೧೧ ನೆಯ ಪ್ರಕರಣ
ಜಾಜ್ವಲ್ಯವೃತ್ತಿಯು
ರಣಮಸ್ತಖಾನನ ತಾಯಿಯು ಕುಂಜವನದ ಬಂಗಲೆಯೊಳಗಿನ ಒಂದು ಕೋಣೆಯಲ್ಲಿ ಒತ್ತಟ್ಟಿಗೆ ಇದ್ದ ಹಾಗೆ ಇದ್ದಳು. ಆಕೆಯ ವಯಸ್ಸು ಸರಾಸರಿ ಐವತ್ತು ವರ್ಷದ್ದಿರಬಹುದು; ಆಕೆಯು ಒಬ್ಬ ಸಾಧು ಸ್ತ್ರೀಯಂತೆ ಕಾಲಹರಣ ಮಾಡುತ್ತಿದ್ದಳು. ಒಬ್ಬ ಬಡ ಫಕೀರಿಯು ಮಸೀದೆಯ ಮುತವಲ್ಲಿಯು ದಯಮಾಡಿ ಕೊಟ್ಟಿದ್ದ ಮಸೀದೆಯ ಒಂದು ಕೋಣೆಯಲ್ಲಿ ಇರುವಂತೆ, ಆಕೆಯು ತನ್ನ ಮಗನ ಬಂಗಲೆಯ ಒಂದು ಕೋಣೆಯಲ್ಲಿ ಇರುತ್ತಿದ್ದಳೆಂದು ಹೇಳಬಹುದು. ಆ ಕೋಣೆಯಲ್ಲಿ ಒಂದು ನವಾರದ ಹೊರಸು. ಆ ಹೊರಸಿನ ಮೇಲೆ ಏನೋ ಒಂದು ಚವ್ವಾಳಿಯ ಹಾಗೆ ಒಗೆದದ್ದು ; ತಲೆಗಿಂಬಿನ ನಿಟ್ಟಿಗೆ ಚೌರಂಗದ ಮೇಲೆ ಕುರಾಣ, ಹಾಗು ಸಾಧುಸುತ್ಪುರುಷರ ಚರಿತ್ರದ ನಾಲ್ಕಾರು ಪುಸ್ತಕಗಳು; ಅಲ್ಲಿಯೇ ಸಮೀಪದಲ್ಲಿ ಒಂದು ಸರ್ವಸಾಧಾರಣವಾದ ಸಮೆಯು ; ಕೆಲವು ಹಸರು-ಹಳದಿ ಮಣಿಗಳು ಪೋಣಿಸಿದ ಜಪಮಾಲೆಯು ; ನೀರಿನಿಂದ ತುಂಬಿದ ಕೆಲವು ಪಾತ್ರೆಗಳು, ಇವಿಷ್ಟು ಒಡವೆಗಳು ಇದ್ದವು. ಕೋಣೆಯಲ್ಲಿ ಲೋಬಾನವು (ಊದು) ವಿಶೇಷವಾಗಿ ಸುಡಲ್ಪಟ್ಟಿದ್ದರಿಂದ, ಅದರ ವಾಸನೆಯು ಕೋಣೆಯ ತುಂಬ ಇಡಿಗಿತ್ತು. ಕೋಣೆಯ ಹೊರಗೆ ಮೂರು ನಾಲ್ಕು ಜನ ಮುದುಕ-ಮುದುಕಿ ದಾಸಿಯರು ಕುಳಿತಿದ್ದರು. ಹಾಗಲ ಹಣ್ಣಿನಂತೆ ತೀರ ಮುದುಕಿಯಾದ ಒಬ್ಬ ಸ್ತ್ರೀಯು ಕೋಣೆಯೊಳಗೆ ಚೌರಂಗದ ಹತ್ತಿರ ಕುಳಿತಿದ್ದು, ರಣಮಸ್ತಖಾನನ ತಾಯಿಯು ಪುಸ್ತಕವನ್ನು ಅರ್ಧ ತೆರೆದು ಗಟ್ಟಿಯಾಗಿ ಓದಿ, ಆಕೆಗೆ ಅರ್ಥಮಾಡಿ ಹೇಳುತ್ತಿದ್ದಳು. ಹೀಗಿರುವಾಗ ರಣಮಸ್ತಖಾನನು ಒಳಗೆ ಹೋಗಿ, ಕೂಡಲೆ ಮಾಸಾಹೇಬರನ್ನು ವಿನಯದಿಂದ ನಮಸ್ಕರಿಸಿ-
ರಣಮಸ್ತಖಾನ-ತಮ್ಮ ಅಪ್ಪಣೆಯಂತೆ ಬಂದಿದ್ದೇನೆ. ತಮ್ಮ ಪ್ರಕೃತಿಯು ನೆಟ್ಟಗಿರುವದಷ್ಟೇ ನಿನ್ನೆ ದರ್ಬಾರದಲ್ಲಿ ನಡೆದ ಸಂಗತಿಯನ್ನು ನಿನ್ನೆ ರಾತ್ರಿಯೇ ಬಂದು ನಿವೇದಿಸತಕ್ಕವನಿದ್ದನು; ಆದರೆ ಶೋಧ ಮಾಡಲಾಗಿ ತಾವು ಜಪಮಾಡುತ್ತ ಕುಳಿತಿರುವಿರೆಂದು ಸುದ್ದಿ ಬಂದದ್ದರಿಂದ, ತಮಗೆ ಉಪದ್ರವ ಕೊಡಲಿಕ್ಕೆ ಬರಲಿಲ್ಲ. ಮಾಸಾಹೇಬ-ನೀನು ಬಾರದೆಯಿದ್ದದ್ದು ವಿಹಿತವೇ ಸರಿ; ಆದರೆ ದರ್ಬಾರದ ಸುದ್ದಿಯನ್ನು ಕೇಳದಿದ್ದರೆ ನನಗೆಲ್ಲಿ ಸಮಾಧಾನವಾಗಬೇಕು ? ನಾನು ಅನ್ಯರ ಮುಖದಿಂದ ಎಲ್ಲ ವೃತ್ತಾಂತವನ್ನು ಕೇಳಿದ್ದೇನೆ. ನೀವು ಬಹಳ ಒಳ್ಳೆಯ ಕೆಲಸ ಮಾಡಿದೆ. ಬಾದಶಹರ ಗೌರವಕ್ಕೆ ಒಪ್ಪುವಂತೆಯೇ ನೀನು ನಡೆಯಲಿಕ್ಕೆ ಬೇಕು; ಆದರೆ ನಾನು ನಿನ್ನನ್ನು ಈಗ ಕರೆಸಿದ ಕಾರಣವು ಬೇರೆಯಿರುತ್ತದೆ. ಅಹಮ್ಮದನಗರದಿಂದ ವಿಜಾಪುರಕ್ಕೆ ಹೋಗುವವನೊಬ್ಬನು ಸುರ್ಯೋದಯವಾಗುವದಕ್ಕೆ ಮುಂಚಿತವಾಗಿ ಬಂದು, ನನ್ನ ಮುಂದೆ ತನ್ನ ವೃತಾಂತವನ್ನೆಲ್ಲ ಹೇಳಿದನು. ನಾನು ಆತನಿಗೆ ಅಭಯವನ್ನಿತ್ತು ಕುಳ್ಳಿರಿಸಿರುತ್ತೇನೆ. ನೀನು ಆತನ ಬಾಯಿಂದ ಎಲ್ಲ ಸಂಗತಿಯನ್ನು ಕೇಳಿಕೊ. ಇಂಥವರಿಗೆ ಅಭಯಕೊಡುವದು ನಮ್ಮ ಕರ್ತವ್ಯವಾಗಿರುತ್ತದೆ. ಎಲ್ಲ ಸಂಗತಿಯನ್ನು ಕೇಳಿಕೊಂಡನಂತರ, ನಿನ್ನ ಯೋಗ್ಯತೆಗೆ ಅನುರೂಪವಾಗಿ ನಡೆದುಕೋ. ನೀನು ಹಾಗೆ ನಡೆದುಕೊಳ್ಳತ್ತೀಯೆಂಬದರಲ್ಲಿ ನನಗೆ ಸಂಶಯವಿಲ್ಲ. ನೀನು ಆ ವೃತ್ತಾಂತವನ್ನು ಕೇಳಿಕೊಂಡ ಮೇಲೆ ಸಂತಾಪಗೊಂಡು, ತನ್ನ ಕರ್ತವ್ಯವೆಂದು ತಿಳಿದು, ನೀನು ಅದನ್ನು ಮನಃರ್ಪೂವಕವಾಗಿ ಮಾಡೇ ಮಾಡುವೆ. ಮನುಷ್ಯರಿಗೆ ಎಚ್ಚರವಿಲ್ಲದ ಹಾಗೆ ಆಗಿದೆ, ತಾವು ಮಾಡಿದ್ದೇ ಪ್ರಮಾಣವೆಂದು ಅವರು ತಿಳಿದಿದ್ದಾರೆ! ಅವರಿಗೆ ನ್ಯಾಯವಿಲ್ಲ, ನೀತಿಯಿಲ್ಲ, ಅವರ ಉನ್ಮತ್ತತನವು ತಲೆಗೇರುತ್ತದೆ !
ರಣಮಸ್ತಖಾನ-ಮಾಸಾಹೇಬ, ತಾವು ಎಂದೂ ಸಿಟ್ಟಿನಿಂದ ಒಂದು ಶಬ್ದವನ್ನು ಕೂಡ ಉಚ್ಚರಿಸತಕ್ಕವರಲ್ಲ, ಹೀಗಿದ್ದು ಇಂದು ತಾವು ಇಷ್ಟು ಸಂತಾಪಗೊಳ್ಳಲಿಕ್ಕೆ ಕಾರಣವೇನು ? ಯಾರಾದರೂ ತಮ್ಮ ಉಪಮರ್ದ ಮಾಡಿದರೋ, ಅಥವಾ ಯಾರಾದರೂ......
ಮಾಸಾಹೇಬ-ಅಪ್ಪಾ, ನಿನ್ನಂಥ ಸಮರ್ಥ ಮಗನು ಮೂರ್ತಿ ಮತ್ತಾಗಿ ನನ್ನ ಹತ್ತರ ಇರುತ್ತಿರಲಿಕ್ಕೆ ಅದಾರು ನನ್ನ ಉಪಮರ್ದನ ಮಾಡುವರು ! ಆದರೆ ನನ್ನಂಥ ಬೇರೆ ಒಬ್ಬ ಸ್ತ್ರೀಯು ಅಥವಾ ನಿನ್ನ ಒಡಹುಟ್ಟಿದ ತಂಗಿಯಂತೆ ಇದ್ದ ಒಬ್ಬ ತರುಣಿಯ ಉಪಮರ್ದನವಾದರೆ, ನನ್ನ ಉಪಮರ್ದನವಾದ ಹಾಗಾಗಲಿಲ್ಲವೆ? ಅದರ ಪರಿಮಾರ್ಜನವನ್ನು ನಾವು ಮಾಡಿಕೊಳ್ಳಲಾಗದೆ ಅಹಮ್ಮದನಗರದ ಆ ಒಬ್ಬ ಮನುಷ್ಯನು ನೀನು ಬಾದಸಹನ ದೊಡ್ಡ ವಕೀಲನೆಂದು ತಿಳಿದು, ನಿನ್ನ ಮುಂದೆ ತನ್ನ ಸಂಕಟವನ್ನು ದೂರಿಕೊಳ್ಳಲಿಕ್ಕೆ ಬಂದಿದ್ದನು; ಆದರೆ ನೀನು ಇನ್ನೂ ಎದ್ದಿಲ್ಲೆಂದು ಹೇಳಲು, ಆತನು ನಿರಾಸೆಯಿಂದ-"ಹಾಗಾದರೆ ಇನ್ನು ನಮ್ಮ ದೂರು ಯಾರು ಕೇಳಬೇಕು ?” ಎಂದು ಗಟ್ಟಿಯಾಗಿ ಅನ್ನುತ್ತಿದ್ದನು. ಅದನ್ನು ನಾನು ಇಲ್ಲಿಂದಲೇ ಕೇಳಿ ಆತನನ್ನು ಕೆರಸಿಕೊಂಡು, ಆತನ ಎಲ್ಲ ವೃತ್ತಾಂತವನ್ನು ಕೇಳಿಕೊಂಡೆನು. ಆಗ ನನಗೆ ಸರ್ವಾಂಗದಲ್ಲಿ ಸಂತಾಪವು ಉತನ್ನವಾಯಿತು. ಕೂಡಲೆ ನಾನು ನಿನ್ನನ್ನು ಕರೆಯಕಳಿಸಿದೆನು. ಈಗ ಆ ಮನುಷ್ಯನನ್ನು ಇಲ್ಲಿಗೇ ಕರೆಸುತ್ತೇನೆ. ನೀನು ಆತನ ಮುಖದಿಂದ ಎಲ್ಲ ವೃತ್ತಾಂತವನ್ನು ಕೇಳಿಕೋ, ಎಂದು ಹೇಳಿ ಮಾಸಾಹೇಬರು ಆ ಮನುಷ್ಯರನ್ನು ಕರೆಯಲಿಕ್ಕೆ ತಮ್ಮ ದಾಸಿಯನ್ನು ಕಳಿಸಿದರು.
ದಾಸಿಯು ಕರೆದ ಕೂಡಲೆ, ಆ ಮನುಷ್ಯನು ಬಂದು ರಣಮಸ್ತ ಖಾನನ, ಹಾಗು ಆತನ ತಾಯಿಯ ಮುಂದೆ ಮೊಣಕಾಲೂರಿ, ಮೂರು ಮೂರು ಸಾರೆ ನೆಲಕ್ಕೆ ಹಣೆ ಹಚ್ಚಿ ತನ್ನ ತಲೆಯಮೇಲಿನ ಮುಂಡಾಸವನ್ನು ತೆಗೆದಿಟ್ಟು, ಕೈಜೋಡಿಸಿ ಗರೀಬ ಪರವರ, ಅಹಮ್ಮದನಗರದ ಸರದಾರನಾದ ಹುಸೇನ ಅಲಿ ಎಂಬುವನ ಮಗಳು, ವಿಜಾಪುರದಲ್ಲಿರುವ ತನ್ನ ಅಬಜಿಯ ಮನೆಗೆ, ನಾಲ್ಕು ದಿನ ಇದ್ದು ಬರಬೇಕೆಂದು ಹೊರಟಿದ್ದಳು ಸಂಗಡ ೮-೦೦ ಜನರನ್ನು ಕರಕೊಂಡು ಸ್ವತಃ ಆಕೆಯ ತಂದೆಯು ಬಂದಿದ್ದನು. ನಮ್ಮ ಸಂಗಡ ಶಸ್ತ್ರಾಸ್ತ್ರಗಳು ಇದ್ದವು ಹೀಗೆ ಒಳ್ಳೆ ಬಂದೋಬಸ್ತಿನಿಂದ ನಾವು ವಿಜಯನಗರದ ರಾಜ್ಯದ ಗಡಿಯಲ್ಲಿ ಬರಲು, ವಿಜಯನಗರದ ಕೆಲವು ಪುಂಡರು, ನಮ್ಮನ್ನೂ ನಮ್ಮ ಸಂಗಡಿಗರಾದ ಬೇರೆ ಪ್ರವಾಸಿಗರನ್ನೂ ಸುಲಿದರು. ನಮ್ಮ ಬಳಿಯಲ್ಲಿಯ ಒಂದು ಪೈಯನ್ನೂ, ಒಂದು ಚಲೋ ಅರಿವೆಯನ್ನು ಸಹ ಅವರು ಬಿಡಲಿಲ್ಲ. ಸುಲಿಸಿ ಕೊಂಡವರಲ್ಲಿ ಹೆಂಗಸರು ನಾಲ್ಕು ಜನರಿದ್ದರು. ನಮ್ಮ ಹುಸೇನ ಅಲಿಯ ಹದಿನೇಳು ವರ್ಷದ ಮಗಳೊಬ್ಬಳು. ಆಕೆಯ ದಾಸಿಯರಿಬ್ಬರು. ಇನ್ನೊಬ್ಬ ಗೃಹಸ್ಥನ ಹೆಂಡತಿಯೊಬ್ಬಾಕೆಯು. ಸುಲಿಗೆಯಾದ ಮೇಲೆ ದಾರಿಸಿಕ್ಕತ್ತ ನಮ್ಮ ಸಂಗಡಿಗರೆಲ್ಲರು ಓಡಿಹೋಗಿಬಿಟ್ಟರು. ನಮ್ಮ ಜನರು. ಯಜಮಾನನ, ಹಾಗು ಆತನ ಮಗಳ ಸಂರಕ್ಷಣದ ಸಲುವಾಗಿ ಬಹಳ ಹೆಣಗಾಡಿದರು. ಹೊಡೆದಾಟದಲ್ಲಿ ನಮ್ಮ ಒಡೆಯನಾದ ಹುಸೇನ ಅಲಿಖಾನನು ಮರಣ ಹೊಂದಿದನು. ಅದರಂತೆ ಬೇರೆ ಏಳೆಂಟು ಜನರು ಮರಣಹೊಂದಿದರು. ನಮ್ಮ ಸರದಾರನ ಮಗಳನ್ನೂ ಆಕೆಯ ಇಬ್ಬರು ದಾಸಿಯರನ್ನೂ ನಮ್ಮಿಬ್ಬರನ್ನೂ ಅ ದುಷ್ಟರು ಸೆರೆಹಿಡಿದು, ರಾಜದರ್ಬಾರಕ್ಕೆ ಕರಕೊಂಡು ಹೋಗಲು ನಿಶ್ಚಯಿಸಿದರು. ಇನ್ನು ಗುದ್ದಾಡಿದರೆ ಪ್ರಯೋಜನವಾಗದೆಂದು ತಿಳಿದು ನಾವು ಸುಮ್ಮನೆ ಆ ತುಂಟರ ಆಧೀನರಾಗಿ, ವಿನಯದ ಸೋಗಿನಿಂದ ಅವರೊಡನೆ ಮಾರ್ಗ ಕ್ರಮಣ ಮಾಡಹತ್ತಿದೆವು. ವಿಜಾಪುರದ ಬಾದಶಹರ ವಕೀಲನು ವಿಜಯನಗರದಲ್ಲಿರುವನೆಂಬುದು ನನಗೆ ಗೊತ್ತಿತ್ತು ; ಆದ್ದರಿಂದ ಹ್ಯಾಗಾದರೂ ಮಾಡಿ ಈ ಸುದ್ದಿಯನ್ನು ವಕೀಲ ಸಾಹೇಬರ ಕಿವಿಗೆ ಮುಟ್ಟಿಸಿದರೆ, ಹೆಂಗಸರ ಮಾನವುಳಿದೀತೆಂದು ತಿಳಿದು. ನಾನು ಕಾವಲುಗಾರರ ಕಣ್ಣು ತಪ್ಪಿಸಿ ನಿಮ್ಮ ಕಡೆಗೆ ಬಂದೆನು. ರಾಜದರ್ಬಾರಕ್ಕೆ ಹೋದಬಳಿಕ ಹೆಣ್ಣುಮಕ್ಕಳ ಮೇಲೆ ಎಂಥ ಪ್ರಸಂಗ ಬರುವದೋ ಏನೋ......”
ರಣಮಸ್ತಖಾನನು ಆ ಮನುಷ್ಯನ ಮಾತುಗಳನ್ನೆಲ್ಲ ಲಕ್ಷ್ಯಪೂರ್ವಕವಾಗಿ ಕೇಳಿಕೊಂಡನು ಆ ಮಾತುಗಳ ತಾತ್ಪರ್ಯವು ಆತನ ಮನಸ್ಸಿಗೆ ನಟ್ಟು, ಆತನು ಸೂರ್ತಿಗೊಂಡಿದ್ದನು. ಆತನು ಇದಕ್ಕೇನು ಮಾಡಬೇಕೆಂದು ತನ್ನೊಳಗೆ ಆಲೋಚಿಸಹತ್ತಿದನು. ರಾಮರಾಜನು ಮಸಲ್ಮಾನರ ಉಪಮರ್ದನ ಮಾಡುವಲ್ಲಿ ಬದ್ದ ಕಂಕಣನೆಂದು ರಣಮಸ್ತಖಾನನು ಕೇಳಿದ್ದನು ; ಅದರಂತೆ ಮುಸಲ್ಮಾನ ಸ್ತ್ರೀಯರ ಸಂಗಡ ರಾಮರಾಜನ ನಡತೆಯು, ಶೂರರಿಗೆ ಒಪ್ಪುವ ಹಾಗೆ ಇರುವದಿಲ್ಲೆಂಬ ಅಪಕೀರ್ತಿಯೂ ಎಲ್ಲ ಕಡೆಗೆ ಹಬ್ಬಿತು. ಇದನ್ನೆಲ್ಲ ಮನಸ್ಸಿನಲ್ಲಿ ತಂದು ರಣಮಸ್ತಖಾನನು, ಸದ್ಯದ ಪ್ರಸಂಗದಲ್ಲಿಯಾದರೂ ಆ ಮುಸಲ್ಮಾನ ಸ್ತ್ರೀಯರ ಅಪಮಾನವನ್ನು ಮಾಡಗೊಡದೆ, ಅವರನ್ನು ತನ್ನ ಸಂಗಡ ಕುಂಜವನಕ್ಕೆ ಕರಕ್ಕೊಂಡು ಬರಬೇಕೆಂದು ನಿಶ್ಚಯಿಸಿದನು. ಆತನು ಆ ಮನುಷ್ಯನಿಗೆ- “ಇಷ್ಟು ಹೊತ್ತಿಗೆ ನಿಮ್ಮ ಸಂಗಡಿಗರು ವಿಜಯನಗರವನ್ನು ಮುಟ್ಟಿರಬಹುದೇನು, ಎಂದು ಕೇಳಲು, ಆ ಮನುಷ್ಯನು-ಇನ್ನೂ ಮುಟ್ಟಿರಲಿಕ್ಕಿಲ್ಲ. ಇಂದು ಒಂಭತ್ತು ತಾಸಿನ ಸುಮಾರಕ್ಕೆ ಅವರು ವಿಜಯನಗರಕ್ಕೆ ಮುಟ್ಟಬಹುದು. ಅವರು ರಾತ್ರಿಯಲ್ಲಿ ಹಾದಿಯನ್ನು ನಡೆದಿರುವದಿಲ್ಲ. ರಾತ್ರಿಯಾದ್ದರಿಂದಲೇ ನನಗೆ ತಪ್ಪಿಸಿಕೊಂಡು ಬರಲಿಕ್ಕೆ ಅನುವು ದೊರೆಯಿತು, ಎಂದು ಹೇಳಿದರು. ಅದಕ್ಕೆ ರಣಮಸ್ತಖಾನನು “ಏನೂ ಚಿಂತೆಯಿಲ್ಲ, ನೀವು ಸ್ವಸ್ಥವಾಗಿ ಇರಿ, ಆ ಜನರು ಸುರಕ್ಷಿತವಾಗಿ ನಮ್ಮ ಮಹಾಸೇಬರ ಬಳಿಗೆ ಬರುವವರೆಗೆ ನಾನು ಅನ್ನಗ್ರಹಣ ಮಾಡುವದಿಲ್ಲ.” ಎಂದು ಪ್ರತಿಜ್ಞೆ ಮಾಡಿ, ತನ್ನ ತಾಯಿಯ ಕಡೆಗೆ ಬಹು ವಿನಯದಿಂದ ಭಕ್ತಿಪೂರ್ವಕವಾಗಿ ಒಮ್ಮೆ ನೋಡಿ ಅಲ್ಲಿಂದ ತಟ್ಟನೆ ಹೊರಟುಹೋದನು. ಆತನ ಪ್ರತಿಜ್ಞೆಯನ್ನು ಕೇಳಿ ಮಾಹಾಸೇಬರಿಗೆ ಬಹಳ ಸಂತೋಷವಾಯಿತು. ರಣಮಸ್ತಖಾನನಿಗೆ ಆತನ ತಾಯಿಯು ಬಹು ವಂದ್ಯಳಾಗಿದ್ದಳು. ಆತನು ದೇವರ ಮೇಲಿಟ್ಟಷ್ಟು ಭಕ್ತಿಯನ್ನು ತನ್ನ ತಾಯಿಯ ಮೇಲೆ ಇಟ್ಟಿದ್ದನು. ತಾಯಿಯ ಮಾತನ್ನು ಆತನು ಸರ್ವಥಾ ಮೀರುತ್ತಿದ್ದಿಲ್ಲ.
ರಣಮಸ್ತಖಾನನು ತಾಯಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೊರಟವನು ತನ್ನ ಸ್ಥಳಕ್ಕೆ ಬಂದನು. ಈಗ ಆತನು ಬಹಳ ರೊಚ್ಚಿಗೆದ್ದಿದ್ದನು. ತನ್ನ ಪ್ರತಿಜ್ಞೆಯನ್ನು ಯಾವಾಗ ಪೂರ್ಣ ಮಾಡೇನೆಂಬ ಆತುರವು ಅವನಿಗೆ ವಿಶೇಷವಾಗಿತ್ತು. ಆತನು ರಾಮರಾಜನ ತನಕ ತಾನೇ ತಟ್ಟನೆ ಹೋಗಿ, ನಡೆದ ಸಂಗತಿಯನ್ನು ಆತನಿಗೆ ಹೇಳಿ, ಬೇಗನೆ ಕೆಲಸ ಮಾಡಿಕೊಳ್ಳಬೇಕೆಂದು ಮಾಡಿದನು; ಆದರೆ ತಾನು ಪತ್ರವನ್ನು ಬರೆದು ಕಳಿಸಿದರೆ ಕೆಲಸವಾದೀತೆಂದು ತಿಳಿದು, ತಾನು ಹೋಗುವದನ್ನು ಉದಾಸೀನ ಮಾಡಿದನು. ಹರೆಯದ ಮಬ್ಬು, ರಾಮರಾಜನು ನನ್ನ ಮಾತು ಯಾಕೆ ಕೇಳುವದಿಲ್ಲೆಂಬ ಸೊಕ್ಕು, ನಾನು ವಿಜಾಪುರದ ಬಾದಶಹನ ವಕೀಲನೆಂಬ ಡೌಲು, ಇವೆಲ್ಲವುಗಳ ಯೋಗದಿಂದ ತನ್ನ ಮಾತನ್ನು ರಾಮರಾಜನು ನಡಿಸಿಯೇ ತೀರುವನೆಂದು ತಿಳಿದು, ರಣಮಸ್ತಖಾನನು ರಾಮರಾಜನಿಗೆ ಒಂದು ಪತ್ರವನ್ನು ಬರೆದು, ಒಬ್ಬ ಸೇವಕನ ಕೈಯಲ್ಲಿ ಕೊಟ್ಟು, ವಿಜಯನಗರಕ್ಕೆ ಕಳಿಸಿದನು. ಆ ಸೇವಕನು ಸ್ವಲ್ಪ ದೂರ ಹೋದನೋ ಇಲ್ಲವೋ ಮತ್ತೆ ಮತ್ತೆ ಆತನನ್ನು ಕರೆಸಿ- “ನಿನ್ನ ಕುದುರೆಯು ನೆಟ್ಟಗೆ ನಡಯಲಿಕ್ಕಿಲ್ಲ. ಅಶ್ವಶಾಲೆಯೊಳಗಿನ ಒಂದು ಚಲೋ ಕುದುರೆಯನ್ನು ತಕ್ಕೊಂದು ಹೋಗು” ಎಂದು ಹೇಳಿ ಆತನನ್ನು ಕಳಿಸಿದನು. ಆ ಸೇವಕನು ಅಶ್ವಶಾಲೆಯನ್ನು ಮುಟ್ಟುವದರೊಳಗೆ ರಣಮಸ್ತಖಾನನು ಮತ್ತೊಬ್ಬ ಸೇವಕನನ್ನು ಕರೆದು- “ನೋಡು, ಅವನಿಗೆ ಒಳ್ಳೆಯ ಕುದುರೆಯು ಸಿಕ್ಕಿತೋ ಇಲ್ಲವೊ' ಎಂದು ಹೇಳಿ ಕಳಿಸಿ, ಕೂಡಲೆ “ಈ ಕೆಲಸದಲ್ಲಿ ಮಂದಿಯ ಮೇಲೆ ನಂಬಿಗೆಯಿಡುವದು ಯೋಗ್ಯವಲ್ಲ” ಎಂದು ತಾನೇ ಅಶ್ವಶಾಲೆಗೆ ಹೋಗಿ, ಸೇವಕನು ಆರಿಸಿದ ಕುದುರೆಯು ತಕ್ಕದಲ್ಲವೆಂದು ಬಿಡಿಸಿ, ತನ್ನ ಪ್ರೀತಿಯ ಕುದುರೆಯನ್ನು ಆತನಿಗೆ ಕೊಡಿಸಿದನು. ಅಷ್ಟರಲ್ಲಿ ಆತನ ವಿಚಾರವು ಮತ್ತೆ ಬದಲಾಗಿ ಆತನು ಹೊರಟು ನಿಂತ ಸೇವಕನನ್ನು ಕುರಿತು-ನಿಲ್ಲು, ನೀನು ಹೋಗಿ ಪತ್ರದ ಉತ್ತರ ತರಬೇಕು, ಆಮೇಲೆ ನಾನು ಇಲ್ಲಿಂದ ಹೋಗಬೇಕು, ಇಷ್ಟು ವಿಳಂಬವನ್ನಾದರೂ ಯಾಕೆ ಮಾಡಬೇಕು ? ನಾನು ನಿನ್ನ ಸಂಗಡ ಬಂದು ಬಿಡುತ್ತೇನೆ. ನೀನು ರಾಮರಾಜನ ಬಳಿಗೆ ಹೋಗಿ ಪತ್ರದ ಉತ್ತರವನ್ನು ತರುವವರೆಗೆ, ನಾನು ವಿಜಯನಗರದ ಅಗಸೆಯ ಹೊರಗೆ ನಿಂತುಕೊಳ್ಳುವೆನು, ನೀನು ಬೇಗನೆ ಉತ್ತರವನ್ನು ತಕ್ಕೊಂಡು ಬಾ, ಎಂದು ಹೇಳಿ, ತನ್ನ ಕುದುರೆಗೆ ಜೀನು ಹಾಕಿಸಿ, ಅವಸರದಿಂದ ಪೋಷಾಕು ಹಾಕಿ ಕೊಂಡು, ಕುದುರೆಯನ್ನು ಹತ್ತಿ ವಿಜಯನಗರದ ಕಡೆಗೆ ಸಾಗಿದನು. ಅತ್ಯಂತ ಆತುರ ಸ್ವಭಾವದ ಆ ತರುಣನಿಗೆ ಎಷ್ಟು ಒತ್ತರದಿಂದ ನಡೆದರೂ ಹಾದಿಯು ಸವೆದಂತೆ ಆಗಲೊಲ್ಲದು. ಆತನಿಗೆ ತಾನು ಯಾವಾಗ ವಿಜಯನಗರಕ್ಕೆ ಹೋದೇನು, ಯಾವಾಗ ಕೆಲಸ ತೀರಿಸಿಕೊಂಡು ತನ್ನ ಮಾಸಾಹೇಬರಿಗೆ ಭೆಟ್ಟಿಯಾದೇನು ಅನ್ನುವ ಹಾಗೆ ಆಗಿತ್ತು. ಕೆಲಹೊತ್ತಿನ ಮೇಲೆ ವಿಜಯನಗರದ ಅಗಸೆಯ ಬಾಗಿಲಗಳು ಕಾಣಹತ್ತಿದವು. ಆಗ ರಣಮಸ್ತಖಾನನು ತನ್ನ ಸೇವಕನಿಗೆ-ನೀನು ಇನ್ನು ಬೇಗನ ನಡೆ, ನಾನು ಸಾವಕಾಶ ಬರುವೆನು. ನೀನು ಬರುವವರೆಗೆ ನಾನು ಅಗಸೆಯ ಹೊರಗೆ ಇರುತ್ತೇನೆ, ಎಂದು ಹೇಳಿ, ತಾನು ಮೆಲ್ಲನೆ ಸಾಗಹತ್ತಿದನು. ಆತನ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಈಗ ಆ ಅಹ್ಮದನಗರದ ಜನರು ಇಲ್ಲಿ ನನಗೆ ಭೇಟಿಯಾದರೆ, ಅವರನ್ನು ಇಲ್ಲಿಂದಲೇ ನನ್ನಸಂಗಡ ಕರಕೊಂಡು ಕುಂಜವನಕ್ಕೆ ಹೋಗಿಬಿಡುತ್ತೇನೆ, ಆ ರಾಮರಾಜನು ಮಾಡುವುದು ಮಾಡಲಿ, ಎಂದು ಆಲೋಚಿಸುತ್ತ ಹಿಂದಕ್ಕೆ ತಿರುಗಿ ನೋಡುತ್ತಿರಲು, ದೂರ ಯಾರೋ ಜನರು ಗುಂಪುಮಾಡಿ ಬರುವಂತೆ ಅವನಿಗೆ ತೋರಿತು. ಆ ಜನರು ಸ್ವಲ್ಪ ಮುಂದಕ್ಕೆ ಬರಲು, ಅವರ ನಡುವೆ ಒಂದು ಮೇಣೆಯಿದ್ದದ್ದು ಖಾನನ ಕಣ್ಣಿಗೆ ಬಿದ್ದಿತು. ಅವರೇ ಅಹ್ಮದನಗರದವರಿರಬೇಕೆಂದು ಆತನು ತರ್ಕಿಸಿ, ತನ್ನ ಕುದುರೆಯನ್ನು ನಿಲ್ಲಿಸಿದನು. ಆ ಜನರು ಸಮೀಪಕ್ಕೆ ಬಂದಕೂಡಲೇ, ರಣಮಸ್ತಖಾನನು ಅವರನ್ನು ಕುರಿತು ದಪ್ಪಿಂದ-ಯಾರು ನೀವು ? ಈ ಮೇಣೆಯೊಳಗಿನ ಸ್ತ್ರೀಯನ್ನು ಎಲ್ಲಿಗೆ ಕರಕೊಂಡು ಹೋಗುತ್ತೀರಿ ? ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಹೊರತು ನಿಮಗೆ ಒಂದು ಹೆಜ್ಜೆಯನ್ನು ಕೂಡ ಮುಂದಕ್ಕೆ ಇಡಗೊಡಲಿಕ್ಕಿಲ್ಲ. ನನಗೆ ನಿಮ್ಮ ದುಷ್ಕೃತ್ಯವೆಲ್ಲ ಗೊತ್ತಾಗಿರುತ್ತದೆ. ನಾನು ವಿಜಾಪುರದ ಬಾದಶಹನ ವಕೀಲನಿರುತ್ತೇನೆ. ಈ ಜನರು ಅಹ್ಮದನಗರದಿಂದ ವಿಜಾಪುರಕ್ಕೆ ಹೋಗುತ್ತಿದ್ದರು ; ಆದ್ದರಿಂದ ಈಗ ಅವರು ವಿಜಾಪುರದವರಿರುತ್ತಾರೆ. ಸುಮ್ಮನೆ ನನಗೆ ಅವರನ್ನು ಒಪ್ಪಿಸಿರಿ; ಇಲ್ಲದಿದ್ದರೆ............
ರಣಮಸ್ತಖಾನನ ಈ ಮಾತುಗಳನ್ನು ಕೇಳಿ ವಿಜಯನಗರದ ಜನರೊಳಗಿನವನೊಬ್ಬನು ಮುಂದಕ್ಕೆ ಬಂದು, ಅತ್ಯಂತ ಉಪಹಾಸಾಸ್ಪದವಾದ ಸ್ವರದಿಂದ ನಕ್ಕು- “ನಿನ್ನ ಪ್ರತ್ಯಕ್ಷ ಬಾದಶಹನು ಬಂದರೂ ವಿಜಯನಗರದಲ್ಲಿ ಈಗ ಆತನನ್ನು ಯಾರೂ ಕೇಳುವಹಾಗಿಲ್ಲ. ಅಂದ ಬಳಿಕ ನಿನ್ನಂಥ ವಕೀಲನನ್ನು ಯಾರು ಕೇಳಬೇಕು ? ನೀನು ನಿನ್ನ ಹಾದಿಯನ್ನು ಹಿಡಿದು ಹೋದರೆ ಮರ್ಯಾದೆಯುಳಿದೀತು. ಸಾಕು. ಬೇಟೆಯನ್ನು ಹಿಡಕೊಂಡು ಬಂದವರು, ತಮ್ಮ ಬೇಟೆಯನ್ನು ಹಾದಿಯಲ್ಲಿಯ ಕಳ್ಳನಿಗೆ ಎಂದಾದರೂ ಒಪ್ಪಿಸಬಹದೋ? ಎಂದು ನುಡಿಯುತ್ತಿರಲು, ರಣಮಸ್ತಖಾನನು ಸಂತಪ್ತನಾದನು. ಆತನು ತನ್ನ ಖಡ್ಗವನ್ನು ಒರೆಯಿಂದ ಹಿಡಿದು, ಆ ಹಿಂದುವಿಗೆ ಒಂದು ಏಟು ಕೊಟ್ಟನು. ಆಮೇಲೆ ಕೇಳುವದೇನು ಉಳಿದ ಹಿಂದುಗಳೆಲ್ಲ ರಣಮಸ್ತಖಾನನ ಮೇಲೆ ದುಮುಕಿದರು; ಆದರೆ ರಣಮಸ್ತಖಾನನು ಸರ್ವಸಾಧಾರಣ ಮನುಷ್ಯನಿದ್ದಿಲ್ಲ. ಅವರೆಲ್ಲರಿಗೆ ಸೊಪ್ಪು ಹಾಕದವನಂತೆ ಶೌರ್ಯವನ್ನು ಪ್ರಕಟಿಸಹತ್ತಿದನು. ಅಷ್ಟರಲ್ಲಿ ಜನಸಮೂಹವು ನೆರೆಯಿತು. ಕರ್ಮಧರ್ಮ ಸಂಯೋಗದಿಂದ ವಿಜಯ ನಗರದ ಒಬ್ಬ ದರ್ಬಾರದ ಗೃಹಸ್ಥನು ಅತ್ತಕಡೆಯಿಂದ ಬಂದನು. ಒಬ್ಬನ ಮೇಲೆ ಎಂಟು ಹತ್ತು ಜನರು ಏರಿ ಹೋಗುವದನ್ನು ನೋಡಿ, ಆತನು ಅವಸರದಿಂದ ಅಲ್ಲಿಗೆ ಬಂದು ವಿಜಾಪುರದ ವಕೀಲನನ್ನು ನೋಡಿದನು. ತಾವೂ ವಿಜಾಪುರದ ಬಾದಶಹನೂ ಒಂದಾಗಿ ಉಳಿದ ಮುಸಲ್ಮಾನ ರಾಜ್ಯಗಳನ್ನು ನಷ್ಟಪಡಿಸಬೇಕೆಂದು ಮಾಡಿರುವಾಗ, ತಮ್ಮ ಜನರು, ಒಬ್ಬನೇ ಒಬ್ಬನಾಗಿ ಸಿಕ್ಕಿದ್ದ ವಿಜಾಪುರದ ವಕೀಲನಿಗೆ ಏನಾದರೂ ಅಪಾಯ ಮಾಡಿದರೆ, ಕೆಲಸ ಕೆಟ್ಟಿತೆಂದು ತಿಳಿದು ಆತನು ತಮ್ಮ ಜನರನ್ನು ಕುರಿತು- “ತಡೆಯಿರಿ, ತಡೆಯಿರಿ” ಎಂದು ನಿರ್ಬಂಧಿಸುತ್ತ ರಣಮಸ್ತಖಾನನ ಬಳಿಗೆ ಬಂದನು. ಆತನು ಜಗಳದ ಕಾರಣವನ್ನೇನೂ ಅರಿಯದವನಂತೆ, ರಣಮಸ್ತಖಾನನನ್ನು ಕುರಿತು- “ಖಾನಸಾಹೇಬ, ನೀವು ಇಷ್ಟು ಸಿಟ್ಟಿಗೇಳಲಿಕ್ಕೆ ಕಾರಣವೇನಾಯಿತೆಂಬದನ್ನಾದರೂ ಹೇಳಿರಿ” ಅನ್ನಲು, ಖಾನನು ಯಾವತ್ತು ಸಂಗತಿಯನ್ನು ಹೇಳಿ, ಆ ಗೃಹಸ್ಥನನ್ನು ಕುರಿತು-ನನಗೆ ಎರಡನೆಯದೇನೂ ಬೇಡ. ಈಗ ಹಿಡಿಯಲ್ಪಟ್ಟಿರುವ ಜನರು ಮುಸಲ್ಮಾನ ಬಾದಶಾಹಿಯ ಅಧೀನದವರಿರುವದರಿಂದ, ಅವರನ್ನು ನನಗೆ ಒಪ್ಪಿಸತಕ್ಕದ್ದು. ವಿಜಾಪುರದ ವಕೀಲನು ನಾನು ಇಲ್ಲಿ ಇರುತ್ತಿರುವಾಗ, ಹೀಗೆ ಮುಸಲ್ಮಾನ ಹೆಂಗಸರನ್ನು ವಿಡಂಬನವಾಗಗೊಡಲಿಕ್ಕಿಲ್ಲ. ಈಗ ಆದ ಅಪಮಾನವನ್ನು ಸಹಿಸಲಾರೆನು. ಹಾದಿ ಹಿಡಿದು ಹೋಗುವ ಮುಸಲ್ಮಾನ ಹೆಂಗಸರನ್ನು ನಿಮ್ಮ ಪುಂಡ ಜನರು ಹಿಡಿದು ತಂದು ಉಪಹಾಸ ಮಾಡುವದನ್ನು ನೋಡುತ್ತ ನಾವು ಸುಮ್ಮನೆ ಕುಳಿತುಕೊಳ್ಳಬೇಕೇನು ? ಈ ಮೇಣೆಯನ್ನು ಮೊದಲು ಕುಂಜವನಕ್ಕೆ ತಕ್ಕೊಂಡು ನಡೆಯಿರಿ. ಆಮೇಲೆ ನೀವು ಹೇಳುವದನ್ನು ಕೇಳುವೆನು. ಹುಂ, ಎತ್ತಿರಿ ಮೇಣೆಯನ್ನು, ಮೊದಲು ನಮ್ಮ ಕುಂಜವನಕ್ಕೆ ಇದನ್ನು ತಕ್ಕೊಂಡು ನಡೆಯಿರಿ, ಎಂದು ಅಜ್ಞಾಪಿಸಹತ್ತಿದನು. ಅದಕ್ಕೆ ಆ ದರ್ಬಾರಿ ಮನುಷ್ಯನು-“ಯೋಗ್ಯವು, ನೀವು ಆಡುವ ಮಾತು ಅತ್ಯಂತ ಯೋಗ್ಯವಾಗಿರುತ್ತದೆ” ; ಆದರೆ ರಾಮರಾಜರ ಕಿವಿಯವರೆಗೆ ಈ ಸುದ್ದಿಯು ಮುಟ್ಟಬೇಕಲ್ಲವೆ ? ಅವರ ಅನುಜ್ಞೆಯ ಹೊರತು ತಾವು ಹೇಳುವಂತೆ ನಡುವೆ ಕಾರಭಾರ ಹ್ಯಾಗೆ ಮಾಡಬೇಕು.
ರಣಮಸ್ತಖಾನ-ಅವರ ಕಡೆಗೆ ನಾನು ಪತ್ರವನ್ನು ಕಳಿಸಿದ್ದೇನೆ, ಅದರ ಚಿಂತೆ ನಿಮಗೆ ಬೇಡ. ಈ ಬಾಬಿನಲ್ಲಿ ನಕಾರಾತ್ಮಕ ಶಬ್ದವನ್ನು ನುಡಿಯಲಿಕ್ಕೆ ರಾಮರಾಜನಿಗೆ ಧೈರ್ಯವಾಗಲಾರದು.
ದರ್ಬಾರಿಗೃಹಸ್ಥ-ಧೈರ್ಯವಾಗಲಿಕ್ಕಿಲ್ಲ; ಆದರೆ ವಿಜಯನಗರದ ಗಡಿಯಲ್ಲಿ ಬಂದಬಳಿಕ, ಅವರ ಅಪ್ಪಣೆ ಹೊರತು ಏನೂ ಮಾಡಲಿಕ್ಕೆ ಬರುವದಿಲ್ಲ. ತಮ್ಮ ಪತ್ರವು ಹ್ಯಾಗೂ ಹೋಗಿರುತ್ತದೆ, ಅದರ ಉತ್ತರ ಬರುವ ತನಕ ಹಾದಿಯನ್ನು ನೋಡಿರಿ. ಮಹಾರಾಜರು ನಿಮ್ಮ ಮರ್ಜಿಗೆ ವಿರುದ್ಧವಾಗಿ ನಡೆಯಲಾರರು. ಅವರಿಗೆ ಇಂಥ ಕೃತ್ಯವು ಸೇರುವದಿಲ್ಲ.
ಈ ಮಾತುಗಳನ್ನು ಕೇಳಿ ರಣಮಸ್ತಖಾನನು ವಿಜಯನಗರದ ಕಡೆಗೆ ನೋಡಿ- “ಅಗೋ, ನಂದನು ನೋಡಿರಿ ನಮ್ಮ ಸಿಪಾಯಿಯು” ಎಂದು ನುಡಿಯುತ್ತಿರಲು, ಸಿಪಾಯಿಯು ಬಂದು ರಾಮರಾಜನು ಕೊಟ್ಟ ಉತ್ತರವನ್ನು ಖಾನನ ಕೈಯಲ್ಲಿ ಕೊಟ್ಟನು. ಖಾನನು ಆತುರದಿಂದ ಅದನ್ನು ಒಡೆದು ಒಳಗಿನ ಪತ್ರೋತ್ತರಗಳನ್ನು ಓದಹತ್ತಿದನು. ಮೇಲಿನ ಒಕ್ಕಣಿಕೆಯು ಮುಗಿದ ಬಳಿಕ ಮುಂದಿನ ಸಂಗತಿಯು ಅದರಲ್ಲಿ ಹೀಗೆ ಬರೆದಿತ್ತು- “ನೀವು ಬರೆದಿರುವಂತೆ ಕೃತ್ಯವು ಸಂಭವಿಸಿದ್ದರೆ, ಪರಮನ್ಯಾಯವು; ಆದರೆ ನಾವು ಈಗ ಒಂದು ಪಕ್ಷದವರ ಅಂಬೋಣವನ್ನು ಕೇಳಿಕೊಂಡಂತಾಯಿತು. ಇನ್ನೊಂದು ಪಕ್ಷದವರ ಅಂಬೋಣವನ್ನು ಕೇಳಿಕೊಂಡ ಹೊರತು ಯಾವ ಮಾತನ್ನೂ ಆಡಲಿಕ್ಕೆ ಬರುವದಿಲ್ಲ. ನೀವು ಪತ್ರದಲ್ಲಿ ಬರೆದಿರುವಂತೆ ಆ ಜನರು ಇತ್ತ ಕಡೆಗೇ ಬರುವರಾದ್ದರಿಂದ, ಅವರು ಬಂದಕೂಡಲೇ ವಿಚಾರಿಸಿ, ಯೋಗ್ಯ ವ್ಯವಸ್ಥೆ ಮಾಡಲಾಗುವದು. ನಿಷ್ಕಾರಣನಾಗಿ ಬಡಬಗ್ಗರಿಗೆ ವಿಶೇಷವಾಗಿ ಸ್ತ್ರೀಯರಿಗೆ, ತ್ರಾಸವಾದದ್ದನ್ನು ಮಹಾರಾಜರು ಎಂದಿಗೂ ತಡೆಯರು. ಹೀಗೆ ತ್ರಾಸ ಕೊಟ್ಟವರನ್ನು ಶಿಕ್ಷಿಸದೆ ಅವರು ಎಂದಿಗೂ ಉದಾಸೀನ ಮಾಡಲಾರರೆಂಬುದನ್ನು ತಾವು ಪೂರ್ಣ ಲಕ್ಷ್ಯದಲ್ಲಿಡಬೇಕು.
****