ಶ್ರೀಶನಂಘ್ರಿ ಸರೋಜ ಭೃಂಗ ಮಹೇಶ ಸಂಭವ ಮನ್ಮನದೊಳು ಪ್ರಕಾಶಿಸು ಅನುದಿನ

ಪ್ರಾರ್ಥಿಸುವೆ ಪ್ರೇಮಾತಿಶಯದಿಂದ

ನೀ ಸಲಹು ಸಜ್ಜನರ ವೇದವ್ಯಾಸ ಕರುಣಾಪಾತ್ರ

ಮಹದಾಕಾಶಪತಿ ಕರುಣಾಳು ಕೈಪಿಡಿದು ಎಮ್ಮನುದ್ಧರಿಸು//1//


ಏಕದಂತ ಇಭೇಂದ್ರಮುಖ ಚಾಮೀಕರ ಕೃತ ಭೂಷಣಾoಗ

ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು

ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ

ನೀ ಕರುಣಿಸುವುದೆಮಗೆ ಸಂತತ ಪರಮ ಕರುಣಾಳು//2//


ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ

ಮಹ ದೋಷಘ್ನನಂಘ್ರಿ ಸರೋಜಯುಗಳದಿ ಭಕ್ತಿ ಪೂರ್ವಕದಿ ಲಗ್ನವಾಗಲಿ ನಿತ್ಯ

ನರಕಭಯಾಗ್ನಿಗಳಿಗೆ ಆನಂಜೆ

ಗುರುವರ ಭಗ್ನಗೈಸೆನ್ನ ಅವಗುಣಗಳನ್ನು ಪ್ರತಿ ದಿವಸದಲ್ಲಿ//3//


ಧನಪ ವಿಷ್ವಕ್ಸೇನ ವೈದ್ಯ ಅಶ್ವಿನಿಗಳಿಗೆ ಸರಿಯೆನಿಪ

ಷನ್ಮುಖನನುಜ ಶೇಷ ಶತಸ್ಥ ದೇವೋತ್ತಮ ವಿಯತ್ಗಂಗಾ ವಿನುತ

ವಿಶ್ವ ಉಪಾಸಕನೆ ಸನ್ಮನದಿ ವಿಜ್ಞಾಪಿಸುವೆ

ಲಕ್ಷ್ಮೀ ವನಿತೆ ಅರಸನ ಭಕ್ತಿ ಜ್ಞಾನ ಕೊಟ್ಟು ಸಲಹುವದು//4//


ಚಾರುದೇಷ್ಣ ಆಹ್ವಯನೆನಿಸಿ ಅವತಾರ ಮಾಡಿದೆ ರುಗ್ಮಿಣೀಯಲಿ

ಗೌರಿ ಅರಸನ ವರದಿ ಉದ್ಧಟರಾದ ರಾಕ್ಷಸರ ಶೌರಿ ಆಜ್ಞದಿ ಸಂಹರಿಸಿ

ಭೂಭಾರ ವಿಳುಹಿದ ಕರುಣಿ

ತ್ವತ್ಪಾದಾರವಿಂದಕೆ ನಮಿಪೆ ಕರುಣಿಪುದು ಎಮಗೆ ಸನ್ಮತಿಯ//5//


ಶೂರ್ಪ ಕರ್ಣ ದ್ವಯ ವಿಜಿತ ಕಂದರ್ಪ ಶರ ಉದಿತ ಅರ್ಕ ಸನ್ನಿಭ

ಸರ್ಪ ವರ ಕಟಿ ಸೂತ್ರ ವೈಕೃತ ಗಾತ್ರ ಸುಚರಿತ್ರ

ಸ್ವರ್ಪಿಶಾಂಕುಶ ರದನ ಕರ ಖಳ ದರ್ಪ ಭಂಜನ

ಕರ್ಮ ಸಾಕ್ಷಿಗ ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ//6//


ಖೇಶ ಪರಮ ಸುಭಕ್ತಿ ಪೂರ್ವಕ ವ್ಯಾಸ ಕೃತ ಗ್ರಂಥಗಳನರಿತು

ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೋ ಲೋಕದೊಳು

ಪಾಶ ಪಾಣಿಯೇ ಪ್ರಾರ್ಥಿಸುವೆ ಉಪದೇಶಿಸೆನಗೆ ಅದರರ್ಥಗಳ

ಕರುಣಾ ಸಮುದ್ರ ಕೃಪಾ ಕಟಾಕ್ಷದಿ ನೋಡಿ ಪ್ರತಿದಿನದಿ//7//


ಶ್ರೀಶನ ಅತಿ ನಿರ್ಮಲ ಸುನಾಭೀ ದೇಶ ಸ್ಥಿತ ರಕ್ತ ಶ್ರೀಗಂಧಾ ಸುಶೋಭಿತ ಗಾತ್ರ

ಲೋಕಪವಿತ್ರ ಸುರಸ್ತೋತ್ರ

ಮೂಷಕ ಸುವರವಹನ್ ಪ್ರಾಣಾವೇಶಯುತ ಪ್ರಖ್ಯಾತ ಪ್ರಭು

ಪೂರೈಸು ಭಕ್ತರು ಬೇಡಿದ ಇಷ್ಟಾರ್ಥಗಳ ಪ್ರತಿದಿನದಿ//8//


ಶಂಕರಾತ್ಮಜ ದೈತ್ಯರಿಗೆ ಅತಿ ಭಯಂಕರ ಗತಿಗಳ ಈಯಲೋಸುಗ

ಸಂಕಟ ಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು

ಮಂಕುಗಳ ಮೋಹಿಸುವೆ ಚಕ್ರಧರಾಂಕಿತನ ದಿನದಿನದಿ

ತ್ವತ್ಪದ ಪಂಕಜಂಗಳಿಗೆ ಎರಗಿ ಬಿನ್ನೈಸುವೆನು ಪಾಲಿಪುದು//9//


ಸಿದ್ಧ ವಿದ್ಯಾಧರ ಗಣ ಸಮಾರಾಧ್ಯ ಚರಣ ಸರೋಜ ಸರ್ವ ಸುಸಿದ್ಧಿದಾಯಕ

ಶೀಘ್ರದಿಂ ಪಾಲಿಪುದು ಬಿನ್ನೈಪೆ

ಬುದ್ಧಿ ವಿದ್ಯಾ ಜ್ಞಾನ ಬಲ ಪರಿಶುದ್ಧ ಭಕ್ತಿ ವಿರಕ್ತಿ

ನಿರುತಾನವದ್ಯನ ಸ್ಮೃತಿ ಲೀಲೆಗಳ ಸುಸ್ತವನ ವದನದಲಿ//10//


ರಕ್ತವಾಸದ್ವಯ ವಿಭೂಷಣ ಉಕ್ತಿ ಲಾಲಿಸು ಪರಮ ಭಗವದ್ಭಕ್ತರ

ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ ಸಕ್ತವಾಗಲಿ ಮನವು

ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ

ವಿಮುಕ್ತನೆಂದೆನಿಸು ಎನ್ನ ಭವ ಭಯದಿಂದಲಿ ಅನುದಿನದಿ//11//


ಶುಕ್ರ ಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು

ಉರುಕ್ರಮ ಶ್ರೀರಾಮಚಂದ್ರನು ಸೇತು ಮುಖದಲ್ಲಿ

ಚಕ್ರವರ್ತಿಪ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ

ವಕ್ರತುಂಡನೆ ನಿನ್ನೊಳೆoತುದೋ ಈಶಾನುಗ್ರಹವು//12//


ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲ ಸಹಿತ ಸಂಹಾರವೈದಿದ

ಗುರು ವೃಕೋದರನ ಗದೆಯಿಂದ

ತಾರಕಾಂತಕನನುಜ ಎನ್ನ ಶರೀರದೊಳು ನೀ ನಿಂತು

ಧರ್ಮ ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ//13//


ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೆ

ಕೃಪಾಕರ ಈಶ ಕೃತಜ್ಞ ಕಾಮದ ಕಾಯೋ ಕೈಪಿಡಿದು

ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ

ಪಿನಾಕಿ ಭಾರ್ಯಾ ತನುಜ ಮೃದ್ಭವ ಪ್ರಾರ್ಥಿಸುವೆನೀಗ//14//


ನಿತ್ಯ ಮಂಗಳ ಚರಿತ ಜಗದ ಉತ್ಪತ್ತಿ ಸ್ಥಿತಿ ಲಯ ನಿಯಮನ ಜ್ಞಾನ ತ್ರಯಪ್ರದ

ಬಂಧಮೋಚಕ ಸುಮನಸ ಅಸುರರ ಚಿತ್ತ ವೃತ್ತಿಗಳಂತೆ ನಡೆವ

ಪ್ರಮತ್ತನಲ್ಲ ಸುಹೃತ್ ಜನಾಪ್ತನ

ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು//15//


ಪಂಚಭೇದ ಜ್ಞಾನವರಪು ವಿರಿಂಚಿ ಜನಕನ ತೋರು ಮನದಲಿ

ವಾಂಚಿತಪ್ರದ ಒಲುಮೆಯಿಂದಲಿ ದಾಸನೆಂದರಿದು

ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತೈಸು

ವಿಷಯದಿ ಸಂಚರಿಸದಂದದಲಿ ಮಾಡು ಮನಾದಿ ಕರಣಗಳ//16//


ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ

ಲಕ್ಷ್ಮೀ ಪ್ರಾಣಪತಿ ತತ್ವೇಶರಿಂದ ಒಡಗೂಡಿ ಗುಣಕಾರ್ಯ

ತಾನೇ ಮಾಡುವನೆಂಬ ಈ ಸುಜ್ಞಾನವೆ ಕರುಣಿಪುದೆಮಗೆ

ಮಹಾನುಭಾವ ಮುಹುರ್ಮುಹು: ಪ್ರಾರ್ಥಿಸುವೆ ಇನಿತೆಂದು//17//


ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತ ನಿದ್ರ

ಕಲ್ಪದ್ರುಮನೆನಿಪ ಭಜಕರಿಗೆ ಬಹುಗುಣ ಭರಿತ ಶುಭ ಚರಿತ

ಉಮೆಯ ನಂದನ ಪರಿಹರಿಸು ಅಹಂ ಮಮತೆ ಬುದ್ಧಿ ಆದಿ ಇಂದ್ರಿಯಗಳ

ಆಕ್ರಮಿಸಿ ದಣಿಸುತಲಿಹವು ಭವದೊಳಗೆ ಆವ ಕಾಲದಲಿ//18//


ಜಯಜಯತು ವಿಘ್ನೇಶ ತಾಪತ್ರಯ ವಿನಾಶನ ವಿಶ್ವ ಮಂಗಳ

ಜಯಜಯತು ವಿದ್ಯಪ್ರದಾಯಕ ವೀತ ಭಯ ಶೋಕ

ಜಯಜಯತು ಚಾರ್ವಾಂಗ ಕರುಣಾ ನಯನದಿಂದಲಿ ನೋಡಿ

ಜನ್ಮಾಮಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ//19//


ಕಡು ಕರುಣಿ ನೀನೆಂದರಿದು ಹೇರೊಡಲ ನಮಿಸುವೆನು ನಿನ್ನಡಿಗೆ

ಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದೂ

ನಡು ನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮ ಕೀರ್ತನ ನುಡಿದು ನುಡಿಸು ಎನ್ನಿಂದ

ಪ್ರತಿದಿವಸದಲಿ ಮರೆಯದಲೆ//20//


ಏಕ ವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ

ಮೈನಾಕಿ ತನಯ ಅಂತರ್ಗತ ಶ್ರೀ ಪ್ರಾಣ ಪತಿಯೆನಿಪ

ಶ್ರೀಕರ ಜಗನ್ನಾಥ ವಿಠಲ ಸ್ವೀಕರಿಸಿ

ಸ್ವರ್ಗಾಪವರ್ಗದಿ ತಾ ಕೊಡಲಿ ಸೌಖ್ಯಗಳ ಭಕ್ತರಿಗೆ ಆವ ಕಾಲದಲಿ//21//