ಎಲ್ಲರಂಥವನಲ್ಲ ನನ ಗಂಡ
ಸಂಪಾದಿಸಿ- “ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ. ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ. ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
- ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ: ೧) ದಾಸ ಭಾವ; ೨) ಸಖ್ಯ ಭಾವ; ೩) ಮಧುರ ಭಾವ;೪) ವಾತ್ಸಲ್ಯ ಭಾವ; ೫) ವಿರೋಧ ಭಾವ.ಇದಲ್ಲದೆ ನವವಿಧ ಭಕ್ತಿಯೂ ಇದೆ.
- ಎಲ್ಲರಂಥವನಲ್ಲ ನನ ಗಂಡ
ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||
ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||
ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||
ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||
ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||
ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
ನೋಡಿ
ಸಂಪಾದಿಸಿಉಲ್ಲೇಖ
ಸಂಪಾದಿಸಿ- ಶಿಶುನಾಳ ಶರೀಫರ ಪದಗಳು -ಅನಾಮಿಕ