ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ ಶಾಸ್ತ್ರದ ಸದಗರು ನೀವು ಕೇಳಿರೋ. ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ
ಅರಿದು ಮರೆಯದಿರಿ
ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ
ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ ಮರೆಯದೆ ವಿಚಾರಿಸಿ ನೋಡಿ
ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ. ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ. ಬೇರ್ಪಡಿಸಿ ನುಡಿಯಲುಂಟೆ ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ. ಅದೆಂತೆಂದಡೆ; ಮೆಟ್ಟುವ ರಕ್ಷೆ
ಮುಟ್ಟುವ ಯೋನಿ
ಅಶನ
ಶಯನ
ಸಂಯೋಗ
ಮಜ್ಜನ
ಭೋಜನ ಇಂತಿವನು ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ ನಾನು ನಮೋ ನಮೋ ಎಂಬೆನು. ಅದೆಂತೆಂದಡೆ; ಅರ್ಥಪ್ರಾಣಾಭಿಮಾನಂ ಚ ಗುgõ್ಞ ಲಿಂಗೇ ಚ ಜಂಗಮೇ± ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ
ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ
ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ
ಅದೇನು ಕಾರಣವೆಂದಡೆ; ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ ಇದನರಿದು ಬೇರೆ ಮಾಡಿ ನುಡಿಯಲಾಗದು. ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ ಭಕ್ತದೇಹಿಕ ದೇವನಾದ ಕಾರಣ. ಅದೆಂತೆಂದಡೆ; ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ ಇಂತೆಂಬ ಪುರಾಣವಾಕ್ಯವನರಿದು ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ ಇನ್ನೆಲ್ಲಿಯ ಸಂಕಲ್ಪವೊ
ಇನ್ನೆಲ್ಲಿಯ ಸೂತಕವೋ
ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ.