<< ಅಯೋಧ್ಯಾ ಸಂಪುಟಂ >> ಕಿಷ್ಕಿಂದಾ ಸಂಪುಟಂ << ಲಂಕಾ ಸಂಪುಟಂ >> ಶ್ರೀ ಸಂಪುಟಂ <<
ಸಂಚಿಕೆ-2- ಓ ಲಕ್ಷ್ಮಣ !!
“ಟುವ್ವಿ ಮಾಗಿಗೆ ಟುವ್ವಿ ! ಸುವ್ವಿ ಸುಗ್ಗಿಗೆ ಸುವ್ವಿ !”
ಪಂಚವಟಿಗೈತಂದು ಪರ್ಣಕುಟಿಯಂ ಕಟ್ಟುವಾ
ಪೊಳ್ತಂದು ಸೀತಾರಮಣಿ ನಟ್ಟು, ಕಟ್ಟೊಲ್ಮೆಯಿಂ
ನೀರ್ವೊಯ್ದು ನಡಪಿದಳ್ಕರೆಗುರ್ಬ್ಬಿ ಪರ್ವುತಾ
ಪನ್ನಗುಡಿಯಂ ತಳ್ಬಿದೋಲಂತೆ ಸುತ್ತಣಿಂ
ಮುತ್ತಿ ಮುತ್ತೊತ್ತುದಿರ್ದಡವಿವಳ್ಳಿಯ ಮಲರ್ದ
ಹೊದರೆದೆಯೊಳುಲಿಯತೊಡಗಿತು ಚುಕ್ಕಿವೂವಕ್ಕಿ :
“ಟುವ್ವಿ ಮಾಗಿಗೆ ಟುವ್ವಿ ! ಸುವ್ವಿ ಸುಗ್ಗಿಗೆ ಸುವ್ವಿ !”
ಮಂಜು ಹಿಂಜರಿದತ್ತು ; ಮಾಗಿಯ ಚಳಿಯುಸಿರ್ಗೆ
ತಾನಳಿಯುವಳಲಿಂದಮೆನೆ ತೋರಿದುದು ಕಾಯ್ಪು, ೧೦
ಬಿಸುಸುಯ್ಯೆನಲ್ಕೆ. ಬೇರಿಂದೇರಿದುದೊ ಮರದ
ಕೊಮ್ಬೆಗೆ ವಸಂತನಾವೇಶಮೆನೆ, ಕೊನೆಗೆ ನನೆ
ಕೊನರಿದುದು. ಹಂತಿಗೊಂಡಂದಂ ಗಗನ ನೀಲಿಮೆಯ
ನುಣ್‌ಜಗಲಿಯೊಳ್ ನೀರ್ವೊರೆಗಳೆದ ಬೆಳ್ಳಿಯುಣ್ಣೆಯಾ
ಮುಗಿಲ ಹಗುರಂ, ಕೋಗಿಲೆಯ ಕೊರಳ ತೂರ್ಯಂ
ಮರುದನಿಯನೇರಿ ಅಲೆದುದು, ಮಲಗನೆಳ್ಚರಿಸಿ,
ಅಡವಿಯಿಂದಡವಿದೊಟ್ಟಿಲಿಗೆ. ಮರಗಬ್ಬದಿಂ
ಹರೆಯ ತಾಯ್ತೊಡೆಗಿಳಿದ ಮೊಗ್ಗೆಯ ಪಸುಳೆನಿದ್ದೆ
ಕಣ್ದೆರೆದುದಲರ ಬೆಳ್ನಗೆ ಬಿರಿಯೆ, ಪೊಸಗಂಪು
ಪರಮೆಮೊರೆಯಂ ಬಳಿಗೆ ಕರೆಯೆ. ಗರಿಪುಕ್ಕಮಂ ೨೦
ಕುಣಿಕುಣಿಸಿ ಸಿಳ್ಳನೂದಿತು ಸಿಪಿಲೆ. ಮಿಗಗಳಿಗೆ
ಸುಖದಮಾದುದು ನದಿಯ ಮುಳುಗುಮೀಹಂ. ಮಾಗಿ
ಪೋಗಿ ಮೈದೋರಿದುದು ಹಕ್ಕಿ ಹೂಗಳ ಸುಗ್ಗಿ
ಹಿಗ್ಗಿ !
ನಿಚ್ಚಯಿಸಿದರು ರಾಮ ಲಕ್ಷ್ಮಣ ಸೀತೆಯರ್
ಮರಳಲ್ಕಯೋಧ್ಯೆಯಂ. ತೆಂಗಾಳಿ ಕಮ್ಮನೆಯೆ
ಕೇದಗೆಯ ಹೊಂದೂಳಿಯಂ ದೆಸೆದೆಸೆಗೆ ಚೆಲ್ಲಿ
ಮೆಳೆಯ ಗರಿಚವರಿಯಂ ಬೀಸೆ, ಪಿಕಳಾರ
ಕಾಜಾಣ ಕಾಮಳ್ಳಿ ಗಿಳಿವಿಂಡುಗಳ ಕೊರಳ
ಕೈವಾರಮುಲಿಯೆ, ಪಗಲಾಣ್ಮನೊಡನೊಡನೆಳ್ದು
ಗೋದಾವರಿಯ ಮಿಂದರರ್ಘ್ಯಮೆತ್ತಿದರಿನಗೆ, ೩೦
ವಂಶಾಧಿದೇವತಾ ಪ್ರತಿಮನಿಗೆ. ಮೇಣಂತೆ
ಬೀಳ್ಕೊಂಡರಾ ಪರಿಚಯದ ವನಸ್ಥಲಿಗಳಂ,
ಪುಲಿನಸ್ಥಲಿಗಳಂ, ಜಲಸ್ಥಲಿಗಳಂ ; ಮತ್ತೆ
ಪರ್ಣಶಾಲೆಗೆ ವಂದ ಕಿತ್ತಡಿಗಳಂ ; ಪಕ್ಷಿ
ವರ್ಯಂಗೆ ಪೇಳ್ದರ್ ಜಟಾಯು ಮಿತ್ರಂಗೆ. ಮೇಣ್
ಪಂಚವಟ್ಯಾರಣ್ಯದೊಳ್ ಸಂಗ್ರಹಂಗೈದಿರ್ದ
ಪುಲಿಯ ಪಲ್ಲಂ, ಪಂದಿಕೋರೆಯಂ, ಪೇರಾನೆ
ದಂತಮಂ, ನಖಗಳಂ, ಚರ್ಮಂಗಳಂ, ವಿಪಿನ
ಜೀವನ ವಿಶೇಷಂಗಳಂ ಮೂವರುಂ, ತಂತಮಗೆ
ಸವಡಿಗಟ್ಟಿದರರ್ತಿಯಿಂ ತನಗೆ ಬೇಳ್ಪನಿತುಮಂ. ೪೦
ಕಟ್ಟಿದಳು ಬುತ್ತಿಯಂ ಸೀತೆ, ತದನಂತರಂ
ಮುಡಿಗಟ್ಟಿದಳು ಮಂಡೆಯಂ, ಬಾಚಿ ಹೆರಳಿಕ್ಕಿ.
ಮುಡಿವಾಸೆಯಿಂದೆ ಪೂದಿರಿಯಲೆಂದೆಲೆವನೆಯ
ಮುಳ್ಳಿನೊಡ್ಡಂ ದಾಂಟುತಲ್ಲಿ ಬೇಲಿಯ ಮೇಲೆ
ಹರಹಿದೊಂದೊದ್ದೆಮಡಿಯಂ ನೋಡಿ ಕೂಗಿದಳ್
ಸೌಮಿತ್ರಿಯಂ ; “ನಾರುಡೆಯಿದಾರದಯ್ ? ಹೋಹ
ಹೊಂಗಿಂದಿದಂ ಮರೆದಿರೇಂ ?” ಹೊರಗೆ ತಲೆಯಿಣಿಕಿ
ನೋಡಿ ಕಂಡೂರ್ಮಿಳೇಶಂ : “ಅಯ್ಯೊ ಮರೆವೆನೇಂ ?
ಛಿದ್ರಮಾದೊಡಮದಂ ಕೊಟ್ಟವಂ ಮುನಿಯಲ್ತೆ ?
ಖರನ ಕೊಲುವಂದದನೆ ಮೈಜೋಡನೆಸಗಿರ್ದೆನಾಂ. ೫೦
ಶೂರ್ಪಣಖಿಯಿಂ ಪೊರೆದ ಬನದ ಬಾಳ್ಕೆಯ ಶುಚಿಯ
ಕಾಣ್ಕೆಯೆಂದದನೀವೆನೆನ್ನಾ ತಪಸ್ವಿನಿಗೆ ! ……..
ಒಣಗಿರ್ಪುದೇನ್ ಒದ್ದೆ ?” “ಏಂ ಜಾಣನಯ್ ? ತಣ್ಪಲೊಳ್
ಪರಪಿದೊಡೆ ಬೇಗಮಾರುವುದಲ್ತೆ ಪೇಳೊಲ್ಲಣಿಗೆ ?”
“ಆಗಳಿರ್ದತ್ತಲ್ಲಿ ಬಿಸಿಲ್. “ಇದೇನಯ್ ಇಂದು
ಎಂದಿಲ್ಲದೀ ಮೋಡವೀ ಪಚ್ಚೆಬಾಂಬೊಚ್ಚದೊಳ್ ?”
ಸೀತೆ ಕಣ್ಣಾದೆಡೆಗೆ ಮೊಗಮೆತ್ತಿ ಲಕ್ಷ್ಮಣಂ
ನೋಡೆ, ಮುಗಿಲಿನ್ನೆಲ್ಲಿಯುಂ ಸುಳಿಯದಾಗಸದ
ನೀಲ ನೀರಧಿಯೊಳಾ ಏಕಾಕಿ ನೀರದಂ
ನೇರ್ಗೆ ನಿಂದುದು ನೇಸರಂ ಮುಚ್ಚಿ. ಪಂಚವಟಿ ೬೦
ಧರೆಯೆಲ್ಲಮಂ ಪರ್ವಿರಲ್ಕದರ ದುಶ್ಯಕುನ
ಸೂಚಕ ಬೃಹಚ್ಛಾಯೆ, ರಾಕ್ಷಸ ರುಧಿರ ಸಿಕ್ತ
ವಲ್ಕಲವನಾರಿಸಲ್ಕೆಲ್ಲಿ ಪೇಳ್ ಸೂರ್ಯಾತಪಂ ?
ಲಕ್ಷ್ಮಣನೊಳಗೆವೋದನವನಿಜಾತೆಯುಮಲ್ಲಿ
ತಿರುಗತೊಡಗಿದಳಲರನರಸುತ್ತಾ. ನಿಂತುದಾ
ಜೀಮೂತಛದ್ಮನೆಯನಾಂತ ರಾವಣರಥಂ
ನಿಶ್ಚಲಂ, ಕೆರೆಯ ಮೇಲ್ಗಡೆ ನಭದಿ ಹಾರಿಯುಂ
ಮೀನಿಗೆರಗುವ ಮುನ್ನ ನಿಲ್ಲುವ ಕುರರಿಯಂತೆ !
ಮೇಘರೂಪಂಬೆತ್ತು ನಿಂದ ಪುಷ್ಪಕದ ಆ
ನೆಳಲೆ ಸೇತುವೆಯಾಗೆ, ಕಾಮಧನು ತನುವಾಗೆ, ೭೦
ರಾಮಸತಿಯಲರ್ಗೊಯ್ಯುತಿರ್ದಡವಿಗಿಳಿದನಾ
ಮಾರೀಚನುಪಮಾತೀತ ಕಾಮರೂಪಿ. ಪೇಳ್,
ಏನೆಂಬೆನದ್ಭುತಂ ! ಛಾಯಾ ರಚಿತ ರಾತ್ರಿ
ತಾನಾಯ್ತೊ ಚಂದ್ರೋದಯೋಜ್ವಲಿತಮೆಂಬವೋಲ್
ಭೋಂಕನೆಯೆ ವಿಸ್ಫುಲಿಂಗಿಸಿದುದು ವನಧರಿತ್ರಿ.
ನೋಡುತಿರಲರಳುಗಣ್ಣಾಗಿ ವಿಸ್ಮಿತೆ ಧರಾ
ಸುತೆ, ಲೋಕಲಾವಣ್ಯವೇ ಮೂರ್ತವಾದುದೋ
ಎನೆ ತರುನಿಚಯ ಮಧ್ಯೆ ಸುಳಿದಾಡಿದತ್ತೊಂದು
ರಂಕು ರೂಪದ ಕನಕ ಕಾನ್ತಿ. ಕರ್ದ್ದಿಂಗಳಂ
ಬೆನ್ಗೆ ಬೆಳ್ದಿಂಗಳಂ ಪೊಡೆಗಜಿನಮಂ ಮಾಡಿ ೮೦
ತಿಂಗಳ್ಮನೆಯ ಮಿಗಮೆ ದಂಡಕಾಟವಿಯಲ್ಲಿ
ದಾರಿತಪ್ಪುತ್ತಲೆದು ಬರುತಿರೆ, ಧರಾತ್ಮಜಾ
ವದನಮಂ ತನ್ನ ಸದನಂಗೆತ್ತು, ಶಂಕೆಯಿಂ
ಪಿಂತೆ ಮುಂತೆ ತೊಳಲ್ವವೋಲಾಡಿತಾ ಜಿಂಕೆ.
ಇರುಳ ಬಾನಿನೊಳೆಸೆವ ಚಿನ್ನ ಚುಕ್ಕಿಗಳಂತೆ,
ಕುರುಡುಗಳ್ತಲೆಯ ಕಲ್‌ಮೆಯ್ಗೆ ಕಿಡಿಕಿಡಿ ನವಿರ್
ಕೆತ್ತಿಸುವ ಮಿಂಚುಂಬುಳುಗಳಂತೆ, ಚರ್ಮಮಂ
ಸಿಂಗರಿಸಿದುವು ರುಕ್ಮಬಿಂದೂತ್ಕರಂ, ಕೋಟಿ
ಕೋಟಿ. ಮಾಗಿಗೆ ಬರಲುವೋದ ಬೂರುಗಮರಂ
ಕೋಡುಕೋಡಿನ ಕವಲ್ಗಣೆಗಳಿಂ ಮಲೆತಲೆಗೆ ೯೦
ಕೋಡುಮೂಡಿದ ತೆರನ ತೋರ್ಪಂತೆ, ನಿಡು ಸೊರ್ಕ್ಕಿ
ಮಲೆತು ನಿಮಿರಿದುವದರ ಹೇಮರತ್ನಪ್ರಭೆಯ
ಚಾರು ಶೃಂಗದ್ವಯಂ, ತರುವರಸ್ಪರ್ಧಿಗಳ್
ತಾಮೆಂಬವೋಲ್. ಕಿವಿಯ ಕುಣಿಸುತ್ತೆ, ಕಣ್ಮಲರ
ಮಿಂಚಿಸುತೆ, ಪೊಳೆವ ಕೊಳಗಿನ ಜಾನುಜಂಘೆಯಂ
ತೆಗೆತೆಗೆದಿಡುತೆ ನಲಿದು ನರ್ತಿಸುತೆ, ಕೊಂಕಿಸುತೆ
ಕೊರಳ ಬಿಂಕವನಕ್ಷಿಯಕ್ಷಿಣಿಯ ಬೇಟದಿಂ
ಬನಮೆಲ್ಲಮಂ ಗೋರಿಗೊಳ್ಳುತೆ ಕುರಂಗತನು
ಮಾರೀಚನಭಿನಯಿಸಿದನು ತನ್ನ ಪಾತ್ರಮಂ :
ಸೂರೆಗೊಂಡನು ನೋಳ್ಪರಿರ್ವರಾ ನೇತ್ರಂಗಳಂ ೧೦೦
ಲಂಕೇಶ್ವರನ ಮತ್ತೆ ಜಾನಕಿಯಾ. ವಾಸಂತ
ಕಾಂತಾರ ರಂಗಮಂ ಶೃಂಗಾರಗೈಯಲ್ಕೆ
ಬಂಗಾರದಂಗದಾ ಶೃಂಗಿ, ಕೋಳುಹೋದಳೆ,
ಹಾ, ದಶರಥನ ಸುತನ ತನ್ವಂಗಿ, ರಾವಣನ
ಬಾಳ್ದಿಟ್ಟಿ ಮೈಥಿಲಿಯ ಬೈತಲೆಯ ಬಟ್ಟೆಯೊಳ್
ಕಣ್ಗೆಟ್ಟವೋಲ್, ನೋಡಿ ನೋಡಿ !
ಸಾರ್ದುದು ಹತ್ತೆ ;
ದೂರವೋಡಿತು ಮತ್ತೆ. ಮೋರೆಯನಿಳೆಗೆ ಸಾರ್ಚಿ
ಮೇದುದು ಪಸುರನೊರ್ಮೆ ; ಪಿಂಗಾಲ್ಗಳಿಂ ನಿಂತು
ಮುಂಗಾಲ್ಗಳಿಂದಡರಿ, ಕವಲೊಡೆದ ಕೊಂಬುಗಳ್
ಬರಿಗಳಂ ಕೀಸುವೋಲ್ ಬೆನ್ನಿನಿರ್ಕೆಲದೊಳುಂ ೧೧೦
ಚೆಲ್ವಾಗೆ, ಮೊಗಮೆತ್ತಿ ಚೆನ್ನಾಲಗೆಯ ಚಾಚಿ
ಮೇದುದು ಮರನ ನಳನಳಿಪ ಪೊಸ ತಳಿರನೊರ್ಮೆ.
ಕುಣಿಸಿದತ್ತಲ್ಪಲಾಂಗೂಲಮಂ ಶಕ್ರಧನು
ರಮಣೀಯಮಂ, ವಿಸ್ಮಯೋತ್ಫುಲ್ಲಮಾಗಲ್ಕೆ
ರುಚಿರಾನನಾ ರಾಮದಯಿತೆಯಾ ಮದಿರೇಕ್ಷಣಂ.
ಸೀತಾಪ್ರಲೋಭನಂ ದೀಪಿಸುವ ಮಾಳ್ಕೆಯಿಂ
ಕಕ್ಕೆವೂಗೊಂಚಲಡಿ ಮೈನೆಕ್ಕಿಕೊಳ್ಳುತ್ತೆ
ತೋರಿದತ್ತೊಮ್ಮೆ ; ಕಣ್ಮರೆಯಾದುದಿನ್ನೊಮ್ಮೆ
ನೀರೆಯ ಬಯಕೆ ನೀರಡಿಸಿ ಕಳವಳಿಸುವಂತೆ.
ಕುಸುಮಿತ ಲತಾವಿತಾನಂಬೊಕ್ಕು, ಅದೊ ಮತ್ತೆ ೧೨೦
ಮೂಡಿದುದೆನಲ್ಕೆ ಮೈದೋರಿದುದು, ಶೃಂಗಾಗ್ರಮಂ
ಸುತ್ತಿದುಗನಿಯ ಬಳ್ಳಿ ಮಾಲೆ ಸೂಡಿದವೋಲೆ
ಜೋಲೆ. ಮರುಳಾದಳಾ ಬಾಲೆ, ರಸರುಚಿ ಶೀಲೆ,
ಸೌಂದರ್ಯ ಲಾವಣ್ಯಲೋಲೆ. ಇಂತಿಂತಿಂತು,
ಗಮಕಿವರ್ಯನ ವೇಣುವಾಣಿಗೆ ಕಲಾರಮಣಿ
ವರ್ಣ ಲಯ ರಾಗಮಯ ನವರಸಾವೇಶದಿಂ
ಮಮಕಾವ್ಯ ವೇದಿಕೆಯನೇರಿ ನರ್ತಿಸುವಂತೆ
ನಲಿದುದಾ ಪೊನ್ಮಿಗಂ, ಸೀತಾಮನಂ ಮುಳುಗೆ
ಮೋಹದೋಕುಳಿಗೆ !
ಕೈತವವರಿಯದಾ ದೇವಿ
ಸಾಧುಮೃಗಮಂ ಪಿಡಿಯಲೆಳಸಿ ಮುಂಬರಿಯಲಾ
ಪ್ರಾಣಿ ವಂಚಿಸಿತಾಡಿತಲ್ಲಲ್ಲಿ. ತಳ್ವಿದೊಡೆ
ನುಸುಳಿ ಓಡುವುದೆಂದು ಬೆದರಿ ಕರೆದಳ್ ಕೂಗಿ
ಕೂಗಿ, ಕಂಪಿಸಲಟವಿ ವನಿತೆ : “ಓ ಲಕ್ಷ್ಮಣಾ,
ಓ ಬಾರ ! ತಾರ ಬಿಲ್‌ಬಾಣಮಂ ; ನೋಡ ಆ
ಏಣಮಂ ! ಹಿಡಿಯ, ಬಾ ; ಬಾ, ಬೇಗ, ಓ ಲಕ್ಷ್ಮಣಾ !”
ಮೆಯ್ಗೆ ಕುದಿನೀರೆರಚಿದಂತಾಗೆ, ರಾಮನುಂ
ಲಕ್ಷ್ಮಣನುಮೆದ್ದೋಡಿ ಬಿದ್ದು ಬಂದರು ದುಡುಕಿ,
ಶರಧನುಗಳಂ ತುಡುಕಿ. ಸುರಧೀರ ವಪುಗಳಂ
ಸುರಚಾಪ ಸಮ ಧನುರ್ಧರ ರಿಪುಗಳಂ ಕಂಡು
ಚಂಡದೋರ್ದಂಡ ಬಲಿ ರಾಕ್ಷಸೇಂದ್ರಂಗೆ ಮೆಯ್ ೧೪೦
ಪುಲಕಿಸಿತು. ಮೆಚ್ಚಿದನ್ ; ಬೆಚ್ಚಿದನ್ ; ಕಿಚ್ಚೆದ್ದು
ತುಟಿಗಚ್ಚಿದನ್, ತರತರದ ಭಾವಜಟಿಲತೆಯ
ಜಾಲಜೇಡನ ಕುಟಿಲದೊಳ್ ಜೀವಪುಳು ಸಿಲ್ಕಿದೋಲ್ !
“ದಿಟಮಲಾ ನೀನೊರೆದುದೆಲೆ ತಂಗೆ, ಚಂದ್ರನಖಿ !”
ಎನುತೆ ತನ್ನೊಳಗುಸುರಿಕೊಳುತೆ, ಕಿವಿಗೊಟ್ಟನಾ
ನೆಲದೆಡೆಯ ಮಾತಿನೌತಣಕೆ.
ತನ್ನತ್ತಿಗೆಯ
ಕೋರಿಕೆಯ ಕೇಳ್ದು ಮಾರುತ್ತರಿಸಿದನ್ ನಗುತೆ
ಊರ್ಮಿಳೇಶಂ : “ಕೋಳುಹೋಹರೆ, ಅತ್ತಿಗೆ ಈ
ಕಾಳ್ಮಿಗದ ಕಾಂಚನ ಕೈತವತೆಗೆ ? ಕಾಣಿರೇಂ
ಕೃತಕಮಂ ? ಕನಕ ರಚಿತಂ ರತ್ನಖಚಿತಮೀ ೧೫೦
ಮಿಗದವೋಲೆಲ್ಲಿಯಾದೊಡಮಿರ್ಪುದೇಂ ಸಹಜ
ಸೃಷ್ಟಿ ? ಸಂಧ್ಯಾಶಿಲ್ಪಿ ಬಾನ್‌ಪಟದಿ ಕಲ್ಪಿಸುವ
ಸುಂದರ ಜಲದಕೃತಿಯ ಗಂಧರ್ವ ನಗರಮೆನೆ
ಸಲಸಲಕೆ ಸಂಚಲಿಸುವಾಕೃತಿಯ ಈ ಮೃಗಂ
ಮಾರೀಚ ಮಾಯೆಯೆ ದಿಟಂ. ಕಾಮರೂಪಿಯಾ
ಕಿತವಕಲಿ ಕೋಣಪನ ಕೂಟಯಂತ್ರಕೆ ಸಿಲ್ಕಿ
ಕೋಳುವೋಗಿಹರಾರ್ಯರೆನಿತೆನಿತೊ. ಕಾಣಿಮದೊ
ದಿಟದ ಮೃಗತತಿಯದರ ಬಳಿ ಸುಳಿಯಲೆಂತಂಜಿ
ಹಿಂಜರಿದು ಮೂಗಾಳಿವಿಡಿದು ನಿಂತಿಹವಲ್ಲಿ
ಸಾಲ್ಗೊಂಡು ಬೆರ್ಚಿ ಗಾರಾಗಿ !”
ಮೈದುನನಿಂತು ೧೬೦
ನುಡಿಯಲದನವಚತ್ತು ಸೀತೆ ಕಾಂತನ ಕಡೆಗೆ
ತಿರುಗಿದಳು ; ಮರುಗಿದಳು ; ಕಾಡಿದಳು ; ಬೇಡಿದಳು ;
ಮಾರ್ನುಡಿಯನಿಚ್ಛಿಸದಲಂಪಿನಿಂ ನೋಡಿದಳು
ರಾಮಚಂದ್ರನ ಮನಂ ತನ್ನ ಮನಮಪ್ಪುವೋಲ್ !
ತಿರುಗಿ ನೋಡಿದನನುಜನಂ ; ನುಡಿದನಿಂತೆಂದು :
“ಪೊರಮಡುವೆವಾವಿಂದೆ, ಸೌಮಿತ್ರಿ. ದೇವಿಯೀ
ಕೊನೆವಯಕೆಯಂ ತೀರ್ಚಿದಪ್ಪೆನಶ್ರಮದಿನಾಂ
ಶೀಘ್ರದಿಂ. ಮುಗ್ಧೆಯೀ ಮುಗ್ಧಕಾಂಕ್ಷೆಗೆ ಭಯದ
ವಿಘ್ನಮೇತಕೆಮಗೆ ? ನಗರದೊಳದಂ ತೋರ್ದು
ಸೊಗಯಿಸುವೆನೆಂಬುದಾಗಿರಲಾಸೆ, ನಮ್ಮಿಂದೆ ೧೭೦
ತಡೆಯೇತಕದಕೆ ? ನೀನೆಂದಂತೆ ರಕ್ಕಸನೆ
ಮೃಗರೂಪಿಯಾಗಿರ್ದೊಡಾತನಂ ಕೊಲ್ವುದುಂ
ಕರ್ತವ್ಯಮಲ್ತೆ ? ಪಿಡಿದಪೆನಲ್ಲದಿರೆ ಕೊಂದೆ
ತಂದಪೆನ್. ನೀಂ ನಡೆಯಿಮಾಶ್ರಮಕೆ. ಚಚ್ಚರಿಂ
ಬರ್ಪೆನಾನಿತುವೊಳ್ತಿನೊಳೆ. ನೀನೆಚ್ಚರದಿ
ಕಾಯುತಿರ್ ಜನಕಸುತೆಯಂ !”
ಮಲ್ಲಗಚ್ಚೆಯಂ
ಕಟ್ಟಿ, ಆ ಸಿಡಿಲಾಳ್, ಧನುರ್ಬಾಣ ಪಾಣಿಯುಂ
ಕಟಿಖಳ್ಗ ಭೀಕರನುಮಾಗಿ, ಮೃಗನೀಚನಂ
ಬೆಂಬತ್ತಿದನು ದೈತ್ಯ ಮಾರೀಚನಂ. ಪಳುವದೊಳ್
ಮರೆಯಾಗೆ ರಘುಕುಲ ಯಶಶ್ಚಂದ್ರಶೇಖರಂ ೧೮೦
ನಡೆದಳೆಲೆವನೆಗೆ ಮೈಥಿಲಿ ಮೈದುನನ ಮುಂದೆ,
ಲಂಕೇಶ್ವರನ ಶಂಕೆ ಸುಯ್ವಂತೆ :
ಬೇಂಟೆಯಂ
ಬಣ್ಣಿಪನೆ ಕವಿ, ಕಲಿ ದಿಲೀಪಕುಲತಿಲಕನಾ ?
ಬೇಂಟೆಗಾರನುಮಂತೆ ಬೇಂಟೆಮಿಗಮುಂ ದಿಟಂ
ಮಹೋದ್ದಾಮರೆನೆ, ನೋಟಮಾಗದೆ ದೇವದೇವರಿಗೆ
ಆ ಮೃಗಯೆ ? ರಾವಣನುಮಾ ಲಸದ್ದೃಶ್ಯಮಂ
ನೋಡದಿರಲಾಪನೇಂ ? ನೋಡಿದನ್, ಮೆಯ್‌ನವಿರ್
ನಿಮಿರಿ !
ಪೊಂಬಿಡಿಯಸಿಯನಿರುಕಿ ಕಟಿಕೋಶದೊಳ್,
ನಿಶಿತ ನಾರಾಚಮಯ ತೂಣೀರಮಂ ಧರಿಸಿ
ಬೆನ್ನೊಳಾ ಸದೃಢ ಜಂಘೆಯ ನಡೆಯ ಕಲಿಧನ್ವಿ ೧೯೦
ಹಳುವ ಹೊಕ್ಕನು ಹೊಮ್ಮರೆಯ ಹಿಂದೆ. ಮೃಗವೇಷಿ
ಮಾರೀಚನಾಕರ್ಷಿಸುತ್ತಾ ವನಪ್ರೇಮಿಯಂ
ಸೆಳೆದನು ಮುಂದೆ ಮುಂದೆ ; ಒಮ್ಮೆ ತೋರಿದುದಿಲ್ಲಿ ;
ಒಮ್ಮೆ ತೋರಿದುದಲ್ಲಿ, ಮರೆಯಾದುದೇನಿಲ್ಲಿ ?
ಎಂಬನಿತರೊಳೆ ಹೊಳೆದುದಲ್ಲಿ ! ಕಣ್ಣೊಳೆ ಮುಂದೆ
ಹೊದರಿನಲಿ ಹೊಕ್ಕು ಜುಣುಗಿದುದೆಂದು ನೋಡುತಿರೆ,
ಏನೊ ಬೆನ್ನೆಡೆ ಸದ್ದು ? ತಿರುಗಿ ನೋಡಿದರೆ, ಅದೊ
ಪಸುರ ಗಬ್ಬದಿನುಣ್ಮೆ ಚಿಮ್ಮುತಿದೆ ! ಮರೆಯಾದುದೀ
ಕುತ್ತುರ್ ಮರೆಯೊಳಡಗಿ ಎಂದೆಚ್ಚರಿಕೆವೆರಸಿ
ತುದಿವೆರಳ ತವಕದುಬ್ಬೇಗದಿಂ ನಡೆನಡೆದು, ೨೦೦
ಸುತ್ತಿ, ಹತ್ತಿರೆ ಸಾರಿ, ಕಣ್ಣಿಟ್ಟು, ಕೈನೀಡಿ,
ಪಿಡಿವ ಚಾತುರ್ಯದಿಂದಿರೆ, ಚೆಂಗನೆಯ ಚಿಮ್ಮಿ
ದಡದಡನೆ ಪೊದೆ ನಡಗುವಂದದೊಳಿಳೆಯನೊದ್ದು
ನೆಗೆದೋಡೆ, ಬೆಚ್ಚಿ ಸುಯ್ದಟ್ಟುವನ್ ಬೇಂಟೆಗಂ
ಬಿಡದೆ ಬೆಂಬತ್ತಿ ! ಇಳಿದುದೆ ತಗ್ಗನಾ ಮಿಗಂ ?
ರಾಮನುಮಿಳಿದನದಂ ! ಉಬ್ಬನೇರ್ದುದೆ ಜಿಂಕೆ ?
ಕೂಡೆ ಏರಿದನದಂ ! ದರಿಯಾಳದಗಲಮಂ
ನೆಗೆದುದೆ ಕುರಂಗಂ ತುರಂಗದೋಪಾದಿಯಿಂ
ನೆಗೆದನಂತುಟೆ ತಾನುಮಾ ವಿಹಂಗಮ ಕುಲಂ !
ಮಲೆಯ ಗೋಡೆಯೊ ಎನಲ್ ಕಡಿದಾಗಿ ಮೇಲೆಳ್ದ ೨೧೦
ಗುಲ್ಮ ಶೋಭಿತ ಸಾನುದೇಶಮಂ ನೋಡು ಅದೊ
ಏರುತಿಹುದೆಂತು ! ಮುದುರುತಿದೆ, ನೀಳುತಿದೆ ಮೆಯ್.
ಒಮ್ಮೆಯೆದ್ದಂತೊಮ್ಮೆ ಬಿದ್ದಂತೆ ತೋರುತಿವೆ
ಶೃಂಗದ್ವಯಂ. ಖುರಪುಟಾಘಾತದಿಂದುಣ್ಮಿ
ಸಿಡಿಯುತಿವೆ ಪುಲ್‌ಮಣ್‌ಗಳಟ್ಟಿ ಬೆಂಬರ್ಪಂಗೆ
ಕಣ್ಗೆ ದೂಳಿಕ್ಕುವೋಲ್. ಜೊಲ್ ಸೋರ್ವ ಜಿಹ್ವೆಯಂ
ಜೋಲ್ದೇದುತಿರ್ದಪುದಳ್ಳೆ ತಿದಿಯೊತ್ತುವೋಲ್ ;
ಆ ಹಿಡಿವನಾ ಹಿಡಿದನದರ ಹಿಂಗಾಲನೆನೆ
ದಾಶರಥಿ ತೋಳ್‌ನೀಡಿ ತುಡುಕಲೆರಗಲ್ಕಯ್ಯೊ
ವ್ಯರ್ಥಮಾದುದು ಶೂನ್ಯತಾ ಮುಷ್ಟಿ ! ಪೊನ್ಮಿಗಂ ೨೨೦
ಪೊಕ್ಕನೆ ಕೆಲಕ್ಕೆ ಪೊರಳ್ದಕ್ಕಟ ಪೆಡಂಮೆಟ್ಟಿ
ಧಾವಿಸಿತು ಪಳುವಿಡಿದ ಕಿಬ್ಬಿಯಿಳಿಜಾರಿಗದೊ,
ದುಮುಕಿತೆನೆ ಮಳೆಯ ಬಿಲ್ಲಿನ ನೀರಿನರ್ಬ್ಬಿ. ಹಾ,
ತೊಯ್ದು ನಾರುಡೆಯಂಗಿ ನಿಂತನಾ ರಾಘವಂ
ಪಲ್ಗಚ್ಚಿ ನೋಡಿ; ಮಿಂಚಿತ್ತೋಡಿತಾ ಶೃಂಗಿ.
ಮುಗಿಲೊಳಗಡಗಿ ತೋರಿ ತಿಂಗಳೋಡುವವೋಲೆ
ಪಳುಗಾಡಿನೊಳಗೋಡುತಿರೆ ಮೃಗಂ, ಬಾಳ್ವೆರಸಿ
ಹಿಡಿವ ಹಂಬಲನುಳಿದು ಬಿಲ್ಲೆತ್ತಿದನ್ ಬಾಣ
ಪಾಣಿ, ಮುಕ್ತಿಗೆ ಸೇರ್ದುದೆನೆ ರಾಕ್ಷಸಪ್ರಾಣಿ !
ತೆಕ್ಕನೆಯೆ ಬಿಲ್ಲಿಳುಹಿದನ್ : ಮುಂದೆ ಕಂಡುದಾ ೨೩೦
ಗೋದಾವರಿಯ ಬಿತ್ತರದ ಪೊನಲಡ್ಡಗಟ್ಟುವೋಲ್ !
“ನದಿಯನೀಸಲೆವೇಳ್ಕುಮಾ ಜಂತು. ಆ ದಡಕೆ
ಹಾಯ್ವ ಮುನ್ನಮೆ ಹಿಡಿವೆನೆಂತಾದೊಡಂ ದಿಟಂ !”
ಮತ್ತೆ ಬೆಂಬತ್ತಿದನ್ ರವಿವಂಶಜಂ. ಜಿಂಕೆ
ದುಮುಕಿತು ದುಢುಮ್ಮನೆ, ನದೀಜಲಂ ಮುತ್ತೆಳ್ದು
ಸಿಡಿಯೆ. ಬೆನ್ನೊಳೆ ದುಮುಕಿದನ್ ರಾಮನಾ ಹೊಳೆಗೆ
ನೀರ್ನವಿರ್ಗಳೇಳ್ವಂತೆ ! ಮುಂದೆ ಸಾಗಿತು ಮಿಗಂ
ಕೊಂಬೆಕೊಂಬೆಯ ಕೊಂಬಿನಿಂಬಿನ ಮೊಗಂ ಮಾತ್ರ
ತಾನಾಗಿ ತೇಲಿ. ಹಾಯ್ದನು ಹಿಂದೆ ಕೌಸಲೆಯ
ಸೀತಾಪ್ರಿಯಂ ಬೀಸುಗೈವೀಸಿ, ತಲೆಯೆತ್ತಿ, ೨೪೦
ಪೊತ್ತ ಬಿಲ್ ಬತ್ತಳಿಕೆ ಕತ್ತಿಗಳನೊಂದುಮಂ
ಬಗೆಗೊಳ್ಳದಾಕ್ರಮಣ ಬುದ್ಧಿಯೊಂದನೆ ಪಿಡಿದು,
ನೀರೆರ್ದೆಯನಿರದೆ ಸೀಳ್ದೀಸಿ ! ಮಾಯೆಯನೆಂತು
ಸಂಹರಿಸದೆಯೆ ಪಿಡಿವುದಯ್ ನನ್ನಿ ? ಅಕ್ಕಟಾ,
ದಡವೇರ್ದುದಾ ಚತುಷ್ಪಾದಿ ; ನುರ್ಗ್ಗಿತ್ತೋಡಿ
ಮತ್ತೆ ದಟ್ಟಡವಿಯಂ. ಮೈಗಂಟಿದೊದ್ದೆಯಿಂ
ರಾಮನಟ್ಟಿದನು ಪೌರುಷ ರೋಷವೇಗದಿಂ.
ಓಡಿದನು ಮಾರೀಚನಟ್ಟಿದನು ದಾಶರಥಿ ;
ಮುಟ್ಟಿದರು ನೀರದಾಕೃತಿವೆತ್ತ ಪುಷ್ಪಕಜಮಂ
ಛಾಯಾ ವಲಯ ನೇಮಿಯಂ. ದಾಂಟಿದಂದೆ ತಡಂ ೨೫೦
ಕಾಂತಿ ಸುರಿದುದು ಸೂರ್ಯನಾ : ರಕ್ಕಸಂ ಬೆಚ್ಚಿ
ಒಳಸೋರುತಲ್ಲಿಂ ತಿರಿಕ್ಕನೆ ಪೆಡಂಚಿಮ್ಮಿ
ನೆಗೆಯುತಿರೆ ಕರ್‌ನೆಳಲ ಮರೆಗೆಳಸಿ, ರವಿವಂಶಜಂ
ಕಣೆಯನೆಳೆದನು ಕೈಗೆ ; ಹೂಡಿದನದಂ ಹೆದೆಗೆ ;
ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ
ಕಬ್ಬವೆಣ್ಣಂ ಕಟ್ಟುವೆಗ್ಗತನಮಂ ಬಿಟ್ಟು
ಹೃದಯದಾವೇಶಮನೆ ನೆಚ್ಚುವ ಮಹಾಕವಿಯ
ಮಾರ್ಗದಿಂ, ಮಾರ್ಗಣವನೆಚ್ಚನೇಣನ ಮೆಯ್ಗೆ,
ಗೋಣ್ತಿರಿದು ಪಲವುರುಳುರುಳಿ ಬೀಳುವೋಲಂತೆ !
ಶಾಶ್ವತವನರಿಯಲ್ಕೆ ನಶ್ವರದ ಹೃದಯಮಂ ೨೬೦
ಭೇದಿಸುವ ಕವಿಯ ದರ್ಶನದಂತೆ, ಖರಶರಂ
ಛಿದ್ರಿಸಲ್ಕಾ ಕಿತವ ಪಶುಕಳೇಬರದಿಂದೆ
ಜಗುಳ್ದುದು ನಿಶಾಚರಾಕೃತಿ, ಮಿಥ್ಯೆ ಬಿರಿಯಲ್ಕೆ
ಸತ್ಯಂ ಪ್ರತ್ಯಕ್ಷಮಪ್ಪಂತೆವೋಲ್. ಕಣ್ ಬೆರ್ಚ್ಚಿ
ನೋಡುತಿರಲಾಯ್ತು ಕಿವಿಯುಂ ಬೆರ್ಚ್ಚುವಂತೆ : “ಓ
ಲಕ್ಷ್ಮಣಾ ! ಓ ಲಕ್ಷ್ಮಣಾ ! ಓ ಲಕ್ಷ್ಮಣಾ, ಓ !”
ಎಂಬಾ ಮಹಾಧ್ವಾನಮಸುರನುಸಿರಿಂದುರ್ಕ್ಕಿ
ರೋದಿಸಿತು. ಗಗನಗಿರಿವನ ಗುಹಾಮುಖಂಗಳಿಂ
ಪ್ರತಿರಣಿತಮಾಗಿ ! ಧಿಗಿಲೆಂದುದೆದೆ ರಾಮಂಗೆ.
“ಓ! ಲಕ್ಷ್ಮಣಾ, ಲಕ್ಷ್ಮಣಾ, ಲಕ್ಷ್ಮಣಾ, ಓ !” ೨೭೦
ಕೂಗನಾಲಿಸಿ ನಡುಗಿದಳ್ ಪೃಥ್ವಿ; ತರುಶಿಲಾ
ಗರ್ಭಂಗಳುಂ ತಲ್ಲಣಂಗೊಂಡುವಾ ಕರೆಯ
ಮೊರೆಗೇಳ್ದು ; ನಿಲ್ಲಿಸಿದುವುಲಿಗಳಂ ಚಕಿತ ಖಗ
ಸಂಕುಲಂ ; ಮಧ್ಯಾಹ್ನಮಾಲಿಸಿತು ನಿಶ್ಶಬ್ದ
ವಿಸ್ಮಯಭ್ರೂಮುದ್ರೆಯಿಂ ; ಆ ತೆರೆತೆರೆಯ ನಡೆಯ
ದನಿಗುದುರೆ ಮುಟ್ಟಿತೆಲೆವನೆಗೆ, ನೆಗೆನೆಗೆದೋಡಿ
ಕೊನೆಗೆ : ಓ ಲಕ್ಷ್ಮಣಾ ಲಕ್ಷ್ಮಣಾ ಲಕ್ಷ್ಮಣಾ ಓ !
ಪಗಲೆನಿತ್ತೇರ್ದೊಡಂ ಪೊಳ್ತೆನಿತೊ ಮೀರ್ದೊಡಂ
ಪಿಂತಿರುಗದಿರೆ ರಾಘವಂ, ಜಾನಕಿಗೆ ಚಿಂತೆ
ತೊಡಗಿದುದು. ನಾನಾ ದುರಂತಮಂ ನೆನೆನೆನೆದು ೨೮೦
ವಿಹ್ವಲಿಸಿದುದು ಮನಂ ತನ್ನಿಚ್ಚೆಯಂ ಮೀರ್ದು.
ಮೈದುನಂಗರುಹಲಾರದೆ ತನ್ನ ಕುದಿಹಮಂ,
ನಿಶ್ಶಂಕಿ ವೀರನಾತನ ನಗೆಗೆ ನಾಣ್ಚಿಯುಂ,
ಮರೆಸಲಾರದೆ ತನ್ನೆರ್ದೆಯ ಭೀತಿಯಂ, ಭೀರು,
ಕೋಮಲೆ, ಅಬಲೆ, ಸೀತೆ ತಾನೆಲೆಮನೆಯ ಹೊರಗೊಳಗೆ
ನಿಂತಲ್ಲಿ ನಿಲ್ಲಲಾರದೆ ಹಿಂದು ಮುಂದಕ್ಕೆ
ಪರಿದಾಡುತೊಣಗುತುಟಿಯಂ ಮತ್ತೆ ಮತ್ತೆಯುಂ
ನಾಲಗೆಯ ನೀರಿಂದೆ ಸವರಿಕೊಳುತಿರೆ, ಕಂಡು,
ಪಯಣದವಸರಕಾಗಿ ಪಿಂಡಿಗಟ್ಟುತ್ತಿರ್ದ್ದ
ಲಕ್ಷ್ಮಣಂ : “ತವಕಿಸುವುದೇಕಿಂತು ? ಬಿಟ್ಟದಂ ೨೯೦
ಬಂದಪನೆ ? ಪಿಡಿವನಲ್ಲದೊಡದರ ಚರ್ಮಮಂ
ತಂದಪನ್ ಕೊಂದಾದೊಡಂ. ಪಿಡಿವ ಸಾಹಸದಿ
ತೊಡಗಿರ್ಪನೆಂದೆ ತೋರ್ಪುದು. ಕೊಂದು ತರ್ಪುದಕೆ
ಪೊಳ್ತಿನಿತ್ತೇತಕಣ್ಣನ ಬಾಣವೇಗಕ್ಕೆ ?”
ಎನುತ್ತೆ ಕೈಗಜ್ಜಮಂ ಮುಂಬರಿಸಿದನು ಮತ್ತೆ
ಪಿಂಡಿಗಟ್ಟುತ್ತೆ. ಲಕ್ಷ್ಮಣನೆಂದುದಕೆ ಮರಳಿ
ನುಡಿಯದೆಯೆ, ನಡೆಯುತೆಲೆವನೆಯಂಗಳಕ್ಕಲ್ಲಿ
ನಿಂದಳು ಧರಣಿಜಾತೆ. ನೋಡಿದಳು ಕಾತರಿಸಿ
ಪಳುವನಿನಿಯಂ ಪೊಕ್ಕ ದೆಸೆಯ ಬನವಟ್ಟೆಯಂ :
ದಟ್ಟಯಿಸಿದಡವಿಮಲೆ ದೂರಕಲೆಯಲೆಯಾಗಿ ೩೦೦
ಪರ್ವಿರ್ದುದಕ್ಷಿಯಲೆವನ್ನೆಗಂ. ಗಗನದೊಳ್
ನಿಂದಿರ್ದುದಾ ಮುಗಿಲ್ಬಿತ್ತರಂ, ನೇಸರ್ಗೆ
ಕಣ್ಕಟ್ಟಿದಂತೆ. ಆ ಮ್ಲಾನ ಮಧ್ಯಾಹ್ನದಾ
ಮೌನ ಭಾರಕ್ಕೇದುತಿರೆ ಖಿನ್ನಮುಖಿಯಾಗಿ
ಶ್ರೀರಾಮಭಾರ್ಯೆ, ನಿಶ್ಶಬ್ದತಾ ನಿದ್ರೆಯಂ
ಹರಿದು ಹೊಡೆದೆಬ್ಬಿಪೋಲೆದ್ದುದೊಂದೋವೋ ಸದ್ದು,
ಕಾಡೊರಲ್ದವೋಲ್ : “ಓ ಲಕ್ಷ್ಮಣಾ ! ಓ ಲಕ್ಷ್ಮಣಾ !
ಓ ಲಕ್ಷ್ಮಣಾ ಓ !” ಎಂದು ಲೋಕಶೋಕವನೆಲ್ಲ
ಕರೆವಂತೆ ಸಂಪ್ಲವಿಸಿತಾ ರೋದನಂ, ವಿಪಿನಜಂ
ಬಹುದೂರದಾ !
ಬೆಚ್ಚಿದಳ್ ; ಬೆವರಿದಳ್ ; ಹಲುಬಿದಳ್ ; ೩೧೦
ಹಾರಿ ಹಮ್ಮೈಸಿದಳು ಸೀತೆ. ಮೈದುನನೆಡೆಗೆ
ತತ್ತರಿಸುತಿರೆ, ಕಂಡಳಾತನಂ, ಬಾಗಿಲಿಂ
ಪೊರಮಡುತ್ತಿರ್ದನಂ. ಸನ್ನೆಯಿಂ ಕೆಮ್ಮನಿಸಿ,
ಕಿವಿಗೊಟ್ಟನಾತನುಂ. ಕೇಳ್ದರಾಯಿರ್ವರುಂ
ನೀಳ್ದ ಗೋಳ್ದನಿಯನೋ ಲಕ್ಷ್ಮಣೋ ಲಕ್ಷ್ಮಣೋ
ಲಕ್ಷ್ಮಣೋ ಎಂದಲೆದುದಂ. ಕೇಳ್ದಂಗೆ ಲಕ್ಷ್ಮಣಗೆ
ಮುಖವಿಸ್ಮಯಂ ಮಾಣ್ದು ಮೆಯ್ದೋರುತಿರಲೊಂದು
ಮಂದಸ್ಮಿತಂ, ಭೀತಿ ಬೆಳ್ಪಂಬಡಿದ ಮೊಗದ
ಮೈಥಿಲಿ ಗದ್ಗದಿಸಿ ನುಡಿದಳಿಂತು : “ಅಯ್ಯಯ್ಯೊ
ಕೆಟ್ಟೆನಯ್, ಲಕ್ಷ್ಮಣಾ ! ಕೇಡಾಯ್ತು ಆರ್ಯಂಗೆ ! ೩೨೦
ಓಡು, ನಡೆ ! ನಡೆ ಬೇಗ ! ನೆರವಾಗು, ನಡೆ, ಹೋಗು !
ರಾಘವಂಗೇನಾಯ್ತೊ ಕಾಣೆನಾನಯ್ಯಯ್ಯೊ !”
ಅತ್ತಿಗೆಯ ದುಃಸ್ಥಿತಿಗಿನಿತು ಕಿನಿಸಿ ಮೈದುನಂ :
“ತಾಳ್ಮೆ, ತಾಯೀ, ತಾಳ್ಮೆ. ರಕ್ಕಸನಸುರ ಮಾಯೆ
ಕೂಗುತಿದೆ ; ಅಗ್ರಜಧ್ವನಿ ಅದಲ್ತು. ಭ್ರಾಂತಿಯಿಂ
ನಡೆಯದಿರಿತರೆಯಂತೆ.” “ಅಯ್ಯಯ್ಯೊ, ಆಲಿಸದೊ ;
ನಿನ್ನಣ್ಣನುಲಿಹವೆ ದಿಟಂ. ನಿನ್ನನೆ ಪೆಸರ್ವಿಡಿದೆ
ಕೂಗುತಿಹುದಾಲಿಸಾ ! ಕಿವಿಗೆಟ್ಟುದೇಂ ; ನಿನಗೆ
ಮತಿಗೆಟ್ಟುದೇಂ ? ಓಡು, ನೆರವಾಗು, ನಡೆ, ಹೋಗು ;
ದಮ್ಮಯ್ಯ, ಹೋಗು !” “ಅಣ್ಣನ ಆಜ್ಞೆ, ನಿಮ್ಮಡಿಯ ೩೩೦
ರಕ್ಷಣೆಗೆ ನನ್ನನಿಲ್ಲಿಟ್ಟು ಹೋಗಿಹನದಂ
ಮೀರಿ ನಡೆಯಲ್ಕೆನಗೆ ಬಾರದು ಮನಂ.” “ಕರುಳೆನಗೆ
ಬೇಯುತಿಹುದೆನ್ನಾತ್ಮ ಸೀಯುತಿಹುದಯ್ಯಯ್ಯೊ
ದಮ್ಮಯ್ಯ, ಲಕ್ಷ್ಮಣಾ, ಕಾಲ್ವಿಡಿವೆನೋಡು ನಡೆ ;
ರಕ್ಷಿಸೆನ್ನಿನಿಯನಂ, ಪ್ರಾಣಸರ್ವಸ್ವನಂ,
ಕೌಸಲೆಯ ಕಂದನಂ, ಕೋಸಲಾನಂದನಂ,
ನಿನ್ನಣ್ಣನಂ !” ಸಿಟ್ಟುರಿದುದೂರ್ಮಿಳೇಶನಿಗೆ.
“ಹೆಣ್ಣಿನ ಹಣೆಯ ಬರಹಮಿಂತುಟೆ ವಲಂ !” ಎನುತೆ
ತನ್ನೊಳಗೆ ತಾನಾಡಿಕೊಂಡು, ನುಡಿದನು ಮರಳಿ
ಸಂತೈಕೆಯಂ : “ದೇವಿ ರಾಮನಪ್ರಾಕೃತಂ ! ೩೪೦
ರಾಮನಕ್ಷಯ ಮಹಿಮನಾತಂಗೆ ಪೇಳೆಣೆಯೆ
ದೇವರ್ಕಳುಂ ? ದನುಜರಾವ ಹೊಯಿಕೈ ? ತಮ್ಮ
ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ !
ಸಾಲ್ಗುಮೀ ಕಳವಳಂ ; ಮಾಣ್ಬುದಾಶಂಕೆಯಂ ;
ಬಿಡಿಮನ್ನೆಯದ ಭೀತಿಯಂ.” ಎನುತ್ತಿರೆ ಮತ್ತೆ
ಚೀರ್ದುದಾ ನೀಳುದನಿ ಕೇಳ್ದೆರ್ದೆಸೀಳುವಂತೆ : “ಓ
ಲಕ್ಷ್ಮಣಾ ! ಓ ಲಕ್ಷ್ಮಣಾ ! ಓ ಲಕ್ಷ್ಮಣಾ ಓ !”
ಕೇಳ್ದದಂ ಲಕ್ಷ್ಮಣನೆ ಬೆಬ್ಬಳಿಸಿದನೆನಲ್ಕೆ
ಸೀತೆಗಿನ್ ಗತಿಯುಂಟೆ ? ಮತಿಯುಂಟೆ ? ಹಾಯೆನುತೆ
ಹೌಹಾರಿ ಹಮ್ಮೈಸಿದಳು ; ಹೆಪ್ಪುಗಟ್ಟಿದುದೊ ೩೫೦
ಮೆಯ್ ನೆತ್ತರೆನಲು ನಿಂದಳು ಮರಂಬಟ್ಟವೋಲ್ ;
ಮರಳಿ ಸಂಜ್ಞಾಲಬ್ಧೆಯಾಗಿಯುಂ, ಕಣ್ಕೆರಳಿ,
ವಿಕಟಮುಖಿಯಾಗಿ, ಭೂತಿನಿಯಂತೆ
ಸೌಮಿತ್ರಿಯಂ ನೋಡಿ : “ಭ್ರಾತೃಘಾತಕ ಪಾಪಿ,
ಸಾಯಿ, ನಡೆ, ತೊಲಗು ಕಣ್ಬೊಲದಿಂ ! ಸುಮಿತ್ರಾತ್ಮ
ಜಾತ ಪಾತಕವೊ ನೀಂ ! ಗೋಮುಖವ್ಯಾಘ್ರನೊಲ್
ಬಂದೆಯೆಮ್ಮೊಡಗೂಡಿ, ಪೂರ್ವಜನ್ಮದ ಪಾಪದಾ
ಕರ್ಮಪಾಕಂ ಬರ್ಪವೋಲ್ !” ಎನುತ್ತಿರೆ ಸೀತೆ,
ಮುಂದೆ ಮಾತಾಡಲೀಯದೆ ಸದೃಢಬುದ್ಧಿಯಿಂ
ರಾಮಾನುಜಂ : “ಸಾಲ್ಗುಮೀ ನಿಂದೆ, ರಾಜರ್ಷಿ ೩೬೦
ಜನಕಸುತೆ !” ಎನುತಾಕೆಯಂ ದುರದುರನೆ ನೋಡಿ
ನಿಡುಸುಯ್ಲವೊಯ್ಲಿಂದಮೇದುತಿರಲೆರ್ದೆಯಳ್ಳೆ :
“ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ
ನಾನಾತನಂ ! ಪೊಲ್ಲನುಡಿಗೆಡೆಗೊಟ್ಟರೀಗಳಾ
ಬಳಿಕ್ಕೆ ನೀಂ ನೋವನುಣ್ಬಿರಿ ……” “ಎಲವೊ ಲಕ್ಷ್ಮಣಾ,
ಎಳೆಯ ಮುಳ್ ಚುಚ್ಚಲ್ಕೆ ನೋವಲ್ತದುವೆ ಮೆಚ್ಚು ;
ಬೆಳೆದರಾ ಮುಳ್, ಅದರ ಕಚ್ಚು ಮುತ್ತಹುದೆ ಪೇಳ್ ?
ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ
ಬಯಸಿದಪುದಯ್ಯೊ ! …… ಮನದನ್ನ, ನಿನ್ನಂ ನಾನೆ
ಕೊಲಿಸಿದೆನೆ ? ತನ್ನೈದೆದಾಳಿಯಂ ತನ್ನ ಕಯ್ ೩೭೦
ಕಿತ್ತೆಸೆದುದಯ್ಯಯ್ಯೊ !” ಬಾಯ್ಬಡಿದುಕೊಳ್ವಳಂ
ಮತಿವಿಕಲೆಯಂ ಕಂಡು ತತ್ತರಿಸಿದುದು ಬುದ್ಧಿ
ಲಕ್ಷ್ಮಣಗೆ. ಹಾ ಬೇರ್ಗೊಯ್ದುದತ್ತಿಗೆಯ ಬಾಯ್ಗತ್ತಿ
ಊರ್ಮಿಳಾ ಪ್ರಿಯನ ನಿಶ್ಚಲತೆಯಂ ! “ಪೆಣ್ತನದ
ಕಲ್ತನಕ್ಕೆಲ್ಲೆ ಮೇಣೆಣೆಯುಂಟೆ ? – ಹೇ ದೇವಿ,
ಹೇ, ಮಾತೆ, ಮನ್ನಿಸೆನ್ನಂ. ರಾಮನಾಣೆಯಂ
ಮೀರಲಾರದೆ ಪೇಳ್ದೆನಾದೊಡಂ, ನಿಮ್ಮಾಣೆ !
ಹೋಗಿ ಬರುವೆನು ಬೇಗದಿಂ ; ನಡೆಯಿಮೆಲೆವನೆಗೆ !”
ಹಿಂದುಹಿಂದಕೆ ನೋಡುತೋಡಿದನ್. ಕಾಡಿನೊಳ್
ಮರೆಯಾಯ್ತು ಮೈದುನನ ಮೂರ್ತಿ. ಏಕಾಂತಮಂ ೩೮೦
ನೆನೆದು ತನು ಕಂಪಿಸಿತು ಜಾನಕಿಗೆ. ನಿಂದಳಾ
ಮುಳ್ಳುಬೇಲಿಯ ತಡಬೆಯಂ ನೆಮ್ಮಿ, ಶೂನ್ಯಮಂ
ತನ್ನ ಬಾಳಡವಿವಟ್ಟೆಯ ಪಾಳನೀಕ್ಷಿಸುವವೋಲ್ !
ವ್ಯೋಮಗಸ್ಯಂದನದೊಳಡಗಿ ರಥಿ ರಾವಣಂ
ನೋಡಿದನು ಮನ್ಮಥ ಸತಿಯ ರತಿಯ ಹೆಗಲೆಣೆಯ
ದಶರಥ ಸುತನ ಸತಿಯನೋರ್ವಳಂ. ಚಾತಕಂ
ಮಳೆಗೆ ಕಾತರಿಪಂತೆ, ಸೀತೆಯ ಚೆಲುವನೀಂಟೆ
ತವಕಿಸಿತಸುರನಕ್ಷಿಪಕ್ಷಿ. ಬನದಿಳೆಗಿಳಿಯೆ
ಹವಣಿಸಿದಮರವೈರಿ ದಶಶಿರಂಗೇನಾಯ್ತೊ ?
ತಾನೆಂದುಮನುಭವಿಸದೊಂದೇನೊ ಕಳವಳಂ
ಕ್ರಮಿಸಿದತ್ತಾಂತರ್ಯಮಂ : ಯತ್ನದಿಂದದಂ
ತುಳಿದೊತ್ತಿ, ನೆಲಕಿಳಿದನೊಂದು ಸುಟ್ಟುರೆಯಾಗಿ
ತಿರ್ರನೆ ಸುಳಿದು ಸುತ್ತಿ. ನೋಡಿದಳವನಿಜಾತೆ
ತನ್ನ ಕಣ್ಬೊಲದ ಕಾಡಿನೊಳಿದ್ದಕಿದ್ದಂತೆ
ತರಗೆಲೆಯ ಸದ್ದುಗೈದೆದ್ದನಿಲನೂರ್ಧ್ವಗಮ
ಸರ್ಪೋಪಮಾವರ್ತಮಂ. ಭೂತನರ್ತನಂ
ತಾನೆನಲ್ಕಾವರ್ತಿಸಿತು ಗಾಳಿ. ಕುಣಿದಿಲ್ಲಿ,
ನೆಗೆದಲ್ಲಿ, ಹಾರುತ್ತಮೋಡುತ್ತಮಾಡುತಂ,
ನಿಲುತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ,
ಮತ್ತೊಮ್ಮೆ ನಡುಬಳುಕಿ ನಟಿಯಂತೆವೋಲಾಡಿ, ೪೦೦
ಒಮ್ಮೆ ತುಂಬುರುಗೊಳ್ಳಿಯೆನೆ ಚಿಮ್ಮಿ, ಮತ್ತಂತೆ
ಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ
ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ,
ಸೀತೆಯೊಡಲಿನ ನಾಳನಾಳದಲಿ ಹೆದರಿಕೆಯ
ಚಳಿ ಹರಿಯುವಂತೆ. “ಏನಿದು ದುರ್ದಿನವೊ ನನಗೆ !”
ಎನುತೆನುತೆ ಜನಕಸುತೆ ಎಲೆವನೆಯನೊಳವೋಗೆ
ಬಾಗಿಲಿಗೆ ನಡೆದಳಾಗಳೆ ಪಜ್ಜೆಸಪ್ಪುಳಂ
ಕೇಳ್ದವೋಲಾಗಿ ತಿರುಗಿದಳಯ್ಯೊ ತನ್ನವರೆ
ಬಂದರೆಂಬೊಂದತಿಯ ಹರ್ಷಧೃತಿಯಿಂದೆ : ಹಾ ೪೧೦
ಕಂಡಳಿನ್ನೊರ್ವನಂ, ಸುಪವಿತ್ರವೇಷನಂ,
ಮುನಿವರ್ಯನಾ !
ಜಟಾಧಾರಿಯಂ ಕಾವಿಯಂ
ಕಂಡೊಡನೆ ಮನಕೆ ನೆಮ್ಮದಿಯಾಗಿ, ಚಂದ್ರಮುಖಿ
ನಿಂತು ಸಂವೀಕ್ಷಿಸಿದಳಾ ತನ್ನೆಡೆಗೆ ಬರ್ಪ
ಸಂನ್ಯಾಸಿಯಂ. ಮತ್ತಮೊಡನೆಯೆ ಭಯಾಶಂಕೆ
ತಗುಳಿದತ್ತಾತ್ಮಕ್ಕೆ ; ಗರ್ವಮಯಮಾ ನಡೆಗೆ
ಯತಿ ಗತಿ ವಿನಯಮಿಲ್ಲ ; ಮುನಿಯ ನಿಲವಿನ ಭಂಗಿ ತಾಂ
ನೃಪದರ್ಪ ಸಂಗಿ ; ಕೊಡೆಯುಂ ಕಮಂಡಲುಮೇಕೊ
ಪರಿಚಿತ ಪದಾರ್ಥಂಗಳಂತಿಲ್ಲ ; ಅಪರಿಚಿತನ್
ಆ ಮುನಿ ಜನಸ್ಥಾನದವನಲ್ಲ ; ನೋಡುತಿರೆ
ಬಳಿಸಾರ್ದುನುಣುಗೋಲ್ಗಳಂ ಕೆಲಕ್ಕೊತ್ತರಿಸಿ
ದಾಂಟಿದನೊಳಗೆ ಬೇಲಿಯಂ. ಮಂತ್ರಘೋಷಮಂ
ತೊಡಗಿದನ್. ಗೀರ್ವಾಣಭಾಷೆಯೊಳೆ ಸ್ವಸ್ತಿಯಂ
ವಾಚಿಸಿದನೋಂಕಾರವೆರಸಿ. ಬಕಧ್ಯಾನಮಂ
ನಿಂದಿಪೋಲಲ್ಲೆ ನಿಂದನು, ಬಗೆಯ ಬಾವಿಯಂ
ರೆಪ್ಪೆವುಲ್ಲಿಂದಡಕಿ ಮುಚ್ಚಿ. – ಏನಿದು ಕಮ್ಪು
ಯತಿಗುಚಿತಮಲ್ಲದುದು ? ಎಂದು ಸಂಶಯಭೀತೆ
ಸುತ್ತೆತ್ತಲುಂ ನೋಡಿ ಪೆಳ್ಪಳಿಸುತಿರೆ ಸೀತೆ
ಕಣ್ದೆರೆದನಾ ರಸಿಕ ರಾಕ್ಷಸಂ. ಪರವಧೂ
ಪ್ರೇಮಿ ಆ ಚೆಲ್ವಿಯಂ ನೋಡಿದನು, ನೋಟದಿಂ
ಬೇಟಮಂ ಸಾರ್ವವೋಲ್, ಪೀರ್ವವೋಲ್. ಆ ಕಣ್ಗೆ ೪೩೦
ನಡನಡನೆ ನಡುಗಿ, ಮರವಟ್ಟಂತೆ, ನಟ್ಟಂತೆ,
ತಾಂ ನಟ್ಟು ನಡಪಿದಾ ಬಳ್ಳಿಯನಿರದೆ ನೆಮ್ಮಿ
ತಳ್ಕಯಿಸಿ ನಿಂದಳು ಲತಾಂಗಿ.
ನಿಂತುದು ಗಾಳಿ
ಬೆದರಿ, ಗೋದಾವರಿಯ ಹೊನಲ ನಡೆ ಹೆಪ್ಪಾಯ್ತು.
ಚಲನೆಗಳನುಡುಗಿದುವು ಮರಬಳ್ಳಿಗಳ್. ಖಗಗಳಿಗೆ
ಮಳ್ಗಿದತ್ತಿಂಚರಂ. ಪರ್ವತಾರಣ್ಯಗಳ್
ಸ್ತಬ್ಧಮಾದುವು ರೌದ್ರಮಾ ದೈತ್ಯ ದೃಷ್ಟಿಯ ಭೀತಿ
ಬಡಿದಂತೆ. ನಿಂದಳಯ್ ಪ್ರಕೃತಿ ತಾಂ ಜನಕಜಾ
ಹೃತ್ಕೃತಿಯೆನಲ್ ಪ್ರತಿಯೆನಲ್ ಚೇತನಂಗೆಟ್ಟು !
ಬೆದರಿದೋಲಿದೆ ಭದ್ರೆ, ನಿನ್ನಂಗಮುದ್ರೆ. ಭಯಂ ೪೪೦
ನಿಷ್ಕಾರಣಂ. ಮಂಗಳಾಂಗಿ, (ನವನೀತ ನವ
ಕೋಮಲಾಂಗಿಯೆನಲ್ಕೆ ನನ್ನುಡೆಯದೊಂದೆ ತಡೆ !)
ನಿನ್ನವೋಲತನು ಮೋಹನ ನಿತಂಬಿನಿಯಿಂತು
ನಿರ್ಜನಾಟವಿಯೊಳೆಂತೊರ್ವಳೆಯೆ ಬರ್ದುಕುತಿಹೆ ?
ರಕ್ಷೆಯಿಲ್ಲವೆ ನಿನಗೆ ? ……” ಕಪಟವನರಿತು ಸುದತಿ
“ಅಕಟಕಟ ಕೆಟ್ಟೆನಿವನಾರೊ ಮಾಯಾವಿ ಯತಿ !
ಕೆಟ್ಟುದನೆಣಿಸಿ ಬಂದಿಹನು ದಿಟಂ. ಪತಿಯೊಡನೆ
ಮೈದುನಂ ಬರ್ಪನ್ನೆವರಮೀತನಂ ನುಡಿಯ
ನೆವವೊಡ್ಡಿ ತಡೆದಪೆನದುವೆ ನೀತಿ !” ಬಗೆದಿಂತು
ನಗೆಗೂಡಿ ನುಡಿದೋರಿದಳು, ರಾವಣನ ಮನಕೆ
ರಾಗಮುರ್ಕನುರಾಗದೋಕುಳಿಯೆರಚುವಂತೆ.
“ಸಂಕಟದ ಸಮಯಕ್ಕೆ ಬಂಧುವೋಲೈತಂದೆ,
ಯತಿವರ್ಯ. ರಾಜರ್ಷಿ ಜನಕಂಗೆ ಕುಮಾರಿಯಂ ;
ಸೊಸೆ ದಶರಥಂಗೆ.” ಎಂದಿಂತು ಮೊದಲಾಗಿ ತಾಂ
ಬನಕೆ ಬಂದಾ ಕಥೆಯನಾದ್ಯಂತವಾಗೊರೆಯ
ತೊಡಗಿದಳು. ನಡುನಡುವೆಯಡಿಗಡಿಗೆ ಕಣ್ಬೆರ್ಚಿ
ಹಾದಿನೋಡುತ್ತಿರ್ದಳಯ್ ಕಾಡುದಾರಿಯಂ,
ಕೈತವಕ್ಕುಚಿತವಲ್ಲದವೋಲೆ, ಕವಡರಿಯದಾ
ಮುಗುದೆ ಬಾಲೆ. ತಿಳಿದದಂ ಮುಗ್ಧೆಯಾ ತಂತ್ರಮಂ
ಮುಗುಳುನಗೆ ನಕ್ಕನು ವಿದಗ್ಧ ಲಂಕೇಶ್ವರಂ. ೪೬೦
ಕಾಲವಂಚನ ಚಂಚಲಾಕೇಕರಾಕಕ್ಷಿಯಂ
ಕುರಿತೆಂದನಿಂತು : “ಏಣಾಕ್ಷಿ, ನಿನ್ನನ್ನರಂ
ವಂಚಿಪುದುಚಿತಮಲ್ತು. ನಿನಗಮೀ ಕೀಲಣೆ
ತಗದು, ರಮಣಿ. ನಾಂ ಲಂಕೆಗಧಿಪಂ ; ದಶಗ್ರೀವ
ಬಿರುದುವೊತ್ತಂ ; ನೆಗಳ್ದ ರಾವಣಂ ; ದಶರಥನ
ಸುತನಿಗಿಂ ಮೊದಲೆ ನಿನ್ನಂ ಮೆಚ್ಚಿ ಬಂದವಂ !
ಬಿಲ್ಮುರಿವ ಬಲ್ಮೆಯಂ ಪಡೆದು ಬರ್ಪನಿತರೊಳೆ
ನಿನ್ನ ಪಿತೃವಿಂದೆ ವಂಚಿತನಾದೆನಲ್ಲದಿರೆ,
ಜನಕಸುತೆ, ನೀನಿಂದರಸಿಯೆನಗೆ ! ನನ್ನಳಂ,
ಮೋಸದಿಂ ರಾಮನೊಯ್ದೆನ್ನಾಕೆಯಂ, ಮರಳಿ ೪೭೦
ನಾನುಯ್ಯಲೈತಂದಿಹೆನು, ಸೀತೆ. ಭಿಕ್ಷುಕಂ
ವೇಷದೊಲುಮಾವೇಶದೊಳುಮಾಂ ; ನಿತಂಬಿನಿಯೆ,
ಕೃಪೆಗೈದೆನಗೆ ಲಂಕೆಗೆನ್ನೊಡನೆ ಬಾ. ಮರೆವೆ ನೀಂ
ರಾಮನಂ ಮರುದಿನಮೆ !”
ಇಂತೆಂದು ದಶಶಿರಂ
ತೋರಿದನು ಲೋಕವೈಭವಮೆಲ್ಲ ಮೆಯ್‌ವೊತ್ತ
ನಿಜರೂಪಮಂ. ಪೇಸಿ ಮೊಗದಿರುಹಿದಳು ಯುವತಿ.
ಭೀತಿ ಮರೆಯಾಯಿತುರಿದುದು ಕೋಪನಜ್ವಾಲೆ
ಪಾರ್ಥಿವಾಂಗನೆಗೆ :
“ಮಾಣ್, ಆಡದಿರಸಹ್ಯಮಂ,
ನಿಶಾಚರ ಕುಲೇಶ್ವರ. ಸೊಲ್ಲದಿರಧರ್ಮಮಂ,
ಕೋಣಪ ಕುಲಕುಠಾರ ಸ್ವಾನಮೈರಾವತಕೆ ೪೮೦
ಮಲೆವವೋಲೆನ್ನ ಮನದನ್ನಂಗೆ ಕರುಬುತಿಹೆ
ನೀನ್. ಲೇಪಿಸಿದ ಜೇನಿನಾಸೆಗಸಿಧಾರೆಯಂ
ನೆಕ್ಕಲೆಳಸುತಿಹೆ. ಕಾಮಿಸಿದೆ ನರಿ ಕೇಸರಿಯ
ಪೆಣ್ಗೆ ; ನವಿಲಿನ ಸಂಗಸುಖಕೆಳಸುತಿದೆ ಹದ್ದು.
ಪೊನ್ನೆನ್ನ ಮನದನ್ನನಯ್ ; ನೀನೊ ಕರ್ಬ್ಬುನಂ.
ಶ್ರೀಗಂಧದನುಲೇಪನಕ್ಕೆಣೆ ರಘೂದ್ವಹಂ ;
ಹೊಲೆಗೆಸರಿಗೆಣೆ ನೀನ್ !”
ತಿರಸ್ಕೃತಿಯ ಕೈದುವಂ
ಸಮ್ಮಾರ್ಜನಂಗೆಯ್ಯುತಿರ್ದೊಡಂ ನಡನಡನೆ
ನಡುಗುತಿರ್ದಾ ಬೆರ್ಚ್ಚುಗಣ್ಣಬಲೆಯಂ ಹುಬ್ಬು
ಗಂಟಿಕ್ಕಿ ನೋಡಿದನ್ ಸಂರಕ್ತಲೋಚನ ೪೯೦
ನಿಶಾಚರೇಂದ್ರಂ : “ಮಾಣ್, ಎಲೌ ಮುಗ್ಧೆ, ಸಾಲ್ಗುಮಾ
ನಿನ್ನ ಉಪಮಾ ಪ್ರತಾಪಂ ! ಪೆಣ್ಗೆ ಬೈಗುಳಮಲ್ತೆ
ಪೇಳ್ ವಿಕ್ರಮಂ ? ಚುಂಬನಕ್ಕೆಣೆ ಉಪಾಲಂಭಮುಂ -
ಪ್ರಣಯಪ್ರಸಂಗದೊಳೆನಲ್ಕೆ, ವರವರ್ಣಿನಿಯೆ,
ಮುನಿಯೆನಾಂ ನಿನ್ನ ಕೊರಳಿನ ಸುಧೆಯ ಗರಳಕ್ಕೆ.
ನಲ್ಲೆಯೊಪ್ಪಿಗೆ ‘ಒಲ್ಲೆ’ – ಎಂಬ ನಾಣ್ಣುಡಿಯಂತೆ,
ನಿನ್ನ ತುಟಿ ನಿನ್ನೆರ್ದೆಯನಾಡುತಿರ್ಪುದು, ನಟಿಸಿ
ನಿಂದೆಯಂ. ಬೇಟಕೆ ಬಲಾತ್ಕಾರಮೋರೊರ್ಮೆ
ಇಷ್ಟಸತ್ಕಾರಮೆಂಬರೆಲೆ ಯೌವಲಾವಣ್ಯೆ.
ವಂದಿಸುವೆ ನೀನೆನ್ನನೀ ದಿನದ ಕೃತಿಗಾಗಿ ೫೦೦
ಮುಂದೆ, ಬಾ, ನನ್ನ ಲಂಕಾಲಕ್ಷ್ಮಿ, ಬಾ !” ಎನುತೆ
ಪಾಪಕೆ ಲಸತ್ಕೃತಿಯ ಲೇಪಮಂ ಬಳಿಯುತಾ
ಮಾಯಾವಿ ಚಪ್ಪಳಿಸಿದನ್ ಕೈಗೆ ಕಯ್ ತಟ್ಟಿ ! ಪೇಳ್
ಏನೆಂಬೆನದ್ಭುತಂ? ಕೈಕುಟ್ಟಿದುದೆ ತಡಂ
ಪುಟ್ಟಿದತ್ತೊಂದು ಮಂಜಿನ ಮೋಡಮೆತ್ತಲುಂ
ದಟ್ಟೈಸಿ. ತೇಲುಗಣ್ಣಾದುದಾ ಕೋಮಲೆಗೆ.
ಕಾಣದೇನೊಂದುಮಂ ತಬ್ಬಿದಳು ಬೆಬ್ಬಳಿಸಿ
ಪರ್ಣಶಾಲೆಯ ಲತಾಭಗಿನಿಯಂ ! ಹೇ ಹತಭಾಗ್ಯೆ,
ಲಕ್ಷ್ಮಣ ಮಹಾಬಾಹು ರಕ್ಷೆಯಂ ನೂಂಕಿದಾ
ನಿನಗೆ ಪೇಳೆಂತು ರಕ್ಷಣೆ ಬಳ್ಳಿತೋಳಯ್ಯೊ ೫೧೦
ಕೈಲಾಸಮಂ ನೆಗಹಿ ತೂಗಿತೊನೆದಾ ಬಾಹು
ರಾಹುವೋಲೆಳೆಯೆ ? ಪರಪರಪರನೆ ಪರಿದುವಾ
ಮಾಡನಪ್ಪಿರ್ದ ಬಳ್ಳಿಯ ಕೈಗಳೊಲ್ಮೆಯಂ
ನಲ್ಮೆಯಪ್ಪುಗೆಯಿಂದೆ ಬಿರುಬಿಂದಗಲ್ಚುವೋಲ್.
ಬಳ್ಳಿಯಪ್ಪಿದ ಬಳ್ಳಿಯಂ ಮತ್ತ ವಾರಣಂ
ಸೊಂಡಿಲಿಂದೆಳೆವವೋಲ್ ಅಲರ್ವಳ್ಳಿಯಂ ವೆರಸಿ
ಮತ್ತಕಾಶಿನಿಯನೆಳೆದುನ್ಮತ್ತ ರಾವಣಂ
ನೆಗೆದನಂಬರಕೆ. ಬಿಳ್ದುದು ಬಳ್ಳಿಯಂಗಳಕೆ,
ಮುಳುವೇಲಿಯುಂ ಬರಂ ನೀಳ್ದು !
“ಓ ಲಕ್ಷ್ಮಣಾ !
ಲಕ್ಷ್ಮಣಾ ! ಲಕ್ಷ್ಮಣಾ ! ಲಕ್ಷ್ಮಣಾ ಓ !” ಎಂದೆಂದು ೫೨೦
ಬಗ್ಗನಿಂ ಪಿಡಿಗೊಂಡೆರಳೆವೆಣ್ಣೊರಲ್‌ವಂತೆವೋಲ್
ಹೊಮ್ಮಿತುಕ್ಕಿತು ಹರಿದು ಹಬ್ಬಿತಾಕ್ರಂದನಂ
ದೇವಿಯ ಕೊರಲ್‌ಬುಗ್ಗೆಯಿಂ ನೆತ್ತರೋಲಂತೆ
ಚಿಮ್ಮಿ. ಲೆಕ್ಕಿಪನೆ ಲಂಕೇಶ್ವರಂ ? ಝಗಝಗಿಪ
ಕೆಂಡದುರಿಚೆಲ್ವಿಗೆ ಮರುಳುಗೊಳುತ್ತದನೋತು
ಸೆರಗಿನೊಳಿರುಂಕಿ ಕದ್ದೋಡುವಣುಗಿಯ ತೆರದಿ
ಹಾರಿದನು ಬಾನ್ದೇರನೇರಿ. ಬಿಸಿಲೆಸೆದತ್ತು
ಪಂಚವಟಿ ಧಾತ್ರಿಯಂ ಪರ್ಣಕುಟಿ ಶೂನ್ಯಮಂ
ಗೋದಾವರಿಯ ತೀರ್ಥವೈಶಾಲ್ಯಮಂ ಮರಳಿ
ಬೆಳಗಿ.
ಕೇಳ್ದಳ್ ವಿಪಿನವನಿತೆ ; ಖಳ ಕಾರ್ಯಮಂ ೫೩೦
ಕಂಡು ಹಮ್ಮೈಸಿದಳ್ ; ಹೆದರಿ ದಿಗ್ಭ್ರಮೆಯಾಗಿ
ಕೂಗಿದಳದ್ರಿದೇವನಂ. ಪರ್ವತೇಂದ್ರನುಂ
ತಲ್ಲಣಿಸಿ ಬೊಬ್ಬೆಯಿಟ್ಟಬ್ಬರಿಸಿದನ್ ; ಕೂಗಿ
ಕರೆದನಾಕಾಶಮನಖಿಲಲೋಕಸಾಕ್ಷಿಯಂ.
ಕೂಗಿದುವು ಕಾಡು ಮಲೆ ಬಾನೆಲ್ಲಮೊಕ್ಕೊರಲ್
ಓ ಲಕ್ಷ್ಮಣಾ ಲಕ್ಷ್ಮಣಾ ಲಕ್ಷ್ಮಣಾ ಓಒ
ಓ ಎಂದು ! ಕೇಳಿದನು ದೂರದ ಮರದ ಮಂಚದೊಳ್
ಹಗಲುನಿದ್ದೆಯೊಳಿದ್ದುಮೆದ್ದಾ ಜಟಾಯು ಆ
ಪ್ರಕೃತಿ ರೋದನ ತೂರ್ಯಮಂ. ಕುಳಿತ ಪೆರ್ಮರಂ
ನಡುಗೆ. ಪಕ್ಷಧ್ವನಿಗೆ ಗಿರಿಗಹ್ವರಂ ಗುಡುಗೆ,
ಚೀರ್ದನಿಗೆ ಮಾರ್ದನಿಸೆ ಪುಷ್ಪಕಾಭ್ಯಂತರಂ ೫೪೦
ಹಾರಿದನು ಭೀಮಚಂಚೂಪುಟಂ ಭಯಂಕರಂ :
ಖಗರಥವನರೆಯಟ್ಟಿದನ್ ಭೀಷಣಾಭೀಳ ಖರ
ನಖ ಕಲಿ ಜಟಾಯು ! ಬಿರುಗಾಳಿಯುರುಬೇಗದಿಂ
ಬೆಂಬತ್ತಿ, ಮುಂಚುವ ವಿಮಾನಮಂ ಮುಸಲಸಮ
ಪದಗದಾಘಾತದಿಂದಪ್ಪಳಿಸಿದನ್, ರಪ್ಪ
ರಪ್ಪನೆ, ಒರ್ಮೆ ಇರ್ಮೆ : ಒದೆ ಬೀಳಲೊರಲಿದುದೊ
ಪುಷ್ಪಕಮೆನಲ್ಕೆ ಘೈಲೆಂದುದೊರ್ಮೊದಲುಲಿದ
ಲಘುಘಂಟಿಕಾ ಶ್ರೇಣಿ. ಎರಗಿದುರುಬೆಗೆ ತೇರ್
ತತ್ತರಿಸಿ ಉಲ್ಲೋಲಿಸಿತು ; ಇಳೆಗುರುಳಿತೆನಲ್ ೫೫೦
ಕೆಳಕೆಳಕೆಳಗೆ ಬೀಳುತೊಯ್ಯನೆಯೆ ನಿತ್ತರಿಸಿ,
ಮತ್ತೆ ರೊಯ್ಯನೆ ರಯದಿನೇರ್ದುದು ವಿಯತ್ತಳಕೆ
ಸರಳ ಸೂಟಿಯಲಿ. ಹೊರಸಿಗೆ ಡೇಗೆಯೆರಗಲ್ಕೆ
ಪರಿತಿಪ್ಪುಳುದುರ್ವವೋಲುದುರಿತು ವಿಮಾನದಿಂ
ಕಲೆಯ ಕಾಳಸೆ ಕೆಟ್ಟುಕೆದರಿ !
ಜನಕಾತ್ಮಜೆಗೆ
ಹರಣ ಮರಳಿತು ಹೃದಯವರಳಿ, ದೈತ್ಯೇಂದ್ರಂಗೆ
ಬೆಕ್ಕಸಂ ಮೂಡಿ ಕೆರಳಿದನೊಡನೆ ಕಟಿಯಸಿಗೆ
ಕೈ ತುಡುಕಿ ಬೀಸಿದನ್. ತಪ್ಪಿ ಚಿಮ್ಮಿ ಜಟಾಯು
ಸಿಡಿದನು ಕೆಲಕ್ಕೆ. ಮತ್ತೆರಗಿದನು ನಖಗಳಿಂ
ರಕ್ಕಸನ ಮಂಡೆಯಂ ಜರ್ಕ್ಕಿ. ರತ್ನವ್ರಾತ ೫೬೦
ರಾಜಿತ ಪುಲಸ್ತ್ಯಜ ಕೀರೀಟಸ್ಥ ಮಣಿಗಣಂ
ಸಿಡಿದುರುಳ್ದುವು ಕಿಡಿಗಳಂ ಕಾರಿ. ದಾನವನ
ದೀರ್ಘ ಸುಂದರ ನೀಲ ದೇಹದಿಂದೊಸರ್ದತ್ತು
ಕೆನ್ನೆತ್ತರೊಳ್ಕು. ಸಳವಂ ಕುಟುರವಕ್ಕಿಯಂ
ಬಿಡದಿರದೆ ಬೆಂಬತ್ತುತೆಳ್ಪಟ್ಟುತೊದೆವಂತೆ,
ಮತ್ತೆ ಮತ್ತಪ್ಪಳಿಸಿದನು ಆ ನಭೋನೌಕೆ,
ಪಕ್ಷ ಸಂಜಾತ ಝಂಝಾವಾತ ಗರ್ತಕ್ಕೆ
ಸಿಲ್ಕಿ, ತಿರ್ರನೆ ಪುರ್ಚ್ಚುತಿರುಗಂ ತಿರುಗುವಂತೆ.
ತಲೆಗೆದರೆ, ತೊಡವುಗಳುದುರೆ, ಪರಿಯಲುಟ್ಟುಡುಗೆ
“ಲಘುವೆಣಿಸಿ ಗುರುವಾಯ್ತಲಾ ! ಹಾಳಿದೆಲ್ಲಿಯ ಹದ್ದು ? ೫೭೦
ಕೊಲ್ವೆನೊರ್ಕಡಿತದಿಂ”ದೆನುತೆ, ವಾಸಿಯನೊದರಿ,
ರಾಮನ ಸುವಾಸಿನಿಯನೊರ್ಕಯ್ಯೊಳವುಂಚಿಟ್ಟು,
ಘೋರ ವಿಷ ವಜ್ರಾಸಿಯಂ ಕೊಂಡು ಖೇಚರಂ
ಪಾಯ್ದನ್ ವಿಹಂಗೇಶನಂ. ಬೆದರಿದಳ್ ಸೀತೆ ;
ಚೀತ್ಕರಿಸಿದಳ್ ಭೀತೆ ! “ರಕ್ಷೆಯಾದಳೆ ದೇವಿ
ರಾಕ್ಷಸಗೆ ? ಹಾ” ಎನುತೆ ಸಂಪಾತಿಯವರಜಂ
ಸಡಿಲಿಸಿರೆ ಸಿಡಿಲಂದದುಗುರು ಕೊಕ್ಕಿನ ಮಿಳ್ತುಗಯ್
ವೊಯ್ಲನಯ್ಯಯ್ಯೊ, ಕಾಣ್, ಆ ಕತ್ತರಿಸಿದುದು ಕತ್ತಿ
ಎರಂಕೆಯಂ ! ಕಣ್ಮುಚ್ಚಿ ಗೋಳಿಡುತ್ತಿರ್ದಳಾ
ಜಾನಕಿಯುಮಾಲಿಸಿದಳಾ ಬಿದ್ದ ಸದ್ದನೆನೆ ೫೮೦
ಮರಂ ಮುರಿದು, ಪಳು ನಡುನಡುಗಿ, ಕಾಡುಗೋಳಾಗಿ
ಬಿದ್ದನು ಜಟಾಯು, ರಾವಣನಾಯು ಬೀಳ್ವಂತೆ !
ಇತ್ತಲೋಡಿತು ಪುಷ್ಪಕಂ. ಅತ್ತಲಾ ಸೌಮಿತ್ರಿ
ಓಡಿದನರಸಿ ಜನಕಜಾನಾಥನಂ ಕೂಗಿ
ಕರೆದು. ಮಲೆಯಿಂದಲೆದು ಮಲೆಗೆ. ಪೊಳ್ತೇರಲೊಡಮ್
ಅತ್ತಿಗೆಯ ಕ್ಷೇಮಕ್ಕೆ ಪಿಂತಿರುಗಲೆಳಸಿಯುಂ
ಅಣ್ಣನಂ ಕಾಣದೆಯೆ ಮರಳಲಂಜುತೆ, ನಿಂತು
ನಿಂತು ಓ ಲಕ್ಷ್ಮಣಾ ಕೊರಲೊರಲ್ ಕೇಳ್ದೆಡೆಯನ್
ಊಹೆಯಿಂ ಗೊತ್ತುಹಚ್ಚುತೆ, ಮತ್ತೆ ಮುಂದೋಡಿ
ಪರಿದು, ಶಂಕಿಸಿ ನಿಂದು ಕರೆದು, ಮನದೊಳಗೇನೊ ೫೯೦
ಮಹದ್‌ಭೀತಿ ಚರಿಸೆ, ಕಂಪಿತ ಗಾತ್ರನೂರ್ಮಿಳೆಯ
ಕಾನ್ತನುಕ್ಕುವ ದುಕ್ಕದಿಂದೆ ‘ಓ ಲಕ್ಷ್ಮಣಾ !’
ಎಂಬ ಪೆಸರಿಂ ತಾನೆ ಶಪಿಸಿಕೊಂಡನು, ತನ್ನ
ಹಣೆಯ ಬರಹವ ಬಯ್ವ ತೆರದಿಂದೆ ! ಅನಿತರೊಳ್
ತನ್ನ ದನಿಯೆಂದೆ ಸೌಮಿತ್ರಿಯಂ ಕರೆದೊರಲಿ
ಮಾರೀಚನಳಿಯೆ, ಗತಿಯೇನಿದಂ ಕೇಳ್ದೊಡಾ
ಲಲನೆ ಲಕ್ಷ್ಮಣರೆಂದು ರಾಕ್ಷಸ ಮಾಯೆಗಳುಕಿ,
ಕೇಡಿಂಗೆ ಕಳವಳಿಸಿ, ಕೇಡಡಸುವಾ ಮೊದಲೆ
ಪರ್ಣಶಾಲೆಗೆ ಹೋಹೆನೆಂದಾಸರಂ ಅಣಂ
ಲೆಕ್ಕಿಸದೆ ಓಡೋಡಿ ಬರುತಿರ್ದ ರಾಘವಂ ೬೦೦
ತಮ್ಮನ ಕರೆವ ದನಿಯನಾಲಿಸಿದನು : “ಅಕ್ಕಟಾ
ಕೇಡಾಯಿತಯ್ಯಯ್ಯೊ ! ಕೋಳುಹೋದಳೆ ಲಲನೆ
ಮೋಸವೋದನೆ ಮಹಾಮತಿ ಊರ್ಮಿಳೇಶನುಂ ?”
ಎನುತೈದುತಿರೆ, ಮರಳಿ ಕೇಳ್ದುದೇನೆಂಬೆನಾ
ದುಶ್ಶಕುನದೋಲಕ್ಷ್ಮಣಂ ! ಮತ್ತಿದೇನಿದು ಮಾಯೆ ?
ನೋಳ್ಪೆನೆಂದೋಡಿದನ್, ಓ ಲಕ್ಷ್ಮಣಾ ಎಂದು
ಕೂಗಿದನು ತಮ್ಮನಂ. ಓಕೊಂಡನಾತನುಂ
ಪಳುಗಾಡಾಳೋಡೋಡಿ ಬರುತೆ. “ಓ ಲಕ್ಷ್ಮಣಾ.
ಕೇಡಾಯ್ತಲಾ ! ದೇವಿಯೊರ್ವಳಂ ಬಿಟ್ಟೇಕೆ
ಬಂದೆ ? ಕೊರಳಂ ಕೊಯ್ದೆ ! ಹಾ ಕೊಂದೆ ನೀ ಕೊಂದೆ ! ೬೧೦
ಪಿಂತಿರುಗು ; ನಡೆ ಬೇಗಮೆಲೆವನೆಗೆ ! ಶಿವ ಶಿವಾ
ಸೂರೆವೋದೆವೊ ನಾಂ ನಿಶಾಚರರ ಕೈತವಕೆ !”
ಶೀಘ್ರ ಸಂಕ್ಷೇಪದಿಂ ತಂತಮ್ಮ ನಡೆದುದಂ
ಮಾತಾಡುತಿರ್ವರುಂ ಧಾವಿಸಿದರತಿಜವದಿ
ಪಂಚವಟಿ ಪರ್ಣಕುಟಿಗೆ :
“ಕೂಗಿದುದು ನೀನಲ್ತೆ ?”
“ಸತ್ತನಾ ರಾಕ್ಷಸಂ !”
“ಅದು ನಿಶಾಚರ ಮಾಯೆ
ಎಂದು ನಾನೆಂತೆಂತು ಪೇಳ್ದೊಡಂ…..”
“ಅಂತಾಡಿ
ನಿನ್ನನೆಳ್ಬಿದಳೆ ?”
“ಅಲ್ಲದಾನಿಂತು ಬಂದಪೆನೆ ?”
“ಎಂತಾದೊಡಂ ತಪ್ಪಿ ನಡೆದೆ. ಪೆಣ್ಣೆಂದುದಕೆ
ಮುನಿದೆ ; ನನ್ನಾಣೆಯಂ ಮೀರ್ದೆ.”
“ಅಹುದಣ್ಣಯ್ಯ. ೬೨೦
ತಪ್ಪಾಯ್ತು. ಬಗೆಯಂ ಕದಡಿತತ್ತಿಗೆಯ ನುಡಿಯ
ಕೂರ್ಪು.”
“ಕೌಸಲ್ಯೆಯಾಶೀರ್ವಾದಮಿರ್ಕೆಮಗೆ !
ಸತಿಗೆ ಕೇಡಾಗದಿರ್ಕೆ !”
“ಅಣ್ಣಾ, ಜಟಾಯುವಿರೆ
ರಕ್ಷೆಗೆಮಗೇವುದಯ್ ಭೀತಿ ?”
“ಆದೊಡಮೇಕೊ,
ಸೌಮಿತ್ರಿ, ನಾನೆಂದುಮನುಭವಿಸದೊಂದಳ್ಕು
ಕರುಳ ಕಿಮುಳ್ಚುತಿದೆ !”
“ನನಗುಮಂತೆಯೆ ಭಯಂ !”
“ಸದ್ದದೇನದು, ತಮ್ಮ ?”
“ಭೋರ್ಗರೆಯುತಿದೆ ದೂರ
ಬಿರುಗಾಳಿ !”
“ಚೀತ್ಕಾರಮಾಯ್ತಲ್ತೆ ?”
“ಅಲ್ತಲ್ತು,
ಕೊಂಬೆಗುಜ್ಜಿತು ಕೊಂಬೆ !”
“ಆರೊ ಕರೆದಂತಾಯ್ತು !”
“ಮಂಗಟ್ಟೆವಕ್ಕಿ ಕೂಗಿತು ; ಬೇರೆಯೇನಲ್ಲಯ್ !” ೬೩೦
“ಆಗಳಿರದಾತಪಂ ಈಗಳೆಂತಳುರುತಿದೆ !
ಏಂ ಸೇದೆ !”
“ಪಾಳ್ದಿನಂ !”
“ಊರ್ಗೆ ಮರಳುವ ದಿನಮೆ
ಏಂ ಕಷ್ಟಮೊದಗಿತಯ್ !”….
“ಬಳಿಸಾರ್ದುದಾಶ್ರಮಂ !”
“ಪೆರ್ಚುತಿಹುದೆನ್ನೆರ್ದೆಯ ಕಳವಳಂ !”….
“ಅದೊ ಅಲ್ಲಿ !
ಶಾಂತಿಯಿಂದಿಹುದೆಂತು ಪರ್ಣಕುಟಿ ! ಸಾಲ್ಗುಮಾ
ದುಃಸ್ವಪ್ನಮ್ ; ಇನ್ನೆಂದುಮುಲ್ಲಂಘಿಸೆನ್ ನಿನ್ನ
ಕಟ್ಟಾಣೆಯಂ ! ಇದುವೆ ಮೊದಲ್ ; ಇದುವೆ ಕೊನೆ !”
“ದೇವಿ
ಕಾಣಿಸಳೆ !”
“ಒಳಗಿರಲ್ ಪೇಳ್ದು ಬಂದೆನ್.”
“ಅದೇಕೆ ? …..”
“ಏನು ?”
“ನೋಡಲ್ಲಿ ಆ ಬಳ್ಳಿ !”
ರಾಘವನಿಂತು
ಕಣ್‌ಪೆಳರಿ ಪೇಳೆ, ಲಕ್ಷ್ಮಣನತ್ತ ನೋಡಲಾ ೬೪೦
ಕಾಣಿಸಿತು ಪರಿಗೊಂಡ ಪರ್ಣಶಾಲೆಯ ಲತಾ
ಭಗಿನಿ ! ಪರಿದೋಡಿದರ್, ಕಂಡರುಣುಗೋಲನದೊ
ತೆರೆದುದಂ ! ದಾಂಟುತುಬ್ಬೇಗದಿಂ ತಡಬೆಯಂ,
ಕಂಡರಂಗಳದುದ್ದಮಾ ಬೇಲಿಯನ್ನೆಗಂ
ದಿಂಡುರುಳಿ, ಪರಿದೆಲೆ ತರಂಟಾಗಿ, ನಿಡುಚಾಚಿ
ಕೆಡೆದಿರ್ದ ಬಳ್ಳಿತೋಳಿನ ಬೆರ್ಚುಸಾಕ್ಷಿಯಂ !
ನೀರಡಿಕೆ ಪಸಿವು ಬಳಲಿಕೆ ಚಿಂತೆಯಿಂ ಮೊದಲೆ
ತತ್ತರಿಸುತಿರ್ದಂತೆ ತಲ್ಲಣಿಸಲೆರ್ದೆ ಹಾರಿ
ಹೆಪ್ಪುಗಟ್ಟಿತು ನೆತ್ತರಾ ಕ್ಷಾತ್ರವೀರಂಗೆ :
ಜಗುಳ್ದುದಯ್ ರಘುರಾಮ ಧೈರ್ಯಮುಂ ! ಹಮ್ಮೈಸಿ ೬೫೦
ಕರೆಯುತೋಡಿದನೊಳಗೆ ‘ಹಾ ಸೀತೆ ! ಹಾ ಸೀತೆ !
ಹಾ ಸೀತೆ !’ ಎಂದೆಂದು ಸುಯ್ದು. ಮಾರುತ್ತರಂ
ರಣರಣಕದಾ ಶೂನ್ಯದಿಂದೆ ಮಾರ್ದನಿಯಾಗಿ
ಬಂದುದಲ್ಲದೆ ದೇವಿ ಓಕೊಂಡಳಿಲ್ಲ. ಮೂಲೆ
ಮೂಲೆಯನರಸಿ ನೋಡಿದನು. ಬೆಳ್ಪರೋಲಂತೆ
ಸಂಧಿ ಸಂಧಿಯೊಳಿಣಿಕಿ, ಚಾಪೆ ಮಣೆಗಳನೆತ್ತಿ,
ನಿಂದನೇನೊಂದುಮಂ ಕಾಣದರಿಯದೆ, ಪುರ್ಚು
ಮೂರ್ಛೆಗೆ ಸಂದನಂತೆ. ಬೆದರಿದನು ಲಕ್ಷ್ಮಣಂ
ತನ್ನಣ್ಣನಾ ರುದ್ರ ದುಃಸ್ಥಿತಿಗೆ : “ತಾಳ್ಮೆ ತಾಳ್ಮೆ,
ಹೇ ಆರ್ಯ ! ದೇವಿ ಗೋದಾವರಿಗೆ ….” ಎನ್ನುತಿರೆ ೬೬೦
“ಗೋದಾವರಿಗೆ ದಿಟಂ ! ಗೋದಾವರಿಗೆ ದಿಟಂ !”
ಎಂದು ಕುಣಿಕುಣಿದಟ್ಟಹಾಸಮಂ ಗೆಯ್ಯುತ್ತೆ
ಧಾವಿಸಿದನನುಜನೆಂದುದನಿನಿತು ಗಮನಿಸದೆ,
ತಗ್ಗುಬ್ಬುಗಳನೆಡವಿ, ಮರಮಂ ಪಾಯ್ದು, ಬಳ್ಳಿ
ತೊಡರ್ದುದಂ ಲೆಕ್ಕಿಸದೆ, ಮುಳ್ಳು ನಾಂಟಿರ್ದೊಡಂ
ಕಿಳ್ತೆಸೆಯದಾನಂದದುನ್ಮಾದದಿಂದೆ ಆ
ರಮಣೀಯ ಗೋದಾವರಿಯ ಪುಳಿನಮಯ ಶುಭ್ರ
ತಟಿಗೆ. “ಓ ಸೀತೆ ! ಓ ಸೀತೆ ! ಓ ಸೀತೆ ! ಓ
ಓ ಸೀತೆ !” ರಾಮನ ಕೊರಲ ಕೂಗನಾಲಿಸುತೆ
ನೆರವೀಯಲೆಂದು ವಿಶ್ವವೆ ಜನಕಜಾತೆಯಂ ೬೭೦
ಪೆಸರ್ವಿಡಿದು ಕರೆದುದೆನೆ, ಮರುದನಿಗಳೆದ್ದುವಯ್
ಮರದಿಂದೆ ಗಿಡದಿಂದೆ ಲತೆಯಿಂದೆ ನದಿಯಿಂದೆ
ಪರ್ವತಾರಣ್ಯಂಗಳಿಂದೆ. ದಶದಶ ಕೋಟಿ
ಕಂಠಂಗಳಿಂದೆ ದೆಸೆದೆಸೆ ತಲ್ಲಣಿಸುವಂತೆ
ಕೂಗಿತನುಕಂಪದಿಂ ಸೃಷ್ಟಿ, ದಶಕಂಠಂಗೆ
ಮೃತ್ಯು ಡಿಂಡಿಮ ಭೇರಿಯಂ ಪೊಯ್ವವೋಲಿಂತು :
“ಓ ಸೀತೆ ! ಓ ಸೀತೆ ! ಓ ಸೀತೆ ! ಓ ಸೀತೆ ! ಓ !”
ಕಿವಿಗೊಟ್ಟದಂ, ಸತಿಯ ಮಾರುತ್ತರಂ ಗೆತ್ತು,
ತಾಳಿದನು ಮುದಮಂ ! ಅರಣ್ಯದತ್ತಂ ಪರಿದು
ಹುಡುಕತೊಡಗಿದನಿಣುಕುತಲ್ಲಿಲ್ಲಿ. ಕಾಣದಿರೆ ೬೮೦
ತಮ್ಮಗೊರೆದನು ಸನ್ನೆಗಣ್ಮಾಡಿ : “ಕಂಡೆಯಾ
ಸೌಮಿತ್ರಿ, ಮೈಥಿಲಿಯ ಮಾಯೆಯಂ ? ಪುಸಿಯಲ್ತು
ದಿಟಮಾಕೆ ಭೂಮಿಜಾತೆಯೆ ವಲಂ ! ತಾಯ್ಮರೆಗೆ
ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ
ನಮ್ಮೊಡನಣಕವಾಡುತಿಹಳಲ್ತೆ ? ಶೈಲಗತೆ
ತಾನೊರ್ಮೆ, ಕಾಂತಾರಗತೆಯೊರ್ಮೆ, ತರುಗತೆಯೊರ್ಮೆ ;
ಒರ್ಮೆ ಖಗಗತೆ, ಒರ್ಮೆ ಮೃಗಗತೆ, ತರಂಗಗತೆ
ಇನ್ನೊರ್ಮೆ ! ಒರ್ಮೆ ಖಂಜನ ಪಕ್ಷಿಕೂಜಿತಳ್ ;
ಒರ್ಮೆ ಕೋಕಿಲ ಕಂಠ ಭಾಷಿತಳ್. ಅದೊ ಅಲ್ಲಿ
ಸುಸಮೀರ ಲೋಲ ಕುಸುಮಿತ ಲತಾ ರಾಜಿತಳ್ ; ೬೯೦
ಇದೊ ಇಲ್ಲಿ …. ಕಣ್ಬನಿಗರೆವೆಯೇಕೆ, ಲಕ್ಷ್ಮಣಾ ?”
ರಘುವರನ ಲಘುವರ್ತನೋನ್ಮಾದಮಂ ನೋಡಿ
ಗದ್ಗದಿಸುತೂರ್ಮಿಳೇಶಂ : “ಇದೇನಣ್ಣಯ್ಯ,
ಮತಿವಿಕಲರಂತಾಡುತಿಹೆ ? ವಿಷಮ ಸಮಯದೊಳ್
ಸಮತೆಗೆಟ್ಟುದೆ ನಿನ್ನ ಮೇರುಸಮ ಸುಸ್ಥಿರತೆ ?
ದೇವಿ ತಾನೆಲ್ಲಿರ್ದಳೇನಾದಳೆಂದರಿವುದಂ
ಮಾಣ್ದಿಂತು ಕಾಲಹರಣಂ ಗೆಯ್ವುದನುಚಿತಂ
ಭಾವಜಭ್ರಾಂತಿಗೆ ಮಾರುವೋಗಿ.” ನೆನೆವವೋಲ್
ಪೋದ ಭವಮಂ, ನಿಂತು ಜಾನಿಸಿದನಾ ರಾಮನೊರ್
ಕರುವಿಟ್ಟ ವಿಗ್ರಹಂಬೋಲ್. ಮೌನದಿಂದಿರ್ದು, ೭೦೦
ಇರ್ದಂತೆ, ಚೀರ್ದೊರಲಿದನ್ ತಾರ ನಿಸ್ವನದಿ :
“ಅಯ್ಯೊ ಓ ಲಕ್ಷ್ಮಣಾ ! ಏನು ಮಾಡಿದೆಯಯ್ಯ ?
ನನ್ನ ಸೀತೆಯನಯ್ಯೊ ಏನು ಮಾಡಿದೆಯಯ್ಯ ?
ಎಲ್ಲಿ ಬೈತಿಟ್ಟೆಯಯ್ ? ಹೇಳಯ್ಯ, ದಮ್ಮಯ್ಯ,
ಓ ನನ್ನ ಲಕ್ಷ್ಮಣಾ ! ನಿನಗೆ ಕೈಯೆಡೆ ಮಾಡಿ,
ನಿನ್ನ ರಕ್ಷೆಯೊಳಿಟ್ಟು ಹೋದೆನೆಲ್ಲಿಹಳೊರೆಯೊ
ನನ್ನ ಮನದನ್ನೆ ? ಕೊಂದರೊ ಕೋಮಲಾಂಗಿಯಂ ?
ತಿಂದರೊ ನಿಶಾಚರರ್ ? ಹಾ ಸೀತೆ ! ಹಾ ಸೀತೆ !
ಹೋದೆಯೆಲ್ಲಿಗೆ ತೊರೆಯುತೆನ್ನಂ ?” ಎನುತ್ತೆನುತೆ
ಬಿಳ್ದನವನಿಗೆ ಶಿಶುವಿನೋಲಳುತೆ. ಸಂತಪಿಸಿ ೭೧೦
ಪಿಡಿದೆತ್ತಿ ಸೋದರಂ ಕೊಂಡೊಯ್ದನೆಂತಾನುಮಾ
ಕುಟೀರಕೆ. ಶಿಶಿರೋಪಚಾರ ಶುಶ್ರೂಷೆಯಿಂ
ಚೇತರಿಸಿದಾತಂಗೆ : “ಶಾಂತಿ, ಹೇ ಧೀರಮತಿ !
ಕಾತರಿಸದಿರೊ, ದಾಶರಥಿ ! ವಿಹಂಗೇಂದ್ರನಿಂ
ದೇವಿ ಎಲ್ಲಿಹಳೆತ್ತಲೈದಿದಳೆನಿಪ್ಪುದಂ
ತಿಳಿವಮಲ್ಲಿಂ ಬಳಿಕಮೇಂ ಕಜ್ಜಮೆಂಬುದಂ
ನಿಚ್ಚಯಿಸುವಂ. ಬರಿದೆ ಪಲವಂ ಪಲುಂಬಿದೊಡೆ.
ಫಲವೇನ್ ? “ತಮ್ಮನೊಳ್ನುಡಿಗೇಳ್ದು ಪೊಸ ನೆಚ್ಚು
ಮಲರಿದತ್ತಣ್ಣಂಗೆ. ತೆಕ್ಕನೆಯ ನೆಗೆದೆಳ್ದು
ಧಾವಿಸಿದನಂಗಳಕೆ. ತಲೆಗೆದರಿ, ಮೊಗಮೆತ್ತಿ, ೭೨೦
ಪಂಚವಟ ಕುಟಜರಾಜಿಯ ನೆತ್ತಿಯಂ ನೋಡಿ
ಕೊರಳೆತ್ತಿ ಕೂಗಿದನ್, ದಿಗ್ದಗಂತೋದ್ಭವಂ
ಮರುದನಿ ಮೊಳಗುವಂತೆ : “ಜಟಾಯೂ ! ಜಟಾಯೂ !
ಓ ಜಟಾಯೂ !” ಕರೆದೊನುಸಿರು ಮೇಲುಸಿರಾಗಿ
ಖಗವೀರನಂ. ಕಂಡನಿಲ್ಲೋಕೊಂಡನಿಲ್ಲವಂ.
ಕೆಂಡವಾದನು ದಂಡಧರನಂತೆ ಕೋದಂಡ
ಪಾಣಿ : “ಲಕ್ಷ್ಮಣ, ತಿಳಿಯಿತೀಗಳಾ ಖಳಖಗಮೆ
ಕಾರಣಂ ಸತಿಯಿಲ್ಲಮೆಗೆ.” “ಅಯ್ಯೊ, ಅಣ್ಣಯ್ಯ,
ಏನ್ಮಾತನಾಡುತಿಹೆ ?” “ಸಾಕು ಬಿಡು, ಸೌಮಿತ್ರಿ,
ಜಗಮನಿತುಮಾ ಕೈಕೆ ! ಕೈತವಮದರ ಹೃದಯಂ ! ೭೩೦
ಪಸುಮೊಗದ ಬಗ್ಗನಾ ಖೂಳನಾತನ ಕುಲಕೆ
ತಕ್ಕುದನೆ ನೆಗಳ್ದುದಾ ರಣಹದ್ದು ! ಅಯ್ಯೊ ಹಾ
ದುರುಳ ಪರ್ದ್ದಿಗೆ ಮರುಳುವೋದಳೆ ದಿಲೀಪಕುಲ
ಸಂಭವನ ಸತಿ ? ಕೊಲ್ವೆನಾತನಂ ; ನೀಚನಂ,
ಮಾರೀಚಗಿಂ ಮಿಗಿಲ್ ಪಾಪಿಯಂ, ಜವನೆಡೆಗೆ
ಜವದಿಂದೆ ಕಳುಹದಿರೆ ಸುಡಲಿ ನನ್ನೀ ಬಾಳ್ಕೆ.
ಓ ಬಾರ ಲಕ್ಷ್ಮಣಾ ; ಈ ಮಹದ್ವಿಪಿನಮಂ
ಸೋದಿಸುವಮೆಲ್ಲೆಲ್ಲಿಯುಂ. ಕಂಡೊಡನೆ ಪರ್ದ್ದು
ಗಂಟಲಂ ಮುರಿದು, ಕಾಲಂ ತಿರುಪಿ ತಿಪ್ಪುಳಂ
ಪರಿದು, ಬರಿಯಂ ಬಗಿದು, ಮೂಳೆಯಂ ನುರಿಗೆಯ್ದು, ೭೪೦
ಕ್ರಿಮಿಕೀಟಕಂಗಳಿಗೆ ಬಿರ್ದ್ದಿಕ್ಕುವೆನ್, ಬಸಿದು
ಕೆನ್ನತ್ತರಂ !” ಎಂದ ಕ್ರೋಧಾಂಧ ಸೋದರನ
ಭೀಷಣ ಮನಃಸ್ಥಿತಿಯನಳುಕಿ, ಪಡಿವೇಳದಾ
ಕಿರಿಯನಣ್ಣನ ಹಿಂದೆ ಪೊರಮಟ್ಟನೆಂತಾದೊಡಂ
ಕೋಸಲದ ರಾಣಿಯನರಸಲೆಂದು,
ಇಳಿವಗಲ್ ;
ಸುಡುವಿಸಿಲ್ ; ಆಳ್ಗೇಡಿ ಕಾಡೊಳಲೆದಿರ್ವರುಂ
ಕರೆಕರೆದು ಹುಡುಕಿದರು ಸೀತೆಯಂ, ಮೇಣಾ
ಜಟಾಯುವಂ. ಪರಿಚಿತಸ್ಥಾನಂಗಳಂ, ಮತ್ತೆ
ವಿಶ್ರುತಗಳಂ, ಶ್ರುತಗಳಂ, ಮತ್ತಮನ್ನೆಗಂ
ಪಿಂತೆ ಕಂಡರಿಯದೆಡೆಗಳನಂತೆ ದೂರಮಂ ೭೫೦
ನಿಕಟಮಂ, ಮೇಣಂತೆ ಪೂವೆಡೆಗಳಂ ಮತ್ತೆ
ಪಣ್ಣೆಡೆಗಳಂ ಪುಡುಕಿದರ್ ಕುದಿವೆದೆಯೊಳಲೆದು
ತೊಳಲಿ. ರಾಮನ ಶೋಕವಳುರಿತೊ ಅರಣ್ಯಮಂ ?
ಮತ್ತೆ ರಾಮನ ಕೋಪವಳುರಿತೊ ಜಟಾಯುವಂ ?
ಎಂಬವೋಲಿಳಿನೇಸರಿಳಿಯೆ ಬೈಗಿನ ಕೆಂಪು
ಪರ್ವಿತೆರಚಿತು ಚೆಲ್ಲಿತುರಿನೀರಿನೋಕುಳಿಯ !
ಬರುತಲಿರೆಯಿರೆ ಕಂಡರಾಯಿರ್ವರುಂ : ಅನತಿ
ದೂರದ ಗಿರಿನಿತಂಬ ಸದೃಶದೊಂದೆಳ್ತರದಿ,
ವೈಡೂರ್ಯ ಸಮ ಶಾದ್ವಲದ ಮೇಲೆ, ಪರಪಿದರೊ
ವಜ್ರಗಳನೆನೆ ತಪನ ಕೋಟೀರ ಕಾಂತಿಯೊಳ್
ಕಿಡಿಕಿಡಿ ಪೊಳೆದುದೇನೊ ಕೌತುಕಂ ! ಓಡಿದರ್ ;
ನೋಡಿದರ್ : ಕಂಡರು ಜಟಾಯು ನಖಘಾತಕ್ಕೆ
ಕೆದರಿ ಚೆಲ್ಲಿದ ಮಣಿಯಲಂಕೃತಿಯನಾ ರಾವಣ
ವಿಮಾನದಾ. ಲಲನೆಯ ನೆಲೆಗೆ ಮೊದಲ ಸಾಕ್ಷಿ ತಾಂ
ದಿಟಮೈಸೆ ಲಭಿಸಿತೆಂಬೂಹೆಯಿಂ, ನೆಚ್ಚುದಿಸಿ
ಮುಂಬರಿದರದೊ ಮತ್ತೆ ! ಓಡಿದರ್ ; ನೋಡಿದರ್ :
ಕಂಡರು ಜಟಾಯು ಪದಗದೆಯ ಘಾತಕೆ ಕೆಡೆದ
ಪುಷ್ಪಕದ ಕನಕ ಲಘುಘಂಟಿಕಾ ಸ್ತಬಕಮಂ,
ಮತ್ತಂತೆ ಗುರುಗಾತ್ರದೊಂದೆರಳ್ ಮೂರ್ ನಾಲ್ಕು
ಐದಾರು ಗರಿಗಳಂ ! “ಏನಿದಯ್, ಸೌಮಿತ್ರಿ ? ೭೭೦
ಸಾಹಸಿ ಜಟಾಯುವಂ ಬಯ್ದುದನ್ನೆಯವೆಂದು
ತೋರುತಿದೆ !” ರಾಮನಂತಾಡುತಿರೆ ಮುಂಬರಿದ
ಲಕ್ಷ್ಮಣಂ ಚೀತ್ಕರಿಸಿದನ್ “ಅಯ್ಯೊ ಅಣ್ಣಯ್ಯ !”
ಓಡಿದರ್, ನೋಡಿದರ್ : ಕಂಡರು ಜಟಾಯುವಂ,
ಮಡುಗಟ್ಟಿ ನಿಂದ ಕೆನ್ನೀರ ಕೆಸರೊಳ್ ಮಿಂದ
ಕಡಿದೆರಂಕೆಯ ಪರಿದ ತಿಪ್ಪುಳ ಗತಾಯುವಂ !
ಕೋಪಮನಿತುಂ ರಾಮಗನುತಾಪಮಪ್ಪಂತೆ
ಕರುಳಿರಿದುದಾ ಘೋರದರ್ಶನಂ : ಸಹ್ಯಾದ್ರಿ
ಶಿಖರ ವಿಸ್ತೃತ ವಿಪಿನ ಮಧ್ಯೆ, ಶತಮಾನ ತತಿ
ಮೆಯ್ತೊಂಡು ಮೂಡಿತೆನೆ, ಗುರುಗಾತ್ರ ಭವ್ಯದಿಂ ೭೮೦
ಪರ್ವತ ಸಹೋದರತೆಯಾಂತುದು ವಿಯಚ್ಚುಂಬಿ
ಭೈರವ ಬೃಹತ್ತರುವರಂ. ಆ ವನಸ್ಪತಿಗೆ
ಗೌರವಂದೋರ್ದು ಬೆಸಗೆಯ್ವಳಾರಣ್ಯಸತಿ,
ನಾಗರಿಕ ನಗರಂ ಮಹಾಕವಿಯನೋಲೈಸಿ
ಮನ್ನಣೆಯನೀವಂತೆವೋಲ್. ವಿಹರಿಸಿದರೆನಿತೆನಿತೊ
ಸಾರಿ ; ತಣಿಯದೆ ಬಂದು ವಿಹರಿಸುವರಿಂದುಮಾ
ತರುಶಿರದಮರ ನಂದನದಿ ನಿಂದು ರವಿ ಇಂದು
ಉದಯಾಸ್ತ ಸಂಧ್ಯೆ. ಚೈತ್ರರುಮೆನಿತೊ ಬಂದಲ್ಲಿ
ನೀಡಿಹರು ಶುಕ ಚಂಚರೀಕ ಪಿಕದಿಂಚರದ
ನೈವೇದ್ಯಮಂ. ವರ್ಷಶತರಲ್ಲಿಗೈತಂದು
ಮಿಂಚುದೀವಿಗೆವಿಡಿದು, ಸಿಡಿಲ ತಂಬಟೆ ಬಡಿದು,
ಮೇಘ ಕುಂಭಂಗಳಿಂದಭಿಷೇಕಮಂ ಗೈದರಾ
ಭೂರುಹ ನೃಪೇಂದ್ರಂಗೆ. ಹೇಮಂತ ಶಿಶಿರರುಂ
ಶ್ವೇತ ಛತ್ರಿಯನೆತ್ತಿ, ಶ್ವೇತಾಂಬರಂ ಸುತ್ತಿ,
ಶ್ವೇತ ಚಾಮರವೀಸಿ, ಮಂಜಿನಿರ್ಬ್ಬನಿ ಮಣಿಯ
ಶ್ವೇತ ಮುತ್ತಿನ ತಾರಹಾರದಿಂ ಸಿಂಗರಿಸಿ
ಸೇವಿಸಿಹರಾ ತರು ಮಹಾರಾಜನಂ. ಪ್ರಕೃತಿ
ದೇವಿಯುಂ ಗ್ರೀಷ್ಮದಾತಪ ತಾಪಮಂ ಕಳೆಯೆ,
ತಾಂಡವಂ ಕುಣಿವ ಭೈರವ ಭುಜಾದಂಡಸಮ
ಬಾಹು ಶಾಖೆಯ ತಳಿರಿನುಯ್ಯಾಲೆಯಂ ಏರಿ ೮೦೦
ರಮಿಸುವಳ್ ಮಂದಮಾರುತ ಭೋಗಮಂ. ಇಂತು
ಸಹ್ಯರಸಋಷಿ ದೃಷ್ಟಿಸೃಷ್ಟಿಯೆ ಬೃಹತ್ತಾಗಿ
ನಿಂತಾ ಮಹದ್ ವೃಕ್ಷಮಂ ದುರ್ಗದರಮನೆಯ
ಪೆರ್ಗಡೆಯ ನೇಮಿಸಿದ ಪರಶುಧರರೈತಂದು
ಕಡಿಯಲನುಗೈದಪರ್. ವಸಂತರವಿ ಮೂಡುತಿರೆ
ನೆತ್ತಿಗೊಂಬೆಯನೇರಿ ಕಾಜಾಣಮುಲಿಯುತಿರೆ,
ಬೆಚ್ಚಿಬೀಳುವುದಿದ್ದಕಿದ್ದಂತಟವಿ ಮೌನಂ !
ಮರುದಿನಗಳೇಳುವುವು ಕೋವಿಯೀಡುಗಳಂತೆ
ಕೊಡಲಿಯೇಟುಗಳಾ. ವಿಹಂಗಮಂ ಚೀತ್ಕರಿಸಿ
ಪಾರಿದಪುದೊರಲುವುದು ಕಾಡು ಹೋ ಹೋ ಎಂದು, ೮೧೦
ಕೊಲೆಗಬ್ಬರಿಸುವಂತೆ. ತಲೆಯನಿನಿತೊಲೆಯದೆಯೆ
ನಿಲ್ವುದಾ ಸುಸ್ಥಿರಂ ಮರಂ. ಬಹುಳ ಬಲಯುತಂ
ಬಹುಸಂಖ್ಯೆ ಪರಶುಘಾತಕೆ ಸಿಡಿಯುವುದು ಕೆಲಕೆ
ತೊಗಟೆ. ಬೀಳ್ವುದು ರಾಶಿರಾಶಿ ದೂರಕೆ ತೂರಿ
ಸುತ್ತುಲುಂ. ಕೆಂಪು ಸೊನೆ ಸೋರುತಿರೆ ಹಸಿಗಂಪು
ಹಸರುವುದು, ಕಡಿವಾ ಬಡಗಿಗಳ್ಗೆ ಹಾಲ್ಮಡ್ಡಿ
ಹೊಗೆ ಧೂಪವಾಗಿ, ಕಡಿದಪರಿನ್ನುಮುರ್ಕುತ್ತೆ !
ತೊಗಲಂ ಸುಲಿಯೆ ಬಾಡು ತೋರ್ಪಂತೆ ಮಿದುಗೆಮ್ಟು
ಕಾಣಿಸಲದಂ ಕಡಿಯೆ, ಗೋಚರಿಸಿತೆನೆ ಮೂಳೆ,
ಕಡುಗೆಂಚುಕಡುಪು ಕೊಡಲಿಯ ಬಾಯ್ಗೆ ಕಲ್ಲಾಯ್ತು. ೮೨೦
ಬಾಯಳಿಯಲೊರ್ಕೊಡಲಿ ಕಡಿದುದೆಂತುಂ ಬಿಡದೆ
ಪೊಸ ಕೊಡಲಿ. ಮಧ್ಯಾಹ್ನದೂಟಮಂ ಬುತ್ತಿಯಂ
ತಿಂದು ಬಂದಿನ್ನೊಮ್ಮೆ ತೊಡಗಲ್ಕೆ, ಮರನೆತ್ತಿ
ಅದೊ ನಡುಗುತಿಹುದಲ್ತೆ ? ದಿಟಮೈಸೆ ! ಅಯ್ಯೊ ಹಾ
ಮುಪ್ಪುದಲೆಯಂತೆ ಕೊಡಲಿಯ ಹತಿಗೆ ಕಂಪಿಸಿದೆ
ಕಾಣದೊ ಬೃಹನ್ಮಸ್ತಕಂ ! ಹಿಗ್ಗುತಿರಲಾಳ್ಮಂದಿ,
ಕುಗ್ಗುತಿರಲಾ ಮಲೆಯ ಪೆಮೆ, ತೂಗಿತ್ತೆಡಕೆ ;
ತೂಗಿತದೊ ಬಲಕೆ ; ಹಿಂದಕೆ ತೊನೆಯಿತದೊ ; ಮತ್ತೆ
ತೊನೆಯುತಿದೊ ಮುಂದಕ್ಕೆ ! ಕೇಳ್ದುದದೊ ನಿರಿಲೆಂದು
ಲರಿಲರಿ ಮುರಿವ ರಾವಮುಂ ! ದೂರಕೋಡಿದರ್ ೮೩೦
ನೋಡಿದರು ವನವೈಭವದ ಕಲಶಗೋಪುರಂ
ಕೆಡೆದು ಬೀಳುವ ವೈಭವದ ಭೀಮ ರಮಣೀಯ
ದೃಶ್ಯಮಂ : ಕೊಂಬೆಯನಲಂಕರಿಸಿ ಜೋಲ್ದಿರ್ದ
ಹುಟ್ಟಿಯಿಂ ಭೋರೆನುತ್ತೆದ್ದುವದೊ ಹೆಜ್ಜೇನುಗಳ್
ಹಿಂಡು ! ಬೆಳ್ಳನೆ ಹಲ್ಲೆಯಿಂ ಸುರಿಯುತಿದೆ ಚೆಂಜೇನ
ಸವಿಸೋನೆ ! ಕಾಣ್ ! ಬಳಿಯ ಮರವದೊ ಮುರಿಯುತಿದೆ ! ಮಲೆಯೆ
ಬಾಯ್ಬಡಿದುಕೊಂಡು ಗೋಳಿಟ್ಟಿತೆನೆ ಸದ್ದೊದರಿ
ಬಿದ್ದುದಾ ಪೆರ್ಮರಂ, ಪಳುವೆ ಬಯಲೆದ್ದವೋಲ್
ಬೆಳಕಿಳಿದು ನೆಲಕಾಯ್ತೊ ಯುಗಯುಗದನಂತರಂ
ಗಗನ ಸಂದರ್ಶನಮೆನಲ್ಕೆ : ಸಂಧ್ಯಾದೇವಿ ೮೪೦
ಎಂದಿನೋಲೈತಂದು ನೋಡಿದರೆ, ಹಾ ಎಲ್ಲಿ ಹೇಳ್
ವಿಪಿನ ಸಾಮ್ರಾಜ್ಯದಾ ತರುಚಕ್ರವರ್ತಿ ? ಅದೊ
ಕಳ್ತರಿಸಿದಂಗಾಂಗದಿಂದುರುಳಿಹನ್ ಸೋಲ್ತ ಪಡೆ
ಕಡಕಡಿ ಕೆಡೆದುರುಳ್ದ ಕಣದಂತೆ !
ಖರಸೂದನಂ
ಕಂಡನಾ ಕಡಿದ ಪೆರ್ಮರನ ತೆರನ ಜಟಾಯು
ಖಗವರನ. ಪಿತೃವಯಸ್ಕನ ದಾರುಣಸ್ಥಿತಿಗೆ
ಮರುಗುತಿರ್‌ಕೈಗಳಿಂ ರಕ್ತಮಯ ಕಂಠಮಂ
ಸ್ನೇಹದಿಂ ತಳ್ಕೈಸಿದನ್, ತೋಳ್ಗಳೆರಡುಮುಂ
ತುಂಬುವೋಲ್ : “ಏನಿದಯ್, ವಿಹಗೇಂದ್ರ, ಏನಿದೀ
ಸ್ಥಿತಿ ನಿನಗೆ ? ಪೂಜ್ಯನೆ, ಪರಾಭವಂ ನಿನಗೆಂತೊ ?
ಪೇಳಾವನಿಂದಾದುದೀ ಘೋರಕೃತಿ ? ಏಕೆ ?
ನಿನ್ನ ಮಗಳೆಲ್ಲಿ ? ಪೇಳಯ್ಯ, ದಶರಥ ಮಿತ್ರ,
ರಘುಕುಲದರಸಿಯೆಲ್ಲಿ ? ರಾಮನ ಮಡದಿಯೆಲ್ಲಿ ?
ಪೇಳೆತ್ತವೋದಳೊ ನನ್ನ ಮನದನ್ನೆ ? ರಾಜರ್ಷಿ
ಜನಕದೇವನ ಧರಾಕನ್ಯೆ ?” ಇಕ್ಷ್ವಾಕುಜಂ
ರೋದಿಸುತ್ತೆಂತೆಂತೊ ಪಳಯಿಸುತ್ತಿರಲಿಂತು,
ಸೋಂಕಿಗೊಯ್ಯನೆ ಸಂಜ್ಞೆ ಸಂಜನಿಸಿತಾ ಶ್ಯೇನಿ
ಸೂನುವಿಗೆ. ತೆರೆದುದೆವೆ. ಮೂಡಿದುದುಸಿರ ಸುಯ್ಲು.
ಬಾವಿಯಾಳದಿ ನಿಂತು ನುಡಿವವನ ದನಿಯವೋಲ್
ಮಾತು ಹೊಮ್ಮಿತು ಕೊರಳ ಗುಹೆಯಿಂದೆ. ಗದ್ಗದಿಸಿ ೮೬೦
ತಡೆತಡೆದು ನುಡಿದನಸ್ಪಷ್ಟಮಂ : “ದೇವಿಯಂ …..
ನೈ …. ಋ …. ತ್ಯ …. ವಿತ್ತೇಶನವರಜಂ ….” ತೆಕ್ಕನೆಯೆ
ಮಾತು ನಿಂದಿತ್ತು. ಕುತ್ತಿಗೆ ಕಾರಿದುದು ಮುದ್ದೆ
ನೆತ್ತರಂ. ಪತ್ತಿದುದೆ ಹಾ ಅಯೋಧ್ಯೆಯ ಮೆಯ್ಗೆ
ಪಳಿಯೆನಲ್ಕಪ್ಪಿರ್ದ ರಾಮಂಗೆ ಮೆತ್ತಿದತ್ತಾ
ಸ್ನೇಹಾರುಣಂ !” “ಮುಂದೆ ಹೇಳಯ್ಯ ; ನಿಲ್ಲಯ್ಯ.
ಖಗವರ್ಯ !” ರಾಮನೆನುತಿರೆ, ಕೊರಲ್ ಜೋಲ್ದತ್ತು :
ಕಣ್ಮಲರ್ ಮುಚ್ಚಿದುದು ; ಸಂಪಾತಿ ಸೋದರನ
ಹರಣ ಹಾರಿತು ಹಸ್ತದೊಳೆ ದಶರಥನ ಸುತನಾ !
ಬೈಗಿನಡವಿಯ ಕಿವಿಗೆ ರಾಮಲಕ್ಷ್ಮಣರಳುವ ೮೭೦
ದನಿ ಬಂದುದತಿದಾರುಣಂ. ಶೋಕಿಸಿತು ಸಂಧ್ಯೆ
ತಾನುಮಾರಣ್ಯಾದ್ರಿ ಸಾಂದ್ರ ಸಾಯಂ ಧ್ವನಿಯ
ಮುದ್ರದಿಂ. ಖಗಚಕ್ರವರ್ತಿಯ ಕಳೇಬರದ
ದಹನ ಸಂಸ್ಕಾರದಾ ಶವಧೂಮಮಂ ಕಂಡು
ಬೆದರಿದಳ್ ದಿನಲಕ್ಷ್ಮಿ. ನೆಗೆದಳಸ್ತಾದ್ರಿಯಿಂ ;
ಮರೆವೊಕ್ಕಳಂಬುಧಿಗೆ. ದಿನವನಿತೆ ಧುಮ್ಮಿಕ್ಕೆ
ಪಶ್ಚಿಮ ಸಮುದ್ರಕ್ಕೆ, ಚಿಮ್ಮಿದುವು ರತ್ನಾಳಿ
ತಳದಿಂ ನಭೋಂಗಣಕೆ. ಮೇಣ್ ಮೇಲಿಂದೆ ಬೀಳುತಿರೆ
ಸಿಲ್ಕಿದುವೆನಲ್ಕೆ ರಜನಿಯ ಕುರುಳ ಧಮ್ಮಿಲ್ಲಕ್ಕೆ
ಪೂವರಿಲ್ಗಳಂತೆವೋಲಲ್ಲಲ್ಲಿ ತೋರ್ದುವಯ್ ೮೮೦
ಮಿನುಗುವ ಮಿಸುನಿ ತಾರೆ ! ನರಳ್ವ ನೆರಳುಗಳಂತೆ
ಮಸಣದಿಂ ಮರಳಿದರು, ಮತ್ತೊಂದು ಮಸಣಕೆನೆ,
ಪರ್ಣಶಾಲೆಯ ಶವದ ಶೂನ್ಯಕ್ಕೆ, ಜನಕಜಾ
ಶೂನ್ಯರಾ ದೀನದುಃಖಿಗಳಣ್ಣತಮ್ಮದಿರು !
ನಿದ್ರೆಯಿನ್ನೆತ್ತಣಿಂ ? ನಿದ್ರೆ ಸತ್ತುದೊ ರಾಮ
ಭದ್ರಂಗೆ : ಅಯ್ಯೊ ಮೈದೋರ್ದುದಾ ರಾತ್ರಿ ! ಹಾ,
ಚಂದ್ರ ಸುಂದರ ದಿವ್ಯರಾತ್ರಿ ! ಉನ್ಮಾದಕ್ಕೆ
ಮದಿರೆಯಂ ಪೊಯ್ದುದಾ ಸಾಂದ್ರ ಚಂದ್ರಿಕೆ ಸೂರ್ಯ
ವಂಶಜಗೆ : ಪ್ರಿಯೆಯೊಡನೆ ಪವಡಿಸಿದ ಪಳ್ಕೆಯಂ
ತಳ್ಕೈಸಿ ಕುಳಿತು ಕಳೆದನ್ ಜಾವಮಂ, ಶೈಲತಾ ೮೯೦
ಮೌನದಿಂ. ನಟ್ಟಿರುಳೊಳೆದ್ದೋಡಿದನ್ “ಸೀತೆ !
ಓ ಲಕ್ಷ್ಮಣಾ, ಸೀತೆಯಂ ನೋಡಲ್ಲಿ, ನೋಡಲ್ಲಿ !”
ಎಂದೆಂದು ಕೂಗಿ : ಹೊದರಂ ತಬ್ಬಿದಣ್ಣನಂ
ತಮ್ಮನೆಂತಾನುಮೆತ್ತಿತಂದನು ಕುಟಿಗೆ. ಮೇಣ್,
ಪುಲಿಯಬ್ಬರಂ ದೂರದಡವಿಯಿಂ ಕೇಳೆ : “ಓ
ಲಕ್ಷ್ಮಣಾ, ಸತಿಯನಸುರಂ ಕೊರಳ್ಮುರಿವನದೊ !
ಕೂಗುತಿಹಳಯ್ಯೊ ! ಕೋಮಲೆ, ಹೆದರದಿರು ; ಬಂದೆ !”
ಎಂದು ಧನುವಂ ತುಡುಕುತೆದ್ದೋಡುವಾತನಂ
ಬಿಗಿಯಪ್ಪಿ ಪಿಡಿದು ಸಂತೈಸಿದನು ಸೋದರಂ,
ತಾನುಂ ಸುಯ್ಯುತಳುತೆ. ಮತ್ತೆ ತಿಂಗಳ್ವಕ್ಕಿ ೯೦೦
ತೇನೆ, ತನ್ನೆಣೆವಕ್ಕಿಯಂ ಕರೆದು ಕೂಗುತ್ತೆ
ಜೊನ್ನಂಬರದೊಳಲೆವುದಂ ನಿಮಿರ್‌ಗೇಳ್ದು : “ಓ
ಲಕ್ಷ್ಮಣಾ, ನಿನ್ನನಯ್ಯೋ ಕರೆವಳದೊ ದೇವಿ !
ಏಕೆ ಕಲ್ಲೆರ್ದೆಯಾಗಿ ಕೆಮ್ಮನಿಹೆ ? ಓಡು ನಡೆ,
ಓಡು ನಡೆ !” ಎನುತೆ ಹಣೆಬಡಿದುಕೊಂಡುರುಳಿದಾ
ಅಗ್ರಜಗೆ, ಕೇಳ್, ಗಾಳಿಬೀಸುವ ಊರ್ಮಿಳೇಶನಾ
ಬಗೆಯ ಬಣ್ಣಿಸೆ ಬಾಯಿಹುದೆ ಹಾ ಕವಿಯ ಕಲ್ಪನೆಗೆ ?
ಮುಂದಿನ ಸಂಚಿಕೆ-೩/ಶಬರಿಗಾದನು ಅತಿಥಿ ದಾಶರಥಿ
<< ಅಯೋಧ್ಯಾ ಸಂಪುಟಂ >> ಕಿಷ್ಕಿಂದಾ ಸಂಪುಟಂ << ಲಂಕಾ ಸಂಪುಟಂ >> ಶ್ರೀ ಸಂಪುಟಂ <<