ಹರಿಕಥಾಮೃತಸಾರ ಗುರುಗಳ |

ಕರುಣದಿಂದಾಪನಿತು ಪೇಳುವೆ |

ಪರಮಭಗವದ್ಭಕ್ತರಿದನಾದರದಿ ಕೇಳುವುದು ||


ಶ್ರೀರಮಣಿಕರಕಮಲಪೂಜಿತ

ಚಾರುಚರಣಸರೋಜ ಬ್ರಹ್ಮಸ

ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ |

ನೀರಜಭವಾಂಡೋದಯಸ್ಥಿತಿ

ಕಾರಣನೆ ಕೈವಲ್ಯದಾಯಕ

ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ || ೧ ||


ಜಗದುದರನತಿ ವಿಮಲಗುಣರೂ

ಪಗಳನಾಲೋಚನದಿ ಭಾರತ

ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ |

ಬಗೆಬಗೆಯ ನೂತನವ ಕಾಣುತ

ಮಿಗೆ ಹರುಷದಿಂ ಪೊಗಳಿ ಹಿಗ್ಗುವ

ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||


ನಿರುಪಮಾನಂದಾತ್ಮಭವ ನಿ

ರ್ಜರಸಭಾಸಂಸೇವ್ಯ ಋಜುಗಣ|

ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ |

ಗರುಡಶೇಷಶಶಾಂಕದಳಶೇ

ಖರರ ಜನಕ ಜಗದ್ಗುರುವೇ ತ್ವ

ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||


ಆರು ಮೂರೆರಡೊಂದು ಸಾವಿರ

ಮೂರೆರಡು ಶತಶ್ವಾಸ ಜಪಗಳ

ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ |

ತಾ ರಚಿಸಿ ಸಾತ್ತ್ವರಿಗೆ ಸುಖ ಸಂ

ಸಾರ ಮಿಶ್ರರಿಗಧಮಜನರಿಗ

ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ || ೪ ||


ಚತುರವದನನ ರಾಣಿ ಅತಿರೋ

ಹಿತ ವಿಮಲ ವಿಜ್ಞಾನಿ ನಿಗಮ

ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |

ನತಿಸಿ ಬೇಡುವೆ ಜನನಿ ಲಕ್ಷ್ಮೀ

ಪತಿಯ ಗುಣಗಳ ತುತಿಪುದಕೆ ಸ

ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||


ಕೃತಿರಮಣ ಪ್ರದ್ಯುಮ್ನನಂದನೆ

ಚತುರವಿಶಂತಿ ತತ್ತ್ವಪತಿ ದೇ

ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||

ಸತತ ಹರಿಯಲಿ ಗುರುಗಳಲಿ ಸ

ದ್ರತಿಯ ಪಾಲಿಸಿ ಭಾಗವತ ಭಾ

ರತಪುರಾಣರಹಸ್ಯ ತತ್ತ್ವಗಳರುಪು ಕರುಣದಲಿ || ೬ ||


ವೇದಪೀಠ ವಿರಿಂಛಿ ಭವ ಶ

ಕ್ರಾದಿ ಸುರ ವಿಜ್ಞಾನದಾಯಕ

ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||

ಛೇದ ಭೇದ ವಿಷಾದ ಕುಟಿಲಾಂ

ತಾದಿ ಮಧ್ಯ ವಿದೂರ ಆದಾ

ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||


ಕ್ಷಿತಿಯೊಳಗೆ ಮಣಿಮಂತ ಮೊದಲಾ

ದತಿ ದುರಾತ್ಮರು ಒಂದಧಿಕ ವಿಂ

ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ||

ಸತಿಯ ಜಠರದೊಳವತರಿಸಿ ಭಾ

ರತಿ ರಮಣ ಮಧ್ವಾಭಿಧಾನದಿ

ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||


ಪಂಛ ಭೇದಾತ್ಮಕ ಪ್ರಪಂಛಕೆ

ಪಂಚರೂಪಾತ್ಮಕನೆ ದೈವಕ

ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||

ಪಂಚವಿಂಶತಿ ತತ್ತ್ವ ತರತಮ

ಪಂಛಿಕೆಗಳನು ಪೇಳ್ದ ಭಾವಿ ವಿ

ರಿಂಛಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||


ವಾಮದೇವ ವಿರಿಂಚಿತನಯ ಉ

ಮಾ ಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||

ಕಾಮಹರ ಕೈಲಾಸ ಮಂದಿರ

ಸೋಮಸೂರ್ಯಾನಲ ವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||


ಕೃತ್ತಿವಾಸನೆ ಹಿಂದೆ ನೀ ನಾ

ಲ್ವತ್ತು ಕಲ್ಪ ಸಮೀರನಲಿ ಶಿ

ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||

ಹತ್ತು ಕಲ್ಪದಿ ತಪವಗೈದಾ

ದಿತ್ಯರೊಳಗುತ್ತಮನೆನಿಸಿ ಪುರು

ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||


ಪಾಕಶಾಸನ ಮುಖ್ಯ ಸಕಲ ದಿ

ವೌಕಸರಿಗಭಿನಮಿಪೆ ಋಷಿಗಳಿ

ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||

ಆ ಕಮಲನಾಭಾದಿ ಯತಿಗಳ

ನೀಕಕಾನಮಿಸುವೆನು ಬಿಡದೆ ರ

ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||


ಪರಿಮಳವು ಸುಮನದೊಳಗನಲ

ನರಣಿಯೊಳಗಿಪ್ಪಂತೆ ದಾಮೋ

ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ ||

ಇರುತಿಹ ಜಗನ್ನಾಥ ವಿಠಲನ

ಕರುಣ ಪಡೆವ ಮುಮುಕ್ಷು ಜೀವರು

ಪರಮಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||