ಶ್ರವಣ ಮನಕಾನಂದವೀವುದು |

ಭವಜನಿತ ದುಃಖಗಳ ಕಳೆವುದು |

ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ||

ಭುವನ ಪಾವನನೆನಿಪ ಲಕ್ಷ್ಮೀ ದೇವೀ |

ಧವನ ಮಂಗಳ ಕಥೆಯ ಪರಮೋ |

ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||


ಮಳೆಯ ನೀರೋಣಿಯೊಳು ಪರಿಯಲು |

ಬಳಸರೂರೊಳಗಿದ್ದ ಜನರಾ |

ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||

ಕಲುಷ ವಚನಗಳಾದರಿವು ಬಾಂ |

ಬೊಳೆಯ ಪೆತ್ತನ ಪಾದಮಹಿಮಾ |

ಜಲಧಿ ಪುಕ್ಕುದರಿಂದೆ ಮಾಣ್ದಪರೇ ಮಹೀಸುರರು || ೨ ||


ಶ್ರುತಿತತಿಗಳಭಿಮಾನಿ ಲಕುಮೀ |

ಸ್ತುತಿಗಳಿಗೆ ಗೋಚರಿಸದಪ್ರತಿ |

ಹತ ಮಹೈಶ್ವರ್ಯಾದ್ಯಖಿಳಸದ್ಗುಣಗಣಾಂಬೋಧಿ ||

ಪ್ರತಿದಿವಸ ತನ್ನಂಘ್ರಿ ಸೇವಾ |

ರತ ಮಹಾತ್ಮರು ಮಾಡಿತಿಹ ಸಂ

ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||


ಮನವಚನಕತಿದೂರ ನೆನೆವರ |

ನನುಸರಿಸಿ ತಿರುಗುವನು ಜಾಹ್ನವಿ |

ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||

ಘನ ಮಹಿಮ ಗಾಂಗೇಯನುತ ಗಾ |

ಯನವ ಕೇಳುತ ಗಗನ ಚರ ವಾಹನ

ದಿವೌಕಸರೊಡನೆ ಚರಿಸುವ ಮನ ಮನೆಗಳಲ್ಲಿ || ೪ ||


ಮಲಗಿ ಪರಮಾದರದಿ ಪಾಡಲು |

ಕುಳಿತು ಕೇಳುವ ಕುಳಿತು ಪಾಡಲು |

ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||

ಸುಲಭನೋ ಹರಿ ತನ್ನವರನರೆ |

ಘಳಿಗೆ ಬಿಟ್ಟಗಲನು ರಮಾಧವ |

ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||


ಮನದೊಳಗೆ ತಾನಿದ್ದು ಮನವೆಂ |

ದೆನಿಸಿಕೊಂಬನು ಮನದ ವೃತ್ತಿಗ |

ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ ||

ಮನವನಿತ್ತರೆ ತನ್ನನೀವನು |

ತನುವ ದಂಡಿಸಿ ದಿನದಿನದಿ ಸಾ |

ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||


ಪರಮ ಸತ್ಪುರುಷಾರ್ಥ ರೂಪನು |

ಹರಿಯೆ ಲೋಕಕೆ ಎಂದು ಪರಮಾ |

ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ ||

ಮರೆದು ಧರ್ಮಾರ್ಥಗಳ ಕಾಮಿಸು |

ವರಿಗೆ ನಗುತತಿ ಶೀಘ್ರದಿಂದಲಿ |

ಸುರಪತನಯ ಸುಯೋಧನಿರಿಗಿತ್ತಂತೆ ಕೊಡುತಿಪ್ಪ || ೭ ||


ಜಗವನೆಲ್ಲವ ನಿರ್ಮಿಸುವ ನಾ |

ಲ್ಮೊಗನೊಳಗೆ ತಾನಿದ್ದು ಸಲಹುವ |

ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||

ಸ್ವಗತಭೇದವಿವರ್ಜಿತನು ಸ |

ರ್ವಗ ಸದಾನಂದೈಕದೇಹನು |

ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ || ೮ ||


ಒಬ್ಬನಲಿ ನಿಂತಾಡುವನು ಮ |

ತ್ತೊಬ್ಬನಲಿ ನೋಡುವನು ಬೇಡುವ |

ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ ||

ಅಬ್ಬರದ ಹೆದ್ದೈವನಿವ ಮ

ತ್ತೊಬ್ಬರನು ಲೆಕ್ಕಿಸನು ಲೋಕದೊ |

ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||


ಶರಣಜನಮಂದಾರ ಶಾಶ್ವತ |

ಕರುಣಿ ಕಮಲಾಕಾಂತ ಕಾಮದ |

ಪರಮಪಾವನತರ ಸಮಂಗಳಚರಿತ ಪಾರ್ಥಸಖ ||

ನಿರುಪಮಾನಂದಾತ್ಮನಿರ್ಗತ |

ದುರಿತ ದೇವವರೇಣ್ಯನೆಂದಾ |

ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ೧೦ ||


ಜನನಿಯನು ಕಾಣದಿಹ ಬಾಲಕ |

ನೆನೆನೆನೆದು ಹಲುಬುತಿರೆ ಕತ್ತಲೆ |

ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ||

ತನಯನಂ ಬಿಗಿದಪ್ಪಿ ರಂಬಿಸಿ |

ಕನಲಿಕೆಯ ಕಳೆವಂತೆ ಮಧುಸೂ |

ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೧ ||


ಇಟ್ಟಿಕಲ್ಲನು ಭಕುತಿಯಿಂದಲಿ |

ಕೊಟ್ಟ ಭಕುತಗೆ ಮೆಚ್ಚಿ ತನ್ನನೆ |

ಕೊಟ್ಟ ಬಡಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ ||

ಕೆಟ್ಟ ಮಾತುಗಳೆಂದ ಚೈದ್ಯನ |

ಪೊಟ್ಟೆಯೊಳಗಿಂಬಿಟ್ಟು ಬಾಣದ |

ಲಿಟ್ಟ ಭೀಷ್ಮನವಗುಣಗಳೆಣಿಸಿದನೆ ಕರುಣಾಳು || ೧೨ ||


ಧನವ ಸಂರಕ್ಷಿಸುವ ಫಣಿ ತಾ |

ನುಣದೆ ಮತ್ತೊಬ್ಬರಿಗೆ ಕೊಡದನು |

ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ||

ಪ್ರಣತರನು ಕಾಯ್ದಿಹನು ನಿಷ್ಕಾ |

ಮನದಿ ನಿತ್ಯಾನಂದಮಯ ದು |

ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ || ೧೩ ||


ಬಾಲಕನ ಕಲಭಾಷೆ ಜನನಿಯು |

ಕೇಳಿ ಸುಖಪಡುವಂತೆ ಲಕುಮೀ |

ಲೋಲ ಭಕುತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು ||

ತಾಳ ತನ್ನವರಲ್ಲಿ ಮಾಡುವ |

ಹೇಳನವ ಹೆದ್ದೈವ ವಿದುರನ |

ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ || ೧೪ ||


ಸ್ಮರಿಸುವರ ಅಪರಾಧಗಳ ತಾ |

ಸ್ಮರಿಸ ಸಕಲೇಷ್ಟಪ್ರದಾಯಕ |

ಮರಳಿ ತನಗರ್ಪಿಸಲು ಕೊಟ್ಟುದನಂತಮಡಿಮಾಡಿ ||

ಪರಿಪರಿಯಲುಂಡುಣಿಸಿ ಸುಖ ಸಾ |

ಗರದಿ ಲೋಲಾಡಿಸುವ ಮಂಗಳ |

ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ || ೧೫ ||


ಏನು ಕರುಣಾನಿಧಿಯೋ ಹರಿ ಮ

ತ್ತೇನು ಭಕ್ತಾಧೀನನೋ ಇ

ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ |

ತಾನೆ ಸೃಜಿಸುವ ಪಾಲಿಸುವ ನಿ

ರ್ವಾಣ ಮೊದಲಾದಖಿಳ ಲೋಕ

ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು || ೧೬ ||


ಜನಪ ಮೆಚ್ಚಿದರೀವ ಧನವಾ

ಹನ ವಿಭೂಷಣವಸನ ಭೂಮಿಯ

ತನು ಮನೆಗಳಿತ್ತಾದರಿಪರುಂಟೇನೋ ಲೋಕದೊಳು |

ಅನವರತ ನೆನೆವವರನಂತಾ

ಸನವೆ ಮೊದಲಾದಾಲಯದೊಳಿ

ಟ್ಟುಣುಗನಂದದಲವರ ವಶನಾಗುವ ಮಹಾಮಹಿಮ || ೧೭ ||


ಭುವನ ಪಾವನ ಛರಿತ ಪುಣ್ಯ

ಶ್ರವಣ ಕೀರ್ತನ ಪಾಪನಾಶನ

ಕವಿಭಿರೀಡಿತ ಕೈರವದಳ ಶ್ಯಾಮ ನಿಸ್ಸೀಮ |

ಯುವತಿ ವೇಷದಿ ಹಿಂದೆ ಗೌರೀ

ಧವನ ಮೋಹಿಸಿ ಕೆಡಿಸಿ ಉಳಿಸಿದ

ಇವನ ಮಾಯವ ಗೆಲುವನಾವನು ಈ ಜಗತ್ರಯದಿ || ೧೮ ||


ಪಾಪಕರ್ಮವ ಸಹಿಸುವೆಡೆ ಲ

ಕ್ಷ್ಮೀಪತಿಗೆ ಸಮರಾದ ದಿವಿಜರ

ನೀ ಪಯೋಜ ಭವಾಂಡದೊಳಗಾವಲ್ಲಿ ನಾ ಕಾಣೆ |

ಗೋಪ ಗುರುವಿನ ಮಡದಿ ಭೃಗು ನಗ

ಚಾಪ ಮೊದಲಾದವರು ಮಾಡಿದ ಮ

ಹಾಪರಾಧಗಳೆಣಿಸಿದನೆ ಕರುಣಾ ಸಮುದ್ರ ಹರಿ || ೧೯ ||


ಅಂಗುಟಾಗ್ರದಿ ಜನಿಸಿದಮರ ತ

ರಂಗಿಣಿಯು ಲೋಕತ್ರಯಗಳಘ

ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ |

ಇಂಗಡಲ ಮಗಳೊಡೆಯನಂಗೋ

ಪಾಂಗಗಳಲಿಪ್ಪಮಲನಂತ ಸು

ಮಂಗಳಪ್ರದನಾಮ ಪಾವನ ಮಾಳ್ಪುದೇನರಿದು || ೨೦ ||


ಕಾಮಧೇನು ಸುಕಲ್ಪತರು ಚಿಂ

ತಾಮಣಿಗಳಮರೇಂದ್ರ ಲೋಕದಿ

ಕಾಮಿತರ್ಥಗಳೀವುವಲ್ಲದೆ ಸೇವೆಮಾಳ್ವರಿಗೆ |

ಶ್ರೀ ಮುಕುಂದನ ಪರಮ ಮಂಗಳ

ನಾಮ ನರಕಸ್ಥರನು ಸಲಹಿತು

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು || ೨೧ ||


ಮನದೊಳಗೆ ಸುಂದರ ಪದಾರ್ಥವ

ನೆನೆದುಕೊಡೆ ಕೈಗೊಂಡು ಬಲು ನೂ

ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ |

ದ್ಯುನದಿನಿವಹಗಳಂತೆ ಕೊಟ್ಟವ

ರನು ಸದಾ ಸಂತಯಿಸುವನು ಸ

ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸು || ೨೨ ||


ಚೇತನಾಚೇತನ ವಿಲಕ್ಷಣ

ನೂತನ ಪದಾರ್ಥಗಳೊಳಗೆ ಬಲು

ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |

ಜಾತರೂಪೋದರ ಭವಾದ್ಯರೊ

ಳಾತತೆ ಪ್ರತಿಮ ಪ್ರಭಾವ ಧ

ರಾತಳ ದೊಳೆಮ್ಮೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||


ತಂದೆ ತಾಯ್ಗಳು ತಮ್ಮ ಶಿಶುವಿಗೆ

ಬಂದ ಭಯಗಳ ಪರಿಹರಿಸಿ ನಿಜ

ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ |

ಹಿಂದೆ ಮುಂದೆಡಬಲದಿ ಒಳ ಹೊರ

ಗಿಂದಿರೇಶನು ತನ್ನವರ ನೆಂ

ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||


ಒಡಲ ನೆಳಲಂದದಲಿ ಹರಿ ನ

ಮ್ಮೊಡನೆ ತಿರುಗುವನೊಂದರೆ ಕ್ಷಣ

ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ |

ತಡೆವ ದುರಿತೌಘಗಳ ಕಾಮದ

ಕೊಡುವ ಸಕಲೇಷ್ಟಗಳ ಸಂತತ

ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ || ೨೫ ||


ಬಿಟ್ಟವರ ಭವ ಪಾಶದಿಂದಲಿ

ಕಟ್ಟುವನು ಬಹು ಕಠಿಣನಿವ ಶಿ

ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ |

ಕಟ್ಟುವರ ಭವ ಕಟ್ಟು ಬಿಡಿಸುವ

ಸಿಟ್ಟಿನವನಿವನಲ್ಲ ಕಾಮದ

ಕೊಟ್ಟು ಕಾವನು ಸಕಲ ಸೌಖ್ಯಗಳಿಹಪರಂಗಳಲಿ || ೨೬ ||


ಕಣ್ಣಿಗೆವೆಯಂದದಲಿ ಕೈ ಮೈ

ತಿಣ್ಣೆದಗುವ ತೆರದಿ ಪಲ್ಗಳು

ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ |

ಪುಣ್ಯ ಫಲಗಳನೀವುದಕೆ ನುಡಿ

ವೆಣ್ಣಿನಾಣ್ಮಾಂಡದೊಳು ಲಕ್ಷ್ಮಣ

ನಣ್ಣನೊದಗುವ ಭಕ್ತರವಸರಕಮರಗಣಸಹಿತ || ೨೭ ||


ಕೊಟ್ಟುದನು ಕೈಗೊಂಬರೆಕ್ಷಣ

ಬಿಟ್ಟಗಲ ತನ್ನವರ ದುರಿತಗ

ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು |

ಬೆಟ್ಟ ಬೆನ್ನಲಿ ಹೊರಿಸಿದವರೊಳು

ಸಿಟ್ಟು ಮಾಡಿದನೇನೋ ಹರಿ ಕಂ

ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು || ೨೮ ||


ಖೇದ ಮೋದ ಜಯಾಪಜಯ ಮೊದ

ಲಾದ ದೋಷಗಳಿಲ್ಲ ಚಿನ್ಮಯ

ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ |

ಕಾದುಕೊಂಡಿಹ ಪರಮ ಕರುಣ ಮ

ಹೋದಧಿಯು ತನ್ನವರು ಮಾಳ್ದಪ

ರಾಧಗಳ ನೋಡದಲೆ ಸಲಹುವ ಸರ್ವಕಾಮದನು || ೨೯ ||


ಮೀನ ಕೂರ್ಮ ವರಾಹ ನರ ಪಂ

ಚಾನನಾತುಳ ಶೌರ್ಯ ವಾಮನ

ರೇಣುಕಾತ್ಮಜ ರಾವಣಾರಿ ನಿಶಾಚರ ಧ್ವಂಸಿ |

ಧೇನುಕಾಸುರ ಮಥನ ತ್ರಿಪುರವ

ಹಾನಿಗೈಸಿದ ನಿಪುಣ ಕಲಿಮುಖ

ದಾನವರ ಸಂಹರಿಸಿ ಕಾಯ್ದ ಸುಜನರನು || ೩೦ ||


ಶ್ರೀ ಮನೋರಮ ಶಮಲವರ್ಜಿತ

ಕಾಮಿತ ಪ್ರದ ಕೈರವದಳ

ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ |

ಸಾಮಸನ್ನುತ ಸಕಲ ಗುಣಗಣ

ಧಾಮ ಶ್ರೀ ಜಗನ್ನಾಥ ವಿಠ್ಠಲ

ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||