ಹರಿವ ನೀರ ಮಧ್ಯದಲ್ಲಿ ಉರಿವ ಜ್ಯೋತಿಯ ಬೆಳಗ ನೋಡಿ ಕಂಡೆನಯ್ಯ. ಸಾರಿರ್ದು ನೋಡಿದರೆ
ನೀರೊಳಗೆ ಮುಳುಗಿ ಉರಿವುತ್ತಿದೆ ನೋಡಾ. ದೂರದಲ್ಲಿರ್ದ ನೋಡಿದರೆ
ನೀರಮೇಲೆ ಉರಿವುತ್ತಿದೆ ನೋಡಾ. ಇದೇನೋ! ಇದೇನೋ!! ಜ್ಯೋತಿಯ ಗುಣವೋ
ತನ್ನ ಭ್ರಾಂತಿನ ಗುಣವೋ ಎಂದು
ಸ್ವಯಜ್ಞಾನ ಗುರುವಿನ ಮುಖದಿಂದ ವಿಚಾರಿಸಲು ಹರಿವ ನೀರು ಬತ್ತಿತ್ತು. ಜ್ಯೋತಿ ಉಳಿಯಿತ್ತು. ಆ ಉಳಿದ ಉಳಿಮೆಯೆ ತಾನೆಂದು ತಿಳಿದಾತನಲ್ಲದೆ
ಶಿವಶರಣನಲ್ಲ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.