ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಲಿವಾಗ
ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ
ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ
ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು//1//
ಸರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ
ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು
ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ
ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ//2//
ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ
ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ
ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು
ಒಂದರೆಕ್ಷಣ ಬಿಟ್ಟಗಲನು ಅವರ//3//
ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು
ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ
ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ
ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು//4//
ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ
ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ
ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ
ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ//5//
ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ
ಪೇಳಿ ಕೇಳಿದರೇನು ದಿನದಿನದಿ
ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು
ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು//6//
ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ
ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ
ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು
ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು//7//
ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ
ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು
ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು
ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು//8//
ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ
ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ
ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ
ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ//9//
ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ
ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು
ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ
ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ//10//
ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು
ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು
ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ
ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ//11//
ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ
ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ
ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ
ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ//12//
ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು
ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ
ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು
ಇತರ ಆಲೋಚನೆಯ ಬಿಟ್ಟು//13//
ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ
ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ
ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು
ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ//14//
ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ
ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು
ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ
ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ//15//
ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ
ತ್ರಿಗುಣದಿ ಬದ್ಧರನು ಮಾಡಿ
ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ
ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ//16//
ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ
ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ
ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ
ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ//17//
ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ
ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ
ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ
ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//18//
ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು
ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ
ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ
ಚರಾಚರಾತ್ಮಕ ಲೋಕಗಳ ಪೊರೆವ//19//
ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು
ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು
ಮದ್ದಾನೆಯಂದದಿ ಸಂಚರಿಸು
ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ//20//
ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ
ವಿರಾಜಿಸುವ ಹರಿ ಮೂರ್ತಿಯನೆ ಭಜಿಸು
ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ
ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ//21//
ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ
ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು
ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು
ತನ್ನಾಮ ರೂಪದಿ ಪ್ರಜರ ಸಂತೈಪ//22//
ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ
ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ
ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ
ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ//23//
ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ
ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ
ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು
ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು//24//
ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ
ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ
ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ
ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ//25//
ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು
ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು
ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ
ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ//26//
ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ
ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ
ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ
ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು//27//
ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ
ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ
ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ
ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು//28//
ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ
ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು
ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ
ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು//29//
ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ
ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ
ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ
ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು//30//
ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ
ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ
ಮಾತುಳಾಂತಕ ಜಾರ ಹೇ ನವನೀತ ಚೋರನೆನಲು
ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು//31//
ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು
ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ
ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ
ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ//32//
ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು
ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು
ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ
ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ//33//