ಭಾರತೀಶನು ಘಳಿಗೆಯೊಳು ಮುನ್ನೂರ ಅರವತ್ತು ಸುರ ಜಪಗಳ ತಾ ರಚಿಸುವನು

ಸರ್ವ ಜೀವರೊಳಿದ್ದು ಬೇಸರದೆ

ಕಾರುಣಿಕ ಅವರವರ ಸಾಧನ ಪೂರೈಸಿ ಭೂ ಸ್ವರ್ಗ ನರಕವ ಸೇರಿಸುವ

ಸರ್ವಜ್ಞ ಸಕಲೇಷ್ಟ ಪ್ರದಾಯಕನು//1//


ತಾಸಿಗೆ ಒಂಭೈನೂರು ಶ್ವಾಸೋಚ್ಚಾಸಗಳ ನಡೆಸುತಲಿ

ಚೇತನ ರಾಶಿಯೊಳು ಹಗಲಿರುಳು ಜಾಗೃತನಾಗಿ ನಿತ್ಯದಲಿ

ಈ ಸುಮನಸೋತ್ತಂಸ ಲೇಶ ಆಯಾಸವಿಲ್ಲದೆ ಪೋಷಿಸುತ

ಮೂಲೇಶನ ಅಂಘ್ರಿ ಸರೋಜ ಮೂಲದಲಿಪ್ಪ ಕಾಣಿಸದೆ//2//


ಅರಿವುದೊಂದು ಯಾಮದೊಳು ಶ್ವಾಸಗಳು ಎರಡು ಸಾವಿರದ ಏಳು ನೂರನು

ಶರ ಸಹಸ್ರದ ಮೇಲೆ ನಾನೂರು ಅಹವು ದ್ವಿತೀಯಕ್ಕೆ

ಮರಳಿ ಯಾಮತ್ರಯಕೆ ವಸು ಸಾವಿರದ ಮೇಲೆ ನೂರು ಎಣಿಕೆಯಲಿ

ಹನ್ನೆರೆಡು ತಾಸಿಗೆ ಹತ್ತು ಸಾವಿರದ ಎಂಟು ನೂರ ಅಹವು//3//


ಒಂದು ದಿನದೊಳಗೆ ಅನಿಳ ಇಪ್ಪ್ಪತ್ತೊಂದು ಸಾವಿರದ ಆರು ನೂರು

ಮುಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪೊರೆವನೆಂದು ಪವನನ ಪೊಗಳುತಿರು

ಎಂದೆಂದೂ ಮರೆಯದೆ ಈ ಮಹಿಮೆ ಸಂಕ್ರಂದನಾದ್ಯರಿಗುಂಟೆ

ನೋಡಲು ಸರ್ವ ಕಾಲದಲಿ//4//


ಮೂರು ಲಕ್ಷದ ಮೇಲೆ ವಿಂಶತಿ ಈರೆರೆಡು ಸಾವಿರವು ಪಕ್ಷಕೆ

ಆರು ಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ಮಾರುತನು ಮಾಸಕೆ ಜಪಿಸಿ

ಸಂಸಾರ ಸಾಗರದಿಂದ ಸುಜನರ ಪಾರುಗಾಣಿಸಿ

ಸಲಹುವನು ಬಹು ಭೋಗಗಳನಿತ್ತು//5//


ಎರಡು ತಿಂಗಳಿಗೆ ಅಹುದು ಋತು ಭೂ ಸುರರು ತಿಳಿವುದು

ಶ್ವಾಸ ಜಪ ಹನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಹಸ್ರ

ಕರೆಸುವದು ಅಯನ ಅಹ್ವಯದಿ ಅರೆ ವರುಷ

ಮೂವತ್ತೆಂಟು ಲಕ್ಷ ಈ ಪರಿ ತಿಳಿವುದು ಎಂಭತ್ತೆಂಟು ಸಹಸ್ರ ಕೋವಿದರು//6//


ವರುಷಕೆ ಇದರ ಇಮ್ಮಡಿ ಜಪಂಗಳ ಗುರುವರಿಯ ತಾ ಮಾಡಿ ಮಾಡಿಸಿ

ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ

ಸುರ ವಿರೋಧಿಗಳೊಳಗೆ ನೆಲೆಸಿದ್ದು ಅರವಿದೂರ

ತಮ ಅಧಿಕಾರಿಗಳ ಇರವರಿತು ಸೋಹಂ ಉಪಾಸನೆ ಮಾಳ್ಪನು ಅವರಂತೆ//7//


ಇನಿತು ಉಪಾಸನೆ ಸರ್ವ ಜೀವರೊಳು ಅನಿಲದೇವನು ಮಾಡುತಿರೆ

ಚಿಂತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ಮನೆಯೊಳಗೆ ಕೃಷ್ಣಾಜಿನಾದಿ

ಆಸನದಿ ಕುಳಿತು ವಿಶಿಷ್ಟ ಬಹು ಸಜ್ಜನನು ಎನಿಸಿ

ಜಪ ಮಣಿಗಳ ಎಣಿಸಿದರೇನು ಬೇಸರದೆ//8//


ಓದನೋದಕವು ಎರಡು ತೇಜದೊಳು ಐದುವವು ಲಯ

ತದಭಿಮಾನಿಗಳಾದ ಶಿವ ಪವನರು ರಮಾಧೀನತ್ವ ಐದಿಹರು

ಈ ದಿವಿಜರ ಒಡಗೂಡಿ ಶ್ರೀ ಮಧುಸೂದನನ ಐದುವಳೆಂದರಿದು

ಆದರದಲಿ ಅನ್ನೋದಕವ ಕೊಡುತ ಉಣುತ ಸುಖಿಸುತಿರು//9//


ಜಾಲಿ ತೊಪ್ಪಲ ಅಜಾವಿಗಳು ಮೆದ್ದು ಆಲಯದಿ ಸ್ವೆಚ್ಚಾನುಸಾರದಿ

ಪಾಲಗರೆವ ಅಂದದಲಿ ಲಕ್ಷ್ಮೀ ರಮಣ ತನ್ನವರ ಕೀಳು ಕರ್ಮವ ಸ್ವೀಕರಿಸಿ

ತನ್ನ ಆಲಯದೊಳಿಟ್ಟು ಅವರ ಪೊರೆವ

ಕೃಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ//10//


ಶಶಿ ದಿವಾಕರ ಪಾವಕರೊಳಿಹ ಅಸಿತಸಿತಲೋಹಿತಗಳಲಿ

ಶಿವಸ್ವಸನ ಭಾರ್ಗವಿ ಮೂವರೊಳು ಶ್ರೀ ಕೃಷ್ಣ ಹಯವದನ ವಸುಧಿಪಾರ್ದನ

ತ್ರಿವೃತುಯೆನಿಸಿ ವಸುಮತಿಯೊಳು ಅನ್ನೋದಕ ಅನಳ ಪೆಸರಿನಿಂದಲಿ

ಸರ್ವ ಜೀವರ ಸಲಹುವನು ಕರುಣಿ//11//


ದೀಪ ಕರದಲಿ ಪಿಡಿದು ಕಾಣದೆ ಕೂಪದೊಳು ಬಿದ್ದಂತೆ

ವೇದ ಮಹೋಪನಿಷದ್ ಅರ್ಥಗಳ ನಿತ್ಯದಿ ಪೇಳುವವರೆಲ್ಲ

ಶ್ರೀ ಪವನಮುಖ ವಿನುತನ ಅಮಲ ಸುರೂಪಗಳ ವ್ಯಾಪಾರ ತಿಳಿಯದೆ

ಪಾಪ ಪುಣ್ಯಕೆ ಜೀವ ಕರ್ತೃ ಆಕರ್ತೃ ಹರಿಯೆಂಬ//12//


ಅನಿಲದೇವನು ವಾಗ್ಮನಃ ಮಯನು ಎನಿಸಿ ಪಾವಕ ವರುಣ

ಸಂಕ್ರಂದನ ಮುಖಾದ್ಯರೊಳಿದ್ದು ಭಗವದ್ರೂಪ ಗುಣಗಳನು

ನೆನೆನೆನೆದು ಉಚ್ಚರಿಸುತಲಿ ನಮ್ಮನು ಸದಾ ಸಂತೈಸುವನು

ಸನ್ಮುನಿ ಗಣ ಆರಾಧಿತ ಪದಾಂಬುಜ ಗೋಜ ಸುರರಾಜ//13//


ಪಾದವು ಎನಿಪವು ವಾಗ್ಮನಃಮಯ ಪಾದರೂಪ ದ್ವಯಗಳೊಳು

ಪ್ರಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು

ವೇದ ಶಾಸ್ತ್ರ ಪುರಾಣಗಳ ಸಂವಾದ ರೂಪದಿ ಮನನಗೈವುತ

ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ//14//


ಗಂಧವಹ ದಶ ದಿಶಗಳೊಳಗೆ ಅರವಿಂದ ಸೌರಭ ಪಸರಿಸುತ

ಘ್ರಾಣ ಇಂದ್ರಿಯಗಳಿಗೆ ಸುಖವನೀವುತ ಸಂಚರಿಸುವಂತೆ

ಇಂದಿರೇಶನ ಸುಗುಣಗಳ ದೈನಂದಿನದಿ ತುತಿಸುತ ಅನುಮೋದಿಸುತ

ಅಂಧಬಧಿರ ಸುಮೂಕನಂತಿರು ಮಂದ ಜನರೊಡನೆ//15//


ಶ್ರೀರಮಣನ ಅರಮನೆಯ ಪೂರ್ವ ದ್ವಾರದಲಿ ಇಹ ಸಂಜ್ಞಸೂರ್ಯಗ

ಭಾರತೀಪತಿ ಪ್ರಾಣನ ಒಳಗಿಹ ಲಕುಮಿ ನಾರಾಯಣನ ಸೇರಿ ಮನುಜೋತ್ತಮರು

ಸರ್ವ ಶರೀರಗತ ನಾರಾಯಣನ ಅವತಾರ ಗುಣಗಳ ತುತಿಸುತಲಿ

ಮೋದಿಪರು ಮುಕ್ತಿಯಲಿ//16//


ಪ್ರಣವ ಪ್ರತಿಪಾದ್ಯನ ಪುರದ ದಕ್ಷಿಣ ಕವಾಟದಲಿಪ್ಪ

ಶಶಿ ರೋಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು

ಗುಣಗಳನು ಸಂಸ್ತುತಿಸುತಲಿ ಪಿತೃ ಗಣ ಗಧಾಧರನ ಅತಿವಿಮಲ ಪಟ್ಟಣದ ಒಳಗೆ

ಸ್ವೇಚ್ಚಾನುಸಾರದಿ ಸಂಚರಿಸುತಿಹರು//17//


ಅಮಿತ ವಿಕ್ರಮನ ಆಲಯದ ಪಶ್ಚಿಮ ಕವಾಟದಿ ಸತಿಸಹಿತ ಸಂಭ್ರಮದಿ

ಭಗವದ್ಗುಣಗಳನೆ ಪೊಗಳುತಲೇ ಮೋದಿಸುವ

ಸುಮನಸಾಸ್ಯನೊಳಿಪ್ಪ ಅಪಾನಗ ದಮನ ಸಂಕರುಷಣನ

ನಿಹ ಹೃತ್ಕಮಲದೊಳು ಧೇನಿಸುವ ಋಷಿಗಣವ ಐದಿ ಸುಖಿಸುವರು//18//


ಸ್ವರಮಣನ ಗುಣ ರೂಪ ಸಪ್ತಸ್ವರಗಳಿಂದಲಿ ಪಾಡುತಿಹ

ತುಂಬುರನೆ ಮೊದಲಾದ ಅಖಿಳ ಗಂಧರ್ವರು

ರಮಾಪತಿಯ ಪುರದ ಉತ್ತರ ಬಾಗಿಲಧಿಪ ಸುರಪ ಶಚಿಗ ಸಮಾನ ವಾಯುಗ

ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನ ಐದುವರು//19//


ಗರುಡ ಶೇಷ ಅಮರ ಇಂದ್ರಮುಖ ಪುಷ್ಕರನೆ ಕಡೆಯಾಗಿಪ್ಪ ಅಖಿಳ ನಿರ್ಜನರು

ಊರ್ಧ್ವ ದ್ವಾರಗತ ಭಾರತಿ ಉದಾನದೊಳು ಮೆರೆವ ಮಾಯಾ ವಾಸುದೇವನ

ಪರಮ ಮಂಗಳ ಅವಯವಗಳ ಮಂದಿರವನು ಐದಿ

ಸದಾ ಮುಕುಂದನ ನೋಡಿ ಸುಖಿಸುವರು//20//


ದ್ವಾರ ಪಂಚಕ ಪಾಲರೊಳಗಿಹ ಭಾರತೀ ಪ್ರಾಣಾಂತರಾತ್ಮಕ

ಮಾರಮಣನ ಐ ರೂಪ ತತ್ತತ್ದ್ವಾರದಲಿ ಬಪ್ಪ

ಮೂರೆರೆಡು ವಿಧ ಮುಕ್ತಿ ಯೋಗ್ಯರ ತಾರತಮ್ಯವನರಿತು ಅವರ

ಕಂಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರಣ ಮಾಳ್ಪ//21//


ಬೆಳಗಿದ ಹೂಜಿಯು ನೋಳ್ಪರಿಗೆ ಥಳಥಳಿಸುತಲಿ ಕಂಗೊಳಿಸುವ ಅಂದದಿ

ತೊಳೆದು ದೇಹವ ನಾಮ ಮುದ್ರೆಗಳಿಂದ ಅಲಂಕರಿಸಿ ಒಲಿಸಿ

ನಿತ್ಯ ಕುತರ್ಕ ಯುಕ್ತಿಗಳ ಅಲವಬೋಧರ ಶಾಸ್ತ್ರ ಮರ್ಮವ ತಿಳಿಯದಿಹ ನರ

ಬರಿದೆ ಇದರೊಳು ಶಂಕಿಸಿದರೇನು//22//


ಉದಧಿಯೊಳು ಊರ್ವಿಗಳು ತೋರ್ಪಂದದಲಿ ಹಂಸೋದ್ಗೀಥ ಹರಿ

ಹಯವದನ ಕೃಷ್ಣಾದಿ ಅಮಿತ ಅವತಾರಗಳು ನಿತ್ಯದಲಿ

ಪದುಮನಾಭನೊಳು ಇರುತಿಹವು ಸರ್ವದ ಸಮಸ್ತ ಪ್ರಾಣಿಗಳ ಚಿತ್ಹೃದಯಗತ ರೂಪಗಳು

ಅವ್ಯವಧಾನದಲಿ ಬಿಡದೆ//23//


ಶರಧಿಯೊಳು ಮಕರಾದಿ ಜೀವರು ಇರುಳು ಹಗಲು ಏಕ ಪ್ರಕಾರದಿ

ಚರಿಸುತ ಅನುಮೋದಿಸುತ ಇಪ್ಪಂದದಿ

ಜಗತ್ರಯವು ಇರುತಿಹುದು ಜಗದೀಶನುದರದಿ

ಕರೆಸುವುದು ಪ್ರತಿಬಿಂಬ ನಾಮದಿ ಧರಿಸಿಹುದು ಹರಿ ನಾಮ ರೂಪಂಗಳನು ಅನವರತ//24//


ಜನನಿ ಸೌಷ್ಠ ಪದಾರ್ಥಗಳು ಭೋಜನವ ಮಾಡಲು ಗರ್ಭಗತ ಶಿಶು ದಿನದಿನದಿ

ಅಭಿವೃದ್ಧಿಯೈದುವ ತೆರದಿ

ಜೀವರಿಗೆ ಪದುಮನಾಭನು ಸರ್ವ ರಸ ಉಂಡುಣಿಸಿ ಸಂರಕ್ಷಿಸುವ

ಜಾಹ್ನವಿ ಜನಕ ಜನ್ಮಾದಿ ಅಖಿಳ ದೋಷ ವಿದೂರ ಗಂಭೀರ//25//


ಆಶೆಗೆ ಒಳಗಾದವನು ಜನರಿಗೆ ದಾಸನೆನಿಸುವ

ಆಶೆಯನು ನಿಜ ದಾಸಗೆ ಐದಿಹ ಪುಂಸಗೆ ಎಲ್ಲರು ದಾಸರೆನಿಸುವರು

ಶ್ರೀಶನ ಅಂಘ್ರಿ ಸರೋಜಯುಗಳ ನಿರಾಶೆಯಿಂದಲಿ ಭಜಿಸೆ ಒಲಿದು

ರಮಾ ಸಹಿತ ತನ್ನನೆ ಕೊಡುವ ಕರುಣಾ ಸಮುದ್ರ ಹರಿ//26//


ದ್ಯುನದಿ ಆದ್ಯಂತವನು ಕಾಣದೆ ಮನುಜನು ಏಕತ್ರದಲಿ ತಾ ಮಜ್ಜನವ ಗೈಯೆ

ಸಮಸ್ತ ದೋಷದಿ ಮುಕ್ತನಹ ತೆರದಿ

ಅನಘನ ಅಮಲಾನಂತನಂತ ಸುಗುಣಗಳೊಳಗೆ ಒಂದೇ ಗುಣ

ಉಪಾಸನೆಯಗೈವ ಮಹಾತ್ಮ ಧನ್ಯ ಕೃತಾರ್ಥನು ಎನಿಸುವನು//27//


ವಾಸುದೇವನು ಕರೆಸುವನು ಕಾರ್ಪಾಸ ನಾಮದಿ ಸಂಕರುಷಣನು ವಾಸವಾಗಿಹ ತೂಲದೊಳು

ತಂತುಗನು ಪ್ರದ್ಯುಮ್ನ

ವಾಸ ರೂಪ ಅನಿರುದ್ಧ ದೇವನು

ಭೂಷಣನು ತಾನಾಗಿ ತೋರ್ಪ ಪರೇಶ ನಾರಾಯಣನು ಸರ್ವದ ಮಾನ್ಯ ಮಾನದನು//28//


ಲಲನೆಯಿಂದೊಡಗೂಡಿ ಚೈಲಗಳೊಳಗೆ ಓತಪ್ರೋತ ರೂಪದಿ

ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು

ಛಳಿ ಬಿಸಿಲು ಮಳೆ ಗಾಳಿಯಿಂದ ಅರ ಘಳಿಗೆ ಬಿಡದಲೇ ಕಾವನು ಎಂದರಿದು

ಇಳೆಯೊಳು ಅರ್ಚಿಸುತಿರು ಸದಾ ಸರ್ವಾಂತರಾತ್ಮಕನ//29//