ; ಮೇಣ್

ಚೆಲ್ವಿಗೇನಲ್ಲಿ ಕೊರೆಯಿಲ್ಲ ! ತುಂಬಿಹ ಹೊಡೆಗೆ

ಸೇರದಮೃತಾನ್ನಮುಂ” “ಒಪ್ಪಿದೆನ್. ಈ ಸತಿಗೆ ೩೬೦

ಹೆಗಲೆಣೆಯನಾಂ ಕಂಡೆನಿಲ್ಲ. ನನ್ನತ್ತಿಗೆಯ

ರೂಪಿರ್ಪುದಿದಕೆ ಹೊಯಿಕೈಯಪ್ಪುದಾದೊಡಂ

ಗುಣಕೆ ಮಚ್ಚರಮೇಕೆ ? – ಸಿಹಿಗೆಂತು ರುಚಿಯಿಹುದೊ

ಕಹಿಗುಮಂತೆಯೆ ಬೇರೆ ರುಚಿಯಿರದೆ ? ಭೋಜನದ

ರಸಿಕಂಗೆ ಬೇರೆ ಬೇರೆಯ ರುಚಿಯ ರಸಗಳೊಳ್

ಭೇದಭಾವಮದೇಕೆ ? ನಿಮ್ಮುತ್ತರದ ರತಿಯ

ಸಾತ್ವಿಕ ರಸದ ಜೊತೆಗೆ ನಮ್ಮ ದಕ್ಷಿಣ ರತಿಯ

ರಾಜಸವನನುಭವಿಸಿ ನೋಳ್ಪೊಡೆ ಕಳಂಕಮೇಂ

ರಾಜ ರಸಿಕತೆಗೆ ?” ನಗೆಗೊಂಕಿನಾ ಚಂದ್ರನಖಿ

ಹೂವಿನಾಕೃತಿವೆತ್ತ ಹಾವಿನಂದದಿ ನಿಂತು ೩೭೦

ಹೆಡೆ ನಲಿಯುತಿರೆ, ಹುಬ್ಬುಗಂಟಿಕ್ಕಿದನ್ ಮೈಥಿಲಿಯ

ಮನದನ್ನನಿಂತು : “ನಿಲ್, ನುಡಿಯದಿರ್ ಪೊಲ್ಲಮಂ.

ಸಾಲ್ಗುಮೀ ಪಾಣ್ಬೆಜಾಣ್. ನೀನೆತ್ತಣಿಂದರಿವೆ,

ಸಿತಗೆ, ಹದಿಬದೆತನದ ನಿರ್ಮಲಾನಂದಮಂ ?

ಹದಿಬದೆಗೆ ತೋರ್ದಪುದು ತನ್ನಿನಿಯನೊರ್ವನೊಳೆ

ಸರ್ವ ಮನುಜರ, ಮತ್ತೆ ಸರ್ವಲೋಕದ ಸರ್ವ

ವೈವಿಧ್ಯಮುಂ. ಪ್ರೇಮನಿಷ್ಠೆಯ ಪತಿಗುಮಂತೆ

ತನ್ನ ಸತಿಯೊಳೆ ತೋರ್ದಪುದು ಸರ್ವ ಲಲನೆಯರ

ಸರ್ವಶೃಂಗಾರಮುಂ ! ಲಂಕೇಶ್ವರನ ತಂಗೆ

ನೀನಾಗಿಯುಂ ನುಡಿವೆ ನಾಡಾಡಿ ಬೆಲೆವೆಣ್ಗಳುಂ ೩೮೦

ನಾಣ್ಣುವಳಿನುಡಿಗಳಂ ; ಸೋಜಿಗಂ !…. ಇಹಳಿಲ್ಲಿ

ಮರ್ಯಾದೆವೆಣ್, ಜನಕ ರಾಜರ್ಷಿಯ ಕುಮಾರ್ತೆ.

ಮಾತು ಸಾಕಿಲ್ಲಿರದೆ ನಡೆ, ಸಹೋದರ ಲಕ್ಷ್ಮಣಂ

ಬರ್ಪನಿತರೊಳ್. ಬಂದೊಡಪ್ಪುದು ನಿನಗೆ ತಗುವವೊಲ್

ಮದುವೆ ಮರಿಯಾದೆ !”

ದೂರದಿ ಕಂಡುದಾ ಮೂರ್ತಿ

ಬೈಗು ಮರ್ಬಿನ ಮಂಜಿನೊಳ್. ಬೇಗಮೈತಂದು,

ಶಂಕೆಯಿಂ ದಿಟ್ಟಿಸಿದನಾಪಾದ ಮಸ್ತಕಂ,

ಕುಡುದಿಂಗಳಂತೆವೋಲ್ ನಿಂದಾ ನವಾಂಗಿಯಂ.

ಪುಲಕಿಸಿತು ತನು ಚಂದ್ರನಖಿಗೆ, ರಾಜಸ ಗುಣದಿ

ತನಗೆಣೆಯೆ ದೊರೆತಂತೆ; ಮೇಣ್ ಸತಿಯಿಲ್ಲದಾತಂಗೆ ೩೯೦

ರತಿಯಾಗುವಾಸೆಗೆ ಮನಂ ಮಿಂಚಿತೆಂಬಂತೆ !

ಹೆಣ್ಣಿನಿಂದಣ್ಣಂಗೆ ಕಣ್ದಿರುಹಿ ನೋಡಲ್ಕೆ

ನಗೆಗೂಡಿ ಬಣ್ಣಿಸಿದನಾತನಾ ನಡೆದನಿತುಮಂ.

ಕೇಳ್ದು ಕಿಚ್ಚುರಿದೆದ್ದು “ತೊಲಗೆಲೆ ನಿಶಾಚರಿಯೆ !”

ಎನುತೆ ತೋಳಂ ಬಾಣಸಹಿತಮಂ ಬೀಸುತಿರೆ

ಕೆತ್ತಿತು ಪ್ರಮಾದದಿಂ ರಕ್ಕಸಿಯ ಮೋರೆಯಂ,

ನೆತ್ತರ್ವೆರಸಿ ಕೋಪವುಕ್ಕಲ್ಕೆ. – ತೆಕ್ಕನೆಯೆ

ಶೂರ್ಪನಖಿಯಾದಳಾ ಚಂದ್ರನಖಿ : ಗುರ್ವಿತ್ತು

ಭೀಷಣಾಕೃತಿ. ಭೀತಿ ಜೊಂಪಿಸಿತು ಸೀತೆಯಂ,

ಮೋಹದಿಂದಾಕೆಗೊದಗಿದ ಮೋಹನಾಕೃತಿಗೆ ೪೦೦

ವೈರದಿಂ ವೈರೂಪ್ಯಮಾದುದೆನೆ, ನಖಚಯಂ

ಮೊರದವೋಲಗುರ್ವಾದುವಾ ಸ್ವೈರ ರಾಕ್ಷಸಿಗೆ.

ಕಾಮರೂಪಿಣಿ ಭೀಮ ಭೀಕರಾಕಾರಮಂ

ತಾಳ್ದುದೆ ತಡಂ, ಕೆತ್ತಿದುದು ಲಕ್ಷ್ಮಣನ ಕತ್ತಿ

ಮಾಯಾವಿನಿಯ ಮೋರೆಯಂ, ಮೂಗರಿಯುವಂತೆ,

ಸಿಡಿದಳಂಬರಕೊಡನೆ ವರ್ಷಾಭ್ರವೇಷದಿಂ

ರೋಷರವದಿಂದಶನಿಘೋಷದಿಂ, ನೆಲಂ ನಡುಗಿ

ಗುಡುಗೆ ಗಿರಿಗಹ್ವರಂ !

ತುಂಬಿದತ್ತೊಯ್ಯನೆಯೆ

ಪಂಚವಟಿಧಾತ್ರಿಯಂ ಹೇಮಂತರಾತ್ರಿಯಾ

ಶ್ರೀಮಂತ ಶಾಂತಿ. ಸೀತಾಕಾಂತನಂತರದಿ ೪೧೦

ಘೂರ್ಣಿಸಿತ್ತೊಂದನತಿದೂರಂ ಮನಃಕ್ರಾಂತಿ !



<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<