ಪಾದುಕೆಯ ಕಂಟಕ ಸಿಕತ ಮೊದ ಲಾದುವನುದಿನ ಬಾಧಿಸವು ಏ ಕಾದಶೇಂದ್ರಿಯಗಳಲಿ ಬಿಡಾದೆ ಹೃಷೀಕಪನ ಮೂರ್ತಿ | ಸಾದರದಿ ನೆನೆವವನು ಏನಪ ರಾಧಗಳು ಮಾಡಿದರು ಸರಿಯೆ ನಿ ರೋಧಗೈಸವು ಮೋಕ್ಷ ಮಾರ್ಗಕೆ ದುರಿತ ರಾಶಿಗಳು ||೧||
ಹಗಲ ನಂದಾದೀಪದಂದದಿ ನಿಗಮವೇದ್ಯನ ಪೂಜಿಸುತ ಕೈ ಮುಗಿದು ನಾಲ್ಕರೊಳೊಂದು ಪುರುಷಾರ್ಥವನು ಬೇಡದಲೆ | ಜಗದುದರ ಕೊಟ್ಟುದನು ಭುಂಜಿಸು ಮಗಮಡದಿ ಪ್ರಾಣೇಂದ್ರಿಯಾತ್ಮಾ ದಿಗಳು ಭಗವದಧೀನವೆಂದಡಿಗಡಿಗೆ ನೆನೆವುತಿರು ||೨||
ಅಸ್ವತಂತ್ರನು ಜೀವ ಹರಿಸ ರ್ವಸ್ವತಂತ್ರನು ನಿತ್ಯ ಸುಖಮಯ ನಿಸ್ವಬದ್ಧಾಲ್ಪಜ್ಞ ಶಕ್ತ ಸದುಃಖಿ ನಿರ್ವಿಣ್ಣ | ಗ್ರಸ್ವದೇಹಿ ಸನಾಥ ಜೀವನು ವಿಶ್ವವ್ಯಾಪಕ ಕರ್ತೃಬ್ರಹ್ಮ ಸ ರಸ್ವತೀಶಾದ್ಯಮರನುತ ಹರಿ ಎಂದು ಕೊಂಡಾಡು ||೩||
ಮತ್ತೆ ವಿಶ್ವಾದ್ಯೆಂಟು ರೂಪೊಂ ಭತ್ತರಿಂದಲಿ ಪೆಚ್ಚಿಸಲು ಎ ಪ್ಪತ್ತೆರಡು ರೂಪಗಳಹವು ಒಂದೊಂದೆ ಸಾಹಸ್ರ | ಪೃಥಪೃಥಕ್ ನಾಡಿಗಳೊಳಗೆ ಸ ರ್ವೋತ್ತಮನ ತಿಳಿಯೆಂದು ಭೀಷ್ಮನು ಬಿತ್ತರಿಸಿದನು ಧರ್ಮ ತನಯಗೆ ಶಾಂತಿ ಪರ್ವದಲಿ ||೪||
ಎಂಟು ಪ್ರಕೃತಿಗಳೊಳಗೆ ವಿಶ್ವಾ ದ್ಯೆಂಟು ರೂಪದಲಿದ್ದು ಭಕುತರ ಕಂಟಕವ ಪರಿಹರಿಸುತಲಿ ಪಾಲಿಸುವ ಪ್ರತಿದಿನದಿ | ನೆಂಟನಂದದಿ ಎಡಬಿಡದೆ ವೈ ಕುಂಠರಮಣ ತನ್ನವರ ನಿ ಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ ||೫||
ಸ್ವರಮಣನು ಶಕ್ತ್ಯಾದಿ ರೂಪದಿ ಕರಣ ಮಾನಿಗಳೊಳಗೆ ನೆಲೆಸಿ ದ್ದರ ವಿದೂರನು ಸ್ಠೂಲ ವಿಷಯಗಳುಂಡುಣಿಪ ನಿತ್ಯ | ಅರಿಯದಲೆ ತಾನುಂಬೆನೆಂಬುವ ನಿರಯಗಳನುಂಬುವನು ನಿಶ್ಚಯ ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು ||೬||
ಸುರುಚಿ ರುಚಿರ ಸುಗಂಧ ಶುಚಿಯೆಂ ದಿರುತಿಹನು ಷಡ್ರಸಗಳೊಳು ಹ ನ್ನೆರಡು ರೂಪದಲಿಪ್ಪ ಶ್ರೀಭೂದುರ್ಗೆಯರ ಸಹಿತ ಸ್ವರಮಣನು ಎಪ್ಪತ್ತೆರಡು ಸಾ ವಿರ ಸಮೀರನ ರೂಪದೊಳಗಿ ದ್ದುರು ಪರಾಕ್ರಮ ಕರ್ತೃ ಎನಿಸುವ ನಾಡಿಗಳೊಳಿದ್ದು ||೭||
ನಿನ್ನ ಸರ್ವತ್ರದಲಿ ನೆನೆವವ ರನ್ಯ ಕರ್ಮವ ಮಾಡಿದರು ಸರಿ ಪುಣ್ಯಕರ್ಮಗಳೆನಿಸುವುವು ಸಂದೇಹವಿನಿತಿಲ್ಲ | ನಿನ್ನ ಸ್ಮರಿಸದೆ ಸ್ನಾನ ಜಪ ಹೋ ಮಾನ್ನ ವಸ್ತ್ರ ಗಜಾಶ್ವ ಭೂಧನ ಧಾನ್ಯ ಮೊದಲಾದಖಿಳ ಧರ್ಮವ ಮಾಡಿ ಫಲವೇನು? ||೮||
ಇಷ್ಟಭೋಗ್ಯ ಪದಾರ್ಥದೊಳು ಶಿಪಿ ವಿಷ್ಟನಾಮದಿ ಸರ್ವ ಜೀವರ ತುಷ್ಟಿಪಡಿಸುವ ದಿನದಿನದಿ ಸಂತುಷ್ಟ ತಾನಾಗಿ | ಕೋಷ್ಟದೊಳು ನೆಲೆಸಿದ್ದು ರಸಮಯ ಪುಷ್ಟಿ ಐದಿಸುತಿಂದ್ರಿಯಗಳೊಳು ಪ್ರೇಷ್ಟನಾಗಿದ್ದೆಲ್ಲ ವಿಷಯಗಳುಂಬ ತಿಳಿಸದಲೆ ||೯||
ಕಾರಕಾಹ್ವಯ ಜ್ಞಾನಕರ್ಮ ಪ್ರೇರಕನು ತಾನಾಗಿ ಕ್ರಿಯೆಗಳ ತೋರುವನು ಕರ್ಮೇಂದ್ರಿಯಾಧಿಪರೊಳಗೆ ನೆಲೆಸಿದ್ದು | ಮೂರು ಗುಣಮಯ ದ್ರವ್ಯಗತದಾ ಕಾರ ತನ್ನಾಮದಲಿ ಕರೆಸುವ ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು ||೧೦||
ದ್ರವ್ಯನೆನಿಸುವ ಭೂತಮಾತ್ರದೊ ಳವ್ಯಯನು ಕರ್ಮೇಂದ್ರಿಯಗಳೊಳು ಭವ್ಯ ಸತ್ಕ್ರಿಯನೆನಿಸಿ ಸುಖಮಯ ಸೇವ್ಯ ಸೇವಕನೆನಿಸಿ ಜಗದೊಳು ಹವ್ಯ ವಾಹನನರಣಿಯೊಳಗಿಪ್ಪಂತೆ ಇರುತಿಪ್ಪ ||೧೧||
ಮನವೆ ಮೊದಲಾದಿಂದ್ರಿಯಗಳೊಳ ಗನಿಲದೇವನು ಶುಚಿಯೆನಿಸಿಕೊಂ ಡನವರತ ನೆಲೆಸಿಪ್ಪ ಶುಚಿಷದ್ಧೋತನೆಂದೆನಿಸಿ | ತನುವಿನೊಳಗಿಪ್ಪನು ಸದಾ ವಾ ಮನಹೃಷೀಕೇಶಾಖ್ಯ ರೂಪದ ಲನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ ||೧೨||
ಪ್ರೇರಕ ಪ್ರೇರ್ಯರೊಳು ಪ್ರೇರ್ಯ ಪ್ರೇರಕನು ತಾನಾಗಿ ಹರಿ ನಿ ರ್ವೈರದಿಂದ ಪ್ರವರ್ತಿಸುವ ತನ್ನಾಮರೂಪದಲಿ | ತೋರಿ ಕೊಳ್ಳದೆ ಸರ್ವರೊಳು ಭಾ ಗೀರಥೀ ಜನಕನು ಸಕಲ ವ್ಯಾ ಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ ||೧೩||
ಹರಿಯೆ ಮುಖ್ಯ ನಿಯಾಮಕನು ಎಂ ದರಿದು ಪುಣ್ಯಾ ಪುಣ್ಯ ಹರುಷಾ ಮರುಷ ಲಾಭಾ ಲಾಭ ಸುಖ ದುಃಖಾದಿ ದ್ವಂದ್ವಗಳ | ನಿರುತ ಅವನಂಘ್ರಿಗೆ ಸಮರ್ಪಿಸಿ ನರಕ ಭೂ ಸ್ವರ್ಗಾಪವರ್ಗದಿ ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು ||೧೪||
ಮಾಣವಕ ತತ್ಫಲಗಳನುಸಂ ಧಾನವಿಲ್ಲದೆ ಕರ್ಮಗಳ ಸ್ವೇ ಚ್ಛ್ಹಾನುಸಾರದಿ ಮಾಡಿ ಮೋದಿಸುವಂತೆ ಪ್ರತಿದಿನದಿ | ಜ್ಞಾನ ಪೂರ್ವಕ ವಿಧಿ ನಿಷೇಧಗ ಳೇನು ನೋಡದೆ ಮಾಡು ಕರ್ಮಪ್ರ ಧಾನ ಪುರುಷೇಶನಲಿ ಭಕುತಿಯ ಬೇಡು ಕೊಂಡಾಡು ||೧೫||
ಹಾನಿವೃದ್ಧಿ ಜಯಾಪಜಯಗಳು ಏನು ಕೊಟ್ಟುದ ಭುಂಜಿಸುತ ಲ ಕ್ಷ್ಮೀನಿವಾಸನ ಕರುಣವನೆ ಸಂಪಾದಿಸನುದಿನದಿ | ಜ್ಞಾನಸುಖಮಯ ತನ್ನವರ ಪರ ಮಾನುರಾಗದಿ ಸಂತಯಿಪ ದೇ ಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಳು ||೧೬||
ಆ ಪರಮ ಸಕಲೇಂದ್ರಿಯಗಳೊಳು ವ್ಯಾಪಕನು ತಾನಾಗಿ ವಿಷಯವ ತಾ ಪರಿಗ್ರಹಿಸುವನು ತಿಳಿಸದೆ ಸರ್ವ ಜೀವರೊಳು | ಪಾಪರಹಿತ ಪುರಾಣ ಪುರುಷ ಸ ಮೀಪದಲಿ ನೆಲೆಸಿದ್ದು ನಾನಾ ರೂಪಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ಪ ||೧೭||
ಖೇಚರರು ಭೂಚರರು ವಾರಿ ನಿ ಶಾಚರರೊಳಗಿದ್ದವರ ಕರ್ಮಗ ಳಾಚರಿಸುವನು ಘನ ಮಹಿಮ ಪರಮಾಲ್ಪನೋಪಾದಿ | ಗೋಚರಿಸನು ಬಹು ಪ್ರಕಾರಾ ಲೋಚನೆಯ ಮಾಡಿದರು ಮನಸಿಗೆ ಕೀಚಕಾರಿ ಪ್ರಿಯ ಕವಿಜನಗೇಯ ಮಹರಾಯ ||೧೮||
ಒಂದೆ ಗೋತ್ರ ಪ್ರವರ ಸಂಧ್ಯಾ ವಂದನೆಗಳನು ಮಾಡಿ ಪ್ರಾಂತಕೆ ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬಂತೆ | ಒಂದೆ ದೇಹದೊಳಿದ್ದು ನಿಂದ್ಯಾ ನಿಂದ್ಯಕರ್ಮವ ಮಾಡಿ ಮಾಡಿಸಿ ಇಂದಿರೇಶನು ಸರ್ವ ಜೀವರೊಳೀಶನೆನಿಸುವನು ||೧೯||
ಕಿಟ್ಟಿಗಟ್ಟದ ಲೋಹ ಪಾವಕ ಸುಟ್ಟುವಿಂಗಡ ಮಾಡುವಂತೆ ಘ ರಟ್ಟ ವ್ರೀಹಿಗಳೊಳಿಪ್ಪ ತಂಡುಲ ಕಡೆಗೆ ತೆಗೆವಂತೆ | ವಿಠ್ಠಲಾ ಎಂದೊಮ್ಮೆ ಮೈಮರೆ ದಟ್ಟಹಾಸದಿ ಕರೆಯೆ ದುರಿತಗ ಳಟ್ಟುಳಿಯ ಬಿಡಿಸಿ ಅವನ ತನ್ನೊಳಗಿಟ್ಟು ಸಲಹುವನು ||೨೦||
ಜಲಧಿಯೊಳು ಸ್ವೇಚ್ಛ್ಹಾನುಸಾರದಿ ಜಲಚರ ಪ್ರಾಣಿಗಳು ತತ್ತತ್ ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ | ನಳಿನನಾಭನೊಳಬ್ಜಭವ ಮು ಪ್ಪೊಳಲುರಿಗ ಮೈಗಣ್ಣ ಮೊದಲಾ ದ್ ಹಲವು ಜೀವರ ಗಣವು ವರ್ತಿಸುತಿಹುದು ನಿತ್ಯದಲಿ ||೨೧||
ವಾಸುದೇವನು ಒಳಹೊರಗೆ ಆ ಭಾಸಕನು ತಾನಾಗಿ ಬಿಂಬ ಪ್ರ ಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ | ಈ ಸಮನ್ವಯವೆಂದೆನಿಪ ಸದು ಪಾಸನೆಯಗೈವವನು ಮೋಕ್ಷಾ ನ್ವೇಷಿಗಳೊಳುತ್ತಮನು ಜೀವನ್ಮುಕ್ತನವನಿಯೊಳು ||೨೨||
ಭೋಗ್ಯ ವಸ್ತುಗಳೊಳಗೆ ಯೋಗ್ಯಾ ಯೋಗ್ಯ ರಸಗಳನರಿತು ಯೋಗ್ಯಾ ಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸನುದಿನದಿ | ಭಾಗ್ಯ ಬಡತನ ಬರಲು ಹಿಗ್ಗದೆ ಕುಗ್ಗಿ ಸೊರಗದೆ ಸದ್ಭಕುತಿ ವೈ ರಾಗ್ಯ ಜ್ಞಾನವ ಬೇಡು ನೀ ನಿರ್ಭಾಗ್ಯನೆನಿಸದಲೆ ||೨೩||
ಸ್ಥಳ ಜಲಾದ್ರಿಗಳಲ್ಲಿ ಜನಿಸುವ ಫಲ ಸುಪುಷ್ಪಜ ಗಂಧರಸ ಶ್ರೀ ತುಳಸಿ ಮೊದಲಾದಖಿಳ ಪೂಜಾ ಸಾಧನ ಪದಾರ್ಥ | ಹಲವು ಬಗೆಯಿಂದರ್ಪಿಸುತ ಬಾಂ ಬೊಳೆಯ ಜನಕಗೆ ನಿತ್ಯ ನಿತ್ಯದಿ ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು ||೨೪||
ಶ್ರೀಕರನ ಸರ್ವತ್ರದಲಿಯವ ಲೋಕಿಸುತ ಗುಣರೂಪಕ್ರಿಯೆ ವ್ಯತಿ ರೇಕ ತಿಳಿಯದಲನ್ವಯಿಸು ಬಿಂಬನಲಿ ಮರೆಯದಲೆ | ಸ್ವೀಕರಿಸುವನು ಕರುಣದಿಂದ ನಿರಾಕರಿಸದೆ ಕೃಪಾಳು ಭಕ್ತರ ಶೋಕಗಳ ಪರಿಹರಿಸಿ ಸುಖವಿತ್ತನವರತ ಪೊರೆವ ||೨೫||
ಇನಿತು ವ್ಯತಿಕೇಕಾನ್ವಯಗಳೆಂ ದೆನಿಪ ಪೂಜಾವಿಧಿಗಳನೆ ತಿಳಿ ದನಿಮಿಷೇಶನ ತೃಪ್ತಿ ಪಡಿಸುತಲಿರು ನಿರಂತರದಿ | ಘನ ಮಹಿಮ ಕೈಗೊಂಡು ಸ್ಥಿತಿಮೃತಿ ಜನುಮಗಳ ಪರಿಹರಿಸಿ ಸೇವಕ ಜನರೊಳಿಟ್ಟಾನಂದ ಪಡಿಸುವ ಭಕ್ತವತ್ಸಲನು ||೨೬||
ಜಲಜನಾಭನಿಗೆರಡು ಪ್ರತಿಮೆಗ ಳಿಳೆಯೊಳಗೆ ಜಡ ಚೇತನಾತ್ಮಕ ಚಲದೊಳಿರ್ಬಗೆ ಸ್ತ್ರೀಪುರುಷ ಭೇದದಲಿ ಜಡದೊಳಗೆ | ತಿಳಿವುದಾಹಿತ ಪ್ರತಿಮೆ ಸಹಜಾ ಚಲಗಳೆಂದೀರ್ಬಗೆ ಪ್ರತೀಕದಿ ಲಲಿತ ಪಂಚತ್ರಯ ಸುಗೋಳಕವರಿತು ಭಜಿಸುತಿರೆ ||೨೭||
ವಾರಿಜಾಸನ ವಾಯು ವೀಂದ್ರ ಉ ಮಾರಮಣ ನಾಕೇಶ ಸ್ಮರಾಹಂ ಕಾರಿಕ ಪ್ರಾಣಾದಿಗಳು ಪುರುಷರ ಕಳೇವರದಿ | ತೋರಿಕೊಳದನಿರುದ್ಧ ದೋಷವಿ ದೂರ ನಾರಾಯಣನ ರೂಪ ಶ ರೀರಮಾನಿಗಳಾಗಿ ಭಜಿಸುತ ಸುಖವ ಕೊಡುತಿಹರು ||೨೮||
ಸಿರಿ ಸರಸ್ವತಿ ಭಾರತಿ ಸೌ ಪರಣಿ ವಾರುಣಿ ಪಾರ್ವತೀ ಮುಖ ರಿರುತಿಹರು ಸ್ತ್ರೀಯರೊಳಗಭಿಮಾನಿಗಳು ತಾವೆನಿಸಿ | ಅರುಣ ವರ್ಣ ನಿಭಾಂಗ ಶ್ರೀ ಸಂ ಕರುಷಣ ಪ್ರದ್ಯುಮ್ನ ರೂಪಗ ಳಿರುಳು ಹಗಲು ಉಪಾಸನವ ಗೈವುತಲೆ ಮೋದಿಪರು ||೨೯||
ಕೃತಪ್ರತೀಕದಿ ಟಂಕಿಭಾರ್ಗವ ಹುತವಹಾನಿಲ ಮುಖ್ಯ ದಿವಿಜರು ತುತಿಸಿಕೊಳುತಭಿಮಾನಿಗಳು ತಾವಾಗಿ ನೆಲೆಸಿದ್ದು | ಪ್ರತಿದಿವಸ ಶ್ರೀ ತುಳಸಿ ಗಂಧಾ ಕ್ಷತೆ ಕುಸುಮ ಫಲ ದೀಪ ಪಂಚಾ ಮೃತದಿ ಪೂಜಿಪ ಭಕುತರಿಗೆ ಕೊಡುತಿಹರು ಪುರುಷಾರ್ಥ ||೩೦||
ನಗಗಳಭಿಮಾನಿಗಳೆನಿಪ ಸುರ ರುಗಳು ಸಹಜಾಚಲಗಳಿಗೆ ಮಾ ನಿಗಳೆನಿಸಿ ಶ್ರೀವಾಸುದೇನವನ ಪೂಜಿಸುತಲಿಹರು | ಸ್ವಗತಭೇದ ವಿವರ್ಜಿತನ ನಾ ಲ್ಬಗೆ ಪ್ರತೀಕದಿ ತಿಳಿದು ಪೂಜಿಸೆ ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ಪ ||೩೧||
ಆವಕ್ಷೇತ್ರಕೆ ಪೋದರೇನಿ ನ್ನಾವ ತೀರ್ಥದಿ ಮುಳುಗಲೇನಿ ನ್ನಾವ ಜಪತಪ ಹೋಮ ದಾನವ ಮಾಡಿ ಫಲವೇನು | ಶ್ರೀವರ ಜಗನ್ನಾಥವಿಠಲನ ಈ ವಿಧದಿ ಜಂಗಮ ಸ್ಥಾವರ ಜೀವರೊಳು ಪರಿಪೂರ್ಣನೆಂದರಿಯದಿಹ ಮಾನವರು ||೩೨||