Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ ! ಅದು ಹೇಗೆಂದೊಡೆ : ಜಂಗಮವ ಕಾಣುತ್ತ ಸದ್‍ಭಕ್ತನು ಕುಳಿತಾಸನವ ಬಿಟ್ಟು ಇದಿರೆದ್ದು ನಡೆವುದೇ ಒಂದನೆಯ ಸೋಪಾನ. ಮನಕರಗಿ ತನು ಉಬ್ಬಿ ಕಂಗಳಲ್ಲಿ ಪರಿಣಾಮಜಲವುಕ್ಕಿ ಅವರ ಚರಣಕಮಲದ ಮೇಲೆ ಸುರಿವಂತೆ ಸಾಷ್ಟಾಂಗದಿಂದೆ ನಮಸ್ಕರಿಸುವುದೇ ಎರಡನೆಯ ಸೋಪಾನ. ಆ ಜಂಗಮವ ತನ್ನ ಮಠಕ್ಕೆ ಬಿಜಯಂಗೈಸಿ ಉನ್ನತಾಸನದ ಗದ್ದುಗೆಯ ಮೇಲೆ ಕುಳ್ಳಿರಿಸಿ ಪಾದಪ್ರಕ್ಷಾಲನವ ಮಾಡುವುದೇ ಮೂರನೆಯ ಸೋಪಾನ. ಆ ಜಂಗಮದೇವರ ಅಷ್ಟವಿಧಾರ್ಚನೆ - ಷೋಡಶೋಪಚಾರಗಳಿಂದರ್ಚಿಸಿ
ಪಾದಿತೀರ್ಥವ ಕೊಂಬುವುದೇ ನಾಲ್ಕನೆಯ ಸೋಪಾನ. ಆ ಜಂಗಮಕ್ಕೆ ಮೃಷ್ಟಾನ್ನಪಾನಂಗಳಿಂದೆ ತೃಪ್ತಿಪಡಿಸುವುದೇ ಐದನೆಯ ಸೋಪಾನ. ಆ ಜಂಗಮದ ಒಕ್ಕುಮಿಕ್ಕಪ್ರಸಾದವ ಕೊಂಬುವುದೇ ಆರನೆಯ ಸೋಪಾನ. ಆ ಜಂಗಮದಲ್ಲಿ ಅನುಭಾವವ ಬೆಸಗೊಂಬುವುದೇ ಏಳನೆಯ ಸೋಪಾನ. ಇಂತೀ ಸಪ್ತಸೋಪಾನಂಗಳ ಬಲ್ಲ ಸದ್ಭಕ್ತಂಗೆ ಕೈಲಾಸ ಕರತಾಳಮಳಕವಲ್ಲದೆ ತನುವ ಸವೆಸದೆ
ಮನವ ದಂಡಿಸದೆ
ಧನವ ಸಮರ್ಪಿಸದೆ
ಮಿಥ್ಯಾಸಂಸಾರದಲ್ಲಿ ಸಿಲ್ಕಿ ಹೊತ್ತುಗಳೆದು ಹೊಡೆದಾಡಿ ಸತ್ತು ಹೋಗುವ ವ್ಯರ್ಥಜೀವಿಗಳಿಗೆ ಇನ್ನೆತ್ತಣ ಕೈಲಾಸವಯ್ಯ ಅಖಂಡೇಶ್ವರಾ ?