ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ
ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ
ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ
ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ//1//
ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ
ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು
ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ
ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು//2//
ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು
ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು
ತನು ಪ್ರತೀಕದಿ ಬಿಂಬನ ಉಪಾಸನವಗೈಯುತ ಇಂದ್ರಿಯಜ ಕರ್ಮ
ಅನವರತ ಹರಿಗೆ ಅರ್ಪಿಸುತ ನಿರ್ಮಮರುಯೆನಿಸುವರು//3//
ಏಳುವಿಧ ಜೀವ ಗಣ ಬಹಳ ಸುರಾಳಿ ಸಂಖ್ಯಾ ನೇಮವುಳ್ಳದು
ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ
ಸ್ಥೂಲ ಕರ್ಮವ ತೊರೆದು ಗುರುಗಳು ಪೇಳಿದ ಅರ್ಥವ ತಿಳಿದು
ತತ್ತತ್ಕಾಲ ಧರ್ಮ ಸಮರ್ಪಿಸುವ ಅವರು ಕರ್ಮ ಯೋಗಿಗಳು//4//
ಹೀನ ಕರ್ಮಗಳಿಂದ ಬಹುವಿಧ ಯೋನಿಯಲಿ ಸಂಚರಿಸಿ ಪ್ರಾಂತಕೆ
ಮಾನುಷತ್ವವನೈದಿ ಸರ್ವೋತ್ತಮನು ಹರಿಯೆಂಬ
ಜ್ಞಾನ ಭಕ್ತಿಗಳಿಂದ ವೇದೋಕ್ತ ಅನುಸಾರ ಸಹಸ್ರಜನ್ಮ
ಅನ್ಯೂನ ಕರ್ಮವ ಮಾಡಿ ಹರಿಗರ್ಪಿಸಿದ ನಂತರದಿ//5//
ಹತ್ತು ಜನ್ಮಗಳಲಿ ಹರಿ ಸರ್ವೋತ್ತಮನು ಸುರಾಸುರ ಗಣಾರ್ಚಿತ
ಚಿತ್ರ ಕರ್ಮ ವಿಶೋಕ ಅನಂತಾನಂತ ರೂಪಾತ್ಮ
ಸತ್ಯ ಸತ್ಸಂಕಲ್ಪ ಜಗದೋತ್ಪತ್ತಿ ಸ್ಥಿತಿಲಯ ಕಾರಣ
ಜರಾಮೃತ್ಯು ವರ್ಜಿತನೆಂದು ಉಪಾಸನೆಗೈದ ತರುವಾಯ//6//
ಮೂರು ಜನ್ಮಗಳಲ್ಲಿ ದೇಹಾಗಾರ ಪಶು ಧನ ಪತ್ನಿ ಮಿತ್ರ
ಕುಮಾರ ಮಾತಾ ಪಿತೃಗಳಲ್ಲಿ ಇಹ ಸ್ನೇಹಗಿಂತ ಅಧಿಕ
ಮಾರಮಣನಲಿ ಬಿಡದೆ ಮಾಡುವ ಸೂರಿಗಳು ಈ ಉಕ್ತ ಜನ್ಮವ ಮೀರಿ
ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು//7//
ದೇವ ಗಾಯಕ ಅಜಾನ ಚಿರಪಿತೃ ದೇವರೆಲ್ಲರು
ಜ್ಞಾನ ಯೋಗಿಗಳು ಆವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ದೇವಿ
ಬುಧಸನಕಾದಿಗಳು ಮೇಘಾವಳಿ ಪರ್ಜನ್ಯ ಸಾಂಶರು
ಈ ಉಭಯ ಗಣದೊಳಗಿವರು ವಿಜ್ಞಾನ ಯೋಗಿಗಳು//8//
ಭರತ ಖಂಡದಿ ನೂರು ಜನ್ಮವ ಧರಿಸಿ ನಿಷ್ಕಾಮಕ ಸುಕರ್ಮ ಆಚರಿಸಿದ ಅನಂತರದಿ
ದಶ ಸಹಸ್ರ ಜನ್ಮದಲಿ ಉರುತರ ಜ್ಞಾನವನು
ಮೂರೈದು ಎರಡು ದಶ ದೇಹದಲಿ ಭಕ್ತಿಯ
ನಿರವಧಿಕನಲಿ ಮಾಡಿ ಕಾಂಬರು ಬಿಂಬ ರೂಪವನು//9//
ಸಾಧನಾತ್ಪೂರ್ವದಲಿ ಇವರಿಗೆ ಅನಾದಿ ಕಾಲ ಅಪರೋಕ್ಷವಿಲ್ಲ
ನಿಷೇಧ ಕರ್ಮಗಳಿಲ್ಲ ನರಕ ಪ್ರಾಪ್ತಿ ಮೊದಲಿಲ್ಲ
ವೇದ ಶಾಸ್ತ್ರಗಳಲ್ಲಿಪ್ಪ ವಿರೋಧ ವಾಕ್ಯವ ಪರಿಹರಿಸಿ
ಮಧುಸೂದನನೆ ಸರ್ವೋತ್ತಮೋತ್ತಮನು ಎಂದು ತುತಿಸುವರು//10//
ಸತ್ಯಲೋಕಾಧಿಪನ ವಿಡಿದು ಶತಸ್ಥ ದೇವಗಣ ಅಂತ ಎಲ್ಲರು
ಭಕ್ತಿ ಯೋಗಿಗಳೆಂದು ಕರೆಸುವರು ಆವ ಕಾಲದಲಿ
ಭಕ್ತಿ ಯೋಗ್ಯರ ಮಧ್ಯದಲಿ ಸದ್ಭಕ್ತಿ ವಿಜ್ಞಾನಾದಿ ಗುಣದಿಂದ ಉತ್ತಮ
ಉತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ//11//
ಋಜುಗಣಕೆ ಭಕ್ತಿ ಆದಿ ಗುಣ ಸಹಜವು ಎನಿಸುವವು
ಕ್ರಮದಿ ವೃದ್ಧಿ ಅಬ್ಜಜ ಪದವಿ ಪರ್ಯಂತ ಬಿಂಬ ಉಪಾಸನವು ಅಧಿಕ
ವೃಜಿನ ವರ್ಜಿತ ಎಲ್ಲರೊಳು ತ್ರಿಗುಣಜ ವಿಕಾರಗಳಿಲ್ಲವು ಎಂದಿಗು
ದ್ವಿಜಫಣಿಪ ಮೃಡ ಶಕ್ರ ಮೊದಲಾದ ಅವರೊಳು ಇರುತಿಹವು//12//
ಸಾಧನಾತ್ಪೂರ್ವದಲಿ ಈ ಋಜ್ವಾದಿ ಸಾತ್ವಿಕರು ಎನಿಪ ಸುರಗಣ
ಅನಾದಿ ಸಾಮಾನ್ಯ ಅಪರೋಕ್ಷಿಗಳೆಂದು ಕರೆಸುವರು
ಸಾಧನೋತ್ತರ ಸ್ವಸ್ವ ಬಿಂಬ ಉಪಾಧಿ ರಹಿತ ಆದಿತ್ಯನಂದದಿ
ಸಾದರದಿ ನೋಡುವರು ಅಧಿಕಾರ ಅನುಸಾರದಲಿ//13//
ಛಿನ್ನ ಭಕ್ತರು ಎನಿಸುತಿಹರು ಸುಪರ್ಣ ಶೇಷಾದಿ ಅಮರರರೆಲ್ಲ
ಅಚ್ಚಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ಸೊನ್ನೊಡಲ ವಾಗ್ದೇವಿಯರು
ಪಣೆಗಣ್ಣ ಮೊದಲಾದ ಅವರೊಳಗೆ ತತ್ತನ್ನಿಯಾಮಕರಾಗಿ
ವ್ಯಾಪಾರವನು ಮಾಡುವರು//14//
ಹೀನ ಸತ್ಕರ್ಮಗಳು ಎರಡು ಪವಮಾನ ದೇವನು ಮಾಳ್ಪನು
ಇದಕೆ ಅನುಮಾನವಿಲ್ಲ ಎಂದು ಎನುತ ದೃಢ ಭಕ್ತಿಯಲಿ ಭಜಿಪರ್ಗೆ
ಪ್ರಾಣಪತಿ ಸಂಪ್ರೀತನಾಗಿ ಕುಯೋನಿಗಳ ಕೊಡ
ಎಲ್ಲ ಕರ್ಮಗಳು ಆನೆ ಮಾಡುವೆನೆಂಬ ಮನುಜರ ನರಕಕೆ ಐದಿಸುವ//15//
ದೇವರ್ಷಿ ಪಿತೃಪ ನರರೆನಿಸುವ ಐವರೊಳು ನೆಲೆಸಿದ್ದು
ಅವರ ಸ್ವಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ
ಭಾವಿ ಬ್ರಹ್ಮನು ಕೂರ್ಮ ರೂಪದಿ ಈ ವಿರಿಂಚಿ ಅಂಡವನು ಬೆನ್ನಿಲಿ ತಾ ವಹಿಸಿ
ಲೋಕಗಳ ಪೊರೆವನು ದ್ವಿತೀಯ ರೂಪದಲಿ//16//
ಗುಪ್ತನಾಗಿದ್ದು ಅನಿಲ ದೇವ ದ್ವಿಸಪ್ತ ಲೋಕದ ಜೀವರೊಳಗೆ
ತ್ರಿಸಪ್ತ ಸಾವಿರದ ಆರುನೂರು ಶ್ವಾಸ ಜಪಗಳನು
ಸುಪ್ತಿಸ್ವಪ್ನದಿ ಜಾಗ್ರತಿಗಳಲಿ ಆಪ್ತನಂದದಿ ಮಾಡಿ ಮಾಡಿಸಿ
ಕ್ಲುಪ್ತ ಭೋಗಗಳೀವ ಪ್ರಾಂತಕೆ ತೃತೀಯ ರೂಪದಲಿ//17//
ಶುದ್ಧ ಸತ್ವಾತ್ಮಕ ಶರೀರದೊಳಿದ್ದ ಕಾಲಕು ಲಿಂಗದೇಹವು ಬದ್ಧವಾಗದು
ದಗ್ಧ ಪಟದೋಪಾದಿ ಇರುತಿಹುದು
ಸಿದ್ಧ ಸಾಧನ ಸರ್ವರೊಳಗೆ ಅನವದ್ಯನು ಎನಿಸುವ
ಗರುಡ ಶೇಷ ಕಪರ್ದಿ ಮೊದಲಾದ ಅಮರರೆಲ್ಲರು ದಾಸರೆನಿಸುವರು//18//
ಗಣದೊಳಗೆ ತಾನಿದ್ದು ಋಜುವೆಂದು ಎನಿಸಿಕೊಂಬನು
ಕಲ್ಪ ಶತ ಸಾಧನವಗೈದ ಅನಂತರದಿ ತಾ ಕಲ್ಕಿಯೆನಿಸುವನು
ದ್ವಿನವಾಶೀತಿಯ ಪ್ರಾಂತ ಭಾಗದಿ ಅನಿಲ ಹನುಮದ್ಭೀಮ ರೂಪದಿ
ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು//19//
ವಿಶ್ವವ್ಯಾಪಕ ಹರಿಗೆ ತಾ ಸಾದೃಶ್ಯ ರೂಪವ ಧರಿಸಿ
ಬ್ರಹ್ಮ ಸರಸ್ವತೀ ಭಾರತಿಗಳಿಂದ ಒಡಗೂಡಿ ಪವಮಾನ
ಶಾಶ್ವತ ಸುಭಕ್ತಿಯಲಿ ಸುಜ್ಞಾನ ಸ್ವರೂಪನ ರೂಪಗುಣಗಳ
ಅನಶ್ವರವೆಂದೆನುತ ಪೊಗಳುವ ಶ್ರುತಿಗಳೊಳಗಿದ್ದು//20//
ಖೇಟ ಕುಕ್ಕುಟ ಜಲಟವೆಂಬ ತ್ರಿಕೋಟಿ ರೂಪವ ಧರಿಸಿ
ಸತತ ನಿಶಾಟರನು ಸಂಹರಿಸಿ ಸಲಹುವ ಸರ್ವ ಸತ್ಜನರ
ಕೈಟಭಾರಿಯ ಪುರದ ಪ್ರಥಮ ಕವಾಟವೆನಿಸುವ
ಗರುಡ ಶೇಷ ಲಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ//21//
ಈ ಋಜುಗಳೊಳಗೊಬ್ಬ ಸಾಧನ ನೂರು ಕಲ್ಪದಿ ಮಾಡಿ ಕರೆಸುವ
ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ
ಸೂರಿಗಳು ಸಂಸ್ತುತಿಸಿ ವಂದಿಸೆ ಘೋರದುರಿತಗಳನು ಅಳಿದು ಪೋಪುವು
ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ//22//
ಪಾಹಿ ಕಲ್ಕಿಸುತೇಜದಾಸನೆ ಪಾಹಿ ಧರ್ಮಾಧರ್ಮ ಖಂಡನೆ
ಪಾಹಿ ವರ್ಚಸ್ವೀ ಖಷಣ ನಮೋ ಸಾಧು ಮಹೀಪತಿಯೆ
ಪಾಹಿ ಸದ್ಧರ್ಮಜ್ಞ ಧರ್ಮಜ ಪಾಹಿ ಸಂಪೂರ್ಣ ಶುಚಿ ವೈಕೃತ
ಪಾಹಿ ಅಂಜನ ಸರ್ಷಪನೆ ಖರ್ಪಟ: ಶ್ರದ್ಧಾಹ್ವ//23//
ಪಾಹಿ ಸಂಧ್ಯಾತ ವಿಜ್ಞಾನನೆ ಪಾಹಿ ಮಹ ವಿಜ್ಞಾನ ಕೀರ್ತನ
ಪಾಹಿ ಸಂಕೀರ್ಣಾಖ್ಯ ಕತ್ಥನ ಮಹಾಬುದ್ಧಿ ಜಯಾ
ಪಾಹಿ ಮಾಹತ್ತರ ಸುವೀರ್ಯನೆ ಪಾಹಿಮಾಂ ಮೇಧಾವಿ ಜಯಾಜಯ
ಪಾಹಿಮಾಂ ರಂತಿಮ್ನಮನು ಮಾಂ ಪಾಹಿ ಮಾಂ ಪಾಹಿ//24//
ಪಾಹಿ ಮೋದ ಪ್ರಮೋದ ಸಂತಸ ಪಾಹಿ ಆನಂದ ಸಂತುಷ್ಟನೆ
ಪಾಹಿಮಾಂ ಚಾರ್ವಾಂಗಚಾರು ಸುಬಾಹುಚಾರು ಪದ
ಪಾಹಿ ಪಾಹಿ ಸುಲೋಚನನೆ ಮಾಂ ಪಾಹಿ ಸಾರಸ್ವತ ಸುವೀರನೆ
ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ//25//
ಪಾಹಿಮಾಂ ಸರ್ವಜಿತ್ ಮಿತ್ರನೆ ಪಾಹಿ ಪಾಪ ವಿನಾಶಕನೆ
ಮಾಂ ಪಾಹಿ ಧರ್ಮವಿನೇತ ಶಾರದ ಓಜ ಸುತಪಸ್ವೀ
ಪಾಹಿಮಾಂ ತೇಜಸ್ವಿ ನಮೋ ಮಾಂ ಪಾಹಿ ದಾನ ಸುಶೀಲ
ನಮೋ ಮಾಂ ಪಾಹಿ ಯಜ್ಞ ಸುಕರ್ತ ಯಜ್ವೀ ಯಾಗ ವರ್ತಕನೆ//26//
ಪಾಹಿ ಪ್ರಾಣ ತ್ರಾಣ ಅಮರ್ಷಿ ಪಾಹಿಮಾಂ ಉಪದೇಷ್ಟ ತಾರಕ
ಪಾಹಿ ಕಾಲ ಕ್ರೀಡನ ಸುಕರ್ತಾ ಸುಕಾಲಜ್ಞ
ಪಾಹಿ ಕಾಲ ಸುಸೂಚಕನೆ ಮಾಂ ಪಾಹಿ ಕಲಿ ಸಂಹರ್ತಕಲಿ
ಮಾಂ ಪಾಹಿ ಕಾಲಿಶಾಮರೇತ ಸದಾರತ ಸುಬಲನೆ//27//
ಪಾಹಿ ಪಾಹಿ ಸಹೋ ಸದಾಕಪಿ ಪಾಹಿ ಗಮ್ಯ ಜ್ಞಾನ ದಶಕುಲ
ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ
ಪಾಹಿಮಾಂ ಮಂತವ್ಯಕವ್ಯನೆ ಪಾಹಿ ದ್ರಷ್ಟವ್ಯನೆ ಸರವ್ಯನೆ
ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ//28//
ಪಾಹಿ ಸೇವ್ಯ ಸುಭವ್ಯ ನಮೋ ಮಾಂ ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ
ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ
ಪಾಹಿ ಮಂ ಲಾತವ್ಯವಾಯುವೆ ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ
ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ//29//
ವಾಮನ ಪುರಾಣದಲಿ ಪೇಳಿದ ಈ ಮಹಾತ್ಮರ ಪರಮ ಮಂಗಳ ನಾಮಗಳ
ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ
ಶ್ರೀ ಮನೋರಮ ಅವರು ಬೇಡಿದ ಕಾಮಿತಾರ್ಥಗಳಿತ್ತು
ತನ್ನ ತ್ರಿಧಾಮದೊಳಗೆ ಅನುದಿನದಲಿಟ್ಟು ಆನಂದ ಪಡಿಸುವನು//30//
ಈ ಸಮೀರಗೆ ನೂರು ಜನ್ಮ ಮಹಾ ಸುಖ ಪ್ರಾರಬ್ಧ ಭೋಗ
ಪ್ರಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು
ಭೂಸುರನ ಒಪ್ಪಿಡಿ ಅವಲಿಗೆ ವಿಶೇಷ ಸೌಖ್ಯವನಿತ್ತ ದಾತನ
ದಾಸವರ್ಯನು ಲೋಕಪತಿಯೆನಿಸುವುದು ಅಚ್ಚರವೆ//31//
ದ್ವಿಶತ ಕಲ್ಪಗಳಲ್ಲಿ ಬಿಡದೆ ಈ ಪೆಸರಿನಿಂದಲಿ ಕರೆಸಿದನು
ತನ್ನೊಶಗ ಅಮರರೊಳಿದ್ದು ಮಾಡುವನು ಅವರ ಸಾಧನವ
ಅಸದುಪಾಸನೆಗೈವ ಕಲ್ಯಾದಿ ಅಸುರಪರ ಸಂಹರಿಸಿ
ತಾ ಪೊಂಬಸಿರ ಪದವೈದಿದನು ಗುರು ಪವಮಾನ ಸತಿಯೊಡನೆ//32//
ಅನಿಮಿಷರ ನಾಮದಲಿ ಕರೆಸುವ ಅನಿಲದೇವನು
ಒಂದು ಕಲ್ಪಕೆ ವನಜ ಸಂಭವನೆನಿಸಿ ಎಂಭತ್ತೇಳೂವರೆ ವರ್ಷ
ಗುಣತ್ರಯ ವರ್ಜಿತನ ಮಂಗಳ ಗುಣ ಕ್ರಿಯಾ ಸುರೂಪಂಗಳ
ಉಪಾಸನವು ಅವ್ಯಕ್ತಾದಿ ಪೃಥ್ವಿ ಅಂತರದಿರುತಿಹುದು//33//
ಮಹಿತ ಋಜುಗಣಕೆ ಒಂದೇ ಪರಮೋತ್ಸಾಹ ವಿವರ್ಜಿತವೆಂಬ ದೋಷವು
ವಿಹಿತವೆ ಸರಿ ಇದನು ಪೇಳ್ದಿರೆ ಮುಕ್ತ ಬ್ರಹ್ಮರಿಗೆ ಬಹುದು ಸಾಮ್ಯವು
ಜ್ಞಾನ ಭಕುತಿಯು ದ್ರುಹಿಣ ಪದ ಪರ್ಯಂತ ವೃದ್ಧಿಯು
ಬಹಿರುಪಾಸನೆ ಉಂಟು ಅನಂತರ ಬಿಂಬ ದರ್ಶನವು//34//
ಜ್ಞಾನರಹಿತ ಭಯತ್ವ ಪೇಳ್ವ ಪುರಾಣ ದೈತ್ಯರ ಮೋಹಕವು
ಚತುರಾನನಗೆ ಕೊಡುವದೆ ಮೋಹಾಜ್ಞಾನ ಭಯ ಶೋಕ
ಭಾನುಮಂಡಲ ಚಲಿಸಿದಂದದಿ ಕಾಣುವುದು ದೃಗ್ ದೋಷದಿಂದಲಿ
ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ//35//
ಕಮಲಸಂಭವ ಸರ್ವರೊಳಗುತ್ತಮನೆನಿಸುವನು ಎಲ್ಲ ಕಾಲದಿ
ವಿಮಲ ಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ
ಸಮಾಭ್ಯಧಿಕ ವಿವರ್ಜಿತನ ಗುಣ ರಮೆಯ ಮುಖದಿಂದರಿತು ನಿತ್ಯದಿ
ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬ ರೂಪವನು//36//
ಜ್ಞಾನ ಭಕ್ತಾದಿ ಅಖಿಳ ಗುಣ ಚತುರಾನನೊಳಗಿಪ್ಪಂತೆ
ಮುಖ್ಯಾ ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ ಕೊರತೆಯಾಗಿ
ನ್ಯೂನ ಋಜು ಗಣ ಜೀವರಲ್ಲಿ ಕ್ರಮೇಣ ವೃದ್ಧಿ ಜ್ಞಾನ ಭಕ್ತಿ
ಸಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಾಧಿಕ//37//
ಸೌರಿ ಸೂರ್ಯನ ತೆರದಿ ಬ್ರಹ್ಮಸಮೀರ ಗಾಯತ್ರೀ ಗಿರಿಗಳೊಳು
ತೋರುವುದು ಅಸ್ಪಷ್ಟ ರೂಪದಿ ಮುಕ್ತಿ ಪರ್ಯಂತ
ವಾರಿಜಾಸನ ವಾಯು ವಾಣೀ ಭಾರತಿಗಳಿಗೆ ಮಹಾ ಪ್ರಳಯದಿ ಬಾರದು
ಅಜ್ಞಾನಾದಿ ದೋಷವು ಹರಿ ಕೃಪಾ ಬಲದಿ//38//
ನೂರು ವರುಷ ಅನಂತರದಲಿ ಸರೋರುಹಾಸನ ತನ್ನ ಕಲ್ಪದಲಿ
ಆರು ಮುಕ್ತಿಯನು ಐದುವರೊ ಅವರವರ ಕರೆದೊಯ್ದು
ಶೌರಿ ಪುರುದೊಳಗಿಪ್ಪ ನದಿಯಲಿ ಕಾರುಣಿಕ ಸುಸ್ನಾನ ನಿಜ ಪರಿವಾರ ಸಹಿತದಿ ಮಾಡಿ
ಹರಿ ಉದರ ಪ್ರವೇಶಿಸುವ//39//
ವಾಸುದೇವನ ಉದರದಲಿ ಪ್ರವೇಶಗೈದ ಅನಂತರದಿ
ನಿರ್ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ
ಮೇಶನಿಂದ ಆಜ್ಞವ ಪಡೆದು ಅನಂತಾಸನ ಸೀತದ್ವೀಪ ಮೋಕ್ಷದಿ ವಾಸವಾಗಿ
ವಿಮುಕ್ತ ದುಃಖರು ಸಂಚರಿಸುತಿಹರು//40//
ಸತ್ವ ಸತ್ವ ಮಹಾ ಸುಸೂಕ್ಷಮು ಸತ್ವ ಸತ್ವಾತ್ಮಕ ಕಳೇವರ
ಸತ್ಯಲೋಕಾಧಿಪನು ಎನಿಪಗೆ ಅತ್ಯಲ್ಪವು ಎರಡು ಗುಣ
ಮುಕ್ತ ಭೋಗ್ಯವಿದಲ್ಲ ಅಜಾಂಡ ಉತ್ಪತ್ತಿ ಕಾರಣವಲ್ಲ
ಹರಿ ಪ್ರೀತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು//41//
ಪಾದ ನ್ಯೂನ ಶತಾಬ್ದ ಪರ್ಯಂತ ಓದಿ ಉಗ್ರತಪ ಅಹ್ವಯದಿ ಲವಣ ಉದಧಿಯೊಳಗೆ
ಕಲ್ಪದಶ ತಪವಿದ್ದ ಅನಂತರದಿ
ಸಾಧಿಸಿದ ಮಹದೇವ ಪದವ ಆರೈದು ನವ ಕಲ್ಪ ಅವಸಾನಕೆ
ಐದುವನು ಶೇಷನ ಪದವ ಪಾರ್ವತಿ ಸಹಿತನಾಗಿ//42//
ಇಂದ್ರ ಮನು ದಶ ಕಲ್ಪಗಳಲಿ ಸುನಂದ ನಾಮದಿ ಶ್ರವಣಗೈದು
ಮುಕುಂದನ ಅಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು
ನೊಂದು ಪೊಗೆಯೊಳು ಕೋಟಿ ವರುಷ ಪುರಂದರನದನುಂಡ ಅನಂತರ
ಪೊಂದಿದನು ನಿಜ ಲೋಕ ಸುರಪತಿ ಕಾಮನಿದರಂತೆ//43//
ಕರೆಸುವರು ಪೂರ್ವದಲಿ ಚಂದ್ರಾರ್ಕರು ಅತಿ ಶಾಂತ ಸುರೂಪ ನಾಮದಿ
ಎರಡೆರೆಡು ಮನು ಕಲ್ಪ ಶ್ರವಣಗೈದು
ಮನು ಕಲ್ಪ ವರ ತಪೋ ಬಲದಿಂದ ಅರ್ವಾಕ್ ಶಿರಗಳಾಗಿ ಈರೈದು ಸಾವಿರ ವರುಷ
ದುಃಖವನೀಗಿ ಕಾಂಬರು ಬಿಂಬ ರೂಪವನು//44//
ಸಾಧನಗಳ ಅಪರೋಕ್ಷ ಅನಂತರ ಐದುವರು ಮೋಕ್ಷವನು
ಶಿವ ಶಕ್ರಾದಿ ದಿವಿಜರು ಉಕ್ತ ಕ್ರಮದಿಂ ಕಲ್ಪ ಸಂಖ್ಯೆಯಲಿ
ಐದಲೆಗೆ ಐವತ್ತು ಉಪೇಂದ್ರ ಸಹೋದರನಿಗಿಪ್ಪತ್ತು
ದ್ವಿನವ ತ್ವಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು//45//
ಪ್ರವಹ ಮರುತಗೆ ಹನ್ನೆರಡು ಸೈಂಧವ ದಿವಾಕರ ಧರ್ಮರಿಗೆ ದಶ
ನವ ಸುಕಲ್ಪವು ಮಿತ್ರರಿಗೆ ಶೇಷ ಶತ ಜನರಿಗೆಂಟು
ಕವಿ ಸನಕ ಸುಸನಂದನ ಸನತ್ಕುವರ ಮುನಿಗಳಿಗೆ ಏಳು
ವರುಅನನ ಯುವತಿ ಪರ್ಜನ್ಯಾದಿ ಪುಷ್ಕರಗೆ ಆರು ಕಲ್ಪದಲಿ//46//
ಐದು ಕರ್ಮಜ ಸುರರಿಗೆ ಆಜಾನಾದಿಗಳಿಗೆ ಎರಡೆರೆಡು ಕಲ್ಪ
ಅರ್ಧಾಧಿಕ ತ್ರಯ ಗೋಪಿಕಾ ಸ್ತ್ರೀಯರಿಗೆ ಪಿತೃ ತ್ರಯವು
ಈ ದಿವೌಕಸ ಮನುಜ ಗಾಯಕರು ಐದುವರು ಎರಡೊಂದು ಕಲ್ಪ
ನರಾಧಿಪರಿಗೆ ಅರೆ ಕಲ್ಪದೊಳಗೆ ಅಪರೋಕ್ಷವು ಇರುತಿಹುದು//47//
ದೀಪಗಳ ಅನುಸರಿಸಿ ದೀಪ್ತಿಯು ವ್ಯಾಪಿಸಿ ಮಹಾತಿಮಿರ ಕಳೆದು
ಪರೋಪಕಾರವ ಮಾಳ್ಪ ತೆರದಂದದಲಿ ಪರಮಾತ್ಮ
ಆ ಪಯೋಜಾಸನನೊಳಗಿದ್ದು ಸ್ವರೂಪ ಶಕ್ತಿಯ ವ್ಯಕ್ತಿಗೈಸುತ
ತಾ ಪೊಳೆವನು ಅವರಂತೆ ಚೇಷ್ಟೆಯ ಮಾಡಿ ಮಾಡಿಸುವ//48//
ಸ್ವೋದರಸ್ಥಿತ ಪ್ರಾಣ ರುದ್ರ ಇಂದ್ರಾದಿ ಸುರರಿಗೆ ದೇಹಗಳ ಕೊಟ್ಟು
ಆದರದಿ ಅವರವರ ಸೇವೆಯ ಕೊಂಬನು ಅನವರತ
ಮೋದ ಬೋಧ ದಯಾಬ್ಧಿ ತನ್ನವರಾಧಿ ರೋಗವ ಕಳೆದು
ಮಹಾದಪರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ//49//
ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ ಸ್ಥಿತಿ ಲಯವ ಮಾಡುತಲೆ ಮೋದಿಪ
ಚತುರಮುಖ ಪವಮಾನರ ಅನ್ನವ ಮಾಡಿ ಭುಂಜಿಸುವ
ಘೃತವೆ ಮೃತ್ಯುಂಜಯನೆನಿಪ ದೇವತೆಗಳೆಲ್ಲ ಉಪಸೇಚನರು
ಶ್ರೀಪತಿಗೆ ಮೂರ್ಜಗವೆಲ್ಲ ಓದನ ಅತಿಥಿಯೆನಿಸಿಕೊಂಬ//50//
ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಲಿ
ನಿರ್ಭಯನು ತಾನುಂಡು ಉಣಿಸುವನು ಸರ್ವ ಜೀವರಿಗೆ
ನಿರ್ಬಲಾತಿ ಪರಮಾಣು ಜೀವಗೆ ಅಬ್ಬುವದೆ ಸ್ಥೂಲಾನ್ನ ಭೋಜನ
ಅರ್ಭಕರು ಪೇಳುವರು ಕೋವಿದರು ಇದನ ಒಡಂಬಡರು//51//
ಅಪಚಯಗಳಿಲ್ಲ ಉಂಡುದುದರಿಂದ ಉಪಚಯಗಳಿಲ್ಲ
ಅಮರಗಣದೊಳಗೆ ಉಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ
ಅಪರಿಮಿತ ಸನ್ಮಹಿಮ ಭಕ್ತರ ಅಪುನರಾವರ್ತರನು ಮಾಡುವ
ಕೃಪಣ ವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ//52//
ಬಿತ್ತಿ ಬೀಜವು ಭೂಮಿಯೊಳು ನೀರೆತ್ತಿ ಬೆಳೆಸಿದ ಬೆಳಸು ಪ್ರಾಂತಕೆ
ಕಿತ್ತಿ ಮೆಲುವಂದದಲಿ ಲಕ್ಷ್ಮೀ ರಮಣ ಲೋಕಗಳ ಮತ್ತೆ ಜೀವರ
ಕರ್ಮ ಕಾಲೋತ್ಪತ್ತಿ ಸ್ಥಿತಿ ಲಯ ಮಾಡುತಲಿ
ಸಮವರ್ತಿಯೆನಿಸುವ ಖೇದ ಮೋದಗಳು ಇಲ್ಲ ಅನವರತ//53//
ಶ್ವಸನ ರುದ್ರ ಇಂದ್ರ ಪ್ರಮುಖ ಸುಮನಸರೊಳಿದ್ದರು
ಕ್ಷುತ್ಪಿಪಾಸಗಳು ವಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ
ಅಸುರ ಪ್ರೇತ ಪಿಶಾಚಿಗಳ ಭಾದಿಸುತಲಿಪ್ಪವು
ದಿನದಿನದಿ ಮಾನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು//54//
ವಾಸುದೇವಗೆ ಸ್ವಪ್ನಸುಪ್ತಿಪಿಪಾಸ ಕ್ಷುತ್ ಭಯ ಶೋಕ ಮೋಹ ಆಯಾಸ ಅಪಸ್ಮೃತಿ
ಮಾತ್ಸರ್ಯ ಮದ ಪುಣ್ಯ ಪಾಪಾದಿ ದೋಷ ವರ್ಜಿತನೆಂದು
ಬ್ರಹ್ಮ ಸದಾಶಿವಾದಿ ಸಮಸ್ತ ದಿವಿಜರು ಉಪಾಸನೆಯಗೈದು
ಎಲ್ಲ ಕಾಲದಿ ಮುಕ್ತರಾಗಿಹರು//55//
ಪರಮ ಸೂಕ್ಷ್ಮ ಕ್ಷಣವು ಐದು ತ್ರುಟಿ ಕರೆಸುವದು ಐವತ್ತು ತ್ರುಟಿ ಲವ
ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರ
ಯುಗ ಗುರು ದಶ ಪ್ರಾಣರು ಪಳ ಹನ್ನೆರಡು ಬಾಣವು
ಘಟಿಕ ತ್ರಿಂಶತಿ ಇರುಳು ಹಗಲು ಅರವತ್ತು ಘಟಿಕಗಳು ಅಹೊರಾತ್ರಿಗಳು//56//
ಈ ದಿವಾರಾತ್ರಿಗಳು ಎರಡು ಹದಿನೈದು ಪಕ್ಷಗಳು
ಎರಡು ಮಾಸಗಳು ಆದಪವು ಮಾಸ ದ್ವಯವೆ ಋತು ಋತುತ್ರಯಗಳು ಅಯನ
ಐದುವದು ಅಯನದ್ವಯಾಬ್ದ ಕೃತಾದಿ ಯುಗಗಳು
ದೇವ ಮಾನದಿ ದ್ವಾದಶ ಸಹಸ್ರ ವರುಷಗಳು ಅದನು ಪೇಳುವೆನು//57//
ಚತುರ ಸಾವಿರದ ಎಂಟು ನೂರಿವು ಕೃತ ಯುಗಕೆ
ಸಹಸ್ರ ಸಲೆ ಷಟ್ ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು
ದಿತಿಜಪತಿ ಕಲಿಯುಗಕೆ ಸಾವಿರ ಶತ ದ್ವಯಗಳು ಕೂಡಿ
ಈ ದೇವತೆಗಳಿಗೆ ಹನ್ನೆರಡು ಸಾವಿರ ವಿಹವು ವರ್ಷಗಳು//58//
ಪ್ರಥಮ ಯುಗಕೆ ಏಳಧಿಕ ಅರೆ ವಿಂಶತಿ ಸುಲಕ್ಷಾಷ್ಟೋತ್ತರ
ಸುವಿಂಶತಿ ಸಹಸ್ರ ಮನುಷ್ಯ ಮಾನಾಬ್ದಗಳು
ಷಣ್ಣವತಿ ಮಿತ ಸಹಸ್ರದ ಲಕ್ಷ ದ್ವಾದಶ ದ್ವಿತೀಯ
ತೃತೀಯಕೆ ಎಂಟು ಲಕ್ಷದ ಚತುರ ಷಷ್ಠಿ ಸಹಸ್ರ ಕಾಲಿಗೆ ಇದರರ್ಧ ಚಿಂತಿಪುದು//59//
ಮೂರಧಿಕ ನಾಲ್ವತ್ತು ಲಕ್ಷದ ಆರು ಮೂರೆರೆಡಧಿಕ ಸಾವಿರ
ಈರೆರೆಡು ಯುಗ ವರುಷ ಸಂಖ್ಯೆಗೈಯಲು ಇನಿತಿಹುದೊ
ಸೂರಿ ಪೆಚ್ಚಿಸೆ ಸಾವಿರದ ನಾನೂರು ಮೂವತ್ತೆರೆಡು ಕೋಟಿ
ಸರೋರುಹಾಸನಗೆ ಇದು ದಿವಸವು ಎಂಬರು ವಿಪಶ್ಚಿತರು//60//
ಶತಧೃತಿಗೆ ಈ ದಿವಸಗಳು ತ್ರಿಂಶತಿಯು ಮಾಸ ದ್ವಾದಶಾಬ್ದವು
ಶತವು ಎರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿ ಲಯವು
ಶೃತಿ ಸ್ಮೃತಿಗಳು ಪೇಳುತಿಹವು ಅಚ್ಯುತಗೆ ನಿಮಿಷವಿದೆಂದು
ಸುಖ ಶಾಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು//61//
ಆದಿ ಮಧ್ಯಾಂತರಗಳಿಲ್ಲದ ಮಾಧವಗಿದು ಉಪಚಾರವೆಂದು
ಋಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ
ಮೋದಮಯನ ಅನುಗ್ರಹವ ಸಂಪಾದಿಸಿ ರಮಾ ಬ್ರಹ್ಮ ರುದ್ರ ಇಂದ್ರಾದಿಗಳು
ತಮ್ಮ ತಮ್ಮ ಪದವಿಯನು ಐದಿ ಸುಖಿಸುವರು//62//
ಈ ಕಥಾಮೃತ ಪಾನ ಸುಖ ಸುವಿವೇಕಿಗಳಿಗಲ್ಲದಲೆ
ವೈಷಿಕ ವ್ಯಾಕುಲ ಕುಚಿತ್ತರಿಗೆ ದೊರೆವುದಾವ ಕಾಲದಲಿ
ಲೋಕ ವಾರ್ತೆಯ ಬಿಟ್ಟು ಇದನವಲೋಕಿಸುತ ಮೋದಿಪರಿಗೊಲಿದು
ಕೃಪಾಕರ ಜಗನ್ನಾಥ ವಿಠಲ ಪೊರೆವನು ಅನುದಿನದಿ//63//