ಹರಿಕಥಾಮೃತಸಾರ/ಕರ್ಮ ವಿಮೋಚನ ಸಂಧಿ (ಸ್ತೋತ್ರ ಪ್ರಕರಣ)

ಮೂಲ ನಾರಾಯಣನು ಮಾಯಾ ಲೋಲ ಅನಂತ ಅವತಾರ ನಾಮಕ

ವ್ಯಾಳ ರೂಪ ಜಯಾ ರಮಣನ ಆವೆಶನು ಎನಿಸುವನು

ಲೀಲೆಗೈವ ಅನಂತ ಚೇತನ ಜಾಲದೊಳು ಪ್ರದ್ಯುಮ್ನ

ಬ್ರಹ್ಮಾಂಡ ಆಲಯದ ಒಳ ಹೊರಗೆ ನೆಲೆಸಿಹ ಶಾಂತಿ ಅನಿರುದ್ಧ//1//

ಐದು ಕಾರಣ ರೂಪ ಇಪ್ಪತ್ತೈದು ಕಾರ್ಯಗಳು ಎನಿಸುವವು

ಆರೈದು ರೂಪದಿ ರಮಿಸುತಿಪ್ಪನು ಈ ಚರಾಚರದಿ

ಭೇದ ವರ್ಜಿತ ಮೂರ್ಜಗದ್ಜನ್ಮಾದಿ ಕಾರಣ ಮುಕ್ತಿದಾಯಕ

ಸ್ವಉದರದೊಳಿಟ್ಟು ಎಲ್ಲರನು ಸಂತೈಪ ಸರ್ವಜ್ಞ//2//


ಕಾರ್ಯ ಕಾರಣ ಕರ್ತೃಗಳೊಳು ಸ್ವಭಾರ್ಯರಿಂದ ಒಡಗೂಡಿ

ಕಪಿಲಾಚಾರ್ಯ ಕ್ರೀಡಿಸುತಿಪ್ಪ ತನ್ನೊಳು ತಾನೆ ಸ್ವೇಚ್ಚೆಯಲಿ

ಪ್ರೇರ್ಯನು ಅಲ್ಲೇ ರಮಾಬ್ಜ ಭವರು ಆರ್ಯ ರಕ್ಷಿಸಿ ಶಿಕ್ಷಿಸುವನು

ಸ್ವವೀರ್ಯದಿಂದಲಿ ದಿವಿಜ ದಾನವ ತತಿಯ ದಿನದಿನದಿ//3//


ಈ ಸಮಸ್ತ ಜಗತ್ತಿನೊಳಗೆ ಆಕಾಶದೊಳು ಇರುತಿಪ್ಪ

ವ್ಯಾಪ್ತಾವೇಶ ಅವತಾರಾಂತರಾತ್ಮಕನಾಗಿ ಪರಮಾತ್ಮ

ನಾಶ ರಹಿತ ಜಗತ್ತಿನೊಳಗೆ ಅವಕಾಶದನು ತಾನಾಗಿ

ಯೋಗೀಶಾಶಯ ಸ್ಥಿತ ತನ್ನೊಳು ಎಲ್ಲರನಿಟ್ಟು ಸಲಹುವನು//4//


ದಾರು ಪಾಷಾಣಗತ ಪಾವಕ ಬೇರೆ ಬೇರೆ ಇಪ್ಪಂತೆ

ಕಾರಣ ಕಾರ್ಯಗಳ ಒಳಗಿದ್ದು ಕಾರಣ ಕಾರ್ಯನು ಎಂದೆನಿಸಿ

ತೋರಿಕೊಳ್ಳದೆ ಎಲ್ಲರೊಳು ವ್ಯಾಪಾರ ಮಾಡುವ

ಯೋಗ್ಯತೆಗಳ ಅನುಸಾರ ಫಲಗಳ ಉಣಿಸಿ ಸಂತೈಸುವ ಕೃಪಾಸಾಂದ್ರ//5//


ಊರ್ಮಿಗಳೊಳಿಪ್ಪ ಕರ್ಮ ವಿಕರ್ಮ ಜನ್ಯ ಫಲ ಅಫಲಂಗಳ

ನಿರ್ಮಲಾತ್ಮನು ಮಾಡಿ ಮಾಡಿಸಿ ಉಂಡು ಉಣಿಸುತಿಪ್ಪ

ನಿರ್ಮಮ ನಿರಾಮಯ ನಿರಾಶ್ರಯ ಧರ್ಮವಿತು ಧರ್ಮಾತ್ಮ ಧರ್ಮಗ

ದುರ್ಮತೀ ಜನರ ಒಲ್ಲನು ಅಪ್ರತಿಮಲ್ಲ ಶ್ರೀನಲ್ಲ//6//


ಜಲದ ವಡಬಾನಳಗಳು ಅಂಬುಧಿ ಜಲವನು ಉಂಬುವವು

ಅಬ್ದ ಮಳೆಗರೆದಿಳಿಗೆ ಶಾಂತಿಯನೀವುದು ಅನಲನು ತಾನೇ ಭುಂಜಿಪುದು

ತಿಳಿವುದು ಈ ಪರಿಯಲ್ಲಿ ಲಕ್ಷ್ಮೀ ನಿಲಯ ಗುಣ ಕೃತ ಕರ್ಮಜ

ಫಲಾಫಲಗಳು ಉಂಡು ಉಣಿಸುವನು ಸಾರವಾಗ ಸರ್ವ ಜೀವರಿಗೆ//7//


ಪುಸ್ತಕಗಳ ಅವಲೋಕಿಸುತ ಮಂತ್ರ ಸ್ತುತಿಗಳ ಅನಲೇನು

ರವಿಯ ಉದಯಾಸ್ತಮಯ ಪರ್ಯಂತ ಜಪಗಳ ಮಾಡಿ ಫಲವೇನು

ಹೃಸ್ಥ ಪರಮಾತ್ಮನೆ ಸಮಸ್ತ ಅವಸ್ಥೆಗಳೊಳಿದ್ದು ಎಲ್ಲರೊಳಗೆ

ನಿರಸ್ತಕಾಮನು ಮಾಡಿ ಮಾಡಿಪನು ಎಂದು ತಿಳಿಯದವ//8//


ಮದ್ಯ ಭಾಂಡವ ದೇವ ನದಿಯೊಳಗೆ ಅದ್ದಿ ತೊಳೆಯಲು ನಿತ್ಯದಲಿ

ಪರಿಶುದ್ಧವು ಅಹುದೆ ಎಂದಿಗಾದರು

ಹರಿ ಪದಾಬ್ಜಗಳ ಬುದ್ಧಿ ಪೂರ್ವಕ ಭಜಿಸದವಗೆ ವಿರುದ್ಧವು ಎನಿಸುವವೆಲ್ಲ

ಕರ್ಮ ಸಮೃದ್ಧಿಗಳು ದುಃಖವನೆ ಕೊಡುತಿಹವು ಅಧಮ ಜೀವರಿಗೆ//9//


ಭಕ್ತಿ ಪೂರ್ವಕವಾಗಿ ಮುಕ್ತಾಮುಕ್ತ ನಿಯಾಮಕನ

ಸರ್ವೋದ್ರಿಕ್ತ ಮಹಿಮೆಗಳ ಅನವರತ ಕೊಂಡಾಡು ಮರೆಯದಲೆ

ಸಕ್ತನಾಗದೆ ಲೋಕವಾರ್ತೆ ಪ್ರಸಕ್ತಿಗಳನು ಈಡಾಡಿ

ಶೃತಿ ಸ್ಮೃತಿ ಉಕ್ತ ಕರ್ಮವ ಮಾಡುತಿರು ಹರಿಯಾಜ್ಞೆಯೆಂದರಿದು//10//


ಲೋಪವಾದರು ಸರಿಯೇ ಕರ್ಮಜ ಪಾಪಪುಣ್ಯಗಳು ಎರಡು ನಿನ್ನನು ಲೇಪಿಸವು

ನಿಷ್ಕಾಮಕನು ನೀನಾಗಿ ಮಾಡುತಿರೆ

ಸೌಪರಣಿ ವರವಹನ ನಿನ್ನ ಮಹಾಪರಾಧಗಳ ಎಣಿಸದಲೆ

ಸ್ವರ್ಗಾಪವರ್ಗವ ಕೊಟ್ಟು ಸಲಹುವ ಸತತ ಸುಖಸಾಂದ್ರ//11//


ಸ್ವರತ ಸುಖಮಯ ಸುಲಭ ವಿಶ್ವಂಭರ ವಿಷೋಕ ಸುರಾಸುರಾರ್ಚಿತ ಚರಣ ಯುಗ

ಚಾರು ಅಂಗ ಶಾರ್ನ್ಗ ಶರಣ್ಯ ಜಿತಮನ್ಯು

ಪರಮ ಸುಂದರ ತರ ಪರಾತ್ಪರ ಶರಣ ಜನ ಸುರಧೇನು ಶಾಶ್ವತ ಕರುಣಿ

ಕಂಜದಳಾಕ್ಷಕಾಯೆನೆ ಕಂಗೊಳಿಪ ಶೀಘ್ರ//12//


ನಿರ್ಮಮನು ನೀನಾಗಿ ಕರ್ಮ ವಿಕರ್ಮಗಳು ನಿರಂತರದಿ

ಸುಧರ್ಮ ನಾಮಕಗೆ ಅರ್ಪಿಸುತ ನಿಷ್ಕಲುಷ ನೀನಾಗು

ಭರ್ಮ ಗರ್ಭನ ಜನಕ ದಯದಲಿ ದುರ್ಮತಿಗಳನು ಕೊಡದೆ

ತನ್ನಯ ಹರ್ಮ್ಯದೊಳಗಿಟ್ಟು ಎಲ್ಲ ಕಾಲದಿ ಕಾವ ಕೃಪೆಯಿಂದ//13//


ಕಲ್ಪಕಲ್ಪದಿ ಶರಣ ಜನ ವರಕಲ್ಪವೃಕ್ಷನು

ತನ್ನ ನಿಜ ಸಂಕಲ್ಪದ ಅನುಸಾರದಲಿ ಕೊಡುತಿಪ್ಪನು ಫಲಾಫಲವ

ಅಲ್ಪಸುಖದ ಅಪೇಕ್ಷೆಯಿಂದ ಅಹಿತಲ್ಪನ ಆರಾಧಿಸದಿರು ಎಂದಿಗು

ಶಿಲ್ಪಗನ ಕೈ ಸಿಕ್ಕ ಶಿಲೆಯಂದದಲಿ ಸಂತೈಪ//14//


ದೇಶ ಭೇದ ಆಕಾಶದಂದದಿ ವಾಸುದೇವನು ಸರ್ವ ಭೂತ ನಿವಾಸಿಯೆನಿಸಿ

ಚರಾಚರಾತ್ಮಕನು ಎಂದು ಕರೆಸುವನು

ದ್ವೇಷ ಸ್ನೇಹ ಉದಾಸೀನಗಳಿಲ್ಲ ಈ ಶರೀರಗಳೊಳಗೆ

ಅವರ ಉಪಾಸನಗಳಂದದಲಿ ಫಲವೀವನು ಪರಬ್ರಹ್ಮ್ಹ//15//


ಸಂಚಿತಾಗಾಮಿಗಳ ಕರ್ಮ ವಿರಿಂಚಿ ಜನಕನ ಭಜಿಸೆ ಕೆಡುವವು

ಮಿಂಚಿನಂದದಿ ಪೊಳೆವ ಪುರುಷೋತ್ತಮ ಹೃದಯ ಅಂಬರದಿ

ವಂಚಿಸುವ ಜನರೊಲ್ಲ ಶ್ರೀವತ್ಸಾಂಚಿತ ಸುಸದ್ವಕ್ಷ

ತಾ ನಿಷ್ಕಿಂಚನ ಪ್ರಿಯ ಸುರಮುನಿಗೇಯ ಶುಭಕಾಯ//16//


ಕಾಲದ್ರವ್ಯ ಸುಕರ್ಮ ಶುದ್ಧಿಯ ಪೇಳುವರು ಅಲ್ಪರಿಗೆ

ಅವು ನಿರ್ಮೂಲ ಗೈಸುವವು ಅಲ್ಲ ಪಾಪಗಳ ಎಲ್ಲ ಕಾಲದಲಿ

ತೈಲ ಧಾರೀಯಂತ ಅವನ ಪದ ಓಲೈಸಿ ತುತಿಸದಲೆ ನಿತ್ಯದಿ

ಬಾಲಿಷರು ಕರ್ಮಗಳೆ ತಾರಕವೆಂದು ಪೇಳುವರು//17//


ಕಮಲಸಂಭವ ಶರ್ವ ಶಕ್ರಾದಿ ಅಮರರೆಲ್ಲರು

ಇವನ ದುರತಿಕ್ರಮ ಮಹಿಮೆಗಳ ಮನವಚನದಿಂ ಪ್ರಾಂತಗಾಣದಲೆ

ಶ್ರಮಿತರಾಗಿ ಪದಾಬ್ಜ ಕಲ್ಪದ್ರುಮದ ನೆಳಲ ಆಶ್ರಯಿಸಿ

ಲಕ್ಷ್ಮೀ ರಮಣ ಸಂತೈಸೆಂದು ಪ್ರಾರ್ಥಿಪರು ಅತಿ ಭಕುತಿಯಿಂದ//18//


ವಾರಿಚರವು ಎನಿಸುವವು ದರ್ದುರ ತಾರಕಗಳೆಂದರಿದು

ಭೇಕವನು ಏರಿ ಜಲಧಿಯ ದಾಟುವೆನೆಂಬುವನ ತೆರದಂತೆ

ತಾರತಮ್ಯ ಜ್ಞಾನ ಶೂನ್ಯರು ಸೂರಿಗಮ್ಯನ ತಿಳಿಯಲರಿಯದೆ

ಸೌರಶೈವ ಮತಾನುಗರ ಅನುಸರಿಸಿ ಕೆಡುತಿಹರು//19//


ಕ್ಷೋಣಿಪತಿ ಸುತನೆನಿಸಿ ಕೈದುಗ್ಗಾಣಿಗೊಡ್ಡುವ ತೆರದಿ

ಸುಮನಸ ಧೇನು ಮನೆಯೊಳಗಿರಲು ಗೋಮಯ ಬಯಸುವಂದದಲಿ

ವೇಣುಗಾನಪ್ರಿಯನ ಅಹಿಕ ಸುಖಾನುಭವ ಬೇಡದಲೆ

ಲಕ್ಷ್ಮೀ ಪ್ರಾಣನಾಥನ ಪಾದ ಭಕುತಿಯ ಬೇಡು ಕೊಂಡಾಡು//20//


ಕ್ಷುಧೆಯ ಗೋಸುಗ ಪೋಗಿ ಕಾನನ ಬದರಿ ಫಲಗಳ ಅಪೇಕ್ಷೆಯಿಂದಲಿ

ಪೊದೆಯೊಳಗೆ ಸಿಗ ಬಿದ್ದು ಬಾಯ್ದೆರೆದವನ ತೆರದಂತೆ

ವಿಧಿಪಿತನ ಪೂಜಿಸದೆ ನಿನ್ನಯ ಉದರ ಗೋಸುಗ

ಸಾಧುಲಿಂಗ ಪ್ರದರ್ಶಕರ ಆರಾಧಿಸುತ ಬಳಲದಿರು ಭವದೊಳಗೆ//21//


ಜ್ಞಾನ ಜ್ಞೇಯ ಜ್ಞಾತೃವೆಂಬ ಅಭಿಧಾನದಿಂ ಬುದ್ಧಾದಿಗಳ ಅಧಿಷ್ಠಾನದಲಿ ನೆಲೆಸಿದ್ದು

ಕರೆಸುತ ತತ್ತದಾಹ್ವಯದಿ

ಭಾನುಮಂಡಲಗ ಪ್ರದರ್ಶಕ ತಾನೆನಿಸಿ ವಶನಾಗುವನು

ಶುಕ ಶೌನಕಾದಿ ಮುನೀಂದ್ರ ಹೃದಯಾಕಾಶಗತ ಚಂದ್ರ//22//


ಉದಯ ವ್ಯಾಪಿಸಿ ದರ್ಶ ಪೌರ್ಣಿಮ ಅಧಿಕ ಯಾಮವು ಶ್ರವಣ ಅಭಿಜಿತು

ಸದನವೈದಿರೆ ಮಾಳ್ಪ ತೆರದಂದದಲಿ ಹರಿಸೇವೆ

ವಿಧಿ ನಿಷೇಧಗಳು ಏನು ನೋಡದೆ ವಿಧಿಸುತಿರು

ನಿತ್ಯದಲಿ ತನ್ನಯ ಸದನದೊಳಗಿಂಬಿಟ್ಟು ಸಲಹುವ ಭಕ್ತವತ್ಸಲನು//23//


ನಂದಿವಾಹನ ರಾತ್ರಿ ಸಾಧನೆ ಬಂದ ದ್ವಾದಶಿ ಪೈತೃಕ ಸಂಧಿಸಿಹ ಸಮಯದಲಿ

ಶ್ರವಣವ ತ್ಯಜಿಸುವಂತೆ ಸದಾ

ನಿಂದ್ಯರಿಂದಲಿ ಬಂದ ದ್ರವ್ಯವ ಕಣ್ದೆರೆದು ನೋಡದಲೆ

ಶ್ರೀಮದಾನಂದತೀರ್ಥ ಅಂತರ್ಗತನ ಸರ್ವತ್ರ ಭಜಿಸುತಿರು//24//


ಶ್ರೀ ಮನೋರಮ ಮೇರು ತ್ರಿಕಕುದ್ಧಾಮ ಸತ್ಕಲ್ಯಾಣಗುಣ ನಿಸ್ಸೀಮ

ಪಾವನನಾಮ ದಿವಿಜೋದ್ಧಾಮ ರಘುರಾಮ

ಪ್ರೇಮಪೂರ್ವಕ ನಿತ್ಯ ತನ್ನ ಮಹಾ ಮಹಿಮೆಗಳ ತುತಿಸುವರಿಗೆ

ಸುಧಾಮಗೆ ಒಲಿದಂದದಲಿ ಅಖಿಳಾರ್ಥಗಳ ಕೊಡುತಿಪ್ಪ//25//


ತಂದೆ ತಾಯ್ಗಳ ಕುರುಹನರಿಯದ ಕಂದ ದೇಶಾಂತರದೊಳಗೆ ತನ್ನಂದದಲಿ

ಇಪ್ಪವರ ಜನನೀ ಜನಕರನು ಕಂಡು

ಹಿಂದೆಯೆನ್ನನು ಪಡೆದ ಅವರು ಈ ಯಂದದಲಿಪ್ಪರೋ ಅಲ

ನಾನು ಅವರ ಎಂದು ಕಾಣುವೆನೆನುತ ಹುಡುಕುವ ತೆರದಿ ಕೋವಿದರು//26//


ಶ್ರುತಿ ಪುರಾಣ ಸಮೂಹದೊಳು ಭಾರತ ಪ್ರತಿ ಪ್ರತಿ ಪದಗಳೊಳು

ನಿರ್ಜಿತನ ಗುಣ ರೂಪಗಳ ಪುಡುಕುತ ಪರಮ ಹರುಷದಲಿ

ಮತಿಮತರು ಪ್ರತಿದಿವಸ ಸಾರಸ್ವತ ಸಮುದ್ರದಿ

ಶಫರಿಯಂದದಿ ಸತತ ಸಂಚರಿಸುವರು ಕಾಣುವ ಲವಲವಿಕೆಯಿಂದ//27//


ಮತ್ಸ್ಯಕೇತನ ಜನಕ ಹರಿ ಶ್ರೀವತ್ಸ ಲಾಂಛನ ನಿಜ ಶರಣ ಜನವತ್ಸಲ

ವರಾರೋಹ ವೈಕುಂಠಆಲಯ ನಿವಾಸಿ

ಚಿತ್ಸುಖಪ್ರದ ಸಲಹೆನಲು ಗೋವತ್ಸ ಧ್ವನಿಗೊದಗುವ ತೆರದಿ

ಪರಮೋತ್ಸಾಹದಿ ಬಂದೊದಗವುನು ನಿರ್ಮತ್ಸರರ ಬಳಿಗೆ//28//


ಸೂರಿಗಳಿಗೆ ಸಮೀಪಗ ದುರಾಚಾರಿಗಳಿಗೆ ಎಂದೆಂದು ದೂರಾದ್ದೂರತರ

ದುರ್ಲಭನು ಎನಿಸುವನು ದೈತ್ಯ ಸಂತತಿಗೆ

ಸಾರಿ ಸಾರಿಗೆ ನೆನೆವವರ ಸಂಸಾರವೆಂಬ ಮಹೋರಗಕೆ ಸರ್ವಾರಿಯೆನಿಸಿ

ಸದಾ ಸುಸೌಖ್ಯವನು ಈವ ಶರಣರಿಗೆ//29//


ಚಕ್ರ ಶಂಖ ಗದಾಬ್ಜಧರ ದುರತಿಕ್ರಮ ದುರಾವಾಸ

ವಿಧಿ ಶಿವ ಶಕ್ರ ಸೂರ್ಯಾದ್ಯ ಅಮರ ಪೂಜ್ಯ ಪದಾಬ್ಜ ನಿರ್ಲಜ್ಜ

ಶುಕ್ರ ಶಿಷ್ಯರ ಅಶ್ವಮೇಧಾ ಪ್ರಕ್ರಿಯವ ಕೆಡಿಸಿ

ಅಬ್ಜಜಾಂಡವ ಅತಿಕ್ರಮಿಸಿ ಜಾಹ್ನವಿಯ ಪಡೆದ ತ್ರಿವಿಕ್ರಮಾಹ್ವಯನು//30//


ಶಕ್ತರೆನಿಸುವರೆಲ್ಲ ಹರಿ ವ್ಯತಿರಿಕ್ತ ಸುರಗಣದೊಳಗೆ

ಸರ್ವೋದ್ರಿಕ್ತನು ಎನಿಸುವ ಸರ್ವರಿಂದಲಿ ಸರ್ವ ಕಾಲದಲಿ

ಭಕ್ತಿ ಪೂರ್ವಕವಾಗಿ ಅನ್ಯ ಪ್ರಸಕ್ತಿಗಳ ನೀಡಾಡಿ

ಪರಮಾಸಕ್ತನು ಆಗಿರು ಹರಿಕಥಾಮೃತ ಪಾನ ವಿಷಯದಲಿ//31//


ಪ್ರಣತ ಕಾಮದ ಭಕ್ತ ಚಿಂತಾಮಣಿ ಮಣಿಮಯಾಭರಣ ಭೂಷಿತ

ಗುಣಿ ಗುಣ ತ್ರಯ ದೂರ ವರ್ಜಿತ ಗಹನ ಸನ್ಮಹಿಮ

ಎಣಿಸ ಭಕ್ತರ ದೋಷಗಳ ಕುಂಭಿಣಿಜೆಯಾಣ್ಮ ಶರಣ್ಯ

ರಾಮಾರ್ಪಣವೆನಲು ಕೈಕೊಂಡ ಶಬರಿಯ ಫಲವ ಪರಮಾತ್ಮ//32//


ಬಲ್ಲೆನೆಂಬುವರಿಲ್ಲವು ಈತನ ಒಲ್ಲೆನೆಂಬುವರಿಲ್ಲ

ಲೋಕದೊಳಿಲ್ಲದಿಹ ಸ್ಥಳವಿಲ್ಲವೈ ಅಜ್ಞಾತ ಜನರಿಲ್ಲ

ಬೆಲ್ಲದಚ್ಚಿನ ಬೊಂಬೆಯಂದದಿ ಎಲ್ಲರೊಳಗಿರುತಿಪ್ಪ

ಶ್ರೀಭೂ ನಲ್ಲ ಇವಗೆ ಎಣೆಯಿಲ್ಲ ಅಪ್ರತಿಮಲ್ಲ ಜಗಕೆಲ್ಲ//33//


ಶಬ್ದ ಗೋಚರ ಶಾರ್ವರೀಕರ ಅಬ್ದ ವಾಹನನನುಜ

ಯದುವಂಶಾಬ್ಧಿ ಚಂದ್ರಮ ನಿರುಪಮ ಸುನಿಸ್ಸೀಮ ಸಮಿತಸಮ

ಲಬ್ಧನಾಗುವ ತನ್ನವಗೆ ಪ್ರಾರಬ್ಧ ಕರ್ಮಗಳ ಉಣಿಸಿ ತೀವ್ರದಿ

ಕ್ಷುಬ್ಧ ಪಾವಕನಂತೆ ಬಿಡದಿಪ್ಪನು ದಯಾಸಾಂದ್ರ//34//


ಶ್ರೀ ವಿರಿಂಚಿ ಆದಿ ಅಮರ ವಂದಿತ ಈ ವಸುಂಧರೆಯೊಳಗೆ

ದೇವಕಿ ದೇವಿ ಜಠರದೊಳು ಅವತರಿಸಿದನು ಅಜನು ನರರಂತೆ

ರೇವತೀ ರಮಣ ಅನುಜನು ಸ್ವಪದಾವಲಂಬಿಗಳನು ಸಲಹಿ

ದೈತ್ಯಾವಳಿಯ ಸಂಹರಿಸಿದ ಜಗನ್ನಾಥ ವಿಠಲನು//35//