ಹರಿಕಥಾಮೃತಸಾರ/ಭೋಜನ ರಸ ವಿಭಾಗ ಸಂಧಿ

ವನಜಜಾಂಡದೊಳುಳ್ಳಖಿಳ ಚೇ

ತನರು ಭುಂಜಿಪ ಚತುರವಿಧ ಭೋ

ಜನ ಪದಾರ್ಥದಿ ಚತುರ ವಿಧ ರಸರೂಪ ತಾನಾಗಿ |

ಮನಕೆ ಬಂದುದನುಂಡುಣಿಸಿ ಸಂ

ಹನನಕುಪಚಯ ಕರಣಕಾನಂ

ದನಿಮಿಷರಿಗಾತ್ಮಪ್ರದರ್ಶನ ಸುಖವನೀವ ಹರಿ || ೧ ||


ನೀಡದಂದದಲಿಪ್ಪ ಲಿಂಗಕೆ

ಷೋಡಶಾತ್ಮಕ ರಸವಿಭಾಗವ

ಮಾಡಿ ಷೋಡಶ ಕಳೆಗಳಿಗೆ ಉಪಚಯಗಳನೆ ಕೊಡುತ |

ಕ್ರೋಢ ಎಪ್ಪತ್ತೆರಡು ಸಾವಿರ

ನಾಡಿಗತದೇವತೆಗಳೊಳಗಿ

ದ್ದಾಡುತಾನಂದಾತ್ಮ ಛರಿಸುವ ಲೋಕದೊಳು ತಾನು || ೨ ||


ವಾರಿವಾಚ್ಯನು ವಾರಿಯೊಳಗಿ

ದ್ದಾರು ರಸವೆಂದನಿಸಿ ಮೂವ

ತ್ತಾರು ಸಾವಿರ ಸ್ತ್ರೀ ಪುರುಷನಾಡಿಯಲಿ ತದ್ರೂಪ |

ಧಾರಕನು ತಾನಾಗಿ ಸರ್ವಶ

ರೀರದೊಳಹಶ್ಚ ರಾತ್ರಿಯಲಿ ವಿ

ಹಾರ ಮಾಳ್ಪನು ಬೃಹತಿಯೆಂಬ ಸುನಾಮದಿಂದ ಕರೆಸಿ || ೩ ||


ಆರು ರಸ ಸತ್ವಾದಿ ಭೇದದಿ

ಆರು ಮೂರಾಗಿಹವು ಸಾರಾ

ಸಾರ ನೀತಾನೀತ ಖಂಡಾಖಂಡ ಚಿತ್ಪ್ರಚುರ |

ಈರಧಿಕ ಎಪ್ಪತ್ತು ಸಾವಿರ

ಮಾರಮಣನ ರಸಾಖ್ಯರೂಪ ಶ

ರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಸುವುದು || ೪ ||


ಕ್ಷೀರಗತ ರಸ ರೂಪಗಳು ಮು

ನ್ನೂರು ಮೇಲೈವತ್ತ ನಾಲಕು

ಛಾರು ಘೃತಗತ ರೂಪಗಳು ಇಪ್ಪತ್ತರೊಂಭತ್ತು |

ಸಾರಗುಡದೊಳೆಗೈದು ಸಾವಿರ

ನೂರವೊಂದು ಸುರೂಪ ದ್ವಿ ಸಹ

ಸ್ರಾರೆರಡು ಶತ ಪಂಛಪವಿಂಶತಿ ರೂಪ ಫಲಗಳಲಿ || ೫ ||


ವಿಶದ ಸ್ಥಿರ ತೀಕ್ಷ್ಣವು ನಿರಹರ

ರಸಗಳೊಳು ಮೂರೈದು ಸಾವಿರ

ತ್ರಿಶತನವರೂಪಗಳ ಛಿಂತಿಸಿ ಭುಂಜಿಪುದು ವಿಷಯ |

ಶ್ವಶನ ತತ್ತ್ವೇಶರೊಳಗಿದ್ದೀ

ಪೆಸರಿನಿಂದಲಿ ಕರೆಸುವನು ಧೇ

ನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಭುಧರಿಗೆ || ೬ ||


ಕಪಿಲನರಹರಿ ಭಾರ್ಗವ ತ್ರಯ

ವಪುಷ ನೇತ್ರದಿ ನಾಸಿಕಾಸ್ಯದಿ

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯ |

ತ್ರಿಪದಿಪಾದ್ಯ ಹಯಾಸ್ಯ ವಾಚ್ಯದೊ

ಳಪರಿಮಿತ ಸುಖಪೂರ್ಣ ಸಂತತ

ಕೃಪಣರೊಳಗಿದ್ದವರವರ ರಸ ಸ್ವೀಕರಿಸಿ ಕೊಡುವ || ೭ ||


ನಿರುಪಮಾನಂದಾತ್ಮ ಹರಿ ಸಂ

ಕರುಷಣ ಪ್ರದ್ಯುಮ್ನರೂಪದಿ

ಇರುತಿಹನು ಭೋಕ್ತೃಗಳೊಳಗೆ ತಚ್ಛಕ್ತಿದನು ಎನಿಸಿ |

ಕರೆಸುವನು ನಾರಾಯಣನಿರು

ದ್ಧೆರಡು ನಾಮದಿ ಭೋಜ್ಯವಸ್ತುಗ

ನಿರತ ತರ್ಪಕನಾಗಿ ತೃಪ್ತಿಯನೀವ ಚೇತನಕೆ || ೮ ||


ವಾಸುದೇವನು ಒಳಹೊರಗೆ ಅವ

ಕಾಶಕೊಡುವ ನಭಸ್ಥನಾಗಿ ರ

ಮಾ ಸಮೇತ ವಿಹಾರಮಾಳ್ಪನು ಪಂಚರೂಪದಲಿ |

ಆ ಸರೋರುಹ ಸಂಭವಾಭವ

ವಾಸವಾದ್ಯಮರಾದಿ ಚೇತನ

ರಾಶಿಯೊಳಗಿಹನೆಂದು ಅರಿತವನವನೆಕೋವಿದನು || ೯ ||


ವಾಸುದೇವನು ಅನ್ನದೊಳು ನಾ

ನಾ ಸುಭಕ್ಷ್ಯದಿ ಸಂಕರ್ಷಣ ಕೃ

ತೀಶ ಪರಮಾನ್ನದೊಳು ಘೃತಕೊಳಗಿಪ್ಪನನಿರುದ್ಧ |

ಆ ಸುಪರ್ಣಾಂಸಗನು ಸೂಪದಿ

ವಾಸವಾನುಜ ಶಾಕದೊಳು ಮೂ

ಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು || ೧೦ ||


ಅಗಣಿತಾತ್ಮ ಸುಭೋಜನ ಪದಾ

ರ್ಥಗಳ ಒಳಗೆ ಅಖಂಡವಾದೊಂ

ದಗಳಿನೊಳನಂತಾಂಶದಿಂದಲಿ ಖಂಡನೆಂದೆನಿಸಿ |

ಜಗದಿ ಜೀವರ ತೃಪ್ತಿ ಪಡಿಸುವ

ಸ್ವಗತ ಭೇದ ವಿವರ್ಜಿತನ ಇ

ರ್ಬಗೆಯ ರೂಪನರಿತು ಭುಂಜಿಸಿ ಅರ್ಪಿಸುವನಡಿಗೆ || ೧೧ ||


ಈ ಪರಿಯಲರಿತುಂಬ ನರ ನಿ

ತ್ಯೋಪವಾಸಿ ನಿರಾಮಯನು ನಿ

ಷ್ಪಾಪಿ ನಿತ್ಯಮಹಾಸುಯಜ್ಞಗಳಾಚರಿಸಿದವನು |

ಪೋಪುದಿಪ್ಪುದು ಬಪ್ಪುದೆಲ್ಲ ರ

ಮಾಪತಿಗಧಿಷ್ಠಾನವೆನಲು ಕೃ

ಪಾಪಯೋನಿಧಿ ಮಾರನಾಲಿಸುವನು ಜನನಿಯಂತೆ || ೧೨ ||


ಆರೆರಡು ಸಾವಿರದ ಮೇಲಿ

ನ್ನೂರ ಐವತ್ತೊಂದು ರೂಪದಿ

ಸಾರಭೋಕ್ತನಿರುದ್ಧ ದೇವನು ಅನ್ನಮಯನೆನಿಪ |

ಮೂರೆರಡುವರೆ ಸಾವಿರದ ಮೇಲ್

ಮೂರಧಿಕ ನಾಲ್ವತ್ತು ರೂಪದಿ

ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ || ೧೩ ||


ಎರಡು ಕೋಶಗಳೊಳಹೊರಗೆ ಸಂ

ಕರುಷಣೈದು ಸುಲಕ್ಷದರುವ

ತ್ತೆರಡು ಸಾವಿರ ದೇಳಧಿಕ ಶತರೂಪಳ ಧರಿದಿ |

ದರವಿದೂರನು ಈರೆರಡು ಸಾ

ವಿರದ ಮುನ್ನೂರಾದ ಮೇಲ್ನಾಲ್ಕಧಿಕ ಎಪ್ಪತ್ತು || ೧೪ ||


ರೂಪದಿಂದ ವಿಜ್ಞಾನ ಮಯನೆಂ

ಬೀ ಪೆಸರಿನಿಂ ವಾಸುದೇವನು

ವ್ಯಾಪಿಸಿಹ ಮಹದಾದಿ ತತ್ವದ ತತ್ಪತಿಗಳೊಳಗೆ |

ಈ ಪುರುಷನಾಮಕನ ಶುಭ ಸ್ವೇ

ದಾಪಳೆನಿಸಿ ರಮಾಂಬ ಆ ಬ್ರ

ಹ್ಮಾಪರೋಕ್ಷಿಗಳಾದವರ ಲಿಂಗಾಂಗ ಕೆಡಿಸುವಳು || ೧೫ ||


ಐದುಸಾವಿರ ನೂರ ಇಪ್ಪ

ತ್ತೈದು ನಾರಾಯಣನ ರೂಪವ

ನಾಧರಿಕೊಂಡನುದಿನದಲಾನಂದಮಯನೆನಿಪ |

ಐದು ಲಕ್ಷದ ಮೇಲೆ ಎಂಭ

ತ್ತೈದು ಸಾವಿರ ನಾಲ್ಕು ಶತಗಳ

ಐದು ಕೋಶಾತ್ಮಕ ವಿರಿಂಚಾಂಡದೊಳು ತುಂಬಿಹನು || ೧೬ ||


ನೂರವೊಂದು ಸುರೂಪದಿಂ ಶಾಂ

ತೀರಮಣ ತಾನನ್ನನೆನಿಪೈ

ನೂರ ಮೇಲ್ಮೂರಧಿಕದಶ ಪ್ರಾಣಾಖ್ಯ ಪ್ರದ್ಯುಮ್ನ |

ತೋರುತಿಹನೈವತ್ತ ಐದು ವಿ

ಕಾರಮನದೊಳು ಸಂಕುರಷಣೈ

ನೂರು ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ || ೧೭ ||


ಮೂರು ಸಾವಿರದರ್ಧಶತ ಮೇ

ಲೀರಧಿಕರೂಪಗಳ ಧರಿಸಿ ಶ

ರೀರ ದೊಳಗಾನಂದಮಯ ನಾರಾಯಣಾಹ್ವಯನು |

ಈರೆರಡುಸಾವಿರದ ಮೇಲ್ಮು

ನ್ನೂರು ಐದು ಸುರೂಪದಿಂದಲಿ

ಭಾರತೀಶನೊಳಿಪ್ಪ ನವನೀತಸ್ಥ ಘೃತದಂತೆ || ೧೮ ||


ಮೂರಧಿಕ ಐವತ್ತು ಪ್ರಾಣ ಶ

ರೀರದೊಳಗನಿರುದ್ಧನಿಪ್ಪೈ

ನೂರು ಹನ್ನೊಂದಧಿಕಪಾನನೊಳಿಪ್ಪ ಪ್ರದ್ಯುಮ್ನ |

ಮೂರನೆಯ ವ್ಯಾನನೊಳಗೈದರೆ

ನೂರು ರೂಪದಿ ಸಂಕರುಷಣೈ

ನೂರುಮೂವತ್ತೈದುದಾನನೊಳಿಪ್ಪ ಮಾಯೇಶ || ೧೯ ||


ಮೂಲನಾರಾಯಣನು ಐವ

ತ್ತೇಳಧಿಕ ಐನೂರು ರೂಪವ

ತಾಳಿ ಸರ್ವತ್ರದಿ ಸಮಾನನೊಳಿಪ್ಪ ಸರ್ವೇಶ |

ಲೀಲೆಗೈವನು ಸಾವಿರದ ಮೇ

ಲೇಳು ನೂರ್ಹನ್ನೊಂದು ರೂಪವ

ತಾಳಿ ಪಂಚಪ್ರಾಣರೊಳು ಲೋಕಗಳ ಸಲಹುವನು || ೨೦ ||


ತ್ರಿನವತಿ ಸುರೂಪಾತ್ಮಕನಿರು

ದ್ಧನು ಸದಾ ಯಜಮಾನನಾಗಿ

ದ್ದನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನ

ನೆನಿಪನಾ ಪ್ರದ್ಯುಮ್ನಸಂಕರು

ಷಣ ವಿಭಾಗವ ಮಾಡಿಕೊಟ್ಟುಂ

ಡುಣಿಪ ನಿತ್ಯಾನಂದ ಭೋಜನದಾಯಿ ತುರ್ಯಾಹ್ವ || ೨೧ ||


ಷಣ್ಣವತಿನಾಮಕನು ವಸು ಮು

ಕ್ಕಣ್ಣ ಭಾಸ್ಕರರೊಳಗೆ ನಿಂತು ಪ್ರ

ಪನ್ನರನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ಪ |

ಪುಣೈಅ ಕರ್ಮವ ಸ್ವೀಕರಿಸಿ ಕಾ

ರುಣ್ಯ ಸಾಗರನಾ ಪಿತೃಗಳಿಗ

ಗಣ್ಯ ಸುಖವಿತ್ತವರ ಪೊರೆವನು ಎಲ್ಲ ಕಾಲದಲಿ || ೨೨ ||


ಸುತಪನೇಕೋತ್ತರ ಸುಪಂಚಾ

ಶತವರಣ ಕರಣದಿ ಚತುರ್ವಿಂ

ಶತಿ ಸುತತ್ವದಿ ಧಾತುಗಳೊಳಿದ್ದವಿರತನಿರುದ್ಧ |

ಜತನ ಮಾಳ್ಪನು ಜಗದಿ ಜೀವ

ಪ್ರತತಿಗಳ ಷಣ್ಣವತಿ ನಾಮಕ

ಚತುರ ಮೂರ್ತಿಗಳರ್ಚಿಸುವರದರಿಂದೆ ಬಲ್ಲವರು || ೨೩ ||


ಅಬುಜಜಾಂಡೋದರನು ವಿಪಿನದಿ

ಶಬರಿಯೆಂಜಲನುಂಡು ಗೋಕುಲ

ದಬಲೆಯರನೊಲಿಸಿದನು ಋಷಿ ಪತ್ನಿಯರು ಕೊಟ್ಟನ್ನ |

ಸುಭುಜ ತಾ ಭುಂಜಿಸಿದ ಸ್ವರಮಣ

ಕುಬುಜೆ ಗಂಧಕೆ ಒಲಿದ ಮುನಿಗಣ

ವಿಬುಧ ಸೇವಿತ ಬಿಡುವನೇ ನಾವಿತ್ತಕರ್ಮಫಲ || ೨೪ ||


ಗಣನೆಯಿಲ್ಲದ ಪರಮಸುಖ ಸ

ದ್ಗುಣಗಣಂಗಳ ಲೇಶಲೇಶಕೆ

ಎಣೆಯೆನಿಸದು ರಮಾಬ್ಜಭವಶಕ್ರಾದಿಗಳ ಸುಖವು |

ಉಣುತುಣುತ ಮೈ ಮರೆತು ಕೃ

ಷ್ಣಾರ್ಪಣವೆನಲು ಕೈಗೊಂಬನರ್ಭಕ

ಜನನಿ ಭೋಜನ ಸಮಯದಲಿ ಕೈಯೊಡ್ಡುವಂದದಲಿ || ೨೫ ||


ಜೀವ ಕೃತ ಕರ್ಮಗಳ ಬಿಡದೆ ರ

ಮಾವರನು ಸ್ವೀಕರಿಸಿ ಫಲಗಳ

ನೀವನಧಿಕಾರಾನುಸಾರದಲವರಿಗನವರತ |

ಪಾವಕನು ಸರ್ವಸ್ವ ಭುಂಜಿಸಿ

ತಾ ವಿಕಾರವನೈದನೊಮ್ಮೆಗು

ಪಾವನಕೆ ಪಾವನನೆನಿಪ ಹರಿಯುಂಬುದೇನರಿದು || ೨೬ ||


ಕಲುಷ ಜಿಹ್ವೆಗೆ ಸುಷ್ಠುಭೋಜನ

ಜಲಮೊದಲು ವಿಷದೋರುವುದು ನಿ

ಷ್ಕಲುಷ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲಿ |

ಸುಲಲಿತಾಂಗಗೆ ಸಕಲರಸ ಮಂ

ಗಳವೆನಿಸುತಿಹುದನ್ನಮಯ ಕೈ

ಗೊಳದೆ ಬಿಡುವನೆ ಪೂತನಿಯ ವಿಷಮೊಲೆಯನುಂಡವನು || ೨೭ ||


ಪೇಳಲೇನು ಸಮೀರದೇವನು

ಕಾಳಕೂಟವನುಂಡು ಲೋಕವ

ಪಾಲಿಸಿದ ತದ್ದಾಸನೋರ್ವನು ಅಮೃತನೆನಿಸಿದನು |

ಶ್ರೀಲಕುಮಿವಲ್ಲಭ ಶುಭಾಶುಭ

ಜಾಲಕರ್ಮಗಳುಂಬನುಪಚಯ

ದೇಲಿಗೆಗಳಿಲ್ಲವೆಂದಿಗು ಸ್ವರಸಗಳ ಬಿಟ್ಟು || ೨೮ ||


ಈ ಪರಿಯಲಚ್ಯುತನ ತತ್ತ

ದ್ರೂಪ ತನ್ನಾಮಗಳ ಸಲೆ ನಾ

ನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿರು ವಿಷಯ |

ಪ್ರಾಪಕ ಸ್ಥಾಪಕ ನಿಯಾಮಕ

ವ್ಯಾಪಕನುಯೆಂದರಿದು ನೀನಿ

ರ್ಲೇಪನಾಗಿರು ಪುಣ್ಯಪಾಪಗಳರ್ಪಿಸವನಡಿಗೆ || ೨೯ ||


ಐದುಲಕ್ಷೆಂಭತ್ತತೊಂಭ

ತ್ತಾದ ಸಾವಿರದೇಳುನೂರ್ಮೇ

ಲೈದು ರೂಪವಧರಿಸಿ ಭೋಕ್ತೃಗ ಭೋಜ್ಯನೆಂದೆನಿಸಿ |

ಶ್ರೀಧರಾದುರ್ಗಾರಮಣ ಪಾ

ದಾದಿ ಶಿರ ಪರ್ಯಂತ ವ್ಯಾಪಿಸಿ

ಕಾದುಕೊಂಡಿಹ ಸಂತತ ಜಗನ್ನಾಥ ವಿಠಲನು || ೩೦ ||