ಸಂಚಿಕೆ-೧/ಕವಿಕ್ರತು ದರ್ಶನಂ

<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<


ಸಂಚಿಕೆ ೧ – ಕವಿಕ್ರತು ದರ್ಶನಂ


ಶ್ರೀ ರಾಮ ಕಥೆಯಂ ಮಹರ್ಷಿ ನಾರದ ವೀಣೆಯಿಂ

ಕೇಳ್ದು, ಕಣ್ದಾವರೆಯೊಳಶ್ರುರಸಮುಗುವನ್ನೆಗಂ

ರೋಮಹರ್ಷಂದಾಳ್ದು ಸಹೃದಯಂ ವಾಲ್ಮೀಕಿ ತಾಂ

ನಡೆತಂದನಾತ್ಮಸುಖಿ, ಕೇಳ್, ತಮಸಾ ನದೀ ತಟಿಗೆ,

ತೇಜಸ್ವಿ, ತರುಣಂ, ತಪೋವಲ್ಕಲ ವಸ್ತ್ರ ಶೋಭಿ.

ಮುಂಬಿಸಿಲ ಹೊಂಬಣ್ಣಮಂ ಮಿಂದು ಕಳಕಳಿಸಿ

ನಗುತಿರ್ದ ಕಾಂತಾರ ಪಂಕ್ತಿ ವಿಸ್ತಾರದಲಿ

ಚೈತ್ರಋತು ಪಕ್ಷಿಯಿಂಚರವನಾಸ್ವಾದಿಸುತೆ,

ತೆಳುಗಾಳಿಗೊಯ್ಯನೆಯೆ ನಿರಿನಿರಿ ವಿಕಂಪಿಸುವ

ಪಟಿಕ ನಿರ್ಮಲ ನದಿಯ ಪುಲಕಿತ ಮುಕುರದಲ್ಲಿ ೧೦

ಮಜ್ಜನಕ್ಕುಜ್ಜುಗಿಸಿ, ಸಲಿಲಾವಗಾಹಕ್ಕೆ

ಸೋಪಾನಗಳನಿಳಿದು ದಿಣ್ಣೆಮಳಲಂ ದಾಂಟಿ,

ಹೊಳೆಯ ಜೀವನದಂಚನಡಿಗಳಿಗೆ ಸೋಂಕಿಸಿರೆ

ಕೇಳ್ದತ್ತದೊಂದು ರತಿಸುಖ ಚಾರು ನಿಸ್ವನಂ.

ಗಗನವೀಣಾ ತಂತ್ರಿಯಂ ಮಿಡಿದ ತೆರನಾಗಲಾ

ಹರ್ಷಚಿತ್ತಂ, ಮಹರ್ಷಿ, ಕಣ್ ಸುಳಿದನಾಗಸಕೆ

ಕವಿಪುಂಗವಂ : ಕಂಡು ನಲಿದುದು ಮನಂ ಮಿಥುನಮಂ

ದಂಪತಿಕ್ರೌಂಚಂಗಳಾ, ನೋಡುತಿರೆ, ತೆಕ್ಕನೆಯೆ,

ಗಾಳಿವಟ್ಟೆಯೊಳಾಡುತಿರ್ದಾ ವಿಹಂಗಮಗಳಲಿ

ಗಂಡುಕೊಂಚೆ ಒರಲ್ದು ದೊಪ್ಪನೆ ನೆಲಕ್ಕುರುಳ್ದು ೨೦

ಪೊರಳ್ದುದು. ಕಾರಿದತ್ತೆರ್ದೆಗೆ ಚುರ್ಚ್ಚಿದ ಸರಳ್

ನೆತ್ತರಂ, ಜೀರ್ಕೋವಿಯಂತೆವೋಲ್. ಹುದುಗಿರ್ದ

ಹೊದೆಯಿಂದೆ ಕಾರೊಡಲ ಬಿಲ್ಲವನುರದೆ ಚಿಮ್ಮಿ

ತುಡುಕಿದನದಂ ಮಾಂಸದೊಲವಿಂದೆ. ಕೊಂಚೆವೆಣ್

ಬಿಸುನೆತ್ತರೊಳ್ ನಾಂದು, ಪೊಳೆಮರಳ್ ಪುಡಿಯೊಳ್

ಪೊರಳ್ದು, ಬಿಯದನ ಕೈಗೆ ಸಿಲುಕಿದಿನಿಯಾಣ್ಮನಂ

ಕಂಡು ಚೀರ್ದಾರ್ದುದಯ್ ಚಕ್ರಗತಿಯಿಂ ಪಾರ್ದು,

ಗಿರಿವನಾಚಿಚ್ಚೇತನಮೆ ಚೀತ್ಕರಿಸುವಂತೆ,

ಕರಗಿತಂತೆಯೆ ಕರುಳ್ ಮುನಿಗೆ. ಕಣ್ಬನಿಯುಣ್ಮುವೋಲ್

ವೇದನೆಯ ಕರ್ಮುಗಿಲ್ ತೀವಿಬರೆ ಹೃದಯದೊಳ್, ೩೦

ಮರುಗಿದನು ಋಷಿ, ಮನಕೆ ಮಿಂಚಲಾ ತನ್ನ ಪೂರ್ವಂ.

ಬಾಳ್ಗಬ್ಬದೊಳ್ ಕರುಣೆ ತಾಂ ಬೇನೆಗುದಿದೊಡಮಲ್ತೆ

ಮೆರೆದಪುದು ಪೊರಪೊಣ್ಮುತಾ ಮಹಾಕಾವ್ಯ ಶಿಶು ತಾಂ

ಚಾರು ವಾಗ್‌ವೈಖರಿಯ ಛಂದಶ್ಶರೀರದಿಂ?

ಕುರಿತು ಮರುಗಿದನಿಂತು ಕೊಂಚೆಗುಲಿ ಬಿಯದಂತೆ :

“ಮಾಣ್, ನಿಷಾದನೆ, ಮಾಣ್ ! ಕೊಲೆ ಸಾಲ್ಗುಮಯ್ಯೊ ಮಾಣ್ !

ನಲಿಯುತಿರೆ ಬಾನ್ ಬನದ ತೊರೆ ಮಲೆಯ ಭುವನಕವನಂ

ಸುಖದ ಸಂಗೀತಕೆ ವಿಷಾದಮಂ ಶ್ರುತಿಯೊಡ್ಡಿ

ಕೆಡಿಸುವಯ್? ನಾನುಮೊರ್ ಕಾಲದೊಳ್ ನಿನ್ನವೊಲೆ

ಕೊಲೆಯ ಕಲೆಯಲ್ಲಿ ಕೋವಿದನಾಗಿ ಮಲೆತಿರ್ದೆನಯ್. ೪೦

ನಾರದ ಮಹಾಋಷಿಯ ದಯೆ ಕಣಾ ಕರುಣೆಯಂ

ಕಲಿತೆನ್!” ಎಂದಾತ್ಮಕಥೆಯಾತ್ಮ ತತ್ತ್ವವನೊರೆದು,

ಕಬ್ಬಿಲಗೆ ಬಗೆ ಕರಗುವಂತೆ ಬೋಧಂಗೆಯ್ದು,

ಕೃಪೆದೋರುತಾತಂಗಹಿಂಸಾ ರುಚಿಯನಿತ್ತು,

ಕೊಂಚೆವಕ್ಕಿಯ ಮೆಯ್ಯಿನಾ ಬಾಣವಂ ಬಿಡಿಸಿ

ಪ್ರಾಣಮಂ ಬರಿಸಿ ಸಂಜೀವ ಜೀವನದಿಂದೆ,

ತವಸಿ ಪೆಣ್ವಕ್ಕಿಯೊಡಲುರಿಯನಾ ವಾಲ್ಮೀಕಿ

ತಮಸೆಯಿಂ ತನ್ನೆಲೆವನೆಗೆ ಮರಳ್ದು, ಧ್ಯಾನದೊಳ್

ಮುಳುಗಿರಲ್, ಮಿಂಚಿತಯ್ ಕಾವ್ಯ ದಿವ್ಯ ಪ್ರಜ್ಞೆ,

ನವನವೋನ್ಮೇಷಶಾಲಿನಿ, ನಿತ್ಯತಾ ಪ್ರತಿಭೆ. ೫೦

ಹೊಮ್ಮಿತಾ ದರ್ಶನಂ ಬಗೆಗಣ್ಗೆ; ಚಿಮ್ಮಿದತ್ತೀ

ವರ್ಣನಂ ನಾಲಗೆಗೆ : ಪಿಡಿವೊಲಲ್ತಾದುದಕೆ

ಕನ್ನಡಿಯನಪ್ಪುದಕೆ ಮುನ್ನುಡಿಯನುಲಿವಂತೆಯುಂ,

ಕಂಡ ರಾಮಾಯಣವನೆಲ್ಲಮಂ ಕಂಡಂತೆ

ಹಾಡಿದನೊ, ಕೇಳ್ದ ಲೋಕಂಗಳೆಲ್ಲಂ ತಣಿವವೋಲ್.

ತನ್ನ ಲೀಲಾ ಲೋಕಲೋಕಂಗಳಂ ಸೃಜಿಸಲ್

ಅನಾದಿಕವಿ, ಪರಮ ಪುರುಷೋತ್ತಮಂ, ಸರ್ವೇಶ್ವರಂ,

ಬೇರೆಬೇರೆಯ ವಿಶ್ವಕವಿಗಳಂ ಬ್ರಹ್ಮರ್ಕಳಂ

ನಿರ್ಮಿಪೋಲ್, ನಮ್ಮೀ ಚತುರ್ಮುಖ ಜಗತ್‌ಕರ್ತೃ ತಾಂ

ತನ್ನ ಲೀಲೆಯ ಕಾವ್ಯಸತ್ತೆಯ ಬೃಹತ್ ಕೃತಿಗಳಂ ೬೦

ಸೃಷ್ಟಿಸೆ ವಸುಂಧರೆಯೊಳಂತೆಯೆ ಕವೀಂದ್ರರ್ಕಳಂ

ಪುಟ್ಟಿಪನ್. ಬ್ರಹ್ಮಕೃತಿಯೊಳ್ ಸಚ್ಚಿದಾನಂದಮಂ

ವ್ಯಕ್ತಗೊಳಿಪಂತುಟಾ ಅವ್ಯಕ್ತ ಪರಮ ತತ್ತ್ವಂ,

ವರಕವಿಯ ಕಾವ್ಯಸತ್ತೆಯೊಳಾತ್ಮ ರಸ ಸತ್ಯಮಂ

ಪ್ರಕಟಿಸುವನೀ ಬ್ರಹ್ಮನನ್ಯವಿಧದಿಂದೆಮ್ಮ

ಮರ್ತ್ಯ ಪೃಥಿವೀ ತತ್ತ್ವದೊಳ್ ಪ್ರಕಟನಾಸಾಧ್ಯಮಂ,

ಅನಿರ್ವಚನ ಬೋಧ್ಯಮಂ, ಪ್ರತಿಮಾ ವಿಧಾನದಿಂ

ರಸಋಷಿ ಪ್ರತಿಭಾನ ಮಾತ್ರ ಸಂವೇದ್ಯಮಂ.

ಬ್ರಹ್ಮ ಸತ್ತೆಯನಾ ಪರಬ್ರಹ್ಮ ಸತ್ತೆಯಿಂ

ಮಾತ್ರಮೆಯೆ ದರ್ಶಿಸುತಿದಂ ಮಿಥ್ಯೆಯೆಂಬುದೇಂ ೭೦

ಪೂರ್ಣ ಸತ್ಯಮೆ? ಯೋಗವಿಜ್ಞಾನಮೊಪ್ಪದು ಕಣಾ!

ಪೂರ್ಣಮದು; ಪೂರ್ಣಮಿದು; ಪೂರ್ಣದಿಂ ಬಂದುದೀ

ಪೂರ್ಣಮಾ ಪೂರ್ಣದಿಂ ಪೂರ್ಣಮಂ ಕಳೆದೊಡಂ

ಪೂರ್ಣಮೆಯೆ ತಾನುಳಿವುದಾ ಪ್ರಜ್ಞೆಗದುವಿದುಂ

ಪೂರ್ಣಮುಂ ಸತ್ಯದಾವಿಷ್ಕಾರ ವಿನ್ಯಾಸಗಳ್.

ಕಾವ್ಯ ಸತ್ತೆಯನನ್ಯ ಸತ್ತಾ ಪ್ರಮಾಣದಿಂ

ಪರಿಕಿಸಲ್ ಮಿಥ್ಯೆಯಲ್ಲದೆ ತನಗೆ ತಾಂ ಮಿಥ್ಯೆಯೇಂ?

ಕವಿಕೃತಿಯುಮಾ ಬ್ರಹ್ಮಕೃತಿಯಂತೆ ಋತಚಿದ್

ವಿಲಾಸಮಾ ಕೃತಿಲೋಕಮೀ ಪ್ರಕೃತಿಲೋಕದೊಲೆ

ಬಹುಲೋಕ ಕಿರಣಮಯ ಸತ್ಯ ಸೂರ್ಯೋತ್ತಮನ ೮೦

ಚಿತ್ ಪ್ರಕಾಶನದೊಂದು ರಸಲೋಕರೂಪ ಕಿರಣಂ.

ಸಂಭವಿಸಿ ಭವಕಿಳಿದು ವಾಣೀಪತಿಯ ಕೃತಿಯ

ವಿಭವಗಳನನುಭವಿಸುವೋಲುಣ್ಬವೋಲ್ ಕಾಣ್ಬವೋಲ್

ಕಾಣವೇಳ್ಕುಂ ಪೊಕ್ಕು ಕೃತಿನೇತ್ರ ಪಥದಿಂ

ಕವೀಂದ್ರ ಮತಿ ಲೋಕದೊಳ್ ಪೊಳೆವ ಋತಕಲ್ಪನಾ

ಮೂರ್ತಂಗಳಂ, ಭಾವಚರ ನಿತ್ಯ ಸತ್ಯಂಗಳಂ.

ಏರುವೆನು ವಾಗ್ದೇವಿಯಮೃತ ರಸನೆಯ ಲಸನ್

ನಾವೆಯಂ. ರಾಮನ ಕಥೆಯ ಮಧು ಧುನೀ ಪಥಂ

ಪಿಡಿದಾಂ ಮಹಾಛಂದಸ್ ತರಂಗವಿನ್ಯಾಸದಿಂ

ಸೇರುವೆನು ಗುರುಕೃಪೆಯೊಳಾ ಋತಚಿದ್ ರಸಾಬ್ಧಿಯಂ. ೯೦

ನೀಡದೊಳ್ ಬಳೆದು, ಕಾಡಿನಲಿ ಹಾರಾಡಿದಾ

ಗರುಡ ಶಿಶು, ಗರಿ ಬಲಿತಮೇಲಲ್ಪದೇಶಂಗಳಂ

ಚರಿಸಿ ತಣಿವುದೆ? ವಿಯದ್ ವಿಸ್ತೀರ್ಣಮಂ ಬಯಸಿ

ಕೈಕೊಳ್ವುದಾಕಾಶ ಪರ್ಯಟನಮಂ. ಕಿರುಮೀನ್ಗೆ

ಕೆರೆ ಕೊಳಂ ಪೊಳೆ ಸಾಲ್ಗುಮಾ ತಿಮಿಗೆ ವೇಳ್ಕುಂ

ಜಲಕ್ರೀಡೆಗಾ ರುಂದ್ರಸಾಗರ ಸಲಿಲವಿಸ್ತಾರ.

ವ್ಯೋಮ ಸಾಗರ ಸಮಂ ನಿನ್ನ ರಾಮಾಯಣಂ,

ಗುರುವೆ, ರಸಋಷಿಯೆ, ಓ ವಾಲ್ಮೀಕಿ. ಕ್ರಮಿಸಲ್ಕದಂ

ದಯೆಗೆಯ್ಯೆನಗೆ ವೈನತೇಯನ ವಜ್ರವೀರ್ಯಮಂ.

ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ ? ೧೦೦

ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ,

ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ

ಮತಿಗೆ ಬೋಧವನಿತ್ತೊಡಂ, ಕೃತಿ ನನ್ನ ದರ್ಶನಂ

ಮೂರ್ತಿವೆತ್ತೊಂದಮರ ಕಾವ್ಯದಾಕೃತಿಯಲ್ತೆ?

ಪಂಜರದ ಪಳಮೆಯೊಳ್ ಪ್ರಾಣ ನವ ಪಕ್ಷಿಯಂ,

ವಿಗ್ರಹಕೆ ದೇವತಾವಾಹನಂ ಗೆಯ್ವವೋಲ್,

ಭಕ್ತಿಯಿಂದಾಹ್ವಾನಿಪೆನ್, ಕವಿಗುರುವೆ, ನೀಡೆನೆಗೆ

ವಾಙ್ಮಂತ್ರ ಶಕ್ತಿಯಂ. ಸಾವಧಾನದಿ ತೇಲ್ದು

ಸಾಗುವೆನ್, ತೆರೆತೆರೆಯನೇರ್ದು, ರಸಮಂ ಪೀರ್ದು

ಸಾಗುವೆನ್. ಗುರಿಯೆಂತುಟಂತೆವೋಲ್ ಬಟ್ಟೆಯುಂ ೧೧೦

ಬಲ್ಲೆನ್ ಸುಭಗಮೆಂದು ರಾಮನ ಕಿರೀಟದಾ

ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್

ದಿನೇಶೋದಯದ ಶಾದ್ವಲದ ಪಸುರ್‌ಗರುಕೆಯೊಳ್

ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ

ಮಿರುಮಿರುಗಿ ಮೆರೆವ ಹಿಮಬಿಂದುವುಂ. ರಸಯಾತ್ರೆಯಂ

ಕೈಕೊಂಡೆನಯ್, ಬಾರಯ್, ತಂದೆ, ಕೈಹಿಡಿ, ನಡಸು

ನಿನ್ನಣುಗನೀ ಕಂದನಂ. ಮಣಿವೆನಿದೊ ನಿನ್ನಡಿಗೆ :

ಕೃಪೆದೋರು; ಒಲಿದೆತ್ತು; ಹರಕೆಗೆಯ್, ದೇವಕವಿ,

ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್

ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ. ೧೨೦

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;

ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.

ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್

ಕರ್ಣಾಟಕದ ಜನದ ಕರ್ಣವೀಣಾ ತುಂಬಿ

ನಿನ್ನ ವಾಣಿಗೆ ವಿಕಂಪಿಸಿ, ಜೇಂಕೃತಿಯ ಬೀರಿ,

ರಸದ ನವನೀತಮಂ ಹೃದಯದಿ ಮಥಿಸುವಂತೆ

ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.

ತೀಡಿದರೆ ನಿನ್ನುಸಿರ್, ಮದ್ದಿಗೆ ಕಿಡಿ ತಗುಳ್ದು

ಹೊಮ್ಮುವಂದದಿ ಜೋತಿ, ಜಡವೆ ಚಿನ್ಮಯವಾಗಿ

ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ ೧೩೦

ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ

ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ

ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ

ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ

ಪೊರಸೂಸಿದಪುದು ಕಬ್ಬಿನ ರಸಂ. ಮಂತ್ರಮಯಿ

ನೀಂ ಬಡಿಯೆ, ಬಂಡೆಯುಂ ನೀರಿನೊಳ್ಬುಗ್ಗೆಯಂ

ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್

ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ

ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,

ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. ೧೪೦

ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ

ನಾರಣಪ್ಪಂಗೆ ಮೇಣ್ ಪಂಪನಿಗೆ, ಋಷಿವ್ಯಾಸ

ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ,

ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ

ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ,

ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ,

ಕಾಲ ದೇಶದ ನುಡಿಯ ಜಾತಿಯ ವಿಭೇದಮಂ

ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ,

ಜ್ಯೋತಿಯಿರ್ಪೆಡೆಯಲ್ಲಿ ಭಗವದ್ ವಿಭೂತಿಯಂ

ದರ್ಶಿಸುತೆ, ಮುಡಿಬಾಗಿ ಮಣಿದು ಕೈಜೋಡಿಸುವೆನಾಂ. ೧೫೦

ಲೋಕ ಗುರುಕೃಪೆಯಿರಲಿ; ಲೋಕ ಕವಿಕೃಪೆ ಬರಲಿ;

ಲೋಕ ಹೃದಯದ ಬಯಕೆಯಾಶೀರ್ವಾದವೈತರಲಿ.

ಮಣಿದಿರಲಿ ಮುಡಿ; ಮತ್ತೆ ಮುಗಿದಿರಲಿ ಕಯ್ ; ಮತ್ತೆ

ಮಡಿಯಾಗಿರಲಿ ಬಾಳ್ವೆ. ಜಯಿಸುಗೆ ರಸತಪಸ್ಯೆ;

ದೊರೆಕೊಳುಗೆ ಚಿರಶಾಂತಿ; ಸಿರಿಗನ್ನಡಂ ಗೆಲ್ಗೆ !

ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ

ಸರಯೂ ನದಿಯ ಮೇಲೆ. ಮೆರೆದುದು ವಿಷಯಮಧ್ಯೆ

ರಾಜಧಾನಿ ಅಯೋಧ್ಯೆ, ರಮಿಸುವಿಂದ್ರಿಯ ಸುಖದ

ನಡುವಣಾತ್ಮಾನಂದದಂತೆ. ಪೇಳೇನೆಂಬೆನಾ

ಪರ್ವಿತ್ತದರ ಜಸಂ, ರಾಕಾ ಶಶಾಂಕನಿಂ ೧೬೦

ಪರ್ವಿತೆನೆ ಬೆಳ್ದಿಂಗಳೊಳ್ಪಿನ ಸೊದೆಯ ಸೋನೆ,

ಲೋಕತ್ರಯಂಗಳಂ, ರಚಿಸಿದನು ಮನು ತಾನೆ

ನಾಲ್ಕುಮಡಿಯೈದು ಯೋಜನದಗಲದಾ ಮಹಾ

ಸಾಕೇತ ನಗರಿಯಂ, ರವಿವಂಶದರಸರಿಗೆ

ಕೀರ್ತಿಯ ಕಿರೀಟವಿಡುವಂತೆ. ತವರೂರೆನಿಸಿ

ಸಿರಿಗೆ ಬಿಜ್ಜೆಗೆ ಕಲೆಗೆ ಬೀರಕಾ ಪತ್ತನಂ

ಮನೆಗಳಿಂದರಮನೆಗಳಿಂದಾಪಣಗಳಿಂದೆ,

ಹೆದ್ದಾರಿಯಿರ್ಕೆಲದೊಳಿರ್ಪ ಸಾಲ್‌ಮರಗಳಿಂ

ನಿಚ್ಚಮುಂ ಮಳೆಗರೆವ ಹೂವಿನುದುರುಗಳಿಂದೆ,

ಸುಂದರ ಸುಸಂಸ್ಕೃತ ಲತಾಂಗಿಯರ ಸಿರಿಗೈಯ ೧೭೦

ಹೊಂಗೊಡದ ಪನ್ನೀರ ತುಂತುರೆರಚುಗಳಿಂದೆ,

ತಳಿರು ತೋರಣದಿಂದೆ, ಕಪ್ಪುರದ ಕಮ್ಮನೆಯ

ರಂಗವಲ್ಲಿಯ ಲಲಿತಕಲೆಯಿಂದೆ, ಕೊರಳಿಂಚರದಿ

ಪಕ್ಕಿಗಳನಣಕಿಸುವ ನಲ್ಮಕ್ಕಳಿಂದಮಾ

ಸಗ್ಗದೂರನೆ ಸೂರೆಗೊಂಡಂತೆ ಮೆರೆದುದಯ್

ನಿಚ್ಚಸೊಗದಾವಾಸದೋಲ್. ಚಕ್ರವರ್ತಿಯದಕ್ಕೆ

ದಶರಥಂ. ದೊರೆ ಸಗ್ಗದೊಡೆಯಂಗೆ. ಇಕ್ಷ್ವಾಕು

ರಘು ದಿಲೀಪರ ಕುಲಪಯೋಧಿಯ ಸುಧಾಸೂತಿ.

ರಾಜರ್ಷಿಯಾ ದೀರ್ಘದರ್ಶಿಯಾ ಸಮದರ್ಶಿ ತಾಂ

ಜನ್ಮ ಕುಲ ಧನ ಜಾತಿ ವರ್ಣ ಪ್ರಭೇದಮಂ ೧೮೦

ಗಣಿಸದೆಯೆ, ಮನದ ಹೃದಯದ ಧರ್ಮಕರ್ಮವನೆ

ಹಿಡಿದು ಮನ್ನಣೆಮಾಡಿ, ನೀಚೋಚ್ಚ ಭಿನ್ನಮಂ

ಸ್ಪರ್ಧೆವೈರಂಗಳಂ ತೊಡೆದು, ಸಮಬುದ್ಧಿಯಿಂ

ದರ್ಪದಿಂ ಪಾಲಿಸಿರ್ದನು ತನ್ನ ರಾಜ್ಯಮಂ,

ಸರ್ವ ಪ್ರಜಾಮತಕೆ ತಾನು ಪ್ರತಿನಿಧಿಯೆಂಬ

ಮೇಣವರ ಹಿತಕೆ ಹೊಣೆಯೆಂದೆಂಬ ಬುಧರೊಲಿದ

ಸಮದರ್ಶನವನೊಪ್ಪಿ.

ಸಿರಿಯನಿತುಮಿರ್ದೊಡಂ,

ಅರಮುಡಿಗೆ ನರೆನವಿರ ಬೆಳ್ಳಿಗೆರೆಯೇರ್ದೊಡಂ,

ದೇವಿ ಕೌಸಲ್ಯೆಯಂ ಸಾಧ್ವೀ ಸುಮಿತ್ರೆಯಂ

ಚೆಲ್ವು ಮೈವೆತ್ತಿರ್ದುದೆನೆ ಮೆರೆವ ಕೈಕೆಯಂ ೧೯೦

ಮೂವರಂ ನಲ್ವೆಂಡಿರಂ ಕಾಮದಿಂ ಪ್ರೇಮದಿಂ

ಮದುವೆ ನಿಂದಿರ್ದೊಡಂ, ನಿಡಿದು ಪಾರ್ದಿರ್ದೊಡಂ,

ವಂಶಕರ ಸಂತಾನಮಂ ಕಾಣದಾ ನೃಪತಿ

ತಾನೊರ್ಮೆ ತಿರುಗುತಿರಲರಮನೆಯ ಸಿರಿದೋಂಟದೊಳ್ :

ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು

ಕೊಡುತಿರ್ದ ತಾಯ್ವಕ್ಕಿಯಂ ಕಂಡು ಕಣ್ ನಟ್ಟು,

ಕಾಲ್‌ನಟ್ಟು ನಿಂದನು ಮರಂಬಟ್ಟು. ಮಕ್ಕಳಂ

ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ

ಬಡತನವಾಡಿ ಮೂದಲಿಸಿತೆನೆ, ಕರುಬಿ ಕುದಿದನ್

ಕೋಸಲೇಶ್ವರನಾ ವಿಹಂಗಮ ಸುಖಕೆ ಕಾತರಿಸಿ. ೨೦೦

ದೇವತೆಗಳಾಶಿತಮೊ? ಋತಚಿದಿಚ್ಛೆಯೊ? ವಿಧಿಯೊ?

ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ

ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ

ಹೃದಯದಲಿ! ಊರ್ಧ್ವಲೋಕದ ದೇವ ಶಕ್ತಿಗಳ್

ಸಂಚು ಹೂಡಿದರೆನಲ್, ಚರಿಸಿದತ್ತವರಿಚ್ಛೆ

ಮುದುಕನೆರ್ದೆಯಲಿ ಮಕ್ಕಳಾಸೆವೋಲ್. ಉದ್ಯಾನದಿಂ

ನೇರಮರಮನೆಗೆಯ್ದಿ, ಪುತ್ರಾಭಿವಾಂಛೆಯತಿ

ಚಿಂತೆಯಿಂ ಬರಿಸಿದನ್, ನುಡಿಸಿದನ್ ಗುರುಗಳಂ

ವಾಮದೇವ ವಸಿಷ್ಠರಂ. ಕರೆಸಿದನು ಕೂಡೆ

ಸಚಿವರಂ, ಮಂತ್ರಪಾಲ ಸುಮಂತ್ರರಂ. ತನ್ನ ೨೧೦

ಬಾಳ್‌ಬಯಕೆಯಂ ಪೇಳ್ದನಿಂತು : “ಗುರುಗಳಿರ, ಕೇಳಿಂ :

ನನ್ನೆರ್ದೆಯ ಸಿರಿಯ ಹೊಂಗಳಸದಲಿ ಬಿರುಕೊಡೆದು

ಸೋರುತಿದೆ ಬರಿದೆ ಜೀವಾಮೃತಂ. ಬಾಳ್ವೆಯ ಸೊಡರ್

ತಾನಾರ್ವ ಮುನ್ನಮಿನ್ನೊಂದು ಬತ್ತಿಯ ಕುಡಿಗೆ

ದೀಪಾಂಕುರಂಗೈದು ಪೊತ್ತಿಸದೆ ಪೋದೊಡಾಂ

ನೆಲದರಿಕೆ ನೇಸರ್ಬಳಿಗೆ ಕಳ್ತಲೆಯನಡಕಿ

ಪೋದಂತುಟಲ್ತೆ ? ಮಕ್ಕಳಂ ಕಾಣದೀ ಕಣ್

ಹೃತ್ತಾಪದಿಂ ಸೀದು ಕುರುಡಾಯ್ತಲಾ : ಮನದ

ಮಾಮರಕೆ ಹಿಡಿದಿಹುದು ನನಗೆ ನಿರ್ವಿಣ್ಣತೆಯ

ಬಂದಿಳಿಕೆ. ರುಚಿಸದು ವಿಹಂಗಮಗಳಿಂಚರಂ; ೨೨೦

ಸೊಗಯಿಸದು ಮಾಮರಂ. ಶೋಭಿಸದು ಕೆಂದಳಿರ್ :

ಪಸುಳೆಯ ವಿಲಾಸದಿಂ ಶಿಶುವಿಲಾಸವನೆನ್ನ

ನೆನಹಿಗಿರದೊಯ್ದು ಕದಡುವುದೆದೆಗೆ ಕಡೆಗೋಲ್

ಇಡುವವೋಲ್. ಸೊಗಯಿಸದು ನನಗಿಂದು ಚೆಲ್ವಾವುದುಂ.

ಪಗಲಿರುಳ್ ರವಿಶಶಿಗಳುದಯಾಸ್ತಮಿಂದ್ರಧನುಗಳ್

ಸರ್ವಸೌಂದರ್ಯಾಮೃತಂ ಮೃತದಂತಿಹುದು ನನಗೆ

ನೀರಸಂ. ಶವದ ಸಿಂಗಾರದಂದದೊಳೆನಗೆ,

ಮಕ್ಕಳಿಲ್ಲದ ದೊರೆಗೆ, ನೃಪಸಂಪದಂ. ಕುರುಡನುಂ

ಕನ್ನಡಿಗೊಡೆಯನಾದ ಮಾತ್ರದಿಂ ಕಾಣ್ಬನೇಂ ?

ಬಾಳ್ಗೆ ಕಣ್ಣಂತಿರ್ಪ ಕಂದರಂ ಪಡೆವೊಂದು ೨೩೦

ದೇವವಟ್ಟೆಯನುಸಿರಿಮೆನಗೆ, ಓ ವಂದ್ಯರಿರ ;

ತವಿಸಿಮೆನ್ನೆದೆಯಗ್ಗಿಯಂ, ಬರಿಸಿ ಸುಗ್ಗಿಯಂ.”

ಕೂರಳಲ ಹೊರೆವೊತ್ತ ದೊರೆಮೊರೆಯನಾಲಿಸುತೆ

ಗುರು ವಸಿಷ್ಠಂ ಪುತ್ರಕಾಮೇಷ್ಟಿಯಂ ಪೇಳ್ದು,

ಪುತ್ರಸಂತಾನಮಹುದೆಂದು ನಂಬುಗೆಗೊಟ್ಟು,

ಸಂತೈಸಿ, ಯಜ್ಞಶಾಲೆಗೆ ನಡೆದನಲ್ಲಿಂದೆ.

ಕೇಳ್ದದಂ ಕೃತಧೀ, ವಿಚಾರಮತಿ, ಗುರುವರಂ

ಜಾಬಾಲಿ ಋಷಿವರೇಣ್ಯಂ ಬರುತ್ತಾಯೆಡೆಗೆ

ಪೇಳ್ದನಿಂತೆಂದು : “ರಘುಕಾಲ ವಾರ್ಧಿಚಂದ್ರಮನೆ,

ಕುಲ ಪುರೋಹಿತರೊರೆದ ಜನ್ನಮಂ ಕೈಕೊಂಡು ೨೪೦

ಪಸುಳೆರನ್ನರ ಪಡೆವೆಯದು ದಿಟಂ. ಕೇಳಾದೊಡಂ

ನನ್ನೊಂದು ಕಾಣ್ಕೆಯಂ. ಪೂರ್ವ ಪದ್ಧತಿವಿಡಿದು

ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ

ತೊರೆದು, ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ

ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು

ಜಗವನಾಳುವ ಋತಂ. ನೆಲದಲ್ಲಿ, ಬಾನಲ್ಲಿ,

ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ

ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ

ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ

ಪ್ರೇಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ ೨೫೦

ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.

ರಾಜೇಂದ್ರ, ಕೇಳ್, ಪ್ರೇಮ ಸಾಕ್ಷಾತ್ಕಾರಮಾಗಿರ್ಪ

ಋಷ್ಯಶೃಂಗಾದಿ ಮುನಿಗಳನಿಲ್ಲಿಗಾಹ್ವಾನಗೆಯ್.

ಮಖಶಾಲೆಯಂ ರಚಿಸಿ, ಯಜ್ಞಕುಂಡಂಗೈದು,

ವಿಶ್ವಶಕ್ತಿಸ್ವರೂಪಿಯನಗ್ನಿಯಂ ಭಜಿಸು ನೀಂ

ಸಾತ್ವಿಕ ವಿಧಾನದಿಂ. ಪ್ರಜೆಗಳಂ ಬಡವರಂ

ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ

‘ದೊರೆಗೊಳ್ಳಿತಕ್ಕೆ !’ ಎಂದಾ ಮಂದಿ ಪರಸಲ್ಕೆ

ಪರಕೆಯದೆ ದೇವರಾಶೀರ್ವಾದಕೆಣೆಯಾಗಿ

ಕೃಪಣ ವಿಧಿಯಂ ಪಿಂಡಿ ತಂದೀವುದೈ ನಿನಗೆ ೨೬೦

ನೆಲದರಿಕೆಯೊಳ್ಮಕ್ಕಳಂ. ಜನಮನದ ಶಕ್ತಿ

ಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ

ತಪ್ಪದೆಳೆತರ್ಪುದು ಕಣಾ !”

ಋಷಿಯೊರೆದ ವೇದಮಂ

ಕೇಳ್ದು ಪುಲಕಿತನಾಗಿ ದಶರಥಂ, ಬಾಷ್ಪಮಂ

ಸೂಸಿ, ಕಾಲ್ಗೆರಗಿ, ಸಾತ್ವಿಕ ಮಖ ವಿಧಾನಮಂ

ನಲಿದು ಕೈಕೊಳಲೊಪ್ಪಿ, ಬೀಳ್ಕೊಟ್ಟನಾ ಜ್ಞಾನಿಯಂ.

ಸಮೆದುದಧ್ವರಶಾಲೆ ಸರಯೂ ತರಂಗಿಣಿಯ

ಪಚ್ಚೆಯ ಪಸುರ್ ದಡದ ಮೇಲೆ, ಚೈತ್ರನ ಕೃಷಿಯ

ಕುಸುಮ ಕಿಸಲಯ ಲತಾ ಶೋಭಿತದ ರಮಣೀಯ

ಗಂಧಬಂಧುರ ದೇವ ಕಾನನ ನಿಕೇತನದ ೨೭೦

ಸಿರಿಮಾಳ್ಕೆಯಿಂದೆ. ಮಧ್ಯದೊಳಗ್ನಿಕುಂಡದುರಿ

ದೇದೀಪ್ಯಮಾನಮಾದುದು, ವಿಪುಲ ದೂರದಲಿ,

ದೂರದರ್ಶಕ ಯಂತ್ರದಕ್ಷಿಯೊಳ್ ಕಣ್ಣಿಟ್ಟು,

ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಲಿ

ಕಾಣ್ಬೊಂದು ತಾರಾಗರ್ಭದಂತೆ. ನೆರೆದುದಯ್,

ಮಲೆನಾಡಿನಲಿ ಮೊದಲ ಮುಂಗಾರು ಮಳೆಗರೆಯೆ,

ಮರುದಿನಂ, ತೊಯ್ದ ಕಂಪಿನ ನೆಲದಿನುಕ್ಕೆದ್ದು,

ಸಾಲ್ಗೊಂಡು ಲಕ್ಕಲಕ್ಕಂ ಪರಿದು ಜೇನಿರ್ಪ

ಪುತ್ತುಮಂ ಮುತ್ತುವಾ ಕಟ್ಟಿರುಂಪೆಯ ರಾಸಿ

ಹಿಂಡುಗೊಳ್ವಂತುಟಾ ದೇಶ ದೇಶದ ಜನಂ ೨೮೦

ಕ್ರತುರಂಗದೊಳ್ ವಿಪುಲ ಸಂಖ್ಯೆಯಲಿ. ಕುದಿಗೊಂಡವೋಲ್

ಕಡಲಾಯ್ತು ಸಾಕೇತ ನಗರಿ. ತೃಪ್ತಿಯೆ ತಣಿದು

ತೇಗಿದುದೆನಲ್ಕೆ ನಲಿದುದು ಜನಂ ಭಾರಕಾ

ಭೋಜನಕೆ ಮೇಣ್ ದಾನದಕ್ಷಿಣೆಗೆ. ದಾರಿದ್ರ್ಯ ತಾಂ

ಶ್ರೀಯಾದುದೆಂಬಂತೆ ಹೊನ್ನ ಹೊರೆಯಿಂ ಬೆನ್ನೆ

ಬಾಗಿತು ಬಡತನಕ್ಕೆ. ದೊರೆಯಿಚ್ಚೆ ನೆರವೇರಿ

ಸೊಗವಾಗಲೆಂಬಾ ಹರಕೆ ಜನದ ಹೃದಯದಿಂ

ಜನ್ನವನೆಯಿಂದೇಳ್ವ ಹೋಮಧೂಮಂಬೋಲೆ

ವ್ಯೋಮಾಂತರಕೆ ಪರ್ವಿದತ್ತು. ಸಗ್ಗವೆ ಮಣಿದು

ತಣಿಸದಿರುವುದೆ ತಿರೆಯನತಿತೀವ್ರದಾಕಾಂಕ್ಷೆ ತಾಂ ೨೯೦

ಪಿಡಿದು ಜರ್ಗ್ಗಿಸಿ ಸೆಳೆಯೆ? ಬಹುಜನರ ಪೆರ್ಬಯಕೆ

ಕಲ್ಪವೃಕ್ಷದ ಕೊಂಬೆಯನೆ ಕಚ್ಚಿ ಸೆಳೆದಿಳೆಗೆ

ಫಲದಮೃತಮಂ ಮಳೆಗರೆಯದಿಹುದೆ? ಜನಮನಮೆ

ಯುಗಶಕ್ತಿಯಲ್ತೆ? ತಾನಾ ಶಕ್ತಿ ಮೂರ್ತಿಗೊಳೆ

ನಾಮದನ್ನವತಾರಮೆಂದು ಪೂಜಿಪೆವಲ್ತೆ ಪೇಳ್

ವೃಷ್ಟಿರೂಪದಿನಿಳಿವ ಸೃಷ್ಟಿಯ ಸಮಷ್ಟಿಯಂ?

ಖಡ್ಗಧಾರಾವ್ರತವನಾಂತು ದಶರಥ ನೃಪಂ,

ತನ್ನವೊಲೆ ನಾರುಮಡಿಯುಟ್ಟು ನೋಂಪಿಗೆ ನಿಂದ

ದಾರೆಯರ್ವೆರಸಿ, ತನುಜಾತ ಕಾಮೇಷ್ಟಿಯಂ

ಕೈಕೊಂಡು, ಋಕ್‌ಸಾಮಯಜುರಾದಿ ವೇದದಿಂ ೩೦೦

ಓಂಕಾರ ಸ್ವಾಹಾದಿ ಮಂತ್ರಘೋಷಂ ಬೆರಸಿ

ಬೇಳ್ವ ಬೇಳಂಬದಿಂ ಜನ್ನಕೊಂಡಂ ಬಳಸಿ

ಕವಿದಿರ್ದ ಋತ್ವಿಜರ ಗೋಷ್ಠಿಯಲಿ, ದೇವರಿಗೆ

ಹವಿಯನರ್ಪಿಸುತಿರ್ದನಾತ್ಮಭಕ್ತಿಯ ಚಿತ್ತಪಸ್

ಶಕ್ತಿಯಂ ಬಯಸಿ. ಮನದೊಲೆ ತನುಜರೆಂದೆಂಬ

ಜಾಣ್ಣುಡಿಯನರಿತು, ಅಲ್ಪತೆಂದು ಭಾವಂಗಳಂ

ನೆರೆ ತೊರೆದು, ಗಗನಮಂ ಪೃಥ್ವಿಯಂ ವಾರ್ಧಿಯಂ

ಪರ್ವತಾರಣ್ಯ ವಿಸ್ತಾರ ಧೀರೋದಾತ್ತ

ಗಾಂಭೀರ್ಯಮಂ, ಭದ್ರ ವೀರ ಸೌಂದರ್ಯಮಂ,

ಧ್ಯಾನಿಸುತೆ ಭಾವಿಸುತೆ ರೂಪಿಸುತೆ ಕಾಮಿಸಿದನಾ ೩೧೦

ಭೂಮಿಪಂ ತದ್ರೂಪ ಗುಣ ಹೃದಯರಂ.

ನೃಪತಿಯಾ

ಭಾವಮಹಿಮಾ ಜ್ಯೋತಿ ಸಂಚರಿಸಿದುದು ಮಿಂಚಿ

ಪಟ್ಟಮಹಿಷಿಯರೆರ್ದೆಗಳೊಳ್. ಕೂರ್ಮೆ ಬೆಸುಗೆಯಿಂ

ದ್ವೈತ ತಾನದ್ವೈತಮಪ್ಪುದೊಂದಚ್ಚರಿಯೆ ಪೇಳ್?

ಮಯ್ಗಳೆನಿತಾದೊಡೇನೊಲಿದವರ್ಗದು ದಿಟಂ

ಮನಮೊಂದೆಯಲ್ತೆ?

ಸಂತಾನಕಾಮಿ ಧರಾಧಿಪಂ

ತಾನಿಂತುಟೊಂದು ಹುಣ್ಣಿಮೆಯಿರುಳ್, ತುಂಬುಪೆರೆ

ಗರಿಹಗರು ನೊರೆಮುಗಿಲಿನಂಬರದೊಳಿಂಬಾಗಿ

ತೇಲಿ, ಸರಯೂನದಿಯ ಸಲಿಲ ವಕ್ಷಸ್ಥಲದ

ರಮ್ಯ ದ್ರವೀಭೂತ ದರ್ಪಣಕೆ ಜ್ಯೋತ್ಸ್ನೆಯಂ ೩೨೦

ಪಾಲು ಪೊಯ್ದಂದದಲಿ ಚೆಲ್ಲಿ ರಾರಾಜಿಸಿರೆ,

ಬೆಳ್ದಿಂಗಳನ್ನೀಂಟಿ ತೇನೆ ತಾನುನ್ಮೋದದಿಂ

ಹಾರಾಡಿ ಮೀಂಟುತಿರಲಾಕಾಶಮಂ, ಪೃಥ್ವಿ

ನಿಶ್ಯಬ್ದತಾ ಸುಪ್ತಿಯಲ್ಲಾಳ್ದು ಮೋನಮಿರೆ,

ಋತ್ವಿಜರೊಡನೆ ಹೋಮಕುಂಡದೆಡೆ ಪೂಜೆಯೊಳ್

ಪುತ್ರಾಭಿವಾಂಛೆಯ ಸಮಾಧಿಯೊಳ್ ತಾನಿರಲ್

ನೂರ್ಮಡಿಸಿತಾ ಅಗ್ನಿಕುಂಡದಲಿ ಕೆಂಡದುರಿ

ಕೆರಳಿ. ಕಗ್ಗತ್ತಲೆಯ ಕಲ್ಗಬ್ಬಮಂ ಸೀಳ್ದು

ಕೋಟಿ ಮಿಂಚುಗಳೊಮ್ಮೆ ಮಿಂಚಿದುವೆನಲ್ಕೆ ದ್ಯುತಿ

ಪೊಣ್ಮಿದುದು, ದಿಟ್ಟಿ ಕೋರೈಸೆ ! ಸಂಯಮಿಗಳುಂ ೩೩೦

ಬೆಚ್ಚಿ ಕಣ್ಣಾಗಿರೆ, ಚಿಕೀರ್ಷೆಯಾವೇಗದಾ

ವಹ್ನಿಫಣಿ ಲೇಲಿಹ್ಯಮಾನ ಜೆಹ್ವೆಗಳಂತೆ,

ಬೀಳುವಾಹುತಿಗಳಂ ನುಂಗಿ ನೊಣೆದೊಡನೊಡನೆ

ಸಿಮಿಸಿಮಿಸಿ ಛಟಛಟಿಸಿ ಧಗಧಗಿಸುತುಬ್ಬೇಳ್ವ

ರಕ್ತಾಗ್ನಿತಾಂಡವ ಜ್ವಾಲಾಜಲದ ಮಧ್ಯೆ

ತಾನೊರ್ವನಲ್ಲಿ ಮೈದೋರಿದನು ಝಗಝಗಿಸಿ,

ಕೆಂಡದುರಿಮೆಯ್ಯ ಮಿಂಚಿನ ದಿವ್ಯಕಾಂತಿಯಲಿ.

ಮೂಡು ಬಾನಿನ ಕರೆಯ ಕುಂಕುಮದ ತೀರ್ಥದೊಳ್

ಮಿಂದೇಳ್ವ ಫಾಲ್ಗುಣ ಪ್ರಾಭಾತ ರವಿಯಂತೆ

ಮೆರೆದುದು ವದನಮಂಡಲಂ. ಕೇಸುರಿಯ ಹರಿಯ ೩೪೦

ರಶ್ಮಿಕೇಸರಗಳೆನೆ ಮುದ್ರಿಸಿತು ಮಂಡೆಯಂ

ಕೆನ್ನವಿರ ರಾಶಿ. ನಕ್ಷತ್ರಮಯ ರಾತ್ರಿಯಂ

ಧರಿಸಿ ಸೂರ್ಯನೆ ಶೋಭಿಪಂತೆ, ಕೆಂಗಿಡಿಗಳಿಂ

ತುಂಬಿದಂಬರದಂತೆವೋಲಾ ಹೋಮಧೂಮಮಂ

ನೀಲದ ದುಕೂಲದವೊಲಾಂತು, ಪೊಳೆದುದು ಕಣ್ಗೆ

ಮಂಗಳದಮರ ಮೂರ್ತಿ ಆ ಯಾಜಕರ ಮುಂದೆ.

ತಪ್ತ ಜಾಂಬೂನದದ ದೀಪ್ತಿಯನಣಕವಾಡಿ

ಮಿಸುಪ ಮಿಸುನಿಯ ಪಾತ್ರೆಯಲಿ ಸುಪಾಯಸ ರಸಂ,

ಕೋದಂಡ ಚಂದ್ರನಲಿ ಪೊನ್ನಜೊನ್ನದ ಜಲಂ

ಪೊಳೆವಂತೆ, ತಳತಳ ನಲಿದು ಕುಣಿಯೆ, ತೋಳ್‌ನೀಡಿ ೩೫೦

ಪೇಳ್ದನಾಶೀರ್ವಾದಮಂ, ಮಂದ್ರ ಗಂಭೀರ

ದುಂದುಭಿಧ್ವನಿ ಸಭಾ ನಿಶ್ಶಬ್ದತೆಯ ಮಥಿಸಿ

ಪೊಣ್ಮೆ : “ಸೃಷ್ಟಿಯ ಶಕ್ತಿ. ದೂತನೆಂ, ರಾಜೇಂದ್ರ,

ಋತಚಿನ್ಮಯೀ ಲೀಲೆಗಾಂ ಕವಿಕ್ರತು ಕಣಾ.

ಕೊಳ್ಳಿದಂ, ಕಾಮಧೇನುವಿನ ಕೊಡಗೆಚ್ಚಲಂ

ಪಾಲ್ಗರೆದು ಗೆಯ್ದ ಪಾಯಸಮಿದಂ. ಮರುಭೂಮಿ

ನಗುವ ನಂದನವಪ್ಪುದಿದನೀಂಟೆ. ಮೆಚ್ಚಿತಯ್

ನಿನ್ನೀ ವ್ರತಕೆ ಋತಂ. ಪಸುಗೆ ನೀಡಂಶಂಗಳಂ

ಸತಿಯರ್ಗೆ. ಗೆಲ್ವುದಾ ವಿಧಿಲೀಲೆಯುಂ.” ಕೈಮುಗಿದು,

ಸೊಗದ ಕಡಲೊಳಗಾಳ್ದು, ದೊರೆಯೆಳ್ದಿದಿರ್‌ವೋಗಿ : ೩೬೦

“ಬಯಸುವೆನ್ ನಿನಗೆ, ಪೂಜ್ಯನೆ, ಸುಖಾಗಮನಮಂ.

ನಡೆವೆನಿದೊ ನಿನ್ನಾಜ್ಞೆಯಂ.” ಎನುತೆ ಅಂಜಲಿ ನೀಡಿ

ದಿವ್ಯ ಪಾಯಸಪೂರ್ಣ ಪಾತ್ರೆಯಂ ವಿನಯದಿಂ

ಕೊಂಡು ಬಲವಂದು, ಮಣಿಯುತಿರೆ, ಮರೆಯಾದುದಾ

ದೇವ ತೇಜಃಪುಂಜ ಮಖಮೂರ್ತಿಯಗ್ನಿಮೆಯ್

ಜ್ವಾಲಾ ನಿಮಗ್ನಮೆನಲ್ : ಕವಿಶೈಲದುನ್ನತಿಯ

ಸಂಜೆಗಿರಿ ನೆತ್ತಿಯೊಳ್ ಕುಳಿತು ಕವಿ ನೋಡುತಿರೆ,

ದೂರದ ತರಂಗಿತ ದಿಗಂತದಲಿ ಚೈತ್ರರವಿ

ಮುಗಿಲ ನೆತ್ತರ್ಗೆಂಪಿನಲಿ ಮುಳುಗುವೋಲಂತೆ !

ನಿರ್ಮಲ ಶರಚ್ಚಂದ್ರ ಕಿರಣಗಳಿನಂಬರಂ ೩೭೦

ಪ್ರೋಲ್ಲಾಸಗೊಳ್ವಂತೆ ದಶರಥಂ ಬಗೆಯುರ್ಬಿ

ಪರಿಯುತಂತಃಪುರಕೆ ದೇವಿ ಕೌಸಲ್ಯೆಯಂ

ಕುರಿತು : “ರಾಜ್ಞಿ, ಕುಸುಮಸುಖಮೊದಗಿತೀ ಮಾಮರಕೆ.

ಮಧುಫಲಸ್ವಾದು ಸಂತೋಷಮಿದೊ. ಕೊಳ್ಳಿದಂ,

ಕ್ರತುಮೂರ್ತಿ ದಯೆಗೆಯ್ದ ಪಾಯಸಪ್ರಾಣಮಂ.

ನೀನುಮಾ ನಿನ್ನ ತಂಗೆಯರಿದಂ ಪಸುಗೆಗೊಳ್ಳಿಮ್

ಕುಲದ ಮೇಣ್ ಕ್ರಮದ ಮರ್ಯಾದೆಗಳ್ ಮೆರೆವವೋಲ್.”

ಪೆರೆ ತುಂಬುವಂದದಲಿ ನವಮಾಸ ತುಂಬಿ ಬರೆ,

ಶ್ರೀರಾಮಚಂದ್ರನೆಂಬಳ್ಕರೆಯ ಹೊರೆಹೊತ್ತು,

ಬೆಳ್ದೆರೆಯ ಮುಗಿಲ ಹತ್ತಿಯ ತೆಳ್ಮಡಿಯನುಟ್ಟ ೩೮೦

ಪೂರ್ಣಿಮಾ ರಜನಿಯಂತೆಸೆದಳಾ ಕೌಸಲ್ಯೆ,

ಗಂಭೀರ ಸೌಂದರ್ಯದಿಂ. ಜೊನ್ನವಕ್ಕಿಯೆದೆ

ಹಿಲ್ಲೋಲವಪ್ಪಂತೆ ಪೆರ್ಚಿತರಸನ ಮನಂ.

ಯಮಳ ತಾರೆಗಳಿರ್ದುಮೊಂದೆ ಚುಕ್ಕಿಯ ತೆರದಿ

ತೋರ್ಪ ನಕ್ಷತ್ರದೋಲಾ ಸುಮಿತ್ರಾದೇವಿ

ಕಂಗೊಳಿಸಿದಳ್ ಸಮುಲ್ಲಾಸದಿಂ. ಕೈಕೆ ತಾಂ,

ರಾಜ ಖಡ್ಗವನಾಂತು ಮುತ್ತು ಕೆತ್ತನೆಯಿಂದೆ

ಮಿರುಪ ಚೆಂಬೊನ್ನಿನೊರೆಯಂತೆ, ಮಿಂಚಿದಳಕ್ಷಿ

ಪಕ್ಷಿಯೋಲವಳೊಡಲ ಕಣ್ಣೆಗಣ್ಣೊಳ್ ಸಿಲ್ಕಿ

ತಳ್ಳಂಕಗೊಳೆ ದೊರೆಗೆ. ಮೇಣ್ ಪೇಳ್ವುದೇಂ? ಪೊಂಬಳ್ಳಿ ೩೯೦

ಬಿಗಿದೆಳೆದುದಾ ಸ್ತ್ರೈಣನಂ, ಜೇನುರುಳ್ಗೊಳ್ಳಿಯೋಲ್ !

ದಶರಥ ಸತಿಯರಿಂತು ತುಂಬು ಬಸಿರಿಂದೆಸೆಯೆ

ನಲಿದತ್ತಯೋಧ್ಯೆ. ನಲಿದುದು ಪೃಥ್ಮಿ. ನೀರ್ಮುಗಿಲ್

ತವಿಸಿದುದು ಬೇಸಗೆಯ ಬೇಗೆಯಂ, ಪೊಸಮಳೆಯ

ಸೂಸಿ. ತಂಪಿಡಿದು ತೀಡಿದುದೆಲರ್. ನೆರೆಯೇರಿ

ತುಂಬಿ ತುಳುಕಿದುವು ತೊರೆ. ಸರಯೂ ತರಂಗಿಣಿಗೆ

ಹಿಮಗಿರಿಯ ದೂರದಿಂದೈತಂದುವೆಡೆಬಿಡದೆ

ಕ್ರೌಂಚ ಸಾರಸ ಪಂಕ್ತಿ, ಹಂಸ ಕಾರಂಡ ತತಿ,

ನವ ವರ್ಷ ಹರ್ಷದುನ್ಮಾದ ಕಲನಾದದಿಂ.

ತಳಿರು ತೀವಿತ್ತಡವಿ. ಭ್ರಮರ ಸಂಭ್ರಮದಿಂದೆ ೪೦೦

ಝೇಂಕರಿಸಿದತ್ತು ಕುಸುಮಿತ ಕಾನನಾಂತರಂ.

ಪೊಣ್ಮಿದುದು ಮೈನವಿರ್ ತಿರೆವೆಣ್ಗಲಂಪಿನಿಂ,

ಪಚ್ಚನೆ ಪಸುರ್ ಗರುಕೆಯಂತೆ. ಕಲಕಂಠನುಲಿ

ಘೋಷಿಸಿತು ಜಗಕೆ, ರಾಮಾಗಮನ ವಾರ್ತೆಯಂ !

ಭುವನ ಸಂಭ್ರಮದೊಡನೆ ತಾಯೆರ್ದೆಗೆ ಪಾಲುರ್ಕಿ

ಬರಲೊಂದಿರುಳ್, ಕನಸಿನೊಳ್, ದುಗ್ಧಾಬ್ಧಿಯಂ

ಕಂಡು ನಲಿದಳ್ ದೇವಿ ಕೌಸಲ್ಯೆ. ಚಂದ್ರಶಿಶು

ಪಾಲ್ದೆರೆಗಳಗ್ರದಲಿ ತೇಲ್ದುದು ಮುಗುಳ್‌ನಗೆಗಳಿಂ

ಮಿಂಚಿ. ಇರಲಿರೆ, ಪಸುಳೆ ತೇಲುತೆ ದಡಕ್ಕೆ ಬರೆ,

ಕೈಚಾಚಿ ಕರೆಯೆ ಕೌಸಲ್ಯೆ, ಚೆಂದುಟಿಯ ಶಿಶು ೪೧೦

ಮೊಗ್ಗರಳ್ವಂದದಿಂ ಬಂದೇರ್ದುದಂಕಮಂ,

ತಳಿರ ಬೆರಳಿಂದಪ್ಪುತೆರ್ದೆಯಂ ಸುಧಾಸುಖಕೆ !

ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷದಾ

ಕ್ಷೀರಸಾಗರದಿಂ ಕಿಶೋರಶಶಿ ಬರುವಂತೆ,

ಪ್ರತಿಭಾ ತಟಿಲ್ಲತೆಯ ಸುಪ್ರಭಾ ಸ್ಫೂರ್ತಿಯಿಂ

ಕವಿಯ ಮನದಿಂ ಮಹಾಕಾವ್ಯಮುದ್ಭವಿಪಂತೆ,

ಮರುದಿನಂ ಚೈತ್ರನವಮಿಯ ಶುಭಮುಹೂರ್ತದೊಳ್

ಪಿರಿಯರಸಿ ಬೆಸಲೆಯಾದಳ್ ಪಸುಳೆಚೆಲ್ವಂ,

ಸ್ಥಿರಾ ಸುಖಂ ಪೆರ್ಚುವೋಲ್. ಶ್ರೀ ರಾಮನ ಅನಂತರಂ

ಮೂಡಿದನು ಭರತನಾ ಕೈಕೆವಸಿರಿಂದೆ. ಮೇಣ್ ೪೨೦

ಲಕ್ಷ್ಮಣಂ ಶತ್ರುಘ್ನರೆಂಬವಳಿ ಮಕ್ಕಳ್ಗಳಂ

ಪೆತ್ತಳ್ ಸುಮಿತ್ರೆ, ಮಗಧೇಶ್ವರ ತನೂಜೆ. ಆ

ಮಂಗಳ ಮಹೋತ್ಸವಕೆ ಬಿಡದೆ ನಲಿದತ್ತವನಿ.

ತುಂಬಿದತ್ತಶರೀರ ಗಂಧರ್ವ ಗಾಯನಂ

ನೀರವ ನಿಶಾ ನಭೋದೇಶಮಂ. ನಲಿದುಲಿದು

ನರ್ತಿಸಿದರಪ್ಸರೆಯರೆರಚಿ ಪೂವಲಿಗಳಂ.

ಹಾರ ಕೇಯೂರ ಸಾರಸನ ನೂಪುರ ರವಕೆ

ಕಿವಿಗೊಟ್ಟು ಬೆರಗಾದುದಾ ಅಯೋಧ್ಯಾ ಮನಂ.

ಬೀದಿ ಬೀದಿಗಳಲ್ಲಿ ಸಾಕೇತ ಪುರಜನರ್

ನೆರೆದು, ಸಂಗೀತಾಭಿನಯ ವಾದ್ಯಕಲೆಗಳಿಂ

ಕೊಂಡಾಡಿದರು ರಾಜನಂ, ಕೊನೆದು ದೇವರ್ಕಳಂ.

ಪೊಳ್ತುಬರೆ, ಪದ್ಧತಿಯ ಮೇರೆಗೆ ಪುರೋಹಿತರ್

ನಾಮಕರಣಮಂಗೆಯ್ದು, ನುಡಿದು ನಲ್ವರಕೆಯಂ, ೪೩೦

ಜಾತಕಂ ಬರೆದು, ಕಣಿವೇಳ್ದರಾ ನಾಲ್ವರುಂ

ನೆಲಕೊಳ್ಳಿತಂ ಗೆಯ್ದು, ನೆಲದರಿಕೆಯವರಾಗಿ,

ನೇಸರಂ ಮೀರಿ ಪೊಳೆದಪರೆಂಬುದಂ, ಕೀರ್ತಿಯಿಂ

ಮತ್ತೆ ಸಚ್ಚರಿತೆಯಿಂ. ಗೆರೆನಗೆಯ ಕಿರಿಯೊಡಲ

ಪಸುಳೆದಿಂಗಳ್ ದಿನಂ ದಿನದಿನಂ ಬಳೆವಂತೆ

ಬೆಳ್ವಕ್ಕದಿರುಳಿನಬ್ಬೆಯ ತೊಡೆಯ ತೊಟ್ಟಿಲಲಿ,

ನೆರೆದನಾ ಶ್ರೀರಾಮಚಂದ್ರನಂಬೆಯೆರ್ದೆಯಲಿ

ಮತ್ತೆ ಕಂಡವರೆಲ್ಲರಕ್ಷಿಯಲಿ.

ಕೌಸಲ್ಯೆ

ತನ್ನಾತ್ಮವನೆ ಸುತನ ಸೌಂದರ್ಯ ಸುಧೆಯಲ್ಲಿ

ಕರಗಿಸಿದಳದ್ದಿ ಸಕ್ಕರೆಯವೋಲ್. ಬಗೆಯಿಂದೆ ೪೪೦

ಜಗಮನಿತುಮುಂ ಜಾರಿ ಮಗನೆ ಮೂಜಗಮಾಯ್ತು !

ಸಕಲ ಸಾಧನೆಯಾದುದಾ ರಾಮ ಶುಶ್ರೂಷೆ;

ಪ್ರೇಮವೆ ನಿಖಿಲ ಪೂಜೆಯಾಯ್ತು. ಸರ್ವೇಂದ್ರಿಯಕೆ

ಮೋಹದ ಶಿಶುವದೊಂದೆ ಮುದ್ದಿನ ವಿಷಯಮಾಯ್ತು.

ಮಾಯವಾದತ್ತುಳಿದುದನಿತುಮುಂ ಪ್ರಜ್ಞೆಯಿಂ

ಜಗುಳ್ದು ಲಯವೊಂದಿ ಮುದ್ದಿನ ಮುದ್ದೆಯೋಲಂತೆ

ಮೈ ತುಂಬಿ ಚೆಂದಳಿರ ಕೋಮಳತೆವತ್ತೆಸೆದಿರ್ದ

ನೀಲೋತ್ಪಲ ನಿಭಾಂಗನಂ ಕುಲದೀಪಚಂದ್ರನಂ,

ಬಳ್ಳಿ ತನ್ನೆಲೆವೆರಳ್ಗಳಿಂ ಮೊಗ್ಗನಿರದಪ್ಪಿ

ಲಲ್ಲೆಗೈವಂತೆ, ಆಲಿಂಗಿಸುತೆ ಮುದ್ದಿಸುತೆ ೪೫೦

ಮಂಡೆಯಂ ಮೂಸಿ ಕೆನ್ನೆಗೆ ಕುರುಳನೊತ್ತುತ್ತೆ

ಬೆಣ್ಣೆನುಣ್‌ದೋಳ್ಗಳಂ ತನ್ನ ನಳಿದೋಳ್ಗಳಿಂ

ಮುಟ್ಟಿ ಸೋಂಕಿಗೆ ಸೊಗಸುವಳು ತಾಯಿ. ತಿಳಿಗೊಳನ

ತಾವರೆಯ ಸೆರೆಯ ತುಂಬಿಗಳಂತೆ ಚಂಚಲಿಪ

ಕಣ್ಗಳಿಗೆ ಕವಿದುಬರೆ ಸುರುಳಿಯುಂಗುರಗುರುಳ್

ನೋಡಿ ನಲಿವಳು; ತೋರಿ ಮೆರೆವಳು; ಪುಲಕಸುಖಕೆ

ರಾಮಚಂದ್ರನ ತಾಯಿ.

ಮಗನ ಕಂಗಳ ನೋಡಿ

ಬಾನನೀಕ್ಷಿಸಿದಂತೆ, ಮಗನ ತೊದಲಂ ಕೇಳಿ

ಕಡಲನಾಲಿಸಿದಂತೆ ಬೆಚ್ಚುವಳು ತಾಯ್ ಸುಯ್ದು. ೪೬೦

ಒರ್ಮೆ ಆ ಹೂಹಗುರ ಶಿಶುವಿದ್ದಕಿದ್ದಂತೆ

ಗಿರಿಭಾರಮಾಗಿ ಬರೆ, ನೆಗಹಲಾರದೆ ತಾಯಿ

ತೇಂಕಿದಳು, ಕಾತರಿಸಿ ಮಗನುಭ್ಯುದಯ ಶಂಕೆಯಿಂ.

ಮತ್ತೊರ್ಮೆ ಪಚ್ಚೆದೊಟ್ಟಿಲ್ ಬಿಂಬದಲಿ ತನ್ನ

ಮುದ್ದುಕಂದಗೆ ಬದಲ್ ಕಾಣಿಸೆ ಮಹಾಮೂರ್ತಿ

ಕೂಗಿಕೊಂಡಳು ದುಷ್ಟ ಕುಗ್ರಹಚೇಷ್ಟೆಯೆಂದಳ್ಕಿ.

ಬಳಿಯಟ್ಟಲಾ ಕುಲಪುರೋಹಿತನ ಸನ್ನಿಧಿಗೆ,

ಬ್ರಹ್ಮರ್ಷಿ ಗುರುವಸಿಷ್ಠಂ ಬಂದು ತಾಯ್ತನಕೆ

ಪೇಳ್ದನಿಂತೆಂದು ಸಂತೈಕೆಯಂ :

“ಬಿಡು, ಮಗಳೆ,

ಭೀತಿಯಂ. ನಿನ್ನ ಮಗನಪ್ರಾಕೃತಂ. ನಿನ್ನೆ ನಾಂ ೪೭೦

ಜಾನದೊಳಿರ್ದು ಕಂಡುದಂ ಪೇಳ್ವೆನಾಲಿಸು. ಮೇಲೆ

ಸಂಭ್ರಮಂ ತುಂಬಿರ್ದುದಮರ ಲೋಕಂಗಳೊಳ್.

ಮಿಂಚಿನಂಚಿನ ದೇವತಾ ಚರಣ ಸಂಚಾರದಾ

ಪದಚಿಹ್ನೆಗಳ್ ಪೊಳೆದುವಮಿತ ನಕ್ಷತ್ರಗಳವೋಲ್.

ಕಂಡೆನೀ ಪೃಥಿವಿಯೆಡೆಗಾ ಶಕ್ತಿ ರಾಶಿಗಳ್

ಧಾವಿಸುತ್ತಿರ್ದುದಂ. ನನ್ನಾತ್ಮವವರನೆಯೆ

ಹಿಂಬಾಲಿಸೈತರಲ್ ಪೊಕ್ಕುದು ಅಯೋಧ್ಯೆಯಂ.

ಜ್ಯೋತಿಶ್ಶರೀರಿ ನಿನ್ನಂಕದಲಿ ಮಲಗಿರ್ದನಂ

ಜ್ಯೋತಿಶ್ಶರೀರನಂ ಕಂಡೆನೀ ಶಿಶು ರೂಪನಂ.

ದೇವರ್ಕಳೆಲ್ಲರುಂ ದಿವ್ಯ ಸುಮಗಳನೆರಚಿ ೪೮೦

ಮೀಯಿಸಿದರವನಂ ದಿವೋಧುನಿಯ ಪೀಯೂಷ

ತೀರ್ಥದಿಂ, ಪಾಡಿ ಸುರಗೇಯ ಘೋಷಂಗಳಂ.

ಧನ್ಯನಾಂ ! ಧನ್ಯೆ ನೀಂ ! ಧನ್ಯಮೀ ರವಿಕುಲಂ !”

ಮಣಿದು ಗುರುಪದಕಾತನಂ ಸತ್ಕರಿಸಿ ಕಳುಹಿ,

ಮುದ್ದಾಡಿದಳು ಮತ್ತೆಮತ್ತೆ ಮಗನಂ ತಾಯಿ

ಕೌಸಲ್ಯೆ, ಮಗು ರಾಮನುಂ ಮುಗುಳುನಗುವಂತೆ.

ನಸುಮೊಳೆತ ಹಾಲುಹಲ್ಗಳ ಸಾಲೆಸೆವ ಬಾಯ

ಜೊಲ್ಲುಗುವ ತುಟಿದೆರೆಯ ಕಿವಿಸೊಗದ ತೊದಲಿಂದೆ,

ದಾದಿಯರ ಕರೆಗೆ ಹೊಂಗೆಜ್ಜೆ ಕಿಂಕಿಣಿ ಕುಣಿಯೆ

ಪರಿವಂಬೆಗಾಲಿಂದೆ, ಕೈಗುಡಲ್ ಪಿಡಿದೆದ್ದು ೪೯೦

ತಿಪ್ಪ ತಿಪ್ಪನೆ ದಟ್ಟಿತಡಿಯಿಟ್ಟು ನಡೆಯುವಾ

ಸಾಹಸಕೆ ಸಂತಸಂಬಡುತೆ, ಕೈಬಿಡಲೊಡನೆ

ಮರಳಿ ನೆಲಮಂ ಪಿಡವ ಬಾಲ ಲೀಲೆಗಳಿಂದೆ

ರಾಮನೊಡಗೂಡಿ ಬಳೆದರು ಮೂವರನುಜರುಂ

ತಂತಮ್ಮ ತಾಯ್ಗಳೊಲ್ಮೆಯ ತೊಟ್ಟಿಲೊಳ್, ಗೊಂಚಲ್

ಅದೊಂದರೊಳೆ ನಾಲ್ಮಲರಲರುವಂತೆ.

ಇರಲಿರಲ್,

ಒಂದು ಹುಣ್ಣಿಮೆಯಿರುಳ್, ಅರಮನೆಯ ಉದ್ಯಾನ

ಶಾದ್ವಲ ಶ್ಯಾಮ ವೇದಿಕೆಯಲ್ಲಿ ರಾಣಿಯರ್

ತಮ್ಮ ಮಕ್ಕಳ್ವೆರಸಿ ವಿಹರಿಸುತ್ತಿರೆ ವಿವಿಧ

ಹರ್ಷ ಭಾಷಿತ ಮೋದದೊಳ್, ಶಿಶು ರಾಮನಾಗಸದಿ ೫೦೦

ಮೆರೆದ ಪೂರ್ಣೇಂದುವಂ ನೋಡಿ, ಮೋಹಿಸಿ, ಪಡೆಯೆ

ಹಲುಬಿ, ಹಂಬಲಿಸಿ, ಕಾಡಿದನು ಕೌಸಲ್ಯೆಯಂ.

ನಭದ ಚಂದ್ರಂ ನರರ ಧರಣಿಗೈತರನೆಂದು

ತಾಯೆನಿತು ಸಂತೈಸಿ ನುಡಿದೊಡಂ ಸಹಿಸದೆಯೆ

ಪಳಯಿಸಿದನಾ ಬಾಲನಕ್ಷಿ ಕೆಂಪೇರ್ವಿನಂ,

ಕಿರುದೋಳ್ಗಳುದ್ದಮಂ ರವಿತಾರೆಗಳೆ ಸೋಲ್ವ

ಬಾನ್ದೆಸೆಗೆ ನೀಡಿ. ಪೊನ್ನೊಡವೆಯಂ ರನ್ನಮಂ

ಬಣ್ಣ ಬಣ್ಣದ ಪಣ್ಗಳಂ ಭಕ್ಷ್ಯಭೋಜ್ಯಂಗಳಂ

ಕೊಟ್ಟೊಡವುಗಳನೆಲ್ಲಮಂ ನೂಂಕಿ, ಚಂದ್ರಂಗೆ

ಗೋಗರೆದನಮ್ಮನ ಬೆದರ್ಕ್ಕೆಯಂ ಕೆಲಕ್ಕೊತ್ತಿ, ೫೧೦

ಕೇಳ್ದರೆದೆ ಸುಯ್ಯೆ. ಆ ರೋದನಕ್ಕುರೆ ಬೆರ್ಚಿ,

ಪಿತೃಮನಂ ಮರುಗೆ, ದೊರೆ ಕನಲ್ದು ತಾನಾಯೆಡೆಗೆ

ಬರೆ, ನೆರೆದ ದಾದಿಯರ್ ಸರಿದರಲ್ಲಿಂದೇನೊ

ಗತಿ ಮುಂದೆ ತಮಗೆಂದು ಬೆದರಿ. ಕೌಸಲೆ, ತಾಯಿ,

ಮಗನುಲ್ಬಣ ಸ್ಥಿತಿಗೆ ಕಡಿದು ಕಾತರೆಯಾಗಿ

ಏಗೈಯಲರಿಯದೆಯೆ ಕಂಗೆಟ್ಟು, ದಮ್ಮಯ್ಯ,

ಸುಮ್ಮನಿರೊ, ಓ ನನ್ನ ಕಣ್ಮಣಿಯೆ, ಕಂದಯ್ಯ,

ಕೈಮುಗಿವೆನಳಬೇಡವೆಂದು ಕಂಬನಿಗೂಡಿ

ಮುಂಡಾಡಿ, ರವಿವಂಶದವನೆಂಬ ಕರುಬಿಂದೆ ನೀಂ

ತಿಳಿಯದೆಳಪಸುಳೆಯಂ ಪೀಡಿಸುತ್ತಿಹೆಯೆಂದು ೫೨೦

ಬೈದಳಾ ಶಶಿಯಂ ಮನಂ ಮುನಿದು.

ದಶರಥಂ

ಬರೆ, ಕೈಕೆ ಕಂಬನಿ ಮಿಡಿದು ಪೇಳ್ದಳೆಲ್ಲಮಂ.

ಕೇಳುತಾ ದೊರೆಯ ಕನಲಿಕೆ ದುಗುಡಕೆಡೆಯಾಯ್ತು,

ಮರುಗಿದನು ಮಗನಾಸೆ ತನ್ನ ಬಲ್ಮೆಗೆ ಮೀರಿ

ಕೈಗೂಡಲಸದಳಮಲಾ ಎನುತ್ತೆ. ಶಿವಶಿವಾ,

ತಿರೆಗರಸನಾದರೇನೊಂದು ಕೂಸಿನ ಬಯಕೆ

ಬಡತನವನೊಡರಿಸಿತಲಾ ! “ತನ್ನ ಸಿರಿ ಇನಿತು

ಪುಸಿಯಾಯ್ತೆ?” ಎನುತ ಕೌಸಲ್ಯೆಯಿಂ ರಾಮನಂ

ಕರೆದೆತ್ತಿಕೊಂಡು ಜಿಂಕೆಗಳೆಡೆಗೆ ಕೊಂಡೊಯ್ದು

ತೋರಿ, ನೈದಿಲೆಗೊಳದೊಳೀಜುವಂಚೆಗಳೆಡೆಗೆ, ೫೩೦

ಮತ್ತೆ ಬೆಳ್ದಿಂಗಳಲಿ ಕಣ್ಣು ಕಣ್ಣಿನ ಗರಿಯ

ಕೆದರಿ ಕುಣಿಯುವ ನವಿಲುಗಳ ಬಳಿಗೆ, ಅಲ್ಲಿಂದೆಯುಂ

ರತ್ನ ಕೃತ ಕೃತಕ ಖದ್ಯೋತ ಸಂಕುಲಮಯಂ

ಚಾಮೀಕರಾಲಂಕೃತಂ ಲತಾ ಭವನಮಂ

ಪೊಕ್ಕು ನಡೆನಡೆದಿರದೆ ತೋರ್ದೊಡಂ, ಶಿಶುರೋದನಂ

ನೆರೆದುದಲ್ಲದೆ ತವಿದುದಿಲ್ಲ.

ಮುಂಗಾಣದೆಯೆ,

ನೃಪತಿ ಮಂತ್ರಿ ಸುಮಂತ್ರನಂ ಕರೆಸಲಾತನುಂ

ಬಾಲನಾಕಾಂಕ್ಷೆಗಚ್ಚರಿವಡುತೆ ಮೌನಮಿರೆ

ಬೆಳ್ಪಮರ್‌ದಂತೆ, ಬಂದಳ್ ಮುದುಕಿಯೊರ್ವಳಾ

ತಾಣಕ್ಕೆ ಕಿಶೋರ ಭರತನನಾಂತು ಕೌಂಕುಳಲಿ. ೫೪೦

ಕಂಡುದೆ ತಡಂ, ಅಮಂಗಳವನೀಕ್ಷಿಸಿದಂತೆ,

ಮೊಗಂಮುರಿದು, ಮಾತು ನಿಲ್ಲಿಸಿದರನಿಬರುಮಲ್ಲಿ,

ಕೈಕೆ ಹೊರತಾಗಿ :

ಕುಡುಬಿಲ್ಲು ಬಾಗಿದ ಮೆಯ್ಯ,

ತೊನ್ನ ಬೆಳ್ಗಲೆವಿಡಿದ ಕರ್ರನೆಯ ಕುಬ್ಜತೆಯ,

ಗೂಳಿ ಹಿಣಿಲಿನವೋಲು ಗೂನುವುಬ್ಬಿದ ಬೆನ್ನ,

ಸುಕ್ಕು ನಿರಿನಿರಿಯಾಗಿ ಬತ್ತಿದ ತೊವಲ್ ಪತ್ತಿ

ಬಿಗಿದೆಲ್ವುಗೂಡಿನಾ ಶಿಥಿಲ ಕಂಕಾಲತೆಯ,

ಪಲ್ಲುದುರಿ ಬೋಡಾದ ಬಚ್ಚುಬಾಯಿಯ, ಕುಳಿಯ

ಕೆನ್ನೆಗಳ, ದಿಟ್ಟಿಮಾಸಿದ ಕಣ್ಣ ಕೋಟರದ,

ಕರ್ಬುನ ಮೊರಡು ಮೊಗದ, ಕೂದಲುದುರಿದ ಬೋಳು ೫೫೦

ಪುರ್ಬಿನ ವಿಕಾರದಾ, ಬೆಳ್ವಕ್ಕಿ ತಿಪ್ಪುಳೆನೆ

ಮಂಡೆಯಂ ಮುತ್ತಿ ಕೆದರಿದ ಬೆಳ್ಳನೆಯ ನವಿರ

ಅಸ್ಥಿಪಂಜರದಂತೆವೋಲಸ್ಥಿರ ಸ್ಥವಿರೆಯಂ

ಕಂಡೊಡನೆ ಕೈಕೆ ನಡೆದಳ್ ಬಳಿಗೆ. ನುಡಿಸಿದಳ್

ತಾಯವೊಲ್ ಸಾಕಿ ಸಲಹಿದ ದಾಸಿ ಮಂಥರೆಯ !

ನೋಡುತಿರೆ ನೆರೆದ ಜನರಾ ವಿರೂಪದ ವೃದ್ಧೆ,

ಮಾತನಾಲಿಸೆ ಬಾಗಿದರಸಿಯ ಕಿವಿಗದೇನನೊ

ಪರ್ಚಿ, ಮಡಿಲಿಂದೊಂದು ಮುಕುರಮಂ ಪೊರದೆಗೆದು

ನೀಡಿದಳ್. ನಗೆಗೂಡಿ ಕೈಕೆ ತಾನದನೊಯ್ದು

ತೋರಿದಳ್ ದೊರೆಯ ತೋಳ್ಗಳಲಿ ರೋದಿಸುತಿರ್ದ ೫೬೦

ರಾಮಂಗೆ. ಪೊಳೆಯೆ ಪಡಿನೆಳಲಿನಲಿ ಬಾನೆಡೆಯ

ಚಂದಿರಂ, ಪಡೆದೆನಿಂದುವನೆಂದು ಕುಣಿಕುಣಿದು

ನಲಿಯತೊಡಗಿದನನಿಬರುಂ ಬಿಲ್ಲುಬೆರಗಾಗೆ.

ಸಂತಸದೊಳಾ ದಾಸಿ, ಮುದಿಗೂನಿ, ರಾಮನಂ

ಮುದ್ದಿಸಲ್ ಬಯಸಿ ತೋಳ್ ಚಾಚಲಾ ಕೌಸಲ್ಯೆ :

ಕಂದಂಗಮಂಗಳಂ, ಮುಟ್ಟದಿರ್ ಮುಟ್ಟದಿರ್.

ಬೇಡವೇಡೆನ್ನುತೆ ನಿವಾರಿಸಿದಳಾಕೆಯಂ,

ಮುದಿ ಮಂಥರೆಯ ಮೈತ್ರಿ ಜಜ್ಜರಿತಮಪ್ಪಂತೆವೋಲ್.

ಮುರಿದೊಲ್ಮೆಯವಮಾನದಿಂದೆ ಕಣ್ಬನಿ ಚಿಮ್ಮಿ

ನಿಲ್ಲದಲ್ಲಿಂ ನಡೆದಳಯ್ ಭರತನಂ ಬಿಗಿದಪ್ಪಿ, ೫೭೦

ತುಳಿದ ಸರ್ಪಿಣಿಯಂತೆ ಮುಳಿಸಿನುರಿಯಿಂ ಪೊಗೆದು,

ಸುಯ್ದು ಹೆಡೆಯೆತ್ತಿ !

ಕೈಕೆಯ ತಾತನೊರ್ದಿನಂ

ಬೇಂಟೆಯಾಯಾಸದಿಂ ಬೈಗುವೊಳ್ತಡವಿಯೊಳ್

ಪರಿವಾರದೊಡನೆ ಬರುತಿರೆ, ಪಳುವೆ ತಾನಳುವಂತೆ

ಗೋಳಿಟ್ಟುದೊಂದು ಶಿಶುರೋದನಂ. ಕೂರ್ಗೆಲಸದಿಂ

ಪಿಂತಿರುಗುತಿರ್ದ ಪಾರ್ಥಿವನೊಳುದಿಸಿತು ಕರುಣೆ,

ಕಟ್ಟಲಿಹ ಕಬ್ಬಕೆ ಮೊದಲ್ ಗುದ್ದಲಿಯ ಪೂಜಿಪೋಲ್.

ನಡೆದು ನೋಡಲ್ಕೆ, ಕಾಣಿಸಿತೊಂದು ದಸ್ಯುಶಿಶು,

ಮುಳ್ ಮಣ್ಣು ತರಗೆಲೆಯಿಡಿದ ನೆಲದ ಮೇಲಿರುವೆ

ಮುತ್ತಿ, ಹಾ, ವಿಕೃತಿ ವಕ್ರತೆ ರೂಹುಗೊಂಡಂತೆ ! ೫೮೦

ಪೆತ್ತವರ ಸುಳಿವಿಲ್ಲದಿರ್ದ ಆ ಪೆಣ್ ಪಸುಳೆಯಂ

ಪಿಡಿದೆತ್ತಿ, ಕಟ್ಟಿರುಂಪೆಯನೊರಸಿ, ಸಂತೈಸಿದನ್.

ಗೂಬೆಯಪಶಕುನದ ವಿಕಾರದುಲಿಯನ್ನೇರ್ದು

ಕವಿಯುತಿರೆ ಕಾಡುಗಳ್ತಲೆ, ತಂದನೂರಿಗವಳಂ

ದಾರಿಯ ನಡೆವ ಮಾರಿಯಂ ಮನೆಗೆ ತರುವಂತೆ,

ಮುಂದಣ ಮಹಾದುಃಖ ದಾವಾನಳಕೆ ತನ್ನ

ಕಿರುಗಜ್ಜದಾ ಒಂದೆ ಕಿಡಿಯ ಮುನ್ನುಡಿಯಿಡುವ

ವಿಧಿ ವಿಲಾಸದಲಿ ! ಬೆಳೆದುದು ಕೂಸು ಕುಳ್ಳಾಗಿ,

ಗೂನಾಗಿ, ತೊತ್ತಾಗಿ, ಕರ್ರಗೆ, ಜನರ ಕಣ್ಗೆ

ಹೇಸಿನಾಕೃತಿಯಾಗಿ ! ಕಂಡ ಕಂಡವರೆಲ್ಲರುಂ ೫೯೦

ಕುಬ್ಜೆಯನನಾರ್ಯೆಯಂ, ತಂದೆತಾಯಿಲ್ಲದಾ

ಪರದೇಶಿ ಕನ್ನೆಯಂ, ಚಿಃ ಎಂದು, ತೊಲಗೆಂದು,

ಥೂ ಎಂದು, ಸಾಯೆಂದು, ನಾಯ್ಮರಿಗೆ ಕಡೆಯಾಗಿ

ಭಾವಿಸಿದರಾ ನೃಪನ ಕಟ್ಟಾಣೆಯಂ ಮೀರ್ದು

ಕಡೆಗಣ್ಚಿ. ಮನುಜರೊಲ್ಮೆಯ ಸವಿಯನೊಂದಿನಿತುಮಂ

ಕಾಣದೆ, ಮಿಗದ ತೆರದಿ ಮಿದುಳಿಲ್ಲದೆಯೆ ಬೆಳೆದು

ಜಡತೆವೆತ್ತಿರ್ದ ಸೋಂಬೆಗೆ ಮಂದಿ, ಬಯ್ವವೊಲ್

ಜರೆದು, ಮಂಥರೆಯೆಂದು ಪೆಸರನೆಸೆದರ್, ಮೊಗಕೆ

ಕೆಸರನಿಡುವಂತೆ, ಕನ್ನಡಿಯಂತುಟಾಕೆಯುಂ

ಪ್ರತಿಬಿಂಬ ರೀತಿಯಂ ಕೈಕೊಂಡಳಾ ಜನದ ೬೦೦

ಮನದ ವಿಕೃತಿಗೆ ತನ್ನ ಮೆಯ್ ವಿಡಂಬನಮಪ್ಪವೋಲ್.

ಪರಿದುದಯ್ ಪೊಳ್ತುವೊಳೆ. ನಿಂದೆಯೊಳ್ ಬೆಳೆಬೆಳೆದು

ಕುವರಿಯಾಗಿರೆ ಕುಬ್ಜೆ, ಸಂಭವಿಸಿದಳು ಕೈಕೆ

ಕೇಕಯ ರಾಜಸತಿಗೆ. ಆ ಧರಾವಲ್ಲಭಂ

ಮಂಥರೆಯ ಭೀಷಣೈಕಾಂತತೆಗೆ ಬಗೆಗರಗಿ

ಮಗುವನಾಡಿಪ ಕೆಲಸಕಾಕೆಯನೆ ಬೆಸಸಿದನ್. ಕೇಳ್,

ಮಳೆಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ.

ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ,

ಮಂಥರೆಯ ಬಾಳ್‌ನಿಶೆಗೆ ಶಶಿಯುದಿಸಿದಂತಾಯ್ತು,

ಮಂಥರೆಯ ಮೃತ್ಯುವಿಗೆ ತಾನಮೃತ ಸೇಚನೆಯಾಯ್ತು, ೬೧೦

ಶುಷ್ಕತಾ ಶೂನ್ಯತೆಯೊಳೊಲ್ಮೆ ಸಂಚರವಾಯ್ತು;

ಬದುಕು ಸಾರ್ಥಕ ಮಧುರಮಾಯ್ತು ಶಿಶುಸನ್ನಿಧಿಯ

ಪ್ರೇಮಸೌಂದರ್ಯ ಮಹಿಮೆಯಲಿ. ರೂಪ ವಿಹೀನೆ

ರೂಪಸಿಯೊಳಿರ್ದು ತನಗಿಲ್ಲದಾ ಚೆಲ್ವಿನಲಿ

ಲೋಲಾಡಿದಳ್, ತೇಲ್ವವೋಲ್ ಪಾಲೊಳಿದ್ದಲಿನ

ಚೂರು. ಮೆರೆದಳು ಕೈಕೆ ಮಂಥರೆಯ ತೊಡೆಯಲ್ಲಿ,

ಕಾಳಾಹಿ ಭೋಗದಲಿ ಹೊಳೆವ ಹೆಡೆಮಣಿಯಂತೆ,

ತಾರತಮ್ಯದಿ ಮತ್ತಿನಿತು ಚಾರುತರಮಾಗಿ.

ಚಕ್ಕಮುಕ್ಕಿಯ ಕಲ್ಲಿನಂತರಂಗದೊಳಗ್ನಿ

ಗುಪ್ತವಾಗಿರ್ಪಂತೆ, ಬಾಹ್ಯ ವಿಕೃತಿಯ ಮಧ್ಯೆ ೬೨೦

ಮಂಥರೆಯ ಹೃದಯದಲಿ ಸುಪ್ತವಾಗಿರ್ದ ರತಿ,

ಚೆಲುವೊಲವುಗಳ ಚಿಲುಮೆ ತಾಂ ಕಣ್ದೆರೆದುದೊಯ್ಯನೆಯೆ

ಮುಕ್ತ ಮುಕ್ತಾಹಾರ ಧಾರೆಯಲಿ. ತನ್ನೊಂದು

ಜೀವಿತಕೆ ರಾಜಪುತ್ರಿಯ ಸರ್ವಸುಖಮಾಗೆ

ಮರೆತಳನ್ಯಾಯಮಂ, ಮರೆತಳಪಮಾನಮಂ,

ಮತ್ತೆ ಮರೆತಳು ತನ್ನನುಂ ತಾನೆ, ಕೈಕೆಯೊಳ್

ಸಾಯುಜ್ಯವೊಂದಿ.

ಮಂಥರೆಯಿಂತು ಬದುಕುತಿರೆ,

ಬೆಕ್ಕಸವನೇನೆಂಬೆ, ಬಾಲ್ಯ ಕೌಮಾರದಿಂ

ಯೌವನವನತಿಗಳೆದು, ಜರೆಗೆ ದಾಂಟಿದಳಹಾ

ನರೆಯೇರಿ, ಸುರ್ಕಡರಿ, ಪೊರಮೆಯ್ ವಿಕೃತಿ ಪೆರ್ಚಿ! ೬೩೦

ತನು ವಿಕಾರಂ ಪೆರ್ಚಿದಂತೆ ಮನಸಿನ ಮಮತೆ

ನೂರ್ಮಡಿಸಿದತ್ತು ಕೈಕೆಯ ಮೇಲೆ. ಕೈಕೆಯುಂ

ನರ ತಿರಸ್ಕೃತೆ ವಿಕೃತೆ ಆ ಮಂಥರಾ ದಾಸಿಯಂ

ಶೈಶವ ಕೃತಜ್ಞತಾ ಪ್ರೇಮದಿಂ ಪ್ರೀತಿಸುತೆ

ನೆರೆ ನೆರೆದಳಂಗಜನ ಹೊಸಮಸೆಯ ಹೊಳೆಹೊಳೆವ

ಶೃಂಗಾರಶರ ಶರಲ್ಲಕ್ಷ್ಮಿಯೋಲ್. ವಿಧಿನಿಯಮದಿಂ,

ಮೇಲೆ ಕಾಲಾಂತರಕೆ, ದೇವ ದಶರಥ ನೃಪಂ

ಲೋಕ ಮೋಹಕ ಸತಿಯ ಸೊಬಗಿನ ಸುಳಿಗೆ ಸಿಲ್ಕಿ

ಕೈಕೆಯಂ ಮದುವೆ ನಿಂದಂದು, ಮಂಥರೆ ದಾಸಿ

ಸಾಕೇತ ರಾಜಧಾನಿಗೆ ಬಂದಳವಳೊಡನೆ ೬೪೦

ನೆರಳಂತೆವೋಲ್. ರವಿವಂಶದರಸರೂರಾದೊಡೇಂ

ಮನ್ನಣೆ ಕುರೂಪತೆಗೆ ತಾನೆಲ್ಲಿ? ಮುದಿಗೂನಿ

ಮಂಥರೆಗೆ ಮೊಲದ ಕೋಡಾದುದು ಸೊಗಂ. ಶನಿಯೆನುತೆ

ಶಪಿಸಿದುದು ಮಂದಿ : ಕಂಡರೆ ಹುಬ್ಬು ಗಂಟಿಕ್ಕಿ

ದೂರ ಸರಿದುದು ಮೊಸಳೆಗಂಡಂತೆ. ಸನಿಹಕ್ಕೆ

ಬರಗೊಡರ್, ಗಾಳಿ ಸೋಂಕುವುದೆಂಬ ಮೈಲಿಗೆಗೆ

ಪೇಸಿ. ಬಳಿಗೀಶ್ವರಾರಾಧನೆಗೆ ಸೇರಿಸರ್.

ಉಣಲಿಡುವ ಪೊಳ್ತು ಪೊರನೂಂಕುವರ್ ತೊಳ್ತುಗಳ್,

ಕಿರಿರಾಣಿಯಾಜ್ಞೆಗೆ ಕಿವುಳ್ಗೇಳ್ದು. ಕೌಸಲ್ಯೆಯುಂ

ಲಕ್ಷ್ಮಣನ ತಾಯಿ ಮೊದಲಪ್ಪ ಸಿರಿವೆಂಡಿರುಂ ೬೫೦

ಮಂಥರೆ ಅನಿಷ್ಟೆಯೆನುತಾ ಸವತಿ ಕೈಕೆಯಂ

ಬಳಿಸೇರಿಸದೆ ಹೆದರಿ ಹೇಸಿ ಹಿಂಜರಿದರಾ

ಗೂನಿಯಿರಲೊಡನೆ. ಸಹಿಸಿದಳನಿತುಮಂ ಕುಬ್ಜೆ

ತನ್ನೊಡತಿಯೊಲ್ಮೆಯ ಸೊಗಕೆ ಜೀವವನೆ ಬೇಳ್ದು,

ಕಮ್ಮಾರನಡಿಗಲ್ಲೆನಲ್ ಬಾಳ್ದು.

ಇರುತಲಿರೆ,

ಬೆಸಲೆಯಾದಳು ಕೈಕೆ ಭರತನಂ. ಮಂಥರೆಗೆ

ಮೂರನೆಯ ಕಣ್ ಮೂಡಿದಂತಾಯ್ತು. ಬಾಳ್ಗೊಂದು

ಪೊಸವೊಲ್ಮೆ ಚೆಂದಳಿರ್ ಚಿಗುರಿದುದು ತಾನಂದಿನಿಂ.

ಜಿಪುಣ ಬಡವಂ ಕಡವರವನಪ್ಪಿಕೊಳ್ವಂತೆ,

ಹಗಲಿರುಳ್ ಕೈಕೆಯ ತನೂಜನಂ ಸಲಹಿದಳ್ ೬೬೦

ಆ ದಸ್ಯುಸತಿ, ಹಡೆದ ತಾಯಿಯೆ ನಾಣ್ಚುವೋಲಂತೆ.

ಮಂಥರೆಯ ಮೋಹಸರಸಿಯೊಳಿಂತು, ತಾವರೆಯ

ತೆರದಿ, ಭರತಂ ಬಳೆದನಯ್. ಮತ್ತೆ ಶತ್ರುಘ್ನನುಂ

ಲಕ್ಷ್ಮಣ ಶ್ರೀರಾಮರುಂ ತಂತಮ್ಮ ಜನನಿಯರ

ಮತ್ತೆ ದಾದಿಯರಕ್ಕರೆಯ ಸಕ್ಕರೆಯ ಸವಿಗೆ

ಬಳೆಯುತಿರ್ದರು ಕುಂಜತರು ದೇವಕುಂಜರಗಳೋಲ್.

ಶೈಶವಂ ಕಳೆದು ಬಾಲ್ಯಂ ಮೆಯ್ಗೆ ಮೈದೋರೆ

ಗುರು ವಸಿಷ್ಠನ ಕೈಯೊಳಾಳ್ವ ಪಾರ್ಥಿವ ಜನಕೆ

ತಗುವ ವಿದ್ಯಾಭ್ಯಾಸದಂಕುರಕ್ಕಗೆಯಾಯ್ತು.

ಕಲಿತರೈ ಬಿಲ್ಬಿಜ್ಜೆಯಂ, ವೇದಮಂ, ಮೇಣ್ ನೀತಿ ೬೭೦

ನಯ ವಿನಯ ನಿಯತಿಯಂ, ಶಾರ್ದೂಲ ಶಾಬಕಂ

ಬೇಂಟೆ ಕಲ್ಪಿಯ ಕಲಿಯುವಂತೆ ; ಪರ್ವತ ಶಿರದಿ

ಜನ್ಮವೆತ್ತಿದ ತೊರೆ ಸಮುದ್ರಾಭಿಮುಖಮಾಗಿ

ಪರಿಯಲರಿವಂತೆ; ಬಂಡೆಯ ಕೊರೆದು ವರಶಿಲ್ಪಿ

ಭುವನ ಸುಂದರ ಕಲಾಲಕ್ಷ್ಮಿಯಂ ಸೃಜಿಪಂತೆ ;

ಕೋಸಲ ಸುಖಿಸುವಂತೆ. ದೇಹದಲಿ ಮನದಲ್ಲಿ

ಜ್ಞಾನದಲಿ ಗುಣದಲ್ಲಿ ವೀರ್ಯದಲಿ ಧೈರ್ಯದಲಿ

ಸಹ್ಯಾದ್ರಿ ಶೃಂಗ ಸಂಕುಲದಂತೆ ನಿಮಿರೆಳ್ದು

ಮೈತ್ರಿಯಿಂ ಸ್ಪರ್ಧಿಸಿದರೊಬ್ಬರೊಬ್ಬರ ಕೂಡೆ

ನಾಲ್ವರುಂ ನಾಲ್ಕು ತೋಳುಗಳೇಳೆ ದಶರಥಗೆ. ೬೮೦

ಕ್ಷಮೆಯಲ್ಲಿ, ಸತ್ತ್ವದಲಿ, ಶಾಂತಗಾಂಭೀರ್ಯದಲಿ,

ಭದ್ರರೂಪದಲಿ, ತನುಕಾಂತಿಯಲಿ ಮೆರೆದನಾ

ಶ್ರೀರಾಮಚಂದ್ರನಂಬರ ಮಹಾಮಂಡಲಮೆ

ಮೂರ್ತಿವೆತ್ತಂತೆ. ಹಿರಿಯಣ್ಣನಂ ಚಿರದಿನಂ

ಬೆಂಬಿಡದೆಯಿರ್ದ ಲಕ್ಷ್ಮಣದೇವನೆಸೆದನಯ್

ರಾಗಾನುರಾಗದಲಿ, ವೇಗದಲಿ, ರಭಸದಲಿ,

ಹೃದಯ ವೈಶಾಲ್ಯದಲಿ, ಶ್ಯಾಮ ಶ್ರೀಯೊಲ್ಮೆಯಲಿ,

ನೆರೆಯೇರ್ದ ಮಳೆಗಾಲದ ಮಹಾತರಂಗಿಣಿಯ

ಧೀರಶೈಲಿಯಲಿ. ಸೌಂದರ್ಯ ಶ್ರೀ ದೇವತೆಯ

ಪಟ್ಟದ ಕುಮಾರನೆನೆ, ಕೈಕೆಯ ಸೊಬಗನೆಲ್ಲಮಂ ೬೯೦

ಮಥಿಸಿ ಸಾರವನೆರೆದ ನವನೀತಕಿಂದ್ರಧನುವಿಂ

ವರ್ಣತೇಜಸ್ಸೊದಗಿದಂತಿರ್ದ ಕೃತಿಯಂತೆವೋಲ್

ಭರತಂ ಮಹಾತ್ಮನೆಸೆದನು ದಿವ್ಯ ತೇಜಸ್ವಿ,

ತ್ಯಾಗಬುದ್ಧಿಯಲಿ, ನಿರ್ವೇಗದಲಿ, ತಪದಲ್ಲಿ,

ತ್ಯಾಗಬುದ್ಧಿಯಲಿ, ನಿರ್ವೇಗದಲಿ, ತಪದಲ್ಲಿ,

ಸಂಯಮದ ಸೌಂದರ್ಯದಲ್ಲಿ, ನಿರಸೂಯೆಯಲಿ,

ರಸಕಾವ್ಯ ಸತ್ಕಲಾಭ್ಯಾಸದಧ್ಯಾತ್ಮದಲಿ,

ಸೋದರ ಪ್ರೀತಿಯಲಿ, ಬಾಲಋಷಿಯೆಂಬಂತೆ

ಭಾಜನನಾಗಿ ರಾಮಗೌರವಕೆ. ಭರತಂಗೆ

ಛಾಯಾ ಶರೀರವೆನೆ ಶತ್ರುಘ್ನನಿರ್ದನು ತನ್ನ

ನಾಮ ಲಕ್ಷ್ಯಕೆ ಲಕ್ಷಣಂ ತಾನೆನಲ್.

ಕೋಸಲದೊಳಾ ೭೦೦

ಗೂನಿ ಮಂಥರೆಯ ಮೀರಿದ ತಿರಸ್ಕೃತೆಯುಮಂ

ಸಂತೃಪ್ತ ಸುಖಿಯುಮಂ ಕಾಣೆ ! ಭರತಾಭ್ಯುದಯ

ಚಂದ್ರೋದಯಕ್ಕುರ್ಬಿದತ್ತವಳ ಹೃಜ್ಜಲಧಿ,

ಪಾಳು ಕೊರಕಲ್ ಬಂಡೆಯಿಂ ವಕ್ರಮಾಗಿರ್ಪ

ಮೊರಡಂ ದಡದಂತಿರ್ದವಳ ಮೆಯ್ಯನುಚ್ಛ್ವಸಿತ

ಹರ್ಷೋರ್ಮಿಮಾಲಾ ಸಮೂಹದಿಂದವ್ವಳಿಸಿ

ಮುಚ್ಚಿ. ನರರನ್ಯರಿಲ್ಲಾಯಿತ್ತು ಮಂಥರೆಯ

ಲೋಕಕ್ಕೆ, ಕೈಕೆ ಭರತರ್ ವಿನಾ. ದಶರಥಂ

ಕೈಕೆ ಭರತರಿಗಾಗಿ; ಕೈಕೆ ಭರತರಿಗಾಗಿ ಏ

ಕೋಸಲಮಯೋಧ್ಯೆಗಳ್, ಶಶಿ ಸೂರ್ಯ ತಾರಾಳಿಗಳ್ ೭೧೦

ಕೈಕೆ ಭರತರಿಗಾಗಿ; ಭರತನಾಳ್ವಿಕೆಗಾಗಿ ಈ

ಪೃಥಿವಿ ! ಹಾ, ಮಂಥರೆಯ ಈ ಮಮತೆಯಾವರ್ತದೊಳ್,

ಸುಟ್ಟುರೆಗೆ ಧೂಳಿ ತರಗೆಲೆ ತಿರ್ರನೆಯೆ ಸುತ್ತುವೋಲ್

ಸಿಲ್ಕಿ ಘೂರ್ಣಿಸದಿಹುದೆ ಪೇಳ್ ತ್ರೇತಾ ಮಹಾ ಯುಗಂ !


>> ಮುಂದಿನ ಸಂಚಿಕೆ-೨/ಶಿಲಾತಪಸ್ವಿನಿ  <<


<<       ಅಯೋಧ್ಯಾ ಸಂಪುಟಂ     >>       ಕಿಷ್ಕಿಂದಾ ಸಂಪುಟಂ       <<      ಲಂಕಾ ಸಂಪುಟಂ        >>     ಶ್ರೀ ಸಂಪುಟಂ        <<