೧.ಅಕಾಲದ ಅನರ್ಥ

ಸಂಪಾದಿಸಿ

ದೇವಾಧೀಶ್ವರನಾದ ಇಂದ್ರನು ಶಚೀಸಮೇತನಾಗಿ ದೇವಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತು ವಿರಾಜಿಸುತ್ತಿದ್ದಾನೆ. ದೇವತೆಗಳು, ಋಷಿಗಳು, ತಮ್ಮ ತಮ್ಮ ಪುಣ್ಯಕರ್ಮಗಳಿಂದ ಸ್ವರ್ಗಲೋಕವನ್ನು ಸಾಧಿಸಿದವರು, ಎಲ್ಲರೂ ಸ್ವಸ್ಥಾನಗಳನ್ನು ಅಲಂಕರಿಸಿದ್ದಾರೆ. ಒಂದು ಕಡೆ ಅಪ್ಸರೆಯರೂ, ಗಂಧರ್ವರೂ ನರ್ತನ ಸಂಗೀತಗಳಿಂದ ಆ ಸಭೆಯನ್ನು ಆರಾಧಿಸುತ್ತಿದ್ದಾರೆ. ಇನ್ನೊಂದು ಕಡೆ ಚತುರ್ವೇದಗಳೂ ಮೂರ್ತಿಮತ್ತಾಗಿ ನಿಂತು ವೇದಾಧ್ಯಯನ ಮಾಡುತ್ತ ಆ ದೇವಸಭೆಯನ್ನೆಲ್ಲಾ ಆಶೀರ್ವಾದಮಾಡುತ್ತಿದೆ. ಮರುತ್ತರು, ವಸುಗಳು, ರುದ್ರರು ಮೊದಲಾದವರು ಗಣಗಣಗಳಾಗಿ ನಿಂತು ಇಂದ್ರನನ್ನು ಓಲಗಿಸುತ್ತಿದ್ದಾರೆ. ದಿವ್ಯಾಯುಧಗಳೆಲ್ಲವೂ ದೇವೇಂದ್ರನ ಸಿಂಹಾಸನದ ಹಿಂದೆ ನಿಂತು ತೇಜೋವಿರಾಜಮಾನವಾಗಿ ಆತನಿಗೆ ರಕ್ಷೆಯನ್ನು ನೀಡುತ್ತಿವೆ. ಧರ್ಮಾರ್ಥಕಾಮಗಳೆಂಬ ತ್ರಿವರ್ತಗಳೂ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳೂ ಸರ್ವಸಿದ್ಧಿಗಳೂ ಎಡದಲ್ಲಿ ನಿಂತು ಪರಾಕು ಹೇಳುತ್ತಿವೆ. ಇಂದ್ರನಂತೆಯೇ ಲೋಕಪಾಲಕರೂ ತಮ್ಮ ತಮ್ಮ ಪತ್ನಿಯರೊಡಗೂಡಿ ದೇವರಾಜನ ಸಿಂಹಾಸನದ ಬಲಗಡೆಯಲ್ಲಿ ಮಂಡಿಸಿದ್ದಾರೆ. ಎಲ್ಲರ ದೇಹದಿಂದಲೂ ಹೊರಡುತ್ತಿರುವ ಸಹಜವಾದ ಸುವಾಸನೆಯು ಅವರವರು ಧರಿಸಿರುವ ಪುಷ್ಟಮಾಲೆಗಳ ಗಂಧದೊಡನೆ ಸೇರಿ ಸಭೆಯನ್ನೆಲ್ಲಾ ವ್ಯಾಪಿಸಿದೆ. ಜೊತೆಗೆ ಸಭಾಸ್ಥಾನದಲ್ಲಿ ಎಲ್ಲೆಲ್ಲೂ ಕೆತ್ತಿರುವ ಜೀವರತ್ನಗಳ ಕಾಂತಿಯು ಸಭಾಸದರು ಧರಿಸಿರುವ ರತ್ನಾಭರಣಗಳ ಕಾಂತಿಯೊಡನೆ ಬೆರೆತು, ಅವರವರ ತೇಜೋಮಂಡಲಗಳ ಪ್ರಭಾವಸಂವಲಿತವಾಗಿ ಆಸ್ಥಾನವನ್ನೆಲ್ಲಾ ಬೆಳಗುತ್ತಲಿದೆ.

ದೇವೇಂದ್ರನು ಸುತ್ತಲೂ ನೊಡಿದನು. ಎಲ್ಲರೂ ಬಂದಿದ್ದಾರೆ. ಆದರೆ ದೇವಗುರುಗಳಾದ ಬೃಹಸ್ಪತಿಗಳು ಮಾತ್ರ ಬಂದಿಲ್ಲ. ಅವರ ಆಸನವೊಂದು ಬಿಡುವಾಗಿದೆ. ಶಚೀಪತಿಗೆ ಅದನ್ನು ಕಂಡು ಅಸಮಾಧಾನವಾಗಿದೆ. ಹಾಗೆಂದು ಯಾರೊಡನೆಯಾದರೂ ಹೇಳಿಕೊಳ್ಳುವುದಕ್ಕೆ ಉಂಟೇನು? ತಿರುಗಿ ಶಚಿಯನ್ನು ನೋಡಿದನು. ಪತಿಯ ಅಭಿಪ್ರಾಯವು ಆಕೆಗೆ ತಿಳಿಯಿತು. ಆದರೂ ಆಕೆಯು ತಾನೇ ಏನು ಹೇಳಿಯಾಳು?

ಇನ್ನೂ ಒಂದು ಗಳಿಗೆಯಾಯಿತು. ಬೃಹಸ್ಪತಿಯು ಬರಲಿಲ್ಲ. ಇಂದ್ರನ ಅಸಮಾಧಾನಕ್ಕೆ ಬಣ್ಣ ಬಂದು ಅದು ಕೋಪದ ಕಡೆಗೆ ಹೊರಳಿತು. ಆದರೆ ತುಂಬಿದ ಸಭೆಯಲ್ಲಿ ಕೋಪಮಾಡಿಕೊಳ್ಳುವುದುಂಟೆ? ಅದೂ ಗುರುವೂ, ಪುರೋಹಿತನೂ ಆದ ಬೃಹಸ್ಪತಿಯ ಮೇಲೆ? ಇಂದ್ರನು ಎಷ್ಟೋ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಇರುವುದನ್ನೆಲ್ಲ ಬಿಟ್ಟು ಇಲ್ಲದುದನ್ನೇ ಎತ್ತಿ ತೋರಿಸುವ ಮನಸ್ಸು ಸಮಾಧಾನವಾಗಲೊಲ್ಲದೆ “ದೇವಗುರುಗಳು ಬಂದಿಲ್ಲವಲ್ಲ?” ಎಂದು ರೇಗಲು ಹವಣಿಸುತ್ತಿದೆ.

ಅಷ್ಟರಲ್ಲಿ ಪ್ರಹರಿಯ ದೀರ್ಘೋಚ್ಚಧ್ವನಿಯು ಕೇಳಿಸಿತು : “ಪುರುಹೂತನಿಗೆ ಪರಾಕ್, ಪುರಂದರನಿಗೆ ಪರಾಕ್, ಮಹೇಂದ್ರನಿಗೆ ಪರಾಕ್, ಶಚೀಪತಿಗೆ ಪರಾಕ್, ಸ್ವರ್ಗಲೋಕಾಧಿಪತಿಗೆ ಪರಾಕ್, ತ್ರಿಲೋಕಾಧಿಪತಿಗೆ ಪರಾಕ್, ತಪೋಲೋಕದಿಂದ ಒಂದು ಮಹರ್ಷಿಗಣವು ದರ್ಶನಾರ್ಥವಾಗಿ ದಯಮಾಡಿಸಿದೆ.” ಪ್ರಹರಿಯ ವಿಜ್ಞಾಪನವು ಮುಗಿಯುತ್ತಿರುವ ಹಾಗೆಯೇ ಸಾಮಗಾನಮಾಡುತ್ತಿರುವ ಮಹರ್ಷಿ ಗಣವು ಪ್ರವೇಶಿಸಿತು. ಅವರನ್ನು ಸ್ವಾಗತಿಸಿ ಕರೆತರಲು ಬೃಹಸ್ಪತಿಯು ಇಲ್ಲವಲ್ಲಾ ಎಂದು ಇಂದ್ರನ ಮನಸ್ಸು ಮತ್ತಷ್ಟು ಕ್ಷುಬ್ಧವಾಯಿತು. ಆದರೂ ಆ ಕ್ಷೋಭವನ್ನು ತೊರಿಸದೆ, ಗಂಭೀರವೃತ್ತಿಯವರಿಗೆ ಸಹಜವಾದ ಗಾಂಭೀರ್ಯವನ್ನು ಬಿಡದೆ, ಯಜ್ಞೇಶ್ವರನಾದ ಅಗ್ನಿಯ ಮುಖವನ್ನು ನೋಡಿದನು. ಅದನ್ನು ತಿಳಿದು ಅಗ್ನಿಯು ಹೋಗಿ ಅವರನ್ನು ಕರೆತಂದನು. ಧರ್ಮಾಧಿಪತಿಯಾದ ಯಮನು ಇಂದ್ರನಾಜ್ಞೆಯಂತೆ ಅವರಿಗೆ ಮಧುಪರ್ಕವನ್ನು ಒಪ್ಪಿಸಿದನು. ಅವರೂ ಋಷಿಸಹಜವಾದ ಕಾಣಿಕೆಗಳನ್ನೂ ಆಶೀರ್ವಾದಗಳನ್ನೂ ಒಪ್ಪಿಸಿ, ಆತನ ಅನುಮತಿಯಿಂದ ಆಸನಗಳನ್ನು ಪರಿಗ್ರಹಿಸಿದರು. ಇಂದ್ರನು ಅವರನ್ನು ಕುಶಲ ಪ್ರಶ್ನೆಗಳಿಂದ ಗೌರವಿಸಿ ಅವರು ಬಂದ ಕಾರಣವನ್ನು ವಿಚಾರಿಸಿದನು. ಅವರು ಹೇಳಿದರು:

“ದೇವರಾಜನಿಗೆ ಸ್ವಸ್ತಿಯಾಗಲಿ. ತಪೋಲೋಕದಲ್ಲಿ ನಮಗೊಂದು ಸಂದೇಹ ಬಂತು. ಅದು ಸಪ್ತರ್ಷಿಗಳ ಅನುಗ್ರಹದಿಂದ ಒಂದು ಪ್ರಶ್ನವಾಯಿತು. ಅವರು ‘ಈ ಪ್ರಶ್ನವನ್ನು ಪುರಂದರನಾದ ಇಂದ್ರನು ಅನುಗ್ರಹಿಸಿ ಬಿಡಿಸಬೇಕು. ನಾವೂ ಆತನ ಅನುಗ್ರಹದಿಂದ ಉತ್ತರವನ್ನು ಹೇಳಬೇಕು. ಅಥವ ಅಗ್ನಿವಾಯುಗಳು ಒಂದು ವೇಳೆ ಹೇಳಿದರೂ ಹೇಳಬಹುದು. ಕೇಳಿನೋಡಿ.’ ಎಂದರು. ನಾವು ಯಜ್ಞೇಶ್ವರನನ್ನು ಅರ್ಚಿಸಿ ಕೇಳಿದೆವು. ಜಾತವೇದನಾದ ಆತನು, ‘ಇಂದ್ರನು ನಮಗೆಲ್ಲಾ ಜ್ಯೇಷ್ಠನು. ಆ ಜ್ಯೇಷ್ಠತ್ವವನ್ನು ಬ್ರಹ್ಮನು ಆತನಿಗೆ ಅನುಗ್ರಹಿಸಿದುದು.

ಈ ಪ್ರಶ್ನವನ್ನು ಪುರಂದರನಾದ ಆತನಲ್ಲದೆ, ಇನ್ನು ಯಾರೂ ಪರಿಹರಿಸಲಾರರು’ ಎಂದನು. ಅದರಿಂದ ಇಲ್ಲಿಗೆ ಬಂದೆವು.”

ಇಂದ್ರನು ಯಜ್ಞೇಶ್ವರನ ಮುಖವನ್ನು ನೋಡಿ, ಆತನ ಮಂದಹಾಸದಿಂದಲೇ ಋಷಿಗಳ ಮಾತು ನಿಜವೆಂಬುದನ್ನು ಅರಿತು, “ಅಪ್ಪಣೆಯಾಗಲಿ. ಜಾತವೇದನೂ, ಸಪ್ತರ್ಷಿಗಳೂ ನಿಮಗೆ ಬಿಟ್ಟಿರುವ ಆ ಪ್ರಶ್ನವೆಂತಹುದು ಹೇಳಿ ಕೇಳೋಣ” ಎಂದನು.

ಋಷಿಗಳು ಹೇಳಿದರು. “ಪುರಂದರನಿಗೆ ಜಯವಾಗಲಿ. ದೇಹವು ನಾನಲ್ಲವೆಂದು ತಿಳಿದಿದ್ದರೂ, ದೇಹಗತವಾಗಿರುವ ಮನೋಬುದ್ಧಿಗಳನ್ನು ಪ್ರತ್ಯೇಕಿಸುವುದೆಂತು? ಇದನ್ನು ದಯವಿಟ್ಟು ತಿಳಿಹಿಸಿಕೊಡಬೇಕು.”

ಇಂದ್ರನು ಅದನ್ನು ಕೇಳಿ ನಕ್ಕನು. “ಈ ಪ್ರಶ್ನಕ್ಕೆ ಉತ್ತರವೂ ಬೇಕೆ ? ನಮ್ಮನ್ನು ದೊಡ್ಡವರನ್ನು ಮಾಡುವುದಕ್ಕೆ ಈ ಪ್ರಶ್ನವನ್ನು ಕೇಳುತ್ತಿರುವಿರಿ. ಆಗಲಿ ಹೇಳೋಣ” ಎಂದನು.

ಅಷ್ಟರಲ್ಲಿ ಸಭೆಯಲ್ಲಿ ಮಂದಮಾರುತನಿಂದ ಸಾಗರದಲ್ಲಿ ಏಳುವ ಸಣ್ಣ ಅಲೆಗಳಂತೆ ಕೊಂಚ ಚಲನವು ತೋರಿ ಎಲ್ಲರ ಕಣ್ಣುಗಳೂ ಬಾಗಿಲ ಕಡೆಗೆ ತಿರುಗಿದವು. ಇಂದ್ರನ ಮನಸ್ಸು ಪ್ರಶ್ನಕ್ಕೆ ಉತ್ತರ ಕೊಡುವತ್ತ ತಿರುಗಿದ್ದುದು ಬಲವಂತವಾಗಿ ಹಿಡಿದೆಳೆದಂತಾಗಿ, ಮುಖವು ಅಪ್ರಸನ್ನ ಮುದ್ರೆಯನ್ನು ಧರಿಸಿ, ಹುಬ್ಬುಗಳು ಗಂಟಿಕ್ಕಿದುವು. ಆ ವೇಳೆಗೆ ಸರಿಯಾಗಿ ಪ್ರಹರಿಯು ದೀರ್ಘೋಚ್ಛ ಧ್ವನಿಯಲ್ಲಿ “ಪರಾಕ್, ದೇವಗುರುಗಳು ದಯಮಾಡಿಸುತ್ತಿರುವರು!” ಎಂದು ಕೂಗಿದನು.

ಸಕಾಲದಲ್ಲಿ ದೇವಗುರುಗಳು ಆಸನದಲ್ಲಿ ಇರಲಿಲ್ಲವೆಂಬುದೊಂದು, ಋಷಿಗಣಗಳು ಬಂದಾಗ ಅವರಿಗೆ ಉಪಚಾರಮಾಡಲು ಇರಲಿಲ್ಲವೆಂಬುದೊಂದು, ತಾನು ಇನ್ನೆತ್ತಲೋ ತಿರುಗಿರುವಾಗ ಬಂದರೆಂಬುದೊಂದು, ಹೀಗೆ ನಾನಾ ಮುಖವಾದ ಅಸಮಾಧಾನಗಳೆಲ್ಲ ಸೇರಿ ಸಣ್ಣದೊಂದು ಆಕ್ರೋಶವು ಇಂದ್ರನ ಮನಸ್ಸಿನಲ್ಲಿ ಸುಳಿಯುತ್ತಿರುವಾಗ ದೇವಗುರುಗಳು ಸಭೆಯನ್ನು ಪ್ರವೇಶಿಸಿದರು. ಬರುತ್ತಿರುವ ಹಾಗೆಯೇ “ವಿಜಯೀಭವ” ಎನ್ನುತ್ತ ಕೈಯೆತ್ತಿಕೊಂಡು ಆಶೀರ್ವಾದ ಮಾಡುತ್ತಲೇ ಬಂದರು. ಆದರೆ ದೇವರಾಜನ ಮುಖಮುದ್ರೆಯನ್ನು ಕಾಣುತ್ತಿದ್ದ ಹಾಗೆಯೇ ತಾವೇನೋ ಅಕಾರ್ಯ ಮಾಡುತ್ತಿರುವವರಿಗೆ ಆಗುವಂತೆ, ಏನೋ ನಾಚಿಕೆಯಾಗಿ, ಹಾಗೆಯೇ ನಿಂತುಬಿಟ್ಟರು. ಬಾಯಲ್ಲಿ ಬರುತ್ತಿದ್ದ ಆಶೀರ್ವಾದೋಕ್ತಿಯೂ ಹಾಗೆಯೇ, ಅರ್ಧದಲ್ಲಿ,

‘ವಿಜಯೀ....’ ಎನ್ನುವಲ್ಲಿಗೆ ನಿಂತುಬಿಟ್ಟಿತು. ದೇವೇಂದ್ರನೂ ಋಷಿಗಣದ ಪ್ರಶ್ನಕ್ಕೆ ಉತ್ತರವನ್ನು ಚಿಂತಿಸುತ್ತಿದ್ದವನು ತನ್ನ ಭಾವವನ್ನು ಬದಲಿಸಲಿಲ್ಲ. ಎಂದಿನಂತೆ ವಿನಯದಿಂದ ಅವರ ಆಶೀರ್ವಾದವನ್ನು ಪ್ರತೀಕ್ಷಿಸುತ್ತ ನಮ್ರನಾಗಿ ಏಳುವ ಬದಲು, ಗಂಭೀರಮುದ್ರೆಯಲ್ಲಿದ್ದುಬಿಟ್ಟನು. ತಾನು ತಳೆದಿರುವ ಅನುಗ್ರಹ ಮುದ್ರೆಯನ್ನು ಬದಲಾಯಿಸಿ ಅನುಗ್ರಾಹ್ಯಮುದ್ರೆಯನ್ನು ಧರಿಸಿದರೆ ಮತ್ತೆ ಪೂರ್ವಮುದ್ರೆಯು ಬರುವುದೋ ಇಲ್ಲವೋ ಎಂದು ಸಂಶಯಿಸುವವನಂತೆ ಹಾಗೆ ಇದ್ದುಬಿಡಲು, ದೇವಗುರುವು ಅದು ತನಗೆ ಅವಮಾನವಾಯಿತು ಎಂದುಕೊಂಡನು. ‘ತಾನು ಆಗಾಗ ಅಕಾಲದಲ್ಲಿ ದೇವಸಭೆಗೆ ಬರುತ್ತಿದ್ದುದುಂಟು. ಆಗಲೆಲ್ಲ ಉಪಚಾರಗಳಿಂದ ತನ್ನನ್ನು ಗೌರವಿಸುತ್ತಿದ್ದ ಇಂದ್ರನಿಂದೇಕೆ ಹೀಗೆ ವಿಮುಖನಾಗಿರುವನು?’ ಎಂದು ಆಶ್ಚರ್ಯಪಟ್ಟನು. ಆತನಿಗೆ ಏಕೋ ಅಭಿಮಾನವು ವಿಜೃಂಭಿಸಿ ತನಗೆ ಇದು ಅಪಮಾನ ಎನ್ನಿಸಿತು. ಕೂಡಲೇ ಆ ಭಾವವೂ ಬೆಳೆಯಿತು. ಕೋಪವು ಬಂತು. ಆ ಕೋಪದಲ್ಲಿ ಸಭಾಪ್ರವೇಶಮಾಡಿದ್ದೇನೆ ಎಂಬುದನ್ನೂ ಮರೆತು ಅಲ್ಲಿಯೇ ಅಂತರ್ಧಾನವನ್ನು ಹೊಂದಿದನು.

ಇಂದ್ರನು ಏನು ಮಾಡಬೇಕು? “ತಾನು ಯಾವ ಭಾವದಲ್ಲಿರುವೆನೆಂಬುದನ್ನು ಪರೀಕ್ಷಿಸದೆ ದೇವಗುರುವು ಹೀಗೆ ಹೊರಟುಹೋದನು” ಎಂದು ಆತನಿಗೂ ಕೋಪವು ಬಂತು. ಆದರೂ ಸಭಾಮರ್ಯಾದೆಯನ್ನು ಮೀರಬಾರದೆಂದು ತನ್ನ ಸುತ್ತಲೂ ನಿಂತಿದ್ದ ಮರುತರಲ್ಲಿ ಜ್ಯೇಷ್ಠನಾದವನ ಮುಖವನ್ನು ನೋಡಿದನು. ಆತನು ಕೂಡಲೇ ಅಣ್ಣನ ಭಾವವನ್ನು ಗ್ರಹಿಸಿ, ದೇವಗುರುಗಳನ್ನು ಹುಡುಕಿಕೊಂಡು ಹೋದನು. ಇಂದ್ರನು ಋಷಿಗಣಗಳ ಪ್ರಶ್ನಕ್ಕೆ ಸಮಾಧಾನವನ್ನು ಹೇಳಹೊರಟನು.

ತಪೋಧನರೆ, ತಾವು ಈ ಪ್ರಶ್ನವನ್ನು ದೇವಸಭೆಗೆ ತಂದಿರುವಿರಿ. ಇದು ಅಧಿಕಾರಕ್ಷೇತ್ರ. ಇಲ್ಲಿ ರಜೋಗುಣವು ತಾನೇ ತಾನಾಗಿರುವುದು. ಆದರೆ ಅದೃಷ್ಟ ವಿಶೇಷದಿಂದ ಇಂದು ಇಲ್ಲಿ ಲೋಕಾಲೋಕಗಳ ವಿಚಾರವು ಯಾವುದೂ ಬಂದಿಲ್ಲವಾಗಿ, ತಮ್ಮ ಪ್ರಶ್ನಕ್ಕೆ ಉತ್ತರವನ್ನು ಹೇಳೋಣ. ಸಾವಧಾನವಾಗಿ ಕೇಳಿ.”

“ತಮ್ಮ ಪ್ರಶ್ನವು ಬಹು ಸುಲಭವಾದುದು. ತಾವು ವಿಚಾರಮಾಡಿರುವುದು ಮನೋಬುದ್ಧಿಗಳಿಂದ. ಅವೆರಡೂ ದೇಹವೃಕ್ಷದ ಅಂಗಗಳೇ ಹೊರತು ಬೇರೆಯಲ್ಲ. ಅದರಿಂದ ಅವು ದೇಹಬಂಧನವನ್ನು ದಾಟುವ ಮಾರ್ಗವನ್ನು ತೋರಿಸಲಾರವು. ಅದರಿಂದ, ಅವುಗಳನ್ನು ಗೆಲ್ಲುವುದಕ್ಕಾಗಿ ಅವಸ್ಥಾತ್ರಯವನ್ನು ಅವಲಂಬಿಸಿ.”

“ಹಿಂದೊಮ್ಮೆ ಪ್ರಜಾಪತಿಯು ತನ್ನಲ್ಲಿ ಅಜರವನ್ನೂ ಅಮರವನ್ನೂ

ಮಾಡುವ ಆತ್ಮವಿದ್ಯೆಯುಂಟು, ಅದನ್ನು ತಿಳಿದವರು ಅಜರರೂ, ಅಮರರೂ ಆಗುವರು ಎಂದು ಘೋಷಿಸಿದನು. ಅದನ್ನು ತಿಳಿದುಬರಲು ದೆವತೆಗಳು ನನ್ನನ್ನೂ, ದೈತ್ಯರು ವಿರೋಚನನನ್ನೂ ಕಳುಹಿಸಿಕೊಟ್ಟರು. ಅತನು ಆತ್ಮವಿದ್ಯೆಯನ್ನು ಬೋಧಿಸಿದುದು ಹೀಗೇ ಅವಸ್ಥಾತ್ರಯಗಳನ್ನು ಹಿಡಿದು. ಅದನ್ನೇ ಈಗ ನಾನು ತಮಗೆ ಹೇಳುತ್ತಿರುವೆನು.” “ಆಯಿತು. ದೇವರಾಜನು ಪ್ರಸನ್ನನಾಗಲಿ. ಅವಸ್ಥಾತ್ರಯವನ್ನು ಹಿಡಿಯುವುದು ಎಂದರೇನು?”

“ಕೇಳಿ, ಜಾಗ್ರತ್ತಿನಲ್ಲಿರುವವರೆಗೂ ಬುದ್ಧಿಮನಸ್ಸುಗಳು ಏಕೆ ಹೀಗೆ ಮಡುತ್ತಿವೆ? ಹೀಗೆ ಮಾಡು ಎಂದು ಯಾರು ಇವನ್ನು ಪ್ರೇರೇಪಿಸಿದರು ಎಂದು ಪರೀಕ್ಷೆ ಮಾಡುತ್ತಿರುವುದು. ಜಾಗ್ರದವಸ್ಥೆಯು ಅಹಂಕಾರ ಸ್ಥಾನವು. ರಜೋಗುಣದ ಆವೇಶವುಳ್ಳದು. ಅದರಿಂದ ಅಲ್ಲಿ ಅಹಂಕಾರವನ್ನು ವಿಜೃಂಭಿಸದಂತೆ ತಡೆದು, ರಜಸ್ಸಿನ ಆವೇಶಕ್ಕೆ ಎಡೆಗೊಡದೆ, ಎಚ್ಚರವಾಗಿರಬೇಕು. ಹಾಗಿರುವುದೇ ಜಾಗ್ರತ್ತಿನ ಅನ್ವೇಷಣವು.”

“ಇದರಿಂದ ಏನಾಗುವುದು ಮಹಾದೇವ?”

“ಇದರಿಂದ ತನ್ನ ಸುತ್ತಲೂ ತುಂಬಿರುವ ಪ್ರಾಣದ ಪರಿಚಯವಾಗುವುದು. ಪ್ರಾಣವೇನು ಎನ್ನುವಿರಾ? ಆತ್ಮನ ನೆರಳೇ ಪ್ರಾಣವು. ಪ್ರಾಣವನ್ನು ನೋಡುತ್ತ ಅದರ ಹಿಂದಿರುವ ಆತ್ಮನ ಜಾಡೆ ಹಿಡಿದು ಭೇದಿಸಿದರೆ, ಬ್ರಹ್ಮಸಾಕ್ಷಾತ್ಕಾರವಾಗುವುದು.”

“ದೇವದೇವ, ಬ್ರಹ್ಮಸಾಕ್ಷಾತ್ಕಾರವಾಗುವುದು ಎಂದರೇನು?”

“ಬ್ರಹ್ಮವು ಅತೀಂದ್ರಿಯವು. ಇಂದ್ರಿಯಗೋಚರವಾಗುವುದಲ್ಲ ಎಂಬುದು ಸಿದ್ಧಾಂತವಾಗಿ ಮನಸ್ಸಿಗೆ ಹಿಡಿಯುವುದೇ ಬ್ರಹ್ಮಸಾಕ್ಷಾತ್ಕಾರವು. ಶ್ರವಣಕಾಲದಲ್ಲಿ ಅದು ಶಾಸ್ತ್ರೋಕ್ತಿಯಾಗಿ ಗ್ರಹಣವಾಗುವುದು. ಮನನ ಕಾಲದಲ್ಲಿ ಸತತವಾಗಿ ಅನುಚಿಂತಿತವಾಗುತ್ತ ಬೇರೆ ಬೇರೆ ಯುಕ್ತಿಗಳಿಂದ ಸಿದ್ಧವಾಗುತ್ತಿರುವುದು. ನಿಧಿಧ್ಯಾಸನ ಕಾಲದಲ್ಲಿ ಅದು ಸಿದ್ಧಾಂತವಾಗಿ, ಭೂಮಿಯಲ್ಲಿರುವ ನಿಧಿಯಂತೆ ಸಾಕ್ಷಾತ್ಕಾರವಾಗಿರುವುದು. ಅಲ್ಲಿಯವರೆಗೂ ದೇಹೋವಹಂಭ್ರಾಂತಿಯು ಬಿಟ್ಟುದ್ದಲ್ಲ. ಈ ಭ್ರಾಂತಿನಿರಸನವಾಗಲು ಮುಮುಕ್ಷು-ಜನರು ನನ್ನನ್ನು ಉಪಾಸನ ಮಾಡುವರು.”

“ಬ್ರಹ್ಮ ವಿದ್ಯಾಸಂಪ್ರದಾಯಕರ್ತೃವೆಂದು ನಿನ್ನನ್ನು ಬಲ್ಲವರು ಹೊಗಳುವ ಕಾರಣವು ಈಗ ತಿಳಿಯಿತು. ಬ್ರಹ್ಮನ್, ಇನ್ನು ಸುಷುಪ್ತಿಯ ವಿಚಾರವು ಅಪ್ಪಣೆಯಾಗಬೇಕು.”

“ಆಗಲಿ, ಅದನ್ನೂ ಹೇಳೋಣ, ಆದರೆ ಅದಕ್ಕಿಂತ ಮುಂಚೆ ಸ್ವಪ್ನ ವಿಚಾರವನ್ನು ತಿಳಿದುಕೊಳ್ಳಬೇಕು. ಜೀವನು ತನ್ನ ವಾಸನಾಭಂಡಾರವನ್ನು ಬರಿದುಮಾಡಿಕೊಳ್ಳುವ ಪ್ರಯತ್ನವೇ ಸ್ವಪ್ನವು. ಬಾಹ್ಯೇಂದ್ರಿಯಗಳು ಇಲ್ಲದಿರಲು, ಅಂತರಿಂದ್ರಿಯಗಳು ತಾವೇ ತಾವಾಗಿ ವಾಸನಾಭಂಡಾರವನ್ನು ಬಿಚ್ಚಲು ಅಲ್ಲಿ, ಕಾಲದೇಶಪ್ರಭಾವದಿಂದ ಸ್ವಪ್ನವಾಗುವುದು. ಅದೂ ಜಾಗ್ರತ್ತಿನಂತೆಯೇ ಒಂದು ವೃತ್ತಿಯು ; ಎಂದರೆ ಮನೋವ್ಯಾಪಾರವು. ಸ್ವಪ್ನವು ಜಾಗ್ರತ್ತಿನಲ್ಲಿ ಪ್ರಕಟವಾಗದ, ಪ್ರಕಟವಾಗಲಾರದ, ವಾಸನೆಗಳ ಹೊರಚೆಲ್ಲುವಿಕೆಯು. ಕೆರೆಗೆ ಕೋಡಿ ಇರುವಂತೆ, ಅಂತಃಕರಣದ ಕೋಡಿ ಅದು. ಅಲ್ಲಿ ಹರಿಯುವ ನೀರಿನ ಸ್ವಭಾವದಿಂದ ಕೆರೆಯಲ್ಲಿನ ನೀರಿನ ಸ್ವಭಾವವನ್ನು ಊಹಿಸಿಕೊಳ್ಳುವಂತೆ, ತನ್ನ ತನ್ನ ಸ್ವಪ್ನವನ್ನು ನೋಡಿಕೊಂಡು ಅಂತಃಕರಣದ ಮಾಲಿನ್ಯವನ್ನು ತೊಳೆದುಕೊಳ್ಳಬೇಕು. ಸ್ವಪ್ನವನ್ನು ನೋಡುವ ತನ್ನಿಂದ ಅದು ಭಿನ್ನವೆಂದು ತಿಳಿದುಕೊಳ್ಳುವುದೇ ಅಲ್ಲಿರುವ ಮಾಲಿನ್ಯವು. ಸ್ವಪ್ನವನ್ನು ಕಂಡವನು’ ಈ ಸ್ವಪ್ನವು ತನ್ನಿಂದಲೇ ಸೃಷ್ಟವಾದುದು : ಅದೂ ‘ಅದನ್ನು ಕಾಣುವವನೂ ಬೇರಲ್ಲ’ ಎಂದು ಯಾವತ್ತು ತಿಳಿದುಕೊಳ್ಳುವನೋ ಅದೇ ಅದು ಶುದ್ಧವಾಗುವಿಕೆ. ಮೊದಲು ಇದು ಸ್ವಪ್ನ ಎಂದು ಅರಿವಾಗಿ ಆನಂತರ, ಅದು ಶುದ್ಧವಾದಾಗ, ಜಾಗ್ರತ್ತಿನಲ್ಲಿರುವ ಮುಖ್ಯ ವೃತ್ತಿಯು ಅಲ್ಲಿಯೂ ತಲೆದೋರುವುದು. ಅದು ಸ್ವಪ್ನಜಯವು.”

“ಹಾಗೆಯೇ ನಿದ್ರಾಜಯವನ್ನು ಹೇಳುವೆನು ಕೇಳಿ. ಜಾಗ್ರತ್ಸ್ವಪ್ನಗಳಲ್ಲಿ ಎಡಬಿಡದೆ ನುಡಿಯುತ್ತಿರುವ ಉದಾನವಾಯುವು ಸುಷುಪ್ತಿಕಾಲದಲ್ಲಿ ಸುಮ್ಮನಿರುವುದು. ಆ ಉದಾನವಾಯುವು ಆಗ ಮಂತ್ರ ಜಪಮಾಡುವಂತೆ ಮಾಡುವುದೇ ಸುಷುಪ್ತಿ ಜಯವು. ಸುಷುಪ್ತಿಜಯವಾದವನಿಗೆ ಜಾಗ್ರತ್ಸ್ವಪ್ನಗಳೆರಡರಲ್ಲೂ ಉದಾನವಾಯುವು ಮಂತ್ರಜಪವನ್ನು ಮಾಡುವುದು. ಆಗ ದೃಶ್ಯವೆಲ್ಲವೂ ದಾಳಿಂಬದ ಹಣ್ಣು ಬಿರಿಯುವಂತೆ ಬಿರಿದು ತನ್ನೊಳಗೆ ಹೊರಗೆ ಎಲ್ಲೆಲ್ಲೂ ತುಂಬಿರುವ ಬ್ರಹ್ಮವಸ್ತುವನ್ನು ಪ್ರದರ್ಶಿಸುವುದು. ಆ ಬ್ರಹ್ಮವಸ್ತುವು ತಾನೊಲಿದವರಿಗೆ ಒಲಿಯುವುದಲ್ಲದೆ ಇತರರಿಗೆ ಒಲಿಯುವುದಿಲ್ಲ. ಅದರಿಂದ ಆ ಬ್ರಹ್ಮವಸ್ತುವಿನ ಒಲವನ್ನು ಪಡೆದಾಗ, ಅದು ಒಲಿದಾಗ ಜಾಗ್ರತ್ ಸ್ವಪ್ನ ಸುಷುಪ್ತಿಗಳು ಮೂರೂ ಇಲ್ಲವಾಗಿ, ಇವೊಂದೂ ಅಲ್ಲದ ಇನ್ನೊಂದು ಅವಸ್ಥೆಯು ಬರುವುದು. ಅದನ್ನು ತುರೀಯವೆನ್ನುವರು. ಆ ತುರೀಯವು ಬಂದಾಗ ಈ ದೇಹವು ಒಂದು ದುರ್ಗವಾಗಿ ತನ್ನನ್ನು ಹಿಡಿದುಕೊಂಡಿದೆಯೆಂಬುದು ಗೊತ್ತಾಗುವುದು.

“ಈ ದೇಹವು ಇರುವಂತೆಯೇ ಅದು ವಿಪನ್ನವಾಗುವುದಕ್ಕೆ ಮೊದಲೇ, ಈ ಸ್ಥಿತಿಯನ್ನು ಕಾಣುವುದೇ ಪುರಂದರೋಪಾಸನೆಯ ಫಲವು. ಅದು ದೊರೆಯಲೆಂದು ನನ್ನನ್ನು ಆಶ್ರಯಿಸಿ. ನಾನು ಪ್ರಜಾಪತಿಯ ದಯೆಯಿಂದ ಪಡೆದ ಈ ವಿದ್ಯೆಯನ್ನು ಬಲ್ಲವರು ಉಪಾಸನೆ ಮಾಡುವರು. ಇದರಿಂದ ನನ್ನಲ್ಲಿ ಅಪ್ಯಯವನ್ನು ಪಡೆದು ಮನ್ವಂತರದ ಕೊನೆಯವರೆಗೂ ನನ್ನಲ್ಲಿದ್ದು ನನ್ನೊಡನೆ ಮುಕ್ತರಾಗುವರು. ‘ಅದು ಬೇಡ, ಸದ್ಯೋಮುಕ್ತಿಯು ಬೇಕು’ ಎನ್ನುವವರು ಪರಶಿವವನ್ನು ಆಶ್ರಯಿಸಿ, ಶುದ್ಧವಿದ್ಯೆಯಿಂದ ಉಪಾಸನೆ ಮಾಡಿದರೆ, ಆತನು ದೇಹದಲ್ಲಿರುವ ಸ್ಥೂಲಸೂಕ್ಷ್ಮ ಕಾರಣ ಪುರತ್ರಯಗಳು ಒಟ್ಟು ಸೇರಿದಾಗ ಅವನ್ನು ಭೇದಿಸಿ ಭಕ್ತನನ್ನು ಕೃತಾರ್ಥಮಾಡುವನು.”

“ಇದು ತಮ್ಮ ಪ್ರಶ್ನಕ್ಕೆ ಉತ್ತರವು. ಇನ್ನೇನಾಗಬೇಕು ? ಇದು ತಿಳಿಯಿತೆ?” ಋಷಿಗಣವು ತಾವು ಕೃತಾರ್ಥರಾದೆವೆಂದು ಪುರಂದರನಿಗೆ ವೇದೋಕ್ತವಾದ ಇಂದ್ರಮಂತ್ರಗಳ ಪೂರ್ವಕವಾದ ನಮಸ್ಕಾರ ಮಾಡಿದರು.

ಇಂದ್ರನಿಗೆ ಬ್ರಹ್ಮ ವಿಚಾರಮಾಡುತ್ತ ಪೂರ್ಣಭಾವವು ಬಂದಿತು. ಆಗ ಮತ್ತೆ ಯಾರದೂ ನೆನಪಿರಲಿಲ್ಲ. ವೇಳೆಯಾಯಿತೆಂದು ಪ್ರಹರಿಯು ದೀರ್ಘ-ಉಚ್ಚ-ಸ್ವರದಿಂದ ಸಭೆಯ ಮುಕ್ತಾಯವನ್ನು ಸೂಚಿಸಿದನು. ಇಂದ್ರನು ಶಚೀಸಮೇತನಾಗಿ ಎದ್ದನು. ಸಭಾಸದರೂ ಎದ್ದರು.

* * * *

೨.ಬಲಿತ ದುಗುಡು

ಸಂಪಾದಿಸಿ

ಧ್ಯಾನಬಲದಿಂದ ಪೂರ್ಣಯೋಗವನ್ನು ಋಷಿಗಣಗಳಿಗೆ ಉಪದೇಶ ಮಾಡಿದ ಇಂದ್ರನು ಅಂತಃಪುರದಲ್ಲಿ ಶಚೀಸಮೇತನಾಗಿ ಕುಳಿತಿದ್ದಾನೆ. ದೇವಗುರುವು ಸಭೆಗೆ ಬಂದುದು, ಆತನು ಅಲ್ಲಿಯೇ ಅಂತರ್ಧಾನವಾದುದು, ಆತನನ್ನು ಹುಡುಕಿಕೊಂಡು ಹೋದ ಮರುತನು ಆತನು ಎಲ್ಲಿಯೂ ಸಿಕ್ಕಲಿಲ್ಲವೆಂದು ಬಂದು ಹೇಳಿದುದು ಎಲ್ಲವೂ ಆತನ ಮನಸ್ಸಿನ ಮೇಲೆ ಪರಿಣಾಮ ಮಾಡಿವೆ. ಆತನು ಯೋಚಿಸುತ್ತಿದ್ದಾನೆ ; “ ಇಂದೇಕೆ ನನ್ನ ಮನಸ್ಸು ಹೀಗೆ ಮಾಡಿತು ? ದೇವಸಭೆಯಲ್ಲಿದ್ದಾಗ ಬಂದ ಋಷಿಗಳನ್ನು ‘ಇದು ಧರ್ಮ ಬ್ರಹ್ಮಪ್ರಶ್ನೆ, ಧರ್ಮಾಂಗಣಕ್ಕೆ ಬನ್ನಿ. ಅಲ್ಲಿ ಅದರ ವಿಮರ್ಶೆ ಎನ್ನದೆ, ನಾನೇಕೆ ಅದರ ವಿಮರ್ಶೆಯನ್ನು ಅಲ್ಲಿಯೇ ಆರಂಭಿಸಿದೆ ? ಅಥವಾ ‘ದೇವಗುರುಗಳು ಇದ್ದಾರೆ. ಅವರ ಬಳಿಗೆ ಹೋಗಿ’ ಎಂದೇಕೆ ಕಳುಹಿಸಲಿಲ್ಲ ?.... ಇಲ್ಲ. ಈ ಪುರಂದರಪ್ರಶ್ನವನ್ನು ನಾನಲ್ಲದೆ ಇನ್ನು ಯಾರೂ ಬಿಡಿಸುವಂತಿಲ್ಲ. ಆಯಿತು. ಆಗ ನಾನು ಪೂರ್ಣಧ್ಯಾನದಲ್ಲಿ ನಿಂತು ಆ ಪ್ರಶ್ನಕ್ಕೆ ಉತ್ತರ ಹೇಳುತ್ತಿರುವಾಗಲೇ ಬೃಹಸ್ಪತಿಯು ಬರಬೇಕೆ? ಆಗ ನಾನು ತಾನೇ ಏನು ತಪ್ಪÅ ಮಾಡಿದೆ? ಪೂರ್ಣಧ್ಯಾನ ದಲ್ಲಿರುವವನು ಯಾವನು ತಾನೇ ಆ ತನ್ನೆದುರು ಬಂದವರನ್ನು ಎದ್ದು ಗೌರವಿಸುವನು? ಅಥವಾ ಆಗ ಸಭಾಪತಿತ್ವವನ್ನು ವಹಿಸಿದ್ದೆನಾಗಿ ಗೌರವಿಸಲೇ ಬೇಕಾಗಿತ್ತೋ? ಆಗಿಹೋಯಿತು. ಈಗ ಏನಾದರೂ ಮಾಡಿ ಈ ತಪ್ಪÅ ತಿದ್ದಿಕೊಳ್ಳಬೇಕು. ಧರ್ಮಾಚಾರ್ಯನಲ್ಲದೆ ತ್ರಿಲೋಕಾಧಿಪತ್ಯವನ್ನು ಕಾಪಾಡಿಕೊಳ್ಳುವುದೆಂತು? ಕಾಲಧರ್ಮವನ್ನರಿತು, ಆಗಾಗ ಕಾಲೋಚಿತವಾದ ಕರ್ಮಗಳನ್ನು ನನ್ನಿಂದ ಮಾಡಿಸುವುದಕ್ಕೆ ಒಬ್ಬರೂ ಇಲ್ಲದಿದ್ದರೆ ಕರ್ಮಲೋಪವಾಗುವುದು. ಕರ್ಮಲೋಪವು ಆದರೆ ಧರ್ಮಲೋಪವಾಗುವುದು. ಧರ್ಮಲೋಪವಾದರೆ ಅಧರ್ಮದ ಪ್ರಾದುರ್ಭಾವವಾಗಿ ಅಸುರರಿಗೆ ಉಚ್ಛ್ರಾಯಕಾಲವು ಬರುವುದು. ಹಾಗೆ ಮಾಡಿದರೆ ನಮ್ಮ ದೇವತೆಗಳ ಕರ್ತವ್ಯಕ್ಕೆ ಹಾನಿ ಬರುವುದು. ಈ ಲೋಕವನ್ನು ಸೃಷ್ಟಿಸಿದಾಗ ಲೋಕದಲ್ಲಿ ಇರುವ ಭೋಗಗಳನ್ನೆಲ್ಲ, ಭೋಗ ಸಾಮಗ್ರಿಗಳನ್ನೆಲ್ಲ ಪ್ರಜಾಪತಿಯು ನಮ್ಮ ವಶಕ್ಕೆ ಕೊಟ್ಟಿರುವನು. ನಾವು, ಭೋಗಗಳಿಂದ ಸುಖವಾಗಲೆಂದು ಲೋಕಲೋಕದಲ್ಲಿರುವ ಪ್ರಜೆಗಳು ಪ್ರತಿಯೊಬ್ಬರಿಗೂ ಭೋಗಗಳನ್ನೂ ಭೋಗಸಾಧನೆಗಳನ್ನೂ ಭೋಗಫಲವಾದ ಸುಖ-ದುಃಖಗಳನ್ನೂ ಹಂಚುವೆವು. ಅಸುರರೋ? ಅಸುರ ಸಾಮ್ರಾಜ್ಯವಾದರೆ ತಪ್ಪೇನು?”

“ದೇವತೆಗಳು ಸುಖವನ್ನು ವರ್ಧಿಸುವವರು. ಅಸುರರು ದುಃಖವನ್ನು ವರ್ಧಿಸುವವರು. ಹಸುವು ಹುಲ್ಲು ತಿನ್ನಲಿ, ಸೊಪ್ಪÅ ತಿನ್ನಲಿ, ಹೊಟ್ಟು ತಿನ್ನಲಿ, ಹಿಂಡಿ ತಿನ್ನಲಿ ಅದರಲ್ಲಿ ಹಾಲೇ ಹೆಚ್ಚುವುದು. ಬೇವಿನ ಗಿಡಕ್ಕೆ ಏನು ಹಾಕಿ ಪೋಷಿಸಿದರೂ ಅದರ ರಸವು ಕಹಿಯಾಗಿಯೇ ಇರುವುದು. ಹಾಗೆ ಹವ್ಯಾದಿಗಳಿಂದ ಆರಾಧಿತರಾದರೆ ದೇವತೆಗಳು ಸುಖವನ್ನೂ, ಸುಖವನ್ನು ಅನುಭವಿಸುವ ಶಕ್ತಿಯನ್ನೂ, ಅದು ಕೊನೆಯಲ್ಲಿ ಆನಂದವಾಗುವ ಶಕ್ತಿಯನ್ನೂ ಬೆಳೆಸುವರು. ಅಸುರರು ಹವ್ಯಾಸಿಗಳಿಂದ ಆರಾಧಿತರಾದರೂ, ದುಃಖವನ್ನೂ, ಎಲ್ಲವೂ ದುಃಖದಲ್ಲೇ ಪರ್ಯವಸಾನವಾಗುವಂತೆ ಮಾಡುವ ಶಕ್ತಿಯನ್ನೂ ಹೇಗೆ ಹೇಗೊ, ಕೊನೆಗೆ ದುಃಖವೇ ಆಗುವಂತಹ ಶಕ್ತಿಯನ್ನೂ ಬೆಳೆಸುವರು. ಅದರಿಂದಲೇ ನಿಸರ್ಗವು ಅವರನ್ನು ತುಳಿದಿರಿಸಿ, ದೇವತೆಗಳಿಗೆ ಅಜರಾಮರತ್ವವನ್ನು ಕೊಟ್ಟಿರುವುದು.ನಿಸರ್ಗದತ್ತವಾದ ಈ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲೇಬೇಕು. ಈ ಸ್ಥಿತಿಯನ್ನು ಕಾಪಾಡಲು ಧರ್ಮಾಚಾರ್ಯನು ಇದ್ದೇ ಇರಬೇಕು” ಎಂದು ಮುಂತಾಗಿ ಯೋಚಿಸುತ್ತಿದ್ದನು.

ಶಚಿಯು ಮಗ್ಗುಲಲ್ಲಿ ಕುಳಿತು ಗಂಡನಿಗೆ ಬೀಸಣಿಗೆಯಿಂದ ಸಣ್ಣಗೆ ಗಾಳಿ ಹಾಕುತ್ತಿದ್ದಾಳೆ. ಆತನ ಮುಖವು ತೇಜೋವಿಹೀನವಾಗಿರುವುದರಿಂದಲೇ ಆಕೆಯು ಊಹಿಸಿಕೊಂಡಿದ್ದಾಳೆ. ಸಾಲದುದ್ದಕ್ಕೆ ದೇವಲೋಕದಲ್ಲೆಲ್ಲಾ ಗುಸುಗುಂಪಾಲಾಗಿ ಆಡಿಕೊಳ್ಳುತ್ತಿರುವ ಮಾತು ಆಕೆಯ ಕಿವಿಗೂ ಬಿದ್ದಿದೆ. “ದೇವೇಂದ್ರನು ದೇವಗುರುಗಳಿಗೆ ಮರ್ಯಾದೆಯನ್ನು ತೋರಲಿಲ್ಲವೆಂದು ಅವರು ಎಲ್ಲಿಯೋ ಹೊರಟೇ ಹೋಗಿರುವರಂತೆ ! ಅದರಿಂದ ಏನೇನು ಅನರ್ಥಗಳಾದಾವೊ !” ಎಂದು ಭೀತಿ ಪಡುವವರು ಕೆಲವರು. “ಉಂಟೇನು ? ದೇವತೆಗಳೆಲ್ಲರ ಸಮಷ್ಟಿ ಕಾರ್ಯ ಲೋಕಕ್ಷೇಮವನ್ನು ನೋಡಿಕೊಳ್ಳುವುದು. ಅದರಿಂದ ದೇವಗುರುವು ಬಹುದಿನ ಎಲ್ಲಿಯೂ ತಲೆ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲಿದ್ದರೂ ಬಂದೇ ಬರಬೇಕು” ಎಂದು ಇನ್ನು ಕೆಲವರು.

“ಒಂದು ವೇಳೆ ಅಧಿಕಾರದಲ್ಲಿರುವವರು ಕಾರಣಾಂತರಗಳಿಂದ ತಪ್ಪಿ ನಡೆದರೂ ಗುರುಗಳಾದವರು ಅದನ್ನು ಸಹಿಸಿಕೊಂಡು ನಡೆದರೆ ಏನು ತಪು ? ನಮಗೇನೋ ಬೃಹಸ್ಪತ್ಯಾಚಾರ್ಯರು ಮಾಡಿದುದು ಕೊಂಚವೂ ಒಪ್ಪಿತವಿಲ್ಲ. ಇದರಿಂದ ಏನೇನು ಅನರ್ಥವಾಗುವುದೋ ?” ಎಂದು ಇನ್ನು ಕೆಲವರು.

“ಅಂತಹ ಕಾಲ ಬಂದರೆ ದೇವರಾಜನು ಹೋಗಿ ಇನ್ನೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಂಡು ಬರುವನು. ಏನು ಮಹಾ!” ಎಂದು ಇನ್ನು ಕೆಲವರು.

ಹೀಗೆ ನಾನಾವಿಧವಾಗಿ ಆಡಿಕೊಳ್ಳುತ್ತಿರುವ ಮಾತುಗಳೆಲ್ಲ ಆಕೆಯ ಕಿವಿಗೂ ಬಿತ್ತು. ತನ್ನ ಕಿವಿಗೆ ಬಿದ್ದುದು ಇಂದ್ರನ ಕಿವಿಗೂ ಬಿದ್ದೇ ಇರಬೇಕು. ಅದರಿಂದ ಅದನ್ನೇಕೆ ಪ್ರಸ್ತಾಪಿಸಿ, ಆತನ ಮನಸ್ಸಿಗೆ ನೋವುಂಟು ಮಾಡಬೇಕು ಎಂದು ಆಕೆಯು ಸುಮ್ಮನಿದ್ದಾಳೆ. ಆದರೂ ಪ್ರಸ್ತಾಪಿಸುವುದೇ ಒಳ್ಳೆಯದೇನೋ ಎಂದು ಇನ್ನೊಂದು ಮನಸ್ಸು.

ಆ ವೇಳೆಗೆ ಪ್ರಹರಿಯು ತೇಜೋಮಂಡಲವಾಗಿ ಸನ್ನಿಧಾನಕ್ಕೆ ಪ್ರವೇಶಿಸಿ, ‘ಚಿತ್ರರಥನೆಂಬ ಗಂಧರ್ವಪತಿಯು ಬಂದಿರುವನು’ ಎಂದು ಬಿನ್ನವಿಸಿದನು. ಶಚಿಯು ಸುರಪತಿಯ ಮುಖವನ್ನು ನೋಡಿ, ಆತನ ಇಂಗಿತದಂತೆ ‘ಗಂಧರ್ವಪತಿಯನ್ನು ಬರಮಾಡು’ ಎಂದು ಪ್ರಹರಿಗೆ ಸೂಚಿಸಿದಳು. ಆತನು ಚಿತ್ರರಥನನ್ನು ಬರಮಾಡಿದನು.

ಚಿತ್ರರಥನು ಬಂದು ತ್ರಿಲೋಕಾಧಿಪತಿಗೆ ಸಲ್ಲಿಸಬೇಕಾದ ಮರ್ಯಾದೆಗಳನ್ನೆಲ್ಲಾ ಸಲ್ಲಿಸಿ ಅಪ್ಸರೋಗಂಧರ್ವರು ಸೇವೆಗಾಗಿ ಬಂದಿರುವುದನ್ನು ನಿವೇದಿಸಿದನು. ದೇವೇಂದ್ರನ ಮುಖದ ತೇಜಸ್ಸಿನಿಂದಲೇ ಆತನು ಆ ದಿನ ಘನಸಂಗೀತ ನರ್ತನಗಳಿಗೆ ಸಿದ್ಧನಾಗಿಲ್ಲವೆಂದು ತಿಳಿದು, ತನ್ನ ಗಣಗಳನ್ನು ಕರೆಸಿ, ಲಘುಗೀತ ನರ್ತನಗಳಿಂದ ಅಮರಪತಿಯನ್ನು ಓಲೈಸಿ, ಕರ್ತವ್ಯ ನಿರ್ವಾಹಮಾಡಿ ಹೋದನು.

ಎಂದಿನಂತೆ ಆಗಿದ್ದರೆ ದೇವರಾಜನು ಆ ಕೂಡಲೇ ಏಳಬೇಕಾಗಿತ್ತು. ಅಂದು ಏಕೋ ಇನ್ನೂ ಅಲ್ಲಿಯೇ ಕುಳಿತಿದ್ದನು. ಗೂಢಚಾರದ ಪಡೆಯ ಮುಖಂಡನು ಬಂದು ಕಾಣಿಸಿಕೊಂಡನು. ಏನೆಂದು ವಿಚಾರಿಸಲು, ಅವರು “ಜೀಯಾ, ಅಸುರಲೋಕದಲ್ಲಿ ಎಂದೂ ಇಲ್ಲದ ಸಂಭ್ರಮವು ಕಂಡುಬರುತ್ತಿದೆ. ಎಲ್ಲರೂ ಆಯುಧಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅವರ ವಾಹನಗಳು ತೇಜಸ್ವಿಗಳಾಗಿವೆ. ಅಸುರ ಸೇನಾಡಂಬರವು ಕಡಲಿನಂತೆ ಉಕ್ಕುತ್ತಿದೆ” ಎಂದನು.

ಇಂದ್ರನು ತಲೆದೂಗಿದನು. “ಹೌದು, ಹೌದು. ನಮ್ಮ ದುರ್ಬಲತೆಯೇ ಇತರರ ಬಲ. ಇರಲಿ, ಪ್ರಭಾವದಿಂದ ಸೋಲಿಸಿದ್ದವರನ್ನು ಇನ್ನು ಮೇಲೆ ಪ್ರತಾಪದಿಂದ ಸೋಲಿಸಬೇಕು. ದಿಕ್ಪಾಲಕರನ್ನೆಲ್ಲ ಸಿದ್ಧವಾಗಿರಬೇಕೆಂದು ಓಲೆಯನ್ನು ಬರೆಸು. ನಮ್ಮ ಸೇನೆಯು ಯಾವಾಗಲೆಂದರೆ ಆಗ ಮುನ್ನುಗ್ಗಲು ಸಿದ್ಧವಾಗಿರಲಿ” ಎಂದನು.

ಗೂಢಚಾರನು ಕೈಮುಗಿದು ಹೋದನು. ಧರ್ಮಾಚಾರ್ಯರ ಇಲ್ಲದಿರುವಿಕೆಯು ಆಗಲೇ ಕಾರ್ಯಕಾರಿಯಾಯಿತೇ ? ಎಂದು ಶಚಿಯು ಆಶ್ಚರ್ಯಪಡುತ್ತಿದ್ದು, ಎದ್ದು ಗಂಡನ ಹಿಂದೆ ಹೊರಟಳು.

* * * *

೩.ಅನರ್ಥ ಬೀಜ

ಸಂಪಾದಿಸಿ

ಅಮರರಿಗೂ ಅಸುರರಿಗೂ ಅಲ್ಲಲ್ಲಿ ಕೈ ಕೈ ಸೇರುತ್ತಿದೆ. ಅಮರರ ಏಟು ಬಲವಾಗಿದ್ದರೂ ವಿಜಯವು ಅಸುರರ ಪಾಲಾಗುತ್ತಿದೆ. ಎಲ್ಲಿ ಯಾವ ಲೋಕಪಾಲನ ಮೇಲೆ ಅಸುರರು ಧಾಳಿಯಿಡಿಯುವರೋ ಎಂಬ ಸಂಶಯವು ಅಮರರಿಗೆ ತಾನೇ ತಾನಾಗುತ್ತಿದೆ.

ಅಸುರ ವಿಜಯದ ಸುದ್ದಿಗಳೂ ಅಮರೇಂದ್ರನಿಗೆ ಗುಚ್ಛ ಗುಚ್ಛವಾಗಿ ಬರುತ್ತಿವೆ. ಇದುವರೆಗೆ ರಾಕ್ಷಸರೆಂದರೆ ಲಕ್ಷ್ಯವಿಲ್ಲದೆ ಇದ್ದ ದೇವರಾಜನಿಗೆ ಈಗ ಏಕೋ ಹೆದರಿಕೆಯಾಗುತ್ತಿದೆ. ಸಮುದ್ರದ ಹೃದಯದಂತೆ ಗಂಭೀರವಾಗಿದ್ದ ಮನವು ಸಮುದ್ರದ ಮೇಲ್ಮೈಯಂತೆ ಕ್ಷುಬ್ಧವಾಗುತ್ತಿದೆ. ಈ ಸಲವೇನಾದರೂ ತನಗೂ ರಾಕ್ಷಸರಿಗೂ ಪ್ರತ್ಯಕ್ಷವಾಗಿ ಯುದ್ಧವಾದರೆ ತನ್ನ ಗತಿಯೇನಾದಿತೋ ಎಂದು ಹೆದರಿಕೆಯಾಗುತ್ತಿದೆ. ಈ ಸಂದಿಗ್ಧಸ್ಥಿತಿಯಲ್ಲಿಯೇ ಒದ್ದಾಡುತ್ತಿರುವುದೋ? ಅಥವಾ ಅದಕ್ಕೆ ಏನಾದರೂ ಪ್ರತೀಕಾರ ಮಾಡುವುದೋ?

ಒಂದು ದಿನ ಸುರೇಂದ್ರನು ಏಕಾಂತದಲ್ಲಿ ಶಚಿಯೊಡನೆ ಆಲೋಚಿಸಿದನು. “ಇಂದ್ರಾಣಿ, ನನ್ನ ಪ್ರಭಾವವು ಲೋಪವಾಯಿತೇನೋ ಎನ್ನಿಸುತ್ತಿದೆ. ನಾನು ಅಕಾರ್ಯಗಳನ್ನು ಮಾಡಲಿಲ್ಲ. ಆದರೂ ಏಕೋ ಏನೋ ಎದೆಯು ನಡುಗುತ್ತಿದೆ. ಶತ್ರುಗಳನ್ನು ಎದುರಿಸಲಾರೆನೆನ್ನುತ್ತಿದೆ. ಏನು ಮಾಡಿದರೆ ಇದು ಸರಿಹೋದೀತು.”

ಇಂದ್ರಾಣಿಯು ಗಂಡನ ಕಾಲು ಒತ್ತುತ್ತಾ ಹೇಳಿದಳು : “ದೇವ, ಆ ದಿನ ಧರ್ಮಾಚಾರ್ಯರು ಮರೆಯಾದರಲ್ಲ ಅಂದಿನಿಂದ ದೇವಲೋಕಕ್ಕೇ ಒಂದು ಮೋಹವು ಮುಚ್ಚಿದಂತಿದೆ. ನಾನೂ ಈ ವಿಚಾರವನ್ನು ನಿನ್ನ ಬಳಿ ಎತ್ತಬೇಕು ಎಂದಿದ್ದೆ. ಅಲ್ಲದೆ, ನಿನಗೆ ತಿಳಿದಂತೆ ಅಲ್ಲಲ್ಲಿ ನಡೆಯುತ್ತಿರುವ ಕಾಳಗಗಳಲ್ಲಿ ಅಮರರ ಪ್ರತಾಪವು ಹೆಚ್ಚಿದ್ದರೂ ವಿಜಯಮಾಲೆಯು ಅಸುರರಿಗೆ ತಪ್ಪಿದ್ದಲ್ಲ. ಅದರಿಂದ ನಮ್ಮಲ್ಲಿಯೇ ಏನೋ ಲೋಪವಿರಬೇಕು. ಆ ಲೋಪವು ಧರ್ಮಾಚಾರ್ಯರ ಅಭಾವದಿಂದ ಆಗಿರಬೇಕು ಎಂದು ನನಗನ್ನಿಸುತ್ತಿದೆ.”

“ನಿಜ. ಧರ್ಮಲೋಪವಾದರೆ ಏನೇನು ಅನರ್ಥಗಳಾಗುವುವು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅಲ್ಲದೆ, ನಾವು ಕೆಡಿಸಬೇಕೆಂದಿರುವ ಮಾನವರಿಗೆ ಮೊದಲು ಧರ್ಮಲೋಪವಾಗುವಂತೆ ಮಾಡುವೆವು. ಉಚ್ಛ್ರಯವೂ ಧರ್ಮವೂ ಜೊತೆ ಜೊತೆಯಲ್ಲಿರುವವು. ಅದರಿಂದ, ನೀನು ಹೇಳಿದಂತೆ, ಈ ನಮ್ಮ ಪ್ರಭಾವಲೋಪವು ಧರ್ಮಲೋಪದಿಂದ ಆಗಿರಬೇಕು. ಆಗಲಿ ಆದಷ್ಟು ಬೇಗ ಪ್ರಜಾಪತಿಯ ಬಳಿಗೆ ಹೋಗಿ ಈ ಲೋಪವನ್ನು ಸರಿಪಡಿಸಿಕೊಂಡು ಬರುವೆನು.”

ಶಚಿಯು ಕೇಳಿದಳು - “ದೇವತೆಗಳಾದ ನಿಮಗೆ ಆಗಾಗ ಪ್ರಭಾವ ಲೋಪವಾಗುವುದಲ್ಲಾ ಏಕೆ ?” ಇಂದ್ರನು ಹೇಳಿದನು : “ದೇವಿ ಲೋಕದಲ್ಲಿ ಎಲ್ಲವೂ ನಮ್ಮ ನಮ್ಮ ಪೌರುಷದಿಂದಲೇ ನಡೆಯುವುದು ಎಂದು ಎಲ್ಲರ ನಂಬಿಕೆ. ಆದರೆ ನಿಜವಾಗಿ ಹೇಳುವೆನು. ಮತರ್ಯ್‌ಪಾತಾಳಗಳು ದೇವತೆಗಳ ಕೈಯಲ್ಲಿರುವುವು ; ದೇವಲೋಕವು ಕಾಲನ ಕೈಯಲ್ಲಿರುವುದು. ದೇವತೆಗಳಾದ ನಾವು ಕಾಲದ ಸ್ವರೂಪವನ್ನು ಇತರರಿಗಿಂತ ಕೊಂಚ ಹೆಚ್ಚಾಗಿ ಬಲ್ಲೆವು. ಆದರೆ ಕಾಲಸ್ವರೂಪವನ್ನು ಕಂಡವರಿಲ್ಲ. ಆ ಕಾಲದ ಪ್ರಭಾವವೆಂದರೆ ಮೊದಲು ಕೊನೆಯಾಗುವುದು. ಕೊನೆಯು ಮೊದಲಾಗುವುದು. ಅದನ್ನು ಕಾಲಸ್ವರೂಪನಾದ ಮಹಾವಿಷ್ಣುವೊಬ್ಬನು, ಆ ಕಾಲವನ್ನು ಗೆದ್ದಿರುವ ಮಹಾದೇವನು ಇಬ್ಬರಲ್ಲದೆ ಇನ್ನೂ ಯಾರೂ ಕಾಣರು. ಇವರಿಬ್ಬರ ಅನುಗ್ರಹದಿಂದ ಚತುರ್ಮುಖನು ಬಲ್ಲನು. ಅದರಿಂದ ನಾವು ಎಚ್ಚರವಾಗಿದ್ದೂ ತಪ್ಪÅವುದು ಕಾಲದ ಮಹಿಮೆ.

ಶಚಿಯು ಇನ್ನೂ ಏನೋ ಕೇಳಬೇಕು ಎಂದಿದ್ದಳು. ಅಷ್ಟರೊಳಗೆ ಮತ್ತೆ ಗೂಢಚಾರನು ಬಂದು ಅರಿಕೆಮಾಡಿದನು : “ಮಹೇಂದ್ರನಿಗೆ ವಿಜಯವಾಗಲಿ. ಪಾತಾಳಲೋಕದಿಂದ ದಾನವಸೇನೆಯು ಹೊರಟಿರುವುದು. ಯಮಧರ್ಮರಾಜನ ಸಂಯವಿನೀಪುರದತ್ತ ಹೋಗಬಹುದು.”

ಇಂದ್ರನು, “ಇನ್ನು ತಡೆಯಕೂಡದು. ಯಮಧರ್ಮರಾಜನ ಸಹಾಯಾರ್ಥವಾಗಿ ಒಂದು ಕೋಟಿ ದೇವಸೇನೆಯು ಹೋಗಬೇಕು ಎಂದು ಈ ಕೂಡಲೆ ಚಿತ್ರರಥನಿಗೆ ಅಪ್ಪಣೆಯನ್ನು ಕಳುಹಿಸು, ಉಚ್ಛ್ರೆಶ್ರವವು ಸಿದ್ಧವಾಗಲಿ, ನಾನು ಚತುರ್ಮುಖನನ್ನು ಕಂಡುಬರುವೆನು.” ಇಂದ್ರನು ಅವಸರವಾಗಿ ಹೊರಟನು. ಉಚ್ಛೈಶ್ರವವು ಅರಮನೆಯೊಳಕ್ಕೆ ಬಂದಿತು. ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬ್ರಹ್ಮಲೋಕದ ಹಾದಿಯಲ್ಲಿ ಇದ್ದನು.

ಚತುರ್ಮುಖನು ಶ್ವಾಸವನ್ನು ಅನುಸಂಧಾನ ಮಾಡಿ ನೋಡಿದನು. ಶ್ವಾಸವು “ಅಸುರರು ಗೆದ್ದರೂ ಗೆಲ್ಲಬಹುದು. ಆದರೆ ದೇವರಾಜನು ಬರುತ್ತಿದ್ದಾನೆ. ಆತನ ಪ್ರಯತ್ನದಿಂದ ಅಸುರರಿಗೆ ಪರಾಜಯವಾದರೂ ಆಗಬಹುದು” ಎಂದು ಹೇಳಿತು. ಚತುರ್ಮುಖನು ಎಲ್ಲ ಕೆಲಸವನ್ನೂ ಬಿಟ್ಟು ಕಾಲವನ್ನು ಕುರಿತು ಚಿಂತಿಸಿದನು. “ದೇವತೆಗಳಿಗೆ ಪ್ರಭಾವಲೋಪವಾಗಿದೆಯಾದರೂ ಅಸುರರು ಲೋಕತ್ರಯಾಧಿಪತ್ಯವನ್ನು ವಹಿಸುವ ಕಾಲವು ಇನ್ನೂ ಬಂದಿಲ್ಲ” ಎಂದು ತಿಳಿಯಿತು. ಪ್ರಭಾವಲೋಪವಾಗಿರುವುದು ಏಕೆ ಎಂಬುದನ್ನೂ ವಿಚಾರಮಾಡಿ ನೋಡಿದನು. ‘ಧರ್ಮಾಚಾರ್ಯನಾದ ಬೃಹಸ್ಪತಿಯು ಮರೆಯಾಗಿದ್ದಾನೆ’ ಎಂದು ತಿಳಿಯಿತು. ಬ್ರಹ್ಮನು ತನ್ನ ಪ್ರಭಾವದಿಂದ ಬೃಹಸ್ಪತಿಯನ್ನು ಕರೆದನು. ಬೃಹಸ್ಪತಿಯು ಬಂದು ವಿನಯದಿಂದ “ನನಗೆ ಇನ್ನು ಒಂದು ವರುಷ ಅವಕಾಶ ಕೊಡಬೇಕು, ಅದುವರೆಗೆ ಒಂದು ತಪಸ್ಸು ಮಾಡಬೇಕಾಗಿದೆ” ಎಂದನು. ಬ್ರಹ್ಮನು ನಕ್ಕು ‘ತಪ್ಪಿಸಿಕೊಳ್ಳುವುದಕ್ಕೆ ಕಾರಣವು ಚೆನ್ನಾಗಿದೆ” ಎಂದು ಆತನನ್ನು ಬೀಳ್ಕೊಟ್ಟು ಮುಂದೇನು ಮಾಡಬೇಕು ಎಂದು ಆಲೋಚಿಸಿದನು. ಆತನಿಗೆ ಇಂದ್ರನು ತನಗೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಡು ಎಂದು ಕೇಳಲು ಬರುವನೆಂದು ಗೊತ್ತು.

ಆತನ ಮನಸ್ಸು ಹುಡುಕಿತು : “ಧರ್ಮಾಚಾರ್ಯನಿಗೆ ಇರಬೇಕಾದ ಗುಣಗಳೆಲ್ಲವೂ ಯಾರಲ್ಲಿ ಉಂಟು ? ನವಬ್ರಹ್ಮರು ಸಂತಾನಾರ್ಥವಾಗಿ ತಪಸ್ಸು ಮಾಡುತ್ತಿರುವರು. ಕಶ್ಯಪನ ಮಕ್ಕಳು ಬೇರೆ ಬೇರೆ ಕಾರ್ಯದಲ್ಲಿ ನಿಯೋಜಿತರಾಗಿರುವರು. ದಕ್ಷನ ಮಕ್ಕಳು ಆಗುವುದಿಲ್ಲ ಹೀಗೆ ಚಿಂತಿಸುತ್ತಾ ತ್ವಷ್ಟುೃಬ್ರಹ್ಮನ ಮಗನಾದರೆ ಆಗಬಹುದು” ಎಂದುಕೊಂಡನು. ಆ ವೇಳೆಗೆ ‘ಇಂದ್ರನು ದರ್ಶನಾರ್ಥವಾಗಿ ಬಂದಿರುವನು’ ಎಂದು ಪ್ರಹರಿಯು ಬಂದು ಸೂಚಿಸಿದನು.

ಬ್ರಹ್ಮನು ಇಂದ್ರನನ್ನು ಬರಮಾಡಿಕೊಂಡನು. ಆತನ ಮುಖವನ್ನು ನೋಡುತ್ತಿದ್ದ ಹಾಗೆಯೇ ಆತನಿಗೆ ಆಗಿರುವ ತೇಜೋಹಾನಿಯನ್ನು ಕಂಡುಕೊಂಡು “ಏನು ಸಮಾಚಾರ? ಎಲ್ಲೂ ಇಲ್ಲದ ಅವಸರದಲ್ಲಿ ಬಂದಂತಿದೆ ?” ಎಂದು ಆದರದಿಂದ ವಿಚಾರಿಸಿದನು. ಇಂದ್ರನು ಒಂದು ಗಳಿಗೆ ತಲೆಯನ್ನು ಬಗ್ಗಿಸಿಕೊಂಡಿದ್ದು, “ದೇವಾ, ಎಲ್ಲವನ್ನೂ ಬಲ್ಲೆಯಾದರೂ ಏನೂ ತಿಳಿಯದವನಂತೆ ವಿಚಾರಿಸುತ್ತಿರುವೆ. ಆಗಲಿ, ಅರಿಕೆಮಾಡುವೆನು. ನಮ್ಮ ಧರ್ಮಾಚಾರ್ಯನಾದ ಬೃಹಸ್ಪತಿಯು ಎಲ್ಲಿಯೋ ಅಡಗಿಕೊಂಡಿರುವನು. ನಾವು ಮಾಡಬೇಕಾದ ಕರ್ಮವು ಲೋಪವಾಗಿ ನಮಗೆ ತೇಜೋಹಾನಿಯಗಿರುವುದು. ನಮ್ಮ ತೇಜೋಹಾನಿಯಿಂದ ದೈತ್ಯದಾನವರು ಪ್ರಬಲವಾಗಿ ನಮ್ಮ ಮೇಲೆ ದಾಳಿಯಿಡಬೇಕು ಎಂದಿರುವರು. ಅದರಿಂದ ಅನರ್ಥವಾಗುವ ಮೊದಲೇ ನಮಗೊಬ್ಬ ಧರ್ಮಾಚಾರ್ಯನನ್ನು ಕರುಣಿಸಬೇಕು” ಎಂದು ಬಿನ್ನವಿಸಿಕೊಂಡನು.

ಬ್ರಹ್ಮನು ನಿಟ್ಟುಸಿರು ಬಿಟ್ಟು ಹೇಳಿದನು. “ಇಂದ್ರ, ಕಾರ್ಯವು ಮಿಂಚಿತು. ನೀನು ಸ್ಥಲಾಸ್ಥಲ ಪರಿಗಣವಿಲ್ಲದೆ ನಡೆಸಿದ ಪ್ರಶ್ನೋತ್ತರಗಳ ಫಲವನ್ನು ಅನುಭವಿಸಬೇಕಾಗಿದೆ. ನಾನೇನೋ ನಿನಗೊಬ್ಬ ಧರ್ಮಾಚಾರ್ಯನನ್ನು ಕೊಡುವೆನು. ಆದರೆ ಅದರಿಂದ ಅನರ್ಥವಾಗದಂತೆ ನೋಡಿಕೊಳ್ಳುವುದು ನಿನ್ನ ಕಾರ್ಯ.”

ಇಂದ್ರನು ಬ್ರಹ್ಮದೇವನ ಮಾತಿನ ಅರ್ಥವನ್ನು ಪರಿಗ್ರಹಿಸಿದನು. ಆಗುವ ಕಾರ್ಯದಲ್ಲಿ ಏನೋ ವಿಷಾದಬೀಜವಿದೆಯೆನ್ನಿಸಿತು. ಆದರೂ ಅಧಿಕಾರಸಹಜವಾದ ದರ್ಪದಿಂದ “ಇದನ್ನು ಬ್ರಹ್ಮದೇವನ ಪ್ರಸಾದವೆಂದು ಅಂಗೀಕರಿಸುವೆನು. ಇದರಿಂದ ದೇವಕುಲಕ್ಕೆ ಯಶಸ್ಸಾಗಲಿ ಎಂದು ಸ್ವೀಕರಿಸುವೆನು” ಎಂದು ಕೈ ಮುಗಿದನು. ಬ್ರಹ್ಮನು “ಹಾಗೇ ಆಗಲಿ, ನಿನಗೆ ಈ ಭಾವವಿರುವವರೆಗೂ ಏನೂ ಅನರ್ಥವಾಗದಿರಲಿ” ಎಂದು ಆಶೀರ್ವಾದ ಮಾಡಿ, ಮುಂದಿನ ಧರ್ಮಾಚಾರ್ಯನನ್ನು ಸೂಚಿಸಿದನು; “ತ್ವಷ್ಷೃಬ್ರಹ್ಮನ ಮಗನಾದ ವಿಶ್ವರೂಪಾಚಾರ್ಯನುಂಟಲ್ಲ. ಆತನು ಬೃಹಸ್ಪತಿ ಸಮನು. ಮಹಾತೇಜಸ್ವಿಯು. ಸಾಂಗವಾಗಿ ವೇದಗಳನ್ನು ಬಲ್ಲವನು. ಜೊತೆಗೆ ಶಾಂತ ಘೋರಕ್ರಿಯೆಗಳೆರಡನ್ನೂ ಬಲ್ಲವನು. ಶಾಪಾನುಗ್ರಹಶಕ್ತನು. ಆತನಿಗೆ ಮೂರು ಮುಖಗಳು. ಒಂದರಿಂದ ಯಾವಾಗಲೂ ವೇದಪಾರಾಯಣವನ್ನು ಮಾಡುತ್ತಿರುವನು. ಇನ್ನೊಂದರಿಂದ ಮಾತೃವಂಶದವರಿಂದ ಕಲಿತಿರುವ ಸುರಾಪಾನವನ್ನು ಮಾಡುವನು. ಮತ್ತೊಂದರಿಂದ ನಿನಗೆ ಪೌರೋಹಿತ್ಯವನ್ನು ಮಾಡಿಸುವನು. ನೀನು ಹೋಗಿ ಪ್ರಾರ್ಥಿಸಿದರೆ ದೇವತೆಗಳು ತನಗೆ ಪಿತೃಗಳು ಎಂದು ಗೌರವಿಸಿ ನಿಮ್ಮ ಯಾಜನವನ್ನು ಅಂಗೀಕರಿಸುವನು. ಆತನಲ್ಲಿ ತಪ್ಪಿ ನಡೆದರೆ ನಿನಗೆ ಅನರ್ಥವು ತಪ್ಪದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಆತನನ್ನು ದೇವಾಚಾರ್ಯನಾಗುವಂತೆ ಪ್ರಾರ್ಥಿಸಿ ಒಪ್ಪಿಸು” ಎಂದನು.

ಇಂದ್ರನು ಬ್ರಹ್ಮದೇವನಿಗೆ ಯಥೋಚಿತವಾಗಿ ಸಮರ್ಚನವನ್ನು ಒಪ್ಪಿಸಿ, ಆತನ ಅಪ್ಪಣೆಯನ್ನು ಪಡೆದು ವಿಶ್ವರೂಪನಲ್ಲಿಗೆ ಹೊರಟನು. ಆತನು ಎಲ್ಲವನ್ನೂ ಕೇಳಿ “ಬ್ರಹ್ಮನಪ್ಪಣೆಯೆಂದು, ಪಿತೃಗಳ ಸೇವೆಯೆಂದು ನಾನು ಈ ಕಾರ್ಯವನ್ನು ನನಗೆ ಇಷ್ಟವಿಲ್ಲದಿದ್ದರೂ ವಹಿಸಿಕೊಳ್ಳುವೆನು. ಅದರೆ, ನಾನು ಯಾವಾಗಲೂ ನನಗೆ ತೋರಿದಂತೆ ನಡೆಯುವವನು. ಒಬ್ಬರ ಅಂಕೆ ಸಂಕೆಗಳಿಗೆ ಬಗ್ಗುವವನಲ್ಲ” ಎಂದು ಹೇಳಿ ಧರ್ಮಾಚಾರ್ಯತ್ವವನ್ನು ಒಪ್ಪಿಕೊಂಡನು. ಇಂದ್ರನು ಆತನ ಸತತ ಸುರಾಪಾನದಲ್ಲಿ ಅಭಿರುಚಿಯಿಲ್ಲದವನಾದರೂ ದೇವಲೋಕದಲ್ಲಿ ವಿಶ್ವರೂಪನು ಸರಿಹೋಗಬಹುದು ಎಂದು ಆತನ ನಿಯಮಗಳೊಡನೆ ಆತನನ್ನು ಒಪ್ಪಿಕೊಂಡನು.

೪.ಬೀಜವು ಅಂಕುರಿಸಿತು

ಸಂಪಾದಿಸಿ

ವಿಶ್ವರೂಪಾಚಾರ್ಯನು ದೇವತೆಗಳ ಧರ್ಮಾಚಾರ್ಯನಾದನೆಂದು ಅಸುರ ಗಣವು ಹರ್ಷ ಪಟ್ಟಿತು. ‘ಇದುವರೆಗೂ ಕಂಡು ಕಾಣದ ಹಾಗೆ ಅಮರಾವತಿಗೆ ಹೋಗಿಬರುತ್ತಿದ್ದ ಅವರಿಗೆ ಇನ್ನು ಧೈರ್ಯವಾಗಿ ಯಾವ ಅಡ್ಡಿಯೂ ಇಲ್ಲದೆ ಅಮರಾವತಿಗೆ ಹೋಗಿ ಬರುವಂತಾಯಿತು’ ಎಂದು ಸಂತೋಷ. ಎಷ್ಟಾಗಲಿ ವಿಶ್ವರೂಪನು ಅಸುರಸ್ತ್ರೀಯ ಗರ್ಭದಲ್ಲಿ ಹುಟ್ಟಿದವನು. ಅಸುರಗಣವೆಲ್ಲ ಆತನಿಗೆ ಮಾತಾಮಹವರ್ಗ.

ಒಂದು ದಿನ ರಾತ್ರಿ ಅಸುರಗಣದವರ ಕಡೆಯಿಂದ ವಿರೂಪಾಕ್ಷನು ವಿಶ್ವರೂಪಾಚಾರ್ಯನನ್ನು ನೋಡಲು ಬಂದನು. ವಿಶ್ವರೂಪನು ಮಾತಾಮಹರ ಕಡೆಯಿಂದ ಬಂದವನೆಂದು ಅವನಿಗೆ ಆದರವನ್ನು ತೋರಿಸಿ “ಏನು” ? ಎಂದು ವಿಚಾರಿಸಿದನು.

ವಿರೂಪಾಕ್ಷನು ಹೇಳಿದನು : “ಅಸುರೀಪುತ್ರನಾದ ವಿಶ್ವರೂಪಾಚಾರ್ಯ, ನಾನು ಈ ಧರ್ಮಾಚಾರ್ಯಸ್ಥಾನವನ್ನು ಅಂಗೀಕರಿಸಿದೆನು. ಧರ್ಮಾಚಾರ್ಯನಾದುದರಿಂದ ದೇವಕುಲಕ್ಕೆ ರಕ್ಷೆಯನ್ನು ಕೊಡಬೇಕಾಯಿತು, ಕೊಟ್ಟಿದ್ದೇನೆ. ಅದೂ ವಿಫಲವಾಗದ ರಕ್ಷೆಯನ್ನು ಕೊಟ್ಟಿದ್ದೇನೆ. ಮಾತಾಮಹರು ನಿನ್ನನ್ನು ಕಳುಹಿಸಿದುದು ಒಳ್ಳೆಯದಾಯಿತು. ಇನ್ನು ಮೇಲೆ ಅವರು ದೇವತೆಗಳ ಮೇಲೆ ಕೈ ಮಾಡಬಾರದು. ಶುಕ್ರಾಚಾರ್ಯರಿಂದ ಅವರು ಯಾವ ರಕ್ಷಣೆಯನ್ನು ಪಡೆಯುವರೋ ಅದಷ್ಟು ಸಾಧ್ಯವಾದರೆ ಅದರ ಜೊತೆಗೆ ಇನ್ನಷ್ಟು ರಕ್ಷಣೆಯು ದೆವಕುಲಕ್ಕೆ ಇನ್ನು ಮೇಲೆ ಉಂಟು ಎಂಬುದನ್ನು ನಮ್ಮ ಮಾತಾಮಹವರ್ಗವು ತಿಳಿದು, ಲೋಕರಕ್ಷಣವು ನಿಷ್ಕಂಟಕವಾಗುವಂತೆ ನಡೆದುಕೊಳ್ಳತಕ್ಕದ್ದೆಂದು ಹೇಳು.”

ವಿರೂಪಾಕ್ಷನು ಕೇಳಿದನು : “ಹಾಗಾದರೆ ನಮ್ಮ ಆಶೋತ್ತರಗಳೆಲ್ಲ ಮಣ್ಣುಗೂಡಿದವು ಎನ್ನಬೇಕು ?”

“ನಾನು ಧರ್ಮಾಚಾರ್ಯನಾಗಿರುವವರೆಗೂ ದೇವತೆಗಳ ತೇಜಸ್ಸು ಕಡಿಮೆಯಾಗದಂತೆ ಮಾಡಿರುವೆನು?”

“ಏನು ಮಾಡಿದೆಯೆಂದು ಕೇಳಬಹುದೆ?”

ವಿಶ್ವರೂಪನು ನಕ್ಕನು : “ವಿರೂಪಾಕ್ಷ ಇಲ್ಲಿ ನೀನು ತಪ್ಪಿದೆ. ಎಷ್ಟಾಗಲಿ ನಮ್ಮ ತಾಯಿ ಅಸುರವರ್ಗದವಳು. ಅವರ ಮೇಲೆ ನನಗೆ ಅಭಿಮಾನವಿಲ್ಲವೆಂದು ಕೊಂಡೆಯಾ ? ಅದರಿಂದ, ಅಸುರ ಪ್ರತಿನಿಧಿಯಾದ ನೀನು ನನ್ನನ್ನು ಏನು ಬೇಕಾದರೂ ಕೇಳು. ಅಷ್ಟೇನು ? ನೀನಲ್ಲ, ಅಸುರಪಕ್ಷದವರು ಯಾರೇ ಆದರೂ ನನ್ನಲ್ಲಿಗೆ ಬಂದು ಏನು ಕೇಳಿದರೂ ಮುಚ್ಚುಮರೆಯಿಲ್ಲದೆ ಹೇಳುವೆನು. ಹಾಗೆಂದು ದೇವಲೋಕದ ಮೇಲೆ ಮಾತ್ರ ದಾಳಿಯಿಡಬಾರದು. ಅದಿರಲಿ. ಈಗ ನಾನು ಕೊಟ್ಟಿರುವ ರಕ್ಷೆಯೇನೆಂದು ಕೇಳಿದೆಯಲ್ಲ ? ಮಹಾತ್ಮನಾದ ದಧೀಚಿಯನ್ನು ಕೇಳಿ ಬಲ್ಲಿರಲ್ಲಾ ? ಆತನು ತನ್ನ ತಪೆÇೕಬಲದಿಂದ ಮೈಯಲ್ಲಿರುವ ರಕ್ತಮಾಂಸಗಳೂ ವಜ್ರಗಳಾಗುವಂತೆ ಮಾಡಿಕೊಂಡಿರುವನು. ಆತನು ಶ್ರೀಮನ್ನಾರಾಯಣನಿಂದ ನೇರವಾಗಿ ಪಡೆದುಕೊಂಡಿರುವ ನಾರಾಯಣಕವಚವೆಂಬ ಮಂತ್ರ ಕವಚವುಂಟು. ಅದನ್ನು ಆತನು ರಹಸ್ಯವಾಗಿ ನಮ್ಮ ತಂದೆಯಾದ ತ್ವಷ್ಟೃಬ್ರಹ್ಮನಿಗೆ ಅನುಗ್ರಹಿಸಿದನು. ಆತನು ಅದನ್ನು ಶಿಷ್ಯನೂ ಪುತ್ರನೂ ಆದ ನನಗೆ ಅನುಗ್ರಹಿಸಿದನು. ಅದನ್ನು ನಾನು ಲೋಕರಕ್ಷಣಾರ್ಥವಾಗಿ ಇಂದ್ರನಿಗೆ ಕೊಟ್ಟಿರುವೆನು. ಆತನು ನನ್ನಲ್ಲಿ ಗುರುಭಾವವನ್ನು ಇಟ್ಟಿರುವವರೆಗೂ ಅದು ಆತನನ್ನು ಕಾಪಾಡುವುದು. ಅದರಿಂದ ನೀವು ಯಾರೂ ಆತನ ಕಡೆಯವರ ಮೇಲೆ ಬಿದ್ದು ವ್ಯರ್ಥವಾಗಿ ವಿನಾಶವನ್ನು ಪಡೆಯಬೇಡಿ. ಇದನ್ನು ಅಸುರ ಪ್ರಪಂಚಕ್ಕೆಲ್ಲ ತಿಳುಹಿಸು.”

ವಿರೂಪಾಕ್ಷನು ತಲೆದೂಗಿದನು. “ಅಲ್ಲಿಗೆ ದೇವತೇಜಸ್ಸು ಹಾನಿಯಾಗಿದ್ದುದು ಕೂಡಿಕೊಂಡಿತು. ಇನ್ನು ನಮ್ಮ ಕೈ ನಡೆಯುವುದಿಲ್ಲ. ಆಯಿತು, ಆದರೆ ನಾನು ಬಂದು, ಅಸುರರಿಗಾಗಿ ಏನೂ ಸಾಧಿಸದೆ ಹಿಂತಿರುಗಿದೆನೆಂಬುದು ಕೂಡದು. ಅದಕ್ಕಾಗಿ ಏನನ್ನಾದರೂ ಸಾಧಿಸಬೇಕು” ಎಂದು ಯೋಚನಾಪರನಾಗಿ ಹಾಗೆಯೇ ಕುಳಿತುಕೊಂಡನು. ಅವನು ಹಾಗೆ ವಿಷಣ್ಣನಾಗಿ ಕುಳಿತುದನ್ನು ನೋಡುವುದು ವಿಶ್ವರೂಪಾಚಾರ್ಯನಿಂದ ಆಗಲಿಲ್ಲ. ಕೇಳಿದನು : “ಏಕೆ, ವಿರೂಪಾಕ್ಷ ಹಾಗೆ ಕುಳಿತುಬಿಟ್ಟೆ?”

ವಿರೂಪಾಕ್ಷ ಸಣ್ಣಗೆ ಎಳೆಯುವ ದನಿಯಲ್ಲಿ ಹೇಳಿದನು : ‘ಸರ್ವನಾಶವಾಯಿತು. ನಾವು ನಮ್ಮ ವಿಶ್ವರೂಪಾಚಾರ್ಯನು ಧರ್ಮಾಚಾರ್ಯನಾದನು, ಇನ್ನು ದೇವಲೋಕವು ನಮ್ಮದಾಯಿತು ! ದೇವತೆಗಳ ಐಶ್ವರ್ಯವೆಲ್ಲ ನಮ್ಮದಾಯಿತು! ಎಂದು ಆನಂದದಲ್ಲಿದ್ದೆವು. ಈಗ ನೀನು ಎಚ್ಚರಿಕೆ ಕೊಡುತ್ತಾ ಆ ಪ್ರಯತ್ನವನ್ನೇ ಬಿಟ್ಟುಬಿಡಿ ಎಂದು ಹೇಳುತ್ತಿರುವೆ. ಈ ಮಾತನ್ನು ಹೋಗಿ ನಾನು ಯಾವ ಮುಖದಿಂದ ಹೇಳಲಿ ಎಂದು ಯೋಚಿಸುತ್ತಿರುವೆನು.”

“ನೋಡು, ವಿರೂಪಾಕ್ಷ ತಾಯಿಮನೆಯವರ ಪ್ರಭಾವಕ್ಕೆ ನಾನು ಎಷ್ಟು ಒಳಪಟ್ಟಿರುವೆನೆಂಬುದಕ್ಕೆ ನಾನು ಸತತವಾಗಿ ಸುರಾಪಾನ ಮಾಡುತ್ತಿರುವುದೇ ಸಾಕ್ಷಿ. ವೇದಾಧ್ಯಯನದಿಂದ ಲಭಿಸಿದ ಪುಣ್ಯದ ಬಲದಿಂದ ನಾನು ಈ ಸುರಾಪಾನದ ಪಾಪವನ್ನು ಅಡಗಿಸಿಟ್ಟಿರುವೆನು. ಇದೊಂದನ್ನು ಬಿಟ್ಟರೆ, ನನ್ನನ್ನು ಶುಕ್ರ ಬೃಹಸ್ಪತಿಗಳು ಇಬ್ಬರೂ ಸಮಗಟ್ಟಲಾರರು. ಇದನ್ನು ನಾನು ತಿಳಿಯೆನೆನ್ನುವೆಯಾ ? ನಾನಿದನ್ನು ಬಲ್ಲೆ, ಸಂಪೂರ್ಣವಾಗಿ ಬಲ್ಲೆ. ಆದರೂ ಇದನ್ನು ಮಾತೃಪ್ರೀತ್ಯರ್ಥವಾಗಿ ಮಾಡುತ್ತಿರುವೆನು. ನೀವೂ ಅದರಂತೆಯೇ ಲೋಕಹಿತವನ್ನು ಆಚರಿಸಿ, ಲೋಕ ಕಂಟಕರಾಗುವುದಕ್ಕೆ ಬದಲು, ಲೋಕರಕ್ಷಕರಾಗಿ, ನಿಮಗೂ ಯಜ್ಞಭಾಗವೂ ಬರುವಂತೆ ನಾನು ಏರ್ಪಡಿಸುವೆನು. ನಾನು ನನ್ನ ಪ್ರಾಣವನ್ನು ಕೊಟ್ಟಾದರೂ ಇದನ್ನು ಸಾಧಿಸುವೆನು. ಮಾತೃಕುಲ ಪಿತೃಕುಲಗಳೆರಡನ್ನು ಒಟ್ಟು ಸೇರಿಸಿದನೆಂದು ನನಗೆ ಖ್ಯಾತಿ ಬರಲಿ. ಇನ್ನು ಮುಂದೆ ದೇವಾಸುರರು ಯುದ್ಧವನ್ನು ಬಿಟ್ಟು ಪ್ರೀತಿಯಿಂದಿರಲಿ.”

ವಿರೂಪಾಕ್ಷನು ತಲೆಯಲ್ಲಾಡಿಸಿ ಹೇಳಿದನು : “ವಿಶ್ವರೂಪ, ನೀನು ವಿದ್ಯಾ ತಪೋಜನಗಳಲ್ಲಿ ಹಿರಿಯನು ಎಂದು ನಾವು ಒಪ್ಪಿದರೂ, ಸಹಜವಾದ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂಬುದನ್ನು ನೀನೂ ಮನಗಾಣುವವನಾಗು. ಸಿಂಹವು ಮಾಂಸವನ್ನು ತಿನ್ನುವ ಜಂತು. ಅದನ್ನುನೀನಾವ ಮಂತ್ರಬಲದಿಂದ ಹುಲ್ಲುತಿನ್ನುವಂತೆ ಮಾಡಬಲ್ಲೆ ? ನಿನಗೆ ಅಂತಹ ಮಂತ್ರಬಲವಿರುವುದಾದರೆ ಹುಲ್ಲನ್ನು ಮಾಂಸ ಮಾಡುವುದು ಸರಿಯೇ ಹೊರತು ಸಿಂಹವನ್ನು ಹುಲ್ಲು ತಿನ್ನುವಂತೆ ಮಾಡುವುದು ಸರಿಯಲ್ಲ. ಇನ್ನೊಂದು ಗುಟ್ಟು ಹೇಳುವೆ ಕೇಳು. ದೇವದಾನವರಿಬ್ಬರೂ ಪ್ರಾಜಾಪತ್ಯರೇ ! ಇಬ್ಬರೂ ಪ್ರಜಾಪತಿಯ ಸಂತಾನಗಳೇ ಹೊರತು ಬೇರೆ ಬೇರೆಯಲ್ಲ. ಆದರೂ ನಾವು ನಾವು ದ್ವೇಷಿಗಳಾಗಿರುವುದೇಕೆ ಬಲ್ಲೆಯಾ ? ನಮ್ಮ ನಮ್ಮ ದ್ವೇಷವು ಅರ್ಥಮೂಲವು. ನಾವು ದಾನವರು ಹಿರಿಯರು. ಆದ್ದರಿಂದ, ಈ ವಂಶದ ಸಂಪತ್ತೆಲ್ಲವೂ ದಾನವರಾದ ನಮಗೇ ಸೇರಬೇಕು. ಆದರೂ ಏನೋ ಸಂಚು ಮಾಡಿ, ತಾವು ಧರ್ಮಪರರು, ನಾವು ಅಧರ್ಮಪರರು ಎಂಬ ಆಟ ಹೂಡಿ, ಈ ದೇವತೆಗಳು ನಮಗೆ ಮೋಸಮಾಡಿ, ನಮ್ಮ ವಂಶದ ಸಂಪತ್ತನ್ನೂ ತಾವು ಕೊಳ್ಳೆ ಹೊಡೆದುಬಿಟ್ಟರು. ಈ ಸಂಕಟವನ್ನು ನಮ್ಮ ಕುಲವು ಮರೆಯುವುದೆಂತು? ಅದರಿಂದ ದೇವದಾನವರ ಸ್ನೇಹವೆಂಬುದು ಸಾಧ್ಯವಿಲ್ಲದ್ದು. ಜೊತೆಗೆ ಒಂದು ವೇಳೆ ಅದಾದರೂ ಹಿಂದೆ ಅಮೃತಮಂಥನ ಕಾಲದಲ್ಲಿ ಆದಂತೆ ದೇವತೆಗಳ ಅಭಿವೃದ್ಧಿಗೇ ಆಗುವುದು. ಅದರಿಂದ, ಅದು ಸಾಧ್ಯವಿಲ್ಲ. ನೀನು ನಿನ್ನ ಆದರ ಗೌರವಗಳಿಗೆ ಪಾತ್ರರಾದ ನಮಗೆ ಇನ್ನು ಯಾವ ವಿಧದಿಂದಾದರೂ ಶ್ರೇಯಸ್ಸಾಗುವಂತೆ ಮಾಡುವುದಾದರೆ ಮಾಡು. ಇಲ್ಲವಾದರೆ, ನಮ್ಮ ಕಾಳಿನಲ್ಲಿ ಇದೊಂದು ಜೊಳ್ಳಾಯಿತು ಎಂದುಕೊಂಡು ಇನ್ನು ಯಾವುದಾದರೂ ಮಾರ್ಗವನ್ನು ಹಿಡಿಯುವೆವು.”

ವಿಶ್ವರೂಪಾಚಾರ್ಯನು ವಿರೂಪಾಕ್ಷನ ವಾದವನ್ನು ಮನಃಪೂರ್ವಕವಾಗಿ ಕೇಳಿದನು. ಆತನೂ ಯೋಚಿಸಿದನು : “ಕೇವಲ ಅಭಿಮಾನದಿಂದ ಯಾವುದನ್ನೂ ಇತ್ಯರ್ಥ ಮಾಡಲಾಗುವುದಿಲ್ಲ. ತಾನು ದೇವಬೀಜದವನು. ಅಸುರಮಾತೃವೆಂದು ಅಭಿಮಾನದಿಂದ ಅತ್ತ ತಿರುಗಿದರೆ ಅದು ಅಧರ್ಮವಾಗುವುದು. ಹಾಗೆಂದು ಮಾತಾಮಹರ ಹಾನಿಗೆ ತಾನು ಕಾರಣವಾಗುವುದೂ ಸರಿಯಲ್ಲ. ಅದು ಮಾತೃದ್ರೋಹವಾದೀತು. ಬಿಟ್ಟು ಹೋದರೆ ಪಿತೃದ್ರೋಹ, ಬಿಡದಿದ್ದರೆ ಮಾತೃದ್ರೋಹ. ಏನುಮಾಡಬೇಕು ?” ಎಂದು ಬಹಳ ಹೊತ್ತು ಯೋಚಿಸಿ, ಕೊನೆಗೆ ಇತ್ಯರ್ಥಕ್ಕೆ ಬಂದನು. ಹೇಳಿದನು : “ವಿರೂಪಾಕ್ಷ, ನೀನು ಹೋಗಿ ಅಸುರೇಂದ್ರರಿಗೆ ನನ್ನ ನಮಸ್ಕಾರಗಳೊಡನೆ ಬಿನ್ನವಿಸು. ನಿಮಗೆ ಗೊತ್ತಿರುವಂತೆ ನನಗೆ ನಿದ್ದೆಯಿಲ್ಲ. ಪ್ರತಿದಿನವೂ ಸಮರಾತ್ರಿಗೆ ಸರಿಯಾಗಿ ಒಂದು ಯಜ್ಞವನ್ನು ಮಾಡುವೆನು. ಆ ಯಜ್ಞವನ್ನು ನಿಮಗಾಗಿ ನಿಮ್ಮ ಸಂವೃದ್ಧಿಗಾಗಿ, ನಿಮ್ಮ ಶ್ರೇಯಃಪ್ರೇಮಸ್ಸಾಧನೆಗಾಗಿಯೇ ಮಾಡುವೆನು. ಅದು ಸಂಚಿತವಾಗಿದ್ದು ಯಾವಾಗಲೋ ನಿಮಗೆ ಫಲವನ್ನು ಕೊಡುವುದು. ಇನ್ನು ಮುಂದೆ ನನ್ನನ್ನು ಒತ್ತಬಾರದು. ಇದಿಷ್ಟರಿಂದ ತೃಪ್ತರಾಗಿ ನನ್ನನ್ನು ಮಾತೃಋಣದಿಂದ ಮುಕ್ತನಾಗುವಂತೆ ಅನುಗ್ರಹಿಸಬೇಕು ಎಂದು ಹೇಳು ಹೋಗು” ಎಂದನು.

ವಿರೂಪಾಕ್ಷನಿಗೆ ಸಂತೋಷವಾಯಿತು. “ವಿಶ್ವರೂಪ, ನೀನು ನಿಜವಾಗಿಯೂ ನಮ್ಮ ಮೇಲೆ ಅಭಿಮಾನವುಳ್ಳವನು. ಸಂದೇಹವಿಲ್ಲ. ಆದರೆ, ನಾವು ದೇವತೆಗಳಂತೆ ಎಲ್ಲೆಂದರಲ್ಲಿ ಯಾವಾಗ ಎಂದರೆ ಆಗ ಬರಲಾರೆವು. ಅದರಿಂದ ದಿನದಿನವೂ ಅರ್ಧರಾತ್ರಿಯಲ್ಲಿ ಬಂದು ನಮ್ಮ ಹವಿರ್ಭಾಗವನ್ನು ತೆಗೆದುಕೊಂಡು ಹೋಗಲಪ್ಪಣೆ ಕೊಡು" ಎಂದನು.

ವಿಶ್ವರೂಪನು ತಲೆಯಲ್ಲಾಡಿಸಿದನು. “ನೀನು ಅಮರಾವತಿಯ ವ್ಯವಸ್ಥೆಯನ್ನು ಅರಿಯದವನಂತೆ ಹೇಳುವೆ. ಅದು ಸಾಧ್ಯವಿಲ್ಲ. ಸಮರಾತ್ರಿಯಲ್ಲಿ ಅದೇವತೆಯು ಪುರಪ್ರವೇಶ ಮಾಡಿದರೆ ಅಮರಾವತಿಯು ಅವನನ್ನು ನುಂಗಿಬಿಟ್ಟೀತು. ಅದರಿಂದ ನೀವು ಅನಧ್ಯಯನದ ದಿನಗಳಲ್ಲಿ ಬನ್ನಿ, ಕಾಲ ಪ್ರಚೋದಿತವಾಗಿ ಮೋಡಮುಚ್ಚಿ ಸೂರ್ಯರಶ್ಮಿ ಕಾಣದ ದಿನಗಳಲ್ಲಿ ಬಂದು ನಿಮ್ಮ ನಿಮ್ಮ ಹವಿರ್ಭಾಗಗಳನ್ನು ತೆಗೆದುಕೊಂಡು ಹೋಗಿ. ಪುರಪ್ರವೇಶ ಮಾಡುವಾಗ ‘ಇಂತಹ ಕಡೆಗೇ ಹೋಗುವೆವು. ನಾವು ಇಂಥವರು’ ಎಂದು ಧೈರ್ಯವಾಗಿ ಹೇಳಿ, ಉದ್ದೇಶವನ್ನು ಮಾತ್ರ ಹೇಳಬೇಡಿ” ಎಂದು ಹೇಳಿ ಆತನಿಗೆ ಸಲ್ಲಬೇಕಾದ ಗೌರವಗಳನ್ನೆಲ್ಲ ಸಲ್ಲಿಸಿ, ಆತನನ್ನು ಬೀಳ್ಕೊಟ್ಟನು.

ಅಲ್ಲಿರುವ ಕಂಭದೊಳಗೆ ಇದ್ದುಕೊಂಡಿದ್ದು ಅದೆಲ್ಲವನ್ನೂ ಕೇಳಿದ ದೇವತೆಯೊಬ್ಬನು ವಿಶ್ವರೂಪಾಚಾರ್ಯನು ಕಣ್ಮುಚ್ಚಿ ಧ್ಯಾನಪರನಾಗಿರುವಾಗ ಈಚೆಗೆ ಬಂದು, ಓಡಿ ಹೋಗಿ ನಡೆದುದೆಲ್ಲವನ್ನು ದೇವೇಂದ್ರನಿಗೆ ಅರಿಕೆ ಮಾಡಿದನು.

ಆತನೂ ಒಂದು ಗಳಿಗೆ ಯೋಚನೆಮಾಡಿ, “ದಿನದಿನವೂ ನಡೆಯುವ ವಿಷಯ. ಚತುರ್ಮುಖನವರೆಗೂ ಹೋಗಬೇಕಾಗಿಲ್ಲ. ನಾನೇ ಇದನ್ನು ಇತ್ಯರ್ಥಮಾಡಬೇಕು. ಮಾಡೋಣ” ಎಂದು ಸುಮ್ಮನಾದನು.

* * * *

೫.ದೇವತೆಗಳ ಗುಟ್ಟು

ಸಂಪಾದಿಸಿ

“ಧರ್ಮಾಚಾರ್ಯನನ್ನು ವರಿಸಿದುದು ತುಂಟ ಹಸುವನ್ನು ತಂದು ಕಟ್ಟಿ ಕೊಂಡಂತಾಯಿತಲ್ಲಾ !” ಎಂದು ದೇವರಾಜನು ಚಿಂತೆಮಾಡುತ್ತಿದ್ದನು. ವಿಶ್ವ ರೂಪಾಚಾರ್ಯನು ಸಮರಾತ್ರಿಯಲ್ಲಿ ತನ್ನ ಮಾತಾಮಹರಿಗೆ ಹವಿರ್ಭಾಗಗಳನ್ನು ಕೊಡುವುದೂ, ಅದರಿಂದ ಅವರ ತೇಜಸ್ಸು ವಿವರ್ಧಿತವಾಗುತ್ತಿರುವುದೂ ದೇವೇಂದ್ರನಿಗೆ ಗೊತ್ತು. ಏನು ಮಾಡಬೇಕು ? ತಮ್ಮ ಕುಲಶತ್ರುಗಳಾದ ದಾನವರ ವೃದ್ಧಿಯನ್ನು ಕಾರ್ಯತಃ ಸಂಪಾದಿಸುತ್ತಿರುವವನು ಇಂದು ದೇವತೆಗಳ ಧರ್ಮಾಚಾರ್ಯ. ಆದರೆ, ಆತನಿಂದ ಆಗಿರುವ ಉಪಕಾರವನ್ನು ಕಡೆಗಣಿಸುವಂತಿಲ್ಲ. ದೇವತೆಗಳು ಅಸ್ತತೇಜರಾಗಿ ದಾನವರ ಕೈಗೆ ಸಿಕ್ಕಿಹೋಗುವಂತಹ ದುಷ್ಕಾಲದಲ್ಲಿ ನಾರಾಯಣ ಕವಚವನ್ನು ಉಪದೇಶಮಾಡಿ ಆಪತ್ತನ್ನು ತಪ್ಪಿಸಿದ್ದಾನೆ. ಇಂಥವನನ್ನು ತಿರಸ್ಕರಿಸುವುದೆಂತು.

ಮಹೇಂದ್ರನು ಬಹುವಾಗಿ ಯೋಚಿಸಿದನು. ಬ್ರಹ್ಮದೇವನ ವಾಕ್ಯವು ನೆನಪಾಯಿತು. “ಹೌದು. ಇವನನ್ನು ತಿರಸ್ಕರಿಸಿದರೆ ಕೇಡು ಏನೋ ಇದ್ದೇ ಇದೆ. ಅದರಿಂದ ಇವನನ್ನು ತಿರಸ್ಕರಿಸಬಾರದು. ಏನಾದರೂ ಮಾಡಿ, ಈತನಿಗೆ ಇರುವ ಅಸುರವ್ಯಾಮೋಹವನ್ನು ತಪ್ಪಿಸಿದರೆ, ಈತನು ದೇವಕುಲದ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ. ದೇವತೆಯಾಗಿ ಹುಟ್ಟಿದವನಿಗಿಂತ ಕರ್ಮಜ ದೇವತೆಯು ಪ್ರಬಲವೆನ್ನುವಂತೆ ಬಿಟ್ಟರೆ, ಶುಕ್ರಶಿಷ್ಯರು ಬಿಡದೆ ಈತನನ್ನು ಕರೆದುಕೊಂಡು ಹೋಗಿ ತಮ್ಮಲ್ಲಿ ಇಟ್ಟುಕೊಳ್ಳುವರು. ಆದರೆ ಶುಕ್ರಾಚಾರ್ಯನು ಪರಮಗರ್ವಗಂಧಿ. ಈತನನ್ನು ದೈತ್ಯರು ಕರೆದುಕೊಂಡು ಹೋಗುತ್ತಲೂ ಆತನು ಅವರನ್ನು ಕೈಬಿಡುವನು. ಅದರಿಂದ ಅವರು ಈತನನ್ನು ಕರೆದುಕೊಂಡು ಹೋಗಲಾರರು. ಅಥವಾ ಆ ರಾಕ್ಷಸರು ಏನಾದರೂ ಮಾಡಿ ಇಬ್ಬರನ್ನೂ ದಕ್ಕಿಸಿಕೊಂಡರೆ ನಾವು ಕೆಟ್ಟೆವು. ಹಾಗಾಗದಂತೆ ನೊಡಿಕೊಳ್ಳಬೇಕು. ಅಂದು ಬೃಹಸ್ಪತ್ಯಾಚಾರ್ಯನು ಹೊರಟು ಹೋಗದಿದ್ದರೆ ಈ ಅನರ್ಥಗಳೆಂದೂ ಬರುತ್ತಿರಲಿಲ್ಲ. ಈಗ ಈತನ ಯೋಗ್ಯತೆ ಪ್ರಕಟವಾಯಿತು. ಇನ್ನು ಅದನ್ನು ಮುಚ್ಚಿಡುವಂತಿಲ್ಲ ಏನು ಮಾಡಬೇಕು?”

ಇಂದ್ರನಿಗೆ ಇದರ ಜೊತೆಯಲ್ಲಿಯೇ ಮತ್ತೊಂದು ಯೋಚನೆ ಬಂತು ; “ತನಗೆ ತಿಳಿಯದೇ ತನಗೆ ಬೃಹಸ್ಪತ್ಯಾಚಾರ್ಯನ ಮೇಲೆ ಏನಾದರೂ ಕೋಪ ಬಂದಿರಬಹುದೇ ? ಅದರಿಂದ ಆತನು ಮೈಗರೆದಿರುವನೋ ?” ಯೋಚನೆಯು ಸಂದೇಹವಾಗಿ, ಸಂದೇಹವು ಬಲವಾಗಿ ಸಿದ್ಧಾಂತವಾಗುವುದಕ್ಕೆ ಅಷ್ಟು ಹೊತ್ತು ಹಿಡಿಯಲಿಲ್ಲ. “ಇರಬೇಕು. ಅಜ್ಞಾತ ಕೋಪವೊಂದು ಮನಸ್ಸನ್ನು ಬಲವಾಗಿ ಒಳಗಿನಿಂದಲೇ ಹಿಡಿದಿರಬೇಕು. ಹೊರಗಿನ ಮನಸ್ಸು ಅದರ ಪ್ರತಿಕೃತಿಯನ್ನು ಭಾವಿಸುತ್ತಾ ‘ನಾನು ನಿರ್ದೋಷಿ ! ದೋಷವೆಲ್ಲ ದೇವಗುರುವಿನದು’ ಎಂದು ಆರೋಪಿಸುತ್ತಿರಬೇಕು. ಹಾಗಾದರೆ ಏನು ಮಾಡಬೇಕು ?”

ಆ ವೇಳೆಗೆ ಶಚೀದೇವಿಯು ಬಂದಳು. ದೇವೇಶ್ವರನು ತನ್ನ ಹೃದಯದೊಳಗಿದ್ದ ಚಿಂತೆಯನ್ನು ಆಕೆಗೆ ಹೇಳಿದನು. ಆಕೆಯು “ಹೌದು ದೇವ, ನಾನೂ ಈಗ ಅದೇ ಸಿದ್ಧಾಂತಕ್ಕೆ ಬಂದಿದ್ದೇನೆ. ನಾವು ದೇವಗುರುಗಳನ್ನು ತಿರಸ್ಕರಿಸಿದ್ದೇವೆ. ಅದರಿಂದ ಆತನಿಗೆ ಕೋಪ ಬಂದು ಆತನು ಮರೆಯಾಗಿದ್ದಾನೆ. ಆತನು ಮರೆಯಾದನೆಂದು ನಮಗೆ ಕೋಪವು ಬಂದಿದೆ. ಅಲ್ಲದೆ, ನಾವು ಹುಡುಕಿದುದೂ ಸಾಲದು ಎಂದು ನನ್ನ ಭಾವನೆ.”

ದೇವೇಂದ್ರನು ಅಡ್ಡ ಬಂದು “ ಇಲ್ಲ ಭಾಮಿನಿ, ದೇವತೆಗಳು ಬೇಕೆಂದಾಗ ತಮ್ಮ ಪ್ರಭಾವವನ್ನು ಆಶ್ರಯಿಸಿ ಇತರರಿಗೆ ಕಾಣದಂತೆ ತಮ್ಮನ್ನು ತಾವು ಮರೆಯಿಸಿಕೊಳ್ಳಬಲ್ಲರು. ಜೊತೆಗೆ ಅವರು ವ್ರತ, ತಪಸ್ಸು ಎಂದು ಕುಳಿತುಬಿಟ್ಟರೆ ಆಗ ಯಾರೂ ಅವರನ್ನು ಕಾಣುವಂತಿಲ್ಲ.

ಒಂದು ವೇಳೆ ಅಂತಹ ಸಮಯದಲ್ಲಿಯೂ ಅವರನ್ನು ಕಾಣಲೇಬೇಕಾಗಿ ಬಂದರೆ?”

ಇಂದ್ರನು ನಕ್ಕನು. ‘ಅದೂ ಕಷ್ಟವಿಲ್ಲ. ಉಪಶ್ರುತಿ ಭಗವತಿಯನ್ನು ಪ್ರಸನ್ನ ಮಾಡಿಕೊಂಡರೆ, ಆಕೆಯು ಆ ದೇವತೆಯಿರುವ ಸ್ಥಳವನ್ನು ತೋರಿಸಿಕೊಡುವಳು. ಅಷ್ಟೇ ಅಲ್ಲ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಡುವಳು.”

“ಹಾಗಾದರೆ, ರಹಸ್ಯವನ್ನು ಬಲ್ಲವರಿಗೆ ದೇವತೆಗಳು ಅಗೋಚರರಾಗುವಂತಿಲ್ಲ ?”

“ಹಾಗೇನಿಲ್ಲ. ದೇವತೆಗಳು ಮಿಕ್ಕ ವಿಚಾರದಲ್ಲಿ ಏನು ಬೇಕಾದರೂ ಮಾಡಬಲ್ಲರಾದರೂ ಮಂತ್ರಾಧೀನರು.”

“ಹಾಗಾದರೆ ನಾವು ಸರ್ವತಂತ್ರಸ್ವತಂತ್ರರಲ್ಲವೇನು ? ಬೇಕಾದುದನ್ನು ಮಾಡಲಾರೆವೇನು ?”

“ಅದೂ ಇಲ್ಲ. ಈ ನಿಯತಿಗೆ ನಿಯತಿಯೇ ಕಾಲದ ವಶವಾಗಿರುವುದು. ಅದರಿಂದ ದೇವತೆಗಳು ಕಾಲನು ಪ್ರೇರಿಸಿದಂತೆಯೇ ಮಾಡುವರು. ಆದರೆ, ಕರ್ತೃತ್ವವು ತಮ್ಮದಲ್ಲವೆಂದು ತಿಳಿದಿರುವುದರಿಂದ ಅವರು ಫಲದ ವಿಚಾರದಲ್ಲಿ ಉದಾಸೀನರು.”

“ಆದರೂ ನೀನಿಷ್ಟು ಚಿಂತಿಸುತ್ತಿರುವೆಯಲ್ಲ?”

“ಚಿಂತೆಯೂ ಜೀವನದ ವ್ಯಾಪಾರಗಳಲ್ಲೊಂದು, ಶಚಿ. ಆದರೆ ಮನಸ್ಸು ಚಿಂತೆಯನ್ನು ಚಿಕ್ಕದು ಮಾಡಲಾರದೆ ಅದಕ್ಕೆ ಹೆದರಿ, ಅದನ್ನು ದೊಡ್ಡದು ಮಾಡಿಸುವುದು. ಆಗ ಅದು ಶತ್ರುವಾಗಿ, ಬಲಿಷ್ಠನಾದ ಶತ್ರುವಿನಂತೆ, ಧಾಳಿಮಾಡಿ ಹೆದರಿಸುವುದು. ಸುಖವನ್ನು ತದ್ವಿರುದ್ಧವಾಗಿ ನೋಡಿ ಸ್ನೇಹಿತನಂತೆ ಭಾವಿಸುತ್ತ ಅದರಲ್ಲಿ ಕರಗುವುದು. ಮನಸ್ಸಿನ ರಾಗದ್ವೇಷಗಳಿಂದಲೇ ಸುಖದುಃಖಗಳು. ಅದಿರಲಿ, ಈಗ ಬೃಹಸ್ಪತ್ಯಾಚಾರ್ಯರ ವಿಷಯವಾಗಿ ಹೇಳು. ನೀನು ಬಂದು ಪ್ರಸಂಗ ವಶದಿಂದ ನನಗೆ ಮರೆತುಹೋಗಿದ್ದ ಒಂದು ಅಂಶವನ್ನು ನೆನಪಿಗೆ ತಂದೆ. ಈಗ ನೀನು ಉಪಶ್ರುತಿ ದೇವಿಯನ್ನು ಅನುಸಂಧಾನಮಾಡಿ ಬೃಹಸ್ಪತಿಯಿರುವೆಡೆಯನ್ನು ಕಂಡುಹಿಡಿ. ಆತನು ಈಚೆಗೆ ಬರಲು ಒಪ್ಪದಿದ್ದರೆ ಉಪಬೃಂಹಣಮಾಡು. ಆಗ ಆತನು ಪ್ರತ್ಯಕ್ಷನಾಗಿಯೇ ಆಗುವನು. ಆಗ ಆತನನ್ನು ಒಪ್ಪಿಸಿ ಮತ್ತೆ ದೇವಾಚಾರ್ಯನಾಗುವಂತೆ ನೀನು ಪ್ರೇರೇಪಿಸು.

ಶಚಿಯು ಗಂಭೀರಭಾವದಿಂದ ಕೇಳಿದಳು : “ಆಗ ವಿಶ್ವರೂಪಾಚಾರ್ಯನು ಏನಾಗುವನು ?”

ಇಂದ್ರನೂ ಗಂಭೀರವಾಗಿಯೇ ಹೇಳಿದನು : “ವಿಶ್ವರೂಪಾಚಾರ್ಯನಿಗೆ ಬೃಹಸ್ಪತ್ಯಾಚಾರ್ಯನಿಗಿರುವಂತೆ ದೆವತೆಗಳ ಮೇಲೆ ಸಹಜವಾದ ಅಭಿಮಾನವಿಲ್ಲ. ಆ ಸಹಜವಾದ ಅಭಿಮಾನವು ಆತನಿಗೆ ಬರುವಂತೆಯೂ ಇಲ್ಲ. ಪಿತೃವಂಶದಿಂದ ದೇವತೆಯಾಗಿ ಮಾತೃವಂಶದಿಂದ ದಾನವನಾದವನಿಗೆ ಪಿತಾಮಹ-ಮಾತಾಮಹರಿಬ್ಬರಲ್ಲಿಯೂ ಅಭಿಮಾನವಿರುವುದು ಏನು ವಿಶೇಷ ? ಅದರಿಂದ ಬೃಹಸ್ಪತಿಯು ದೊರೆತರೆ ಈತನನ್ನು ಬಿಡಲೇಬೇಕು.”

“ನೀನಾಗಿ ಆಚಾರ್ಯನೆಂದು ವರಿಸಿರುವವನನ್ನು ಅದೆಂತು ಬಿಡುವೆ ?”

“ಇದೇ ರಹಸ್ಯ. ವರಿಸುವಾಗ ಆತನನ್ನು ಆಜೀವವಾಗಿ ವರಿಸಿಲ್ಲ ಅಥವಾ ಕಾಲವನ್ನು ಗೊತ್ತುಮಾಡಿಲ್ಲ ಅದರಿಂದ ನಾನು ಆತನನ್ನು ಬೇಕಾದಾಗ ಬಿಡಬಹುದು”

“ಇದರಿಂದ ಪಾಪವಿಲ್ಲವೇ ?”

“ನನ್ನ ಅನುಕೂಲಕ್ಕೆಂದು ಸ್ವಕಾಮನೆಯಿಂದ ಮಾಡಿದರೆ ಫಲಾಫಲಗಳು ನನ್ನವು. ಹಾಗಿಲ್ಲದೆ ಕುಲಾರ್ಥವಾಗಿ, ನಿಷ್ಕಾಮನಾಗಿ, ಮಾಡುವಾಗ ನನಗೆ ಫಲಾಫಲಗಳು ಇಲ್ಲ ಭಾಮಿನಿ.”

“ದೇವ, ನೀನು ಸಾವಿರ ಹೇಳು. ನೀನು ಅಹಂಕಾರಸ್ವರೂಪ ನಾಗಿದ್ದುಕೊಂಡು ಅನಹಂಭಾವದಿಂದ ಕಾರ್ಯವನ್ನು ಮಾಡುವೆನೆನ್ನುವುದು ಅಸಂಭಾವ್ಯ. ಅದರಿಂದ, ಈ ಕಾರ್ಯಮಾಡುವಾಗ ಯೋಚಿಸಿ ಮಾಡು. ಪಾಪವು ಬಂದರೂ ಅದರಿಂದ ಅನರ್ಥವಾಗದಂತೆ ಮೊದಲೇ ನೀನು ಉಪಾಯವನ್ನು ಕಲ್ಪಿಸಿಕೊಂಡು, ಅನಂತರ ಈತನನ್ನು ವಿಸರ್ಜಿಸು.”

“ಬೃಹಸ್ಪತ್ಯಾಚಾರ್ಯನು ಮತ್ತೆ ಬರುವವರೆಗೂ ವಿಸರ್ಜನೆಯ ಯೋಚನೆಯಿಲ್ಲ ಅದರಿಂದ, ಆ ಆಚಾರ್ಯನನ್ನು ಹಲ್ಲು ಕಿತ್ತು ಹಾವನ್ನು ಆಡಿಸುವಂತೆ, ಆತನ ದಾನವಾಭಿಮಾನವು ನಿಷ್ಫಲವಾಗುವಂತೆ ಮಾಡಿ ಇಟ್ಟುಕೊಳ್ಳಬೇಕು.”

“ಅದು ಸಾಧ್ಯವೇ ? ನೀನೇ ಹೇಳಿದೆಯಲ್ಲ ಸ್ವಭಾವವನ್ನು ಬದಲಾಯಿಸಲು ಸಾಧ್ಯವಿಲ್ಲೆಂದು ?”

“ಸ್ವಭಾವವನ್ನು ತಡೆಗಟ್ಟುವುದು ಸಾಧ್ಯ, ತಪ್ಪಿಸಲು ಆಗುವುದಿಲ್ಲ ಹಾಗಾಗದಿದ್ದರೆ, ಆ ದುಃಸ್ವಭಾವವನ್ನು ನಿರೋಧಿಸಲು ವ್ಯಕ್ತಿಯನ್ನೇ ಸಂಹರಿಸಬೇಕಾಗುವುದು. ಆದರೆ ಈ ವಿಷಯದಲ್ಲಿ ಮೂಲಿಕೆಯನ್ನು ಮಾಡುವಂತೆ, ಇರುವ ಒಂದು ಗುಣವನ್ನು ವೃದ್ಧಿಪಡಿಸಿಕೊಂಡು, ಇತರ ಅವಗುಣಗಳನ್ನು ನಿರೋಧಿಸುವ ಸಂಸ್ಕಾರವನ್ನು ಮಾಡಿ, ಈ ವಿಷಯವನ್ನು ಅಮೃತಮಾಡಿಕೊಳ್ಳಬೇಕಾಗಿರುವುದು. ಈಗ ಆತನು ಸುರಾಪಾನವನ್ನು ಮಾಡುತ್ತ ತನ್ನ ಅಸುರಸ್ವಭಾವವನ್ನು ಉತ್ತೇಜಿತಗೊಳಿಸುತ್ತಿರುವನು. ಅದನ್ನು ತಡೆಗಟ್ಟಿ ಆತನು ಸುರಾಪಾನದ ಬದಲು ಸೋಮಪಾನ ಮಾಡುವಂತೆ ಮಾಡಿದರೆ ನಮ್ಮ ಕಾರ್ಯವು ಸಾಧ್ಯವಾಗುವುದು. ಚಿಂತಿಸಬೇಡ. ಅದಷ್ಟು ಅಸಾಧ್ಯದಂತೆ ಕಾಣುವುದಿಲ್ಲ.”

“ಆತನು ಆಚಾರ್ಯ. ನೀನು ಶಿಷ್ಯ. ಶಿಷ್ಯನಾಗಿ ಆಚಾರ್ಯನನ್ನು ಅದೆಂತÀÄ ವಿಧಾಯಕ ಮಾಡುವೆ ?”

ಇಂದ್ರನು ನಕ್ಕು ಹೇಳಿದನು : ‘ಮಹಾಸತಿ, ಅಲ್ಲಿಯೇ ದೇವರಹಸ್ಯವಿರುವುದು, ಶಿಷ್ಯನೆಂದು ತಲೆಬಾಗಿದ ಮಾತ್ರಕ್ಕೆ ನನ್ನ ದೇವರಾಜತ್ವಕ್ಕೆ ಕುಂದಿಲ್ಲ ಆತನು ಆಶೀರ್ವಾದ ಮಾಡುವನು. ನಾನು ಅದನ್ನು ತಲೆಬಾಗಿ ಸ್ವೀಕರಿಸುವೆನು. ಆದರೆ, ಆತನು ಆಶೀರ್ವಾದವನ್ನು ನನಗೆ ಫಲಮಂತ್ರಾಕ್ಷತೆಗಳೊಡನೆ ಸಮರ್ಪಿಸಬೇಕು. ಅಲ್ಲವೆ ? ಅದರಂತೆ ಆತನೂ ನನ್ನಾಜ್ಞೆಯನ್ನು ಪಾಲಿಸಬೇಕು. ಅದು ರಾಜಾಜ್ಞೆ ವಿಕೋಪಕ್ಕೆ ಏರಿದರೆ ರಾಜಾಜ್ಞೆಯನ್ನು ತಿರಸ್ಕರಿಸಿದ ದುಷ್ಫಲವನ್ನೂ ಅನುಭವಿಸಬೇಕಾದೀತು. ಆದರಷ್ಟಕ್ಕೇ ಬಿಡುವುದಿಲ್ಲವೆನ್ನು, ಆತನನ್ನು ಸಾಧುವಾದದಿಂದಲೇ ಗೆದ್ದುಕೊಳ್ಳುವೆನು. ಅದಿರಲಿ, ನೀನು ಬೃಹಸ್ಪತ್ಯಾಚಾರ್ಯವನ್ನು ಗೊತ್ತು ಮಾಡು. ಇದನ್ನು ನಾನು ಪಕ್ಕಮಾಡಿರುವೆನು.”

ಶಚಿಯು ಅಪ್ಪಣೆಯೆಂದಳು. ಇಂದ್ರನು ಮಗ್ಗುಲಲ್ಲಿ ಕುಳಿತಿದ್ದ ಆಕೆಯನ್ನು ಭುಜಗಳಿಂದ ಹಿಡಿದು ಅಲ್ಲಾಡಿಸುತ್ತಾ “ಉಪಬೃಂಹಣಮಾಡುವಾಗ, ನೀನು ಲೋಕಕ್ಕೆಲ್ಲ ಬೇಕಾದ ಸೌಭಾಗ್ಯ ನೀಡುವವಳು ಎಂಬುದನ್ನು ಮರೆಯದಿರು. ಎದುರಿಗೆ ಬಂದ ದೇವತೆಯು ಅರೆಮನಸ್ಸಿನಿಂದಿದ್ದರೆ ನಮ್ಮ ಪ್ರಾಣವನ್ನು ಅದಕ್ಕೆ ಹೊಯ್ದು ನಮ್ಮ ಇಂದ್ರಿಯಗಳನ್ನು ಅದಕ್ಕೆ ಕೊಟ್ಟು ಅದನ್ನು ದೊಡ್ಡದು ಮಾಡಬೇಕು. ಅದೇ ಉಪಬೃಂಹಣ. ಋಕ್ಕಿನಿಂದ ಬರಮಾಡಿಕೊಂಡು, ಸಾಮದಿಂದ ಉಪಬೃಂಹಣಮಾಡಿ, ನ್ಯೂನಾತಿರೇಕಗಳನ್ನು ಬ್ರಹ್ಮವೇದದಿಂದ ಸರಿಮಾಡಿಕೊಂಡು, ವಿಧಿನಿಯತವಾದ ಆಹುತಿಯನ್ನು ಕೊಟ್ಟರೆ, ಯಾವ ದೇವತೆಯೇ ಆಗಲಿ, ಪ್ರತ್ಯಕ್ಷವಾಗಿಯೇ ತೀರಬೇಕು. ಅದರಿಂದ, ನಿನ್ನ ಉಪಬೃಂಹಣಕ್ಕೆ ಉಪಶ್ರುತಿ ದೇವಿಯು ಬೇಕೇಬೇಕು. ಅರಿವಿರಲಿ” ಎಂದು ವಿಶ್ವಾಸದಿಂದ ಹೇಳಿ ಯಥೋಪಚಾರವಾಗಿ ಕಳುಹಿಸಿಕೊಟ್ಟನು.

ಇಂದ್ರನು ಅದೇ ಆಸನದಲ್ಲಿ ಇನ್ನೂ ಒಂದು ಗಳಿಗೆ ಕುಳಿತಿದ್ದನು. ಆಗಲೇ ವಿಶ್ವರೂಪಾಚಾರ್ಯನ ಬಳಿ ಹೋಗಬೇಕು ಎಂದು ಒಂದು ಮನಸ್ಸು, ದೇವಗುರುವಿನ ಸುದ್ದಿ ತಿಳಿದ ಮೇಲೆ ಹೋಗೋಣವೆಂದು ಒಂದು ಮನಸ್ಸು. ಅಷ್ಟು ಹೊತ್ತು ವಿಚಾರಮಾಡಿ, ಆಗಲೇ ಹೋಗಿ ಆತನ ಮನಸ್ಸು ತಿಳಿದು ಬರಬೇಕು ಎನಿಸಿತು. ಹೊರಟನು.

* * * *

೬.ತುಂಟ ಕುದುರೆಯ ಸವಾರಿ

ಸಂಪಾದಿಸಿ

ವಿಶ್ವರೂಪಾಚಾರ್ಯನು ದಿನದಿನವೂ ಮಾಡುವ ಹವಿರ್ದಾನಾದಿಗಳನ್ನು ಮುಗಿಸಿಕೊಂಡು ಎಂದಿನಂತೆ ವೇದಾಧ್ಯಯನ ಮಾಡುತ್ತ ನಡುಮನೆಯಲ್ಲಿ ಕುಳಿತಿದ್ದಾನೆ. ಪ್ರಹರಿಯು ಬಂದು “ದೇವರಾಜನು ದರ್ಶನವನ್ನು ಬಯಸಿ ತಮ್ಮ ಸಮಯವನ್ನು ನೋಡಿಕೊಂಡು ಬರಲು ಹೇಳಿಕಳುಹಿಸಿದ್ದಾನೆ” ಎಂದು ಅರಿಕೆ ಮಾಡಿದನು. ಆಚಾರ್ಯನು ‘ಇಂದ್ರನನ್ನು ಬರಹೇಳು’ ಎಂದು ಹೇಳಿಕಳುಹಿಸಿ, ತಾನೂ ಇಂದ್ರನನ್ನು ಸ್ವಾಗತ ಮಡಲು ತಕ್ಕ ವೇಷಭೂಷಣಗಳನ್ನು ಧರಿಸಿ ಕುಳಿತುಕೊಂಡನು. ತಲೆಯ ಮೇಲೆ ಮೂರು ತಲೆಗಳಿಗೂ ಹೊಂದಿಕೊಂಡು ಜಟೆಗಳನ್ನು ಮುಚ್ಚುತ್ತ ರತ್ನಕಿರೀಟವು ಶೋಭಿಸುತ್ತಿದೆ. ಕಿವಿಯಲ್ಲಿ ದೇದೀಪ್ಯಮಾನವದ ಜೀವರತ್ನಗಳ ಕುಂಡಲಗಳು ಉಜ್ವಲವಾಗಿವೆ. ದಿವ್ಯಸುಂಗಧವನ್ನು ಹೀರುತ್ತಿರುವ ದಿವ್ಯಪುಷ್ಪಮಾಲೆಗಳು ಕಂಠದಲ್ಲಿ ಮನೋಹರವಾಗಿವೆ. ಅವುಗಳೊಡನೆ ಸ್ಪರ್ಧೆ ಮಾಡುತ್ತಿರುವಂತೆ ಜೀವರತ್ನಗಳ ಮಾಲೆಗಳು ತೇಜೋಮಂಡಲ ವಿರಾಜಿತವಾಗಿ ರಾರಾಜಿಸುತ್ತಿವೆ. ತೋಳುಗಳಲ್ಲಿ ಅಂಗದಗಳು, ಮುಂಗೈಗಳಲ್ಲಿ ಕಟಕಗಳು, ಬೆರಳುಗಳಲ್ಲಿ ಉಂಗುರಗಳೂ ವಿರಾಜಿಸುತ್ತಿವೆ. ಹಾಗೆಯೇ ದಿವ್ಯವಾದ ಪೀತಾಂಬರವನ್ನಟ್ಟು ಅದಕ್ಕೆ ತಕ್ಕ ಉತ್ತರೀಯವನ್ನು ಧರಿಸಿದ್ದಾನೆ. ಕುಳಿತಿರುವ ಭದ್ರಾಸನವು ತಾನು ಹೇಮಮಯವಾಗಿದ್ದರೂ ಕುಳಿತವರಿಗೆ ಮೃದುಪೀಠವಾಗಿರುವೆನೆಂದು ಹೆಮ್ಮೆ ಕೊಚ್ಚಿಕೊಳ್ಳುವಂತೆ ಮೆರೆಯುತ್ತಿದೆ. ಮುಗ್ಗುಲುಗಳಲ್ಲಿ ಎದುರಿಗೆ ಬಂದವರಿಗೆಂದು ರತ್ನಾಸನಗಳು ಸಿದ್ಧವಾಗಿವೆ. ನೆಲವು ಇದೆಯೋ ಇಲ್ಲವೊ ಎಂಬಂತೆ ಸೂಕ್ಷ್ಮವಾಗಿ ಆಸನದ ಪಾದಗಳೆಲ್ಲ ಆಕಾಶದಲ್ಲಿದ್ದಂತೆ ಇವೆ. ಎಲ್ಲೆಲ್ಲಿಯೂ ತೇಜಸ್ಸೇ ತೇಜಸ್ಸಾಗಿ ಸರ್ವವೂ ಪ್ರಕಾಶಮಾನವಾದರೂ ಕಣ್ಣುಕುಕ್ಕುವಷ್ಟು ತೀವ್ರವಲ್ಲದ ಒಂದು ಮನೋಹರ ತೇಜೋಮಂಡಲವಾಗಿ ಸೌಮ್ಯವಾಗಿ ವಿರಾಜಿಸುತ್ತಿವೆ.

ಆಚಾರ್ಯನು ಯೋಚಿಸಿದನು : “ದೇವರಾಜನು ಇಂದು ಬರಲು ಕಾರಣವೇನಿರಬೇಕು? ಅವಸರದಲ್ಲಿ ಬಂದಂತಿಲ್ಲವಾಗಿ ಈ ಕೂಡಲೇ ಮಾಡಬೇಕಾದ ಕಾರ್ಯವೇನೂ ಇರಲಾರದು. ನಾವು ಮಾತಾಮಹರಿಗೆ ಕೊಡುವ ಗುಪ್ತ ಹವಿರ್ಭಾಗದ ವಿಚಾರವಿರಬೇಕು. ಹೌದು. ದೇವಾಚಾರ್ಯನಾಗಿ ದಾನವರಿಗೆ ಆಹುತಿಕೊಡುವುದು ಸರಿಯಲ್ಲ. ಆದರೆ, ನಾವು ದ್ವಾಮುಷ್ಯಾಯಣರು. ನಾವು ದೇವತೆಗಳ ಪುತ್ರರು ಹೇಗೋ ಹಾಗೆಯೇ ದಾನವರಿಗೂ ಪುತ್ರವರ್ಗ. ನಾವು ಇಬ್ಬರಿಗೂ ಸೇರಿದವರು. ಅದರಿಂದ ಆ ಮಾತು ಎತ್ತುವಂತಿಲ್ಲ. ಇನ್ನು ಉಳಿದುದು ನಮ್ಮ ಸ್ವಂತ ವಿಚಾರ. ನಮ್ಮ ಸ್ವಂತ ವಿಚಾರ ನಮ್ಮಲ್ಲಿ ಆಕ್ಷೇಪಣೀಯವಾಗಿ, ದೇವಾಚಾರ್ಯ ಪದವಿಗೆ ಒಪ್ಪದಂತಹ ಆಚಾರವು ಯಾವುದೂ ಇಲ್ಲ. ಸುರಾಪಾನದ ಮಾತು : ಅದು ತೀರ ನಮ್ಮ ಸ್ವಂತದ ವಿಚಾರ. ಅದು ಇಲ್ಲಿಗೆ ಬಂದ ಮೇಲೆ ಆರಂಭಿಸಿದುದಲ್ಲ ನಮಗೆ ಅದು ಬಹುದಿನದಿಂದ ಬಂದಿರುವ ವಿಷಯ. ನಾವು ಇಲ್ಲಿಗೆ ಬರುವಾಗ ಇದ್ದುದು. ಅದು ಇಂದ್ರನಿಗೂ ತಿಳಿದೇ ಇದೆ. ಅದರಿಂದ ಅದರ ವಿಚಾರವೂ ಇರಲಾರದು. ಹುಂ ಆತನೇ ಇಂದು ಹೇಳುವನಲ್ಲ ! ನಾವೇಕೆ ಬರಿದೆ ಚಿಂತಿಸಿ ತಲೆ ಕೆಡಿಸಿಕೊಳ್ಳಬೇಕು ?” ಎಂದು ನಿಶ್ಚಿಂತನಾಗಿ ವೇದಾಧ್ಯಯನ ಮಾಡುತ್ತ ಕುಳಿತನು.

ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬಂದನು. ಹಸುರು ಕುದುರೆಗಳು ಕಟ್ಟಿರುವ, ನವರತ್ನ ಖಚಿತವಾದ ರಥದಲ್ಲಿ ಬಂದು, ಮಾತಲಿಯ ಹಸ್ತ ಲಾಘವದಿಂದ ಕೆಳಕ್ಕಿಳಿದು ಆತನ ಹಿಂದೆಯೇ ದೇವಾಚಾರ್ಯನ ಸಮ್ಮುಖಕ್ಕೆ ಬಂದನು. ದೇವಾಚಾರ್ಯನು ‘ವಿಜಯೀಭವ’ ಎಂದು ಆಶೀರ್ವಾದ ಮಾಡುತ್ತಾ ತನಗೆ ಕೈಮುಗಿದ ದೇವರಾಜನನ್ನು ರತ್ನಾಸನಗಳೊಂದರಲ್ಲಿ ಕುಳ್ಳಿರಿಸಿದನು. ದೇವಾಧಿಪತಿಯು ದೊಡ್ಡವರಿಗೆ ಸಹಜವಾದ ಮಂದಹಾಸದಿಂದ ಶೋಭಿಸುತ್ತ “ಆಚಾರ್ಯರಿಗೆ ಸರ್ವಥಾ ಕುಶಲವಷ್ಟೇ” ಎಂದು ವಿಚಾರಿಸಿದನು. ಆಚಾರ್ಯನೂ ನಸುನಗುತ್ತಾ “ಶಚೀಪತಿಯ ಅನುಗ್ರಹವು ತಾನೇತಾನಾಗಿರಲು ನಮಗೆ ಯಾವ ರೂಪದಲ್ಲಿ ತಾನೇ ಕೊರತೆಯು ಕಾಣಿಸಿಕೊಳ್ಳಬಲ್ಲದು? ಎಂದನು.

ಇಂದ್ರನು ಸಮಾಧಾನವನ್ನು ಸೂಚಿಸುವ ನಗೆಯನ್ನು ನಕ್ಕು, “ಆಚಾರ್ಯರಲ್ಲಿ ದೇವಕುಲದ ಪ್ರಾರ್ಥನೆಯೊಂದನ್ನು ಸಲ್ಲಿಸಲು ಬಂದಿದ್ದೇನೆ. ವರವೆಂದು ಅದನ್ನು ಅನುಗ್ರಹಿಸಿ ನಮ್ಮನ್ನು ಕಾಪಾಡಬೇಕು” ಎಂದು ಕೈಮುಗಿದನು.

ಆಚಾರ್ಯನು “ನಮ್ಮನ್ನು ತಮಗೆ ಒಪ್ಪಿಸಿಕೊಂಡಿದ್ದೇನೆ. ಅದರಿಂದ ನಮ್ಮ ಅಸ್ತಿತ್ವಕ್ಕೆ ಲೋಪ ಬರದಂತಹ ಏನನ್ನು ಬೇಕಾದರೂ ಕೇಳಬಹುದು. ಸಂಕೋಚವು ಬೇಕೇ ಇಲ್ಲ” ಎಂದನು.

“ದೇವಾ, ತಾವು ಗುಪ್ತವಾಗಿ ಹವಿರ್ಭಾಗಗಳನ್ನು ಸಲ್ಲಿಸುತ್ತಿರುವುದಾಗಿ ವದಂತಿ ಬಂತು. ದಾನವರು ದೇವತೆಗಳ ಶತ್ರುಗಳು. ತಾವು ದೇವಾಚಾರ್ಯರು. ಅದರಿಂದ ಶತ್ರುವೃದ್ಧಿಯನ್ನು ಬಯಸಬಾರದು ಎಂದು ದೇವತೆಗಳು ತಮ್ಮನ್ನು ಪ್ರಾರ್ಥಿಸುವರು.”

“ದೇವಪತಿ, ತಾವು ಹೇಳುವುದು ಸಹಜವಾದುದು. ಆದರೆ ಒಂದನ್ನು ತಾವು ಗಮನಿಸಿದಂತಿಲ್ಲ. ನಾವು ದ್ವಾಮುಷ್ಯಾಯಣರು. ಮಾತಾಪಿತೃಗಳು ಇಬ್ಬರ ಕುಲದವರಲ್ಲಿಯೂ ಭಕ್ತರಾಗಿ ಅವರವರ ಶ್ರೇಯಸ್ಸನ್ನು ಬಯಸತಕ್ಕವರು. ಅದರಿಂದ, ನಾವು ದೇವಾಚಾರ್ಯತ್ವವನ್ನು ವಹಿಸಿಕೊಂಡಿದ್ದರೂ ದೇವಸಹಜವಾದ ದಾನವದ್ವೇಷವನ್ನು ಅಂಗೀಕರಿಸಿದವರಲ್ಲ. ಹಾಗೆ, ಅಂಗೀಕರಿಸಲೂ ಸಾಧ್ಯವಿಲ್ಲದ ಆ ದ್ವೇಷದ ಮಾತನ್ನೇ ಎತ್ತದೆ, ನಾವು ‘ದೇವಾನಾಂ ಸ್ವಸ್ತಿ, ದಾನವಾನಾಂಚ’ ಎಂದೇ ಹೇಳುವವರು. ಆದರೂ, ದೇವರಾಜರ ಮುಖಾಂತರ ಸಲ್ಲಿಸಿದ ದೇವತೆಗಳ ಪ್ರಾರ್ಥನೆಯು ವಿಫಲವಾಗಬಾರದೆಂದು ನಾವು ಹೀಗೆ ವರವನ್ನು ಕೊಡುವೆವು. ನಾವು ಮಾಡುತ್ತಿರುವ ಹವ್ಯದಾನದಿಂದ ಲಭಿಸುವ ದಾನದ ತೇಜಸ್ಸು ಏನಿದ್ದರೂ ನಮ್ಮ ಅನಂತರ ಫಲಿಸುವುದು. ಇನ್ನು ತಾವು ಆ ವಿಚಾರವನ್ನು ಅಷ್ಟಕ್ಕೇ ಬಿಡಬೇಕು. ಅದನ್ನು ಒತ್ತಬಾರದು. ಅಲ್ಲದೆ, ನಾವು ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗುವುದರಲ್ಲಿ ಅಡ್ಡಿಯಾಗಿ ವ್ಯಥೆಗೆ ಗುರಿಯಾಗಬಾರದು.”

ಇಂದ್ರನು ಆಚಾರ್ಯನ ಭಾವವನ್ನು ಪೂರ್ಣವಾಗಿ ಗ್ರಹಿಸಿದನು. ಆತನು ಮಾಡುವ ಕಾರ್ಯಕ್ಕೆ ಯಾರೂ ಅಡ್ಡಿ ಬರಬಾರದು. ಅದು ಪ್ರಾರ್ಥನೆಯಲ್ಲ ಆಜ್ಞೆ, ಯಾರಾದರೂ ಅಡ್ಡಿಬಂದರೆ, ಅವರನ್ನು ತಾನು ನಿಗ್ರಹಿಸದೆ ಇರುವುದಿಲ್ಲ. ಆ ನಿಗ್ರಹದಿಂದ ವ್ಯಥೆಗೆ ಗುರಿಯಾದರೆ, ಅದಕ್ಕೆ ತಾನು ಹೊಣೆಯಲ್ಲ. ಇದಿಷ್ಟನ್ನೂ ಕೊಂಚವೂ ಒರಟುತನವಿಲ್ಲದೆ, ಸಹಜವಾಗಿ, ಸರಳವಾಗಿ, ದೃಢವಾಗಿ ಹೇಳಿರುವ ಆಚಾರ್ಯನ ಭಂಗಿಯನ್ನು ನೋಡಿ ಕಡ್ಡಿಯನ್ನು ತುಂಡುಮಾಡುವಂತೆ ಖಡಾಖಡಿಯಾಗಿಯಾದರೂ ವಿರಸವಾಗದಂತೆ ಹೇಳಿದ ಆತನ ಮನೋದಾಢರ್ಯ್‌ವನ್ನು ಕಂಡು, ಇಂದ್ರನು ಸಂತೋಷಪಟ್ಟನು. ಅದರ ಜೊತೆಯಲ್ಲಿಯೇ ಇರುವ ವರಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ, ಅದನ್ನು ಮಾತಿನಲ್ಲೂ ಹೇಳುತ್ತ “ತಾವು ಕೊಟ್ಟ ವರಪ್ರದಾನದಿಂದ ದೇವತೆಗಳು ತೃಪ್ತರಾಗಿ, ತಮಗೆ ಕೃತಜ್ಞತೆಯನ್ನು ಒಪ್ಪಿಸುವರು. ಆದರೂ ವಿಷಾದ ಬೀಜವು ಅಳಿಯಲಿಲ್ಲ” ಎಂದನು.

ವಿಶ್ವರೂಪನು ನಗುತ್ತ “ದೇವತೆಗಳು ಅಜರ ಅಮರರು ಎಂದು ಪ್ರಖ್ಯಾತಿ. ಬಹುಶಃ ಆ ಖ್ಯಾತಿಯು ದೇವಾಚಾರ್ಯರಾಗಿರುವ ನಮಗೂ ಅನ್ವಯಿಸಿದರೆ ವಿಷಾದ ಬೀಜವು ಇದ್ದರೂ ಇಲ್ಲದಂತೆಯೇ ತಾನೇ? ಅಲ್ಲದೆ, ದೇವತೆಗಳು ಹೂಡುವ ಯಾವ ಆಟದಲ್ಲಿ ತಾನೇ ವಿಷಾದಬೀಜವಿಲ್ಲ ? ಅದರಿಂದ ನಾವಾಡಿದ ಮಾತು ಸಹಜವೇ ಆದಂತಾಯಿತು ತಾನೇ ?” ಎಂದನು.

ದೇವೇಂದ್ರನು ಅದನ್ನೊಪ್ಪಿಕೊಳ್ಳುತ್ತ “ದೇವಾಚಾರ್ಯರು ಕೊಟ್ಟ ವರ ದೇವತೆಗಳ ವರದಂತೆಯೇ ಸಗರ್ಭವಾಗಿದೆ. ಅದರಿಂದ ಏನೂ ಹೇಳುವಂತಿಲ್ಲ ಆಯಿತು. ಇನ್ನೊಂದು ವಿಚಾರ. ಅಪ್ಪಣೆಯಾದರೆ ಬಿನ್ನವಿಸುವೆನು.” ಎಂದನು.

ವಿಶ್ವರೂಪಾಚಾರ್ಯನು ದೇವರಾಜನ ವಿನಯವನ್ನು ನೋಡಿ ಕರಗಿ ಹೋದನು. ಆ ವಿನಯವರ್ತನವನ್ನು ನೋಡಿ, ಅದಕ್ಕೆ ವಶನಾಗಿ ತಾನೂ ಅಷ್ಟೇ ವಿನಯದಿಂದ, “ಆಗಬಹುದು ಸಿದ್ಧವಾಗಿದ್ದೇನೆ” ಎಂದನು.

ಇಂದ್ರನು ಬಹುಗಂಭೀರವಾಗಿ, ಮರ್ಯಾದೆಯಿಂದ, ವಿನಯದಿಂದ, ಪ್ರಸ್ತಾಪಿಸಿದನು. “ಇದೂ ದೇವಗಣಗಳ ಪ್ರಾರ್ಥನೆ. ದೇವಾಚಾರ್ಯರಾದ ತಾವು ಸತತವಾಗಿ ಸುರಾಪಾನ ಮಾಡುತ್ತಿರುವುದು ದೇವಗಣಕ್ಕೆ ಸಮ್ಮತವಿಲ್ಲ. ಅದರಿಂದ ಅವರೆಲ್ಲರೂ ಬೇಕೆಂದರೆ ಸೋಮರಾಜನನ್ನು ಪ್ರಾರ್ಥಿಸಿ, ತಮಗೆ ಯಥೇಚ್ಛವಾಗಿ ಸೋಮವು ಯಾವಾಗಲೂ ಸಿದ್ಧವಾಗಿರುವಂತೆ ಮಾಡಿಕೊಡಲು ಸಿದ್ಧರಾಗಿರುವರು. ತಾವು ಅದನ್ನು ಪರಿಗ್ರಹಿಸಿ ಇದನ್ನು ತ್ಯಜಿಸಬೇಕು.”

ಆಡಿದ ಮಾತಿನಲ್ಲಿ ತಾನು ದೇವಪತಿಯೆಂಬ ಅಹಂಕಾರವಿರಲಿಲ್ಲ. ತನ್ನಪ್ಪಣೆ, ಇದನ್ನು ನಿರಾಕರಿಸಿದರೆ ಶಿಕ್ಷೆಗೆ ಗುರಿಯಾಗಬೇಕೆಂಬ ಭಯವ್ಯಂಜನವಿರಲಿಲ್ಲ. ಮಾತು ಸಹಜವಾಗಿತ್ತು. ಚಿಕ್ಕವರು ದೊಡ್ಡವರಲ್ಲಿ ಬಿನ್ನವಿಸಿಕೊಳ್ಳುವ ರೀತಿಯಿತ್ತು. ಆದರೂ ವಿಶ್ವರೂಪನು ವ್ಯಗ್ರನಾದನು : “ದೇವರಾಜ, ಇವೆಲ್ಲವೂ ಸಹಜವಾಗಿ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರಲ್ಲಿ ಇರಬೇಕಾದ ಗುಣಗಳು. ದೇವತೆಗಳಿಗೆ ಹೇಳಿ, ‘ವಿಶ್ವರೂಪನು ಏನಿದ್ದರೂ ತಾತ್ಕಾಲಿಕವಾಗಿ ದೇವಾಚಾರ್ಯನಾದವನು. ಆತನು ತಾನಾಗಿ ಬೇಡವೆಂದರೂ ಆಯಿತು. ದೇವರಾಜರಾದ ತಾವು ಬೇಡವೆಂದರೂ ಆಯಿತು, ಹೀಗಿರುವಾಗ, ಮಲ್ಲಿಗೆಯಲ್ಲಿ ಪಾರಿಜಾತದ ಸೌರಭವನ್ನು ಬಯಸುವ ಈ ಬಯಕೆಗಳಿಂದ ಫಲವಿಲ್ಲ” ಎಂದು ಹೇಳಿಬಿಡಿ.

“ಆಚಾರ್ಯ, ಸುರಾಪಾನವು ತಮೋಗುಣವನ್ನು ಬೆಳೆಸುವುದು ; ಸೋಮಪಾನವು ಸತ್ವವಾಗುವ ರಜೋಗುಣವನ್ನು ಬೆಳೆಸುವುದು. ಅದರಿಂದ ದೇವತೆಗಳು ಸೋಮಪಾನವನ್ನು ಬಯಸುವರು.”

ವಿಶ್ವರೂಪನು ಬದ್ಧಭೃಕುಟಿಯಾದನು. “ಇದನ್ನು ನಾನು ತಿಳಿಯೆನೆನ್ನುವೆಯಾ? ದೇವರಾಜ, ಇದೆಲ್ಲವನ್ನೂ ನಾನು ಬಲ್ಲೆ, ಅಷ್ಟೆ ಅಲ್ಲದೆ ಸುರೆಯು ಸೋಮಕ್ಕಿಂತ ಬಲವಾದುದು. ಅದು ಪ್ರಾರ್ಥಿಸಿಕೊಳ್ಳದಿದ್ದರೆ ಸೋಮನನ್ನು ತನ್ನಂತೆ ಮಾಡಿಕೊಳ್ಳಬಲ್ಲದು. ಅದನ್ನೂ ಬಲ್ಲೆ. ಆದರೂ ಆ ತಮೋಗುಣವನ್ನು ಸತ್ವರಜಸ್ಸುಗಳಾಗಿ ಮತ್ತೆ ಯಾರೂ ಏನು ಹೇಳಬೇಕಾಗಿಲ್ಲ. ಬೇಕಾಗಿದ್ದರೆ ನಮ್ಮನ್ನು ಆಚಾರ್ಯರನ್ನಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಬೇಕಾಗಿಲ್ಲ” ಎಂದನು.

ದೇವರಾಜನು ಹಾಗೆ ತಿರಸ್ಕೃತನಾದರೂ ತನ್ನ ಸೌಜನ್ಯವನ್ನು ಬಿಡದೆ ಹೇಳಿದನು : “ದೇವ, ಆ ಸುರಾಪಾನವೇ ತಮ್ಮನ್ನು ದಾನವಪ್ರೇಮಿಗಳನ್ನಾಗಿ ಮಾಡಿರುವುದು. ಅದು ತಮೋಗುಣವನ್ನು ವರ್ಧಿಸಿ ತಾವೂ ತಮ್ಮ ಪಕ್ಷಪಾತಿಗಳಾಗಿರುವಂತೆ ಮಾಡಿದೆಯೆಂದು ದೇವಗಣದ ಅಭಿಪ್ರಾಯ.”

ವಿಶ್ವರೂಪನು ಹೇಳಿದನು : “ದೇವರಾಜಾ, ಆಗಲೇ ಹೇಳಿದೆನು. ಇದು ನಮ್ಮ ಸ್ವಂತ ವಿಚಾರ. ಇದನ್ನು ನಾವು ಅಂಗೀಕರಿಸಿದ್ದೇವೆ. ಹಸುವನ್ನು ಒಪ್ಪಿಕೊಂಡಾಗ, ಅದರ ಕೊಂಬು, ಬಾಲಗಳನ್ನೂ ಒಪ್ಪಿಕೊಂಡಂತೆ, ನಮ್ಮನ್ನು ಅಂಗೀಕರಿಸಿದವರು ನಮ್ಮ ಕೆಟ್ಟ ಚಾಳಿಗಳನ್ನು ದುರ್ಗುಣಗಳನ್ನು ಅಂಗೀಕರಿಸಬೇಕು. ನಾವು ಪ್ರಾಣವನ್ನಾದರೂ ಬಿಟ್ಟೇವು, ಇದನ್ನು ಬಿಡುವುದಿಲ್ಲ. ಅದರಿಂದ ಇದರಲ್ಲಿ ನಮಗೆ ಸೌಖ್ಯವಿದೆ. ಅದರಿಂದ ಇದರಲ್ಲಿ ನಮಗೆ ವಿಶ್ವಾಸವಿದೆ. ಇನ್ನೂ ಒಂದು ಸಲ ಹೇಳುವೆನು. ನಾವು ಪ್ರಾಣವನ್ನಾದರೂ ಬಿಟ್ಟೇವು, ಸುರಾಪಾನವನ್ನು ಬಿಡುವುದಿಲ್ಲ.

ದೇವರಾಜನಿಗೆ ಸಹಜವಾಗಿ ಕೋಪ ಬಂತು. ಆಚಾರ್ಯನಲ್ಲದೆ ಇನ್ನು ಯಾರೇ ಆಗಿದ್ದರೂ ಅಲ್ಲಿಯೇ ಶಿಕ್ಷಿಸಿ ಬುದ್ಧಿ ಕಲಿಸುತ್ತಿದ್ದನು. ಆದರೆ ಆಚಾರ್ಯನಷ್ಟೇ ಅಲ್ಲ, ತಾನೇ ಹೋಗಿ ಬ್ರಹ್ಮನಾಜ್ಞೆಯೆಂದು ಗೌರವದಿಂದ ವರಿಸಿರುವ ಆಚಾರ್ಯ. ಅದರಿಂದ ಬಂದ ಕೋಪವನ್ನೆಲ್ಲ ನುಂಗಿಕೊಂಡು, “ದೇವಾ, ತಾವು ದೊಡ್ಡವರು. ನಿಯತಿಗೆ ಭಂಗ ತರಬಾರದು. ಆಚಾರ್ಯರಾಗುವ ಮುಂಚೆ ಯಥೇಚ್ಛಾಚಾರವು ಶೋಭಿಸುತ್ತಿತ್ತು. ಈಗ ನಿಯತಾಚಾರವು ಮಾತ್ರ ಶೋಭಿಸುವುದು” ಎಂದನು.

ವಿಶ್ವರೂಪನು ಗಹಗಹಿಸಿ ನಕ್ಕು ಹೇಳಿದನು : “ಈ ಪ್ರಶ್ನಕ್ಕೆ ಆಗಲೇ ಉತ್ತರ ಕೊಟ್ಟಾಗಿದೆ. ಸ್ವೇಚ್ಛೆಯಿಂದ, ಬಯಸಿ ಬಯಸಿ, ಪಡೆದ ಪದವಿಗಾಗಿ ಯಥೇಚ್ಛಾಚಾರವನ್ನು ಬಿಡಬೇಕು. ಯಾದೃಚ್ಛಿಕವಾಗಿ ನಮಗೆ ಬಂದಿರುವ ಪದವಿಯ ಮೋಹ ನಮಗೆ ಇಲ್ಲ ಅದರಿಂದ ನಾವು ನಿಯಂತ್ರಿತರಾಗುವುದಿಲ್ಲ!”

“ನಿಯತಿಯ ನಿಯಮ, ತಿರಸ್ಕಾರವನ್ನು ಸಹಿಸುವುದಿಲ್ಲ ಆಚಾರ್ಯ !”

“ಈ ಬೆದರಿಕೆ ನಮಗಲ್ಲ,ನಿಯತಿಯ ನಿಯಮ ನಮಗಿಲ್ಲ.ಅಲ್ಲದೆ ಶಿಕ್ಷೆಯು ಯಾರಿಗೆ ? ರಕ್ಷಾರಹಿತರಿಗೆ. ಇತರರಿಗೆ ರಕ್ಷೆಯನ್ನು ಕೊಡಬಲ್ಲವರು, ಆತ್ಮರಕ್ಷೆಯನ್ನೂ ಮಾಡಿಕೊಳ್ಳಬಲ್ಲರು ಎಂಬುದೂ ವಿದಿತವಷ್ಟೆ ?”

“ಹೀಗೆ ಮಾಡಬಾರದುದನ್ನು ಮಾಡಿ ಅನರ್ಥಪರಂಪರೆಗೆ ಕಾರಣವಾಗುವುದು ಸರಿಯಲ್ಲ.”

“ಹೌದು. ಅನರ್ಥವಾಗುವುದು. ಆದರೆ, ಅದು ನಮಗಲ್ಲ ಅನರ್ಥವೆಂದವರು ಯಾರಿಗೆ ಎಂದು ತಿಳಿದುಕೊಂಡಿದ್ದರೆ ಒಳ್ಳೆಯದು.”

ತುಂಟಕುದುರೆಯಂತೆ ಯಾವುದಕ್ಕೂ ಸಗ್ಗದ ಆಚಾರ್ಯನಿಂದ ಅವಮಾನಿತನಾಗಿ ಅದರಿಂದ ಖೇದಪಡುತ್ತ ದೇವರಾಜನು ಸಭ್ಯತನವನ್ನು ತಿರಸ್ಕರಿಸಲಾಗದೆ, ಯಥೋಚಿತವಾಗಿ ಗೌರವಿಸಿ, ಬೀಳ್ಕೊಂಡು ಹೊರಟು ಹೋದನು.

* * * *

೭.ರೇವು ಸಿಕ್ಕಿತು

ಸಂಪಾದಿಸಿ

ಇಂದ್ರಾಣಿಯು ತನ್ನ ದೇವಮಂದಿರದಲ್ಲಿ ಕುಳಿತು ದೇವದೂತನಾದ ಯಜ್ಞೇಶ್ವರನನ್ನು ನಿರೀಕ್ಷಿಸುತ್ತಿದ್ದಾಳೆ. ಸುವರ್ಣಮಯವಾದ ಆಸನದಲ್ಲಿ ಕುಳಿತು ತಾನೂ ಒಂದು ಅರಿಶಿನ ಮುದ್ದೆಯೋ ಎಂಬಂತೆ, ಪೀತಾಂಬರವನ್ನುಟ್ಟು ಹೇಮಮಯವಾದ ವಿಭೂಷಣಗಳನ್ನಿಟ್ಟು ತನ್ನ ಇಂದ್ರಾಣಿ ಪದ-ಸೂಚಕವಾದ ಪದಕವನ್ನೂ ಕಿರೀಟವನ್ನೂ ಮಾತ್ರ ಧರಿಸಿ, ಅಲ್ಪಾಭರಣ ಸುಂದರಿ ಯಾಗಿದ್ದಾಳೆ. ಪ್ರಹರಿಯು ಬಂದು ಯಜ್ಞೇಶ್ವರನ ಆಗಮನವನ್ನೂ ಸೂಚಿಸಿದಳು. ಇಂದ್ರಾಣಿಯು ಯಜ್ಞೇಶ್ವರನನ್ನು ಬರಮಾಡಿಕೊಂಡಳು. ಸಮಯೋಚಿತವಾಗಿ ಎರಡು ಮಾತನಾಡಿ ಬೃಹಸ್ಪತ್ಯಾಚಾರ್ಯನ ವಿಷಯವನ್ನು ಕೇಳಿದಳು. ಯಜ್ಞೇಶ್ವರನು “ಆತನು ಈಗ ಬ್ರಹ್ಮಲೋಕದಲ್ಲಿರುವನು. ಬೇಕೆಂದರೆ ಅಲ್ಲಿಗೆ ಹೋಗಿ ಆತನನ್ನು ನೋಡಿಕೊಂಡು ಬರಬಹುದು” ಎಂದನು.

ಇಂದ್ರಾಣಿಗೆ ಏನೋ ಭಾರವಿಳಿದಂತಾಯಿತು. ಯಜ್ಞೇಶ್ವರನನ್ನು ಕೇಳಿದಳು- “ನಾನು ಆತನನ್ನು ನೋಡಬೇಕಲ್ಲ.”

“ದೇವರಾಜ್ಞಿ, ನೀನಲ್ಲದೆ ಇನ್ನು ಯಾರು ಬೇಕಾದರೂ ಆತನನ್ನು ನೋಡಬಹುದು.”

“ಹಾಗೆಂದರೆ ?”

“ಹೌದು. ನಿಜ ದೇವರಾಜ್ಞಿಯು ದೇವರಾಜನ ಅಪ್ಪಣೆಯಿಲ್ಲದೆ ಈ ಲೋಕವನ್ನು ಬಿಟ್ಟುಹೋಗುವಂತಿಲ್ಲ. ಆತನು ತಾನಾಗಿ ಈ ದೇವಲೋಕವನ್ನು ಬಿಟ್ಟು ಹೋಗಿರುವನಾಗಿ ಮತ್ತೆ ದೇವೇಂದ್ರನ ಅಪ್ಪಣೆಯಿಲ್ಲದೆ ಈ ಲೋಕಕ್ಕೆ ಬರುವಂತಿಲ್ಲ. ಅದರಿಂದ ನೀವಿಬ್ಬರೂ ಒಬ್ಬರನ್ನೊಬ್ಬರು ನೋಡುವುದು ಅಸಾಧ್ಯ.”

“ನೋಡಲೇ ಬೇಕಾಗಿದ್ದರೆ ಏನು ಮಾಡಬೇಕು ಅದನ್ನು ಹೇಳು.”

“ದೇವರಾಜನ ಅಪ್ಪಣೆಯನ್ನು ಪಡೆದರೆ, ನೀನಾದರೂ ಅಲ್ಲಿಗೆ ಹೋಗಬಹುದು. ಅಥವಾ ಆತನಾದರೂ ಇಲ್ಲಿಗೆ ಬರಬಹುದು. ಆದರೆ ಎರಡೂ ಅನರ್ಥಕಾರಿಗಳು.”

“ಅದೇನು ಹಾಗೆನ್ನುವೆ ಯಜ್ಞೇಶ್ವರ ?”

“ಹೌದೋ ಅಲ್ಲವೋ ನೋಡು. ನೀನು ಅವ್ಯಾಪಾರಿಯಂತೆ, ತಲೆಮರೆಸಿ ಕೊಂಡು ಏಕಾಂಗಿಯಾಗಿ ಬ್ರಹ್ಮಲೋಕಕ್ಕೆ ಹೋಗುವಂತಿಲ್ಲ. ಅಥವಾ ಆತನೇ ಬಂದರೂ, ಏಕಾಂತದಲ್ಲಿ ನಿನ್ನನ್ನು ಕಂಡರೂ ಅದು ದೇವಲೋಕದಲ್ಲೆಲ್ಲಾ ಗುಲ್ಲೋ ಗುಲ್ಲಾಗುವುದು. ಈಗ ತಾನೇ ವಿಶ್ವರೂಪಾಚಾರ್ಯನು ದೇವರಾಜನನ್ನು ಸೂರಾಪಾನ ವಿಚಾರದಲ್ಲಿ ತಿರಸ್ಕರಿಸಿರುವನು. ಈ ದಿನ ನಿಮ್ಮ ನಿಮ್ಮ ಸಂದರ್ಶನವಾದರೆ, ಅರ್ಥವೇನು ? ನೀನೇ ಹೇಳು ?”

“ಆಯಿತು. ಇದನ್ನು ಸಾಧಿಸುವ ದಾರಿ ಯಾವುದು ಹೇಳು ?”

“ಬೇರೇ ಸಾಧನವೇ ಇಲ್ಲ, ಇದು ದೂತಮುಖವಾಗಿಯೇ ಆಗಬೇಕು”

“ಹಾಗಾದರೆ, ನಿನ್ನಿಂದಲೇ ಆಗಬೇಕು ಎಂದಾಯಿತು.”

“ನಾನು ಬೇಡ. ಇನ್ನು ಯಾರಾದರೂ ಹೋಗಿಬರಲಿ. ನಾನು ಹೋಗಿ ಬಂದರೆ ಅದನ್ನು ಗುಟ್ಟಾಗಿಟ್ಟಿರಲು ಸಾಧ್ಯವಿಲ್ಲ.

“ನಾನು ಕೇಳಬೇಕೆಂದಿರುವ ವಿಚಾರವನ್ನು ನಿನಗಲ್ಲದೆ ಇನ್ನು ಯಾರಿಗೂ ಹೇಳುವಂತಿಲ್ಲ.”

“ನಾನು ಬಲ್ಲೆ. ನೀನು ಕೇಳಬೇಕೆಂದಿರುವುದಿಷ್ಟು ; ನೀನು ಮತ್ತೆ ಯಾವಾಗ ಬಂದು ದೇವಾಚಾರ್ಯತ್ವವನ್ನು ವಹಿಸಿಕೊಳ್ಳುವೆಯೆಂದು ಕೇಳಬೇಕು. ಹೌದೋ ಅಲ್ಲವೋ ?”

“ನೀನು ಜಾತವೇದ, ಕೇಳಬೇಕೆ ? ಮುಖವನ್ನು ನೋಡುತ್ತಿದ್ದ ಹಾಗೆಯೇ ಭಾವವನ್ನು ಗ್ರಹಿಸುವೆ. ಆಯಿತು. ಇದಕ್ಕೆ ಮತ್ತೆ ಯಾರನ್ನು ವಿನಿಯೋಗಿಸೋಣ? ಹೇಳು.”

“ವಾಯುವನ್ನು ಕೇಳು. ಆತನು ಮಾತರೀಶ್ವನು. ಒಂದು ಕ್ಷಣದಲ್ಲಿ ಮನೋವೇಗದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವನು.”

“ಆಗಬಹುದು.”

ಯಜ್ಞೇಶ್ವರನು ಎದ್ದು ಕೈಮುಗಿದು, ಆಕಾಶದಲ್ಲಿ ಮುಷ್ಠಿಮಾಡಿ ಒಂದು ಆಸನದ ಮೇಲೆ ಆ ಮುಷ್ಠಿಯನ್ನು ಇಟ್ಟನು. ಅಲ್ಲೊಂದು ಪುರುಷಾಕೃತಿಯು ಕಾಣಿಸಿತು. ಅದು ಎದ್ದು ಇಂದ್ರಾಣಿಗೆ ಅಭಿವಂದನೆ ಮಾಡಿ “ನಾನು ವಾಯು. ನನ್ನಿಂದ ಏನಾಗಬೇಕು ? ಅಪ್ಪಣೆಯಾಗಲಿ’ ಎಂದಿತು.

ಇಂದ್ರಾಣಿಯು ಯಜ್ಞೇಶ್ವರನ ಮುಖ ನೋಡಿದಳು. ಯಜ್ಞೇಶ್ವರನು “ಮಿತ್ರ ಬೃಹಸ್ಪತಿಯ ಬಳಿಗೆ ಹೋಗಿ, ಆತನು ದೇವಲೋಕಕ್ಕೆ ಬಂದು ಧರ್ಮಾಚಾರ್ಯತ್ವವನ್ನು ಯಾವಾಗ ಪರಿಗ್ರಹಿಸುವನು ಎಂದು ಕೇಳಿಕೊಂಡು ಬರಬೇಕು. ಇದು ಸರ್ವವ್ಯಾಪಿಯಾದ ನಿನ್ನಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಿನ್ನನ್ನು ಈಗ ಬರಮಾಡಿಕೊಂಡುದು.”

“ಇಂದ್ರಾಣಿಯ ಅಪ್ಪಣೆಯಾದರೆ ಆಗಬಹುದು. ನೀನು ಮಾಡಿದರೆ ಆಗುತ್ತಿರಲಿಲ್ಲವೇನೋ ?”

“ನಾನು ಮಾಡಿದರೆ, ಎಲ್ಲರಿಗೂ ತಿಳಿದು ಹೋಗುವುದು. ಅದರಿಂದ, ಅಲ್ಲವೆ, ಒಂದು ಮಾತು ಹೇಳಿ ಹೋಗು. ನಿನ್ನೆ ವಿಶ್ವರೂಪಾಚಾರ್ಯನಿಗೂ ದೇವರಾಜನಿಗೂ ಆದ ಮನಃಕ್ಷೋಭದ ವಿಚಾರವಾಗಿ ದಾನವಲೋಕದಲ್ಲಿ ಏನೇನು ಪ್ರತಿಕ್ರಿಯೆಗಳಾಗಿವೆ?”

“ಇದುವರೆಗೆ ವಿಶ್ವರೂಪಾಚಾರ್ಯನು ಬೆಳೆಸಿಕೊಟ್ಟಿರುವ ತೇಜಸ್ಸು ಒಬ್ಬ ಅಸುರಶ್ರೇಷ್ಠನಾಗಲು ಸಾಕಾಗಿದೆ. ಅದನ್ನು ಅವರು ಮುಂದುಮಾಡಿಕೊಂಡು ದೇವಲೋಕದ ಮೇಲೆ ನುಗ್ಗಬೇಕೆಂದಿದ್ದರು. ಆದರೆ ಆತನೇ ಕೊಟ್ಟಿರುವ ನಾರಾಯಣ ಕವಚವು ಅಭೇದ್ಯವೆಂದು ಅವರು ಹೆದರಿ ತಡೆದಿದ್ದರು. ನಿನ್ನೆ ಆಚಾರ್ಯನು ‘ನನ್ನ ಜೀವನದ ಅನಂತರ ಆ ತೇಜಸ್ಸು ಒಟ್ಟುಗೂಡುವುದು’ ಎಂದುದರಿಂದ ದಾನವರಿಗೆ ಹೊಸ ಚೇತನ ಬಂದಿದೆ. ಆದರೆ ವಿಶ್ವರೂಪಾಚಾರ್ಯನು ಎಂದಿಗೆ ಸತ್ತಾನೋ ಎಂದು ಒಳಗೊಳಗೇ ಯೋಚಿಸುತ್ತಿದ್ದಾರೆ. ಅಲ್ಲದೆ, ಅವರು ಶುಕ್ರಾಚಾರ್ಯನನ್ನು ಏಕಾಂತದಲ್ಲಿ ಕಂಡು ಮತ್ತೆ ತಮ್ಮ ಅಭ್ಯುದಯಕಾಲವು ಯಾವಾಗ ಎಂದು ಕೇಳಿದರೆಂದೂ, ಆತನು ಭವಿಷ್ಯತ್ತನ್ನು ನೋಡಿ ಇನ್ನೂ ಕೊಂಚ ಕಾಲ ಕಳೆಯಬೇಕು ಎಂದನೆಂದೂ ವದಂತಿ. ಸಾಲದೆ, ನಿನ್ನೆ ದೇವರಾಜನು ರೇಗಿ ವಿಶ್ವರೂಪನನ್ನು ಘಾತಿಮಾಡುವನು ಎಂದೇ ಅವರ ನಂಬಿಕೆಯಿತ್ತು. ಅಂತೂ ಇನ್ನು ಕೆಲವು ಕಾಲವಾದ ಮೇಲಾದರೂ ಅದು ಆಗಿಯೇ ತೀರುವುದೆಂದು ಅವರ ನಂಬಿಕೆ.”

“ಇದಿಷ್ಟೂ ದೇವರಾಜನಿಗೆ ವರದಿಯಾಗಿದೆಯೇ ?”

“ಹೌದು. ಆಗಿದೆ” -ಎನ್ನುತ್ತಾ ದೇವರಾಜನೇ ಒಳಗೆ ಬಂದನು. ಮೂವರು ಸಂಭ್ರಮದಿಂದ ದೇವರಾಜನಿಗೆ ಅಭಿವಂದಿಸಿ, ಆತನು ಕುಳಿತ ಮೇಲೆ ಆತನಪ್ಪಣೆಯಿಂದ ಸ್ವಸ್ಥಾನಗಳಲ್ಲಿ ಕುಳಿತರು. ಶಚಿಯಪ್ಪಣೆಯಿಂದ ಯಜ್ಞೇಶ್ವರನು ತಾವು ಮಾಡಬೇಕೆಂದಿರುವುದನ್ನು ಹೇಳಿದನು.

ದೇವೇಂದ್ರನು ಹೇಳಿದನು : “ಬ್ರಹ್ಮಲೋಕದಲ್ಲಿ ಬೃಹಸ್ಪತಿಯು ಪ್ರಕಟವಾಗಿರುವನೆಂದು ನನಗೂ ಈಗ ವಾರ್ತೆಯು ಬಂತು. ಅದರಿಂದ, ಅಗ್ನಿವಾಯುಗಳಲ್ಲಿ ಒಬ್ಬರನ್ನು ಕಳುಹಿಸು ಎಂದು ಹೇಳಲು ನಾನು ಇಲ್ಲಿಗೆ ಬಂದೆನು. ಅಗ್ನಿಗಿಂತ ಈ ದೌತ್ಯಕ್ಕೆ ವಾಯುವೇ ಸರಿ. ಹೋಗಿ ಬರಲಿ. ನಾನೇನು ಮಾಡಬೇಕೆಂದಿದ್ದೆ ಬಲ್ಲೆಯಾ, ಯಜ್ಞೇಶ್ವರ ? ಉಪಶ್ರುತಿ ದೇವಿಯನ್ನು ಕಳುಹಿಸಿ ಬೃಹಸ್ಪತಿಯನ್ನು ಹುಡುಕಿಸಬೇಕು ಎಂದಿದ್ದೆ.”

“ಆಯಿತು ನಿನ್ನೆಯ ಸಮಾಚಾರವೇನು ?” ಅಗ್ನಿವಾಯುಗಳಿಬ್ಬರು ಸಣ್ಣ ದನಿಯಲ್ಲಿ ಕೇಳಿದರು.

ಇಂದ್ರನು ತಾನು ಹಿಂದಿನ ದಿನ ಅನುಭವಿಸಿದ ಚಿತ್ತಕ್ಷೋಭವನ್ನು ತೋರಿಸುವವನಂತೆ ಹುಬ್ಬುಗಂಟಿಕ್ಕಿಕೊಂಡು, “ನಿನ್ನೆ ಬಹು ಕಷ್ಟದಿಂದ ತಡೆದುಕೊಂಡೆ. ಎರಡು ಸಲ ಆಯುಧವನ್ನು ಹಿರಿದು ಹಾಗೆಯೇ ಹೊಡೆದುಹಾಕಬೇಕೆಂದಿದ್ದೆ. ಕೊನೆಯ ಮಾತಂತೂ ಅದೆಷ್ಟು ನಿಷ್ಠುರ ! ‘ಇತರರಿಗೆ ರಕ್ಷೆಯನ್ನು ಕೊಡಬಲ್ಲವರು ಆತ್ಮರಕ್ಷೆಯನ್ನೂ ಬಲ್ಲರು.’ ಇಂದ್ರನು ರೇಗಿದರೆ ಯಾರ ಆತ್ಮರಕ್ಷೆಯು ಎದುರಾಗುವುದು ನೋಡೋಣೆನ್ನಿಸಿತು. ಅದರೆ ನಾನಾಗಿ ವರಿಸಿದ ಧರ್ಮಾಚಾರ್ಯನೆಂದು ಸುಮ್ಮನಾದೆ. ಅಂತೂ ನನ್ನ ಪಾಲಿಗೆ ಬ್ರಹ್ಮಹತ್ಯೆ ತಪ್ಪಿದುದಲ್ಲ. ಇನ್ನು ಯಾವಾಗಲಾದರೂ ಈತನು ಹೀಗೆ ಮತ್ತೆ ರೇಗಿಸಿದರೆ ಏನಾಗುವುದೋ ಹೇಳಲಾರೆ.”

“ಆಯಿತು ಹಾಗಾದರೆ ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿಬರಬಹುದಷ್ಟೆ?”

“ಹೋಗಿ ಬನ್ನಿ ಬೃಹಸ್ಪತ್ಯಾಚಾರ್ಯರು ಬರುವುದಾದರೆ, ನನಗೆ ಬ್ರಹ್ಮಹತ್ಯೆಯು ತಪ್ಪಿದುದಲ್ಲ. ಅದನ್ನು ಹೇಗೆ ನಿವಾರಿಸಿಕೊಳ್ಳಬೇಕು, ಅದನ್ನು ನೀವು ಮೂವರೇ ಗೊತ್ತುಮಾಡಿಟ್ಟಿರಿ.”

“ಅದೇನು ಅಷ್ಟು ದೊಡ್ಡ ವಿಷಯವಲ್ಲ. ಪಾಪವು ಅಖಂಡವಾಗಿರದಂತೆ ಒಡೆಯುವುದು. ವರವು ಬೇಕೆಂದವರಿಗೆ ಅದನ್ನೂ ವರವನ್ನೂ ಕೊಡುವುದು.”

‘ಸರಿ. ವಾಯು, ಇನ್ನು ಹೊರಡು. ಬೃಹಸ್ಪತ್ಯಾಚಾರ್ಯರ ಬಳಿಗೆ ಹೋಗಿ ಬಾ. ನಿನಗೆಂದು ನಾವು ಎಷ್ಟು ಹೊತ್ತು ಕಾಯ್ದಿರಬೇಕು ?”

“ಕಾಯಬೇಕಾಗಿಲ್ಲ. ಅಲ್ಲಿ ಅವರು ಮಾತಾಡಿದುದೆಲ್ಲ ಇಲ್ಲಿ ನಿಮಗೆ ಕೇಳಿಸುವಂತೆ ಮಾಡುವೆನು.”

“ಅದು ಸರಿ.”

ವಾಯುವು ಬ್ರಹ್ಮಲೋಕಕ್ಕೆ ಹೋದನು. ಇನ್ನೊಂದು ಕ್ಷಣವಿರಬಹುದು. ಅಷ್ಟರೊಳಗಾಗಿ ಮಾತು ಕೇಳಿಸಿತು. ಮೊದಲು ಆಚಾರ್ಯರಿಗೂ ವಾಯುದೇವನಿಗೂ ಕುಶಲ ಪ್ರಶ್ನಗಳಾಯಿತು. ಆನಂತರ ವಾಯುದೇವನು ಗಂಭೀರವಾಗಿ ಕೇಳಿದನು.

“ಇನ್ನೆಷ್ಟು ದಿನ ಅಜ್ಞಾತವಾಸದಲ್ಲಿರುವಿರಿ ?”

“ನಾನು ಸಂಕಲ್ಪಿಸಿದ್ದ ಕಾಲವಾಯಿತು. ಆದರೆ, ಈಗ ದೇವಲೋಕಕ್ಕೆ ಬರುವುದೆಂತು ? ಇನ್ನೊಬ್ಬ ಧರ್ಮಚಾರ್ಯನಿರುವನಲ್ಲ ?”

“ತಾವು ಬರುವುದಾದರೆ ದೇವೇಂದ್ರನು ಆತನನ್ನು ಕಿತ್ತೆಸೆಯುವನು.”

“ಅದಷ್ಟು ಸುಲಭವಲ್ಲ. ಅಲ್ಲದೆ ಕಿತ್ತೆಸೆಯುವ ಕಾರ್ಯವು ಸಕಾರಣವಾಗಿರಬೇಕು.”

“ಆತನು ದಾನವ ಪಕ್ಷಪಾತಿಯೆಂಬ ಕಾರಣವಿದೆ. ಅಲ್ಲದೆ, ಆತನು ನಮ್ಮನ್ನು ಕುರಿತು ಬಹಳ ನಿಷ್ಠುರವಾಗಿ ಆಡುತ್ತಾನೆ.”

“ಅದನ್ನು ನಾನು ಮೊದಲಿಂದಲೂ ಬಲ್ಲೆ. ಆತನನ್ನು ತೆಗೆದುಹಾಕಿದ ಮರುಕ್ಷಣವೇ ನಾನು ಅಲ್ಲಿರುತ್ತೇನೆ. ಆದರೆ ಇದು ಪರಮರಹಸ್ಯವಾಗಿರಬೇಕು.

“ಹಾಗೆಯೇ ತಾವೂ ದೇವಲೋಕದಲ್ಲಿ ಪ್ರಕಟವಾಗುವವರೆಗೂ ಯಾರಿಗೂ ದರ್ಶನಾದಿಗಳನ್ನು ಕೊಡದೆ ಗೋಪ್ಯವಾಗಿರಬೇಕು”

“ಹಾಗೂ ಆಗಬಹುದು. ಅತ್ತಕಡೆ ಕೇಳುತ್ತಿರುವವರನ್ನು ಬಿಟ್ಟು ಇನ್ನು ಯಾರಿಗೂ ಈ ವಿಷಯವು ತಿಳಿಯದು ತಾನೇ ?”

“ತಿಳಿಯದು”

“ಹಾಗಾದರೆ ಸರಿ.”

ಮತ್ತೊಂದು ಕ್ಷಣದೊಳಗಾಗಿ ವಾಯುವು ಅಲ್ಲಿ ಪ್ರತ್ಯಕ್ಷನಾದನು. ಇಂದ್ರನು ಆತನನ್ನು ಬಾಚಿ ತಬ್ಬಿಕೊಂಡು “ಮಹತ್ಕಾರ್ಯವನ್ನು ಸಾಧಿಸಿದೆ” ಎಂದು ಭುಜ ತಟ್ಟಿದನು. ವಾಯುವು “ಏನು ಮಹತ್ಕಾರ್ಯವನ್ನು ಸಾಧಿಸಿದೆನೋ ! ನಾವು ಸ್ವಭಾವತಃ ತೇಜೋದೇಹಿಗಳು. ಅಲ್ಲದೆ ಆಕಾಶವಿರುವೆಡೆಯಲ್ಲೆಲ್ಲ ವ್ಯಾಪ್ತಿಯುಳ್ಳವರು. ಸಂಕಲ್ಪ ಮಾತ್ರದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವರು. ಹೀಗಿರಲು ಬ್ರಹ್ಮಲೋಕಕ್ಕೆ ಹೋಗಿಬಂದುದು ಒಂದು ಸಾಹಸವೇ ?” ಎಂದು ತಲೆದೂಗಿದನು.

ಇಂದ್ರನು “ಕೊಂಚ ಕಾಲ ತಡೆ. ಈಗ ಬಂದಿರುವ ಈ ವಿಶ್ವರೂಪ ಸ್ವರೂಪದ ಆಪತ್ತು ಕಳೆಯಲಿ. ಆ ನಂತರ ನೀನು ದೇವಕುಲಕ್ಕೆ ಎಂತಹ ಉಪಕಾರ ಮಾಡಿದೆ ಎನ್ನುವುದು ತಿಳಿಯುವುದು” ಎಂದನು.

ಅಗ್ನಿಯು “ಅನರ್ಥವಾಗದಂತೆ ನೋಡಿಕೋ ಇಂದ್ರ !” ಎಂದನು.

ಇಂದ್ರನು ಲೊಚಗುಟ್ಟಿ “ಅದರ ಯೋಚನೆ ಆಮೇಲೆ, ಈಗೇಕೆ” ಎಂದನು.

* * * *

೮.ಪಾಪದ ಮೊದಲು

ಸಂಪಾದಿಸಿ

ಇಂದ್ರನು ತನ್ನ ವಿಶ್ರಾಂತಿಮಂದಿರದಲ್ಲಿ ಶತಪಥ ತಿರುಗುತ್ತಿದ್ದಾನೆ. ಅಗ್ನಿವಾಯುಗಳಿಬ್ಬರೂ ಕಂಭವನ್ನೊರಗಿಕೊಂಡು ನಿಂತಿದ್ದಾರೆ. ಶಚಿ ಅತ್ತ ನಿಂತಿದ್ದಾಳೆ. ಇಂದ್ರನು ಹೇಳಿದನು : “ಕಾರಣಾಂತರಗಳಿಂದ ಅತೃಪ್ತರಾಗಿ ರುವವರನ್ನು ಹುಡುಕಬೇಕು. ಅವರಿಗೆ ಪರಿಗ್ರಹಾಧಿಕಾರವು ಇರಬೇಕು. ಅವರಿಗೆ ಮೊದಲು ಅವರು ಕೇಳಿದ ವರವನ್ನು ಕೊಟ್ಟು ಆ ನಂತರ ಬ್ರಹ್ಮ ಹತ್ಯದ ಪಾಲನ್ನು ಕೊಡಬೇಕು. ಇಲ್ಲವಾದರೆ ಕೆಲಸವು ಕೆಟ್ಟೀತು.”

ಅಗ್ನಿಯು ಹೇಳಿದನು : “ಈ ಕಾರ್ಯಕ್ಕೆ ಅವರಿವರನ್ನು ಕೇಳಿದರೆ ಆಗುವುದಿಲ್ಲ. ಲೋಕವನ್ನೆಲ್ಲಾ ಅನ್ನವನ್ನು ಕೊಟ್ಟು ಕಾಪಾಡುವ ಸೋಮನನ್ನು ಕರೆದು ಕೇಳಬೇಕು.”

ವಾಯುವು ಹೇಳಿದನು : “ಹೊರಗೆ ಅನ್ನವಾಗಿ ಒಳಗೆ ಅನ್ನಾದನಾಗಿ ಇರುವ ಪ್ರಾಣವನ್ನು ಕೇಳಿದರೆ, ಅತೃಪ್ತರು ಯಾರು ಎನ್ನುವುದು ತಿಳಿಯುವುದು. ಆತನು ಎಲ್ಲಕ್ಕೂ ಮೂಲನು.”

ಶಚಿಯು ಹೇಳಿದಳು : “ಸೋಮ, ಪ್ರಾಣ, ಇಬ್ಬರನ್ನೂ ಕೇಳಿದರಾಯ್ತು ಅದಕ್ಕೆ ಏನಂತೆ.”

ಇಂದ್ರನು ಸರಿಯೆಂದನು. ಸೋಮ ಪ್ರಾಣರು ಇಬ್ಬರೂ ಬಂದರು. ಯಥೋಚಿತವಾಗಿ ಆದರ ಪೂರ್ವಕವಾಗಿ ಅವರಿಗೆ ಸತ್ಕಾರವು ಆಯಿತು. ಅಗ್ನಿಯು ಇಂದ್ರನ ಅಪ್ಪಣೆಯಂತೆ ಅವರನ್ನು ಕೇಳಿದನು : “ಈಗೊಂದು ಬ್ರಹ್ಮಹತ್ಯೆಯು ಪ್ರಾಪ್ತವಾಗುವುದರಲ್ಲಿದೆ. ಅದನ್ನು ಹಂಚಿಹಾಕಬೇಕು. ಅದನ್ನು ಭಾಗವಾಗಿ ಸ್ವೀಕರಿಸಿದವರಿಗೆ ಅವರು ಅಪೇಕ್ಷಿಸಿದ ವರವನ್ನು ಕೊಡಲಾಗುವುದು. ಅತೃಪ್ತರಾಗಿ ಹತ್ಯಭಾಗವನ್ನು ಜೀರ್ಣಿಸಿಕೊಳ್ಳಬಲ್ಲವರಾರು ಎಂಬುದನ್ನು ತಿಳಿಯಲು ನಿಮ್ಮನ್ನು ಇಲ್ಲಿಗೆ ಬರಮಾಡಲಾಯಿತು” ಎಂದು ಅವರಿಗೆ ವಿಸ್ತಾರವಾಗಿ ತಿಳಿಯಹೇಳಿದನು. ಸೋಮನು “ವೃಕ್ಷಗಳನ್ನು ಸ್ತ್ರೀಯರನ್ನು” ಎಂದು ಹೇಳಿದನು. “ವೃಕ್ಷಗಳಿಗೂ ಸ್ತ್ರೀಯರಿಗೂ ಒಂದು ಅಂತ್ಯಶೋಕವಿದೆ. ವೃಕ್ಷಗಳನ್ನು ಯಜ್ಞಾರ್ಥವಾಗಿ ಕಡಿದರೆ ಅವುಗಳಿಗೆ ಸದ್ಗತಿಯಾಗುವುದು ಎಂಬ ತೃಪ್ತಿಯುಂಟು. ಆದರೆ ಲೌಕಿಕವಾಗಿ ಕಡಿಯುವಾಗ ಅವಕ್ಕೆ ತಮ್ಮ ಕುಲವೇ ನಾಶವಾಗುವುದಲ್ಲಾ ಎಂಬ ಶೋಕವಿದೆ.

ಸ್ತ್ರೀಯರಿಗೆ ಪುರುಷ ಸಂಯೋಗದಿಂದ ಲಭಿಸುವ ಸುಖವು ಸಕೃನ್ಮಾತ್ರವಾಗುವುದು ಎಂಬ ಶೋಕವಿದೆ. ದೇವರಾಜನು ಈ ಶೋಕಗಳು ನೀಗುವಂತೆ ವರವನ್ನು ಕೊಡುವುದಾದರೆ ಅವರು ಒಂದೊಂದು ಪಾಲು ಹತ್ಯೆಯನ್ನು ಸ್ವೀಕರಿಸುವರು” ಎಂದನು. ಇಂದ್ರನು ‘ತಥಾಸ್ತು’ ಎಂದು ಒಪ್ಪಿದನು. ಸೋಮನು ವೃಕ್ಷಾಧಿಪತಿಯಾದ ವನದೇವಿಯನ್ನೂ ಸ್ತ್ರೀಕುಲಾಭಿಮಾನಿ ದೇವತೆಯಾದ ಅದಿತಿಯನ್ನೂ ಕರೆದನು.

ಶಚಿಯೂ ಇಂದ್ರನೂ ಅವರಿಬ್ಬರನ್ನು ಗೌರವದಿಂದ ಸ್ವಾಗತಿಸಿ ಅವರನ್ನು ಕರೆಸಿದ ಉದ್ದೇಶವನ್ನು ಹೇಳಿದರು. ಅವರಿಬ್ಬರೂ ಆ ಶೋಕವನ್ನು ನೀಗುವುದಾದರೆ ತಾವು ತಮ್ಮವರ ಪರವಾಗಿ ಹತ್ಯೆಯನ್ನು ಸ್ವೀಕರಿಸುವುದಾಗಿ ಹೇಳಿದರು. ಇಂದ್ರನು ತ್ರಿಲೋಕಾಧಿಪತಿಯಾಗಿ ವನದೇವಿಗೆ ವರವನ್ನು ಕೊಟ್ಟನು. ಕಡಿದಂತೆಲ್ಲಾ ಮರಗಳು ಗಿಡಗಳು, ಔಷಧಿ, ಮೂಲಿಕೆಗಳು, ವನಸ್ಪತಿಗಳೂ, ಅಷ್ಟೇನು ಸಸ್ಯವರ್ಗವೆಲ್ಲಾ ಕಡಿದಂತೆಲ್ಲಾ ಚಿಗುರುತ್ತಿರಲಿ ಎಂದು ವರವನ್ನು ಕೊಟ್ಟು “ಆಯಿತು, ಈ ವರ್ಗವು ತಮ್ಮಲ್ಲಿರುವ ಬ್ರಹ್ಮಹತ್ಯೆಯನ್ನೆಂತು ತೋರಿಸುವುವು ?’ ಎಂದು ಕೇಳಿದನು. ವನದೇವಿಯು ಯೋಚಿಸಿ ಹೇಳಿದಳು : “ಕಡಿದಾಗ ಸಸ್ಯಗಳಿಂದ ಬರುವ ನಿರ್ಯಾಸವು ಆ ಪಾಪದ ಸಂಕೇತವಾಗಿರಲಿ” ಎಂದಳು. ಇಂದ್ರನು ಒಪ್ಪಿದನು.

ಸ್ತ್ರೀಕುಲಾಭಿಮಾನಿಯಾದ ಅದಿತಿಗೆ ನಮಸ್ಕಾರ ಮಡಿ, ಇಂದ್ರನು ತನ್ನ ತ್ರೈಲೋಕ್ಯಾಧಿಪತ್ಯದ ಬಲದಿಂದ ಆಕೆಗೆ ವರವನ್ನು ಕೊಟ್ಟನು. “ಇನ್ನು ಮುಂದೆ ಅತಿರ್ಯಗ್ಯೋನಿಗಳಾದ ಸ್ತ್ರೀವರ್ಗವೆಲ್ಲವೂ ಪ್ರಸವವಾಗುವವರೆಗೂ ಪುರುಷ ಸುಖವನ್ನು ಪಡೆಯಬಲ್ಲವರಾಗಲಿ” ಎಂದನು. ಅದಿತಿಯು ಅದನ್ನು ಸ್ವೀಕರಿಸಿ, “ಸ್ತ್ರೀಯರು ರಜಸ್ವಲೆಯರಾಗುವ ಮೂರು ದಿನ ಅವರಲ್ಲಿ ಕಾಣುವ ರಜಸ್ಸು ಅವರು ಸ್ವೀಕರಿಸಿದ ಹತ್ಯೆಯ ಫಲವಾಗಿರಲಿ” ಎಂದಳು. ಇಂದ್ರನು ಅಂಗೀಕರಿಸಿದನು.

ಪ್ರಾಣನು ಇಂದ್ರನ ಇಂಗಿತದಂತೆ ಆಪೆÇೕದೇವಿಯರನ್ನೂ ಭೂದೇವಿಯನ್ನೂ ಕರೆಸಿದನು. ಆಪೋದೇವಿಯರು “ನಮಗೆ ಬೇಕಾದ ವರವಿದು, ಚರಾಚರ ವಸ್ತುಗಳೆಲ್ಲವೂ ನಮ್ಮನ್ನು ಸೇವಿಸಿ ಬೆಳೆಯಬೇಕು. ನಾನಿಲ್ಲದಿದ್ದರೆ ಕ್ಷಯಿಸಬೇಕು. ಇದು ನಮ್ಮ ಕೋರಿಕೆ’ ಎಂದರು. “ನಮ್ಮಲ್ಲಿ ಮಹಾನದಿಗಳು ಅಲ್ಲದವು, ತಿಂಗಳಿಗೆ ಮೂರು ದಿನ ನೊರೆನೊರೆಯಾಗಿರುವವು. ಅದು ನಾವು ಅಂಗೀಕರಿಸುವ ಪಾಪದ ಗುರುತು” ಎಂದರು. ಇಂದ್ರನು ಒಪ್ಪಿ ಅವರಿಗೆ ವರವನ್ನೂ ಒಂದು ಪಾಲು ಬ್ರಹ್ಮಹತ್ಯೆಯನ್ನೂ ಕೊಟ್ಟನು.

ಭೂದೇವಿಯು, “ನನಗೊಂದು ಶೋಕವಿದೆ. ನನ್ನ ಜಡರೂಪದಲ್ಲಿ ಹಳ್ಳವನ್ನು ತೆಗೆದವರು ಮುಚ್ಚುವುದಿಲ್ಲ. ಅದು ತಾನಾಗಿಯೇ ಮುಚ್ಚಿಕೊಳ್ಳುವಂತೆ ವರವನ್ನು ಕೊಡುವುದಾದರೆ ನಾನು ಉಳಿದ ಪಾಪವನ್ನು ಅಂಗೀಕರಿಸುವೆನು. ಆ ಪಾಪವು ನನ್ನಲ್ಲಿ ಊಷರರೂಪವಾಗಿ ಕಾಣಿಸಿಕೊಳ್ಳುವುದು” ಎಂದಳು. ಇಂದ್ರನು ಸಂತೋಷದಿಂದ ಆಕೆಗೆ ವರವನ್ನು ಕೊಟ್ಟನು.

ಇಂದ್ರನಿಗೂ ಇಂದ್ರಾಣಿಗೂ ಪರಮ ಸಂತೋಷವಾಯಿತು. ಬರಲಿರುವ ಬ್ರಹ್ಮಹತ್ಯೆಯು ಇಷ್ಟು ಸುಲಭವಾಗಿ ನಿವಾರಣವಾಗುವುದೆಂದು ಅವರು ಯೋಚಿಸಿರಲಿಲ್ಲ. ಅಲ್ಲದೆ, ಇಂದ್ರನಿಗೆ ಇನ್ನೂ ಒಂದು ಅಧಿಕ ಸಂತೋಷ “ಈ ವರಗಳಿಂದ ಲೋಕವು ಅಭಿವೃದ್ಧಿಯಾಗುವುದು. ಭೂಮಿಯು ಸಂತೋಷಪಟ್ಟು ತನ್ನಲ್ಲಿರುವ ಬೀಜಗಳನ್ನೆಲ್ಲಾ ಬೆಳೆಸುವಳು. ಜಲಗಳು ಎಲ್ಲೆಲ್ಲೂ ತಾವೇ ತಾವಾಗಿ ಸಸ್ಯಗಳನ್ನೂ ಪ್ರಾಣಿಗಳನ್ನೂ ವರ್ಧಿಸುವುವು. ಎಲ್ಲೆಲ್ಲಿಯೂ ಅನ್ನವು ತಾನೇ ತಾನಾಗುವುದು. ಮನುಷ್ಯರು ಅನ್ನವನ್ನು ತಿಂದು ವರ್ಧಿಸುವರು. ಭೋಗಸಂಪನ್ನರಾಗುವರು. ಭೋಗಾಸಕ್ತಿಯು ಹೆಚ್ಚಿದಂತೆಲ್ಲ ಅದರ ಜೊತೆಯಲ್ಲಿಯೇ ಅತೃಪ್ತಿಯೂ ಬೆರೆಯುವುದು. ಅತೃಪ್ತಿಯ ಶಾಂತಿಗಾಗಿ ದೇವತೆಗಳನ್ನು ಪೂಜಿಸುವರು. ಹೀಗೆ ಈಗ ಮಾಡಿರುವ ಕಾರ್ಯದಿಂದ ದೇವತೆಗಳಿಗೇ ಸಂತೋಷವಾಗುವುದು” ಎಂದು ಇಂದ್ರನು ಅಧಿಕಾಧಿಕವಾಗಿ ಸಂತೋಷಪಡುತ್ತ ಮುಂದಿನ ಕಾರ್ಯವನ್ನು ಕುರಿತು ಯೋಚಿಸಿದನು.

ಇಂದ್ರನು ವಿಶ್ವರೂಪನ ದರ್ಶನಾರ್ಥವಾಗಿ ಹೋದನು. ಆಚಾರ್ಯನಿಗೆ ಇಂದ್ರನು ಬಂದಬಂದಾಗಲೆಲ್ಲ ಸುರಾಪಾನದ ವಿಚಾರ ಪ್ರಸ್ತಾಪಿಸುವುದು ಸಮ್ಮತವಿಲ್ಲ. ಅದರಿಂದ ಈ ದಿನ ಮಹೇಂದ್ರನು ಬಂದಿರುವನು ಎಂದು ಪ್ರಹರಿಯು ಹೇಳುತ್ತಿರುವಾಗಲೇ ಆತನಿಗೆ ಕೋಪ ಬಂತು. ಆ ಕೋಪದಲ್ಲಿ “ಇದು ದರ್ಶನ ಸಮಯವಲ್ಲ” ಎಂದು ಹೇಳಿಕಳುಹಿಸಬೇಕು. ಆದರೂ ದಾಕ್ಷಿಣ್ಯಬದ್ಧನಾಗಿ ಇಂದ್ರನನ್ನು ಒಳಕ್ಕೆ ಕರೆಯಿಸಿಕೊಂಡನು. ಇಂದ್ರನು ವಿನಯವಾಗಿ ಪ್ರವೇಶಿಸಿದರೂ, ಆ ವಿನಯದ ಹಿಂದೆ ಕಠೋರ ಮನಸ್ಕತೆಯು ಇತ್ತು ಎನ್ನುವುದನ್ನು ಆಳವಾಗಿ ಪರೀಕ್ಷಿಸುವವರು ಕಂಡುಹಿಡಿಯಬಹುದಾಗಿತ್ತು. ವಿಶ್ವರೂಪನು ಗಂಭೀರವಾಗಿದ್ದು ತನ್ನ ಅಸಮಾಧಾನವನ್ನು ತೋರಿಸಿಕೊಳ್ಳುತ್ತ ಎಂದಿನಂತೆ ‘ವಿಜಯೀಭವ’ ಎಂದು ಆಶೀರ್ವದಿಸಿದನು.

ತಾನಿನ್ನು ಕೃತ್ಯಕಾರ್ಯನಾದೆನೆಂದು ಇಂದ್ರನು ಹರ್ಷಿಸುತ್ತ ತಾನು ಬಂದ ಕಾರ್ಯವನ್ನು ಪ್ರಸ್ತಾಪಿಸಿದನು : “ಆಚಾರ್ಯ, ನಾನಿಂದು ಮತ್ತೆ ದೇವಗಣದ ಪರವಾಗಿ ಬಂದಿರುವೆನು.....”

ಆಚಾರ್ಯನು ನಡುವೆ ಬಾಯಿಹಾಕಿದನು. ಇಂದ್ರನು ಕೈಮುಗಿದುಕೊಂಡು ವಿನಯದಿಂದ ಹೇಳುತ್ತಿರುವುದು ಆತನಿಗೆ ಆಟವೆನ್ನಿಸಿತು. ತನಗೆ ಮೊದಲೇ ಬಂದಿದ್ದ ಕೋಪವನ್ನು ಪ್ರಕಟವಾಗಿ ಹೊರಚೆಲ್ಲುತ್ತ “ಅದೇ ಪ್ರಾರ್ಥನೆ ತಾನೇ ? ಸಾಧ್ಯವಿಲ್ಲ- ನೀವು ಬೇಕಾದುದು ಮಾಡಬಹುದು” ಎಂದು ಸೆಟೆದು ನುಡಿದನು.

ದೇವೇಂದ್ರನಿಗೂ ಆ ಕಾವು ಹತ್ತಿ ಕೋಪ ಬಂತು. ಆದರೂ ವಿನಯವನ್ನು ಬಿಡದೆ, “ಆಚಾರ್ಯ, ದೇವತೆಗಳು ತ್ರಿಲೋಕದ ರಕ್ಷಾಭಾರವನ್ನು ಹೊತ್ತಿರುವರು. ಅವರು ಆಚಾರ್ಯನೆಂದು ವರಿಸಿರುವವನು ಅಕಾರ್ಯವನ್ನು ಮಾಡಬಾರದು ಎಂದು ಕೋರುವರು. ಆ ಪ್ರಾರ್ಥನೆಯನ್ನು ಇನ್ನು ಯಾವ ರೀತಿಯಲ್ಲೂ ಸಲ್ಲಿಸಲು ಸಾಧ್ಯವಿಲ್ಲದಿದ್ದರೆ, ವರವೆಂದಾದರೂ ಅನುಗ್ರಹಿಸಬೇಕು ಎಂದು ಬಲವಂತ ಮಾಡಬೇಕು ಎಂದು ನನ್ನನ್ನು ನಿಯೋಜಿಸಿರುವರು” ಎಂದನು.

ಆಚಾರ್ಯನು ಇನ್ನೂ ಸೆಟೆದುಕೊಂಡು ಎದ್ದು ನಿಂತು, “ಇಂದ್ರನ ಈ ಭದ್ರಮುಷ್ಠಿ ಪ್ರದರ್ಶನವು ಯಾರ ಬಳಿ ? ನಾನಿತ್ತ ಭಿಕ್ಷೆಯಿಂದ ದೊಡ್ಡವರಾದ ದೇವತೆಗಳು ನನ್ನ ಮೇಲೆ ಅಧಿಕಾರ ಮಾಡುವುದನ್ನು ನಾನು ಸಹಿಸುವುದಿಲ್ಲ” ಎಂದು ಕಠೋರವಾಗಿ ನುಡಿದನು.

ಇಂದ್ರನು ಎದ್ದು ನಿಂತು, ಕೈಮುಗಿದುಕೊಂಡು, “ದೇವ, ದೇವತೆಗಳ ಪ್ರಾರ್ಥನೆಯನ್ನು ಸಲ್ಲಿಸದಿದ್ದರೆ ಅಪರಾಧವಾಗುವುದು....”

ವಿಶ್ವರೂಪನು ಮತ್ತೆ ಅರ್ಧದಲ್ಲಿ ನುಗ್ಗಿ ಮಾತಾಡುತ್ತ ವಿಕಟವಾಗಿ ನಗುತ್ತ “ಅಪರಾಧ ! ಅಪರಾಧ ! ಎಲ್ಲಿ ನಿನಗೆ ಶಕ್ತಿಯಿದ್ದರೆ ಅಪರಾಧಿ ಶಿಕ್ಷೆಯನ್ನು ವಿಧಿಸು, ನೋಡೋಣ” ಎಂದು ಎದೆಯನ್ನು ಬಾಚಿ ನಿಂತನು.

ಇಂದ್ರನು ಮತ್ತೆಯೂ ಹೇಳಿಕೊಂಡನು : “ಶಿಕ್ಷೆ ವಿಧಿಸಲು ಹಿಂತೆಗೆಯುವುದಾಗಿದ್ದರೆ, ಈ ಭುಜವು ತ್ರೈಲೋಕ್ಯಾಧಿಪತ್ಯದ ಭಾರವನ್ನು ವಹಿಸುತ್ತಿರಲಿಲ್ಲ. ಇದು ಶಿಕ್ಷೆಗೆ ಸ್ಥಾನವಾಗಬಾರದೆಂದು ಮತ್ತೆ ಬಿನ್ನವಿಸಿಕೊಳ್ಳುವೆನು.”

ವಿಶ್ವರೂಪನು ಮತ್ತೆ ಗಹಗಹಿಸಿ ನಗುತ್ತ ಹೇಳಿದನು. ಆ ವಿಕಟಾಟ್ಟಹಾಸದಲ್ಲಿ ತಿರಸ್ಕಾರವು ತಾನೇ ತಾನಾಗಿತ್ತು. “ಹೌದು, ಹೌದು, ನಿನಗೆ ನನ್ನನ್ನು ಶಿಕ್ಷಿಸುವ ಧೈರ್ಯವಿಲ್ಲ. ನನ್ನ ತೇಜಸ್ಸನ್ನು ಸಹಿಸಲಾರದೆ, ಆ ಪರಿಭವವನ್ನು ಪ್ರಕಾರಾಂತವಾಗಿ, ನಿನಗೆ ಗೌರವ ಬರುವಂತೆ ನುಡಿದ ಮಾತ್ರಕ್ಕೆ ಪರಾಭವವು ಪರಾಭವವೇ ಅಲ್ಲವೇನು? ಎಲ್ಲಿ ಇಂದ್ರ, ಶಪಥ ಮಾಡು ನಿನ್ನ ಕೈಲಾದರೆ ನನಗೆ ಶಿಕ್ಷೆಯನ್ನು ವಿಧಿಸು.”

ಇಂದ್ರನ ಕ್ಷಾತ್ರಭಾವವು ಆ ಆಹ್ವಾನವನ್ನು ಮನ್ನಿಸದಿರಲಾಗಲಿಲ್ಲ. ಅಧೀರನೆಂದು ತನ್ನನ್ನು ತಿರಸ್ಕರಿಸುವವನನ್ನು ತಿರಸ್ಕರಿಸದೆ ಇರಲು ಅಸಾಧ್ಯವಾಯಿತು. ಆತನು ತಾನು ಕಟ್ಟಿದ್ದ ಮರ್ಯಾದೆಯ ಸಂಕಲೆಗಳನ್ನೆಲ್ಲಾ ಕಿತ್ತೆಸೆದನು. ಅಲ್ಲದೆ, ಈ ಕಾರ್ಯ ಮಾಡಿದರೆ ಇದರಿಂದ ಆಗುವ ಹಾನಿಯಿಷ್ಟೇ ಎಂದು ಗೊತ್ತು ಮಾಡಿಕೊಂಡಿದ್ದನಾಗಿ ಆತನಿಗೆ ಧೈರ್ಯವೂ ತಾನೇತಾನಾಯಿತು. ಜೊತೆಯಲ್ಲಿ ಕೋಪವೂ ಬೆಳೆಯಿತು. ಇದಿಷ್ಟೂ ಒಂದೇ ಕ್ಷಣದಲ್ಲಿ ನಡೆದು ಹೋಗಿ ಆ ಕೋಪ, ಅಸಹನೆಗಳಲ್ಲಿ ತಾನು ಏನು ಮಾಡುತ್ತಿರುವೆನೆಂಬುದನ್ನು ವಿಚಾರಿಸುವುದರೊಳಗಾಗಿ ಕೈಯು ಖಡ್ಗವನ್ನೆಳೆಯಿತು. ಏಕೆ ಎನ್ನುವುದರೊಳಗೆ ಖಡ್ಗಪ್ರಯೋಗವಾಗಿ, ವಿಶ್ವರೂಪನ ರುಂಡ ಮುಂಡಗಳು ಬೇರಾದವು. ರುಂಡವು ಕೆಳಗೆ ಬಿದ್ದಿದ್ದರೂ ಆ ಅಟ್ಟಹಾಸವು, ಆ ತಿರಸ್ಕಾರದಿಂದ ಹೊರಟ ಅಪಹಾಸ್ಯದ ಒರಟು ನಗುವು ಇನ್ನೂ ಒಂದು ಸಲ ಆ ಮುಖಗಳಿಂದ ಹೊರಟಿತು. ದಾನವೇಂದ್ರರೆಷ್ಟೋ ಜನರನ್ನು ತುಂಡರಿಸಿದ್ದ ಶತ್ರುಂಜಯನು ಅ ಮುಖಗಳಿಂದ ಹೊರಹೊರಟ ಅಟ್ಟವಿಕಟಾಟ್ಟಹಾಸವನ್ನು ಕೇಳಿದನು. ಆ ಕಣ್ಣುಗಳಲ್ಲಿ ತಾನೇ ತಾನಾಗಿದ್ದ ಆ ಕ್ರೂರ ತೇಜಸ್ಸನ್ನು ಕಂಡನು. ಆತನಿಗೆ ಭ್ರಾಂತಿಯಾಯಿತು. ಕಡಿದುರುಳಿಸಿರುವ ಆ ರುಂಡಗಳು ಮತ್ತೆ ಹಾರಿ ಬಂದು ಕಂಠಸ್ಥಳದಲ್ಲಿ ಕುಳಿತುಕೊಂಡಂತಾಯಿತು. ಅವು ಮತ್ತೆ ತನ್ನನ್ನು ತಿರಸ್ಕರಿಸಿದಂತೆ ಆಯಿತು. ಏನೋ ಗಾಬರಿಯಾಯಿತು. ಅಲ್ಲಿಂದ ಓಡಿ ಹೋಗಬೇಕು ಎನ್ನಿಸಿತು. ಕಾಲು ಕಿತ್ತರೂ ಕೀಳಲಾರದಂತೆ ಕೀಲಿಸಿರುವಂತಾಗಿ, ವಿಕಾರವಾಗಿ, ಚೀರುತ್ತ ದೇವರಾಜನು ಬಿದ್ದುಹೋದನು. ಆ ಮುಖಗಳಿಂದಲೂ ಆ ದೇಹದಿಂದಲೂ ಏನೋ ಒಂದು ವಿಚಿತ್ರವಾದ ತೇಜೋಧೂಮವು ಹರಡಿದಂತೆಯೂ, ಅದು ತನ್ನನ್ನು ಸುಡುತ್ತಿರುವಂತೆಯೂ ಭಾಸವಾಗಿ, ಅದನ್ನು ಸಹಿಸಲಾರದೆ, ಮತ್ತೂ ಒಮ್ಮೆ ಕಿರುಚಿಕೊಂಡು ಮೂರ್ಛಿತನಾದನು.

* * * *

೯.ಪಾಪವು ಪರಿಹಾರವಾಯಿತೆ?

ಸಂಪಾದಿಸಿ

ಸಮೀಪದಲ್ಲಿ ಅಜ್ಞಾತರಾಗಿ ನಿಂತಿದ್ದ ಅಗ್ನಿವಾಯುಗಳು ಮೂರ್ಛಿತವಾಗಿ ಬಿದ್ದಿದ್ದ ದೇವರಾಜನನ್ನು ಕೂಡಲೇ ಹಾಗೆಯೇ ಹೊತ್ತುಕೊಂಡು ಬಂದು ಶಚಿಯ ಅಂತಃಪುರದಲ್ಲಿ ಇಳಿಸಿದರು. ಬಿಟ್ಟಕಣ್ಣು ಬಿಟ್ಟುಕೊಂಡು ನಿಶ್ಚೇಷ್ಟನಾಗಿ ಬಿದ್ದಿರುವ ದೇವಪತಿಯು ಮತ್ತೆ ಸಚೇತನನಾಗಲು ಅಷ್ಟು ಹೊತ್ತಾಯಿತು. ಶಚಿಯು ಸ್ವಂತವಾಗಿ ಉಪಚಾರಮಾಡಿ, ಆತನಿಗೆ ಬಲತರವಾದ ಆಸವಾದಿಗಳನ್ನು ಕೊಟ್ಟು ಪೂರ್ವದಂತೆ ಮಾಡಿದಳು.

ಆದರೂ ಆತನಿಗೆ ಆ ಭ್ರಾಂತಿಯು ಬಿಟ್ಟಿಲ್ಲ. “ಅದೋ ! ವಿಶ್ವರೂಪನು ಬಂದನು! ನನಗೆ ಶಾಪ ಕೊಡುವುದಾಗಿ ಹೆದರಿಸುತ್ತಿದ್ದಾನೆ. ಯಾರಲ್ಲಿ? ಮೊದಲು ಅವನನ್ನು ಹೊರ ನೂಕಿ! ಹೊರ ನೂಕಿ” ಎಂದು ಕಿರುಚುತ್ತಾನೆ.

ಆ ಕೂಡಲೇ ಅಲ್ಲಿ ಬೃಹಸ್ಪತ್ಯಾಚಾರ್ಯನು ಕಾಣಿಸಿಕೊಂಡನು. ಕೈಯಲ್ಲಿ ಅಭಿಮಂತ್ರಿತವಾದ ಉದಕವುಳ್ಳ ಕಲಶವನ್ನೂ ದರ್ಭಕೂರ್ಚಗಳನ್ನೂ ತೆಗೆದುಕೊಂಡು ಶಾಂತಿಮಂತ್ರವನ್ನು ಪಠಿಸುತ್ತಾ ದೇವರಾಜನಿಗೆ ಆ ಕಲಶೋದಕದಿಂದ ಮಾರ್ಜನವನ್ನು ಮಾಡಿದನು. ಆತನಿಂದ ಧೂಮರೂಪವಾಗಿ ಒಂದು ಆಕೃತಿಯೆದ್ದು ಬಂದು ಹೊರಗೆ ನಿಂತಿತು. ಅದನ್ನು ನೋಡುತ್ತಿದ್ದ ಹಾಗೆಯೇ ಯಾರೂ ಹೇಳದೆ, ಅದರ ವಿಕಟಾಕೃತಿಯಿಂದಲೇ, ಇದು ಪಾಪ ಪರುಷ ಎಂದು ಗೊತ್ತಾಗುವಂತಿತ್ತು. ಕೂಡಲೇ ಬೃಹಸ್ಪತಿ ಪ್ರಚೋದನದಿಂದ ಇಂದ್ರನೆದ್ದು ಅದನ್ನು ತನ್ನ ಖಡ್ಗದಿಂದ ನಾಲ್ಕು ಪಾಲು ಮಾಡಿದನು. ಪೂರ್ವದಲ್ಲಿಯೆ, ಗೊತ್ತಾಗಿದ್ದಂತೆಯೇ ಭೂಮಿ, ಜಲ, ವೃಕ್ಷ, ಸ್ತ್ರೀದೇವಿಯರು ಬಂದು ಅದನ್ನೂ ಅದಕ್ಕಿಂತ ಉಜ್ವಲವಾಗಿ ಬೆಳಗುತ್ತಿದ್ದ ವರಗಳನ್ನೂ ತೆಗೆದುಕೊಂಡು ಹೋದರು. ಇಂದ್ರನಿಗೆ ಮನಸ್ಸು ಸ್ವಸ್ಥವಾಯಿತು.

ಮತ್ತೆ ಬೃಹಸ್ಪತ್ಯಾಚಾರ್ಯನು ಇಂದ್ರನಿಂದ ನಾರಾಯಣ ಬಲಿಯನ್ನು ಮಾಡಿಸಿದನು. ಇಂದ್ರನು ರಾಹುಮುಕ್ತನಾದ ಚಂದ್ರನಂತೆ, ತನ್ನ ಪೂರ್ವದ ತೇಜಸ್ಸಿನಿಂದ ಕೂಡಿದನು.

ಆದರೂ ಇಂದ್ರನಿಗೆ ಆ ತಲೆಗಳ ಯೋಚನೆಯು ತಪ್ಪಲಿಲ್ಲ. ಅರಮನೆಯ ಬಡಗಿಯನ್ನು ಕರೆಸಿದನು. “ವಿಶ್ವರೂಪಾಚಾರ್ಯನ ಮನೆಯಲ್ಲಿ ಅವನ ತಲೆಗಳು ಬಿದ್ದಿವೆ. ಅವು ಏಕವಾಗಿರದಂತೆ ಮೂರಾಗಿ ಕಡಿದು ಬಾ. ನಿನಗೆ ಬೇಕಾದುದನ್ನು ಕೊಡುವೆನು” ಎಂದು ಅವನಿಗೆ ಪ್ರಲೋಭವನ್ನು ಹುಟ್ಟಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ, ಅವನನ್ನು ಬಲವಂತವಾಗಿ ಆ ಕಾರ್ಯಕ್ಕೆ ನಿಯೋಜಿಸಿದನು.

ಬಡಗಿಯು ಹೋಗಿ ನೋಡಿದನು. ವಧೆಯಾಗಿ ಅಷ್ಟು ಹೊತ್ತಾಗಿದೆ. ರುಂಡವೂ ಮುಂಡವೂ ಪ್ರತ್ಯೇಕವಾಗಿ ಬಿದ್ದಿವೆ. ಅವುಗಳಿಂದ ಸುರಿದ ನೆತ್ತರೂ ಹೆಪ್ಪು ಕಟ್ಟಿಕೊಂಡಿದೆ. ಇಷ್ಟಾದರೂ ಮುಖದ ತೇಜಸ್ಸು ಕಂದಿಲ್ಲ. ಬಿಟ್ಟ ಕಣ್ಣುಗಳು ಎದುರು ಬಂದವನನ್ನು ಅಂಜಿಸುವಂತಿವೆ. ಬಡಗಿಗೆ ಇನ್ನೂ ಆಚಾರ್ಯನು ಬದುಕಿರುವನೋ ಎಂದು ಸಂದೇಹ ಬರುವಂತಿದೆ.

ಅವನು ತಾನೊಬ್ಬನೇ ಆ ಕಾರ್ಯವನ್ನು ಮಾಡಲಾರದೆ ಅಲ್ಲಿಂದ ಓಡಿ ಹೋದನು. ಆದರೂ ಇಂದ್ರನಪ್ಪಣೆ, ಮೀರುವಂತಿಲ್ಲ. ಅದರಿಂದ ಇನ್ನೊಬ್ಬನನ್ನು ಕರೆದುಕೊಂಡು ಬಂದು, ಇಬ್ಬರೂ ಸೇರಿ ಮುಂಡವನ್ನು ಇನ್ನೊಂದೆಡೆಗೆ ಸಾಗಿಸಿದರು. ರುಂಡವನ್ನು ಅಭಿಮುಖವಾಗಿ ಬೇರ್ಪಡಿಸಲಾರದೆ, ಅದನ್ನು ಮೊಗವಡಿಮಾಡಿ, ಕೊಡಲಿಯಿಂದ ಕಡಿದು ಅದನ್ನು ಬೇರ್ಪಡಿಸಿದರು.

ಇಂದ್ರನಿಗೆ ಶತ್ರುನಾಶವಾಯಿತೆಂದು ಸಂತೋಷವಾಗಿದ್ದರೂ, ದೇವಕುಲವೆಲ್ಲವೂ ತನ್ನ ಕಾರ್ಯವನ್ನು ಒಪ್ಪಿಕೊಳ್ಳುವುದೆಂಬ ನಂಬಿಕೆಯಿದ್ದರೂ, ಇನ್ನೂ ಏನೋ ದಿಗಿಲು. ಬೃಹಸ್ಪತ್ಯಾಚಾರ್ಯನು ಮತ್ತೆ ಧರ್ಮಾಚಾರ್ಯ ನಾದನೆಂದು ಒಂದು ಸಮಾಧಾನವಿದ್ದರೂ ದೈತ್ಯರು ಈ ಸಂಧಿಯನ್ನು ಸಾಧಿಸಿ ಮತ್ತೇನು ಕುತಂತ್ರವನ್ನು ಹೂಡುವರೋ ಎಂದು ಪ್ರಬಲವಾದ ಸಂದೇಹ.

ಹೀಗೆ ಡೋಲಾಯಮಾನಚಿತ್ತನಾಗಿ ಅಗ್ನಿವಾಯುಗಳನ್ನು ಕರೆಸಿಕೊಂಡನು. ಪಾತಾಳದಲ್ಲಿ ದಾನವಕುಲವು ಏನು ಮಾಡುತ್ತಿರುವುದು ಎಂಬುದನ್ನು ತಿಳಿಯಬೇಕು ಎಂದು ಕೂತೂಹಲ. ಅಗ್ನಿಯು “ಮೊದಲು ವಿಶ್ವರೂಪನ ಕಳೇಬರವನ್ನು ಅವನ ತಂದೆಯಾದ ತ್ವಷ್ಟೃಬ್ರಹ್ಮನ ಬಳಿಗೆ ನಾವೇ ಕಳುಹಿಸಿಬಿಡೋಣ, ಇನ್ನೆಲ್ಲಿಂದಲೋ ಆತನಿಗೆ ವರ್ತಮಾನ ತಿಳಿಯುವುದಕ್ಕಿಂತ ಮುಂಚೆ ನಾವೇ ತಿಳಿಸುವುದೇ ಸರಿ” ಎಂದು ಹೇಳಿದನು. ಇಂದ್ರನು ಅದನ್ನು ಒಪ್ಪಿಕೊಂಡು ಆತನ ಮುಖಾಂತರವೇ ಆ ಕಳೇಬರವನ್ನೂ ರುಂಡ ಮುಂಡಗಳನ್ನೂ ಪ್ರತ್ಯೇಕವಾಗಿಟ್ಟು ತ್ವಷ್ಟೃಬ್ರಹ್ಮನ ಬಳಿಗೆ ಕಳುಹಿಸಿದನು. ಆ ಕಳೇಬರಕ್ಕೆ ಚಂದನಾದಿ ಸುಗಂಧದ್ರವ್ಯಗಳನ್ನು ಲೇಪಮಾಡಿ, ಆತನ ಅಂತಸ್ತಿಗೆ ತಕ್ಕಂತೆ ವಸ್ತ್ರಭೂಷಣಗಳನ್ನು ಅಳವಡಿಸಲಾಗಿತ್ತು.

ಇತ್ತ ವಾಯುವು ಇಂದ್ರನಾಜ್ಞೆಯಂತೆ, ಪಾತಾಳಲೋಕಕ್ಕೆ ಹೋಗಿಬಂದನು. “ದಾನವರೆಲ್ಲರೂ ಸೇರಿ ವಿಶ್ವರೂಪನ ವಿಶ್ವಾಸದಿಂದ ತಮಗೆ ಲಭಿಸಿದ ತೇಜಸ್ಸನ್ನೆಲ್ಲಾ ಸಮೂಹಗೊಳಿಸಿ, ಅದನ್ನು ತಮಗೆ ಜಯಪ್ರಾಪ್ತಿಯಾಗುವಂತೆ ಪ್ರಾರ್ಥಿಸಿದರು. ಆ ತೇಜಸ್ಸು “ನಾನು ಏನಿದ್ದರೂ ನಿಮ್ಮನ್ನು ಕಾಪಾಡಬಲ್ಲೆನಲ್ಲದೆ, ದೇವತೆಗಳ ತೇಜಸ್ಸನ್ನು ನುಂಗುವಷ್ಟು ಶಕ್ತಿ ನನಗಿಲ್ಲ. ನೀವು ಹೋಗಿ ತ್ವಷ್ಟೃಬ್ರಹ್ಮನನ್ನು ರೇಗಿಸಿ, ಆತನಿಗೆ ಇಂದ್ರಶತ್ರುವೊಬ್ಬನು ಹುಟ್ಟುವಂತೆ ಒಂದು ಯಾಗ ಮಾಡಿಸಿ, ಅಂಥವನು ಬಂದರೆ, ಆತನಿಗೆ ತನ್ನ ಬಲವನ್ನೂ ಕೊಟ್ಟು ನಿಮ್ಮನ್ನು ಗೆಲ್ಲಿಸುವೆನು’ ಎಂದಿತು. ಈಗ ದಾನವೇಂದ್ರರೆಲ್ಲಾ ತ್ವಷ್ಟೃವಿನ ಬಳಿ ಹೋಗಲಿರುವರು” ಎಂದು ಹೇಳಿದನು.

ಇಂದ್ರನು ಅದನ್ನು ಕೇಳಿ ದಾನವಪ್ರಯತ್ನವು ನಡೆಯದಂತೆ, ತಾನೇ ವಸ್ತ್ರಭೂಷಣಾದ್ಯಲಂಕಾರಗಳನ್ನು ತೆಗೆದುಕೊಂಡು ತ್ವಷ್ಟೃಬ್ರಹ್ಮನ ದರ್ಶನ ಮಾಡಿ ಅ ದಂಪತಿಗಳನ್ನು ಸಾಂತ್ವವಚನಗಳಿಂದ ಆರಾಧಿಸಿ ಅವರ ಕೋಪವನ್ನು ನೀಗಿ ಬರುವುದು ಎಂದುಕೊಂಡನು.

* * * *

೧೦.ಬೆಂಕಿಯು ಹೊತ್ತಿತು

ಸಂಪಾದಿಸಿ

ತ್ವಷ್ಟೃಬ್ರಹ್ಮನು ಪುತ್ರವಧವೃತ್ತಾಂತವನ್ನೆಲ್ಲಾ ಕೇಳಿದನು. ಆತನಿಗೆ ಕೋಪವು ಮಿತಿಮೀರಿತು. “ಇಂದ್ರನು ಇಂತಹ ಅಕಾರ್ಯವನ್ನು ಮಾಡಿದನೆ ! ಮತ್ತೆ ಲೋಕದಲ್ಲಿ ಇಂದ್ರನೇ ಇಲ್ಲದಂತೆ ಮಾಡದಿದ್ದರೆ ನಾನೇಕಾದೇನು ?” ಎಂದು ಹಾರಾಡಿದನು. ಆತನ ಹೆಂಡತಿಯ ದುಃಖವಂತೂ ಹೇಳತೀರದು.

ಆಕೆಗೆ ಎಲ್ಲಿ ನೋಡಿದರೂ ಮಗನೇ ಕಾಣಿಸುತ್ತಾನೆ. ಕೂಡಲೇ ಕಣ್ಣಲ್ಲಿ ನೀರು ಪ್ರವಾಹವಾಗಿ ಬರುತ್ತದೆ. ಮೈಯೆಲ್ಲಾ ಹಿಡಿದಂತೆ ನೋವಾಗಿ, ಆ ನೋವೆಲ್ಲವೂ ಎದೆಗೆ ಬಂದು, ಭಾರವಾಗಿ, ಆ ಭಾರವನ್ನು ತಡೆಯಲಾರದವಳಂತೆ ಎಲ್ಲೆಂದರಲ್ಲಿ ಧೊಪ್ಪನೆ ಬಿದ್ದು ಹೋಗುತ್ತಾಳೆ. ಬೀಳುವಾಗ ಕಲ್ಲು ಗೋಡೆ, ಮರ, ಏನೂ ತೋರದೆ ಎಲ್ಲೆಂದರಲ್ಲಿ ಮಗನೇ ಎಂದು ಬೀಳುವ ಮಡದಿಯನ್ನು ನೋಡಿ ತ್ವಷ್ಟೃವಿಗೆ ಇವಳು ಏನಾಗುವಳೋ ಎಂದು ಭೀತಿಯಾಗುತ್ತದೆ. ಮಗನನ್ನು ಕೊಂದವನ ಮೇಲೆ ಕೋಪ, ಹೆಂಡತಿಯೇನಾಗುವಳೋ ಎಂಬ ಭೀತಿ, ಎರಡೂ ಸೇರಿ ಆತನಿಗೆ ಮೈಮೇಲೆ ಅರಿವೇ ಇಲ್ಲವಾಗುತ್ತದೆ. ಅರಿವು ಬಂದಾಗ, ``ಇಂದ್ರನು ನನ್ನ ಮಗನನ್ನು ತಾನಾಗಿ ಕರೆದುಕೊಂಡು ಹೋಗಿ ಹೀಗೆ ಮಾಡಿದನಲ್ಲ! ಅವನಿರಬಾರದು ಎಂದು ರೇಗುತ್ತಾನೆ. ಪುತ್ರಶೋಕದಿಂದ ಗಂಡಹೆಂಡಿರಿಬ್ಬರೂ ಬೆಂಕಿಗೆ ಬಿದ್ದು ಈಚೆಗೆ ಬಂದ ಹುಳುವಿನಂತೆ ಒದ್ದಾಡುತ್ತಿದ್ದಾರೆ. ಅಳುತ್ತಿದ್ದರೆ ಏನೋ ಒಂದು ಸಮಾಧಾನ. ಅಳು ಒಂದು ಗಳಿಗೆ ನಿಂತರೆ ಮೈಯ್ಯೆಲ್ಲಾ ಉರಿಯುವಂತಾಗುತ್ತದೆ. ತಣ್ಣೀರಿನ ಸ್ನಾನ, ಒದ್ದೆಬಟ್ಟೆ ಏನೂ ಆ ಉರಿಯನ್ನು ಶಮನಗೊಳಿಸಲಾರದು.

ಕಶ್ಯಪನು ಇಂದ್ರನ ಕಡೆಯಿಂದ ಬಂದನು. ಕಾಮಧೇನುವಿನ ಮಕ್ಕಳು, ನಂದನದಿಂದ ಕಲ್ಪವೃಕ್ಷದ ಸಸಿಗಳು, ಚಿಂತಾಮಣಿಯ ಸಂತಾನ, ಎಲ್ಲವನ್ನೂ ತಂದು ತ್ವಷ್ಟೃವಿಗೆ ಕಾಣಿಕೆ ಮಾಡಿ, ಮಗನನ್ನು ಕಾಪಾಡಬೇಕೆಂದು ಕೇಳಿಕೊಳ್ಳಲು ಆತನು ಬಂದಿದ್ದಾನೆ.

ತ್ವಷ್ಟೃವು ಅವುಗಳನ್ನು ಕಣ್ಣೆತ್ತಿ ನೋಡಲೂ ಇಲ್ಲ. “ಕಶ್ಯಪ ! ಇವುಗಳಿಂದಲೇ ನಿನ್ನ ಮಗನಿಗೆ ಅಹಂಕಾರವು ಬಂದು, ಅವನು ಅಂತಹ ಅಕಾರ್ಯವನ್ನು ಮಾಡಿದುದು. ಇವನನ್ನು ‘ವಿಶ್ವರೂಪನನ್ನು ಕರದುಕೊಂಡು ಹೋಗು ಎಂದವರು ಯಾರು? ಹೀಗೆ ಅವನನ್ನು ವಧೆಮಾಡು ಎಂದೇ ನಾವು ಅವನನ್ನು ಕಳುಹಿಸಿಕೊಟ್ಟುದು? ಈಗ ವಿಶ್ವರೂಪನ ತಾಯಿಗೆ ಹುಚ್ಚು ಹಿಡಿಯುವಂತಾಗಿದೆಯಲ್ಲ? ಯಾರು ಅದನ್ನು ನೋಡಬಹುದು !’ ಈ ದ್ರೋಹವು, ಅಪರಾಧವು, ಬರಿಯ ಕಾಣಿಕೆಗಳಿಂದ ಶಾಂತವಾಗುವುದಿಲ್ಲ ಅತೀಂದ್ರನೊಬ್ಬನನ್ನು ಸೃಷ್ಟಿಸುವೆನು. ಈ ಇಂದ್ರನು ಇಲ್ಲದಂತೆ, ಸ್ಥಾನಭ್ರಷ್ಟನಾಗುವಂತೆ ಮಾಡುವೆನು. ಇಲ್ಲದಿದ್ದರೆ ದಾವಾಗ್ನಿಗಿಂತ ಹೆಚ್ಚಾಗಿ ಉರಿದು ಉರಿಸುತ್ತಿರುವ ಈ ಶೋಕಾಗ್ನಿಯು ಶಮನವಾಗುವುದೆಂತು? ನೋಡು. ನೋಡು ವಿಶ್ವರೂಪನೇ ಎದುರು ಬಂದು ನಿಂತು “ಸೇಡು! ಸೇಡು” ಎಂದು ಕೂಗುತ್ತಿರುವನು. ನೀನು ಮಾತಾಡಬೇಡ. ನೀನು ಪುಣ್ಯವಂತ! ನಿನಗೆ ಮಕ್ಕಳು ಸತ್ತು ಗೊತ್ತಿಲ್ಲ ಅಲ್ಲದೆ, ನಿನ್ನ ಸಂತಾನವು ಬೇಕಾದಷ್ಟಿದೆ. ಸುರಾಸುರರಿಬ್ಬರೂ ನಿನಗೆ ಮಕ್ಕಳಾಗಿರುವುದರಿಂದ, ನೀನು ಪರಸ್ಪರ ಅವರು ಮಾಡುವ ವಿಶ್ವಾಸ ವಿದ್ವೇಷಗಳನ್ನು ಸಹಿಸಬಲ್ಲೆ, ನನ್ನಿಂದ ಸಾಧ್ಯವಿಲ್ಲ. ಪಾಪವೆನ್ನುವೆಯೇನೋ? ಅದೇನಾದರೂ ಇರಲಿ. ಮೊದಲು ಈ ದುಃಖವನ್ನು ಕಳೆದುಕೊಂಡು ಅನಂತರ ಪಾಪ ನಿವಾರಣಕ್ಕಾಗಿ ತಪಸ್ಸನ್ನು ಆಚರಿಸುವೆನು. ನೀನು ಅಡ್ಡಬರಬೇಡ” ಎಂದು ಖಂಡಿತವಾಗಿ ನುಡಿದನು.

ಕಶ್ಯಪನು ಎಲ್ಲವನ್ನೂ ಕೇಳಿದನು. “ಸರಿ ಜಗತ್ತಿನಲ್ಲಿ ಏನೋ ಒಂದು ವಿಪ್ಲವವಾಗಬೇಕಾಗಿದೆ. ನಾನೇಕೆ ಅಡ್ಡಿ ಬರಲಿ ? ಆಗಬೇಕಾದುದು ಆಗಿಹೋಗಲಿ. ನಾನು ಅಡ್ಡಿಯಾಗಿ ಭವಿಷ್ಯತ್ತು ಮಂಗಳವಾಗುವ ಹಾಗೆ ಮಾಡಬಹುದು ಏಕೆ? ಉಪ್ಪು ತಿಂದವರು ನೀರು ಕುಡಿಯಲಿ” ಎಂದುಕೊಂಡು ತ್ವಷ್ಟೃವಿಗೆ ಏನೂ ಹೇಳದೆ ಸುಮ್ಮನೆ ಬಂದನು.

ತ್ವಷ್ಟೃವನ್ನು ನೋಡಿಕೊಂಡು ದುಃಖೋಪಶಮನವನ್ನು ಹೇಳಿ ಹೋಗಲು ದಾನವಮುಖಂಡರು ಬಂದರು. ತ್ವಷ್ಟೃವು ಅವರಿಗೂ ಅದೇ ಮಾತು ಹೇಳಿದನು- “ನೋಡಿ, ಇಂದ್ರನಿಗೆ ಅಹಂಕಾರವು ತಾನೇತಾನಾಗಿದೆ. ಇವನಿಗೆ ನಾವೆಲ್ಲರೂ ಸೇರಿಯಲ್ಲವೆ ದೇವರಾಜಾಭಿಷೇಕವನ್ನು ಮಾಡಿದುದು? ತಾನಾಗಿ ಬಂದು ನಮ್ಮ ತೇಜಸ್ಸೆಲ್ಲ ಕ್ಷೀಣವಾಗಿ ಹೋಗುತ್ತಿದೆ. ನಮ್ಮ ಶತ್ರುಗಳ ತೇಜಸ್ಸು ಪ್ರಬಲವಾಗುತ್ತಿದೆ. ಅವರ ಕೈಮೀರಿ ನಾವು ವಿನಾಶವಾಗುವ ಮುಂಚೆ ನಮ್ಮನ್ನು ಉದ್ಧರಿಸುವ ಆಚಾರ್ಯನು ಬೇಕು ಎಂದಲ್ಲವೆ ವಿಶ್ವರೂಪನನ್ನು ಕರೆದುಕೊಂಡು ಹೋದುದು? ಅವನು ಇವನಿಗೆ ನಾರಾಯಣಕವಚವನ್ನು ಅನುಗ್ರಹಿಸಿ ಕೊಟ್ಟು ಗುರುವಾದನಲ್ಲ! ಗುರುವಿಗೆ ವಿದ್ರೋಹ ಮಾಡಬಹುದೆ ? ಆಚಾರ್ಯನಾಗಿ ಧರ್ಮಕರ್ಮಗಳನ್ನು ಕೂಡಿಸುತ್ತಿದ್ದನಲ್ಲ? ಅಂತಹ ಆಚಾರ್ಯನಿಗೆ ಅಪರಾಧಮಾಡಬಹುದೆ? ಇವನಂತೆಯೇ ಅವನು ದೇವಯೋನಿಯಾಗಿರಲು ಅವನು ಇವನಿಗೆ ಸ್ವಜನನಾದನಲ್ಲ ! ಸ್ವಜನರಿಗೆ ವಿಘಾತಿಯನ್ನು ಮಾಡಿ ಕುಲಕಳಂಕಿಯಾಗಬಹುದೆ? ಎಲ್ಲದಕ್ಕಿಂತ ಹೆಚ್ಚಾಗಿ ಆತನು ವೇದಾಧ್ಯಯನ ಸಂಪನ್ನನಲ್ಲ? ಹಗಲಿರುಳೂ ವೇದಾಧ್ಯಯನ ಮಾಡುತ್ತ ವೇದಮಂತ್ರಗಳಿಗೆಲ್ಲ ವೀರ್ಯವತ್ತತೆಯನ್ನು ಸಂಪಾದಿಸಿ ಕೊಡುತ್ತಿದ್ದನಲ್ಲಾ? ಅವೂ ಅವನನ್ನು ಕಾಪಾಡಲಾರದೆ ಹೋದವಲ್ಲಾ?” ಎಂದು ಅನೇಕ ವಿಧವಾಗಿ ಪರಿಪರಿಯಾಗಿ ಗೋಳಾಡಿದನು.

ದಾನವರು “ಇಂದ್ರನ ಅಹಂಕಾರವು ಮೇರೆ ಮೀರಿದೆ ನಿಜ. ಅದನ್ನು ಏನಾದರೂ ಮಾಡಿ ಮಟ್ಟಹಾಕದಿದ್ದರೆ ಉಳಿಯುವಂತಿಲ್ಲ. ನಿಮ್ಮಂತಹವರಿಗೆ ವಿಶ್ವರೂಪನನ್ನು ಮಗನನ್ನಾಗಿ ಪಡೆಯಬಲ್ಲ ನಿಮ್ಮಂತಹವರಿಗೆ - ಇಂತಹ ಘೋರಾಪರಾಧವನ್ನು ಮಾಡಿದನೆಂದರೆ ಇತರರನ್ನು ಲಕ್ಷಿಸುವನೆ? ಮೊದಲು ಮಟ್ಟಹಾಕಬೇಕು. ತಾವು ಆ ಕೆಲಸವನ್ನು ಮಾಡುವಿರಾ? ಅಥವಾ ನಾವು ಮಾಡೋಣವೆ? ವಿಶ್ವರೂಪಾಚಾರ್ಯನು ನಮ್ಮಲ್ಲಿ ಪಕ್ಷಪಾತವನ್ನು ತೋರಿಸುತ್ತಿದ್ದನೆಂದೇ ಇಂದ್ರನು ಹೀಗೆ ಆತನನ್ನು ವಧೆ ಮಾಡಿದುದು. ಆದ್ದರಿಂದ ಈ ಸೇಡು ತೀರಿಸುವ ಭಾರವು ನಮ್ಮದು. ನೀವು ಹೇಳಿದಂತೆ ಮಾಡಲು ನಾವು ಸಿದ್ಧರಾಗಿರುವೆವು. ನಮ್ಮ ಶುಕ್ರಾಚಾರ್ಯರೂ ತಮಗೆ ಸಹಾಯಕ್ಕೆ ಬರಲು ಸಿದ್ಧರಾಗಿರುವರು” ಎಂದು ಅವರು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತೆ ಮಾತಾಡಿದರು.

ತ್ವಷ್ಟೃವು ಪುತ್ರಶೋಕದ ಆವೇಗದಲ್ಲಿ ವಿಶ್ವರೂಪನ ತಾಯಿಯು ಅನುಭವಿಸುತ್ತಿರುವ ಅಪಾರವಾದ ದುಃಖವನ್ನು ನೋಡಲಾರದೆ, ಅವಳಿಗೆ ಸಮಾಧಾನವಾಗಲೆಂದು ಲೋಕವನ್ನು ಅನಿಂದ್ರಿತವಾಗಿ ಮಾಡುವ ಯಾಗವೊಂದನ್ನು ಸಂಕಲ್ಪಿಸಿದನು. ಇಂದ್ರಶತ್ರುವನ್ನು ಪಡೆದು ಇಂದ್ರನನ್ನು ನಿರ್ಮೂಲ ಮಾಡಬೇಕೆಂದು ಉದ್ದೇಶಿಸಿದನು. ಘೋರವಾದ ಈ ಉದ್ದೇಶದಿಂದ ಮಾಡುವ ಯಾಗಕ್ಕೆ ಬರಲು ದೇವರ್ಷಿಗಳೂ ಮಹರ್ಷಿಗಳೂ ಸಮ್ಮತಿಸದಿರಲು, ತ್ವಷ್ಟೃವು ಅಸುರಗುರುವಾದ ಶುಕ್ರಾಚಾರ್ಯರನ್ನು ಸಹಾಯಕ್ಕಿಟ್ಟುಕೊಂಡು ಯಾಗವನ್ನು ಮಾಡಿಯೇ ಮಾಡಿದನು.

ಬ್ರಹ್ಮನಿಗೂ ಈ ಸುದ್ದಿಯು ತಿಳಿಯಿತು. “ಇದೇನಿದು ಅಸಂಪ್ರದಾಯ ಕ್ರಮ? ತನಗೆ ಪ್ರಾಪ್ತವಾದ ಪುತ್ರಶೋಕವನ್ನು ಕಳೆದುಕೊಳ್ಳಲು ತ್ರಿಲೋಕಾಧಿಪತಿಯನ್ನು ನಿರ್ಮೂಲ ಮಾಡುವುದೆಂದರೇನು?” ಎಂದು ವಿಷಾದಪಟ್ಟರೂ “ಆಗಲಿ, ಇದೂ ಒಳ್ಳೆಯದೇ ಆಗುವಂತೆ ಮಾಡೋಣ. ಇಂದ್ರನಿಗೂ ಬುದ್ಧಿಬರಲಿ” ಎಂದು ಸುಮ್ಮನಾದನು. ಅದರೂ ಜಗತ್ಕಲ್ಯಾಣ ಬುದ್ಧಿಯಿಂದ ಅದನ್ನು ಮತ್ತೆ ವಿಚಾರಮಾಡಿ ನೋಡಿ “ತ್ವಷ್ಟೃವಿನ ಸಂಕಲ್ಪವೂ ಹಾನಿಯಾಗಬಾರದು. ಇಂದ್ರನೂ ಇಲ್ಲವಾಗಬಾರದು. ಹಾಗೆ ಮಾಡು” ಎಂದು ಸರಸ್ವತಿಗೆ ಹೇಳಿ ತಾನು ಸುಮ್ಮನಾದನು.

ಯಾಗವು ನಡೆಯಿತು. ಪೂರ್ಣಾಹುತಿಯನ್ನು ಕೊಡುವಾಗ ತ್ವಷ್ಟೃವಿಗೆ ಕೊಂಚ ವಿಸ್ಮೃತಿಯಾಯಿತು. “ಇಂದ್ರಶತ್ರೋ ! ವರ್ಧಸ್ವ ! ಇಂದ್ರ ಶತ್ರುವೇ ವರ್ಧಿಸು” ಎಂದು ಹೋಮಮಾಡಿದನು. ಸರಸ್ವತಿಯು ಇಂದ್ರನ ಶತ್ರುವೆ ಎಂಬ ತ್ವಷ್ಟೃವಿನ ಅಭಿಪ್ರಾಯವು ಭಿನೈಸುವಂತೆ ಮಾಡಿ, ಇಂದ್ರನು ಯಾವನಿಗೆ ಶತ್ರುವೋ ಅವನು ಎಂದು ಅಭಿಪ್ರಾಯ ಬರುವಂತೆ ಸ್ವರಭೇದ ಮಾಡಿಬಿಟ್ಟಳು. ಅದನ್ನು ಯಜಮಾನನಾದಿಯಾಗಿ ಬ್ರಹ್ಮನವರೆಗೆ ಯಾರೂ ಗಮನಿಸಲಿಲ್ಲ. ಪೂರ್ಣಾಹುತಿಯಾಗುತ್ತಲೂ ಕರಾಳಾಕೃತಿಯೊಂದು ಹುಟ್ಟಿಬಂತು : “ನನ್ನನ್ನು ಏತಕ್ಕೆ ಸೃಷ್ಟಿಸಿದಿರಿ?” ಎಂದು ಗರ್ಜಿಸಿತು. “ನೀನು ಇಂದ್ರನನ್ನು ಧ್ವಂಸಮಾಡು ಹೋಗು’' ಎಂದು ಯಜಮಾನನು ಅದಕ್ಕೆ ವಿಧಾಯಕ ಮಾಡಿದನು. ಎಲ್ಲರೂ ಸೇರಿ ಆ ಕೃತ್ಯದ ಪ್ರಭಾವವು ದಿನಕ್ಕೊಂದು ಬಾಣಪ್ರಮಾಣ ಸುತ್ತಲೂ ಬೆಳೆಯುವಂತೆ ವರವನ್ನು ಕೊಟ್ಟರು. ಅದು ಹುಟ್ಟಿ ಬಂದು, ಇವರು ವರಪ್ರದಾನ ಮಾಡುತ್ತಿದ್ದ ಹಾಗೆಯೇ ಮೂವತ್ತು ವರುಷದ ವೀರಪುರುಷನಾಯಿತು. ದಾನವೇಂದ್ರರು ಬಂದು “ಅಯ್ಯಾ, ನೀನು ನಮಗೆ ಒಂದು ವರ ಕೊಡಬೇಕು. ಈ ಯಾಗದಲ್ಲಿ ನಮ್ಮ ಗುರುಗಳು ವಹಿಸಿ ಭಾಗವನ್ನು ಗಮನಿಸಿ ನಮ್ಮ ಪ್ರಾರ್ಥನೆಯನ್ನು ಗೌರವಿಸು” ಎಂದು ಪ್ರಾರ್ಥಿಸಿದರು. ಆ ವೀರಪುರುಷನು “ಆಗಬಹುದು” ಎಂದು ವರವನ್ನು ಕೊಡಲು, “ನೀನು ನಮ್ಮ ಮುಖಂಡನಾಗಿರು. ನಮ್ಮಲ್ಲಿ ವಿಶ್ವರೂಪಾಚಾರ್ಯನು ಅನುಗ್ರಹ ಮಾಡಿರುವ ತಪಸ್ಸಿದೆ. ಅದನ್ನು ನಿನಗೆ ಒಪ್ಪಿಸುವೆವು, ನೀನು ಅದನ್ನು ಸ್ವೀಕರಿಸು. ನೀನು ಇಂದ್ರನ ಮೇಲೆ ದಾಳಿಯಿಡುವಾಗ ನಿನ್ನೊಡನೆ ಬರಲು ಅಸುರ ಸೇನೆಗೆ ಅಪ್ಪಣೆಯನ್ನು ಕೊಡು?” ಎಂದರು. ಅವನು ‘ಆಗಲಿ’ ಎಂದು ವರವನ್ನು ಕೊಟ್ಟನು. ಎಲ್ಲರೂ ಸೇರಿ ಅವನಿಗೆ ‘ವೃತ್ರ’ ಎಂದು ಹೆಸರಿಟ್ಟರು. ಆತನಿಗೆ ಶುಕ್ರನು ಆಚಾರ್ಯನಾದನು. ತಾನು ಸುರನಲ್ಲ ಸುರಪತಿಯ ವಿನಾಶಕ್ಕಾಗಿ ಹುಟ್ಟಿದವನು ಎಂದು ಅವನು ತನ್ನನ್ನು ವೃತ್ರಾಸುರನೆಂದು ಕರೆದುಕೊಂಡನು.

ಮಹೇಂದ್ರನು ತಾನು ಮಾಡಿದ ಅಡ್ಡಿಗಳು ಯಾವುವೂ ಫಲಿಸದೆ, ಯಾಗವು ನಿರ್ವಿಘ್ನವಾಗಿ ನೆರವೇರಿತು ಎಂದು ಬಹುವಾಗಿ ಹೆದರಿದನು. ತನ್ನ ಇಂದ್ರತ್ವವು ಮಾತ್ರವಲ್ಲ ತಾನೂ ವಿಶ್ವರೂಪಾಚಾರ್ಯನಂತೆ ವೃತ್ರಾಸುರನಿಗೆ ಬಲಿಯಾಗುವೆನೆಂಬ ಶಂಕೆಯು ತಾನೇತಾನಾಯಿತು. ಜೊತೆಗೆ ಶತ್ರುವು ಅಸುರನೆಂದು ಹೆಸರಿಟ್ಟು ಕೊಂಡುದೂ, ದಾನವೇಂದ್ರನು ಅವನನ್ನು ಪ್ರಾರ್ಥಿಸಿದುದೂ, ಅವನು ಒಪ್ಪಿದುದೂ, ಶುಕ್ರಾಚಾರ್ಯನನ್ನು ವರಿಸಿದುದೂ ಎಲ್ಲವೂ ತನ್ನ ವಿನಾಶಕ್ಕೆ ಕಾರಣಗಳು ಎಂದು ತಿಳಿದು ಏನು ಮಾಡಬೇಕೋ ತಿಳಿಯದೆ ಚಿಂತಾಗ್ರಸ್ಥನಾದನು.

ಸರಸ್ವತಿಯ ಸ್ವರಭೇದದಿಂದ ಅರ್ಥಭೇದವಾಗುವಂತೆ ಮಾಡಿದ ರಹಸ್ಯವು ಆತನಿಗೂ ತಿಳಿದಿರಲಿಲ್ಲ.

* * * *

೧೧. ಕಿಚ್ಚು ಏಳುತ್ತಿದೆ

ಸಂಪಾದಿಸಿ

ಪಾತಾಳಲೋಕದಲ್ಲಿ ಸಮರಸಿದ್ಧತೆಯು ನಡೆದಿದೆ. ದಾನವಕುಲವೆಲ್ಲ ಸಬಾಂಧವರಾಗಿ ಸಪರಿವಾರರಾಗಿ ಅಲ್ಲಿಗೆ ಬಂದಿದ್ದಾರೆ. ಪ್ರಕಟವಾಗಿ “ನಾವು ಸ್ವರ್ಗದ ಮೇಲೆ ದಾಳಿ ಮಾಡುವೆವು” ಎಂದು ಉದ್ಘೋಷಿಸುತ್ತಾರೆ. ಮುಚ್ಚು ಮರೆಯೇನೂ ಇಲ್ಲ. ಬಹುದಿನದಿಂದ ಕಾದಿದ್ದ ಅವಕಾಶವು ಇಂದು ದೊರಕಿದೆಯೆಂದು ಅವರಿಗೆಲ್ಲ ಪರಮಸಂತೋಷವಾಗಿದೆ. ಎಲ್ಲರ ಬಾಯಲ್ಲೂ ವೃತ್ರಾಸುರನ ಮಾತೇ! ಎಲ್ಲರೂ ಅವನನ್ನು ಹೊಗಳುವವರೆ! ಅವನೀಗ ಚಕ್ರವರ್ತಿ, ಸುರದ್ವೇಷಿಗಳೆಲ್ಲ ಅವನ ಹಿಂಬಾಲಿಗರು. ಅವನ ಸೇನೆಗೆ ಅಂತ್ಯವಿಲ್ಲ ಪಾರವಿಲ್ಲ. ಎಲ್ಲೆಲ್ಲಿಯೂ ಅವನ ಸೇನೆ.

ಪಾತಾಳಲೋಕದಲ್ಲಿರಲಿ, ಮಧ್ಯಮಲೋಕದಲ್ಲಿಯೂ ವೃತ್ರಾಸುರನ ಪ್ರಭಾವವು ತಲೆಹಾಕಿದೆ. ಆದರೆ ಚಕ್ರವರ್ತಿಯಾದ ಆಯುವಿನ ಪ್ರಭಾವದ ಮುಂದೆ ಅದು ಅಷ್ಟು ಪರಿಣಾಮಕಾರಿಯಾಗಿಲ್ಲ. ಹಾಗೆಂದು ಪರಿಣಾಮಕಾರಿಯಾಗದೆಯೂ ಇಲ್ಲ. ಜನರೆಲ್ಲ ಕಾಮೋಪಭೋಗಗಳಲ್ಲಿ ವಹಿಸಿರುವಷ್ಟು ಆಸಕ್ತಿಯನ್ನು ಇನ್ನು ಯಾವುದರಲ್ಲೂ ವಹಿಸಿಲ್ಲ. ಬಹುವಾಗಿ ಪ್ರೇಯೋ ಮಾರ್ಗದ ಕಡೆಗೆ ತಿರುಗಿದ್ದಾರೆ ಜನವೆಲ್ಲ ಎಂದರೆ ಅತಿಶಯೋಕ್ತಿಯಲ್ಲ. ಚಕ್ರವರ್ತಿಯು “ಏನೋ ಆಗಿದೆ. ಇದು ನನ್ನ ತಪ್ಪೋ ? ನಾನೇನಾದರು ತಪ್ಪು ಮಾಡಿದ್ದೇನೋ ?” ಎಂದು ಒಮ್ಮೊಮ್ಮೆ ಸಂದೇಹ ಪಡುತ್ತಾನೆ. ಮತ್ತೆ “ಸತ್ತ್ವಗುಣವು ರಜೋಗುಣದ ಕಡೆಗೆ ತಿರುಗುತ್ತಿರುವಂತಿದೆ ಅದರಿಂದ ಹಾಗಾಗಿರಬೇಕು. ಯಾವಾಗಲೂ ಜಗತ್ತು ಹೀಗೆ ಅಧೋಮುಖ ಗತಿಯಾಗಿರುವುದೇ ಸ್ವಭಾವ. ಆದರೂ ನನ್ನ ಪ್ರಜೆಗಳು ಹೀಗಾಗಬಾರದು, ಅವರನ್ನು ಸನ್ಮಾರ್ಗದಲ್ಲಿ ಹೋಗುವಂತೆ ಮಾಡುವುದು ನನ್ನ ಧರ್ಮ” ಎಂದು ಹೊಸ ಹೊಸ ದಾನಗಳನ್ನು ಹೊಸ ಹೊಸ ವ್ರತಗಳನ್ನು ಅರಮನೆಯಲ್ಲಿ ಮಾಡುತ್ತಾ ಪ್ರಜಾಮುಖಂಡರಿಂದ ಮಾಡಿಸುತ್ತಾ ಧರ್ಮಾಭಿವೃದ್ಧಿಯ ಕಡೆಗೆ ಜನರ ಮನಸ್ಸು ತಿರುಗಿಸುತ್ತಾನೆ.

ಮಧ್ಯಮಲೋಕದಲ್ಲಿ ಜನರ ಮನಃಪ್ರವೃತ್ತಿಯು ಕಾಮೋಪಭೋಗಗಳ ಕಡೆಗೆ ತಿರುಗಿರುವುದನ್ನು ನೋಡಿ, ದೇವತೆಗಳು “ಇದು ಇಂದ್ರನು ಕೊಟ್ಟ ವರದ ಫಲ” ಎನ್ನುತ್ತಾರೆ. “ಬ್ರಹ್ಮಹತ್ಯೆಯನ್ನು ಮಧ್ಯಮಲೋಕದಲ್ಲಿ ಹಂಚಿದ ಫಲವಿದು” ಎಂದು ಯಾರೂ ಚಿಂತಿಸುವುದೂ ಇಲ್ಲ. ಅದೇ ತಾನೇ ಸ್ವಭಾವ ! ಕೆಟ್ಟುದು ಬಂದಾಗ ಇತರರಿಂದ ಬಂತು ಎಂದು ಬಯ್ಯುವುದು, ಒಳ್ಳೆಯದು ಆದಾಗ ಅದು ತನ್ನಿಂದ ಆಯಿತು, ತಾನುಮಾಡಿದ ಪ್ರಯತ್ನದ ಫಲ ಎನ್ನುವುದು. ಆದರೆ, ಒಳ್ಳೆಯದು ಯಾವುದು? ಕೆಟ್ಟುದು ಯಾವುದು ಎಂದು ಗೊತ್ತುಮಾಡಿರುವವರು ಯಾರು? ಅವರವರ ರಾಗದ್ವೇಷಗಳಿಂದ ಗೊತ್ತಾಗುವ ಸುಖದುಃಖಗಳಿಗೆ ಕಾರಣವಾದ ಒಳ್ಳೆಯದು ಕೆಟ್ಟುದು ಇವಕ್ಕೆ ನಿಯತ ಸ್ವರೂಪವುಂಟೇನು? ಕಾಲ ದೇಶವರ್ತಮಾನಗಳಿಂದ ಬದಲಾಯಿಸುವ ಈ ಒಳ್ಳೆಯದು ಕೆಟ್ಟುದು ಇವಕ್ಕೆ ಖಚಿತವಾದ ಸ್ವರೂಪವಿದೆ ಎಂದುಕೊಂಡಿದೆ ಲೋಕ. ಅವುಗಳನ್ನು ಅಳೆಯುವ ಕೋಲು ತನ್ನ ಮನಸ್ಸಿನಲ್ಲಿದೆ ಎಂಬುದನ್ನು ಕಾಣದು.

ಮಧ್ಯಲೋಕದಲ್ಲಿ ಧರ್ಮಕ್ಕಿಂತ ಅರ್ಥಕಾಮಗಳ ಮೇಲೆ ಜನಕ್ಕೆ ಅಭಿಮಾನವು ಹೆಚ್ಚುತ್ತಿರುವುದನ್ನು ನೋಡಿ ಪಾತಾಳವು ‘ಇದು ನಮ್ಮ ವೃತ್ರನ ಪ್ರಭಾವ’ ಎನ್ನುತ್ತಿದೆ. “ನೋಡಿ, ನಮ್ಮ ವೃತ್ರಾಸುರನ ಪ್ರಭಾವ ಮನುಷ್ಯ ಲೋಕವನ್ನೆಲ್ಲಾ ಆವರಿಸಿದೆ. ಗುರುಕುಲ ಬೇಕೆ ? ಜನಗಳ ಮನಸ್ಸು ಎತ್ತಕಡೆ ತಿರುಗಿದೆ ನೋಡಿ. ಎಲ್ಲರೂ ಅರ್ಥಕಾಮಗಳ ಕಡೆ ತಿರುಗಿದ್ದಾರೆ. ಯಾರಿಗಾದರೂ ಧರ್ಮ ಬೇಕಾಗಿದೆಯೇ ? ಅಥವಾ ಧರ್ಮಮಾಡುವವರೂ ಆಡಂಬರವಾಗಿ ನಿಜ ವೈಭವವನ್ನು ಪ್ರದರ್ಶಿಸಲು ಮಾಡುತ್ತಿರುವರೇ ಹೊರತು ಅಲ್ಲಿಂದಾಚೆಗೆ ಇನ್ನೇನಾದರೂ ಉದ್ದೇಶವಿದೆಯೇ ನೋಡಿ. ದೇವತೆಗಳ ಆಟ ಇನ್ನು ಸಾಗುವಂತಿಲ್ಲ ಅವರದೆಲ್ಲ ಮುಗಿಯುತ್ತ ಬಂತು. ಅಬ್ಬಾ ! ತಮ್ಮ ಕೈ ಮೇಲಾದಾಗ ಅವರು ಏನೇನು ಮಾಡಿಬಿಟ್ಟರು ? ಇರಲಿ, ಇನ್ನೆರಡು ದಿನ ಅವರನ್ನು ಮೂಲೆಗುಂಪು ಮಾಡಿ ಸ್ವರ್ಗದಲ್ಲಿಯೂ ನಮ್ಮ ಪ್ರಭುತ್ವವನ್ನು ಸ್ಥಾಪಿಸದಿದ್ದರೆ ನಾವೇಕೆ ಆದೇವು?” ಎಂದು ದಾನವೇಂದ್ರರು ಅತೀವ ಸಮಾಧಾನದಿಂದ ಮೀಸೆ ತಿರುವುತ್ತಾರೆ.

ವೃತ್ರಾಸುರನು ಹೆಚ್ಚುತ್ತಿರುವ ತನ್ನ ಪ್ರಭಾವಪ್ರತಾಪಪೌರುಷಗಳನ್ನು ನೋಡಿಕೊಳ್ಳುತ್ತ ತನ್ನ ಅನುಯಾಯಿಗಳಾದ ದಾನವೇಂದ್ರರಿಗೆಲ್ಲ “ಅವಸರವಿಲ್ಲ ಇಂದ್ರನನ್ನು ಕಳಿತ ಬಾಳೆಯ ಹಣ್ಣನ್ನು ಕಿವುಚಿಹಾಕುವ ಹಾಗೆ ಕಿವುಚಿ ಬಿಡುತ್ತೇನೆ. ಬೆಕ್ಕು ಇಲಿಯ ಮರಿಯನ್ನು ನುಂಗುವ ಹಾಗೆ ನುಂಗಿಬಿಡುತ್ತೇನೆ. ಇನ್ನೇನು ಕೆಲವು ದಿನಗಳು ತಡೆಯಿರಿ ! ಕೊಂಚ ತಡೆದುಕೊಳ್ಳಿ” ಎನ್ನುತ್ತಾನೆ. ದಾನವೇಂದ್ರರು ಹಿಂದೆ ತಮಗೆ ದೇವತೆಗಳಿಂದ ಆದ ಅಪರಾಧಗಳನ್ನೆಲ್ಲಾ ಹೇಳಿಕೊಳ್ಳುತ್ತಾರೆ. “ಮಹಾಸ್ವಾಮಿ ! ಇಂತಹದೊಂದು ಕಾಲ ಬಂದೀತೆ ಎಂದು ಕಾದಿದ್ದೆವು. ಈ ದೇವತೆಗಳಿಗೆ ಈಗ ನಡುಮುರಿಯುವಂತಹ ಏಟು ಹೊಡೆದು, ದೇವತೆಗಳು ಎಂದರೆ ದಾನವೇಂದ್ರರ ಮನೆಯ ಪಶುಗಳು ಎನ್ನುವಂತೆ ಮಾಡಬೇಕು” ಎಂದು ಮುಂತಾಗಿ ತಮ್ಮ ಹೊಟ್ಟೆಯಲ್ಲಿರುವ ದ್ವೇಷವನ್ನೆಲ್ಲ ತೋಡಿಕೊಳ್ಳುತ್ತಾರೆ. ವೃತ್ರಾಸುರನು ನಗುತ್ತ ಆಗಲಿ ಏನೇನು ಮಾಡುವಿರೋ ನೋಡೋಣ. ನನಗೆ ಅವರ ಶಕ್ತಿಬಲಪರಾಕ್ರಮಗಳು ಎಷ್ಟು ಎನ್ನುವ ಯೊಚನೆಯೂ ಬೇಕಾಗಿಲ್ಲ. ಪರ್ವತವು ಎದ್ದು ಓಡಾಡುವುದು ಎನ್ನಿ, ದಾರಿಯಲ್ಲಿರುವ ಪಟ್ಟಣಗಳಲ್ಲಿ ಎಂತಹ ದೊಡ್ಡ ದೊಡ್ಡ ಮನೆಗಳು ಇವೆ ಎಂದು ಯೊಚಿಸುವುದೇನು ? ಹಾಗೆ ಎನ್ನಿ ನಾನು ಒಂದು ಸಮಯವನ್ನು ಕಾಯುತ್ತಿದ್ದೇನೆ. ಈಗ ನಾನು ಐರಾವತದ ಎರಡರಷ್ಟು ಬಲವಾಗಿದ್ದೇನೆ. ಇದು ಇನ್ನೂ ಐದು ಪಟ್ಟು ಬೆಳೆಯಬೇಕು. ಅದಕ್ಕೇನು, ಅಬ್ಬಬ್ಬಾ ಎಂದರೆ ಒಂದು ವರ್ಷವಾದೀತೆ? ಒಂದೇ ಏಟು ಬರಿಯ ಕೈಯಲ್ಲಿ ಹೊಡೆದರೆ, ಐರಾವತವೂ ಅದನ್ನೇರಿರುವ ಇಂದ್ರನೂ ಹತ್ತು ಸಲ ಉರುಳಿ ಬೀಳಬೇಕು. ಹಾಗೆ ನಾನಾಗಬೇಕು. ಈ ಅಗ್ನಿ, ಯಮ, ವರುಣ ಮೊದಲಾದವರೆಲ್ಲ ನನ್ನನ್ನು ಕಂಡರೆ ಓಡಬೇಕು, ಹಾಗೆ ಮಾಡಬೇಕು. ಕಾದಾಡಿ ಗೆಲ್ಲುವುದು ಏನು ಮಹಾ !” ಎನ್ನುತ್ತಾನೆ.

ವೃತ್ರನು ಅವನು ಹೇಳಿದಂತೆಯೇ ಮಾಡಬಲ್ಲನೆಂಬುದಕ್ಕೆ ಅವನ ಆಕಾರವೇ ಸಾಕ್ಷಿ. ಈಗಾಗಲೇ ಒಂದು ಆನೆಯಷ್ಟು ಇದ್ದಾನೆ. ಅವನು ದಿನವೂ ಬೆಳೆಯುತ್ತಿರುವುದು ಸೊಂಪಾಗಿ ಬೆಳೆಯುವ ಗಿಡದ ಬೆಳವಣಿಗೆಯಂತೆ ಬರಿಯ ಕಣ್ಣಿಗೇ ಕಾಣಿಸುತ್ತಿದೆ. ಅವನ ತೋಳುಗಳು ಆನೆಗಳ ಕಾಲುಗಳಂತೆ ಇವೆ. ತಲೆಯು ಪರ್ವತದ ಗುಂಡು ಬಂಡೆಯಂತೆ ಇದೆ. ಅವನು ನಡೆಯುತ್ತಿದ್ದರೆ ಸಾಮಾನ್ಯ ಭೂಮಿಯು ಹಳ್ಳ ಬಿದ್ದುಹೋಗುತ್ತದೆ. ಈಗ ಅವನು ನಡೆದಾಡುವ ಕಡೆಗೆ ದಾನವರು ಬಂಡೆಗಳನ್ನೂ ಕಲ್ಲುಗಳನ್ನೂ ಹಾಕಿ ಭದ್ರವಾದ ರಾಜವೀಧಿಯನ್ನು ಮಾಡಿದ್ದಾರೆ. ದಿನವೊಂದಕ್ಕೆ ನೂರು ಜನ ರಾಕ್ಷಸರಿಗೆ ಆಗುವ ಊಟ ಅವನಿಗೊಬ್ಬನಿಗೇ ಬೇಕು. ಅವನು ಮಲಗಲು ರತ್ನಖಚಿತವಾದ ಮಂಚಗಳು ತಡೆಯದೆ, ಅವನಿಗೆಂದೇ ವಿಶೇಷವಾಗಿ ಮಂಚವನ್ನೂ ಹಾಗೆಯೇ ಕೂರಲು ವಿಶೇಷವಾದ ಆಸನವನ್ನೂ ದಾನವಶಿಲ್ಪಿಯು ರಚಿಸುತ್ತಿದ್ದಾನೆ.

ದಾನವಲೋಕದಲ್ಲಿ ಎಲ್ಲರಿಗಿಂತ ಸಂತೋಷಪಡುವವನೆಂದರೆ ಶುಕ್ರಾಚಾರ್ಯ. ಆತನು ದಿನದಿನವೂ ಬಂದು ವೃತ್ರಾಸುರನಿಗೆ ‘ದೇವತೆಗಳಿಗಿಂತ ಹೆಚ್ಚಿನ ವೈಭವದಿಂದ ಬಾಳು. ಅತೀಂದ್ರನಾಗು' ಎಂದು ಹರಕೆ ಹೊತ್ತು ಆಶೀರ್ವಾದ ಮಾಡುತ್ತಾನೆ. ಆತನಿಗೆ ಗೊತ್ತು “ಬ್ರಹ್ಮನಿಂದಲೂ ದಿಗಿಲಿಲ್ಲ ಆದರೆ, ಆ ಮಹಾವಿಷ್ಣು ಆತನು ಏನು ಉಪಾಯಮಾಡುವನೋ ? ಆತನು ಏನುಮಾಡಿ ಈ ವೃತ್ರನನ್ನು ಉರುಳಿಸುವನೋ? ಆತನ ದಿಗಿಲು ತಪ್ಪಿದರೆ, ಈ ಕಲ್ಪದ ಕೊನೆಯವರೆಗೂ ಇವನೇ ಇಂದ್ರನಾಗಿರುವ ಹಾಗೆ ಮಾಡಿಬಿಡಬಹುದು.’ ಎಂದು ಯೋಚಿಸುತ್ತಾನೆ ಹಾಗೆಯೇ “ಮೊದಲು ಇಂದ್ರಪದವಿಯನ್ನು ಪಡೆದು ಆಮೇಲೆ ಕಾಪಾಡಿಕೊಳ್ಳುವ ಯೋಚನೆ ಮಾಡೋಣ. ಮೊದಲು ಯೋಗ, ಆಮೇಲೆ ಕ್ಷೇಮ” ಎಂದು ಸುಮ್ಮನಾಗುತ್ತಾನೆ. ಆ ಪಾತಾಳದಲ್ಲಿರುವ ನಿವಾಸಿಗಳಿಗೆಲ್ಲ ವೃತ್ರಾಸುರನನ್ನು ದೇವತೆಗಳ ಮೇಲೆ ಯುದ್ಧಕ್ಕೆ ತ್ವರೆಗೊಳಿಸುತ್ತಾರೆ. ಆದರೆ ಶುಕ್ರಾಚಾರ್ಯನು ಮಾತ್ರ “ತಡೆಯಬೇಕು. ವೃತ್ರೇಂದ್ರನು ಹೇಳುವುದು ಸರಿ, ಇನ್ನೂ ಕಾಲಬಂದಿಲ್ಲ” ಎಂದು ತಡೆಯುತ್ತಿದ್ದಾನೆ.

* * * *

೧೨.ಭಯವು ತಪ್ಪಿದ್ದಲ್ಲ

ಸಂಪಾದಿಸಿ

ಇತ್ತ ಇಂದ್ರನಿಗೆ ವೃತ್ರಾಸುರನ ಸುದ್ದಿತಿಳಿಯದೆ ಇಲ್ಲ. ಆತನಿಗೆ ಕುಳಿತರೆ, ನಿಂತರೇ ಅದೇ ಯೋಚನೆ. ತನ್ನ ಮಿತ್ರರಾದ ಅಗ್ನಿವಾಯುಗಳೊಡನೆ ಏನಾದರೂ ಆಲೋಚನೆ ಮಾಡುತ್ತಿರುತ್ತಾನೆ. ಆಗ ನಡುವೆ ವೃತ್ರ ಚಿಂತೆಯು ಬಂದು, ವೃತ್ರನು ಬೆಳೆಯುತ್ತಿರುವಂತೆಯೇ ಬೆಳೆದು ತಾನೇ ತಾನಾಗುತ್ತದೆ. ಇನ್ನೊಮ್ಮೆ ಶಚಿಯೊಡನೆ ಏಕಾಂತದಲ್ಲಿ ಏನೋ ಮಾತಾಡುತ್ತಿರುತ್ತಾನೆ. ಅಲ್ಲಿ ವೃತ್ರ ವೃತ್ತಾಂತವು ಹೇಗೋ ನುಸುಳಿಕೊಂಡು ಬಂದು ಮಿಕ್ಕೆಲ್ಲವನ್ನೂ ಮೀರಿ ನಿಲ್ಲುತ್ತದೆ. ಮತ್ತೊಮ್ಮೆ ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಬಳಿ ಏನೋ ರಾಜಕಾರಣವನ್ನು ಕುರಿತು ಮಾತನಾಡುವಾಗ ವೃತ್ರಾಸುರ ಸಮಾಚಾರವು ಬಂದು, ಇಂದ್ರನ ಹೃದಯದಲ್ಲಿ ಎಷ್ಟು ಭೀತಿಯು ತುಂಬಿದೆ ಎಂಬುದು ವ್ಯಕ್ತವಾಗುತ್ತದೆ. ಮರವು ಎತ್ತರವಾದಷ್ಟೂ ಕೊನೆಗಳು ಸಣ್ಣದಾಗಿರುತ್ತವೆ ; ಆ ಕೊನೆಕೊನೆಗಳಲ್ಲಿ ಗಾಳಿಯ ಭೀತಿಯು ಹೆಚ್ಚಿ ಅಲ್ಲಿ ಮರವು ಎಷ್ಟೋ ದಿನ ಕಷ್ಟಪಟ್ಟು ಬೆಳೆಸಿದ ಕೊನೆಗಳು ಲಟಕ್ಕನೆ ಮುರಿದು ಬೀಳುತ್ತವೆ. ಹಾಗೆ ಆಗಿದೆ ಇಂದ್ರನ ಸ್ಥಿತಿ. ಇಂದ್ರನಿಗೆ ವೃತ್ರನ ದಿಗಿಲು ಅಷ್ಟಿಷ್ಟಲ್ಲ. ಯಾವ ರಾಗವನ್ನು ಹಾಡಿದರೂ ಅದಕ್ಕೆ ಆಧಾರಶ್ರುತಿಯು ಇದ್ದೇ ಇರುವಂತೆ, ಅವನು ಯಾವ ಕೆಲಸಮಾಡುತ್ತಿರಲಿ, ತಪ್ಪದೆ ಅಲ್ಲಿ ಯಾವುದಾದರೂ ಒಂದು ರೂಪವಾಗಿ ವೃತ್ರಭೀತಿಯಿದ್ದೇ ಇದೆ.

ಒಮ್ಮೊಮ್ಮೆ ಹಿಂದಿನದೆಲ್ಲ ನೆನಪಾಗುತ್ತದೆ. “ಅದೊಂದು ವಿಷಗಳಿಗೆ.ಆ ಮುನಿಗಣವು ಬಂದಾಗ, ಸಭೆಯು ಎಷ್ಟಾದರೂ ದೇವಸಭೆ, ಅಲ್ಲಿ ಬ್ರಹ್ಮಪ್ರವಚನವು ಸರಿಯಲ್ಲ ಎನ್ನುವುದು ಮನಸ್ಸಿಗೆ ಬಂದಿದ್ದರೆ ಇಷ್ಟು ಅನರ್ಥವಾಗುತ್ತಿರಲಿಲ್ಲವೋ ಏನೊ” ಎನ್ನಿಸಿ, ಆಗ ಬೃಹಸ್ಪತಿಯು ಬಂದು ತನಗೆ ಮರ್ಯಾದೆಯಾಗಲಿಲ್ಲವೆಂದು ಹೊರಟುಹೊದುದು, ತಾನು ಹೋಗಿ ಬ್ರಹ್ಮನನ್ನು ಕಂಡು ಆಚಾರ್ಯನೊಬ್ಬನು ಬೇಕೆಂದುದು, ಆತನು ವಿಶ್ವರೂಪನನ್ನು ಕೊಡುವಾಗಲೇ ‘ಅನರ್ಥವಾಗದಂತೆ ನೋಡಿಕೋ’ ಎಂದುದು ಎಲ್ಲವೂ ನೆನಪಾಗುತ್ತದೆ.

“ಹಾಗಾದರೆ ನಾನು ವಿಶ್ವರೂಪಾಚಾರ್ಯನಲ್ಲಿ ತಪ್ಪಿ ನಡೆದೆನೆ ? ಆತನನ್ನು ಪ್ರಾರ್ಥನೆ ಮಾಡಿಕೊಂಡೆ. ದೇವಗುರುವಾಗಿ, ದೇವತೆಗಳಿಗೆ ಸಲ್ಲದ ರೀತಿಯಲ್ಲಿ ನಡೆಯಬಾರದು ಎಂದು ಎಷ್ಟು ಕೇಳಿಕೊಂಡೆ ! ಎಷ್ಟು ಜನರಿಂದ ಹೇಳಿಸಿದೆ ! ಆದರೂ ಆತನು ತನ್ನ ಕೆಟ್ಟ ಚಾಳಿಯನ್ನು ಬಿಡಲಿಲ್ಲ. ಅದೂ ಇರಲಿ, ಆ ಕೊನೆಯ ದಿವಸ ! ಆತನು ಅದೆಷ್ಟು ತಿರಸ್ಕಾರದಿಂದ ನಡೆದುಕೊಂಡ ! ನಾನು ದೇವೇಶ್ವರನೆಂಬುದು ಲಕ್ಷ್ಯವೇ ಇಲ್ಲದೆ, ‘ನೀನೇನು ಮಾಡಬಲ್ಲೆ ನೋಡೋಣ’ ಎಂದು ಎದೆಯನ್ನು ಚಾಚಿ ನಿಂತನಲ್ಲ ! ಆಗ ನಾನು ಕಡಿದು ಹಾಕದೆ ಇನ್ನೇನು ಮಾಡಬಹುದಾಗಿತ್ತು ? ಈಗ ಎಲ್ಲರೂ ‘ನೀನು ಮಾಡಿದೆ, ನೀನು ಮಾಡಿದೆ’ ಎಂದು ನನ್ನನ್ನು ಆಕ್ಷೇಪಿಸುವರಲ್ಲ ! ಆಗ ಏಕೆ ಬಂದು ವಿಶ್ವರೂಪಾಚಾರ್ಯನಿಗೆ ಹೇಳಬಾರದಾಗಿತ್ತು ? ಇವರನ್ನು ಬೇಡವೆಂದಿದ್ದವರು ಯಾರು ? ಎಂದು ಎದುರಿಗಿಲ್ಲದ ಅಹಿತೈಷಿಗಳನ್ನು ಕುರಿತು ನಿಂದಿಸುತ್ತಾನೆ. ಹಾಗೆಯೇ ಅಲ್ಲಿಂದ ಮುಂದೆ ತ್ವಷ್ಟೃವು ಕಶ್ಯಪನ ಮಾತನ್ನು ನಿರಾಕರಿಸಿದುದು, ಕೃತ್ಯವನ್ನು ಮಾಡಿದುದು, ಆ ಕೃತ್ಯವಿಂದು ತನ್ನನ್ನು ತಿನ್ನಲು ಕಾದಿರುವುದು, ಎಲ್ಲವೂ ಚಿತ್ರಪಟದಂತೆ ಮನಃಫಲಕದಲ್ಲಿ ಹಾದು ಹೋಗುತ್ತದೆ.

“ಹಾಗಾದರೆ ಈ ಕೃತ್ಯವು ನನ್ನನ್ನು ತಿನ್ನುವುದೇನು ! ನಾನು ಅಮರನಲ್ಲ! ಅಮೃತವನ್ನು ಸೇವಿಸಿರುವೆನಲ್ಲ ! ನನ್ನನ್ನು ಈ ಕೃತ್ಯವೆಂತು ಕೊನೆಗಾಣಿಸುವುದು? ಸಾಯಿಸುವಂತಿಲ್ಲ, ಈ ಮನ್ವಂತರದ ಕೊನೆಯವರೆಗೆ ಯಾರೂ ನನ್ನನ್ನು ಏನೂ ಮಾಡುವಂತಿಲ್ಲ, ಆದರೆ ಈ ಕೃತ್ಯ ! ಹಾಗಾದರೆ ನನ್ನನ್ನು ಇದೇನು ಮಾಡುವುದು? ವೃತ್ರನು ‘ಆ ಇಂದ್ರನನ್ನು ಹಿಡಿದು ತಿಂದುಬಿಡುವೆನು’ ಎಂದು ಹೇಳಿಕೊಂಡು ತಿರುಗುತ್ತಿರುವನಂತೆ ! ಅವನ ಆಕಾರವನ್ನು ನೋಡಿದರೆ ಅದು ಅಸಾಧ್ಯವಲ್ಲ. ಆದರೆ, ನನ್ನನ್ನು ಜೀರ್ಣಿಸಿಕೊಳ್ಳುವನೆ ? ನನ್ನನ್ನು ಜೀರ್ಣಮಾಡುವ ಅಗ್ನಿಯು ಹುಟ್ಟಿಲ್ಲ, ಇಂದಿನಿಂದ ನಾನು ಅದಕ್ಕೆ ಸಿದ್ಧನಾಗಿರಬೇಕು. ಅವನು ನನ್ನನ್ನು ಹಿಡಿದುಕೊಳ್ಳದಂತೆ ನೋಡಬೇಕು. ಗವಿಯಂತಿರುವ ಆ ಬಾಯೊಳಕ್ಕೆ ನನ್ನನ್ನು ಹಾಕಿಕೊಳ್ಳದಂತೆ ಎಚ್ಚರವಾಗಿರಬೇಕು. ಒಂದುವೇಳೆ ನುಂಗಿಯೇಬಿಟ್ಟರೆ ? ಆ ಜಠರಕುಹರದಿಂದ ತಪ್ಪಿಸಿಕೊಂಡು ಬರಲೂ ಸಿದ್ಧನಾಗಿರಬೇಕು.”

ಇಂದ್ರನಿಗೆ ಆ ಯೋಚನೆಯು ಬಹು ಭಯಂಕರವಾಯಿತು. ಕೆಟ್ಟ ಕನಸು ಕಾಣುತ್ತಿರುವವನು ಭಯಂಕರವಾದ ಏನೋ ಒಂದನ್ನು ಕಂಡು ಹೆದರಿ, ಕಿಟಾರನೆ ಕಿರಿಚುವಂತೆ, ಆತನಿಗೂ ಕಿರಿಚಿಕೊಳ್ಳಬೇಕೆನ್ನಿಸಿತು. ಆ ವೇಳೆಗೆ ತಾನು ಯಾರು ಎಂಬುದು ನೆನಪಾಗಿ ಕಿರುಚಿಕೊಳ್ಳುವುದು ತಪ್ಪಿದರೂ ಅಲ್ಲಿ ಕುಳಿತಿರಲು ಆಗಲಿಲ್ಲ. ಅಲ್ಲಿಂದ ಎದ್ದು ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವರು ಎಂದುಕೊಂಡು ಹೆದರಿ ಓಡಿಹೋಗಬೇಕೆಂದುಕೊಂಡನು. ಯಾರೊಡನೆಯೂ ಹೇಳಿಕೊಳ್ಳುವಂತಿಲ್ಲ, ಹಾಗೆಂದು ಸುಮ್ಮನಿರುವಂತಿಲ್ಲ, ಬಾಹ್ಯಪ್ರಜ್ಞೆಯಿದೆ. ತಾನು ದೇವೇಂದ್ರನೆಂಬುದು ಗೊತ್ತಿದೆ. ತಾನು ಕುಳಿತಿರುವ ಮಂದಿರದ ಬಾಗಿಲಲ್ಲಿ ಪ್ರಹರಿಯು ಕಾದು, ಸಾಯುಧನಾಗಿ ನಿಂತಿರುವುದು ಗೊತ್ತಿದೆ. ಹಾಗೆಯೇ ತನ್ನ ಅಂತಃಕರಣದಲ್ಲಿ ನಡೆದ ಯೋಚನೆಯು ತೀವ್ರವಾಗಿ ತನ್ನ ಮನೋಬಲವೇ ಅದಕ್ಕೆ ದೊರೆತು, ಅದು ನಿಜಕ್ಕಿಂತ ನಿಜವಾಗಿ ಎದುರಿಗೆ ನಿಂತಿದೆ. ಕಣ್ಣೆದುರು ನಿಂತು ಅಂಜಿಸುತ್ತಿದೆ. ವೃತ್ರನು ಎದುರಿಗೆ ನಿಂತಿದ್ದಾನೆ. ‘ಇದೋ ನಿನ್ನನ್ನು ಹಿಡಿದು ನುಂಗುವೆ’ ಎನ್ನುತ್ತಿದ್ದಾನೆ. ಅದನ್ನು ಸುಳ್ಳೆಂದು ನಿರಾಕರಿಸುವುದೆಂತು ?

ಒಂದು ಸಲ ನಕ್ಕು ಇದೆಲ್ಲ ಭ್ರಾಂತಿಯೆಂದುಕೊಂಡನು. ವಿಶ್ವರೂಪಾಚಾರ್ಯನನ್ನು ವಧೆಮಾಡಿದಾಗ, ಆತನ ದೇಹದಿಂದ ಎದ್ದು ಬಂದು ಧೂಮವು ತನ್ನನ್ನು ಸೋಕುತ್ತಿದ್ದ ಹಾಗೆಯೇ ತನಗೆ ಜ್ಞಾನ ತಪ್ಪಿದುದು ನೆನಪಾಗಿ ‘ಈ ವೃತ್ರಕೃತ್ಯವು ತತ್ಫಲವಾಗಿ ಬಂದುದು. ಇದನ್ನೆಂತು ಸುಳ್ಳು ಎನ್ನಲಿ? ಎಂದೆನ್ನಿಸಿತು. ಹಾಗೆಯೇ ಆ ತೋರುತ್ತಿರುವ ಚಿತ್ರವು ನಿಜ. ಸುಳ್ಳಲ್ಲ ಎನ್ನಿಸಿತು. ಇಂದ್ರನು ಇನ್ನೊಂದು ಗಳಿಗೆಯೊಳಗಾಗಿ ಅಲ್ಲಿ ನಿಲ್ಲಲಾರದೆ ಹೋದನು. ಆ ಮಂದಿರದಲ್ಲೆಲ್ಲಾ ವೃತ್ರನು ತುಂಬಿರುವಂತೆ ಭಾಸವಾಯಿತು. ಅಲ್ಲಿರುವ ಜೀವರತ್ನವೊಂದೊಂದೂ ಒಬ್ಬೊಬ್ಬ ವೃತ್ರನಾಗಿರುವಂತೆ. ಕಂಭ, ಬೋದಿಗೆಗಳೂ ವೃತ್ರರಾಗಿರುವಂತೆ ಅಷ್ಟೇನು? ಇಂದ್ರನ ಸಾವಿರ ಕಣ್ಣುಗಳೂ ಸಾವಿರ ಜನ ವೃತ್ರರನ್ನು ಕಂಡಂತೆ ಆಗಿ, ವೃತ್ರನ ವಿಶ್ವರೂಪವನ್ನು ನೋಡುತ್ತ ಮಹೇಂದ್ರನು ವಿಹ್ವಲನಾಗಿ, ಹೆದರಿ, ಅಲ್ಲಿ ನಿಲ್ಲಲಾರದೆ, ಎದ್ದು ಓಡಿದನು. ಬಾಗಿಲಲ್ಲಿರುವ ಪ್ರಹರಿಯು, ಬಾಗಿಲನ್ನು ತೆರೆದುಕೊಂಡು ಬಂದು, ಹಿಂದು ಮುಂದು ನೋಡದೆ ಓಡುತ್ತಿರುವ ಇಂದ್ರನ ಹಿಂದೆ ಹೋಗಬೇಕೋ ಅಥವಾ ಮಂದಿರದ ಬಾಗಿಲಲ್ಲಿಯೇ ನಿಂತಿರಬೇಕೋ ತಿಳಿಯದೆ ತಬ್ಬಿಬ್ಬಾಗಿ ನಿಂತ ಕಡೆಯೇ ನಿಂತುಬಿಟ್ಟನು.

ಮಂದಿರದಿಂದ ಹೊರಬಿದ್ದ ಇಂದ್ರನು ವಾಯುವೇಗ ಮನೋವೇಗಗಳಿಂದ ಓಡಿದನು. ಅಭ್ಯಾಸವು ಆತನನ್ನು ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಭವನಕ್ಕೆ ಕರೆದೊಯ್ದಿತು. ಬಾಗಿಲಲ್ಲಿ ನಿಂತಿರುವವನನ್ನು ಕೇಳಿ ಪ್ರವೇಶಿಸಬೇಕು ಎನ್ನುವ ಶಿಷ್ಟಾಚಾರವನ್ನೂ ಮೀರಿ ಒಳನುಗ್ಗಿದನು. ದೌವ್ವಾರಿಕನು ಈತನನ್ನು ತಡೆಯುವುದೋ ಒಳಬಿಡುವುದೋ ಎಂದುಕೊಳ್ಳುವುದರೊಳಗಾಗಿ, ಮಹೇಂದ್ರನು ದೇವಗುರುಗಳ ಸಮೀಪವರ್ತಿಯಾಗಿದ್ದಾನೆ. ಅಲ್ಲಿ ನಾಲ್ವರು ದೀಕ್ಷಿತರು ರಕ್ಷೋಘ್ನ ಮಂತ್ರಗಳನ್ನು ಪಾರಾಯಣ ಮಾಡುತ್ತಿದ್ದಾರೆ. ಅಲ್ಲಿ ಪಕ್ಕದ ಚುತುಶ್ಯಾಲೆಯಲ್ಲಿ ಇನ್ನು ನಾಲ್ವರು ದೀಕ್ಷಿತರು ದೇವೋತ್ತೇಜಕ ಮಂತ್ರಗಳಿಂದ ಹೋಮ ಮಾಡುತ್ತಿದ್ದಾರೆ. ಅಲ್ಲಿಯೇ ಮತ್ತೊಂದು ಕಡೆಯಲ್ಲಿ ಅಭಿಮಂತ್ರಿತವಾದ ಸಾಂತ್ಯುದಕವನ್ನು ಧರಿಸಿರುವ ಕಲಶಗಳು ಸಿದ್ಧವಾಗಿವೆ. ಅಲ್ಲಿಗೆ ಬರುತ್ತಲೂ ದೇವಗುರುವಿನ ದರ್ಶನ, ರಕ್ಷೋಘ್ನಮಂತ್ರಗಳ ಶ್ರವಣ ಮೊದಲಾದವುಗಳಿಂದ ದೇವರಾಜನು ಸ್ವಸ್ಥನಾಗಿದ್ದಾನೆ. ಆ ಚಿತ್ತಭ್ರಾಂತಿಯು ಅರ್ಧಭಾಗ ಕಡಿಮೆಯಾಗಿದೆ. ದೇವಗುರುಗಳಿಗೆ ನಮಸ್ಕಾರ ಮಾಡಿ, ಒಂದೆಡೆಗೆ ಕೈಮುಗಿದು ನಿಲ್ಲುತ್ತಾನೆ.

ದೇವಗುರುವು ಇಂದ್ರನ ಮುಖವನ್ನು ನೊಡುತ್ತಿದ್ದ ಹಾಗೆಯೇ, ಆತನ ಮನಃಕ್ಷೋಭವನ್ನು ಅರಿತಿದ್ದಾನೆ. ಪಕ್ಕದ ಆಸನದಲ್ಲಿ ಆತನನ್ನು ಕುಳ್ಳಿರಿಸಿ, ಒಳಗಿನಿಂದ ಸಾಂತ್ಯುದಕದ ಕಲಶವೊಂದನ್ನು ತರಿಸಿ, ತಾನೇ ತೆಗೆದುಕೊಂಡು ಅದರಿಂದ ದೇವೇಂದ್ರನಿಗೆ ಸಂಪ್ರೋಕ್ಷಣ ಮಾಡುತ್ತಾನೆ. ದೇವೇಂದ್ರನ ಅಂತಭ್ರಾಂತಿಯು ನಿವಾರಣವಾಗಿ ಆತನು ಸ್ವಸ್ಥನಾಗುತ್ತಾನೆ.

ದೇವೇಂದ್ರನು ಮತ್ತೆ ನಗುನಗುತ್ತ “ದೇವಗುರುಗಳಲ್ಲಿ ಪ್ರಸ್ತಾಪಿಸಬೇಕಾದ ವಿಷಯವೊಂದಿತ್ತು” ಎನ್ನುತ್ತಾನೆ. ಕೂಡಲೇ ದೇವಗುರುವೂ ದೇವೇಂದ್ರನೂ ಅಂತರ್ಗೃಹಕ್ಕೆ ಹೋಗುತ್ತಾರೆ. ಬಾಗಿಲಲ್ಲಿ ದೌವ್ವಾರಿಕನು ಬಾಗಿಲನ್ನು ಮುಚ್ಚಿಕೊಂಡು ಕಾವಲು ನಿಲ್ಲುತ್ತಾನೆ.

ದೇವಗುರುವು ಏಕಾಂತದಲ್ಲಿ ಕೇಳುತ್ತಾನೆ : “ಮಹೇಂದ್ರ ಏನಾಗಿದೆ ? ಏನೋ ಗಾಬರಿಪಟ್ಟಿರುವಂತಿದೆ, ಪಾತಾಳದಲ್ಲಿ ಭಯಂಕರವಾದ ಸುದ್ದಿಯೇನಾದರೂ ಬಂತೋ ?”

ಮಹೇಂದ್ರನಿಗೆ ಕಣ್ಣು ಮುಚ್ಚಿಕೊಂಡು ಕಿಂಚಿತ್ತೂ ಮನೋಭೀತಿಯಿಲ್ಲದಂತೆ ಮಾತನಾಡಬೇಕೆಂದು ಇಷ್ಟ. ಅಲ್ಲದೆ, ದೇವಗುರುವಿನ ಸನ್ನಿಧಾನದಲ್ಲಿ ಮನಸ್ಸು ಸ್ವಸ್ಥವಾಗಿದೆ. ಆದರೂ ಅಂತಸ್ಥವಾದ ಭೀತಿಯನ್ನು ಊದಿ ಪುಟಗೊಳಿಸುವ ‘ತಾನು ಅಪರಾಧಿ’ಯೆಂಬ ಭಾವವು ಬಲವಾಗಿರಲು, ವಿಕಲನಾಗದಿರುವುದೆಂತು? ಏನೋ ನಿರ್ದಿಷ್ಟವಲ್ಲದ ಹೆದರಿಕೆಯಿಂದ ಹೇಳಿದನು ; “ಗುರುಸನ್ನಿಧಾನದಲ್ಲಿಯೂ ಮುಚ್ಚಿಡಲೇಕೆ ? ನನಗೆ ವೃತ್ರಭೀತಿಯು ಬಹಳವಾಗಿದೆ.”

ದೇವಗುರುವು ನಕ್ಕನು : “ಹೌದು, ಆಗಬೇಕಾದುದೇ! ಅವನೂ ದೇವತೆಗಳನ್ನು ಗೆದ್ದು ದೇವಲೋಕವನ್ನು ತನ್ನದು ಮಾಡಿಕೊಳ್ಳಲು ಎಲ್ಲಾ ಸನ್ನಾಹಗಳನ್ನು ಮಾಡಿಕೊಳ್ಳುತ್ತಿದ್ದಾನೆ.”

“ಫಲಿತಾಂಶವು ಏನಾಗಬಹುದು, ಗುರುವರ್ಯಾ ?”

“ಶಕುನಗಳು ನಮಗೆ ಚೆನ್ನಾಗಿಲ್ಲ ಯುದ್ಧದಲ್ಲಿ ನಾವು ಸೋಲಬಹುದು.”

“ನಾವು ಸೋತರೆ ಏನಾದೀತು ?”

“ಆಗುವುದೇನು ? ನಮ್ಮನ್ನೆಲ್ಲ ಇಲ್ಲಿಂದ ಓಡಿಸುತ್ತಾರೆ. ಆಗ ನಾವು ಮೇರು ಪರ್ವತದ ಗುಹೆಗಳಲ್ಲಿ ಎಲ್ಲೋ ಸೇರಿಕೊಂಡು, ಬ್ರಹ್ಮನನ್ನೋ, ವಿಷ್ಣುವನ್ನೋ, ಮಹಾದೇವನನ್ನೋ ಪ್ರಾರ್ಥಿಸಿಕೊಳ್ಳುತ್ತ ಅಜ್ಞಾತವಾಸ ಮಾಡಬೇಕಾಗುವುದು.”

“ದೇವ, ಯುದ್ಧದಲ್ಲಿ ಸೋಲುವುದು ಮಾತ್ರವಾದರೆ, ತಾವು ಹೇಳಿದಂತಾಗಬಹುದು. ವೃತ್ರನ ಕೈಗೆ ಸಿಕ್ಕಿಬಿದ್ದರೆ ಆ ಬೃಹದಾಕಾರವು ನನ್ನನ್ನು ಹಿಡಿದು ನುಂಗಿಬಿಟ್ಟರೆ ?”

“ದೇವರಾಜ, ನೀನು ಭೀತನಾಗಿ ಯೋಚಿಸುತ್ತಿರುವೆ. ಅದನ್ನು ಬಿಡು. ಅವನು ನುಂಗಿದರೆ ಜಠರವಾಯುವಿಗೆ ನಿನ್ನನ್ನು ಹೊರಕ್ಕೆ ತರುವಂತೆ ಹೇಳು. ಅವನಿಗೆ ಒಂದು ತೇಗು ಬರುವುದು. ನೀನು ಈಚೆಗೆ ಬರುವೆ. ಅಥವಾ ನೀನು ಅವನ ಹೊಟ್ಟೆಯನ್ನು ಬಗೆದು-ಈಚೆಗೆ ಬಾ. ಆದರೆ ದೇವೇಂದ್ರ, ನೀನಿಷ್ಟು ಹೆದರಬೇಕಾಗಿಲ್ಲ, ಅಪಾಯ ಬಂದರೆ ಸಿದ್ಧನಾಗಿರಬೇಕು. ಹಾಗೆಂದು ಉಪಾಯವನ್ನು ಚಿಂತಿಸುವೆನೆಂದು ಅಪಾಯವನ್ನು ಧ್ಯಾನಿಸುತ್ತಿರುವುದು ಸರಿಯಲ್ಲ. ಅಲ್ಲದೆ, ನಾವು ದೇವತೆಗಳು ಲೋಕವನ್ನೆಲ್ಲಾ ಸೃಷ್ಟಿಸಿರುವ ಪ್ರಾಣದಿಂದ ಕಿಡಿಗಳಂತೆ ಹಾರಿ ಬಂದ ತೇಜಃಪಿಂಡಗಳಾಗಿ, ಲೋಕದ ರಕ್ಷಾಭಾರವನ್ನು ವಹಿಸಿರುವವರು ನಾವು. ಇದನ್ನು ಅಧಿಕಾರವೆಂದು, ಭೋಗಸ್ಥಾನವೆಂದು, ಇತರರು ಬಯಸಿ, ಇಲ್ಲಿರುವ ನಮ್ಮನ್ನು ದ್ವೇಷಿಸುತ್ತಿರುವರು. ಇದು ಲೋಕದ ಸ್ವಭಾವ ಅಲ್ಲದೆ, ಅಧಿಕಾರದಲ್ಲಿದ್ದು, ಹತ್ತು ಜನರ ಕಣ್ಣಿಗೆ ಬಿದ್ದವರಿಗಲ್ಲದೆ ಇನ್ನು ಯಾರಿಗೆ ಶತ್ರುಗಳು? ಅದರಿಂದ, ಆ ಯೋಚನೆಯನ್ನು ಬಿಡು.”

“ಹಾಗಾದರೆ ನಾನು ವೃತ್ರನಿಗೆ ಸೋಲಲೇಬೇಕೆ ?”

“ಹೌದು, ಯತ್ನವಿಲ್ಲ. ತ್ವಷ್ಟೃವು ಯಾಗ ಮಾಡುವಾಗಲೇ ಅತೀಂದ್ರನಾದ ಇಂದ್ರಶತ್ರುವು ಹುಟ್ಟಬೇಕೆಂದೇ ಸಂಕಲ್ಪ ಮಾಡಿರುವನಾಗಿ ನೀನು ಸೋಲಲೇ ಬೇಕು. ಆದರೆ ಅದು ಯಾವಾಗ, ಎಷ್ಟು ದಿನ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆದರೆ ನಾನು ನಿನಗೆ ಒಂದು ರಹಸ್ಯವನ್ನು ಹೇಳುವೆನು ಕೇಳು. ಅದನ್ನು ನೀನೂ ಬಲ್ಲೆ. ಆದರೆ, ಭೀತಿಯಿಂದ ಚದುರಿರುವ ಈ ನಿನ್ನ ಸ್ಥಿತಿಯಲ್ಲಿ ನೀನು ಮರೆತಿದ್ದೀಯೆ. ದೇವತೆಗಳು ಧರ್ಮಪರರು. ನಿನ್ನ ಧರ್ಮಕ್ಕೆ ಅನುಗುಣವಾಗಿ ನೀನು ಇದ್ದರೆ, ನಿನ್ನ ಕಾರ್ಯದಿಂದ ನಿನಗೆ ಪುಣ್ಯವು ಬಂದು, ನಿನ್ನ ತೇಜಸ್ಸು ವಿವೃದ್ಧವಾಗುವುದು. ನಾಳೆ ವೃತ್ರನು ನಿನ್ನನ್ನು ಗೆದ್ದು ಇಂದ್ರನಾದನೆಂದುಕೊ. ಆಗ ಅವನು ದಿನ ದಿನವು ಅಧಿಕಾರವನ್ನು ಭೋಗಿಸಬೇಕು. ಎಂದರೆ, ತನ್ನ ಪುಣ್ಯವೆಂಬ ಪಣವನ್ನು ಕೊಟ್ಟು ಅದನ್ನು ಕೊಂಡುಕೊಳ್ಳಬೇಕು. ಅದರಿಂದ ಅವನ ಇಂದ್ರತ್ವವು ಸಾಂತವಲ್ಲದೆ ಅನಂತವಲ್ಲ.”

“ಹಾಗಾದರೆ, ಅವನು ಅಮರನಲ್ಲವೆ ?”

“ಅದು ನನಗೆ ತಿಳಿಯದು. ಆದರೆ ಅನುಮಾನಬಲದಿಂದ, ಅವನು ನಿನ್ನಂತೆ ಅಮರನಲ್ಲ ಎಂದು ನಾನು ಭಾವಿಸುತ್ತೇನೆ. ಏನೇ ಆಗಲಿ, ನೀನಂತೂ ಅವನಿಗೆ ಇಂದ್ರತ್ವವನ್ನು ಬಿಟ್ಟುಕೊಡಲೇಬೇಕು. ಅವನಷ್ಟು ದಿನ ಇಂದ್ರನಾಗಿಯೇ ತೀರಬೇಕು.”

“ಹಾಗಾದರೆ ಯುದ್ಧವಿಲ್ಲದೆ ಇಂದ್ರತ್ವವನ್ನು ಬಿಟ್ಟುಕೊಡಬೇಕೆ ?”

“ಅದು ಕೂಡದು. ಆಗ ನೀನು ಹೇಡಿಯಂತೆ ನಡೆದಂತಾಗುವುದು. ಯುದ್ಧಕ್ಕೆ ಸಿದ್ಧನಾಗಿರು. ಇನ್ನು ಸ್ವಲ್ಪಕಾಲದಲ್ಲಿಯೇ ಯುದ್ಧವೂ ಆಗುವಂತೆ ತೋರುವುದು. ಆದರೆ ಒಂದು ಕೆಲಸ ಮಾಡು. ಯುದ್ಧಕ್ಕೆ ಮೊದಲೋ, ಯುದ್ಧವಾದ ಮೇಲೋ, ಸಾಧ್ಯವಾದಾಗ ಶ್ರೀಮಹಾವಿಷ್ಣುವನ್ನು ನೋಡು. ಲೋಕಸ್ಥಿತಿ ಕಾರಣನಾತನು. ಆತನು ಏನು ಮಾಡಬೇಕು ಎಂಬುದನ್ನು ಹೇಳುವನು.”

“ಹಾಗೆಯೇ ಆಗಲಿ, ಗುರುದೇವ. ತಾವು ಹೇಳಿದಂತೆ, ಅನಿಷ್ಟ ಪರಿಹಾರವನ್ನು ಕುರಿತು ಚಿಂತಿಸುತ್ತ ಇರುವುದಕ್ಕೆ ಪ್ರತಿಯಾಗಿ, ಅದು ಯಾವ ರೂಪದಲ್ಲಿ ಬಂದರೂ ಸರಿಯೆಂದು ಸಿದ್ಧನಾಗಿರುವೆನು. ಆದರೆ ಅಪಾಯವನ್ನು ಎದುರಿಸುವ ಉಪಾಯವನ್ನು ಸಿದ್ಧಮಾಡಿಕೊಳ್ಳದಿರುವುದು ಸರಿಯಲ್ಲ. ಅದರಿಂದ ತಾವೂ ದಯಮಾಡಿಸಿದರೆ, ಒಮ್ಮೆ ಮಹಾವಿಷ್ಣುವಿನ ಬಳಿಗೆ ಹೋಗಿಬರೋಣ.”

“ಆಗಬಹುದು”

ಇಂದ್ರನು ದೇವಗುರುವಿಗೆ ನಮಸ್ಕಾರ ಮಾಡಿ ಆತನಪ್ಪಣೆ ಪಡೆದು, ಹೊರಟು ಹೋದನು.

****

೧೩.ಮಹಾಪೂಜೆ

ಸಂಪಾದಿಸಿ

ಇಂದು ದಧೀಚಿ ಮಹರ್ಷಿಗಳ ಆಶ್ರಮದಲ್ಲಿ ಅವರಿಗೆ, ದೆವತೆಗಳೆಲ್ಲರೂ ಸೇರಿ ಒಂದು ಮಹಾಪೂಜೆಯನ್ನು ಒಪ್ಪಿಸುತ್ತಾರೆ. ದೇವಗುರುಗಳಾದ ಬೃಹಸ್ಪತ್ಯಾಚಾರ್ಯರು, ದೇವರಾಜನಾದ ಇಂದ್ರ, ದೇವಮುಖ್ಯರಾದ ಅಗ್ನಿ, ವಾಯು ಮೊದಲಾದವರು ಎಲ್ಲರೂ ಅಲ್ಲಿ ನೆರೆದಿದ್ದಾರೆ. ಆಶ್ರಮದ ಮರಮರ, ಗಿಡಗಿಡಗಳ ಎಲೆಎಲೆಯ ಮೇಲೂ ಒಬ್ಬೊಬ್ಬ ದೇವತೆಯು ಬಂದು ನೆಲೆಸಿದೆ. ವಿಚಿತ್ರವಾದ ಮಂಟಪವೊಂದು ಸಿದ್ಧವಾಗಿದೆ. ನಾನಾ ವರ್ಣಗಳ ಮಿಂಚುಗಳು, ಮೋಡಗಳು, ಅಲ್ಲಲ್ಲಿ ಇದ್ದು ಈ ಮಂಟಪಕ್ಕೆ ಶೋಭಾವಹವಾಗಿವೆ. ಒಂದು ಮೂಲೆಯಲ್ಲಿ ಅಪ್ಸರೋನರ್ತನವು ನಡೆಯುತ್ತಿದೆ. ಹಿಮ್ಮೇಳದ ಗಂಧರ್ವರ ಮದ್ದಳೆಯೊಡನೆ ಮೋಡಗಳ ಸಣ್ಣ ಗುಡುಗು ಸೇರಿದೆ. ನಂದನದ ಕಲ್ಪವೃಕ್ಷಗಳು ಅಲ್ಲಿನ ಮಹಾವೃಕ್ಷಗಳಲ್ಲಿ ನಿಂತು ಬೇಕಾದವರಿಗೆ ಬೇಕಾದುದನ್ನು ಕೊಡಲು ಸಿದ್ಧವಾಗಿದೆ. ಚಿಂತಾಮಣಿಯು ಬಂದು ಅಲ್ಲಿ ದೊಡ್ಡ ದೊಡ್ಡ ರತ್ನಸ್ತಂಭಗಳಾಗಿ, ಚಿನ್ನದ ತೊಲೆ, ಬೆಳ್ಳಿಯ ಹಲಗೆಗಳಿಂದ ಒಂದು ಮೂಲಮಂಟಪವನ್ನು ರಚಿಸಿದೆ. ಆ ವೈಭವಕ್ಕೆ ತಕ್ಕಂತೆ ಮಹರ್ಷಿಗಳು ಕುಳಿತುಕೊಳ್ಳಲು ವಿಚಿತ್ರ ರತ್ನಾಸನವೊಂದು ಸಿದ್ಧವಾಗಿದೆ. ದೇವಗುರುಗಳಿಗೂ ದೇವರಾಜನಿಗೂ ದೇವಮುಖ್ಯರಿಗೂ ಸೊಗಸಾದ ಆಸನಗಳು ಪ್ರತ್ಯೇಕ ಪ್ರತ್ಯೇಕವಾಗಿ ಏರ್ಪಟ್ಟಿವೆ.

ಸಕಾಲವಾಗುತ್ತಲೂ ದಧೀಚಿಮಹರ್ಷಿಯು ದಯಮಾಡಿಸಿದನು. ದೇವಗುರುವು ಮಂತ್ರಗಳನ್ನು ಹೇಳುತ್ತಿರಲು, ದೇವರಾಜನು ಅವರಿಗೆ ದಿವ್ಯಗಂಗೋದಕದಿಂದ ಅಭಿಷೇಕವನ್ನು ಮಾಡಿದನು. ಕಾಮಧೇನುವಿನ ಹಾಲು, ಆ ಹಾಲಿನಿಂದಾದ ಮೊಸರು ತುಪ್ಪಗಳಿಂದ, ಕಲ್ಪವೃಕ್ಷವು ಒದಗಿಸಿದ ಮಧುಶರ್ಖರಗಳಿಂದ ಅಭಿಷೇಕವಾಯಿತು. ನಂದನವನದ ಹೂಮಾಲೆಗಳನ್ನು, ದಿವ್ಯಗಂಧಾನುಲೇಪನವನ್ನು ಒಪ್ಪಿಸಿದರು. ಅಮೃತ ಖಂಡವನ್ನು ತಂದು ನಿವೇದಿಸಿದರು. ಕರ್ಪೂರದ ಆರತಿಯನ್ನು ಎತ್ತಿದರು. “ಬ್ರಹ್ಮಜ್ಞನಿಗೆ ಜಯವಾಗಲಿ. ಪರಿಪೂರ್ಣಸ್ವರೂಪನಿಗೆ ಜಯವಾಗಲಿ, ಪೂರ್ಣಕಾಮನಾದ ಈ ಆತ್ಮಸ್ವರೂಪನಿಗೆ ಒಪ್ಪಿಸಿದ ಈ ನಮ್ಮ ಪೂಜೆಯು ಸಫಲವಾಗಲಿ” ಎಂದು ಪ್ರಾರ್ಥನೆಯನ್ನು ಸಲ್ಲಿಸಿ ಪೂಜೆಯನ್ನು ಮುಗಿಸಿದರು.

ದಧೀಚಿಯು ದೇಹಭಾವವನ್ನು ತ್ಯಜಿಸಿ ಕೇವಲ ಬ್ರಹ್ಮಸ್ವರೂಪನಾಗಿ ಕುಳಿತು ಪೂಜೆಯನ್ನೆಲ್ಲ ಸ್ವೀಕಾರಮಾಡಿದನು. ಪೂಜಾಂತ್ಯದಲ್ಲಿ ಬಹಿರ್ಮುಖವಾಗಿ “ದೇವತೆಗಳು ಸಲ್ಲಿಸಿದ ಈ ಪೂಜೆಯಿಂದ ಅವರು ಸಕಾಮರಾಗಲಿ, ಏನು ವರಬೇಕೋ ಕೇಳಿ” ಎಂದನು. ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ, ಅಮೃತಗಳನ್ನು ಪಡೆದಿರುವ ದೇವತೆಗಳು ಬ್ರಹ್ಮಜ್ಞನಾದ ದಧೀಚಿಯ ಮುಂದೆ ವರಗಳನ್ನು ಕೇಳಿಕೊಳ್ಳುತ್ತಿದ್ದಾರೆ. ಆತನು, ದೇಹದಲ್ಲಿರುವ ಜಡಭೂತಗಳ ತನ್ಮಾತ್ರೆಗಳು ಪರಿಪೂರ್ಣತೆಯನ್ನು ಕಕ್ಕುತ್ತಲಿರಲು, ಆಕಾಶದಲ್ಲಿರುವ ಶಬ್ದವೆಲ್ಲ ಪಿಂಡೀಕೃತವಾಗಿ ಸಂಚಲಿತವಾದಂತೆ, ದೇಹ ದೇಹದಲ್ಲಿಯೂ ಪ್ರತ್ಯೇಕ ಪ್ರತ್ಯೇಕವಾಗಿ ನಿಂತಿದ್ದರೂ, ವಿಶ್ವವನ್ನೆಲ್ಲ ವ್ಯಾಪಿಸಿರುವ ಪ್ರಾಣವೇ ಮೂರ್ತಿವೆತ್ತು ಬಂದು, ತನ್ನಿಂದ ಬಂದಿರುವ ದೇವತೆಗಳನ್ನು ಅನುಗ್ರಹಿಸುವಂತೆ, ವರವನ್ನು ಕೊಡುತ್ತಿದ್ದಾನೆ. ವಿಶ್ವವ್ಯಾಪಕಗಳಾಗಿ, ಬ್ರಹ್ಮಾಂಡವನ್ನೆಲ್ಲ ರಚಿಸಿರುವ ಪಂಚಭೂತಗಳು ತೃಪ್ತಗಳಾಗಿ, “ಶ್ರುತಿ ಭಗವತಿಯು ನುಡಿದಿದ್ದಳು. ‘ಬ್ರಹ್ಮಸ್ವರೂಪನಾದವನಿಗೆ ದೇವತೆಗಳೆಲ್ಲರೂ ಬಲಿಯನ್ನು ಒಪ್ಪಿಸುವರು’ ಎಂದು. ಅದನ್ನಿಂದು ಕಂಡೆವು. ದೇಹಾಭಿಮಾನ ಶೂನ್ಯವಾಗಿ ಪರಿಪೂರ್ಣ ವಸ್ತುವಿನಲ್ಲಿ ಅಪ್ಯಯವನ್ನು ಪಡೆದ ಮಹಾನುಭಾವನಿಂದ ದೇವತೆಗಳು ವರವನ್ನು ಪಡೆಯುವರೆಂದು ಇಂದು ಕಂಡೆವು. ಈ ಮಹಾತ್ಮನಿಗೆ ಪೂಜೆಯನ್ನು ಒಪ್ಪಿಸಿ, ಬ್ರಹ್ಮಾಂಡವನ್ನೇ ತೃಪ್ತಿಪಡಿಸಿದ ದೇವತೆಗಳಿಗೆ ಇಚ್ಛಾಪೂರ್ಣವಾಗದಿರುವುದೆಂತು ?” ಎಂಬ ಸಂತೋಷದಿಂದ ನರ್ತಿಸಿದುವು.

ಬ್ರಹ್ಮಾಂಡದಲ್ಲಿರುವ ಪಿಂಡಾಂಡವೊಂದೊಂದನ್ನೂ ಸಂಘಟಿಸುವ ಪಂಚ ಮಹಾಭೂತಗಳು ತಮ್ಮ ಸ್ಥೂಲಸೂಕ್ಷ್ಮಕಾರಣಾವಸ್ಥೆಗಳಲ್ಲಿಯೂ ತೃಪ್ತವಾದುವು ಎಂದ ಮೇಲೆ ಬ್ರಹ್ಮಾಂಡದಲ್ಲಿರುವ ಸ್ಥಾವರ ಜಂಗಮಗಳೆಲ್ಲವೂ ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯಜ ಎಂಬ ಪಂಚವಿಧ ಪ್ರಾಣಿಗಳೂ ತೃಪ್ತಿಯನ್ನು ಪಟ್ಟವೆಂದು ಬೇರೆಯಾಗಿ ಹೇಳಬೇಕಾದುದೇನು?

ಆ ಬ್ರಹ್ಮರ್ಷಿಯ ಮುಂದೆ ದೇವರಾಜನು ಕೈ ಮುಗಿದು ನಿಂತಿದ್ದಾನೆ. ದೇವಗುರುವಿನ ಅಪ್ಪಣೆಯಿಂದ ನುಡಿಯುತ್ತಿದ್ದಾನೆ. “ದೇವ, ತಮ್ಮ ಮುಂದೆ ಕ್ಷುದ್ರರೆಂದು ಹೇಳಿಕೊಳ್ಳಲೂ ಆಗದ ಕ್ಷುದ್ರರು ನಾವು. ತಾವು ಈ ಬ್ರಹ್ಮಾಂಡವನ್ನು ತನ್ನೊಳಗಿರುವ ಅವ್ಯಕ್ತಕ್ಕಿಂತಲೂ ಆಚಿನದನ್ನು ಬಲ್ಲವರು. ಈ ಬ್ರಹ್ಮಾಂಡ ನಾಯಕನಾದ ಮಹಾವಿಷ್ಣುವಿನ ಅಪ್ಪಣೆಯೆಂದು ತಮ್ಮ ಸನ್ನಿಧಾನಕ್ಕೆ ಬಂದು ಬೇಡಿಕೊಳ್ಳುತ್ತಿರುವೆವು. ತಮ್ಮ ಮೈಯೆಲ್ಲವೂ ತಪಸ್ಸಿನಿಂದ ವಜ್ರವಾಗಿರುವುದು. ರಕ್ತಮಾಂಸಾದಿ ಸಪ್ತಧಾತುಗಳನ್ನು ತಮ್ಮ ತಪೋಬಲದಿಂದ ವಜ್ರಗಳನ್ನಾಗಿ ಮಾಡಿರುವವರು ತಾವು. ದೇವಗಣ ಸಂರಕ್ಷಣಾರ್ಥವಾಗಿ, ಬ್ರಹ್ಮಾಂಡದ ಪ್ರಯೋಜನಕ್ಕಾಗಿ ವರವನ್ನು ಕೊಡಬೇಕು.”

ಬ್ರಹ್ಮರ್ಷಿಯು ನಕ್ಕು ಕೇಳಿದನು : “ವರವು ಬೇಕು. ಕೊಟ್ಟಿದ್ದೇನೆ. ಈಗ ಬಾಯಿಬಿಟ್ಟು ಹೇಳು.”

ಇಂದ್ರನು ನಡುಗುತ್ತಾ ಹೇಳಿದನು : “ದೇವ, ತಮ್ಮ ಬೆನ್ನು ಮೂಳೆಯು ಬೇಕು.”

“ಈ ದೇಹದಲ್ಲಿ ಇನ್ನೂ ಪ್ರಾಣವಿದ್ದಾಗಲೇ ಬೇಕೋ ? ಅಥವ ಅನಂತರ ತೆಗೆದುಕೊಳ್ಳುವಿರೋ ?”

“ದೇವಾ, ತಾವು ಈ ದೇಹವನ್ನು ಬಿಟ್ಟರೆ ಅಸ್ಥಿಯು ಹತತೇಜವಾಗುವುದು. ಅದು ಆಗ ವಜ್ರವಾಗುವುದಿಲ್ಲ. ನಾವು ತಮ್ಮ ಬೆನ್ನುಮೂಳೆಯಿಂದ ವಜ್ರವನ್ನು ಮಾಡಬೇಕೆಂದಿರುವೆವು. ವಜ್ರವು ಸರ್ವಶಸ್ತ್ರಗಳಲ್ಲೂ ಉತ್ತಮವಾಗುವುದು. ಅದರಿಂದ ಅನುಗ್ರಹ ಮಾಡಿ ತಾವು ಸಜೀವರಾಗಿರುವಾಗಲೇ ಆಸ್ಥಿಯನ್ನು ದಾನ ಮಾಡಬೇಕು.”

ದಧೀಚಿಯು ನಕ್ಕನು. ಎಲ್ಲರೂ ತಾನು ತಾನು ಎಂದುಕೊಳ್ಳುವ ದೇಹದ ಮೇಲೆ ಅಭಿಮಾನವಿಲ್ಲದ ಆತನಿಗೆ ದೇವರಾಜನ ಪ್ರಾರ್ಥನೆಯಲ್ಲಿ ಅಂತಹ ವಿಶೇಷವೇನೂ ಕಾಣಲಿಲ್ಲ. ``ಆತನು ತನ್ನ ಬೆನ್ನುಮೂಳೆಯನ್ನು ಕೇಳುತ್ತಿದ್ದಾನೆ. ಅದನ್ನು ಕೊಟ್ಟುಬಿಟ್ಟರೆ ದೇಹವುಳಿಯುವಂತಿಲ್ಲ ; ಅಥವಾ ದೇಹವುಳಿಯಬೇಕೆಂದರೆ, ಇನ್ನೊಂದು ಬೆನ್ನುಮೂಳೆಯನ್ನು ಬೆಳೆಸಬೇಕು. ಆತನಿಗೆ ಈ ಎರಡನೆಯ ಅಭಿಪ್ರಾಯವು ಹಿಡಯಲಿಲ್ಲ. ಯಾವೊತ್ತಾದರೂ ಎಸೆಯಬೇಕಾದ ದೇಹವಿದು. ಇವೊತ್ತೇ ಹೋದರೆ ಏನು ಮಹಾ ! ಈಗ ಈ ದೇಹವನ್ನು ದೇವಕಾರ್ಯಾರ್ಥವಾಗಿ ಬಿಡುವುದಕ್ಕಿಂತ ಇನ್ನೇನು ಬೇಕು ?” ಎಂದುಕೊಂಡನು. ದೇಹಾಭಿಮಾನಿಯಾದ ಕ್ಷರಪುರುಷನನ್ನು ಕರೆದು, “ಇದೋ, ಈ ದೇವರಾಜನ ಪ್ರಾರ್ಥನೆಯನ್ನು ಸಲ್ಲಿಸು. ಅದುವರೆಗೆ ನಾನು ಇಲ್ಲಿರುವೆನು” ಎಂದನು. ಕ್ಷರಪುರುಷನು “ದೇವ, ನನ್ನದೊಂದು ಪ್ರಾರ್ಥನೆಯುಂಟು. ಸರ್ವದೇವತಾತ್ಮಕವಾದ ಕಾಮಧೇನವು ಬೆನ್ನನ್ನು ನೆಕ್ಕಿ ಮೂಳೆಯನ್ನು ಬಿಡಿಸಲಿ. ಈ ನನ್ನ ಪ್ರಾರ್ಥನೆಯನ್ನು ದೇವರಾಜನು ನಡೆಸಿಕೊಡಲಿ” ಎಂದು ಕೈಮುಗಿದನು. ದಧೀಚಿಯು ಅದಕ್ಕೂ ನಕ್ಕೂ “ಅಂತೂ ಇಂತೂ ಮುಗಿಯಿತೆಂದು ಕಂತೆ ಒಗೆಯಬೇಕು. ಹಾಗೆ ಬಿದ್ದರೆ ಹೆಚ್ಚೇನು ? ಹೀಗೆ ಬಿದ್ದರೆ ಕಡಿಮೆಯೇನು ? ಆಗಲಿ, ನಿನ್ನ ಕೋರಿಕೆಯೂ ನೆರವೇರಲಿ” ಎಂದು ಇಂದ್ರನನ್ನು ಕರೆದು ಕ್ಷರಪುರುಷನ ಇಷ್ಟವನ್ನು ತಿಳುಹಿದನು. ಇಂದ್ರನು ಆಗಲೆಂದು ಕಾಮಧೇನುವನ್ನು ಕರೆದು ಹೇಳಿದನು. ಕಾಮಧೇನವು “ನನಗೆ ಅದರಿಂದ ಕೆಟ್ಟ ಹೆಸರು ಬರದಿರಲಿ. ನಾನು ಆ ಕಾರ್ಯವನ್ನು ಏಕಾಂತದಲ್ಲಿ ಮಾಡಲು ಅಪ್ಪಣೆಯಾಗಬೇಕು” ಎಂದಳು. ಇಂದ್ರನು ಆಗಲೆಂದನು. ಇಂದ್ರನು ಕಾಮಧೇನುವಿನ ರಕ್ಷಣೆಗೂ, ಆ ಬೆನ್ನುಮೂಳೆಯನ್ನು ತೆಗೆದುಕೊಂಡು ಹೋಗಿ, ವಿಶ್ವಕರ್ಮನಿಗೆ ಕೊಟ್ಟು ಅದನ್ನು ವಿಶೇಷ ಅಯುಧವನ್ನಾಗಿ ಮಾಡಲೂ ತಕ್ಕ ಪರಿವಾರವನ್ನು ಅಲ್ಲಿ ಗೊತ್ತುಮಾಡಿ ತಾನು ತನ್ನವರನ್ನು ಕರೆದುಕೊಂಡು ಬ್ರಹ್ಮರ್ಷಿಯ ಅಪ್ಪಣೆ ಪಡೆದು ಹೊರಟುಹೋದನು.

ದಧೀಚಿಯು ತನ್ನ ಧ್ಯಾನಾನಂದದಲ್ಲಿ ತಾನಿದ್ದಾನೆ. ಆತನ ಆನಂದವು ಘನವಾಗಿ ಜ್ಞಾನಸ್ವರೂಪವಾಗಿ ತಾನೇತಾನಾಗಿದೆ. ಆಗ, ತ್ವಷ್ಟೃವು ಅಲ್ಲಿಗೆ ಬಂದನು. ದಧೀಚಿಯು ನಾಮರೂಪಾತ್ಮಕ ಪ್ರಪಂಚವನ್ನು ಬಿಟ್ಟು ಆನಂದಮಯ ಕೋಶವನ್ನು ದಾಟಿ, ಆರೂಢನಾಗಿ ಸಮುದ್ರನಾಗಿ ಸಮುದ್ರದ ಜಲದಲ್ಲಿ ಬೆರೆತುಹೋಗುವ ನದೀಜಲದಂತೆ ಅಷ್ಟಷ್ಟಾಗಿ ಕರಗುತ್ತಿದ್ದಾನೆ. ಆಕಾಶದಲ್ಲಿ ತುಂಬಿರುವ ಪ್ರಣವದಲ್ಲಿ ತನ್ನ ಜ್ಞಾತೃಭಾವವನ್ನು ಬಿಟ್ಟು ಸ್ವಭಾವರಹಿತವಾದ ಭವದಲ್ಲಿ ಲೀನವಾಗುವ ಪ್ರಯತ್ನದಲ್ಲಿದ್ದಾನೆ. ಒಟ್ಟಿನಲ್ಲಿ ಆತನದು ಬೇಲೀ ಹಾರುವ ಪ್ರಯತ್ನ. ದೇಹತತ್ವವನ್ನು ದಾಟಿದ್ದಾನೆ. ಮನಸ್ಸತ್ವವನ್ನು ದಾಟಿದ್ದಾನೆ. ಬುದ್ಧಿಯಲ್ಲಿರುವ ಅಹಂಕಾರ ತತ್ವದಿಂದ ಪರಾಙ್ಮುಖನಾಗುತ್ತಿದ್ದಾನೆ. ಇನ್ನೂ ಪ್ರತ್ಯಭಿಜ್ಞೆಯು ಅಳಿದಿಲ್ಲ. ಆಗ ತ್ವಷ್ಟೃವು ‘ದಧೀಚಿ’ ಎಂದು ಕೂಗುತ್ತ ಒಳಗೆ ಬಂದನು. ಆತನ ಸನ್ನಿಧಾನವೂ, ಆತನು ನಾಮನಿರ್ದೇಶ ಪೂರ್ವವಾಗಿ ಕೂಗಿದುದೂ ಸೇರಿ, ದಧೀಚಿಯನ್ನು ಹಿಂದಕ್ಕೆ ಕರೆಯಿತು. ಮತ್ತೆ ಜ್ಞಾತೃಭಾವವು ಪ್ರಬಲವಾಯಿತು. ಅಲ್ಲಿಂದ ಶುದ್ಧಾಕಾಶ ಮಂಡಲದಿಂದ ಕ್ರಮಕ್ರಮವಾಗಿ ಪಂಚಭೂತಗಳನ್ನೆಲ್ಲಾ ಪ್ರವೇಶಿಸಿ, ಸಂಘಾತ ರೂಪಕವಾದ ಕ್ಷೇತ್ರವನ್ನು ಪ್ರವೇಶಿಸಿ, ಮತ್ತೆ ಎಚ್ಚರಗೊಂಡು, “ಯಾರು ?” ಎಂದನು. ತ್ವಷ್ಟೃವು ಗೋತ್ರಸೂತ್ರಾತ್ಮಕವಾಗಿ ಪ್ರವರವನ್ನು ಹೇಳಿ ಅಭಿವಂದಿಸಿದನು.

ದಧೀಚಿಯು ಮತ್ತೆ ಮಿತಪ್ರಜ್ಞನಾಗಿ ಪಂಚಭೂತಸಂಘಾತವಾದ ಕ್ಷರ ಪುರುಷನ ಕ್ಷೇತ್ರಕ್ಕೆ ಪ್ರವೇಶಿಸಬೇಕಾಗಿ ಬಂತೆಂದು ಆಶ್ಚರ್ಯಪಡುತ್ತ ಅವೆಲ್ಲವೂ ಮಾಯಾಶಖಲವಾಗಿದ್ದರೂ, ಅಗ್ನಿಸಂಪರ್ಕದಿಂದ ಬಿಸಿಯನ್ನು ಕೆಂಪನ್ನು ಪಡೆದ ಲೋಹಪಿಂಡದಂತೆ, ಚೇತನಚೈತನ್ಯನಾದ ತನ್ನ ಸಂಪರ್ಕದಿಂದ ತಾವೂ ಚೇತನವಾಗಿರುವ ಆಶ್ಚರ್ಯಕರವಾದ ದೃಶ್ಯದಿಂದ ಸಂತೋಷಪಡುತ್ತ ಆತನನ್ನು ಮಾತನಾಡಿಸಿದನು : “ಏನು ತ್ವಷ್ಟೃ ? ಇಲ್ಲಿಯವರೆಗೆ ಬಂದೆಯಲ್ಲ ?” ತ್ವಷ್ಟೃವು ಹೇಳಿದನು “ಇಂದ್ರನಿಲ್ಲಿಗೆ ಬಂದಿದ್ದನಂತೆ ! ನೀನು ಅವನಿಗೆ ವಜ್ರಸಾರವಾದ ನಿನ್ನ ಬೆನ್ನಮೂಳೆಯನ್ನು ಕೊಟ್ಟೆಯಂತೆ!

“ಹೌದು.”

“ಅದರಿಂದಾಗುವ ಅನರ್ಥವನ್ನು ಬಲ್ಲೆಯಾ ?”

“ನನಗೆ ಅರ್ಥವೂ ಅನರ್ಥವೇ! ಅನರ್ಥವೂ ಅರ್ಥವೇ! ಈಗ ಬಹುಕಷ್ಟದಿಂದ ನಾನು ನೀನು ಎಂಬ ಭೇದವನ್ನು ಕಲ್ಪಿಸಿಕೊಂಡು ಮಾತನಾಡುವ ಅವಸ್ಥೆಯಲ್ಲಿ ಇದ್ದೇನೆ. ನಿನಗೇನಾಗಬೇಕು ಹೇಳು?”

ತ್ವಷ್ಟೃವು ಆ ಮಾತು ಕೇಳಿ ದಿಗಿಲಿನಿಂದ ಹೇಳಿದನು : “ದೇವ, ನಾನು ಈ ಇಂದ್ರನನ್ನು ಕೊಲ್ಲಲು ಒಂದು ಕೃತ್ಯ ಮಾಡಿದ್ದೇನೆ. ಅದನ್ನು ಈಗ ಯಾವ ಅಸ್ತ್ರಶಸ್ತ್ರಗಳಿಂದಲೂ ಹೊಡೆಯಲಾಗುವುದಿಲ್ಲವೆಂದು ಈ ಕಳ್ಳನು ನಿನ್ನ ಬಳಿಗೆ ಬಂದು, ತಪಃಪವಿತ್ರವಾದ ನಿನ್ನ ಶರೀರದಿಂದ ಮೂಳೆಯನ್ನು ಕೇಳಿದ್ದಾನೆ. ಅದರಿಂದ ಅವನು ಅದನ್ನು ಹೊಡೆದರೆ ನನ್ನ ಕಷ್ಟವೆಲ್ಲ ವ್ಯರ್ಥವಾಗುವುದು.”

ದಧೀಚಿಗೆ ಆ ಮಾತು ಹಿಡಿಸಲಿಲ್ಲ “ತ್ವಷ್ಟೃ. ನೀನು ಬ್ರಹ್ಮನಾಗಿರುವುದು ಲೋಕವನ್ನು ಸಂತಾನದಿಂದ ತುಂಬುವುದಕ್ಕೆ. ನಿನ್ನ ಕೆಲಸದಲ್ಲಿ ನೀನಿರು. ಈ ಕೃತ್ಯ ಮೊದಲಾದವುಗಳನ್ನು ಮಾಡಿ, ಇರುವ ಸ್ಥಿತಿಯನ್ನು ಕೆಡಿಸಬೇಡ. ಈ ದ್ವೇಷಭಾವವನ್ನು ಇಲ್ಲಿಗೇ ಬಿಡು. ಇಷ್ಟು ದಿವಸ ಈ ಭಾವದಲ್ಲಿದ್ದುದು ಸಾಕು” ಎಂದನು.

ಮಾತು ಮೃದುವಾಗಿ ಆಡುತ್ತಿದ್ದರೂ ಆ ನುಡಿಗಳಲ್ಲಿ ಏನೋ ವಜ್ರಸಾರವಿದ್ದಂತೆ ತ್ವಷ್ಟೃವಿಗೆ ಹಿಡಿದು, ಹೃದಯದಲ್ಲಿ ತುಂಬಿದ್ದ ಕರಾಳವಾದ ಇಂದ್ರದ್ವೇಷವೆಂಬ ಕತ್ತಲೆಯನ್ನು ತೊಳೆದು ಶುದ್ಧಮಾಡಿದಂತಾಯಿತು. ಇಂದ್ರನಿಗೆ ಸಹಾಯ ಮಾಡಕೂಡದು ಎಂದು ಕೇಳಿಕೊಳ್ಳಲು ಬಂದಿದ್ದವನು, ಈಗ ತದ್ವಿರುದ್ಧ ಭಾವವನ್ನು ಹಿಡಿದಂತಾಗಿ, “ನಿಜ, ದಧೀಚಿಯು ಹೇಳಿದುದು ಸರಿ. ಸ್ಥಿತಿರಕ್ಷೆಗಳಿಗೆ ನಿಯಮಿತನಾಗಿರುವವನು ತನ್ನ ಅಧಿಕಾರವನ್ನು ಉಪಯೋಗಿಸಿದರೆ ನಾನೇಕೆ ಅಡ್ಡವಾಗಬೇಕು?” ಎನ್ನಿಸಿತು. ತಾನು ಕೃತ್ಯವನ್ನು ಸೃಷ್ಟಿಸಿದುದು ಒಂದು ಅಪರಾಧವಾದರೆ ಅದು ತನ್ನ ಕಾರ್ಯವನ್ನು ಮಾಡಲೇಬೇಕೆಂದು ಹಟ ತೊಡುವುದು ಇನ್ನೂ ಮಹತ್ತರವಾದ ಅಪರಾಧವೆನಿಸಿ, ಕೃತ್ಯವು ಗೆದ್ದರೆ ಗೆಲ್ಲಲಿ, ಸೋತರೆ ಸೋಲಲಿ, ಅದರ ವಿಚಾರವಾಗಿ ಅಭಿಮಾನ ಪಡುವುದು ಹೆಡ್ಡತನ ಎನ್ನಿಸಿತು. ಎದ್ದು “ಬ್ರಹ್ಮಜ್ಞನ ದರ್ಶನದಿಂದ ನನಗೆ ಚಿತ್ತಶುದ್ಧಿಯಾಯಿತು. ಇನ್ನು ಮೇಲೆ ಇಂತಹ ದುಷ್ಕೃತ್ಯಗಳಿಗೆ ಮನಸ್ಸು ಹೋಗದಿರಲಿ” ಎಂದು ಪ್ರಾರ್ಥನೆ ಮಾಡಿ ಆತನಪ್ಪಣೆಯನ್ನು ಪಡೆದು ಕ್ರೋಧದುಃಖಗಳಿಂದ ಸಂತಪ್ತವಾಗಿ ಬಂದಿದ್ದವನು ಆನಂದದಿಂದ ಸಂತೃಪ್ತನಾಗಿ ಹೊರಟು ಹೋದನು.

ಮತ್ತೆ ದಧೀಚಿಯು ಮುಂಚಿನಂತೆ ಚತುರ್ಭೂತಗಳನ್ನು ಒಂದೊಂದಾಗಿ ದಾಟಿ ಆಕಾಶಕ್ಕೆ ಬಂದು ಅದರ ವಿಲಯನ ಗತಿಯನ್ನು ದಾಟಿ, ಅಲ್ಲಿ ಜ್ಞಾತೃ ಭಾವವನ್ನು ಬಿಟ್ಟು ಬ್ರಹ್ಮಾಂಡಗತಿಯನ್ನು ಮೀರಿದನು. ಇತ್ತ ಕ್ಷರಪುರುಷನು ಕಾಮಧೇನುವಿಗೆ ಆಜ್ಞೆಯನ್ನು ಕೊಟ್ಟನು. ಆಕೆಯು ನೆಕ್ಕಿ ನೆಕ್ಕಿ ಬೆನ್ನುಮೂಳೆಯನ್ನು ಬಿಡಿಸಿದಳು. ದೇವರಾಜನ ಕಡೆಯವರು ಆ ಮೂಳೆಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿ ವಿಶ್ವಕರ್ಮನಿಗೆ ಒಪ್ಪಿಸಿದರು. ಆತನು ಅದು ಒಣಗುವುದರೊಳಗೆ ಅದನ್ನು ಕಡೆದು, ಅಸ್ತ್ರಶಸ್ತ್ರರಾಜನಾದ ಆಯುಧವನ್ನು ಸಿದ್ಧಮಾಡಿ ಅದಕ್ಕೆ ವಜ್ರವೆಂದು ಹೆಸರಿಟ್ಟನು. ದೇವರಾಜನು ಅದರ ತೇಜಸ್ಸು ನೋಡಿ ಸಂತೋಷಪಟ್ಟು ಅದನ್ನು ಧರಿಸಿ ವಜ್ರಹಸ್ತನೆಂದು ಹೊಗಳಿಸಿಕೊಂಡನು.

* * * *

೧೪.ಸೊತರೂ ಸೋಲಲಿಲ್ಲ

ಸಂಪಾದಿಸಿ

ವೃತ್ರಾಸುರನು ತನ್ನ ಏಕಾಂತಗೃಹದಲ್ಲಿ ಕುಳಿತಿದ್ದಾನೆ. ದಾನವೇಂದ್ರರ ಗೂಢಚಾರರ ಪಡೆಯ ಒಡೆಯನು ಬಂದು ದಧೀಚಿಯಿಂದ ವಜ್ರಾಯುಧವನ್ನು ಇಂದ್ರನು ಸಂಪಾದಿಸಿದ ಕಥೆಯನ್ನೆಲ್ಲಾ ಹೇಳಿದ್ದಾನೆ. ದಾನವೇಂದ್ರರು “ಪ್ರಭು, ಹೀಗೇ ಬಿಟ್ಟುಕೊಂಡು ಬಂದರೆ, ದೇವತೆಗಳ ಆಯುಧಭಂಡಾರವು ಬಲವಾಗಿ ಅವರು ಅಜೇಯರಾಗುವರು. ಅದರಿಂದ ಆದಷ್ಟು ಬೇಗ ಮೇಲೆ ಬಿದ್ದು ಅವರನ್ನು ನಿರ್ನಾಮ ಮಡಬೇಕು” ಎಂದು ಹೇಳುತ್ತಿದ್ದಾರೆ. ವೃತ್ರಾಸುರನು ಸುಖಾಸನದಲ್ಲಿ ಕುಳಿತಿದ್ದಾನೆ. “ಈಗ ಆಚಾರ್ಯರು ಬರುವ ಹೊತ್ತಲ್ಲವೆ ?” ಎಂದು ಕೇಳುತ್ತಿದ್ದಾನೆ. ‘ಶುಕ್ರಾಚಾರ್ಯರು ದಯಮಾಡಿಸುತ್ತಿರುವರು’ ಎಂದು ಪ್ರಹರಿಯು ಬಂದು ಅರಿಕೆ ಮಾಡಿದನು. ವೃತ್ರನು ಪರ್ವತದಂತಹ ತನ್ನ ದೇಹವನ್ನು ಸುಲಭವಾಗಿ ಮೇಲಕ್ಕೆತ್ತಿಕೊಂಡು ಎದ್ದು ಆಚಾರ್ಯರಿಗೆ ನಮಸ್ಕಾರ ಮಾಡಿದನು. ಆಗ ಆಚಾರ್ಯರು “ವಿಜಯವಾಗಲಿ” ಎಂದು ಆಶೀರ್ವಾದ ಮಾಡಿ, ಇತರ ದಾನವೇಂದ್ರರ ನಮಸ್ಕಾರಗಳನ್ನು ಕೈಕೊಂಡು ತಮ್ಮ ಉನ್ನತಾಸನದಲ್ಲಿ ಕುಳಿತರು.

ವೃತ್ರಾಸುರನು ಶುಕ್ರನನ್ನು ಕೇಳಿದನು : “ನಾವಿನ್ನು ದೇವವಿಜಯಕ್ಕೆ ಹೊರಡಬಹುದೇ ?”

ಆಚಾರ್ಯನು “ವೃತ್ರೇಂದ್ರ, ಎಂದಿನಂತೆ ದೇವವಿಜಯಕ್ಕೆ ಹೊರಡುವುದು ಯಾವಾಗ ಎಂದು ಕೇಳಲಿಲ್ಲ, ಹೊರಡಬಹುದೇ ಎಂದು ಕೇಳಿದೆ. ಅಲ್ಲಿಗೆ ಹೊರಡಬೇಕೆಂದು ಸಂಕಲ್ಪಿಸಿದಂತೆ ಕಾಣುತ್ತದೆ, ಹೊರಡು” ಎಂದು ನಿಟ್ಟುಸಿರು ಬಿಟ್ಟನು.

“ನಿಟ್ಟುಸಿರೇಕೆ ಆಚಾರ್ಯ ?”

“ಈ ಲಗ್ನದಲ್ಲಿ ಹೊರಟರೆ ನಿನಗೆ ವಿಜಯವಾಗುವುದು. ಶತ್ರುವು ಕರಗತನಾಗುವನು. ಆದರೂ ಕಾಲಾಂತರದಲ್ಲಿ ಅವನೇ ಮೃತ್ಯುವಾಗುವನು. ನಾನು ಕಾಯುತ್ತಿದ್ದುದು ಇನ್ನೊಂದು ಮುಹೂರ್ತ. ಅದರಲ್ಲಿ ಪ್ರಸ್ಥಾನ ಮಾಡಿಹೊರಟರೆ, ಶತ್ರುವು ನಿರ್ನಾಮವಾಗಿ, ಸ್ವರ್ಗಾಧಿಪತ್ಯವು ಈ ಮನ್ವಂತರವು ಕಳೆಯುವವರೆಗೂ ನಿನ್ನದಾಗಿರುತ್ತಿತ್ತು.”

ವೃತ್ರಾಸುರನು ತಲೆದೂಗುತ್ತ ಹೇಳಿದನು, “ಸರಿ. ಆ ಮುಹೂರ್ತದವರೆಗೂ ಕಾಯೋಣ.”

ಶುಕ್ರನು ಪರಮಸಂಕಟದಿಂದ ಹೇಳಿದನು ; “ನೀನು ಸುಮ್ಮನಿದ್ದರೂ ನಿನ್ನ ಪರಿವಾರದವರು ಸುಮ್ಮನಿರುವರೆ ? ಅದರಲ್ಲೂ ಇಂದ್ರನು ವಜ್ರಾಯುಧವನ್ನು ಸಂಪಾದಿಸಿದನೆಂದ ಮೇಲೆ ಸುಮ್ಮನಿರುವುದೆಂತು ? ಪಿತೃದತ್ತವಾದ ನಿನ್ನ ಶಕ್ತಿಯನ್ನು ವಿವರ್ಧಿಸಬೇಕೆಂದು ನಾನು ಮಾಡುತ್ತಿರುವ ಪ್ರಯತ್ನವನ್ನು ಇಂದು ನಿನ್ನ ಸಂಕಲ್ಪವು ಮುರಿಯಿತು. ಈಗ ನೀನು ವಿದೇಹಿಯಾಗಿ ಪಂಚಭೂತಗಳನ್ನೂ ಅಹಂಕಾರವನ್ನೂ ಹಿಡಿಯಬಲ್ಲವನಾದೆ. ಸದೇಹಿಯಾಗಿ ಅವುಗಳನ್ನು ಹಿಡಿದು ಆಡಿಸಬಲ್ಲವನು ಇಂದ್ರನಾಗುವನು. ಆ ಇಂದ್ರಶಕ್ತಿಯನ್ನು ಧರ್ಮದಿಂದಾಗಲಿ, ತಪಸ್ಸಿನಿಂದಾಗಲಿ ಪಡೆಯಬೇಕು. ಅತೀಂದ್ರನಾಗುವ ಶಕ್ತಿಯನ್ನು ನಿನಗೆ ನಿನ್ನ ಪಿತೃವು ಕೊಟ್ಟರೂ ಇಂದ್ರನಾಗುವ ಶಕ್ತಿಯನ್ನು ಕೊಟ್ಟಿರಲಿಲ್ಲ. ನಾನು ಅದನ್ನು ಸಂಪಾದಿಸುವುದಕ್ಕೆ ಪ್ರಯತ್ನಪಟ್ಟು ಮುಕ್ಕಾಲಿನಷ್ಟು ಗೆದ್ದಿದ್ದೆ. ಇಂದು ನೀನು ಚೈತ್ರಯಾತ್ರೆಗೆ ಸಂಕಲ್ಪಮಾಡಿ, ಆ ಪ್ರಯತ್ನವನ್ನು ಪೂರ್ತಿ ಮಾಡಿಬಿಟ್ಟೆ ಹುಂ, ವಿಧಿಯ ಸಂಕಲ್ಪ.”

ವೃತ್ರನಿಗೂ, ದಾನವೇಂದ್ರನಿಗೂ ಅದನ್ನು ಕೇಳಿ ವ್ಯಥೆಯಾಯಿತು. ವೃತ್ರನು, ಪರಾಕ್ರಮಿಗೆ ತಕ್ಕ ರೀತಿಯಲ್ಲಿ ಮತ್ತೆ ಆಚಾರ್ಯರಲ್ಲಿ ವಿಜ್ಞಾಪಿಸಿದನು. “ದೇವ, ತಮ್ಮ ಮಂತ್ರಶಕ್ತಿಯಿಂದ ಆಗಿರುವುದನ್ನು ನಮ್ಮ ಪರಾಕ್ರಮದಿಂದ ಪೂರ್ಣ ಮಾಡಲು ಸಾಧ್ಯವಿಲ್ಲವೆ ?”

ಶುಕ್ರನು ಪ್ರಯತ್ನವು ವಿಫಲವಾಯಿತೆಂದು ತೋರಿಸುವ ಪೆಚ್ಚುನಗೆಯನ್ನು ನಕ್ಕು ಹೇಳಿದನು : “ವೃತ್ರೇಂದ್ರ, ನಾನೂ ನೀನೂ ಈ ದಾನವೇಂದ್ರರೂ ಎಲ್ಲರೂ ಕಾಲದ ಶಿಶುಗಳು ಎಂಬುದನ್ನು ಗಣಿಸದೆ ಮಾತನಾಡುತ್ತಿರುವೆ. ಕಾಲವು ಯಾವುದು, ಅದರ ಪ್ರಭಾವವೇನು ಬಲ್ಲೆಯಾ ? ತ್ರಿಮೂರ್ತಿಗಳೂ ಕಾಲದ ಶಿಶುಗಳು. ಪ್ರಜಾಪತಿಯು ಈ ಬ್ರಹ್ಮಾಂಡಕ್ಕೆ ಅಧಿಪತಿ. ಆತನನ್ನು ಸಂವತ್ಸರವೆಂದು ಪೂಜಿಸುವುದರ ಅರ್ಥವೇನು ಬಲ್ಲೆಯಾ ? ದೇಹದೇಹದಲ್ಲಿಯೂ ಕುಳಿತು, ಶ್ವಾಸರೂಪನಾಗಿ, ಆಯಾ ಪ್ರಾಣಿಯು ಆಯುರ್ದಾಯವನ್ನು ಅಳೆಯುತ್ತಿರುವ ಕಾಲವನ್ನು ನೀನೆಂತು ಮೀರಬಲ್ಲೆ ? ನಾನು ನಿನಗೆ ಹೇಳಿದ್ದುದು ಪ್ರಾಜಾಪತ್ಯವ್ರತ. ಆ ವ್ರತವನ್ನು ನೀನು ಕಾಲ ಪ್ರಚೋದಿತನಾಗಿ ಪೂರ್ಣ ಮಾಡಿ ನೀನು ಪ್ರಜಾಪತಿಯೇ ಆಗಿದ್ದರೆ, ಆಗ ಇಂದ್ರನನ್ನು ಮೂಲೆಗೊತ್ತುವವನಾಗುತ್ತಿದ್ದೆ. ಆ ವ್ರತವು ಪೂರ್ಣವಾಗಲಿಲ್ಲವಾಗಿ, ಈಗ ನೀನು ಇಂದ್ರನನ್ನು ಗೆದ್ದರೂ, ಸಮಯವನ್ನು ಸಾಧಿಸಿ ಇಂದ್ರನು ನಿನ್ನನ್ನು ಗೆಲ್ಲುವನು. ದಾನವರು ಮತ್ತೆ ಸ್ವರ್ಗವನ್ನು ಬಿಟ್ಟು ಪಾತಾಳವನ್ನು ಸೇರಬೇಕಾಗುವುದು.

“ಆಗಲಿ ದೇವ, ನೀವು ಮನಸ್ಸು ಮಾಡಿ ನನಗೆ ಇಂದ್ರತ್ವವನ್ನು ಕೊಡಿಸಿರಿ. ಅದನ್ನು ಕಾಪಾಡಿಕೊಳ್ಳುವ ಯೋಚನೆಯನ್ನು ಆಮೇಲೆ ಮಾಡಲು ತಾವು ಇದ್ದೀರಿ.”

“ಅಲ್ಲೇ ದಾನವರು ಎಡುವುತ್ತಿರುವುದು. ಯೋಗಕ್ಷೇಮಗಳೆರಡನ್ನೂ ಒಂದೇ ಕಾಲದಲ್ಲಿ ಸಾಧಿಸಬೇಕು ಅಸುರೇಂದ್ರ. ನೀರನ್ನು ತಡೆಯುವುದೊಮ್ಮೆ ತಡೆದ ನೀರು ನಿಲ್ಲುವಂತೆ ಮಾಡುವುದೊಮ್ಮೆಯಲ್ಲ. ಎರಡೂ ಒಟ್ಟಿಗೇ ನಡೆಯಬೇಕು. ಚಿಗುರೊಮ್ಮೆ ಒಡೆಯಲಿ. ಆಮೇಲೆ ಹೂವು ಬಿಡಲಿ ಎನ್ನುವುದಾಗುವುದಿಲ್ಲ. ಹೂ ಚಿಗುರೊಡನೆಯೇ ಹುಟ್ಟಿಬಂದರೆ, ಆಗ ಫಲವಾಗುವುದು. ಹುಂ, ಇರಲಿ, ಈಗಲೂ ನೀನು ಸಾವಿರಾರು ವರ್ಷ ಕಾಲ ಇಂದ್ರನಾಗಿರುವೆ. ನಾನು ನಿನಗೆ ವರವನ್ನು ಕೊಡುವೆನು. ನೀನು ಇಂದ್ರನಾಗಿರುವವರೆಗೂ ಇಂದ್ರನು ನಿನ್ನನ್ನು ಓಲೈಸುವಂತಾಗಲಿ. ಆಮೇಲೆ ಇಂದ್ರನನ್ನೂ ಹೆದರಿಸಬಲ್ಲ ಶಕ್ತಿವಂತನಾಗು. ಇನ್ನು ನೀನು ಈ ದಿನವೇ ದೇವಲೋಕದ ಮೇಲೆ ದಾಳಿಯಿಡಬಹುದು. ವಿಜಯಧ್ವಜವನ್ನೂ ಪ್ರಸ್ಥಾನಭೇರಿಯನ್ನೂ ಪೂಜೆಮಾಡಿಸು. ದಾನವಾದಿಗಳೆಲ್ಲ ತಮ್ಮ ತಮ್ಮ ಸೇನೆಯೊಡನೆ ಯಥಾಯೋಗ್ಯವಾಗಿ ವ್ಯೂಹಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಚತುರಂಗಸೇನೆಯೊಡನೆ ಬರಲಿ.”

“ತಾವೂ ನಮ್ಮೊಡನೆ ಬರುವಿರಾ”

ದಾನವಸೇನೆಯು ಹೊರಟ ಮೇಲೆ ನನ್ನ ಜಪ ಹೋಮಾದಿಗಳಿಂದ ಪ್ರಯೋಜನವಿಲ್ಲ. ಎಲ್ಲವೂ ಮುಗಿದಂತಾಯಿತು. ಆದರೂ ಕರ್ಮವು ಸಾಫಲ್ಯವಾಗಿ ಮುಗಿಯಲಿ ಎಂಬ ಭ್ರಾಂತಿಯಿಂದ ಅದನ್ನು ಮುಗಿಸಿ ಬರುವೆನು. ದೇವತೆಗಳೂ ನಿಮ್ಮೊಡನೆ ಹಿಂದಿನಂತೆ ಖಡಾಖಡಿಯಾಗಿ ನಿಂತು ಯುದ್ಧ ಮಾಡುವುದಿಲ್ಲ, ಹಾಗೆಂದು ನೀವು ನಿಮ್ಮ ಪೌರುಷವನ್ನು ತೋರಿಸದಿರಬೇಡಿ. ಯುದ್ಧವೆಲ್ಲವೂ ಮುಗಿದು ಅವರು ಅಮರಾವತಿಯನ್ನು ಬಿಟ್ಟೋಡುವ ವೇಳೆಗೆ ನಾನು ಬರುವೆನು.”

ಈ ಮಾತನ್ನು ಕೇಳಿ ದಾನವೇಂದ್ರರೆಲ್ಲರೂ ಬಹು ಸಂತೋಷಪಟ್ಟುಕೊಂಡರು. ಒಬ್ಬೊಬ್ಬರ ಮನಸ್ಸಿನಲ್ಲಿಯೂ “ಹಿಂದೆ ನಾವು ಗೆದ್ದಾಗ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳನ್ನು ಎಲ್ಲಿಯೋ ಮರೆಮಾಡಿದ್ದರು. ಈ ಸಲ ಹಾಗೆ ಮಾಡದಂತೆ ನೋಡಿಕೊಳ್ಳಬೇಕು” ಎಂದೆನಿಸಿತು. ಎಲ್ಲರಿಗೂ ಭೋಗದಾಸೆ, ಭೋಗದ ಹಂಬಲ, ಭೋಗದ ಚಿಂತೆ. ಅಮರಾವತಿಯನ್ನು ಹಿಡಿಯುವುದರಲ್ಲಿ ಇನ್ನೇನೂ ಉದ್ದೇಶವಿಲ್ಲ. ಎಲ್ಲರೂ ತಮ್ಮ ತಮ್ಮ ಆಸೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಆಗಲೇ ದೇವತೆಗಳು ಅಮರಾವತಿಯನ್ನು ಬಿಟ್ಟು ಓಡಿ ಹೋಗಿರುವಂತೆ, ತಾವು ನಿರಾತಂಕವಾಗಿ ಅಮರಾವತಿಗೆ ಅಧೀಶರಾಗಿರುವಂತೆ ಭಾವನೆ.

ದಾನವಸೇನೆಯು ದೇವಲೋಕದ ಮೇಲೆ ಧಾಳಿಯಿಟ್ಟಿತು. ದೇವೇಂದ್ರನು ಲೋಕಪಾಲಕರನ್ನೆಲ್ಲಾ ಸೇರಿಸಿಕೊಂಡು ರಣಾಂಗಣಕ್ಕೆ ಬಂದಿದ್ದಾನೆ. ಎರಡು ಸೇನೆಗಳಿಗೂ ಚೂಣೀಯುದ್ಧವಾಯಿತು. ದಾನವಸೇನಾಸಮೂಹದ ನಡುವೆ, ಕಿರುಗಿಡಗಳ ನಡುವೆ ನಿಂತಿರುವ ಮಹಾವೃಕ್ಷದಂತೆ, ಮೆರೆಯುತ್ತಿರುವ ವೃತ್ರವನ್ನು ನೋಡಿಯೇ ದೇವತೆಗಳು ಹೆದರಿ, ದೇವೇಂದ್ರನ ಕಡೆಗೆ ನೋಡುತ್ತಾರೆ. ಆತನೂ ಐರಾವತವನ್ನೇರಿದ್ದರೂ, ವೃತ್ರನನ್ನು ಕಂಡು ಭಯಪಡುತ್ತಾನೆ. ತಾನೇರಿರುವ ಐರಾವತದ ನಾಲ್ಕರಷ್ಟಾದರೂ ಇರುವ ಆ ದೇಹವನ್ನು ಕಂಡು ಹೆದರದೆ ಇರುವುದೆಂತು? ಸಾಲಿಗ್ರಾಮಕ್ಕಿಂತ ಕಪ್ಪಾದ ದೇಹ ! ಸೂರ್ಯನ ಪ್ರಕಾಶವು ಪ್ರಮುಖವಾಗಿದ್ದರೂ, ಅಮಾವಾಸ್ಯೆಯ ಕಾರಿರುಳ ಕಪ್ಪೆಲ್ಲವೂ ಒಟ್ಟುಗೂಡಿದಂತೆ ಬಂದಿರುವ ಆ ಮೂರ್ತಿಯ ಉನ್ನತವೂ ವಿಶಾಲವೂ ಆದ ಆ ದೇಹ ಒಂದು ಸಣ್ಣ ಬೆಟ್ಟದಂತಿದೆ. ಅದನ್ನು ಕಂಡು ದೇವತೆಗಳೂ ಅವರ ದೊರೆಯೂ ಹೆದರದಿರುವುದು ತಾನೇ ಹೇಗೆ?

ಅದಕ್ಕೆ ತಕ್ಕಂತೆ ಯುದ್ಧವು ಆರಂಭಿಸುತ್ತಿದ್ದ ಹಾಗೇ, ಅವನೇ ದಾರಿ ಮಾಡಿಕೊಂಡು ಮುಂದೆ ಬಂದನು. ದಾನವರು ಅಡ್ಡಡ್ಡವಾಗಿ ನಾಲ್ಕು ಆನೆಗಳು ಸಂಚರಿಸುವುದಕ್ಕೆ ಬೇಕಾದಷ್ಟು ದಾರಿಯನ್ನು ಮಾಡಿದ್ದಾರೆ. ವೃತ್ರನು, “ಆ ಇಂದ್ರನೆಲ್ಲಿ?” ಇಂದ್ರ ! ಇಂದ್ರನೆಲ್ಲಿ ? ಗುರುವೂ, ಭ್ರಾತೃವೂ, ವೇದಾಧ್ಯಯನ ಸಂಪನ್ನನೂ ಆದ ವಿಶ್ವರೂಪಾಚಾರ್ಯನನ್ನು ಕೊಲೆ ಮಾಡಿದ ಆ ಪಾತಕಿಯೆಲ್ಲಿ?” ಎಂದು ಅಬ್ಬರಿಸುತ್ತಾ ಮುಂದೆ ಬಂದಿದ್ದಾನೆ. ಅವನ ಗರ್ಜನೆಯನ್ನು ಕೇಳಿಯೇ ಲೋಕಪಾಲಕರು ಹೆದರುತ್ತಾರೆ. ಇನ್ನೆಲ್ಲಿ ಅವರು ಎದುರು ಬೀಳುವುದು?

ವೃತ್ರನು ಬರುತ್ತಿದ್ದಾನೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುವು ಎಸೆದ ಚೆಂಡು ಹೋಗುವಂತೆ ಹೋಗುತ್ತಿದ್ದಾನೆ. ಅವನ ಆರ್ಭಟವನ್ನು ಕೇಳಿ ಎಲ್ಲರಂತೆ ಇಂದ್ರನೂ ಹೆದರಿದ್ದಾನೆ. ಐರಾವತದಿಂದ ಧುಮುಕಿ ಓಡಿಹೋಗಲೇ ಎನ್ನಿಸುತ್ತದೆ. ಅವನ ವೀರ ಗರ್ಜನೆಯನ್ನು ಕೇಳಿ ಎದೆಯು ನಡುಗುತ್ತದೆ. ವಿಶ್ವರೂಪಾಚಾರ್ಯನ ತೇಜಸ್ಸೇ ಈ ಘೋರಾಕಾರವನ್ನು ಪಡೆದು ಎದುರು ಬರುವಂತಿದೆ. ಸಾಯುವಾಗ ಅವನು ಮಡಿದ ವಿಕಟಾಟ್ಟಹಾಸವು ಒಂದಕ್ಕೆ ನೂರಾಗಿ ಕಿವಿಗೆ ಬಿದ್ದು ಹೃದಯವನ್ನು ಹೊಕ್ಕು ಹಿಡಿದು ಅಲ್ಲಾಡಿಸುವಂತಿದೆ. ಚಳಿಯು ಹಿಡಿದಂತಾಗಿದೆ. ನಡುಗಿಸುತ್ತಿದ್ದಾನೆ. ಆತನಿರಲಿ, ಆತನ ಐರಾವತವೂ ಒಂದೆರಡು ಹೆಜ್ಜೆ ಹಿಂದಿಡುತ್ತದೆ. ಎತ್ತಿದ್ದ ಸೊಂಡಿಲನ್ನು ಇಳಿಸಿದೆ. ಕಣ್ಣರಳಿಸಿ, ಭೀತಿಯಿಂದ, ಇದಾವ ಭೂತರಾಜನಿವನು ಎದುರು ಬರುತ್ತಿರುವನು ಎಂದು ಕೇಳುವಂತೆ, ಹೆದರಿಕೆಯಿಂದ ಸಣ್ಣದಾಗಿ ಗೊರಗೊರ ದನಿಮಾಡುತ್ತಿದೆ.

ಇಂದ್ರನು ಮತ್ತೆ ಸ್ವಸ್ಥನಾದನು. “ಜಯವೋ ಅಪಜಯವೋ ! ಅಂತೂ ಯುದ್ಧ ಮಾಡಬೇಕು. ನಾನೇ ಅಂಜಿದರೆ, ಈ ಭೂತದೊಡನೆ ಹೋರಾಡುವವರು ಯಾರು ?” ಎಂದು ತನ್ನ ಹೊಸ ಆಯುಧವಾದ ವಜ್ರವನ್ನು ನೋಡಿಕೊಳ್ಳುತ್ತಾನೆ. ಐರಾವತವು ಹಿಮ್ಮೆಟ್ಟದಂತೆ ಅದನ್ನು ಅಂಕುಶದಿಂದ ತಿವಿದು ಮುಂದಕ್ಕೆ ನೂಕುತ್ತಾನೆ. ಅಷ್ಟರೊಳಗಾಗಿ ವೃತ್ರನು “ಇಂದ್ರನೆಲ್ಲಿ ? ಇಂದ್ರನೆಲ್ಲಿ ?” ಎಂದು ಮುಂದೆ ನುಗ್ಗಿ ಬಂದಿದ್ದಾನೆ. ಅವನ ಅದ್ಭುತಾಕಾರವನ್ನು ಕಂಡು ವಿಸ್ಮಯಪಡುತ್ತ ದಾನವರ ಆಕ್ರಮಣವನ್ನೂ ಲಕ್ಷಿಸದೆ ದೇವಸೇನೆಯು ಅವನ ಕಡೆಯೇ ನೋಡುತ್ತಿದೆ.

ಇಂದ್ರನು “ಇದೋ ನಾನಿಲ್ಲಿದ್ದೇನೆ !” ಎಂದು ಎದುರುಬಿದ್ದನು. ಅನೇಕ ದಾನವೇಂದ್ರರ ಶಿರಸ್ಸುಗಳನ್ನು ನಿರ್ಲಕ್ಷ್ಯವಾಗಿ ಕತ್ತರಿಸಿದ್ದ ಖಡ್ಗವನ್ನು ಪ್ರಯೋಗಿಸಿ ತಾನೇ ಯುದ್ಧವನ್ನು ಆರಂಭಿಸಿದನು. ಆ ಮಹಾಭುಜನು ಪ್ರಯೋಗಿಸಿದ ಆ ಮಹಾಖಡ್ಗವನ್ನು ವೃತ್ರನು ಬರುತ್ತಿದ್ದ ಹಾಗೆಯೇ ಹಿಡಿದು ಅತ್ತ ಎಸೆದು ತನ್ನ ಬರಿಗೈಯಿಂದ ಐರಾವತವನ್ನು ಅಪ್ಪಳಿಸಿದನು. ಆ ಗಜೇಂದ್ರವು ಆ ಪ್ರಹರಣವನ್ನು ತಡೆಯಲಾರದೆ ಘೀಳಿಟ್ಟಿತು. ಕೆಳಕ್ಕೆ ಬಿತ್ತು. ಅದು ಹಪ್ಪಳವಾಯಿತೋ ಎಂದು ದೇವಸೇನೆಯು ಕಳವಳಿಸಿತು. ಇಂದ್ರನೂ ಐರಾವತದೊಡನೆ ಆ ಪ್ರಹರಣವನ್ನು ಸೈರಿಸಲಾರದೆ,, ಬಿದ್ದು ವಿಹ್ವಲನಾದನು, ಮೈಕೈಯೆಲ್ಲ ಮುರಿದುಹೋದಂತಾಗಿದ್ದರೂ, ಮತ್ತೆ ವೃತ್ರನನ್ನು ಹೊಡೆಯಲು ವಜ್ರವನ್ನು ಎತ್ತಿ, ಪುಟಚೆಂಡಿನಂತೆ ನೆಗೆದು ಬಂದನು. ವಜ್ರವನ್ನೆತ್ತಿ ಹೊಡೆಯುವುದರೊಳಗಾಗಿ ವೃತ್ರನು ಅವನನ್ನು ಸಣ್ಣಹುಳುವನ್ನು ಹಿಡಿಯುವ ಬಾಲಕನಂತೆ ಹಿಡಿದು ತನ್ನ ಬಾಯೊಳಗೆ ಹಾಕಿಕೊಂಡನು.

ದೇವತೆಗಳೆಲ್ಲರೂ ಹಾಹಾ ಎಂದರು. ಐರಾವತವು ತನ್ನ ಸ್ವಾಮಿಯ ದುರ್ದೆಶೆಯನ್ನು ತಪ್ಪಿಸಲೆಂದೋ ಎಂಬಂತೆ ರೇಗಿ ತನ್ನ ನಾಲ್ಕು ದಂತಗಳಿಂದಲೂ ವೃತ್ರನನ್ನು ತಿವಿಯಿತು. ಆ ಚೌದಂತದ ಪ್ರಹರಣವನ್ನು ತಪ್ಪಿಸಿಕೊಳ್ಳಲು ವೃತ್ರನು ತಿರುಗಿ ಆವ್ಯಗ್ರಹನಾಗಿರುವಾಗ, ದೇವೇಂದ್ರನು ತನ್ನ ಅನಿಮಾಸಿದ್ಧಿಯಿಂದ ಆ ವೃತ್ರಾಸುರನ ತೆರೆದ ಬಾಯಿಯಿಂದ ಈಚೆಗೆ ಬಂದುಬಿಟ್ಟನು.

ವೃತ್ರಾಸುರನು ಮತ್ತೆ ದೇವೇಂದ್ರನನ್ನು ಒಂದು ಕೈಯಿಂದ ಹಿಡಿದನು. ಇನ್ನೊಂದು ಕೈಯಿಂದ ತನ್ನನ್ನು ತಿವಿಯಲು ಬಂದಿದ್ದ ಐರಾವತವನ್ನು ಹಿಡಿದನು. ಇಬ್ಬರನ್ನೂ ಎರಡು ಕೈಗಳಲ್ಲಿ ಹಿಡಿದು ಎಸೆದುಬಿಟ್ಟನು. ಇಬ್ಬರೂ ರಣಾಂಗಣದಿಂದ ಸುಮಾರು ದೂರದಲ್ಲಿ ಬಂದು ಬಿದ್ದರು. “ಇಂದ್ರನೇ ರಣಾಂಗಣದಲ್ಲಿ ಇಲ್ಲದ ಮೇಲೆ ತಾವಿದ್ದು ಮಾಡುವುದೇನು ?” ಎಂದು ದೇವಸೇನೆಯು ಹಿಂತೆಗೆಯಿತು.

ಆ ಬೀಸಿ ಎಸೆಯಲು ಬಿದ್ದ ಪೆಟ್ಟಿಗೆ ಐರಾವತವು ಮೂರ್ಛೆಹೋಯಿತು. ಇಂದ್ರನಿಗೆ ಅರಿವು ಉಳಿಯಲಿಲ್ಲ. ಅಷ್ಟು ಹೊತ್ತಿನ ಮೇಲೆ ಎಚ್ಚರವಾಯಿತು. ಒಂದು ಕಡೆ ಆತನಿಗೆ ಎಲ್ಲೂ ಇಲ್ಲದ ಕೋಪ ಬಂದಿದೆ. ಇನ್ನೊಂದು ಕಡೆ ಎಲ್ಲೂ ಇಲ್ಲದ ಭಯವಾಗುತ್ತಿದೆ. ವೃತ್ರನ ಅಟ್ಟಹಾಸವು, ಓಡುತ್ತಿರುವ ದೇವಸೇನೆಯ ಆಕ್ರಂದನ, ಓಡಿಸಿಕೊಂಡು ಬರುತ್ತಿರುವ ದಾನವೇಂದ್ರರ ಅಟ್ಟಹಾಸ, ಎರಡನ್ನೂ ಮೀರಿ, ದಿಕ್ತಟಗಳನ್ನೆಲ್ಲಾ ಒಡೆಯುವಂತೆ ಬೃಹತ್ತಾಗಿ ಕೇಳಿಸುತ್ತಿದೆ.

ಇಂದ್ರನು ಆದುದಾಗಲಿ ಎಂದು ಹುಲ್ಲುಮುಡಿ ಕಚ್ಚಿ ವಜ್ರವನ್ನು ಪ್ರಯೋಗಿಸಲು ಕೈಎತ್ತಿದನು. ಯಾರೋ ಕಿವಿಯಲ್ಲಿ “ಇದು ಕಾಲವಲ್ಲ ಇಂದ್ರ, ಆ ಆಯುಧರಾಜನಿಗೆ ಅವಮಾನ ಮಾಡದಿರು. ಸಕಾಲದಲ್ಲಿ ಇದೆ ಆಯುಧವು ಅವನಿಗೆ ಮೃತ್ಯುವಾಗುವುದು” ಎಂದರು. ಇಂದ್ರನ ಎತ್ತಿದ ಕೈ ಇಳಿಯಿತು.

ಇಂದ್ರನು ತನಗೆ ಬಂದಿದ್ದ ರೋಷವನ್ನು ಉಪಸಂಹರಿಸಿಕೊಂಡು, ತನಗೆ ಬುದ್ಧಿಯನ್ನು ಹೇಳಿದವರು ದರ್ಶನಕೊಡಬೇಕು ಎಂದು ಪ್ರಾರ್ಥಿಸಿದನು. ಎದುರಿಗೆ ಮಂದಸ್ಮಿತ ಸುಂದರವದನಾರವಿಂದದಿಂದ ಪ್ರಕಾಶಿಸುತ್ತಿರುವ ಒಂದು ತೇಜೋರಾಶಿಯು ಆವಿರ್ಭವಿಸಿತು. ಪ್ರಸನ್ನವಾದರೂ ಕಣ್ಣು ಕುಕ್ಕುತ್ತಿರುವ ಆ ತೇಜೋರಾಶಿಯನ್ನು ಕಂಡು, ಸ್ಥಿತಿಕಾರಣನಾದ ನಾರಾಯಣನೇ ಆತನೆಂದರಿತು, ಇಂದ್ರನು ನಮಸ್ಕಾರಾದಿಗಳಿಂದ ಆತನನ್ನು ಅರ್ಚಿಸಿ “ಹಾಗಾದರೆ ಈಗ ನಾನು ಸುಮ್ಮನಾಗಬೇಕೆ ?” ಎಂದು ಕೇಳಿಕೊಳ್ಳುತ್ತಾನೆ.

ಆ ತೇಜೋರಾಶಿಯು ಸಮಾಧಾನದಿಂದ “ಅಮಾವಾಸ್ಯೆಯ ದಿನ ಸೂರ್ಯನಲ್ಲಿ ಸೇರಿಹೋಗುವ ಚಂದ್ರನಂತೆ, ಈಗ ನೀನು ಅವನನ್ನು ಆಶ್ರಯಿಸು. ಸೋತೆನೆಂದು ಒಪ್ಪಿಕೊಂಡು, ನಿನ್ನಂತಹ ಪರಾಕ್ರಮಶಾಲಿಯನ್ನು ನೋಡಿರಲಿಲ್ಲವೆಂದು ಆತನಿಗೆ ಇಂದ್ರ ಪದವಿಯನ್ನು ಬಿಟ್ಟುಕೊಟ್ಟು ಆತನ ಸ್ನೇಹವನ್ನು ಸಂಪಾದಿಸು, ಸಕಾಲದಲ್ಲಿ ಮತ್ತೆ ನಾನು ನಿನಗೆ ಎಚ್ಚರಿಕೆ ಕೊಡುವೆನು. ಆಗ ಅವನನ್ನು ಮುಗಿಸುವೆಯಂತೆ !” ಎಂದು ಹೇಳಿ ಅಂತರ್ಧಾನವಾಯಿತು.

ಇಂದ್ರನು ತನ್ನ ಸಮರವೇಷವನ್ನು ತೆಗೆದು ಹಾಕಿ, ಹೋಗಿ ವೃತ್ರಾಸುರನನ್ನು ಕಂಡನು. ಆ ವೇಳೆಗೆ ಅಮರಾವತಿಯು ದಾನವರ ವಶವಾಗಿದೆ. ವೃತ್ರನು ಇಂದ್ರನ ಅರಮನೆಯನ್ನು ನುಗ್ಗಿದ್ದಾನೆ. ಇಂದ್ರನು ಶಾಂತವೇಷದಿಂದ ಬಂದಿರುವುದನ್ನು ಕೇಳಿ ಅವನಿಗೂ ಆಶ್ಚರ್ಯವಾಯಿತು. ಬರಮಾಡಿಕೊಂಡನು.

ಇಂದ್ರನು ಬಹುದಿನದ ಮಿತ್ರನನ್ನು ಸಂಧಿಸುವಂತೆ ಸಂಧಿಸಿ, ಕೈಮುಗಿದು “ನಿನ್ನ ಪರಾಕ್ರಮವನ್ನು ಕೇಳಿದ್ದೆ. ಇಂದು ಅದರ ಪರಿಚಯವಾಯಿತು. ನಿನ್ನಂತಹ ಪರಾಕ್ರಮಿಯು ಇದುವರೆಗೆ ಇರಲಿಲ್ಲ. ಮುಂದಾಗುವುದಿಲ್ಲ. ಅದರಿಂದ ನಿನಗೆ ನಾನಾಗಿ ನನ್ನ ಇಂದ್ರತ್ವವನ್ನು ಕೊಡಲು ಬಂದಿದ್ದೇನೆ, ಸ್ವೀಕರಿಸಬೇಕು” ಎಂದು ವಿನಯದಿಂದ ಪ್ರಾರ್ಥಿಸಿದನು. ಆ ವಿನಯವು ಯಾರನ್ನೂ ಬೇಕಾದರೂ ಒಲಿಸಿಕೊಳ್ಳುವಂಥದಾಗಿತ್ತು.

“ನಿಯಮಗಳೇನು ?”

“ನಿಯಮವೇನೂ ಇಲ್ಲ. ಯುದ್ಧವು ಬೇಕಾಗಿಲ್ಲ, ಲೋಕಪಾಲಕರೆಲ್ಲರೂ ನಿನ್ನ ಆಜ್ಞಾನುವರ್ತಿಗಳಾಗುವರು. ತ್ರೈಲೋಕ್ಯಾಧಿಪತ್ಯವು ನಿನ್ನದಾಗುವುದು.”

“ನೀನೇನಾಗಿರುವೆ ?”

“ನಾನು ಶಚೀಪತಿಯಾಗಿ ಆಕೆಯ ಅರಮನೆಯಲ್ಲಿರುವೆನು. ನನ್ನನ್ನೂ ಪ್ರಧಾನ ದೇವತೆಗಳನ್ನೂ ಭೃತ್ಯರನ್ನಾಗಿ ಉಪಯೋಗಿಸಬೇಡ. ನಿನಗೆ ಸಮ್ಮತವಾಗಿದ್ದರೆ, ಇಂದ್ರನಾದ ನೀನು ಇಂದ್ರನಾಗಿದ್ದ ನನ್ನನ್ನು ಮಿತ್ರನಂತೆ ನಡೆಸಿಕೋ.”

“ನೀನು ಮಿತ್ರದ್ರೋಹವನ್ನು ಮಾಡುವುದಿಲ್ಲ ಎಂಬುದಕ್ಕೆ ಸಾಕ್ಷಿಯೇನು?”

“ಸಾಕ್ಷಿಯಾಗಿ ದೇವತಾರಹಸ್ಯವೊಂದನ್ನು ಹೇಳುವೆನು ಕೇಳು. ಇಂದ್ರ ಎಂಬುದು ಒಂದು ಅಧಿಕಾರದ ಹೆಸರು. ಅದು ಮೂರು ಲೋಕಗಳಲ್ಲಿ ಅವರವರು ತಮ್ಮ ತಮ್ಮ ಧರ್ಮದಲ್ಲಿರುವಂತೆ ನೋಡಿಕೊಳ್ಳಲು ಏರ್ಪಟ್ಟದ್ದು. ಇದನ್ನು ನೀನು ಪಾಲಿಸು. ಅವರವರ ಧರ್ಮದಿಂದ ಅವರವರಿಗೆ ಲಭಿಸುವ ಪುಣ್ಯದ ಭಾಗವನ್ನು ನೀನು ಸಂಗ್ರಹಿಸಿಕೊ. ಆಗ ಮರದಿಂದ ಹಣ್ಣನ್ನು ಮಾತ್ರ ತೆಗೆದುಕೊಂಡು ಸ್ವಾಮಿಯಂತೆ ನೀನು ಅಭಿವೃದ್ಧನಾಗುವೆ. ಅದಿಲ್ಲವೆ, ನಿನಗೆ ತೋರಿದ ಧರ್ಮವನ್ನು ಇತರರ ಮೇಲೆ ಹೇರಿದರೆ, ಮರಗಳನ್ನು ಕಡಿದು ಒಲೆಗೆ ಒಟ್ಟಿದವನಂತಾಗುವೆ.”

ಶಚೀಪತಿಯು ಹೇಳಿದುದು ವೃತ್ರನಿಗೆ ಹಿಡಿಯಿತು. “ಆಗಲಿ, ನಿನ್ನ ಕಾಲದಲ್ಲಿ ಪ್ರಧಾನರಾಗಿದ್ದವರನ್ನು ಯಾರನ್ನೂ ಭೃತ್ಯರನ್ನಾಗಿ ಉಪಯೋಗಿಸುವುದಿಲ್ಲ. ನಿನ್ನನ್ನು ಮಿತ್ರನಂತೆ ನಡೆಸಿಕೊಳ್ಳುವೆನು. ಮಿಕ್ಕದೇವತೆಗಳು ಎಲ್ಲಿರುವರು ?”

“ನಿನಗೆ ಸಮ್ಮತವಾದರೆ, ಅವರೆಲ್ಲ ಅಮರಾವತಿಯಲ್ಲಿರುವರು. ಇಲ್ಲದಿದ್ದರೆ, ಅವರು ತಮಗೆ ತೋರಿದೆಡೆ ಇರುವರು.”

“ಆಯಿತು, ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿಗಳು ಮರೆಯಾಗುವವಂತಲ್ಲ ಅದೇನು?

“ಅದರ ರಹಸ್ಯವಿದು. ಅವು ವರ ಕೊಡುವುವು. ಅದನ್ನು ಪಡೆದುಕೊಳ್ಳುವವರು ಧರ್ಮಿಷ್ಠರಾಗಿರಬೇಕು. ಹಾಗಿಲ್ಲದಿದ್ದರೆ ಅವುಗಳಲ್ಲಿರುವ ವಿಶೇಷಗುಣವು ಪ್ರಕಟವಾಗುವುದಿಲ್ಲ. ನೀನು ನಾನು ಹೇಳಿದಂತೆ ನಡೆದರೆ ಅವು ಬೇಕಾದುದನ್ನು ಕೊಡಬಲ್ಲವಾಗುವುವು.”

“ಸರಿ. ಹಾಗೆಯೇ ಆಗಬಹುದು. ನೀನು ಹೇಳಿದ ರಹಸ್ಯಕ್ಕೆ ಪ್ರತಿಯಾಗಿ ನಾನು ಒಂದು ರಹಸ್ಯವನ್ನು ಹೇಳುವೆನು ಕೇಳು. ವೃತ್ರನು ಸದೇಹನಾಗಿರುವಾಗ ನಿನ್ನ ಮಿತ್ರ. ವಿದೇಹನಾದರೆ ನಿನ್ನ ಮೃತ್ಯು. ಇದನ್ನು ವಿವರಿಸು ಎನ್ನಬೇಡ. ತಿಳಿದುಕೊಂಡಿರು. ಅಷ್ಟೇ !” ಎಂದನು.

ಶಚೀಪತಿಯು ಇಂದ್ರನಾದ ವೃತ್ರಾಸುರನಪ್ಪಣೆಯನ್ನು ಪಡೆದು ಹಿಂತಿರುಗಿದನು. ತಾನು ಶಚೀಪತಿಯಾಗಿರಲು ಅವನು ಒಪ್ಪಿಕೊಂಡುದರಿಂದ ಎಷ್ಟೋ ರಹಸ್ಯಗಳು ತನ್ನಲ್ಲಿಯೇ ಉಳಿಯಲು ಅನುಕೂಲವಾಯಿತೆಂದು ಆತನಿಗೆ ಒಂದು ಸಂತೋಷ. ಆದರೆ ವೃತ್ರನು ಹೇಳಿದ “ಸದೇಹನಾಗಿರುವಾಗ ಮಿತ್ರ, ವಿದೇಹನಾಗಿರುವಾಗ ಮೃತ್ಯು” ಎಂಬುದು ಮಾತ್ರ ಅರ್ಥವಾಗಲಿಲ್ಲ. ಅದನ್ನೇ ಚಿಂತಿಸುತ್ತಾ ಆತನು ಶಚೀದೇವಿಯ ಅರಮನೆಗೆ ಬಂದನು.

ನಾರಾಯಣನ ಅಪ್ಪಣೆಯಿಂದ ತಾನು ವೃತ್ರಾಸುರನಿಗೆ ಇಂದ್ರತ್ವವನ್ನು ಒಪ್ಪಿಸಿ, ಆತನ ಮಿತ್ರನಾದುದನ್ನೂ, ತಾನಿನ್ನು ಮುಂದೆ ಶಚೀಪತಿಯಾಗಿ ಮಾತ್ರ ಬಾಳುವುದನ್ನೂ ಆತನು ಶಚಿಗೆ ಹೇಳಿದನು. ಆಕೆಯು ಗಂಡನನ್ನು ತಬ್ಬಿಕೊಂಡು, “ಇಂದ್ರಪದವಿಯನ್ನು ಬಿಟ್ಟುಕೊಟ್ಟೆಯೆಂದು ನನಗೆ ದುಃಖವಿಲ್ಲ ನೀನು ಇಂದ್ರಾಣಿಯನ್ನೂ ಕೊಟ್ಟಿದ್ದರೆ ಆಗ ಯೋಚಿಸಬೇಕಾಗಿತ್ತು. ಶುಕ್ರಾಚಾರ್ಯನೂ ಆ ಗುಟ್ಟನ್ನರಿಯನು ಎಂದ ಮೇಲೆ, ಪಾಪಾ, ವೃತ್ರನಿಗೇನು ಗೊತ್ತು ?” ಎಂದು ಇಬ್ಬರೂ ಏಕಾಂತದಲ್ಲಿ ತಮ್ಮಷ್ಟಕ್ಕೆ ನಕ್ಕುಕೊಂಡರು.

* * * *

೧೫.ಗೆಲುವಿನ ಗುಟ್ಟು



ಅಮರಾವತಿಯ ಕೋಟೆಯ ಆಚೆ, ಉದ್ಯಾನದಿಂದ ಅತ್ತಲಾಗಿ ಕಟ್ಟಿರುವ ಭವ್ಯಮಂದಿರದಲ್ಲಿ ಶುಕ್ರಾಚಾರ್ಯನು ತನ್ನ ಏಕಾಂತಗೃಹದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. “ಇದೇನು ? ಈಚೀಚೆಗೆ ವೃತ್ರೇಂದ್ರನ ವಿಚಾರವಾಗಿ ಕೆಟ್ಟಕೆಟ್ಟ ಯೋಚನೆಗಳೇ ಬರುತ್ತಿವೆ ? ಏನೋ ಸರ್ವನಾಶವಾಗಿಹೋಗಿರುವಂತೆ, ಮನಸ್ಸು ಬೇಡಬೇಡವೆಂದರೂ ಅಸುರೇಂದ್ರನ ವಿಪತ್ತನ್ನೇ ಕುರಿತು ಚಿಂತಿಸುತ್ತಿರುತ್ತದೆ. ಭವಿತವ್ಯವನ್ನು ಕುರಿತು ಚಿಂತಿಸಿದರೆ ಅದೇನೋ ಎಲ್ಲವೂ ಶೂನ್ಯವಾಗಿ ಕಾಣುತ್ತದೆ. ಶಚೀಪತಿಯೇನಾದರೂ ಒಳಸಂಚುಮಾಡಿರುವನೋ? ಅವನು ದಿನವೂ ಬೃಹಸ್ಪತಿಗೆಂತೋ ನನಗೂ ಅಂತೆಯೇ ಬಂದು ನಮಸ್ಕಾರ ಮಾಡುತ್ತಿರುತ್ತಾನೆ. ಆಗೇನಾದರೂ ಯಾವಾಗಲಾದರೂ ನಿನಗೆ ರಾಜ್ಯಪ್ರಾಪ್ತಿಯಾಗಲೆಂದು ಆಶೀರ್ವಾದ ಮಾಡಿದೆನೋ? ನನಗೆ ಈ ಸುರಾಪಾನದಿಂದ ಆಗಿರುವ ಅನರ್ಥವು ಅಷ್ಟಿಷ್ಟಲ್ಲ. ನಾನು ಏನೋ ಮಾಡಬೇಕು ಎಂದುಕೊಂಡಿರುತ್ತೇನೆ. ಈ ಸುರಾಪಾನವು ಇನ್ನೇನನ್ನೋ ಮಾಡಿಸುತ್ತದೆ. ಇದನ್ನು ಬಿಡಬೇಕು ಎಂದು ಎಷ್ಟೋ ಸಲ ಮನಸ್ಸು ಮಾಡಿದ್ದೇನೆ. ಆದರೆ, ಬಿಟ್ಟಿಲ್ಲ ಅಲ್ಲದೆ ನಿಜವಾಗಿಯೂ ನೋಡಿದರೆ, ಇದರಿಂದ ನನಗೆ ಎಷ್ಟು ಆನಂದವಿದೆ? ಸುಖದುಃಖಗಳೆರಡನ್ನೂ ಮೀರಿದ ಬ್ರಹ್ಮಾನಂದವುಂಟು. ಆದರೆ ಅಲ್ಲಿ ಮನಸ್ಸಿನ ರಾಗದ್ವೇಷಗಳಿಲ್ಲ. ಮನಸ್ಸೇ ಅಸ್ತವಾಗುವ ಆ ಸ್ಥಿತಿಯನ್ನು ಪಡೆದು, ಇಲ್ಲಿ ಅಸುರಗುರುವಾಗಿರುವುದೆಂತು? ಆಗ ದೇವತೆಗಳಾದರೇನು? ದಾನವರಾದರೇನು? ದೇವರಾಜಾಯ ಸ್ವಸ್ತಿ ದಾನವೇಂದ್ರಾಯ ಸ್ವಸ್ತಿ ಅಷ್ಟೇ! ಆಗಾಗ, ನಿದ್ದೆಗೆ ಸಂದು ದೇಹಕ್ಕೆ ಶಕ್ತಿಯನ್ನು ತಂದುಕೊಳ್ಳುವಂತೆ, ನಿರ್ಗುಣಕ್ಕೆ ಹೋಗಿ ಬೇಕಾದ ಶಕ್ತಿಯನ್ನು ತುಂಬಿಕೊಳ್ಳುವುದಕ್ಕೆ ನಿರ್ಗುಣೋಪಾಸನೆಯನ್ನು ಉಪಯೋಗಿಸಿಕೊಳ್ಳಬೇಕೇ ಹೊರತು, ದಿನದಿನದ ನಿತ್ಯಕರ್ಮಕಲಾಪಗಳಿಗೆಲ್ಲಾ ಸುರಾ ! ಸುರಾ ! ಸುರಾ ! ಅದರಿಂದಲೇ ಏನೋ? ಹೀಗೆ ತಗ್ಗಿದ ಹೃದಯವನ್ನು ಉಬ್ಬಿಸಲೆಂದೋ ಏನೋ ಈ ಸುರೆಯ ಸೃಷ್ಟಿಯಾದುದು! ಈ ಸುರೆಯನ್ನು ಬಿಡುವುದೇ? ಎಂತಹ ಅವಿವೇಕ! ಸುಗಂಧದ್ರವ್ಯದಿಂದ ಸುವಾಸಿತವಾಗಿ, ಭೂತ ಭವಿಷ್ಯತ್ತುಗಳೆಂಬುದನ್ನೆಲ್ಲಾ ಮರೆಸಿ, ವರ್ತಮಾನಕ್ಷಣವೊಂದನ್ನೇ ಮಹತ್ತರವಾಗಿ ಮಾಡುವ ಈ ಸುರೆಯ ಮುಂದೆ ಇನ್ನುಂಟೆ ?’ ಎಂದು ಯೋಚಿಸುತ್ತಾ ಆಳನ್ನು ಕರೆದು “ನಮಗಷ್ಟು ಪಾನವು ಬೇಕೆಂದು ಹೇಳು” ಎಂದನು. ವೃತ್ರನಿಗಾಗಿ ಮಾಡುತ್ತಿದ್ದ ಚಿಂತೆಯೆಲ್ಲವೂ ಪಾನದಲ್ಲಿ ಮುಳುಗಿಹೋಯಿತು. ಆಚಾರ್ಯನು ಅಂದು ವೃತ್ರನಿಗೆ ಇಂದ್ರತ್ವವು ಶಾಶ್ವತವಾಗಬೇಕಾದರೆ ಏನು ಮಾಡಬೇಕು ಎಂದು ಯೋಚಿಸಲು ಕುಳಿತಿದ್ದು. ಅದು ಮುಗಿದದ್ದು ಪಾನದಲ್ಲಿ.

ದಿನವೂ ಹೀಗೇ ಆಗುವುದು. ಆದರೂ ಅದೇನೋ ಶುಕ್ರಾಚಾರ್ಯನ ಮನಸ್ಸಿಗೆ ಬರಲೊಲ್ಲದು. ಈ ವಿಶ್ವವನ್ನೆಲ್ಲಾ ಆಡಿಸುವ ಶಕ್ತಿಯೊಂದಿದೆ. ಅದನ್ನು ಆರಾಧಿಸಬೇಕೆಂದು.

ಇತ್ತ ಅಮರಾವತಿಯಲ್ಲಿ ಆಚಾರ್ಯಮಂದಿರದಲ್ಲಿ ದೇವಗುರುವು ಕುಳಿತು ಯೋಚಿಸುತ್ತಿದ್ದಾನೆ “ಆಹಾ. ಆ ನಾರಾಯಣನ ದಯೆಯೆನ್ನುವುದು ಎಷ್ಟು ದೊಡ್ಡದು! ಆತನ ಕೃಪೆಯಿಂದ, ನಮಗೆ ಅವಮಾನಗಳಾಗಿಲ್ಲ. ಇಂದ್ರನಿಗೆ ಇಂದ್ರತ್ವ ಹೋಯಿತು! ಅಧಿಕಾರವು ತಪ್ಪಿಹೋಯಿತು. ಅದರೂ, ಆ ಮಹಾವಿಷ್ಣುವಿನ ಅನುಗ್ರಹದಿಂದ ನಾವು ನಾವು ಇನ್ನೂ ನಮ್ಮ ನಮ್ಮ ಮನೆಗಳಲ್ಲಿ ಇರುವೆವು. ಬಾಗಿಲಲ್ಲಿ ಕಾವಲಿದ್ದ ದೇವಪುರುಷರಿಗೆ ಪ್ರತಿಯಾಗಿ ದಾನವರು ಕಾವಲಿರುವರು. ನಾವು ಮತ್ತೆ ಸಭೆ ಸೇರುವಂತಿಲ್ಲ ಗೋಪ್ಯವಾಗಿ ವಿಚಾರ ವಿನಿಮಯ ಮಾಡುವಂತಿಲ್ಲ ಅದಷ್ಟು ಬಿಟ್ಟು ವೃತ್ರೇಂದ್ರನು ನಮ್ಮನ್ನು ಯಾವ ರೀತಿಯಲ್ಲೂ ಗೋಳುಗುಟ್ಟಿಸುತ್ತಿಲ್ಲ. ಆದರೆ, ಇದೇ ಸರಿಯೆಂದು ಇರಲಾದೀತೆ? ಕಡಿದ ಮರವು ಚಿಗುರುವುದು. ಕದಡಿದ ನೀರು ತಿಳಿಯಾಗುವುದು. ಹಾಗೆಯೆ, ಒಂದು ಸಹಜಸ್ಥಿತಿಯಿದೆಯಲ್ಲ ಅದು ಬರಬೇಡವೆ? ಬೆಂಕಿಯು ತನ್ನ ಆಹಾರವನ್ನೆಲ್ಲಾ ಮುಗಿಸುವಂತೆ, ದೇವತೆಯಲ್ಲದ ಇನ್ನು ಯಾರೇ ಆಗಲಿ, ಈ ಸ್ವರ್ಗಭೂಮಿಗೆ ಬಂದರೆ ತನ್ನ ಪುಣ್ಯವನ್ನೆಲ್ಲಾ ಸೂರೆಗೊಟ್ಟೇ ತೀರಬೇಕಲ್ಲವೆ? ಈ ವೃತ್ರನೂ ಸಹ ಈ ನಿಯಮದಂತೆ ಎಂದಾದರೊಂದು ದಿನ ತನ್ನ ಪುಣ್ಯವನ್ನೆಲ್ಲ ಮುಗಿಸಿಕೊಂಡು ತನ್ನ ವಸ್ತ್ರವನ್ನು ಝಾಡಿಸಿಕೊಂಡು ಹೊರಟುಬಿಡಬೇಡವೆ? ಅಥವಾ ಶುಕ್ರನೇನಾದರೂ ವೃತ್ರನಿಗೆ ಇಂದ್ರಪದವಿಯು ಈ ಮನ್ವಂತರದ ಕೊನೆಯವರೆಗೂ ಇರುವಂತೆ ಮಾಡಿರುವನೋ? ಹಾಗಾದರೆ ಅದು ಅಖಂಡವಾಗಿರುವಂತೆ ಮಾಡಿರಬೇಕು. ಇಲ್ಲ ಹಾಗಾಗಿಲ್ಲ ಹಾಗೆ ಆಗಬೇಕಾದರೆ ವೃತ್ರನು ಶಚೀಪತಿಯೂ ಆಗಬೇಕಾಗಿತ್ತು. ವೃತ್ರನು ಶಚಿಯನ್ನು ಪಡೆಯಲೂ ಯತ್ನಿಸಿಲ್ಲ. ಆದುದರಿಂದ, ಶುಕ್ರನು ಆ ಗುಟ್ಟನ್ನು ಭೇದಿಸಿಲ್ಲ. ಶಚಿಯನ್ನು ಪಡೆಯದೆ ಯಾವನೇ ಆಗಲಿ, ಇಂದ್ರತ್ವವನ್ನು ಪರಿಪೂರ್ಣವಾಗಿ ಅನುಭವಿಸುವುದೆಂತು. ಆದುದರಿಂದ, ಈ ವೃತ್ರನ ಪುಣ್ಯವು ಮುಗಿಯುತ್ತಾ ಬಂದಿರಬೇಕು. ಆಗಲಿ, ನಾವು ಏಕೆ ಅದನ್ನು ನೋಡಬಾರದು ? ಏಕಾಂತವಾಗಿ ನೋಡಬೇಕು, ನೋಡೋಣ ಎಂದು, ಪ್ರಹರಿಯನ್ನು ಕರೆದು ``ಯಾರಾದರೂ ಬಂದು ಕೇಳಿದರೆ, ನಾವು ಧ್ಯಾನದಲ್ಲಿರುವೆವು ಎಂದು ಹೇಳು. ಬಲವಂತವಾಗಿ ನೋಡಲೇಬೇಕಾಗಿ ಬಂದರೆ, ಬಾಗಿಲಲ್ಲಿ ಕಟ್ಟಿರುವ ಈ ಗಂಟೆಯನ್ನು ಮೃದುವಾಗಿ ಮೂರು ಸಲ ಬಾರಿಸು. ಆದರೆ ನಾವಾಗಿ ಹೊರಗೆ ಬರುವವರೆಗೆ ಬಾರಿಸದಿರುವುದು ಒಳ್ಳೆಯದು. ತಿಳಿಯಿತೆ ?” ಎಂದು ಅವನಿಗೆ ತಿಳಿಯಹೇಳಿ ತಾನು ಧ್ಯಾನಾಸಕ್ತನಾದನು.

ಧ್ಯಾನವು ಬಲಿಯಿತು. ಬಲಿತ ಧ್ಯಾನವು ಸುರಾಚಾರ್ಯನನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಯಿತು. ಬ್ರಹ್ಮನು ಗೌರವದಿಂದ, ವಿಶ್ವಾಸದಿಂದ ಆಚಾರ್ಯನನ್ನು ಬರಮಾಡಿಕೊಂಡನು. ಬಂದ ಕಾರ್ಯವೇನೆಂದು ಕೇಳಿದನು. ಆಚಾರ್ಯನು “ಚತುರ್ಮುಖನಿಗೆ ನಮಸ್ಕಾರವು ವಾಣೀಪತಿಗೆ ನಮಸ್ಕಾರವು. ಇಂದ್ರನು ಇಂದ್ರತ್ವವನ್ನು ಬಿಟ್ಟು ಅನಿಂದ್ರನಾಗಿರಬೇಕಾದ ಕಾಲವು ಇನ್ನು ಎಷ್ಟು ಇರುವುದು ? ವೃತ್ರನು ಇನ್ನೆಷ್ಟುಕಾಲ ಈ ಇಂದ್ರತ್ವವನ್ನು ಅನುಭವಿಸುವನು ? ಎಂದು ಯೋಚನೆಯಾಯಿತು. ಅದಕ್ಕಾಗಿ ಸನ್ನಿಧಾನದಲ್ಲಿ ಈ ವಿಷಯವನ್ನು ತಿಳಿದುಕೊಂಡು ಹೋಗಬೇಕೆಂದು ಬಂದೆ ? ಎಂದನು.

ಚತುರ್ಮುಖನು ನಗುತ್ತಾ “ನೀವು ದೇವತೆಗಳು, ನಿಮಗೆ ತಿಳಿಯದೆ ನಾವು ಯಾವ ಕೆಲಸವನ್ನು ತಾನೇ ಮಾಡಲಾಗುತ್ತದೆ ? ಅದಕ್ಕಾಗಿಯೇ, ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳುವುದಕ್ಕಾಗಿಯೇ, ನಾವು ಈ ಯೋಚನೆಯನ್ನು ನಿನಗೆ ಕಳುಹಿಸಿದೆವು. ಇಂಧ್ರನು ಮತ್ತೆ ಇಂದ್ರತ್ವವನ್ನು ಪಡೆದರೂ, ಇನ್ನೂ ಒಮ್ಮೆ ಅನಿಂದ್ರನಾಗಿರಬೇಕಾಗಿರುವುದು. ವರ್ಷಾಕಾಲದಲ್ಲಿ ಆದ ಸೂರ್ಯದರ್ಶನದಂತೆ ಅದು. ಅದನ್ನು ನೀನೇ ನೋಡುವೆ. ಆಗ, ಎಂದರೆ ಇಂದ್ರನು ಮತ್ತೆ ತಲೆತಪ್ಪಿಸಿಕೊಂಡಾಗ, ನೀನು ಬಹಳ ಕಾರ್ಯ ಮಾಡಬೇಕಾಗುವುದು. ಅದಿರಲಿ ಎರಡನೆಯ ಪ್ರಶ್ನಕ್ಕೆ ಉತ್ತರವಿದು. ವೃತ್ರನ ಕಾಲವು ಮುಗಿಯಿತು. ವೃತ್ರನು ಸಿಂಹಾಸನವನ್ನು ಬಿಡುವನು. ಆದರೂ ವೃತ್ರನಿಗ್ರಹವು ಅಷ್ಟು ಸುಲಭವಲ್ಲ ಆದುದರಿಂದ ನಿಮ್ಮ ಇಂದ್ರನು ಮೈಯೆಲ್ಲ ಕಣ್ಣಾಗಿ ವರ್ತಿಸಬೇಕು. ಕೊನೆಗೆ ನಿನ್ನ ಆಗ್ರಹದಿಂದ ಆಗಿರುವ ಆ ಅನರ್ಥವನ್ನೆಲ್ಲ ನೀನೇ ಸರಿಗಟ್ಟಬೇಕು. ಎಚ್ಚರವಿರಲಿ, ಕೊಂಚ ಅಂಕೆ ತಪ್ಪಿದರೂ ಅನರ್ಥವಾಗುವುದು. ಶ್ರೀ ಮಹಾವಿಷ್ಣುವು, ಎಲ್ಲೆಲ್ಲೂ ತುಂಬಿರುವ ವಿಷ್ಣುವು, ಸಕಾಲದಲ್ಲಿ ಪ್ರೇರಣೆ ಮಾಡಿ ವೃತ್ರವಧವನ್ನು ಮಾಡಿಸುವನು” ಎಂದನು. ಬೃಹಸ್ಪತಿಯು “ಸರಿ, ಸರಿ, ಈ ವೃತ್ರಸಖ್ಯವೂ ಆತನ ಅಪ್ಪಣೆಯಿಂದಲೇ ಆಗಿರುವುದು. ವಜ್ರವನ್ನು ಉಪಯೋಗಿಸಲು ಕಾಲವಿದೆ. ನಾನು ಹೇಳುವೆನು ಎಂದು ಆತನೇ ತಡೆದಿರುವನಲ್ಲ” ಎಂದನು. ಚತುರ್ಮುಖನು “ಹೋಗಿ ಬಾ” ಎನ್ನಲು ಇನ್ನೂ ಏನೇನೋ ಕೇಳಬೇಕು ಎಂದಿದ್ದವನು ಮರುಮಾತಾಡದೆ ಹೊರಟು ಬಂದುಬಿಟ್ಟನು. ಎಚ್ಚರವಾಯಿತು.

ಆಚಾರ್ಯನು ಎಚ್ಚರಗೊಂಡು ಪ್ರಹರಿಯನ್ನು ಕರೆದು “ಯಾರಾದರೂ ಬಂದಿರುವರೆ ?” ಎಂದು ವಿಚಾರಿಸಿದನು. ಪ್ರಹರಿಯು ದೇವರಾಜನೆನ್ನುವುದಕ್ಕೆ ಹೋಗಿದ್ದವನು ತಡೆದು, “ಶಚೀಪತಿಗಳು ದಯಮಾಡಿಸಿರುವರು” ಎಂದು ಬಿನ್ನವಿಸಿದನು. ಬೃಹಸ್ಪತಿಯು ನಗುತ್ತ ಮನಸ್ಸಿನಲ್ಲಿ “ಬ್ರಹ್ಮದೇವನು ಹೇಳಿರುವುದು ನಿಜವಾದರೆ ಮತ್ತೆ ದೇವರಾಜನಾಗಲು ಬಹಳ ಕಾಲವಿಲ್ಲ” ಎಂದುಕೊಂಡು ‘ಬರಹೇಳು’ ಎಂದನು.

ಆಚಾರ್ಯನೂ ಹಿಂದಿನ ಸುರೇಂದ್ರನೂ ಲೋಕಾಭಿರಾಮವಾಗಿ ಏನೇನೋ ಮಾತನಾಡುತ್ತಿದ್ದರು. ಆಚಾರ್ಯನು ಸಮಯವನ್ನು ಸಾಧಿಸಿ ಬ್ರಹ್ಮದೇವನು ಅಪ್ಪಣೆ ಕೊಡಿಸಿದುದನ್ನು ಆತನಿಗೆ ಹೇಳಿ, “ನೀನು ಶ್ರೀ ಮಹಾವಿಷ್ಣುವಿನ ಅರ್ಚನೆಯನ್ನು ಚೆನ್ನಾಗಿ ಮಾಡುತ್ತಿರು. ಎಲ್ಲವೂ ಒಳ್ಳೆಯದಾಗುವುದು” ಎಂದು ಆಶೀರ್ವದಿಸಿ ಕಳುಹಿಸಿದನು. ಏಕೋ ಏನೋ ಆಚಾರ್ಯನು ವೃತ್ರವಧವಾದ ಮೇಲೆ ಆಗುವ ಅನರ್ಥವನ್ನು ಅರಿತು ಮಾತ್ರ ಏನೂ ಹೇಳಲಿಲ್ಲ.

* * * *

೧೬.ಸೋಲೋ ಗೆಲುವೋ?

ಸಂಪಾದಿಸಿ

ವೃತ್ರೇಂದ್ರನು ತ್ರೈಲೋಕ್ಯಾಧಿಪತ್ಯವನ್ನು ಪಡೆದ ದಿವಸ. ಇಂದು ಅಮರಾವತಿಯಲ್ಲಿ ಮಾತ್ರವಲ್ಲ. ಭೋಗವತಿಯಲ್ಲಿಯೂ ದೊಡ್ಡ ಹಬ್ಬ. ಹಬ್ಬವೆಂದರೆ ಇನ್ನೇನು? ಸ್ವಚ್ಛಂದ ಭೋಗ. ಎಲ್ಲರೂ ಹೊಸ ತೊಡಿಗೆ ತೊಟ್ಟು ಔತಣದ ಊಟ ಉಂಡು, ಅಮಿತವಾದ ಭೋಗವನ್ನು ನಿರೀಕ್ಷಿಸುತ್ತ ಸಂಜೆಯಾದೀತೆ ಎಂದು ಕಾದಿದ್ದಾರೆ. ಆವೊತ್ತಿನ ವಿಶೇಷವೆಂದರೆ, ಹಿಂದಿನಿಂದ್ರನು ಇವೊತ್ತಿನಿಂದ್ರನಿಗೆ ತನ್ನ ವಿಶ್ವಾಸದ ಕಾಣಿಕೆಯೆಂದು ಜೀವರತ್ನಗಳ ಮಾಲೆಯೊಂದನ್ನು ಒಪ್ಪಿಸಿದ್ದಾನೆ. ಇಂದ್ರನು ಅದನ್ನು ಮೆಚ್ಚಿಕೊಂಡು ಶಚೀಪತಿಯನ್ನು ಭೋಜನಕ್ಕೆ ಕರೆದು ತನ್ನ ಮಗ್ಗುಲಲ್ಲಿ ಕೂರಿಸಿಕೊಂಡು ಊಟ ಮಾಡಿದ್ದಾನೆ. ಇದುವರೆಗೆ ಅಸುರಾಚಾರ್ಯನಿಂದ ಹಿಡಿದು ದಾನವರೆಲ್ಲರಿಗೂ ಹಿಂದಿನ ಇಂದ್ರನು ಏನು ಸಂಚುಮಾಡುವನೋ ಎಂದು ಸಂಶಯವಿದ್ದುದು ಇಂದು ಮಾಯವಾಗಿದೆ. ಊಟದ ಸಮಯದಲ್ಲಿ ಎಲ್ಲರಿಗೂ ಆನಂದವೋ ಆನಂದ. ಶತ್ರುಗಳಾದ ದೇವದಾನವರು ಇಂದು ಪರಮಸ್ನೇಹಿತರಾಗಿದ್ದಾರೆ. ಇಂದಿನ ಆನಂದದಲ್ಲಿ ಹಿಂದಿನ ದ್ವೇಷವನ್ನೇ ಕೊಟ್ಟುಬಿಟ್ಟು ಶುದ್ಧವಾದ ಹೃದಯದಿಂದ, ಎರಡು ನದಿಗಳು ಬೆರೆಯುವಂತೆ ಬೆರೆತಿದ್ದಾರೆ. ಅಸುರಾಚಾರ್ಯನು “ಇದೇನು ಇಂದಿನ ವಿಶೇಷ? ದೇವತೆಗಳು ತಮ್ಮ ವೈಭವವನ್ನೇ ಮರೆತು ನಮಗೆ ದ್ವಿತೀಯರಾಗಿ ಇರಲು ಒಪ್ಪಿಕೊಂಡಂತೆ ಇದೆಯಲ್ಲ? ಅಥವ ವೃತ್ರಪ್ರಭಾವದ ಮೇಲೆ ತಮ್ಮದೇನೂ ಇನ್ನು ನಡೆಯುವುದಿಲ್ಲವೆಂದು ಮನಗಂಡು ಯತ್ನವಿಲ್ಲದೆ ಈ ಸೋಲಿಗೆ ಒಪ್ಪಿಕೊಂಡಿರುವರೋ?” ಎಂದು ಯೋಚಿಸುತ್ತಿದ್ದಾನೆ. ಆದರೂ ಆ ಅಮಲು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗುವ ಮನಃಪ್ರವಾಹದಲ್ಲಿ ಕೊಚ್ಚಿಹೋಗುತ್ತಾನೆ.

ಸುರಾಚಾರ್ಯನೂ ಯೋಚಿಸುತ್ತಿದ್ದಾನೆ ; “ವೃತ್ರಪ್ರಭಾವವು ಇಳಿವೇಗವಾಗಿದೆ. ದಾನವೇಂದ್ರನ ತೇಜಸ್ಸು ಅಭಿಭೂತವಾಗುತ್ತಿದೆ. ಇಲ್ಲದಿದ್ದರೆ, ಇವರು ಇಂದು ಸೋತಿರುವ ದೇವತೆಗಳ ಅಂತಸ್ತಿಗೆ ಇಳಿಯುತ್ತಿದ್ದರೆ? ಇವೊತ್ತೇ ಏನು ವೃತ್ರನ ಕೊನೆಯ ದಿನ? ಅಬ್ಬಾ ! ಅಸುರರಿಗೆ ಇಂದು ಏನೂ ಬೇಕಾಗಿಲ್ಲ ಬೇಕಾಗಿರುವುದೆಲ್ಲ ಅನ್ನಪಾನಭೋಗ ! ಆಗಲಿ. ಅವರು ಬೇಕಾದುದನ್ನು ಅನುಭವಿಸಲಿ. ಅಯ್ಯೋ ! ದೇವಲೋಕದಲ್ಲಿ ದೇವತೆಗಳಲ್ಲದೆ, ಇನ್ನು ಯಾರೇ ಆಗಲಿ, ತಾವು ಅನುಭವಿಸಿದ ಭೋಗಕ್ಕೆ ಬೆಲೆಯನ್ನು ಕೊಡಬೇಕು ಎಂಬುದನ್ನು ಇವರು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು !” ಎಂದು ಯೋಚಿಸುತ್ತ ವೃತ್ರನ ಕಡೆ ನೋಡುತ್ತಾನೆ. ಅಲ್ಲಿ ವಿಕಾರವಾಗಿ ರುಂಡವಿಲ್ಲದ ಕಬಂಧವೊಂದು ಕುಳಿತಂತೆ ಕಾಣುತ್ತಿದೆ. ಮತ್ತೊಮ್ಮೆ ನೋಡಿದನು. ಇನ್ನೂ ಒಮ್ಮೆ ನೋಡಿದನು. ಸುರಾಚಾರ್ಯನಿಗೆ ಹೇಗೆ ಹೇಗೋ ಆಯಿತು. “ಹಾಗಾದರೆ, ಇಂದೇ ಕೊನೆಯ ದಿನವೇನು? ಇಂದಿಗೆ ವೃತ್ರನ ಅವತಾರ ಪೂರ್ಣವಾಗುವುದೇನು?”

ಸುರಾಚಾರ್ಯನು ನಂಬಲಾರನು. ಆದರೆ ಸುಮ್ಮನಿರುವುದೆಂತು? ಕುಳಿತಿದ್ದ ಕಡೆಯಿಂದಲೇ, ಹಾಗೆಯೇ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ದಿವ್ಯದೃಷ್ಟಿಯನ್ನು ಅವಲಂಬಿಸಿ ಸುತ್ತಲೂ ನೋಡಿದನು. ದಾನವೇಂದ್ರರು ಯಾರ ಮುಖದಲ್ಲೂ ತೇಜಸ್ಸಿಲ್ಲ. “ಹಾಗಾದರೆ ಇವರು ಇಲ್ಲಿ ಇರಲು ಇದೇ ಕೊನೆಯ ದಿನವೇನು” ಎಂದು ಅವನಿಗೆ ಆಶ್ಚರ್ಯವಾಯಿತು. ಹಾಗೆಯೇ ಶಚೀಪತಿಯನ್ನು ನೋಡಿದನು. ಆತನ ತೇಜಸ್ಸು ಒಂದು ಕಡೆ ಮಸುಳಿಸಿ, ಮೇಘಾವೃತವಾದ ಚಂದ್ರನಂತೆ ಡೊಂಕಾಗಿದ್ದರೆ, ಇನ್ನೊಂದುಕಡೆ ಮಧ್ಯಾಹ್ನದ ಸೂರ್ಯನಂತೆ ಪ್ರಚಂಡವಾಗಿದೆ. ಕೂಡಲೇ ಬ್ರಹ್ಮದೇವನ ಮಾತು ನೆನಪಾಯಿತು. “ಸರಿ, ಬ್ರಹ್ಮದೇವನು ಸೂಚಿಸಿದ ಕಾಲವು ಬಂದಂತಿದೆ. ಇನ್ನು ನಾನು ಮೈಯೆಲ್ಲ ಕಣ್ಣಾಗಿರಬೇಕಾದ ಕಾಲ ಬಂದಂತಿದೆ. ಏನಾದರೂ ಮಾಡಿ ಇಂದ್ರನಿಗೆ ಇದನ್ನು ಸೂಚಿಸಿದ್ದರೆ ಚೆನ್ನಾಗಿತ್ತಲ್ಲಾ ! ಅಥವಾ ಎಲ್ಲರ ಹೃದಯದಲ್ಲೂ ಕುಳಿತು, ಎಲ್ಲರನ್ನೂ ಪ್ರೇರೇಪಿಸುವ ಆ ಮಹಾವಿಷ್ಣುವಿಗೆ ನಮಸ್ಕಾರವು ಪ್ರಭುವೆ ! ನೀನು ದೇವತೆಗಳ ಬೆಂಬಲಿಗನು. ನಿನ್ನ ಅನುಗ್ರಹದಿಂದಲೇ ದೇವತೆಗಳು ಮೂರು ಲೋಕಗಳನ್ನೂ ಆಳುತ್ತಿರುವರು. ನಿನ್ನ ಕೃಪೆಯಿಂದಲೇ ವೃತ್ರನಂತಹ ಪರಮಪರಾಕ್ರಮಿಯ ಕೈಗೆ ಸಿಕ್ಕಿದರೂ ದೇವತೆಗಳು ಇನ್ನೂ ಬದುಕಿರುವರು. ಮತ್ತೆ ಕೃಪೆಮಾಡು. ನಿನ್ನ ಭಕ್ತರ ಅಳಿದ ಐಶ್ವರ್ಯವೆಲ್ಲವೂ ಮತ್ತೆ ಹಿಂದಕ್ಕೆ ಬರಲಿ. ಇಂದ್ರನು ಮತ್ತೆ ಇಂದ್ರನಾಗುವಂತೆ ಅನುಗ್ರಹಿಸು. ನಿನ್ನ ಪ್ರಚೋದನವಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡಲು ಸಾದ್ಯವಿಲ್ಲವೆಂದು ತಿಳಿದು, ಇಂದ್ರನನ್ನು ಕೈಬಿಡಬೇಡವೆಂದು ನಿನ್ನನ್ನು ಪ್ರಾರ್ಥಿಸುವೆನು” ಎಂದು ಕುಳಿತಲ್ಲಿಂದಲೇ ಪ್ರಾರ್ಥಿಸಿದನು. ಮನಸ್ಸು ಹರ್ಷಗೊಂಡು ತನ್ನ ಪ್ರಾರ್ಥನೆಯನ್ನು ದೇವನು ಕೇಳಿದನೆಂದು ಸೂಚಿಸಿತು.

ಭೋಜನವಾಗುತ್ತಿದ್ದ ಹಾಗೆಯೇ ವೃತ್ರನು ಇಂದ್ರನಿಗೆ ಹೇಳಿಕಳುಹಿಸಿದನು. ಆತನನ್ನು ಕರೆಯಿಸಿಕೊಂಡು ತನ್ನ ಸಂತೋಷದ ಆವೇಶದಲ್ಲಿ ದಾನವೇಂದ್ರರನ್ನೆಲ್ಲಾ ಕರೆದು, ‘ನಾಳಿನಿಂದ ಇಂದ್ರನನ್ನು ನನ್ನ ಪಕ್ಕದಲ್ಲಿ ಸಿಂಹಾಸನದಲ್ಲಿ ಕುಳ್ಳಿರಿಸಿಕೊಳ್ಳುವೆನು. ಯಾವ ಯಾವ ಮಾನ ಮರ್ಯಾದೆಗಳು ನನಗೆ ಆಗುತ್ತಿವೆಯೋ ಅವೆಲ್ಲವೂ ಈತನಿಗೆ ಆಗಬೇಕು ಎಂದು, ನನ್ನ ಅಪ್ಪಣೆ ಎಲ್ಲರಿಗೂ ತಿಳಿದಿರಲಿ” ಎಂದನು.

ಆತನಿಗೆ ಆಗಿರುವ ಅತಿ ಸಂತೋಷಕ್ಕೆ ಕಾರಣವನ್ನು ಊಹಿಸಲಾರದೆ, ಇಂದ್ರನು ‘ಈತನೇಕೆ ಹೀಗೆ ಮಾತನಾಡುತ್ತಿರುವನು ?’ ಎಂದು ಸುರಾಚಾರ್ಯನ ಮುಖವನ್ನು ನೋಡಿದನು. ಆತನು ಅದೇನು ಸನ್ನೆ ಮಾಡಿದನೋ, ಇಂದ್ರನು ಎಚ್ಚರಗೊಂಡು, “ಅಪ್ಪಣೆ, ಸನ್ನಿಧಾನವು ಏನು ಬೇಕಾದರೂ ಮಾಡಬಹುದು” ಎಂದು ವಿನಯದಿಂದ ಕೈಮುಗಿದನು.

ವೃತ್ರೇಂದ್ರನಿಗೆ ಆ ವೇಳೆಗೆ ಇನ್ನೂ ಎರಡು ಸಲ ಪಾನವಾಯಿತು. ಅದರ ಮತ್ತು ತಲೆಗೇರಿತು. ಆ ಅಮಲಿನಿಂದ ತೊದಲು ಮಾತನಾಡುತ್ತ. “ಭಲೆ ಇಂದ್ರ, ಇದೆಂತಹ ವಿನಯ ! ಈ ವಿನಯಕ್ಕೂ ಒಲಿಯದಿದ್ದರೆ, ನನ್ನ ಪ್ರಭುತ್ವವೆಂತಹುದು? ನಾಳಿನಿಂದ ನೀನೇ ಇಂದ್ರ ! ನಾನು ನಿನ್ನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ನೋಡುತ್ತ ಕುಳಿತುಕೊಳ್ಳುತ್ತೇನೆ. ನೀನೇನೋ ಚೆನ್ನಾಗಿ ರಾಜ್ಯವಾಳುತ್ತಿದ್ದೆಯಂತೆ ! ನಾಳಿನಿಂದ ನೀನು ಆಳು. ನಾನು ಅದನ್ನು ನೋಡಿಕೊಂಡಿರುತ್ತೇನೆ. ಇದುವರೆಗೆ ನಾನು ಇಂದ್ರನಾಗಿದ್ದೆ ! ನೀನು ಅನಿಂದ್ರನಾಗಿದ್ದೆ. ಅದಕ್ಕಾಗಿಯೇ ಅಲ್ಲ ನಾನು ಹುಟ್ಟಿದುದು? ನಾಳಿನಿಂದ ನೀನು ಇಂದ್ರ ! ನಾನು ಅತೀಂದ್ರ ! ಇಂದ್ರನ ಮೇಲೆ ಇರುವ ಇಂದ್ರ ನಾನು. ಏನು ಹೇಳುತ್ತೀಯೆ ಇಂದ್ರ ? ನಾಳಿನಿಂದ ನೀನು ಇಂದ್ರನಾಗಬೇಕು ತಿಳಿಯಿತೆ ? ಎಲ್ಲಿ ನಮ್ಮ ದಾನವಶಿಲ್ಪಿ ?” ಎಂದು ಮಯಾಸುರನನ್ನು ಕರೆದು “ಇಂದ್ರನ ಸಿಂಹಾಸನಕ್ಕಿಂತ ಒಂದು ಮೊಳ ಹೆಚ್ಚಿನ ಸಿಂಹಾಸನವನ್ನು ನಾಳೆ ಮಾಡಬೇಕು. ನಾಳಿನಿಂದ ನಾನು ಇಂದ್ರನ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಿಲ್ಲ ತಿಳಿಯಿತೆ ?” ಎಂದು ಅಪ್ಪಣೆ ಮಾಡಿದನು. “ಇಂದ್ರ ! ನೀನು ಇಲ್ಲಿಯೇ ಇರು” ಎಂದು ಅಪ್ಪಣೆ ಮಾಡಿ ತಾನು ಅಮಲಿನಲ್ಲಿ ಹಾಗೆಯೇ ದಿಂಬಿನ ಮೇಲೆ ಒರಗಿದನು.

ಇಂದ್ರನಿಗೆ ಆಶ್ಚರ್ಯವಾಯಿತು. ವೃತ್ರನನ್ನು ಆತನು ಎಷ್ಟೋ ದಿನ ಅಮಲಿನಲ್ಲಿ ಕಂಡಿದ್ದನು. ಯಾವೊತ್ತೂ ಹೀಗೆ ಹೇಳಿರಲಿಲ್ಲ. ಇವೊತ್ತು “ನೀನೇ ಇಂದ್ರ ! ನಾಳಿನಿಂದ ನೀನೇ ಇಂದ್ರ” ಎನ್ನುತ್ತಿದ್ದಾನೆ. ಪ್ರಾರಬ್ಧವೇನಾದರೂ ಇದನ್ನು - ಇವನ ಬಾಯಲ್ಲಿ ನುಡಿದದ್ದನ್ನು ನಿಜ ಮಾಡಿಸುತ್ತದೆಯೋ ? ಏನಾದರೂ ಆಗಲಿ. ಇವನ ಬಾಯಲ್ಲಿ ಬಂದುದು ನಿಜವಾಗಲಿ. ಒಳಗೆ ಹೊರಗೆ ಎಲ್ಲಾ ತುಂಬಿ ಎಲ್ಲಾ ವಿಶ್ವವನ್ನೂ ಆಡಿಸುವ ಶ್ರೀಮನ್ನಾರಾಯಣನ ದಯೆಯಿಂದ ಇದು ನಿಜವಾಗಲಿ ಎಂದು ಮನಸ್ಸಿನಲ್ಲಿಯೇ ಮಹಾವಿಷ್ಣುವಿಗೆ ಪೂಜೆಮಾಡಿ ಕುಳಿತನು. ಬಲಗಣ್ಣೂ ಬಲಭುಜವೂ ಶುಭವಾಗಿ ಅದುರಿತು. ಅಡಗಿದ್ದ ಉತ್ಸಾಹವು ತಾನೇ ತಾನಾಯಿತು. ಮರೆಯಲ್ಲಿದ್ದ ಆಯುಧಗಳೆಲ್ಲ ಮನಸ್ಸಿಗೆ ಗೋಚರವಾಗಿ ತಾವು ಸಿದ್ಧವಾಗಿರುವುದನ್ನು ತೋರಿಸಿಕೊಂಡವು. ಇಂದ್ರನಿಗೆ ಏನು ಮಾಡುವುದು ಎಂಬುದು ಯೋಚನೆಯಾಗಿ ಮಹಾವಿಷ್ಣುವಿನ ಪ್ರೇರಣೆ ಏನಾಗುವುದೋ ಎಂದು ಮೈಯೆಲ್ಲಾ ಕಣ್ಣಾಗಿ ಕುಳಿತನು.

ದಾನವೇಂದ್ರರೂ ವೃತ್ರಾಸುರನು ಹೇಳಿದುದನ್ನು ಕೇಳಿದರು. ಆದರೂ ಅದನ್ನು ಯಾರು ಅಷ್ಟಾಗಿ ಗಮನಿಸಲಿಲ್ಲ. “ಇನ್ನು ನಾನು ಅತೀಂದ್ರನಾಗುವೆನು” ಎಂದು ವೃತ್ರನು ಹೇಳಿದುದನ್ನು ಕೇಳಿ, ಅವರು ಅತೀಂದ್ರಸಿಂಹಾಸನಕ್ಕೆ ಅಪ್ಪಣೆ ಮಾಡಿದುದನ್ನು ಕೇಳಿ ಅವರಿಗೆ ಸಂತೋಷವಾಯಿತು. “ಇಂದ್ರ-ಅತೀಂದ್ರ ! ಅದು ಸರಿ, ಅದೇ ಉಚ್ಛ್ರಾಯದ ಗುರುತು” ಎಂದು ಅವರೆಲ್ಲ ಸಂತೋಷಪಟ್ಟು ಪಾನದ ವೈಭವದ ವಿವಶರಾಗಿ ಎಲ್ಲಿಯವರು ಅಲ್ಲಿಯೇ ಒರಗಿದರು.

ಇಂದ್ರನೊಬ್ಬನೇ ಎಚ್ಚರನಾಗಿರುವವನು. ಮಿಕ್ಕವರೆಲ್ಲರೂ ಮೈ ಮರೆತಿದ್ದಾರೆ. ಆಯುಧಗಳೆಲ್ಲವೂ ತೇಜಸ್ವಿಗಳಾಗಿ ಬಂದು ಎದುರು ನಿಂತಿವೆ. ಆದರೆ, ಮಹಾ ವಿಷ್ಣುವಿನ ಅಪ್ಪಣೆಯಿನ್ನೂ ಬಂದಿಲ್ಲ. “ಸಪರಿವಾರನಾದ ವೃತ್ರನನ್ನು ಈಗ ತುಂಡು ತುಂಡು ಮಾಡಲು ಅವಕಾಶವು ಲಭಿಸಿದೆ. ಆದರೆ ಜಗತ್ಪಾಲಕನಾದ ಮಹಾವಿಷ್ಣುವಿನ ಅಪ್ಪಣೆಯಿಲ್ಲದೆ, ಆ ಕಾರ್ಯವನ್ನು ಮಾಡುವುದು ಹೇಗೆ? ಅಪ್ಪಣೆಯಿಲ್ಲದೆ ವಿಶ್ವರೂಪಾಚಾರ್ಯನನ್ನು ವಧಿಸಿದುದಕ್ಕೆ ಈ ಕೃತ್ಯದ ವಶದಲ್ಲಿ ಇಷ್ಟು ದಿನ ತೊಳಲಬೇಕಾಯಿತು. ಈಗ ಇದನ್ನು ವಧಿಸಿದರೆ ಇನ್ನು ಯಾವ ರೂಪದ ಕಷ್ಟವನ್ನು ಅನುಭವಿಸಬೇಕಾದೀತೋ? ಅದರಿಂದ ಎಲ್ಲರ ಹೃದಯದಲ್ಲೂ ನಿಂತು ಎಲ್ಲವನ್ನೂ ಪ್ರೇರಿಸುವ ಆತನ ಆಜ್ಞೆಯು ದೊರಕಲಿ, ಅಥವಾ ಯಾವ ಆಯುಧಕ್ಕೂ ಸಗ್ಗದ ಭೂತವಿದು. ಹಗಲಲ್ಲಿ ಇದು ಸಾಯುವುದಿಲ್ಲ; ರಾತ್ರಿಯಲ್ಲೂ ಸಾಯುವುದಿಲ್ಲ. ಹೀಗೆ ಆಯುಧಕ್ಕತೀತವಾಗಿ, ಕಾಲಕ್ಕತೀತವಾಗಿರುವ ಈ ಭೂತವನ್ನು ಕೊಲ್ಲುವುದಾದರೂ ಎಂತು ? ಅಲ್ಲದೆ ಕಾರ್ಯವನ್ನು ಆರಂಭಿಸಿದರೆ, ಅದು ಪೂರ್ಣವಾಗಬೇಕು. ಅದಿಲ್ಲದ ಅರೆಗಾಯ ಮಾಡಿ ಕೊಲ್ಲದೆ ಬಿಟ್ಟ ಬೇಟೆಯೇ ಬೇಟೆಗಾರನ ಮೇಲೆ ಬೀಳುವುದೆಂದ ಮೇಲೆ, ಈ ಭೂತಕ್ಕೆ ಅರೆಗಾಯ ಮಾಡಿಬಿಟ್ಟರೆ ಇದು ನನ್ನನ್ನು ಬಿಡುವುದುಂಟೆ?

“ಆಯಿತು. ದೇವಕಾರ್ಯಾರ್ಥವಾಗಿ ಈ ಕೆಲಸ ಮಾಡುವೆನಲ್ಲವೆ? ಆದರೆ ಕಾಲ ಪಕ್ವವಾಗಿಲ್ಲ. ಇದು ಹಗಲು, ಈ ಭೂತವನ್ನು ಸಾಯಿಸುವ ಆಯುಧವು ತಾನೇ ಯಾವುದು ನನ್ನಲ್ಲುಂಟು ? ಅದರಿಂದ ದೇವಕಾರ್ಯವೇ ಆದರೂ ದೇವಸಂರಕ್ಷಕನಾದ ಮಹಾವಿಷ್ಣುವಿಗೆ ಈ ಕೆಲಸವನ್ನು ಒಪ್ಪಿಸಿ, ಆತನ ಆಜ್ಞೆಯನ್ನು ಎದುರು ನೋಡುತ್ತಿರುವೆನು.”

ಅಂತೂ, ಭೂತಕ್ಕೆ ಕೊನೆಯ ಕಾಲ ಬಂದಿರಬೇಕು. ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿದೆ. ಅದರಿಂದ, ಇಂದೇ ಇದರ ವಧವಾಗಬೇಕು. ಕಾಲವು ಯಾವುದು, ಆಯುಧವು ಯಾವುದು ಎಂಬುದನ್ನು ಮಹಾವಿಷ್ಣುವು ನಿರ್ಧರಿಸಲಿ. ಎಷ್ಟೇ ಆಗಲಿ ನಾನು ಹೊಡೆಯುವುದಕ್ಕೆ. ಹೊಡೆಸುವವನು ಮಹಾವಿಷ್ಣು !” ಎಂದು ಇಂದ್ರನು ಕೈಮುಗಿದನು.

ಇಂದ್ರನು ಆ ಮಾತನ್ನಾಡುತ್ತಿದ್ದ ಹಾಗೆಯೇ ವೃತ್ರನು ಕನವರಿಸಿಕೊಂಡನು. “ಸರಿ, ಇಂದ್ರ, ಭಲೇ ! ನಿನ್ನ ಮಾತು ಸರಿ” ; ಇಂದ್ರನು ಮೈಯೆಲ್ಲ ಕಣ್ಣಾಗಿ ವೃತ್ರನಿಂದ ಆ ಮಾತು ಆಡಿಸಿದವರು ಯಾರು ಎಂದು ನೋಡಿದನು. ಇನ್ನು ಯಾರು ! ಮಹಾವಿಷ್ಣು. ಸರಿ, ಎಂದು ಮಾನಸೋಪಚಾರ ಪೂಜೆ ಮಾಡಿ ಶಚೀಪತಿಯು ಇನ್ನೂ ಎಚ್ಚರವಾಗಿ ಕುಳಿತನು.

* * * *

೧೭.ಗೆಲುವೇ ಸೋಲು

ಸಂಪಾದಿಸಿ

ಇನ್ನು ಅಷ್ಟು ಹೊತ್ತಿನೊಳಗೆ ವೃತ್ರನು ಗಾಬರಿಗೊಂಡು ಎದ್ದನು. ಮುಖ, ಕಣ್ಣು ಎಲ್ಲವೂ ಗಾಬರಿಯನ್ನು ಸೂಚಿಸುತ್ತ ಇತ್ತು. ಕಣ್ಣು ಬಿಟ್ಟು ನೋಡುತ್ತಾನೆ. ಇಂದ್ರನು ಅತಿ ವಿನಯದಿಂದ ಕುಳಿತಿದ್ದಾನೆ. ತನ್ನ ಪರಿವಾರದ ದಾನವೇಂದ್ರರೆಲ್ಲರೂ ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ಒರಗಿದ್ದಾರೆ. ಒಂದೇ ಗಳಿಗೆಯೊಳಗಾಗಿ ಸುತ್ತಲೂ ನೋಡಿ, ಎಲ್ಲವೂ ಸಹಜವಾಗಿರುವುದನ್ನು ಕಂಡು ವೃತ್ರನು ನಗುತ್ತ “ಇಂದ್ರ, ನನಗೊಂದು ಕನಸಾಯಿತು. ಕನಸು ನಿಜವಾಗಿಯೇ ಇದ್ದಂತೆ ತೋರಿತಲ್ಲ ! ನೋಡಿದೆಯೋ ?” ಎಂದನು.

ಇಂದ್ರನು ತನ್ನನ್ನು ವೃತ್ರನು ಇಂದ್ರನೆಂದು ಸಂಬೋಧಿಸಿದುದನ್ನು ಗಮನಿಸದಂತೆ ಇದ್ದು “ಹೌದು ಪ್ರಭು.ಕನಸಿನ ವೈಭವವೇ ಅದು. ನಿಜದ ತಲೆಯನ್ನು ಮೆಟ್ಟಿಹಾಕಿದಂತೆ ಇರುತ್ತದೆ. ಅದೇನೆಂದು ಕೇಳಬಹುದೇ ?” ಎಂದನು.

ವೃತ್ರನು ಗಟ್ಟಿಯಾಗಿ ನಗುತ್ತ “ಕನಸಿನಲ್ಲಿ ನಾವಿಬ್ಬರೂ ಯುದ್ಧಮಾಡುತ್ತೇವೆ. ನೀನು ನನ್ನನ್ನು ಎದುರಿಸಿ ಹೊಡೆಯಲು ಬರುತ್ತೀಯೆ. ನನಗೇಕೋ ದಿಗಿಲಾಗುತ್ತಿದೆ. ನಾನು ಕಿರುಚಿಕೊಂಡು ಓಡುತ್ತೇನೆ. ನೀನು ಬಂದು ನನ್ನ ಕತ್ತು ಕಡಿಯುತ್ತೀಯೆ. ನಾನು ಯತ್ನವಿಲ್ಲದೆ ಕತ್ತು ಹೋದ ಮೇಲೂ ‘ಮರೆತೆಯಾ ? ವೃತ್ರನು ಸದೇಹನಾಗಿರುವುದಕ್ಕಿಂತ ವಿದೇಹನಾಗಿ ಹೆಚ್ಚು ಬಲಿಷ್ಠನು’ ಎಂದು ನಿನ್ನನ್ನು ಹಿಡಿದುಕೊಳ್ಳುತ್ತೇನೆ. ಆದರೂ ದಿಗಿಲಾಗಿ ಎಚ್ಚರವಾಯಿತು” ಎಂದು ನಗುತ್ತಾ “ನಿನಗೆ ನನ್ನನ್ನು ಕೊಲ್ಲುವ ಬುದ್ಧಿಯಿಲ್ಲವಲ್ಲಾ ?” ಎಂದು ಹೇಳುತ್ತಾನೆ ಇಂದ್ರನು, “ನನಗಂತಹ ಬುದ್ಧಿಯೇ ? ಚೆನ್ನಾಯಿತು’ ಎಂದು ನಗುತ್ತಾ ಒಳಗೊಳಗೆ “ದೇವ, ಈ ಕನಸು ನಿಜವಾಗಲಿ. ಈ ಭೂತವಿಂದು ಸಾಯಲಿ” ಎಂದು ನಾರಾಯಣನಿಗೆ ಕೈಮುಗಿಯುತ್ತಾನೆ.

ವೃತ್ರ ಹಾಗೆಯೇ ಅರೆಗಣ್ಣು ಮುಚ್ಚಿ ನಿದ್ದೆಯ ಜೋಂಪನ್ನು ಅನುಭವಿಸುತ್ತಾ ಒಂದಷ್ಟು ಹೊತ್ತು ಇದ್ದು, ಮೈಮುರಿದು ಎಚ್ಚರಮಾಡಿಕೊಂಡು, ಸುತ್ತಲೂ ಬಿದ್ದಿದ್ದ ದಾನವೇಂದ್ರರನ್ನು ತಿರಸ್ಕಾರವಾಗಿ ನೋಡುತ್ತಾ “ನೋಡು, ನಾವು ನಾಳೆಯ ಬೆಳಿಗ್ಗೆಯವರೆಗೆ ಹೀಗೇ ಬಿದ್ದಿರುವೆವೋ ಏನೋ ? ಹುಂ” ಎಂದು ಮೇಲಕ್ಕೆದ್ದು “ಇದು ಅಪ್ಪಣೆಯಲ್ಲ ವಿಶ್ವಾಸದ ಪ್ರಾರ್ಥನೆ. ಹಾಗೆಯೇ ಸಮುದ್ರತೀರಕ್ಕೆ ಹೋಗಿ ಬರೋಣ, ರಥವನ್ನು ತರಿಸುವೆಯಾ ?” ಎಂದನು.

ಇಂದ್ರನು “ಪ್ರಾರ್ಥನೆಯೆನ್ನುವಷ್ಟು ಗೌರವವೇಕೆ ? ತರಿಸುವೆನು” ಎಂದು ಹೇಳಿ ಹೋಗಿ ಪ್ರಹರಿಗೆ ಹೇಳಿದನು. ಇನ್ನೊಂದು ಗಳಿಗೆಯೊಳಗಾಗಿ ರಥವು ಬಂತು. ಇಂದ್ರ ವೃತ್ರರಿಬ್ಬರೇ ರಥದಲ್ಲಿ ಕುಳಿತು ಸಮುದ್ರತೀರಕ್ಕೆ ಹೊದರು. ಇಂದ್ರನಿಗೆ ಆಶ್ಚರ್ಯ ! ವೃತ್ರನು ಯಾವ ಕವಚವನ್ನೂ ಧರಿಸಿಲ್ಲ. ತಾನೂ ಯಾವ ಕವಚವನ್ನೂ ಧರಿಸಿಲ್ಲ. ಮೈಮೇಲೆ ಅಷ್ಟು ಆಭರಣಗಳಿವೆ. ಅಂದು ವೃತ್ರ ತನ್ನ ಗುರುಕಿರೀಟವನ್ನೂ ಧರಿಸಿಲ್ಲ !

ಸಮುದ್ರ ತೀರದಲ್ಲಿ ಯಾವುದ್ಯಾವುದೋ ಮಾತುಗಳನ್ನು ಆಡುತ್ತ ಆಡುತ್ತ ಇಬ್ಬರೂ ಸಂತೋಷವಾಗಿ ಹೊತ್ತು ಕಳೆಯುತ್ತಿದ್ದಾರೆ. ಇಂದ್ರನ ಮನಸ್ಸು ಮಾತ್ರ ಯಾವುದೋ ಮಹತ್ತರವಾದ ಕಾರ್ಯವನ್ನು ಸಾಧಿಸಬೇಕಾದ ಕಾಲದಲ್ಲಿ ಇರುವಂತೆ ಪೂರ್ಣವಾಗಿ ಜಾಗ್ರತವಾಗಿದೆ. ವೃತ್ರನು ತನ್ನ ದುಃಖವನ್ನು ಹೇಳಿಕೊಳ್ಳುತ್ತಾನೆ. “ನೋಡು ಇಂದ್ರ, ಬೇಕೆಂದರೂ ನಾನು ಯಾರೊಡನೆಯೂ ಯುದ್ಧಮಾಡುವಂತಿಲ್ಲವೋ? ನನಗೆ ಮಲ್ಲಯುದ್ಧ ಮಾಡಬೇಕೆಂದು ಆಸೆ. ನೀನು ಬೇಕೆಂದರೆ ಪರ್ವತದಷ್ಟು ಆಗಬಲ್ಲೆಯಂತೆ ! ಏಕೆ ನೀನು ನನ್ನ ಪ್ರಮಾಣಕ್ಕೆ ಸರಿಯಾದ ಪ್ರಮಾಣವುಳ್ಳವನಾಗಿ ನನ್ನೊಡನೆ ಒಮ್ಮೆ ಮಲ್ಲಯುದ್ಧ ಮಾಡಬಾರದು?” ಎನ್ನುತ್ತಾನೆ.

ಇಂದ್ರನು “ಅದೇನೂ ಅಂತಹ ಅಸಾಧ್ಯವಲ್ಲ. ಆದರೂ ನಿಜ ಹೇಳಬೇಕೆಂದರೆ ನಿನ್ನೆದುರಿನಲ್ಲಿ ನನ್ನ ಯಾವ ಪ್ರಭಾವವೂ ನಡೆಯುವುದಿಲ್ಲ. ನಿನ್ನನ್ನು ಕಂಡು ನನ್ನ ಸಿದ್ಧಿಗಳೇಲ್ಲ ಹೆದರಿ, ಎಲ್ಲಿಯೋ ಅವಿತುಕೊಂಡಂತಿವೆ” ಎಂದು ನಗುತ್ತಾನೆ.

“ಇಲ್ಲ ಇಂದ್ರ, ನಿನ್ನ ಸಿದ್ಧಿಗಳು ನಿನಗೆ ಹಿಂತಿರುಗಲಿ. ಜೊತೆಗೆ ನಾನೇ ಕೊನೆಗೆ ಸೋಲುತ್ತೇನೆ. ಇನ್ನಾದರೂ ಮನಸ್ಸು ಮಾಡು.”

“ನನ್ನ ಸಿದ್ಧಿಗಳೆಲ್ಲ ನನಗೆ ಹಿಂತಿರುಗಿ ಬಂದರೂ ನಾನೂ ನೀನೂ ಸ್ನೇಹಿತರಾಗಿರುವುದಾಗಿ ಪ್ರಮಾಣ ಮಾಡಿಕೊಂಡಿದ್ದೇವೆ. ಮಲ್ಲಯುದ್ಧವು ಏನಿದ್ದರೂ ಪ್ರಾಣವನ್ನು ಪಣವಾಗಿಟ್ಟು ಮಾಡಿದರೆ ಚೆನ್ನ ನಾನು ನಿನ್ನ ದ್ವೇಷಿಯಲ್ಲ. ಅದರಿಂದ ಸಾಧ್ಯವಿಲ್ಲ.”

“ಹಾಗಲ್ಲ ಇಂದ್ರ, ನಾನೇ ಅಪ್ಪಣೆ ಕೊಡುತ್ತೇನೆ. ನಿನಗೆ ವಿಶ್ವಾಸಘಾತುಕತ್ವವು ಬರದಿರಲಿ. ನಾನು ವರವನ್ನು ಕೊಡುತ್ತೇನೆ. ಬಾ, ಒಮ್ಮೆ ಮಲ್ಲಯುದ್ಧ ಮಾಡೋಣ.

ಈ ತೋಳುಗಳ ತೀಟೆ ತೀರಲಿ.”

“ಆಗಲಿ, ನೋಡೋಣ”

“ನನಗೆ ಬೇಕಾದುದು ಈಗ. ನೀನು ಏನೋ ಸಾವಧಾನವಾಗಿ ‘ಆಗಲಿ, ನೋಡೋಣ’ ಎನ್ನುತ್ತೀಯೆ.”

ಈ ವೇಳೆಗೆ ಸಂಜೆಯಾಯಿತು. ವೃತ್ರನು ಹೇಳಿದನು ; “ಇಂದ್ರ, ನೋಡು ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಿದ್ದಾನೆ. ಸಂಜೆಯಾಗುತ್ತಿದೆ. ಈಗ ನನಗೆಷ್ಟು ಬಲ ಬಲ್ಲೆಯಾ ? ಬೇಕಾದರೆ, ಸಮುದ್ರವನ್ನೆಲ್ಲ ಅಂಗೈಯಲ್ಲಿ ಹಿಂದಕ್ಕೆ ತಳ್ಳಿಬಿಡುತ್ತೇನೆ. ನೋಡುವೆಯಾ ನನ್ನ ಪೌರುಷವನ್ನು ?”

“ಹೌದು, ನೀನಂತಹ ಬಲಶಾಲಿಯೆಂದೇ ನಾನು ನಿನ್ನ ಮೇಲೆ ಯುದ್ಧ ಮಾಡಲು ಹಿಂತೆಗೆದುದು.”

“ನೀನು ಯುದ್ಧ ಮಾಡುವುದಾದರೆ, ಅದನ್ನೆಲ್ಲ ಅತ್ತಿಡುವೆನು, ಆಯಿತು. ನಾನು ಎಷ್ಟು ಹೇಳಿದರೂ ನೀನೊಪ್ಪÅವುದಿಲ್ಲ. ಅದಿರಲಿ. ಹೋಗಲಿ, ಇಲ್ಲಿ ಬಂಡೆಗಳಂತೆ ತೇಲಿಬರುತ್ತಿರುವ ಈ ನೊರೆಯನ್ನು ನೋಡು. ಇದರಿಂದ ಹೊಡೆದು ಯಾರನ್ನಾದರೂ ಕೊಲ್ಲಲಾದೀತೆ ?”

“ನಿನ್ನಂತಹ ಪರಾಕ್ರಮಿಗೆ ಯಾವುದು ತಾನೇ ಸಾಧ್ಯವಿಲ್ಲ ? ಹೊಡೆಯಲು ಸಾಧನವಲ್ಲ ಮುಖ್ಯ. ಹೊಡೆಯುವ ಕೈ ಎಷ್ಟು ಬಲವನ್ನು ಆ ಸಾಧನಕ್ಕೆ ಕೊಡಬಲ್ಲುದು ಎಂಬುದು ಮುಖ್ಯ.”

“ನೀನು ಯಾರನ್ನಾದರೂ ಹಿಂದೆ ನೊರೆಯಿಂದ ಹೊಡೆದು ಕೊಂದಿದ್ದೀಯಾ?”

“ನನಗೆ ಇದನ್ನು ಆಯುಧವಾಗಿ ಉಪಯೋಗಿಸಬಹುದು ಎಂದು ಹೊಳೆದೇ ಇಲ್ಲ. ನನಗೆ ಬೇಕಾದಷ್ಟು ಆಯುಧಗಳಿರುವಾಗ ಈ ನೊರೆಯನ್ನೇಕೆ ಆಯುಧವಾಗಿ ಉಪಯೋಗಿಸಲಿ ?”

“ಈಗ ನಾನು ಹೇಳುವೆನು. ಎಲ್ಲಿ ಇದನ್ನು ಎತ್ತಿ ಹೊಡೆ, ನೋಡೋಣ.”

“ಯಾರನ್ನು ಹೊಡೆಯಲಿ ?”

“ನನ್ನನ್ನೇ ಹೊಡೆ.”

ಇಂದ್ರನು ಎಚ್ಚರವಾದನು. ಇನ್ನೂ ಮಹಾವಿಷ್ಣುವಿನ ಅಪ್ಪಣೆಯಿಲ್ಲ ಅದರಿಂದ ನಕ್ಕನು. “ನೀನು ಮಾಡುವ ಕೆಲಸವನ್ನು ನೋಡು ವೃತ್ರೇಂದ್ರ. ನಾನು ಇದನ್ನು ಎತ್ತಿ ಹೊಡೆದೆನೆಂದಿಟ್ಟುಕೋ. ನೀನು ಯಾವ ಆಯುಧಕ್ಕೂ ಜಗ್ಗದವನು. ಇನ್ನು ಈ ನೊರೆಗೆ ಜಗ್ಗುವೆಯಾ ? ನಿನಗೆ ನಾನು ಹೊಡೆದರೂ ನೀನು ಸಾಯುವುದಿಲ್ಲ. ನನಗೆ ಅದರಿಂದ ಅಪಪ್ರಥೆ. ನೀನು ಸತ್ತರೆ, ಏಕಾಂತದಲ್ಲಿ ಮಿತ್ರನನ್ನು ಹೊಡೆದು ಕೊಂದೆಯೆಂದು ನನಗೆ ಕೆಟ್ಟ ಹೆಸರು. ಹೀಗೆ ನೀನು ಮಾಡಬಹುದೇ? ಹಾಗೂ ಕೆಟ್ಟ ಹೆಸರು. ಅದರಿಂದ ಈ ಕಾರ್ಯ ನನಗೆ ಬೇಡ.”

“ನಿನ್ನ ಪೌರುಷವನ್ನಾದರೂ ನೋಡೋಣ, ಹೊಡೆ ನಿನಗೆ ಕೆಟ್ಟ ಹೆಸರು ಬರದಿರಲಿ.”

ಮತ್ತೆ ಇಂದ್ರನು ಒಳಗೆ ಮಹಾವಿಷ್ಣುವಿನ ಪ್ರಾರ್ಥನೆಯನ್ನು ಮಾಡಿದನು. ನಾರಾಯಣನು ಅಂತರ್ಹೃದಯದಲ್ಲಿ ಗೋಚರನಾಗಿ, “ಹೊಡೆ, ಸಾಯಲೆಂದೇ ಹೊಡೆ, ಅದರಲ್ಲಿ ನಿನ್ನ ವಜ್ರಾಯುಧವನ್ನು ಅಭಿಮಂತ್ರಿಸಿ ಹೊಡೆ. ಶತ್ರುನಾಶವಾಗಲಿ” ಎಂದನು. ವೃತ್ರನೂ ಮತ್ತೆಯೂ ಬಲವಂತ ಮಾಡಿದನು.

ಇಂದ್ರನು ಯೋಚಿಸುವವನಂತೆ ಹೊರಗೆ ವಿಮುಖನಾಗಿದ್ದು ಒಳಗೆ ಚಿಂತಿಸಿದನು. “ಹೌದು. ಕಾಲವು ಹಗಲಲ್ಲ. ರಾತ್ರಿಯಲ್ಲ ಸಂಜೆ. ನೊರೆಯು ಒಣಗಿದುದಲ್ಲ ಹಸಿಯದಲ್ಲ. ಯಾವ ಆಯುಧವೂ ಇಲ್ಲ. ಭೂತವೂ ಸಾಯಲು ಸಿದ್ಧವಾಗಿದೆ. ಸರಿ” ಎಂದು ವಜ್ರವನ್ನು ಆ ನೊರೆಯಲ್ಲಿ ಆರೋಪಿಸಿ, “ಇದೋ ವೃತ್ರ, ನನ್ನ ಸರ್ವಶಕ್ತಿಯನ್ನೂ ಪ್ರಯೋಗಿಸಿ, ಈ ನೊರೆಯಿಂದ ನಿನ್ನನ್ನು ಹೊಡೆಯುವೆನು. ನನಗೆ ಮಿತ್ರದ್ರೋಹವು ಬರದಿರಲಿ. ಇದರಿಂದ ನೀನು ಸಾಯಬೇಕು” ಎಂದು ಅವನನ್ನು ಹೊಡೆದನು.

ನೊರೆಯು ಅವನ ಮೈಗೆ ತಾಕಿತೋ ಇಲ್ಲವೋ, ವಜ್ರಾಯುಧವು ತನ್ನ ಕೆಲಸವನ್ನು ಮಾಡಿತು. ಆ ಪರ್ವತಾಕಾರದ ದೇಹದಲ್ಲಿ ಒಂದು ಪರ್ವತಶೃಂಗದ ಮೇಲೆ ನಿಂತಿದ್ದ ಮತ್ತೊಂದು ಗಿರಿಯಂತಿದ್ದ ತಲೆಯು ಥಟ್ಟನೆ ಕತ್ತರಿಸಿಬಿತ್ತು. ಪರ್ವತಾಕಾರದ ಆ ದೇಹವು ಉರುಳಿ ಬಿತ್ತು.

ಇಂದ್ರನು ತಟ್ಟನೆ ತನ್ನ ಶಚಿಪತಿತ್ವವನ್ನೂ, ದೇವರಾಜತ್ವವನ್ನು ಧಾರಣ ಮಾಡಿಕೊಂಡು, “ಇದೊ ! ದೇವರಾಜನಾಗಿ, ಶಚಿಪತಿಯಾಗಿ ಅಪ್ಪಣೆಮಾಡುತ್ತಿರುವೆನು. ಈ ಪರ್ವತಾಕಾರದ ಶರೀರವನ್ನು ಹೊತ್ತು ನಿಂತಿದ್ದ ಪ್ರಾಣವು ಈಚೆಗೆ ಬರಲಿ ! ಶರೀರವನ್ನು ರಚಿಸಿರುವ ಪಂಚಭೂತಗಳೆಲ್ಲವೂ ಈ ಕ್ಷಣದಲ್ಲಿ ವಿಘಟಿತವಾಗಿ ಭೂತಗಳೊಡನೆ ಸೇರಿಹೋಗಲಿ.......” ಎಂದನು.

ಇನ್ನೂ ಏನು ಹೇಳಬೇಕೆಂದಿದ್ದನೋ, ಅಷ್ಟರಲ್ಲಿ ನೀರಿನಲ್ಲಿ ತೊಯ್ದು ಹೋಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಟ್ಟೆಯು ಮುದ್ದೆಯಾಗಿ ಬೀಳುವಂತೆ, ಶುದ್ಧವಾಗಿ ನಿಶ್ಯಕ್ತನಾಗಿ ‘ಅಯ್ಯೋ !’ ಎಂದು ಬಿದ್ದುಬಿಟ್ಟನು.

ಅಗ್ನಿ, ವಾಯು, ಶಚೀ, ಬೃಹಸ್ಪತಿಗಳು ಕೂಡಲೇ ಅಲ್ಲಿಗೆ ಬಂದು ಇಂದ್ರನನ್ನು ಬೀಳದಂತೆ ಹಿಡಿದುಕೊಂಡರು. ಆತನ ಆಯುಧಗಳೆಲ್ಲವೂ ಸಾಂಗೋಪಾಂಗವಾಗಿ ಬಂದು ಆತನ ಸುತ್ತಲೂ ರಕ್ಷಣೆಗೆ ನಿಂತವು.

ಇತ್ತ ವೃತ್ರನ ದೇಹದಲ್ಲಿದ್ದ ಪ್ರಾಣವಾಯುವು ಹಾರಿಹೋಯಿತು. ಸ್ಥೂಲ ಭೂತಗಳೆಲ್ಲವೂ ಒಂದೇ ರೆಪ್ಪೆಮುಚ್ಚಿನೊಳಗೆ ಆ ದೇಹವನ್ನು ಬಿಟ್ಟು ತಮ್ಮ ತಮ್ಮ ಮೂಲಸ್ಥಾನದಲ್ಲಿ ಐಕ್ಯವಾದುವು. ವೃತ್ರನ ಅಂತಃಕರಣವು ಮಾತ್ರ ಅಲ್ಲಿಯೇ ಏನು ಮಾಡಬೇಕೋ ತಿಳಿಯದೆ ಒದ್ದಾಡುತ್ತಿತ್ತು.

* * * *

೧೮.ವರವೋ? ಶಾಪವೋ?

ಸಂಪಾದಿಸಿ

ವೃತ್ರನು ಹೋದನೆಂಬ ಸುದ್ದಿಯು ಅಮರಾವತಿಯಲ್ಲೆಲ್ಲ ಇರಲಿ, ಸ್ವರ್ಗಲೋಕದಲ್ಲೆಲ್ಲಾ ಮಿಂಚಿನ ವೇಗದಲ್ಲಿ ಹರಡಿತು. ಬರಿಯ ತರಗೆಲೆಗಳು ತುಂಬಿರುವ ಕಾಡಿನಲ್ಲಿ ಬೆಂಕಿಯು ಹರಡುವಂತೆ, ಒಣಗಿ ನಿಂತಿರುವ ಹುಲ್ಲಿನ ಕಾವಲು ಹೊತ್ತುಕೊಳ್ಳುವಷ್ಟು ವೇಗವಾಗಿ ಹರಡಿತು. ದಾನವರು ಹಾ ಹಾ ಎನ್ನುತ್ತ ಎದ್ದರು. ಅವರಿಗೆ ಅಮಲು ಇಳಿಯುವುದರಲ್ಲಿ, ಅನಿರೀಕ್ಷಿತವಾಗಿ, ಅಕಾರಣವಾಗಿ ಅವರು ತೇಜೋಹೀನರಾಗಿದ್ದಾರೆ. ಪಕ್ಕದಲ್ಲಿದ್ದ ಅಪ್ಸರೆಯರು ಕಾಣದಾಗಿದ್ದಾರೆ. ತೆರೆಯ ಹಿಂದೆ ಕುಳಿತು ಗಾನ ಮಾಡುತ್ತಿದ್ದ ಗಂಧರ್ವಗಣವು ಯಾವಾಗಲೋ ಓಡಿಹೋಗಿದೆ. ದಾನವೇಂದ್ರರಿದ್ದ ಅರಮನೆಗಳು ಏನೋ ಶೂನ್ಯವಾಗಿ, ಏನೋ ಬಿಕೋ ಎನ್ನುತ್ತ ಅವರನ್ನು ನೋಡಿ ಹಾಸ್ಯಮಾಡುವಂತೆ, ವಿಕಟವಾಗಿ ನಗುತ್ತಿರುವಂತೆ ಕಾಣುತ್ತಿವೆ. ಅವರ ವೃತ್ರನು ಸತ್ತನೆಂದು ನಂಬಲು ಹೊರಗಿನ ಸಾಕ್ಷ್ಯವೇನೂ ಬೇಕಿಲ್ಲ. ಅವರ ಹೃದಯವನ್ನು ಆವರಿಸಿರುವ ಶೂನ್ಯತೆ, ಅವರಿಗೆ ಹುಟ್ಟಿರುವ ಗಾಬರಿ, ಅದೇ ಹೇಳುತ್ತಿದೆ. ದಾನವೇಂದ್ರರಿಗೆ ದಿಗಿಲಾಗಿ, ಆದಷ್ಟು ಬೇಗ ಅಮರಾವತಿಯಿಂದ ಹೊರಟುಹೋಗಬೇಕು ಎನ್ನಿಸಿದೆ. ನಿಂತಿದ್ದವರು ಕುಳಿತು ಬಿದ್ದುಕೊಳ್ಳುವುದಿರಲಿ ನಿಂತಂತೆಯೇ ಕುಸಿದು ಬಿದ್ದಂತಾಗಿದೆ. ಕೆಟ್ಟ ಕನಸಾಗಿ ಯಾವುದೋ ಪಿಶಾಚವು ಓಡಿಸಿಕೊಂಡು ಬರುತ್ತಿದ್ದರೆ, ಓಡುವುದಕ್ಕೆ ಕಾಲೂ ಬರದೆ ಇದ್ದಾಗ ಆಗುವಷ್ಟು ಭೀತಿಯಾಗಿ, ಅವರು ಅಲ್ಲಿಂದ ಏಳಲೂಲಾರರು, ಅಲ್ಲಿ ಇರಲೂಲಾರರು ಎನ್ನುವಂತಾಗಿದೆ.

ದೇವತೆಗಳು ಕುಣಿಯುತ್ತಿದ್ದಾರೆ. ಅವರ ಉತ್ಸಾಹವು ಏನು ! ಅಖಂಡವಾಗಿ ವೃಷ್ಟಿಯಾಯಿತೋ ಎನ್ನುವಂತೆ ಗಳಿಗೆಗಳಿಗೆಗೂ ಹೆಚ್ಚುತ್ತಿದೆ. ಎಲ್ಲರೂ, ಅಪ್ಸರೋಗಣಗಳು, ಗಂಧರ್ವರ ಗುಂಪುಗಳು, ಚಾರಣರ ತಂಡಗಳು, ಎಲ್ಲರೂ ಸೇರಿ ಇಂದ್ರವಿಜಯವನ್ನು ಹಾಡುತ್ತಿದ್ದಾರೆ. ಯಾವ ಯಾವ ದಾನವೇಂದ್ರರ ಅರಮನೆಯ ಮುಂದೆ ದೇವತೆಗಳು ಸುಳಿಯುವುದಕ್ಕೂ ಭೀತಿಪಡುತ್ತಿದ್ದರೋ, ಅಲ್ಲಿ ದೇವತೆಗಳು ಹಾವಳಿ ಮಾಡುತ್ತಿದ್ದಾರೆ. ವೃತ್ರೋತ್ಸವವೆಂದು ಬೆಳಗ್ಗೆ ದಾನವರು ಹಾರಾಡಿದ್ದುದನ್ನೆಲ್ಲ ನೆನೆಸಿಕೊಂಡು, ಅವರನ್ನು ಅಣಕಿಸುವಂತೆ ದೇವತೆಗಳು ಕುಣಿಯುತ್ತಿದ್ದಾರೆ. ಅಷ್ಟೇನು? ಸ್ವರ್ಗಲೋಕದ ಜಡಭೂಮಿಯೆಲ್ಲ ಸಂತೋಷದಿಂದೆದ್ದು ಕುಣಿಯುತ್ತಿರುವಂತೆ, ಆ ಸಂತೋಷವನ್ನು ಹುಲ್ಲಿನಿಂದ ಹಿಡಿದು ಕಲ್ಪವೃಕ್ಷದವರೆಗೆ, ಸಸ್ಯವರ್ಗವೆಲ್ಲವೂ ಅನುಮೋದಿಸಿ ತಾನೂ ನರ್ತನ ಭಾಗಿಯಾಗಿರುವಂತೆ ಆಗಿದೆ. ಅಷ್ಟೇನು? ಅರಮನೆಗಳಲ್ಲಿರಲಿ, ಇತರ ದೇವಮಂದಿರಗಳಲ್ಲಿಯೂ, ಗೋಡೆ, ಕಿಟಕಿ, ಕಂಬ, ಬಾಗಿಲುಗಳು ಮೊದಲುಗೊಂಡು ಆ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದಂತಿವೆ.

ಶುಕ್ರಾಚಾರ್ಯನು ಉತ್ತಮೋತ್ತಮವಾದ ಸುರೆಯನ್ನು ಪಾನಮಾಡಿ ಮತ್ತನೋ ಮತ್ತನಾಗಿ ಮಂಚದ ಮೇಲೆ ಮಲಗಿದ್ದನು. ಏಕೋ ಏನೋ ಥಟ್ಟನೆ ಎಚ್ಚರವಾಯಿತು. ಏನೋ ಸರ್ವನಾಶವಾದ ಒಂದು ಭಾವವು ಆ ಮಂದಿರವನ್ನೆಲ್ಲ ತುಂಬಿ ಬಲವಂತವಾಗಿ ಆತನ ಹೃದಯವನ್ನು ಪ್ರವೇಶಿಸಿದಂತಿದೆ. ಪ್ರಹರಿಯನ್ನು ಕರೆದು ‘ಏನು ಸುದ್ದಿ?’ ಎನ್ನುತ್ತಾನೆ. ಪ್ರಹರಿಯು ಅಳುತ್ತ ಬಿಕ್ಕಳಿಸುತ್ತ ವೃತ್ರ ವಧದ ಸುದ್ದಿಯನ್ನು ತಿಳಿಸುತ್ತಾನೆ. ಶುಕ್ರಾಚಾರ್ಯನು ಎಚ್ಚರಕ್ಕಿಂತಲೂ ಎಚ್ಚರವಾಗಿ ‘ಏನು?’ ಎಂದು ಮಂಚದಿಂದ ಒಂದೇ ಹಾರಿಗೆ ಹಾರಿ ಕೆಳಕ್ಕೆ ಬಂದು, ಪ್ರಹರಿಯನ್ನು ಹಿಡಿದು ಕುಲುಕುತ್ತಾ. “ಏನಂದೆ? ಇನ್ನೊಂದು ಸಲ ಹೇಳು” ಎಂದು ಎಲ್ಲವನ್ನೂ ಮತ್ತೆ ಕೇಳುತ್ತಾನೆ.

ಶುಕ್ರಾಚಾರ್ಯನು ಅಲ್ಲಿಯೇ ಇದ್ದ ಅಸನದಲ್ಲಿ ಧೊಪ್ಪನೆ ಬಿದ್ದುಕೊಂಡು ಏನಾಗಿದೆ ಎಂಬುದನ್ನು ತನ್ನ ದಿವ್ಯದೃಷ್ಟಿಯಲ್ಲಿ ನೋಡುತ್ತಾನೆ. ಚಿತ್ರಪಟದಲ್ಲಿ ತೋರುವಂತೆ ನಡೆದುದೆಲ್ಲವೂ ಮತ್ತೆ ಕಾಣುತ್ತದೆ. “ಹಾಗಾದರೆ ಇಂದ್ರನದೇನು ತಪ್ಪಿಲ್ಲ. ನೀನಾಗಿ ಬಲವಂತ ಮಾಡಿ ಅವನಿಂದ ಏಟು ತಿಂದು ಸತ್ತಿದ್ದೀಯೆ. ಅಯ್ಯೋ ! ವೃತ್ರ, ನಿನಗೇಕೆ ಈ ದುರ್ಬುದ್ಧಿ ಬಂತು? ಅಥವಾ ಈ ದಿನ ಬೆಳಿಗ್ಗೆ ನಾನೇಕೆ ಏನಾಗಬಹುದು ಎಂಬುದನ್ನು ನೋಡಲಿಲ್ಲ? ಅಯ್ಯೋ, ಸುರಾ ಮೋಹವೇ ನೀನು ಎಂತಹ ಕೈಕೊಟ್ಟೆ ! ನಾನೇಕೆ ಇಂದು ಈ ಅಸುರಸ್ವಭಾವಕ್ಕೆ ವಶನಾದೆ? ಅಥವಾ ನನ್ನನ್ನು ಮೋಸಮಾಡಿ ನಿಯತಿಯು ಈ ಕಾರ್ಯವನ್ನು ಸಾಧಿಸಿತೋ? ಇರಬೇಕು. ಕಾಲಸ್ವರೂಪನಾದ ಆ ವಿಷ್ಣುವು ಇದನ್ನು ಸಾಧಿಸಿರಬೇಕು. ಹಿಂದೆ ನಮ್ಮ ಪಿತಾಮಹಿಯು ಶಾಪಕೊಟ್ಟಂತೆ ನಾನೂ ಶಾಪಕೊಡಲೇ? ಅಪರಾಧವಿಲ್ಲದೆ ಶಾಪವನ್ನೆಂತು ಕೊಡಲಿ?” ಎಂದು ಕಣ್ಣಿಂದ ನೀರು ಧಾರಾಳವಾಗಿ ಸುರಿಯುತ್ತಿರಲು, ಒಂದು ಗಳಿಗೆ ಮೌನವಾಗಿ ಕುಳಿತಿದ್ದನು.

ಮತ್ತೆ ತನ್ನಷ್ಟಕ್ಕೆ ತಾನೇ ನುಡಿದುಕೊಂಡನು : ಸಂಜೀವಿನಿ ವಿದ್ಯಾಬಲದಿಂದ ಅವನನ್ನು ಬದುಕಿಸೋಣವೆಂದರೆ, ಆ ಶರೀರವನ್ನು ರಚಿಸಿದ್ದ ಪಂಚಭೂತಗಳೆಲ್ಲ ವಿಘಟಿತವಾಗಿ ಹೋಗಿವೆ. ಇನ್ನು ಉಳಿದಿರುವುದು ಅಂತಃಕರಣ ವಿಶಿಷ್ಟವಾದ ಆ ವೃತ್ರನ ನಾಮವೊಂದು. ಅದಕ್ಕೆ ಬಲವನ್ನು ಕೊಟ್ಟರೂ ಅದು ವಿಕಾರವಾದ ರೂಪವನ್ನು ಮಾತ್ರ ಪಡೆಯಬಲ್ಲದು. ಮತ್ತೆ ತ್ವಷ್ಟೃವಿನ ಬಳಿ ಸಾರಬಾರದೇಕೆ ? ನಾನು ಹೋಗಬಾರದು. ಆತನೇ ಸೃಷ್ಟಿಸಿದ ಕೃತ್ಯವನ್ನೇ ಕಳುಹಿಸೋಣ, ಆತನು ಬೇಕೆಂದರೆ ಮತ್ತೆ ಅದಕ್ಕೆ ರೂಪವನ್ನು ಕೊಡಬಲ್ಲ” ಎಂದು ಮಂತ್ರಪುನಶ್ಚರಣ ಮಾಡಿ, ಆ ಪ್ರೇತವನ್ನು ಕರೆದನು. ಸೂಕ್ಷ್ಮವಾದ ರೂಪದಲ್ಲಿ ಪ್ರೇತವು ಬಂತು.

ಶುಕ್ರನೇ ಮೊದಲು ಮಾತನಾಡಿಸಿದನು ; “ಏನು ವೃತ್ರ ? ಏಕೆ ಹೀಗೆ ಮಾಡಿದೆ ?”

ಪ್ರೇತವು ನುಡಿಯಿತು ; “ಆಚಾರ್ಯ, ಅದೇಕೆ ಹೀಗೆ ಮಾಡಿದೆನೆಂದು ನನಗೂ ತಿಳಿಯದು, ಇಂದ್ರನು ಬೇಡಬೇಡವೆಂದರೂ ಬಿಡದೆ, ನಾನೇ ಬಲವಂತ ಮಾಡಿ ಅವನಿಂದ ಹೊಡೆಸಿಕೊಂಡೆ. ಆದರೆ, ಆಚಾರ್ಯ, ಇಂದ್ರನದೊಂದು ಅಪರಾಧವಿದೆ, ಒಂದು ದ್ರೋಹವಿದೆ. ಯಾವುದೋ ಅಜ್ಞಾತವಾದ ಆಯುಧವು ಅದರಲ್ಲಿತ್ತು. ನಾನು ನೊರೆಯಿಂದ ಹೊಡೆ ಎಂದೆ ದಿಟ. ಆದರೆ ಅದರಲ್ಲಿ ಆಯುಧವಿತ್ತು. ಅದೇ ನನ್ನನ್ನು ಕೊಂದುದು. ಮುಖ್ಯ ಎಲ್ಲವೂ ಸೇರಿತು. ನನಗೆ ಸೋಲಾಗಿ ಸಾಯುವ ಕಾಲ ಬಂದಿತು.”

ಶುಕ್ರಾಚಾರ್ಯನು ಕೇಳಿದನು ; “ಈಗ ಏನು ಮಾಡಬೇಕೆಂದಿರುವೆ ?”

“ಸಾಧ್ಯವಾದರೆ, ಆ ಇಂದ್ರನನ್ನು ಹಿಡಿದು ಬಾಯಿಗೆ ಹಾಕಿಕೊಂಡು ಅಗಿದು ಬಿಟ್ಟೇನು. ನಾನಿನ್ನೂ ಸತ್ತಿಲ್ಲ. ಆದರೆ, ಪಂಚಭೂತಗಳನ್ನು ಕೊಟ್ಟು ನನಗೆ ಶರೀರವನ್ನು ಕೊಡುವವರು ಬೇಕಲ್ಲ ? ಅದಿಲ್ಲದೆ, ನಾನು ಏನು ಮಾಡಲಿ? ಗಳಿಗೆ ಗಳಿಗೆಗೂ ಒಂದೊಂದು ರೂಪ ಮಾಡಿಕೊಂಡು ಅವನನ್ನು ಹೆದರಿಸಿ ಹೆದರಿಸಿ ಸಾಯಿಸಬೇಕು, ಅಷ್ಟೇ”

“ಹುಂ ! ದಾನವ ಸಾಮ್ರಾಜ್ಯವು ಕಲ್ಪಾಂತಸ್ಥಾಯಿಯಾಗುವುದೆಂದು ನಾನು ಹಿಗ್ಗುತ್ತಿದ್ದೆ, ಏನೋ ಮೋಸವಾಯಿತು. ಆಗಲಿ, ನನ್ನ ಉಪದೇಶದಿಂದ ನೀನಿನ್ನೂ ಕರಗದಿರುವೆ. ಈಗಲೂ ನನ್ನ ಮಾತು ಕೇಳು, ತ್ವಷ್ಟೃವನ್ನೇಕೆ ಹೋಗಿ ಕೇಳಬಾರದು! ನೀನೇ ಹೋಗಿ ಆತನನ್ನು `ನನಗೆ ಭೌತಿಕ ದೇಹವನ್ನು ಕೊಡು’ ಎನ್ನು”

ಶುಕ್ರಾಚಾರ್ಯನಿಗೆ ಎಡಗಣ್ಣು ಅದುರಿತು. ಕೂಡಲೇ ಹೇಳಿದನು : “ಶಕುನವು ಚೆನ್ನಾಗಿಲ್ಲ. ತಡೆ, ನಾನೇ ಸ್ವತಂತ್ರಿಸಿ ಸರಸ್ವತಿಯನ್ನು ಕರೆದು ಕೇಳುವೆನು. ನೀನು ಹೇಗೆ ಸತ್ತೆ ಎಂದು ತಿಳಿಯುವೆನು” ಶುಕ್ರನು ಧ್ಯಾನಸ್ಥನಾದನು, ಸರಸ್ವತಿಯು ಬಂದಳು. ಶುಕ್ರನು ಕೇಳಿದನು : “ದೇವಿ, ಇಂದ್ರಶತ್ರುವಾಗಬೇಕೆಂದಲ್ಲವೆ ತ್ವಷ್ಟೃವು ಯಾಗ ಮಾಡಿದುದು? ಹೀಗಿರಲು ವೃತ್ರವು ಇಂದ್ರನಿಂದ ಹತನಾದುದು ಹೇಗೆ?”

ದೇವಿಯು ನಕ್ಕು ಹೇಳಿದಳು : “ಅದೊಂದು ಸಣ್ಣ ವಿಷಯ. ವ್ಯಾಕರಣವು ವೇದಾಂಗ, ಅದರಲ್ಲಿ ಸ್ವರವು ಸಮಾಸವನ್ನು ಬೇರೆ ಮಾಡುವುದು ಎಂದು ಹೇಳಿರುವುದನ್ನೇಕೆ ಮರೆತೆ? ತ್ವಷ್ಟೃವು ಇಂದ್ರನಿಗೆ ಶತ್ರುವಾಗಬೇಕೆಂದು ಸಂಕಲ್ಪಿಸಿದನು. ನಾನು ಸ್ವರಭೇದವನ್ನು ಮಾಡಿ ಇಂದ್ರನ ಶತ್ರುವಾಗುವವನು ಹುಟ್ಟುವಂತೆ ಮಾಡಿದೆನು. ಅದೇಕೆ ಎನ್ನುವೆಯಾ? ಅದನ್ನು ಹೇಳುವೆನು ಕೇಳು. ಇಂದ್ರನು ಮನ್ವಂತರವೆಲ್ಲ ಇರಬೇಕಾದವನು. ಆತನಿಗೆ ಅಪಾಯ ಬಂದಾಗ ನಾವು ಯಾರೂ ಸುಮ್ಮನಿರುವುದು ಸಾಧ್ಯವಿಲ್ಲ. ಅದರಿಂದ ಹೀಗಾಯಿತು. ಇದು ನೀನು ಕೇಳಿದೆಯಾಗಿ ಹೇಳಿದೆ. ಇನ್ನು ಬಿಡು, ನಾನು ಹೋಗುವೆನು?” ಎಂದು ಆಕೆಯು ಹೊರಟುಹೋದಳು.

ಶುಕ್ರನು “ದೇವತೆಗಳ ಮೋಸ ! ಏನು ಮಾಡಬೇಕು ?” ಎಂದು ಯೋಚಿಸಿ “ವೃತ್ರ, ವ್ಯುತ್ಕೃಮವಾದರೂ ಚಿಂತೆಯಿಲ್ಲ. ಹೀಗೆ ಮಾಡು” ಎಂದು ಏನೋ ರಹಸ್ಯವಾಗಿ ಬೋಧಿಸಿ, “ನಾನು ಇನ್ನು ಇಲ್ಲಿರುವಂತಿಲ್ಲ” ಎಂದು ಅವಸರ ಅವಸರವಾಗಿ, ತನ್ನ ಪರಿಹಾರವನ್ನು ಕಟ್ಟಿಕೊಂಡು ಪಾತಾಳಕ್ಕೆ ಹೊರಟುಹೋದನು.

ಹೋಗುವಾಗ “ಇನ್ನು ಮುಂದೆ ಭಾರ್ಗವರ ಅನುಗ್ರಹವನ್ನು ಪಡೆಯದವನು ಎಂದು ಇಂದ್ರನಾಗುವನೋ ನೋಡೋಣ ಎಂದುಕೊಂಡು ಹೋದನು. ಅದು ದೇವತೆಗಳಲ್ಲಿ ಅನೇಕರಿಗೆ ಕೇಳಿಸಿತು. ಆದರೂ ಯಾರೂ ಅದನ್ನು ಗಮನಿಸಲಿಲ್ಲ.

ದಾನವರೂ ಆದಷ್ಟು ಬೇಗ ಅಮರಾವತಿಯಿಂದ ಸ್ವರ್ಗಲೋಕದಿಂದ ಪಾತಾಳಕ್ಕೆ ಹೊರಟುಹೋದರು. ಹೋಗುವವರನ್ನು ದೇವತೆಗಳು ಯಾವ ರೀತಿಯಿಂದಲೂ ಹಿಂಸೆಮಾಡಲಿಲ್ಲ. ದೇವರಾಜನ ಅಪ್ಪಣೆ ಹಾಗಿತ್ತು.

* * * *

೧೯.ವಿಕ್ರಯದ ವೈಖರಿ

ಸಂಪಾದಿಸಿ

ಗಂಗಾ-ಯಮುನಾ ಸಂಗಮದ ಪುಣ್ಯಕ್ಷೇತ್ರ. ಪ್ರತಿಷ್ಠಾನ ನಗರ ಲಕ್ಷ್ಮಿಯು ನೋಡಿಕೊಳ್ಳುವ ರನ್ನಗನ್ನಡಿಯೋ ಎಂಬಂತೆ, ಆ ಜಲರಾಶಿಯು ವಿಸ್ತಾರವಾಗಿ ನಿರ್ಮಲವಾಗಿ ಇದ್ದು ಆ ನಗರದ ಪ್ರತಿಬಿಂಬವನ್ನು ಧರಿಸಿದೆ. ಅತ್ತಲಿಂದ ಬಂದ ಶುದ್ಧ ನೀಲದಂತಿರುವ ಯಮುನಾಜಲವು ವಜ್ರದಂತೆ ಥಳಥಳಿಸುವ ಗಂಗಾಜಲದೊಡನೆ ಸೇರಿ, ರತ್ನಖಚಿತವಾದಂತೆ ಇರುವ ಆ ಜಲರಾಶಿಯ ಗರ್ಭವನ್ನು ಭೇದಿಸಿ ಮುಂದೆ ಹೋಗುತ್ತಿರುವುದನ್ನು ನೋಡುತ್ತಾ ಬೆಸ್ತರ ಗುಂಪು ದಡದಲ್ಲಿ ನಿಂತಿದೆ. ಯಜಮಾನನು ಮುಂದೆ ನಿಂತು ನೋಡುತ್ತಿದ್ದಾನೆ. ದೇಹವು ಭೂಮಿಯ ಮೇಲೆ ನಿಂತಿದ್ದರೂ ಮನಸ್ಸು ಆ ನೀರಿನೊಳಗೆ ವಿಹರಿಸಲು ಹೊರಟುಹೋಗಿರುವುದರ ಗುರುತೋ ಎಂಬಂತೆ ಕೈಗಳು ಬೆನ್ನಹಿಂದೆ ಒಂದನ್ನೊಂದು ಹಿಡಿದುಕೊಂಡು ನಿಶ್ಚಲವಾಗಿವೆ. ಕಣ್ಣು ನೊರೆತೆರೆಗಳನ್ನು ಭೇದಿಸಿಕೊಂಡು ಒಳನುಗ್ಗಿ ಅಲ್ಲೆಲ್ಲಾ ಅಲೆದಾಡಿಕೊಂಡು ಬರುತ್ತಿದೆ.

ಒಂದು ಗಳಿಗೆಯಾಯಿತು. ಯಜಮಾನನು ಮಾತನಾಡಿದನು : “ದಿಟ, ಮೀನುಗಳೆಲ್ಲ ಬಂದು ಸೇರಿವೆ. ನಾಳಿದ್ದು ಉಣ್ಣಿಮೆ. ತಾನಕ್ಕೆ ಬರುವವರ ಗದ್ದಲವೆಲ್ಲ ಮದ್ದಿನಕ್ಕೆ ಮುಗಿದು ಓಯ್ತದೆ. ನಾವು ಒತ್ತಾರೆ ಊಟ ಮಾಡ್ಕೊಂಡು ಒತ್ತು ನೆತ್ತಿ ಮೇಲೆ ಬರೋಕೆ ಮುನ್ನ ಇಲ್ಲಿ ಬಂದು ಬಿಡೋವಾ. ಬಲೆಗಳು ಮಾತ್ರ ಬಲವಾಗಿರಬೇಕು. ಈ ತುಯ್ತಾ ಬಂದಾಗ ಕಡೀಬಾರದು. ಅದೆಲ್ಲಾ ನೋಡಿಕೊಳ್ಳಿ. ಜೊತೆಗೆ ಅಂಬಿಗರಿಗೂ ಏಳಿಬುಡಿ. ಎರಡು ದೋಣಿ ಸಾಲದಾ?”

“ಇಲ್ಲ, ಮಾವಾ, ನಾಕು ದೋಣಿಯಿದ್ದರೆ ಚೆನ್ನಾ!”

“ಅಂಗೇ ಮಾಡಿ, ನಾನೂ ಬರಬೇಕಾ ?”

“ಇದೀಗ ಚೆನ್ನಾಯ್ತು. ನೀನಿಲ್ಲದಿದ್ದರೆ ನಾವು ನೀರಿಗಾದರೂ ಇಳಿದೇವಾ? ನೀನು ಬರಲೇಬೇಕು. ನಿಂಗೆ ಸರಣು ಮಾಡಲ್ಲವಾ ನಾವು ನೀರಿಗಿಳಿಯೋದು?”

“ಆಗಲಿ ಕಣಪ್ಪ ! ಗಂಗಮ್ಮನ ಬಲಿ ತಪ್ಪಿಸಬೇಡಿ ಕಣ್ರೋ ! ಒಂದು ಒಳ್ಳೇ ಕುರಿ, ನಾಕು ಬುದ್ದಲಿ ಎಂಡ. ಅರಿಸಿನ, ಕುಂಕುಮ, ಬಳೆ, ಬಿಚ್ಚೋಲೆ, ಕಾಯಿ, ಅಣ್ಣು, ಊವು, ದೂಪ, ದೀಪ, ಅಡಿಕೆಲೆ, ಕಾಣಿಕೆ ಎಲ್ಲಾ ತರಿಸಿ, ಅಂಗೇ ಒಂದೆರಡು ಮೂಟೆ ಪುರಿ, ಒಂದು ಮೂಟೆ ನೆನೆದವರೆಕಾಳು ಎಲ್ಲಾ ತಂದಿರಿ.”

“ಸರಿ ಕಣಪ್ಪಾ !”

“ಪೂಜೆ ಯಾರು ಮಾಡೋರು ?”

“ಯಜಮಾನ !”

“ಅದಕ್ಕಲ್ಲಾ ! ಪೂಜೆ ಮಾಡೋರು ಮಡಿಯಾಗಿ ಏನೂ ತಿನ್ನದೆ ಬರಬೇಕಲ್ಲಾ ಅದಕ್ಕೆ ಅಂಗಂದೆ !”

“ನೀನೂ ಅತ್ತೇ ಇಬ್ಬರೂ ಬನ್ನಿ ಇಲ್ಲೇ ತಾನಾಗೀನಾ ಮಾಡ್ಕೊಂಡು ಗಂಗಮ್ಮನ ಪೂಜೆ ಮಾಡಿ, ನಮ್ಮನ್ನೆಲ್ಲಾ ಅರಸಿ ಕಳಿಸಿಕೊಡಿ.”

“ಸರಿ, ದೋಣಿ, ಬಲೆ, ಪೂಜೆಗೆ ಬೇಕಾದ್ದು ಎಲ್ಲಾ ನೋಡ್ಕೊಂಡು ನಾಳೆಯೇ ಅಣಿ ಮಾಡ್ಕೊಳ್ಳಿ. ಅಣಗಿನ ಬೇಕೋ ? ಅದೆಯೋ ?”

“ನಾವೇ ನೋಡಿಕೋತೀವಿ. ಬುಡು ಮಾವಾ !”

“ನೋಡ್ದೆಯಾ ನಿಮ್ಮ ಬುದ್ದೀಯಾ ? ಮುದುಕ ಅವ್ನಲ್ಲಾ ಅನ್ನೋ ಮಾತೇ ಇಲ್ವಲ್ಲಾ ? ನೀವು ನೀವೇ ನೋಡ್ಕೋಂಡ್ರೆ ನಾಳೆ ಲೆಕ್ಕಾಚಾರದಲ್ಲಿ ಎಚ್ಚು ಕಡಿಮೆ ಆದ್ರೆ ? ಅದೆಲ್ಲಾ ಬೇಡ. ಮನೇಲಿ ಏಳಿಟ್ಟಿರ್ತಿನಿ. ಏಟು ಬೇಕಾಯ್ತದೋ ಓಟು ತಕೊಂಡೋಗಿ ಆಮೇಲೆ ಕೊಟ್ಟುಬಿಡಿ.”

“ಅಂಗೂ ಆಗಲಿ ಕಣಪ್ಪ”

ಬೆಸ್ತಪಡೆಯು ಯಜಮಾನನೊಡನೆ ಅಲ್ಲಿಂದ ಜಾರಿತು.

ಹುಣ್ಣಿಮೆಯ ದಿನ ಇನ್ನೇನು ಮಧ್ಯಾಹ್ನಕ್ಕೆ ಬಂದಿದೆ.ಬ್ರಾಹ್ಮಣರು ಆಗಲೇ ಮಾಧ್ಯಾಹ್ನಿಕವನ್ನು ಮಾಡುತ್ತಿದ್ದಾರೆ. ಎಷ್ಟೋ ಜನ ಕತ್ತೆತ್ತಿಕೊಂಡು ಸೂರ್ಯ ತೇಜಸ್ಸಿನಿಂದ ಲೋಕಾನುಗ್ರಹಾರ್ಥವಾಗಿ ಪ್ರಾಣಶಕ್ತಿಯನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೆಷ್ಟೋ ಜನ ದೇವರ್ಷಿ ಪಿತೃತೃಪ್ತ್ಯರ್ಥವಾಗಿ ತರ್ಪಣಗಳನ್ನು ಬಿಡುತ್ತಿದ್ದಾರೆ. ಅಲ್ಲಲ್ಲಿ ಹೊತ್ತಾಗಿ ಬಂದ ಹೆಂಗಸರು ಗಂಗಾಪೂಜೆಯನ್ನು ಮಾಡಿ ಬಾಗಿನ ಕೊಟ್ಟು ಅವಸರವಸರವಾಗಿ ಹೊರಡುತ್ತಿದ್ದಾರೆ. ಬಿಸಿಲು ಬಲವಾಗಿದೆ.

ಬೆಸ್ತರ ಗುಂಪು ಯಜಮಾನನನ್ನು ಮುಂದುಮಾಡಿಕೊಂಡು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತು ಅಲ್ಲಿಗೆ ಬಂತು. ಯಜಮಾನನೂ ಹೆಂಡತಿಯೂ ಸ್ನಾನ ಮಾಡಿದರು, ಮಿಕ್ಕವರೂ ಮಾಡಿದರು. ಆ ದಂಪತಿಗಳು ಪೂಜೆಯನ್ನು ಸಾಂಗವಾಗಿ ಮಾಡಿ ಕುಲದವರು ತಂದಿದ್ದ ಬಲಿಗಳನ್ನೆಲ್ಲಾ ಗಂಗಾದೇವಿಗೆ ಸಮರ್ಪಣ ಮಾಡಿದರು. ಕುಲದವರೂ ತಾವು ತಾವು ತಂದಿದ್ದ ಬುತ್ತಿಗಳನ್ನು ಗಂಗಮ್ಮನಿಗೆ ನಿವೇದನ ಮಾಡಿ ಮೊದಲ ತುತ್ತು ಗಂಗಮ್ಮನಿಗೆಂದು ನೀರಿಗೆಸೆದು, ಎರಡನೆಯ ತುತ್ತು ಯಜಮಾನನಿಗೆ ಒಪ್ಪಿಸಿ, ಅವನ ಅಪ್ಪಣೆ ಪಡೆದು ತಾವೂ ತಿಂದರು. ಯಜಮಾನನು ಸೂರ್ಯನಿಗೆ ನಮಸ್ಕಾರ ಮಾಡಿ, ಗಂಗಮ್ಮನ ಅಪ್ಪಣೆ ಕೇಳಿ, ದೋಣಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ದೋಣಿಯನ್ನು ಹತ್ತಿದನು.

ದೋಣಿಯು ಅಷ್ಟು ದೂರ ಹೋಯಿತು. ಅದರ ಹಿಂದೆ ಮಿಕ್ಕ ಮೂರು ದೋಣಿಗಳು ಬಲೆಗಳನ್ನೂ ಕಾಳು ಪುರಿಮೂಟೆಗಳನ್ನೂ ಹೊತ್ತುಕೊಂಡು ಹೋದವು. ಕಾಳುಪುರಿಗಳನ್ನು ಚೆಲ್ಲಿ, ಮೀನುಗಳೆಲ್ಲಾ ಒಂದೆಡೆ ಸೇರುತ್ತಲೂ ಬಲೆಯನ್ನು ಹಾಕುವ ಕೆಲಸವು ಮೊದಲಾಯಿತು. ಯಜಮಾನನು ಬಂದು ದಡವನ್ನು ಸೇರುವುದರೊಳಗಾಗಿ ಬಲೆ ಹಾಕಿದುದು ಮುಗಿಯಿತು : ಬೇಕೆಂದರೆ ಒಂದೊಂದರಲ್ಲಿ ನಾಲ್ಕು ನಾಲ್ಕು ಕೋಣಗಳನ್ನು ಕಟ್ಟಬಹುದು. ಅಂಥಾ ಹುರಿಯ ನೂಲು ಹಗ್ಗಗಳು.

ಅಷ್ಟು ಹೊತ್ತಾದ ಮೇಲೆ ಬಲೆಗಳನ್ನು ಎಳೆಯುವ ಕೆಲಸವು ಮೊದಲಾಯಿತು. ತುಯ್ಯುವುದರಲ್ಲಿಯೇ ಬೆಸ್ತರಿಗೆ ಗೊತ್ತು ಬೇಟೆ ಬೇಕಾದ ಹಾಗೆ ಸಿಕ್ಕಿದೆಯೆಂದು. ಹಗ್ಗಗಳನ್ನು ಎಳೆದು ತಂದು ಎಡದಲ್ಲಿ ಭಾರಿಯ ಮರಕ್ಕೆ ಕಟ್ಟಿದರು. ಸುಮಾರು ಮಧ್ಯಾಹ್ನ ಒಂದು ಝಾವವಾಗಿರಬಹುದು, ಬಲೆಗಳು ದಡಕ್ಕೆ ಬಂದವು. ಆಳಾಳು ಉದ್ದದ ಮೀನುಗಳು, ಸಣ್ಣಪುಟ್ಟವೆಲ್ಲಾ ದೊಡ್ಡ ಕಣ್ಣಿನ ಬಲೆಯಲ್ಲಿ ತಪ್ಪಿಸಿಕೊಂಡು ಹೋಗಿವೆ. ಮೊಳದುದ್ದಕ್ಕೆ ಕಡಿಮೆಯಾದ ಮೀನೇ ಇಲ್ಲ. ಪುಳಪುಳನೆ ಒದ್ದಾಡುತ್ತವೆ. ಅವರಿಗಂತೂ ಅದನ್ನು ನೋಡುವುದಕ್ಕೇ ಒಂದು ಸಂತೋಷ.

ಬಲೆಗಳನ್ನು ದಡದ ಮೇಲಕ್ಕೆ ಎಳೆದು ತಂದುದೂ ಆಯಿತು. ಕೊಂಚ ಹೊತ್ತಿನಲ್ಲಿ ಮೀನುಗಳೆಲ್ಲಾ ಮಂಕಾಗುತ್ತ ಬಂದುವು. ಇನ್ನೂ ಅಷ್ಟು ಹೊತ್ತು ವಿಲವಿಲನೆ ಒದ್ದಾಡಿದವು. ಮಾರಣಹೋಮವು ಆರಂಭವಾಯಿತು. ಒಂದೊಂದನ್ನು ಹಿಡಿದು ಹಿಡಿದು ಗೋಣು ಮುರಿದು ರಾಶಿ ಹಾಕಿದರು.

ಕೊನೆಯಲ್ಲಿ ಒಂದು ವಿಚಿತ್ರದ ಮೀನು. ಅದಕ್ಕೆ ಮನುಷ್ಯರಿಗಿರುವಂತೆ ಕೈಕಾಲು ತಲೆಯಿರುವಂತಿದೆ. ಮೈಮೇಲೆ ಪಾಚಿಯು ಬೆಳೆದು ಹೋಗಿದೆ. ಹಿಡಿತ ಹಿಡಿಯುವುದೇ ಕಷ್ಟ ಕೊನೆಗೆ ಕಷ್ಟಪಟ್ಟು ನೀರಿನ ಹತ್ತಿರ ತೆಗೆದುಕೊಂಡು ಹೋಗಿ ತೊಳೆದರು. ಕೂದಲು ಬೆಳದು ಜಡೆಕಟ್ಟಿಹೋಗಿವೆ. ಆ ಜಡೆಗಳಲ್ಲೆಲ್ಲಾ ಶಂಖದ ಹುಳುಗಳು ಅಂಟಿಕೊಂಡಿವೆ. ಉಗುರುಗಳೂ ಗೇಣುಗೇಣುದ್ದ ಬೆಳೆದಿವೆ. ಅದರಲ್ಲಿ ನೀರಿನ ಹುಳುಹುಪ್ಪಟ್ಟಿಗಳು ಗೂಡುಮಾಡಿಕೊಂಡಿವೆ. ಮನುಷ್ಯ ಸಂದೇಹವಿಲ್ಲ ಅಂತೂ ತೊಳೆದರು. ದಡದ ಮೇಲಕ್ಕೆ ತಂದರು. ಬದುಕಿದ್ದಾನೆ. ಉಸಿರಿಲ್ಲದಿದ್ದರೂ ಬಿಸಿಯಿದೆ.

ಯಜಮಾನನಿಗೆ ವರದಿ ಹೋಯಿತು. ಅವನೂ ಓಡೋಡುತ್ತ ಬಂದನು. ಮರಳಿನ ಮೇಲೆ ಮಲಗಿಸಿದ್ದ ಮರಳಿನ ಬಿಸಿ ತಗುಲಿತೋ ? ಅಥವಾ ಸಂಜೆಯ ಬಿಸಿಲೇ ಆ ದೇಹದೊಳಕ್ಕೆ ಪ್ರಾಣಶಕ್ತಿಯನ್ನು ತುಂಬಿತೋ ? ಅಂತೂ ಉಸಿರಾಡಿತು. ಚೈತನ್ಯವು ಕೂಡಿಕೊಂಡಿತು. ಕಣ್ಣು ತೆರೆಯಿತು. ಇನ್ನೊಂದು ಗಳಿಗೆಯೊಳಗಾಗಿ ದೇಹವು ಎದ್ದು ಕುಳಿತುಕೊಂಡಿತು. ನಿದ್ದೆಯಿಂದ ಎದ್ದವನಂತೆ ಸಮಾಧಾನದಿಂದ ಸುತ್ತಲೂ ನೋಡಿ, ಎದಿರು ಬಿದ್ದಿದ್ದ ಗುಡ್ಡದಂತಹ ಮೀನಿನ ರಾಶಿಯನ್ನು ನೋಡಿ ತಲೆಯಲ್ಲಾಡಿಸಿ, ಎರಡು ಕಡೆಯೂ ಹರಿಯುತ್ತಿರುವ ಗಂಭೀರಪ್ರವಾಹಗಳಿಗೆ ಕೈ ಮುಗಿದು, ಎದ್ದುಹೋಗಿ ಆಚಮನ ಮಾಡಿ ಬಂದು ಪದ್ಮಾಸನದಲ್ಲಿ ಕುಳಿತನು. ಕುಳಿತುಕೊಳ್ಳುವ ರೀತಿಯಿಂದಲೇ ಯಜಮಾನನಿಗೆ ಈತನು ತಪಸ್ವಿ ಇರಬೇಕು ಎನ್ನಿಸಿತು. ತಾನು ಹೊದೆದಿದ್ದ ಕಂಬಳಿಯನ್ನು ಹಾಸಿ ಸಾಷ್ಟಾಂಗವಾಗಿ ಭೂಮಿಯಲ್ಲಿ ಮಲಗಿ ನಮಸ್ಕಾರ ಮಾಡಿ “ದಯಮಾಡಬೇಕು, ಈ ಕಂಬಳಿಯ ಮೇಲೆ ಮೂರ್ತಿಮಾಡಬೇಕು” ಎಂದನು. ಜಲವಾಸಿಯು ದರ್ಭೆಯನ್ನು ತೋರಿಸಲು ಎಲ್ಲರೂ ಓಡಿ ಹೋಗಿ ಒಂದು ಹೊರೆ ದರ್ಭೆಯನ್ನು ಕೊಯ್ದು ತಂದರು. ಅದರಲ್ಲಿ ಎರಡು ಗರಿಯನ್ನು ತೊಡೆಯ ಕೆಳಗೆ ಹಾಕಿಕೊಂಡು, ಎರಡನ್ನು ಬೆರಲಿಗೆ ಸಿಕ್ಕಿಸಿಕೊಂಡು ಆತನು ಆ ಹೊರೆಯನ್ನು ಒರಗಿಕೊಂಡು ಕುಳಿತನು. ಎಲ್ಲರೂ ಪದೇಪದೇ ನಮಸ್ಕಾರ ಮಾಡಿದರು. ಎಲ್ಲರೂ ಕಣ್ಣುತುಂಬಾ ನೀರಿಟ್ಟುಕೊಂಡಿದ್ದಾರೆ. ಒಬ್ಬರಿಗಾದರೂ ಮಾತನಾಡಲು ಧೈರ್ಯವಿಲ್ಲ. ಎಲ್ಲರೂ ಕೈಮುಗಿದುಕೊಂಡು ಸುತ್ತಲೂ ನಿಂತಿದ್ದಾರೆ.

ವ್ಯಕ್ತಿಯು ತೇಜೋಮಯವಾದ ಕಣ್ಣುಗಳನ್ನು ಅರಳಿಸಿ ಸಣ್ಣ ದನಿಯಲ್ಲಿ “ಈಗ ಇಲ್ಲಿ ಆಳುತ್ತಿರುವ ದೊರೆ ಯಾರು ?” ಎಂದು ಕೇಳಿದನು. ಯಜಮಾನನು ಭಯಭಕ್ತಿಗಳಿಂದ “ನಹುಷಚಕ್ರವರ್ತಿ” ಎಂದು ಅರಿಕೆ ಮಾಡಿದನು. ``ಆತನಿಗೆ ಸುದ್ದಿಯನ್ನು ತಿಳಿಸಿ” ಎಂದು ಹೇಳಿ ವ್ಯಕ್ತಿಯು ಮತ್ತೆ ಧ್ಯಾನಾಸಕ್ತವಾಯಿತು.

ಒಂದು ಗಳಿಗೆಯೊಳಗಾಗಿ ಚಕ್ರವರ್ತಿಯು ಸಪರಿವಾರನಾಗಿ ಬಂದನು. ಆತನ ಜೊತೆಯಲ್ಲಿಯೇ ಬಂದಿದ್ದ ರಾಜಪುರೋಹಿತನು ವಿಧ್ಯುಕ್ತವಾಗಿ ಪೂಜೆಯನ್ನು ಮಾಡಿ ಮಧುಪರ್ಕವನ್ನು ಒಪ್ಪಿಸಿದನು. ಚತುರ್ವೇದಗಳನ್ನೂ ಸಾಂಗವಾಗಿ ಅಧ್ಯಯನಮಾಡಿದ ಮಹಾಬ್ರಾಹ್ಮಣನಿಗೆ ಮಾತ್ರ ಸಲ್ಲುವ ಆ ಮರ್ಯಾದೆಯನ್ನು ಅದಕ್ಕೆ ಅರ್ಹನಾದವನಂತೆ, ಆ ಅಭ್ಯಾಸವಿರುವವನಂತೆ, ಆ ವ್ಯಕ್ತಿಯು ಅಂಗೀಕರಿಸಿದನು. ಅದೆಲ್ಲ ಆದಮೇಲೆ ನಹುಷನು ಪ್ರವರೋಚ್ಚಾರಣಪೂರ್ವಕವಾಗಿ ನಮಸ್ಕರಿಸಿ, “ದೇವಾ, ತಾವು ಯಾವ ಪಾವನ ವಂಶದವರು? ತಮ್ಮ ನಾಮಧೇಯವೇನು?” ಎಂದು ವಿನಯವಾಗಿ ವಿಚಾರಿಸಿದನು. ಆ ತಪಸ್ವಿಯು “ಭಾರ್ಗವನು ನಾನು. ಚ್ಯವನನೆಂದು ಕರೆಯುವರು. ನಾನು ಈ ಗಂಗಾಯಮುನಾ ಸಂಗಮದಲ್ಲಿ ಜಲಸ್ತಂಭನ ಮಾಡಿ ತಪಸ್ಸು ಮಾಡಿಕೊಂಡಿದ್ದೆನು. ದೈವಪ್ರೇರಿತರಾದ ಇವರು ಈ ದಿನ ಮೀನು ಹಿಡಿಯುವಾಗ ನನ್ನನ್ನು ದಡಕ್ಕೆ ಎಳೆದುಹಾಕಿದರು. ಅದರಿಂದ ಮೊದಲು ಇವರ ಋಣವನ್ನು ತೀರಿಸಿ, ಇವರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿ ನನ್ನನ್ನು ಬಿಡಿಸಿಕೊ. ಬೆಲೆ ಎಷ್ಟು ಎಂಬುದನ್ನು ನಿನ್ನ ಸ್ವಬುದ್ಧಿಯಿಂದಲೇ ನಿಶ್ಚಯಿಸು” ಎಂದನು.

ತಪಸ್ಸು ಮಾಡುತ್ತಿದ್ದವನನ್ನು ತಾವು ಎಳೆದರು, ಎಂದು ಕೇಳಿದ ಕೂಡಲೇ ಅಲ್ಲಿ ನೆರೆದಿದ್ದ ಬೆಸ್ತರೆಲ್ಲಾ ನಡುಗಿ ಹೋದರು. ಚ್ಯವನ-ನಹುಷರಿಬ್ಬರಿಗೂ ನಮಸ್ಕಾರ ಮಾಡಿ, “ತಿಳಿಯದೆ ಮಾಡಿದ ತಪ್ಪು ಮನ್ನಿಸಬೇಕು” ಎಂದು ಗೋಗರೆದುಕೊಂಡರು. ಚ್ಯವನನು ನಗುನಗುತ್ತಾ ಅಭಯಪ್ರಧಾನ ಮಾಡಿದನು. ನಹುಷನು ತಾನುಳಿದುಕೊಂಡೆನೆಂದು ಸಂತೊಷಪಟ್ಟುಕೊಂಡು ‘ದೇವಾ, ತಮ್ಮ ಬೆಲೆಯಾಗಿ ಸಾವಿರ ಚಿನ್ನದ ನಾಣ್ಯಗಳನ್ನು ಕೊಡಲೇ?” ಎಂದು ಕೇಳಿದನು, ಚ್ಯವನನು “ನಿನ್ನ ಮಂತ್ರಿಗಳನ್ನು ಕೇಳು” ಎಂದನು. ಅರಸನು ಮಂತ್ರಿಗಳನ್ನು ವಿಚಾರಿಸಿ “ನೂರು ಸಾವಿರ” ಎಂದನು.

ಚ್ಯವನನಿಗೆ ಅಸಮಾಧಾನವಾಗಿ “ಬ್ರಾಹ್ಮಣರನ್ನು ವಿಚಾರಿಸು” ಎಂದನು. ಅರಸನು ರಾಜಪುರೋಹಿತನ ಮುಖವನ್ನು ನೋಡಲು, ಆತನು “ಪ್ರಭು, ಬ್ರಾಹ್ಮಣನ ಬೆಲೆಯಿಷ್ಟೆಂದು ಎಲ್ಲೂ ಹೇಳಿಲ್ಲ. ಶ್ರೋತ್ರೀಯನಾಗಿ, ಮಧುಪರ್ಕಕ್ಕೆ ಅರ್ಹನಾದ ಭಗವಂತನಿಗೆ ಏನು ಕೊಟ್ಟರೂ ಸಾಲದು” ಎಂದನು. ಅರಸನು “ಅರ್ಧ ರಾಜ್ಯವನ್ನು ಕೊಡಲೇ?” ಎಂದು ಕೇಳಿದನು. ಚ್ಯವನನು ಅಸಮಾಧಾನಪಡುತ್ತ ಸುತ್ತಲೂ ನೋಡಿ ಸಂಧ್ಯಾಘರ್ಯ್‌ವನ್ನು ಕೊಡುತ್ತಿರುವ ಋಷಿಯೊಬ್ಬನನ್ನು ದೂರದಲ್ಲಿ ಕಂಡು, “ಆತನನ್ನು ವಿಚಾರಿಸು” ಎಂದನು.

ಚಕ್ರವರ್ತಿಯು ತಾನೇ ಅಲ್ಲಿಗೆ ಹೋಗಿ ಆತನಿಗೆ ನಮಸ್ಕಾರ ಮಾಡಿ “ಭಗವಾನ್ ನನ್ನ ಧರ್ಮಸಂಕಟವನ್ನು ಪರಿಹರಿಸಿ ಕಾಪಾಡಬೇಕು?” ಎಂದನು. ಅತನು ಎಲ್ಲವನ್ನೂ ವಿಚಾರಿಸಿ “ಅರಸ, ಬೆಲೆಯಿಲ್ಲದ ವಸ್ತುವನ್ನು ಬೆಲೆಯಿಲ್ಲದ ವಸ್ತುವಿನಿಂದಲೇ ಕೊಂಡುಕೋ. ಮನುಷ್ಯರಲ್ಲಿ ಬ್ರಾಹ್ಮಣನಿಗೆ ಬೆಲೆಯಿಲ್ಲ. ಪ್ರಾಣಿಗಳಲ್ಲಿ ಗೋವಿಗೆ ಬೆಲೆಯಿಲ್ಲ. ಅದರಿಂದ ಬ್ರಾಹ್ಮಣನನ್ನು ತಿಳಿದವರು ಗೋವಿನಿಂದ ವಿಕ್ರಯಿಸುವರು” ಎಂದನು. ಅರಸನು ಅದನ್ನು ಅನುಮೋದಿಸಿ ಬಂದು “ಎಷ್ಟು ಹಸುಗಳನ್ನು ಕೊಡಲಿ ?” ಎಂದನು. ಚ್ಯವನನು ಅದನ್ನು ಅಂಗೀಕರಿಸಿ “ಅವರು ಕೇಳಿದಷ್ಟು” ಎಂದನು.

ಬೆಸ್ತರು ಅರಸನಿಗೆ ಕೈಮುಗಿದು ಹೇಳಿಕೊಂಡರು : “ಬುದ್ಧೀ, ತಪಸ್ಸು ಕೆಡಿಸಿದೋ ಅಂಥ ಇವಪ್ಪ ಸಾಪ ಕೊಡಲಿಲ್ಲವಲ್ಲ ಅದೇ, ನಮ್ಮ ಅದೃಷ್ಟ, ಇನ್ನು ನಮಗೆ ಬೆಲೆ ಕೊಡೋದಾ ? ಇವಪ್ಪ ಏನು ಮೀನು ಕೆಟ್ಟೋದನಾ ? ನಮಗೇನೂ ಬೇಡ ಬುದ್ಧಿ ನಿಮ್ಮ ಪಾದ.”

ಬ್ರಾಹ್ಮಣನು ಕೇಳಲಿಲ್ಲ : “ಬಹು ದಿನಗಳಿಂದ ಈ ಮೀನುಗಳ ಜೊತೆಯಲ್ಲಿದ್ದು ನಾನೂ ಮೀನೇ ಆಗಿಹೋಗಿದ್ದೇನೆ. ಇದೋ ಇಲ್ಲಿ ಬಿದ್ದಿರುವವರೆಲ್ಲಾ ನಿಮ್ಮ ಬಾಂಧವರೇ ! ನಾನೂ ಅವರ ಹಾಗೆಯೇ ! ಅವರು ಸತ್ತಿದ್ದಾರೆ. ನಾನು ಬದುಕಿದ್ದೇನೆ. ಅಷ್ಟೇ ! ಅವರಿಂದ ನೀನು ಕೊಂಡುಕೊಳ್ಳದಿದ್ದರೆ, ನಾನೂ ಈ ನಮ್ಮ ನೆಂಟರೊಡನೆ ಸಾಯಬೇಕಾಗುವುದು” ಎಂದು ಖಚಿತವಾಗಿ ನುಡಿದನು.

ಅರಸನಿಗೂ ಬೆಸ್ತರ ಯಜಮಾನನಿಗೂ ಎಷ್ಟೋ ಹೊತ್ತು ಮಾತು ನಡೆಯಿತು. ಬೆಲೆಯನ್ನು ತೆಗೆದುಕೊಳ್ಳಬೇಕೆಂದು ಅರಸು, ತೆಗೆದುಕೊಳ್ಳುವುದಿಲ್ಲವೆಂದು ಅವನು. ಕೊನೆಗೆ ಚ್ಯವನನ ಬೆಲೆಯಾಗಿ ಒಂದು ಹಸುವನ್ನು ತೆಗೆದುಕೊಳ್ಳಲು ಬೆಸ್ತರ ಯಜಮಾನನು ಒಪ್ಪಿದನು. ಅದನ್ನು ಅಲ್ಲಿಯೇ ಯಾರಿಗೋ ದಾನ ಮಾಡಿಯೂ ಬಿಟ್ಟನು.

ಅರಸನು ಚ್ಯವನನನ್ನು ಅರಮನೆಗೆ ಬರಬೇಕು ಎಂದು ಪ್ರಾರ್ಥಿಸಿದನು. ಆತನು ನಕ್ಕು “ಈಗಲೀಗ ಚೆನ್ನಾಯಿತು. ಈ ಮನುಷ್ಯರ ಕಾಟ ತಪ್ಪಿಸಿಕೊಂಡು ಏಕಾಂತದಲ್ಲಿ ಇರಬೇಕು ಎಂದು ನಾನು ನೀರಿನೊಳಗೆ ಇದ್ದುದು. ಇಂಥ ನನಗೆ ಅರಮನೆಯೇ? ಅರಮನೆಯು ಭೋಗಸ್ಥಾನ. ನಮಗೆ ಅದು ಬೇಕಿಲ್ಲ” ಎಂದನು. ಚಕ್ರವರ್ತಿಯು “ಮಹರ್ಷಿ, ಒಂದೆರಡು ದಿನ ನಮ್ಮಲ್ಲಿದ್ದು ನಮಗೆ ಧರ್ಮ ವಿಚಾರಗಳನ್ನು ತಿಳಿಯಹೇಳಿ ಅನುಗ್ರಹಮಾಡಬೇಕು” ಎಂದು ಬೇಡಿದನು. ಆತನು “ಕಾಮ ಲೋಭಗಳಿಲ್ಲದ ಮನಸ್ಸಿಗೆ ತೋರುವುದೆಲ್ಲವೂ ಧರ್ಮವೇ ! ಅದರೂ ನೀನು ಧರ್ಮಶ್ರವಣಾರ್ಥವಾಗಿ ನನ್ನನ್ನು ಕರೆಯುವುದರಿಂದ ಬರುವುದಿಲ್ಲವೆನ್ನುವಂತಿಲ್ಲ ಬರುತ್ತೇನೆ ನಡೆ” ಎಂದನು.

ಚ್ಯವನನು ಹೊರಡುತ್ತಿದ್ದ ಹಾಗೆಯೇ ಬೆಸ್ತರ ಯಜಮಾನನು ಬಂದು ಮತ್ತೆ ನಮಸ್ಕಾರ ಮಾಡಿದನು. ಆ ಮಹರ್ಷಿಯು ನಗುತ್ತಾ “ಏನು ಮತ್ತೆ ಬಂದೆ?” ಎಂದು ಕೇಳಿದನು. ಅವನು “ಸೋಮಿ, ತಮ್ಮಂಗೆ ತಿಳಿದೋರು ಹೇಳಿರೋದ ಕೇಳಿವ್ನಿ ಏಳೆಜ್ಜೆ ಒಟ್ಟಿಗೆ ನಡೆದರೆ, ಏಳು ಮಾತು ಆಡಿದರೆ ನಂಟತನ ಗಂಟು ಬೀಳ್ತದೆ ಅಂತ. ತಾವೂ ನಾವೂ ಎರಡೂ ಮಾಡಿದ್ದೀವಿ. ನಮಗೂ ತಮಗೂ ನಂಟತನ ಗಂಟುಬಿದ್ದದೆ. ಒಂದು ಸಲ ನಮ್ಮ ಅಟ್ಟೀವರೆಗೂ ತಾವು ಬಂದೂ ಆಲೂ ಅಣ್ಣು ಒಪ್ಪಸ್ಕೋಬೇಕು ನನ್ನೊಡೆಯ!” ಎಂದು ಅಡ್ಡಬಿದ್ದನು.

“ಆಯಿತು, ನಾನು ಯಾವಾಗ ಏಳು ಹೆಜ್ಜೆ ನಿಮ್ಮ ಜೊತೆಯಲ್ಲಿ ನಡೆದುದು?”

“ತಮ್ಮನ್ನ ನೀರಿಂದ ಎಳೆಯೋವಾಗ.”

ಚ್ಯವನನು ನಕ್ಕು ‘ಆಗಲಿ’ ಎಂದು, “ಅರಸ, ಇವರು ಕಾರಣಬಾಂಧವರು. ಮೊದಲು ಇವರ ಕೋರಿಕೆಯನ್ನು ನೆರವೇರಿಸಿ ಆನಂತರ ನಾನು ನಿನ್ನ ಅತಿಥಿಯಾಗ ತಕ್ಕವನು” ಎಂದನು.

ಅರಸನು ಮಹರ್ಷಿಯ ಜೊತೆಯಲ್ಲಿ ಬೆಸ್ತರ ಪಾಳ್ಯಕ್ಕೆ ಹೋದನು. ಮಹರ್ಷಿ ರಾಜರ್ಷಿಗಳಿಬ್ಬರೂ ಆ ಬೆಸ್ತರು ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅರಮನೆಗೆ ಬಂದರು.

* * * *

೨೦.ಇನ್ನೊಬ್ಬರ ಕೈವಾಡ

ಸಂಪಾದಿಸಿ

ಶಚಿಯ ಅರಮನೆಯಲ್ಲಿ ಸುರಾಚಾರ್ಯರ ಅಭಿಮಂತ್ರಗಳಿಂದ ಶಚಿಯ ಉಪಚಾರದಿಂದ, ದೇವೇಂದ್ರನು ಎಚ್ಚರಗೊಂಡನು. ಆದರೂ ಆತನಿಗೆ ಮೈ ನಡುಗುತ್ತಿದೆ. ಸುರಾಚಾರ್ಯನು ಕೇಳಿದನು ; ‘ನೀನೇಕೆ ಮೂರ್ಛೆಗೊಂಡೆ?” ಇಂದ್ರನು ಹೇಳಿದನು ‘ದೇವ, ಏನು ಹೇಳಲಿ? ವೃತ್ರನು ‘ಹೊಡೆ ಹೊಡೆ’ ಎಂದು ಬಲವಂತ ಮಾಡಿದನು. ಮಹಾವಿಷ್ಣುವು ಸಮಯವು ಸನ್ನಿಹಿತವಾಗಿದೆ, ‘ವಜ್ರವನ್ನು ಆರೋಪಿಸಿ ಹೊಡೆ’ ಎಂದನು. ನಾನು ನನ್ನ ಬಲವನ್ನೆಲ್ಲಾ ಶೇಖರಿಸಿ, ವಜ್ರವನ್ನು ಆ ನೊರೆಯಲ್ಲಿ ಆರೋಪಿಸಿ ಹೊಡೆದೆನು. ಮಹಾವಿಷ್ಣುವಿನ ಕೃಪೆಯಿಂದ ತಲೆಯು ಹಾರಿಹೋಯಿತು. ಮತ್ತೆಲ್ಲಿ ಆ ತಲೆಯು ಮುಂಡಕ್ಕೆ ಸೇರಿ ಅನರ್ಥ ಮಾಡೀತೋ ಎಂದು, ಆ ಕೂಡಲೇ ಪಂಚಭೂತಗಳು ವಿಘಟಿತವಾಗುವಂತೆ ಆಜ್ಞೆ ಮಾಡಿದೆನು. ಇನ್ನು ಅಂತಃಕರಣದಲ್ಲಿರುವ ತನ್ಮಾತ್ರೆಗಳನ್ನು ಹಂಚಿಹಾಕಬೇಕು ಎಂದು ಯೋಚಿಸುತ್ತಿರುವಾಗ, ನನಗಿನ್ನು ಶಕ್ತಿಯೇನೂ ಉಳಿದಿಲ್ಲ ಎಂದು ಬೋಧೆಯಾಯಿತು. ಅಲ್ಲದೆ, ಒಂದು ಗಳಿಗೆಯ ಹಿಂದೆ ನನ್ನ ಎದುರಿಗೆ ಪರ್ವತಾಕಾರವಾಗಿ ನಿಂತಿದ್ದ ದೇಹವು ಪಂಚಭೂತಗಳು ಬೇರೆಯಾಗುತ್ತಲೂ ಕರಗಿಹೋಯಿತು. ಅದನ್ನು ನೋಡಿ ನನಗೆ ಹೇಗೆಹೇಗೋ ಆಯಿತು. ಮೈ ಮರೆಯಿತು. ಸದ್ಯಕ್ಕೆ ನೀವೆಲ್ಲ ಆ ವೇಳೆಗೆ ಬರದಿದ್ದರೆ ಏನಾಗುತ್ತಿತ್ತೋ ?”

“ಮಧ್ಯಾಹ್ನವೇ ನನಗೆ ಈ ದಿನ ಹೀಗಾಗಬಹುದು ಎನ್ನಿಸಿತ್ತು. ಅಲ್ಲದೆ ವೃತ್ರನ ಬಾಯಿಂದ ವಿಧಿಯು ‘ನಾಳಿನಿಂದ ನೀನು ಇಂದ್ರ’ ಎಂದು ಮೂರು ಸಲ ಹೇಳಿಸಿತು. ಅವೆಲ್ಲದರಿಂದ ಎಚ್ಚರಗೊಂಡು ನಾನೂ ಅಗ್ನಿವಾಯುಗಳೂ ಶಚಿಯೂ ನಿನ್ನ ಹಿಂದೆಯೇ ಕಾದಿದ್ದೆವು. ನಿನ್ನ ಆಯುಧಗಳೆಲ್ಲ ಬಂದುದನ್ನೂ ಕಂಡೆವು. ನಿನಗಿನ್ನು ದಿಗಿಲಿಲ್ಲ ಎಂದುಕೊಳ್ಳುತ್ತಿರುವಾಗ, ನೀನು ಹೊಡೆದೆ, ಬಿದ್ದೆ.”

“ನನಗಿನ್ನೂ ದಿಗಿಲು ದೇವ. ಆ ತ್ವಷ್ಟೃವು ಹಿಂದಿನ ದ್ವೇಷವನ್ನು ಸಾಧಿಸಿ, ಮತ್ತೆ ಆ ಪ್ರೇತಕ್ಕೆ ರೂಪವನ್ನು ಕೊಟ್ಟರೆ ಗತಿಯೇನು? ಎಂದು ನನಗೆ ಅಂಜಿಕೆಯಾಗುತ್ತಿದೆ.”

“ಆ ದಿಗಿಲು ನಿನಗೆ ಬೇಕಿಲ್ಲ. ಮಹಾಪೂಜೆಯಾದ ದಿನ ದಧೀಚಿಯು ತ್ವಷ್ಟೃವಿನ ಮೋಹಕ್ಕೆ ಔಷಧವನ್ನು ಕೊಟ್ಟಿದ್ದಾನೆ. ಆದರೆ, ಆ ಶುಕ್ರಾಚಾರ್ಯನು ಏನು ಮಾಡುವನೋ ನೋಡಬೇಕು.”

“ಆತನೇನು ಮಾಡಬಹುದು?”

“ಆ ಪ್ರೇತಕ್ಕೆ ಶರೀರವನ್ನು ಕೊಡಬಹುದು. ನೀನು ಪಂಚಭೂತಗಳನ್ನು ಒಡೆದಿರುವುದರಿಂದ ಅದು ಸಾಧ್ಯವಿಲ್ಲ ಎನ್ನುವೆಯೇನೋ? ಆತನಿಗೆ ಸಂಜೀವಿನೀ ವಿದ್ಯೆಯು ಗೊತ್ತು ಅದನ್ನು ವ್ಯುತ್ಕ್ರಮವಾಗಿ ಉಪಯೋಗಿಸಿ ಪಂಚಭೂತಗಳನ್ನು ಮತ್ತೆ ಸೇರುವಂತೆ ಮಾಡಿದರೆ ಏನು ಮಾಡುತ್ತೀಯೆ? ಅದರಿಂದ, ಒಂದು ಕೆಲಸ ಮಾಡು. ನಿದ್ರಾದೇವಿಯನ್ನು ಬರಮಾಡು ಹೇಳುತ್ತೇನೆ.”

ಇಂದ್ರನು ನಿದ್ರಾದೇವಿಯನ್ನು ಧ್ಯಾನಿಸಿದನು. ಆಕೆಯು ಬಂದು ದೇವರಾಜನಿಗೆ ಕೈಮುಗಿದು “ಏನಪ್ಪಣೆ?” ಎಂದಳು ಸುರಾಚಾರ್ಯನು ಹೇಳಿದನು, - “ನೀನೀಗ ಶುಕ್ರಾಚಾರ್ಯನ ಬಳಿ ಹೋಗು. ಅಲ್ಲಿ ವೃತ್ರನ ಪ್ರೇತವಿರುವುದು. ಅದಕ್ಕೆ ಆತನು ಸಂಜೀವಿನೀ ವಿದ್ಯೆಯನ್ನು ಉಪದೇಶ ಮಾಡಿಯಾನು. ಹಾಗೇನಾದರೂ ಇದ್ದರೆ, ವೃತ್ರನ ಪ್ರೇತಕ್ಕೆ ನಿದ್ದೆಯು ಬರುವಂತೆ ಮಾಡು. ಶುಕ್ರಾಚಾರ್ಯನ ಉಪದೇಶವು ಅದಕ್ಕೆ ಸಂಪೂರ್ಣವಾಗಿ ಹಿಡಿಯದಂತೆ ಮಾಡು. ಈ ದೇವಕಾರ್ಯವನ್ನು ನಿರ್ವಹಿಸಿ ಬಂದು ನಡೆದುದೆಲ್ಲವನ್ನೂ ದೇವರಾಜನಿಗೆ ವರದಿ ಮಾಡು.”

ನಿದ್ರಾದೇವಿಯು ‘ಅಪ್ಪಣೆ’ ಎಂದು ಹೊರಟುಹೋದಳು.

ಸುರಾಚಾರ್ಯನು ಮತ್ತೆ ಇಂದ್ರನಿಗೆ ಹೇಳಿದನು; ನಾಳೆಯ ದಿನ ದೇವಸಭೆಯಾಗಬೇಕು. ಅದರಿಂದ ಸಿಂಹಾಸನಾಭಿಮಾನೀ ದೇವತೆಯನ್ನೂ ಕರೆದು ಆಜ್ಞಾಪಿಸು. ಇಂದ್ರನು ಆಕೆಯನ್ನು ಕರೆದನು. ಆಕೆಯು ಬಂದು ಕೈಮುಗಿದು “ಏನಪ್ಪಣೆ?” ಎಂದಳು. ಇಂದ್ರನು ಮರುದಿನ ನಡೆಯಬೇಕಾದ ದೇವಸಭೆಯ ವಿಷಯವನ್ನು ಹೇಳಿದನು. ಆಕೆಯು ವಿನಯದಿಂದ, “ದೇವರಾಜ, ಇದೇಕೆ ತಿಳಿಯದವನಂತೆ ಮಾತನಾಡುತ್ತಿರುವೆ? ನಿನ್ನನ್ನು ನೀನು ಚೆನ್ನಾಗಿ ಪರೀಕ್ಷೆ ಮಾಡಿಕೊ. ನಿನಗೆ ವೃತ್ರಹತ್ಯಾಪಾತಕವು ಬಂದಿರುವುದು. ಸುರಾಚಾರ್ಯನೂ ಅದನ್ನು ನೋಡಬಲ್ಲನಾದರೂ ನೋಡಿಲ್ಲ. ಶಚೀದೇವಿಯೂ ಅಗ್ನಿದೇವ ವಾಯುದೇವರೂ ನಿನ್ನ ಮೇಲಣ ಅಭಿಮಾನದಿಂದ ಕುರುಡಾಗಿರುವರು. ಆ ಹತ್ಯೆಯನ್ನು ಕಟ್ಟಿಕೊಂಡು ನೀನೆಂತು ದೇವಸಿಂಹಾಸನವನ್ನು ಹತ್ತುವೆ ? ಅದರಿಂದ, ಮೊದಲು ಹತ್ಯೆಯನ್ನು ನಿವಾರಿಸಿಕೊ. ಆನಂತರ ನಿನ್ನ ಸಿಂಹಾಸನವನ್ನು ನೀನು ಏರಲು ಯಾರಡ್ಡಿ ?” ಎಂದಳು.

ಇಂದ್ರನು ಆಕೆಯ ಮಾತನ್ನು ಕೇಳಿ ಗಾಬರಿಯಾದನು. ಸುರಾಚಾರ್ಯನು ನೋಡಿ, “ಆತುರದಲ್ಲಿ ನಾನೂ ನೋಡಲಿಲ್ಲ. ದೇವಮೃತ್ಯುವು ಕಳೆಯಿತಲ್ಲಾ ಎಂದು ಅತ್ತಕಡೆ ಸಂಭ್ರಮದಲ್ಲಿದ್ದು ಬಿಟ್ಟೆನು. ಆಕೆಯ ಮಾತು ನಿಜ. ಈ ಹತ್ಯೆಯನ್ನು ಆದಷ್ಟು ಬೇಗ ಕಳೆದುಕೊಳ್ಳಬೇಕು” ಎಂದನು.

ಇಷ್ಟೆಲ್ಲಾ ಆಗುವುದರೊಳಗಾಗಿ ನಿದ್ರಾದೇವಿಯು ಮತ್ತೆ ಬಂದು ಕಾಣಿಸಿಕೊಂಡು “ದೇವರಾಜ, ನಿನ್ನ ಅಪ್ಪಣೆಯಂತೆ ನಡೆಸಿದ್ದೇನೆ. ಆದರೂ ಶುಕ್ರಾಚಾರ್ಯನೂ ನಿನ್ನನ್ನು ಹಿಂಸಿಸಬೇಕೆಂದು ಕೃತಸಂಕಲ್ಪನಾಗಿದ್ದಾನೆ. ಆತನು ಪ್ರೇತವನ್ನು ಭೂತಸಂಪಾದನಕ್ಕೆ ಪ್ರೇರಿಸಿದ್ದಾನೆ. ಅದು ಆ ಕಾರ್ಯವನ್ನು ಆರಂಭಿಸಿದೆ. ಇನ್ನು ಅಪ್ಪಣೆಯಾದರೆ ಬರುವೆನು” ಎಂದು ಕೈಮುಗಿದು ಹೊರಟುಹೋದಳು.

ಸುರಾಚಾರ್ಯನು “ಇದೊಂದು ಹೊಸ ಸಂಕಟವು ಬಂತು” ಎಂದು ನೊಂದುಕೊಂಡನು. ಹಾಗೆಯೇ ಯೋಚಿಸಿ, “ಶಚೀದೇವಿ, ಈ ಭೂತಗಳ ಪ್ರಪಂಚವು ನಿನ್ನದು. ವೃತ್ರನು ಭೂತಾಂಶವನ್ನು ಸಂಗ್ರಹಿಸಿ, ಶರೀರವನ್ನು ಮಾಡಿಕೊಳ್ಳದಂತೆ ನೀನು ಎಚ್ಚರವಾಗಿದ್ದು ನಿನ್ನ ಗಂಡನಿಗೆ ಸಹಾಯ ಮಾಡು” ಎಂದನು.

ಶಚಿಯು “ಅಪ್ಪಣೆ” ಎಂದಳು. ಧ್ಯಾನಮಾಡಿ ನೋಡಿದಳು. ಭೂತಭೂತಗಳಿಗೂ “ನನ್ನ ಅಪ್ಪಣೆಯಿಲ್ಲದೆ ನೀವು ಯಾರಿಗೂ ಏನನ್ನೂ ಕೊಡಕೂಡದು” ಎಂದಳು. ಪಂಚಭೂತಾಭಿಮಾನೀ ದೇವತೆಗಳೂ ಬಂದು ಆ ಅಪ್ಪಣೆಯನ್ನು ಶಿರಸಾವಹಿಸಿದರು.

ಆಚಾರ್ಯನು ಮತ್ತೆ ಹೇಳಿದನು ; “ದೇವರಾಜ, ನೀನೂ ಅಷ್ಟೇ ! ಶಚಿಯು ಬೇಕೆಂದಾಗ ನೀನು ಆಕೆಗೆ ಸಾಯುಧನಾಗಿ ಸಹಾಯಮಾಡು” ಎಂದನು. ದೇವರಾಜನೂ ‘ಅಪ್ಪಣೆ’ ಎಂದು ಕೈಮುಗಿದನು. ಆತನಿಗೆ ‘ತನಗೆ ಬಂದಿರುವ ಹತ್ಯೆಯನ್ನು ಕಳೆದುಕೊಳ್ಳುವುದು ಎಂತು ?’ ಎಂಬುದೇ ದೊಡ್ಡ ಯೋಚನೆಯಾಗಿದೆ.

ಆತನು ತಡೆಯದೆ ತನ್ನ ಸಮಸ್ಯೆಯನ್ನು ಆಚಾರ್ಯನಿಗೆ ತಿಳಿಸಿದನು. ಆತನು “ನಾನು ಅದನ್ನೇ ಕುರಿತು ಯೋಚಿಸುತ್ತಿದ್ದೇನೆ. ಅದಕ್ಕೆ ಒಂದು ಅಶ್ವಮೇಧವನ್ನು ಮಾಡಬೇಕಾದೀತು” ಎಂದನು.

ಇನ್ನೊಂದು ಗಳಿಗೆಯಂದು, ತಮಗೆ ಲಭಿಸಿದ ಅನಿರೀಕ್ಷಿತವಾದ ಅದ್ಭುತ ವಿಜಯವನ್ನು ಕುರಿತು ಮಾತಾಡುತ್ತಿದ್ದು, ಸುರಾಚಾರ್ಯನೂ ಅಗ್ನಿವಾಯುಗಳೂ ಶಚಿಯನ್ನೂ ಇಂದ್ರನನ್ನೂ ಬೀಳ್ಕೊಂಡು ಹೊರಟರು.

ಅರಮನೆಯಿಂದ ಈಚೆಗೆ ಬಂದ ಮೇಲೆ ಆಚಾರ್ಯನು ಅಗ್ನಿವಾಯುಗಳನ್ನು ಕರೆದು ಗುಟ್ಟಾಗಿ, “ನಾವು ಇಂದ್ರಸಿಂಹಾಸನವನ್ನು ಏರುವುದಕ್ಕೆ ಯೋಗ್ಯತೆಯುಳ್ಳ ಇನ್ನೊಬ್ಬನನ್ನು ನೋಡಿರಬೇಕು. ಇಂದ್ರನು ಅಶ್ವಮೇಧವಾಗುವವರೆಗೂ ಸಿಂಹಾಸನವನ್ನು ಹತ್ತುವಂತಿಲ್ಲ. ನೋಡಿದರೆ ಸದ್ಯದಲ್ಲಿ ಅಶ್ವಮೇಧವಾಗುವಂತಿಲ್ಲ” ಎಂದನು.

ಅಗ್ನಿವಾಯುಗಳು ಪರಸ್ಪರ ಮುಖ ನೋಡಿಕೊಂಡರು. “ಸರಿ, ಪಾತಾಳ ಲೋಕವಾಯಿತು. ಇನ್ನು ಮಧ್ಯಮಲೋಕದವನೂ ಒಬ್ಬನು ಇಂದ್ರನಾಗಬೇಕೇನೋ! ಹಾಗೇನಾದರೂ ಆದರೆ, ಇನ್ನು ಯಾರು? ಆ ನಹುಷಚಕ್ರವರ್ತಿಯೇ ಆಗಬೇಕು ಎಂದರು.

ಆಚಾರ್ಯನು “ಹೌದು, ಆತನು ಧರ್ಮಪರ. ಆದರೂ ಆಗಬಹುದು. ಆದರೆ ಇಂದ್ರನನ್ನು ವರಿಸುವ ಕೆಲಸ ನಮ್ಮದಲ್ಲ. ದೇವ, ಋಷಿ, ಪಿತೃಗಳೆಲ್ಲ ಸೇರಿದ ಸಭೆಯಲ್ಲಾಗಬೇಕು. ಅಂತೂ ಆ ವಿಷಯ ಮನಸ್ಸಿನಲ್ಲಿರಲಿ” ಎಂದು ಒಬ್ಬರನ್ನೊಬ್ಬರು ಬೀಳ್ಕೊಂಡರು.

* * * *

೨೧.ಭಾರ್ಗವೋಪದೇಶ

ಸಂಪಾದಿಸಿ

ಚ್ಯವನಮಹರ್ಷಿಯ ಅಪಾರ ಶಾಸ್ತ್ರಜ್ಞಾನವನ್ನೂ ಅನುಭವವನ್ನೂ ಕೇಳಿ ಎಲ್ಲರೂ ಮುಗ್ಧರಾಗಿದ್ದಾರೆ. ಜ್ಞಾನವಿಜ್ಞಾನಸಂಪನ್ನರಾದ ಆತನನ್ನು ಎಲ್ಲರೂ ‘ಭಗವಾನರು’ ಎಂದು ಗೌರವದಿಂದ ಸಂಬೋಧಿಸುತ್ತಾರೆ. ರಾಜಪುರೋಹಿತನಾದಿಯಾಗಿ ಅರಮನೆಯ ವಿದ್ವದ್ಗಣವೆಲ್ಲ ದಿನವು ಬಂದು ಆತನ ಧರ್ಮಬ್ರಹ್ಮಪ್ರವಚನವನ್ನು ಕೇಳಿ ಆಶ್ಚರ್ಯಮಗ್ನರಾಗಿರುತ್ತಾರೆ. ಆತನ ವಾಚೋವೈಖರಿಯಿರಲಿ, ಆ ಪ್ರವಚನವನ್ನು ಆಲಿಸುವವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು, ಮುಂಗಾರುಮಳೆಯಲ್ಲಿ ನೆನೆದು ನೆಲದಿಂದ ಎದ್ದ ಬಿಸಿಯು ಅದೇ ಮಳೆಯಿಂದ ಇಂಗುವಂತೆ, ಹುಟ್ಟುಹುಟ್ಟುತ್ತಿದ್ದ ಹಾಗೆಯೇ ಅಲ್ಲಿಯೇ ಸಮಾಧಾನವನ್ನು ಹೊಂದುತ್ತವೆ.

ಆರ್ಯಾವರ್ತದ ಋಷೀಂದ್ರರೆಲ್ಲರೂ ಪ್ರತಿಷ್ಠಾನ ನಗರಕ್ಕೆ ಭಗವಾನರ ದರ್ಶನಕ್ಕೆ ಬರುತ್ತಿದ್ದಾರೆ. ಚಕ್ರವರ್ತಿಗೆ ಅದೇ ಒಂದು ಸಂತೋಷ. ನಾನು ಸರ್ವಸ್ವವನ್ನು ಕೊಡುತ್ತೇನೆಂದರೂ ಯಾರು ನಗರಪ್ರವೇಶ ಮಾಡಲೂ ಹಿಂದೆಗೆಯವರೋ ಅವರೆಲ್ಲಾ ಇಂದು ಭಗವಾನರ ದರ್ಶನಕ್ಕೆಂದು ಬಂದು ಒಂದೆರೆಡು ದಿನ ನಿಂತಿದ್ದು, ಅವರ ದರ್ಶನಸಲ್ಲಾಪಾದಿಗಳಿಂದಲೂ, ಅರಸನ ಆತಿಥ್ಯದಿಂದಲೂ ತೃಪ್ತರಾಗಿ ಅರಸನನ್ನು ಆಶೀರ್ವಾದ ಮಾಡಿ ಹೋಗುತ್ತಿದ್ದಾರೆ.

ಭಗವಾನರಿಗಾಗಿ ಅರಮನೆಯ ನಂದನೋದ್ಯಾನದಲ್ಲಿ ಒಂದು ವಿಶಾಲವಾದ ಪರ್ಣಕುಟಿಯು ಸಿದ್ಧವಾಗಿದೆ. ಅದರ ಮಗ್ಗುಲಲ್ಲಿಯೇ ಅತಿಥಿಗೃಹ. ಭಗವಾನರು ಬೆಳಗಿನ ಹೊತ್ತು, ಋಷೀಂದ್ರರು, ತಪೋಧನರು, ವಿದ್ವಾಂಸರು ಇವರಿಗೆ ದರ್ಶನ ಕೊಡುತ್ತಾರೆ. ಮಧ್ಯಾಹ್ನದ ಇಳಿಹೊತ್ತಿನಲ್ಲಿ ಚಕ್ರವರ್ತಿಯು ಬಂದು ಒಂದು ಝಾವದ ಹೊತ್ತು ಧರ್ಮಬ್ರಹ್ಮವಿಚಾರಗಳಲ್ಲಿ ಮಗ್ನನಾಗಿದ್ದು ಬೆಳಗಿನಿಂದ ರಾಜಕಾರ್ಯಗಳಲ್ಲಿದ್ದು ಪಟ್ಟಿದ್ದ ಆಯಾಸವನ್ನೆಲ್ಲಾ ಪರಿಹಾರ ಮಾಡಿಕೊಳ್ಳುತ್ತಾನೆ. ಅರಸನಿಗೆ ಭಗವಾನರಲ್ಲಿ ಎರಡು ಮೂರು ವಿಚಾರಗಳನ್ನು ಕೇಳಬೇಕೆಂದು ಬಲು ಆಸೆ. ಆದರೆ ಆತನು ಬರುವ ವೇಳೆಗೆ ಭಗವಾನರೇ ಸ್ವಯಂ ಯಾವುದಾದರೂ ಒಂದು ವಿಚಾರ ಆರಂಭಿಸುತ್ತಾರೆ. ಅದನ್ನು ಕೇಳುಕೇಳುತ್ತ ಆನಂದಪರವಶನಾಗಿ ಅರಸನು ತನ್ನ ಪ್ರಶ್ನೆಗಳನ್ನು ಮರುದಿನ ಕೇಳುವುದು ಎಂದುಕೊಳ್ಳುತ್ತಾನೆ. ಹೀಗೆಯೇ ದಿನವೂ ಆಗುತ್ತಿದೆ.

ಒಂದು ದಿನ ಭಗವಾನರು ಸುಖಾಸನಾಸೀನರಾಗಿ ಅಂತರ್ದೃಷ್ಟಿಗಳಾಗಿ ಆತ್ಮಾರಾಮರಾಗಿದ್ದಾರೆ. ಚಕ್ರವರ್ತಿಯು ರಾಜದೂತನನ್ನು ಹಿಂದಿಟ್ಟುಕೊಂಡು ಏಕಾಕಿಯಾಗಿ ಬಂದು ಪರ್ಣಕುಟಿಯ ಬಾಗಿಲಲ್ಲಿ ನಿಂತಿದ್ದಾನೆ. ಅವರಿರುವ ಸ್ಥಿತಿಯನ್ನು ಕಂಡು ಅವರ ಆ ಸಮಾಧಿಯನ್ನು ಭಂಗಪಡಿಸಲು ಇಷ್ಟವಿಲ್ಲದೆ ದೂರದಿಂದಲೇ ನಮಸ್ಕಾರ ಮಾಡಿ ಕೊಂಚ ಮರೆಯಾಗಿ ತೃಣಾಸನದಲ್ಲಿ ಕುಳಿತಿದ್ದಾನೆ. ಸಭಾಕಾಲವು ಇನ್ನೂ ಬಂದಿಲ್ಲ.

ಅಷ್ಟು ಹೊತ್ತಾಯಿತು. ಸೂರ್ಯನು ಪಶ್ಚಿಮದಲ್ಲಿ ಇಳಿಯುತ್ತಾ ಪ್ರಸರಿಸಿದ್ದ ಕಿರಣಗಳನ್ನ ಉಪಸಂಹಾರಮಾಡುವ ಕಾಲವಾಯಿತು. ಬಿಸಿಲು ತಂಪಿತು. ಇನ್ನಷ್ಟು ಹೊತ್ತಾದರೆ ಋತ್ವಿಕ್ಪುರೋಹಿತರು ಭಗವಾನರನ್ನು ಧರ್ಮಸಭೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಅವರೂ ಬಹಿರ್ಮುಖಿಗಳಾದರು. ಶುದ್ಧಾಚಮನಮಾಡಿ ಚಕ್ರವರ್ತಿಯನ್ನು ಸಮ್ಮುಖಕ್ಕೆ ಕರೆದರು. ಆತನೂ ಬಂದು ನಮಸ್ಕಾರ ಮಾಡಿ ಕುಳಿತನು. ಬ್ರಹ್ಮರ್ಷಿಗಳು ತಾವೇ ಮಾತನಾಡುತ್ತಾ. “ಏನು ಮಹಾರಾಜ, ನೀನೇ ಬರಬೇಕಾಗಿತ್ತೇ ? ಈ ದಿನ, ನಿನ್ನನ್ನು ಕೇಳಿ, ನಿನ್ನ ಮನಸ್ಸಿನಲ್ಲಿರುವ ವಿಚಾರವನ್ನೇ ಆರಂಭಿಸಬೇಕು ಎಂದಿದ್ದೇನೆ, ಸರಿ ತಾನೇ ?” ಎಂದು ಕೇಳಿದರು.

ಅರಸನು ವಿನಯದಿಂದ “ಅದು ನನ್ನ ಭಾಗ್ಯ !” ಎಂದನು.

“ಇನ್ನು ನಾನು ಇಲ್ಲಿಂದ ಹೊರಡುವ ಕಾಲ ಬಂದಿದೆ. ಬ್ರಾಹ್ಮಣನು ಭೋಗಗಳಿಗೆ ವಶನಾಗಬಾರದು. ಭೋಗಲಾಲಸೆಯು ಇಂದ್ರಿಯಗಳಲ್ಲಿ ಬೇರೂರಿದರೆ, ಅವು ದುಷ್ಟಾಶ್ವಗಳಂತೆ ಕೈಮೀರುವುವು. ಇಂದ್ರಿಯಗಳನ್ನು ಅಧೀನದಲ್ಲಿಟ್ಟುಕೊಳ್ಳದೆ ಅವುಗಳ ಅಧೀನನಾದವನ ತೇಜಸ್ಸು ಹಸಿಯ ಮಡಕೆಯಲ್ಲಿಟ್ಟ ನೀರಿನಂತೆ ಜಾರಿಹೋಗುವುದು. ಹಾಗೆ ಆಗಬಾರದು. ಬ್ರಾಹ್ಮಣನು ಯಾವಾಗಲೂ ಆತ್ಮತೇಜಸ್ಸನ್ನು ವಿವೃದ್ಧಿ ಮಾಡುತ್ತಿರಬೇಕು.

“ಇಲ್ಲಿಯೂ ತಾವು ತಪೋವನದಲ್ಲಿರುವಂತೆಯೇ ಇರುವಿರಲ್ಲವೇ ?”

“ಆದರೂ ಇದು ನಿನ್ನ ಕ್ಷೇತ್ರ. ನೀನು ಸತ್ತ್ವಗುಣಸಂಪನ್ನನಾದರೂ ನಿನ್ನ ಅಧಿಷ್ಠಾನಾದಿಗಳೆಲ್ಲವೂ ರಜೋಗುಣದವು. ಅದರಿಂದ ಇಲ್ಲಿ ಇರುವವರೆಗೂ ಸತ್ತ್ವಲಕ್ಷಣವಾದ ಶಾಂತಿದಾಂತಿಗಳು ಒಂದು ಪಾದ ಹಿಂದಿರುವುವು. ನಿನ್ನ ಇಷ್ಟದಂತೆ ಇಲ್ಲಿದ್ದು ಧರ್ಮಕಥಾಲಾಪ ನಡೆಸಿಯಾಯಿತು. ಇನ್ನು ಬರುವ ಪ್ರತಿಪದೆಯ ಸ್ಥಾಲೀಪಾಕವಾದ ಮೇಲೆ ಇಲ್ಲಿಂದ ಹೊರಡುವೆನು.”

ಅರಸನಿಗೆ ದೇಹದಲ್ಲಿದ್ದ ದೊಡ್ಡ ಜೀವವು ಮೇಲಕ್ಕೆ ಎದ್ದಂತಾಯಿತು. ಕಣ್ಣಲ್ಲಿ ಒಳಗಿನ ನೋವೆಲ್ಲ ಪ್ರತಿಫಲಿಸಿ ಎರಡು ತೊಟ್ಟಿನ ರೂಪವಾಗಿ ಉಕ್ಕಿತು. ಅದನ್ನು ಕಂಡು ಮಹರ್ಷಿಯು ನಕ್ಕು, “ಕೊನೆಯವರೆಗೂ ಇಲ್ಲಿರುವುದು ಸಾಧ್ಯವಿಲ್ಲವೆಂದು ಬಲ್ಲ ನೀನೂ ಹೀಗೆ ವ್ಯಥೆಪಟ್ಟರೆ, ಅದು ಅಭಿಮಾನದ ಗುರುತಾಯಿತೇ ಹೊರತು ವಿವೇಕದ ಲಕ್ಷಣವಾಗಲಿಲ್ಲ. ಜಗತ್ತೆಂದರೆ ಓಡುವ ನದಿಯೆಂಬುದನ್ನು ನಾವು ಮರೆಯಬಾರದು. ಬಂದುದನ್ನೆಲ್ಲ ಕಳುಹಿಸಿಕೊಟ್ಟು ಬರುವುದನ್ನು ಪ್ರತೀಕ್ಷಿಸುತ್ತಾ ನಿಂತಿರುವುದೇ ವಿವೇಕ. ಜಗತ್ತು ಗಳಿಗೆಗೊಂದು ಬಣ್ಣವಾಗದಿದ್ದರೆ ಇನ್ನು ಅದಕ್ಕೆ ಜಗತ್ತು ಎನ್ನುವದೇನು ? ಈ ಜಗತ್ ಎನ್ನುವ ಅರ್ಥವೇ ಅದಲ್ಲವೇ ? ಉದುರುವ ಎಲೆಗಳನ್ನು ಕಂಡವರಿಗೆ ಅದರ ಹಿಂದಿರುವ ಮರವನ್ನು ಕಂಡರೆ ಎಲೆ ಉದುರಿತು ಎಂಬ ದುಃಖವಿಲ್ಲದೆ ಹೊಸ ಎಲೆಯು ಹುಟ್ಟುವುದು ಎಂಬ ನಿರೀಕ್ಷೆಯು ಬಂದು ಆನಂದವಾಗುವುದು. ನಿನ್ನ ಅಭಿಮಾನವನ್ನು ಕಂಡು ನಾನು ಬಲ್ಲೆನೆಂಬ ಅಹಂಭಾವಕ್ಕೆ ವಶನಾಗದಿರುವುದರಿಂದ ನೀನು ವಜ್ರದ ವರ್ತಿಕೊಟ್ಟ ವಜ್ರದಂತಿರುವೆ. ಅರಸಾ, ನಿನಗೆ ನಾನೊಂದು ವರವನ್ನು ಕೊಡುವೆನು. ಕೇಳು” ಎಂದನು.

ಅರಸನು ವಿನಯದಿಂದ ಎದ್ದು ನಿಂತು “ಭಗವನ್, ತಾವು ಗಿಡದ ಸಾಮ್ಯವನ್ನು ತೋರಿಸಿ ಬಂದ ದುಃಖವೆಲ್ಲ ಆನಂದವಾಗುವ ವಿಧಾನವನ್ನು ಉಪದೇಶಿಸಿದಿರಿ. ಇದಕ್ಕಿಂತಲೂ ಇನ್ನು ಯಾವ ವರವನ್ನು ಕೇಳಲಿ ? ಆದರೂ ತಮ್ಮ ಅಪ್ಪಣೆಯೆಂದು ಕೇಳುವೆನು. ನನಗೆ ಯಾವಾಗಲೂ ಧರ್ಮದಲ್ಲಿ ಬುದ್ಧಿಯು ಸ್ಥಿರವಾಗಿರಲಿ” ಎಂದು ನಮಸ್ಕಾರ ಮಾಡಿದನು.

ಚ್ಯವನ ಮಹರ್ಷಿಯು ಸಂತುಷ್ಟನಾಗಿ “ಹಾಗೆಯೇ ಆಗಲಿ, ನಿನ್ನ ಬುದ್ಧಿಗೆ ಯಾವಾಗಲೂ ಧರ್ಮವು ಗೋಚರವಾಗುತ್ತಿರಲಿ. ಆದರೆ ಇತರರಿಗೆ ಹೇಳಬೇಕಾಗಿ ಬಂದಲ್ಲಿ ಅವರು ಕೇಳಿದಾಗ ಸಕಾರಣವಾಗಿ ಅವರ ಮನಸ್ಸಿಗೊಪ್ಪುವಂತೆ ವಿಶದವಾಗಿ ಹೇಳಬೇಕು. ಇಲ್ಲವಾದರೆ ಅದನ್ನು ಧರ್ಮದೇವನು ಒಪ್ಪುವುದಿಲ್ಲ. ಅದು ನೆನಪಿರಲಿ” ಎಂದು ಅನುಗ್ರಹ ಮಾಡಿದನು. ಆ ವೇಳೆಗೆ ವಾಲಗದ ಸದ್ದು ಆಗಿ, ಅದು ಮೃದಂಗದ ನಾದದೊಡನೆ ಸೇರಿ ಪರ್ಣಶಾಲೆಯವರೆಗೂ ಬಂದು ಬ್ರಹ್ಮರ್ಷಿ ರಾಜರ್ಷಿಗಳಿಬ್ಬರನ್ನೂ ಎಚ್ಚರಗೊಳಿಸಿತು. ಮಂಗಳವಾದ್ಯಶ್ರವಣದಿಂದ ಜಾಗ್ರತವಾದ ಲೋಕವಾಸನೆಯನ್ನು ಅನುಸರಿಸಿ ಅವರು ಮುಂದಿನ ಕಾರ್ಯಕ್ಕೆ ಸಿದ್ಧರಾದರು. ಋತ್ವಿಕ್ಪುರೋಹಿತರು ಬಂದು ಯಥಾವಿಹಿತವಾಗಿ ದರ್ಶನಮಾಡಿ ಇಬ್ಬರನ್ನೂ ಸಭಾಮಂಟಪಕ್ಕೆ ಕರೆದುಕೊಂಡು ಹೋದರು.

ಸಭೆಯ ಮಧ್ಯದಲ್ಲಿ ವಿರಚಿತವಾಗಿದ್ದ ಕಮಲಾಸನದ ಮೇಲೆ ಪದ್ಮಾಸನದಲ್ಲಿ ಚ್ಯವನ ಭಗವಾನರು ಕುಳಿತರು. ಅವರ ಬಲಗಡೆ ಬೆಳ್ಳಿಯ ಭದ್ರಾಸನದಲ್ಲಿ ವೀರಾಸನದಲ್ಲಿ ಅರಸನು ಕುಳಿತನು. ಮಂತ್ರಿ ಪುರೋಹಿತರಾದಿಯಾಗಿ ಸಭಿಕರೆಲ್ಲರೂ ಎಂದಿನಂತೆ ತಮ್ಮ ತಮ್ಮ ಆಸನಗಳಲ್ಲಿ ಕುಳಿತರು. ರಾಜಸ್ತ್ರೀಯರೂ ರಾಜಾಧಿಕಾರಿಗಳೂ ಧರಿಸಿರುವ ಜೀವರತ್ನಾಭರಣಗಳ ಕಾಂತಿಯು ಇಳಿಯುತ್ತಿರುವ ಸೂರ್ಯನ ಬಿಸಿಲನ್ನು ಹಿಡಿದು ತಂದು ಶೇಖರಿಸಿಟ್ಟಿರುವ ಕಿರಣಕೆಂಡಗಳೋ ಎಂಬಂತೆ ಪ್ರಜ್ವಲಿಸುತ್ತಿದ್ದುವು. ಸಭಿಕರು ಧರಿಸಿರುವ ಪುಷ್ಪಮಾಲೆಗಳ ಸುಗಂಧವು ಸಜ್ಜನರ ಮನಸ್ಸಿನ ನಿರ್ವಿಷಯಾನಂದದಂತೆ ಸರ್ವವ್ಯಾಪಿಯಾಗಿ ಎಲ್ಲರನ್ನೂ ದೇವಲೋಕಕ್ಕೆ ಕರೆದೊಯ್ಯುವ ವಿಮಾನವೋ ಎಂಬಂತೆ ಮೇಲಕ್ಕೆ ಚಿಮ್ಮುತ್ತಿತ್ತು.

ತೇಜಸ್ವಿಯಾದ ಅರಸನ ಪ್ರಭಾವದ ಮುಂದೆ ನಿಷ್ಪ್ರಭರಾಗಿ ವಿನೀತರಾಗಿ ನ್ಯಾಯಬದ್ಧರಾಗುವ ಸಾಹಸಿಗಳಂತೆ ಆಚಾರದಂತೆ ಇಟ್ಟಿದ್ದ ತುಪ್ಪದ ದೀಪಗಳು ರತ್ನಾಭರಣಗಳ ಕಾಂತಿಗೆ ಸೋತಂತೆ ಮಂಕಾಗಿ ಪಂಜರ ಬದ್ಧವಾಗಿ ಉರಿಯುತ್ತಿದ್ದವು. ಧೂಪದಾನಿಗಳು ನಡೆಯಲಿರುವ ಧರ್ಮಕಥಾ ಶ್ರವಣದಿಂದ ತೃಪ್ತವಾಗಿವೆಯೋ ಎಂಬಂತೆ ಸಂತೋಷದಿಂದ ಧೂಪಮೇಘಗಳನ್ನು ಸೃಜಿಸುತ್ತಿದ್ದವು. ಕೈವಾರಿಗಳು ತಮ್ಮ ದೃಢತಾರಸ್ವರದಿಂದ ಸಭೆಯನ್ನು ಎಚ್ಚರಿಸಿದ ಮೇಲೆ ಬ್ರಹ್ಮರ್ಷಿಗಳ ಘಂಟಾನಾದದಂತಹ ಗಂಭೀರ ಮನೋಹರವಾದ ಕಂಠವು ಕೇಳಿಸಿತು. ಪ್ರವಚನವು ಆರಂಭಿಸಿತು.

ಭಗವಾನರು ಆರಂಭಿಸಿದರು : “ನಾವು ಇಲ್ಲಿಂದ ಹೊರಡುವ ಕಾಲವು ಸನ್ನಿಹಿತವಾಗಿದೆ. ಆದ್ದರಿಂದ ನಾವಾಗಿ ಹೇಳುವುದನ್ನು ಕಡಿಮೆ ಮಾಡಿ, ಇತರರ ಮನಸ್ಸಿನಲ್ಲಿ ಇರಬಹುದಾದ ಸಂದೇಹಗಳನ್ನು ವಿಮರ್ಶಿಸಿ ಸಾಧ್ಯವಾದರೆ ನಿವಾರಿಸಲು ಪ್ರಯತ್ನಿಸೋಣ ಎಂದುಕೊಂಡಿದ್ದೇನೆ. ಆದ್ದರಿಂದ, ಈ ಸಭೆಯಲ್ಲಿ ಯಾರಾದರೂ ಮುಂದೆ ಬಂದು ತಮ್ಮ ತಮ್ಮ ಸಂದೇಹಗಳನ್ನು ಕೇಳಬಹುದು.”

ರಾಜನು ಪುರೋಹಿತನ ಮುಖವನ್ನು ನೋಡಿದನು. ಆತನು ಅದನ್ನು ಅರ್ಥಮಾಡಿಕೊಂಡು ಎದ್ದು ನಿಂತನು. ಆಡಂಬರವಿಲ್ಲದ ಸುಲಭವಾದ ಹಗುರವಾದ ಆತನ ಉಡುಪಿನಂತೆಯೇ ಆತನೂ ಸರಳವಾಗಿ ಸಹಜವಾಗಿ ಪ್ರಶ್ನೆ ಮಾಡಿದನು : “ಭಗವಾನ್, ಧರ್ಮಕ್ಕೆ ಜಯವಾಗಲಿ, ಕೇಳುವ ನಮಗೂ ಹೇಳುವ ತಮಗೂ ಈ ವಿಷಯವನ್ನು ಆಲಿಸುವ ಈ ಸಭೆಯವರಿಗೂ ಮಂಗಳವಾಗಲಿ. ತಾವು ಹೇಳುವುದು ನಮಗೆ ಅರ್ಥವಾಗಲಿ. ದೇವ, ಸಂದೇಹಗಳು ಬರುವುದೇಕೆ ?”

ಭಗವಾನರು ನಕ್ಕರು : “ಬ್ರಹ್ಮನ್, ನೀರಿನ ಸ್ವಭಾವ ಅಲೆಯುತ್ತಿರುವುದು. ನೀರು ಅಲೆಗಳನ್ನು ಸೃಷ್ಟಿಸಬೇಕೆಂದು ಪ್ರಯತ್ನಮಾಡಿ ಅಲೆಗಳನ್ನು ಎಸೆಯುವುದಿಲ್ಲ. ಅದರ ಚಂಚಲಸ್ವಭಾವವೇ ಅಲೆಗಳಾಗಿ ತೋರುತ್ತದೆ. ನೀರಿನ ಮೇಲ್ಮೈಯೆಲ್ಲಾ ಅಲೆಯೇ ! ಆದರೆ ಕೆಳಗಿಳಿದು ನೋಡಿದರೆ, ಒಂದೆರಡು ಮಟ್ಟು ಮುಳುಗಿ ನೋಡಿದರೆ, ಅಲ್ಲಿ ನೀರು ಘನವಾಗಿ ಒಂದೇ ಮುದ್ದೆಯಾಗಿ ನಿಂತಿರುವಂತೆ ತೋರುತ್ತದೆ. ಜಲಚರಗಳ ಸಂಚಾರದಿಂದ ಅಲ್ಲಾಡಿದಂತೆ ಕಂಡರೂ ನಿಶ್ಚಲವಾಗಿರುತ್ತದೆ. ಹಾಗೆ ಜ್ಞಾನವು ಪ್ರಜ್ಞಾನವಾಗಿ ಘನವಾಗಿ ಸ್ಥಿರವಾಗುವವರೆಗೂ ಸಂದೇಹಗಳು ಬಂದೇ ಬರುತ್ತಿರುವುವು. ಜ್ಞಾನ ಪ್ರಜ್ಞಾನವಾಗಿ ಘನವಾಗುವುದು ಎಂದರೇನು ಎನ್ನುವಿರೇನೋ ? ತನಗಿಂತ ದೊಡ್ಡದೊಂದು ವಸ್ತುವಿದೆ. ಅದು ತನ್ನ ಒಳಗೂ ಹೊರಗೂ ತುಂಬಿದೆ. ಅದು ಮಡುವಿನಂತೆ ಇದ್ದರೆ ತಾನು. ‘ನಾನು’ ಎನ್ನುವುದು ಅದರಲ್ಲಿ ಒಂದು ಮಡಕೆಯಂತೆ. ನೀರಿನಲ್ಲಿ ಮುಳುಗಿದ ಮಡಕೆಯಲ್ಲಿರುವ ನೀರೂ ಅದರ ಹೊರಗಿರುವ ನೀರೂ ಏಕರಸವೆಂಬ ಅರಿವೇ ಜ್ಞಾನ. ಆ ಅರಿವು ಬಲಿತು ನೀರನ್ನು ತುಂಬಿಕೊಂಡಿರುವ ಮಡಕೆಯೂ ಅದರಲ್ಲಿರುವ ನೀರೂ ಬೇರೆಬೇರೆಯೆಂಬುದನ್ನು ತಿಳಿದುಕೊಳ್ಳುವುದು ವಿಜ್ಞಾನ. ಬಾಯಲ್ಲಿ ಒತ್ತರಿಸಿಕೊಂಡಿರುವ ತಂಬುಲವು ತನ್ನ ಇರುವಿಕೆಯನ್ನು ಮರೆಯಲು ಎಡೆಯನ್ನೇ ಕೊಡದೆ ಇರುವಂತೆ ವಿಜ್ಞಾನವು ಮರೆಯದೆ ಅರಿವೇ ಆಗಿ ಘಟವು ಬೇರೆ, ಅದರಲ್ಲಿರುವ ಚೇತನವೇ ಬೇರೆ, ಎಂಬ ನಿಶ್ಚಯಜ್ಞಾನವು ಸಂತತವಾಗಿ ಉರಿಯುತ್ತಿರುವ ದೀಪದ ಬೆಳಕಿನಂತೆ ಅವಕಾಶವಿದ್ದೆಡೆಯಲ್ಲೆಲ್ಲಾ ತುಂಬಿರುವುದೇ ಪ್ರಜ್ಞಾನ. ಅದನ್ನು ಮರೆಯದೆ ವ್ಯವಹಾರ ಮಾಡುತ್ತಿರುವುದೇ ಪ್ರಜ್ಞಾನಘನದಲ್ಲಿರುವುದು. ಅಂತಹ ಪ್ರಜ್ಞಾನ ಘನದಲ್ಲಿ ಪ್ರವೇಶವಾಗುವವರೆಗೂ ಸಂದೇಹಗಳು ಬಿಡುವುದಿಲ್ಲ. ತುಂಬಿದ ಕತ್ತಲಿನಲ್ಲಿ ಕಣ್ಣು ಕಾಣದೆ ಹೋದಾಗಲೂ ಸಂದೇಹಗಳಿಲ್ಲ : ನಡುಹಗಲಿನಲ್ಲಿ ಬೆಳಕು ತಾನೇ ತಾನಾಗಿರುವಾಗಲೂ ಸಂದೇಹವಿಲ್ಲ. ಬೆಳಕು - ಕತ್ತಲುಗಳು ಒಂದರಲ್ಲಿ ಒಂದು ವ್ಯಾಪ್ತವಾದಾಗ, ಸಂದೇಹಗಳು. ಹಾವೋ ಹುಲ್ಲಿನ ಹರವಿಯೋ ಎಂದು ಸಂದೇಹಪಡುವುದು ಸಂಜೆಯ ಕಾಳವಳದಲ್ಲಿ ಮಾತ್ರ. ಹಾಗೆ ಅರಿವು ಬಂದು ಬಲಿತು ಹೆಪ್ಪುಗಟ್ಟಿ ಮುದ್ದೆಯಾಗುವವರೆಗೂ ಸಂದೇಹವು ತಪ್ಪುವುದಿಲ್ಲ. ಮನಸ್ಸಿನ ಅಪೂರ್ಣತೆಯೇ ಜ್ಞಾನದ ದೌರ್ಬಲ್ಯವೇ ಸಂದೇಹ. ಅಲ್ಲದೆ ಸಂದೇಹವು ಬಂದರೆ ಏಕೆ ಒದ್ದಾಡಬೇಕು? ಆ ಸಂದೇಹದ ಹಿಂದೆಯೇ ಸಿದ್ಧಾಂತವೂ ಇದ್ದೇ ಇರುತ್ತದೆ.”

“ಹಾಗಾದರೆ ಅರ್ಥವಾಗಲಿಲ್ಲ. ಭಗವಾನರು ದಯಮಾಡಿ ಅದನ್ನು ಇನ್ನೂ ವಿಶದವಾಗಿ ಹೇಳಬೇಕು.”

“ಆಗಲಿ, ಮನಸ್ಸಿಗೆ ಅರಿವು ಮರೆವು ಎಂದು ಎರಡು ಮುಖ. ನಕ್ಷತ್ರಗಳಲ್ಲಿ ಕೆಲವು ಕೆಂಪು ನೀಲಿ ಬೆಳಕುಗಳನ್ನು ಚೆಲ್ಲುತ್ತ ಒಂದು ಘಳಿಗೆ ಹಾಗೆ, ಒಂದು ಘಳಿಗೆ ಹೀಗೆ ಕಾಣುವಂತೆ, ಮನಸ್ಸೂ ಈ ಎರಡು ಮುಖಗಳಲ್ಲಿ ಒಂದೊಂದನ್ನು ತೋರುತ್ತಿರುತ್ತದೆ. ಅರಿವಿನ ಮುಖ ಕಂಡಾಗ ಅರಿತೆವು ಎನ್ನುತ್ತೇವೆ. ಮರೆವಿನ ಮುಖ ಕಂಡಾಗ ಮರೆತೆವು ಎಂದುಕೊಳ್ಳುತ್ತೇವೆ. ಮರೆವು ಅರಿವುಗಳು ಒಂದರಲ್ಲಿ ಒಂದು ವ್ಯಾಪಿಸಿದಾಗ, ಮರೆವೋ ಅರಿವೋ ಎಂಬ ನಿಶ್ಚಯವಿಲ್ಲದಾಗ ಸಂದೇಹ. ನೀರಲ್ಲಿ ಬಿದ್ದ ಪ್ರಾಣಿಯು ಸುಮ್ಮನೆ ಕೈಕಾಲು ಬಡಿಯುತ್ತಿದ್ದರೆ ತಪ್ಪದೆ ದಡಕ್ಕೆ ಬಂದು ಸೇರಿಕೊಳ್ಳುವಂತೆ, ತಲೆದೋರಿದ ಸಂದೇಹವನ್ನು ಮಥಿಸುತ್ತಿದ್ದರೆ, ಮರೆವಿನ ಮುಖವು ತಿರುಗಿ ಅರಿವಿನ ಮುಖವು ಕಾಣಿಸುವುದು.”

“ಮರೆವೇ ಅರಿವಾಗುವುದಾದರೆ ಗುರುವಿನ ಉಪದೇಶ ಬೇಕು ಎನ್ನುವುದೇಕೆ?”

“ಮರಿಗೆ ಹಾರುವುದನ್ನು ತಾಯಿಹಕ್ಕಿ ಕಲಿಸಿಕೊಡುವಂತೆ ಗುರುವು ಉಪದೇಶಮಾಡಿ ಉದ್ಧರಿಸುವನು. ಆದರೆ ಅದೇ ಹಕ್ಕಿಯು ಹಸುವಿಗೊ ಹುಡುಗನಿಗೋ ಹಾರುವುದನ್ನು ಕಲಿಸಲು ಸಾಧ್ಯವೇನು ? ಅದರಂತೆ, ಉಪದೇಶವು ಮನಸ್ಸಿನಲ್ಲಿ ಅವ್ಯಕ್ತವಾಗಿರುವುದನ್ನು ವ್ಯಕ್ತಪಡಿಸುವುದು. ಭಾವಿಯಲ್ಲಿರುವ ನೀರನ್ನು ಸೇದಿ ಹೊಯ್ದು ತಾಪವನ್ನು ಆರಿಸುವಂತೆ, ಶಿಷ್ಯನ ಮರೆವಿನ ಮೇಲೆ ತನ್ನ ಅರಿವಿನ ಬೆಳಕನ್ನು ಚೆಲ್ಲಿ, ಅದನ್ನೇ ಅರಿವು ಮಾಡಿ ತೋರಿಸುವವನು ಗುರುವು. ಅಲ್ಲಿ ಇಲ್ಲದ ಅರಿವನ್ನು ಆತನು ತಂದು ತುಂಬುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಆಗ ಸಂದೇಹವು ಅರಿವು-ಮರೆವುಗಳ ಸಂಧಿಸ್ಥಾನ. ಶ್ರದ್ಧಾವಂತನು ಮರೆವಿನ ಮೇರೆಯನ್ನು ಮೀರಿ ಅರಿವನ್ನು ತಟ್ಟುವನು. ಉಯ್ಯಾಲೆಯು ತೂಗುತ್ತಿರುವಾಗ ತನಗೆ ಬೇಕಾದ ಕಡೆಗೆ ಹಾರಬಹುದು ಹೇಗೋ ಹಾಗೆ ಇಲ್ಲಿಯೂ, ಸಂದೇಹದಲ್ಲಿಯೂ ಹಾಗೂ ಆಗಬಹುದು, ಹೀಗೂ ಆಗಬಹುದು. ಗುರುವನ್ನು ಪಡೆದವನು ತಪ್ಪದೆ ಅರಿವಿನ ಕಡೆಗೇ ತಿರುಗುವನು. ಹಾದಿ ಬಲ್ಲವನ ಹಿಂದೆ ಹೋದವನಿಗೆ ಹಾದಿ ತಪ್ಪುವ ಭೀತಿಯುಂಟೆ ? ಅದರಂತೆ.”

ಪುರೋಹಿತನು ಕೈಮುಗಿದು ತನ್ನ ಆಸನದಲ್ಲಿ ಕುಳಿತನು.

ರಾಜಗುರುವು ಚಕ್ರವರ್ತಿಯ ಅಪ್ಪಣೆ ಪಡೆದು ಎದ್ದುನಿಂತನು. ಕೇಳಿದನು: “ಭಗವಾನ್, ನಾವು ಮನುಷ್ಯರು. ನಮಗೆ ಸತ್ಯದರ್ಶನವು ಆಗುವುದು ಹೇಗೆ ? ಅಪ್ಪಣೆಯಾಗಬೇಕು.”

ಭಗವಾನರು ಮಂದಸ್ಮಿತವದನರಾಗಿ ಮತ್ತೆ ಹೇಳಿದರು : “ರಾಜಗುರುಗಳ ಪ್ರಶ್ನವು ಚೆನ್ನಾಗಿದೆ. ಸತ್ಯದರ್ಶನವು ಎಲ್ಲರಿಗಿಂತ ಹೆಚ್ಚಾಗಿ ದಂಡ್ಯರನ್ನ ದಂಡಿಸುವ ರಾಜನಿಗೂ, ಆ ರಾಜನಿಗೆ ಮಾರ್ಗದರ್ಶಿಯಾದ ರಾಜಗುರುವಿಗೂ ಬೇಕಾದುದು. ಆದುದರಿಂದ ತಾವು ಈ ಪ್ರಶ್ನವನ್ನು ಕೇಳಿದುದು ಪರಮಸಾಧುವಾಯಿತು. ಆಗಲಿ, ಹೇಳೋಣ.”

“ಸತ್ಯಕ್ಕೆ ಎರಡು ರೂಪ. ಇಂದ್ರಿಯಗೋಚರವಾಗುವ ರೂಪವೊಂದು, ಅದು ಚರರೂಪ. ಇಂದ್ರಿಯಗೋಚರವಾಗದ ಸ್ಥಿರರೂಪವೊಂದು. ಚರರೂಪವು ಸ್ಥಿರ ರೂಪದ ಪ್ರತಿಬಿಂಬ. ಲೋಕವೆಲ್ಲವೂ ಅರಿತಿರುವುದು ಈ ಚರರೂಪವನ್ನು. ಅಲೆಗಳಂತೆ ಚಂಚಲವಾದುದು ಇದು. ಹೊತ್ತು ಹೊತ್ತಿಗೆ ಹೊಸತಾಗುತ್ತಿರುವುದು ಇದರ ಸ್ವಭಾವ. ಇದು ದೇಶದೇಶಕ್ಕೂ ಬೇರೆಯಾಗುತ್ತಿರುವುದು. ಅಷ್ಟೇನು? ಸಂಗೀತದಂತೆ ಎನ್ನಿ, ನಿಮ್ಮ ರುಚಿಯಿಂದ ಸಂಗೀತಕ್ಕೆ ಬೆಲೆ. ನಿಮ್ಮ ಜ್ಞಾನ ಸಂಸ್ಕಾರಗಳಿಂದ ರುಚಿಯೂ ಭಿನ್ನೈಸುವುದು. ಹಾಗೆ, ಹುಡುಗನಿಗೆ, ತರುಣನಿಗೆ, ವೃದ್ಧನಿಗೆ ಸತ್ಯವು ಬೇರೆ ಬೇರೆಯಾಗುವುದು. ಆದರೆ, ಆ ಸ್ಥಿರರೂಪವಾದ ಸತ್ಯವಿದೆಯಲ್ಲ ಅದು ಬೇರೆ. ಅದು ಎಲ್ಲರಿಗೂ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಒಂದೇ.

style="text-indent: 1cm;">ಈ ಲೋಕದಲ್ಲಿ ಅದು ಧರ್ಮವಾಗಿ ಗೋಚರವಾಗುವುದು. ಧರ್ಮವು ಸತ್ಯದ ಚರರೂಪದಲ್ಲಿ ಸ್ಥಿರರೂಪವನ್ನು ಆರಾಧಿಸುವಿಕೆ. ಅದಕ್ಕೆ ಚರರೂಪಕ್ಕಿರುವಷ್ಟೂ ಮುಖಗಳುಂಟು. ಅದರಿಂದಲೇ ಧರ್ಮವು ವ್ಯಕ್ತಿಗಳಿಗೆ, ಕಾಲಗಳಿಗೆ, ದೇಶಗಳಿಗೆ ಬೇರೆಬೇರೆಯಾದರೂ, ಎಲ್ಲರಿಗೂ ಅನ್ವಯಿಸುವುದು. ಸಾಮಾನ್ಯರೂಪದಿಂದ ಸಾಧಾರಣವಾಗಿ ಎಲ್ಲರಿಗೂ ಅನ್ವಯಿಸಿದರೂ ವಿಶೇಷರೂಪದಿಂದ ಭಿನ್ನೈಸುವುದೇ ಅದರ ಸ್ವಭಾವ ಎಂದು ಅದಕ್ಕೆ ಗೌರವ. ಅನ್ನವು ಯಾರಿಗೆ ಬೇಡ ? ಹಾಗೆಂದು ಅದಕ್ಕೆ ಒಂದೇ ರೂಪವೇನು ? ಹಾಗೆ ಅನ್ನವು ಒಬ್ಬೊಬ್ಬರಿಗೆ ಒಂದೊಂದು ರೂಪವಾಗಿದ್ದರೂ ತಿಂದವರಿಗೆ ತೃಪ್ತಿಯನ್ನು ಕೊಡುವುದೆಂದು ಅದಕ್ಕೆ ಗೌರವ. ಅದು ಎಲ್ಲರಿಗೂ ಬೇಕಾಗಿರುವುದೂ ಅದೇ ಕಾರಣದಿಂದಲೇ. ಕೆಲವು ಪ್ರಾಣಿಗಳಿಗೆ ಮಾಂಸವು ಅನ್ನ, ಕೆಲವಕ್ಕೆ ಹುಲ್ಲು ಅನ್ನ ಕೆಲವರಿಗೆ ಗೋಧಿಯು ಅನ್ನ. ಇನ್ನು ಕೆಲವರಿಗೆ ಹಣ್ಣುಗಳು ಅನ್ನ. ಹೀಗೆ ರೂಪದಿಂದ ಬೇರೆಬೇರೆಯಾದರೂ ಎಲ್ಲರಿಗೂ ಅನ್ನವು ಒಂದೇ ಹೇಗೆಯೋ, ಹಾಗೆಯೇ ಧರ್ಮವು ಆಚಾರದಲ್ಲಿ ಬೇರೆಬೇರೆಯಾದರೂ ಮೇಲಕ್ಕೆ ಏರಲು ಬೇಕಾಗುವ ಏಣಿಯೆಂದು ಎಲ್ಲರಿಗೂ ಬೇಕಾಗುವುದು. ಹೀಗೆ ವ್ಯವಹಾರದಲ್ಲಿ ಕಾಣುವ ಸತ್ಯವು ಧರ್ಮದ ಅನುಷ್ಠಾನದಿಂದ ಕಾಣುವುದು.

ಈ ಧರ್ಮವು ಚೋದನಾತ್ಮಕವಾದುದು ; ಎಂದರೆ ಇದೇ ಎಲ್ಲರನ್ನೂ ಕಾರ್ಯಪರರನ್ನಾಗಿ ಮಾಡುವುದು. ತಾನು ಮಾಡಬೇಕಾದ ಕಾರ್ಯವೊಂದುಂಟು ಎಂದು ಮಾನವನಿಗೆ ತೋರುವುದು ಇದೆಯಲ್ಲವೆ ? ಇದೇ ಚೋದನೆಯು.

ಲೋಕದಲ್ಲಿರುವ ನೀರೆಲ್ಲವೂ ಮಳೆಯಿಂದಲೇ ಬಂದುದು. ಹಾಗೆಯೇ ಒಳ್ಳೆಯದಾಗಲಿ, ಕೆಟ್ಟುದಾಗಲಿ, ಎಲ್ಲಕ್ಕೂ ಧರ್ಮವೇ ಚೋದಕವು. ನೀರು ಮೇಲಿನಿಂದ ಇಳಿಯುವಾಗ ಅದರಲ್ಲಿ ವಾಸನೆಯಾಗಲಿ ರುಚಿಯಾಗಲಿ ಇಲ್ಲದಿದ್ದರೂ, ಭೂಮಿಯಲ್ಲಿ ರುಚಿಯೂ ವಾಸನೆಯೂ ಇಲ್ಲದಿರುವ ನೀರೂ ಉಂಟೇನು! ಹಾಗೆ ಧರ್ಮವೇ ಪ್ರೇರಿಸಿದ್ದರೂ ಕಾರ್ಯವು ಆಗುವಾಗ ಕಾರ್ಯಕರ್ತನಲ್ಲಿರುವ ಸತ್ತ್ವರಜಸ್ತಮೋಗುಣಗಳ ಸಂಸರ್ಗದಿಂದ ಧರ್ಮಾಧರ್ಮಗಳು ಏರ್ಪಡುವುದು. ಲೋಕದ ಸುಸ್ಥಿತಿಯನ್ನು ಕಾಪಾಡಲು ಶಕ್ತವಾದುದು, ಕರ್ತೃವಿನ ಅಂಶವು ಆದಷ್ಟು ಕಡಿಮೆಯಾಗಿರುವುದು, ಪುಣ್ಯಫಲಪ್ರದವಾಗಿದ್ದು, ಇತರರಿಗೂ ತನಗೂ ಸಂತೋಷವನ್ನು ಕೊಡುವುದು ಯಾವುದೋ ಅದೆಲ್ಲವೂ ಧರ್ಮವು. ಇದಕ್ಕೆ ವಿರುದ್ಧವಾದುದೆಲ್ಲ ಅಧರ್ಮವು.

ಧರ್ಮವು ಬೇಕು ಎನ್ನುವವನು ಮೊದಲು ಅಂತರಂಗಶುದ್ಧಿಯನ್ನು ಸಂಪಾದಿಸಬೇಕು. ಶುದ್ಧವಲ್ಲದ ಅಂತರಂಗದಲ್ಲಿ ತೋರುವುದೆಲ್ಲ ಅಧರ್ಮವೇ. ಅಂತರಂಗ ಶುದ್ಧಿಯು ದೇಹವೂ ಮನಸ್ಸೂ ಸರಿಯಾಗಿರುವಾಗ ಮಾತ್ರ ಸಾಧ್ಯವು. ಆದುದರಿಂದ ಆಹಾರ, ವಿಹಾರ, ವಿಚಾರ, ವ್ಯವಹಾರ, ನಾಲ್ಕೂ ಶುದ್ಧಿಯಾಗಿದ್ದರೆ ಮಾತ್ರ ಅಂತರಂಗಶುದ್ಧಿಯು. ಅದರಿಂದ ಧರ್ಮಕಾಮನಾದವನು ಈ ನಾಲ್ಕರಲ್ಲೂ ವಿವೇಕವುಳ್ಳವನಾಗಬೇಕು. ವಿವೇಕವೆಂದರೆ ಸತ್ತ್ವಗುಣವನ್ನು ಪೋಷಿಸಿ ಮಿಕ್ಕೆರಡನ್ನೂ ತುಳಿಯುವಂತಹ ಬೇಕುಬೇಡಗಳ ಜ್ಞಾನ. ಇದನ್ನು ಸಂಪಾದಿಸಿಕೊಳ್ಳಲು ಎರಡು ಹಾದಿ; ಒಂದು ತನ್ನ ಅನುಭವವೆಂಬ ಕಷ್ಟದ ಹಾದಿ. ಇನ್ನೊಂದು ಬಲ್ಲವರ ಉಪದೇಶವೆಂಬ ಸುಲಭದ ಹಾದಿ. ಆ ಉಪದೇಶವೂ ಸ್ವಾರ್ಥವಿಲ್ಲದೆ ರೋಗನಿವಾರಕವಾದ ಔಷಧದಂತೆ ಅನುಭವಸಿದ್ಧವಾಗಿದ್ದರೆ ಮಾತ್ರ ಶಾಸ್ತ್ರವಾಗುವುದು.

ಈ ಧರ್ಮವನ್ನು ಆಚರಿಸುತ್ತಿರುವವರಿಗೆ ಸತ್ಯದ ಸ್ಥಿರರೂಪವು ಗೋಚರವಾಗುವುದು.

ಸತ್ಯವು ನೇರವಾಗಿ ಏಕೆ ತಿಳಿಯಬಾರದು ಎನ್ನುವಿರೇನೋ ? ಹಾಲು ಇಟ್ಟಿದ್ದ ಕಡೆಯೇ ಕೆನೆಕಟ್ಟುವಂತೆ ಮನಸ್ಸು ಬುದ್ಧಿಗಳು ತಮ್ಮ ಅಲ್ಪತ್ವದಿಂದ ಅಜ್ಞಾನದ ಮುಸುಕನ್ನು ಎಳೆದುಕೊಳ್ಳುತ್ತಿರುವುವು. ಆಗ ಸತ್ಯವು ಎದುರು ನಿಂತರೂ ಮುಚ್ಚಿದ ಕಣ್ಣಿಗೆ ಕಂಡ ರೂಪದಂತೆ ಆಗುವುದು. ಅಲ್ಲದೆ, ಸತ್ಯವು ಕೂಡ ದೇಶಕಾಲಾತ್ಮಕವಾದ ಜಗತ್ತಿನಲ್ಲಿ ಕಾಣುವಾಗ ಯೋಗಮಾಯೆಯ ಛಾಯೆಗೆ ಒಳಪಟ್ಟಿರುವುದರಿಂದ ಅದು ಥಟ್ಟನೆ ಕಾಣದಾಗುವುದು. ಅದರಿಂದಲೇ ಸತ್ಯಧರ್ಮಗಳಿಗೆ ಚಿನ್ನದ ಪಾತ್ರೆಯನ್ನು ಮುಚ್ಚಿದೆಯೆಂದು ವೇದಗಳಲ್ಲಿ ಹೇಳಿರುವುದು. ಅದನ್ನು ಆ ಪಾತ್ರೆಯನ್ನು, ಪೂಷಾದೇವನೊಬ್ಬನು ತೆಗೆಯಬಲ್ಲನು. ಒಮ್ಮೆ ಆತನ ದಯೆಯಿಂದ ಸತ್ಯಧರ್ಮಗಳ ದರ್ಶನವಾದರೆ, ಅದು ಎಂದಿಗೂ ಮರೆಯುವುದಿಲ್ಲ.

ಅಲ್ಲದೆ, ಸತ್ಯವು ಬುದ್ಧಿಗೆ ಗೋಚರವಾದಾಗ, ವ್ಯಕ್ತಿ ಕಾಲದೇಶಾನುಗುಣವಾಗಿ ವ್ಯತ್ಯಾಸವನ್ನು ಹೊಂದಿ, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವು ಗಾಜಿನ ಹಿಂದಿನ ರಸದ ಪ್ರಾಬಲ್ಯ - ಅಪ್ರಾಬಲ್ಯಗಳಿಂದ ಹೆಚ್ಚು ಕಡಿಮೆಯಾಗುವಂತೆ ಹೆಚ್ಚು ಕಡಿಮೆಯಾಗುವುದು. ಅದನ್ನು ಸ್ಪಷ್ಟವಾಗಿ ದೃಷ್ಟಿದೋಷವಿಲ್ಲದಂತೆ ಕಾಣಬೇಕಾದರೆ ಬ್ರಹ್ಮಲೋಕಕ್ಕೆ ಹೋಗಬೇಕು. ಅಥವಾ ತಾನಿರುವಲ್ಲಿಗೆ ಬ್ರಹ್ಮಲೋಕವು ಬರುವಂತೆ ಮಾಡಿಕೊಳ್ಳಬೇಕು. ಅಲ್ಲಿ ಆ ಸತ್ಯವು ಹಗಲಿನಲ್ಲಿ ಕಂಡಂತೆ ಕಾಣುವುದು. ಅಂತರಂಗಶುದ್ಧಿಯನ್ನು ಸಂಪಾದಿಸಿಕೊಳ್ಳುವುದೇ ಬ್ರಹ್ಮಲೋಕವನ್ನು ಸಾಧಿಸುವುದು. ಅದರಿಂದ, ತಿಳಿದವರು ತಾವು ಅಂತರಂಗಶುದ್ಧಿಯನ್ನು ಸಂಪಾದಿಸಿಕೊಂಡು ಸತ್ಯದರ್ಶನ ಮಾಡುವರು. ತಾವು ಕಂಡುದು ಸರಿಯೆಂದು ನಿಶ್ಚಯಿಸಿಕೊಳ್ಳಲು ಹಿಂದಿನ ಶಾಸ್ತ್ರಜ್ಞರ ವಾಣಿಯನ್ನು ನೆನೆಸಿಕೊಳ್ಳುವರು. ಇವೆರಡಕ್ಕೂ, ಎಂದರೆ ತಮ್ಮ ದರ್ಶನಕ್ಕೂ ಹಿಂದಿನವರ ಶಾಸ್ತ್ರಕ್ಕೂ ಆಧಾರವು ವೇದವೆಂದು ಅದನ್ನು ಪ್ರಮಾಣಿಸುವರು. ಹೀಗೆ ಶ್ರುತಿ. ಅದನ್ನು ಅನುಸರಿಸಿದವರ ಸ್ಮೃತಿಶಾಸ್ತ್ರ-ತಾನು ಪಡೆದ ಅನುಭವ ಎಂಬ ಮೂರೂ ಏಕತಾನವಾಗುವುದೇ ಸತ್ಯದರ್ಶನವು.

ಶ್ರುತಿಯೇ ಪ್ರಮಾಣವೆಂದು ಮಿಕ್ಕವನ್ನು ತಿರಸ್ಕರಿಸಬಾರದು. ಹಾಗೆಯೇ ಈ ಮೂರರಲ್ಲಿ ಒಂದೇ ಸರಿಯೆಂದು ಮಿಕ್ಕವನ್ನು ಕಡೆಗಾಣಬಾರದು. ವೇದಾರ್ಥವನ್ನು ಇತಿಹಾಸಪುರಾಣಗಳಲ್ಲಿ ವಿಸ್ತಾರವಾಗಿ ಹೇಳಿರುವುದನ್ನು ತನ್ನ ಅನುಭವದಿಂದ ಗೋಚರವಾದುದನ್ನು ಒಂದೇ ಎಂದು ತಿಳಿದವನು ಸತ್ಯದರ್ಶನವನ್ನು ಪಡೆದವನು.

ಹಾಗೆ ತಾನು ಕಂಡಿದ್ದರೂ, ಆ ಅರ್ಥವನ್ನು ಇತರರಿಗೆ ಹೇಳುವಾಗ, ಕೇಳುವವನಿಗೆ ಅರ್ಥವಾಗುವಂತೆ, ಸಮಂಜಸವಾಗಿ, ಸಕಾರಣವಾಗಿ, ನ್ಯಾಯವಾಗಿ ಹೇಳಬೇಕು. ಹಾಗಿಲ್ಲದೆ ತನಗೆ ತೋರಿದಂತೆ ಮಾಡಿದರೆ ನಿಮ್ಮ ಹಿಂದಿನ ಚಕ್ರವರ್ತಿ ಪುರೂರವನು ಮಾಡಿದಂತಾಯಿತು.”

ನಹುಷನೇ ಎದ್ದು ಕೈಮುಗಿದು ಕೇಳಿದನು ; “ಭಗವಾನ್, ಪುರೂರವನು ನಮ್ಮ ಪಿತಾಮಹನು. ಧರ್ಮಕಥಾಸಂದರ್ಭದಲ್ಲಿ ಬಂದಿರುವ ಚರಿತ್ರೆಯನ್ನು ಕೃಪೆಮಾಡಿ ನಿರೂಪಿಸಬೇಕು.”

ಆಗಲಿ, ನಿಮಗೆಲ್ಲಾ ತಿಳಿದ ಕಥೆಯೆಂದು ನಾವು ಸಂಕ್ಷೇಪವಾಗಿ ಹೇಳುವೆವು. ಪುರೂರವ ಚಕ್ರವರ್ತಿಯು ಒಬ್ಬರ ಕರ್ಮಾಚರಣದಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಲೋಕವ್ಯವಸ್ಥೆಯನ್ನು ಕಾಪಾಡಿದ ಮಹಾನುಭಾವನು. ಬಲಿಷ್ಠನಾದ ರಾಜನಿಲ್ಲದಿದ್ದರೆ ಮತ್ಸ್ಯಗಳಂತೆ ಮನುಷ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವರು. ಹಾಗಾಗದೆ ಎಲ್ಲರೂ ತಮ್ಮ ತಮ್ಮ ಇತಿಮಿತಿಗಳನ್ನು ಅರಿತು ನಡೆಯುವಂತೆ ಮಾಡುವುದಕ್ಕೇ ರಾಜನಿರುವುದು. ಅದೇ ರಾಜಧರ್ಮವು. ಅಂತಹ ರಾಜಧರ್ಮವನ್ನು ಚೆನ್ನಾಗಿ ಪಾಲಿಸಿದನೆಂದು ಆತನಿಗೆ ಲೋಕಾಂತರಾಗಮನ ಸಾಮಥರ್ಯ್‌ವು ಲಭಿಸಿತು.

ಒಂದು ದಿನ ಆತನು ಇಂದ್ರಲೋಕಕ್ಕೆ ಹೋದನು. ಅಲ್ಲಿ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮಗಳು ದರ್ಶನ ಕೊಟ್ಟವು. ಧರ್ಮಪರನಾದ ರಾಜನು ಅಣ್ಣನಾದ ಧರ್ಮನಿಗೆ ಸಲ್ಲಿಸಿದ ಪೂಜೆಯಿಂದ ಕಿರಿಯರು ತೃಪ್ತರಾಗುವರೆಂದು ಧರ್ಮವನ್ನು ಮಾತ್ರ ಆರಾಧಿಸಿದನು. ಅದರಿಂದ ಕಾಮಾರ್ಥಗಳು ‘ಮೂವರಿಗೂ ಪೂಜೆಯು ಸಲ್ಲಬೇಕು. ಅಥವಾ ಉಳಿದವರ ಅನುಮತಿಯಿಂದ ಜ್ಯೇಷ್ಠನಿಗೆ ಪೂಜೆಯಾಗಬೇಕು’ ಎನ್ನುವ ಮರ್ಯಾದೆಯನ್ನು ಆತನು ಗಮನಿಸಲಿಲ್ಲವೆಂದು ಕೋಪಗೊಂಡು ಶಾಪವನ್ನು ಕೊಟ್ಟರು. ಆತನು ಕಾಮಶಾಪದಿಂದ ವಿರಹದಿಂದ ಕಂದಿ, ಅರ್ಥಶಾಪದಿಂದ ಲೋಭದಿಂದ ಕಂಗೆಟ್ಟು ಒದ್ದಾಡಿದ ಕಥೆಯನ್ನು ನೀವೆಲ್ಲ ಬಲ್ಲಿರಿ.

ಅದರಂತೆ ಮರ್ಯಾದೆಯನ್ನು ಮೀರದೆ, ಪ್ರೇಯಸ್ಸಿಗೆ ಲೋಪ ಬರದಂತೆ ಶ್ರೇಯಸ್ಸನ್ನು ಆರಾಧಿಸುತ್ತ ವ್ಯವಹಾರದಲ್ಲಿ ತನ್ನ ಮತ್ತು ಇತರರ ಯೋಗಕ್ಷೇಮಗಳನ್ನು ನಿರ್ವಹಿಸುವುದೇ ಧರ್ಮವು ; ಅದೆ ಸತ್ಯದರ್ಶನದ ಸಾಧನವು.”

ಭಗವಾನರ ವಚನವನ್ನು ಕೇಳಿ ಎಲ್ಲರೂ ಸಂತುಷ್ಟರಾದರು. ಸಭೆಯು ಅವರಿಗೆ ಸಲ್ಲಬೇಕಾದ ಸಮರ್ಚನೆಯನ್ನು ಸಾಂಗವಾಗಿ ಸಲ್ಲಿಸಿ ಕೃತಾರ್ಥವಾಯಿತು.

* * * *

೨೨.ಇಂದ್ರನು ಓಡಿಹೋದನು

ಸಂಪಾದಿಸಿ

ಇಂದ್ರನು ಶಚಿಯ ಅರಮನೆಯಲ್ಲಿ ಸುಖಾಸನದಲ್ಲಿ ದಿಂಬಿಗೆ ಒರಗಿಕೊಂಡು ಕುಳಿತಿದ್ದಾನೆ. ಆತನಿಗೆ ನೆಮ್ಮದಿಯಿದ್ದಂತಿಲ್ಲ. ಏನೋ ಮುಜುಗರವಾಗಿ, ಆತನ ಮನಶ್ಯಾಂತಿಯು ಕೆಟ್ಟಿದೆ. ಏಕಾಂತದಲ್ಲಿ ಇರಲು ಆ ವೀರವರನಿಗೆ ದಿಗಿಲು. ವೃತ್ರನು ಸತ್ತಿರುವುದು ನಿಜವಾದರೂ ಅವನೆಲ್ಲಿ ಹಿಂತಿರುಗಿ ಬರುವನೋ ಎಂದು ಅಂಜಿಕೆ. ಅದರಲ್ಲೂ ಸಿಂಹಾಸನದೇವಿಯು ಹೇಳಿದ ವೃತ್ರಹತ್ಯೆಯು ತನ್ನನ್ನು ಅಂಟಿಕೊಂಡಿರುವುದು ತನಗೂ ತಿಳಿದಿದೆ. ಎಲ್ಲಿದ್ದರೂ ಅಶೌಚದವನಂತೆ ಮೈಲಿಗೆ ಮೈಲಿಗೆಯಾಗಿರುವಂತೆ ಕಾಣುತ್ತದೆ. ಆಚಾರ್ಯನೂ ಮಂತ್ರೋದಕಮಾರ್ಜನಾದಿ ಗಳನ್ನೆಲ್ಲಾ ಮಾಡಿದ್ದಾನೆ. ಆದರೂ ಇಂದ್ರನಿಗೆ ಮೊದಲಿನಂತಿಲ್ಲ. ಏನು ಮಾಡಿದರೆ ಸರಿಹೋದೀತು ಎಂದು ಯೋಚಿಸುತ್ತಿದ್ದಾನೆ. ವಿಶ್ವರೂಪನನ್ನು ವಧಿಸಿದಾಗ ಬಂದ ಹತ್ಯೆಯನ್ನು ಹಂಚಿ ಹಾಕಿದಂತೆ ಈಗಲೂ ಮಾಡೋಣ ಎಂದರೆ ಸಾಧ್ಯವಿಲ್ಲ. ಎಲ್ಲರೂ ವೃತ್ರನ ಪೌರುಷವನ್ನು ಬಲ್ಲರು. ಯಾರೂ ಅ ಹತ್ಯೆಯನ್ನು ಒಪ್ಪಿಕೊಳ್ಳುವಂತಿಲ್ಲ. ತಾನೇ ಅದನ್ನು ಅನುಭವಿಸಿ ತೀರಬೇಕು. ಅದು ಯಾವ ರೂಪದಲ್ಲಿ ಯಾವಾಗ ಕಾಣಿಸಿಕೊಳ್ಳುವುದೋ ತಿಳಿಯದು. ಸರ್ವಜ್ಞನಾದ ಸುರಾಚಾರ್ಯನು ಮಾತ್ರ “ಅದು ನಾವು ಯಾರೂ ಇಲ್ಲದಾಗ ಬಂದರೆ, ಕೂಡಲೇ ನೀನು ಇಂದ್ರತ್ವವನ್ನು ಬಿಟ್ಟು ಪೂರ್ಣತ್ವವನ್ನು ಧ್ಯಾನಿಸು. ಆ ವೇಳೆಗೆ ನಾನೆಲ್ಲಿದ್ದರೂ ಬರುವೆನು, ಮುಂದೆ ನೋಡೋಣ” ಎಂದು ಅವನಿಗೆ ಅಭಿವಚನವನ್ನು ಕೊಟ್ಟಿದ್ದಾನೆ.

ಆಚಾರ್ಯನೂ ಅಗ್ನಿವಾಯುಗಳೂ ಆತನ ದರ್ಶನಕ್ಕೆ ಬರುವ ಹೊತ್ತು. ಇಂದ್ರನೂ ಅವರನ್ನು ಕಾಣಲು ಕಾತರನಾಗಿ ಕಾದಿದ್ದಾನೆ. ಇಂದ್ರನಿಗೆ ಕುಳಿತಿರಲು ಸಾಧ್ಯವಾಗಲಿಲ್ಲ. ಎದ್ದು ಓಡಾಡಲು ಆರಂಭಿಸಿದನು. ಶಚಿಯು ಕಾಲುಕಡೆ ಕುಳಿತಿದ್ದವಳು ಎದ್ದು ಕಿಟಕಿಯನ್ನು ಒರಗಿಕೊಂಡು ನಿಂತಿದ್ದಳು. ಯಾರೋ ಸುಳಿದಂತಾಯಿತು. ಯಾರೆಂದು ಇಂದ್ರನು ನೋಡುವುದರೊಳಗಾಗಿ, ಶಚಿಯು ‘ಅಯ್ಯೋ !’ ಎಂದಳು. ಇಂದ್ರನು ಏನೆಂದು ಅತ್ತ ತಿರುಗುವುದರೊಳಗಾಗಿ ಶಚಿಯು “ಯಾರೋ.....” ಎಂದಳು. ಮುಂದಕ್ಕೆ ಏನು ಹೇಳುತ್ತಿದ್ದಳೋ ಅಷ್ಟರೊಳಗಾಗಿ ಆಕೆಗೆ ಪ್ರಜ್ಞೆಯು ತಪ್ಪಿತು. ಬಿದ್ದುಹೋಗಬೇಕು ಅಷ್ಟರೊಳಗಾಗಿ ಇಂದ್ರನು ಆಕೆಯನ್ನು ಹಿಡಿದುಕೊಂಡು, ಹಾಗೆಯೇ ತಂದು ಸುಖಾಸನದಲ್ಲಿ ಮಲಗಿಸಿದನು. ಶಚಿಯ ಮೈಯಲ್ಲಿ ಯಾವಾಗಲೂ ಘಮಘಮವೆಂದು ಸುವಾಸನೆಯು ಪುಷ್ಪಗುಚ್ಛದಲ್ಲಿರುವುದಕ್ಕಿಂತ ಹೆಚ್ಚಾಗಿ ಮಸಗುತ್ತಿರಬೇಕು. ಅದಕ್ಕೆ ಪ್ರತಿಯಾಗಿ ಏನೋ ದುರ್ವಾಸನೆಯು ಮೂಗಿಗೆ ತೋರುತ್ತಿದೆ. ಬರಬರುತ್ತ ಅದೂ ಬಲವಾಗುತ್ತಿದೆ. ಇಂದ್ರನಿಗೆ ಏನು ಮಾಡಬೇಕೋ ತೋರದಿದೆ.

ಆ ಹೊತ್ತಿಗೆ ಸರಿಯಾಗಿ ಅಗ್ನಿವಾಯುಗಳೂ ಆಚಾರ್ಯನೊಡನೆ ಬಂದರು. ಆಚಾರ್ಯನು ಶಚಿಯನ್ನು ನೋಡುತ್ತಿದ್ದ ಹಾಗೆಯೇ “ಇಂದ್ರ, ತೆಗೆದುಕೋ, ನಿನ್ನ ವಜ್ರಾಯುಧವನ್ನು ತೆಗೆದುಕೋ... ಹೊಡೆ, ಹೊಡೆ, ಅದೋ ನೋಡು. ವೃತ್ರನ ಪ್ರೇತವು ಪೃಥ್ವೀ ಭೂತವನ್ನು ಹಿಡಿದಿದೆ. ಅದರಿಂದಲೇ ಈ ದುರ್ಗಂಧ ! ಮೊದಲು ಹೊಡೆ...” ಎಂದನು.

ಇಂದ್ರನು ವಜ್ರಾಯುಧವನ್ನು ಅನುಸಂಧಾನ ಮಾಡಿದನು. ಹಾಗೆಯೇ ಪೃಥ್ವೀಭೂತವನ್ನು ಅನುಸಂಧಾನ ಮಾಡಿದನು. ಪೃಥ್ವೀಭೂತವೂ ದೃಗ್ಗೋಚರವಾಯಿತು. ನೇರಿಲೆಯ ಹಣ್ಣಿನ ಬಣ್ಣವಾಗಿ, ಗಂಧವೇ ಪ್ರಧಾನಲಕ್ಷಣವಾಗಿರುವ ಪೃಥ್ವೀಭೂತಕ್ಕೆ ಕೆಟ್ಟ ಕಪ್ಪು ಬಡಿದಿದೆ. ತಮೋರಾಶಿಯೋ ಎಂಬಂತಾಗಿದೆ. ವಜ್ರವನ್ನು ಎಲ್ಲಿ ಪ್ರಯೋಗ ಮಾಡಬೇಕು? ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯುಜ ಸಮೇತವಾದ ಪಂಚೀಕೃತ ಭೂಮಂಡಲವೊಂದು ಕಡೆ ಕಾಣಿಸುತ್ತಿದೆ. ಅಪಂಚೀಕೃತವಾದ ಶುದ್ಧ ಪೃಥ್ವೀಮಂಡಲವೊಂದು ಕಡೆ ಕಾಣುತ್ತಿದೆ. ಇಂದ್ರನು ಯಾವುದರ ಮೇಲೆ ವಜ್ರವನ್ನು ಪ್ರಯೋಗಿಸಬೇಕು? ವಜ್ರಾಹುತಿಗೆ ಸಿಕ್ಕಿ ಭೂಮಿಯಲ್ಲಿರುವ ಲೋಕಲೋಕಗಳೆಲ್ಲ ಧ್ವಂಸವಾಗಿ ಹೋದರೆ? ಅವುಗಳಲ್ಲಿ ತಾನೂ ಒಬ್ಬ ಶಚಿಯೂ ಒಬ್ಬಳು. ದೇವಲೋಕವು ಒಂದು ಭಾಗ. ಏನು ಮಾಡಬೇಕೋ ತಿಳಿಯದೆ ಇಂದ್ರನು ಮುಗ್ಧನಾಗಿದ್ದಾನೆ ಅಷ್ಟೇ ಅಲ್ಲ ತನಗೆ ಏನೂ ತಿಳಿಯದಾಗಿದೆಯೆಂಬುದನ್ನು ಹೇಳಲೂ ತೋರದೆ ಸುಮ್ಮನಿದ್ದಾನೆ.

ಆಚಾರ್ಯನು ಆತನ ಅಂತಃಸಂಕಟವನ್ನು ತಿಳಿದನು. “ಇಂದ್ರ, ಮಹಾಕಾಶದಲ್ಲಿ ನಿಂತು, ‘ದೇವಶತ್ರುವಾಗಿ ಈಗ ಪೃಥ್ವಿಭೂತವನ್ನು ಹಿಡಿದಿರುವ ವೃತ್ರನ ಮೇಲೆ ಈ ಪ್ರಯೋಗ’ ಎಂದು ಸಂಕಲ್ಪಿಸಿ ಪ್ರಯೋಗಿಸು” ಎಂದನು. ಇಂದ್ರನು ಪರಪ್ರಚೋದಿತನಾಗಿ ಕಾರ್ಯಮಾಡುವವನಂತೆ ಆಚಾರ್ಯನ ನಿರ್ದೇಶದಂತೆ ಸಂಕಲ್ಪಮಾಡಿ, ಸಂಕಲ್ಪಪೂರ್ವವಾಗಿ, ವೃತ್ರನನ್ನು ಗುರಿಗೈದು ಶುದ್ಧ ಪೃಥ್ವೀಭೂತ, ಪಂಚೀಕೃತ ಪೃಥ್ವೀಭೂತ, ಎರಡರ ಮೇಲೆಯೂ ವಜ್ರವನ್ನು ಪ್ರಯೋಗಿಸಿದನು. ಭೂಕಂಪವಾಯಿತು. ಕುಲಾಚಲ ಪರ್ವತಗಳೂ ನಡುಗಿಹೋದವು. ಎಲ್ಲಿಂದಲೋ ‘ಅಯ್ಯೋ’ ! ಎಂಬ, ನೂರು ಸಿಡಿಲುಗಳು ಒಂದೇ ಸಲ ಬಿದ್ದರೆ ಆಗುವಂತಹ ಘೋರವಾದ ಸದ್ದಾಯಿತು. ಅದನ್ನೇ ಕೇಳಿ ಅಗ್ನಿವಾಯುಗಳೂ ಹೆದರಿದರು. ಇಂದ್ರನು ತಲ್ಲಣಿಸಿದನು. ಶಚಿಯು ಒದ್ದಾಡಿಹೋದಳು. ಆಚಾರ್ಯನೊಬ್ಬನು ಧೀರನಾಗಿ ಕುಳಿತಿದ್ದಾನೆ.

ಆತನಿಗೂ ಒಳಗೊಳಗೆ ದಿಗಿಲಾಯಿತೊ ಏನೋ ? “ಇರಲಿ ಸಮಯಕ್ಕೆ ಬೇಕಾದೀತು” ಎಂದು ಸಪ್ತರ್ಷಿಗಳನ್ನು ನೆನೆದನು. ಅವರೂ ಅವಸರ ಅವಸರವಾಗಿ “ಏನು ? ಏನು ?” ಎಂದು ಬಂದರು. ಆಚಾರ್ಯನು ನಡೆದುದು ಎಲ್ಲವನ್ನೂ ಅವರಿಗೆ ಅರಿಕೆ ಮಾಡಿ, “ಏನಾದರೂ ಆಗಲಿ, ನೀವು ಇರುವುದು ಒಳ್ಳೆಯದು ಎಂದು ತಮ್ಮನ್ನು ಬರಮಾಡಿಕೊಂಡೆ” ಎಂದನು. ಅವರೂ “ಹೌದು, ಹೌದು, ಅಕಾಲದಲ್ಲಿ ಆದ ಈ ಮಹಾಶಬ್ದವನ್ನು ಕೇಳಿ ನಮಗೂ ಕುತೂಹಲವಾಗಿ, ನೋಡಿದೆವು. ಇದು ಆ ಹತನಾದ ವೃತ್ರನ ಶಬ್ದ ಎಂದು ತಿಳಿಯಿತು. ನಾವು ಮಹೇಂದ್ರನ ರಕ್ಷಣೆಗೆ ಬರಬೇಕು ಎಂದುಕೊಂಡೆವು. ಅಷ್ಟರಲ್ಲಿ ಆಚಾರ್ಯನಿಂದ ಕರೆಯೂ ಬಂತು” ಎಂದರು.

ವಜ್ರಘಾತದಿಂದ ನೊಂದ ವೃತ್ರನು ತನ್ನದೊಂದು ಆವರಣವನ್ನು ಕಳೆದುಕೊಂಡುದು ಎಲ್ಲರಿಗೂ ಗೊತ್ತಾಯಿತು. ವೃತ್ರನು ಸಾಯಲಿಲ್ಲ. ಪೃಥ್ವೀಭೂತದಿಂದ ನೆಗೆದನು. ಎಲ್ಲರೂ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರು. ಎಲ್ಲರಿಗೂ ಬಾಯಿ ಅಂಟುಅಂಟಾಗಿದೆ. ಏನೋ ಕೆಟ್ಟ ರುಚಿ. ಆಚಾರ್ಯನು ಅನುಸಂಧಾನ ಮಾಡಿ ನೋಡಿದನು. ಶಚಿಯು ಇತ್ತ ಕುಗ್ಗುತ್ತಿದ್ದಾಳೆ. ಎಳೆಯ ಬಾಳೆಯ ಸುಳಿಯು ಬೆಂಕಿಯ ಝಳಕ್ಕೆ ಸಿಕ್ಕಿದರೆ ಒಣಗುವಂತೆ ಒಣಗುತ್ತಿದ್ದಾಳೆ. ಇಂದ್ರನು “ಆಚಾರ್ಯ, ಇದೇನು ? ಇಲ್ಲಿ ನೋಡಿ, ಏನೋ ಆಗಿಹೋಗುತ್ತಿದೆ” ಎಂದು ಕೂಗಿಕೊಂಡನು. ಆಚಾರ್ಯನು ಕಣ್ಣುಬಿಟ್ಟು ನೋಡಿದನು. ಸಪ್ತರ್ಷಿಗಳು ನಕ್ಕು “ದಿಗಿಲಿಲ್ಲ. ನೋಡು, ನೋಡು” ಎಂದರು. ಆಚಾರ್ಯನು ನೋಡಿದನು. ವೃತ್ರನು ಜಲಭೂತವನ್ನು ಹಿಡಿದಿದ್ದಾನೆ.

ಆಚಾರ್ಯನ ಅಪ್ಪಣೆಯಂತೆ ಇಂದ್ರನು ಆಪೋದೇವಿಯರನ್ನು ಪ್ರಾರ್ಥಿಸಿದನು. ಶುದ್ಧಜಲವು ಅರ್ಧಚಂದ್ರಮಂಡಲಾಕಾರವಾಗಿ ಕಾಣಿಸಿತು. ಪಂಚೀಕೃತ ಜಲಮಂಡಲವು ತನಗೆ ಏನೋ ರೋಗ ಬಂದಂತೆ ಒದ್ದಾಡುತ್ತಿದೆ. ಶುದ್ಧ ಜಲಮಂಡಲವು ಬೆಳ್ಳಗೆ ಬೆಳ್ಳಿಯ ಗುಂಡಿನಂತೆ ಮೆರೆಯಬೇಕಾಗಿದ್ದುದು ಪೆಚ್ಚಾಗಿ ಏನೋ ಹಿಂಸೆಯಲ್ಲಿರುವಂತೆ ನಿಸ್ತೇಜವಾಗಿದೆ.ಅದರಲ್ಲಿರುವ ಪ್ರಧಾನ ಗುಣವಾದ ರಸವು ಕೆಟ್ಟುಹೋಗಿದೆ. ದೇವಗುರುವಿನ ಅಪ್ಪಣೆಯಂತೆ ದೇವರಾಜನು ಮತ್ತೆ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿಯೂ ಮೊದಲಿನಂತೆ ಮಹಾಶಬ್ದವಾಯಿತು. ಲೋಕಲೋಕಗಳೆಲ್ಲವೂ ಸ್ವಸ್ಥಾನಗಳನ್ನು ಬಿಟ್ಟು ಚಲಿಸಿದವೋ ಎಂಬಂತಾಯಿತು. ಅಲ್ಲಿಯೂ ವೃತ್ರನ ಆವರವೊಂದು ಕಳಚಿ ಬಿತ್ತು. ವೃತ್ರನು ಇನ್ನೂ ಸಾಯಲಿಲ್ಲ. ಅಲ್ಲಿಂದಲೂ ನೆಗೆದು ಹೋದನು.

ಆಚಾರ್ಯನು ಶಚಿಯತ್ತ ತಿರುಗಿದನು. ಶಚಿಗೆ ಇನ್ನೂ ಜ್ಞಾನ ಬಂದಿಲ್ಲ. ಕಣ್ಣಿನಲ್ಲಿ ಇರುವ ತೇಜಸ್ಸಿಲ್ಲ. ಮಹಾಸೌಂದರ್ಯವತಿಯಾದ ಆಕೆಯ ರೂಪವು ನೋಡುತ್ತಿದ್ದಂತೆಯೇ ಕರಾಳವಾಗುತ್ತಿದೆ. ಎತ್ತೆತ್ತಲೋ ದೇಹವು ವಿಕಾರವಾಗುತ್ತಿದೆ. ಕೂಡಲೇ ಆಚಾರ್ಯನು ವೃತ್ರನೆಲ್ಲಿರುವನು ಎಂದು ಹುಡುಕಿ ನೋಡಿದನು. ವೃತ್ರನು ಅಗ್ನಿಭೂತವನ್ನು ಹಿಡಿದಿದ್ದಾನೆಯೆಂದು ತಿಳಿಯಿತು. ಇಂದ್ರನಿಗೆ ಅನುಸಂಧಾನ ಮಾಡಲು ಹೇಳಿದನು. ಕೆಂಪಗೆ ಮನೋಹರವಾಗಿ ತ್ರಿಕೋಣಾಕಾರವಾಗಿ ಶುದ್ಧ ತೇಜೋಮಂಡಲವೂ, ಪಂಚೀಕೃತ ತೇಜೋಮಂಡಲವೂ ಕಣ್ಣೆದುರಾಗಿ ನಿಂತುವು. ಆ ಶುದ್ಧ ಮಂಡಲದ ಮನೋಹರತೆಯು ಶುದ್ಧವಾಗಿಲ್ಲ. ಏನೋ ಆಗಿ ಅದು ತನ್ನ ಸ್ವರೂಪತೆಯನ್ನು ಕಳೆದುಕೊಳ್ಳುತ್ತಿದೆ. ಒಡಕು ಹರವಿಯಲ್ಲಿಟ್ಟಿರುವ ನೀರು ನೋಡುನೋಡುತ್ತಿದ್ದ ಹಾಗೆಯೇ ಸೋರಿ ಹೋಗುವಂತೆ ಆ ಮಂಡಲದ ಮನೋಹರತೆಯು ಹೋಗಿ ಭೀಕರತೆಯೂ ವಿಕಾರತೆಯೂ ಅಲ್ಲಿ ಮೂಡುತ್ತಿದೆ. ದೇವಪತಿಯು ಆಚಾರ್ಯನಿಂದ ಅಪ್ಪಣೆ ಪಡೆದು ಅಲ್ಲಿಯೂ ವೃತ್ರಾರ್ಥವಾಗಿ ಸಂಕಲ್ಪಪೂರ್ವಕವಾಗಿ ವಜ್ರವನ್ನು ಪ್ರಯೋಗಿಸಿದನು. ಮತ್ತದೆ ಹಿಂದಿನಂತೆಯೇ ಶಬ್ದ. ಈ ಸಲ ಇಂದ್ರನನ್ನು ಯಾರೋ ಒದ್ದಂತಾಯಿತು. ಇಂದ್ರನು ‘ಅಯ್ಯೋ’ ಎಂದು ಹಿಂದಕ್ಕೆ ಬಿದ್ದನು. ಶಚಿಯು ಪೂರ್ವದಂತಾದಳು.

ಕೂಡಲೇ ಆಚಾರ್ಯನು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ, ಇಂದ್ರನನ್ನು ತೋರಿಸಿದನು. ಅವರು ಅಭಿಮಂತ್ರಿಸಿದರು. ಇಂದ್ರನು ಪ್ರಕೃತಿಸ್ಥನಾದನು. ಇತ್ತ ಅಗ್ನಿವಾಯುಗಳಿಗೂ ಆಚಾರ್ಯನಿಗೂ ರಕ್ಷಣೆಯನ್ನು ಕೊಟ್ಟು ಅವರು “ಆಚಾರ್ಯ, ಜಾಗ್ರತೆ ಮಾಡು, ವೃತ್ರನೆಲ್ಲಿ ಹೋದನೋ ನೋಡು. ನನಗಿನ್ನು ಅಧಿಕಾರವಿಲ್ಲವೆನ್ನಬೇಡ. ಅತ್ತ ನೋಡು. ಶಚೀದೇವಿಯ ಕಡೆ ದೃಷ್ಟಿಯಿರಲಿ” ಎಂದರು. ನೋಡಿದರೆ ಶಚೀದೇವಿಯ ಕೈಕಾಲುಗಳೂ ದೇಹವೂ ಸೊರಟಿಕೊಳ್ಳುತ್ತಿವೆ. ಅಗ್ನಿವಾಯುಗಳೂ ಗಾಬರಿಯಾಗುತ್ತಿದ್ದಾರೆ. ಸಪ್ತರ್ಷಿಗಳೂ ಖಿಲವಾದ ವೇದಮಂತ್ರಗಳನ್ನು ಮತ್ತೆ ಹಾಡುತ್ತಿದ್ದಾರೆ.

ಆಚಾರ್ಯನು ವೃತ್ರನು ವಾಯುಮಂಡಲವನ್ನು ಹಿಡಿದಿರುವುದನ್ನು ನೋಡಿದನು. ಇಂದ್ರನು ಆತನ ಅಪ್ಪಣೆಯಿಂದ ವಾಯುಭೂತವನ್ನು ಅನುಸಂಧಾನ ಮಾಡಿದನು. ದೀರ್ಘಚತುರಶ್ರಾಕಾರವಾದ ಶುದ್ಧವಾಯುಮಂಡಲವು ಅನುಭವ ಗೋಚರವಾಯಿತು. ಪಂಚೀಕೃತ ವಾಯುಮಂಡಲವು ದೃಗ್ಗೋಚರವಾಯಿತು. ಅಲ್ಲಿಯೂ ಎಲ್ಲವೂ ಸೊಟ್ಟಸೊಟ್ಟಾಗಿದೆ. ವಾಯುವಿನ ಪ್ರಧಾನಗುಣವಾದ ಚಲನೆಯೇ ನಿಂತಂತಾಗಿದೆ. ಆಚಾರ್ಯನ ಅಪ್ಪಣೆಯಂತೆ ಇಂದ್ರನು ಅಲ್ಲಿಯೂ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿ ಮತ್ತೆ ಅದೇ ಶಬ್ದವಾಯಿತು. ಈ ಸಲವಂತೂ ಬ್ರಹ್ಮಾಂಡವೇನಾದರೂ ಒಡೆದುಹೋಯಿತೋ ಎನ್ನುವಷ್ಟು ಶಬ್ದ. ಸಪ್ತರ್ಷಿಗಳ ಅನಗ್ರಹದಿಂದ ಉಳಿದವರೆಲ್ಲರೂ ಉಳಿದರು. ಶಚಿಯು ಪ್ರಕೃತಿಸ್ಥಳಾದಳು.

ಸಪ್ತರ್ಷಿಪ್ರಚೋದಿತನಾದ ಆಚಾರ್ಯನು ವೃತ್ರನನ್ನು ಅನುಸಂಧಾನ ಮಾಡಿದನು. ಇಂದ್ರನು ವಜ್ರವನ್ನು ಹಿಡಿಯಲು ಅಶಕ್ತನಾಗಿದ್ದಾನೆ. ಎಲ್ಲವೂ ಹೂ ಅರಳಿದಂತೆ ಅರಳುತ್ತಿದೆ. ಶಚಿಯು ಬೆಂಕಿಯ ಸಂಬಂಧವಿಲ್ಲದೆ ಅರಳಾಗುವ ಭತ್ತದಂತೆ ಅರಳುತ್ತಿದ್ದಾಳೆ. ಅಗ್ನಿವಾಯುಗಳೂ ಅರಳುತ್ತಿದ್ದಾರೆ. ಆಚಾರ್ಯನು ಸಪ್ತರ್ಷಿಗಳನ್ನು ಮುಂದಿಟ್ಟುಕೊಂಡು, ಇಂದ್ರನಿಗೆ ಶಕ್ತಿಪ್ರಧಾನಮಾಡಿ, “ಹೂಂ, ಹೊಡೆ” ಎನ್ನುತ್ತಾನೆ. ಇಂದ್ರನು ಬಹು ಕಷ್ಟದಿಂದ ವಜ್ರವನ್ನು ಈ ಸಲವೂ ಪ್ರಯೋಗಿಸುತ್ತಾನೆ. ಈ ಸಲವೂ ವಜ್ರದ ಏಟಿಗೆ ಸಿಕ್ಕಿದರೂ ವೃತ್ರನು ಹತನಾಗದೆ, ಇಂದ್ರನ ಮೇಲೆಯೇ ಬೀಳುತ್ತಾನೆ. ಆ ಆಘಾತಕ್ಕೆ ಇಂದ್ರನು ಕೆಳಗೆ ಬೀಳುತ್ತಾನೆ. ‘ಅಯ್ಯೋ’ ಎಂದು ಅಳಲು ಮೊದಲುಮಾಡುತ್ತಾನೆ. ಏಕೆ ಎನ್ನುವುದನ್ನೇ ತಿಳಿಯದೆ ಅಗ್ನಿವಾಯುಗಳೂ ಅಳುತ್ತಾರೆ. ಶಚಿಗೆ ಎಚ್ಚರವಾಗಿದೆ. ಆಕೆಯೂ ಅಳುತ್ತಾಳೆ. ಆಚಾರ್ಯನಿಗೂ ಅಳು ಬರುತ್ತಿದೆ.

ಸಪ್ತರ್ಷಿಗಳು ತಮ್ಮ ಪ್ರಭಾವವನ್ನು ತೋರಿಸಿದರು. ತಮ್ಮಲ್ಲೆಲ್ಲ ಶ್ರೇಷ್ಠನಾದ ವಸಿಷ್ಠನನ್ನು ಸಂಬೋಧಿಸಿ, “ವಿಪ್ರೇಂದ್ರ, ಇದು ನಿನ್ನ ಸರದಿ. ವೃತ್ರನು ಇಂದ್ರನ ಅಹಂಕಾರವನ್ನು ಹಿಡಿದಿದ್ದಾನೆ. ಇದು ಶುಕ್ರಾಚಾರ್ಯನ ಸಂಜೀವಿನೀ ವಿದ್ಯೆಯ ಬಲ. ಇದನ್ನು ಅಹಂಕಾರವನ್ನು ಗೆದ್ದ ನೀನಲ್ಲದೆ, ಇನ್ನು ಯಾರೂ ಸರಿಮಾಡಲಾರರು. ಕೃಪೆಮಾಡು” ಎನ್ನುತ್ತಾರೆ. ಆತನು ನಸುನಕ್ಕು ರಥಂತರ ಸಾಮವನ್ನು ಹಾಡುತ್ತಾನೆ. ಮಿಕ್ಕವರೂ ಆತನನ್ನು ಅನುಸರಿಸಿ ಸಾಮಗಾನ ಮಾಡುತ್ತಾರೆ. ಅವರು ಸಾಮಗಾನ ಮಾಡಿದಂತೆಲ್ಲ ಇಂದ್ರನನ್ನು ಹಿಡಿದಿದ್ದ ವೃತ್ರನು ಕ್ರಮಕ್ರಮವಾಗಿ ಈಚೆಗೆ ಬರುತ್ತಾನೆ. “ನಾನು ಈ ಸಾಮವನ್ನು ಸಹಿಸಲಾರೆ. ನಿಲ್ಲಿಸಿ, ನೀವು ಹೇಳಿದಂತೆ ಕೇಳುತ್ತೇನೆ. ನಿಲ್ಲಿಸಿ, ನಿಲ್ಲಿಸಿ” ಎಂದು ಅಂಗಲಾಚುತ್ತಾನೆ. ಇಂದ್ರನು ಸ್ವಸ್ಥನಾಗುವವರೆಗೂ ಸಾಮಗಾನ ಮಾಡಿ ಸಪ್ತರ್ಷಿಗಳು ನಿಲ್ಲಿಸುತ್ತಾರೆ.

ಆ ವೇಳೆಗೆ ಅ ಸಾಮಗಾನಪ್ರಭಾವದಿಂದ ಮೂರ್ಛಿತನಾಗಿದ್ದ ವೃತ್ರನು ಮೆತ್ತಗೆ ಚೇತರಿಸಿಕೊಂಡು ಎದ್ದು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ “ನನಗೊಂದು ವರವನ್ನು ಕೊಡಬೇಕು” ಎಂದು ಯಾಚಿಸುತ್ತಾನೆ. ಅವರು ‘ಆಗಬಹುದು’ ಎನ್ನಲು, ಅವನು “ನನಗಿನ್ನೂ ಆಯುಸ್ಸಿದೆ. ಅದು ಕಳೆಯುವವರೆಗೂ ಇಂದ್ರನನ್ನು ಮಾತ್ರ ಪೀಡಿಸುತ್ತೇನೆ. ನನಗೆ ಅಪ್ಪಣೆ ಕೊಡಬೇಕು” ಎನ್ನುತ್ತಾನೆ. ಸಪ್ತರ್ಷಿಗಳು ‘ಆಗಬಹುದು’ ಎನ್ನುತ್ತಾರೆ. ವೃತ್ರನು ಅಂತರ್ಧಾನನಾಗುತ್ತಾನೆ. ಇಂದ್ರನು “ಅಯ್ಯೋ! ಹತ್ಯೆ ! ಹತ್ಯೆ” ಎಂದು ಓಡಿಹೋಗುತ್ತಾನೆ. ಆಚಾರ್ಯನೂ ಅಗ್ನಿವಾಯುಗಳು ಶಚಿಯೂ ಕೂಗುತ್ತಿದ್ದರೂ ನಿಲ್ಲದೆ ಓಡುತ್ತಾನೆ. ಎತ್ತಹೋದನೋ ತಿಳಿಯದೆ ಎಲ್ಲರೂ ವ್ಯಥಿಸುತ್ತಾರೆ.

* * * *

೨೩.ಧರ್ಮಾಸನದಲ್ಲಿ ಅರಸ

ಸಂಪಾದಿಸಿ

ನಹುಷಚಕ್ರವರ್ತಿಯು ಧರ್ಮಾಸನಾಸೀನನಾಗಿದ್ದಾನೆ. ನ್ಯಾಯಸ್ಥಾನದ ನಿರ್ಣಯವನ್ನು ವಿರೋಧಿಸಿದ ಮೂವರು ಅರಸನ ಬಳಿಗೆ ಬಂದಿದ್ದಾರೆ. ಧರ್ಮ ವಿಚಾರವನ್ನು ಚಕ್ರವರ್ತಿಯ ಎದುರಿನಲ್ಲಿ ನಿವೇದಿಸಲು ಅರಮನೆಯ ಧರ್ಮಾಧಿಕಾರಿಗಳು ಬಂದಿದ್ದಾರೆ. ರಾಜಪುರೋಹಿತ, ರಾಜಗುರು ಇಬ್ಬರೂ ಅವರವರ ಸ್ಥಾನಗಳಲ್ಲಿದ್ದಾರೆ. ಸಭೆಯು ಮಿತವಾಗಿದೆ.

ಮೊದಲನೆಯ ವಾದಿ ಜನ್ಮತಃ ಬ್ರಾಹ್ಮಣ. ಆದರೆ ಆತ ಬ್ರಾಹ್ಮಣ ಧರ್ಮವನ್ನು ಗೌರವಿಸದೆ ಅದು ಬೇಡವೆಂದವನು. ನ್ಯಾಯಾಸ್ಥಾನವು “ಇವನು ಪತಿತ ಸಾವಿತ್ರೀಕ. ಗಾಯತ್ರಿ, ಅಗ್ನಿ, ವೇದಗಳನ್ನು ಬಿಟ್ಟವನು. ಆದ್ದರಿಂದ, ಇವನಿಗೆ ದಾಯವನ್ನು ಕೊಟ್ಟರೂ ಧರ್ಮವೂ ಅಗ್ನಿಯೂ ವೃದ್ಧಿಯಾಗುವುದಿಲ್ಲವಾದ್ದರಿಂದ, ಇವನು ದಾಯಭಾಗಕ್ಕೆ ಅರ್ಹನಲ್ಲ. ಇವನು ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡು ಸಾವಿತ್ರಿಯನ್ನು ಅಂಗೀಕರಿಸಿದರೆ ಮಾತ್ರ ದಾಯಭಾಗಕ್ಕೆ ಅರ್ಹನು” ಎಂದು ನಿರ್ಣಯಿಸಿದೆ. ಅವನು ವಿರೋಧಿಸಿ ತನಗೆ ದಾಯಭಾಗ ಬೇಕೆಂದು ಅರಸನ ಬಳಿಗೆ ಬಂದಿದ್ದಾನೆ.

ಮತ್ತೊಬ್ಬನು ತಾನು ದೇಶಾಂತರದಲ್ಲಿ ನೆಲಸಬೇಕಾಗಿರುವುದರಿಂದ ತನ್ನ ಆಸ್ತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕೆನ್ನುತ್ತಾನೆ. ನ್ಯಾಯಾಸ್ಥಾನವು “ಇವನು ದೇಶವನ್ನೇ ಬಿಟ್ಟು ಹೋಗುವವನಾದ್ದರಿಂದ ಈ ಆಸ್ತಿಯಲ್ಲಿ ಈತನಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಮಾತ್ರ ತೆಗೆದುಕೊಂಡು ಹೋಗಬೇಕಲ್ಲದೆ, ಹೆಚ್ಚಾಗಿ ತೆಗೆದುಕೊಂಡು ಹೋದರೆ ನಮ್ಮ ದೇಶದ ಆಸ್ತಿಯು ಅಷ್ಟು ಕಡಿಮೆಯಾಗುವುದರಿಮದ ಅದು ಕೂಡದು. ಅಲ್ಲದೆ, ಉಪಭೋಗಕ್ಕೆ ಎಂದರೆ, ಧರ್ಮಾರ್ಥಕಾಮೋಪಭೋಗಕ್ಕೆ, ತನ್ನ ಆಸ್ತಿಯನ್ನು ಉಪಯೋಗಿಸಲು ಎಲ್ಲರಿಗೂ ಅಧಿಕಾರವುಂಟು. ಆದರೆ ಅದನ್ನು ಪೋಲು ಮಾಡಲು, ದೇಶಾಂತರಕ್ಕೆ ಕೊಂಡೊಯ್ಯಲು ಅಧಿಕಾರವಿಲ್ಲ” ಎಂದು ನಿರ್ಣಯಿಸಿದೆ. ಅದನ್ನು ವಿರೋಧಿಸಿರುವ ವಾದಿ ವೈಶ್ಯ. ಇನ್ನೊಬ್ಬನು ಅದಮ್ಯನಾದ ದುಷ್ಟ ಪಾಳೆಯಗಾರ, ಸಾಹಸಿ. ತನ್ನ ಪ್ರಾಂತ್ಯದಲ್ಲಿ ಕಳ್ಳಕಾಕರಾದಿಯಾಗಿ ದುಷ್ಟರು ಯಾರಿಗೂ ಅವಕಾಶ ಕೊಡದವನು. ತನ್ನ ಪ್ರಾಂತ್ಯದ ನೆರೆಹೊರೆಯವರಲ್ಲಿ ತಾನೇ ದುಷ್ಟನಾಗಿ ವರ್ತಿಸುತ್ತಿದ್ದಾನೆ. ನಾಲ್ಕೈದು ಸಲ ಶಿಕ್ಷೆಯನ್ನು ವಿಧಿಸಿದ್ದಾಯಿತು. ಕೊನೆಗೆ ಈಗ ಚಕ್ರವರ್ತಿಗಳ ಸನ್ನಿಧಾನಕ್ಕೆ ಕಳುಹಿಸಲಾಗಿದೆ. ಅವನು ಕ್ಷತ್ರಿಯ.

ಅರಸನು ವಿಚಾರಣೆಯನ್ನು ಆರಂಭಿಸಿದನು. ಮೊದಲು ಬ್ರಾಹ್ಮಣನು ಬಂದನು. ಅರಿಕೆ ಮಾಡಿದನು ; “ದೇವರು ಚಿತ್ತವಿಸಬೇಕು. ನನಗೆ ತಾವು ಹೇಳುವ ಧರ್ಮದಲ್ಲಿ ವಿಶ್ವಾಸವೂ ಇಲ್ಲ : ಶ್ರದ್ಧೆಯಿಲ್ಲ ; ಭಕ್ತಿಯಿಲ್ಲ ಆದ್ದರಿಂದ, ನನಗೆ ತೋರಿದಂತೆ ನಾನು ಇರಲು ಅಪ್ಪಣೆಯಾಗಬೇಕು.”

ಅರಸನು ಧರ್ಮಾಧಿಕಾರಿಯ ಮುಖವನ್ನು ನೋಡಿದನು. ಅತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಪುರಷನಿಗೂ ಚಕ್ರವರ್ತಿಗೂ ಜಯವಾಗಲಿ. ಈತನು ತನಗೆ ಧರ್ಮದಲ್ಲಿ ವಿಶ್ವಾಸವಿಲ್ಲ ಶ್ರದ್ಧೆಯಿಲ್ಲ ಭಕ್ತಿಯಿಲ್ಲ ಎಂದ ಮಾತ್ರಕ್ಕೆ ಸ್ವತಂತ್ರವಾಗುವುದು ಮೋಕ್ಷವಿಚಾರದಲ್ಲಿಯೇ ಹೊರತು ಧರ್ಮವಿಚಾರದಲ್ಲಲ್ಲ. ಧರ್ಮವಿಚಾರದಲ್ಲಿ ಪುರುಷನು ಸ್ವತಂತ್ರನಲ್ಲ. ಜನ್ಮ ವಿಚಾರದಲ್ಲಿ ಎಷ್ಟು ಮಟ್ಟಿಗೆ ಪುರುಷನು ಪರತಂತ್ರನೋ ಧರ್ಮವಿಚಾರದಲ್ಲಿಯೂ ಪುರುಷನು ಅಷ್ಟೇ ಮಟ್ಟಿಗೆ ಪರತಂತ್ರನು. ದೀಕ್ಷಾಚಾರದವರೂ ಇದನ್ನು ಮೌನವಾಗಿ ಅಂಗೀಕರಿಸಿ ಹುಟ್ಟಿದ ಮಕ್ಕಳಿಗೇ ದೀಕ್ಷೆಯನ್ನು ಕೊಟ್ಟು ಧರ್ಮವಿಚಾರದಲ್ಲಿ ಪುರುಷನ ಪಾರತಂತ್ರ್ಯವನ್ನು ಒಪ್ಪಿಕೊಳ್ಳುವರು. ಆ ಪಾರತಂತ್ರ್ಯವೇ ಸಕಲ ಸಂಪ್ರದಾಯಗಳ ಮೂಲವು. ಅದರಿಂದ ಅದನ್ನು ವಿರೋಧಿಸಿದರೆ ಸಮಾಜದ ಅಸ್ತಿಭಾರವೇ ಸಡಿಲವಾಗುವುದರಿಂದ ಸಾಮಾನ್ಯವಾಗಿ ಯಾರೂ ಅದನ್ನು ವಿರೋಧಿಸಕೂಡದು. ಹಾಗೆಂದರೆ ಪುರುಷನಿಗೆ ಧರ್ಮಾಂತರ ಮಾಡಿಕೊಳ್ಳಲು ಅವಕಾಶವಿಲ್ಲವೇ? ಹಾಗಾದರೆ ಧರ್ಮವು ಪ್ರಗತಿಯ ವಿರೋಧಿಯೇ? ಎಂದರೆ ಒಂದು ಧರ್ಮದಲ್ಲಿ ಹುಟ್ಟಿದವನು ಆ ಧರ್ಮವನ್ನು ಬಿಡಬೇಕಾದರೆ, ಆ ಧರ್ಮವನ್ನು ವಿರೋಧಿಸಲು, ತಿರಸ್ಕರಿಸಲು, ತ್ಯಾಗಮಾಡಲು, ತಕ್ಕಷ್ಟು ಕಾರಣಗಳನ್ನು ತನ್ನ ದಾಯಾದಿಗಳ ಎದುರು ವಿವರಿಸಿ, ಅದನ್ನು ತ್ಯಾಗಮಾಡಬೇಕು. ತಮ್ಮ ಸಮಾಜವು ಧರ್ಮಕಾಮಿಯೂ, ಧರ್ಮೇಚ್ಛುವೂ, ಧರ್ಮಿಷ್ಠವೂ ಆದುದರಿಂದ, ಧರ್ಮಾಂತರವನ್ನು ಇಚ್ಚಿಸುವವನು ಪರಧರ್ಮವನ್ನು ಬಯಸುವಾಗ, ಪೂರ್ವಧರ್ಮದ ಆಶ್ರಮದಲ್ಲಿ ಇಲ್ಲದಿದ್ದರೆ ತನಗೆ ಪ್ರಾಪ್ತವಾಗುತ್ತಿದ್ದ ಪ್ರೇಯೋಭಾಗವನ್ನು ಬಯಸಕೂಡದು. ಈತನು ತಾನು ಧರ್ಮದಲ್ಲಿ ತೋರಿಸುವ ಅವಿಶ್ವಾಸ, ಅಶ್ರದ್ಧೆ ಅಭಕ್ತಿಗಳ ಕಾರಣವನ್ನು ದಾಯಾದಿಗಳ ಎದುರಿನಲ್ಲಿ ವಿವರಿಸಿಲ್ಲವಾದ್ದರಿಂದ, ಈತನು ಅಪೇಕ್ಷಿಸುವುದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಒಂದು ಪಾಲು. ಆದ್ದರಿಂದ, ಈತನು ಕುಟುಂಬದಲ್ಲಿ ಪಿಂಡಭಾಗಿಯಾಗಬಹುದೇ ಹೊರತು ದಾಯಭಾಗಿಯಾಗಲು ಅರ್ಹನಲ್ಲ. ಅಲ್ಲದೆ, ಇನ್ನೂ ಒಂದು ಮಾತು. ಅವಿಶ್ವಾಸ, ಅಶ್ರದ್ಧೆ, ಅಭಕ್ತಿ ಎಂಬುದು ಕುರುಡು, ಕಿವುಡು, ಹೆಳವುಗಳಂತೆ ಒಂದು ವ್ಯಾಧಿ. ಅದನ್ನು ಶಾಸ್ತ್ರಾಧ್ಯಯನ, ವೃದ್ಧೋಪಸೇವೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯ. ಅವನ್ನೂ ಈತನು ಮಾಡಿಲ್ಲ. ಅದರಿಂದ ಈತನು ದಾಯಭಾಗಕ್ಕೆ ಅರ್ಹನಲ್ಲ.”

ವಾದಿಯು ಅರಿಕೆ ಮಾಡಿದನು : “ದೇವ, ಯಾರೂ ನನಗೆ ಹೇಳಿಕೊಡಲಿಲ್ಲ.”

ಅರಸನು ದೃಢವಾಗಿ ಗುಡುಗಿನಂತೆ ಮೊಳಗುವ ಕಂಠದಲ್ಲಿ ಹೇಳಿದನು: “ಅದು ಸರಿಯಲ್ಲ. ನೀನು ಧರ್ಮವನ್ನು ಅರಸಿಕೊಂಡು ಹೋಗಬೇಕು. ಪುರುಷನು ಅರ್ಥಕಾಮಗಳ ಸಂಪಾದನೆಗೆ ತಾನಾಗಿ ಸಹಜವಾಗಿ ತೊಡಗುವಂತೆ, ಧರ್ಮಕ್ಕಾಗಿ ಪ್ರಯತ್ನಪುರಸ್ಸರವಾಗಿ ತೊಡಗಬೇಕು. ಇಂದ್ರಿಯಾರ್ಥಗಳನ್ನು ಸಾಧಿಸುವಂತೆ ಅದನ್ನು ಸಾಧಿಸಬೇಕು. ಅಭ್ಯಾಸಮಾಡಬೇಕು. ವೃದ್ಧರನ್ನು ಸೇವಿಸಿ ತಿಳಿಯಬೇಕು. ಅಧ್ಯಯನ, ಶ್ರವಣ, ಮನನಗಳಿಂದ ಧರ್ಮವನ್ನು ಒಲಿಸಿಕೊಳ್ಳಬೇಕು. ಹಾಗೆ ಮಾಡಲೆಂದೇ ಪ್ರೇಯೋವಿಚಾರಕ್ಕಿಂತ ಶ್ರೇಯೋವಿಚಾರವನ್ನು ಹೆಚ್ಚಾಗಿ ಗೌರವಿಸುವನೆಂದೇ ಬ್ರಾಹ್ಮಣನಿಗೆ ಸಮಾಜವು ಗೌರವದ ಅಗ್ರಸ್ಥಾನವನ್ನು ಕೊಟ್ಟಿರುವುದು. ನೀನು ಹಾಗೆ ಮಾಡದೆ ಹೋದರೆ, ನಿನಗೆ ಅಗ್ರಜನ ಸ್ಥಾನಮಾನಗಳು ಸಲ್ಲುವುದಿಲ್ಲ. ಆಯಿತು ನೀನು ಈಗ ಈ ಆಸ್ತಿಯನ್ನು ತೆಗೆದುಕೊಂಡು ಏನು ಮಾಡುವೆ ?”

“ಕುಟುಂಬಿಯಾಗಿ ಸುಖಜೀವನ ಮಾಡುವೆನು.”

“ಹಾಗೆಂದರೆ ಪಶುಜೀವನ ಮಾಡುತ್ತ ಸೋಮಾರಿಯಾಗಿರುವೆನೆಂದಾಯಿತು. ಪುರುಷಧರ್ಮವು ಯಾವಾಗಲೂ ಧರ್ಮಕರ್ಮಪ್ರಧಾನವು. ನೀನು ಅದನ್ನು ಬೇಡ ಎನ್ನುವೆ. ನಮ್ಮ ರಾಜ್ಯದಲ್ಲಿ ಧರ್ಮಾರ್ಥಗಳನ್ನು ಅಭಿವೃದ್ಧಿ ಮಾಡುವವರಿಗೆ ಮಾತ್ರ ಸ್ಥಾನವು. ಅದರಿಂದ ನೀನು ಈ ಎರಡರಲ್ಲಿ ಒಂದನ್ನು ಹಿಡಿಯಬೇಕು. ಇಲ್ಲವಾದರೆ ಪಿಂಡಭಾಗಿಯಾಗಿ ಅವಿಭಕ್ತ ಕುಟುಂಬದಲ್ಲಿ ಬಿದ್ದಿರಬೇಕು. ಅದರಿಂದ ನನ್ನ ಮಾತು ಕೇಳು. ನೀನು ಜಾತ್ಯಾ ಬ್ರಾಹ್ಮಣನು. ನಿನ್ನ ಮನೋಬುದ್ಧಿ ಅಹಂಕಾರಗಳು ಸಂಸ್ಕಾರ ಸಂಪನ್ನವಾದರೆ ಧರ್ಮದ ಕಡೆಗೆ ನುಗ್ಗುವವು. ಅರ್ಥಾರ್ಜನಕ್ಕೆ ನಿನಗೆ ಶಕ್ತಿಸಾಲದು ಅದರಿಂದ ನೀನು ಪ್ರಾಯಶ್ಚಿತ್ತ ಮಾಡಿಕೊಂಡು ಸಂಸ್ಕಾರಸಂಪನ್ನರಾಗಿ ಬರುವ ವರ್ಷಕ್ಕೆ ಬಾ. ಅಥವಾ ನ್ಯಾಯ ನಿರ್ಣಯವನ್ನು ಒಪ್ಪಿಕೊ.”

“ದೇವ ಸಂಸ್ಕಾರಗಳಿಂದ ನನಗೆ ಉಪಯೋಗವಾಗುವುದು ಎಂಬುದನ್ನು ಅರಿಯಿಸಿಕೊಡಬೇಡವೇ ?”

ಚಕ್ರವರ್ತಿಗೆ ಭಗವಾನರ ಮಾತು ನೆನಪಿಗೆ ಬಂತು : ಸವಿಚಾರವಾಗಿ ಎದುರು ಕಡೆಯವರು ಒಪ್ಪುವಂತೆ ಧರ್ಮವನ್ನು ನಿರೂಪಿಸಬೇಕು. ಆದರೆ ತಾನು ಕುಳಿತಿರುವುದು ವಿಚಾರವೇದಿಕೆಯಲ್ಲ : ವಿಧಿವೇದಿಕೆ. ಏನು ಮಾಡಬೇಕು? ಅರಸನು ಒಂದು ಗಳಿಗೆ ಯೋಚಿಸಿ ರಾಜಪುರೋಹಿತರ ಮುಖವನ್ನು ನೋಡಿದನು.

ಆತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಕ್ಕೆ ಜಯವಾಗಲಿ. ರಾಜಾಜ್ಞೆಯಂತೆ ವಿಧಿವೇದಿಕೆಯ ಮುಂದೆ ವಿಚಾರವನ್ನು ಮಂಡಿಸುತ್ತಿದ್ದೇನೆ. ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣಗಳೆಂದು ಮೂರು ದೇಹಗಳು. ಸ್ಥೂಲದೇಹಕ್ಕೆ ಬರುವ ರೋಗರುಜಿನಗಳನ್ನು ನಿವಾರಿಸಲು ಆಯುರ್ವೇದವು ಔಷಧ, ಪಂಥ್ಯ, ಅನುಪಾನಗಳನ್ನು ಹೇಳುವುದು. ಅದರಂತೆಯೇ ಸೂಕ್ಷ್ಮದೇಹವಾದ ಮನೋಬುದ್ಧಿ ಅಹಂಕಾರಗಳಿಗೆ ಬರುವ ರೋಗರುಜಿನಗಳನ್ನು ನಿವಾರಿಸಿಕೊಳ್ಳಲು ಶ್ರುತೀ ಭಗವತಿಯು ಸಂಸ್ಕಾರಗಳನ್ನು ಅಪ್ಪಣೆಕೊಡಿಸಿರುವಳು. ಇದನ್ನು ಆಂತರಿಕವಾಗಿ ಬಾಹ್ಯವಾಗಿ ತಿಳಿದುಕೊಳ್ಳುವ ಸಾಧನೆಗಳನ್ನು ಯೋಗಶಾಸ್ತ್ರವು ನಿರೂಪಿಸಿರುವುದು. ಲೋಕದಲ್ಲಿ ಪ್ರತಿಯೊಂದು ಸಿದ್ಧಿಯೂ ಜನ್ಮ ಮಣಿ, ಮಂತ್ರ, ಔಷಧಗಳಿಂದ ಸಾಧ್ಯವು. ಪಕ್ಷಿಗಳು ಪಕ್ಷಿಗಳಾಗಿ ಹುಟ್ಟಿದ ಮಾತ್ರದಿಂದಲೇ ಆಕಾಶದಲ್ಲಿ ಹಾರಾಡುವುವು. ಮೀನುಗಳೂ ಹುಟ್ಟುತ್ತಿದ್ದಂತೆಯೇ ಈಜು ಕಲಿತಿರುವುವು. ಇವು ಜನ್ಮಸಿದ್ಧಿಗಳು. ಔಷಧಸೇವನದಿಂದ ಗುಣದೋಷಗಳು ಉಂಟಾಗುವುದು ಅನುಭವಸಿದ್ಧವು. ಇವೆರಡನ್ನೂ ಕಂಡವರು ಮಣಿಮಂತ್ರಗಳೂ ಹೀಗೆಯೇ ಸಿದ್ಧಿಪ್ರದಗಳೆಂದು ತಿಳಿದುಕೊಳ್ಳಬಹುದು : ಅಥವಾ ಬೇಕೆಂದರೆ ಅದಕ್ಕಾಗಿ ಪ್ರಯತ್ನಿಸಿ ಪ್ರತ್ಯಕ್ಷವಾಗಿ ಕಂಡುಕೊಳ್ಳಬಹುದು : ಆದರೂ ಮಣಿ, ಔಷಧಗಳು ಜಡಗಳು, ಅದರಿಂದ ಪುರುಷ ಪ್ರಯತ್ನಾಂತರವಿಲ್ಲದೆ ಸಿದ್ಧಿಯನ್ನು ಕೊಡುವುವು. ಆದರೆ ಮಂತ್ರಗಳು ಹಾಗಲ್ಲ, ಮಂತ್ರವು ತತ್ಸಿದ್ಧನಾದವನಿಂದ ಬರುವ ಶಕ್ತಿವಾಹಿನಿಯು. ಅದನ್ನು ಗುರುವು ಅನುಗ್ರಹಿಸಿದ ಬೀಜಶಕ್ತಿಯನ್ನು ಮಹಾವೃಕ್ಷವಾಗಿ ಬೆಳೆಸಿಕೊಳ್ಳುವುದು ಶಿಷ್ಯನ ಕೈಯಲ್ಲಿರುವುದು ಆದ್ದರಿಂದಲೇ, ಬೀಜಶಕ್ತಿಯನ್ನು ಕೊಡುವನೆಂದೇ ಮಂತ್ರಪ್ರದನನ್ನು ತಂದೆ ಎಂದು ಆತನ ಋಣವನ್ನು ಒಪ್ಪಿಕೊಳ್ಳುವುದು. ಮಂತ್ರವೆನ್ನುವುದು ಮನನದಿಂದ ಪ್ರಕಟವಾಗುವ ಶಕ್ತಿಸಂಪುಟವು. ಮಂತ್ರವು ನದಿಯ ನೀರನ್ನು ತಂದೊದಗಿಸುವ ಕಾಲುವೆಯೂ ಹೌದು. ಕಾಲಾಂತರದಲ್ಲಿ ತಾನೇ ನದಿಯೂ ಆಗಬಲ್ಲುದು. ಇದಿಷ್ಟೂ ವಿಚಾರವೇದಿಕೆಯು. ಇನ್ನು ಕ್ರಿಯಾವೇದಿಕೆಯ ವಿಚಾರ. ಬೇಕೆಂದರೆ ಅನುಭವಿಸುವುದಕ್ಕೆ ಸಿದ್ಧನಾಗಬೇಕು. ಇಷ್ಟವಿದ್ದರೆ ಅದೂ ಕೂಡ ಆಗಬಹುದು.”

“ದೇವ, ಇದಿಷ್ಟೂ ಮಾಯೆಯಲ್ಲ ಎನ್ನುವುದು ಹೇಗೆ ?”

“ಈ ಪ್ರಶ್ನವೇ ಅತಿಪ್ರಶ್ನವು. ಅಶ್ರದ್ಧಾಜಾಡ್ಯದಿಂದ ಬೆಳೆದ ಸಂಶಯವೆಂಬ ವಿಷಬೀಜದ ವೃಕ್ಷಸ್ವರೂಪವು ಇದು. ಆದರೂ ಉತ್ತರ ಕೊಡೋಣ. ಮಾಯೆಯೆಂಬುದು ವಸ್ತುತಂತ್ರವಾದರೆ ಕ್ಷಣಕ್ಕೊಂದು ರೂಪವನ್ನು ತಾಳುತ್ತ ನಿಯತ ರೂಪವಿಲ್ಲದೆ ಪ್ರತಿಭಾಸವಾಗುವುದು. ಸತ್ಯವು ತೋರಿದ ಕ್ಷಣದಲ್ಲಿ ಅಡಗುವುದು ಅದು. ಪುರುಷತಂತ್ರವಾದರೆ, ಮಾಯಿಕನ ಬಲವಿರುವವರೆಗು ಇದ್ದು ಅಡಗುವುದು. ಮಂತ್ರವು ಹಾಗಲ್ಲ. ಸತ್ಯಾರ್ಥದರ್ಶನಕ್ಕಾಗಿಯೇ ಜನ್ಮವೆತ್ತಿರುವುದು. ಪುರುಷತಂತ್ರವಾಗಿ ಒಬ್ಬರಿಂದ ಒಬ್ಬರಿಗೆ ಬಂದರೂ, ವಸ್ತುತಂತ್ರವಾಗಿ ಬೆಳೆಸಿದಷ್ಟು ಬೆಳೆದರೂ, ಸತ್ಯಾರ್ಥದರ್ಶನ ಮಾಡಿಸಿಯೂ ಇನ್ನೂ ಇರುವುದಾಗಿ, ನಾಶಗಳಲ್ಲಿ ಯಾವುದೊಂದಕ್ಕೂ ವಶವಾಗುವುದಿಲ್ಲವಾಗಿ, ಮಂತ್ರವು ಮಾಯೆಯಲ್ಲ.”

“ಇದು ಬೇಡ ಎನ್ನುವುದಕ್ಕೆ ನನಗೆ ಅಧಿಕಾರವುಂಟೋ ? ಇಲ್ಲವೋ ?”

“ಆ ಅಧಿಕಾರವು ನೀನು ಸಂಪಾದಿಸಿಕೊಂಡರೆ ಉಂಟು. ಇಲ್ಲದಿದ್ದರೆ ಇಲ್ಲ. ನಿನಗೆ ಜನ್ಮತಃ ಬಂದಿರುವ ಅಧಿಕಾರ ನಿನ್ನ ತಂದೆಯ ಮಗನೆಂದು ಬಂದ ಅಧಿಕಾರ. ಈ ಅಧಿಕಾರವೆನ್ನುವುದು ಕಾಲುವೆಯ ಹಾಗೆ, ನಿನ್ನ ಜನ್ಮಬಲದಿಂದ ನಿನಗೆ ಬಂದ ಅಧಿಕಾರ ತೋಡಿದ ಕಾಲುವೆಯ ಹಾಗೆ. ಅದರಲ್ಲಿ ನೀರು ಹರಿಯಬೇಕಾದರೆ ನಿನ್ನ ಪ್ರಯತ್ನದಿಂದ ಆಗಬೇಕು. ನೀರು ಬಂದರೂ ಅದು ಕಾಲುವೆಯ ಎರಡು ದಡಗಳ ನಡುವೆ. ಕಾಲುವೆಯ ಆಳ, ಅಗಲಗಳಿಗೆ ತಕ್ಕಷ್ಟು ಮಾತ್ರ ಹರಿಯುವಂತೆ, ಆ ಅಧಿಕಾರವು ಜನ್ಮಸಿದ್ಧವಾದ ವರ್ಣಧರ್ಮ, ದೇಶಕಾಲಧರ್ಮಗಳೆಂಬ ಎರಡು ದಡಗಳ ನಡುವೆ ಹರಿಯುವುದು. ಅದನ್ನು ಬಿಟ್ಟು ನಿನಗೆ ಅಧಿಕಾರವೇ ಇಲ್ಲ.”

“ದಯವಿಟ್ಟು ನನಗೆ ಅದನ್ನು ವಿವರಿಸಿ ಹೇಳುವಿರಾ ?

“ನೀನು ವಿನಯದಿಂದ ಕೇಳಿರುವೆಯಾಗಿ ನಿನಗೆ ಹೇಳಬೇಕು. ಧರ್ಮಕಾಮನಲ್ಲದವನಿಗೆ ಈ ವಿಷಯವು ಬರುವುದಿಲ್ಲ. ನೀನು ಅಜ್ಞಾನದಿಂದ ಧರ್ಮವನ್ನು ತಿರಸ್ಕರಿಸಿರುವೆಯೆಂದು ಈ ವಿಷಯವು ಹೇಳುವುದಾಗಿ, ನಿನಗೆ ಹೇಳಬೇಕು, ಕೇಳು. ಸಮಾಜವು ಸೋಪಾನಪಂಕ್ತಿಯಂತೆ, ಗೋಪುದರಂತೆ ಇದೆ. ಸಮಾಜವು ಸ್ವಂತವಾದ ಒಂದು ರೂಪವಿಲ್ಲದ್ದಾದರೂ ಈ ಮೆಟ್ಟಿಲುಮೆಟ್ಟಿಲಾಗಿರುವಿಕೆಯು, ಉಚ್ಚ ನೀಚ ಭಾವವು ಅದರಲ್ಲಿ ಇದ್ದೇ ಇರುವುದು. ಈ ಸೋಪಾನಕ್ರಮವನ್ನು ನಿರಾಕರಿಸಿದವರದೂ ಒಂದು ಗುಂಪುಂಟು. ಅದು ಏಕಪಿಂಡ, ಏಕಜಾತಿ, ಅಲ್ಲಿ ಕೇವಲ ವಯಸ್ಸಿನಿಂದ ಹಿರಿಯತನ. ಅಲ್ಲಿ ಭೋಗಾಧಿಕಾರ ಉಂಟಾದರೂ ಸ್ವತ್ತಾಧಿಕಾರವಿಲ್ಲ. ಸ್ವತ್ತು ಏನಿದ್ದರೂ ಅದು ಕುಲದ್ದು. ಕುಲದವರು ಕೊಟ್ಟಷ್ಟು ತಿಂದುಂಡು ತಾನು ಸಂಪಾದಿಸಿದುದನ್ನೆಲ್ಲಾ ಕುಲಕ್ಕೆ ಕೊಟ್ಟು ಹೋಗಬೇಕು. ಈ ಸೋಪಾನಕ್ರಮವನ್ನು ಅಂಗೀಕರಿಸಿದವರು ವರ್ಣಾಶ್ರಮಧರ್ಮಸಂಪನ್ನರು. ಕೆಲವರು ಜಾತಿಯ ಜನ್ಮದಿಂದ ಲಭ್ಯವಾಗುವುದು ಎಂದರೆ, ಇನ್ನು ಕೆಲವರು ಗುಣದಿಂದಲೂ ವಿದ್ಯಾತಪಸ್ಸುಗಳಿಂದಲೂ ಅದನ್ನು ನಿರ್ಣಯಿಸಬೇಕು ಎನ್ನುವರು. ಕುದುರೆಯ ಮರಿಯು ಕುದುರೆಯೇ ಎನ್ನುವಂತೆ ಮಾತಾಪಿತೃಗಳಿಂದಲೇ ಜಾತಿಯು ಮಕ್ಕಳಿಗು ಸಂಕ್ರಮಿಸುವುದಾದರೂ, ಮನುಷ್ಯ ವಿಷಯದಲ್ಲಿ ಮಾತ್ರ ಆ ಅಧಿಕಾರವು ಸ್ಪಷ್ಟ ಅಸ್ಪಷ್ಟ ಎಂದು ಎರಡು ವಿಧವಾಗಿರುವುದು. ಹುಟ್ಟುತ್ತ ಬರುವ ಅಸ್ಪಷ್ಟಾಧಿಕಾರವು ಆನುವಂಶಿಕ ಗುಣವಾಗಿ ಊರ್ಜಿತವಾಗಲು ಸಂಸ್ಕಾರವನ್ನು ಅಪೇಕ್ಷಿಸುವುದು. ಅದಿಲ್ಲದಿದ್ದರೆ ಸಹಜವಾಗಿ ಗಟ್ಟಿಯಾಗಿ ಕಬ್ಬಿಣವು ಉಪಯೋಗಿಸದೆ ಇಟ್ಟಿದ್ದರೆ, ಇಟ್ಟಕಡೆಯಲ್ಲಿಯೇ ತುಕ್ಕು ಹಿಡಿಯುವಂತೆ, ಸಂಸ್ಕಾರಬಲದಿಂದ ಆನುವಂಶಿಕ ಗುಣವು ಮಸಳಿಸಿ ಹೋಗುವುದು. ಸಂಸ್ಕಾರಬಲದಿಂದ ಇಲ್ಲದ ಗುಣವನ್ನು ಹುಟ್ಟಿಸಬಹುದಾದರೂ, ಸಂಸ್ಕಾರವು ಸಾಮಾನ್ಯವಾಗಿ ಇದ್ದ ಗುಣವನ್ನೇ ವೃದ್ಧಿಪಡಿಸುವುದು. ವೈದ್ಯನು ಪ್ರಾಣಾಪಹಾರಕವಾದ ವಿಷಯವನ್ನು ಪ್ರಾಣದಾಯಕವಾದ ರಸಾಯನವಾಗಿ ಮಾಡಬಲ್ಲನು ಎಂಬ ತತ್ವವನ್ನು ಅಂಗೀಕರಿಸಿದ ಎರಡನೆಯ ಗುಂಪಿನವರು ಇಲ್ಲದ ಗುಣವನ್ನು ಹುಟ್ಟಿಸುವ ವಿಶೇಷ ಗುಣವನ್ನೇ ಸಂಸ್ಕಾರವೆನ್ನದೆ ದೀಕ್ಷೆಯೆನ್ನುವರು. ಈ ದೀಕ್ಷಾಸಂಪ್ರದಾಯದವರು ‘ಮನುಷ್ಯರಿಗೆ ದೇಹತತ್ವಕ್ಕಿಂತಲೂ ಮನಸ್ತತ್ತ್ವ ಹೆಚ್ಚು ಮನೋಬುದ್ಧಿ ಅಹಂಕಾರಗಳೇ ಮುಖ್ಯವಾದ್ದರಿಂದ ಮಾತೃತಃ ಪಿತೃತಃ ಬರುವ ದೇಹಕ್ಕಿಂತಲೂ ಗುರುವಿನಿಂದ ಸಂಸ್ಕಾರವಶನಾಗಿ ಬರುವ ಅಂತಃಕರಣಶುದ್ಧಿಯೇ ಮುಖ್ಯವಾದ್ದರಿಂದ, ಆ ಅಂತಃಕರಣಶುದ್ಧಿಯಿಂದಲೇ ಜಾತಿ ನಿರ್ಣಯವೆನ್ನುವರು.

ವರ್ಣಾಶ್ರಮಧರ್ಮಸಂಪನ್ನರು ಇದನ್ನು ಒಪ್ಪದೆ, ಅಸ್ಪಷ್ಟಾಧಿಕಾರವನ್ನು ಸ್ಪಷ್ಟಾಧಿಕಾರವನ್ನು ಮಾಡುವ, ಒಂದನ್ನು ನೂರುಮಾಡುವ ಸಂಸ್ಕಾರವನ್ನು ಮಾತ್ರ ಅಂಗೀಕರಿಸುವರು. ಅಂತಃಕರಣದ ಶುದ್ಧಿ - ಅಶುದ್ಧಿಗಳು ಗೋಚರವಾಗುವುದು ಯಾವುದೋ ಒಂದು ವಯಸ್ಸಿಗೆ ಬಂದಾಗ. ಅದು ಕನ್ಯೆಯು ಋತುಮತಿಯಾಗಿ ಸ್ತ್ರೀ ಆದಂತೆ. ಅದುವರೆಗೆ ವ್ಯವಸ್ಥೆ ಇಲ್ಲದಿದ್ದರೆ ಹೇಗೆ ? ಅಲ್ಲದೆ, ಜೊತೆಗೆ ಆನುವಂಶಿಕ ಗುಣಗಳಿಂದಲೇ ಎಲ್ಲವೂ ಸಿದ್ಧವಾಗುವುವು. ಕುದುರೆ, ಒಂಟೆ, ಕುರಿಗಳು ಹಾಲು ಕರೆದರೂ, ಆ ಹಾಲು ಬಿಟ್ಟು ಮತ್ತೇನನ್ನೂ ಉಪಯೋಗಿಸದವರೇ ಇದ್ದರೂ ಅವು ಹಸುಗಳಲ್ಲ. ಅದರಿಂದ, ಮಾತೃತಃ ಪಿತೃತಃ ಬರುವ ಜಾತಿಯೇ ಜಾತಿ ಎಂಬ ತತ್ತ್ವವನ್ನೇ ಅಂಗೀಕರಿಸಿ, ‘ಜನ್ಮಶುದ್ಧಿಯಿಲ್ಲದಿದ್ದಲ್ಲಿ ಸಂಸ್ಕಾರವು ಏನೂ ಮಡಲಾರದು. ಅದರಿಂದ, ಈ ತಜ್ಜಾತರಿಗೆ ಸಂಸ್ಕಾರ’ ಎನ್ನುವರು ಇವರು.

`ನಾವೆಲ್ಲರೂ ಈ ಸಿದ್ಧಾಂತವನ್ನು ಅಂಗಿಕರಿಸಿದವರು. ಜೊತೆಗೆ ಧರ್ಮಕಾಮ ನಲ್ಲದವನಿಗೆ ಸಮಾಜದಲ್ಲಿ ಸ್ಥಾನವಿಲ್ಲ ಎಂಬ ತತ್ತ್ವವನ್ನು ಅಂಗೀಕರಿಸಿದವರು. ಈಗ ನೀನು ತಜ್ಜಾತನಾದುದರಿಂದ ನೀನು ತತ್ಸಂಸ್ಕಾರ ಸಂಪನ್ನನಾಗಬೇಕು. ಸಂಸ್ಕಾರದಿಂದಲೇ ಫಲವಾಗದೇ ಹೋದರೋ ಎಂದರೆ ಒಂದೊಂದು ವೇಳೆ ಸಂಸ್ಕಾರಫಲವು ಸದ್ಯದಲ್ಲಿ ಕಾರಣಾಂತರಗಳಿಂದ ಗೋಚರಿಸದೆ ಹೋದರೂ, ಅದು ಅಪೂರ್ವವಾಗಿದ್ದುಕೊಂಡು ಕಾಲದೇಶಗಳು ಅನುಕೂಲವಾದಾಗ ಮುಂದಿನ ಸಂತಾನದಲ್ಲಿ ಪ್ರಕಟವಾಗುವುದು. ಅದರಿಂದ ಆನುವಂಶಿಕ ಗುಣೋತ್ತೇಜಕವಾದ ಸಂಸ್ಕಾರವನ್ನು ನೀನೂ ಪಡೆದು ಅದನ್ನು ಅನುಷ್ಠಾನ ಮಾಡುವುದಾದರೆ, ನೀನು ದಾಯಾರ್ಹನು.

`ಮೇಲೆ ಹೇಳಿದ ಎರಡು ಗುಂಪುಗಳಲ್ಲಿ ಇನ್ನೊಂದು ವಿಶೇಷವುಂಟು. ಏಕಪಿಂಡ ಜಾತಿಯು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವುದಕ್ಕೆ ಅತ್ಯವಶ್ಯವಾದ ನಯ ವಿನಯರೂಪವಾದ ಸಾಮಾನ್ಯ ಧರ್ಮವನ್ನು ಅಂಗೀಕರಿಸುವುದು. ಅಲ್ಲಿ ಸೌಜನ್ಯವೇ ಧರ್ಮ. ಹತ್ತು ಜನರು ಸೇರಿ ಮಾಡಿಕೊಂಡ ಕಟ್ಟಳೆಯೇ ಧರ್ಮ. ಆದರೆ ಸೋಪಾನಕ್ರಮದವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಸಮಾಜವು ವ್ಯಕ್ತಿಯಂತೆಯೇ ದೇಶ ಕಾಲ ಕರ್ಮಾನುಗುಣವಾಗಿ ಭಿನೈಸಿದರೂ ಅದು ವಿಶ್ವದ ಒಂದು ಅಂಗ. ಅದರಿಂದ ಸಮಾಜದ ಉತ್ತಮವ್ಯಕ್ತಿಯು ವಿಶ್ವದ ಪ್ರತಿನಿಧಿಯಾಗಿ, ತನ್ನ ಸ್ವಧರ್ಮದ ಪ್ರತೀಕವಾಗಿ ಕಾಲ, ದೇಶ, ಜಾತಿ, ಕುಲಗಳನ್ನು ಮಾತ್ರವಲ್ಲದಲೆ, ವಿಶ್ವಕುಟುಂಬವನ್ನೂ ಲಕ್ಷ್ಯದಲ್ಲಿಟ್ಟುಕೊಂಡು ತನ್ನ ಕಾರ್ಯವನ್ನು ನಿರೂಪಿಸಿಕೊಂಡು, ಆಚರಿಸಬೇಕು. ಈ ಲಕ್ಷ್ಯವು ಮೇಲುಮೆಲಕ್ಕೆ ಹೋಗುತ್ತಾ ಹೆಚ್ಚು ಹೆಚ್ಚು ಪ್ರಕಟವಾಗಿ, ಕೊನೆಯ ಅಂತಸ್ತಿನಲ್ಲಿ ಕಾಣಿಸುವ ಗೋಪುರದ ಶಿಖರದಂತಿರುವುದು. ಗೋಪುರದ ಕಲಶಗಳು, ಆ ಗೋಪುರದ ಅಂತಸ್ತು ಅಂತಸ್ತಿನ ಬಲದಿಂದ ನಿಂತಿರುವಂತೆ, ಸಮಾಜದ ಉತ್ತಮ ವ್ಯಕ್ತಿಯು ಸಮಾಜದ ಸಂಬಂಧವೆನ್ನುವುದನ್ನು ಮರೆಯಬಾರದು’ ಎನ್ನುವರು.

`“ನೀನು ಈಗ ಬ್ರಾಹ್ಮಣನು. ನೀನು ನಿನ್ನ ನಿತ್ಯನೈಮಿತ್ತಿಕ ಕರ್ಮಗಳನ್ನು ಮಾಡುತ್ತ ವಿಶ್ವದ ಯೋಗಕ್ಷೇಮಗಳನ್ನು ನೋಡಿಕೊಳ್ಳುವುದು ನಿನ್ನ ಕರ್ತವ್ಯವು. ಅದರಿಂದಲೇ, ಆ ರೀತಿಯಾದ ಗುರುತಮ ಭಾರವನ್ನು ವಹಿಸಿದುದರಿಂದಲೇ ನಿನ್ನನ್ನು ಮೂರ್ಧಾಭಿಷಿಕ್ತನಾದ ರಾಜನೂ ನಮಸ್ಕಾರಾದಿಗಳಿಂದ ಗೌರವಿಸುವುದು. ಯೋಧನ ಕತ್ತಿಯಂತೆ ನೀನು ಯಾವಾಗಲೂ ಕರ್ತವ್ಯಸಿದ್ಧನಾಗಿರಬೇಕು. ಬೆಂಕಿಯು ಯಾವಾಗಲೂ ಉರಿಯುತ್ತಲೇ ಇರುವಂತೆ, ನೀನು ಯಾವಾಗಲೂ ಲಕ್ಷ್ಯಾನುಸಂಧಾನದಲ್ಲಿಯೇ ಇರಬೇಕು. ಇಲ್ಲದಿದ್ದರೆ ಆರಿದ ಬೆಂಕಿಯ ಗುರುತಾದ ಬೂದಿ ಇದ್ದಿಲುಗಳನ್ನು ಹೊರಕ್ಕೆಸೆಯುವಂತೆ, ಸಮಾಜವು ನಿನ್ನನ್ನು ಹೊರಕ್ಕೆ ಎಸೆಯಬಾರದೇಕೆ ? ಆಸ್ತಿಯು ನಿನ್ನ ತಂದೆಯದೇ ಆದರೂ ನಿನಗದು ಇಲ್ಲ ಎಂಬುದೇ ಈ ಎಸೆಯುವಿಕೆ. ಮಹಾಸ್ವಾಮಿಯವರು ಕೃಪೆಮಾಡಿ, ನಿನಗೆ ಆಸ್ತಿಯನ್ನು ಸಂಪಾದಿಸಿಕೊಳ್ಳುವುದಕ್ಕೆ ಅವಕಾಶವನ್ನು ಕೊಟ್ಟಿರುವರು. ಯಾವನೊಬ್ಬನೇ ಆಗಲಿ ಜನ್ಮಮಾತ್ರದಿಂದ ಸಂಪಾದಿಸುವುದು ಕೆಲವು ಅಸ್ಪಷ್ಟಾಧಿಕಾರಗಳನ್ನು ಮಾತ್ರ. ಆ ಅಧಿಕಾರಗಳು ಅವನವನ ಕರ್ಮಗಳಿಂದ ಊರ್ಜಿತವಾಗಬೇಕು. ಅದರಿಂದ, ನೀನು ಈ ಅಸ್ಪಷ್ಟಾಧಿಕಾರವನ್ನು ಹಿಡಿದು ‘ನನ್ನ ತಂದೆಯ ಆಸ್ತಿಗೆ ನಾನು ಭಾಗಿ’ಯೆನ್ನುವುದಕ್ಕಿಂತ, “ನನಗೆ ಅರ್ಹತೆಯಿರುವುದರಿಂದ ಇದು ನನಗೆ ಬರಬೇಕು’ ಎನ್ನುವುದು ಸರಿ.”

`ವಾದಿಯು ಅದನ್ನು ಕೇಳಿ ನಿರುತ್ತರನಾಗಿ, ರಾಜಾಜ್ಞೆಯನ್ನು ಪಾಲನೆ ಮಾಡುವುದಾಗಿ ಮಾತುಕೊಟ್ಟು ಅಪ್ಪಣೆ ಪಡೆದು ಹೊರಟುಹೋದನು.

`ಎರಡನೆಯ ವಾದಿಯು ಬಂದನು. ಅರಸನು ಕೇಳಿದನು : “ನಿನ್ನ ಮಾತೇನು?” ವಾದಿಯು ಹೇಳಿದನು : “ದೇವ, ದೇಶಾಂತರದಲ್ಲಿನ ವ್ಯಾಪಾರಿಯೊಬ್ಬನಿರುವನು. ಆತನು ನನ್ನನ್ನು ಮೆಚ್ಚಿಕೊಂಡು, ನಾನು ಅಲ್ಲಿಯೇ ನಿಲ್ಲುವುದಾದರೆ ನನ್ನ ಮಗಳನ್ನೂ ಆಸ್ತಿಯನ್ನೂ ಕೊಡುವುದಾಗಿ ವಾಗ್ದಾನ ಮಾಡಿರುವನು. ನಾನು ಅಲ್ಲಿಗೆ ಹೋಗಬೇಕೆಂದಿರುವೆನು. ಆದ್ದರಿಂದ ಇಲ್ಲಿರುವ ನನ್ನ ಪಾಲಿನ ಆಸ್ತಿಯನ್ನು ಕೊಡಿಸಿಕೊಡಬೇಕು.”

`“ನಿನಗೆ ಅಣ್ಣ ತಮ್ಮಂದಿರು ಇರುವರೋ?”

`“ಒಬ್ಬ ಅಣ್ಣ. ಒಬ್ಬ ತಮ್ಮ ಇದ್ದಾರೆ ಮಹಾಪ್ರಭು.”

`“ನಿಮ್ಮ ಆಸ್ತಿಯೆಷ್ಟು?”

“ಒಂದು ಕೋಟಿಯಷ್ಟಾದೀತು, ಮಹಾಸ್ವಾಮಿ”

“ಅವರಿಬ್ಬರೂ ಕುಲಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವರೋ?”

“ಹೌದು, ಮಹಾಸ್ವಾಮಿ.”

“ಪ್ರತಿಯೊಬ್ಬನ ಆಸ್ತಿಯ ಮೇಲೆ ರಾಜ್ಯಾಧಿಕಾರಿಗೆ ಅಧಿಕಾರವುಂಟು. ಆಯಾ ಕುಟುಂಬದವರು ಅದನ್ನು ಅನುಭವಿಸಿಕೊಂಡು ಬರುತ್ತಿರುವುದು ಕುಲಧರ್ಮವನ್ನು ಪಾಲಿಸುವೆನೆಂದು ಒಪ್ಪಿಕೊಂಡಿರುವುದರಿಂದ. ದೇವರಕ್ಷಕನಾದ ಅರಸನು ಧರ್ಮರಕ್ಷಕನೂ ಹೌದು. ಅದರಿಂದ, ಕುಲಧರ್ಮದಂತೆ ನಡೆಯುತ್ತಿರುವವರ ಆಸ್ತಿಯನ್ನೂ ಕುಲವನ್ನೂ, ದೇಶವನ್ನೂ ತ್ಯಜಿಸಿ, ಆಸ್ತಿಯ ಲೋಭ, ಸ್ತ್ರೀವ್ಯಾಮೋಹಗಳಿಂದ ದೇಶಾಂತರಕ್ಕೆ ಹೋಗಬೇಕೆಂದಿರುವವನಿಗೆ ಕೊಡಿಸಲು ಶಕ್ತನಲ್ಲ. ಅದರಿಂದ, ಈಗ ನೀನು ಇರುವ ರೀತಿಯಲ್ಲಿ ಒಂದು ವರ್ಷಕಾಲ ಇರಲು ಬೇಕಾಗುವ ಧನವನ್ನು ನಿನಗೆ ಕೊಡಬೇಕೆಂಬ ನ್ಯಾಯಾಸ್ಥಾನದ ನಿರ್ಣಯವು ಸರಿ. ಜೊತೆಗೆ, ನೀನು ಇಲ್ಲಿಂದ ನಿನ್ನ ಉದ್ದಿಷ್ಟ ಸ್ಥಳಕ್ಕೆ ಹೋಗಲು ನಿನ್ನ ಯೋಗ್ಯತೆಗೆ ತಕ್ಕಂತೆ ಆಗುವ ಹಾದಿಯ ವೆಚ್ಚವನ್ನು ಕೊಡಿಸಲಾಗುವುದು. ಇಲ್ಲಿ ಆಸ್ತಿಯ ಮೇಲೆ ನಿನಗಾಗಲಿ ನಿನ್ನ ಸಂತಾನಕ್ಕಾಗಲಿ ಏನೂ ಅಧಿಕಾರವಿಲ್ಲವೆಂಬ ಬಂಧ ವಿಮೋಚನೆಯ ಪತ್ರವನ್ನು ಬರೆದುಕೊಡತಕ್ಕದ್ದು.”

ಹೀಗೆಂದು ರಾಜನು ಧರ್ಮಾಧಿಕಾರಿ, ಪುರೋಹಿತ, ಗುರುಗಳ ಮುಖವನ್ನು ನೋಡಿದನು. ಅವರೆಲ್ಲರೂ ಸರಿಯೆಂದು ಅಂಗೀಕಾರವನ್ನು ಸೂಚಿಸಿದರು. ವಾದಿಯು ನಿರುತ್ತರನಾಗಿ ನ್ಯಾಯಪೀಠಕ್ಕೆ ಕೈಮುಗಿದು ಹೊರಟುಹೋದನು.

ಮೂರನೆಯವರನು ಬಂದನು. ಅವನು ಅಪರಾಧಿ : ವಾದಿಯಲ್ಲ. ಅದರಿಂದ ಧರ್ಮಾಧಿಕಾರಿಯು ಅವನ ಮೇಲಿದ್ದ ಆರೋಪಗಳನ್ನು ಹೇಳಿದನು : “ಮಹಾ ಸ್ವಾಮಿ, ಈತನು ದುಷ್ಟಕ್ಷತ್ರಿಯ, ತನ್ನ ರಾಜ್ಯದಲ್ಲಿ ಸರಿಯಾಗಿದ್ದರೂ ನೆರೆ ಹೊರೆಯ ರಾಜ್ಯಗಳಲ್ಲಿ ಹಾವಳಿ ಮಾಡುತ್ತಿದ್ದಾನೆಂದು, ಸಾರ್ವಭೌಮರ ಆಜ್ಞೆಯನ್ನು ನಿರಾಕರಿಸಿದ್ದಾನೆಂದು ದಂಡ್ಯನಾಗಿದ್ದಾನೆ.”

ಅರಸನು ಅಪರಾಧಿಯ ಮುಖವನ್ನು ನೋಡಿದನು. ಒಳ್ಳೆಯ ತೇಜಸ್ಸಿ, ದೃಢಾಂಗ, ನಯವಿನಯ ಭಯಭಕ್ತಿಗಳಿಂದ ನಿಂತಿದ್ದಾನೆ. ಒಂದು ಗಳಿಗೆ ಯೋಚಿಸಿ, ಅರಸನು ಕೇಳಿದನು ; “ನೀನು ಏನು ಹೇಳುವೆ ?”

ಅವನು ವಿನಯವನ್ನು ಬಿಡದೆ ತೇಜೋವೃದ್ಧನನ್ನು ಕಂಡಾಗ ಸಹಜವಾಗಿ ಬರುವ ಭಯಭಕ್ತಿಗಳನ್ನು ಅಂಗಾಂಗಳೆಲ್ಲವೂ ಪ್ರದರ್ಶಿಸುತ್ತಿದ್ದರೂ, ತನ್ನ ತೇಜಸ್ಸನ್ನು ಮರೆಯದವನ ಗರ್ವವನ್ನೂ ಬಿಡಲಾರದೆ, ಕೈಮುಗಿದುಕೊಂಡು ಹೇಳಿದನು : “ಮಹಸ್ವಾಮಿ, ನನ್ನ ಮೇಲಿನ ಆರೋಪಗಳನ್ನು ನಾನು ಸುಳ್ಳೆನ್ನುವುದಿಲ್ಲ. ಆದರೂ ನಾನು ನನ್ನ ರಾಜ್ಯದಲ್ಲಿ ಪ್ರಜೆಗಳನ್ನು ವತ್ಸಲನಾಗಿ ಕಾಪಾಡುತ್ತಿದ್ದೇನೆಂಬುದನ್ನು ಆರೋಪಿಗಳೇ ಹೇಳುತ್ತಿದ್ದಾರೆಂಬುದನ್ನು ತಮ್ಮ ಅವಗಾಹನಕ್ಕೆ ತರುತ್ತೇನೆ. ನಾನು ಕ್ಷತ್ರಿಯ, ನನಗೆ ಯುದ್ಧವಿಲ್ಲದೆ ಒಂದು ದಿನವೂ ಇರಲಾಗುವುದಿಲ್ಲ. ನನ್ನ ಅಂತಃಪುರದಲ್ಲಿ ನಾನು ಎಷ್ಟು ಅಭಿಮಾನಪಡುವೆನೋ, ಅದೇ ಅಭಿಮಾನದಿಂದ ನಾನು ನನ್ನ ಸೇನೆಯನ್ನು ನೋಡುತ್ತಿದ್ದೇನೆ. ನನಗೆ ಯುದ್ಧವು ನಿತ್ಯಕರ್ಮವಾಗಿ ಹೋಗಿದೆ. ಅದಿಲ್ಲದಿದ್ದರೆ ಬದುಕುವುದಕ್ಕೇ ಸಾಧ್ಯವಿಲ್ಲ. ಅದರಿಂದ ಹೀಗೆ ಮಾಡುತ್ತಿದ್ದೇನೆ. ಪರರು ಯಾವಾಗಲೂ ಪರರೇ ! ಸಾಧ್ಯವಾಗಿದ್ದರೆ ಅವರು ನನ್ನನ್ನು ಹಿಂದಕ್ಕೆ ಅಟ್ಟುತ್ತಿದ್ದರು. ಅದು ಸಾಧ್ಯವಿಲ್ಲೆಂದು ಸಾರ್ವಭೌಮರಾದ ತಮ್ಮಲ್ಲಿ ದೂರಿದ್ದಾರೆ. ಸಮುದ್ರವು ಹಗಲು ಇರುಳು ಎನ್ನದೆ ತರಂಗ ಚಂಚಲವಾಗಿರುವಂತೆ, ನನಗೆ ನಿದ್ದೆಯಲ್ಲಿಯೂ ಕೂಡ ಆಯುಧ ಸಂಚಾಲನದ ಕನಸುಗಳೇ ಆಗುವಷ್ಟು ಕದನ ಕುತೂಹಲ ಇದ್ದುದನ್ನು ಮಹಾಪಾದಗಳಲ್ಲಿ ಬಿನ್ನವಿಸಿದ್ದೇನೆ. ಯಥಾಯೋಗ್ಯವಾಗಿ ಆಜ್ಞೆಯಾಗಬಹುದು.

“ಆಜ್ಞೆಯನ್ನು ಪಾಲಿಸುವೆಯೋ ?”

“ನನ್ನ ಸ್ವಭಾವವನ್ನು ಪರಿಗಣಿಸಿ ನಾನು ಪಾಲಿಸುವುದಕ್ಕೆ ಆಗುವಂತಹ ಆಜ್ಞೆಯನ್ನೇ ಮಹಾಸ್ವಾಮಿಯವರು ಮಾಡುವರು ಎಂಬ ನಂಬಿಕೆಯಿದೆಯಾಗಿ ಅದನ್ನು ಪಾಲಿಸಿ ಕೃತಾರ್ಥನಾಗುವೆನೆಂಬ ನಂಬಿಕೆಯೂ ಇದೆ.”

ಅರಸನು ತಲೆದೂಗಿದನು : “ಚಿನ್ನದ ಒರೆಯಲ್ಲಿ ಇರಬೇಕಾದ ತೀಕ್ಷ್ಣಖಡ್ಗ ಬಟ್ಟೆಯ ಒರೆಯಲ್ಲಿ ನಿಲ್ಲುವುದಾದರೂ ಎಂತು ?” ಎಂದುಕೊಂಡನು. ಕೂಡಲೇ ಮಂತ್ರಿಯು ಬರಲು ಅಪ್ಪಣೆಯಾಯಿತು. ಅರಸನು ಕೇಳಿದನು : “ಮಾಲ್ಯವಂತ ಪರ್ವತದ ಪಾರ್ವತೇಯರು ಅಜೇಯರಾಗಿದ್ದಾರೆಂದು ವರದಿ ಬಂದಿದೆಯಲ್ಲವೇ?”

“ಹೌದು ಮಹಾಸ್ವಾಮಿ”

“ಏನು ಯೋಚಿಸಿದ್ದೀರಿ ?”

“ಅಲ್ಲಿಗೆ ಯುದ್ಧಕಾಮನಾಗಿ ಬಲಿಷ್ಠನಾದ ದಳಪತಿಯೊಬ್ಬನನ್ನು ಕಳುಹಿಸಬೇಕೆಂದಿದ್ದೇವೆ.”

“ಸರಿ. ಅಲ್ಲಿಗೆ ಐದು ಸಾವಿರ ಅಶ್ವದಳವು ಹೋಗಲಿ.”

“ಅಲ್ಲಿ ಆಗಲೇ ಹತ್ತು ಸಾವಿರ ಪದಾತಿಗಳೂ ಮೂರುಸಾವಿರ ಅಶ್ವಗಳೂ ಇವೆ.” “ಈತನು ಯುದ್ಧಕಾಮಿ. ಪೌರುಷವಂತ. ಅದರಿಂದ ಈತನನ್ನು ಅಲ್ಲಿಗೆ ಕಳುಹಿಸಿ, ಇದುವರೆಗೆ ಅಲ್ಲಿದ್ದು ಆಯಾಸಪಟ್ಟಿರುವ ದಳವನ್ನು ಹಿಂದಕ್ಕೆ ಕರೆಯಿಸಿಕೊಂಡು ಈತನ ಕೈಕೆಳಗೆ ಹೊಸ ದಳವನ್ನು ಕಳುಹಿಸಿಕೊಡಿ.”

“ಈ ದಳವು ಸಾಲದೆ ಹೋಗಬಹುದು.”

“ಮಂತ್ರಿಗಳೇ, ಗೆಲ್ಲುವುದು ದಳವಲ್ಲ, ದಳಪತಿ. ಈತನನ್ನು ಅಲ್ಪದಳ ಕೊಟ್ಟು ಕಳುಹಿಸುವುದರಲ್ಲಿ ನಮಗೆ ಬಹಳ ಪ್ರಯೋಜನವುಂಟು. ದುರ್ದಾಂತವಾಗಿರುವ ಈತನ ಕದನಕುತೂಹಲವು ಅಂಕೆಗೆ ಬಂದರೆ ನಮಗೂ ಶೂರನೂ ಅನುಭವಿಯೂ ಆದ ದಂಡನಾಯಕನೊಬ್ಬನು ಲಭಿಸುವನು. ಈತನ ರಾಜ್ಯದ ನೆರೆಹೊರೆಯು ಸುಖವಾಗಿರುವುದು. ಆತನಿಗೆ ಬೇಕುಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಕೊಟ್ಟು ಆತನನ್ನು ಕಳುಹಿಸಿ. ಸೈನ್ಯವು ಮಾತ್ರ ನಾವು ಹೇಳಿದಷ್ಟೇ! ಏನೆನ್ನುವೆ?”

“ಮಹಾಸ್ವಾಮಿಯವರ ಮಾತು ನಿಜ. ಗೆಲ್ಲುವುದು ದಳವಲ್ಲ. ಅಷ್ಟೇ ಸೈನ್ಯವು ಸಾಕು. ನನ್ನ ಉತ್ಸಾಹವನ್ನು ಸೈನಿಕರಲ್ಲಿ ತುಂಬಿ ಗೆದ್ದು ಬರುವೆನು ಮಹಾಸ್ವಾಮಿ!” ಅರಸನ ಅಪ್ಪಣೆಯಾಯಿತು. ಆತನಿಗೆ ತೊಡಿಸಿದ್ದ ಅಪರಾಧಸೂಚಕವಾದ ವಸ್ತ್ರವನ್ನು ತೆಗೆದು ಪರಿಜನರು ಅಲ್ಲಿಯೇ ಆತನಿಗೆ ನೂತನ ಪದವಿಯನ್ನು ಸೂಚಿಸುವ ಉಡುಗೊರೆಯನ್ನು ತಂದು ತೊಡಿಸಿದರು. ಅರಸನು ತನ್ನ ಹಸ್ತದಿಂದಲೇ ವೀರತಾಂಬೂಲವನ್ನು ಕೊಟ್ಟು ಸಂಭಾವಿಸಿ ಕಳುಹಿಸಿಕೊಟ್ಟನು.

* * * *

೨೪.ಇಂದ್ರನಾಗುವವನನ್ನು ಹುಡುಕಿದುದು

ಸಂಪಾದಿಸಿ

ಸುರಾಚಾರ್ಯನ ಅರಮನೆಯಲ್ಲಿ ದೇವರ್ಷಿಪಿತೃಗಣಗಳಲ್ಲಿ ಮುಖ್ಯರಾದವರು ಸೇರಿದ್ದಾರೆ. ಇಂದ್ರನ ಸಿಂಹಾಸನವು ಶೂನ್ಯವಾಗಿದೆ. ಅದಕ್ಕೊಬ್ಬ ಅಧಿಕಾರಿಯಾದವನನ್ನು ಆರಿಸಬೇಕು. ಲೋಕಾಧಿಪತಿಗಳು ಯಾರೂ ಇಂದ್ರರಾಗುವಂತಿಲ್ಲ. ಹಾಗೆಯೇ ಪಾತಾಳ ಲೋಕದ ನಿವಾಸಿಗಳಲ್ಲಿ ಯಾರನ್ನೂ ದೇವತೆಗಳು ಒಪ್ಪುವುದಿಲ್ಲ. ಅದರಿಂದ ಯತ್ನವಿಲ್ಲದೆ ಮನುಷ್ಯಪ್ರಪಂಚದಿಂದಲೇ ಯಾರನ್ನಾದರೂ ಆರಿಸಬೇಕು. ಕ್ಷತ್ರಿಯನಾಗಿ, ಧರ್ಮಿಷ್ಠನಾಗಿ, ಇಂದ್ರಸಿಂಹಾಸನದಲ್ಲಿ ಕುಳಿತುಕೊಳ್ಳುವ ಸಾಮಥರ್ಯ್‌ವುಳ್ಳವನನ್ನೇ ಆರಿಸಬೇಕು.

ಆ ಸಭೆಗೆ ಋಷಿಗಳೂ ಪಿತೃಗಳೂ ಸುರಾಚಾರ್ಯನೇ ಅಧ್ಯಕ್ಷನಾಗಿರ ಬಹುದು ಎಂದರು. ಸುರಾಚಾರ್ಯನು ಅದರಂತೆ ಅಧ್ಯಕ್ಷನಾಗಿ ಸಭೆಯನ್ನು ಆರಂಭಿಸಿದನು.

ಪಿತೃಗಳ ಪ್ರತಿನಿಧಿಯು ಹೇಳಿದನು : “ನಮಗೆ ದೇವದಾನವರೆಂಬ ಭೇದವಿಲ್ಲ ಆದರೂ ದೇವತೆಗಳಲ್ಲಿ ಒಬ್ಬರಾದರೆ ಚೆನ್ನ.”

ಇನ್ನೊಬ್ಬರು ಹೇಳಿದರು : “ಇಲ್ಲ, ದೇವತೆಗಳಲ್ಲಿ ಯಾರೂ ಈ ಕಾರ್ಯವನ್ನು ಈಗ ವಹಿಸಿಕೊಳ್ಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೆಕವಾಗಿ ಒಬ್ಬರಿರಬೇಕು.”

ಅಗ್ನಿಯು ಎದ್ದು ಹೇಳಿದನು : “ಇಲ್ಲಿ ಹವಿರ್ಭಾಗದ ಪ್ರಶ್ನವಿದೆ. ದಾನವರು ಏನಿದ್ದರೂ ನೈಮಿತ್ತಿಕ ಹೋಮ ಮಾಡುವವರೇ ಹೊರತು, ನಿತ್ಯಯಾಗಗಳನ್ನು ಮಾಡುವವರಲ್ಲ. ಅದರಿಂದ ಅವರು ಹವಿರ್ದಾನವನ್ನು ಕೊಡುವುದಿಲ್ಲವಾಗಿ, ಅವರಿಗೆ ಹವಿಸ್ಸ್ವೀಕಾರಯೋಗ್ಯತೆಯೂ ಇಲ್ಲ. ಅದರಿಂದ, ಬರುವ ಇಂದ್ರನು, ಅಥವಾ ಇಂದ್ರನಾಗುವವನು ಹವಿರ್ಭೋಜನಾಧಿಕಾರವುಳ್ಳವನಾಗಬೇಕು. ಅದು ಯೋಚನೆಯಲ್ಲಿರಲಿ”.

ಋಷಿಗಣದ ಪ್ರತಿನಿಧಿಯು ಹೇಳಿದನು : “ದೇವತೆಗಳಲ್ಲಿ ಅಗ್ನಿ, ವಾಯು, ಇಂದ್ರರು ಜ್ಯೇಷ್ಠರು. ಅವರು ಯಕ್ಷದರ್ಶನದಿಂದ ಆ ಯೋಗ್ಯತೆಯನ್ನು ಪಡೆದವರು. ಇಂದ್ರನು ಇಲ್ಲದಾಗ ವಾಯುವು ಉತ್ತಮೋತ್ತಮನು. ಆತನಾಗಲಿ.”

ಸುರಾಚಾರ್ಯನು ಹೇಳಿದನು : “ದೇವತೆಗಳೆಲ್ಲರಿಗೂ ಅವರವರ ಕಾರ್ಯಗಳಿರುವುದರಿಂದ, ಅವರನ್ನು ಅವರ ಕಾರ್ಯದ ಜೊತೆಗೆ ಇನ್ನೊಬ್ಬರ ಕಾರ್ಯವನ್ನು ವಹಿಸಿಕೊಳ್ಳಿ ಎಂದು ಹೇಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೇಕವಾಗಿಯೇ ಬೇಕು ಎಂದು ನಾವೆಲ್ಲರೂ ಸಮಾರಂಭಕ್ಕೆ ಮುಂಚೆಯೇ ಗೊತ್ತು ಮಾಡಿಕೊಂಡಿದ್ದೇವೆ. ಅದರಿಂದ ನಮಗೆ ಇಷ್ಟವಿದ್ದರೂ ಇಷ್ಟವಿಲ್ಲದಿದ್ದರೂ ಈಗ ಸಾಧ್ಯವಿರುವುದು ಒಂದೇ. ಒಂದು ಪಕ್ಷ ಅದು ಮಧ್ಯಮಲೋಕದ ಚಕ್ರವರ್ತಿಯಾದ ನಹುಷನನ್ನು ಇಂದ್ರನನ್ನಾಗಿ ಆರಿಸಿಕೊಳ್ಳುವುದು. ಅದು ಸಭೆಗೆ ಸಮ್ಮತವಾದರೆ ಮುಂದಿನ ಮಾತು.”

ಪಿತೃಗಣ ಪ್ರತಿನಿಧಿಯು ಹೇಳಿದನು : “ನಮ್ಮ ಕನ್ಯೆಯನ್ನು ಆತನಿಗೆ ಕೊಟ್ಟು ನಾವು ಆತನನ್ನು ನಮಗೆ ಸಮನೆಂದು ಆಗಲೇ ಒಪ್ಪಿದ್ದೇವೆಯಾಗಿ, ಆತನನ್ನು ಇಂದ್ರನಾಗಿ ವರಿಸಲು ನಮ್ಮ ಆಕ್ಷೇಪಣೆಯಿಲ್ಲ.”

ಋಷಿಗಣದ ಪ್ರತಿನಿಧಿಯು ಹೇಳಿದನು : “ಆತನು ಭೃಗುವಂಶದ ಚ್ಯವನ ಶಿಷ್ಯನು. ಆತನನ್ನು ಇಂದ್ರನಾಗಿ ವರಿಸುವುದರಲ್ಲಿ ನಮ್ಮ ಆಕ್ಷೇಪಣೆಯೇನೂ ಇಲ್ಲ.”

ಸುರಾಚಾರ್ಯನು ಅಗ್ನಿವಾಯುಗಳ ಮುಖವನ್ನು ನೋಡಿದನು ; ‘ಆತನು ಬಹು ವಿಚಕ್ಷಣೆಯಿಂದ ರಾಜ್ಯವಾಳುತ್ತಿರುವನು. ಆತನು ದಾನಶೌಂಡನು. ನಿತ್ಯಾಗ್ನಿ ಹೋತ್ರಿಯು. ಆತನು ಒಪ್ಪಿದರೆ ಆಗಬಹುದು.”

“ಆತನು ಒಪ್ಪಿದರೆ ಎಂದರೇನು ?”

“ಹೌದು. ಈಗ ಈತನಿಗೆ ಏನು ಕಡಿಮೆಯಗಿದೆ ? ಆತನೀಗ ಮಧ್ಯಮ ಲೋಕದಲ್ಲಿದ್ದರೂ ಇಂದ್ರನಂತೆಯೇ ಇದ್ದಾನೆ. ಆತನು ಇಂದ್ರನಾಗುವುದರಿಂದ ಆತನಿಗೇನು ಹೆಚ್ಚುಗಾರಿಕೆ ಬಂದಂತಾಗುವುದು ?”

“ಆತನನ್ನು ಬಿಟ್ಟರೆ, ಇನ್ನು ಯಾರೂ ಇಲ್ಲವಾಗಿ, ಏನಾದರೂ ಮಾಡಿ ಆತನನ್ನು ಒಪ್ಪಿಸಬೇಕು.”

“ಎಷ್ಟಾಗಲಿ ಇಂದ್ರಪದವಿ. ಅದರಿಂದ ಒಪ್ಪದೆ ಏನು ?”

“ಒಂದು ವೇಳೆ ಜಾತವೇದನು ಶಂಕಿಸಿದಂತೆ ಆತನು ಇಂದ್ರನಾಗಲು ಒಪ್ಪದಿದ್ದರೆ, ಆತನಿಗೆ ವಿಶೇಷ ವರಗಳನ್ನು ಕೊಟ್ಟಾದರೂ ಒಪ್ಪಿಸಬೇಕು.”

‘ಅದೀಗ ಸರಿಯಾದ ಮಾತು.’

“ಸರಿ. ಇಂದಿನ ಕಾರ್ಯಕ್ರಮದಲ್ಲಿ ಒಂದು ಪ್ರಧಾನಾಂಶವು ಇತ್ಯರ್ಥವಾದ ಹಾಗಾಯಿತು. ಇನ್ನು ಮುಂದಿನ ಕಾರ್ಯ. ಆತನನ್ನು ಪ್ರಾರ್ಥಿಸಲು ಹೋಗುವವರು ಯಾರು ಯಾರು ? ಎಷ್ಟು ಜನ ? ಅದನ್ನು ಗೊತ್ತುಮಾಡಿ.”

ಅಷ್ಟುಹೊತ್ತು ಚರ್ಚೆಯಾಗಿ, ದೇವತೆಗಳ ಕಡೆ ಸುರಾಚಾರ್ಯನೂ, ಋಷಿ ಪಿತೃಗಣಗಳ ಪ್ರತಿನಿಧಿಗಳಾಗಿ ಈಗ ಪ್ರತಿನಿಧಿಗಳಾಗಿ ಬಂದಿರುವವರೇ ಹೋಗುವುದು ಎಂದು ಗೊತ್ತಾಯಿತು. ಜಾತವೇದನು ಅವರ ಜೊತೆಯಲ್ಲಿ ಹೋಗುವುದು ಎಂದು ತೀರ್ಮಾನವಾಯಿತು.

ಜಾತವೇದನು ಮತ್ತೆ ಎದ್ದು, “ಆತನಿಗೆ ಏನಾದರೂ ವಿಶೇಷ ವರಗಳನ್ನು ಕೊಡಬೇಕಾಗಿ ಬಂದರೆ, ಪ್ರತಿನಿಧಿಗಳಿಗೆ ಅಧಿಕಾರವಿರಬೇಕು. ಅದನ್ನು ಸಭೆಯು ಈಗಲೇ ಅಂಗೀಕರಿಸಬೇಕು. ಅದಿಲ್ಲದೆ, ಮತ್ತೆ ನಾವು ಋಷಿದೇವ ಪಿತೃಗಣಗಳನ್ನು ಹುಡುಕಿಕೊಂಡು ಲೋಕಲೋಕಗಳನ್ನು ಸುತ್ತುವಂತಿರಬಾರದು” ಎಂದನು.

ಎಲ್ಲರೂ ಆ ಮಾತನ್ನು ಅನುಮೋದಿಸಿದರು. ಹೀಗೆ, ವರಪ್ರದಾನ ಮಾಡುವ ವಿಶೇಷಾಧಿಕಾರವನ್ನು ಪಡೆದುಕೊಂಡು, ಪ್ರತಿನಿಧಿಗಳು ಸುರಾಚಾರ್ಯನ ನೇತೃತ್ವದಲ್ಲಿ ಜಾತವೇದನೊಡನೆ ಮಧ್ಯಮಲೋಕಪಾಲನಾದ ನಹುಷ ಚಕ್ರವರ್ತಿಯನ್ನು ಕಾಣಲು ಹೊರಟರು.

* * * *

೨೫.ವಿರಜಾದೇವಿಯಂತಃಪುರ

ಸಂಪಾದಿಸಿ

ಗಂಗಾಯಮುನಾಸಂಗಮದಲ್ಲಿ ಮೂರ್ತಿಗೊಂಡ ಭರತಖಂಡದ ಸತ್ ಕೀರ್ತಿಯೋ ಎಂಬಂತಿರುವ ಚಕ್ರವರ್ತಿನಿ ವಿರಜಾದೇವಿಯು ಸುಖಾಸನದಲ್ಲಿ ಕುಳಿತು ಪತಿದೇವನನ್ನು ಇದಿರುನೋಡುತ್ತಿದ್ದಾಳೆ. ಚಂದ್ರನು ಆಕಾಶದ ನಟ್ಟನಡುವೆ ನಿಂತು, ಚಕ್ರವರ್ತಿಯು ಬೆಳುಗೊಡೆಯ ಮೇಲಿನ ಉಂಗುರವೆಂಬಂತೆ ಇದ್ದು ಆಕಾಶವನ್ನೆಲ್ಲ ಒಂದು ಕಾಂತಿಮಯ ಧವಳಚ್ಚತ್ರವಾಗಿಸಿದ್ದಾನೆ. ಆ ಬೆಳದಿಂಗಳಲ್ಲಿಯೂ ಮಸಕಾಗದೆ ಅಲ್ಲಲ್ಲಿ ಮೆರೆಯುತ್ತಿರುವ ನಕ್ಷತ್ರಗಳೂ ಆ ಛತ್ರವನ್ನು ಕೀಲಿಸಿರುವ ವಜ್ರಮಣಿಗಳಂತೆ ಕಾಣುತ್ತವೆ. ದೂರದ ದಿಗಂತದಲ್ಲಿ ಮಿಣುಕುತ್ತಿರುವ ನಕ್ಷತ್ರಪುಂಜಗಳು ಆ ಬೆಳ್ಗೊಡೆಯ ಅಂಚಿನಲ್ಲಿ ಕಟ್ಟಿರುವ ಮುತ್ತಿನ ಗೊಂಚಲುಗಳಂತೆ ಇವೆ.

ವಿರಜಾದೇವಿಯು ತಾನು ಪಿತೃಕನ್ಯೆ, ಪರಿಶುದ್ಧಳು ಎಂಬುದನ್ನು ತೋರಿಸಿಕೊಳ್ಳಲೆಂಬಂತೆ, ನಿರ್ಮಲವಾದ ಬಿಳಿಯುಡೆಯುಟ್ಟಿದ್ದಾಳೆ. ಆಕೆಯ ಸದ್ಗುಣಗಳಂತೆ ಆ ಸೀರೆಯಲ್ಲಿ ಬೂಟಾಟಗಳ ನಡುವಿನ ರತ್ನಗಳ ಅಮಿತವಾದ ಕಾಂತಿಯನ್ನು ಎಲ್ಲೆಲ್ಲೂ ಪ್ರಸರಿಸಬೇಕೆಂದು ವಿಜಿಗೀಷುವಾದ ಕ್ಷತ್ರಿಯ ವೀರನಂತೆ ಪ್ರಕಾಶಿಸುತ್ತಿವೆ. ದಾಸಿಯರು ರತ್ನಖಚಿತವಾದ ಚಾಮರಗಳನ್ನು ಬೀಸಲು ಸಿದ್ಧರಾಗಿದ್ದಾರೆ. ಎದುರಿಗೊಬ್ಬಳು ವೀಣೆಯನ್ನು ಮೃದುವಾಗಿ ನುಡಿಸುತ್ತಾ ಕುಳಿತಿದ್ದಾಳೆ.

ಬಿಸಿಲುಮಚ್ಚಿನ ನಾಲ್ಕು ಮೂಲೆಗಳಲ್ಲು ಪಾರಿಜಾತಗಳು ಕಟ್ಟೆಗಳಲ್ಲಿ ಬೆಳೆದಿವೆ. ಮೇಲೆಲ್ಲಾ ತಂತಿಯ ಜಾಲರಿಗಳನ್ನು ಹರಡಿ, ಅದರ ಮೇಲೆ ಜಾಜಿ ಮಾಲತಿ ಇರುವಂತಿಗೆ ಬಳ್ಳಿಗಳನ್ನು ಅರಳಿಸಿದ್ದಾರೆ. ಅಲ್ಲಲ್ಲಿ ರತ್ನಮಯವಾದ ಭಿತ್ತಿಗಳನ್ನುಳ್ಳ ಕೃತ್ರಿಮ ಪುಷ್ಕರಿಣಿಗಳಲ್ಲಿ ತಾವರೆ ಕನ್ನೈದಿಲೆಗಳನ್ನು ಬೆಳೆಸಿದ್ದಾರೆ. ಚಕ್ರವರ್ತಿಯ ಸೇವೆಗೆಂದು ಪುಷ್ಟಪುಷ್ಟವೂ ಹುರುಪಿಸುತ್ತಿದೆಯೇ ಎಂಬಂತೆ, ಪಾರಿಜಾತ, ಜಾಜಿ, ಮಾಲತಿ, ಇರುವಂತಿಗೆ, ಜಲಜಗಳೂ ತಮ್ಮ ತಮ್ಮ ಸುಗಂಧವನ್ನು ಸೂರೆಗೊಡುತ್ತಿವೆ. ತಂಗಾಳಿಯು ಅದನ್ನೆಲ್ಲ ಹೊತ್ತು ತರಲಾರದೆ ಮುಕ್ಕರಿಯುವಂತೆ ಊಸ್ ಎಂದುಕೊಂಡು ನಿಧಾನವಾಗಿ ಬೀಸುತ್ತಿದೆ.

ಸಣ್ಣದಾಗಿ ಮೃದುವಾಗಿ ಶೃಂಗನಾದವಾಗಿ ಚಕ್ರವರ್ತಿಯ ಆಗಮನವನ್ನು ಸೂಚಿಸಿತ್ತು. ಮರ್ಯಾದೆಗೆಂದು ಹಿಡಿದಿರುವ ಕರ್ಪೂರದೀಪಿಕೆಯು ತನ್ನದೂ ಕಾಣಿಕೆಯಿರಲಿ ಎಂಬಂತೆ, ಆ ಬಿಸಿಲುಮಚ್ಚಿನಲ್ಲಿ ರಂಗವಲ್ಲಿಯಾಗಿ ಇಟ್ಟಿರುವ ಕೇಸರ, ಪಚ್ಚಕರ್ಪೂರ, ಕಸ್ತೂರಿಗಳ ಹುಡಿಗಳ ವಾಸನೆಯ ಜೊತೆಗೆ ತನ್ನ ಸುವಾಸನೆಯನ್ನೂ ಅಷ್ಟು ಒಪ್ಪಿಸುತ್ತಿದೆ. ಪರಾಕ್ರಮವನ್ನು ಪ್ರದರ್ಶಿಸಿ ಹಿಡಿದು ತಂದು ಸೆರೆಯಲ್ಲಿಟ್ಟಿರುವ ಶತ್ರುಗಳ ಹೃದಯದ ದ್ವೇಷದಾವಾನಲಗಳಿಂದ ಏಳುವ ಕೃಷ್ಣಧೂಮದ ನಿಷ್ಫಲ ಮೇಘಗಳಂತೆ, ಚಕ್ರವರ್ತಿಯ ಪಕ್ಕದಲ್ಲಿ ಹಿಡಿದು ತರುತ್ತಿರುವ ಧೂಪದಾನಿಯಿಂದ ಹೊರಬೀಳುವ ದಪ್ಪ ಹೊಗೆಯು ಚಾಮರಗಳ ಗಾಳಿಯಿಂದ ಆಹತವಾಗಿ ಸುತ್ತಿನ ಗಾಳಿಯಲ್ಲಿ ಸೇರಿಹೋಗಿ ಅದೃಶ್ಯವಾಗುತ್ತಿದೆ.

ಚಕ್ರವರ್ತಿಯು ಬಂದನು. ಆತನು ತನ್ನ ಪಾದಗಳಲ್ಲಿ ಧರಿಸಿರುವ ಪಾದುಕೆಗಳ ಚರ್ಮಕ್ಕಿಂತ ಮೃದುವಾದ ರತ್ನಗಂಬಳಿಯ ಮೇಲೆ ನಡೆದು ಬಂದನು. ಬಾಗಿಲಲ್ಲಿದ್ದ ಪ್ರಹರಿಣಿಯು ಮಂಡಿಯೂರಿ ಮಣಿದು ದಾರಿ ತೋರಿಸಿಕೊಂಡು ಚಕ್ರವರ್ತಿನಿಯಿರುವೆಡೆಗೆ ಕರೆತಂದಳು. ಅರಸನ ಹಿಂದೆ ಬರುತ್ತಿರುವ ಮುಖ್ಯ ವೀಣಾವಾದ್ಯದ ಮೃದು ಮಂಗಳರವವು ಚಕ್ರವರ್ತಿನಿಯ ಬಳಿ ನುಡಿಯುತ್ತಿದ್ದ ವೀಣೆಯ ನಿನಾದದೊಡನೆ ಸುಖವಾಗಿ ಬೆರೆತು ಪರಸ್ಪರ ಕುಶಲಪ್ರಶ್ನಗಳ ಮಂಗಳ ಕಾರ್ಯವನ್ನು ನಿರ್ವಹಿಸಿ ಸ್ವಾಗತವನ್ನು ಆಚರಿಸಿತು. ಅರಸಿತಿಯು ಆಸನದಿಂದೆದ್ದು ಮೂರು ಹೆಜ್ಜೆ ಮುಂದೆ ಹೋಗಿ ಅರಸನನ್ನು ಎದುರುಗೊಂಡು, ಮಂಡಿಯೂರಿ ಬಗ್ಗಿ ಆತನ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಅರಸನು ಜಲಭಾರ ನಮ್ರವಾದ ಮೇಘರಾಜನು ಬಗ್ಗಿ ಶಿಖರಿಣಿಯನ್ನು ಆಲಿಂಗಿಸುವಂತೆ, ಬಗ್ಗಿ ಆಕೆಯನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಂಡು ಜೊತೆಯಲ್ಲಿ ನಡೆದುಹೋಗಿ, ಸುಖಾಸನವನ್ನು ಸಹಪತ್ನೀಕನಾಗಿ ಅಲಂಕರಿಸಿದನು. ಪರಿಜನರು ಒಬ್ಬೊಬ್ಬರಾಗಿ ಬಂದು ಮುಜುರೆ ಮಾಡಿ ಹೋಗಿ ದೂರದಲ್ಲಿ ನಿಂತರು. ತಿರಸ್ಕರಣಿಯು ನಿಶ್ಯಬ್ದವಾಗಿ ಮುಂದೆ ಸರಿದು ಅವರಿಬ್ಬರೂ ಕುಳಿತಿರುವ ಮೂಲೆಯನ್ನು ಒಂದು ಕೋಣೆಯನ್ನಾಗಿ ಮಾಡಿತು.

ವಿರಜಾದೇವಿಯು ಅಲ್ಲಿ ಸಿದ್ಧವಾಗಿದ್ದ ರಸಾಯನವನ್ನೂ, ಆಸನವನ್ನೂ ಪತಿದೇವನಿಗೊಪ್ಪಿಸಿ ಉಪಚಾರಮಾಡಿದಳು. ಅರಸನು ಸಕಾಮನಾಗಿ ಆಕೆಯನ್ನು ಬರಸೆಳೆದು ಗಾಢವಾಗಿ ಆಲಿಂಗನ ಮಾಡಿಕೊಂಡು ಸಸೀತ್ಕಾರವಾಗಿ ಚುಂಬಿಸಿ, “ನನಗೆ ನಿನ್ನಲ್ಲಿ ಎಷ್ಟೋ ಚೇಷ್ಟೆ ಮಾಡಬೇಕೆಂದು ಆಸೆ. ಆದರೆ ನೀನು ಧರ್ಮಪತ್ನಿ. ಕಾಮಪತ್ನಿಯ ಚೇಷ್ಟೆಯನ್ನು ಧರ್ಮಪತ್ನಿಯಲ್ಲಿ ಮಾಡಬಾರದು. ಏನುಮಾಡಲಿ?” ಎಂದು ನಿಟ್ಟುಸಿರುಬಿಟ್ಟನು. ದೇವಿಯು ಗಂಡನನ್ನು ಕೆರಳಿಸುವಂತೆ ಕೇಳಿದಳು : “ಪ್ರವಾಹ ಬಂದಾಗ ನದಿಯು ದಡಗಳನ್ನು ಕೇಳುವುದೇನು ?”

“ಹಾಗಾದರೆ ತತ್ವವನ್ನು ಕೇಳು : ಸ್ತ್ರೀಪೂರ್ವವಾದ ವ್ಯಾಪಾರವೆಲ್ಲ ಕಾಮವ್ಯಾಪಾರ. ಅದು ಪುಂಪೂರ್ವವಾಗಿ ನಡೆಯಬೇಕಾದಾಗ ಸ್ತ್ರೀಯು ಕಾಮಪತ್ನಿಯಾದರೆ ಸ್ವಚ್ಛಂದ. ಹಾಗಿಲ್ಲದೆ ಧರ್ಮಪತ್ನಿಯಾದರೆ ಅಲ್ಲಿ ನಿಯಮ. ಅದರಿಂದಲೇ ‘ಶಯ್ಯಾಸು ವೇಶ್ಯಾ’ ಎನ್ನುವುದು.”

“ಹಾಗಾದರೆ ನಾನು ವೇಶ್ಯೆಯಾಗಬೇಕೆ ?”

“ವೇಶ್ಯೆಯಂತಾಗಬೇಕು. ಎಂದರೆ ಗಂಡನ ಸೂಳೆಯಾಗಬೇಕು.”

“ದೇವ ಧರ್ಮಿಷ್ಠರೂ ಧರ್ಮಜ್ಞರೂ ಒಗಟಿನಲ್ಲಿಯೇ ಮಾತನಾಡ ಬೇಕೇನು?”

ನಹುಷನು ಸಣ್ಣಗೆ ನಕ್ಕು ಗಲ್ಲವನ್ನು ಮೆಲ್ಲಗೆ ಒತ್ತಿ ವಕ್ಷಸ್ಥಳದಲ್ಲಿ ತಲೆಯಿಟ್ಟು ಪತ್ನಿಯನ್ನು ಅರ್ಧಾಲಿಂಗನದಿಂದ ಆರಾಧಿಸುತ್ತಾ ಹೇಳಿದನು ; “ಧರ್ಮಪತ್ನಿಯನ್ನು ಆರಾಧಿಸುವುದು ಧರ್ಮಸಂತಾನವನ್ನು ಪಡೆದು ಪಿತೃಋಣವನ್ನು ಕಳೆದುಕೊಳ್ಳುವುದಕ್ಕೆ. ಸಂತಾನದ ಯೋಚನೆಯೇ ಇಲ್ಲದೆ ಕಾಮತೃಪ್ತಿಯನ್ನು ಪಡೆಯುವುದಕ್ಕೆ ಕಾಮಪತ್ನಿಯ ಸೇವನೆ. ಈಗ ಅರ್ಥವಾಯಿತೆ ? ಅದರಿಂದ ಹೇಳಿದೆ. ಕಾಮತೃಪ್ತಿಯೆನ್ನುವುದಾದರೆ ಅದು ನಿನ್ನ ಪ್ರಪಂಚ. ಆಗ ನಿನ್ನ ದಯೆಯಿಂದ ನಮಗೂ ಅಷ್ಟು ವಿನೋದ. ಅದರಿಂದ, ಬೇಕು ಎನ್ನುವುದು ನಿನ್ನ ಕಡೆಯಿಂದ ಬರಲಿ ಎಂದು ಧರ್ಮಪತ್ನಿ ಕಾಮಪತ್ನಿಯರ ಮಾತನ್ನು ಎತ್ತಿದೆ.”

“ದೇವಾ, ನೆನಪಿರಲಿ. ತಾವು ಇಲ್ಲಿಗೆ ಬಂದಿರುವುದು ನನ್ನ ಪ್ರಾರ್ಥನೆಯಿಂದ. ನನ್ನನ್ನು ಅನುಗ್ರಹಿಸುವುದಕ್ಕೆ.”

“ಒಂದು ನಿಜ ಇನ್ನೊಂದು ಸುಳ್ಳು.”

ದೇವಿಯು ಅದನ್ನು ಅರ್ಥಮಾಡಿಕೊಳ್ಳಲಾರದೆ ಕೈಯಲ್ಲಿದ್ದ ಲೀಲಾಕಮಲದಿಂದ ಗಂಡನ ಮುಖಪದ್ಮವನ್ನು ನೇವರಿಸುತ್ತಾ ಕೇಳಿದಳು: “ಹಾಗೆಂದರೆ ?”

ನಹುಷನು ಆ ಲೀಲಾಕಮಲದ ಸೋಂಕನ್ನು ಅನುಭವಿಸಿಯೋ ಎಂಬಂತೆ ಕಣ್ಣನ್ನು ಅರೆಮುಚ್ಚಿ ಅದನ್ನು ತಣ್ಣಗೆ ನಿವಾರಿಸುತ್ತ ಕೊಂಕುದನಿಯಲ್ಲಿ ಹೇಳಿದನು, “ನಿನ್ನ ಪ್ರಾರ್ಥನೆಯಿಂದ ಬಂದಿದ್ದೇನೆ ನಿಜ. ಅದರೆ, ಬಂದಿರುವುದು ನಿನ್ನನ್ನು ಅನುಗ್ರಹಿಸುವುದಕ್ಕಲ್ಲ, ನಿನ್ನಿಂದ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ.”

``ಕನಸುಮನಸ್ಸಿನಲ್ಲಿಯೂ ನಾವು ಅನುಗ್ರಾಹ್ಯರು ; ತಾವು ಅನುಗ್ರಾಹಕರು. ದೇವ.”

“ಕಾಮಪ್ರಪಂಚವನ್ನು ಬಿಟ್ಟು ಇತರ ಪ್ರಪಂಚಗಳಲ್ಲಿ ಇದು ನಿಜ. ಅರ್ಥ ಪ್ರಪಂಚದಲ್ಲಿ ಈ ಅನುಗ್ರಾಹ್ಯ, ಅನುಗ್ರಾಹಕ ಸಂಬಂಧವು ಯಾವಾಗಲೂ ಹೆಚ್ಚು ಕಡಿಮೆಯಾಗುತ್ತಲೇ ಇರುವುದು. ಆದರೆ ಧರ್ಮಪ್ರಪಂಚ- ಕಾಮ ಪ್ರಪಂಚಗಳಲ್ಲಿ ಅದು ನಿಯತವು. ಮೊದಲನೆಯದರಲ್ಲಿ ಪತಿಯು ಅನುಗ್ರಾಹಕ. ಪತ್ನಿಯು ಅನುಗ್ರಾಹ್ಯಳು. ಕಾಮಪ್ರಪಂಚದಲ್ಲಿ ಅದಕ್ಕೆ ಪ್ರತಿ. ಪತ್ನಿಯು ಅನುಗ್ರಾಹಕಳು. ಪತಿಯು ಅನುಗ್ರಾಹ್ಯ. ಅದರಿಂದ, ಅಂತಃಪುರಗಳಲ್ಲಿ ಅದೂ ತಿರಸ್ಕರಣಿಯು ಹೊರಗಿನ ಪ್ರಪಂಚವನ್ನು ಹೊರಗೇ ಇಟ್ಟು ನಮ್ಮನ್ನು ಏಕಾಂತದಲ್ಲಿ ಬಿಟ್ಟಿರುವಾಗ, ದೇವಿಯವರು ದೊಡ್ಡ ಮನಸ್ಸು ಮಾಡಿ ಕರ್ತೃತ್ವವನ್ನು ವಹಿಸಿ, ಕರ್ತವ್ಯ ಭಾರವನ್ನು ವಹಿಸಿಕೊಂಡು, ನಮ್ಮಲ್ಲಿ ದಾಸ್ಯಭಾವವನ್ನು ಆರೋಪಿಸಿ ನಡೆಸಿಕೊಂಡರೆ ಕೃತಾರ್ಥರಾಗುವೆವು. ಹೆಣ್ಣೊಲಿದು ಹೊನಲಂತುಬ್ಬಿ ಮೈಮೇಲೆ ಬಂದರೆ ಸ್ವರ್ಗವೇ ಕೈಗೆ ಸಿಕ್ಕಿದಂಥಲ್ಲವೆ ?”

“ದೇವಾ, ಮೂರು ಲೋಕಗಳಲ್ಲಿಯೂ ತಮ್ಮಂತಹ ಧರ್ಮಜ್ಞರೂ ಧರ್ಮಿಷ್ಠರೂ ಧಾರ್ಮಿಕರೂ ಇಲ್ಲವೆನ್ನುವರು. ಧರ್ಮಬಲದಿಂದ ಸ್ವರ್ಗವನ್ನು ಗೆದ್ದವರು ತಾವು. ಬೇಕೆಂದರೆ ಇಂದ್ರಪದವಿಯನ್ನು ನಿರ್ವಹಿಸಬಲ್ಲ ತಾವು ಕೋರಿದರೆ ಸ್ವರ್ಗವು ಇಲ್ಲಿಗೆ ಬರುವುದು ಏನತಿಶಯ ?”

``ದೇವಿ, ಮಾತಿನಲ್ಲಿ ನಮ್ಮನ್ನು ಸೋಲಿಸಿದೆ. ನಾವು ಕೋರಿದರೆ ಸ್ವರ್ಗವು ಇಲ್ಲಿಗೆ ಬರುವುದು ಎಂದರೆ ತಮಗೆ ಬೇಕಾದಷ್ಟು ಸುಖವನ್ನು ನಿರ್ವಂಚನೆಯಾಗಿ ಕೊಡುವೆನು ಎಂದು ಹೇಳಿ, ನಮ್ಮನ್ನು ಬೇಡಿಕೊಳ್ಳಿ ಎಂದು ಅಪ್ಪಣೆ ಮಾಡಿದಂತಾಯಿತು. ಇಗೋ ಮಿಕ್ಕೆಲ್ಲರಿಗೂ ಸಿಂಹಾಸನಾಧೀಶ್ವರನಾಗಿ, ಭೂಮಂಡಲದ ಏಕನಾಥನಾದ ನಹುಷನು, ತಾನು ಚಕ್ರವರ್ತಿಯೆಂಬುದನ್ನು ಮರೆತು, ಮಹಾದೇವಿಯರ ಎದುರು ನಿಂತು ಸೆರಗೊಡ್ಡಿ ಬೇಡುತ್ತಿರುವೆನು. ಕಾಮಭಿಕ್ಷೆಯನ್ನು ಸರ್ವಾಂಗತೃಪ್ತಿಯಾಗುವಂತೆ, ಅಮೃತಪೂರ್ವಕವಾಗಿ ಕೊಟ್ಟು ಕಾಪಾಡಬೇಕು.”

ವಿರಜಾದೇವಿಯು ಆ ಮಾತು ಕೇಳಿ ನಕ್ಕಳು ; ‘ದೇವಾ, ಇದು ಗಂಧರ್ವ ಪ್ರಸಾದವಲ್ಲ; ರಂಗಮಂಟಪವಲ್ಲ, ಜೊತೆಗೆ ನಾನು ಪಾದಸೇವೆಗಾಗಿ ಸಿದ್ಧಳಾಗಿರುವವಳು. ನನ್ನಲ್ಲಿ ಈ ನಾಟಕದ ಮಾತುಗಳೇಕೆ ?”

“ದೇವಿ ಹಾಗಲ್ಲ, ಇದು ಸರ್ವಥಾ ನಾಟಕದ ಭಾಷೆಯಲ್ಲ. ನಾಟಕದಲ್ಲಿ ಬೇಕೆಂದು ಇಲ್ಲದ ಭಾವವನ್ನು ಬೆಳೆಸಿಕೊಂಡು, ಇನ್ನೊಬ್ಬರು ಬರೆದ ಮಾತು ಕಲಿತು ಆಡುವುದು. ಸಂಸ್ಕೃತರಾದ ನಮಗೆ ಭಾವವು ಸಹಜವಾಗಿ ಬೆಳೆದು ಬಲಿತು ಸಮಾಧಿಯಾಗಿ, ಭಾವಾವೇಶದಿಂದ ಮಾತುಗಳೂ ಸಂಸ್ಕಾರಸಂಪನ್ನಳಾಗಿ, ನೀನು ಧರಿಸಿರುವ ಆಭರಣಗಳಲ್ಲಿರುವ ಶಾಣೋಲ್ಲೀಢ ಜೀವರತ್ನಗಳಂತೆ ತೇಜಃಪುಂಜಗಳಾಗಿ ಹೊರಬಂದರೆ ಇವು ನಾಟಕದ ಮಾತುಗಳೆನ್ನುವುದು ಯಾವ ನ್ಯಾಯ? ಸಂಗೀತದಲ್ಲಿ ಚೆನ್ನಾಗಿ ನುರಿತಿರುವ ನಿನ್ನ ಕಂಠವು ಶ್ರುತಿಗೆ ದ್ರೋಹಮಾಡದೆ ನುಡಿಯುತ್ತಿದ್ದರೆ ಅಲ್ಪಾಭರಣಗಳನ್ನು ಧರಿಸಿ, ಲಘುವಸ್ತ್ರದಿಂದ ಬಂದಿರುವೆಯೆಂದರೆ ನಿನಗೆ ವಸ್ತ್ರಾಭರಣಗಳು ಬೇಕಾದಷ್ಟು ಇಲ್ಲವೆಂದು ಅರ್ಥವೇ? ಒಂದೇ ನದಿಯು ಕಟ್ಟೆಯ ಹಿಂದೆ ನಿಂತು ಘನವಾಗಿದ್ದರೂ ಧುಮುಕುವಾಗ ಭೋರ್ಗರೆದರೆ ಅದು ನಾಟಕವೇ? ಈಗ ಈ ಸಮಯದಲ್ಲಿ ನಾನಿಷ್ಟು ಮಾತನಾಡುತ್ತಿರುವುದೂ ಭಾವಶಬಲತೆಯಿಂದಲೇ ಅಲ್ಲವೇ! ಅದರಿಂದ ನಾನಾಡುವ ಮಾತು ನಾಟಕದ್ದಲ್ಲ. ನಾಟಕದಲ್ಲಿ ಅರ್ಥಕ್ರಿಯೆಯಿಲ್ಲದೆ ಭಾವಪ್ರಚೋದಕ ಮಾತ್ರವಾದ್ದರಿಂದ ವಾಕ್ಕು ಅಲ್ಲಿ ವಿಡಂಬನವು. ಅದರಲ್ಲಿ ತೃಪ್ತಾ ಆಗಿ, ತರ್ಪಯಂತೀ ಆಗಿ, ವಶ್ಯಳಾಗಿ, ವಶೇ(ಹೆಣ್ಣಾನೆ)ಯಂತೆ ಲೋಲೆಯಾಗಿ, ಲೀಲಾಪರಳಾದ ನಿನ್ನಂತಹ ಸುರಸುಂದರಿಯ ಸಮ್ಮುಖದಲ್ಲಿ ವಿಡಂಬನವಾಕ್ಕಿಗೆ ಪ್ರಯೋಜನವೆಲ್ಲಿ? ಅದರಿಂದ ಬಾ. ಕಾರ್ಯಪರರಾಗಿ ಸಂತೋಷವನ್ನು ಅರ್ಜಿಸುವ ಕಾಲವಿದು. ಕಾಮದೇವನ ಆರಾಧನದಿಂದ ಕೃತಾರ್ಥರಾಗುವ ಕಾಲವಿದು. ಬರಿಯ ಮಾತಿನ ಬೆಡಗಿನಲ್ಲಿ ಕಾಲಹರಣವೇಕೆ?”

“ದೇವ, ತಮ್ಮ ಮಾತುಗಳು ನನ್ನ ಕಿವಿಗೆ ರಸಾಯನವಾಗಿವೆ. ತಮ್ಮೊಡನೆ ಸಿಂಹಾಸನದಲ್ಲಿ ಕುಳಿತಾಗ ಆ ವೈಭವವನ್ನು ನೋಡಿ ಮನಸ್ಸು ತಣಿಯುವಂತೆ ಧರ್ಮಾಸನದಲ್ಲಿ ಕುಳಿತಾಗ ಕ್ಲಿಷ್ಟವೂ, ಸಂದಿಗ್ಧವೂ, ದುರಾರಾಧ್ಯವೂ ಆದ ಧರ್ಮಸ್ಕಂಧಗಳನ್ನು ವಿವರಣಮಾಡಿ ನಿರ್ಣಯಕ್ಕೆ ಬರುವ ಚಾತುರ್ಯವನ್ನು ನೋಡಿ ಬುದ್ಧಿಯು ಮೆಚ್ಚಿ ತಲೆದೂಗುವಂತೆ, ಈ ಸುಖಾಸನದಲ್ಲಿ ನಮ್ಮ ಪ್ರಾಣಮನೋಬುದ್ಧಿಗಳಂತೆ ದೇಹಗಳೂ ಒಂದಾಗುವ ಅವಸರದಲ್ಲಿ, ಏಕಾಂತದಲ್ಲಿ ಕೈಗೆ ಸಿಗುವುದೇ ಅಪರೂಪವಾದ ತಾವು ನನಗೆ ಸಿಕ್ಕಿರುವಾಗ, ಇನ್ನೂ ಅಷ್ಟು ಹೊತ್ತು ತಮ್ಮ ಮಧುರಾಲಾಪವನ್ನು ಬಯಸಿ ಈ ಕಿವಿಗಳು ಒಂದಕ್ಕೆರಡಾಗಿರುವುವು. ಆದ್ದರಿಂದ, ತಾವು ಏನಾದರೂ ಹೇಳುತ್ತಿರಿ, ನಾನೂ ಯಥಾಶಕ್ತಿಯಾಗಿ ಪ್ರಣಯೋಪಚಾರವನ್ನು ಒಪ್ಪಿಸುತ್ತ ಸಂತೋಷವಾಗಿ ಕೇಳುವೆನು.

“ಭಲೇ, ದೇವಿ, ಕಿವಿಗಳು ಒಂದಕ್ಕೆರಡಾಗಿವೆಯೆಂದು ಸಂತೋಷದಿಂದ ಉಬ್ಬುತ್ತಿರುವ ನಿನ್ನ ಸ್ಥಿತಿಯನ್ನು ಸೂಚಿಸಿಕೊಂಡೆ. ನೋಡು, ಕಾಮಪ್ರಪಂಚದಲ್ಲಿ ಪೂರ್ವರಂಗಪ್ರಸಾದನವು ತಿರ್ಯಗ್ಜಂತುಗಳಲ್ಲಿ ಹೆಚ್ಚು. ಉತ್ತರರಂಗ ಪ್ರಸಾದನವು ದೇವತೆಗಳದು. ಪೂರ್ವೋತ್ತರಂಗಪ್ರಸಾದನವು ಮನುಷ್ಯ ಪ್ರಸ್ಥಾನವು. ನೀನು ಸಹಜವಾಗಿ ದೇವತೆಯಾದುದರಿಂದ ನಿನಗೆ ಉತ್ತರರಂಗ ಪ್ರಸಾದನವು ಪ್ರಿಯವೆಂದು ನಾನು ಅವಸರಿಸಿದೆ. ನೀನು ದೆವತೆಯಾದರೂ ನನಗಾಗಿ ಮಾನುಷಧರ್ಮವನ್ನು ಅನುಸರಿಸಿರುವೆಯೆಂಬುದನ್ನು ಪರ್ಯಾಯವಾಗಿ ಸೂಚಿಸಿ ಉಪಕಾರ ಮಾಡಿದೆ. ಹಾಗೂ ಆಗಲಿ.”

“ದೇವ, ಕಾಮವು ಮತ್ತೆಲ್ಲವನ್ನೂ ಮರೆಸುವ ವ್ಯಾಪಾರವು. ಅಲ್ಲಿಯೂ ತಾವು ತಿರ್ಯಗ್ದೇವಮಾನವ ಧರ್ಮಗಳನ್ನು ಮರೆಯದೆ ವ್ಯವಹರಿಸುವಿರಲ್ಲ ! ಈ ವಿಚಕ್ಷಣೆಯು ತಮ್ಮೊಬ್ಬರಿಗೇ ಸಾಧ್ಯ ! ಇದು ನಿಜವಾಗಿಯೂ ವಿಚಿತ್ರ !”

“ನೀನು ಹೇಳಿದುದು ಬಹಳ ಸರಿ. ಆದರೆ, ದೇವಿ, ಇದು ನನ್ನ ವಿಶೇಷ ಗುಣವಲ್ಲ. ಅಂದು ನಾವು ಸೇವಿಸಿದ ಚ್ಯವನಮಹರ್ಷಿಯ ವರಪ್ರಸಾದ. ಮಾನವರು ಸಹಜವಾಗಿ ರಜೋಗುಣದವರು. ರಜೋಗುಣವು ಉಬ್ಬುತಗ್ಗಿನ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಸತ್ಯವನ್ನು ಅಯಥಾ ಆಗಿ ತೋರಿಸುವುದು. ಹಾಗೆ ಅಯಥಾ ಆಗಿ ಕಂಡುಕಂಡುದನ್ನೆಲ್ಲ ಸತ್ಯವೆಂದು ಭ್ರಮಿಸಿ, ಮೋಹಗೊಂಡು, ತನ್ನನ್ನು ಕಿರಿದು ಮಾಡಿಕೊಂಡು ಒದ್ದಾಡುವುದೇ ಮಾನವ ಧರ್ಮವು. ಇದನ್ನು ಮೀರಿ ವಸ್ತುವಸ್ತುವಿಗೂ ಸ್ವಧರ್ಮವಿರುವುದೆಂದು ತಿಳಿದು, ಪರಸ್ಪರ ಅವಿರುದ್ಧವಾಗಿ, ಮೋಹವನ್ನು ತುಳಿದು ಸ್ಮೃತಿಯನ್ನು ಮೆರೆದು ವರ್ತಿಸುವುದೇ ಧರ್ಮಾರಾಧನವು. ಹಸುವಿಗೆ ಮಾಂಸವನ್ನೂ ಹುಲಿಗೆ ಹುಲ್ಲನ್ನೂ ಹಾಕಿದರೆ ಆದೀತೆ? ಸ್ತ್ರೀಯಾದರೇನು? ಪುರುಷನಾದರೇನು? ಎರಡೂ ಅಲ್ಲದ ಸಾಕ್ಷಿ ನಾನೆಂಬ ವೇದಾಂತ ಸಿದ್ಧಾಂತವು ನಿಜವಾದರೂ, ಕ್ಷೇತ್ರಧರ್ಮವಾದ ಕಾಮವಿಕಾರಕ್ಕೊಳಗಾಗಿ ವರ್ತಿಸಬೇಕಾದ ಈ ಕಾಲದಲ್ಲಿ ಆ ಸಿದ್ಧಾಂತವನ್ನು ಅವಲಂಬಿಸಲಾದೀತೆ? ಮಿಕ್ಕೆಡೆಯಲ್ಲಿ ನಾಯಕನು ನಾನು. ಇಲ್ಲಿ ನೀನು ನಾಯಕಿಯು. ನೋಡು ನವಿಲು ಕೂಡ ನಲ್ಲೆಯು ಕಾಣುವಂತೆ ನರ್ತಿಸಿ ಪ್ರಕೃತ್ಯಾರಮಣಾನುಕೂಲಳಾದ ಸಹಚರಿಯನ್ನು ಒಲಿಸಿಕೊಳ್ಳುವುದು. ಅಲ್ಲವೆ? ನಾನೂ ಹಾಗೆಯೇ ಮಾಡುವೆನು. ವೈಣಿಕನ ಉಪಧರ್ಮವನ್ನು ಸಹಿಸಿಕೊಂಡು ಮೃದು ಮಧುರವಾಗಿ ನುಡಿಯುವ ವೀಣೆಯಂತೆ ನೀನೂ ನನ್ನ ಉಪಮರ್ದದಿಂದ ಉಪಚಿತರಸಳಾಗಿ ಸುಪ್ರೀತಳಾಗಿ ನನ್ನನ್ನು ಸಂಪ್ರೀತಿಗೊಳಿಸು.”

ಹೀಗೆಯೇ ದಂಪತಿಗಳು ಮನೋವಾಕ್ಕಾಯಗಳಿಂದ ಒಬ್ಬರನ್ನೊಬ್ಬರು ಆರಾಧಿಸುವುದರಲ್ಲಿ ತತ್ಪರರಾಗಿ ತಮ್ಮ ಸುತ್ತಮುತ್ತಿನ ಪ್ರಪಂಚವನ್ನು ಸಾರ್ಥಕಗೊಳಿಸಿದರು.

* * * *

ಇಂದ್ರನಾದನು

ನಹುಷ ಚಕ್ರವರ್ತಿಯು ಸತೀದ್ವಿತೀಯನಾಗಿ ಹಂಸತೂಲಿಕಾತಲ್ಪದಲ್ಲಿ ಮಲಗಿದ್ದಾನೆ. ಶಯ್ಯಾಮಂದಿರದ ನಾಲ್ಕು ಮೂಲೆಗಳಲ್ಲಿ ರತ್ನಖಚಿತವಾಗಿ ಸುವರ್ಣಮಯವಾದ ದೀಪದ ಮಲ್ಲಿಗಳು ಸುವಾಸಿತಘೃತತೈಲಗಳ ದೀಪಗಳನ್ನು ಹೊತ್ತು ನಿಂತಿವೆ. ಗೋಡೆಗಳಲ್ಲಿರುವ ಜೀವರತ್ನಗಳು ಆ ದೀಪಗಳ ಕಾಂತಿಯ ಕಿರಣಗಳನ್ನು ಪ್ರತಿಫಲಿಸಿ ಮಂದಿರವೆಲ್ಲವೂ ಮಂದಪ್ರಭಾಸುಂದರವಾಗುವಂತೆ ಮಾಡಿವೆ. ಆ ಗೋಡೆಗಳ ಮೇಲೆ ಇರುವ ತೈಲಚಿತ್ರಗಳ ಮುಂದೆ ಮಂದಾಸನಗಳಲ್ಲಿ ಇಟ್ಟಿರುವ ಪುಷ್ಟಕರಂಡಗಳು ಹರಡಿರುವ ತೈಲಘೃತಗಳ ಸುವಾಸನೆಗೆ ತಮ್ಮ ಸುವಾಸನೆಯನ್ನೂ ಕೊಟ್ಟು ಇಲ್ಲಿ ಪುಷ್ಟೋದ್ಯಾನದ ಭ್ರಾಂತಿಯನ್ನು ತರುವಂತಿವೆ. ತಲ್ಪದ ಮೇಲಿರುವ ಛತ್ತಿನಲ್ಲಿ ಕೆತ್ತಿರುವ ವಜ್ರಾದಿಗಳು ತಮ್ಮ ಹೊಳಪಿನಿಂದ ನೀಲಾಕಾಶವನ್ನು ನೆನಪಿಗೆ ತಂದರೇ ಆ ಮಂದಿರದ ಮೇಲ್ಛಾವಣಿಯ ಗೋಡೆಗಳು ತಮ್ಮ ನಕ್ಷತ್ರ ಚಿತ್ರಗಳಿಂದ ಈ ಭಾವನೆಯನ್ನು ಸ್ಥಿರಗೊಳಿಸುತ್ತಿವೆ. ಮಂದಿರದಲ್ಲಿ ಹಾಸಿರುವ ರತ್ನಗಂಬಳಿಯು ಮೃದುವಾಗಿ, ಪ್ರಿಯವಾಗಿ, ತನ್ನ ಕೆಳಗೆ ನೆಲವೇ ಇಲ್ಲವೇನೋ, ಇದು ಯಾವುದೋ ಪುಷ್ಟಮೇಘಗಳ ಲೋಕದ ನೆಲವೇನೋ ಎಂಬಂತೆ ಇದೆ.

ಬೆಳಗಿನ ಝಾವ, ಮೂರನೆಯ ಪ್ರಹರವು ಮುಗಿದು ನಾಲ್ಕನೆಯ ಪ್ರಹರವು ಆರಂಭವಾಗುವ ಕಾಲ. ಅರಸನನ್ನು ಎಚ್ಚರಿಸಲು ಎದುರಿನ ಮಹಡಿಯ ಮೇಲೆ ವಾದ್ಯಗಳೆಲ್ಲವೂ ಮೃದುವಾಗಿ ನುಡಿಯುವುದಕ್ಕೆ ಸಿದ್ಧವಾಗಿವೆ. ವಾದ್ಯಗಾರರು ಬಂದು ಕುಳಿತುಕೊಂಡು ವಾದ್ಯಗೋಷ್ಠಿಗೆ ಅಣಿಮಾಡಿಕೊಳ್ಳುತ್ತಿದ್ದಾರೆ.ಆ ಸಮಯದಲ್ಲಿ ಅರಸನಿಗೆ ಒಂದು ಕನಸಾಯಿತು.

ಅರಸನು ಉದ್ಯಾನದಲ್ಲಿ ವಿರಜಾದೇವಿಯೊಡನೆ ಕಮಲಪುಷ್ಟದ ಕೊಳದಲ್ಲಿ ಆಟವಾಡಬೇಕೆಂದು ಇಳಿಯುತ್ತಿದ್ದಾನೆ. ಮಗ್ಗುಲಲ್ಲಿದ್ದ ಮೃಗಾಲಯದಿಂದ ಸಿಂಹವೊಂದು ತಪ್ಪಿಸಿಕೊಂಡು ಅರಸನ ಹತ್ತಿರಕ್ಕೆ ಓಡೋಡಿ ಬರುತ್ತದೆ. ವಿರಜಾದೇವಿಯು ಭಯದಿಂದ ಅದನ್ನು ತೋರಿಸುತ್ತಾಳೆ. ಅರಸನು ವಿಶ್ವಾಸದಿಂದ ಅದನ್ನು ಹಿಡಿದು ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಅದು ಆಕಾಶಕ್ಕೆ ಹಾರುತ್ತದೆ. ಅಲ್ಲಿ ಸುಧಾಕಲಶದಂತಿರುವ ಚಂದ್ರನ ಬಳಿಗೆ ಹೋಗುತ್ತದೆ. ಚಂದ್ರನು ಸಶರೀರವಾಗಿ ಘನವಾಗಿ ನೀರ್ಗಲ್ಲಿನಂತೆ ಮೆರೆಯುತ್ತಾ “ನಾನೇ ಬರಬೇಕೆಂದಿದ್ದೆ. ನೀನೇ ಬಂದೆ. ಒಳ್ಳೆಯದಾಯಿತು” ಎನ್ನುತ್ತಾ “ಒಂದು ರಹಸ್ಯವನ್ನು ಕೇಳು. ಇಂದು ದೇವಋಷಿಪಿತೃಗಣಗಳು ಬಂದು ನಿನಗೆ ಇಂದ್ರಪಟ್ಟವನ್ನು ಒಪ್ಪಿಸುವರು. ಅದರಲ್ಲಿ ಮೋಸಹೋಗದಂತೆ ನೋಡಿಕೊ” ಎನ್ನುವನು. ಅಷ್ಟರಲ್ಲಿ ವಾದ್ಯಗಳ ಮೊಳಗುವಿಕೆಯಿಂದ ಎಚ್ಚರವಾಯಿತು.

ಅರಸನು ವಿರಜಾದೇವಿಯನ್ನು ಆಲಂಗಿಸಿಕೊಂಡು ಇನ್ನೂ ಒಂದುಗಳಿಗೆ ಇದ್ದನು. ಆಕೆಯು ಎಚ್ಚೆತ್ತಿರುವುದನ್ನು ಅರಿತು ಆಕೆಗೆ ಆ ಶುಭಸ್ವಪ್ನವೃತ್ತಾಂತವನ್ನು ಹೇಳಿ, ಆಕೆಯು “ಕನಸು ನಿಜವಾಗಲಿ. ನನ್ನೊಡೆಯನನ್ನು ಇಂದ್ರನನ್ನಾಗಿ ಪಡೆಯುವ ಭಾಗ್ಯವು ಮೂರು ಲೋಕಗಳಿಗೂ ಬರಲಿ !” ಎಂದು ಹಾರೈಸಿ ಕೈಮುಗಿಯುತ್ತಿರಲು ಎದ್ದನು.

ಅಂದು ಆತನು ದೇವಗೃಹದಲ್ಲಿ ಆರಾಧನೆಯನ್ನು ಮುಗಿಸಿಕೊಂಡು ಅಗ್ನಿಗೇಹಕ್ಕೆ ಬಂದು ಅಗ್ನಿಪೂಜೆಯನ್ನು ನೆರೆವೇರಿಸುತ್ತಿರುವಾಗ, ಯಜ್ಞೇಶ್ವರನು ದರ್ಶನಕೊಟ್ಟನು. ಮೇಷರೂಢನಾಗಿ ಜಟಾಬದ್ಧನಾಗಿರುವ ಆ ಮೂರ್ತಿಯನ್ನು ಕಂಡು ನಹುಷದಂಪತಿಗಳು ವಿಶೇಷ ಪೂಜೆಯನ್ನೊಪ್ಪಿಸಿದರು. ಯಜ್ಞೇಶ್ವರನು “ಅರಸಾ, ದೇವಋಷಿಪಿತೃಗಳ ಪ್ರತಿನಿಧಿಗಳು ನಿನ್ನನ್ನು ಕಾಣಲು ಬರುವರು. ಧರ್ಮಾಂಗಣದಲ್ಲಿ ಪ್ರತೀಕ್ಷಿಸುತ್ತಿರು” ಎಂದು ಹೇಳಿ ಮರೆಯಾದನು.

ಅರಸನು ಪತ್ನಿಸಮೇತನಾಗಿ ಧರ್ಮಾಂಗಣಕ್ಕೆ ಬಂದನು. ಅರಸನಪ್ಪಣೆಯಿಂದ ಪುರೋಹಿತನು ಮಧುಪರ್ಕ ಪೂಜಾಸಾಮಗ್ರಿಗಳೊಡನೆ ಬಂದು ಕಾದಿದ್ದನು. ಆಸನಗಳು ಸಿದ್ಧವಾಗಿದ್ದವು.

ಗಾಳಿಯು ಒಂದು ಸಲ ಮೃದುವಾಗಿ ಬೀಸಿತು. ಆ ಮಂದಿರವೆಲ್ಲವೂ ದಿವ್ಯ ಪರಿಮಳದಿಂದ ತುಂಬಿತು. ಮತ್ತೊಂದು ಗಳಿಗೆಯೊಳಗಾಗಿ ಪ್ರಭಾಮಂಡಲವಂತರಾದ ದಿವ್ಯಮೂರ್ತಿಗಳು ಗೋಚರವಾದವು. ರಾಜದಂಪತಿಗಳು ಸಪರಿವಾರರಾಗಿ ನಮಸ್ಕಾರಮಾಡಿ ಅವರನ್ನೆಲ್ಲಾ ಆಸನಗಳಲ್ಲಿ ಕುಳ್ಳಿರಿಸಿ, ಅವರಿಗೆ ಸಮರ್ಚನವನ್ನು ಒಪ್ಪಿಸಿದರು. ಅರಸನೇ ಮೊದಲು ಮಾತನಾಡಿದನು : “ತಮ್ಮ ದರ್ಶನಕ್ಕಾಗಿ ಮಾನವರು ಹಗಲಿರುಳು ಶ್ರಮಪಡುವರು. ನಮ್ಮ ಪೂರ್ವಜರ ಪುಣ್ಯ. ನಮ್ಮ ಪೂರ್ವಾರ್ಜಿತ ಪುಣ್ಯ. ತಾವೇ ನಮಗೆ ದರ್ಶನ ಕೊಟ್ಟಿರಿ.”

ಜೊತೆಯಲ್ಲಿದ್ದವರೆಲ್ಲರ ಅಪ್ಪಣೆಯನ್ನು ಪಡೆದು ಸುರಾಚಾರ್ಯನು ಮಾತನಾಡಿದನು : “ಚಕ್ರವರ್ತಿ, ನೀನು ಚಂದ್ರವಂಶದ ರಾಜೇಂದ್ರನು. ಚಂದ್ರನಿಂದ ಐದನೆಯವನು. ನಿನ್ನ ಪುಣ್ಯಬಲದಿಂದ ಮೂರು ಲೋಕಗಳಿಗೂ ಅರಸನಾಗಲು ಅರ್ಹನಾದವನು. ಅದರಿಂದಲೇ ನಾವು ನಿನ್ನ ದರ್ಶನಕ್ಕೆ ಬಂದಿರುವೆವು. ಬಂದ ಕೆಲಸವಿರಲಿ. ನಿನ್ನ ರಾಜ್ಯವು ಚೆನ್ನಾಗಿದೆಯೆ? ನಿನ್ನ ಪ್ರಜೆಗಳೆಲ್ಲರೂ ಸೌಖ್ಯದಿಂದಿರುವರೋ? ನಿನ್ನ ಧರ್ಮವು ಅಧ್ಯಯನ, ಆಚರಣೆಗಳಿಂದ ಪರಿವರ್ಧಿತವಾಗುತ್ತಿದೆಯೋ? ನಿನ್ನ ಅರಮನೆಯವರೆಲ್ಲರೂ ಕುಶಲಿಗಳಷ್ಟೇ?”

ನಹುಷನು ಸಂತೋಷದಿಂದ ಬಿನ್ನವಿಸಿದನು : “ದೇವ, ನೀವು, ದೇವತೆಗಳು, ಸೂತ್ರಧಾರರು. ನೀವು ಸೂತ್ರವನ್ನೆಳೆದತ್ತ ಕುಣಿಯುವ ಬೊಂಬೆಗಳು ನಾವಾದರೂ, ಆಹಂಕಾರದಿಂದ ನಾವು ನಾವು ಎಂದು ಎದೆ ತಟ್ಟಿಕೊಳ್ಳುವೆವು. ತಮ್ಮ ಕೃಪೆಯಿಂದ ಧರ್ಮಾರಾಧನವು ಕ್ರಮವಾಗಿದೆ. ರಾಜ್ಯಸೂತ್ರಗಳು ಭದ್ರವಾಗಿವೆ. ಪ್ರಜೆಗಳೆಲ್ಲರೂ ಸುಖಿಗಳಾಗಿ ವರ್ಧಿಷ್ಣುಗಳಾಗಿದ್ದಾರೆ. ನಾನೂ ಸಕುಟುಂಬವಾಗಿ ಸಪರಿವಾರನಾಗಿ ಕ್ಷೇಮವಾಗಿದ್ದೇನೆ.”

ದೇವಗುರುವು ಒಂದು ಗಳಿಗೆ ತಡೆದು, “ನೀನು ಹೇಳುವುದಕ್ಕೆ ತಮ್ಮೆಲ್ಲರ ಸಮ್ಮತಿಯುಂಟಷ್ಟೇ’ ಎಂದು ಕೇಳುವವನಂತೆ ತನ್ನ ಜೊತೆಯಲ್ಲಿದ್ದವರ ಮುಖವನ್ನು ನೋಡಿ ಹೇಳಿದನು ; “ಅರಸಾ, ನಾವು ನಿನ್ನ ಬಳಿಗೆ ವಿಚಿತ್ರವಾದ ಪ್ರಾರ್ಥನೆಯೊಂದನ್ನು ಮಾಡಿಕೊಳ್ಳಲು ಬಂದಿದ್ದೇವೆ. ನೀನು ಅನುಕೂಲನಾಗಿ ಅದನ್ನು ಒಪ್ಪಿಕೊಳ್ಳಬೇಕು.”

ನಹುಷನು ಸಣ್ಣಗೆ ನಕ್ಕು ಹೇಳಿದನು ; “ದೇವ, ಆ ಪ್ರಾರ್ಥನೆಯಾದರೂ ಎಂಥದು ? ಸಾಮಾನ್ಯವಾಗಿ ತಾವು ಹೇಳುವುದು ನಾವು ಕೇಳುವುದು ಆಗಿರಲು, ನಮ್ಮನ್ನು ಕೇಳಿ ನಾವು ಅನುಕೂಲರಾಗಿ ನಡೆಸಿಕೊಡಬೇಕಾದ ಆ ಮಹತ್ಕಾರ್ಯವಾದರೂ ಏನು ?”

“ಮಧ್ಯಮಲೋಕಚಕ್ರವರ್ತಿ, ಈಗ ಕಾರಣಾಂತರಗಳಿಂದ ಇಂದ್ರಪದವಿಯು ಶೂನ್ಯವಾಗಿರುವುದು. ಅದನ್ನು ನೀನು ಅಲಂಕರಿಸಬೇಕೆಂದು ಕೇಳಲು ನಾವು ಬಂದಿರುವೆವು. ಇವರು ಋಷಿಗಣದ ಪ್ರತಿನಿಧಿಗಳು. ಇವರು ಪಿತೃಗಣದ ಪ್ರತಿನಿಧಿಗಳು. ಈತನು ದೇವಾಗ್ರಗಣ್ಯರಲ್ಲಿ ಒಬ್ಬನಾದ ಜಾತವೇದನು. ನನ್ನನ್ನಂತೂ ಬಲ್ಲೆ.”

ನಹುಷನು ಪತ್ನಿಯ ಮುಖವನ್ನು ನೋಡಿದನು. ಆ ನೋಟದಲ್ಲಿ ಬೆಳಗಿನ ಕನಸು ನಿಜವಾಯಿತಲ್ಲಾ ಎಂಬರ್ಥವಿತ್ತು. ಗಂಭೀರವಾಗಿ ಕೇಳಿದನು : “ಈ ಅರ್ಥದಲ್ಲಿ ನಾವು ಸ್ವತಂತ್ರರೋ ? ಅಥವಾ ತಾವು ಹೇಳಿದಂತೆ ಕೇಳಲೇಬೇಕೋ?”

“ಈ ಅರ್ಥದಲ್ಲಿ ನೀನು ಸ್ವತಂತ್ರನು.”

“ಸಂತೋಷ. ತಾವು ಇಂದ್ರಪದವಿಯು ಶೂನ್ಯವಾಗಿದೆಯೆಂದಿರಿ. ನಾವು ಮಧ್ಯಲೋಕದವರು. ನಮಗೆ ಏನೂ ತಿಳಿಯದು. ಅದರಿಂದ ಕೇಳುವೆನು. ಆ ವಿಚಾರವನ್ನು ವಿಸ್ತಾರವಾಗಿ ಕೇಳಬಹುದೆ ?”

ಬೃಹಸ್ಪತಿಯು ನಡೆದುದೆಲ್ಲವನ್ನೂ ಹೇಳಿ, “ವೃತ್ರಹತ್ಯೆಗಾಗಿ ಇಂದ್ರನು ದೇವಲೋಕವನ್ನು ಬಿಡಬೇಕಾಯಿತು” ಎಂದು ಹೇಳಿದನು. ಹಾಗೆಯೇ ಇಂದ್ರನಾಗುವವನಿಗೆ ಅವನು ಅಪೇಕ್ಷಿಸಿದುದನ್ನು ಕೊಡುವುದಾಗಿಯೂ ಹೇಳಿದನು.

ನಹುಷನು ಸಾವಧಾನವಾಗಿ ಯೋಚಿಸಿ ಹೇಳಿದನು: “ಬಂದಿರುವ ತಾವೆಲ್ಲರು ಪೂಜ್ಯರು. ನನಗಿಂತ ದೊಡ್ಡವರು. ಅದರಿಂದ ನಾನು ಹೇಳುವುದನ್ನು ತಾವು ಸಾವಧಾನವಾಗಿ ಪರ್ಯಾಲೋಚಿಸಬೇಕು. ನಾವು ಮನುಷ್ಯವರ್ಗದವರು. ದೇವಋಷಿ ಪಿತೃಗಣಗಳಿಗಿಂತ ಕೀಳಾದವರು. ನಾವು ತಮ್ಮ ಮೇಲಿನ ಅಧಿಕಾರವನ್ನು ವಹಿಸಿಕೊಳ್ಳುವುದೆಂತು ? ತಾವು ನಮಗೆ ವರಪ್ರದಾನ ಮಾಡುವವರು. ತಮ್ಮನ್ನು ಕಂಡರೆ ನಾವು ಅಂಜುವೆವು. ತಾವು ಅನುಗ್ರಾಹಕರು. ನಾವು ಅನುಗ್ರಾಹ್ಯರು. ಹೀಗಿರುವಲ್ಲಿ ನಾವು ತಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಸಾಧ್ಯವೇ ? ತಾವೇ ಯೋಚಿಸಿ ನೋಡಿ.”

ದೇವಋಷಿಪಿತೃಗಳು ಒಬ್ಬರನ್ನೊಬ್ಬರು ನೋಡಿಕೊಂಡರು. ನಹುಷನು ಹೇಳುವುದು ಸರಿ. ಏನು ಮಾಡಬೇಕು ?

ಪಿತೃಗಣದ ಪ್ರತಿನಿಧಿಯು ಹೇಳಿದನು : “ಮಾನವೇಂದ್ರ, ನೀನು ಹೇಳುವುದು ಸರಿ. ಪ್ರತಿಯೊಂದು ಜಂತುವಿಗೂ ಅದರದರ ಅಧಿಕಾರವ್ಯಾಪ್ತಿಯಿಷ್ಟು ಎಂದು ಮಿತಿಯಿರುವುದು. ಮಿತಿಯ ಎರಡು ಕೊನೆಗಳಲ್ಲಿ ಒಂದು ಕನಿಷ್ಠಾವಧಿ, ಇನ್ನೊಂದು ಪರಮಾವಧಿ ; ಅದು ಸಹಜವಾದುದು. ಅದಕ್ಕೆ ಯಾರೇನು ಮಾಡುವುದು ?”

“ತಾವು ನನಗಿಂತ ಶ್ರೇಷ್ಠರು ಎಂಬುದನ್ನು, ಸಮಸ್ಯೆಯನ್ನು ಸರಿಯಾಗಿ ನಿರ್ವಚಿಸಿ ತೋರಿಸಿಕೊಂಡಿರಿ. ನಾನು ಹೇಳುವುದೂ ಅದೆ! ನಮ್ಮ ಪರಮಾವಧಿಯ ಮಿತಿಯಲ್ಲಿ ತಾವು ಸೇರಿದವರಲ್ಲ. ಅದರಿಂದ ಅಧಿಕಾರವು ಸಾಧ್ಯವಲ್ಲ.”

ಮತ್ತೆ ಸುರಾಚಾರ್ಯನು ಹೇಳಿದನು ; ಚಕ್ರವರ್ತಿ, ನಿನ್ನ ಆಕ್ಷೇಪಣೆಯು ಸಾಧುವಾದುದು. ಯಾವ ಪ್ರಾಣಿಯ ಇತಿಮಿತಿಯನ್ನು ಬೇಕಾದರೂ ಪಿತೃಗಳು ಬದಲಾಯಿಸಬಲ್ಲರು. ಪಿತೃಗಳು ನಿನ್ನ ಮಾನವತ್ವವನ್ನು ತೆಗೆದು ಅಲ್ಲಿ ದೇವತ್ವವನ್ನು ಸ್ಥಾಪಿಸುವರು.

“ದೇವತ್ವವನ್ನು ಪಡೆದೆನೆನ್ನುವುದು ನನಗೆ ಹೇಗೆ ತಿಳಿಯುವುದು ?”

“ನಿನ್ನ ಅಧಿಕಾರದಿಂದ ಮತ್ತು ಆನಂದಭೋಗದಿಂದ. ಎಂದರೆ, ನಿನ್ನ ಕಣ್ಣಿಗೆ ಬಿದ್ದವರು ತಾವಾಗಿ ನಿನಗೆ ಹೆದರುವರು. ಅದು ಅಧಿಕಾರ ಲಕ್ಷಣ. ಎರಡನೆಯದು ನಿನ್ನ ಆನಂದಾನುಭವಶಕ್ತಿಯು ಬದಲಾಗುವುದು. ಅದೇ ಜಂತುವನ್ನು ಅಳೆಯುವ ಶಕ್ತಿಯು. ಮನುಷ್ಯನಾಗಿ, ಸಾಮ್ರಾಟನಾಗಿ, ಬಲಿಷ್ಠನಾಗಿ, ಯವಿಷ್ಟನಾಗಿ, ಸರ್ವವಸ್ತು ಸಂಪನ್ನನಾಗಿರುವವನು ಅನುಭವಿಸುವ ಆನಂದವು ಮಾನದಂಡವು. ಈ ಆನಂದವು ಅಂತಃಕರಣದಲ್ಲಿ ತೋರುವ ವಿಶೇಷವೃತ್ತಿಯು. ನಾವು ಆನಂದಾನುಭವ ಶಕ್ತಿಯನ್ನು ಬೆಳೆಸುವೆವು, ಎಂದರೆ ಆ ಅಂತಃಕರಣವು ಆನಂದವನ್ನು ಅಷ್ಟರವರೆಗೆ ಪ್ರಕಟಿಸಬಲ್ಲದು ಎಂದು. ಅದರಿಂದ, ಮಾನವೇಂದ್ರ, ನಿನ್ನ ಕರ್ಮ ಕಲಾಪಗಳಿಂದ, ಯಜ್ಞಯಾಜನಾದಿಗಳಿಂದ, ಇಷ್ಟಾಪೂರ್ತ ಕರ್ಮಗಳಿಂದ ನೀನು ಹೊಂದುವ ಪರಮವಾದ ಆನಂದವೆಷ್ಟು ಬಲ್ಲೆಯಾ ? ನೀನು ಯಾವುದೋ ಒಂದು ದೇವತೆಯಲ್ಲಿ ನಿನ್ನ ಕರ್ಮಾನುಷ್ಠಾನಬಲದಿಂದ, ನಿನ್ನ ವಿದ್ಯಾಪ್ರಭಾವದಿಂದ ಅಪ್ಯಾಯನಾಗುವೆ. ಆಗ ಆ ದೇವತೆಯ ಆನಂದವನ್ನು ಪಡೆಯುವೆ. ಅದು ದೇವಾನಂದವು. ನೀನು ನಾವು ಹೇಳುವಂತೆ ಇಂದ್ರನಾಗುವುದಾದರೆ, ಆ ದೇವಾನಂದದ ನೂರರಷ್ಟು ಆನಂದವನ್ನು ಪಡೆಯುವೆ. ಈಗ ಇಲ್ಲಿರುವ ನಮ್ಮಲ್ಲಿ ಪಿತೃಗಳೂ ನಿನ್ನ ಆನಂದಾನುಭವಶಕ್ತಿಯನ್ನು ಕೊಡುವರು. ಎಂದರೆ ನಿನ್ನ ಯೋನಿಯನ್ನು ಬದಲಾಯಿಸುವರು. ಯೋನಿ ಎನ್ನುವುದು ಒಂದು ಅಚ್ಟು. ಅಚ್ಚಿಗೆ ಆಳ ಉದ್ದ ಅಗಲಗಳ ಮೇಲಲ್ಲವೆ ಅದರ ಪ್ರಮಾಣವು? ಹಾಗೆ ಮನುಷ್ಯ ಯೋನಿಯಾದ ನಿನ್ನನ್ನು ದೇವಯೋನಿಯನ್ನಾಗಿ ಮಾಡುವರು. ಆ ಪ್ರಮಾಣದ ಆನಂದವನ್ನು ಪಡೆಯುವುದಕ್ಕೆ ಬೇಕಾದ ಜ್ಞಾನವನ್ನು ಋಷಿಗಳು ಕೊಡುವರು. ಅಂದರೆ, ಈಗ ಪ್ರತಿಯೊಂದು ಪ್ರಾಣಿಯೂ ನಿದ್ದೆಯಲ್ಲಿ ಆನಂದದ ಪರಾಕಾಷ್ಠತೆಯನ್ನು ಪಡೆಯುವುದು ಆದರೆ, ಆಗ ಅದು ಆನಂದ ಎಂದು ತಿಳಿಯುವ ಜ್ಞಾನವಿರುವುದಿಲ್ಲ. ಅಲ್ಲಿ ಪಡೆಯುವ ಆನಂದವು ಆನಂದವೇ ಎಂದು ತಿಳಿಯುವುದೇ ಆ ಜ್ಞಾನವು. ನಾವು ದೇವತೆಗಳು ಆ ಆನಂದವನ್ನು ಕೊಡುವೆವು. ಹೀಗೆ, ಅಧಿಕಾರ, ಆನಂದ ಎರಡನ್ನೂ ನಾವು ಕೊಟ್ಟು ನಿನ್ನನ್ನು ಇಂದ್ರನನ್ನು ಮಾಡುವೆವು.”

ನಹುಷನು ಎಲ್ಲವನ್ನೂ ಸಾವಧಾನವಾಗಿ ಕೇಳಿ ವಿನಯದಿಂದ ಕೈ ಮುಗಿದು ಹೇಳಿದನು : “ದೇವ, ತಾವು ಹೇಳುತ್ತಿರುವಾಗ ಬೇಡವೆನ್ನಲು ಸಾಧ್ಯವಿಲ್ಲ. ಅಲ್ಲದೆ, ಮನುಷ್ಯಲೋಕದಲ್ಲಿ ನ್ಯಾಯವಾಗಿ ರಾಜ್ಯಭಾರ ಮಾಡಿದವರಿಗೆ ಇಂದ್ರಸಿಂಹಾಸನದಲ್ಲಿ ಅರ್ಧಸಿಕ್ಕುವುದು ಎಂದು ಬಲ್ಲವರು ಹೇಳುವರು. ತಾವು ಇಂದ್ರತ್ವವನ್ನೇ ಕೊಡುವೆವು ಎನ್ನುವಿರಿ. ಆಗಲಿ. ಆದರೆ, ನನ್ನ ಪ್ರಾರ್ಥನೆಯನ್ನೂ ಮನ್ನಿಸುವಿರಾ ? ನಾನು ಎರಡು ನಿಬಂಧಗಳನ್ನು ತಮ್ಮ ಮುಂದಿಡಬಹುದೆ ?”

ದೇವಗುರುವು ‘ಆಗಬಹುದು’ ಎಂದನು. ನಹುಷನು ಹೇಳಿದನು ; “ಅಲ್ಲಿಯೂ ವಿರಜಾದೇವಿಯು ನನ್ನ ಪತ್ನಿಯಾಗಿದ್ದು, ಈಗ ಇಲ್ಲಿ ಅರಮನೆಯಲ್ಲಿ ನಾವು ನಡೆಸುವ ಧರ್ಮಗಳನ್ನು ದಿನವೂ ನಡೆಸುತ್ತಿರಲು ಅನುಕೂಲವಿರಬೇಕು ಎಂಬುದೊಂದು. ಜೊತೆಗೆ ಅಲ್ಲಿ ನಾನು ಏನು ಕೇಳಿದರೂ ಅದನ್ನು ರಹಸ್ಯವೆನ್ನದೆ ನನಗೆ ಹೇಳಬೇಕು ಎನ್ನುವುದು ಎರಡನೆಯದು. ಈ ಎರಡು ನಿಯಮಗಳನ್ನು ತಾವು ಒಪ್ಪಿಕೊಳ್ಳಬೇಕು.”

“ಈ ಎರಡು ನಿಯಮಗಳನ್ನು ಒಪ್ಪಿಕೊಳ್ಳಲೇಬೇಕೆ ?”

“ಹಾಗೆಂದು ನಾನು ತಮ್ಮನ್ನು ಪ್ರಾರ್ಥಿಸುವೆನು.”

“ಯೋಚಿಸಿ ನೋಡು. ಒಪ್ಪಿಕೊಂಡುದರಿಂದ ನಮಗೆ ಹಾನಿಯಿಲ್ಲ”

“ಹಾಗಾದರೆ ಒಪ್ಪಿಕೊಳ್ಳಬಹುದಲ್ಲ ?”

“ಒಪ್ಪಿಕೊಂಡಿರುವೆವು. ಇವೆರಡರಿಂದ ಆಗುವ ಹಾನಿಗೆ ನಾವು ಹೊಣೆಯಲ್ಲ. ನೀನೇ ಹೊಣೆ.”

“ಆಗಬಹುದು ದೇವ, ನಾನು ಹೊಣೆಯನ್ನು ಒಪ್ಪಿಕೊಳ್ಳುವೆನು. ಆ ಹೊಣೆಯಲ್ಲಿ ಏನು ವಿಷಯವಿದೆಯೆಂದು ತಿಳಿಯಲಿಲ್ಲ ಅಪ್ಪಣೆಯಾಗಬೇಕು.”

“ನೀನು ಇಂದ್ರತ್ವವನ್ನು ಒಪ್ಪಿಕೊಂಡಿರುವೆ ತಾನೆ ?”

“ಹೌದು ಒಪ್ಪಿಕೊಂಡಿರುವೆನು.”

“ಸರಿ, ಹಾಗಾದರೆ ಹೇಳುವೆನು. ನೀನು ಧರ್ಮಮಾಡುತ್ತಿರಬೇಕು ಎಂದೆ ಅದರರ್ಥವೇನಾಯಿತು ಬಲ್ಲೆಯಾ? ‘ನಾನು ಇಂದ್ರನಾದರೂ ಮನುಷ್ಯ ಧರ್ಮವನ್ನು ಬಿಡುವುದಿಲ್ಲ’ ಎಂದಾಯಿತು. ಎಂದರೆ, ಮನುಷ್ಯರು ಮತರ್ಯ್‌ರು, ಎಂದರೆ ಮರಣಧರ್ಮವುಳ್ಳವರು. ನೀನೂ ಆ ಧರ್ಮವನ್ನು ಒಪ್ಪಿಕೊಂಡಂತಾಯಿತು. ನಾವು ನಿನ್ನನ್ನು ಅಜರ ಅಮರಧರ್ಮಿಯಾಗಿ ಮಾಡಬೇಕೆಂದಿದ್ದೆವು. ನೀನು ಒಂದನ್ನೊಪ್ಪಿಕೊಂಡು ಇನ್ನೊಂದು ಬೇಡವೆಂದ ಹಾಗಾಯಿತು.

ನಹುಷನು ಅದನ್ನು ಕೇಳಿ ನಿಟ್ಟುಸಿರುಬಿಟ್ಟನು. ದಂಪತಿಗಳು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಒಂದುಗಳಿಗೆ ವಿಷಾದಪಟ್ಟರು. ನಿಟ್ಟುಸಿರುಬಿಟ್ಟರು. ನಹುಷನು ಕೇಳಿದನು : “ಇನ್ನೊಂದು”

“ಅದೇ ? ದೇವಲೋಕದಲ್ಲಿ, ಇಂದ್ರನಾದ ಮೇಲೆ, ನಿನಗೆ ತಿಳಿಯದ ರಹಸ್ಯಗಳೇನಿದ್ದಾವು ? ಆದರೆ, ಈಗ ನೀನು ಚಾಪಲ್ಯದಿಂದ ದೇವರಹಸ್ಯಗಳನ್ನು ತಿಳಿಯಬೇಕೆಂಬ ಕುತೂಹಲವನ್ನು ಪ್ರಕಟಿಸಿದೆ. ಅದರ ಫಲವಾಗಿ ನೀನು ನಿನಗೆಟುಕದ ರಹಸ್ಯಗಳನ್ನು ತಿಳಿಯಲು ಯತ್ನಿಸುವೆ. ರಹಸ್ಯವು ತಾನಾಗಿ ತಿಳಿದರೆ ವರ. ನಿನಗಾಗಿ ಭೇದಿಸಿದರೆ ಶಾಪ. ಅದರಿಂದ ಏನು ಬೇಕಾದರೂ ಆಗಬಹುದು.

ನಹುಷನು ಅದಕ್ಕಾಗಿ ಅಷ್ಟು ವಿಷಾದಪಡಲಿಲ್ಲ. “ಆಗಲಿ, ಅದು ನನ್ನ ಕೈಯಲ್ಲಿದೆ. ಹೆಚ್ಚು ಕುತೂಹಲ ಪಡದಿದ್ದರೆ ಆಯಿತು” ಎಂದುಕೊಂಡನು.

ದೇವಾಚಾರ್ಯಾದಿಗಳು ನಹುಷನನ್ನು ಪತ್ನೀಸಮೇತನಾಗಿ ದೇವಲೋಕಕ್ಕೆ ಕರೆದುಕೊಂಡು ಹೋಗಿ ಇಂದ್ರಪಟ್ಟಾಭಿಷೇಕ ಮಾಡಿದರು. ಮಾನವೇಂದ್ರನು ಮಹೇಂದ್ರನಾದನು.

* * * *

೨೭.ಏರುವುದು ಬೀಳುವುದಕ್ಕೆ

ಸಂಪಾದಿಸಿ

ನಹುಷನು ಇಂದ್ರನಾಗಿ ಅಧಿಕಾರವನ್ನು ವಹಿಸಿಕೊಂಡನು. ಅಗ್ನಿ ವಾಯುಗಳನ್ನು ಹಿಂದಿನಂತೆ ಅವರವರ ಅಧಿಕಾರದಲ್ಲಿಟ್ಟು ಅವರ ಮುಖಾಂತರವಾಗಿ ತ್ರೈಲೋಕ್ಯಾಧಿಪತ್ಯವನ್ನು ನಿರ್ವಹಿಸಿದನು. ಹಿಂದಿನ ಇಂದ್ರನಿಗೂ ಈ ಇಂದ್ರನಿಗೂ ವ್ಯತ್ಯಾಸವೆಂದರೆ, ಈತನು ನಿತ್ಯ ದಾನಮಾಡುವನು.ಆ ದಾನದ್ರವ್ಯವು ಮಾತ್ರ ಅಲ್ಲಿ ವಿನಿಯೋಗವಾಗದೆ ಮಧ್ಯಮ ಲೋಕದಲ್ಲಿ ಪ್ರಕಾರಾಂತವಾಗಿ ವಿನಿಯೋಗವಾಗುವುದು.

ಅಗ್ನಿ ವಾಯುಗಳು ಇಂದ್ರನಿಗೆ ಹೇಳಿದರು : “ಇದು ಕೇವಲ ಅಧಿಕಾರ ಸ್ಥಾನವಲ್ಲ, ಇಲ್ಲಿರುವವನು ಒಂದು ಹೆಜ್ಜೆಯನ್ನು ಪೂರ್ಣಪದದಲ್ಲಿಟ್ಟು ಆ ಕಡೆ ತಿರುಗಿರಬೇಕು. ಇನ್ನೊಂದು ಹೆಜ್ಜೆ ಅಧಿಕಾರ ಸ್ಥಾನದಲ್ಲಿರಬೇಕು ಅಥವ ರೂಪಕವಾಗಿ ಹೇಳಬೇಕೆಂದರೆ ನನ್ನಂತೆ ಎರಡು ಮುಖ ಮಾಡಿಕೊಂಡು ಕರ್ಮಬ್ರಹ್ಮಗಳೆರಡನ್ನೂ ಆರಾಧಿಸಬೇಕು ಮತ್ತು ವಾಯುವಿನಂತೆ ಸದಾಗತಿಯಾಗಿದ್ದು ತೀರದವರೆಗೂ ಅಲೆಗಳನ್ನು ಕಳುಹಿಸುವ ಸಮುದ್ರದಂತೆ, ಎಲ್ಲಿ ಯಾವುದು ನಡೆದರೂ ಅದನ್ನು ಗಮನಿಸಿ ಅದನ್ನು ಅದರದರ ಯೋಗ್ಯತಾನುಸಾರ ಪೂರ್ಣತೆಗೆ ಕೊಂಡೊಯ್ಯುವವನಾಗಬೇಕು.”

ನಹುಷನು ಕೇಳಿದನು : ``ಹಾಗಾದರೆ ಲೋಕದಲ್ಲಿ ಎಲ್ಲವೂ, ಪ್ರತಿಯೊಂದೂ ಪೂರ್ಣವೆ ?”

ಅಗ್ನಿಯು ಹೇಳಿದನು : “ದೇವ ಪ್ರತಿಯೊಂದು ಪೂರ್ಣವೇ. ಪೂರ್ಣದಿಂದ ಬಂದ ಜಗತ್ತಿನಲ್ಲಿರುವ ಪ್ರತಿಯೊಂದು ಪೂರ್ಣವೇ. ಆದರೆ, ಒಂದು ಇನ್ನೊಂದನ್ನು ಅಪೂರ್ಣವೆನ್ನುತ್ತ ತಾನು ಬೇರೆಯೆಂದುಕೊಂಡು ತನ್ನ ಪೂರ್ಣತೆಗೊಂದು ಮಿತಿಯನ್ನು ಹಾಕಿಕೊಂಡಿರುವುದು. ಆದರೂ ತಾನು ಎಂಬುದೊಂದುಂಟು ಎಂದುಕೊಂಡುದು, ತನ್ನದೊಂದು ವಿಷಯ ಪ್ರತ್ಯೇಕ, ಎಲ್ಲರಂತಲ್ಲ ಎಂದು ಕ್ಷೇತ್ರವನ್ನು ವಿಂಗಡಿಸಿಕೊಂಡಿರುವುದು. ಅದನ್ನೇ ಅಹಂಕಾರವೆನ್ನುವರು. ಆ ಅಹಂಕಾರದ ಅಧಿನಾಥನು ಇಂದ್ರನು. ಆತನು ಅದನ್ನು ಪೋಷಿಸುವವನು. ಆತನ ಅಪ್ಪಣೆಗನುಸಾರವಾಗಿ ದೇವತೆಗಳು ಅದನ್ನು ಅಳೆಯುವರು. ಅದು

ತಕ್ಕಷ್ಟು ದೊಡ್ಡದಾದರೆ ಅದನ್ನು ಲೋಕದ ಶುಭಾಶುಭಗಳಿಗೆ ವಿನಿಯೋಗಿಸುವರು.”

“ಸರಿ”

“ಅದರಿಂದಲೇ ಪ್ರಪಂಚವೆಲ್ಲವೂ ದೇವತೆಗಳ ಕೈಯಲ್ಲಿರುವುದು ಎನ್ನುವರು.”

“ಸರಿ”

“ಈ ದೇವತೆಗಳನ್ನು ಕಾಲವು ಪ್ರಚೋದಿಸುವುದು. ಕಾಲವು ಶುಭಾಶುಭ ಪ್ರವರ್ತಕವೆಂದು ನಮ್ಮ ಭಾವನೆ. ಕಾಲವನ್ನು ಬಲ್ಲವನು ಕಾಲಸ್ವರೂಪನಾದ ಮಹಾವಿಷ್ಣುವು ಒಬ್ಬನೇ. ನಮಗೆ ಮನ್ವಂತರದ ಕೊನೆಯವರೆಗೂ ಆಳುವ ಅಧಿಕಾರವುಂಟು. ಪ್ರತಿಯೊಂದು ಮನ್ವಂತರದಲ್ಲೂ ದೇವತೆಗಳು, ಋಷಿಗಳು, ಪಿತೃಗಳು, ಮನು ಎಲ್ಲರೂ ಹೊಸಬರಾಗುವರು.”

“ಸರಿ ಹಾಗಾದರೆ, ಹಿಂದಿನ ಇಂದ್ರನು ಇಂದ್ರಪದವಿಯನ್ನು ಬಿಟ್ಟು ಓಡಿ ಹೋದುದೇಕೆ ?”

“ಆತನೇಕೆ ಹೋದನೆನ್ನುವುದು ಇನ್ನೂ ಸರಿಯಾಗಿ ಯಾರಿಗೂ ತಿಳಿಯದು. ನಾವೆಲ್ಲರೂ ಆತನು ಮಾಡಿದ ವೃತ್ರಹತ್ಯೆಯು ಆತನಿಗೆ ಸಹಿಸುವುದಕ್ಕೆ ಆಗದಷ್ಟು ದೊಡ್ಡದಾಗಿ ಆತನು ಓಡಿಹೋದನು ಎಂದುಕೊಂಡಿರುವೆವು. ನಾವಂದುಕೊಂಡಿರುವುದು ನಿಜವಾದರೆ ಆತನೆಲ್ಲಿಯೋ ತಪಸ್ಸು ಮಾಡುತ್ತಿರಬೇಕು. ಆತನ ತಪಸ್ಸು ಫಲವಾಗಿ ಆತನು ನಿರ್ದೋಷಿಯಾಗುವವರೆಗೂ ತಲೆ ಮರೆಸಿಕೊಂಡಿರುವನು.”

“ಆತನನ್ನು ನಿರ್ದೋಷಿಯನ್ನಾಗಿ ಮಾಡಿ ಹಿಂತಿರುಗುವಂತೆ ಮಾಡಲು ಸಾಧ್ಯವಿಲ್ಲವೆ?

ಯಜ್ಞೇಶ್ವರನು ನಕ್ಕು ಹೇಳಿದನು ; “ಸಾಧ್ಯ. ಆದರೆ ಹಾಗೆ ಮಾಡಿದರೆ, ಇಬ್ಬರು ಇಂದ್ರರಾಗುವರು. ಶಾಶ್ವತವಾದ ಇಂದ್ರನು ಬಂದರೆ, ತತ್ಕಾಲಕ್ಕೆ ಇಂದ್ರನು ಅಧಿಕಾರವನ್ನು ಬಿಟ್ಟುಕೊಡಬೇಕಾಗುವುದು. ಅದರಿಂದ.....”

"ಸುಮ್ಮನಿರುವುದು ಒಳಿತು ಎಂದು ನಿನ್ನ ಅಭಿಪ್ರಾಯ ?”

“ಹೌದು”

“ಹಾಗಾದರೆ, ಈ ನನ್ನ ಪದವಿಯು ಶಾಶ್ವತವಲ್ಲವೆಂದು ನಿನ್ನ ಅಭಿಪ್ರಾಯವೇ?”

“ದೇವ, ದೇವತೆಗಳ ಯಾವ ಪದವಿಯನ್ನು ಶಾಶ್ವತವೆನ್ನೋಣ ? ನಾವು ಚತುರ್ಮುಖ ದೃಷ್ಟಿಯಿಂದ ನೋಡಿದರೆ ಅಲ್ಪಾಯುಗಳು. ಮಾನವರ ದೃಷ್ಟಿಯಿಂದ ನೋಡಿದರೆ ದೀರ್ಘಾಯುಗಳು. ಅದರಿಂದ, ಈ ಕಾಲವೆನ್ನುವುದು ಒಬ್ಬೊಬ್ಬರಿಗೆ ಒಂದೊಂದು ಪ್ರಮಾಣವುಳ್ಳದ್ದಾದುದರಿಂದ ಶಾಶ್ವತವೆನ್ನುವುದರಲ್ಲಿ ಅರ್ಥವಿಲ್ಲ.”

ನಹುಷನು “ಭಲೆ” ಯೆಂದನು. “ನನ್ನ ಈ ಪದವಿಯು ಅಶಾಶ್ವತವೆಂಬುದನ್ನು ಪ್ರದಕ್ಷಿಣವಾಗಿ ಹೇಳಿದೆ. ಆಯಿತು, ಈ ರಹಸ್ಯ ಯಾರಿಗೆ ಗೊತ್ತು ? ಯಾರನ್ನು ಕೇಳಿದರೆ ಇದು ತಿಳಿಯುವುದು ?”

“ದೇವಾ ಈ ರಹಸ್ಯವನ್ನು ತಿಳಿಸಿ ಆಗುವುದೂ ಆಗಬೇಕಾದುದೂ ಯಾವುದೂ ಇಲ್ಲ. ಆದರೆ, ತಮಗೆ ಮಾತು ಕೊಟ್ಟಿರುವಂತೆ, ನಾವು ಇದನ್ನು ಹೇಳಿಯೇ ತೀರಬೇಕಾಗಿ ಹೇಳುತ್ತೇವೆ. ದೇವಗುರುಗಳೊಬ್ಬರು ಇದನ್ನು ಬಲ್ಲರು.”

“ಸರಿ.”

ಇಂದ್ರನು ಅಗ್ನಿ ವಾಯುಗಳಿಬ್ಬರಿಗೂ ಅಪ್ಪಣೆಯನ್ನಿತ್ತು ವಿಸರ್ಜಿಸಿ, ತಾನು ನೇರವಾಗಿ ಬೃಹಸ್ಪತಿಯ ಬಳಿಗೆ ಬಂದನು. ಹಠಾತ್ತಾಗಿ ಇಂದ್ರನು ಬಂದನೆಂದು ಆಚಾರ್ಯನು ತಾನಾಗಿ ಬಾಗಿಲಿಗೆ ಬಂದು ಆತನನ್ನು ಒಳಗೆ ಕರೆದುಕೊಂಡು ಹೋದನು. ಇಂದ್ರನು ಆ ಮಾತು ಈ ಮಾತು ಆಡುತ್ತ “ದೇವ, ನನಗೆ ಇಂದ್ರಪಟ್ಟವನ್ನು ಕಟ್ಟಿರುವರಲ್ಲಾ ಅದು ಪೂರ್ಣವಾಗಿದೆಯೆ ?” ಎಂದು ಕೇಳಿದನು. ಇಂದ್ರನು ಪೂರ್ಣವೆಂಬ ಶಬ್ದವನ್ನು ಪೂರ್ವಕಾಲ ಎಂಬರ್ಥದಲ್ಲಿ ಉಪಯೋಗಿಸಿದುದು ಬೃಹಸ್ಪತಿಗೆ ಅಧಿಕಾರ ಪೂರ್ಣವಾಗಿದೆಯೇ ಎಂದು ಅರ್ಥವಾಯಿತು. ಆತನು ಇಂದ್ರನನ್ನು ನೋಡಿ, “ನಿನಗೆ ಅಪಾರವಾದ ಲಾಭವಾಗಿದೆ. ಹೀಗಿರಲು ಈ ಪ್ರಶ್ನೆಯೇಕೆ ? ಇದನ್ನು ನೀನು ಕೇಳದಿದ್ದರೆ ಒಳ್ಳೆಯದು” ಎಂದನು.

“ಏಕೆ ? ಕೇಳಬಾರದೆ ?”

“ನೀನು ತಿಳಿಯಬೇಕೆಂದ ರಹಸ್ಯವನ್ನು ನಿನಗೆ ಹೇಳುವೆವು ಎಂದು ನಾವು ವರವನ್ನು ಕೊಟ್ಟಿದ್ದೇವೆಯಾಗಿ ಹೇಳಲೇಬೇಕು. ಆದರೆ ಅದನ್ನು ತಿಳಿದು ನಿನಗೆ ಆಗಬೇಕಾದುದೇನು ?”

“ಅಧಿಕಾರವು ಪೂರ್ಣವಾಗಲು ಏನು ಮಾಡಬೇಕೋ ಅದನ್ನು ಮಾಡಿರೆಂದು ತಮ್ಮನ್ನೇ ಕೇಳುವುದು.”

"ಕಾಲವನ್ನು ಕುರಿತು ಆಗಲೇ ಹೇಳಿದ್ದೇವೆ. ನೀನಾಗಿ ಮಾನವತ್ವವನ್ನು ಒಪ್ಪಿಕೊಂಡಿರುವೆಯಾಗಿ ಕಾಲದಲ್ಲಿ ಅದು ಅಪೂರ್ಣ. ಕಾಲದೃಷ್ಟಿಯಿಂದ ಅಪೂರ್ಣವಾದ ಅಧಿಕಾರವು ಎಷ್ಟು ಪೂರ್ಣವಾಗಬಹುದೋ ಅಷ್ಟನ್ನು ನಾವು ಕೊಟ್ಟೇ ಇದ್ದೇವೆ.”

“ಹಾಗಾದರೆ, ಇಂದ್ರಾಧಿಕಾರವು ನನಗೆ ಪೂರ್ಣವಾಗಿ ಬಂದಿಲ್ಲ ಎಂದಂತಾಯಿತು. ಅದು ಪೂರ್ಣವಾಗಲು ಏನಾಗಬೇಕು ? ದಯವಿಟ್ಟು ಅಪ್ಪಣೆ ಕೊಡಿಸಬೇಕು.”

ಬೃಹಸ್ಪತಿಯು ಯೋಚನಾಪರನಾದನು. “ಈತನೇಕೆ ಈ ರಹಸ್ಯವನ್ನು ಭೇದಿಸಬೇಕು ಎಂದಿರುವನು ? ಇಲ್ಲಿಯೇ ಈತನ ಪತನಬೀಜವಿದೆಯೋ? ಎನ್ನಿಸಿತು. ಆದರೆ ‘ಹೇಳದಿರುವುದು ಹೇಗೆ ? ವರವನ್ನು ಕೊಟ್ಟಾಗಿದೆ. ಹುಂ ! ಬೇಕಾದುದಾಗಲಿ, ಭವಿತವ್ಯಕ್ಕೆ ನಾನೇನು ಹೊಣೆಯೆ ?’ ಎಂದುಕೊಂಡು ಹೇಳಿದನು “ಇಂದ್ರತ್ವವು ಶಚೀಪತಿಯಾಗುವವರೆಗೂ ಪೂರ್ಣವಾಗುವುದಿಲ್ಲ”

“ಹಾಗದರೆ ಶಚಿಯು ಇಂದ್ರಾಣಿಯಲ್ಲದೆ ಇಂದ್ರಪತ್ನಿಯಲ್ಲ ?”

“ಹೌದು. ಪರಿಸ್ಥಿತಿಯಿಂದ ಹಾಗೇ ಅರ್ಥವಾಗುವುದು. ಆದರೆ ಇದುವರೆಗೆ ಇಂದ್ರನು ಬೇರೆಯಾಗಿದ್ದರೂ ಶಚಿಪತಿಯು ಬೇರಾಗಿರಲಿಲ್ಲ. ಈಗ ಶಚೀಪತಿಯು ಇಂದ್ರನೋ? ಅಥವಾ ಶಚೀದೇವಿಯು ಇಂದ್ರನ ಅಧಿಕಾರದ್ಯೋತಕವಾದ ಪ್ರತೀಕವೋ? ಅಥವಾ ಇಂದ್ರನ ಪತ್ನಿಯಾಗಿ ಆತನ ವೈಯಕ್ತಿಕ ಸಂಬಂಧ ಉಳ್ಳವಳೋ ಎಂಬುದನ್ನು ಗೊತ್ತುಮಾಡಬೇಕಾಗಿದೆ.”

“ಅದನ್ನು ಗೊತ್ತುಮಾಡುವವರು ಯಾರು ?”

“ದೇವಸಭೆ.”

“ಹಾಗಾದರೆ ದೇವಸಭೆಯನ್ನು ಸೇರಿಸಿ ಈ ಅಂಶವನ್ನು ಗೊತ್ತು ಮಾಡಿಕೊಡಬೇಕು.”

style="text-indent: 1cm;">ಸುರಾಚಾರ್ಯನು ಏನೋ ಹಿಂಸೆಗೊಳಗಾದವನಂತೆ ಹೃದಯವನ್ನು ಹಿಂಡಿಕೊಳ್ಳುತ್ತಾ “ಆಗಲಿ” ಎಂದನು.

ಇಂದ್ರನು ಅದನ್ನು ಕಂಡಾದರೂ ಆ ರಹಸ್ಯವು ಹಾಗಿರಲಿ ಎನ್ನಬಹುದಾಗಿತ್ತು; ಎನ್ನಲಿಲ್ಲ. ವಿನಯವಾಗಿ, ಗಂಭೀರವಾಗಿ ಗುರುಗಳಿಗೆ ನಮಸ್ಕಾರಮಾಡಿ, ಅವರ ಅಪ್ಪಣೆ ಪಡೆದು ಹಿಂತಿರುಗಿದನು.

ಬೃಹಸ್ಪತಿಯು ಕುಳಿತಿದ್ದೆಡೆಯನ್ನು ಬಿಡದೆ, ಕುಳಿತಲ್ಲಿಯೇ ಕುಳಿತು ಯೋಚಿಸಿದನು. ‘ಈಗ ದೇವಸಭೆಯನ್ನು ಕರೆಯುವುದೇನೋ ಆಗುವುದು. ಆದರೆ ಅಲ್ಲಿ ಸಿದ್ಧಾಂತಕ್ಕೆ ಬರುವವರು ಯಾರು ? ಅವರೂ ನನ್ನನ್ನೇ ಕೇಳುವರು. ಏನು ಹೇಳಬೇಕು ?’ ಎಂದು ಬಹಳವಾಗಿ ಯೋಚಿಸಿದನು. ಕೊನೆಗೆ ಅಲ್ಲಿಂದ ಎದ್ದು ‘ನಾನೇಕೆ ವ್ಯಥಿಸಲಿ ? ಇದು ಮಹಾವಿಷ್ಣುವಿನ ಅಪ್ಪಣೆಯಂತೆ ಆಗುತ್ತಿದೆ. ಆತನು ಒಳಗೆ ಕುಳಿತು ಏನು ಹೇಳಿಸುವನೋ ಹಾಗೆಯೇ ಹೇಳುವುದು. ಫಲಾಫಲಗಳನ್ನು ಕಾದು ನೋಡುವುದು’ ಎಂದು ಅಲ್ಲಿಂದ ಹೊರಟುಹೋದನು. ಹೋಗುವಾಗ ಆಳುಗಳನ್ನು ಕರೆದು. “ಚಿತ್ರರಥ ಗಂಧರ್ವರಾಜನನ್ನು ಬರಹೇಳು” ಎಂದು ಆಜ್ಞೆ ಮಾಡಿದನು.

ಇನ್ನೊಂದು ಗಳಿಗೆಗೆ ಚಿತ್ರರಥನು ಕಾಣಿಸಿಕೊಂಡನು. ಬೃಹಸ್ಪತಿಯು “ಗಂಧರ್ವರಾಜ ಈ ಇಂದ್ರನು ಇನ್ನೊಂದು ಗೊಂದಲವೆಬ್ಬಿಸಿದ್ದಾನೆ. ಇದೇ ಈತನ ಪತನಕ್ಕೆ ಕಾರಣವಾದೀತೋ ಏನೋ ? ಏನಾದರಾಗಲಿ, ದೇವಸಭೆಯನ್ನು ಕರೆ. ಶಚೀದೇವಿಯಿಲ್ಲದೆ ಇಂದ್ರಾಧಿಕಾರವು ಪೂರ್ಣವಾಗುವುದಿಲ್ಲ. ಅದರಿಂದ ಆಕೆಯು ಇಂದ್ರಾಣಿಯೋ ಇಂದ್ರಪತ್ನಿಯೋ ಗೊತ್ತುಮಾಡಬೇಕು” ಎಂದನು.

ಚಿತ್ರರಥನು ಏನೋ ಹೇಳುವುದಕ್ಕೆ ಹೋದನು. ದೇವಗುರುವು “ಆ ವಿಚಾರ ನಾನೂ ನೀನೂ ಚರ್ಚಿಸುವುದು ಬೇಡ. ಅದನ್ನು ದೇವಸಭೆಯೇ ವಿಚಾರಿಸಿ, ಚರ್ಚಿಸಿ ಗೊತ್ತು ಮಾಡಲಿ. ನಾವಿಬ್ಬರೂ ತಲೆಮರೆಸಿಕೊಂಡಿರುವ ಇಂದ್ರನ ಕಡೆಯವರು” ಎಂದು ಏನೋ ಬೇಸರದಿಂದ ಎಲ್ಲವನ್ನೂ ಮುಕ್ತಾಯ ಮಾಡಿದನು.

ಚಿತ್ರರಥನೂ ಏನೋ ಅಸಂತೋಷದಿಂದ “ಸರಿ” ಎಂದು ಕೈಮುಗಿದು ಆಜ್ಞವಾಹಕನಾಗಿ ಹೊರಟುಹೋದನು.

* * * *

೨೮.ಬೀಳುವುದು ಏಳುವುದಕ್ಕೆ

ಸಂಪಾದಿಸಿ

ದೇವಸಭೆಯು ದೇವಾಚಾರ್ಯನ ಅಧ್ಯಕ್ಷತೆಯಲ್ಲಿ ಸೇರಿದೆ. ಪಿತೃಗಣಗಳೂ ಋಷಿಗಣಗಳೂ ವಿಶೇಷಾಹ್ವಾನದ ಮೇಲೆ ಬಂದಿದ್ದಾರೆ. ಅಗ್ನಿ ವಾಯುಗಳು ಮಾತ್ರ ಕಾರಣಾಂತರದಿಂದ ತಾವು ಬರುವುದಕ್ಕಾಗುವುದಿಲ್ಲವೆಂದೂ, ಸಭೆಯ ನಿರ್ಣಯಗಳಿಗೆ ತಮ್ಮ ಒಪ್ಪಿಗೆಯುಂಟೆಂದೂ ಬಿನ್ನವಿಸಿಕೊಂಡಿದ್ದಾರೆ. ಸಭೆಯು ಸಕಾಲದಲ್ಲಿ ಆರಂಭವಾಯಿತು.

ಅಧ್ಯಕ್ಷರು ಎದ್ದು ಸಭೆಯನ್ನು ಸಂಬೋಧಿಸಿ, “ಮಾನ್ಯರೆ, ಇಂದು ಈ ಸಭೆಯು ಸೇರಿರುವ ಉದ್ದೇಶವು ತಮಗೆಲ್ಲ ತಿಳಿದೇ ಇದೆ. ಈಗಿನ ದೆವೇಂದ್ರನು ತನ್ನ ಅಧೀಕಾರ ಪೂರ್ಣವಾಗಿದೆಯೇ ಎಂಬ ಪ್ರಶ್ನವನ್ನು ಎತ್ತಿದ್ದಾನೆ. ಆತನು ನನ್ನನ್ನು ಕೇಳಿದಾಗ, ‘ನಾನು ಶಚೀಪತಿತ್ವವಿಲ್ಲದ ಇಂದ್ರತ್ವವು ಪೂರ್ಣವಾಗುವುದಿಲ್ಲ’ ಎಂದು ಹೇಳಬೇಕಾಯಿತು. ಹೇಳಿದೆ. ಈಗ ಆ ಇಂದ್ರತ್ವವು ಪೂರ್ಣವಾಗಬೇಕಾದರೆ ಏನು ಮಾಡಬೇಕೋ ಅದನ್ನು ಗೊತ್ತು ಮಾಡುವುದು ಈ ಸಭೆಯ ಕೆಲಸ” ಎಂದು ಹೇಳಿ ಕುಳಿತನು.

ಒಬ್ಬ ದೇವತೆಯು ಎದ್ದು ಹೇಳಿದನು : “ಇಂದ್ರಪದವಿಗೆ ಬೇಕಾದ ಅಧಿಕಾರವೂ ಗೌರವವೂ ಪೂರ್ಣವಾಗಿದೆಯೆಂದೇ ನನ್ನ ನಂಬಿಕೆ. ಪ್ರತಿದಿನವೂ ದೇವಗಂಗಾದಿಗಳು ಸ್ನಾನಕ್ಕೆ ನೀರನ್ನು ಒದಗಿಸುತ್ತಿವೆ. ಕಲ್ಪವೃಕ್ಷಗಳು ದಿನವೂ ಬೇಕಾದ ದಿವ್ಯವಸ್ತ್ರಗಳನ್ನು ತಂದೊಪ್ಪಿಸುತ್ತಿವೆ. ಚಿಂತಾಮಣಿಯು ಬೇಕಾದ ದಿವ್ಯಾಭರಣಗಳನ್ನು ತಂದು ನೀಡುತ್ತಿದೆ. ಅಪ್ಸರೆಯರು ತಮ್ಮನ್ನೇ ಒಪ್ಪಿಸಿಕೊಂಡು ಆರಾಧಿಸುತ್ತಿದ್ದಾರೆ. ಗಂಧರ್ವಗಣಗಳು ನೃತ್ಯಗೀತಾದಿ ಸೇವೆಯನ್ನು ಒಪ್ಪಿಸುತ್ತಿವೆ. ಪಿತೃಗಣಗಳು ಓಲೈಸುತ್ತಿದ್ದಾರೆ. ಋಷಿಗಣವು ಆಶೀರ್ವಾದ ಮಾಡುತ್ತಿವೆ. ಕರ್ಮಬ್ರಹ್ಮಸ್ವರೂಪನಾದ ಅಗ್ನಿಯೂ ಮಾತರಿಶ್ವನಾದ ವಾಯುವೂ ಸೇವಿಸುತ್ತಿದ್ದಾರೆ. ಇನ್ನೇನಾಗಬೇಕು ! ಮಾನವೇಂದ್ರನು ಮಹೇಂದ್ರನಾದಾಗ ಏನೇನು ಅಧಿಕಾರಗಳನ್ನು ಕೊಡಬಹುದೋ ಅದೆಲ್ಲವನ್ನೂ ಕೊಟ್ಟೇ ಇದೆ. ಅದರಿಂದ ಈ ಪ್ರಶ್ನವೇ ಏಳುವುದಿಲ್ಲ.”

ಇನ್ನೊಬ್ಬರು ಹೇಳಿದರು : “ಇಂದ್ರತ್ವವು ಪೂರ್ಣವಾಗಿದೆಯೇ ಎಂದು ಪ್ರಶ್ನೆ. ಅದಕ್ಕೆ ನಮ್ಮ ಮಿತ್ರರು ಉತ್ತರ ಕೊಟ್ಟಿದ್ದಾರೆ. ಮಾನವರು ದೇವಸಿಂಹಾಸನವನ್ನು ಏರಿದಾಗ ಏನೇನು ಕೊಡಬಹುದೋ ಅದೆಲ್ಲವನ್ನೂ ಕೊಡಲಾಗಿದೆ. ಇನ್ನು ಶಚೀಪತಿತ್ವದ ಮಾತು. ಅದು ಈ ಸಂದರ್ಭದಲ್ಲಿ ಎತ್ತಬೇಕಾಗಿಲ್ಲ. ಶಚೀದೇವಿಯು ಆ ಇಂದ್ರನ ಪತ್ನಿ. ನಾವು ದುಡುಕಿದರೆ ಅನ್ಯಪತ್ನಿಯನ್ನು ವಿನಿಯೋಗ ಮಾಡಿದ ಅಕಾರ್ಯವನ್ನು ಮಾಡಿದವರಾದೇವು.”

ಋಷಿಗಳು ಒಬ್ಬರು ಎದ್ದು ಹೇಳಿದರು : “ಈಗ ನಮ್ಮ ಮುಂದಿರುವ ಪ್ರಶ್ನವಿದು. ಇಂದ್ರತ್ವ ಪೂರ್ಣವಾಗಬೇಕಾದರೆ ಶಚೀಪತಿತ್ವವೂ ಸೇರಬೇಕು. ಇದುವರೆಗೆ ಇನ್ನೊಬ್ಬ ಇಂದ್ರನನ್ನು ನಾವು ವರಿಸಿರಲಿಲ್ಲ. ಈಗ ವರಿಸಿದ್ದೇವೆ. ಆತನ ಅಧಿಕಾರ ಪೂರ್ಣವಾಗಬೇಕು. ಶಚಿಯಿಲ್ಲದೆ ನಡೆಯುವುದಿಲ್ಲ. ಅದರಿಂದ ಈ ಶಚಿಯು ಅಧಿಕಾರಪ್ರಯುಕ್ತವಾಗಿ ಇಂದ್ರನರ್ಧ ಸಿಂಹಾಸನವನ್ನು ಪಡೆದಿರುವ ಇಂದ್ರಾಣಿಯೇ? ಅಥವಾ ಮನ್ವಂತರದ ಆದಿಯಲ್ಲಿ ಅಧಿಕಾರಕ್ಕೆ ಬಂದ ಇಂದ್ರನನ್ನು ಮದುವೆಯಾದ ಪತ್ನಿಯೇ? ಇದನ್ನು ಈಗ ಇತ್ಯರ್ಥಮಾಡಬೇಕು. ನಾನೇನೋ ‘ಶಚೀದೇವಿಯು ಅಧಿಕಾರ ಪ್ರಯುಕ್ತಳಾದವಳು. ಇಂದ್ರನ ಪಟ್ಟಕ್ಕೆ ಬಂದವರ ಸ್ವತ್ತಾಗಿರಬೇಕು’ ಎಂದು ಅಭಿಪ್ರಾಯಪಡುತ್ತೇನೆ.

ಸಭೆಯಲ್ಲಿ ಗದ್ದಲವೋ ಗದ್ದಲವಾಯಿತು. ಕೆಲವರು “ಇದು ಸ್ತ್ರೀವಿಷಯಕವಾದ ಪ್ರಶ್ನೆ. ಸ್ತ್ರೀಯನ್ನು ಒಮ್ಮೆ ವಿನಿಯೋಗ ಮಾಡಬಹುದೇ ಹೊರತು ಮತ್ತೊಮ್ಮೆ ವಿನಿಯೋಗ ಮಾಡಲು ಯಾರಿಗೂ ಅಧಿಕಾರವಿಲ್ಲ. ಆಕೆಯು ಬೇಕಾದರೆ, ತನ್ನ ಮೇಲೆ ಇತರರದು ಏನೂ ಅಧಿಕಾರವಿಲ್ಲವೆಂದು ಸ್ಪಷ್ಟವಾದ ಮೇಲೆ, ತನ್ನನ್ನು ತಾನು ತನ್ನಿಚ್ಛೆಯಂತೆ ವಿನಿಯೋಗಿಸಿಕೊಳ್ಳಬಹುದು. ಆದರದು ಕಾಮ ವಿನಿಯೋಗವಾಗುವುದೇ ಹೊರತು ಧರ್ಮವಾಗುವುದಿಲ್ಲ” ಎಂದರು.

ಇನ್ನೊಬ್ಬರು ಎದ್ದು ಹೇಳಿದರು : “ಇಲ್ಲಿ ಧರ್ಮಕಾಮಗಳ ಪ್ರಸ್ತಾಪವಿಲ್ಲ. ಅಧಿಕಾರವು ಅರ್ಥಸ್ಥಾನ. ಶಚಿಯು ಆ ಸ್ಥಾನಕ್ಕೆ ಬದ್ಧಳಾಗಿದ್ದರೆ ಆ ಸ್ಥಾನಕ್ಕೆ ಬಂದವರಿಗೆಲ್ಲ ಆಕೆಯಿಂದ ಸೇವೆಯು ಸಲ್ಲಬೇಕು. ಹಾಗಿಲ್ಲದೆ, ಆಕೆಯು ಇಂದ್ರನ ಧರ್ಮಪತ್ನಿಯಾದರೆ ಆ ಮಾತೇ ಬೇರೆ. ಅದನ್ನು ಗೊತ್ತುಮಾಡಿ.”

ಸಭೆಯಲ್ಲಿ ದೀರ್ಘಕಾಲದ ಚರ್ಚೆಯಾಯಿತು. ಕೊನೆಗೆ “ಶಚಿಯು ಅಧಿಕಾರ ಸ್ಥಾನಬದ್ಧಳು. ಅದರಿಂದ ಶಚೀಪತಿತ್ವವೆನ್ನುವುದು ಅಧಿಕಾರ ಸಂಕೇತವೇ ಹೊರತು ಮತ್ತೇನೂ ಅಲ್ಲ. ಅದರಿಂದ ಶಚೀದೇವಿಯು ಹೊಸ ಇಂದ್ರನನ್ನು ಕಾಯೇನ ವಚಸಾ ಮನಸಾ ಸೇವಿಸಲೇಬೇಕು” ಎಂದು ಗೊತ್ತಾಯಿತು.

ದೇವಗುರುವು ಇಷ್ಟವಿಲ್ಲದಿದ್ದರೂ ಸಭೆಯ ನಿರ್ಣಯವನ್ನು ಅಂಗೀಕರಿಸಬೇಕಾಯಿತು. ಸಭೆಯು ಈ ನಿರ್ಣಯವನ್ನು ಹೊಸ ಇಂದ್ರನಿಗೂ ಶಚೀದೇವಿಗೂ ಕಳುಹಿಸುವ ಭಾರವನ್ನು ದೇವಗುರುಗಳಿಗೆ ಒಪ್ಪಿಸಿತು. ಹಾಗೆಯೇ ಆ ನಿರ್ಣಯದಂತೆ ವ್ಯಕ್ತಿಗಳು ನಡೆಯುವಂತೆ ನೋಡಿಕೊಳ್ಳುವ ಭಾರವನ್ನೂ ಆತನಿಗೇ ವಹಿಸಿತು.

ಬೃಹಸ್ಪತಿಯು ಚಿಂತಾಭಾರದಿಂದ ಕುಗ್ಗಿದವನಂತೆ ನಿಧಾನವಾಗಿ ಮಂದಿರಕ್ಕೆ ಬಂದನು. ಆತನಿಗೆ ಆವೊತ್ತು ರಥವೇರಿ ಬರುವುದಕ್ಕೂ ಇಷ್ಟವಿಲ್ಲ. ದಾರಿಯುದ್ದಕ್ಕೂ ಒಂದೇ ಯೋಚನೆ; “ಛೇ, ಅವಿವೇಕವಾಯಿತು. ಈಗ ಶಚಿಯನ್ನೇನೋ ದೇವಸಭೆಯು ಇಂದ್ರನಿಗೆ ಕೊಟ್ಟುಬಿಟ್ಟಿತು. ಆದರೆ ಆಕೆ ಒಪ್ಪುವಳೇ? ಆಕೆಯು ಆಗುವುದಿಲ್ಲವೆಂದರೆ ಸಭೆಯ ನಿರ್ಣಯವೇನಾಗಬೇಕು? ಏನು ದನವೇ? ಹೊಡೆದು, ಬಡಿದು, ಎಳೆದುಕೊಂಡು ಹೋಗಿ ಮತ್ತೊಂದು ಮನೆಯಲ್ಲಿ ಕಟ್ಟಿ ಬರೋಣವೆನ್ನುವುದಕ್ಕೆ ? ನಿಜವಾಗಿಯೂ ಇದರಿಂದ ಏನೋ ಅನರ್ಥವಾಗಲಿದೆ. ಅಥವಾ ನಾನೇಕೆ ಇಷ್ಟು ಯೋಚಿಸಲಿಲ್ಲ? ಎಲ್ಲರ ಹೃದಯದಲ್ಲೂ ಕುಳಿತು ಆಟವಾಡಿಸುವ ಆ ಮಹಾವಿಷ್ಣುವಿನದು ಈ ಕೆಲಸ. ಆತನು ಮಾಡಿದಂತಾಗಲಿ.”

ಹೋಗುತ್ತಿದ್ದ ದೇವಾಚಾರ್ಯನು ಹಾಗೆಯೇ ನಿಂತನು : “ತಡೆ, ಇದನ್ನೇ ಏಕೆ ಹಳೆಯ ಇಂದ್ರನನ್ನು ಹಿಂತಿರುಗಿ ಕರೆದು ತರಲು ಉಪಯೋಗಿಸಿ ಕೊಳ್ಳಬಾರದು! ಹೌದು. ಶಚಿಯು ಏನಾದರೂ ಮಾಡಿ ಈ ಇಂದ್ರನಿಂದ ಒಂದು ಅವಧಿಯನ್ನು ಪಡೆಯಬೇಕು. ಅಷ್ಟರೊಳಗೆ ಇಂದ್ರನೆಲ್ಲಿರುವನೋ ಕಂಡುಹಿಡಿಯಬೇಕು. ಆತನು ಮತ್ತೆ ಪವಿತ್ರನಾಗುವಂತೆ, ಆತನಿಗೆ ಈಗ ಬಂದಿರುವ ಹತ್ಯೆಯಿಂದ ಬಿಡುಗಡೆಯಾಗುವಂತೆ ಏನಾದರೂ ಮಾಡಿಸಬೇಕು. ಆದರೆ, ಇದು ನನಗೆ ಏನೂ ತಿಳಿಯದಂತೆ ಇರಬೇಕು. ಇಲ್ಲವಾದರೆ ಈ ಇಂದ್ರನು ಕೇಳಿದರೆ ಹೇಳಲೇಬೇಕಾಗುವುದು ಸರಿ” ಎಂದು ತಲೆದೂಗುತ್ತ ಮತ್ತೆ ಉತ್ಸಾಹಗೊಂಡು ಮಂದಿರಕ್ಕೆ ಬಂದನು.

ಆತನು ಮಂದಿರಕ್ಕೆ ಬರುತ್ತಿದ್ದ ಹಾಗೆಯೇ ಪ್ರಹರಿಯು ಬಂದು ವಂದಿಸಿ “ಶಚೀದೇವಿಯು ದರ್ಶನಕ್ಕೆ ಬಂದಿದ್ದಾರೆ” ಎಂದನು. ಬೃಹಸ್ಪತಿಯು “ಒಳ್ಳೆಯದಾಯಿತು” ಎಂದು ನೇರವಾಗಿ ಆಕೆಯನ್ನು ನೋಡಲು ಹೋದನು.

ಶಚೀದೇವಿಯು ಇಂದ್ರನು ಓಡಿಹೋದಾಗಿನಿಂದ ಭೂಮಿಗೆ ಇಳಿದು ಹೋಗಿದ್ದಳು. ದೇವತೆಗಳು ಇಂದ್ರನನ್ನು ಪಿಶಾಚಗ್ರಸ್ಥರಾದಂತೆ ಹುಡುಕಿದುದು, ಮೂರು ಲೋಕಗಳಲ್ಲಿಯೂ ಆತನೆಲ್ಲಿರುವನು ಎಂಬ ಗುರುತೂ ಸಿಕ್ಕುದುದು, ಅಗ ಯತ್ನವಿಲ್ಲದೆ ದೇವರ್ಷಿಪಿತೃಗಣಗಳು ಇನ್ನೊಬ್ಬ ಇಂದ್ರನನ್ನು ಅರಸಿ ತಂದು ಆತನಿಗೆ ಇಂದ್ರಾಭಿಷೇಕ ಮಾಡಿದುದು, ಆತನು ಅಧಿಕಾರಪೂರ್ಣತೆಯನ್ನು ಬಯಸಿದುದು, ಇಷ್ಟೂ ಆಕೆಗೆ ಗೊತ್ತು. ಆಕೆಯು ಅಂತಃಪುರವನ್ನು ಬಿಟ್ಟು ಈಚೆಗೆ ಬರದಿದ್ದರೂ ಇಂದಿನ ದೇವಸಭೆಯಲ್ಲಿ ನಿರ್ಣಯವಾಗುತ್ತಿದ್ದ ಹಾಗೆಯೇ ಆಕೆಗೆ ತಿಳಿದಿದೆ. ಶಚಿಯಾದರೂ ಮೂರು ಲೋಕದ ಒಡೆಯನ ಒಡತಿಯಾದರೂ, ಆಕೆಯು ಹೆಣ್ಣಲ್ಲವೆ ? ಆದ ನಿರ್ಣಯವನ್ನು ಕೇಳಿ ಆಕೆಗೆ ಎದೆ ಒಡೆದಂತಾಯಿತು. ‘ತಾನು ಇನ್ನೊಬ್ಬನನ್ನು ಸೇವಿಸಬೇಕೆ ? ಹಾಗೆಂದು ವಿಧಿಸುವವನೂ, ಆ ವಿಧಿಯು ಆಚರಣಕ್ಕೆ ಬರುವಂತೆ ನೋಡಿಕೊಳ್ಳುವವನೂ ದೇವಗುರು ! ಯಾವ ಗುರುವನ್ನು ತಾವು ಇಂದ್ರದಂಪತಿಗಳು ದಿನವೂ ಅರ್ಚಿಸುತ್ತಿದ್ದರೋ, ಆತನಿಂದು ತನ್ನನ್ನು ಇನ್ನೊಬ್ಬನಿಗೆ ವಿನಿಯೋಗ ಮಾಡಲು ಕರ್ತ ! ಅಯ್ಯೋ ನನ್ನ ಹಣೆಯಲ್ಲಿ ಏನು ಬರೆಯಿತು?”

ಬೃಹಸ್ಪತಿಯನ್ನು ಕಂಡು ಶಚಿಯು ಮತ್ತೆ ಗೊಳೋ ಎಂದು ಅತ್ತಳು. ದೇವಾಚಾರ್ಯನು ಆಕೆಯ ಕಣ್ಣಲ್ಲಿ ನೀರು ಬಂದಿದ್ದುದನ್ನು ನೋಡಿರಲಿಲ್ಲ. ಆತನಿಗೂ ಕಣ್ಣಲ್ಲಿ ನೀರು ಬಂತು. “ಶಚೀದೇವಿ, ನೀನು ನನಗೆ ಮಗಳಂತೆ ! ನೀನು ಕಣ್ಣೀರು ಬಿಡುವುದನ್ನು ನಾನು ನೋಡಲಾರೆ. ದೇವಸಭೆಯು ದುಡುಕಿದೆ. ಅದನ್ನು ಸರಿಮಾಡೋಣವಂತೆ, ನೀನು ಅಳಬೇಡ” ಎಂದು ಸಮಾಧಾನ ಹೇಳಿದನು.

ಶಚಿಯು ಕಣ್ಣೀರು ಒರೆಸಿಕೊಂಡು ಬಿಕ್ಕಳಿಸುತ್ತಾ ಕೇಳಿದಳು : “ದೇವಸಭೆಯು ದೇವರಾಜನ ಅಧಿಕಾರ ಪೂರ್ಣವಾಗುವುದನ್ನು ಮಾತ್ರ ನೋಡಿತು. ನಾನು ಸ್ತ್ರೀ, ನನಗೆ ಪ್ರತ್ಯೇಕವಾದ ಅಧಿಕಾರವೊಂದಿದೆಯೆಂಬುದನ್ನು ಮಾತ್ರ ಗಮನಿಸಲಿಲ್ಲ.”

ದೇವಗುರುವು ವಿಷಣ್ಣನಾಗಿ ಹೇಳಿದನು : “ಅಮ್ಮಾ ಈ ಸಭೆಗೆ ನಾನು ಅಧ್ಯಕ್ಷನಾಗಬಾರದಿತ್ತು. ಯತ್ನವಿಲ್ಲ. ನಡೆದುಹೋಯಿತು. ಚಿಂತಿಸಬೇಡ, ಆ ನಿರ್ಣಯದಿಂದ ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ.”

ಶಚೀದೇವಿಗೆ ಅರ್ಧ ಧೈರ್ಯವಾಯಿತು. ಆದರೂ ಕೋಪವಿಳಿದಿಲ್ಲ. “ದೇವ ಸಭೆಯನ್ನು ಕರೆಯಬೇಕೇಕೆ? ಅಲ್ಲಿ ನಿರ್ಣಯವನ್ನು ಮಾಡಿಸಬೇಕೇಕೆ? ಅನಂತರ ಅದರಿಂದ ‘ನಿನಗೆ ಹಾನಿಯಾಗದಂತೆ ನೋಡಿಕೊಳ್ಳೋಣ’ ಎಂಬ ಮಾತೇಕೆ? ಮೊದಲೇ ದೇವಸಭೆಯಲ್ಲಿ ನಿರ್ಣಯವೇ ಆಗದಂತೆ ತಡೆಯಬಾರದಾಗಿತ್ತೆ? ಅಥವಾ ದೇವಸಭೆಯೇ ಸೇರದಂತೆ ನೋಡಿಕೊಳ್ಳಬಾರದಾಗಿತ್ತೆ?” ಎಂದು ಆಕೆಯ ಸಂಕಟ. ಬಹುದಿನದಿಂದ ತಾನೂ ತನ್ನೊಡೆಯನೂ ಗೌರವಿಸುತ್ತಿದ್ದಾತನಲ್ಲಿ ಈ ಮಾತನ್ನು ಕಂಠೋಕ್ತವಾಗಿ ಹೇಳಿ ನಿಷ್ಠುರಪಡಿಸುವುದೆಂತು? ಆದರೂ ಆತನನ್ನೇ ನೋಡುತ್ತಿರುವ ಕಣ್ಣು ಏನೇನೋ ಹೇಳುತ್ತಿತ್ತು.

ಆತನೂ ನೆಲವನ್ನು ನೋಡುತ್ತ ಕುಳಿತಿದ್ದಾನೆ. ಏನೋ ಯೋಚನೆಯಲ್ಲಿ ಅನ್ಯಮನಸ್ಕನಾಗಿದ್ದಾನೆ. ಇಲ್ಲದಿದ್ದರೆ ಶಚೀದೇವಿಯ ಯೋಚನೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಿದ್ದನೋ ಏನೋ? ಅಂತೂ ಇಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ.

ಕೊನೆಗೆ ದೇವಗುರುವು ಮಾತನಾಡಿ : “ದೇವಿ, ಅದರ ಇತ್ಯರ್ಥವು ನಿನ್ನ ಕೈಯ್ಯಲ್ಲಿದೆ. ನಾನು ಏನೂ ತಿಳಿಯದವನಂತೆ ನಿರ್ಣಯವನ್ನು ನಿನಗೂ ಆತನಿಗೂ ಕಳುಹಿಸಿಕೊಡುತ್ತೇನೆ. ನೀನು ನಿರ್ಣಯವನ್ನು ತೆಗೆದುಕೊಂಡು ಆತನ ಬಳಿಗೆ ಹೋಗು. ಆತನಿಗೆ ಹೇಳು : ‘ಇದುವರೆಗೂ ನಾನು ಹಳೆಯ ಇಂದ್ರನನ್ನು ಗಂಡನೆಂದೇ ವ್ಯವಹಾರ ಮಾಡಿದ್ದೇನೆ. ಅದರಿಂದ, ನಾನು ನನ್ನನ್ನು ಯಥೇಚ್ಛವಾಗಿ ವಿನಿಯೋಗಿಸಿಕೊಳ್ಳಬಹುದು. ಆದರೆ, ಧರ್ಮಶಾಸ್ತ್ರದ ಅಡ್ಡಿಯೊಂದಿದೆ. ಸ್ತ್ರೀಯು ದೇಶಾಂತರಗತನಾದ ಪುರುಷನಿಗಾಗಿ ಎಷ್ಟು ದಿನ ಕಾಯಬೇಕು ಎಂದು ಶಾಸ್ತ್ರ ಹೇಳುವುದೋ ಅಷ್ಟು ದಿನ ಕಾದು ನೋಡುವುದಕ್ಕೆ ಅಪ್ಪಣೆಯಾಗಬೇಕು’ ಎಂದು ನಮಸ್ಕರಿಸು, ಆತನು ತಪ್ಪದೆ ಆಗಲೆನ್ನುವನು. ಅಷ್ಟರೊಳಗೆ ವಿಶ್ವಪ್ರಯತ್ನಮಾಡಿ ನಮ್ಮ ಇಂದ್ರನನ್ನು ಹುಡುಕಿಸೋಣ.”

ಶಚಿಗೆ ಮನಸ್ಸು ಏನೋ ಹಗುರವಾದಂತಾಯಿತು. ಆದರೂ ಇನ್ನೂ ಬೆದರಿಕೆ ತಪ್ಪಲಿಲ್ಲ. ಕೇಳಿದಳು : “ಒಂದು ವೇಳೆ ಆತನು ದುಡುಕಿದರೆ? ಹುಡುಕಿದರೂ ಇಂದ್ರನು ಸಿಕ್ಕದೆ ಹೋದರೆ?”

ಬೃಹಸ್ಪತಿಯು ಧೀರಭಾವದಿಂದ ಹೇಳಿದನು : “ಧರ್ಮವನ್ನು ಮೀರುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಧರ್ಮದಿಂದಲೇ ಎಲ್ಲವೂ ನಿಂತಿರುವುದು. ಮಹಾವಿಷ್ಣುವನ್ನು ನಾವು ಪೂಜಿಸುವುದು ಧರ್ಮಮಯನೆಂದು. ನೀನು ಹೋಗುವಾಗ ಲಕ್ಷ್ಮೀನಾರಾಯಣನನ್ನು ಪೂಜೆಮಾಡಿ ಹೋಗು. ಆತನು ನೀನು ಹೇಳಿದ ಹಾಗೆ ಕೇಳುವನು. ಅದಕ್ಕಿಂತಲೂ ನೀನು ಹೇಳಿದ ಎರಡನೆಯ ವಿಷಯ ಹೆಚ್ಚು ಗಂಭೀರವಾದುದು. ಬೇಡ ಎಂದಾಗ ತಲೆಮರೆಸಿಕೊಳ್ಳುವುದು ದೇವತೆಗಳಲ್ಲಿ ಹುಟ್ಟುತ್ತಲೆ ಬಂದಿರುವ ಶಕ್ತಿ. ಆದರೆ, ಮರೆಯಾಗಿರುವವರನ್ನು ಕಂಡುಹಿಡಿಯಲು ಏನು ಮಾಡಬೇಕು ಎಂಬುದು ಇಂದ್ರನಿಗೆ ಮಾತ್ರ ಗೊತ್ತು. ಆತನೇ ತಪ್ಪಿಸಿಕೊಂಡಿರಲು, ಇನ್ನು ಯಾರನ್ನು ಕೇಳುವುದು? ಅದನ್ನು ಯೋಚಿಸಬೇಕಾದುದು.”

ಶಚಿಗೆ ಥಟ್ಟನೆ ಇಂದ್ರನು ಹೇಳಿದ್ದ ಮಾತು ನೆನಪಾಯಿತು. ಆದರೆ ಆತನು ಹೇಳಿರುವ ರಹಸ್ಯವನ್ನು ಆತನಪ್ಪಣೆಯಿಲ್ಲದೆ ಇತರರಿಗೆ ಹೇಳುವುದೆಂತು? ಅದರಿಂದ ಅದನ್ನು ಮುಚ್ಚಿಕೊಳ್ಳಲು, “ಬೇಕಾದರೆ ನಾನೇ ಹುಡುಕಲು ಹೋಗುವೆನು. ನನ್ನ ಮೇಲಿನ ಅಭಿಮಾನದಿಂದಲಾದರೂ ಆತನು ಪ್ರಕಟವಾಗುವನೇನೋ ನೋಡೋಣ.” ಎಂದಳು.

ಬೃಹಸ್ಪತಿಯು ತನ್ನ ಸಲಹೆಯನ್ನು ಶಚೀದೇವಿಯು ಒಪ್ಪಿಕೊಂಡಿರುವಳೆಂದು ಸಂತೋಷಿತವಾಗಿ, “ನೀನು ಸೌಭಾಗ್ಯವತಿ. ನಿಮ್ಮಂಥವರಿಗೆ ಬಂದ ಕಷ್ಟಗಳು ಬಹುಕಾಲವಿರುವುದಿಲ್ಲ ಇರಲಿ, ನೋಡೋಣ. ನಮ್ಮ ಕೈಯಲ್ಲಾಗದಾಗ ಚತುರ್ಮುಖನ ಮೊರೆ ಹೊಕ್ಕರಾಯಿತು” ಎಂದನು.

ಶಚಿಯು ಧೈರ್ಯವಾಗಿ ನಕ್ಕಳು.

* * * *

೨೯.ಎರಡು ತೂಕದ ಕತ್ತಿ

ಸಂಪಾದಿಸಿ

ನೂತನ ದೇವೇಂದ್ರನು ದರ್ಶನಮಂದಿರದಲ್ಲಿ ವಿರಜಾದೇವಿಯೊಡನೆ ಶಚೀದೇವಿಗಾಗಿ ಕಾಯುತ್ತಿದ್ದಾನೆ. ಆಕೆಯು ಇಂದ್ರದರ್ಶನಕ್ಕೆ ಬರುವುದಾಗಿ ಹೇಳಿ ಕಳುಹಿಸಿದ್ದಾಳೆ. ಇಂದ್ರನಿಗೆ ಆಶ್ಚರ್ಯ. “ಹಿಂದಿನ ಇಂದ್ರನು ಹೊರಟು ಹೋದಂದಿನಿಂದ, ಅವನು ಅದೃಶ್ಯನಾದ ವೇಳೆಯಿಂದ, ಆತನಿಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತ, ಅಂತಃಪುರವನ್ನು ಬಿಟ್ಟು ಈಚೆಗೇ ಬರದಿದ್ದವಳು, ಈ ದಿನ ಇಲ್ಲಿಗೆ ಬರುವಳೇ? ಆಕೆಯು ದೇವಸಭೆಯ ನಿರ್ಣಯವನ್ನು ನಿಜವಾಗಿ ಗೌರವಿಸುವಳೆ? ಆ ಗರ್ವಗಂಧಿನಿಯು ಹೊಸ ಇಂದ್ರನನ್ನು ಸೇವಿಸಲು ಒಪ್ಪುವಳೆ? ಅಥವಾ ದೇವಸಭೆಯ ನಿರ್ಣಯವು ಶಿರೋಧಾರ್ಯವೆಂದು, ಒಪ್ಪಲೇಬೇಕಾದುದೆಂದು, ಅದನ್ನು ಗೌರವಿಸಲು ತನ್ನ ವೈಯಕ್ತಿಕ ಭಾವನೆಗಳನ್ನೆಲ್ಲ ಹತ್ತಿಟ್ಟು ಸಿದ್ಧವಾಗಿರುವಳೇ?” ಹಾಗೆಯೇ ಆತನ ಭಾವನೆಗಳೆಲ್ಲ ವಿಸ್ಮಯದಿಂದ ಕೂಡಿ, ಆತನನ್ನು ಎಲ್ಲಿಯೋ ಹೊತ್ತುಕೊಂಡು ಹೋಗುತ್ತಿವೆ.

ವಿರಜಾದೇವಿಯೂ ಈ ಸುದ್ದಿಯನ್ನು ಕೇಳಿ ವಿಸ್ಮಿತಳಾಗಿದ್ದಾಳೆ. ಆಕೆಯು ಶಚಿಹೃದಯದ ಸ್ಥಿತಿಯನ್ನು ಊಹಿಸಬಲ್ಲಳು. ಹೆಣ್ಣು ತನ್ನ ಹೆಣ್ಣುತನವನ್ನು ಬಿಟ್ಟು ತನ್ನ ಕೈಹಿಡಿದವನನ್ನು, ತನ್ನನ್ನು ಹೆಣ್ಣೆಂದು ಮೊದಲ ಸಲ ತೋರಿಸಿಕೊಟ್ಟು ತನ್ನ ಬಾಳಿಗೊಂದು ಪೂರ್ಣತೆಯನ್ನು ಕೊಟ್ಟು ಗೌರವಿಸಿದವನನ್ನು ಬಿಟ್ಟು ಪರಪುರುಷನನ್ನು ಓಲೈಸಲು ಸಿದ್ಧಳಾಗುವಳೆಂದು ನಂಬಲೂಲಾರಳು. ಅಲ್ಲದೆ ಆಕೆಗೆ ಇನ್ನೂ ಒಂದು ಯೋಚನೆ : “ಎಷ್ಟೇ ಆಗಲಿ, ಶಚಿಯು ಪರಸ್ತ್ರೀಯಲ್ಲವೆ? ತನ್ನ ಗಂಡನು, ಆಕೆಯನ್ನು ಏನೇ ಕಾರಣದಿಂದಾಗಲಿ ಕೈ ಹಿಡಿದರೆ, ಆತನಿಗೆ ಈ ಪದವಿ, ಐಶ್ವರ್ಯಗಳು ಉಳಿಯುವುದೇ? ಆತನಿಗೇಕೆ ಈ ಯೋಚನೆ ಬಂತು?”

ಬಹುದಿನದ ಸಹವಾಸದಿಂದ ಉಂಟಾಗುವ ಅಭಿಮಾನ ಸಾಮೀಪ್ಯ ಮಮತೆಗಳಿಂದ ಆಕೆಯು ಗಂಡನನ್ನು ಕೇಳಿಯೂಬಿಟ್ಟಳು : “ದೇವ, ಇದುವರೆಗೂ ತಮಗೆ ಇಲ್ಲದ ಸ್ತ್ರೀ ಚಾಪಲ್ಯವು ಈಗೇಕೆ ಬಂತು ?”

ಇಂದ್ರನು ಏನೋ ಯೋಚನೆಯಲ್ಲಿದ್ದನು. ವಿರಜಾದೇವಿಯಾಡಿದ ಮಾತನ್ನು ಕೇಳಿ ಅವನು ಬೆಚ್ಚಿದನು : “ಇಲ್ಲ ದೇವಿ, ನನಗೆ ಯಾವಾಗಲೂ ಸ್ತ್ರೀ ಚಾಪಲ್ಯವಿಲ್ಲ ವಲ್ಲ” ಎಂದನು.

“ಹಾಗಾದರೆ ಈಗ ಈ ಶಚೀಪ್ರಸಂಗವೇನು?”

“ಇದೇ ವಿಚಿತ್ರವಾಯಿತು ದೇವಿ. ನಾನು ಅಧಿಕಾರ ಪೂರ್ಣವಾಗಿದೆಯೇ ಎಂದು ಪ್ರಸಂಗವಶವಾಗಿ ಕೇಳಿದೆ. ನನ್ನ ಅಭಿಪ್ರಾಯವಿದ್ದುದು ‘ನನ್ನ ಮತರ್ಯ್‌ತ್ವವನ್ನು ತೆಗೆದಿದ್ದೀರಾ? ನಾನು ಕೊನೆಯವರೆಗೂ ಇಂದ್ರನಾಗಿರುವೆನೆ?’ ಎಂದು. ದೇವಗುರುಗಳು ಅದಕ್ಕೆ ‘ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು ಪೂರ್ಣವಾಗುವುದಿಲ್ಲ’ ಎಂದರು. ನಾನು ಮಾತಿನ ಭರದಲ್ಲಿ ‘ಹಾಗಾದರೆ ಅಧಿಕಾರವನ್ನು ಪೂರ್ಣಮಾಡಿಕೊಡಿ’ ಎಂದೆ. ಅದು ಇಷ್ಟೆಲ್ಲ ರಾದ್ಧಾಂತಕ್ಕಿಟ್ಟುಕೊಂಡಿದೆ. ಇದು ಹೇಗೆ ಮುಗಿಯುವುದೋ ನೋಡಬೇಕು.”

“ಶಚೀದೇವಿಯು ಹೇಳಿಕಳುಹಿಸಿರುವುದನ್ನು ನೋಡಿದರೆ, ಆಕೆಯು ಒಪ್ಪುವಂತಿದೆಯಲ್ಲಾ? ಒಪ್ಪಿದರೆ ಏನು ಮಾಡುವಿರಿ?”

“ಅದೆ ನನ್ನ ಧರ್ಮಸಂಕಟ. ಆಕೆಯು ಒಪ್ಪಿದರೂ ಕಾರ್ಯ ಕೆಟ್ಟಿತು. ಇದುವರೆಗೆ ದೇವಲೋಕದ ಅಪ್ಸರೆಯರನ್ನು ಅವರು ಲಭ್ಯವಾಗಿದ್ದರೂ ಕಣ್ಣೆತ್ತಿಯೂ ನೋಡದ ನಾನು ಶಚಿಯನ್ನು ಹೇಗೆ ಒಪ್ಪಿಕೊಳ್ಳಲಿ? ಆಕೆಯು ಒಪ್ಪಿಕೊಳ್ಳದಿದ್ದರೆ ದೇವಋಷಿಪಿತೃಗಳೆಲ್ಲ ನನ್ನನ್ನು ಹಂಗಿಸುವರಲ್ಲಾ ಏನು ಮಾಡಲಿ? ಇದೆ ನನಗೆ ಯೋಚನೆಯಾಗಿದೆ.”

ವಿರಜಾದೇವಿಗೆ ತನ್ನ ಗಂಡನು ಮತ್ತೆ ಯಾವ ಸ್ತ್ರೀಯನ್ನೂ ಕಾಮುಕನಾಗಿ ನೋಡಲಿಲ್ಲವೆಂದು ಏನೋ ಒಂದು ಹೆಮ್ಮೆ. ಈ ಶಚೀಪ್ರಸಂಗವು ಎರಡು ತೂಕದ ಕತ್ತಿಯಾಗಿದ್ದು ಹಾಗೂ ಕತ್ತರಿಸುವುದು, ಹೀಗೂ ಕತ್ತರಿಸುವುದು. ಮುಂದೇನಾಗುವುದೋ ಎಂದು ದಿಗಿಲು. ಆದರೂ ತನ್ನ ಗಂಡನು ಮನಃಪೂರ್ವಕವಾಗಿ ಆಕೆಯನ್ನು ಬಯಸಿಲ್ಲವೆಂದು ಒಂದು ಸಮಾಧಾನ. ಅದೇ ಏನು ಹೆಣ್ಣು ಹೃದಯ? ತಾನೊಲಿದಿರುವ ಗಂಡು ಇನ್ನೊಂದು ಹೆಣ್ಣನ್ನು ಬಯಸಿಲ್ಲ ಎಂದರೆ ಏಕೆ ಸಮಾಧಾನವಾಗಬೇಕು?

ಅಂತೂ ಇನ್ನೆರಡು ಸಲ ಅವರು ನಿಟ್ಟುಸಿರುಬಿಡುವುದರೊಳಗಾಗಿ ಶಚೀದೇವಿಯು ಬಂದಳು. ಇಂದ್ರಾಣಿಯೆಂದು ಆಡಂಬರವೇನೂ ಇಲ್ಲ. ಶಾಂತಿದೂತನಂತೆ ಬಿಳಿಯ ವಸ್ತ್ರವನ್ನುಟ್ಟಿದ್ದಾಳೆ. ಆ ವಸ್ತ್ರವು ಆಕಾಶಮಾರ್ಗದಲ್ಲಿ ಚಂದ್ರಮನ ಐಸಿರಿಯು ದಿಗಂತಗಳವರೆಗು ವ್ಯಾಪಿಸಿ ಶೋಭಿಸುತ್ತಿರುವಾಗ ಮೆರೆಯುವ ನಕ್ಷತ್ರಪಥದಂತೆ ವಜ್ರಕಣವಿಶೋಭಿತವಾಗಿದೆ. ಕೆನೆಯ ಬಣ್ಣದ ರವಿಕೆಯನ್ನು ಧರಿಸಿದ್ದಾಳೆ. ಅದರ ಮೇಲೆ ಚುಮಕಿಸಿದಂತೆ ಕೆತ್ತಿರುವ ನವರತ್ನಗಳು ಮೃಗಶಿರಾ ನಕ್ಷತ್ರಪುಂಜದಂತೆ ಥಳಥಳ ಎನ್ನುತ್ತಿವೆ. ಕಿವಿಯಲ್ಲಿರುವ ವಜ್ರದ ಓಲೆಗಳು ಪುನರ್ವಸು ಪುಂಜದ ಯೋಗತಾರೆಯಂತೆ, ಎರಡು ದೀಪಗಳನ್ನು ಇಟ್ಟಂತೆ ಬೆಳಗುತ್ತಿವೆ. ಕೊರಳಲ್ಲಿ ಕಟ್ಟಿಕೊಂಡಿರುವ ತಾಳಿಯು ತನ್ನ ಸುತ್ತಲೂ ಇರುವ ಜೀವರತ್ನಗಳಿಗಿಂತ ಪ್ರಕಾಶವಾಗಿ ಮೆರೆಯುತ್ತಿವೆ. ಕೈಯಲ್ಲಿರುವ ರತ್ನದ ಬಳೆಗಳು ಜಂಗಮ ದೇಹಕಾಂತಿಯಂತೆ ಹೊಳೆಯುತ್ತಿವೆ. ಎಡಗೈಯ ಬೆರಳಿನಲ್ಲಿ ಹರಳಿನುಂಗುರವೊಂದು. ಇದರ ಹರಳು ಪೂರ್ವಾಕಾಶದಲ್ಲಿ ಚಂದ್ರನಿಲ್ಲದಿರುವಾಗ ಮೆರೆಯುವ ಸ್ವಾತೀ ನಕ್ಷತ್ರದಂತೆ ವಿರಾಜಿಸುತ್ತಿದೆ. ನಡುವಿನಲ್ಲಿ ಒಂದು ಸಿಂಹ ಮೇಖಲೆ. ತಲೆಯ ಮೇಲೆ ಧರಿಸಿದ ರತ್ನಕಿರೀಟವೂ, ಹಣೆಯ ಮೇಲಿರುವ ಜೀವರತ್ನವೂ, ಹೊದ್ದಿರುವ ವಿದ್ಯುನ್ಮಾಲಾ ಸುಂದರವಾದ ತೆಳುಮೋಡದಂತಿರುವ ಹೊದಿಕೆಯು ಆಕೆಯ ಅಂತಸ್ತನ್ನು ಉದ್ಘೋಷಿಸುತ್ತಿವೆ. ಪ್ರಹರಿಯು ಆಕೆಯನ್ನು ರಾಜಸನ್ನಿಧಾನದಲ್ಲಿ ಬಿಟ್ಟು ನೆಲಮುಟ್ಟಿ ಪ್ರಣಾಮ ಮಾಡಿ ಬಾಗಿಲಿನಿಂದಾಚೆಗೆ ಹೋದಳು.

ಶಚೀದೇವಿಯು ಇಂದ್ರನಿಗೆ ಬಗ್ಗಿ ಪ್ರಣಾಮ ಮಾಡಿದಳು. ವಿರಜಾದೇವಿಯತ್ತ ತಿರುಗಿ ಪ್ರಣಾಮ ಮಾಡುವುದರೊಳಗಾಗಿ ಆಕೆಯೇ ಬಂದು ಶಚೀದೇವಿಯನ್ನು ಆಲಿಂಗಿಸಿ, “ದೇವಿಗೆ ಜಯವಾಗಲಿ ! ನಿನ್ನನ್ನು ಪೂಜಿಸಿ, ನಿನ್ನ ಕೃಪೆಯಿಂದ ದೊಡ್ಡವರಾದವರು ನಾವು. ನಮಗೆ ಆಶೀರ್ವಾದ ಮಾಡಬೇಕು ತಾಯಿ !” ಎಂದು ವಿನಯವಾಗಿ ಆಕೆಯನ್ನು ಮೃದುವಾಗಿ ಆಲಿಂಗಿಸಿ ತನ್ನ ಜೊತೆಯಲ್ಲಿ ತನ್ನ ಆಸನದ ಮೇಲೆ ಕುಳ್ಳಿರಿಸಿಕೊಂಡಳು. ಇಂದ್ರನು ಆ ವೇಳೆಗೆ ಆಸನದಲ್ಲಿ ಮಂಡಿಸಿರುವುದನ್ನು ನೋಡಿ ಶಚಿಯು ತಾನೂ ಕುಳಿತಳು.

ನಹುಷನು ಆಕೆಯನ್ನು ನೋಡಿ ಆಶ್ಚರ್ಯಪಟ್ಟನು. ಉಜ್ಜಲವಾದರೂ ಶಾಂತವಾದ ಆ ರೂಪರಾಶಿಯನ್ನು ಆ ಅಂಗಸೌಷ್ಠವವನ್ನು ಮಿತಿಯನ್ನು ಯಾವ ರೀತಿಯಲ್ಲೂ ಮೀರದಂತೆ, ಜೋಡಿಸಿಟ್ಟಿರುವಂತೆ ಮೆರೆಯುತ್ತಿರುವ ಅಂಗಾಂಗಗಳ ಸೌಭಾಗ್ಯವನ್ನು ನೋಡಿ ವಿಸ್ಮಿತನಾದನು. ಮನುಷ್ಯಲೋಕದಲಿರಲಿ, ದೇವಲೋಕದಲ್ಲಿಯೂ ಅಂತಹ ರೂಪಸೌಭಾಗ್ಯ ಸಂಪನ್ನೆಯಿನ್ನೊಬ್ಬಳಿಲ್ಲ. ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ, ಯಾರೂ ಆಕೆಯ ಬಳಿಯೂ ನಿಲ್ಲುವಂತಿಲ್ಲ. ಆತನಿಗೆ ಎನ್ನಿಸಿತು ; “ಹೌದು, ಈ ಪುಣ್ಯವಂತೆಯನ್ನು ಪಡೆಯದೆ ಇಂದ್ರಾಧಿಕಾರವು ಯಾವ ರೀತಿಯಲ್ಲೂ ಪೂರ್ಣವಲ್ಲ. ಚೆನ್ನಾಗಿ ಸವಾರಿಯನ್ನು ಬಲ್ಲವನು ಸೊಗಸಾದ ಕುದುರೆಯನ್ನು ನೋಡಿ, ‘ಇದನ್ನೇರಿ ವಿಹರಿಸದಿದ್ದರೆ ನಾನು ಸವಾರಿಯನ್ನು ಕಲಿತೇನು ಫಲ?’ ಎಂಬಂತೆ, ಆ ದಿವ್ಯಸ್ತ್ರೀಯನ್ನು ನೋಡಿ, ಆಕೆಯ ಸೌಭಾಗ್ಯಾತಿಶಯವನ್ನು ಕಂಡು, ಆತನ ಮನಸ್ಸು ಒಮ್ಮೆ ತೊನೆಯಿತು. ಕೂಡಲೇ ಆ ಮನಸ್ಸು ಧರ್ಮದತ್ತ ತಿರುಗಿ, ಧರ್ಮಪತ್ನಿಯಾದ ವಿರಜಾದೇವಿಯನ್ನು ಕಂಡು, “ಹೌದು ನದಿಯಲ್ಲಿ ಸಮುದ್ರದಷ್ಟು ನೀರಿಲ್ಲ. ಆದರೂ ಬಾಯಾರಿದವರಿಗೆ ಬೇಕಾದುದು ನದಿಯ ನೀರೇ !” ಎಂದುಕೊಂಡನು.

ಶಚಿಯು ತಾನೇ ಮೊದಲು ಮಾತನಾಡಿದಳು : ದೇವೇಂದ್ರನಿಗೆ ವಿಜಯವಾಗಲಿ ! ದೇವಸಭೆಯು ನಾನು ಇಂದ್ರನನ್ನು ಕಾಯ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯಮಾಡಿದೆ. ಆ ಸಭೆಯು ಮಾಡಿದ ನಿರ್ಣಯವೆಂದರೆ ಅದು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು. ಆದರೆ ಒಂದು ಅಡ್ಡಿಯಿದೆ. ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೆನು. ಆತನು ಹೊರಟು ಹೋಗುವಾಗ ನಮಗೆ ಯಾರಿಗೂ, ನನಗೂ ಹೇಳದೆ ಹೊರಟುಹೋಗಿರುವುದು ಇನ್ನೂ ಆಶ್ಚರ್ಯವಾಗಿದೆ. ಆತನು ದುಡುಕಿದನೆಂದು ನಾನೂ ದುಡುಕುವುದು ಸ್ತ್ರೀಸ್ವಭಾವಕ್ಕೆ ಸರಿಹೋಗುವುದಿಲ್ಲ. ಅದರಿಂದ, ಧರ್ಮಶಾಸ್ತ್ರದಲ್ಲಿ ದೇಶಾಂತರಗತನಾದ ಪತಿಯನ್ನು ಪತ್ನಿಯಾದವಳು ಎಷ್ಟು ದಿನ ನಿರೀಕ್ಷಿಸಬೇಕು ಎಂದು ಹೇಳಿದೆಯೋ ಅಷ್ಟು ದಿನ ನಿರೀಕ್ಷಿಸಲು ಅಪ್ಪಣೆಯಾಗಬೇಕು.”

ನಹುಷನು ಆಕೆಯ ಮಾತಿನಲ್ಲಿರುವ ಅರ್ಥವನ್ನು ಪೂರ್ಣವಾಗಿ ಗ್ರಹಿಸಿದನು. ಈ ಭಾಮಿನಿಯು ಸ್ಪಷ್ಟವಾಗಿ ಆಡಿರುವ ಮಾತುಗಳಲ್ಲಿ ಶಂಕೆಗೆ ಏನೂ ಕಾರಣವಿಲ್ಲ. “ದೇವೇಂದ್ರನಿಗೆ ವಿಜಯವಾಗಲಿ.” ಆ ಮಾತು ಇಂದಿನ ಇಂದ್ರನಿಗಾದರೂ ಅನ್ವಯಿಸಬಹುದು : ಹಿಂದಿನ ಇಂದ್ರನಿಗಾದರೂ ಅನ್ವಯಿಸಬಹುದು. “ದೇವ ಸಬೆಯು ನಾನು ಇಂದ್ರನನ್ನು ಕಾಯಾ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯ ಮಾಡಿದೆ.” ಆದೂ ಅಷ್ಟೆ ! ಉಭಯರಿಗೂ ಅನ್ವಯಿಸುತ್ತದೆ. “ಆದರೆ ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೇನೆ.” ಅಲ್ಲಿದೆ ವಿಷ. “ನಾನು ಆತನನ್ನು ಪತಿಯೆಂದು ಸೇವಿಸಿರಲು ನಿನಗೆ ಪರಪತ್ನಿ. ಎಚ್ಚರಿಕೆ ! ನಿನ್ನ ಅಧಿಕಾರಬಲದಿಂದ ನೀನು ನನ್ನನ್ನು ಆಕ್ರಮಿಸಿದರೆ, ಈ ಇಂದ್ರಲಕ್ಷ್ಮಿಯು ನಿನಗೆ ದೂರವಾದಾಳು” ಎಂದು ಸ್ಪಷ್ಠಾರ್ಥ. ಇದರ ಮೇಲೆ, ಧರ್ಮಶಾಸ್ತ್ರಿದ ಮಾತೂ ಇದಕ್ಕೆ ಅನುಗುಣವಾಗಿಯೇ ಇದೆ. “ಆಕೆಯು ಈಗ ಮಾಡುವುದು ಪತಿನಿರೀಕ್ಷೆ. ಒಪ್ಪದಿದ್ದರೆ ಧರ್ಮದ್ರೋಹ. ಒಪ್ಪಿದರೆ ಆತ್ಮದ್ರೋಹ. ಆಕೆಯ ನಿರೀಕ್ಷೆಯು ಸಫಲವಾದರೂ ನಮಗೆ ಇಂದ್ರಪದವಿಯಿಲ್ಲ ; ವಿಫಲವಾದರೆ ನಾವಾಗಿ ಕಳೆದುಕೊಳ್ಳಲು ದಾರಿ ಮಾಡಿಕೊಂಡಂತಾಯಿತು. ಅಂತೂ ಈಕೆಯು ಬಂದು, ‘ನೀನು ಇಂದ್ರನಾಗಿರುವುದು ಕೆಲವು ದಿನ ಮಾತ್ರ’ ಎಂದು ಕಾಲಕ್ಕೆ ಅಂಚು ಕಟ್ಟಿಟ್ಟಂತಾಯಿತು ಎಂದು ವಿಷಣ್ಣನಾಗಿ ಕರದಲ್ಲಿ ಕಪೋಲವನ್ನಿಟ್ಟು ಚಿಂತಿಸಿದನು. ವಿರಜಾದೇವಿಯು ರತ್ನರಾಶಿಯ ಮುಂದೆ ಪೆಚ್ಚಾಗಿರುವ ಏಕರತ್ನದಂತೆ ಸಂಕುಚಿತಮನಸ್ಕಳಾಗಿ, ಎಲ್ಲಾ ವಿಧದಲ್ಲೂ ಸಂಕೋಚಮಾಡಿಕೊಂಡು ಕುಳಿತಿದ್ದಳು.

ಶಚಿಯು ಒಂದೇ ನಿಮಿಷದಲ್ಲಿ ಅರಸನ ಧರ್ಮಸಂಕಟವನ್ನು ತಿಳಿದಳು. ಬೇಟೆಗೆ ಆಳವಾದ ಗಾಯವನ್ನು ಮಾಡಿದ್ದರೂ, ಬೇಟೆಯು ಓಡಿಹೋದರೂ ಬದುಕುವುದಿಲ್ಲವೆಂದು ಗೊತ್ತಾಗಿದ್ದರೂ, ಆಟವಾಡುತ್ತ ಬೇಟೆಯ ಗಾಯಕ್ಕೆ ಮದ್ದು ಬಳಿಯುವ ಬೇಟೆಗಾರನಂತೆ, ಅರಸನ ಮನೋಭಿಪ್ರಾಯವನ್ನು ಬೇರೆಯಾಗಿ ಅರ್ಥಮಾಡಿಕೊಂಡಿರುವ ಮುಗ್ಧೆಯಂತೆ ಹೇಳಿದಳು; “ಇಂದ್ರನು ಸರ್ವಜ್ಯೇಷ್ಠನು. ಎಲ್ಲರನ್ನೂ ಧರ್ಮದಲ್ಲಿ ನಡೆಯುವಂತೆ ಪ್ರೇರಿಸುವವನಾತನು. ಆತನು ಇದು ಧರ್ಮವೆಂದು ಬೇರೆ ದಾರಿಯನ್ನು ತೋರಿಸಿದರೂ ನಾನು ನಡೆಯುವುದಕ್ಕೆ ಸಿದ್ಧಳಾಗಿರುವೆನು !” ಆ ಮಾತಿನಲ್ಲಿ “ನಾನು ಗೆದ್ದೆನು ದಿಗಿಲಿಲ್ಲ” ಎಂಬ ಚತುರೆಯ ನಂಬಿಕೆಯಿತ್ತು. “ಘಾತವು ಮಾರ್ಮಿಕವಾಗಿದೆ. ಬೇಟೆಯಲ್ಲಿ ಗೆದ್ದೆ” ಎಂಬ ಬೇಟೆಗಾರನ ಆತ್ಮಶ್ರದ್ಧೆ ಇತ್ತು.

ಅರಸನು ಶಚೀವಾಕ್ಯಗಳಿಂದ ಮರ್ಮಾಹತನಾಗಿದ್ದರೂ, ರೇಗಿದ್ದರೂ ಕಾರಣಾಂತರಗಳಿಂದ ಶಾಂತವಾಗಿರಬೇಕಾದ ನಾಗರಾಜನಂತೆ ಒಳಗೇ ಪರಿತಪಿಸುತ್ತಿದ್ದಾನೆ. “ಇವಳು ನಾರಿಯಲ್ಲ ಮಾರಿ” ಎನ್ನುವುದು ಮನಸ್ಸಿಗೆ ಚೆನ್ನಾಗಿ ಅರ್ಥವಾಗಿ ಪ್ರತಿಕ್ರಿಯೆ ಮಾಡಬೇಕೆನ್ನುವ ಘಟ್ಟಕ್ಕೆ ಅದು ಏರುತ್ತಿದೆ. ಆದರೂ ತಾನು ಇಂದ್ರ, ಇಂದ್ರನ ಗೌರವಕ್ಕೆ ಚ್ಯುತಿಯಿಲ್ಲದಂತೆ ನಡೆಯಲೇಬೇಕು ಎಂಬ ನಿರ್ಧಾರವು ಎಲ್ಲದಕ್ಕಿಂತ ಬಲವಾಗಿ ಕುಳಿತಿದೆ. ಆದರೂ, ಶಚಿಯು ಅಂತಃಪ್ರಾಣ ಘಾತಿನಿಯಾಗದಿದ್ದರೂ ಬಹಿಃಪ್ರಾಣವಾದ ಅರ್ಥವನ್ನು ಘಾತಿಸುವಳೆಂದು ಪ್ರತ್ಯಕ್ಷವಾಗಿದೆ. ಇನ್ನು ಮಾತೇಕೆ?

ಅರಸನು ಒಂದು ಗಳಿಗೆ ನಿರುತ್ತರನಾಗಿದ್ದು ಹೇಳಿದನು : “ಶಚೀದೇವಿ ಇಂದ್ರನು ಧರ್ಮವಿರೋಧಿಯಲ್ಲ. ಅವರವರು ಧರ್ಮವೆಂದು ಒಪ್ಪಿಕೊಂಡಿರು ವುದನ್ನೇ ಪಾಲಿಸಬೇಕಾದುದು ಇಲ್ಲಿಯ ಧರ್ಮ. ಅದರಿಂದ ನೀನು ಪತಿಯೆಂದು ಗ್ರಹಿಸಿರುವ ಇಂದ್ರನನ್ನು ಪತ್ರೀಕ್ಷಿಸಲು ಕಾಲಾವಧಿಯುಂಟು. ಅದು ನಿನಗೆ ಲಭಿಸಿರುವುದು. ಅಷ್ಟೇ ಅಲ್ಲ. ನಿನ್ನ ಪತಿಯನ್ನು ನೀನು ಹುಡುಕಲೂ ನಿನಗೆ ಅಧಿಕಾರವುಂಟು. ಹುಡುಕು, ಹುಡುಕಿಸು, ಹೋಗಿ ಬಾ” ಎಂದು ಸಮಚಿತ್ತನಾಗಿ ಹೇಳಿದನು.

ಶಚಿಯು ಈ ಉತ್ತರಕ್ಕೆ ಬದ್ಧಳಾಗಿರಲಿಲ್ಲ. ಆಕೆಯ ದೃಷ್ಟಿಯಲ್ಲಿ ನಹುಷನು ‘ಅರ್ಥಪರಃ ಕಾಮಚಪಲ; ಅದರಿಂದ ತನ್ನನ್ನು ಬಯಸಿದನು’ ಎಂದಿತ್ತು. ಆದರೂ ತಾನೇ ಎದುರಿಗೆ ಬಂದಿದ್ದರೂ ಯಾವ ಕಾರ್ಪಣ್ಯಕ್ಕೂ ಎಡಗೊಡದೆ ಸಮಚಿತ್ತನಾಗಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದುವರೆಗೂ ನಹುಷನೆಂದರೆ ಒಬ್ಬ ಮಾನವ ಎನ್ನುತ್ತಿದ್ದ ಆಕೆ, ಸಮ್ಮುಖದಲ್ಲಿ ನಹುಷನನ್ನು ಕಂಡು, ಆತನ ಆಚಾರವನ್ನು ನೋಡಿ, ಆತನ ಅಂತಸ್ಥವನ್ನು ತಿಳಿದು ವಿಸ್ಮಿತಳಾಗಿದ್ದಾಳೆ. ಋಷಿಪತ್ನಿಗಾಗಿ ಬಾಯಿ ಬಾಯಿ ಬಿಟ್ಟ, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧನಾಗಿದ್ದ ತನ್ನ ಪತಿಯೊಡನೆ ಆತನನ್ನು ಹೋಲಿಸಿ, “ನಹುಷನು ನಿಜವಾಗಿ ಮಹಾನುಭಾವ !” ಎಂಬ ಸಿದ್ಧಾಂತಕ್ಕೆ ಬಂದಿದ್ದಾಳೆ. “ಈತನು ಇಂದ್ರನಾಗಿರುವುದು ಮೂರು ಲೋಕದ ಸೌಭಾಗ್ಯ ! ಆದರೆ, ಆದರೆ, ಹುಂ ವಿಧಿಯಾಟ. ಈ ಮಹಾಪುರುಷನನ್ನು ಈ ಪದವಿಯಿಂದ ಉರುಳಿಸುವ ದೌರ್ಭಾಗ್ಯ ನನ್ನ ಹಣೆಯಲ್ಲಿ ಬರೆದಿದೆಯೋ ಏನೋ?” ಎಂದು ವಿಷಾದಪಡುತ್ತಿದ್ದಾಳೆ. “ಈ ಇಂದ್ರನು ನಿಜವಾಗಿ ಧರ್ಮಪರಾಯಣ” ಎಂದು ಮನಸ್ಸು ಹರ್ಷಗೊಂಡಿದೆ.

ನಹುಷನು ಮತ್ತೊಂದು ಮಾತನ್ನೂ ಆಡದೆ ಮೇಲಕ್ಕೆದ್ದನು. ಅದನ್ನು ಕಂಡು ವಿರಜಾದೇವಿಯು ಮೇಲಕ್ಕೆದ್ದು ಸಡಗರದಿಂದ ಮಂಗಳದ್ರವ್ಯಗಳನ್ನೂ ಫಲತಾಂಬೂಲಗಳನ್ನೂ ಇಟ್ಟಿದ್ದ ರತ್ನದ ತಟ್ಟೆಗಳನ್ನು ತಂದು ಶಚಿದೇವಿಗೆ ಒಪ್ಪಿಸಿದಳು. ಅದೆಲ್ಲವನ್ನೂ ನೋಡಿ ಶಚಿಗೆ ಆನಂದವು ತಾನೇತಾನಾಗಿ ಕಣ್ಣಲ್ಲಿ ನೀರಾಗಿ ಹರಿಯಿತು. ವಿರಜಾದೇವಿಯನ್ನು ಬಾಚಿ ತಬ್ಬಿಕೊಂಡು “ತಂಗೀ, ನಿನ್ನ ವೈಭವವು ಅಖಂಡವಾಗಿ ಇರಲಿ” ಎಂದು ಆಶೀರ್ವಾದ ಮಾಡಿ, ಇಂದ್ರನಿಗೆ ಮತ್ತೆ ಬಗ್ಗಿ ನೆಲಮುಟ್ಟಿ ನಮಸ್ಕಾರಮಾಡಿ ಹೊರಟುಹೋದಳು.

ಆಕೆಯು ಹೊರಕ್ಕೆ ಹೋಗಿ ಕಣ್ಮರೆಯಾದ ಮೇಲೆ, ನಹುಷನು ವಿರಜೆಯನ್ನು ಆಲಿಂಗಿಸಿಕೊಂಡು, “ದೇವಿ, ದೇವತೆಗಳು ತಮ್ಮ ಆಟವನ್ನು ಚೆನ್ನಾಗಿ ಆಡಿದರು” ಎಂದನು. ದೇವಿಯು ಏನು ಎಂದು ತಲೆಯೆತ್ತಿ ನೋಡಲು, ಅರಸನು “ದೇವಿ ದೇವತೆಗಳು ಯಾವಾಗಲೂ ವಿಷಮಿಶ್ರಿತವಾದ ಮೃಷ್ಟಾನ್ನವನ್ನು ವರವಾಗಿ ನಮಗೆ ಕೊಡುವರು. ನಾವು ಆ ಮೃಷ್ಟಾನ್ನವನ್ನು ನೋಡುವೆವೇ ಹೊರತು ಅದರಲ್ಲಿರುವ ವಿಷಯವನ್ನು ಕಾಣಲಾರೆವು. ಅದು ನಮ್ಮ ದುರದೃಷ್ಟ !” ಎಂದನು.

ಅಲ್ಲಿಗು ವಿರಜಾದೇವಿಯು ಅರ್ಥಮಾಡಿಕೊಳ್ಳದಿರಲು, “ಹೋಗಲಿ ಬಿಡು, ಅನಿತ್ಯವಾದ ಅರ್ಥಕ್ಕೆ ಹಾನಿಯಾದರೂ, ನಿತ್ಯವಾದ ಧರ್ಮವನ್ನು ಪಾಲಿಸಿದಂತಾಯಿತು’ ಎಂದನು.

`ವಿರಜಾದೇವಿಯು ಅನ್ಯಮನಸ್ಕಳಾಗಿದ್ದವಳು “ನಿಜ ಶಚಿಯು ಸಿಕ್ಕಿದರೂ ಕೆಲಸ ಕೆಟ್ಟಿತು. ಸಿಕ್ಕದಿದ್ದರೂ ಕೆಲಸ ಕೆಟ್ಟಿತು. ಅದಿರಲಿ, ತಮ್ಮನ್ನು ಶಚಿಯು ಒಲಿದರೆ ನನ್ನ ಗತಿಯೆನು ?” ಎಂದಳು.

`ಅರಸನಿಗೆ ಹೋಗಿದ್ದ ಅಸುವು ಬಂತು : “ಶಚಿಯು ಒಲಿದರೂ ನಾನು ಒಲಿಯುವುದಿಲ್ಲ. ನಾನು ಗ್ರಹಚಾರವಶನಾಗಿ ಒಲಿದರೂ, ಅವಳು ಅರ್ಥಪತ್ನಿ, ನೀನು ಧರ್ಮಪತ್ನಿ. ಹಾನಿಯೆಲ್ಲ ನನ್ನದು. ನಿನಗೆ ಎಳ್ಳಷ್ಟೂ ಹಾನಿಯಿಲ್ಲ. ಇದು ನನ್ನ ವರ ಸಾಕೇ?”

`* * * *

೩೦.ಹಾಗಾದರೆ ಸ್ವತಂತ್ರರು ಯಾರು?

ಸಂಪಾದಿಸಿ

`ಶಚಿದೇವಿಯು ತನ್ನ ಅರಮನೆಗೆ ಹಿಂತಿರುಗುವ ವೇಳೆಗೆ ಬೃಹಸ್ಪತಿಯು ಬಂದು ಕಾದಿದ್ದನು. ಶಚಿಯು ಆತನು ಬಂದಿರುವನೆಂದು ಅರಿತು ಆತನನ್ನು ಕಾಣಲು ಅವಸರವಸರವಾಗಿ ಹೋದಳು. ಆಕೆಯ ಪ್ರಸನ್ನವಾದ ಮುಖ, ಆಕೆಯ ನಡೆ, ಆಕೆಯ ಸಂತೋಷಗಳೇ ಆಕೆಯು ಗೆದ್ದು ಬಂದಿರುವಳು ಎಂಬುದನ್ನು ಹೇಳುತ್ತಿರಲು, ಗುರುವು ಆಕೆಯನ್ನು ಕೇಳಿದನು : “ಹೋದ ಕೆಲಸವೇನಾಯಿತು?”

`ಆಕೆಯು ಗುರುವಿಗೆ ವಂದನೆ ಮಾಡಿ ಹೇಳಿದಳು : “ನಾನು ಗೆಲುವು ಇಷ್ಟು ಸುಲಭವಾಗಿ ದೊರೆಯುವುದೆಂದುಕೊಂಡಿರಲಿಲ್ಲ. ಅಂತೂ ಸದ್ಯದಲ್ಲಿ ಬದುಕಿದೆ ಎಂದು ಸ್ತ್ರೀಸಹಜವಾದ ಮಾನಾಭಿಮಾನದಿಂದ ಹೇಳಿದಳು.

`ಆಚಾರ್ಯನಿಗೂ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ “ಏನೇನು ನಡೆಯಿತು, ಹೇಳು” ಎಂದನು. ಆಕೆಗೂ ವಿವರಗಳನ್ನೆಲ್ಲ ಯಾರೊಡನೆಯಾದರೂ ಹೇಳಿಕೊಳ್ಳಬೇಕೆಂಬ ಆತುರವಿತ್ತು. ಹೇಳಿದಳು : “ನಾನೂ ಸಾಮಾನ್ಯಳಂತೆ ಪಲ್ಲಕ್ಕಿಯಲ್ಲಿ ಹೋದೆ. ದರ್ಶನಮಂದಿರದಲ್ಲಿ ರಾಜದಂಪತಿಗಳಿಬ್ಬರೂ ಇದ್ದರು. ನಾನು ವಿರಜಾದೇವಿಯೆಂದು ಕೇಳಿದ್ದೇ ಅಷ್ಟೇ, ನೋಡಿರಲಿಲ್ಲ. ಆಕೆ ನಿಜವಾಗಿಯೂ ಪುಣ್ಯವಂತೆ. ನನಗೆ ಆ ‘ರಾಜಪುಂಗವನೆಂಬ ಆ ಮದ್ದಾನೆಯನ್ನು ಹಿಡಿಯುವುದೆಂತು? ಎಂದು ಮನಸ್ಸು ಬಹಳ ಕಾತರಗೊಂಡಿತ್ತು. ಆದರೆ, ಮಗ್ಗುಲಲ್ಲಿದ್ದ ವಿರಜಾದೇವಿಯನ್ನು ಕಂಡು ‘ಚಿಂತೆಯಿಲ್ಲ. ಮದ್ದಾನೆಯನ್ನು ಬಗ್ಗಿಸುವ ಅಂಕುಶವಿದೆ” ಎಂದುಕೊಂಡೆ. ಹೋಗುತ್ತಿದ್ದ ಹಾಗೆಯೇ, ವಿರಜಾದೇವಿಯು ಆಲಿಂಗನದಿಂದ ಗೌರವಿಸಿ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡಳು. ನಾನು ‘ದೇವೇಂದ್ರನಿಗೆ ಜಯವಾಗಲಿ !’ ಎಂದು ಗಂಡನಿಗೆ ಹರಕೆ ಹೊತ್ತೆ. ಆ ಹರಕೆಯು ಎಲ್ಲವನ್ನೂ ಸುಲಭ ಮಾಡಿತು.”

`“ಹಾಗಾದರೆ, ನೀನು ಆತನಲ್ಲಿಯೂ ಇಂದ್ರಪತ್ನಿಯೆಂದೇ ಸಾಧಿಸಿ ಬಂದೆ?”

`“ಇರುವುದನ್ನು ಹೇಳಿಕೊಳ್ಳುವುದಕ್ಕೆ ನಾಚಿಕೆಯೇನು? ಹಾಗೆಂದು ನಾನು ದೇವಸಭೆಗೂ ಅವಮರ್ಯಾದೆ ಮಾಡಲಿಲ್ಲ. ದೇವಸಭೆಯು ಶಚಿಯು ಇಂದ್ರನನ್ನು ತ್ರಿಕರಣಪೂರ್ವಕವಾಗಿ ಸೇವಿಸಬೇಕೆಂದು ಮಾಡಿರುವ ನಿರ್ಣಯವು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು’ ಎಂದೇ ಆರಂಬಿಸಿದೆ.”

`“ಸರಿ, ಇಂದ್ರನನ್ನು ಆರಾಧಿಸಲು ನೀನು ಯಾವಾಗಲೂ ಸಿದ್ಧಳು. ಆದರೆ ತಾತ್ಕಾಲೀನನಾದ ಈ ಇಂದ್ರನನ್ನಲ್ಲ. ಶಾಶ್ವತನಾದ ಆ ಇಂದ್ರನನ್ನು ಸರಿ, ಮುಂದೆ?”

`“ನಾನು ಇಂದ್ರನನ್ನು ಪತಿಯೆಂದು ವರಿಸಿ, ಆತನಿಗೆ ನೆರಳಿನಂತೆ ಇದ್ದವಳು. ಆತನು ನನಗೂ ಹೇಳದೆ ಹೊರಟುಹೋಗಿರುವನು. ಅದರಿಂದ ಆತನನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವಷ್ಟು ಕಾಲ ನಿರೀಕ್ಷಿಸಲು ಅಪ್ಪಣೆಕೊಡಬೇಕು, ಎಂದು ಪ್ರಾರ್ಥಿಸಿಕೊಂಡೆ. ಆತನ ಮುಖದಿಂದ ಇಂಗಿತವನ್ನು ನಿರ್ಣಯಿಸುವುದಾದರೆ ಆತನು ನಾನು ಪರಪತ್ನಿ ಎಂಬುದನ್ನು ಚೆನ್ನಾಗಿ ಮನಗಂಡಿರಬೇಕು. ಆತನು ಉದಾತ್ತನಾಗಿ, ಸಮಚಿತ್ತನಾಗಿ, ‘ಆಗಬಹುದು, ಅಷ್ಟೇ ಅಲ್ಲ, ಹುಡುಕು, ಹುಡುಕಿಸು' ಎಂದು ಅಪ್ಪಣೆಯನ್ನೂ ಕೊಟ್ಟು ನನ್ನನ್ನು ಬೀಳ್ಕೊಟ್ಟನು. ವಿರಜಾದೇವಿಯು ಮಂಗಳ ದ್ರವ್ಯಗಳನ್ನೂ ಫಲತಾಂಬೂಲವನ್ನು ಕೊಟ್ಟು ಕಳುಹಿಸಿಕೊಟ್ಟಳು.”

`“ಸರಿ, ಮೊದಲನೆಯ ಅಡ್ಡಿಯನ್ನು ದಾಟಿಯಾಯ್ತು.”

`“ಎಂದರೆ ?”

`“ಎಂದರೆ ಇಂದ್ರನನ್ನು ಹುಡುಕಿಸಿ ಕರೆತರುವುದು.”

`ಆಚಾರ್ಯನು ನಿಟ್ಟುಸಿರುಬಿಟ್ಟನು : “ದೇವಿ, ಇಂದ್ರನು ಹಿಂತಿರುಗಿ ಬಂದರೆ ನಿನಗೊಬ್ಬಳಿಗೇ ಸಂತೋಷವೆಂದುಕೊಂಡಿದ್ದೀಯಾ ? ನಿನ್ನಷ್ಟಲ್ಲವಾದರೂ, ಹೆಚ್ಚು ಸಂತೋಷವು ನನಗಾಗುವುದು, ಏಕಾಂತದಲ್ಲಿ ನನ್ನನ್ನು ನಾನು ಎಷ್ಟು ಹಳಿದುಕೊಂಡಿದ್ದೇನೆ ಬಲ್ಲೆಯಾ? ಆ ದಿನ ಇಂದ್ರಸಭೆಯಲ್ಲಿ ನಾನು ಒಂದು ರೆಪ್ಪೆ ಹೊಡೆಯುವಷ್ಟು ಕಾಲ ನಿರ್ವಿಕಾರನಾಗಿದ್ದಿದ್ದರೆ ಇದೊಂದು ಸಂಭವಿಸುತ್ತಿರಲಿಲ್ಲ. ಆ ದಿನ ನನಗೆ ಏನೋ ಆಗಿ ಇಂದ್ರನು ನನ್ನ ವಿಚಾರದಲ್ಲಿ ತಿರಸ್ಕಾರವನ್ನು ವಹಿಸಿರುವನು ಎನ್ನಿಸಿತು. ಅಗೋಚರವಾಗಿ ಹೊರಟುಹೋದೆ. ಅದರಿಂದ ಈ ಅನರ್ಥಪರಂಪರೆಯೆಲ್ಲ ಸಂಭವಿಸಿತು. ಈ ಅನರ್ಥಗಳನ್ನೆಲ್ಲ ತಿದ್ದುಕೊಳ್ಳಬೇಕು ಎಂದು ನಾನು ಎಷ್ಟು ಪ್ರಯತ್ನಿಸಿದ್ದೇನೆ ಬಲ್ಲೆಯಾ ? ಅಗ್ನಿ ವಾಯುಗಳನ್ನು ಕರೆದು ಕೇಳು. ಅಂದ ಹಾಗೆಯೇ ನನಗೆ ಮರೆತೇ ಹೋಗಿತ್ತು. ಅವರಿಬ್ಬರೂ ನನ್ನ ಹಾದಿಯನ್ನು ನೋಡುತ್ತ ಮಂದಿರದಲ್ಲಿ ಕುಳಿತಿದ್ದಾರೆ. ಅವರನ್ನು ಇಲ್ಲಿಗೇ ಕರೆಸಬಾರದೇಕೆ ?”

`“ಯಾರು ಬೇಡವೆಂದರು ? ಬರಮಾಡಿ.”

`ಆಚಾರ್ಯನು ಧ್ಯಾನಿಸಿದನು. ಅಗ್ನಿ ವಾಯುಗಳು ಬಂದಿರುವರೆಂದು ಪ್ರಹರಿಯು ತಿಳಿಸಿದಳು. ಮತ್ತೊಂದು ಗಳಿಗೆಯಲ್ಲಿ ಅವರೂ ಅಲ್ಲಿಗೆ ಬಂದರು. ಆಚಾರ್ಯನು ಅವರನ್ನು ಕಂಡು ಸಂತೋಷದಿಂದ “ಅಗ್ನಿ ವಾಯು, ಶಚಿಯು ಗೆದ್ದು ಬಂದಿರುವಳು. ಇನ್ನು ಇಂದ್ರನನ್ನು ಹುಡುಕುವುದು, ಬರಮಾಡುವುದು ನಮ್ಮ ಕೆಲಸ” ಎಂದನು. ಅಗ್ನಿ ವಾಯುಗಳು ಆತನ ಸಂತೋಷದಲ್ಲಿ ಭಾಗಿಗಳಾದರೂ ಆತನ ಉತ್ಸಾಹವು ಅವರಿಗಿರಲಿಲ್ಲ.

ಅವರು ಕೇಳಿದರು : ‘ಎಲ್ಲಕ್ಕಿಂತ ಮೊದಲು ಹೇಳಿ. ಈಕೆಯನ್ನು ಈಗಿನ ಇಂದ್ರನು ಹಿಂದಿನ ಇಂದ್ರನ ಪತ್ನಿಯೆಂದು ಒಪ್ಪಿಕೊಂಡನೋ?”

ಆಚಾರ್ಯನು ಹೇಳಿದನು. ಆ ನುಡಿಯಲ್ಲಿ ಸಂತೋಷವು ತುಂಬಿತ್ತು. “ಅಷ್ಟೇ ಅಲ್ಲ. ಆತನನ್ನು ಹುಡುಕು, ಹುಡುಕಿಸು, ಎಂದೂ ಅಪ್ಪಣೆ ಕೊಟ್ಟಿರುವನಂತೆ.”

“ನಿಜವೆ?”

“ಹೌದು”

“ಹಾಗಾದರೆ, ಆತನು ತನ್ನ ಹಾನಿಯನ್ನು ಮನಗಂಡಿರಬೇಕು.”

“ಸಂದೇಹವಿಲ್ಲ.”

“ಹಾಗಾದರೆ ಪೂರ್ವದ ಇಂದ್ರನು ಬಂದರೂ ಈತನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಕಾರ್ಯ.”

“ಹೌದು, ಈ ಕಾರ್ಯವನ್ನು ನಾವು ತಪ್ಪದೆ ಮಾಡಬೇಕು. ಅದಿರಲಿ, ಈಗ ಇಂದ್ರನು ಇರುವ ಸ್ಥಳವನ್ನು ಕಂಡುಹಿಡಿಯಬೇಕಲ್ಲಾ”

‘ದೇವ, ನಾವಿಬ್ಬರೂ ತಮ್ಮ ಅಪ್ಪಣೆಯೆಂದಲ್ಲ, ನಮ್ಮ ಸ್ವಂತೇಚ್ಚೆಯಿಂದಲೂ ಹುಡುಕಿದ್ದೇವೆ. ಗಂಡನನ್ನು ಹುಡುಕುವ ಹೆಂಡತಿಯಂತೆ, ಮಕ್ಕಳನ್ನು ಹುಡುಕುವ ಮಾತೆಯಂತೆ, ಮೂರು ಲೋಕಗಳನ್ನು ಹುಡುಕಿದ್ದೇವೆ. ಇನ್ನು ಹೇಗೆ ಹುಡುಕಬೇಕೋ ಅದನ್ನು ತಿಳಿಯದೆ ಇದ್ದೇವೆ, ಏನು ಮಾಡೋಣ?”

ಆಗ ಶಚೀದೇವಿಯು ಹೇಳಿದಳು : “ಆಚಾರ್ಯ, ಇಂದ್ರನು ನನಗೆ ಒಂದು ಮಾರ್ಗವನ್ನು ಹೇಳಿದ್ದನು, ಅದನ್ನು ಈಗ ಮಾಡೋಣವೇ?”

“ಏನು ಹೇಳು ತಾಯಿ.”

“ಅಗ್ನಿ ವಾಯುಗಳಿಗೆ ಸಿಕ್ಕದವರನ್ನು ಉಪಶ್ರುತಿಯಿಂದ ಹಿಡಿಯಬೇಕು ಎಂದಿದ್ದನು.”

ಆಚಾರ್ಯನು ಅದನು ಕೇಳಿ ತಲೆದೂಗಿದನು ; “ಹಾಗಾದರೆ, ವಾಯುವು ನನ್ನ ಬಳಿಗೆ ಬಂದಾಗ ನಾನು ಇದ್ದ ಸ್ಥಳವನ್ನು ಆಕೆಯೇ ತಿಳುಹಿಸಿದಳೋ?

“ಏನೋ ನಾನು ಅದನ್ನು ಕಾಣೆ. ಅಂತೂ ವಾಯುವು ತಮ್ಮನ್ನು ಸಂಧಿಸಿ ಬಂದಾಗ, ನಾನೂ ಇದ್ದೆ. ಆಯಿತು, ಇದನ್ನು ಈಗ ಹೇಗೆ ಅನುಸಂಧಾನ ಮಾಡುವುದು?”

ಆಚಾರ್ಯನು “ನೋಡು, ಚತುರ್ಮುಖ ಬ್ರಹ್ಮನ ಬಳಿ ಇರುವ ಸರಸ್ವತೀ ದೇವಿಯ ಅನುಚರಳು ಉಪಶ್ರುತಿದೇವಿ. ನಾವು ದೇವತೆಗಳು ತೈಜಸದೇಹಿಗಳು. ನಾವು ತೈಜಸಪ್ರಪಂಚಗಳಲ್ಲಿ ಬೇಕಾದುದನ್ನು ಮಾಡಬಲ್ಲೆವು. ಆದರೆ, ವಾಯು ಆಕಾಶ ಪ್ರಪಂಚಗಳಲ್ಲಿ ಕುಂಠಿತಗತಿಗಳಾಗುವೆವು. ಉಪಶ್ರುತಿಯು ಆಕಾಶದಲ್ಲಿ ಅಪ್ರತಿಹತ ಗಮನವುಳ್ಳವಳು. ಸರಿ, ಆಕೆಯನ್ನು ಕರೆದು ಕೇಳೋಣ. ನಾನು ಬ್ರಹ್ಮದೇವನ ಬಳಿಗೇ ಹೋಗಿ ಕೇಳೋಣವೆಂದಿದ್ದೆ” ಎಂದು ಆಸನವನ್ನು ಬಲಿತು ಧ್ಯಾನಗ್ರಸ್ಥನಾದನು.

ಇನ್ನೊಂದು ಕ್ಷಣದಲ್ಲಿ ಉಪಶ್ರುತಿದೇವಿಯು ಆತನಿಗೆ ದರ್ಶನ ಕೊಟ್ಟು “ಆಚಾರ್ಯ, ನನ್ನಿಂದೇನಾಗಬೇಕು?” ಎಂದು ಕೇಳಿದಳು. ಆತನು “ದೇವಿ, ಮೊದಲು ನೀನು ಇಲ್ಲಿರುವವರೆಲ್ಲರಿಗೂ ದರ್ಶನವನ್ನು ಕೊಡಬೇಕು” ಎಂದು ಪ್ರಾರ್ಥಿಸಿದನು. ಆಕೆಯು ಪ್ರಸನ್ನೆಯಾಗಿ ಎಲ್ಲರಿಗೂ ದರ್ಶನವಿತ್ತಳು. ಎಲ್ಲರೂ ಆಕೆಯ ದರ್ಶನ ಮಾಡಿ, ಆಕೆಯ ಅಪ್ಪಣೆ ಪಡೆದು “ದೇವಿ, ಇಂದ್ರನು ಇರುವೆಡೆಯನ್ನು ತಿಳುಹಿಸಿಕೊಡಬೇಕು” ಎಂದು ಪ್ರಾರ್ಥಿಸಿದರು.

ಆಕೆಯು “ಆಗಲಿ ಆದರೆ, ನೀವು, ಆತನನ್ನು ಏನಿದ್ದರೂ ಕನಸಿನಲ್ಲಿ ಕಂಡಂತೆ ಕಾಣುವಿರಿ. ಆತನು ನಿಮ್ಮ ಸ್ಥೂಲಚಕ್ಷುವಿಗೂ ಗೋಚರನಾಗಬೇಕು ಎನ್ನುವುದಿದ್ದರೆ ಆತನನ್ನು ಉಪಬೃಂಹಣ ಮಾಡಬೇಕು” ಎಂದು ಹೇಳಿ, ತಾನು ವೀಣೆಯನ್ನು ತೆಗೆದುಕೊಂಡಳು. ವೀಣೆಯನ್ನು ಬಾರಿಸುತ್ತ ಒಂದು ಮನೆಯನ್ನು ಹಿಡಿದು ಮೀಟು ಹಾಕುತ್ತಾ “ಸರಿ, ಇಂದ್ರನು ಮಾನಸ ಸರೋವರದ ಪದ್ಮಲತೆಗಳಲ್ಲಿ ಒಂದನ್ನು ಆಶ್ರಯಿಸಿ, ಆ ಪದ್ಮನಾಳದಲ್ಲಿ ಕುಳಿತಿರುವನು. ಆತನನ್ನು ಹಿಂಬಾಲಿಸಿದ ಹತ್ಯೆಯು ಆ ಮಾನಸ ಸರೋವರದ ಮೇರೆಯಲ್ಲಿ ಕುಳಿತಿರುವುದು. ಅದು ಜೀರ್ಣವಾಗುವವರೆಗೂ ಆತನು ಈಚೆಗೆ ಬರುವುದಿಲ್ಲ. ನೀವೆಲ್ಲರೂ ದೆವದೇವನಾದ ಮಹಾವಿಷ್ಣುವಿನ ಬಳಿಗೈದು ಬೇಡಿಕೊಳ್ಳಿ. ಆತನು ಇಂದ್ರನಿಗೆ ಹತ್ಯೆ ಕಳೆಯುವ ಉಪಾಯವನ್ನು ಸೂಚಿಸುವನು. ಅದರಂತೆ ಮಾಡಿ ಕೃತಾರ್ಥರಾಗಿ” ಎಂದಳು.

ಎಲ್ಲರೂ “ಅಪ್ಪಣೆ”ಯೆಂದರು.

ಅಗ್ನಿ ವಾಯುಗಳು ಆಕೆಯನ್ನು ಕೇಳಿದರು : “ತಾಯೆ, ನಾವು ಮಾನಸಸರೋವರವನ್ನು ಹುಡುಕಿದೆವು. ನಮಗೆ ಇಂದ್ರನೇಕೆ ಅಲ್ಲಿ ಸಿಕ್ಕಲಿಲ್ಲ ?”

ಉಪಶ್ರುತಿಯು ಹೇಳಿದಳು : “ಅಗ್ನಿಯು ಮೊದಲನೆಯ ಸಲ ಹುಡುಕಲು ಹೋದಾಗ, ನೀರು ತನಗೆ ಮೃತ್ಯುಸ್ಥಾನವೆಂದು ಆತನು ಅಲ್ಲಿಗೆ ಹೋಗಲಿಲ್ಲ. ಮತ್ತೆ ದೇವಗುರುವು ಕಳುಹಿಸಿದಾಗ, ಅಲ್ಲಿ ಆತನು ಹತ್ಯೆಯನ್ನು ಕಾಣಲಿಲ್ಲ. ಇದನ್ನು ಇಂದ್ರನು ತಿಳಿದು, ‘ಈತನಿಗೆ ಸಿಕ್ಕಿದರೆ ಹತ್ಯೆಯನ್ನು ಎದುರಿಸಬೇಕಾಗುವುದು’ ಎಂದು ಈತನಿಗೆ ಸಿಕ್ಕಲಿಲ್ಲ. ವಾಯುವಿಗೂ ಹಾಗೆಯೇ ಆಯಿತು. ಈಗ ನಾನು ಕಂಡುಹಿಡಿದ ಕ್ರಮವನ್ನು ಹೇಳುವೆನು ಕೇಳಿ. ಪ್ರತಿಯೊಂದು ಪ್ರಾಣಿಯು ಹೃದಯದಿಂದಲೂ, ಆಯಾ ಪ್ರಾಣಿಗೆ ವಿಚಿತ್ರವಾದ ಒಂದು ಶಬ್ದತರಂಗವು ಯಾವಾಗಲೂ ಬರುತ್ತಿರುವುದು, ಅದನ್ನು ಮೊದಲು ಗೊತ್ತು ಮಾಡಬೇಕು. ಅನಂತರ ಅದೆಲ್ಲಿರುವುದು ಎಂಬುದನ್ನು ಹುಡುಕಿದರಾಯ್ತು ! ಹೀಗೆ ನಾನು ವೀಣೆಯನ್ನು ಬಾರಿಸುತ್ತಾ ಇಂದ್ರತರಂಗವನ್ನು ಸೃಷ್ಟಿಮಾಡಿದೆನು. ಅನಂತರ ಅದೆಲ್ಲಿರುವುದು ಎಂಬುದನ್ನು ನೋಡಿದೆನು. ಅದಕ್ಕೆ ಸಂವಾದಿಯಾದ ಶಬ್ದವು ಮಾನಸದ ಪದ್ಮನಾಳದಿಂದ ಬಂದಿತು. ಸರಿ, ಅಲ್ಲಿಯೇ ಇಂದ್ರನಿರುವನೆಂದು ಗೊತ್ತುಮಾಡಿದೆನು. ಆಯಿತು. ನಿಮ್ಮಲ್ಲಿ ಯಾರಾದರೂ ಆತನನ್ನು ಕಂಡು ಮಾತನಾಡಬೇಕಾದರೆ ನೆನಪಿರಲಿ. ಮಾನಸ ಸರೋವರವು ಆ ಹತ್ಯೆಯ ದೃಷ್ಟಿಗೆ ಬೀಳದಂತೆ ಅದರ ಸುತ್ತಲೂ ತಿರಸ್ಕರಿಣಿಯನ್ನು ಪ್ರಸಾರಮಾಡಿ, ಅನಂತರ ಉಪಬೃಂಹಣ ಮಾಡಿ, ಆಗ ಆತನ ದರ್ಶನವಾಗುವುದು.”

ಶಚೀದೇವಿಯು ಕೈಮುಗಿದುಕೊಂಡು ಕೇಳಿದಳು - “ತಾಯಿ, ಆತನು ಹಿಂದಿರುಗಿಬರಲು ಇನ್ನೆಷ್ಟು ದಿನವಾಗುವುದು ?”

“ಶಚಿ, ಹತ್ಯೆಯನ್ನು ಕಳೆಯುವವರೆಗೂ ಆತನು ಈಚೆಗೆ ಬರಲಾರನು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಈ ಹತ್ಯೆಯನ್ನು ಕಳೆಯುವ ಉಪಾಯವನ್ನು ಅರಿಯರು. ಅದರಿಂದ ದೇವಾಚಾರ್ಯನನ್ನು ಮಹಾವಿಷ್ಣುವಿನ ಬಳಿಗೆ ಕಳುಹಿಸು. ನೀನು ಹೋಗಿ ಇಂದ್ರದರ್ಶನ ಮಾಡಿ ಬಾ. ನಿನ್ನ ಮನಸ್ಸಿನಲ್ಲಿರುವ ವ್ಯಥೆಯನ್ನು ನಾನು ಬಲ್ಲೆ. ನೀನೇ ತಿಳಿದರೂ ತಿಳಿಯದಂತಿರುವೆ. ನಹುಷನು ಪರನಾರೀ ಸಹೋದರನು. ಆತನಿಗೆ ನೀನು ಬೇಕಿಲ್ಲ. ಅತನು ಇಂದ್ರಪದವಿಯು ಬೇಡವೆಂದನು. ನೀವು ದುಡುಕಿದಿರಿ. ಇಂದ್ರನು ಅದೃಶ್ಯನಾದರೆ ಇಂದ್ರಾಣಿಯಿರಲಿಲ್ಲವೆ ? ಆಕೆಯೇ ಆತನು ಬರುವವರೆಗೂ ರಾಜ್ಯವಾಳಬೇಕಾಗಿತ್ತು. ಅಷ್ಟರಲ್ಲಿ ಅವಸರಪಟ್ಟು ದೇವಸಭೆಯನ್ನು ಕರೆದು ಮಾನವೇಂದ್ರನನ್ನು ಮಹೇಂದ್ರನನ್ನಾಗಿ ಮಾಡಿದಿರಿ. ಅದಕ್ಕಾಗಿ, ಆತನಿಗೆ ಪ್ರೇರಣೆಮಾಡಿ ಆತನಿಂದ ಅಧಿಕಾರ ಪೂರ್ಣವಾಗಿದೆಯೇ ಎಂದು ಕೇಳಿಸಿದೆವು. ಬೃಹಸ್ಪತಿಯು ಅಲ್ಲಿ ಒಂದು ಗಳಿಗೆ ಯೋಚಿಸಿ ಉತ್ತರ ಕೊಡದೆ ದುಡುಕುವಂತೆ ಮಾಡಿ ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು ಪೂರ್ಣವಾಗುವುದಿಲ್ಲ ಎನ್ನಿಸಿ, ಈ ಆಟಗಳನ್ನೆಲ್ಲ ಹೂಡಿದೆವು. ನೀನು ದಿಗಿಲುಪಡಬೇಡ. ಆತನಿಗೆ ಚ್ಯವನ ಮಹರ್ಷಿಯ ಅನುಗ್ರಹವಿದೆ. ಅದು ಆತನನ್ನು ಧರ್ಮಭ್ರಷ್ಟನನ್ನಾಗಿಸುವುದಿಲ್ಲ. ಅದರಿಂದ ನಿನ್ನ ಪಾತಿವ್ರತ್ಯಕ್ಕೆ ಚ್ಯುತಿಯಿಲ್ಲ. ಮುಂದಿನದೆಲ್ಲ ನಿಮ್ಮಿಂದಲೇ ನಡೆಯಬೇಕಾಗುವುದರಿಂದ ನಾನೇನೂ ಹೇಳುವುದಿಲ್ಲ. ತಿರಸ್ಕರಿಣಿಯನ್ನು ಮಾತ್ರ ಮರೆಯಬೇಡಿ. ಇನ್ನು ನಾನು ಬರುವೆನು” ಎಂದು ಉಪಶ್ರುತಿಯು ಎಲ್ಲರಿಗು ಆಶೀರ್ವಾದ ಮಾಡಿ ಅಂತರ್ಧಾನವಾದಳು.

ಬೃಹಸ್ಪತಿಯು ಮತ್ತೆಯೂ ತಾನೇ ಅನರ್ಥಕಾರಣನಾದೆನೆಂದು ಶಚೀದೇವಿಯ ಮುಖವನ್ನು ನೋಡಿದನು. ಅಗ್ನಿವಾಯುಗಳಿಗೆ ಅದು ತಿಳಿಯಿತು. ಆದರೆ ಪತಿ ದರ್ಶನ ಕುತೂಹಲಳಾಗಿದ್ದ ಶಚೀದೇವಿಗೆ ಮಾತ್ರ ಅದು ಗೊತ್ತಾಗಲಿಲ್ಲ.

ಒಂದು ಗಳಿಗೆ ಯಾರೂ ಮಾತನಾಡಲಿಲ್ಲ. ಪ್ರತಿಯೊಬ್ಬರೂ ತಮ್ಮತಮ್ಮ ಯೋಚನೆಯಲ್ಲಿದ್ದರು. ಆಚಾರ್ಯನಿಗೆ ‘ಹಾಗಾದರೆ ಈ ಅನರ್ಥವೂ ತನ್ನಿಂದಲೇ ಆಯಿತೋ? ಮೊದಲಿನಿಂದಲೂ ನಾನೇ ಅನರ್ಥಕಾರಿಯಾದಂತಾಯಿತಲ್ಲ?’ ಎಂದು ಯೋಚನೆ. ಅಗ್ನಿಗೆ ‘ನೋಡಿದೆಯೋ? ತನ್ನ ಪಾಡಿಗೆ ತಾನು ಸುಖವಾಗಿದ್ದ ಮಾನವೇಂದ್ರನಿಗೆ ಆಸೆ ತೋರಿಸಿ ಸ್ವರ್ಗಕ್ಕೆ ಕರೆತಂದು ತಪ್ಪು ದಾರಿ ಹಿಡಿಸಿದಂತಾಯಿತಲ್ಲಾ?’ ಎಂದು ಯೋಚನೆ. ವಾಯುವಿಗೆ, ‘ಉಪಶ್ರುತಿಯ ಮಾತಿನಂತೆ ನಾವು ಯಾರೂ ಸ್ವತಂತ್ರರಲ್ಲ. ನಮ್ಮನ್ನು ಕುಣಿಸುವವನು ಇನ್ನೊಬ್ಬನಿದ್ದಾನೆ ಎಂದ ಮೇಲೆ ನಾವು ನಾವು ಎಂದು ಕುಪ್ಪಳಿಸುವುದಕ್ಕಿಂತ ಇನ್ನೂ ಹುಚ್ಚುತನವು ಉಂಟೆ?’ ಎಂದು ಗಾಢಯೋಚನೆ. ಶಚಿದೇವಿಗೆ ‘ಮೂರು ಲೋಕವಾಳುವ ಇಂದ್ರನನ್ನೂ ಅಂಜಿಸುವ ಹತ್ಯೆಯೆಂದರೆ, ಅದರ ಬಲವಿನ್ನೆಷ್ಟು ಇರಬೇಕು? ಅದನ್ನು ಇಲ್ಲವೆನ್ನಿಸುವುದು ಹೇಗೆ?’ ಎಂದು ಅಗಾಧ ಯೋಚನೆ.

ಒಂದು ಗಳಿಗೆಯಾದ ಮೇಲೆ ಎಲ್ಲರೂ ಸೇರಿ ಇತ್ಯರ್ಥಮಾಡಿದರು: ‘ಅಗ್ನಿ ವಾಯುಗಳ ರಕ್ಷಣೆಯಲ್ಲಿ ತಿರಸ್ಕರಿಣಿಯೊಡನೆ ಶಚಿಯು ಇಂದ್ರನನ್ನು ನೋಡಿ ಬರುವುದು. ಬೃಹಸ್ಪತಿಯು ಬ್ರಹ್ಮಲೋಕಕ್ಕೆ ಹೋಗಿ ಪಿತಾಮಹನ ಅಪ್ಪಣೆ ಪಡೆದು ವೈಕುಂಠಕ್ಕೆ ಹೋಗಿ ಮಹಾವಿಷ್ಣುವಿನ ದರ್ಶನಮಾಡಿ ಇಂದ್ರಶುದ್ಧಿಯ ಉಪಾಯವನ್ನು ತಿಳಿದುಬರುವುದು” ಎಂದು.

* * * *

೩೧.ಗಂಡಹೆಂಡಿರು

ಸಂಪಾದಿಸಿ

ಶಚೀದೇವಿಯು ಗುರುವು ಅನುಗ್ರಹಿಸಿದ ತಿರಸ್ಕರಣಿಯನ್ನು ತೆಗೆದುಕೊಂಡು ಪತಿದರ್ಶನಾರ್ಥವಾಗಿ ಮಾನಸ ಸರೋವರಕ್ಕೆ ಹೋದಳು. ಅಗ್ನಿ ವಾಯುಗಳು ಆಕೆಯ ರಕ್ಷಕರಾಗಿ ಹೋದರು. ಅಗ್ನಿಯು ಹೋಗುತ್ತಾ ದಾರಿಯಲ್ಲಿ ವಾಯುವಿಗೆ ಹೇಳಿದನು ; “ವಾಯು ನನಗೆ ಆ ಹತ್ಯೆಯನ್ನು ಮಾತನಾಡಿಸಬೇಕು ಎನ್ನಿಸುತ್ತದೆ.” ವಾಯುವು ನಗುತ್ತಾ ಹೇಳಿದನು : “ನೀನು ಪ್ರತಿಫಲವನ್ನು ಅನುಭವಿಸಲು ಸಿದ್ಧನಾದರೆ ಯಾವ ಕೆಲಸವನ್ನಾದರೂ ಮಾಡಬಹುದು. ಅದರಲ್ಲಿ ಏನೂ ತಪ್ಪಿಲ್ಲ.”

ಸರಿ, ನಿನ್ನ ಅನುಮತಿಯು ಸಿಕ್ಕಿತು. ಇನ್ನು ದೇವಿಯನ್ನು ಕೇಳುವೆನು: ಎಂದು ಶಚಿಯ ಬಳಿಗೈದು ಕೇಳಿದನು : “ಇಂದ್ರನನ್ನು ಕಾಡುತ್ತಿರುವ ಹತ್ಯೆಯನ್ನು ನೋಡಿ ಬರುವೆನು.”

ಶಚಿಯು ಯೋಚನೆ ಮಾಡಿದಳು : “ಆಗಬಹುದು. ಆದರೆ ನಿನ್ನನ್ನೂ ಅದು ಕಾಡಿದರೆ ?”

“ನಾನು ತಿಳಿದುಕೊಂಡಿರುವುದು ಸರಿಯಾದರೆ, ಅದಕ್ಕೆ ಇರುವ ಕಾಡುವ ಶಕ್ತಿಯು ನಿಯತವಾಗಿರಬೇಕು. ಅದರಲ್ಲಿ ನನ್ನ ಕಡೆಗಷ್ಟು ತಳ್ಳಿದರೆ, ಅದು ಇಂದ್ರನನ್ನು ಕಾಡುವ ಶಕ್ತಿಯು ಕಡಿಮೆಯಾಗುವುದು.”

ವಾಯುವು ಜೊತೆಯಲ್ಲೇ ಹೇಳಿದನು : “ಹಾಗೆ ಇಂದ್ರನಿಗೆ ಕಾಟವು ತಪ್ಪುವಂತಿದ್ದರೆ ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ.”

ಶಚಿಯಪ್ಪಣೆಯನ್ನು ಪಡೆದು ಆಕೆಯ ರಕ್ಷಣೆಗೆ ವಾಯುವನ್ನು ಇಟ್ಟು ಅಗ್ನಿಯು ತಾನು ಆ ಹತ್ಯೆಯನ್ನು ಹುಡುಕಿಕೊಂಡು ಹೋದನು.

ಮಾನಸ ಸರೋವರಕ್ಕೆ ನೈಋತ್ಯದಲ್ಲಿ ಒಂದು ವಿಶಾಲವಾದ ಊಷರಕ್ಷೇತ್ರದಲ್ಲಿ ಎಲ್ಲೋ ಒಂದು ಮುಳ್ಳುಕಂಟೆಯ ಮರೆಯಲ್ಲಿ ಗಾಳಿಯಲ್ಲಿ ಗಾಳಿಯಾಗಿ, ಆ ಹತ್ಯೆಯು ಹಿಮಾಲಯದ ಶೀತವಾತದಲ್ಲಿ ಗಡಗಡನೆ ನಡುಗುತ್ತಾ, ಮೈಯೆಲ್ಲ ಗಾಳಿಯ ತುಂಡಾದಂತೆ ಬಿದ್ದಿದೆ. ಬಳಿಯಲ್ಲಿ ಅಗ್ನಿಯು ಸುಳಿಯಲು ಅದು ಹಾವಿನಂತೆ ಬುಸುಗರೆಯಿತು. ಅಗ್ನಿಯು ವಾಕ್ಕರಣೆಯನ್ನು ಕೊಟ್ಟನು. ಹತ್ಯೆಯು ಮಾತನಾಡಿತು. ಅದು ಗಾಳಿಯಲ್ಲಿರುವ ಶಬ್ದವರ್ಣವಾದಂತೆ.

“ಇಂದ್ರ ! ಇಂದ್ರನಿಗಾಗಿ ಇನ್ನು ಎಷ್ಟು ದಿನ ಕಾಯಬೇಕೋ?”

“ನಾನು ಬಂದಿರುವವನು ಇಂದ್ರನಲ್ಲ”

“ಹೌದು ನಿನ್ನ ಸ್ಪರ್ಶದಿಂದ ಗೊತ್ತಾಯಿತು”

“ನಿನಗೆ ಸ್ಪರ್ಶವಲ್ಲದೆ ಇನ್ನೇನೂ ಗೊತ್ತಾಗುವುದಿಲ್ಲವೇನು?”

“ಇಲ್ಲ”

“ಹಾಗಾದರೆ, ಇಂದ್ರನನ್ನು ಹೇಗೆ ಗೊತ್ತುಮಾಡಿಕೊಳ್ಳುವೆ?”

“ಇಂದ್ರನು ಬಂದರೆ ನನಗೆ ತಿಳಿಯುತ್ತದೆ. ನಾನು ಹೋಗಿ ಹಿಡಿದು ಬಿಡುತ್ತೇನೆ.”

“ಇಂದ್ರನಿರುವುದು ಸ್ವರ್ಗದಲ್ಲಿ. ಇದು ಹಿಮಾಲಯ ಪ್ರಾಂತ. ಮನುಷ್ಯ ಭೂಮಿ. ಇಲ್ಲಿ ಕಾದು ಏನು ಫಲ?”

“ಇದು ಮನುಷ್ಯ ಭೂಮಿಯಲ್ಲ. ದೇವಿಭೂಮಿ. ಇಲ್ಲದಿದ್ದರೆ ನನ್ನನ್ನು ಹೀಗೆ ಸುಡುತ್ತಿರಲಿಲ್ಲ. ಇಂದ್ರನು ಇಲ್ಲಿಗೆ ಓಡಿಬಂದ. ಅವನನ್ನು ಬೆನ್ನಟ್ಟಿ ನಾನು ಬಂದೆ.”

“ಆತನೀಗ ಎಲ್ಲಿದ್ದಾನೆ?”

“ಅದೂ ನನಗೆ ಗೊತ್ತಿಲ್ಲ. ಅವರು ಬಂದರೇ ನನಗೆ ಗೊತ್ತಾಗುವುದು. ಹಿಡಿದುಬಿಡುವೆ. ಹುಂ. ಹೇಳಿಕೊಂಡು ಏನು ಫಲ? ಎರಡು ಹೆಜ್ಜೆಯಲ್ಲಿ ತಪ್ಪಿಸಿಕೊಂಡ. ಎಲ್ಲಿಗೆ ಹೋದಾನು? ಇಲ್ಲಿಯೇ ಎಲ್ಲಿಯೋ ಸೇರಿಕೊಂಡಿದ್ದಾನೆ. ಬರಲಿ ಈಚೆಗೆ,”

“ಬಂದರೇನು ಮಾಡುವೆ? ನಿನಗೆ ಅಂಗಾಗಗಳೇ ಇಲ್ಲವಲ್ಲ?”

“ಏನು ಮಾಡುವುದೆ? ನಾನು ಮುಟ್ಟಿದಲ್ಲಿ ಹುಣ್ಣಾಗುವುದು. ಕೊಳಕು ಮಂಡಲದ ಹುಣ್ಣಿನಂತೆ ತೀವ್ರವಾಗಿ ಒಂದೇ ಗಳಿಗೆಯೊಳಗೆ ಮೈಯೆಲ್ಲಾ ಹುಣ್ಣೇ ಹುಣ್ಣಾಗುವುದು.”

“ಧನ್ವಂತರಿಯು ಅಮೃತಸೇಚನದಿಂದ ಅದನ್ನು ಗುಣಪಡಿಸುವನು.”

“ಉಹುಂ, ಸಾಧ್ಯವಿಲ್ಲ. ಇದು ಪಾಪದಿಂದ ಆದುದು. ಇದಕ್ಕೆ ಸಾವೇ ಕೊನೆ.”

“ಇಂದ್ರನು ಅಮರನೆಂಬುದನ್ನು ಮರೆತು ಮಾತನಾಡುತ್ತಿರುವೆ.”

“ಹಾಗಾದರೆ ಅನುಭವಿಸಿ ಅನುಭವಿಸಿ ಕೊನೆಗೆ ಸತ್ತಂತೆ ಬೀಳುವನು.”

“ನೀನು ಕುರಿತು ಹೇಳುತ್ತಿರುವುದು ದೇವರಾಜನನ್ನು! ಬೀದಿಯ ಭಿಕಾರಿಯನ್ನಲ್ಲ.”

“ಹೌದು, ಹೌದು, ದೇವರಾಜನಾದರೂ ಪಾಪ ಮಾಡಿದಾಗ ಬೀದಿಯ ಭಿಕಾರಿಗಿಂತ ಕಡೆ.”

“ಆಯಿತು ಏನು ಮಾಡಿದರೆ ನಿನಗೆ ತೃಪ್ತಿಯಾಗುವುದು?”

“ನನಗೆ? ತೃಪ್ತಿ? ಉಹುಂ. ಇಲ್ಲ ನಾನು ಹುಟ್ಟಿರುವುದು ಇಂದ್ರನನ್ನು ತಿನ್ನುವುದಕ್ಕೆ. ಯಾರೂ ಅವನನ್ನು ಬಿಡಿಸಿಕೊಳ್ಳಲಾರರು.”

“ಆತನು ನಿನಗೆ ಸಿಕ್ಕದೆ ಹೋದರೆ ಏನು ಮಾಡುವೆ?”

“ಅದನ್ನು ನಾನು ಯೋಚಿಸಿಯೂ ಇಲ್ಲ, ಯೋಚಿಸುವುದೂ ಇಲ್ಲ.”

“ನಿನಗೆ ಕೊನೆ ಯಾವಾಗ?”

“ನನಗೆ ಕೊನೆ? ಇದ್ದಂತಿಲ್ಲ. ಆದರೆ, ಈ ದೇವಭೂಮಿಯಲ್ಲಿ ಈ ಚಳಿಗಾಳಿಯಲ್ಲಿ ಅದೂ ಈ ಸರೋವರದಿಂದ ಬೀಳುವ ಕುಳಿರ್ಗಾಳಿಯಲ್ಲಿ ನಾನು ಕೊರಗುತ್ತಿದ್ದೇನೆ. ಹೀಗೇ ಇದ್ದರೆ ಕರಗಿಯೂ ಹೋಗುವೆನೋ ಏನೋ?”

“ಹತ್ಯೆ ! ನಾನು ಹೇಳುವೆನು. ನಿನ್ನ ಕೈಗೆ ಇಂದ್ರನು ಸಿಕ್ಕುವುದಿಲ್ಲ ದೇವತೆಗಳೆಲ್ಲರೂ ಸೇರಿ ಆತನನ್ನು ಕೈಗೆ ಸಿಕ್ಕದಂತೆ ಮಾಡಬಲ್ಲರು.”

“ಇಲ್ಲ ಸಾಧ್ಯವಿಲ್ಲ”.

“ಹಾಗಾದರೆ, ನಿನಗೆ ಈ ಚಳಿಗಾಳಿಯಲ್ಲಿ ಕೊರಗಿ ಕರಗುವುದೇ ಗತಿ !”

“ನೀನು ನನ್ನ ಶಕ್ತಿಯನ್ನು ಕಾಣೆ. ನಾನು ಹುಟ್ಟಿರುವ ಕೆಲಸ ಮುಗಿಯುವವರೆಗೂ ನಾನು ಸಾಯುವುದಿಲ್ಲ.”

“ನಾನು ನಿನ್ನನ್ನು ಸುಟ್ಟುಬಿಡುವೆ.”

“ಸಾಧ್ಯವಿಲ್ಲ”

“ವಾಯುವು ನಿನ್ನನ್ನು ಶೋಷಿಸಿಬಿಡುವನು. ನೀನು ಆತನ ಕೈಗೆ ಸಿಕ್ಕಿದರೆ ತರಗೆಲೆಯಂತೆ ಜೀರ್ಣವಾಗಿ ಹೋಗುವೆ.”

“ನಾನು ಹುಟ್ಟಿರುವುದು ಇಂದ್ರನಿಗಾಗಿ. ಇಂದ್ರನನ್ನು ಆಹುತಿ ತೆಗೆದುಕೊಂಡೇ ಮುಂದಿನ ಮಾತು. ನಾನಿನ್ನು ಮಾತನಾಡುವುದಿಲ್ಲ ನನ್ನನ್ನು ಬಿಡು.”

ಅಗ್ನಿಯು ಏನು ಮಾಡಬೇಕೋ ತಿಳಿಯದಾದನು. “ಒಂದು ವೇಳೆ ಬೃಹಸ್ಪತಿಯೇ ಬಂದರೂ ಈ ಹತ್ಯೆಯು ಸಾಧ್ಯವಾಗುವುದೋ ಇಲ್ಲವೋ ಅಂದು ಇಂದ್ರನು ಓಡಿಹೋದಾಗ ಆತನು ಪಟ್ಟ ಗಾಬರಿಯನ್ನು ನೋಡಿದರೆ ಆತನು ನಿಜವಾಗಿಯು ಈ ಹತ್ಯೆಗೆ ಹೆದರಿರಬೇಕು. ಏನು ಮಾಡಬೇಕು?” ಅಗ್ನಿಯ ಯೋಚನೆಯನ್ನು ಕೇಳಿ ವಾಯುವೂ ಚಿಂತಾಪರನಾದನು.

ಇಬ್ಬರೂ ಯೋಚಿಸಿ ತಿರಸ್ಕರಣಿಯ ಸಹಾಯದಿಂದ ನಿರ್ವಾತ ಸ್ಥಳವನ್ನು ಸೃಷ್ಟಿಮಾಡಿ, ಅಲ್ಲಿ ಶಚೀದೇವಿಯ ಪೂಜೆಗೆ ಬೇಕಾದುದನ್ನೆಲ್ಲ ಸಿದ್ಧಮಾಡಿಕೊಟ್ಟು ತಾವು ಇಬ್ಬರೂ ಕೋಟೆ ಕಟ್ಟಿಕೊಂಡು ರಕ್ಷಣೆಗೆ ಕುಳಿತರು.

ಶಚಿಯು ಪೂಜೆಗೆ ಕುಳಿತಳು. ಆಕೆಯು ಮಾನವಸೃಷ್ಟಿಯಿಂದ ಬೇಕಾದುದನ್ನು ಮಾಡಬಲ್ಲಳು. ಜೊತೆಗೆ ಅಗ್ನಿ ವಾಯುಗಳ ಸಹಾಯವೂ ಇದೆ. ಕಲಶವನ್ನು ಇಟ್ಟು ಅದರಲ್ಲಿ ಇಂದ್ರನನ್ನು ಆವಾಹಿಸಿದಳು. ಇಂದ್ರ ಮಂತ್ರಗಳಿಂದ ಕಲಶಕ್ಕೆ ಪೂಜೆಮಾಡಿ, ತನ್ನ ಪ್ರಾಣಗಳನ್ನೂ ತನ್ನಿಂದ್ರಿಯಗಳನ್ನೂ ಕೊಟ್ಟು ಕಲಶದಲ್ಲಿರುವ ಆವಾಹಿತ ದೇವತೆಯು ರೂಪುಗೊಳ್ಳುವಂತೆ ಮಾಡಿದಳು. ಜೊತೆಗೆ ಋಕ್ಕಿನಿಂದ ಆವಾಹನೆ ಮಾಡಿ ಸಾಮಗಾನದಿಂದ ಆ ಕಲೆಯನ್ನು ವೃದ್ಧಿಗೊಳಿಸಿದಳು. ಕೊನಗೆ ಇಂದ್ರನು ಸೂಕ್ಷ್ಮರೂಪದಿಂದ ಕಾಣಿಸಿಕೊಂಡು “ಯಾರು ನನ್ನನ್ನು ಕರೆದವರು?” ಎಂದು ಸಣ್ಣ ಧ್ವನಿಯಲ್ಲಿ ಕೇಳಿದನು.

“ನಾನು ಶಚಿ. ತಿರಸ್ಕರಣಿಯು ಸುತ್ತಲೂ ವ್ಯಾಪಿಸಿರುವುದು. ನನ್ನೊಡನೆ ಮಾತನಾಡು. ನೀನು ಹತ್ಯೆಗೆ ದಿಗಿಲುಪಡಬೇಕಾಗಿಲ್ಲ. ಅಗ್ನಿ ವಾಯುಗಳು ಕಾವಲಾಗಿರುವರು.”

ಇಂದ್ರನು ನಿಟ್ಟುಸಿರುಬಿಟ್ಟು ಹೇಳಿದನು : “ದೇವಿ, ಕ್ಷಮಿಸು. ನಿನಗೆ ಹೇಳಿ ಬರಲೂ ಅವಕಾಶವಿರಲಿಲ್ಲ. ಆ ಹತ್ಯೆಯ ದರ್ಶನದಿಂದಲೇ ನನಗೆ ಮೈಯಾದ ಮೈಯ್ಯೆಲ್ಲ ಉರಿಯಲಾರಂಭಿಸಿತು. ಬೃಹಸ್ಪತಿಗೋ ಧನ್ವಂತರಿಗೋ ಅಶ್ವಿನಿ ದೇವತೆಗಳಿಗೋ ಇದಕ್ಕೆ ತಕ್ಕ ಪ್ರತಿಕ್ರಿಯೆ ತಿಳಿದಿತ್ತೋ ಏನೋ ? ಅಂತೂ, ನನಗೆ ಕಾಲವು ಚೆನ್ನಾಗಿಲ್ಲ. ಈ ಕಮಲನಾಳದ ಒಳಗೆ ಕುಳಿತು ತಪಸ್ಸು ಮಾಡುತ್ತಿದ್ದೇನೆ. ನನ್ನ ತಪಸ್ಸು ಪೂರ್ಣವಾಗುತ್ತಲೇ ನನಗೆ ಆಯುಧಗಳೆಲ್ಲ ದೊರೆಯುವುವು. ಈಗ ಆಯುಧಗಳು ಬಂದರೂ ಅವನ್ನು ಹಿಡಿದು ಪ್ರಯೋಗಿಸಲು ಶಕ್ತಿಯೂ ಇಲ್ಲ. ಧೈರ್ಯವೂ ಇಲ್ಲ ಇದು ಆಗಿರುವ ಅನರ್ಥ.”

“ಇನ್ನೆಷ್ಟು ದಿವಸ ಹೀಗಿರಬೇಕು ದೇವ ?”

“ನಿನ್ನ ಸನ್ನಿಧಿಯಿಂದ ಮನಸ್ಸು ಶುದ್ಧವಾಗುತ್ತಿದೆ. ಶಚಿ, ನೀನು ಇನ್ನು ಅಷ್ಟು ಹೊತ್ತು ಇಲ್ಲಿ ಇರಬಲ್ಲೆಯಾದರೆ, ನನ್ನ ಮನಸ್ಸು ಇನ್ನೂ ತಿಳಿಯಾಗಿ ನಾನು ಭವಿಷ್ಯವನ್ನು ನೋಡಬಲ್ಲವನಾಗುವೆನು.”

“ಆಗಲಿ ದೇವ, ಅಗ್ನಿ ವಾಯುಗಳನ್ನು ಕರೆಯಲೇ ?”

“ಕರೆ”

ನೆನೆಯುತ್ತಿದ್ದಂತೆಯೇ ಅಗ್ನಿವಾಯುಗಳು ಬಂದರು. ಇಂದ್ರನ ಆಕಾರವಿರುವ ತೇಜೋಮಂಡಲ, ಅದೂ ಮಲಿನವಾಗಿದೆ. ಅವರಿಬ್ಬರೂ ಕಣ್ಣಲ್ಲಿ ನೀರಿಟ್ಟುಕೊಂಡು,

“ಸ್ವಾಮಿ, ನಾವು ಏನೂ ಮಾಡಲಾಗುವುದಿಲ್ಲವೆ “ ಎಂದು ಕೇಳಿದರು.

ನೋಡುನೋಡುತ್ತಿದ್ದ ಹಾಗೆಯೇ ಇಂದ್ರಮಂಡಲವು ಪರಿಶುದ್ಧವಾಗುತ್ತ ಬಂತು. ಅದರ ಮಾಲಿನ್ಯವು ಕಳೆಯುತ್ತಾ ಬಂತು. ಇಂದ್ರನು ಈಗ ಸುಖಾಸನದಲ್ಲಿ ಸಮಾಹಿತನಾಗಿ ಕುಳಿತನು. ಕೇಳಿದನು : “ಅಲ್ಲಿ ಏನು ನಡೆದಿದೆ ? ಹೇಳಿ.”

ಅಗ್ನಿ ವಾಯುಗಳು ಹೊಸ ಇಂದ್ರನು ಬಂದಿರುವುದು, ಆತನು ಅಧಿಕಾರ ಪೂರ್ಣತೆಯನ್ನು ಬಯಸಿದುದು, ದೇವಸಭೆಯು ಮಾಡಿದ ನಿರ್ಣಯ, ಹೊಸ ಇಂದ್ರನು ಶಚಿಗೆ ಅವಧಿಯನ್ನು ಕೊಟ್ಟಿರುವುದು, ದೇವಗುರುವು ಮಹಾವಿಷ್ಣುವಿನ ಬಳಿಗೆ ಹೋಗಿರುವುದು, ಎಲ್ಲವನ್ನೂ ಹೇಳಿದರು. ಅದೆಲ್ಲವನ್ನೂ ಕೇಳಿ ಇಂದ್ರನಿಗೆ ಸಮಾಧಾನವಾಯಿತು.

ಇಂದ್ರನು ಹೇಳಿದನು : “ಮಹಾವಿಷ್ಣುವಿನ ಬಳಿಗೆ ದೇವಗುರುವು ಹೋಗಿರುವುದು ಬಹಳ ಸರಿಯಾಯಿತು. ಆತನು ಬರುವವರೆಗೆ ಕೊಂಚ ತಡೆದುಕೊಂಡಿರಿ. ನಾನು ನಹುಷನನ್ನು ಬಲ್ಲೆ. ಧರ್ಮಿಷ್ಠರಲ್ಲಿ ಅಗ್ರಗಣ್ಯರಲ್ಲಿ ಅಗ್ರಗಣ್ಯನು ಆತನು. ನಮ್ಮ ದುರದೃಷ್ಟದಿಂದ ಆತನಿಗೆ ದುರ್ಬುದ್ಧಿಯು ಬರಬೇಕಲ್ಲದೆ, ಅನ್ಯಥಾ ಇಲ್ಲ. ಆದರೂ ನಾವು ಎಚ್ಚರವಾಗಿರಬೇಕು. ನೀವು ಹೋಗಿ ಬನ್ನಿ.”

ಶಚಿಯು ಕೇಳಿದಳು : “ದೇವ, ಮತ್ತೆ ನಿನ್ನನ್ನು ಬಂದು ನೋಡಲು ಅಪ್ಪಣೆ ಕೊಡು.”

“ನನ್ನನ್ನು ನೋಡಬೇಕಾದರೆ ನಿನಗೆಷ್ಟು ಕಷ್ಟ ! ತಿರಸ್ಕರಿಣಿಯಿಲ್ಲದೆ ನನ್ನನ್ನು ನೋಡುವಂತಿಲ್ಲ. ನಾನು ಈಚೆಗೆ ಬರಬೇಕಾದರೆ ನನಗಿನ್ನೂ ಹತ್ಯೆಯ ಭೀತಿಯು ತಪ್ಪಿಲ್ಲ.”

“ವಜ್ರವನ್ನು ಪ್ರಾರ್ಥಿಸಿಕೊಂಡರೋ?”

“ನನಗೇನೋ ಪಾಪವು ಸಂಭವಿಸಿದೆ. ವಜ್ರವನ್ನು ಕುರಿತು ಧ್ಯಾನಿಸಲೂ ನನಗೆ ಧೈರ್ಯವಿಲ್ಲ. ಇರಲಿ, ದೇವಗುರುಗಳು ವೈಕುಂಠದಿಂದ ಬಂದ ಮೇಲೆ ಮತ್ತೆ ಬಾ. ನನಗೂ ನಿನ್ನ ಸಹವಾಸದಲ್ಲಿದ್ದರೆ ಏನೋ ಸುಖ.”

ಶಚಿಯು ನಾಚಿಕೊಂಡು ನಮಸ್ಕಾರ ಮಾಡಿ ಹೊರಟಳು. ಅಗ್ನಿ ವಾಯುಗಳೂ ಬೀಳ್ಕೊಂಡರು. ಇಂದ್ರನು ಎಲ್ಲರನ್ನೂ ಬೀಳ್ಕೊಟ್ಟು ತಾನು ಸೂಕ್ಷ್ಮರೂಪವನ್ನು ಧರಿಸಿ ಮೊದಲಿನಂತೆ ಕಮಲನಾಳದಲ್ಲಿ ಕುಳಿತನು. ಮಾನಸಸರೋವರದ ವಕ್ಷಸ್ಸಿನ ಮೇಲೆ ತೇಲುತ್ತಿದ್ದ ಬಾಷ್ಪಮೇಘವೊಂದು ಮರೆಯಾಯಿತು.

೩೨.ಪರಿಗ್ರಹಕ್ಕಿಂತ ತ್ಯಾಗ ಹೆಚ್ಚು

ಸಂಪಾದಿಸಿ

ನಹುಷೇಂದ್ರನು ವಿರಜಾದೇವಿಯೊಡನೆ ತನ್ನ ವಿಲಾಸಮಂದಿರದಲ್ಲಿ ವಿಶ್ರಮಿಸಿ ಕೊಳ್ಳುತ್ತಿದ್ದಾನೆ. ವಿಲಾಸಮಂದಿರದಲ್ಲಿದ್ದರೂ ಆತನಿಗೆ ಇಂದು ಏಕೋ ವಿಲಾಸವಿಲ್ಲ. ಲೋಕಾಂತರದಿಂದ ದೈತ್ಯದಾನವಗಣಗಳಿಗೆ ಯುದ್ಧವಾಗುತ್ತಿದೆಯೆಂದು ಸುದ್ದಿ ಬಂದಿರುವುದರಿಂದ ಹೀಗಾಗಿರುವುದೆಂದರೆ, ಆತನೇ ಇತ್ಯರ್ಥವನ್ನು ಹೇಳಿದ್ದಾನೆ. ದುಷ್ಟರು ಪರಸ್ಪರ ಕಾದಾಡುತ್ತಿರುವುದರಿಂದ ಲೋಕಕ್ಷೇಮವೆಂದು ಅನ್ಯಮನಸ್ಕನಾಗಿ ಅಪ್ಸರೋಗಣದ ನರ್ತನಸೇವೆಯನ್ನು ಒಪ್ಪಿಸಿಕೊಂಡಿದ್ದಾನೆ. ಹಾಗೆಯೇ ಗಂಧರ್ವಗಣದ ಸಂಗೀತಸೇವೆಯನ್ನೂ ಅಮನಃಪೂರ್ವಕವಾಗಿ ಸವೀಕರಿಸಿದ್ದಾನೆ. ಗಂಧರ್ವಾಪ್ಸರೆಯರು ಬೀಳ್ಕೊಂಡು ತೆರಳುವುದರಲ್ಲಿದ್ದಾಗ, ಚಿತ್ರರಥನಿಗೆ ಸನ್ನಿಧಾನದ ಅಪ್ಪಣೆಯಾಗಿದೆ, ಕೊಂಚ ಕಾದಿರಬೇಕೆಂದು. ವಿರಜಾದೇವಿಗೂ ಆತನ ಸ್ಥಿತಿಯು ಮನವರಿಕೆಯಾಗಿದೆ. ಆಕೆಗೆ ಕಾರಣವೂ ಗೊತ್ತಿರಬಹುದು. ಅದರಿಂದ ಸಾವಧಾನವಾಗಿ ಕಾಯುತ್ತಿದ್ದಾಳೆ.

ಅರಸನು ಒಂದು ಗಳಿಗೆಯಾದ ಮೇಲೆ ಮಾತನಾಡಿದನು. ಈಗ ವಿಷಾದ ವಿರಲಿಲ್ಲ. ಅದಕ್ಕೆ ಪ್ರತಿಯಾಗಿ ಗಂಭೀರವಾದ ಚಿತ್ತವೃತ್ತಿಯಿದ್ದಂತೆ ತೋರಿತು : “ದೇವಿ, ದೀಪದ ಪ್ರಕಾಶವು ಹೆಚ್ಚಾದಂತೆಲ್ಲ ನೆರಳೂ ದಪ್ಪವಾಗಿ ಕತ್ತಲೆಯು ದಟ್ಟವಾಗುವುದು. ಅದರಂತೆ ಆಯಿತು ನಾವು ಇಂದ್ರಪದವಿಗೆ ಒಪ್ಪಿದುದು. ಆನಂದವು ಲಭಿಸಿದರೂ ಅದರಲ್ಲಿ ದುಃಖಾನುಭಾವವು ಬರಲಿಲ್ಲ. ಬರುವುದೂ ಇಲ್ಲ. ಈ ದೇವತೆಗಳು ನಮ್ಮನ್ನು ಇಲ್ಲಿ ಉಳಿಸುವುದಿಲ್ಲ. ಏನಾದರೂ ಮಾಡಿ ಉರುಳಿಸಿಯೇ ಉರುಳಿಸುವರು. ಅಷ್ಟರೊಳಗೆ ಹಿಂದಿನ ಇಂದ್ರನು ಮಾಡದಿದ್ದುದು ಏನಾದರೂ ಮಾಡಿ ನಾವೇ ಈ ಇಂದ್ರಪದವಿಯನ್ನು ಬಿಟ್ಟು ಬಿಡೋಣ. ಈ ಹಾವಿನ ಹೆಡೆಯ ನೆರಳಲ್ಲಿ ವಾಸ ಸಾಕು. ನೀನೇನೆನ್ನುವೆ ?”

ವಿರಜಾದೇವಿಯು ನಕ್ಕು ಹೇಳಿದಳು : “ದೇವಾ, ತಮ್ಮ ಕೈಹಿಡಿದು ನಾನು ಇಂದು ಸುಖವಾಗಿದ್ದೇನೆ. ನನಗೂ ತಮಗೆ ಎನ್ನಿಸಿದಂತೆಯೇ ಎನ್ನಿಸುತ್ತದೆ. ನಮಗೆ ಆನಂದಾನುಭವಶಕ್ತಿಯು ಹೆಚ್ಚಾಗಿದೆ. ನಿಜ ಆದರೂ ನಾನು ಯೋಚಿಸಿದ್ದೇನೆ. ಈ ಆನಂದವು ಪದವೀಭಾಗ್ಯ ಸಂಪನ್ನತೆಗಳನ್ನು ಅವಲಂಬಿಸಿಲ್ಲ. ಅದೊಂದು ಆಂತರೀಯಕವಾದ ಶಕ್ತಿ. ಅದು ನಮಗೆ ಬಂತು. ಒಂದೇ ದಿನವಾಗಲಿ ಇಂದ್ರಭೋಗವನ್ನು ಅನುಭವಿಸಿಯಾಯಿತು. ಇದರಲ್ಲಿ ಸಂಪತ್ತಿಗಿಂತ ವಿಪತ್ತೇ ಹೆಚ್ಚು. ನನಗೆ ತಮ್ಮ ಪಾದಸೇವೆ ಭಾಗ್ಯವಿದ್ದರೆ ಸಾಕು. ನನ್ನ ಪತಿದೇವನು ಇಂದ್ರನಾದರೆ ಪಡುವ ಆನಂದವನ್ನು ಆತನು ಯಃಕಶ್ಚಿತ್ತನಾದರೂ ನಾನು ಪಡೆವೆನೆಂಬ ಭಾಗ್ಯವು ನನಗೆ ಯಾವಾಗಲೂ ಉಂಟೆಂಬ ನಂಬಿಕೆ ಇದೆ. ಅದರಿಂದ ತಾವು ಯೋಚಿಸಿರುವುದು ಸರಿ.”

ನಹುಷನು ತಲೆದೂಗಿದನು “ಹೌದು, ಸಾಮ್ರಾಜ್ಞಿ ನೀನೂ ಸಹ ನನ್ನಂತೆಯೇ ಯೋಚಿಸುವೆಯೆಂಬುದನ್ನು ನಾನು ಬಲ್ಲೆ. ಅಷ್ಟೇ ಅಲ್ಲ. ನಾನು ಮಾಡಿದುದನ್ನು ಒಪ್ಪಿಕೊಳ್ಳುವೆಯೆಂಬುದನ್ನೂ ಬಲ್ಲೆ. ಅದರೂ ಅರ್ಧಾಂಗಿಯಾದ ನಿನ್ನನ್ನು ಕೇಳದೆ ಮಾಡುವುದು ವಿಹಿತವಲ್ಲವೆಂದು ಕೇಳುತ್ತಿದ್ದೇನೆ. ಹಿಂದಿನ ಇಂದ್ರನು ಮಾಡಲು ಹಿಂತೆಗೆಯುತ್ತಿದ್ದುದನ್ನು ಮಾಡೋಣ. ಅಂದು ಭೂಲೋಕದಿಂದ ನಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲರನ್ನೂ ಬರಮಾಡಿಕೊಳ್ಳೋಣ. ಆ ಕಾರ್ಯವಾದ ಮೇಲೆ ಈ ಇಂದ್ರಪದವಿಯನ್ನು ನಾವಾಗಿ ಬಿಟ್ಟುಬಿಡೋಣ, ಏನೆನ್ನುವೆ ?”

“ಆಗಬಹುದು. ಆಯಿತು ದೇವ. ತಾವು ಭೂಲೋಕದ ಅಧಿಪತ್ಯವನ್ನು ಮಗನಿಗೆ ಕೊಟ್ಟಿರಿ. ಇಂದ್ರಪದವಿಯನ್ನು ಬಿಟ್ಟುಕೊಡುವಿರಿ. ಆಮೇಲೇನಾಗುವಿರಿ?”

“ವಾನಪ್ರಸ್ಥರಾಗೋಣ. ದೈವಕೃಪೆಯಿಂದ ನಾವಿನ್ನೂ ಮಾನುಷತ್ವವನ್ನುಉಳಿಸಿಕೊಂಡಿದ್ದೇವೆ. ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”

ವಿರಜಾದೇವಿಯು ಅದನ್ನು ಕೇಳಿ ಮೆಚ್ಚಿಕೊಂಡಳು. “ಹೌದು ದೇವ ಬೆಟ್ಟಗಳನ್ನು ಅಲ್ಲಾಡಿಸಿದ ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”

ನಹುಷನು ಸಂತೋಷದಿಂದ ಸಮ್ಮತಿಯನ್ನು ನೀಡಿದ ಸಾಮ್ರಾಜ್ಞಿಯನ್ನು ಅಭಿನಂದಿಸುತ್ತ, ಕೈತಟ್ಟಿ ಪ್ರಹರಿಯನ್ನು ಕರೆದು “ಚಿತ್ರರಥನಿದ್ದರೆ ಬರಹೇಳು” ಎಂದನು. ಉತ್ತರ ಕ್ಷಣದಲ್ಲಿಯೇ ಆತನು ಬಂದು ಕೈಕಟ್ಟಿಕೊಂಡು ನಿಂತು ``ಅಪ್ಪಣೆಗೆ ಕಾದಿದ್ದೇನೆ” ಎಂದನು. ಅರಸನು “ಮಿತ್ರ, ನಿನಗೆ ತೊಂದರೆಯಿಲ್ಲದಿದ್ದರೆ ಇಂದ್ರಪತ್ನಿಯನ್ನು ನಾನು ನೋಡಬೇಕು ಎಂದು ಹೇಳಿ ಬಾ. ಸಾಧ್ಯವಷ್ಟೆ ?” ಎಂದನು. ಚಿತ್ರರಥನು ಅರಸನ ಗೌರವದಿಂದ ಸನ್ಮಾನಿತನಾದುದನ್ನು ಆತನ ಹಸನ್ಮುಖವು ಸೂಚಿಸುತ್ತಿರಲು ‘ಅಪ್ಪಣೆ’ ಎಂದು ಹೊರಟನು. ಅರಸನು ಮತ್ತೊಮ್ಮೆ “ಇಂದ್ರಪತ್ನಿಯನ್ನು ಶಚೀದೇವಿಯನ್ನಲ್ಲ” ಎಂದನು. ಚಿತ್ರರಥನು ತನಗದು ಅರ್ಥವಾಯಿತು ಎಂದು ತಲೆಯನ್ನಾಡಿಸುತ್ತ ಹೊರಟು ಹೋದನು.

ಅರಸನು ಇಂದ್ರಪತ್ನಿಯನ್ನು ಅಲ್ಲಿ ನೋಡುವುದು ಸರಿಯಲ್ಲವೆಂದು ಅರಸಿಯೊಡನೆ ದರ್ಶನಮಂದಿರಕ್ಕೆ ಬಂದನು. ನಾತಿಭರಣಭೂಷಿತಳಾಗಿ ಶಚೀದೇವಿಯು ಬಂದು ಅರಸನನ್ನು ಕಾಣಿಸಿಕೊಂಡಳು. ಅರಸನು ಸತೀಮುಖವಾಗಿ ಆಕೆಯನ್ನು ಬರಮಾಡಿಕೊಂಡನು. ಶಚಿಯು ವಿರಜಾದೇವಿಯೊಡನೆ ಆಸನದಲ್ಲಿ ಕುಳಿತ ಮೇಲೆ ಅರಸನು ಕೇಳಿದನು : “ತಮ್ಮ ಪತಿಮಾರ್ಗವು ಸಫಲವಾಯಿತೆ ?” ಮಾತಿನಲ್ಲಿ ಸರಳತೆಯಿತ್ತು. ಏನೂ ಕೊಂಕುತನವಿರಲಿಲ್ಲ. ಶಚೀದುಃಖದಲ್ಲಿ ಭಾಗಿಯಾದವನ ಸ್ನೇಹಭಾವವಿತ್ತು. ಮೊದಲ ದಿನದ ಏಕವಚನ ಇಂದು ಬಹುವಚನವಾಗಿದ್ದುದು ಆಕೆಗೆ ಹಿಡಿಯಿತು.

ಶಚಿಯು ಗಂಭೀರವಾಗಿ ಚಿರಪರಿಚಿತನಾದ ಸೋದರನೊಡನೆ ಮಾತನಾಡುವ ಸ್ನೇಹದಿಂದ ಹೇಳಿದಳು. ಆದರವಿದ್ದರೂ ಸಲುಗೆಯಿರಲಿಲ್ಲ. “ದೇವರಾಜ, ಆತನು ಹತ್ಯಾಭೀತನಾಗಿ ತಲೆಮರೆಸಿಕೊಂಡಿರುವನೆಂಬುದು ತಿಳಿಯಿತು. ಏನು ಮಾಡಿದರೆ ಆ ಭೀತಿಯು ನಾಶವಾಗುವುದೆಂದು ತಿಳಿದುಬರಲು ದೇವಾಚಾರ್ಯನು ಮಹಾವಿಷ್ಣುವಿನ ಸನ್ನಿಧಿಗೆ ಹೋಗಿಬಂದನು.”

“ನಮ್ಮಿಂದ ಆಗಬೇಕಾಗಿರುವುದು ಏನಾದರೂ ಇದ್ದರೆ ಸಂಕೋಚವಿಲ್ಲದೆ ಹೇಳಬೇಕು.”

“ದೇವ, ತಾವು ಕೇಳುತ್ತಿರುವುದು ನನಗೆ ನಿಜವಾಗಿಯೂ ಸಂಕಟವಾಗಿದೆ. ತಾವು ಧರ್ಮಸೀಮಾಪುರುಷರು. ಬೇಕೆಂದರೆ ನನ್ನ ಇಂದ್ರನು ಹಿಂತಿರುಗಿ ಬರುವುದಾದರೆ ಇಂದ್ರಪದವಿಯನ್ನು ಆತನಿಗೆ ಬಿಟ್ಟುಕೊಡುವುದಕ್ಕೂ ಸಿದ್ಧರಾಗಿರುವಿರಿ. ಅದನ್ನು ನಾನು ಬಲ್ಲೆ. ಆದರೂ, ಆತನು ಈಗಲೇ ಬರುವಂತಿಲ್ಲ. ತಮಗೆ ಈಗ ದೇವಸಭೆಯು ಕೊಟ್ಟಿರುವ ಪದವಿಯು ಇಷ್ಟುಕಾಲವಾದರೂ ನಡೆಯಲೇಬೇಕೆಂಬ ನಿಯಮವುಂಟಾಗಿ ಅದುವರೆಗೂ ಯಾರೂ ತಮ್ಮನ್ನು ಏನೂ ಮಾಡಲಾಗುವುದಿಲ್ಲ. ಅದರಿಂದ ಕಾಲಯಾಪನೆ ಮಾಡಬೇಕು.”

“ನಾನು ಈಗ ತಮಗೆ ಹೇಳಿದುದರ ಉದ್ದೇಶವು ಸಫಲವಾದರೆ ತಾವು ಕಾಲಯಾಪನೆ ಮಾಡಬೇಕಾಗಿಲ್ಲ. ನಾನಾಗಿ ಇಂದ್ರಪದವಿಯನ್ನು ಬಿಟ್ಟುಕೊಡಲು ಸಿದ್ಧನಾಗಿದ್ದೇನೆ.”

ಶಚಿಗೆ ಆಶ್ಚರ್ಯವಾಯಿತು. ಆಕೆಯು ತನ್ನ ಕಿವಿಯನ್ನು ತಾನೇ ನಂಬಲಾರದೆ ಹೋದಳು. ಆಕೆಯ ಕಣ್ಣು ಬಾಯಿ ಮುಖಗಳು ಆಶ್ಚರ್ಯವನ್ನು ತೋರಿಸುತ್ತಿರಲು, ನಿಜವೇ ಎಂದು ಆ ಭಾವವೇ ಕೇಳುತ್ತಿರಲು, ಅರಸನು ಅದುವರೆಗೂ ಬಗ್ಗಿಸಿದ್ದ ಕತ್ತನ್ನು ಮೇಲಕ್ಕೆತ್ತಿ, ಆಕೆಯ ಮುಖವನ್ನು ಪ್ರಸನ್ನವಾಗಿ, ನೇರವಾಗಿ, ನೋಡುತ್ತ “ಹೌದು, ಇದರಲ್ಲಿ ಸಂದೇಹವಿಲ್ಲ. ನನ್ನದೊಂದು ಕೋರಿಕೆಯಿದೆ. ಅದು ಪೂರೈಸಿದರೆ, ನಾನು ಇಂದ್ರಪಟ್ಟವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದೇನೆ” ಎಂದನು.

ಶಚಿಗೆ ಏನೂ ಅರ್ಥವಾಗಲಿಲ್ಲ. ‘ಇಂದ್ರಪತ್ನಿಯೆಂದು ತನಗೆ ಕೇಳಿಕಳುಹಿಸಿದ್ದಾನೆಯಾಗಿ ಅತನಲ್ಲಿ ಸಂಶಯಪಡಬೇಕಾಗಿಲ್ಲ. ಶಚೀಪತಿಯಾಗಬೇಕೆಂದು ಕೋರಿದ್ದುಂಟು. ಈಗಿನ ಕೋರಿಕೆ ಅದಿರಲಾರದು. ಆ ಕೋರಿಕೆಯು ನೆರವೇರಿದರೆ ಇಂದ್ರಪದವಿಯನ್ನು ಬಿಟ್ಟುಕೊಡುವುದಾದರೆ, ಅದೆಂತಹ ಕೋರಿಕೆಯಿರಬಹುದು?’ ಎಂದು, ಮೆಲ್ಲಮೆಲ್ಲನೆ “ಆ ಕೋರಿಕೆಯನ್ನು ಕೇಳಬಹುದೆ?” ಎಂದಳು.

ಅರಸನು ನಗುತ್ತಾ, ಆಕೆಯ ಸಂಶಯವನ್ನು ಪೂರ್ಣವಾಗಿ ನಿವಾರಿಸಲು “ಇಂದ್ರಪತ್ನಿ” ಎಂದು ಮನಃಪೂರ್ವಕವಾಗಿ ಸಂಬೋಧಿಸಿ ಹೇಳಿದನು. ಇಂದ್ರ ಪತ್ನಿ ಹಿಂದಿನ ಇಂದ್ರನು ಮಾಡದೆ ಬಿಟ್ಟಿದ್ದ ಕೆಲಸವೇನು ಹೇಳಿ ಅದನ್ನು ನಾನು ಮಾಡಿ ‘ನ ಭೂತೋ ನ ಭವಿಷ್ಯತಿ’ ಎನ್ನಿಸಿಕೊಂಡು, ಇಂದ್ರತ್ವವನ್ನು ಬಿಟ್ಟು ವಾನಪ್ರಸ್ತನಾಗುವೆನು”

ಶಚಿಯು ಬೆಚ್ಚಿದಳು, ತಾನು ಕೇಳುತ್ತಿರುವುದು ನಿಜವೇ? ಎನ್ನಿಸಿತು. ಆದರೆ ಧರ್ಮಪ್ರಭುವಾದ ನಹುಷನು ಮೂರನೆಯಾಶ್ರಮವನ್ನು ಪಡೆಯುವುದಾದರೆ, ವಿರಜಾದೇವಿಯು ಒಪ್ಪುವಳೇ? ಎನ್ನಿಸಿ ಆಕೆಯ ಮುಖವನ್ನು ನೋಡಿದಳು. ಆಕೆಯು ಮುಗುಳುನಗೆಯಿಂದ, “ಹೌದು, ನೀವು ಬರುವವರೆಗೂ ಅದೇ ವಿಚಾರದಲ್ಲಿದ್ದೆವು. ಅವರು ಮಾಡಿದುದು ನನಗೂ ಒಪ್ಪಿಗೆ” ಎಂದಳು.

ಶಚೀದೇವಿಯು ಯೋಚನಾಮಗ್ನಳಾದಳು. “ಇಂದ್ರನು ಮಾಡಲಾರದೆ ಬಿಟ್ಟಿದ್ದ ಕೆಲಸವಾವುದು?” ಅಷ್ಟು ಹೊತ್ತು ಯೋಚಿಸಿದಳು. ಸಿಕ್ಕಿತು. ಆದರೆ ಅದನ್ನು ಹೇಳುವುದು ಹೇಗೆ? ನಹುಷನು ಆಕೆಯ ಮುಖಭಾವದಿಂದಲೇ ಅನಿಷ್ಟ ಸಂಗತಿಯನ್ನು ಹೇಳಲು ಆಕೆಯು ಸಂಕೋಚಪಡುತ್ತಿರುವಳೆಂದು ತಿಳಿದುಕೊಂಡು “ತಾವೇನೂ ಶಂಕಿಸಬೇಕಾಗಿಲ್ಲ, ತಮಗೆ ಕೆಟ್ಟ ಹೆಸರು ಬರುವುದಿಲ್ಲ” ಎಂದನು.

ಆದರೂ ಶಚಿಯು ಹೆದರಿಕೊಂಡು ಮೆಲ್ಲಮೆಲ್ಲಗೆ ಹೇಳಿದಳು “ಸಪ್ತರ್ಶಿಶಿಬಿಕಾ ಎಂದು ಒಂದುಂಟು. ಅದು ಇಂದ್ರನಿಗೆ ಮಾತ್ರ ಸಲ್ಲುವ ಮರ್ಯಾದೆ. ಅದರಲ್ಲಿ ವಿಶೇಷವೆಂದರೆ, ಮನ್ವಂತರದವರೆಗೂ ವೇದರಕ್ಷಣಕ್ಕಾಗಿ ದೀಕ್ಷಿತರಾಗಿರುವ ಸಪ್ತರ್ಷಿಗಳು ಬಂದು ಒಂದು ಪಲ್ಲಕ್ಕಿಯಲ್ಲಿ ಇಂದ್ರನನ್ನು ಕುಳ್ಳಿರಿಸಿ ತಾವು ಅದರ ವಾಹಕರಾಗುವರು. ಆದರೆ ಇಂದ್ರನು ಸಪ್ತರ್ಷಿಗಳ ಯೋಗ್ಯತೆಯನ್ನೂ ಗೌರವವನ್ನೂ ಪೂಜಿಸಿ, ಆ ಪಲ್ಲಕ್ಕಿಯನ್ನು ಏರಿದಂತೆ ಮಾಡಿ, ಅಲ್ಲಿಗೇ ಬಿಡುವನು. ಅದಕ್ಕಿಂತ ಹೆಚ್ಚಿನ ಗೌರವವು ಇಂದ್ರನಿಗಿಲ್ಲ !”

“ಎಂದರೆ, ಐರಾವತ, ಉಚ್ಚೈಃಶ್ರವ, ಇವುಗಳಿಗಿಂತ ಇಂದ್ರಸಿಂಹಾಸನಕ್ಕಿಂತ ಅದು ಹೆಚ್ಚಿನ ಮರ್ಯಾದೆಯೆಂದು ತಮ್ಮಭಿಪ್ರಾಯವೆ ?”

“ಹೌದು, ಸಂದೇಹವಿಲ್ಲ. ಆದರೆ, ಇಂದ್ರನು ಅದನ್ನು ಉಪಯೋಗಿಸದೆಯೇ ಗೌರವಿಸುತ್ತಿದ್ದನು.”

“ಕಾರಣವೇನು ?”

“ದೇವ, ತಾವು ತಿಳಿಯದ್ದು ಏನುಂಟು ? ಭೋಗ ಭೋಗವೂ ಅನುಭವಿಸಿದಂತೆಲ್ಲ ಕರ್ತನ ತೇಜಸ್ಸನ್ನು ತಿನ್ನುವುದು. ಅದರೊಳಗೂ ದೇವಲೋಕದಲ್ಲಂತೂ ಆ ದೇವತೆಗಳಿಗೆ ಅದು ತಪ್ಪಿದ್ದೇ ಅಲ್ಲ. ಈ ಸಪ್ತರ್ಷಿಶಿಬಿಕವು ಇತರ ಭೋಗಗಳಂತೆ ದೇವತೆಗಳಿಗೂ ತೇಜೋಹಾನಿಯನ್ನುಂಟು ಮಾಡುವುದು. ಅದರಿಂದ, ಇಂದ್ರನೂ ಅದಕ್ಕೆ ಹೆದರುವನು.”

“ದೇವಿ, ತಾವು ದೇವಸಾಮ್ರಾಜ್ಞಿಯರು. ಅದರಿಂದ ಕೇಳುವೆನು. ನನಗೆ ತಿಳಿಯುವಂತೆ ಹೇಳಿ, ಪ್ರತಿಯೊಂದು ಕರ್ಮವೂ ಅಧಿಯಜ್ಞ ಅಧಿದೈವ ಆದಾಗ, ತೇಜೋಹಾನಿಯಾಗದೆ ತೇಜೋವೃದ್ಧಿಯಾಗುವುದಲ್ಲವೆ ?”

“ಮಿಕ್ಕೆಲ್ಲ ಕರ್ಮಗಳೂ, ಇಂದ್ರಿಯ ಕರ್ಮಗಳೂ ಸಹ, ಹಾಗೆ ಆಗುವುದನ್ನು ಬಲ್ಲೆ. ಆದರೆ ಸಪ್ತರ್ಷಿಶಿಬಿಕಾರೋಹಣವು ಹಾಗಾಗುವುದೋ ಇಲ್ಲವೋ ! ನಾನರಿಯೆ”

“ಕಾರಣ ?”

“ದೇವ ನಾನು ನನ್ನ ಪತಿಯಾದ ಇಂದ್ರನು ಎಳೆದ ಗೆರೆಯಿಂದಾಚೆಗೆ ಹೋಗುವುದಿಲ್ಲ. ಆತನು ಬೇಡವೆಂದರೆ ಏಕೆ ಎಂದು ಕೇಳದೆ ಅದನ್ನು ಬೇಡ ಎನ್ನುವವಳು ನಾನು. ಅದರಿಂದ ಈ ವಿಚಾರದಲ್ಲಿ ನಾನು ಏನೂ ಹೇಳಲೂ ದಕ್ಷಳಲ್ಲ.”

“ಹಾಗಾದರೆ ಇಂತಹ ವಿಷಯಗಳಲ್ಲಿ ತಮ್ಮ ವಿಚಾರವು ಕುಂಟು ಎಂದು ಕೊಳ್ಳೋಣವೆ ?”

ಶಚಿಯು ನಕ್ಕಳು “ತಾವು ಧರ್ಮಜ್ಞರು, ಧರ್ಮಿಷ್ಠರು ಎಂದು ಇಂದ್ರನೂ ಒಪ್ಪಿಕೊಂಡಿರುವನು. ಅದರಿಂದ ಎರಡು ಮಾತು ಹೆಚ್ಚಾದರೂ ತಾವು ಕ್ಷಮಿಸಬೇಕು. ಧರ್ಮವಿಷಯದಲ್ಲಿ ವಿಚಾರವು ಒಂದು ವಸ್ತುವನ್ನು ಅಂಗೀಕರಿಸುವುದಕ್ಕಿಂತ ಮುಂಚೆ, ಅಂಗೀಕರಿಸಿದ ಮೇಲೆ ದೊಡ್ಡದು ದೊಡ್ಡದೇ ; ಚಿಕ್ಕದು ಚಿಕ್ಕದೆ ಅಲ್ಲವೇ ?”

“ಸರಿ, ತಮ್ಮ ನಿರ್ಣಯವು ಧರ್ಮಸಮ್ಮತವಾದುದು. ಹಾಗಾದರೆ ಈ ವಿಚಾರವು ಸಪ್ತರ್ಷಿಗಳಲ್ಲಿಯೇ ಜಿಜ್ಞಾಸೆ ಮಾಡಬೇಕೇ ?”

“ಹೌದು, ಆಯಿತು. ಇದುವರೆಗೂ ತಾವು ತಮ್ಮ ವಿಷಯವನ್ನು ಹೇಳಿ ಕೇಳಿದ್ದಾಯಿತು. ನಮ್ಮ ವಿಚಾರವನ್ನು ಕೇಳುವುದಿಲ್ಲವೆ ?”

“ತಾವೇ ಹೇಳಿದಿರಲ್ಲ ಅಂಗೀಕರಿಸುವುದಕ್ಕಿಂತ ಮುಂಚೆ ವಿಚಾರ. ನಾವು ತಮ್ಮನ್ನೂ ಇಂದ್ರನನ್ನೂ ನಮಗಿಂತ ದೊಡ್ಡವರೆಂದು ಒಪ್ಪಿದ್ದೇನೆ. ಅದರಿಂದ ತಮಗಿಂತ ದೊಡ್ಡವರಾಗುವ ವಿಷಯವನ್ನು ಮಾತ್ರ ಕುರಿತು ವಿಚಾರಿಸಿದೆವು. ತಾವಾಗಿ ಏನು ಹೇಳಿದ್ದರೂ ನಾವು ಕೇಳಲು ಸಿದ್ಧರಾಗಿರುವೆವು.”

“ಸಂತೋಷ. ಸಹೃದಯರೊಡನೆ ಹೇಳಿಕೊಂಡ ಸುಖವು ಅಭಿವೃದ್ಧಿಯಾಗುವುದು, ದುಃಖವು ಹ್ರಾಸವಾಗುವುದು. ಅದರಿಂದಲೇ ಲೋಕವು ತನ್ನ ಸುಖದುಃಖಗಳನ್ನು ತನಗೆ ಬೇಕಾದವರೊಡನೆ ಹೇಳಿಕೊಳ್ಳುವುದು. ಈಗಲೂ ಹಾಗಾಗಲೆಂದು ತಮ್ಮೊಡನೆ ನನ್ನ ವಿಚಾರಗಳನ್ನು ಹೇಳಿಕೊಳ್ಳುವೆನು. ದೇವಾಚಾರ್ಯರು ಇಂದ್ರ ವಿಷಯವಾಗಿ ಮಹಾವಿಷ್ಣುವನ್ನು ಕಂಡಿದ್ದರು, ಆತನು ಇಂದ್ರನದೇ ತಪ್ಪು. ಹತ್ಯೆಯು ಗೋಚರವಾಗುತ್ತಲೂ ಹೆದರಿ ಓಡಿಹೋಗದೆ, ‘ಏನು ಮಾಡುವೆಯೋ ಮಾಡು’ ಎಂದು ತನ್ನ ಒಂದು ರೂಪವನ್ನು ಅದಕ್ಕೆ ಕೊಟ್ಟು ಇನ್ನೊಂದು ರೂಪದಿಂದ ಅದಕ್ಕೆ ಪ್ರತಿಕ್ರಿಯೆಯನ್ನು ಮಾಡಬೇಕಾಗಿತ್ತು.

ವಿಶ್ವರೂಪವಧಕ್ಕಿಂತ ಪೂರ್ವವಾಗಿ ಬರುವ ಹತ್ಯೆಯನ್ನು ಪ್ರತಿಬಂಧಿಸುವ ವಿಚಾರವನ್ನು ಯೋಚಿಸಿ ಅದನ್ನು ಹಂಚಿಹಾಕಿದಂತೆ, ವೃತ್ರವಧಕ್ಕಿಂತ ಮುಂಚೆ ಹತ್ಯೆಯನ್ನು ಕಳೆದುಕೊಳ್ಳುವ ವಿಚಾರವನ್ನು ಪೂರ್ವಭಾವಿಯಾಗಿಯೇ ಮಾಡಬೇಕಾಗಿತ್ತು. ವಿಶ್ವರೂಪ ಹತ್ಯೆಯನ್ನು ಹಂಚಿ ಹಾಕಿದವನು ವೃತ್ರಹತ್ಯೆಯನ್ನು ನಿವಾರಿಸಲು ತಾನು ಹಂಚಿಕೊಳ್ಳಬೇಕಾಗಿತ್ತು. ಈಗಲೂ ಆತನ ಶುದ್ಧಿಗಿರುವುದು ಅದೊಂದೇ ದಾರಿ. ಆತನು ಒಂದು ರೂಪದಿಂದ ಅದನ್ನು ಅನುಭವಿಸಲಿ. ಹತ್ಯೆಯಿಂದಾಗುವ ಹಾನಿಯನ್ನು ಕಳೆದುಕೊಳ್ಳಲು ಹಲವು ರೂಪದಿಂದ ತಪಸ್ಸು ಮಾಡಲಿ. ಹಿಂದೆ ಸಹಸ್ರ ಕವಚ ಸಂಹಾರಕ್ಕಾಗಿ ನಾನು ನರನಾರಾಯಣನಾಗಿರಲಿಲ್ಲವೆ ? ಹಾಗೆ ಎಂದನಂತೆ.”

style="text-indent: 1cm;">“ಹಾಗಾದರೆ, ಆ ಇಂದ್ರನು ಪರಿಶುದ್ಧನಾದ ಹಾಗೆಯೇ ! ನಾವು ಇಂದ್ರ ಪದವಿಯನ್ನು ಬಿಟ್ಟು ಸುಖವಾಗಿರಬಹುದು.”

“ಆ ವಿಚಾರವಾಗಿಯೂ ಮಹಾವಿಷ್ಣುವಿನ ಅಪ್ಪಣೆಯಾಗಿದೆ. ತಾವಾಗಿ ಬಿಡುವವರೆಗೆ ಯಾರೂ ತಮ್ಮನ್ನು ಬಲವಂತ ಮಾಡುವಂತಿಲ್ಲ.”

ಅರಸನು ಯೋಚಿಸಿದನು : “ಆಯಿತು. ದೇವಿ, ತಾವು ಹೇಳುವ ಈ ಶಿಬಿಕಾ ಪೂಜೆಯು ನಡೆಯುವುದು ಯಾವಾಗ ?”

“ಉತ್ತರಾಯಣ ಸಂಕ್ರಮಣದ ಮರುದಿನ ?”

“ಸರಿ. ಈಗಿನ್ನೂ ದಕ್ಷಿಣಾಯನವು ನಡೆಯುತ್ತಿದೆ. ಉತ್ತರಾಯಣದಲ್ಲಿ ನಾವು ಶಿಬಿಕಾಪೂಜೆ ಮಾಡಿ ಶಿಬಿಕಾರೋಹಣ ಮಾಡುವೆವು. ಆ ವೇಳೆಗೆ ಇಂದ್ರನು ಪರಿಶುದ್ಧನಾಗಿ ಬರಲಿ. ಸಾಧ್ಯವಾದರೆ, ನಾವು ಇಂದ್ರಾಭಿಷೇಕದಲ್ಲಿ ಭಾಗಿಗಳಾಗುವೆವು.”

ಶಚಿಯು ಏನು ಉತ್ತರ ಕೊಡಲಾರದೆ ಹೋದಳು. ಆದರೆ ಸುಮ್ಮನಿರುವುದೆಂತು ? ಪೆಚ್ಚುನಗೆ ನಗುತ್ತ ಹೇಳಿದಳು : “ದೇವತ್ವಕ್ಕಿಂತ ಮನುಷ್ಯತ್ವವು ಇಂದು ಶ್ರೇಷ್ಠವಾಯಿತು.”

ನಹುಷನು, ಸಂತೋಷದಿಂದ ಮುಖವು ಒಂದು ಹರಿವಾಣದಷ್ಟಾಗುತ್ತಿರಲು “ಏನು ? ಏನು ?” ಎಂದು ಕೇಳಿದನು.

ಶಚಿಯು ಸಹಜವಾಗಿ ಸತ್ಯವನ್ನಾಡುವ ಮಗುವಿನಂತೆ ನುಡಿದಳು : “ದೇವ, ಇದುವರೆಗೂ ದೇವತೆಗಳು ಮಾನವರಿಗೆ ವರಗಳನ್ನು ಕೊಡುತ್ತಿದ್ದರು. ಈಗ ಮಾನವರು ದೇವತೆಗಳಿಗೆ, ಅದೂ ಇಂದ್ರದಂಪತಿಗಳಿಗೆ ವರವನ್ನು ಕೊಡುವಂತಾಯಿತು. ಅರ್ಥಾತ್ ತಾವು ನಮಗೆ ಪೂಜ್ಯರಾದಿರಿ.”

ಅರಸನು ಇನ್ನು ಏನೋ ಅರ್ಥಾಂತರ ಮಾಡಿಕೊಂಡಿದ್ದವನಂತೆ, “ಹಾಗೆಯೇ? ದೇವಿ, ನಮಗೆ ಬೇಡವಾದುದನ್ನು ಬಿಡುವುದು, ಇತರರಿಗೆ ಕೊಟ್ಟ ವರವಾದೀತೆ ?” ಎಂದು ಕೇಳಿದನು.

ಶಚಿಯು ಅರಸನ ಅರ್ಥವನ್ನು ಪೂರ್ಣವಾಗಿ ಗ್ರಹಿಸಲಾರದೆ “ಹಾಗೆಂದರೆ?” ಎಂದು ಕೇಳಿದಳು.

ಅರಸನು ಗಂಭೀರವಾಗಿ ಉತ್ತರ ಕೊಟ್ಟನು : “ಶಾಸ್ತ್ರಗಳಲ್ಲಿ ಗಾರ್ಹಸ್ಥ್ಯಕ್ಕಿಂತ ವಾನಪ್ರಸ್ಥವು ಹೆಚ್ಚು ಎಂದು ಹೇಳುತ್ತದೆ. ನಮ್ಮ ಶಾಸ್ತ್ರಗಳು ನಿಜವಾದರೆ ಪರಿಗ್ರಹಕ್ಕಿಂತ ತ್ಯಾಗವು ಹೆಚ್ಚು. ಪದವಿಗಳಲ್ಲೆಲ್ಲಾ ಅನಧಿಕವಾದ ಇಂದ್ರ ಪದವಿಯು ಲಭಿಸಿತು. ಅದರಲ್ಲಿಯೂ ಇಂದ್ರನಿಗಿಂತ ಹೆಚ್ಚಾಗುವ ಉಪಾಯವನ್ನು ತಾವು ತಿಳಿಸಿಕೊಟ್ಟಿರಿ. ಅಲ್ಲಿಗೆ ಪರಿಗ್ರಹವು ಪರಿಪೂರ್ಣವಾಯಿತು. ಇನ್ನು ಉಳಿದಿರುವುದು ತ್ಯಾಗ. ಅಷ್ಟೇ ತಾನೇ ?”

ಶಚಿಯ ಆ ಅಪಿಶುನತ್ವವನ್ನು ಕಂಡು ಚಕಿತಳಾದಳು : “ಭೋಗವೆಂದರೆ ಅಂಟಿಗಿಂತಲೂ ಹೆಚ್ಚಾಗಿ ಅಂಟಿಕೊಳ್ಳುವ ದೇವತ್ವಕ್ಕಿಂತಲೂ ತ್ಯಾಗವನ್ನು ಆರಾಧಿಸುವ ಮನುಷ್ಯತ್ವವು ಹೆಚ್ಚು ಎನ್ನಬೇಕು. ಅಥವಾ ಇದು ಈತನ ಧರ್ಮಾಸಕ್ತಿಯ ಫಲವೋ? ಧರ್ಮವೃಕ್ಷವು ಸಾಕಲ್ಯವಾಗಿ ಬೆಳೆದರೆ ತ್ಯಾಗವೆನ್ನುವ ಮಹಾಫಲವನ್ನು ಕಾಯುವುದೇನು? ಬಹುಶಃ ಆ ಮಾತನ್ನು ಒಪ್ಪಿಕೊಳ್ಳಲು ಭೋಗಕ್ಕಿಂತ ತ್ಯಾಗವು ಹೆಚ್ಚೆಂದು ಒಪ್ಪಿಕೊಳ್ಳುವುದಕ್ಕೂ ಚಿತ್ತಶುದ್ಧಿಯು ಬೇಕೋ ಏನೋ?” ಎಂದು ವಿಸ್ಮಯದಿಂದ ಚಿಂತಿಸುತ್ತಿದ್ದು ಎದ್ದು ಆತನಿಗೆ ಭಕ್ತಿಪೂರ್ವಕವಾಗಿ ನಮಸ್ಕಾರ ಮಾಡಿ, ವಿರಜಾದೇವಿಯು ಕೊಟ್ಟ ಮಂಗಳ ವಸ್ತ್ರಗಳನ್ನು ಸ್ವೀಕರಿಸಿ ಬೀಳ್ಕೊಂಡು ಹೊರಟು ಬಂದಳು.

* * * *

೩೩.ವಿಶ್ವಜಿದ್ಯಜ್ಞ

ಸಂಪಾದಿಸಿ

ನಹುಷೇಂದ್ರನು ದರ್ಶನಮಂದಿರದಲ್ಲಿ ದೇವಗುರುಗಳೋಡನೆ ಮಾತನಾಡುತ್ತಾ ಕುಳಿತಿದ್ದಾನೆ. ಅರಸನು ಕೇಳಿದನು : “ಅದೇನು, ನೀವು ದೇವತೆಗಳು ಸಪ್ತರ್ಷಿಗಳನ್ನು ಅಷ್ಟು ಗೌರವಿಸುವುದು?”

ದೇವಗುರುವು ಹೇಳಿದನು : “ಹಿಂದಿನದೊಂದು ಆಖ್ಯಾಯಿಕೆಯನ್ನು ಇಲ್ಲಿ ಹೇಳಲು ಅಪ್ಪಣೆಯಾಗಬೇಕು. ಹಿಂದೆ ಭೂಮಂಡಲದಲ್ಲಿ ಪ್ರತರ್ದನನೆಂಬ ಮಹಾರಾಜನಿದ್ದನು. ಆತನು ತನ್ನ ಶೌರ್ಯದಿಂದ ಸ್ವರ್ಗವನ್ನು ಗೆದ್ದನು. ಆಗ ಇಂದ್ರನು ಸುಪ್ರೀತನಾಗಿ `ನಿನಗೆ ವರವನ್ನು ಕೊಡುವೆನು, ಕೇಳು’ ಎಂದನು. ಶೌರ್ಯಗರ್ವಿತನಾದ ಆ ರಾಜನು “ನೀನು ಉತ್ತಮೋತ್ತಮವೆಂದುಕೊಂಡ ವರವನ್ನು ಕೊಡು” ಎಂದನು. ಆಗ ಇಂದ್ರನು ಆತನಿಗೆ ‘ಬ್ರಹ್ಮವಿದ್ಯೆಗಿಂತ ಉತ್ತಮವಾದ ವರವಿಲ್ಲ. ತೆಗೆದುಕೋ’ ಎಂದು ಬ್ರಹ್ಮವಿದ್ಯೆಯನ್ನು ಕೊಟ್ಟನು. ಮಿಕ್ಕವರು ಗುರುಮುಖದಿಂದ ಅಧ್ಯಯನ ಮಾಡಿ ತಿಳಿದುಕೊಂಡರೂ ಚಿತ್ರಾಗ್ನಿಯಂತೆ ಇರುವ ಬ್ರಹ್ಮವಿದ್ಯೆಯು ಸಪ್ತರ್ಷಿಗಳಲ್ಲಿ ಯಾವಾಗಲೂ ಜ್ವಾಲಾಮಾಲಾಸುಂದರವಾಗಿರುವುದು. ಇತರರಿಗೆ ಅಲಭ್ಯವಾದುದರಿಂದ ಖಿಲವೆನ್ನಿಸಿಕೊಂಡಿರುವ ವೇದಭಾಗವು ಅವರಿಗೆ ತಿಳಿದಿರುವುದು. ಇತರರು ತಪಸ್ಸಿನಿಂದಲೂ ಆರ್ಜಿಸಲಾರದ ಸ್ಥಿತಿಯು ಅವರಿಗೆ ಸಹಜವಾಗಿ ಸಿದ್ಧವಾಗಿರುವುದು. ಇದನ್ನು ಬಲ್ಲ ದೇವತೆಗಳು ಅವರನ್ನು ಗೌರವಿಸುವುದನ್ನು ಬಿಟ್ಟು ಇನ್ನೇನು ಮಾಡಬಲ್ಲರು?”

ನಹುಷನು ನ್ಯಾಯವೆಂಬಂತೆ ತಲೆದೂಗಿ ಹೇಳಿದನು : “ಇಂದ್ರನು ಅವರನ್ನು ಸಾಕ್ಷಾತ್ಕರಿಸಿಕೊಳ್ಳಲು ತಮ್ಮನ್ನು ಆಶ್ರಯಿಸಬೇಕಂತೆ?”

“ಅದು ಪದ್ಧತಿ. ದೇವಾಚಾರ್ಯನಿಗೆ ದೇವರಾಜನು ಸಲ್ಲಿಸುವ ಗೌರವ.”

“ಸರಿ. ನಾವೂ ಅದನ್ನು ಗೌರವಿಸೋಣ. ಅವರನ್ನು ಏನು ಕೇಳಬೇಕಾದರೂ ತಮ್ಮ ಮುಖವಾಗಿಯೇ ಕೇಳಬೇಕೋ?”

“ಇಲ್ಲ ಅಂತಹ ನಿಯಮವೇನೂ ಇಲ್ಲ. ಅಲ್ಲದೆ ತಾವು ಧರ್ಮಪರಾಯಣ ರಾದವರೆಂದು ತಮಗೆ ಎಲ್ಲೆಲ್ಲಿಯೂ ಸ್ವಾತಂತ್ರ್ಯವುಂಟು.”

ದೇವರಾಜನು ಸ್ತುತಿಗರ್ಭವಾದ ಆ ವಾಕ್ಯಗಳನ್ನು ಕೇಳಿ ಹರ್ಷಿತನಾಗಿ ನುಡಿದನು : “ದೇವಗುರುಗಳು ದಯಮಾಡಿ ನಮಗೆ ಸಪ್ತರ್ಷಿಗಳ ದರ್ಶನವನ್ನು ಮಾಡಿಸಬೇಕು. ಮತ್ತು ನಾವು ಅವರೊಡನೆ ಸ್ವಂತಕ್ಕಾಗಿ ಕೆಲವು ಮಾತುಗಳನ್ನು ಆಡಲು ಅಪ್ಪಣೆ ಕೊಡಬೇಕು.”

ಬೃಹಸ್ಪತಿಯು ‘ಆಗಬಹುದು’ ಎಂದು ಆಸನಸ್ಥನಾಗಿ ಧ್ಯಾನದಲ್ಲಿ ಕುಳಿತನು. ಸಪ್ತರ್ಷಿಗಳಿಗಾಗಿ ಆಸನಗಳೂ ಮಧುಪರ್ಕಾದಿ ಪೂಜಾಸಾಧನಗಳೂ ಸಿದ್ಧವಾದುವು. ಉತ್ತರ ಕ್ಷಣದಲ್ಲಿಯೇ ದೇವಗುರುವು ಜಗ್ಗನೆದ್ದು “ಇದೋ ಸಪ್ತರ್ಷಿಗಳು ದಯಮಾಡಿಸುತ್ತಿರುವರು” ಎಂದನು. ಅರಸನೂ ಎದ್ದನು. ಪಾದುಕೆಗಳ ಶಬ್ದವು ಕೇಳಿಸಿತು. ಸಪತ್ನಿಕರಾದ ಸಪ್ತರ್ಷಿಗಳೂ ದೃಗ್ಗೋಚರರಾದರು. ದೇವಾಚಾರ್ಯನು ಅವರಿಗೆಲ್ಲ ಇಂದ್ರನ ಪರವಾಗಿ ಮಧುಪರ್ಕಾದಿ ಪೂಜೆಯನ್ನೊಪ್ಪಿಸಿದನು. ಅವರೆಲ್ಲ ಪ್ರಸನ್ನರಾಗಿ, “ದೇವರಾಜನಿಗೆ ನಮ್ಮಿಂದ ಆಗಬೇಕಾದ ಕೆಲಸವೇನಿದೆ? ಲೋಕಲೋಕಗಳೂ ಕ್ಷೇಮವಾಗಿವೆಯಷ್ಟೇ?” ಎಂದು ಕುಶಲಪ್ರಶ್ನಪೂರ್ವಕವಾಗಿ ವಿಚಾರಿಸಿದರು.

ದೇವರಾಜನು ನಯವಿನಯ ಭಕ್ತಿಗಳಿಂದ ಆ ಪ್ರಶ್ನಕ್ಕೆ ಉತ್ತರವನ್ನು ಸಲ್ಲಿಸಿ, “ಮನಸ್ಸಿನಲ್ಲಿ ವಿಚಿತ್ರವಾದ ಕೋರಿಕೆಯೊಂದು ಮೊಳೆತಿದೆ. ಅದನ್ನು ಸನ್ನಿಧಾನದಲ್ಲಿ ವಿಜ್ಞಾಪಿಸಬೇಕೆಂದು ತೋರಿತು. ತಮ್ಮ ಅಪ್ಪಣೆಯಾದಂತೆ ನಡೆಯುವೆನು” ಎಂದನು.

ಭರದ್ವಾಜರು ವಸಿಷ್ಠರ ಅಪ್ಪಣೆಯಂತೆ ನುಡಿದರು : ``ದೇವರಾಜನು ಮನುಷ್ಯೇಂದ್ರನಾಗಿದ್ದಾಗ ಸಂಪಾದಿಸಿದ ಚ್ಯವನಾನುಗ್ರಹವು ಧರ್ಮವನ್ನು ಮಾಡಿಸಿ ಅನನ್ಯಭವ್ಯವಾದ ಇಂದ್ರಪದವಿಯನ್ನು ಕೊಟ್ಟಿತು. ಹಾಗೆ ವಿಶಿಷ್ಟವಾದ ರೀತಿಯಲ್ಲಿ ಧರ್ಮವನ್ನು ಆಚರಿಸಿದ ಮಹಾನುಭಾವ ದರ್ಶನಸಲ್ಲಾಪಗಳಿಂದ ಸಪ್ತರ್ಷಿಗಳೂ ಆನಂದಿಸುವರು. ದೇವರಾಜ, ನಿನ್ನ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳು. ನಮಗೆ ಅದು ಗೊತ್ತಿದೆ. ನಮ್ಮಲ್ಲಿ ಒಬ್ಬರೊಬ್ಬರೂ ಮುಂದಾಗುವುದನ್ನು ತಿಳಿಯಬಲ್ಲೆವು. ಆದರೂ ನಿನ್ನ ಬಾಯಿಂದ ಕೇಳಿ ಸುಖಿಸಬೇಕೆಂದಿರುವೆವು, ಹೇಳು.”

ದೇವರಾಜನು ಸಪ್ತರ್ಷಿಗಳು ತನ್ನ ಮಾತನ್ನು ಗೌರವಿಸುವರೆಂಬ ನಂಬಿಕೆಯಿಂದ ದೃಢವಾದರೂ ಸಣ್ಣಗಿರುವ ಗೌರವದ ದನಿಯಿಂದ ಹೇಳಿದನು: “ಋಷಿಸಾರ್ವಭೌಮರಿಗೆ ಸಾಷ್ಟಾಂಗ ಪ್ರಣಾಮಗಳು. ತಮ್ಮೆಲ್ಲರ ಅನುಗ್ರಹದಿಂದ ಮುಖ್ಯವಾಗಿ ಗುರುಕೃಪೆಯಿಂದ ಲಭಿಸಿದ ಧರ್ಮಾಚರದ ಫಲವಾಗಿ ಎಂದು ತಾವು ಅಪ್ಪಣೆ ಕೊಟ್ಟಂತೆ ಇಂದ್ರಪದವಿಯು ಲಭಿಸಿತು. ಈಗ ನಡೆದಿರುವ ನಡವಳಿಕೆಗಳಿಂದ ಎಂದಿದ್ದರೂ ಈ ಪದವಿಯು ನನಗೆ ತಪ್ಪಿಯೇ ತಪ್ಪಬೇಕು. ಆದರೆ ಧರ್ಮಾಯತ್ತವಾಗಿ ಬಂದುದು ದೈವಾಯತ್ತವಾಗಿ ತಪ್ಪಿತು ಎನ್ನುವುದಕ್ಕಿಂತ ನಾನೇ ಸ್ವಾಯತ್ತವಾಗಿ ಇದನ್ನು ತ್ಯಜಿಸಿ ಧರ್ಮವೃದ್ಧಿಯಾಗುವಂತೆ, ಮಾಡಿಕೊಳ್ಳಬೇಕು ಎಂದಿರುವೆನು. ಅದಕ್ಕೆ ತಮ್ಮ ಅನುಗ್ರಹವಾಗಬೇಕು.”

“ಧರ್ಮವೃದ್ಧಿಯೇ ಗುರಿಯಾದರೆ, ನೀನು ಏನು ಮಾಡಬೇಕೆಂದರೂ ನಮ್ಮ ಬೆಂಬಲವುಂಟು ಹೇಳು.”

“ಈ ಪದವಿಯನ್ನು ತ್ಯಜಿಸುವುದಕ್ಕಿಂತ ಮುಂಚೆ ಅತೀಂದ್ರವಾದ ಕಾರ್ಯವನ್ನು ಮಾಡಬೇಕೆಂದಿರುವೆನು.”

“ಸರಿ. ಹೇಳು.”

“ಸಪ್ತರ್ಷಿಶಿಬಿಕೆಯು ಇಂದ್ರನಿಗೆ ಸಲ್ಲುವ ಅತ್ಯಂತ ಗೌರವಗಳಲ್ಲಿ ಒಂದು ಎಂದು ಕೇಳಿದೆನು. ಅದನ್ನು ಆತನು ತೇಜೋಹಾನಿಯಾದೀತೆಂದು ಹೆದರಿ ಆರೋಹಿಸುವುದಿಲ್ಲವಂತೆ, ಯಾವ ಕಾರ್ಯವನ್ನು ಮಾಡಿದರೂ ಅದರಿಂದ ತೇಜೋಹಾನಿಯಾಗದೆ ವೃದ್ಧಿಯೇ ಆಗುವಂತೆ ಮಾಡಿಕೊಳ್ಳುವ ಸಾಧನವೊಂದುಂಟು ಎಂದು ಕೇಳಿರುವೆನು. ಅದನ್ನು ತಾವು ದಯವಿಟ್ಟು ಅನುಗ್ರಹಿಸಬೇಕು.”

ಭರದ್ವಾಜನು ಎಲ್ಲರ ಮುಖಗಳನ್ನು ಮತ್ತೆ ನೋಡಿ ಅವರ ಸಮ್ಮತಿಯನ್ನು ಪಡೆದು ಹೇಳಿದರು : “ದೇವರಾಜ, ಹೌದು. ಅಂತಹದೊಂದು ಕ್ರಿಯೆಯುಂಟು. ಅದನ್ನೇ ಯಜ್ಞವೆನ್ನುವರು. ನೀನು ಸಪ್ತರ್ಷಿಶಿಬಿಕಾರೋಹಣಯಜ್ಞ ಮಾಡಬೇಕೆಂದಿರುವೆ. ಅದಕ್ಕಾಗಿ ಮಾಡಬೇಕಾದ ಯಜ್ಞವೆಂದರೆ ವಿಶ್ವಜಿದ್ಯಜ್ಞ. ನೀನು ಅದನ್ನು ಮಾಡಬಲ್ಲೆಯಾ ?”

“ನಾನು ಮಾಡುವೆನು ಎನ್ನುವುದಕ್ಕಿಂತ ಅದನ್ನು ನನ್ನಿಂದ ತಾವು ಮಾಡಿಸಬೇಕೆಂದು ಪ್ರಾರ್ಥಿಸಿಕೊಳ್ಳುವೆನು.”

“ಚ್ಯವನಮಹರ್ಷಿಗಳ ಅನುಗ್ರಹವು ನಿನ್ನನ್ನು ಕಾದಿದೆ. ಅಲ್ಲದೆ, ನೀನು ಇಂದ್ರನಾಗುವಾಗ ಪಿತೃಗಳು ಕೊಟ್ಟ ವರವೂ, ನೀನು ಕೇಳಿದ ರಹಸ್ಯವೆಂಥದೇ ಆದರೂ ಅದನ್ನು ತಿಳಿಸಬೇಕೆಂದು ಪಡೆದುಕೊಂಡ ವರವೂ ನಿನ್ನ ಬೆಂಗಾವಲಿಗಿವೆ. ಅದರಿಂದ ನಿನಗೆ ಆ ವಿಶ್ವಜಿದ್ಯಜ್ಞವನ್ನು ಅದನ್ನು ಮಾಡುವ ಕ್ರಮವನ್ನೂ ಹೇಳಲೇಬೇಕು. ಕೇಳು ; ನಿನ್ನ ಸರ್ವಸ್ವವನ್ನೂ ನಿನ್ನಲ್ಲಿರುವ ಕರ್ತೃಭೋಕ್ತೃಶಕ್ತಿಯನ್ನೂ ಸರ್ವವ್ಯಾಪಕನಾದ ಮಹಾವಿಷ್ಣುವಿಗೆ ಒಪ್ಪಿಸುವುದೇ ವಿಸ್ವಜಿದ್ಯಜ್ಞ. ಇದನ್ನು ಮಾಡಲು ನೀನು ಸಿದ್ಧವಾಗಿರುವೆಯಾ ?”

“ತಮ್ಮಿಂದ ಅಪ್ಪಣೆಯಾದುದನ್ನು ಮಾಡಲು ಸಿದ್ಧನಾಗಿದ್ದೇನೆ.”

“ದೇವರಾಜ, ಮಾತು ಕೊಡುವುದಕ್ಕಿಂತ ಮುಂಚೆ ಚೆನ್ನಾಗಿ ಪರ್ಯಾಲೋಚಿಸು. ಸಪ್ತರ್ಷಿಶಿಬಿಕಾರೋಹಣ ಮಾಡುವವನು ಅಹಂಕಾರವನ್ನೂ ಆ ಅಹಂಕಾರ ಕಾರಣವಾದ ಅಭಿಮಾನವನ್ನೂ ತ್ಯಜಿಸಬೇಕು.”

“ಧರ್ಮವಾಗಿ ಏನೇನು ತ್ಯಜಿಸಬಹುದೋ ಅದೆಲ್ಲವನ್ನೂ ತ್ಯಜಿಸುವೆನು.”

“ಭಲೆ, ದೇವರಾಜ, ನೀನು ಬಹು ಜಾಗರೂಕನಾಗಿರುವೆ. ನಿಜ, ನೀನು ಗೃಹಸ್ಥನು. ಪತ್ನಿಯೊಬ್ಬಳನ್ನಲ್ಲದೆ ಮಿಕ್ಕೆಲ್ಲವನ್ನೂ ತ್ಯಜಿಸುವೆನೆಂದೆ. ಸರಿ ! ನೀನೂ ಹೇಳಿದಂತೆಯೇ ಆಗಲಿ. ನೀನು ವಿಶ್ವಜಿದ್ಯಜ್ಞ ಮಾಡಲು ಶತ್ರುಮಿತ್ರಭೇದವನ್ನು ಬಿಡಬೇಕು.”

“ಶತ್ರುಗಳನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿ ಅವರನ್ನು ಔದಾರ್ಯದಿಂದ ಮಿತ್ರರನ್ನಾಗಿ ಮಾಡಿಕೊಂಡಿರುವೆನು. ಅದರಿಂದ ಲೋಕವೇ ನನಗೆ ಮಿತ್ರವಾಗಿರುವಾಗ ಶತ್ರುಮಿತ್ರದ ಭೇದವನ್ನು ಬಿಡುವುದು ನನಗೆ ಕಷ್ಟವಿಲ್ಲ.”

“ಆಯಿತು. ಇತರರನ್ನು ಗೆದ್ದು ಪದಾಕ್ರಾಂತರನ್ನಾಗಿ ಮಾಡಿಕೊಂಡೆ. ನಿನ್ನಲ್ಲಿಯೇ ಸೇರಿಕೊಂಡು ನಿನ್ನನ್ನು ಪದಾಕ್ರಾಂತನನ್ನಾಗಿ ಮಾಡಿಕೊಂಡ ರಾಗದ್ವೇಷಗಳನ್ನೂ ಅವುಗಳ ಫಲವಾದ ಸುಖದುಃಖಗಳನ್ನೂ ಬಿಡುವೆಯಾ?”

“ಬಿಟ್ಟೆನೆಂದು ಹೇಳಿದರೆ ಸುಳ್ಳು. ಅವುಗಳನ್ನು ನಿಯಮಿತ ಮಾಡುವೆನು.”

“ನೀನು ಸತ್ಯವಾದಿ. ದೇವರಾಜ, ಅವುಗಳನ್ನು ಬಿಡಲಾಗುವುದಿಲ್ಲವೆಂದೇ ಬಲ್ಲವರು ಅವುಗಳ ವಿಚಾರದಲ್ಲಿ ಉದಾಸೀನರಾಗಿ ಧರ್ಮವನ್ನು ಮಾತ್ರ ಆಚರಿಸುವರು. ಅವುಗಳನ್ನು ಬಿಡುವುದೆಂದರೆ ಧರ್ಮಪರಾಯಣನಾಗುವುದು. ನೀನು ಆಗಿರುವೆಯೆಂದೇ ನಾವು ಇದನ್ನು ಕುರಿತು ಪ್ರಸ್ತಾಪಿಸಿದುದು. ಇದಿಷ್ಟೂ ಶಿಬಿಕಾರೋಹಣದ ಪೂರ್ವಸಿದ್ಧತೆ, ಅಹಂಕಾರವನ್ನು ಅರ್ಥಾತ್ ರಾಗದ್ವೇಷಗಳನ್ನು ಬಿಡಲಾರದೆ ಇಂದ್ರನು ಈ ಶಿಬಿಕಾರೋಹಣವೇ ಬೇಡವೆಂದನು. ನೀನು ಪೂರ್ವ ಸಿದ್ಧತೆಯನ್ನು ಪಡೆದಿರುವೆಯಾಗಿ ನೀನು ಶೀಬಿಕಾರೋಹಣವನ್ನು ಮಾಡಬಹುದು.

“ತಾವು ಅಪ್ಪಣೆಯನ್ನು ಕೊಟ್ಟುದಕ್ಕಾಗಿ ನಾನು ಕೃತಜ್ಞನಾಗಿರುವೆನು. ಆದರೆ, ತಾವಿನ್ನೂ ಒಂದು ವಿಷಯವಾಗಿ ಅಪ್ಪಣೆ ಕೊಡಿಸಿಲ್ಲ. ಆರೋಹಿಸಿದ ಮೇಲೆ ಶಿಬಿಕೆಯಲ್ಲಿರುವಾಗ ಹೇಗೆ ಇರಬೇಕು ಎಂಬುದನ್ನು ಕುರಿತು ಹೇಳಿಲ್ಲ.”

“ಆಗಲಿ, ಕೇಳು ; ಮಹಾವಿಷ್ಣುವು ಅಣುರೇಣುತೃಣಕಾಷ್ಠಗಳನ್ನು ವ್ಯಾಪಿಸಿರುವನು. ಅಂತರ್ಬಹಿಗಳನ್ನೆಲ್ಲಾ ತುಂಬಿರುವನು. ಆತನನ್ನು ಧ್ಯಾನಮಾಡುತ್ತ ಸರ್ವವನ್ನೂ ಆತನಿಗೆ ಒಪ್ಪಿಸಿ ಇರಬೇಕು. ಆಗ ಅದು ವಿಶ್ವಜಿದ್ಯಜ್ಞವಾಗುವುದು.”

“ಆತನನ್ನು ಆ ಸರ್ವೇಶ್ವರನನ್ನು ಹೃದಯದಲ್ಲಿ ಈಗಲೂ ಧ್ಯಾನಿಸುತ್ತಲೇ ಇರುವೆನು.”

“ನೀನು ಧ್ಯಾನಿಸುತ್ತಿರುವುದು ಸಗುಣ ಮೂರ್ತಿಯನ್ನು. ಧರ್ಮದಲ್ಲಿ ಅದೇ ಸರಿ. ಅದರೆ ಈ ಶಿಬಿಕಾರೋಹಣವು ಇಂದ್ರತ್ವದ ಪರಮಾವಧಿ. ಅಲ್ಲಿ ಸಗುಣ ಮೂರ್ತಿಯು ಕರಗಿ ನಿರ್ಗುಣವಾಗಬೇಕು. ಅತನನ್ನು ನೋಡುವ ಇಂದ್ರಿಯಗಳು ಕರಗಿಹೋಗಬೇಕು. ಅಥವ ಶಾಸ್ತ್ರದ ಮಾತಿನಲ್ಲಿ ಹೇಳುವುದೆಂದರೆ, ನೀನು ತ್ರಿಪುಟೀ ರಹಿತನಾಗಿ ಸಿಬಿಕೆಯನ್ನು ಆರೋಹಣ ಮಾಡಬೇಕು. ನಾವು ಶಿಬಿವಾಹಕರಾದಾಗ ತ್ರಿಪುಟೀಸಹಿತವಾಗಿ ಶಿಬಿಕೆಯಲ್ಲಿ ಯಾರೂ ಕುಳಿತಿರುವಂತಿಲ್ಲ. ನಾವು ಶಿಬಿಕೆಯನ್ನು ಇಳಿಸಿದಾಗ ತ್ರಿಪುಟಿಯು ಮತ್ತೆ ಜಾಗ್ರತವಾಗುವುದು.”

“ಶಿಬಿಕಾರೋಹಣವಾಗುತ್ತಲೂ ತ್ರಿಪುಟಿಯಿಲ್ಲವಾಗಿ ಶಿಬಿಕಾರೋಹಣದಲ್ಲಿ ಅದು ಜಾಗ್ರತವಾಗುವುದಾದರೆ ನಾನು ಮಾಡಬೇಕಾದ ಕಾರ್ಯವೇನು?”

“ನಿಜ. ಅಲ್ಲಿ ನಿನಗೆ ಕರ್ತೃತ್ವವಿಲ್ಲ. ಆದರೂ ಶಿಬಿಕೆಯಲ್ಲಿರುವಾಗ ತ್ರಿಪುಟಿಯ ಉದಯವಾದರೆ ಆಗದರ ಫಲವನ್ನೂ ನೀನು ಅನುಭವಿಸಬೇಕಾಗುವುದು.”

“ಆಗಬಹುದು”

ಬೃಹಸ್ಪತಿಯು ಥಟ್ಟನೆ ವಂದಿಸಿ, ವಿನಯದಿಂದ ಕೈಮುಗಿದುಕೊಂಡು ಪ್ರಾರ್ಥಿಸಿದನು. “ಭಗವಾನರಿಂದು ಅನುಗ್ರಹಮುದ್ರೆಯಲ್ಲಿದ್ದಾರೆ. ದಯವಿಟ್ಟು ತಿಳಿಸಿಕೊಡಬೇಕು. ಈ ತ್ರಿಪುಟೀತ್ಯಾಗವೆಂದರೇನು? ಈ ಸಿಬಿಕೋತ್ಸವದಿಂದ ಲೋಕಕ್ಕೆ ಆಗುವ ಉಪಕಾರವೇನು?”

ಭರದ್ವಾಜರು ನಕ್ಕು, “ಸರಿ, ದೇವಗುರುಗಳು ಲೋಕಾನುಗ್ರಹಾರ್ಥವಾಗಿ ಕೇಳಬೇಕಾದುದನ್ನು ಕೇಳಿದರು, ಹೇಳೋಣ” ಎಂದು ಹೇಳಿದರು. “ದೇವಗುರುಗಳು ಆಲಿಸಬೇಕು. ಜ್ಞಾತೃ, ಜ್ಞೇಯ, ಜ್ಞಾನ ಎಂಬುದೇ ತ್ರಿಪಟಿಯು. ಇದರಲ್ಲಿ ಯಾವುದೊಂದನ್ನು ಬಿಟ್ಟರೂ ತ್ರಿಪುಟಿಯು ಇಲ್ಲವಾಗುವುದು. ಇದನ್ನು ಮನುಷ್ಯರು ನಿದ್ರಾವಸ್ಥೆಯಲ್ಲಿ ಮಾಡುತ್ತಿರುವುದನ್ನು ಸ್ವಸಂಕಲ್ಪಪೂರ್ವಕವಾಗಿ ಜಗತ್ತಿನಲ್ಲಿ ಮಾಡಿದರೆ, ಸ್ವಯಂಪ್ರಕಾಶನಾಗಿ ನಿಶ್ಯೇಷವಾಗಿ ಮಹಾವಿಷ್ಣುವಿನಲ್ಲಿ ಲಯವಾಗುವನು. ಹಾಗಾಗದಿದ್ದರೆ, ತ್ರಿಪುಟಿಸಹಿತನಾಗಿ ಸರ್ವವ್ಯಾಪಕನಾಗಿರುವ ಮಹಾವಿಷ್ಣುವನ್ನು ದೇಶಕಾಲಗಳ ಚೌಕಟ್ಟಿನಲ್ಲಿಟ್ಟು ಇಂದ್ರಿಯಗೋಚರವಾಗುವಂತೆ ಮಾಡಿಕೊಳ್ಳುವ ಪತ್ರಿಕೋಪಾಸಕನಾಗುವನು. ಅಂಥವನು ಧಾರ್ಮಿಕನಾದರೂ ನಾವು ಹೇಳುವ ಧರ್ಮಮೇಘವೆಂಬ ಸಮಾಧಿಗೂ ಆತನಿಗೂ ಬಹು ದೂರ. ಇನ್ನು ಈ ಮಾತನ್ನು ಇಲ್ಲಿ ಬಿಟ್ಟು ಮುಂದಿನದನ್ನು ಹೇಳೋಣ.

ಬೀಜವು ತಾನು ಅಂಕುರವಾದಾಗ ತನ್ನ ಪೋಷಕದ್ರವ್ಯವನ್ನು ತಾನೇ ತರುವುದು. ದೊಡ್ಡದಾದ ಮೇಲೆ ಜೀವಿಕೆಗೆ ಬೇಕಾದ ಆಹಾರವನ್ನೂ ತಾನೇ ಭೂಮಿಯಿಂದ ಸಂಗ್ರಹಿಸುವುದು. ಆದರೂ ಪೋಷಕನು ಆಗಾಗ ಅದಕ್ಕೆ ಬೇಕಾದ ಗೊಬ್ಬರ ನೀರುಗಳನ್ನು ಅದಕ್ಕೆ ಸಿಕ್ಕುವಂತೆ ಮಾಡಿ ಅದರ ವೃದ್ಧಿಗೆ ಕಾರಣನಾಗುವನು. ಅಲ್ಲವೆ? ಹಾಗೆ, ತ್ರಿಲೋಕದಲ್ಲಿರುವ ಪ್ರಾಣಿ ಪ್ರಾಣಿಗೂ, ದೇವ ಮಾನವತಿರ್ಯಕ್ಕೆಂಬ ಮೂರು ವರ್ಗಗಳಲ್ಲಿಯೂ ಅವರವರಿಗೆ ಬೇಕಾದ ಸತ್ವಾದಿಗಳನ್ನು ನಿಯತಿಯೇ ಅನುಗ್ರಹಿಸಿರುವುದು. ಆದರೆ ಶಿಬಿಕಾರೋಹಣ ಸಾಮಥರ್ಯ್‌ವುಳ್ಳ ಯಾವನಾದರೂ ಒಡಹುಟ್ಟಿ ಶಿಬಿಕೋತ್ಸವವು ನಡೆಯಿತು ಎಂದರೆ ಧರ್ಮವೃಷ್ಟಿಯಾಗಿ ಲೋಕತ್ರಯಗಳಿಗೂ ಉದ್ಯಾನದಲ್ಲಿ ಗೊಬ್ಬರ ನೀರು ಚೆಲ್ಲಿದಂತಾಗುವುದು. ಎಲ್ಲರಿಗೂ ಮನಸ್ಸು ಉಬ್ಬಿ ತಮೋಗುಣವನ್ನು ತುಳಿದು ರಜೋಗುಣವನ್ನು ಮೀರಿ ಸತ್ವದತ್ತ ನುಗ್ಗುವುದು. ತೃಪ್ತಿಯಾಯಿತೇ?”

ದೇವಗುರು ದೇವರಾಜರಿಬ್ಬರೂ ಅತಿಶಯವಾದ ಹರ್ಷದಿಂದ ಸಪ್ತರ್ಷಿಗಣಕ್ಕೆ ನಮಸ್ಕಾರ ಮಾಡಿದರು. ಭರದ್ವಾಜರು, ಆ ನಮಸ್ಕಾರವನ್ನು ಅಂಗೀಕರಿಸಿ ಸಪ್ತಿರ್ಷಿಗಳ ಪರವಾಗಿ ಹೇಳಿದರು : “ಸಪ್ತರ್ಷಿಗಣವೂ ಇಂತಹ ಧೀರನೊಬ್ಬನು ಹುಟ್ಟಿಬಂದಾನೇ ಎಂದು ಕಾದಿದ್ದಿತು. ದೇವರಾಜ, ನೀನು ನಾವು ವಿಧಿಸಿದ ನಿಯಮಗಳಿಗೆಲ್ಲ ಒಪ್ಪಿಕೊಂಡಿರುವೆಯಾಗಿ ನಾವೂ ಸಂತೋಷದಿಂದ ಸ್ವಯಂ ಒಂದು ನಿಯಮವನ್ನು ಅಂಗೀಕರಿಸುವೆವು, ಕೇಳು, ನೀನು ಶಿಬಿಕಾರೋಹಣವು ಒಂದು ದಿವಸ ನಡೆಯಬೇಕೆಂದೆ. ಇಗೋ, ಸಪ್ತರ್ಷಿಗಳು ಈ ಶಿಬಿಕೋತ್ಸವವನ್ನು ಏಳು ದಿನ, ಒಂದು ವಾರ ಪರ್ಯಂತವಾಗಿ ನಡೆಸಲು ಒಪ್ಪುವರು. ಲೋಕಲೋಕಗಳಲ್ಲಿರುವವರನ್ನೆಲ್ಲಾ ಶಿಬಿಕೋತ್ಸವ ಸಂದರ್ಶನಾರ್ಥವಾಗಿ ಬರಮಾಡು. ಹೌದು, ದೇವಾಚಾರ್ಯ ಈ ಧರ್ಮಾಭಿವೃದ್ಧಿಯಿಂದ ನಿನ್ನ ಇಂದ್ರನು ಉದ್ಧಾರವಾಗುವನು. ನೀವೆಲ್ಲರೂ ನಿಮಗೆ ಲಭಿಸುವ ಪುಣ್ಯವನ್ನು ಆತನಿಗೆ ಧಾರೆಯೆರೆಯಿರಿ. ಮಹಾವಿಷ್ಣುವಿನ ಅನುಗ್ರಹದಿಂದ ಆತನಿಗೆ ಹತ್ಯೆಯು ನಿವಾರಣವಾಗುವುದು.”

ದೇವರಾಜ ದೇವಾಚಾರ್ಯರಿಬ್ಬರಿಗೂ ಆದ ಆನಂದವು ಅಷ್ಟಿಷ್ಟಲ್ಲ. ದೇವರಾಜನಿಗೆ ಹಿಂದೆ ಶಚೀದೇವಿಗೆ ಹೇಳಿದ್ದ ; ‘ಬೇಕಾದರೆ ನಾವೂ ಸಹಾಯ ಮಾಡುವೆವು’ ಎಂದ ಮಾತು ನಿಜವಾಯಿತು ಎಂದು ಸಂತೋಷವಾದರೆ, ದೇವಾಚಾರ್ಯನಿಗೆ ಮುನ್ನಿನ ಇಂದ್ರನು ಶುದ್ಧನಾಗಿ ಹಿಂತಿರುಗಿ ಬರುವನಲ್ಲ ಎಂದು ಸಂತೋಷ.

ಇಬ್ಬರೂ ತುಂಬಿದ ಸಂತೋಷದಲ್ಲಿ ಸಪ್ತರ್ಷಿಗಳಿಗೆ ಪುನಃಪೂಜೆಯನ್ನೊಪ್ಪಿಸಿ ತಮ್ಮ ತಮ್ಮ ಇಚ್ಛೆಯಂತೆ ಪ್ರಾರ್ಥನೆ ಮಾಡಿಕೊಂಡು ಮತ್ತೆ ನಮಸ್ಕಾರ ಮಾಡಿದರು. ಸಪ್ತರ್ಷಿಗಳು ‘ಅಭಿಷ್ಠಾ ಸಿದ್ಧಿರಸ್ತು’ ಎಂದು ಆಶೀರ್ವಾದ ಮಾಡಿ ಅಂತರ್ಧಾನವನ್ನು ಹೊಂದಿದರು.

ಇಬ್ಬರಿಗೂ ತಮಗೆ ಬೇಕಾದವರಿಗೆ ಈ ಸಂತೋಷದ ವರ್ತಮಾನವನ್ನು ಹೇಳಬೇಕೆಂದು ಅವಸರ. ಆ ಅವಸರದಲ್ಲಿ ಇಬ್ಬರೂ ಪರಸ್ಪರ ಬೀಳ್ಕೊಂಡು ನಡೆದರು. ದೇವರಾಜನು ವಿರಜಾದೇವಿಗೆ ಎಲ್ಲವನ್ನೂ ಹೇಳಲು ಹೋದರೆ, ದೇವಗುರುವು ಶಚೀದೇವಿಗೆ ಎಲ್ಲವನ್ನೂ ವರದಿ ಮಾಡಲು ಮನೋವೇಗದಿಂದ ಹೋದನು.

* * * *

೩೪.ಸಂಪ್ರದಾಯಗಳು

ಸಂಪಾದಿಸಿ

ಅಮರಾವತಿಯಲ್ಲಿ ಶಿಬಿಕೋತ್ಸವಕ್ಕಾಗಿ ಅದ್ಭುತವೂ ಅಪೂರ್ವವೂ ಆದ ಸಿದ್ಧತೆಗಳು ನಡೆಯುತ್ತಿವೆ. ದಾನವಗುರು ಶುಕ್ರಾಚಾರ್ಯರನ್ನು ಬರಮಾಡಿಕೊಂಡು ಇಂದ್ರನು ಆತನು ಹೇಳಿದವರಿಗೆಲ್ಲ ಆಹ್ವಾನಪತ್ರಿಕೆಗಳನ್ನು ಕಳುಹಿಸುತ್ತಿದ್ದಾನೆ. ಆತನೂ ಈ ಹೊಸ ಇಂದ್ರನ ಸೌಜನ್ಯವನ್ನು ಕಂಡು ಮಾರುಹೋಗಿದ್ದಾನೆ. ದೇವಗುರುವು ದೇವಹಿತವನ್ನು ಕೋರುವನಾದರೂ ಇಷ್ಟು ಸಜ್ಜನನೆಂದು ಆತನು ತಿಳಿದಿರಲಿಲ್ಲ. ಅವರ ಮೇಲೆ ವೈರವನ್ನು ಸಾಧಿಸುತ್ತಿದ್ದುದು ತಪೋ ಎಂದುಕೊಳ್ಳುತ್ತಾನೆ. ಆದರೂ, ‘ಇಲ್ಲಿ ಲೋಕಸ್ಥಿತಿಗೆ ನಾವಿಬ್ಬರೂ ದ್ವೇಷಿಗಳಾಗಿ ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆಯುತ್ತಿರಬೇಕು ಎಂದು ತೋರುತ್ತದೆ. ಆದರೆ ದ್ವೇಷವೊಂದು ಮನೋವಿಕಾರ. ಆ ವಿಕಾರವಿಲ್ಲದೆ ಏಕೆ ದೇವದಾನವರು ಹೋರಾಡಬಾರದು’ ಎಂದೆನ್ನಿಸುತ್ತದೆ. ಮರುಕ್ಷಣದಲ್ಲಿಯೇ ‘ಸ್ವಭಾವ, ಸ್ವಭಾವ ! ಏನು ಮಾಡಿದರೂ ಸ್ವಭಾವವನ್ನು ಒಂದು ಗಳಿಗೆ ಬದಲಾಯಿಸಬಹುದಲ್ಲದೆ, ತಿದ್ದುವುದಕ್ಕಾದೀತೆ ? ಹೋಗಲಿ ಬಿಡು’ ಎನ್ನುತ್ತಾನೆ.

ಭೂಲೋಕದಿಂದ ಯಯಾತಿಯೂ ಆತನ ಮಕ್ಕಳು, ಮಡದಿಯರೂ, ಪರಿವಾರದಲ್ಲಿ ಮುಖ್ಯರಾದವರೂ ಬಂದಿದ್ದಾರೆ. ಅಮರಾವತಿಯು ಅತಿಥಿಗಳಿಂದ ಕಿಕ್ಕಿರಿಯುತ್ತಿದೆ. ಲೋಕಲೋಕಗಳಿಂದ ಬರುವವರೂ ಬರಬೇಕಾದವರೂ ತುಂಬುತ್ತಿದ್ದಾರೆ.

ಒಂದು ಪ್ರಾತಃಕಾಲ ದೇವಗುರುವು ಮಂದಿರದಲ್ಲಿ ಕುಳಿತಿರುವಾಗ ಯೋಚನೆಯು ಬಂತು. ಅವಸರ ಅವಸರವಾಗಿ ದೇವರಾಜನನ್ನು ನೋಡಲು ಹೋದನು. ಆತನೂ ದೇವಗುರುವನ್ನು ನೋಡಬೇಕು ಎಂದುಕೊಳ್ಳುತ್ತಿದ್ದನು. ದೇವಗುರುಗಳಿಗೆ ನಮಸ್ಕಾರಾದಿಗಳನ್ನು ಒಪ್ಪಿಸಿ ಕೈಮುಗಿದುಕೊಂಡು ನಿಂತು, “ಅನುಗ್ರಹ ಮಾಡಿ ಬಂದಿರಿ” ಎಂದನು. ದೇವಗುರುವು ನಗುತ್ತ “ದೇವರಾಜನಿಗೆ ತಿಳಿಯದ್ದು ಇಲ್ಲ. ಆದರೂ ನೆನಪು ಮಾಡಿಕೊಡುತ್ತೇನೆ. ತಪ್ಪಿಲ್ಲವಲ್ಲ ? ಸಪ್ತರ್ಷಿಗಳು ನಿರ್ವಿಕಲ್ಪ ಸಮಾಧಿಯಲ್ಲಿ ಶಿಬಿಕೆಯಲ್ಲಿ ಕುಳಿತಿರಬೇಕು ಎಂದು ಹೇಳಿದರು. ಅದನ್ನು ಪಡೆಯುವ ದಾರಿಯಲ್ಲಿ ಹೇಳಲಿಲ್ಲ ; ಅಲ್ಲವೆ ?”

“ನಮಗೇಕೆ ಆ ಯೋಚನೆ, ನಾವು ಸಿದ್ಧರಾಗಿದ್ದರೆ ಆಯಿತು. ಆರೊಹಣ ಮಾಡುವಾಗ ಅವರಿಗೆ ನಮಸ್ಕಾರ ಮಾಡುವುದು ; ದೇಹಭಾವವಳಿದು ಸೋಹಂಭಾವ ಬರುತ್ತದೆ. ಇಳಿಸಿದಾಗ ಮತ್ತೆ ದೇಹಭಾವ ಬರುತ್ತದೆ. ಆಗ ಇಳಿದು ನಮಸ್ಕಾರ ಮಾಡುವುದು.”

“ಅಹುದು. ತಾವು ಹೇಳಿದುದು ಸರಿ. ಆದರೂ ಶಾಸ್ತ್ರಾಭಿಮಾನವುಳ್ಳ ನಾವು ಇನ್ನಷ್ಟು ಅಪೇಕ್ಷಿಸಿದರೆ ತಪ್ಪಿಲ್ಲ. ಅದರಿಂದ ನಮ್ಮಲ್ಲಿ ಮೂವರು ಈ ವಿದ್ಯೆಯನ್ನು ಬಲ್ಲವರು. ಒಬ್ಬನು ಇಂದ್ರ, ಆತನು ಪ್ರಜಾಪತಿಯಿಂದ ಅವಸ್ಥಾತ್ರಯ ವಿಚಾರಪೂರ್ವಕವಾಗಿ ಬ್ರಹ್ಮವಿದ್ಯೆಯನ್ನು ಪಡೆದವನು. ಅಲ್ಲದೆ, ಬ್ರಹ್ಮವಿದ್ಯೆಯೇ ಉಮಾದೇವಿಯಾಗಿ ಆತನಿಗೆ ಅನುಗ್ರಹ ಮಾಡಿರುವಳು. ಮತ್ತೊಬ್ಬನು ಯಮ ಧರ್ಮ. ಆತನೊಂದು ಸಂಪ್ರದಾಯ ಕರ್ತೃ. ಆತನು ಹೃದಯಗ್ರಂಥಿವಿಚ್ಛೇದನ ರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಮೂರನೆಯವನು ವರುಣನು. ಆತನು ಪಂಚಕೋಶಾತ್ಯಯರೂಪವಾದ ಬ್ರಹ್ಮವಿದ್ಯೆಯನ್ನು ಬಲ್ಲವನು. ಇವರು ಮೂವರಲ್ಲಿ ಯಾರನ್ನಾದರೂ ಕರೆಯಿಸಿಕೊಂಡು ಬ್ರಹ್ಮವಿದ್ಯೆಯ ವಿಚಾರವಾದರೂ ಮಾಡಿದ್ದರೆ ಒಳ್ಳೆಯದು.”

ದೇವರಾಜನು ನಸುನಗುತ್ತಾ “ಆಗಬಹುದು. ಯಾರನ್ನು ಕರೆಯಿಸಬೇಕೆಂದು ತಮ್ಮ ಇಷ್ಟ ?” ಎಂದು ಕೇಳಿದನು.

ದೇವಗುರುವು ಆತನ ಅರ್ಥವನ್ನು ಗ್ರಹಣಮಾಡದೆ, “ಇಂದ್ರನು ಈಗ ಅಂತರ್ಧಾನವಾಗಿರುವನು. ಇನ್ನುಳಿದ ಇಬ್ಬರಲ್ಲಿ ಯಾರನ್ನು ಕರೆಯಿಸು ಎಂದರೆ ಅವರನ್ನು ಕರೆಯಿಸುತ್ತೇನೆ” ಎಂದನು.

“ಮೂವರನ್ನೂ ಕರೆಯಿಸಬೇಕೆಂದು ನಮ್ಮ ಕೋರಿಕೆಯಿದ್ದರೆ ?”

ಆಚಾರ್ಯನು ತಬ್ಬಿಬ್ಬಾದನು. ದೇವರಾಜನು ಹೇಳಿದನು ; “ಅಭಿಚಾರಾದಿ ಪ್ರಯೋಗಗಳಲ್ಲಿ ಕುಶಲರಾದ ಶುಕ್ರಾಚಾರ್ಯರು ದಯಮಾಡಿಸಿದ್ದಾರೆ. ಬ್ರಹ್ಮವಿದ್ಯಾ ಸಂಪನ್ನನಾದ ಮಹೇಂದ್ರನಿಗೆ ಹತ್ಯೆಯ ದಿಗಿಲು ಎಂದರೆ ಮೃತ್ಯುವಿಗೆ ಪಿಶಾಚ ಭಯವೆಂಬಂತೆ. ಅಲ್ಲದೆ, ಮಹಾವಿಷ್ಣುವಿನ ಅಪ್ಪಣೆಯಾಗಿರುವಂತೆ ಆತನು ಹಲವು ರೂಪಗಳನ್ನು ಧರಿಸಿ ನಿಲ್ಲಲಿ. ಅವಶ್ಯವಾದರೆ ಆ ಹತ್ಯೆಯು ಒಂದು ರೂಪವನ್ನು ಹಿಡಿಯಲಿ. ಕೆಲವು ರೂಪದಿಂದ ತಪಸ್ಸು ಮಾಡಿ ಶುದ್ಧಿಯನ್ನು ಸಂಪಾದಿಸಲಿ.”

“ಆಗಬಹುದು.... ಆದರೆ...”

“ಏನೂ ಇಲ್ಲ... ಆಚಾರ್ಯ. ಹತ್ಯೆಯು ಇದಕ್ಕೆ ಒಪ್ಪದಿದ್ದರೆ ಇಂದ್ರನಾದ ನಾನು ಅಪ್ಪಣೆ ಮಾಡುವೆನು. ಹತ್ಯೆಯು ಇಂದ್ರನನ್ನು ಬಿಟ್ಟರೆ ಸಮ. ಇಲ್ಲದಿದ್ದರೆ ನನಗಿರುವ ಸರ್ವಶಕ್ತಿಯನ್ನೂ ಪ್ರಯೋಗಿಸಿ ಅದನ್ನು, ಎಳೆತರಿಸಿ ಬಂಧನದಲ್ಲಿಡುವೆನು. ಇಂದ್ರನು ಇಲ್ಲಿಗೆ ಬರಬೇಕು, ಕರೆಯಿರಿ.”

“ಹತ್ಯೆ....”

“ಹತ್ಯೆಯೇ? ಯಾರಲ್ಲಿ? ಚಿತ್ರರಥನನ್ನೂ ಅಗ್ನಿ ವಾಯುಗಳನ್ನೂ ಬರಮಾಡು. ಹಾಗೆಯೇ ಶುಕ್ರಾಚಾರ್ಯರನ್ನು ಇಲ್ಲಿಗೆ ಬಂದು ನಮ್ಮನ್ನು ಅನುಗ್ರಹಿಸುವಂತೆ ಪ್ರಾರ್ಥಿಸು.”

ಉತ್ತರಕ್ಷಣದಲ್ಲಿಯೇ ಅವರೆಲ್ಲರೂ ಬಂದರು. ದೈತ್ಯಗುರುಗಳನ್ನು ದೇವರಾಜನು ನಮಸ್ಕಾರಾದಿಗಳಿಂದ ಗೌರವಿಸಿ, “ಆಚಾರ್ಯ, ತಮ್ಮ ಸನ್ನಿಧಿಯಲ್ಲಿ ಕೆಲವು ಅಪ್ಪಣೆಗಳನ್ನು ಮಾಡುವೆನು. ಅನುಗ್ರಹ ಮಾಡಬೇಕು” ಎಂದು ಆತನ ಅನುಜ್ಞೆಯನ್ನು ಪಡೆದು ಅಗ್ನಿ ವಾಯುಗಳನ್ನು ಕುರಿತು ಹೇಳಿದನು ; ‘ತಾವಿಬ್ಬರೂ ದೇವಮಂತ್ರಿಗಳು. ದೇವರಾಜನ ಅಪ್ಪಣೆಯನ್ನು ಪರಿಪಾಲಿಸುವವರು ಅಲ್ಲವೇ?”

ನಹುಷನು ಯಾವಾಗಲೂ ಹಾಗೆ ಕಡ್ಡಾಯವಾಗಿ ಮಾತನಾಡಿರಲ್ಲಿಲ್ಲ. ಅದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. ಯಾವಾಗಲೂ ಅವರನ್ನು ದೇವತೆಗಳು- ತನಗಿಂತ ಹೆಚ್ಚು ಎಂದು ಮಾತನಾಡುತ್ತಿದ್ದವನು ಇಂದೇಕೆ ಹೀಗೆ ನಿಷ್ಠುರವಾಗಿರುವನು ? ಎನ್ನಿಸಿತು. ಆದರೂ ಸ್ಥಾನಗೌರವವನ್ನು ಕಾಪಾಡುತ್ತ ಕೈಮುಗಿದು “ಹೌದು, ಅದಕ್ಕೇ ನಾವಿರುವುದು” ಎಂದರು.

ದೇವರಾಜನು ಆ ಪದವಿಗೆ ತಕ್ಕಂತೆ ಬಿಗಿದುಕೊಂಡು ನಿಷ್ಠುರವಾಗಿ ಆಜ್ಞೆ ಮಾಡುವಾಗ ಇರಬೇಕಾದ ಠೀವಿಯಿಂದ ಹೇಳಿದನು : “ಇಂದು ಮಹೇಂದ್ರನನ್ನು ಇಲ್ಲಿಗೆ ತರಬೇಕು. ಆತನಿಗೆ ಅಡ್ಡಿಯಾಗುವ ಹತ್ಯೆಯನ್ನು ಪುಣ್ಯಶಕ್ತಿಗಳನ್ನು ಬಿಟ್ಟು ಕಟ್ಟಿಸಿಬಿಡಿ. ಸಾಮಾನ್ಯ ಪುಣ್ಯಶಕ್ತಿಗಳಿಗೆ ಅದು ಸಾಧ್ಯವಾಗದಿದ್ದರೆ, ನಮಗೆ ಇದುವರೆಗೂ ಇರುವ, ಮುಂದೆ ಬರುವ ಪುಣ್ಯಗಳನ್ನೆಲ್ಲಾ ಸೇರಿಸಿ ಅದನ್ನು ಕಟ್ಟಿಹಾಕಿ. ಈ ಕೂಡಲೇ ಇದು ನಡೆಯಬೇಕು. ಯಜ್ಞೇಶ್ವರ, ಮಾತರಿಶ್ವ, ಆ ಹತ್ಯೆಯೇನಾದರೂ ಸಗ್ಗದಿದ್ದರೆ, ನೀವಿಬ್ಬರೂ ನಿಮ್ಮ ವಿಶ್ವರೂಪವನ್ನು ಧರಿಸಿ ಅದನ್ನು ಧ್ವಂಸಮಾಡಿಬಿಡಿ.”

ಅಗ್ನಿವಾಯುಗಳಿಗೆ ಈ ಮಾತನ್ನು ಕೇಳಿ ಮೈಯ್ಯುಬ್ಬಿತು. “ಹೀಗೆ ತಮಗೆ ಹಿಂದೆ ಅಪ್ಪಣೆಯಾಗಿದ್ದರೆ ಆ ಹತ್ಯೆಯು ಇದುವರೆಗೂ ಉಳಿಯುತ್ತಿರಲಿಲ್ಲ.” ಎನ್ನಿಸಿತು. “ಸರ್ವಪ್ರಕಾರದಿಂದಲೂ ಗೆದ್ದೆ ಬರುವೆವು” ಎಂದು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆಯನ್ನು ಮಾಡಿಕೊಂಡರು. ಅದಷ್ಟೂ ಧ್ವನಿಯಲ್ಲಿಯೇ ತೋರುತ್ತಿರಲು ‘ಅಪ್ಪಣೆ’ಯೆಂದರು.

ಅರಸನು ಚಿತ್ರರಥನ ಕಡೆಗೆ ತಿರುಗಿದನು. “ಗಂಧರ್ವಪತಿ, ನೀನು ಸಕಲ ಸೈನ್ಯದೊಡನೆ, ಸಮರಾಂಗಣಕ್ಕೆ ನಡೆವಂತೆ, ವ್ಯೂಹಕ್ರಮದಿಂದ ಸನ್ನಾಹಮಾಡಿ ಕೊಂಡು ಈ ಮಹಾಪುರುಷರ ಜೊತೆಯಲ್ಲಿ ನಡೆಯತಕ್ಕದ್ದು. ದೇವರಾಜನ ಅಪ್ಪಣೆಯನ್ನು ಮಾನ್ಯ ಮಾಡದವರನ್ನು ಸರ್ವಥಾ ನಿಗ್ರಹಿಸತಕ್ಕದ್ದು.”

ಚಿತ್ರರಥನು ತನ್ನ ಜೀವಿತದ ಪರಮಪುರುಷಾರ್ಥವನ್ನು ಸಾಧಿಸುವವನಂತೆ, ಆನಂದದಿಂದ ಕೋಡಿಹರಿಯುತ್ತಿರುವ ಕಣ್ಣನ್ನು ಒರೆಸಿಕೊಳ್ಳುತ್ತ ನೆಲ ಮುಟ್ಟಿ ನಮಸ್ಕಾರ ಮಾಡಿ “ಅಪ್ಪಣೆ” ಎಂದನು.

ದೇವರಾಜನು ಗಂಭೀರನಾಗಿ ಕೈಮುಗಿದುಕೊಂಡು ಧ್ಯಾನಿಸಿದನು. ಇಂದ್ರಾಯುಧಗಳೆಲ್ಲವೂ ಎದುರಿಗೆ ಬಂದು ನಿಂತವು. ಅವುಗಳಿಗೆಲ್ಲಾ ಮಾನಸೋಪಚಾರ ಪೂಜೆಯನ್ನೊಪ್ಪಿಸಿ, “ಅಸ್ತ್ರಶ್ರೇಷ್ಠರೆ, ಅನುಜ್ಞೆಯನ್ನು ಕೊಡಿ. ನಿಮ್ಮ ದರ್ಶನಮಾತ್ರದಿಂದಲೇ ದೇವವೈರಿಗಳು ಹತತೇಜಸ್ಕರಾಗುವರು. ಇಂದು ನಾನು ತ್ರಿಲೋಕಾಧಿಪತಿಯಾಗಿ ತಮ್ಮನ್ನು ಪ್ರಾರ್ಥಿಸುವೆನು. ತಮ್ಮ ನಾಥನಾದ ಮಹೇಂದ್ರನನ್ನು ಯಾವುದೋ ಹತ್ಯೆಯು ಬಾಧಿಸುತ್ತಿರುವುದಂತೆ. ಚರಾಚರಗಳಿಗೆಲ್ಲ ನಾಥನಾದ ಮಹಾವಿಷ್ಣುವಿನ ಅಪ್ಪಣೆಯಿದು ಎಂದು ತಾವು ಇದನ್ನು ಪಾಲಿಸತಕ್ಕದ್ದು. ಆ ಮಹೇಂದ್ರನನ್ನು ಇಲ್ಲಿಗೆ ಕರೆತರಲು ಅಗ್ನಿವಾಯುಗಳು ಸಸೈನ್ಯರಾಗಿ ಹೊರಟಿರುವರು. ತಾವೆಲ್ಲರೂ ಅವರಿಗೆ ರಕ್ಷಣೆಯನ್ನು ಕೊಟ್ಟು ಆ ಮಹೇಂದ್ರನನ್ನು ಇಲ್ಲಿಗೆ ಕರೆತರಬೇಕು.”

ಆಯುಧಗಳೆಲ್ಲವೂ ಮಹೋತ್ಸಾಹದಿಂದ ಪ್ರಜ್ವಲಿಸುತ್ತಾ, “ದೇವರಾಜನ ಅಪ್ಪಣೆಯನ್ನು ಸರ್ವಥಾ ಪಾಲಿಸುವೆವು” ಎಂದು ಆಜ್ಞೆಯನ್ನು ಶಿರಸಾವಹಿಸಿ ನಡೆದುವು.

ದೇವಗುರುವು ಎಲ್ಲವನ್ನೂ ಕೇಳಿ ಆಶ್ಚರ್ಯಪಡುತ್ತ, “ಹೌದು, ಹೌದು. ಅಧಿಕಾರವಿರುವುದು ಹೆಚ್ಚಲ್ಲ. ಅದನ್ನು ವಿನಿಯೋಗಿಸುವ ಸಾಮಥರ್ಯ್‌ವೂ ಇರಬೇಕು” ಎಂದು ತಲೆದೂಗಿದನು. ಶುಕ್ರಾಚಾರ್ಯನು ‘ಭಲೆ, ಪ್ರಭುವೆಂದರೆ ಹೀಗಿರಬೇಕು. ನಮ್ಮ ಎದುರಿಗೆ ಆಜ್ಞೆಯನ್ನು ಮಾಡಿ, ನಾವು ಗುಪ್ತವಾಗಿಯಾಗಲಿ ಪ್ರಕಟವಾಗಿ ಯಾಗಲಿ ಅದನ್ನು ಪ್ರತಿಭಟಿಸದಂತೆ, ಅದಕ್ಕೆ ಅಡ್ಡಿಬರದಂತೆ, ಮಾಡಿಟ್ಟನಲ್ಲ ! ಭಲೆ ! ಈ ಪ್ರಭುವಿನ ಪ್ರತಾಪದ ಮುಂದೆ ಆ ಹತ್ಯೆಯು ಉಳಿಯುವುದೆಂತು ?’ ಎಂದು ತಲೆದೂಗಿದನು.

ಇಂದ್ರನು ಮತ್ತೆ ಪ್ರಹರಿಯನ್ನು ಕರೆದು ಅಪ್ಪಣೆ ಮಾಡಿದನು : “ಮಹೇಂದ್ರನು ಅಮರಾವತಿಯ ಬಾಗಿಲಿಗೆ ಬರುವ ವೇಳೆಗೆ, ಆತನಿಗೆ ಸಲ್ಲಬೇಕಾದ ಗೌರವಗಳೆಲ್ಲ ಬಾಗಿಲಲ್ಲಿ ಸಂದು ಆತನನ್ನು ಮಹೇಂದ್ರವೈಭವದಿಂದ ಶಚೀದೇವಿಯರ ಅರಮನೆಗೆ ಕರೆದೊಯ್ಯಬೇಕು. ಇದು ನಮ್ಮಾಜ್ಞೆ” ಎಂದನು. ಪ್ರಹರಿಯು ಕೈಮುಗಿದು ಹೋದನು.

ಇಂದ್ರನು ಮತ್ತೆ ಆಚಾರ್ಯರಿಬ್ಬರ ಕಡೆಗೆ ತಿರುಗಿ, ಕಠಿಣವಾದ ಉಕ್ಕು ಪುಷ್ಪದಂತೆ ಮೃದುವಾದ ಹಾಗೆ, “ಆಚಾರ್ಯರ ಸನ್ನಿಧಾನದಲಿಯೂ ಗಡುಸಾಗಬೇಕಾಗಿ ಬಂತು. ಮನ್ನಿಸಬೇಕು, ನಮ್ಮ ಅಪ್ಪಣೆಗಳೆಲ್ಲವೂ ನೆರವೇರುವಂತೆ ಅನುಗ್ರಹ ಮಾಡಬೇಕು” ಎಂದು ನಮಸ್ಕರಿಸಿದನು.

ಆಚಾರ್ಯರಿಬ್ಬರೂ ಮನಃಪೂರ್ವಕವಾಗಿ ಆಶೀರ್ವದಿಸಿದರು. ಬಾಯಿ ತುಂಬಾ ‘ತಥಾಸ್ತು’ ಎಂದು ಹರಸಿದರು. ಎದ್ದುನಿಂತು ವೇದೋಕ್ತ ಆಶೀರ್ವಾದಗಳನ್ನು ಮಾಡುತ್ತ, ಇಬ್ಬರೂ ‘ನಹುಷ, ನೀನು ಇಂದ್ರನಲ್ಲ ಅತೀಂದ್ರ, ಪ್ರಭುತ್ವವು ಒಂದು ತೂಕವಾದರೆ, ಅದನ್ನು ವಿನಿಯೋಗಿಸುವುದಕ್ಕೆ ಬೇಕಾದ ಬುದ್ಧಿಸಾಮಥರ್ಯ್‌ಗಳೆರಡೂ ಎರಡೆರಡು ತೂಕ. ಪ್ರಭುತ್ವ ಬುದ್ಧಿ ಸಾಮಥರ್ಯ್‌ಗಳೆಲ್ಲವನ್ನೂ ಪಡೆದಿರುವವನು ನೀನು. ಇಂದ್ರನಾಗುವುದಕ್ಕೆ ಮಾತ್ರವಲ್ಲಾ ಅತೀಂದ್ರನಾಗಿ ಇಂದ್ರಗಣವನ್ನೂ ಆಳಲು ಬಲ್ಲವನು ನೀನು” ಎಂದು ಸಂತೋಷವಾಗಿ ಮುಕ್ತಕಂಠರಾಗಿ ಹೊಗಳಿದರು.

ದೇವರಾಜನು ಮತ್ತೆ ಕೇಳಿದನು. ಅದು ಶುಕ್ರರನ್ನು ಸಂಬೋಧಿಸಿ ಹೇಳಿದುದಾಗಿತ್ತು. “ದೇವ, ತಮ್ಮ ಶಿಷ್ಯರಲ್ಲಿ ಯಾರೂ ಬ್ರಹ್ಮವಿದ್ಯಾ ಸಂಪ್ರದಾಯಕರಿಲ್ಲವೆ ?”

ಶುಕ್ರನು ತಲೆದೂಗಿದನು : “ದೈತ್ಯದಾನವಾದಿಗಳಲ್ಲಿ ಬ್ರಹ್ಮಾನುಸಂಧಾನ ಮಾಡುವವರಿಲ್ಲ ಎಂದರೆ ತಪ್ಪಿಲ್ಲ. ಆದರೆ, ಪರಮವೈಷ್ಣವನಾದ ಪ್ರಹ್ಲಾದನ ಮಾತು ಬೇರೆ. ದೈತ್ಯದಾನವಾದಿಗಳೆಲ್ಲ ವೈರೋಚನಮತದವರು, ದೇಹ ಬ್ರಹ್ಮವಾದಿಗಳು.”

“ಸರಿ, ಹಾಗಾದರೆ, ಅಪ್ಪಣೆಯಾದರೆ, ದೇವಗುರುಗಳು ಯಮಧರ್ಮ ರಾಜನನ್ನು ಬರಮಾಡುವರು.”

“ಆಗಬಹುದು.”

ದೇವಾಚಾರ್ಯರು ಯಮಧರ್ಮನನ್ನು ಧ್ಯಾನಿಸಿದರು. ಯಮಧರ್ಮನು ಅಲ್ಲಿಯೇ ಪ್ರತ್ಯಕ್ಷನಾಗಿ ಆಚಾರ್ಯರನ್ನು ನಮಸ್ಕರಿಸಿದನು. ಆತನು ಇಂದ್ರನನ್ನು ತೋರಿಸಿ, “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿರಬೇಕು. ಅದಕ್ಕೆ ಉಪಷ್ಪಂಭಕವಾಗಿ ಬ್ರಹ್ಮವಿಚಾರವನ್ನು ಮಾಡಬೇಕೆಂದು ನಾನು ಕೋರಿದೆನು. ಅದಕ್ಕಾಗಿ ನಿನ್ನನ್ನು ಬರಮಾಡಿಕೊಂಡೆವು” ಎಂದನು.

ಯಮಧರ್ಮನು ನಕ್ಕು. “ದೇವರಾಜ. ನಿನ್ನನ್ನು ಇಂದ್ರಸಿಂಹಾಸನದಲ್ಲಿ ಕುಳ್ಳಿರಿಸಿ, ಇಂದ್ರಾಭಿಷೇಕ ಮಾಡಿದಾಗಲೇ, ನಾವೆಲ್ಲರೂ ಕಾಣಿಕೆಯಾಗಿ ನಮ್ಮ ನಮ್ಮಲ್ಲಿರುವ ವಿದ್ಯೆಗಳನ್ನು ಸಮರ್ಪಿಸಿರುವೆವು. ಅವೆಲ್ಲವೂ ನಿನ್ನಲ್ಲಿ ಸುಪ್ತವಾಗಿರುವುವು. ಅದು ಪ್ರಕಟವಾಗುವ ಕಾಲವು ಶಿಬಿಕೋತ್ಸವವು. ಅದರಿಂದಲೇ ದೇವಚಾರ್ಯನು ನಿನಗೆ ನೆನಪು ಕೊಟ್ಟನು. ನಾನು ಇಲ್ಲಿಗೆ ಹೊರಡುವಾಗಲೇ ನೀನು ಇದಕ್ಕಾಗಿಯೇ ನನ್ನನ್ನು ಕರೆಯುವೆಯೆಂದೂ ನನಗೆ ಗೊತ್ತಿತ್ತು. ಆಗಬಹುದು, ಯಾವಾಗ ಆರಂಭಿಸುವೆ ?” ಎಂದನು.

ದೇವೇಂದ್ರನು “ಯಾವಾಗಲೇಕೆ ? ಈಗಲೇ ಆಗಲಿ ? ಎಂದನು.

ಯಮನು ‘ಆಗಬಹುದು’ ಎಂದು ಆತನನ್ನು ಅಲ್ಲಿಯೇ ಕುಳ್ಳಿರಿಸಿ, ಆಚಾರ್ಯದ್ವಯಕ್ಕೆ ನಮಸ್ಕರಿಸಿ ಆರಂಭಿಸಿದನು : “ಅಯ್ಯಾ ಅನೇಕವನ್ನು ಕಂಡಾಗ ಇದರಲ್ಲಿ ಯಾವುದು ಹೆಚ್ಚು ಎಂದು ಹುಡುಕುತ್ತಾ ಎಲ್ಲದಕ್ಕಿಂತ ಹೆಚ್ಚಾಗಿ ಇನ್ನು ಅದಕ್ಕಿಂತ ಹೆಚ್ಚಾದುದು ಇಲ್ಲದುದು ಯಾವುದೋ ಅದನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಇಲ್ಲಿ ಗುರುಶಿಷ್ಯರೆಂಬ ಒಂದು ಭೇದವನ್ನಲ್ಲದೆ ಇನ್ನು ಯಾವ ಭೇದವನ್ನೂ ಹಿಡಿಯಬೇಡ. ಮುಂದೆ ಹೋಗುವವನು ಗುರು, ಹಿಂದೆ ಹೋಗುವವನು ಶಿಷ್ಯ. ಎಲ್ಲಿ ಕೊನೆಯಾಗುವುದೋ ಅಲ್ಲಿ ಗುರು-ಶಿಷ್ಯರು ಪರಸ್ಪರ ಐಕ್ಯರಾಗುವರು” ಎಂದು ಆರಂಭಿಸಿ ಹೇಳಿದನು.

“ದೇಹದಲ್ಲಿ ಕ್ಷರ ಅಕ್ಷರ ಎಂದು ಎರಡು ಇವೆ. ವಿಕಾರವಾಗುವುದೆಲ್ಲವೂ ಕ್ಷರ. ಅದೆಲ್ಲಾ ಪಂಚಭೂತಗಳ ಸಂಘಾತ. ಅವೆಲ್ಲರಲ್ಲೂ ಇದ್ದು ಅವೆಲ್ಲವನ್ನೂ ಆಡಿಸುವವನು ಅಕ್ಷರದಲ್ಲಿಯೂ ಅಂತಶ್ಚೇತನನಾಗಿರುವವನು ಪರಮ.ಈ ದೇಹವಿರುವವರೆಗೂ ಅಕ್ಷರನುಂಟು, ಪರಮನುಂಟು. ಈ ದೇಹವು ಪ್ರತ್ಯೇಕವಾಗಿದೆಯೆನ್ನುವುದೇ ಹೃದಯ ಗ್ರಂಥಿ. ಪರಮನನ್ನು ದರ್ಶನಮಾಡಿದ ಭಾಗ್ಯವಂತನಿಗೆ ಆ ಗ್ರಂಥಿಯಳಿಯುವುದು. ಅದು ಆಗಬೇಕಾದರೆ ಆ ಪರಮನು ಒಲಿಯಬೇಕು. ನಾವು ಏನು ಮಾಡಿದರೂ ಅದು ಸಾಧ್ಯವಿಲ್ಲ. ನಾವು ಧರ್ಮದಲ್ಲಿದ್ದರೆ ಎಂದಾದರೊಂದು ದಿನ ಆತನ ಕೃಪೆಯಾಗುವುದು. ಅದನ್ನು ಕಾದು ಕುಳಿತಿರುವುದೇ ಬ್ರಹ್ಮಾನುಸಂಧಾನ. ಅದು ಲಭಿಸಿದಾಗ ಅದೇ ತನ್ನನ್ನು ಪಡೆಯುವ ಮಾರ್ಗವನ್ನು ಹೇಳಿಕೊಡುವುದು. ಅದಕ್ಕಾಗಿ ನೀನು ಮಹಾವಿಷ್ಣುವನ್ನು ಆರಾಧಿಸು, ಕೃತಾರ್ಥನಾಗುವೆ. ನಿನಗೆ ನಂಬಿಕೆಯಾಗಲೆಂದು ನಾನು ನನಗೆ ಲಭಿಸಿರುವ ಸಿದ್ಧಿಯನ್ನು ಅಷ್ಟೂ ಕೊಡುವೆನು” ಎಂದು ಆತನ ತಲೆಯ ಮೇಲೆ ಕೈಯಿಟ್ಟನು.

ನಹುಷನಿಗೆ ಒಂದು ಕನಸಾದಂತೆ ಆಯಿತು. ಜಾಗ್ರತ್ತು ಎನ್ನುವುದಕ್ಕೆ ತಾನು ಯಾರು? ತನ್ನ ಸುತ್ತಲೂ ಇರುವವರು ಯಾರು? ಎನ್ನುವುದೆಲ್ಲ ಗೊತ್ತಿದೆ. ಆದರೆ ಸ್ವಪ್ನವೃತ್ತಿಯಲ್ಲಿರುವಂತೆ ತಾನು ವೃತ್ತಿವಶನಾಗಿದ್ದಾನೆ. ಮೊದಲು ನಹುಷನೆದುರಿಗೆ ಇಬ್ಬರು ಬಂದಿದ್ದಾರೆ. ಒಬ್ಬನು ಶ್ರೋತ್ರಿಯನಂತೆ ವೇಷ ಭಾಷೆಗಳನ್ನುಳ್ಳವನು. ಇನ್ನೊಬ್ಬನು ಚೆಲ್ಲುಚೆಲ್ಲಾದರೂ ಮೋಹಕವಾದ ವೇಷಭಾಷೆಗಳುಳ್ಳವನು. “ನಾವು ಶ್ರೇಯಃಪ್ರೇಯಗಳು. ಇವನೇ ಪ್ರೇಯ. ನಿನ್ನ ದೇಹವು ಬೇಕೆನ್ನುವವನು ಇವನು. ನಿನಗೆ ಬೇಕಾದವನು ನಾನು” ಎನ್ನುತ್ತಾರೆ. ನಹುಷನು ನೋಡಿಕೊಳ್ಳುತ್ತಾನೆ. ತಾನು ಬೇರೆ, ದೇಹ ಬೇರೆ ಎಂದು ತಿಳಿಯುತ್ತದೆ. ತಾನು ಅಧಿಕಾರಿ ಎಂದು ತನಗೆ ಬೇಕಾದ ಶ್ರೇಯಸ್ಸನ್ನು ವರಿಸುತ್ತಾನೆ. ದೇಹವು ಏನೋ ವ್ಯತ್ಯಾಸಗೊಂಡು ಕರಣಗಳು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ತನ್ನೊಳಗೆ ತಾನು ನೋಡಿಕೊಳ್ಳಲು ಸಾಧ್ಯವಾಗಿ ಅತೀಂದ್ರಿಯವಾದರೂ ಸಿದ್ಧವಾದ ಯಾವುದೋ ಶಕ್ತಿಯೊಂದು ಇರುವುದು ತಿಳಿದು ತನಗಿಂತಲೂ ಅದು ನಿಜವೆಂದು ಯಾರೂ ಹೇಳದೆಯೇ ಅರಿವಾಗುತ್ತದೆ. ಏನೋ ಭಾರವು ತನ್ನನ್ನು ಹಿಡಿದಿರುವಂತೆ ತೋರುತ್ತದೆ. ಆ ಒಳಗಿನ ಶಕ್ತಿಯನ್ನು ‘ಕಾಪಾಡು’ ಎಂದು ಕೇಳಿಕೊಳ್ಳುತ್ತಾನೆ. ಅದು ನಿರ್ವಿಕಾರವಾಗಿ ಇರುವುದು ಗೋಚರವಾಗುತ್ತದೆ. ಆಗ ತನಗೆ ಆ ಭಾರವು ಬಿದ್ದು ಹೋದಂತಾಗುತ್ತದೆ. ಆಗ ತಾನು ಅರಳುತ್ತಾನೆ. ಕಟ್ಟಿರುವ ಕಟ್ಟುಗಳೆಲ್ಲಾ ಶಿಥಿಲವಾಗಿ ತಾನು ಅರಳಿ ಅರಳಿ ಕೊನೆಗೆ ತಾನು ಪ್ರತ್ಯೇಕ ಎಂಬ ಭಾವನೆಯೂ ಅಳಿಯುತ್ತದೆ. ಅಲ್ಲಿ ಏನೋ ಜ್ಞಾನ. ಅದು ಅಹಂ ಅಲ್ಲ; ಅಸ್ಮಿ ಅಲ್ಲ ; ಎರಡಕ್ಕೂ ಆಧಾರವಾದ ಇನ್ನೇನೋ ಒಂದು.

ಧರ್ಮರಾಜನು ಕೈ ತೆಗೆದನು. ಒಂದು ಗಳಿಗೆಯ ಮೇಲೆ ನಹುಷನು ಪ್ರಕೃತಿಸ್ಥಾನನಾದನು. ಆತನಿಗೆ ತಾನು ಪಟ್ಟ ಅನುಭವವು ಸರಿ ಎನ್ನಿಸಿತು. ಅದರಲ್ಲಿ ಸಂಶಯ ವಿಪರೀತಗಳೊಂದೂ ಬರಲಿಲ್ಲ. ಎದ್ದು ನಮಸ್ಕಾರ ಮಾಡಲು ಹೋದನು. ಯಮನು ಅದನ್ನು ಅಂಗೀಕರಿಸದೆ, “ನೀನು ಇಂದ್ರ, ನಾನು ಯಮ. ಅದಿರಲಿ. ಈಗ ಶಾಸ್ತ್ರ ಅನುಭವ ಎರಡೂ ಸರಿಹೊಂದಿದುವಷ್ಟೆ ? ಸಮಯ ಬಂದಾಗ ಇದನ್ನು ಉಪಯೋಗಿಸಿಕೋ” ಎಂದು ಹೇಳಿ ಬೀಳ್ಕೊಂಡನು.

ದೇವಾಚಾರ್ಯನು ಇಂದ್ರನನ್ನು ಎಚ್ಚರಿಸಿದನು. ಆತನ ಕೋರಿಕೆಯಂತೆ ವರುಣನನ್ನು ಬರಮಾಡಿಕೊಂಡನು. ಆತನೂ ಯಮನಂತೆಯೇ “ನೀನು ಇಂದ್ರನಾದಾಗ ಇದೆಲ್ಲವನ್ನೂ ಕೊಟ್ಟಿರುವೆವು. ಕಾಲವು ಸನ್ನಿಹಿತವಾಗಲಿಲ್ಲವೆಂದು ಅದು ಸುಪ್ತವಾಗಿತ್ತು. ಈಗ ಜಾಗ್ರತವಾಗುವುದು” ಎಂದು ಮೊದಲು ಶಾಸ್ತ್ರವನ್ನು ಬೋಧಿಸಿದನು. “ಈ ಜಗತ್ತಿನಲ್ಲಿ ಪ್ರಾಣಿ ಪ್ರಾಣಿಯೂ - ಸ್ಥಾವರವಾಗಲಿ, ಜಂಗಮವಾಗಲಿ-ಹುಡುಕುವುದು ಅನ್ನವನ್ನು ಪೂರ್ಣ ಅಪೂರ್ಣಗಳ ಸಂಮಿಶ್ರತೆಯೇ ಈ ಜಗತ್ತು. ಅಪೂರ್ಣವನ್ನು ತಿರಸ್ಕರಿಸಿ ಪೂರ್ಣವನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಅನ್ನದಲ್ಲಿ ಪ್ರೇರಿಸುವ ಮನಸ್ಸು ಇವುಗಳನ್ನೂ ಪೂರ್ಣದಲ್ಲಿಲ್ಲ ಎಂದು ತಿಳಿದಾಗ ಮನಸ್ಸು ಇಲ್ಲವಾಗುವುದು. ಆ ಮನಸ್ಸಿನ ಆಚೆ ನಿಂತು ತಾನು ಪ್ರತ್ಯೇಕವೆನ್ನುತ್ತಿರುವ ಅಹಂಕಾರದ ಅಪೂರ್ಣತೆಯನ್ನು ಕಂಡರೆ ಅದು ಮುಂದಕ್ಕೆ ಕಳುಹಿಸುವುದು. ಆಗ ತಾನು ಎನ್ನುತ್ತಿರುವ ಚೇತನವು ಸಚ್ಚಿದಾನಂದವೆಂದು ತಿಳಿಯುವುದೇ ಕೊನೆಯ ಅವಸ್ಥೆಯು. ಅಲ್ಲಿಂದ ಆಚೆಗೆ ಹೋಗುವುದೇ ನಿರ್ವಿಕಲ್ಪವು. ಅದನ್ನೇ ಆರೂಢವೆನ್ನುವರು. ಒಂದು ಗಳಿಗೆ ನನಗೆ ವಶನಾಗು. ಇದರ ಅನುಭವವನ್ನು ನೋಡಿಕೋ” ಎಂದು ವರುಣನು ನಹುಷನ ತಲೆಯ ಮೇಲೆ ಕೈಯಿಟ್ಟನು.

ನಹುಷನು ಕಣ್ಮುಚ್ಚಿ ಕುಳಿತನು. ಅನ್ನವಾಗಿ ಲೋಕದಲ್ಲೆಲ್ಲಾ ಇರುವುದು ಪ್ರಾಣ. ಬದುಕಿರುವಾಗ ಅನ್ನಾದನಾಗಿ, ಸತ್ತು ಇನ್ನೊಂದಕ್ಕೆ ಅನ್ನವಾಗುತ್ತಿರುವ ಪ್ರಾಣವೇ ಲೋಕವನ್ನೆಲ್ಲಾ ತುಂಬಿದೆ. ಅದೇ ಮತ್ತೆ ಮನಸ್ಸಾಗಿ ತನ್ನನ್ನು ತಾನೇ ಪ್ರೇರಿಸಿಕೊಳ್ಳುತ್ತಿದೆ. ಇವಿಷ್ಟೂ ಪೂರ್ಣವಾದಾಗ ಬ್ರಹ್ಮಬಿಂಬವನ್ನು ಧಾರಣ ಮಾಡುವ ಬುದ್ಧಿಯಾಗಿದೆ. ಆ ಪ್ರತಿಬಿಂಬವು ತನ್ನನ್ನು ಮಿತವೆಂದುಕೊಂಡು, ಪ್ರತ್ಯೇಕವೆಂದುಕೊಳ್ಳುತ್ತಿದೆ. ಅದು ಹಿಂತಿರುಗಿ ನೋಡಿದರೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಆನಂದವನ್ನು ತಾನೆಂದುಕೊಳ್ಳುತ್ತದೆ. ಆ ಆನಂದವು ಬಹಿರ್ಮುಖವಾಗಿದ್ದುದು ಅಂತರ್ಮುಖವಾಗುತ್ತದೆ. ಆಗ ಕಾಲದೇಶಗಳನ್ನು ಮೀರಿ ತನ್ನ ಹೊರತು ಇನ್ನೇನೂ ಇಲ್ಲವೆಂದುಕೊಳ್ಳುತ್ತದೆ. ಅದು ಶಾಂತಿ. ಆ ಶಾಂತಿಯನ್ನು ನಹುಷನು ಅನುಭವಿಸುತ್ತಾನೆ.

ವರುಣನು ಕೈ ತೆಗೆದನು. ದೀಪವು ಆರಿದರೂ ಸೊಡರಿದ್ದ ಕಂಬವು ಬಿಸಿಯಾಗಿರುವಂತೆ, ಆ ಅವಸ್ಥೆಯು ನಹುಷನಿಗೆ ಅಷ್ಟು ಹೊತ್ತು ಇದ್ದು ಎಚ್ಚರವಾಯಿತು. ವರುಣನು ಹೇಳಿದನು : “ಇಂದ್ರ, ಸಂಶಯ ವಿಪರೀತ ಭಾವನೆಗಳೇನಾದರೂ ಇದ್ದರೆ ಅವನ್ನು ಅಭ್ಯಾಸಬಲದಿಂದ ಕಳೆದುಕೊ. ಶಾಸ್ತ್ರದ ಕಡೆಗೆ ಅನುಭವವನ್ನು ತಿದ್ದಿಕೊ. ಅನುಭವದಲ್ಲಿರುವ ಅಪೂರ್ಣತೆಯಿಂದ ಸಂಶಯ ವಿಪರೀತಗಳು ತಲೆದೋರುವುವು. ಆ ಅಪೂರ್ಣತೆಯನ್ನು ಕಳೆದರೆ, ಶಾಸ್ತ್ರವೇ ಅನುಭವವಾಗುವುವು” ಎಂದು ಹೇಳಿ ಎಲ್ಲರನ್ನೂ ಬೀಳ್ಕೊಂಡು ಹೊರಟು ಹೋದನು.

ದೇವಾಚಾರ್ಯನು “ಇದು ನಮಗೆ ಬಹು ಗಹನವಾದುದು ಅಷ್ಟೇನು? ಅಸಾಧ್ಯ” ಎಂದುಕೊಂಡನು. ಶುಕ್ರಾಚಾರ್ಯನು “ನಮ್ಮನ್ನು ಅಪೂರ್ಣತೆ ಬಿಟ್ಟಿರಲ್ಲವೆ? ಮದುವೆಯಾಗುವವರೆಗೂ ಹುಚ್ಚು ಬಿಡುವುದಿಲ್ಲ. ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ” ಎಂದುಕೊಂಡನು.

ನಹುಷನು “ಇಂದ್ರನಾದುದು ಸಾರ್ಥಕವಾಯಿತು. ಏನು ತಿಳಿಯಬೇಕೋ ಅದನ್ನು ತಿಳಿದುದಾಯಿತು” ಎಂದು ಆನಂದಪಟ್ಟುಕೊಳ್ಳುತ್ತಿದ್ದನು.

ಹೊರಗೆ ಗದ್ದಲವಾಯಿತು. ಸಮುದ್ರವು ಉಕ್ಕಿ ಬಂದು ಮಾಡುತ್ತಿರುವಂತೆ ಆಗುವ ಆರ್ಭಟ. ಏನೆಂದು ಆಚಾರ್ಯರು ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದರು. ಪ್ರಹರಿಯು ಬಂದು “ಅಗ್ನಿ ವಾಯುಗಳು....” ಎನ್ನುತ್ತಿರುವ ಹಾಗೆಯೇ ಅವರಿಬ್ಬರೂ ಬಂದು ಇಂದ್ರನಿಗೆ ಕೈಮುಗಿದು “ಮಹಾಪಾದದ ಆಜ್ಞೆಯು ಸಫಲವಾಯಿತು. ಹತ್ಯೆಯು ಉರಿದುಹೋಯಿತು. ಇಂದ್ರನನ್ನು ಕರೆತಂದಿರುವೆವು” ಎಂದರು. ನಹುಷನು ಸಂತೋಷದಿಂದ ಎದ್ದು ಅವರಿಬ್ಬರನ್ನು ಆಲಿಂಗಿಸಿದನು.

* * * *

ಸೃಷ್ಟಿಯೆಂದರೆ ಅಂಕೆ

ಸಂಪಾದಿಸಿ

ಪ್ರಹರಿಯು ಬಂದು ಕೈಮುಗಿದು “ಯಾರೋ ಮಹಾಪಾದದ ದರ್ಶನಕ್ಕೆ ಆತುರವಾಗಿ ಬಂದಿರುವರು” ಎಂದು ಬಿನ್ನವಿಸಿದನು. ಅದು ಆಗಂತುಕರ ಕಾಲವಲ್ಲ. ಆದರೂ ನಹುಷನು ಬೇಸರಗೊಳ್ಳದೆ, “ಅವರನ್ನು ದರ್ಶನ ಮಂದಿರಕ್ಕೆ ಕರೆದುಕೊಂಡು ನಡೆ ಎಂದು ತಾನೂ ಹಿಂದೆಯೇ ಬಂದನು.

ಬಂದವರು ನಿಯತಿದೇವಿ. ಆಕೆಯು ಇಂದ್ರನನ್ನು ಕಂಡು ವಿನಯದಿಂದ ನಮಸ್ಕರಿಸಿ ತಾನು ಬಂದ ಕಾರ್ಯವನ್ನು ನಿವೇದಿಸಿದಳು : “ಮಹಾಪ್ರಭುಗಳು ಶಿಬಿಕೋತ್ಸವವು ಏಳು ದಿನ ನಡೆಯಬೇಕೆಂದು ಗೊತ್ತುಮಾಡಿರುವಿರಂತೆ. ಹಾಗಾದರೆ ಮನುಷ್ಯ ಲೋಕದಲ್ಲಿ ಎಲ್ಲವೂ ವ್ಯತ್ಯಾಸವಾಗಿ ಹೋಗಿ, ನಾನು ಮಾಡಬೇಕಾಗಿರುವುದು ಏನೂ ಉಳಿಯದೇ ಹೋಗುವುದು”

“ಹಾಗೆಂದರೇನು? ಅದನ್ನು ವಿಶದವಾಗಿ ಹೇಳು ದೇವಿ!”

“ದೇವ, ತಮ್ಮ ಏಳು ದಿನದ ಶಿಬಿಕೋತ್ಸವದಿಂದ ಮಧ್ಯಮಲೋಕದಲ್ಲಿ ಬಹು ಪತಿವರ್ತನಗಳಾಗುವುವು. ಅದು ರಜೋಗುಣಪೂರ್ಣವಾದ ಲೋಕ. ಅಲ್ಲಿ ಯಾವಾಗಲೂ ಒಳ್ಳೆಯದು ಕೆಟ್ಟುದು ಎರಡೂ ಇರಬೇಕು. ಅಂಥದರಲ್ಲಿ ತಮ್ಮ ಶಿಬಿಕೋತ್ಸವದಿಂದ ಎಲ್ಲವೂ ಒಳ್ಳೆಯದೇ ಆಗಿಹೋದರೆ, ಹಿಟ್ಟೂಬೂದಿ ಎಂಬ ಭೇದವೇ ಇಲ್ಲದೆ ಹೋದರೆ, ನಾನು ಅಲ್ಲಿ ಮಾಡಬೇಕಾದುದು ಏನೂ ಉಳಿಯುವುದಿಲ್ಲ. ಅಲ್ಲಿಗೆ ಸ್ಥಿತಿಯೇ ಲೋಪವಾಗುವುದು. ಅದನ್ನು ಬಿನ್ನವಿಸಲು ಬಂದಿದ್ದೇನೆ.”

“ಹಾಗಾದರೆ ಏನು ಮಾಡಬೇಕೆಂದಿರುವೆ?”

“ಆಜ್ಞಾಸ್ಥಾನವು ತಮ್ಮದು. ನಾವು ಏನಿದ್ದರೂ ಆಜ್ಞಾವಾಹಕರು. ಸ್ಥಿತಿಯು ಈಗಿರುವಂತೆ ಇರಬೇಕು ಎನ್ನುವುದಾದರೆ, ಸನ್ನಿಧಾನವು ಏಳು ದಿನ ಶಿಬಿಕೋತ್ಸವ ಮಾಡಿಕೊಳ್ಳಬಾರದು. ಮಾಡಿಕೊಳ್ಳುವುದಾದರೆ ಸ್ಥಿತಿ ಪರಿವರ್ತನಕ್ಕೆ ಒಪ್ಪಬೇಕು.”

ಇಂದ್ರನು ಯೋಚಿಸಿದನು. ಸ್ಥಿತಿಯನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಏನು ಮಾಡಬೇಕು? ಕೊನೆಗೆ ಆಕೆಯನ್ನೇ ಕೇಳಿದನು : “ನೀನು ಸ್ಥಿತಿದೇವತೆ. ಈ ವಿಚಾರದಲ್ಲಿ ನೀನು ಹೇಳಿದಂತೆ ಕೇಳುವೆವು, ಹೇಳು.”

“ಹಾಗಾದರೆ ಸ್ಥಿತಿಯು ಈಗಿರುವಂತೆಯೇ ಇರಬೇಕು. ಅದಕ್ಕಾಗಿ ತಾವು ಶಿಬಿಕೋತ್ಸವವನ್ನು ಏಳು ದಿನ ನಡೆಸಬಾರದು. ಮೂರು ದಿನಕ್ಕೆ ನಿಲ್ಲಿಸಿ ಬಿಡಬೇಕು.”

“ಅದು ಸಾಧ್ಯವಿಲ್ಲ. ಶಿಬಿಕೋತ್ಸವವು ಒಂದುವಾರ ನಡೆದೇ ನಡೆಯುವುದು. ಅದು ಹಾಗೆಂದು ಇತ್ಯರ್ಥವಾಗಿರುವುದು ಇಲ್ಲಿ ; ಸಪ್ತರ್ಷಿಗಳ ಸನ್ನಿಧಿಯಲ್ಲಿ ಇಂದ್ರನು ಗೊತ್ತು ಮಾಡಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.”

ನಿಯತಿಯು ಹೆದರಿ ಎದ್ದು ಕೈಮುಗಿದು ಹೇಳಿದಳು : “ಸ್ವಾಮಿ ಒಂದು ಆಜ್ಞೆಯು ಇನ್ನೊಂದು ಆಜ್ಞೆಯನ್ನು ಭಂಗಿಸಬಾರದು. ಹಾಗಾಗುವುದಾದರೆ, ಆಜ್ಞಾನಿರ್ವಾಹಕರು ಸ್ವಾಮಿಗೆ ಅದನ್ನು ಬಂದು ನಿವೇದಿಸಬೇಕು. ಅದನ್ನು ಸರಿಮಾಡುವುದು ಸ್ವಾಮಿಯ ಕೆಲಸ. ಅದರಿಂದ ಬಂದು ಬಿನ್ನವಿಸಿದ್ದೇನೆ.”

“ಏನಾದರೊಂದು ಉಪಾಯವನ್ನು ಹೇಳು. ನಮ್ಮ ಆಜ್ಞಾನಿರ್ವಾಹಕರು ಯಾಂತ್ರಿಕಪುರುಷರಲ್ಲ.”

“ದೇವ, ಶಿಬಿಕೋತ್ಸವವು ಏಳು ದಿನಗಳು ಪೂರ್ಣವಾಗಿ ನಡೆಯದಂತೆ ನಾವೊಂದು ಅಡ್ಡಿಯನ್ನು ತಂದೊಡ್ಡಲು ಅಪ್ಪಣೆಯಾಗಬೇಕು. ಯಾವುದೂ ಈ ಲೋಕದಲ್ಲಿ ಪೂರ್ಣವಾಗಬಾರದು. ಅಪೂರ್ಣವಾಗಿಯೇ ಉಳಿಯಬೇಕು. ಇದು ಬ್ರಹ್ಮನಿಯಮ. ಸನ್ನಿಧಾನವು ಅದಕ್ಕೆ ವಿರುದ್ಧವಾಗಿ ನಡೆಯಬಾರದು.”

“ಹಾಗಲ್ಲ. ತಮ್ಮನ್ನು ಅದಕ್ಕೆ ವಿರುದ್ಧವಾಗಿ ನಡೆಯಬಿಡುವುದಿಲ್ಲ ಎನ್ನು.”

“ಅದೇ ನಿಜವಾದರೂ ಈಗ ತಾವು ಆಜ್ಞಾಪಕರು. ನಾವು ನಿರ್ವಾಹಕರು. ಅದರಿಂದಾಗಿ ವರವಾಗಿ ಕೇಳುವೆವು.”

“ಕೊಡದಿದ್ದರೆ, ತುಂಟ ಹಸುವನ್ನು ಕಟ್ಟಿ ಕರೆಯುವಂತೆ ವರವನ್ನು ಕಿತ್ತುಕೊಳ್ಳುವೆವು. ಇಲ್ಲವೆ ?”

ನಿಯತಿಯು ಉತ್ತರ ಕೊಡಲಿಲ್ಲ. ನಕ್ಕು ತಲೆಯನ್ನು ಬಗ್ಗಿಸಿದಳು. ಅದೇ ಉತ್ತರವಾಯಿತು.

“ಹೌದು ನೀವು ಆಜ್ಞಾವಾಹಕರು. ಆದರೆ, ಸಲ್ಲುವ ಆಜ್ಞೆಯನ್ನು ಮಾತ್ರವೇ ಮಾಡಬೇಕಾದುದು ನಮ್ಮ ಗೌರವ. ಆಯಿತು. ಈಗೇನು ಮಾಡಬೇಕು, ನಿಯತಿ?”

“ಸ್ವಾಮಿಗೆ ಸಮ್ಮತವಾದರೆ ಏಳನೆಯ ದಿನ, ಶಿಬಿಕೆಯಲ್ಲಿರುವಾಗಲೇ ತಾವು ಸಮಾಧಿ ಭಂಗಮಾಡಿಕೊಳ್ಳಬೇಕು. ಅದರಿಂದ ತಮ್ಮ ಸನ್ನಿಧಿಗೆ ಕೊಂಚ ಶ್ರಮವಾಗಬಹುದು. ಆದರೂ ಲೋಕವು ಉಚ್ಛೃಂಖಲವಾಗುವುದಿಲ್ಲ. ಇಲ್ಲದಿದ್ದರೆ ತುಟಿ ಮೀರಿದ ಹಲ್ಲಾಗುವುದು. ಅದರಿಂದ, ನನಗೆ ಈ ವರವನ್ನು ಕೊಡಬೇಕು” ಎಂದು ನಿಯತಿದೇವಿಯು ಇಂದ್ರನಿಗೆ ನಮಸ್ಕಾರ ಮಾಡಿದಳು. ವರವೆನ್ನುತ್ತಲೂ ಇಂದ್ರನು ಮೆತ್ತಗಾಗಿ, ಮರುಮಾತಾಡದೆ, “ಆಗಬಹುದು” ಎಂದನು. ನಿಯತಿಯು ಹಸನ್ಮುಖಳಾಗಿ ಇಂದ್ರನಿಗೆ ಮತ್ತೆ ನಮಸ್ಕರಿಸಿ ಬೀಳ್ಕೊಂಡಳು. ಇಂದ್ರನು ಅಲ್ಲಿಯೇ ಶತಪಥ ತಿರುಗುತ್ತ. “ಹೌದು, ಸ್ವರ್ಗಮತರ್ಯ್‌ಪಾತಾಳಗಳಲ್ಲೆಲ್ಲಾ ಮೃತ್ಯುವಿನ ಮೆರವಣಿಗೆ. ಮೊದಲು ಕೊನೆಯೆರಡೂ ಇಲ್ಲವಾಗುವುದು ಕಲ್ಪಾಂತರದಲ್ಲಿ. ಮತರ್ಯ್‌ಲೋಕದಲ್ಲಿ ದಿನದಿನವೂ ಅಲ್ಲ. ಗಳಿಗೆ ಗಳಿಗೆಯೂ, ಹುಟ್ಟಿದುದೆಲ್ಲ ಹೆಜ್ಜೆಯನ್ನು ಸಾವಿನ ಕಡೆಗೆ ಇಡುತ್ತಿರುವಾಗ ಪೂರ್ಣವಾಗುವುದೆಲ್ಲಿ ಬಂತು ? ಇಷ್ಟಕ್ಕೂ ಏಳು ದಿನವಂತೂ ಶಿಬಿಕೋತ್ಸವವು ನಡೆದೇ ನಡೆಯುವುದು. ಕೊನೆಯಲ್ಲಿ ಅಷ್ಟು ಭಂಗವಾದರೆ ನಮಗೇನು ಹಾನಿ ?” ಎಂದು ಸಮಾಧಾನಪಟ್ಟುಕೊಂಡನು.

ಹಾಗೆಯೇ ಅದೇ ಚಿತ್ತವೃತ್ತಿಯಲ್ಲಿರುವಾಗ ವಿರಜಾದೇವಿಯು ಬಂದು ಕಾಣಿಸಿಕೊಂಡು, “ಶಚೀಂದ್ರರು ಬರುವ ಕಾಲವಾಯಿತು. ಅವರನ್ನೆಲ್ಲಿ ನೋಡುವಿರಿ?” ಎಂದಳು.

ನಹುಷನು ವಿರಜಾದೇವಿಯ ಭುಜದ ಮೇಲೆ ಸ್ನೇಹದಿಂದ ಕೈಯಿಟ್ಟು “ಆ ದಂಪತಿಗಳನ್ನು ಈ ದಂಪತಿಗಳು ನಿನ್ನ ಅಪ್ಪಣೆಯಾದರೆ ನಿನ್ನ ಅಂತಃಪುರದಲ್ಲಿ ಕಾಣುವರು” ಎಂದನು.

ವಿರಜಾದೇವಿಯು ಸಮೀಪಗತಳಾಗಿ ಆತನ ವಿಶಾಲವಾದ ಎದೆಯಲ್ಲಿ ಹುದುಗಿಕೊಳ್ಳುವಂತೆ ತನ್ನ ಮೊಗವನ್ನಿಟ್ಟು “ತಾವು ಅಪ್ಪಣೆ ಕೊಡಿಸಿದುದು ಸರ್ವಥಾ ಸರಿ. ಇಂದ್ರದಂಪತಿಗಳು ಈಗ ದೂರದವರಲ್ಲ. ಅವರನ್ನು ಅಂತಃಪುರದಲ್ಲಿ ಅಲ್ಲದೆ ಇನ್ನೆಲ್ಲಿ ಕಂಡರೂ ದೂರಮಾಡಿದರೆಂದು ನೊಂದುಕೊಂಡಾರು. ಸರಿ ದಯಮಾಡಿಸಿ” ಎಂದು ಗಂಡನನ್ನು ಅಂತಃಪುರಕ್ಕೆ ಕರೆದೊಯ್ದಳು.

ದಂಪತಿಗಳು ಇಬ್ಬರೂ ಮಾತನಾಡಿಕೊಂಡು ಇಂದ್ರದಂಪತಿಗಳನ್ನು ಸ್ವಾಗತಿಸಲು ಸಿದ್ಧರಾದರು. ಬಂದವರಿಗೆ ಮಂಗಳಾರತಿ ಮಾಡಲು ರತ್ನದ ಹರಿವಾಣವು ಸಿದ್ಧವಾಯಿತು. ಕಲ್ಪವೃಕ್ಷವು ಕೊಟ್ಟ ದುಂಡುಮೊಗ್ಗಿನ ಹಾರಗಳು ಸಿದ್ಧವಾದವು. ಕಾಣಿಕೆಯಾಗಿ ಚಿಂತಾಮಣಿಯು ಕೊಟ್ಟ ರತ್ನಾಭರಣಗಳು ಸಿದ್ಧವಾದವು. ದಂಪತಿಗಳು ಕುಳಿತುಕೊಳ್ಳಲು ರತ್ನಾಸನವು ಅಣಿಯಾಯಿತು. ಹೀಗೆ ಸರ್ವಸನ್ನದ್ಧರಾಗಿ ಕಾದರು.

ಸಕಾಲದಲ್ಲಿ ಶಚೀಂದ್ರರು ಬಂದರು. ಸಾಮಾನ್ಯವಾದ ವೇಷಭೂಷಣಗಳಿಂದ ಬಂದಿದ್ದಾರೆ. ಇಂದ್ರನು ಒಂದು ಪೀತಾಂಬರವನ್ನು ಉಟ್ಟಿದ್ದಾನೆ. ಇನ್ನೊಂದನ್ನು ಹೊದೆದಿದ್ದಾನೆ. ತಲೆಯ ಮೇಲೆ ಹೇಮಕಿರೀಟವೊಂದಿದೆ. ದೇವಸಹಜವಾದ ಗಂಧಮಾಲ್ಯಗಳು, ಜೊತೆಗೆ ಕಾಲಿನಲ್ಲಿ ರತ್ನಗಳು ಕೆತ್ತಿರುವ ಚಿನ್ನದ ಆಭರಣವೊಂದು, ಹಸ್ತಾಭರಣಗಳು, ಕರ್ಣಾಭರಣಗಳೂ ವಿನಾ ಇನ್ನೇನೂ ಇಲ್ಲ.

ಶಚಿಯೂ ಅಷ್ಟೇ ! ರತ್ನಖಚಿತವಾದ ಬೂಟಾ ಸೀರೆಯುಟ್ಟು ಬೂಟಾ ರವಿಕೆ ತೊಟ್ಟಿದ್ದಾಳೆ. ಹಸ್ತಾಭರಣ, ಕಂಠಾಭರಣ, ಪಾದಾಭರಣಗಳ ಜೊತೆಗೆ ಮೇಖಲೆಯೊಂದನ್ನು ಧರಿಸಿದ್ದಾಳೆ. ತಲೆಯ ಮೇಲೆ ಒಂದು ರತ್ನಕಿರೀಟವಿದೆ. ಇನ್ನು ಏನೂ ಇಲ್ಲ.

ಶಚೀಂದ್ರರು ವಿರಜಾ - ನಹುಷರಿಗೆ ನಮಸ್ಕಾರ ಮಾಡಲು ಬಂದರು. ಅವರನ್ನು ತಡೆದು ನಹುಷನು, “ನೀನು ನಿತ್ಯೇಂದ್ರ. ನಾನು ನೈಮಿತ್ತಿಕೇಂದ್ರ. ನನಗೆ ನೀನು ನಮಸ್ಕಾರ ಮಾಡುವುದೆ ?” ಎಂದನು. ಇಂದ್ರನು “ಆ ಮಾತು ನಿಜ. ಆದರೆ, ಬುದ್ಧಿಯಲ್ಲಿ ಪ್ರಭಾವದಲ್ಲಿ ಸಾಮಥರ್ಯ್‌ದಲ್ಲಿ, ಪ್ರತಿಯೊಂದರಲ್ಲೂ ನೀನು ನನಗಿಂತ ಹೆಚ್ಚು ಅಲ್ಲದೆ, ಹತ್ಯೆಗೆ ಸಿಕ್ಕಿ ಗೋಳಿಡುತ್ತಿದ್ದ ನನ್ನನ್ನು ಉದ್ಧರಿಸಿರುವೆ. ಇಂತಹ ಪರಮೋಪಕಾರಿಗೆ ನಾನೇನು ತಾನೆ ಉಪಚಾರಮಾಡಲಿ ?” ಎಂದು ತಾವು ತಂದಿದ್ದ ವಸ್ತ್ರಾಭರಣ ಗಂಧಮಾಲ್ಯಾದಿಗಳನ್ನು ಪತ್ನೀಸಮೇತನಾದ ಇಂದ್ರನು ಪತ್ನೀದ್ವಿತೀಯನಾದ ನಹುಷನಿಗೆ ಒಪ್ಪಿಸಿದನು.

ವಿರಜಾ - ನಹುಷರು ಬಲಾತ್ಕಾರದಿಂದ ಅದನ್ನೆಲ್ಲ ಸ್ವೀಕರಿಸಿ, ಶಚೀಂದ್ರರನ್ನು ರತ್ನಾಸನದಲ್ಲಿ ಕುಳ್ಳಿರಿಸಿ, ಆರತಿಯನ್ನೆತ್ತಿ ಹಾರಗಳನ್ನು ಹಾಕಿ ಕಾಣಿಕೆಗಳನ್ನು ಒಪ್ಪಿಸಿದರು. ಪರಸ್ಪರ ಸ್ವಾಗತದಿಂದ ಉಭಯ ದಂಪತಿಗಳೂ ಸಂತುಷ್ಟರಾಗಿ ಕುಶಲ ಪ್ರಶ್ನಾದಿಗಳಿಂದ ಒಬ್ಬರನ್ನೊಬ್ಬರು ಗೌರವಿಸಿದರು.

ನಹುಷನು ಹೇಳಿದನು : “ಇಂದ್ರ, ನೀನು ಬಂದುದು ಬಹು ಸಂತೋಷವಾಯಿತು. ಈ ಶಿಬಿಕೋತ್ಸವವನ್ನು ಪೂರೈಸಿಕೊಂಡು ನಾನೂ ವಿರಜಾದೇವಿಯೊಡನೆ ವಾನಪ್ರಸ್ಥಕ್ಕೆ ತೆರಳುವೆನು. ನೀನು ನಿನ್ನ ಇಂದ್ರಾಧಿಪತ್ಯವನ್ನು ನಿರಾತಂಕವಾಗಿ ವಹಿಸಿಕೊಳ್ಳಬಹುದು.”

ಇಂದ್ರನು ಸಂಕೋಚದಿಂದ ಹೇಳಿದನು : “ಅದು ಕೂಡದು ಎಂದು ಹೇಳುವುದಕ್ಕೆ ನಾನು ಬಂದುದು. ಅಷ್ಟೇ ಅಲ್ಲ ನಿನಗೆ ಶಚೀಪತಿತ್ವವು ಬೇಕೆಂದು ಅಪೇಕ್ಷಿಸಿದೆಯಂತೆ. ಶಚಿಯು ತನ್ನ ಶಚೀತ್ವವನ್ನೆಲ್ಲ ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವಳು. ನಾವು ತಮ್ಮ ಸಖರಾಗಿ ತಮ್ಮ ದಾಸರಾಗಿ ಕೊನೆಯವರೆಗೂ ಇದ್ದುಬಿಡುವೆವು.”

ಅರಸನೂ ವಿರಜೆಯೂ ಶಚೀದೇವಿಯ ಮುಖವನ್ನು ನೋಡಿದರು. “ಅರಸ, ಸಲುಗೆಯಿಂದ ನುಡಿಯುವಾಗ ಏಕವಚನವಲ್ಲದೆ ಬಹುವಚನವು ಶೋಭಿಸದು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಮಾಡುವುದಕ್ಕಾಗದ ಉಪಕಾರ ಮಾಡಿ, ದೇಶಾಂತರಗತನಾಗಿದ್ದ ಪತಿಯನ್ನೂ ಕರೆಯಿಸಿಕೊಟ್ಟ ನಿನಗಿಂತ ಉಪಕಾರಿ ಯಾರು? ಅದರಿಂದ ನಿನ್ನಲ್ಲಿ ಏಕವಚನವನ್ನು ಉಪಯೋಗಿಸಿದರೆ ಸಹಿಸಿಕೊ. ನಾನು ಇಂದ್ರನೂ ಮಾತನಾಡಿಕೊಂಡೆವು. ನೀನು ಮಾಡಿದಂತೆ ಮಾಡಿ ಹತ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿತ್ತು. ನಮಗೆ ಬುದ್ಧಿಯು ಓಡಲಿಲ್ಲ. ಅದರಿಂದ ನೀನು ಬುದ್ಧಿಯಲ್ಲಿ ಜ್ಯೇಷ್ಠನಾದೆ. ಅದರಿಂದ ಹೇಗೂ ನೀನೇ ಇಂದ್ರಪದವಿಗೆ ಯೋಗ್ಯನು. ನೀನು ಶಚೀಪತ್ನಿತ್ವವನ್ನು ಬಯಸಿದೆಯೆಂದು ನೀನು ಈ ದೇಹವನ್ನು ಅಪೇಕ್ಷಿಸುವೇ ಎಂದು ಹೆದರಿ ನಾನು ನಿನ್ನನ್ನು ಸಾರಿದೆ. ಆದರೆ ಧೀರೋದಾತ್ತನಾದ ನಿನಗೆ ಬೇಕಾದುದು ಹೆಣ್ಣಲ್ಲವೆಂದು ತಿಳಿದು, ಹೆಣ್ಣಾದ ನಾನು ಎಷ್ಟು ಸಂತೋಷಪಟ್ಟೆ ಬಲ್ಲೆಯಾ? ಅಲ್ಲದೆ ದೇವ, ನಿಜವಾಗಿ ಹೇಳುವೆನು, ಹೆಣ್ಣಿಗೆ ಸರ್ವ ಸೌಭಾಗ್ಯವೂ ಒಂದು ತೂಕ. ತಾನೊಲಿದ ಪತಿಯೇ ಒಂದು ತೂಕ. ಹಾಗೆ ಸರ್ವಸೌಭಾಗ್ಯಗಳಿಗಿಂತ ಹೆಚ್ಚಾದ ಪತಿಭಾಗ್ಯವನ್ನೂ ಮಾಂಗಲ್ಯಭಾಗ್ಯವನ್ನೂ ಕರುಣಿಸಿದ ನಿನಗೆ ನಾನು ಏನು ತಾನೆ ಒಪ್ಪಿಸಲಿ? ಅದರಿಂದ ನನ್ನಲ್ಲಿದ್ದ ಇಂದ್ರಾಣೀತ್ವವನ್ನು ನಿನ್ನ ಅಪ್ಪಣೆಯಾದರೆ ವಿರಜಾದೇವಿಗೆ ಒಪ್ಪಿಸುವೆನು. ದೇವತೆಗಳೂ ಋಷಿಗಳೂ ಪಿತೃಗಳೂ ಸೇರಿ ನಿನಗೆ ಅನುಗ್ರಹಿಸಿರುವ ಈ ತ್ರೈಲೋಕ್ಯಾಧಿಪತ್ಯವನ್ನು ಕೊನೆಯವರೆಗೂ ಅನುಭವಿಸು. ಮೂರು ಲೋಕದವರೂ ನಿನ್ನನ್ನು ನಿನ್ನಂತಹ ಸರ್ವತಃ ಸರ್ವಥಾ ಜ್ಯೇಷ್ಠನಾದವನನ್ನು ಧರ್ಮ ಪರಾಯಣನನ್ನು ಅರಸಾಗಿ ಪಡೆದು ಸುಖಿಸುವ ಭಾಗ್ಯವನ್ನು ಹೊಂದಲಿ.”

ಬುಟ್ಟಿಯಿಂದ ಎತ್ತಿಸುರಿದ ಹೂವಿನಂತೆ, ನಿರರ್ಗಳವಾಗಿ ಸಹಜಸುಂದರವಾಗಿ ಹೃದಯದಿಂದ ಬಂದುದಾಗಿರುವ ಶಚೀದೇವಿಯ ಭಾಷಣಗಳನ್ನು ಕೇಳಿ ನಹುಷ ದಂಪತಿಗಳು ಆನಂದಾನಂದವನ್ನು ಪಡೆದರು. ಅದನ್ನು ಪೂರ್ಣವಾಗಿ ಅನುಭವಿಸುವವನಂತೆ ನಹುಷನು ಒಂದು ಗಳಿಗೆ ಸುಮ್ಮನಿದ್ದು ವಿರಜಾದೇವಿಯ ಸಮ್ಮತಿಯನ್ನು ಸನ್ನೆಯಿಂದ ಪಡೆದು ಹೇಳಿದನು: “ಶಚೀದೇವಿ, ನೀನು ಪತಿಭಕ್ತೆಯೆಂದು ನಿನ್ನ ಮೇಲೆ ಅಪಾರವಾದ ಗೌರವವು ಬಂದಿದೆ. ಹಿಂದೆ ನೀನು ಬಂದಾಗ ನಿನ್ನನ್ನು ನಾನು ‘ತಾವು’ ಎಂದು ಸಂಬೋಧಿಸಿದುದು ನಿನಗೆ ನೆನಪಿರಬಹುದು. ಈಗ ನೀನಾಗಿ ದೊಡ್ಡಮನಸ್ಸುಮಾಡಿ, ನಾನು ಅಧಿಕಾರಸ್ಥಾನದಲ್ಲಿ ಮಾಡಬೇಕಾಗಿದ್ದು ಮಾಡಿದ ಕೆಲಸವನ್ನು ಪರಮೋಪಕಾರವೆಂದು ಭಾವಿಸಿ ನನ್ನನ್ನು ನಿನ್ನ ಆಪ್ತೇಷ್ಟರಲ್ಲಿ ಪರಿಗಣಿಸಿ ಗೌರವಿಸಿರುವೆ. ಒಂದು ಗಳಿಗೆ ಮುಂಚೆ ಇಂದ್ರನಿಗೆ ನಾನು ಬಿನ್ನವಿಸಿದುದನ್ನು ಏಕೆ ಮರೆತೆ? ನಾವು ಭೋಗದ ಪರಾಕಾಷ್ಠತೆಯನ್ನು ಅನುಭವಿಸಿದೆವು. ಮನುಷ್ಯದೇಹದಲ್ಲಿ ದಿವ್ಯ ಮನಸ್ಸನ್ನು ಧಾರಣಮಾಡಿ ಮಾನುಷಾನಂದಕ್ಕಿಂತ ಕೋಟಿ ಕೋಟಿ ಹೆಚ್ಚಾದ ಆನಂದವನ್ನು ಅನುಭವಿಸಿದೆವು. ಈಗ ನಮಗೆ ಹೇಗಿರುವುದು ಬಲ್ಲೆಯಾ? ಬೃಹಸ್ಪತಿಯ ಆನಂದವು ಇಂದ್ರಾನಂದಕ್ಕಿಂತ ನೂರು ಮಡಿಯಂತೆ. ಅದು ನಿಜವೆಂದು ಯಮವರುಣರುಪದೇಶಿಸಿದ ಬ್ರಹ್ಮವಿದ್ಯಾನುಭವದಿಂದ ತಿಳಿದಿರಲು ಮತ್ತೆ ನಾನೇಕೆ ಈ ಪದವಿಗೆ ಅಂಟಿಕೊಳ್ಳಲಿ? ಅದರಿಂದ ನಾನು ಅರ್ಥಾತ್ ನಾವು ಮುಂದಿನ ಪಯಣಕ್ಕೆ ಸಿದ್ಧರಾಗಿರುವೆವು. ಈಗ ನಿಮ್ಮಿಂದ ನಮಗೆ ಆಗಬೇಕಾದ ಉಪಕಾರವೊಂದಿದೆ, ಅದು ದ್ವಿಮುಖವಾದುದು. ಅದನ್ನು ಮಾಡಿಕೊಟ್ಟರೆ ಸಾಕು.”

ಶಚೀಂದ್ರರಿಬ್ಬರೂ “ಅಪ್ಪಣೆ ಮಾಡು, ಏನು ಬೇಕಾದರೂ ನಾವು ಮಾಡುತ್ತೇವೆ, ಸಿದ್ಧವಾಗಿದ್ದೇವೆ” ಎಂದರು.

ನಹುಷನು ನಗುತ್ತಾ ಹೇಳಿದನು : “ಶಿಬಿಕೋತ್ಸವವು ಮುಗಿಯುತ್ತಲೂ ಈ ಇಂದ್ರಾಧಿಕಾರವನ್ನು ವಹಿಸಿಕೊಳ್ಳುವುದೊಂದು; ಹಾಗೆಯೇ ನಿನಗೆ ಪ್ರಜಾಪತಿಯು ಕೊಟ್ಟಿರುವ ಬ್ರಹ್ಮವಿದ್ಯೆಯನ್ನು ನನಗೆ ಅನುಗ್ರಹಿಸಿ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯನ್ನು ಪ್ರತ್ಯಕ್ಷಮಾಡಿಕೊಡುವುದೊಂದು, ಈ ಎರಡು ಅಂಗಗಳ ಉಪಕಾರವನ್ನು ಮಾಡಿಕೊಡು.”

ಇಂದ್ರನು ನಗುತ್ತ ಹೇಳಿದನು : “ನಿನಗೆ ಇಂದ್ರಪದವಿಯು ಬಂದಾಗ ಇದೆಲ್ಲವೂ ಬಂದೇ ಇದೆ. ಅದರಿಂದ ಗುರುವಾಗಿ ಅಲ್ಲ. ಸಖನಾಗಿ ಮಿತ್ರನಿಗೆ ಮಿತ್ರನು ಕೊಡುವಂತೆ ಅಥವಾ ಉಪಕೃತನು ತನ್ನ ಉಪಕಾರಸ್ಮರಣದಿಂದ ಕೃತಜ್ಞತೆಯಿಂದ ಒಪ್ಪಿಸುವ ಕಾಣಿಕೆಯಂತೆ ನಿನ್ನಲ್ಲಿರುವುದನ್ನು ನಿನಗೆ ಗುರುತು ಮಾಡಿಕೊಡುವೆನು. ಅದು ಮೊದಲಾಗಲಿ. ಆಮೇಲೆ ಮತ್ತೊಂದನ್ನು ಕುರಿತು ಯೋಚಿಸೋಣ.”

“ಆಗಬಹುದು”

ಇಂದ್ರನು ಹೇಳಿದನು : “ಜಾಗ್ರತ್ ಸ್ವಪ್ನ ಸುಷುಪ್ತಿಗಳು ವೃತ್ತಿಗಳು. ದೇಹವಿರುವವರೆಗೂ ವೃತ್ತಿಗಳುಂಟು. ಆ ವೃತ್ತಿಗಳನ್ನು ಮೀರಿ ನಿರ್ವೃತ್ತಿಯಾಗಿರುವುದೇ ಬ್ರಹ್ಮ. ಅದನ್ನು ತಿಳಿಯುವುದೇ ಬ್ರಹ್ಮವಿದ್ಯೆ. ವೃತ್ತಿಗೆ ಮೀರಿದವನಿಗೂ ವೃತ್ತಿಗಳುಂಟು. ಸೂರ್ಯನನ್ನು ಕಂಡವನಿಗೆ ಸೂರ್ಯನ ಕಿರಣಗಳಲ್ಲೆಲ್ಲಾ ಸೂರ್ಯನೇ ಕಾಣುವಂತೆ ವೃತ್ತಿಸಾಕ್ಷಿಯನ್ನು ಅರಿತವನ ವೃತ್ತಿಗಳು ತಾವು ಹೋದೆಡೆಯಲ್ಲೆಲ್ಲಾ ಆ ಸಾಕ್ಷಿಯನ್ನು ತೋರಿಸುವುದು.ಆಗ ನಾಮರೂಪಗಳು ಹಾದಿ ಬಿಟ್ಟು ಸಚ್ಚಿದಾನಂದವನ್ನು ತೋರಿಸುವುದು. ನೋಡು, ನೋಡು. ನಾನು ಹೇಳುತ್ತಿದ್ದಂತೆಯೇ ನಿನಗೆ ಅನುಭವವು ಬಂತು. ಆ ಅನುಭವವನ್ನು ಸಾಕ್ಷಾತ್ಕರಿಸು. ಆಕೆಯು ದರ್ಶನ ಕೊಡುವಳು. ಅದೋ, ನಿನ್ನ ಕಣ್ಣೆದುರಾಗಿ ನಿಂತಿರುವವಳೇ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯು.”

ಅರಸನು ಉಮಾದರ್ಶನದಿಂದ ಸಂತೃಪ್ತನಾಗಿ ಮಾನಸೋಪಚಾರಗಳಿಂದ ಆರಾಧಿಸಿದನು. ಆಕೆಯು ಪ್ರಸನ್ನಳಾಗಿ ‘ಅರಸಾ, ನಿನ್ನ ಇಂದ್ರಿಯ ವೃತ್ತಿಗಳು ಹರಿದೆಡೆಯಲ್ಲೆಲ್ಲಾ, ಅಷ್ಟೇನು ಪ್ರತಿಬೋಧದಲ್ಲೂ ನಿನಗೆ ನಾಮರೂಪರಹಿತವಾದ ಬ್ರಹ್ಮದ ಸಾಕ್ಷಾತ್ಕಾರವಾಗಲಿ. ಎಚ್ಚರಿಕೆ, ಆನಂದವನ್ನು ಅನುಭವಿಸುವವನು ನೀನಲ್ಲ. ಆನಂದವು ನೀನು. ನೀನು ಆನಂದವು ಪ್ರತ್ಯೇಕವೆಂದುಕೊಂಡಾಗ ಕಾಣುವವಳು ನಾನು” ಎಂದು ರಹಸ್ಯವನ್ನು ಬೋಧಿಸಿ ಕಣ್ಮರೆಯಾದಳು. ಅರಸನಿಗೆ ಕೂಡಲೇ ಎಚ್ಚರವಾಯಿತು.

ಮತ್ತೆ ಇಂದ್ರನು ಮಾತನಾಡಿದನು : “ದೇವ, ಇನ್ನು ಇಂದ್ರತ್ವವನ್ನು ಗ್ರಹಿಸುವ ಮಾತು. ಅದು ನನ್ನೊಬ್ಬನ ವಿಷಯವಲ್ಲ. ಅಗ್ನಿವಾಯುಗಳೂ ದೇವಗುರುವೂ ಗೊತ್ತು ಮಾಡಬೇಕಾದ ವಿಷಯ. ದಯವಿಟ್ಟು ಅವರನ್ನು ಕರೆಸಬೇಕು.”

ಅರಸನು ಆಗಲೆಂದನು. ಮತ್ತೊಂದು ಕ್ಷಣದೊಳಗಾಗಿ ಅವರೂ ಬಂದರು. ಅವರೆಲ್ಲರ ಸಮ್ಮುಖದಲ್ಲಿ ಇಂದ್ರನು ಮತ್ತೆ “ಸರ್ವರೀತಿಯಿಂದಲೂ ನನಗಿಂತ ಶ್ರೇಷ್ಠನಾಗಿರುವ ಈತನೇ ಈ ಕಲ್ಪಾಂತದವರೆಗೂ ಇಂದ್ರನಾಗಿರಲೆಂದು ನನ್ನ ಕೋರಿಕೆ. ಈತನು ಶಿಬಿಕೋತ್ಸವವಾದ ಮೇಲೆ ಇಂದ್ರತ್ವವನ್ನು ಬಿಟ್ಟುಬಿಡಬೇಕು ಎಂದಿರುವನು. ಇದನ್ನು ನೀವೆಲ್ಲ ವಿಮರ್ಶಿಸಬೇಕು” ಎಂದನು.

ಅಗ್ನಿ ವಾಯುಗಳು ಹೇಳಿದರು : “ನಿತ್ಯನೈಮಿತ್ತಿಕ ಸಂಬಂಧದಿಂದ ನೀನು ಜ್ಯೇಷ್ಠನು. ಆದರೆ ಈಗ ನೀನು ಉಪಕೃತನಾಗಿರುವುದರಿಂದ ನಿನ್ನ ಜ್ಯೇಷ್ಠತ್ವವು ಈತನಿಗೆ ಬಂದಿರುವುದು. ಅದರಿಂದ ನೀನು ಸೋಲಬೇಕು. ಆಯಿತು. ಈತನು ಇಂದ್ರನಾದರೆ ನೀನೇನು ಮಾಡುವೆ?”

“ಶಚಿಯು ತನ್ನ ಇಂದ್ರಾಣೀತ್ವವನ್ನು ವಿರಜಾದೇವಿಗೊಪ್ಪಿಸುವಳು. ನಾವಿಬ್ಬರೂ ಈತನ ಸೇವಕರಾಗಿ ಈತನ ಋಣವನ್ನು ತೀರಿಸಿಕೊಳ್ಳುವೆವು.”

“ಪ್ರಭುವಿನ ಅಭಿಮತವೇನು?”

“ನಾನು ಇಂದ್ರನಿಗೆ ಉಪಕಾರವಾಗಲೆಂದು ಯಾವ ಕಾರ್ಯವನ್ನೂ ಮಾಡಲಿಲ್ಲ ನಾನು ಬಿಟ್ಟಕೊಡುವ ಇಂದ್ರತ್ವವನ್ನು ವಹಿಸಿಕೊಳ್ಳಲು ಇನ್ನೊಬ್ಬನು ಸಿದ್ಧನಾಗಿರಬೇಕೆಂದು ಹಾಗೆ ಮಾಡಿದ್ದೇನೆ. ಅದರಿಂದ ಉಪಕಾರದ ಭಾರವೂ ಇಲ್ಲ. ಋಣವೂ ಇಲ್ಲ.”

ದೇವಗುರುವು ಯೋಚಿಸಿದನು : “ಈತನು ಬ್ರಹ್ಮವಿದ್ಯಾರ್ಥವಾಗಿ ಸರ್ವವನ್ನೂ ತ್ಯಾಗ ಮಾಡುವಾಗ, ನಾವು ಅಡ್ಡಿ ಬರುವುದು ಸರ್ವಥಾ ಸರಿಯಲ್ಲ. ಅದರಿಂದ ನಾನು ಹೀಗೆ ಹೇಳುವೆನು : ‘ಶಿಬಿಕೋತ್ಸವವಾಗುವವರೆಗೂ ಶಚೀಂದ್ರರು ಈ ಇಂದ್ರನು ಮಿತ್ರರೂ ಅನುಯಾಯಿಗಳೂ ಆಗಿರಲಿ.’

ಅಗ್ನಿ ವಾಯುಗಳು ‘ಆಗಬಹುದು’ ಎಂದರು. ಶಚಿಯು “ಅದುವರೆಗೂ ವಿರಜಾದೇವಿಯು ಇಂದ್ರಾಣಿಯಾಗಿರಲಿ” ಎಂದಳು. ಆಕೆಯು ಒಪ್ಪಲಿಲ್ಲ. ಆಜ್ಞಾಧಾರಿಗಳಾಗಿರುವ ವಿಚಾರದಲ್ಲಿ ಇನ್ನೂ ಅಷ್ಟು ಮಾತುಕಥೆ ನಡೆಯಿತು. ಕೊನೆಗೆ ಸುರಗುರುವು ಹೇಳಿದಂತೆ ಶಚೀಂದ್ರರು ಇಂದ್ರಮಿತ್ರರೂ ಅನುಯಾಯಿಗಳೂ ಆಗಿರುವುದೆಂದು ಗೊತ್ತಾಯಿತು.

* * * *

೩೬.ಶಿಬಿಕೋತ್ಸವ

ಸಂಪಾದಿಸಿ

ಶಿಬಿಕೋತ್ಸವದ ದಿನವು ಬಂತು. ಸಪ್ತರ್ಷಿಗಳು ಬಂದರು. ಅವರನ್ನು ಇಬ್ಬರು ಇಂದ್ರರೂ ಸ್ವಾಗತಿಸಿ, ಅಮರಾವತಿಯಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡು ಬಂದು, ಅವರಿಗಾಗಿ ನಿರ್ಮಿತವಾಗಿದ್ದ ಮಂದಿರದಲ್ಲಿ ಇಳಿಸಿದರು.

ಇವೊತ್ತು ಇಂದ್ರನರಮನೆಯಲ್ಲಿ ಅವರಿಗೆ ಅರ್ಚನೆ. ಇಬ್ಬರು ಇಂದ್ರರಲ್ಲಿ ಒಬ್ಬನು ಐರಾವತದ ಮೇಲೆ ಇನ್ನೊಬ್ಬನು ಉಚ್ಛೈಃಶ್ರವದ ಮೇಲೆ ಕುಳಿತು ಹೋಗಿ ಅವರನ್ನು ಅರಮನೆಗೆ ಕರೆತಂದಿದ್ದಾರೆ. ಅವರೆಲ್ಲರಿಗೂ ವಿರಜಾದೇವಿ, ಶಚೀದೇವಿಯರು ದೇವಪತ್ನಿಯರೊಡನೆ ವಿಧಿವಿಹಿತವಾದ ಉಪಚಾರಗಳನ್ನೆಲ್ಲ ಸಮರ್ಪಿಸುತ್ತಿದ್ದಾರೆ. ಸಪ್ತರ್ಷಿಗಳೂ ಪೂಜಾಪರಿಚರ್ಯೆಗಳಿಂದ ಸಂತೃಪ್ತರಾಗಿದ್ದಾರೆ.

ಅಮರಾವತಿಯು ಅಭೂತಪೂರ್ವವಾಗಿ ಶೃಂಗಾರವಾಗಿದೆ; ಅಲ್ಲಿನ ದೇವಜನಕ್ಕೆಲ್ಲ ಮರೆಯಾಗಿದ್ದ ಇಂದ್ರನು ಬಂದುದೊಂದು, ಎಂದೂ ಇಲ್ಲದ ಶಿಬಿಕೋತ್ಸವವು ನಡೆಯುವುದೊಂದು, ಹೀಗೆ ಎರಡು ಸಂತೋಷಗಳು. ಆಹೂತರಾಗಿ ಬಂದಿರುವವರಿಗೆಲ್ಲ ಆ ಸಂತೋಷವನ್ನು ಹಂಚಿಕೊಡಬೇಕೆಂದೋ ಎಂಬಂತೆ, ಅಮರಾವತಿಯವರು ಪ್ರಕಟವಾಗಿ ಆ ಸಂತೋಷವನ್ನು ಅಲಂಕಾರ ವೈಭವದಲ್ಲಿ ತೋರಿಸುತ್ತಿದ್ದಾರೆ. ಉತ್ಸವವು ಬರುವ ಬೀದಿಗಳಲ್ಲಿ ಇರಲಿ, ಅಕ್ಕಪಕ್ಕದ ಬೀದಿಗಳಲ್ಲೂ ಉತ್ಸವದ ವೈಭವವು ಕಣ್ಣಿಗೆ ಕಾಣಿಸುತ್ತಿದೆ. ಎಲ್ಲೆಲ್ಲೂ ಚಿಕ್ಕ ಚಿಕ್ಕ ಪತಾಕೆಗಳು, ತೋರಣಗಳು ಲೆಕ್ಕವಿಲ್ಲದೆ ಮೆರೆಯುತ್ತಿವೆ. ಒಂದೆಡೆ ಪೀತಾಂಬರದ ಪತಾಕೆಗಳ ತೋರಣಗಳಾದರೆ ಇನ್ನೊಂದೆಡೆ ಹಸಿರಿಂದ ಆದವು ; ಮತ್ತೊಂದೆಡೆ ಹೂವಿನಿಂದ ಆದವು ; ಮಗದೊಂದೆಡೆ ರತ್ನಗಳಿಂದ ಆದವು.

ಉತ್ಸವ ವೀಧಿಗಳಲ್ಲಿ ಈ ಕಡೆಯಿಂದ ಆ ಕಡೆಯವರೆಗೂ ನಂದನವನದಿಂದ ತಂದಿರುವ ಸುಂದರ ಪುಷ್ಪಗಳನ್ನು ಹರಡಿದ್ದಾರೆ. ಪ್ರತಿಯೊಂದು ಕಡೆಯಲ್ಲೂ ಸುಳಿಯುವ ಮಂದಮಾರುತನು ಸುಗಂಧಿಯಾಗಿಯೇ ಬರುವಂತೆ ಏರ್ಪಾಟು ಮಾಡಿದ್ದಾರೆ.

ವಿದ್ಯುನ್ಮಾಲಾವಿರಾಜಿತಳಾದ ಶ್ವೇತಮೇಘಗಳು ಆ ಉದ್ದದಿಂದ ಈ ಉದ್ದಕ್ಕೆ ಮೇಲ್ಕಟ್ಟು ಕಟ್ಟಿದಂತೆ ಬಿಸಿಲಿಲ್ಲದ ಬೆಳಕನ್ನು ಚೆಲ್ಲುತ್ತಾ ಮೆರೆಯುತ್ತಿವೆ.

ಈ ಕೊನೆಯಿಂದ ಆ ಕೊನೆಯವರೆಗೂ ಎಲ್ಲೆಲ್ಲೂ ಎಲ್ಲರೂ ನಗುನಗುತ್ತ ಉತ್ಸಾಹದಿಂದ ವಿರಾಜಿತವಾಗಿ ಬರುತ್ತಿದ್ದಾರೆ.

ಯಥಾಕಾಲದಲ್ಲಿ ಶಿಬಿಕೆಯು ಅರಮನೆಯ ಮುಂದೆ ಬಂತು. ಸುರಗುರುಗಳು ಶಿಬಿಕೆಯನ್ನು ಅರ್ಚಿಸಿದರು. ಶಿಬಿಕೆಯನ್ನು ಪುಷ್ಪವಸನರತ್ನಗಳಿಂದ ಇಂದ್ರವೈಭವಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಅಲಂಕಾರಕಾರ್ಯವನ್ನು ಶಚೀಂದ್ರರು ವಹಿಸಿ, ಇನ್ನಿಲ್ಲ ಎಂಬಂತೆ ಮಾಡಿದ್ದಾರೆ.

ಸಪ್ತರ್ಷಿಗಳು ಬಂದು ನಹುಷನನ್ನು ಹಸ್ತಲಾಘವ ಕೊಟ್ಟು ಕರೆದುಕೊಂಡು ಹೋಗಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದರು. ಆತನಿಗೆ ಅವರ ಹಸ್ತವನ್ನು ಮುಟ್ಟುತ್ತಲೇ ದೇಹಭಾವವು ಮರೆತುಹೋಗಿ ನಿರ್ವಿಕಲ್ಪ ಸಮಾಧಿಯು ಬರುತ್ತದೆ. ಆತನಿಗೆ ಅಂಗಾಂಗಗಳಲ್ಲೂ ರತ್ನಾಭರಣಗಳನ್ನು ಶೃಂಗರಿಸಿದ್ದಾರೆ. ಅರಸನ ಮುಖವೊಂದು ಬಿಟ್ಟು ಇನ್ನೇನೂ ಕಾಣುವಂತಿಲ್ಲ. ಅಲ್ಲಿ ಕುಳಿತಿರುವುದು ರತ್ನಾಭರಣ ರಂಜಿತವಾದ ಪುತ್ಥಳಿಯೋ, ಜೀವಂತವಾದ ವ್ಯಕ್ತಿಯೊ, ಅದೂ ಹೇಳುವಂತಿಲ್ಲ. ಬಹುಶಃ ಸಪ್ತರ್ಷಿಗಳ ಸಂಕಲ್ಪವಿರಬೇಕು, ಆತನ ದೇಹವನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗಿ ಕುಳ್ಳಿರಿಸಿದುದು.

ಪಲ್ಲಕ್ಕಿಯ ಬಲಮಗ್ಗುಲಲ್ಲಿ ಸ್ವಯಂ ಇಂದ್ರನು ವಾಯುವಿನೊಡನೆ ಪಲ್ಲಕ್ಕಿಯನ್ನು ಹಿಡಿದು ನಡೆದನು. ಪಲ್ಲಕ್ಕಿಯ ಎಡಮಗ್ಗುಲಲ್ಲಿ ಮಧ್ಯಮಲೋಕದ ಚಕ್ರವರ್ತಿಯಾದ ಯಯಾತಿಯು ಅಗ್ನಿಯೊಡನೆ ನಡೆದನು. ಸುರಗುರುವು ಪಲ್ಲಕ್ಕಿಯ ಮುಂದೆ ಕೊಂಬನ್ನು ಹಿಡಿದು ನಡೆದನು. ಪಲ್ಲಕ್ಕಿಯ ಹಿಂದೆ ಪುಟ್ಟರಥದಲ್ಲಿ ವಿರಜಾದೇವಿಯನ್ನು ಕುಳ್ಳಿರಿಸಿಕೊಂಡು ಶಚೀದೇವಿಯು ಸಾರಥಿಯಾಗಿ ಬಂದಳು. ಐರಾವತವೂ ಉಚ್ಛೈಶ್ರವವೂ ರಾಜಮರ್ಯಾದೆಗಳೊಡನೆ ಮುಂದೆ ನಡೆದುವು. ಚತುರಂಗ ಸೈನ್ಯವು ಹಿಂದೆಮುಂದೆ ನಡೆಯಿತು. ಗಂಧರ್ವಗಣವು ಸಂಗೀತವನ್ನು ಹಾಡಿತು. ಶುಕ್ರಾಚಾರ್ಯನು ಸ್ವಯಂ ನಿಂತು, ಋಷಿಗಣಗಳಿಂದ ಸಾಮವನ್ನು ಹಾಡಿಸುತ್ತ ವಿರಜಾದೇವಿಯ ರಥದ ಹಿಂದೆ ಬಂದನು.

ಅಂದಿನ ಶಿಬಿಕೋತ್ಸವದ ವೈಭವವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ಜ್ಞಾನಚಕ್ಷುಗಳಾದವರು ಮೇಲಿನಿಂದ ಪುಣ್ಯಾಹ ಶಕ್ತಿಗಳು, ತರಂಗ ತರಂಗವಾಗಿ ಇಳಿದು ಎಲ್ಲರಿಗೂ ಎಲ್ಲಕ್ಕೂ ನೆಲಕ್ಕೂ ಅಭಿಷೇಕಮಾಡಿ, ಪಾಪಶಕ್ತಿಗಳನ್ನು ಕಬಳಿಸುತ್ತಿರುವುದನ್ನು ನೋಡಿ, ‘ನಿಜ, ಸತ್ಪುರುಷರ ವೈಭವವು ಲೋಕಕಲ್ಯಾಣ ಕಾರಕವೆಂಬುದು ನಿಜ’ ಎಂದು ತಲೆದೂಗಿದರು. ಅಕಾರಣವಾಗಿ ಹರ್ಷವು ಎಲ್ಲೆಲ್ಲೂ ವರ್ಧಿಸುತ್ತಿದೆ. ದುಃಖವನ್ನು ಹೃದಯ ಮನಸ್ಸುಗಳಿಂದ ಸಮೂಲವಾಗಿ ಕಿತ್ತೆಸೆದಂತೆ ಆಗಿದೆ. ಲೋಕಲೋಕವು ಮಂಗಳಮಯವಾಗಿದೆ. ಮರಗಿಡಬಳ್ಳಿಗಳೂ ಹೊಸಮಳೆಯಲ್ಲಿ ನೆಂದಂತೆ ಮಂಗಳವಾದ ಮನೋಹರವಾದ ರೂಪವನ್ನು ಧರಿಸಿವೆ. ಹಕ್ಕಿಗಳು ಸಂತೋಷದಿಂದ ಹಾಡಿ ನರ್ತಿಸುತ್ತಿವೆ. ಮಾರುತವು ಮಂದವಾಗಿ ಬೀಸುತ್ತ ಆನಂದವನ್ನು ಹೊತ್ತು ತಂದು ಬೀರುತ್ತಿರುವಂತೆ ಮಂಗಲವಾಗಿದೆ. ಅಷ್ಟೇನು? ಮಾಂಗಲ್ಯದೇವಿಯು ಲೋಕಗಳನ್ನು ತನ್ನ ಮಂದಿರ ಮಾಡಿಕೊಂಡಂತಿದೆ. ಮನೆಗಳಲ್ಲಿ ಹಚ್ಚಿಟ್ಟ ದೀಪಗಳ, ಹೊತ್ತಿಟ್ಟ ಬೆಂಕಿಗಳೂ ಪ್ರಕಾಶಮಾನವಾಗಿ ಪ್ರಸನ್ನವಾಗಿವೆ.

ಶಿಬಿಕೋತ್ಸವವು ಹೀಗೆ ಲೋಕಮಂಗಳಕಾರಕವಾಗಿ ಆರು ದಿನ ನಡೆಯಿತು. ಒಂದೇ ಸಮನಾಗಿ ಚೊಕ್ಕವಾದ ರಾಜಭೋಜನವನ್ನು ಮಿತಿಯಿಲ್ಲದೆ ಭುಜಿಸಿದ ಹೊಟ್ಟೆಬಾಕನು ತೃಪ್ತಿಯಾದಂತೆ, ಲೋಕದಲ್ಲಿ ಎಲ್ಲೆಲ್ಲೂ ಆಗಿದೆ. ಹಗಲು ತೀವ್ರವಾದ ಬಿಸಿಲು, ರಾತ್ರಿ ಮುಸಲಧಾರೆಯ ಮಳೆಯಾದರೆ, ಭೂಮಿಯಲ್ಲಿ ಎಲ್ಲೆಲ್ಲೂ ಸಣ್ಣಗೆ ನೀರು ಅಲ್ಲಲ್ಲಿ ನಿಂತು, ಇನ್ನಲ್ಲಲ್ಲಿ ಓಡುತ್ತಾ ಮನೋಹರವಾಗಿರುವಂತೆ ಭೂಮಿಯು ತಾನು ಎಷ್ಟು ನೀರು ಕುಡಿಯಬಹುದೋ ಅಷ್ಟೂ ಕುಡಿದು ಹೆಚ್ಚು ನೀರನ್ನು ಪ್ರವಾಹಗಳಿಗೆ ಕೊಟ್ಟು ಇನ್ನೂ ಇರುವ ನೀರನ್ನೂ ಸೂರ್ಯಕಿರಣಗಳಿಗೆ ಬಾಷ್ಪವಾಗಿ ಕೊಡುವಂತೆ, ಲೋಕಲೋಕಗಳೂ ಮಾಂಗಲ್ಯವನ್ನು ಆಕಂಠಪೂರ್ತಿಯಾಗಿ ಅನುಭವಿಸಿ ಈಚೆಗೆ ಕಕ್ಕುತ್ತಿರುವಂತೆ ಎಲ್ಲೆಲ್ಲಿಯೂ ಮಾಂಗಲ್ಯವು ತಾಂಡವವಾಡುತ್ತಿದೆ. ಸ್ತ್ರೀಯರ ಮುಖದಲ್ಲಿ ಪುರುಷರ ಹೃದಯದಲ್ಲಿ ಹಕ್ಕಿಗಳ ಕಂಠದಲ್ಲಿ ಹಸುಗಳ ಕೆಚ್ಚಲಲ್ಲಿ ಮರಗಿಡಗಳ ಪರ್ಣರಾಜಿಯಲ್ಲಿ ಎಲ್ಲೆಲ್ಲೂ ಮಾಂಗಲ್ಯ. ಸೃಷ್ಟಿಗೆ ಸೃಷ್ಟಿಯೇ ಮಂಗಲಗಾನವನ್ನು ಮುದ್ದಾಗಿ ಹಾಡಬೇಕೆಂದು ಸಂಕಲ್ಪಪೂರ್ವವಾಗಿ ಹಾಡುವಂತಿದೆ. ಪೂರ್ಣವು ಪೂರ್ಣವಾಗಿ ಭೋಗನಾಶಗಳಿಂದ ಪೂರ್ಣವಾಗಿಯೇ ಇರುವಂತೆ ಎಲ್ಲವನ್ನೂ ತುಂಬಿ ತಾನೇ ತಾನಾಗಿದೆ.

ಏಳನೆಯ ದಿನ ಬಂತು. ಅರಸನು ತನ್ನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಲಕ್ಷ್ಮೀನಾರಾಯಣ ಪೂಜೆಯನ್ನು ಮಾಡಿಕೊಂಡು ಶಿಬಿಕಾಪೂಜೆಗಾಗಿ ಹೊರಡುತ್ತಿದ್ದ ಹಾಗೆಯೇ ಉಟ್ಟಿದ್ದ ಪಂಚೆಯು ತೊಡರಿ ಮುಗ್ಗರಿಸುವಂತಾಯಿತು. ರಾಜನು ಹಾಗೆಯೇ ನಿಂತು, ‘ಸರಿ. ಇದು ಏಳನೆಯ ದಿನ’ ಎಂದು ಮನಸ್ಸಿನಲ್ಲಿ ಎಂದುಕೊಂಡು ಮುಂದೆ ಹೊರಟನು. ಆತನಿಗೆ ಇದು ದುಶ್ಯಕುನ ಎನ್ನಿಸಲಿಲ್ಲ. ಮುಂದೆ ಆಗಬೇಕಾದುದನ್ನು ಸೂಚಿಸುವ ಶಕುನವಿದು ಎನ್ನಿಸಿತೇ ಹೊರತು, ಇದು ದುಷ್ಟವೆನಿಸಲಿಲ್ಲ. ಮನಸ್ಸು ತನ್ನ ಕಾಮಕ್ರೋಧಗಳನ್ನೂ ಬಿಟ್ಟು ಶುದ್ಧವಾಗಿ ಸರ್ವವನ್ನು ಶುಭವನ್ನಾಗಿಯೇ ಕಾಣುವ ಸಂಕಲ್ಪವನ್ನು ವಹಿಸಿಕೊಂಡಿರುವಾಗ ಬುದ್ಧಿಯು ತಾನು ಪ್ರತ್ಯೇಕವಾಗಿರುವೆನು ಎಂಬುದನ್ನು ಮರೆತು ಸೃಷ್ಟಿಯೆಲ್ಲವನ್ನೂ ಏಕಾಂತವಾಗಿ ನೋಡುತ್ತಿರುವ ಸುಸಮಯದಲ್ಲಿ ಸುಖದುಃಖ ಭೇದವೆಲ್ಲಿಂದ ಬರಬೇಕು?

ಅರಸನು ಶಿಬಿಕಾಪೂಜೆಯನ್ನು ಮಾಡಿಕೊಂಡು, ಸಪ್ತರ್ಷಿಗಳ ಮಂದಿರಕ್ಕೆ ಹೋಗಿ, ಅವರನ್ನು ಪೂಜಿಸಿಕೊಂಡು ಬಂದನು. ಅವರನ್ನು ‘ಶಿಬಿಕೆಯಲ್ಲಿರುವಾಗ ಶಿಥಿಲ ಸಮಾಧಿಯಾದರೆ ಏನಾಗುವುದು?” ಎಂದು ಕೇಳಬೇಕು ಎನ್ನಿಸಿತು. ‘ಏನಾದರೂ ಆಗಲಿ, ಅನುಭವಿಸುವುದಕ್ಕೆ ಸಿದ್ಧವಾಗಿರುವಾಗ ಕೇಳಬೇಕಾದುದೇನು? ಉಪಾಧಿಗ್ರಸ್ಥನಾಗಿರುವಾಗ ಸಂಭವಿಸುವುದೆಲ್ಲ ಶುಭ ಇಲ್ಲದಿದ್ದರೆ ಅಶುಭ, ಎರಡರಲ್ಲಿ ಒಂದು. ಅವು ಏನಿದ್ದರೂ ಉಪಾಧಿಗೆ ಸಂಬಂಧಪಟ್ಟವು. ಅನುಭವಿಸಿ ತೀರಬೇಕಾದವು. ಅದೃಷ್ಟವಶದಿಂದ ಅವಕ್ಕೆ ವಶನಾಗದಿರುವ ಸ್ಥಿತಿಯು ಲಭಿಸಿದ ಮೇಲೂ ಅವುಗಳಿಗೆ ಒದ್ದಾಡುವುದೇ?’ ಎಂದು ತನ್ನ ಸಂಕಲ್ಪವನ್ನು ತಾನೇ ಹಾಸ್ಯಮಾಡಿಕೊಳ್ಳುತ್ತ ಹಿಂತಿರುಗಿದನು. ಅವರು ಆತನ ಮನೋಭಾವವನ್ನು ಹಿಡಿದು ಮಾತನಾಡಲು ಸಾಧ್ಯವಿಲ್ಲದಂತಹ ಪೂರ್ಣಸ್ಥಿತಿಯಲ್ಲಿದ್ದರು.

ಅಲ್ಲಿಂದ ಬರುವ ವೇಳೆಗೆ ಶಚೀಂದ್ರರೂ ಅಗ್ನಿ ವಾಯುಗಳೂ ಗುರುದ್ವಯರೂ ಯಯಾತಿಯೂ ಬಂದು ಕಾದಿದ್ದಾರೆ. ಅರಸನು ವಿರಜಾಸಮೇತನಾಗಿ ಬಂದು ಆಚಾರ್ಯರುಗಳಿಗೆ ನಮಸ್ಕಾರಮಾಡಿ, ಇಂದ್ರ ಅಗ್ನಿವಾಯುಗಳಿಗೆ ಆಲಿಂಗನವನ್ನು ಕೊಟ್ಟು ನಗುನಗುತ್ತಾ ಎಲ್ಲರನ್ನೂ ಆಸನಗಳಲ್ಲಿ ಕುಳ್ಳಿರಿಸಿ ತಾನು ಕುಳಿತುಕೊಳ್ಳುತ್ತಾನೆ. ಸುರಗುರುವು ಅರಸನ ಮುಖವನ್ನು ನೋಡುತ್ತಾನೆ. ಅರಸನು ಮಂದಹಾಸದಿಂದ “ಹೌದು, ನಾವೂ ಶುಭವರ್ತಮಾನವನ್ನು ಕೇಳಲು ಕಾತರರಾಗಿದ್ದೇವೆ. ನಮ್ಮ ಅವಧಿಯು ತೀರಿ ಏಳು ದಿನವಾಯಿತು. ಆದರೂ ತಮ್ಮೆಲ್ಲರ ಸೌಜನ್ಯದಿಂದ ಇಂದ್ರಪದವಿಯಲ್ಲಿ ಇದ್ದೇವೆ. ನಿತ್ಯೇಂದ್ರನಿಗೆ ಇಂದ್ರತ್ವವನ್ನು ವಹಿಸಿಕೊಟ್ಟು ಶಚೀಸಮೇತವಾಗಿ ಆತನು ಸಿಂಹಾಸನದಲ್ಲಿ ಕುಳಿತು ವಿರಾಜಿಸುವುದನ್ನು ನೋಡಿ, ಕಾಣಿಕೆಯೊಪ್ಪಿಸಿ, ಆತನಪ್ಪಣೆ ಪಡೆದು, ನಾವಿಬ್ಬರೂ ತಪಸ್ಸಿಗೆ ಹೋಗುವುದು ಎಂದುಕೊಂಡಿದ್ದೇವೆ. ಆದರೆ ದೈವಚಿತ್ತ ಹೇಗಿದೆಯೋ? ಯಾರು ಬಲ್ಲರು?”

ಅದರರ್ಥವು ಯಾರಿಗೂ ಆಗಲಿಲ್ಲ. ಆದರೂ ಆಚಾರ್ಯರು ಪರಸ್ಪರ ಮುಖ ನೊಡಿಕೊಂಡರು. ಸುರಾಚಾರ್ಯನ ಅಭಿಮತದಿಂದ ಅಸುರಾಚಾರ್ಯನೆದ್ದು “ಏನೂ ವಿಘ್ನವಿದ್ದಂತಿಲ್ಲ. ಅಥವಾ ಹಠಾತ್ತಾಗಿ ಏನಾದರೂ ತಲೆದೋರಿದರೆ, ಅದನ್ನು ದೂರದಲ್ಲಿಡಲು ತಪಸ್ವಿಗಳು ತಮ್ಮ ಸನ್ನಿಧಾನದಲ್ಲಿದ್ದಾರೆ” ಎಂದು ಕೋರಿಕೆ ಮಾಡಿದನು. ಅರಸನು ನಕ್ಕು “ಮಂಗಳವು ತಾನೇತಾನಾಗಿದೆ. ಅಮಂಗಲವು ಸಂಭವಿಸಿದರೂ, ಈ ಮಂಗಳ ಸಮುದ್ರದಲ್ಲಿ ಅದು ನೀರಿನಲ್ಲಿ ಬಿದ್ದ ಉಪ್ಪಿನ ಬೊಂಬೆಯಾಗುವುದು ಅಲ್ಲವೇ?” ಎಂದು ಮತ್ತೆ ನಗುತ್ತಾನೆ. ಆ ನಗುವು ಆ ಮಾತನ್ನೇ ಮರೆಸಿ ಬೇರೆ ಪ್ರಸಂಗಕ್ಕೆ ಹಾದಿಮಾಡಿಕೊಡುತ್ತದೆ.

ಶಚಿಯು ಪತಿಯ ಮುಖವನ್ನು ನೋಡಿದಳು. ಆತನು ಅರ್ಥಮಾಡಿಕೊಂಡು ಸುರಗುರುವಿನ ಮುಖವನ್ನು ನೋಡಿದನು. ಆತನು ಪ್ರಕಟವಾಗಿ “ಶಚೀಂದ್ರರು ಸನ್ನಿಧಾನದಲ್ಲಿ ಏನೋ ವಿಜ್ಞಾಪಿಸಬೇಕೆಂದಿರುವಂತೆ ಕಾಣುತ್ತದೆ.” ಎಂದನು. ಅರಸನು ನಗುತ್ತಾ “ಅಂದೇ ಹೇಳಿದ್ದೆನಲ್ಲ ; ಅವರು ನಿತ್ಯರು, ನಾವು ನೈಮಿತ್ತಿಕರು. ಅಲ್ಲದೆ, ನಿತ್ಯಕ್ಕೆ ನೈಮಿತ್ತಿಕ ಬಾಧೆ ತಪ್ಪಿ ಆಗಲೇ ಒಂದು ವಾರವಾಯಿತು. ಅವರು ಮಾಡಬೇಕಾದುದು ವಿಜ್ಞಾಪನೆಯಲ್ಲ. ಆಜ್ಞೆ’ ಎಂದನು.

ಶಚಿಯು ಇಂದ್ರನನ್ನು ನೋಡಿ ಆತನ ಅಭಿಮತವನ್ನು ಪಡೆದು ಕೈಮುಗಿದು ಹೇಳಿದಳು : “ದೇವ ತಾವು ಸಪತ್ನೀಕರಾಗಿ ತಪೆÇೕಲೋಕಕ್ಕೆ ಹೋಗಿ ವಾನಪ್ರಸ್ಥವನ್ನು ಅವಲಂಬಿಸಬೇಕೆಂದಿದ್ದರೆ ಅದು ತಮ್ಮ ಸ್ವೇಚ್ಛೆ. ಹಾಗೆಯೇ ಪರೇಚ್ಛೆಯನ್ನೂ ಗೌರವಿಸಿ, ತಾವಿಬ್ಬರು ದಿವ್ಯದೇಹವನ್ನು ಧರಿಸಿಕೊಂಡು, ಇಲ್ಲಿ ನಾವಿರುವವರೆಗು ಇಂದ್ರಸಖರಾಗಿ ಇರಬೇಕೆಂದು ನಮ್ಮ ಪ್ರಾರ್ಥನೆ. ಅದನ್ನು ಸ್ತ್ರೀಮುಖದಿಂದ ತಮ್ಮ ಸನ್ನಿಧಾನದಲ್ಲಿಟ್ಟರೆ ತಪ್ಪದೆ ವರವಾಗಿ ತಮ್ಮ ಅನುಗ್ರಹವು ಲಭಿಸಿಯೇ ಲಭಿಸುವುದೆಂದು ಹೀಗೆ ಮಾಡಿದೆ. ವರವು ನಮಗೆ ಲಭಿಸಬೇಕು.”

“ಏನು ವಿರಜಾದೇವಿಯವರೆ, ನಾವು ಬೇಡವೆಂದರೂ ಭೋಗಲಕ್ಷ್ಮಿಯು ನಮ್ಮನ್ನು ಬಿಡುವಂತಿಲ್ಲ. ಓಹೋ ! ತಮಗು ಸಮ್ಮತವಾದಂತಿದೆ. ಹುಂ ಆಗಲಿ, ದೇವರಾಜನ ಆಜ್ಞೆಯು ಸರ್ವರಿಗೂ ಶಿರೋಧಾರ್ಯವಾಗಿರಲು, ನಾವೇಕೆ ಅದನ್ನು ಅಗೌರವಿಸಬೇಕು ?”

ಶಚೀಂದ್ರರು ಆ ವರವನ್ನು ಅಂಗೀಕರಿಸಿ ಅಗ್ನಿಯ ಮುಖವನ್ನು ನೋಡಿದರು. ಆತನು ಎದ್ದುಹೋಗಿ ಹರಿವಾಣಗಳನ್ನು ತೆಗೆಸಿಕೊಂಡು ಬಂದನು. ಐದು ಹರಿವಾಣಗಳ ತುಂಬಾ ರತ್ನಭೂಷಣಗಳು, ವಸನಗಳು, ಗಂಧಮಾಲ್ಯಗಳು, ಅವೆಲ್ಲವನ್ನು ಶಚೀಂದ್ರರು ವಿರಜಾ-ನಹುಷರಿಗೆ ಕಾಣಿಕೆ ಮಾಡಿದರು. ಆತನು ನಗುತ್ತಾ, `ನಾಳೆ ನಮ್ಮ ಕಾಣಿಕೆ ಇಂದು ನಿಮ್ಮ ಕಾಣಿಕೆ’ ಎಂದು ಒಪ್ಪಿಕೊಂಡು ಅದೆಲ್ಲವನ್ನೂ ಮಗನಿಗೆ ಕೊಟ್ಟು “ಯಯಾತಿ, ಇದಿಷ್ಟೂ ನಿನಗೆ ಆಶೀರ್ವಾದಗಳು ಎಚ್ಚರವಿರಲಿ. ಇದಿಷ್ಟೂ ಧರ್ಮಾಚರಣೆ ಫಲ. ಮನುಷ್ಯರಿಗೆ ದಾನಕ್ಕಿಂತ ಧರ್ಮವಿಲ್ಲ. ಅದರಿಂದ ಕೊಡು ಕೊಡು, ಕೊಟ್ಟು ಬದುಕು, ಇದೇ ನಿನಗೆ ನನ್ನ ಸಂದೇಶ” ಎಂದು ಪಾದಗಳಿಗೆ ತಲೆಯಿಟ್ಟಿರುವ ಮಗನಿಗೆ ಮನಃಪೂರ್ವಕವಾಗಿ ಆಶೀರ್ವಾದ ಮಾಡಿದನು. ವಿರಜಾದೇವಿಯಂತೂ ಮಗನಿಗೆ ತನ್ನ ಹೃದಯವನ್ನೇ ಆಶೀರ್ವಾದವಾಗಿ ಕೊಟ್ಟಳು.

ಅರಸನು ಕೊನೆಯದಾಗಿ ಅಗ್ನಿ ವಾಯುಗಳ ಕಡೆಗೆ ತಿರುಗಿದನು : “ನಮ್ಮ ಆಳ್ವಿಕೆಯಲ್ಲಿ ತಮಗೆ ಏನಾದರೂ ಕಷ್ಟವಾಗಿದ್ದರೆ, ಅದನ್ನು ದಯೆಯಿಂದ ಕ್ಷಮಿಸಬೇಕು” ಎಂದು ಕೈಮುಗಿದನು. ಅವರಿಬ್ಬರೂ ಅರಸನಿಗೆ ಕೈಮುಗಿದು. “ದೇವ, ಮನುಷ್ಯರು ಅನುಗ್ರಾಹ್ಯರು ಎಂಬ ಅಹಂಕಾರವು ನಮಗಿತ್ತು. ತಮ್ಮ ಸನ್ನಿಧಾನದಲ್ಲಿದ್ದು ನಮಗೆ ಈ ಅಹಂಕಾರವು ಕಳೆಯಿತು. ಧರ್ಮಾಚರಣದಿಂದ ಮಾನವರು ದೇವತೆಗಳಾದರೆ ಅವರು ಅತೀದೇವಮಾನವರಾಗುವರು ಎಂದು ತಿಳಿಯಿತು. ಇನ್ನು ನಾವೂ ಅವರೂ ಪರಸ್ಪರ ಸಂಭಾವನೆಯಿಂದ ಕ್ಷೇಮವಾಗಿರುವೆವು. ಹೀಗೆ ನಮ್ಮ ಕಣ್ಣಿಗೆ ಅಂಜನಹಾಕಿದ ತಮ್ಮನ್ನು ನಾವು ಗುರು ಗೌರವದಿಂದ ನೋಡಲು ಅಪ್ಪಣೆಯಾಗಬೇಕು. ಕೊನೆಯದಾಗಿ ಒಂದು ಮಾತು. ನಮಗಿಬ್ಬರಿಗೂ ವಿಶ್ವರೂಪಾಧಿಕಾರವುಂಟು. ಆಗ ವಿಶ್ವವೆಲ್ಲವೂ ನಾವು ಹೇಳಿದಂತೆ ಕೇಳಬೇಕು. ಇದು ನಮಗೆ ಗೊತ್ತಿತ್ತು. ಆದರೆ ಇಂದ್ರನು ಹತ್ಯಾಭೀತನಾಗಿ ಕಣ್ಮರೆಯಾದಾಗ ನಾವು ವಿಶ್ವರೂಪಧಾರಣಮಾಡಿ ಆತನನ್ನು ಉಳಿಸಬಹುದು ಎಂಬುದು ಮಾತ್ರ ನಮಗೆ ಮರೆತುಹೋಗಿತ್ತು. ಅದನ್ನು ಮತ್ತೆ ನೆನಪಿಗೆ ತಂದವರು ತಾವು. ಹೀಗೆ ನಮ್ಮ ನಮ್ಮ ಆತ್ಮಶಕ್ತಿಯ ಪರಿಚಯ ಮಾಡಿಕೊಟ್ಟು ಕಾಪಾಡಿದ ತಾವು ಗುರುಗಳಲ್ಲದೆ ಇನ್ನೇನು ?” ಎಂದು ಮುಂತಾಗಿ ನಾನಾವಿಧವಾಗಿ ಹೊಗಳಿ ಬೇಡ ಬೇಡವೆನ್ನುತ್ತಿದ್ದರೂ ಆತನಿಗೆ ನಮಸ್ಕಾರ ಮಾಡಿದರು.

ಅಂದು ಶಿಬಿಕೋತ್ಸವದ ಕೊನೆಯ ದಿನ. ಎಲ್ಲೂ ಇಲ್ಲದ ಜನ. ಸಪ್ತರ್ಷಿಗಳು ನಹುಷನನ್ನು ಕೈಹಿಡಿದು ಕರೆದುಕೊಂಡು ಬಂದು, ಪೂಜೆಯನ್ನು ಒಪ್ಪಿಸಿಕೊಂಡು ಅಲಂಕೃತವಾಗಿ ಸಿದ್ಧವಾಗಿದ್ದ ಶಿಬಿಕೆಯಲ್ಲಿ ಕೂರಿಸಿದರು. ಆತನು ಅಲ್ಲಿ ಸುರಕ್ಷಿತವಾಗಿ ಸುಸ್ಥಿತನಾಗಿ ಕುಳಿತ ಮೇಲೆ, ಪಲ್ಲಕ್ಕಿಯನ್ನು ಎತ್ತಿಕೊಂಡು ನಡೆದರು. ಅದುವರೆಗೆ, ಇತರರು ನೂರಾರು ಜನ ಸೇವಕರು ಪಲ್ಲಕ್ಕಿಯನ್ನು ಹೊರುತ್ತಿದ್ದು ಸಪ್ತರ್ಷಿಗಳು ನೆಪಕ್ಕೆ ಹೆಗಲು ಕೊಡುತ್ತಿದ್ದರು. ಇಂದು ಸಪ್ತರ್ಷಿಗಳು ಎಲ್ಲರನ್ನೂ ನಿವಾರಿಸಿ ತಾವೇ ಪಲ್ಲಕ್ಕಿಯನ್ನು ಎತ್ತಿಕೊಂಡರು. ರತ್ನಖಚಿತವಾದ ಪಲ್ಲಕ್ಕಿ ಆನೆಗಿಂತ ತೂಕವಾದುದು. ಆದರೂ ಶಿಬಿಕಾಧಿದೇವಿಯು ಹೊರುತ್ತಿರುವವರು ಸಪ್ತರ್ಷಿಗಳೆಂದು ತನ್ನ ಭಾರವನ್ನೆಲ್ಲಾ ತಾನೇ ವಹಿಸಿಕೊಂಡಳು. ಸಪ್ತರ್ಷಿಗಳು ಅಂದು ಜಗ್ಗುಹಾಕಿಕೊಂಡು ನಡೆಯುತ್ತಿದ್ದಾರೆ. ಎಲ್ಲರೂ ಆಶ್ಚರ್ಯ- ನೂರಾರು ಮಂದಿ ಹೊತ್ತಿದ್ದಾಗ ಮಂದಗಮನದಲ್ಲಿ ಹೋಗುತ್ತಿದ್ದ ಪಲ್ಲಕ್ಕಿಯು ಅದಕ್ಕೆ ರೆಕ್ಕೆಗಳು ಹುಟ್ಟಿದಂತೆ ಓಡುವಂತೆ, ತೀವ್ರಗಾಮಿನಿಯಾಗಿದೆ.

ಅರ್ಧದೂರ ಬಂದಿದೆ. ಎಲ್ಲರೂ ಶಿಬಿಕೆಯಲ್ಲಿರುವ ಅರಸನನ್ನು ನೋಡಿ “ಈ ಮುದ್ರಿಕೆ ಇತರರಿಗೆ ಸಾಧ್ಯವೇ?” ಎಂದು ಆಶ್ಚರ್ಯಪಡುತ್ತಿದ್ದಾರೆ. ಇಂದ್ರನೂ “ಇಂತಹ ಭಾಗ್ಯವು ಇನ್ನು ಯಾರಿಗುಂಟು?” ಎಂದು ವಿಸ್ಮಿತನಾಗಿದ್ದಾನೆ. ಹೀಗೆ ಎಲ್ಲರೂ ವಿಸ್ಮಯಾವಿಷ್ಟರಾಗಿರುವಾಗ, ಅರಸನಿಗೆ ಸಮಾಧಿಯು ಶಿಥಿಲವಾಯಿತು. ಸಪ್ತರ್ಷಿಗಳು ‘ಓಂ’ ಎಂದು ಸಿಂಹನಾದ ಮಾಡಿ, ತಾವು ಹೊತ್ತಿದ್ದ ಪಲ್ಲಕ್ಕಿಯನ್ನು ಅತ್ತ ಎಸೆದರು. ಪಲ್ಲಕ್ಕಿಯಲ್ಲಿದ್ದ ಅರಸನು ಮೂರು ಉರುಳು ಉರುಳಿ ಭೂಗತನಾದನು.

ಎಲ್ಲರೂ ಹಾಹಾ ಎಂದು ಓಡಿಬಂದರು. ಇಂದ್ರ, ವಾಯು, ಯಯಾತಿ, ಅಗ್ನಿ, ಸುರಗುರು, ಶುಕ್ರಾಚಾರ್ಯ, ಶಚಿ, ವಿರಜ, ಎಲ್ಲರೂ ಓಡಿ ಬಂದು ಅರಸನನ್ನು ಸುತ್ತಿಕೊಂಡರು. ಸಪ್ತರ್ಷಿಗಳು ನಿಶ್ಯಂಕರಾಗಿ ಮೌನವಾಗಿ ನಿಂತಿದ್ದಾರೆ. ಇಂದ್ರಾದಿಗಳು “ಏನಾಯಿತು” ಎಂದು ಅವರನ್ನು ಕೇಳಿದರು. ಅವರು ನಹುಷನನ್ನು ತೋರಿಸಿದರು. ಅರಸನು ಆ ವೇಳೆಗೆ ಆಕಸ್ಮಿಕವಾಗಿ ಬಿದ್ದ ಘಾತದ ಪ್ರತಿಕ್ರಿಯೆಯನ್ನು ಸಂರೋಧಮಾಡಿಕೊಂಡು ಎದ್ದಿದ್ದಾನೆ. “ಈ ಅಪಘಾತದ ಪ್ರತಿಯಾಗಿ ಇನ್ನೇನು ಆಗಿಹೋಗುವುದೋ !” ಎಂದು ಎಲ್ಲರೂ ಹೆದರಿದ್ದಾರೆ. ಅರಸನು ಮೈ ಕೈ ಒರೆಸಿಕೊಳ್ಳುತ್ತಾ “ಸಪ್ತಋಷಿಗಳು ಮಾಡಿದುದು ಸರಿ” ಎಂದು ಅವರಿಗೆ ಕೈಮುಗಿಯುತ್ತಾನೆ.

ಎಲ್ಲರೂ ಇನ್ನೂ ಅಷ್ಟು ವಿಸ್ಮಿತರಾದರು. ಅರಸನು ಅವರೆಲ್ಲರನ್ನೂ ಸಮಾಧಾನಮಾಡುತ್ತ “ಶಿಬಿಕಾರೋಹಣ ಕಾಲದಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಇರಬೇಕು ಎಂದು ನನಗೆ ಅಪ್ಪಣೆಯಾಗಿತ್ತು. ಏಳು ದಿನದ ಶಿಬಿಕೋತ್ಸವವು ಪರಿಪೂರ್ಣವಾಗಕೂಡದೆಂದು ನಿಯತಿದೇವಿಯು ವಿಧಿಸಿದ್ದಳು. ಅದರಂತೆ ಈ ದಿನ ಶಿಬಿಕೋತ್ಸವವು ಪೂರ್ಣವಾಗುವುದಕ್ಕಿಂತ ಮುಂಚೆ, ನನಗೆ ಸಮಾಧಿಯು ಶಿಥಿಲವಾಯಿತು. ಶಿಥಿಲ ಸಮಾಧಿಯಾದವನು ಸಪ್ತಋಷಿಗಳು ಹೊತ್ತಿರುವ ಶಿಬಿಕೆಯಲ್ಲಿ ಕುಳಿತಿರುವಂತಿಲ್ಲ. ಅದರಿಂದ ಅವರು ಶಿಬಿಕೆಯನ್ನೇ ಎತ್ತಿ ಎಸೆದರು. ಶಿಬಿಕೆಗೇನಾಗಿದೆಯೋ ನೋಡಿ” ಎಂದನು. ಶಿಬಿಕೆಯು ಕುಂದಣದ ಕೆಲಸದಿಂದ ಆದುದು, ಅದಕ್ಕೆ ಏನೂ ಆಗಿರಲಿಲ್ಲ.

ಅರಸನು ನೇರವಾಗಿ ಸಪ್ತರ್ಷಿಗಳ ಬಳಿಗೆ ಹೋದನು. ನಮಸ್ಕಾರಮಾಡಿ ಕೈಮುಗಿದುಕೊಂಡು ಹೇಳಿದನು : “ಆದ ದ್ರೋಹವನ್ನು ಕ್ಷಮಿಸಬೇಕು. ಶಿಥಿಲ ಸಮಾಧಿಯಾದ ಅಪರಾಧಕ್ಕೆ ಶಿಕ್ಷೆಯೇನೋ ವಿಧಿಸೋಣವಾಗಲಿ. ಭೂತಪನವಷ್ಟೇಯೋ? ಇನ್ನೂ ಏನಾದರೂ ಉಂಟೋ?”

ಸಪ್ತರ್ಷಿಗಳು ಮುಸಿಮುಸಿ ನಗುತ್ತ ‘ನಾವು ಅಪರಾಧವನ್ನು ತೋರಿಸಿದೆವು. ದಂಡಿಸುವ ಕೆಲಸ ನಿನ್ನದು. ನಿನ್ನ ದಂಡವು ಸರಿಯಿಲ್ಲದೆ ಹೋದರೆ ಆಮೇಲೆ ನಾವು’ ಎಂದರು.

ಅರಸನು ಸರಿಯೆಂದು ವಿಚಾರಗ್ರಸ್ಥನಾಗಿ ಅಲ್ಲಿಯೇ ನಿಂತನು. ಒಂದು ಗಳಿಗೆ ಯೋಚಿಸಿ “ನಹುಷನ ಅಪರಾಧವು ಗುರುತರವಾದುದು. ಈ ಅಪರಾಧಕ್ಕೆ ಶಿಕ್ಷೆಯು ಹೀಗಿರಬೇಕು. ಚೇತನವನ್ನು ಜಡವು ಅಲ್ಲಾಡಿಸಿ ಹೊರಕ್ಕೆ ಎಳೆಯಿತು. ಅದರಿಂದ ಜಡದಲ್ಲಿ ಜಡವಾದ ಅವಸ್ಥೆಯು ಈತನಿಗೆ ಪ್ರಾಪ್ತವಾಗಬೇಕು. ಆದರೆ ಇದು ವಿಧಿನಿಯತವಾಗಿ ಬಂದುದರಿಂದ ಖನಿಜ ಉದ್ಭಿಜ್ಜಗಳಲ್ಲದ ತಿರ್ಯಗ್ಯೋನಿಯಲ್ಲಿ ಹುಟ್ಟಬೇಕು. ಈತನು ಇಂದ್ರನಾಗಿದ್ದಾಗ ಈ ಕಾರ್ಯವು ನಡೆಯಿತಾಗಿ ಈತನು ಎಲ್ಲದಕ್ಕಿಂತ ಮಿಗಿಲಾದ ಅಜಗರವಾಗಿ ಹುಟ್ಟಬೇಕು. ಶಿಕ್ಷೆಯು ಸರಿಯಾಗಿದೆ ತಾನೇ?”

ಎಲ್ಲರೂ ಆತನ ವಿಲಕ್ಷಣ ಸ್ಥೈರ್ಯವನ್ನು ನೋಡಿ ಆಶ್ಚರ್ಯಪಡುತ್ತಾರೆ. “ಇದೇನಿದು ? ತನ್ನ ಅಪರಾಧಕ್ಕೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುವಾಗ ಈತನು ಇನ್ನೊಬ್ಬ ಅಪರಾಧಿಯನ್ನು ಪರಿಗಣಿಸುವಷ್ಟು ನಿರಂಜನನಾಗಿ ಸ್ಥಿರನಾಗಿರುವನಲ್ಲ!” ಎಂದು ಹೆದರಿದ್ದಾರೆ.

ಇಂದ್ರನು ಮುಂದೆ ಬಂದು ಕಣ್ಣೀರು ಒರೆಸಿಕೊಳ್ಳುತ್ತಾ “ಶಿಕ್ಷೆಯು ಸರಿಯಾಗಿದೆ” ಎಂದನು. ಸಪ್ತಋಷಿಗಳಲ್ಲಿ ಒಬ್ಬ ಭಗವಾನರು ಬಂದು ‘ಅಪರಾಧಿಯು ಬ್ರಹ್ಮಜ್ಞನು ಇಂದ್ರನು. ಅದರಿಂದ ಆತನಿಗೆ ಅಜಗರತ್ವ ಪ್ರಾಪ್ತವಾದರೂ ಇಂದ್ರಾನಂದವೂ ಜಾತಿಸ್ಮರತ್ವವೂ ಇರತಕ್ಕದ್ದು’ ಎಂದು ಕೈಯೆತ್ತಿ ಹೇಳಿದರು.

ಶಚಿಯು ಮುಂದೆ ಬಂದು ಅವರಿಗೆ ನಮಸ್ಕರಿಸಿ ಸೆರಗೊಡ್ಡಿ ಬೇಡಿದಳು: “ಈತನು ಸಪತ್ನೀಕನಾಗಿ ತಪೋಲೋಕಕ್ಕೆ ವಾನಪ್ರಸ್ಥನಾಗಿ ಹೋಗಿ ತಪಸ್ಸು ಮಾಡಬೇಕೆಂದಿದ್ದನು. ಇಲ್ಲಿ ವಿರಜಾದೇವಿಯೊಡನೆ ಇಂದ್ರಸಖನಾಗಿ ಕೊನೆಯವರೆಗೂ ಇರುವುದಾಗಿ ನಮಗೆ ವರಕೊಟ್ಟಿದ್ದನು....” ಮುಂದಕ್ಕೆ ಆಕೆಯ ಬಾಯಲ್ಲಿ ಮಾತು ಹೊರಡಲಿಲ್ಲ. ದುಃಖದಿಂದ ಗಂಟಲು ಕಟ್ಟಿಹೋಯಿತು.

ಭಗವಾನರು ಮತ್ತೆ ಹೇಳಿದರು : “ಆತನು ಇನ್ನೂ ಇಂದ್ರ. ಆತನು ಸರಿಯಾಗಿ ಶಿಕ್ಷೆ ವಿಧಿಸಿದನೋ ಇಲ್ಲವೋ ನೋಡುವುದಷ್ಟೇ ನಮ್ಮ ಕೆಲಸ. ಬೇಕಾದರೆ ಆತನೇ ಅಥವಾ ನಾಳೆ ಇಂದ್ರನಾಗುವ ನಿನ್ನ ಪತಿ ಯಾರು ಬೇಕಾದರೂ, ಈ ಶಿಕ್ಷೆಯನ್ನು ವಿಲೋಪ ಮಾಡಬಹುದು. ಆತನಿಗೂ ಸ್ವರ್ಗವಾಸವೂ ತಪೋಲೋಕವಾಸವೂ ತಪ್ಪಿದ್ದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತನು ಬ್ರಹ್ಮಜ್ಞನು. ನಿರ್ವಿಕಲ್ಪಸಮಾಧಿಗೆ ಹೋಗಬಲ್ಲನು. ಆತನು ಎಲ್ಲಿದ್ದರೆ ಅದು ಬ್ರಹ್ಮಲೋಕಕ್ಕೆ ಮಿಗಿಲಾಗುವುದು” ಎಂದು ಎಲ್ಲರನ್ನೂ ಆಶೀರ್ವಾದ ಮಾಡಿ ಸಪ್ತಋಷಿಗಳು ಅಂತರ್ಧಾನರಾದರು.

ಇಂದ್ರನು ಮುಂದೆ ಬಂದು ನಹುಷನ ಕೈಹಿಡಿದುಕೊಂಡು, “ದೇವಾ ಅಪ್ಪಣೆಯಾದರೆ ನಾನು ಈ ಶಿಕ್ಷೆಯನ್ನು ವಿಲೋಪಮಾಡುವೆನು” ಎಂದನು. ನಹುಷನು ನಗುತ್ತಾ ಆತನ ಕೈಹಿಡಿದು “ಅಪರಾಧಿಯು ನಿನ್ನ ಬಳಿ ಬಂದು ಕೇಳಿಕೊಂಡಾಗ ಆ ಕೆಲಸ. ಅದುವರೆಗೆ ಏನವಸರ ?” ಎಂದು ವಿರಜಾದೇವಿಯ ಕಡೆ ತಿರುಗಿದನು. ಆಕೆ ವಿಸ್ಮಯ ಭೀತಿಗಳಿಂದ ನಿಶ್ಚೇತನಳಾದಂತೆ ಇದ್ದಾಳೆ. ಮಗನ ಆಸರೆಯಿಲ್ಲದಿದ್ದರೆ ಆಕೆಯು ದೇಹಭಾರವನ್ನು ಹೊತ್ತು ನಿಂತೂ ಇರಲಾರಳು. ನಹುಷನು ನೇರವಾಗಿ ಹೋಗಿ ಮಗನ ಭಾರವನ್ನು ತಾನು ವಹಿಸಿಕೊಂಡು ಆಕೆಯನ್ನು ತನಗೆ ಒರಗಿಸಿಕೊಂಡು ಹೇಳಿದನು : “ಈ ಜನ್ಮಾಂತರ ಲಾಭವು ನಿನಗೇನೂ ಇಲ್ಲ ವಿರಜಾ : ನನಗೆ ಮಾತ್ರ. ಯಯಾತಿ, ಈ ಜನ್ಮವು ಭೂಲೋಕದಲ್ಲಿ ಹಿಮಾಲಯ ಪ್ರಾಂತದ ದೇವಭೂಮಿಯಲ್ಲಾಗುವುದು. ಆಗ ನೀನು ಅಭಿಮಾನ ವಹಿಸಿ ಉಪಚಾರಮಾಡಲು ಯತ್ನಿಸಬೇಡ. ಅಲ್ಲಿ ಅಜಗರವಾದಾಗ, ನನಗೆ ಕಷ್ಟವಾಗುವುದು ಎಂದುಕೊಳ್ಳಬೇಡ. ದೇಹವು ತಾನಲ್ಲ ಎಂದು ಬಲ್ಲವನಿಗೆ ಉಪಾಧಿಯ ಕಷ್ಟಗಳಿರುವುದಿಲ್ಲ. ಇನ್ನು ಯಾವಾಗ ಅಲ್ಲಿಂದ ಮುಕ್ತಿ ಎನ್ನುವಿಯೇನೋ ? ಹುಟ್ಟಿದ್ದಕ್ಕೆಲ್ಲ ಕೊನೆಯುಂಟು. ಇಲ್ಲಿ ಸ್ವರ್ಗದಲ್ಲಿ ಪಡುವ ಭೋಗಕ್ಕೆ ಕೊನೆ ಬೇಡ ; ಅಜಗರಜನ್ಮದಲ್ಲಿ ಪಡುವ ಕಷ್ಟಕ್ಕೆ ಕೊನೆಯಿರಲಿ ಎನ್ನುವುದು ಸರಿಯಾದ ಮಾತಲ್ಲ. ಆ ಜನ್ಮವೆತ್ತಿದಾಗ ಆ ಜನ್ಮದ ಆಯುಸ್ಸು ಗೊತ್ತಾಗುವುದು. ನಮ್ಮ ನಿಜರೂಪವು ಇನ್ನು ಮುಂದೆ ತಪೋಲೋಕದಲ್ಲಿ ವಾನಪ್ರಸ್ಥರಾಗಿ, ಇನ್ನೊಂದು ಇಲ್ಲಿ ಇಂದ್ರಸಖರಾದ ದಂಪತಿಗಳಾಗಿ ಮತ್ತೊಂದು. ಅದನ್ನು ನಾನು ಮಾತ್ರ ಪಡೆಯುವೆನು. ಭೂಲೋಕದಲ್ಲಿ ಅಜಗರವಾಗಿ- ಇನ್ನು ಇದನ್ನು ಇಲ್ಲಿಗೇ ಬಿಡೋಣ. ನಾಳೆಯ ಇಂದ್ರಾಭಿಷೇಕದಲ್ಲಿ ಆನಂದಪಡಲು ಸಿದ್ಧರಾಗೋಣ.”

ಎಲ್ಲರಿಗೂ ಹೃದಯವು ಚಿಂತಾಭರವೂ ಆಗಿತ್ತು ; ಸೌಖ್ಯಪೂರ್ಣವೂ ಆಗಿತ್ತು. ಯಾರೂ ಮಾತನಾಡದೆ ಮೌನದಿಂದ ಇಂದ್ರನ ಆಣತಿಯನ್ನು ಸ್ವೀಕರಿಸಿದರು.

ಉಪಸಂಹಾರ

ಸಂಪಾದಿಸಿ

ಇದರಂತೆಯೇ ಸಂಹಿತೆ, ಇತಿಹಾಸ, ಪುರಾಣಗಳಲ್ಲಿ ಬಂದಿರುವ ಕಥೆಗಳು ಇನ್ನೂ ಎಷ್ಟೋ ಇವೆ. ಅವುಗಳನ್ನು ಅಧ್ಯಯನ ಮಾಡಿ ಉಪಬೃಂಹಣ ಮಾಡಿ, ವಿಸ್ತಾರವಾಗಿ, ಸಮಂಜಸವಾಗಿ ಹೇಳುವ ಪುಣ್ಯವಂತರ ಪಡೆಯು ಹೆಚ್ಚಾಗಲಿ. ಭಾರತೀಯ ಪೂರ್ವವೈಭವವು ಮತ್ತೆ ಗೋಚರಿಸಲಿ.

* * * *

BLANK