ಸೂರ್ಯನ ಬೆಳಗಿಂಗೆ ಕೊಳ್ಳಿಯ ಬೆಳಗ ಹಿಡಿಯಲುಂಟೇ ಮರುಳೆ? ತನ್ನ ಮುಖವ ತಾ ಬಲ್ಲವಂಗೆ ಕನ್ನಡಿಯ ಹಿಡಿದು ನೋಡಲುಂಟೇ ಹೇಳಾ. ತನ್ನ ಸುಳುಹಿನ ಸೂಕ್ಷ ್ಮವ ತಾನರಿದ ಸ್ವಯಜ್ಞಾನಿಗೆ ಇನ್ನಾವ ಆಗಮಬೋಧೆಯೇಕೆ ಹೇಳ? ಆಗಮಶಿಕ್ಷೆಯೆಂಬುದು
ಲೋಗರಿಗಲ್ಲದೆ
ಆದಿಯಲ್ಲಿ ಶಿವಬೀಜವಾದ ಮಹಾಮಹಿಮರಿಗುಂಟೇ? ಸ್ವಾನುಭಾವಜ್ಞಾನ ಎಲ್ಲರಿಗೂ ಇಲ್ಲವಲ್ಲ. ಇಲ್ಲದಿರ್ದಡೆ ಮಾಣಲಿ
ಅದಕ್ಕೇನು ಕೊರತೆಯಿಲ್ಲ. ಮತಾಂತರ ಶಾಸ್ತ್ರಾಗಮಂಗಳ ಮುಟ್ಟಲಾಗದು. ಅದೇನು ಕಾರಣವೆಂದಡೆ: ಅವರಂಗದ ಮೇಲೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವಿಲ್ಲದ ಕಾರಣ. ಆ ಆಗಮದಲ್ಲಿ ಜಂಗಮಪ್ರಸಾದವ ಲಿಂಗಕ್ಕರ್ಪಿಸಿ
ಕೊಟ್ಟು ಕೊಳಬೇಕೆಂಬ ಪ್ರಮಾಣವ ಹೇಳವಾಗಿ. ಛಿಃ
ಅವೆಲ್ಲಿಯ ಆಗಮ
ಅವು ಅಂಗಲಿಂಗ ಸಂಬಂಧಿಗಳಿಗೆ ಮತವೇ? ಅಲ್ಲ. ಸದ್ಗುರುವಿನ ವಚನ ಪ್ರಮಾಣೇ? ಅಲ್ಲ. ಗುರುವಚನ ಪ್ರಮಾಣವಲ್ಲದ ಮಾರ್ಗವ ಹಿಡಿದು ಆಚರಿಸುವರೆಲ್ಲರು ಗುರುದ್ರೋಹಿಗಳು. ಎಲೆ ಶಿವನೇ
ನೀ ಸಾಕ್ಷಿಯಾಗಿ ಅಂಗಲಿಂಗ ಸಂಬಂಧಿಗಳಿಗೆ ಪರಮ ವೀರಶೈವಾಗಮವೇ ಪ್ರಮಾಣು. ಪುರಾತನರ ಮಹಾವಾಕ್ಯವೇ ಪ್ರಮಾಣು. ಉಳಿದುವೆಲ್ಲ ಹುಸಿ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.