ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?|
ಭ್ರಮಿಪುದೇನಾಗಾಗ ಕರ್ತೃವಿನ ಮನಸು?||
ಮಮತೆಯುಳ್ಳವನಾತನಾದೋಡೀ ಜೀವಗಳು|
ಶ್ರಮಪಡುವುವೇಕಿಂತು? - ಮಂಕುತಿಮ್ಮ|| ೮||
(ಲಕ್ಷ್ಯ+ಒಂದು+ಉಂಟೇನು) (ಭ್ರಮಿಪುದು+ಏನು+ಆಗಾಗ) (ಮಮತೆ+ಉಳವನು+ಆತನು+ಆದೊಡೆ+ಈ) (ಶ್ರಮಪಡುವುದು+ಏಕೆ+ಇಂತು)
ಈ ಭಗವಂತನ ಸೃಷ್ಟಿಯಲ್ಲಿ, ಒಂದು ಕ್ರಮ ಮತ್ತು ಗುರಿ ಏನಾದರು ಇದೆಯೆ? ಈ ಸೃಷ್ಟಿಕರ್ತನ ಮನಸ್ಸು, ಆಗಾಗ ಎಲ್ಲೆಲ್ಲೊ ಹರಿದಾಡುತ್ತದೇನು?
ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ಮತ್ತು ವಾತ್ಸಲ್ಯಗಳಿರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿ ಕಷ್ಟಗಳನ್ನು ಅನುಭವಿಸುತ್ತಿವೆ?
ಮಾನವರೋ ದಾನವರೋ ?
ಏನು ಭೈರವಲೀಲೆಯೀ ವಿಶ್ವಭ್ರಮಣೆ |
ಏನು ಭೂತ ಗ್ರಾಮನರ್ತನೋನ್ಮಾದ ||
'ಏನಗ್ನಿ ಗೋಳಗಳು ಏನಂತರಾಳಗಳು |
'ಏನು ವಿಸ್ಮಯಸೃಷ್ಟಿ ಮಂಕುತಿಮ್ಮ|| ೯
'
(ಭೂತಗ್ರಾಮ +ನರ್ತನ +ಉನ್ಮಾದ )(ಏನು+ಅಗ್ನಿ)(ಏನು+ಅಂತರಾಳಗಳು)''
ಈ ವಿಶ್ವದ ತಿರುಗಾಟ ಎನ್ನುವುದು ಒಂದು ಭೀಕರವಾದ ಆಟವೇ ಸರಿ ಪಂಚಮಹಾಭೂತಗಳ ಮತ್ತು ನಾನಾ ಪ್ರಾಣಿಚೈತನ್ಯಗಳ (ಭೂತಗ್ರಾಮ ) ಹುಚ್ಚಾಡಿಸುವ ಏನು ಬೆಂಕಿಯ ಗೋಳಗಳು ಏನು ಅವುಗಳ ನಡುವಿನ ಅವಕಾಶಗಳು (ಅಂತರಾಳ) ಈ ಸೃಷ್ಟಿ ಎನ್ನುವುದು ಎಷ್ಟು ಆಶ್ಚರ್ಯಕರವಾಗಿದೆ ನೋಡಲಿಕ್ಕೆ .
ಏನು ಪ್ರಪಂಚವಿದು ಏನು ಧಾಳಾಧಾಳಿ|
ಏನದ್ಭುತಾಪಾರಶಕ್ತಿ ನಿರ್ಘಾತ ||
ಮಾನವನ ಗುರಿಯೇನು ಬೆಲೆಯೇನು ಮುಗಿವೇನು |
ಏನರ್ಥವಿದಕ್ಕೆಲ್ಲ ಮಂಕುತಿಮ್ಮ|| ೧೦
ಈ ಪ್ರಪಂಚ ಎನ್ನುವುದು ಏನು ಏನು ಮುತ್ತಿಗೆಗಳು ಎಷ್ಟು ಅದ್ಭುತವಾದ ಅಪಾರವಾದ ಶಕ್ತಿ ಇದರಲ್ಲಿ ಅಡಗಿದೆ ಎಷ್ಟು ಜೋರಾದ ಹೊಡೆತಗಳನ್ನು (ನಿರ್ಘಾತ)ಇದು ಎಲ್ಲರಿಗೂ ಕೊಡುತ್ತಿದೆ ಇಷ್ಟೆಲ್ಲ ಇದ್ದರೂ ಮನುಷ್ಯನ ಗುರಿ ಏನು ಅವನಿಗೆ ಏನು ಬೆಲೆ ಇದರ ಅಂತ್ಯವೇನು ಇವುಗಳೆಲ್ಲಾ ತಿಳಿಯುತ್ತಿಲ್ಲವಲ್ಲ ಇವುಗಳಿಗೆಲ್ಲಾ ಏನು ಅರ್ಥ ಇವು ಬಹಳ ಅಸ್ಪಷ್ಟವಾಗಿದೆ . ಮೂದಲಿನ ಮೊರು ಪದ್ಯಗಳಲ್ಲಿ ಆ ಭಗವಂತನಿಗೆ ನಮಿಸಿ ಮಣಿಸಿ ಶರಣಾದರೆ ಮುಂದಿನ ಏಳು ಪದ್ಯಗಳಲ್ಲಿ ಈ ಪ್ರಪಂಚದ ಬಗ್ಗೆ ಆ ಸೃಷ್ಟಿಕರ್ತನ ಬಗ್ಗೆ ಒಂದು ಬಗೆಯ ಅನುಮಾನಗಳನ್ನು ನಾವು ಕಾಣುತ್ತೇವೆ ಈ ಅನುಮಾನಗಳು ಪ್ರತಿಯೊಬ್ಬ ಮನುಷ್ಯನಲ್ಲಿರುವಂತಾದ್ದೆ !