ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ? ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?_ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು
ಕಂದಲ ಕೊಂಡು ಹೋದರೆ
ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.