ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೯೧-೧೦೦

೧೦ನೆಯ ಪ್ರಕರಣ

ರಾಮರಾಜನ ಉತ್ಕರ್ಷ

ಅಚ್ಯುತರಾಯನು ರಾಜ್ಯಭಾರಕ್ಕೆ ಕೇವಲ ಅಯೋಗ್ಯನೆಂಬುದನ್ನು ವಾಚಕರು ಅರಿತಿರುವರು. ಸ್ವತಂತ್ರ ರೀತಿಯಿಂದ ಕಾರಭಾರ ಮಾಡಲಿಕ್ಕೆ ಆತನಲ್ಲಿ ಯೋಗ್ಯತೆಯೇ ಇದ್ದಿಲ್ಲ. ಹೋಜೆ ತಿರುಮಲರಾಯನು ಇರುವ ತನಕ ಆತನ ಕೈಯೊಳಗಿನ ಸೂತ್ರದ ಗೊಂಬೆಯಾಗಿದ್ದನು. ಈಗ ರಾಮರಾಜನ ಕೈಯೊಳಗಿನ ಸೂತ್ರದ ಗೊಂಬೆಯಾದನು. ರಾಮರಾಜನ ವಿಷಯವಾಗಿ ಯಾವತ್ತು ಜನರು ಆದರ ಬುದ್ದಿಯುಳ್ಳವರಾಗಿದ್ದರು. ಆತನ ಬುದ್ದಿ ಸಾಮರ್ಥ್ಯದಿಂದಲೇ ವಿಜಯನಗರದ ಸಂರಕ್ಷಣವಾಯಿತೆಂದು ಎಲ್ಲರು ತಿಳಿದಿದ್ದರು ರಾಮರಾಜನು ಒಳ್ಳೆ ಚತುರನೂ, ಮಹಾ ಪರಾಕ್ರಮಿಯೂ, ನಿಜವಾದ ಹಿಂದೂ ಧರ್ಮಾಭಿಮಾನಿಯೂ ಎಂಬ ಕೀರ್ತಿಯೂ ಎಲ್ಲೆಡೆಗೆ ಹಬ್ಬಿತು. ತಿರುಮಲರಾಯನ ಮರಣದ ನಂತರದ ರಾಜ್ಯದಲ್ಲಿ ಸ್ವಾಸ್ಥ್ಯವು ನೆಲೆಗೊಂಡ ಬಳಿಕ ರಾಮರಾಜನು ದರ್ಬಾರು ಕೂಡಿಸಿ ಅಚ್ಯುತರಾಯನಿಂದ ತಾನು ಮಂತ್ರಿ ಪದದ ಉಡುಗೊರೆಗಳನ್ನು ಇಸುಕೊಳ್ಳಬೇಕೆಂದು ಮಾಡಿದನು. ಈ ದರ್ಬಾರದ ನೆವದಿಂದ ವಿಜಯನಗರದ ರಾಜ್ಯದ ಐಶ್ವರ್ಯವನ್ನೂ ಸಾಮಥ್ಯವನ್ನೂ, ಪರರಾಜರ ಕಣ್ಣಿಗೆ ಹಾಕಿ, ವಿಜಯನಗರದ ಅರಸರ ವಿಷಯದ ಭಯವು ಅವರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕೆಂದು ರಾಮರಾಜನು ಯೋಚಿಸಿದ್ದನು. ಹೋಜೆ ತಿರುಮಲನ ಕಾಲದಲ್ಲಿ ಉಂಟಾಗಿದ್ದ ವಿಜಯನಗರದ ರಾಜ್ಯದೊಳಗಿನ ಒಡಕು ಹೋಗಿ, ಪುನಃ ರಾಜ್ಯದಲ್ಲಿ ಒಕ್ಕಟ್ಟು ಉತ್ಪನ್ನವಾಗಿರುವದೆಂದು ಎಲ್ಲರಿಗೆ, ವಿಶೇಷವಾಗಿ ಮುಸಲ್ಮಾನ ಬಾದಶಹರಿಗೆ ಆತನು ತೋರಿಸಬೇಕಾಗಿತ್ತು. ಹೀಗೆ ಮುಸಲ್ಮಾನ ಬಾದಶಹರು ತನ್ನ ಸಾಮರ್ಥ್ಯವನ್ನು ಅರಿತು, ಕೆಲವು ವರ್ಷಗಳವರೆಗಾದರು ತನ್ನ ಗೊಡವೆಗೆ ಬಾರದಿರುವಾಗ, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಮೇಲೆ ವಿಜಾಪುರದ ಇಬ್ರಾಹಿಂ ಆದಿಲಶಹನ ಸಮಾಚಾರವನ್ನು ತಕ್ಕೊಂಡು, ಹೊಜೆ ತಿರುಮಲರಾಯನ ಕಾಲದಲ್ಲಾಗಿದ್ದ ಅಪಮಾನದ ಸೇಡು ತೀರಿಸಿಕೊಳ್ಳಬೇಕೆಂದು ಮಾಡಿದನು. ಇಬ್ರಾಹಿಂ ಆದಿಲಶಹನಾದರೂ ರಾಮರಾಜನ ಯೋಗ್ಯತೆಯನ್ನು ನೋಡಿ ಅಂಜಿ ನಡೆಯುತ್ತಿದ್ದನು. ಆತನು ರಾಮರಾಜನಿಗೆ “ನೀವು ನಿಮ್ಮ ರಾಜ್ಯಕಾರಭಾರವನ್ನು ಬೇಕಾದ ಹಾಗೆ ನಡಿಸಿರಿ, ಮಾತ್ರ ನಮ್ಮ ವಕೀಲನ ಮಾನಮರ್ಯಾದೆಗಳನ್ನು ಯೋಗ್ಯರೀತಿಯಿಂದ ನಡೆಸಿ, ಒಡಂಬಡಿಕೆಯ ಕರಾರುಗಳನ್ನು ಸರಿಯಾಗಿ ಪಾಲಿಸಿದರಾಯಿತು; ನಮಗೆ ತಿರುಮಲರಾಯನು ಕಾರಭಾರ ಮಾಡಿದರೂ ಅಷ್ಟೇ, ರಾಮರಾಜನು ಕಾರಭಾರ ಮಾಡಿದರೂ ಅಷ್ಟೇ, ಎಂದು ಹೇಳಿ ಕಳಿಸಿಕೊಡಹತ್ತಿದನು. ರಾಮರಾಜನಿಗೆ ಇಬ್ರಾಹಿಂಶಹನ ಭಯವಿದ್ದಿಲ್ಲ. ಈಗ ಆತನು ತನ್ನನ್ನು ತಡವಲಾರನೆಂಬುದು ರಾಮರಾಜನಿಗೆ ಸಂಪೂರ್ಣವಾಗಿ ಗೊತ್ತಾಗಿತ್ತು,

ದರ್ಬಾರದ ದಿವಸವು ಗೊತ್ತಾಯಿತು. ನಾಲ್ಕೂ ಕಡೆಗೆ ಪತ್ರಗಳು ಹೋದವು. ವಿಜಾಪುರ, ಗೋವಳಕೊಂಡ, ಅಮ್ಮದನಗರ, ಬೀದರ ಈ ನಾಲ್ವರು ಮುಸಲ್ಮಾನ ಬಾದಶಹರಿಗೂ, ಗೋವೆಯ ರಾಜ್ಯದ ಪೋರ್ಚುಗೀಸರಿಗೂ ನಿಮಂತ್ರಣ ಪತ್ರಿಕೆಗಳನ್ನು ಕಳಿಸಿದನು. ಸ್ವತಃ ತನ್ನ ರಾಜ್ಯದೊಳಗಿನ ಯಾವತ್ತು ಕಿಲ್ಲೆದಾರರಿಗೂ, ಠಾಣೇದಾರರಿಗೂ ಸುಭೇದಾರರಿಗೂ, ಮಾಂಡಲಿಕ ರಾಜರಿಗೂ ಸೈನ್ಯಸಹಿತವಾಗಿ ಬರಲಿಕ್ಕೆ ರಾಮರಾಜನು ಆಜ್ಞಾಪತ್ರಗಳನ್ನು ಕಳಿಸಿದನು. ತನ್ನವರಲ್ಲಿ ತನಗೆ ಅನುಕೂಲರಾದ ಜನರನ್ನೂ, ತನಗೆ ಪ್ರತಿಕೂಲರಾದ ಜನರನ್ನೂ ಕೂಡಿಯೇ ಕರಿಸಿ, ಅವರನ್ನು ಕುರಿತು- “ಈಗಿನ ಪ್ರಸಂಗವು ಕಠಿಣವಾದದ್ದು. ನಮ್ಮ ರಾಜ್ಯವನ್ನು ನುಂಗಲಿಕ್ಕೆ ನಾಲ್ವರು ಮುಸಲ್ಮಾನ ಬಾದಶಹರು ಹೊಂಚು ಹಾಕಿ ಕುಳಿತಿರುವರೆಂಬುದು ನಿಮಗೆ ಗೊತ್ತೇ ಇದೆ. ಇಂಥ ಪ್ರಸಂಗದಲ್ಲಿ ನಮ್ಮಲ್ಲಿ ಒಡಕು ಇರಲಾಗದು. ನಮ್ಮ ರಾಜ್ಯದ ಐರ್ಶವರ್ಯವನ್ನೂ, ಬಲವನ್ನೂ ಹೊರಗೆಡವಿ, ಅದರಿಂದ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಬೇಕು. ಅಂದರೆ ಎಲ್ಲರು ತೆಪ್ಪಗಾಗಿ, ನಮ್ಮ ಉಸಾಬರಿಗೆ ಬರಲಿಕ್ಕಿಲ್ಲ. ಆಮೇಲೆ ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗುವದು.” ಎಂದು ಹೇಳಲು, ಅವರೆಲ್ಲರು ಒಡಂಬಟ್ಟು ರಾಮರಾಜನ ಸೂಚನೆಯಂತೆ ದರ್ಬಾರದ ವ್ಯವಸ್ಥೆಗೆ ಅನುಕೂಲವಾದರು. ರಾಮರಾಜನ ವಿಷಯವಾಗಿ ಅವರಲ್ಲಿ ಪ್ರೇಮಾದರಗಳು ಉತ್ಪನ್ನವಾದವು. ವಿದ್ಯಾನಗರದ ಅಥವಾ ವಿಜಯನಗರದ ಐಶ್ವರ್ಯವು ಅಪಾರವಾಗಿತ್ತು. ರಾಜದರ್ಬಾರವೆಂದರೆ, ರಾಜ್ಯದ ಸಂಪತ್ತಿನ, ಹಾಗು ಸಾಮರ್ಥ್ಯದ ಒಂದು ಬಗೆಯ ಪ್ರದರ್ಶನವೇ ಆಗಿರುತ್ತಿತ್ತು. ಈ ಪ್ರಸಂಗದಲ್ಲಿಯಂತು ರಾಮರಾಜನು ಆ ಪ್ರರ್ದಶನವನ್ನು ಅತ್ಯುತ್ತಮ ರೀತಿಯಿಂದ ಮಾಡಿದನೆಂದು ಹೇಳಬಹುದು. ಅರಮನೆಯಿಂದ ಅರಸರ ಮೆರವಣಿಗೆಯು ಹೊರಟು, ರಾಜದರ್ಬಾರಕ್ಕೆ ಬರಬೇಕೆಂದು ಗೊತ್ತಾಗಿತ್ತು. ಅದರಂತೆ ಅರಸನ ಮೆರವಣಿಗೆಯು ಅರಮನೆಯಿಂದ ಹೊರಟಿತು. ಅರಸರ ಮೆರವಣಿಗೆಯು ರಾಜಮಾರ್ಗವನ್ನು ಹಿಡಿದು ಸಾಗಿದಾಗ, ಕಣ್ಣಿಗೆ ಬೀಳುವ ವೈಭವದ ವರ್ಣನೆಗಳನ್ನು ಪ್ರಾಚೀನ ಕಾವ್ಯಗಳಲ್ಲಿ ವರ್ಣಿಸಿರುವಷ್ಟೆ ? ಆದರೆ ಆ ವರ್ಣನೆಗಳನ್ನು ಹಿಂದಕ್ಕೆ ಸರಿಸುವಂಥ ವೈಭವವು ಈಗಿನ ಮೆರವಣಿಗೆಯಲ್ಲಿ ಕಣ್ಣಿಗೆ ಬೀಳುವಂತೆ ರಾಮರಾಜನು ವ್ಯವಸ್ಥೆ ಮಾಡಿದ್ದನು. ಯಾವತ್ತು ಮುಸಲ್ಮಾನ ಬಾದಶಹರಿಂದ ಕಳಿಸಲ್ಪಟ್ಟಿದ್ದ ವಕೀಲರು, ವಿಜಯನಗರದ ಐಶ್ವರ್ಯ-ಸಾಮರ್ಥ್ಯಗಳನ್ನು ನೋಡಿ, ಬೆರಗಾದರು. ಪಟ್ಟಣದ ಯಾವತ್ತು ರಾಜಮಾರ್ಗಗಳಿಂದ ಮೆರವಣಿಗೆಯು ಸಾಗಿಹೋಯಿತು. ಮೆರವಣಿಗೆಯ ಮುಂಭಾಗದಲ್ಲಿ ಒಂದು ದೊಡ್ಡ ಆನೆಯ ಮೇಲೆ ಒಬ್ಬ ಮನುಷ್ಯನು ವಿಜಯನಗರದ ಧ್ವಜವನ್ನು ಹಿಡಕೊಂಡು ಕುಳಿತುಕೊಂಡಿದ್ದನು. ಆ ಧ್ವಜಪಟದ ಒಂದು ಮಗ್ಗಲಿಗೆ ಶ್ರೀ ವಿಠ್ಠಲ ಸ್ವಾಮಿಯ ಚಿತ್ರವೂ, ಮತ್ತೊಂದು ಮಗ್ಗಲಿಗೆ ನೃಸಿಂಹನ ಚಿತ್ರವೂ ಕಣ್ಣಿಗೆ ಬೀಳುತ್ತಿದ್ದವು. ಇಂಥ ಧ್ವಜಸ್ತಂಭವನ್ನು ಆನೆಯ ಮೇಲೆ ಅತ್ತಿತ್ತ ಉಲಕಾಡದಂತೆ ನಿಲ್ಲಿಸಿದ್ದರು. ಧ್ವಜವು ಮಾತ್ರ ಗಾಳಿಯಿಂದ ಪಟಪಟ ಸಪ್ಪಳ ಮಾಡುತ್ತ ಆಕಾಶದಲ್ಲಿ ಗಾಂಭೀರ್ಯದಿಂದ ಹೊಯ್ದಾಡುತ್ತಿತ್ತು. ಈ ಆನೆಯ ಹಿಂದೆ ನೂರಾರು ಆನೆಗಳು ಸಾಲುಗೊಂಡು ಸಾಗಿದ್ದವು. ಆಗ ವಿಜಯನಗರದ ಐಶ್ವರ್ಯದ ಸಾಕ್ಷಿಯಾಗಿ ಆ ರಾಜ್ಯದಲ್ಲಿ ಎರಡು ಸಾವಿರದವರೆಗೆ ಆನೆಗಳು ಇದ್ದವು. ಅವುಗಳಲ್ಲಿ ಆರಿಸಿ ತಂದಿದ್ದ ಈ ನೂರಾರು ಆನೆಗಳ ಹಿಂಡು ನೋಡುವವರ ಮನೋರಂಜನವನ್ನಲ್ಲದೆ, ನೋಡುವವರಲ್ಲಿ ಒಂದು ಪ್ರಕಾರದ ಭಯವನ್ನೂ ಉಂಟು ಮಾಡುತ್ತಿತ್ತು. ಆ ಮೆರವಣಿಗೆಯಲ್ಲಿ (ಗಜ) ಬೃಂಹಿತದೊಡನೆ ಕನ್ನಡಿಗರ ಹೃದಯವು ಅಭಿಮಾನಾನಂದದಿಂದ ಕಂಪಿಸಿದರೆ, ವೈರಿಗಳ ಹೃದಯವು ಮಾತ್ಸರ್ಯಯುಕ್ತ ಭಯದಿಂದ ಕಂಪಿಸುತ್ತಿರಬಹುದು ! ಆ ಆನೆಗಳ ಹಿಂದೆ ಕುದುರೆಗಳ ಸಾಲುಗಳೂ, ಅವುಗಳ ಹಿಂದಿನಿಂದ ಕಾಲಾಳುಗಳ ತಂಡಗಳೂ ಸಡಗರದಿಂದ ಸಾಗಿದ್ದವು. ಕಾಲಾಳುಗಳ ಸಂಖ್ಯೆಗೆ ಲೆಕ್ಕವಿದ್ದಿಲ್ಲ ನಟ್ಟನಡುವೆ ಭವ್ಯವಾದ ಆನೆಯ ಮೇಲೆ ಬೆಳ್ಳಿಯ ಅಂಬಾರಿಯಲ್ಲಿ ರಾಮರಾಜನ ಹಾಗು ಆತನ ಬಂಧುವಾದ ತಿರುಮಲರಾಯನ, ಅದರಂತೆ ಆತನ ಮಿತ್ರನಾದ ಶಾರ್ಜ್ಞಧರನ ಸವಾರಿಗಳು ವಿರಾಜಮಾನವಾಗಿದ್ದವು. ನಾನಾಪ್ರಕಾರದ ರಣವಾದ್ಯಗಳಾದ ಭೇರಿಗಳೂ ನಗಾರೆ-ನೌಬತ್ತುಗಳೂ, ಕಹಳೆ ತುತ್ತೂರಿಗಳೂ ಅಟ್ಟಹಾಸದಿಂದ ಧ್ವನಿಮಾಡುತ್ತಿದ್ದವು. ಅರಸನ ಸವಾರಿಯು ದರ್ಬಾರದ ಬಾಗಿಲಿಗೆ ಬರುವದರೊಳಗಾಗಿ ರಾಮರಾಜನೂ, ಆತನ ಬಂಧು-ಮಿತ್ರರೂ ತಮ್ಮ ಆನೆಗಳನ್ನಿಳಿದು, ಅರಸನ್ನು ಇದಿರ್ಗೊಂಡು ಕರಕೊಂಡು ಹೋಗುವದಕ್ಕಾಗಿ ಮುಂಗಡ ಬಂದುನಿಂತಿದ್ದರು. ದ್ವಾರದಲ್ಲಿಯೇ ಮಹಾರಾಜರ ಪಾದವಂದನವೂ. ಪ್ರೋಕ್ಷಣವೂ ಆದಮೇಲೆ, ಮುಜುರೆಗಳನ್ನು ಸ್ವೀಕರಿಸುತ್ತ ಮಹಾರಾಜರು ಸಿಂಹಾಸನಾರೂಢರಾದರು. ಆಮೇಲೆ ಬಂದವರ ಯಾದಿಯನ್ನು ಓದ ಹತ್ತಿದರು. ಅವರವರ ಹೆಸರು ಬಂದಬಂದಂತೆ, ಅವರವರು ಎದ್ದು ನಿಂತು ವಿನಯದಿಂದ ಎದ್ದು ನಿಂತು ಅಚ್ಯುತರಾಯನನ್ನು ನಮಿಸಿ ರಾಮರಾಜನ ಅಭಿನಂದನ ಮಾಡುತ್ತಲಿದ್ದರು. ಇದರಂತೆಯೇ ಮುಸಲ್ಮಾನ ಬಾದಶಹರ ವಕೀಲರೂ ಮಾಡಿದರು. ರಾಮರಾಜನು ದರ್ಬಾರದ ಈ ಪರಮವೈಭವವನ್ನು ನೋಡಿ, ಪರಮಾನಂದಪಟ್ಟನು. ಆಮೇಲೆ ಅವರವರ ಮಾನಮರ್ಯಾದೆಗಳಂತೆ ಅವರವರಿಗೆ ಉಡುಗೊರೆಗಳೂ ಕೊಡಲಟವು. ರಾಮರಾಜನ ಮನೋದಯವು ಈ ಕಾಲದಲ್ಲಿ ಪೂರ್ಣವಾಗಿ ಸಫಲವಾಯಿತು. ಅಚ್ಯುತರಾಯನ ಕಾಲದಲ್ಲಿ ವಿಜಯನಗರದ ರಾಯರು ವಿಜಾಪುರದ ಬಾದಶಹನಿಗೆ ಸಣ್ಣಾಗಿ ನಡೆದಾಗ್ಯೂ, ಅವರ ವೈಭವ ಸಾಮರ್ಥ್ಯಗಳು ಯಥಾ ಸ್ಥಿತವಾಗಿರುತ್ತವೆಂತಲೂ, ರಾಮರಾಜನು ಆ ರಾಜ್ಯದ ಪುರಸ್ಕೃತನಾಗಿರುವತನಕ, ಅವು ಅಭಿವೃದ್ದಿಯಾಗುತ್ತ ಹೋಗುವದರಲ್ಲಿ ಸಂಶಯವಿಲ್ಲೆಂತಲೂ, ಮುಸಲ್ಮಾನ ಬಾದಶಹರ ವಕೀಲರೇ ಮೊದಲಾದವರು ತಿಳಿಕೊಂಡರು. ದರ್ಬಾರದ ಈ ಎಲ್ಲ ಪ್ರಕಾರವನ್ನು ನೋಡಿ ಮುಸಲ್ಮಾನ ವಕೀಲರು ಚಕಿತರಾಗಿ, ರಾಮರಾಜನ ಅಳಿಕೆಯ ಕಾಲದಲ್ಲಿಯಂತು ತಮ್ಮ ಬೇಳೆಯು ಬೇಯಲಿಕ್ಕಿಲೆಂದು ತಿಳಿದು, ಅದರಂತೆ ತಮ್ಮ ತಮ್ಮ ಬಾದಶಹರಿಗೆ ತಿಳಿಸಿದರು.

ರಾಮರಾಜನು ವಿಜಯನಗರದ ರಾಜ್ಯದಲ್ಲಿ ವ್ಯವಹರಿಸಿದ ಕಾಲವು ಬಹು ದೀರ್ಘವಾದದ್ದು, ಆತನ ಆಳಿಕೆಯ ಆರಂಭವು ವಿಜಯನಗರ ರಾಜ್ಯದ ಅತ್ಯುತ್ಕರ್ಷದ ಆರಂಭವಾಗಿದ್ದು, ಆತನ ಆಳಿಕೆಯ ಸಮಾಪ್ತಿಯು ಆ ರಾಜ್ಯದ ವಿಧ್ವಂಸದ ಪರಮಾವಧಿಯಾಗಿರುವದು. ಆ ವಿಧ್ವಂಸದ ಬೀಜವನ್ನು ಆತನು ತನ್ನ ತಾರುಣ್ಯದಲ್ಲಿ ಬಿತ್ತಿ, ಅದರ ಘಾತಕಫಲವನ್ನು ವೃದ್ಧಾಪ್ಯದಲ್ಲಿ ಭೋಗಿಸಿದನು. ಆತನ ದೀರ್ಘ ಕಾಲದ ಆಳಿಕೆಯಲ್ಲಿ ಬಾಮನೀರಾಜ್ಯದ ನಾಲ್ಕು ಶಾಖೆಗಳಲ್ಲಿಯೂ ಇಬ್ಬರಿಬ್ಬರಾದರೂ ಬಾದಶಹರು ಆಗಿ ಹೋದರು. ರಾಮರಾಜನ ತಂತ್ರಗಳೂ ಕೃಷ್ಣದೇವರಾಯರ ಮರಣದಿಂದ, ಅಂದರೆ ೧೫೩೦ನೇ ಇಸವಿಯಿಂದ ಆರಂಭವಾದವು. ೧೫೩೦ ರಿಂದ ೧೫೪೩ನೇ ಇಸವಿಯ ವರೆಗಿ ೧೩ ವರ್ಷಗಳಲ್ಲಿ ಆತನು ಕೆಲವು ವರ್ಷಗಳನ್ನು ಅಜ್ಞಾತವಾಸದಲ್ಲಿಯೂ, ಕೆಲವು ವರ್ಷಗಳನ್ನು ಕುಟಿಲತಂತ್ರ ರಚನೆಯಲ್ಲಿಯೂ ಕಳೆದನು. ಅಚ್ಯುತರಾಯನು ಮರಣ ಹೊಂದಿ ನಂತರ ಆತನ ಅಣ್ಣನ ಮಗನಾದ ಸದಾಶಿವರಾಯನನ್ನು ರಾಮರಾಜನು ಪಟ್ಟಕ್ಕೆ ಕುಳ್ಳಿರಿಸಿದನು. ಈ ಕೆಲಸದಲ್ಲಿ ರಾಮರಾಜನ ಬಂಧುಗಳಾದ ತಿರುಮಲನೂ, ವೆಂಕಟಾದ್ರಿಯೂ ಒಳಿತಾಗಿ ಸಹಾಯ ಮಾಡಿದರು. ಸದಾಶಿವರಾಯನು ಸಾಯುವವರೆಗೆ ಈ ಮೂವರ ಕೈಯೊಳಗೆ ಸೆರೆಯಾಳಿನಂತೆ ಜೀವಿಸಿದನು. ಈ ಕಾಲದಲ್ಲಿ ರಾಮರಾಜನೇ ವಿಜಯನಗರದ ನಿಜವಾದ ರಾಜನಾಗಿದ್ದನು; ಆದರೆ ಆತನು ತನ್ನನ್ನು “ಮಹಾರಾಜನೆಂ"ದಾಗಲಿ “ಸಾಮ್ರಾಟನೆಂ"ದಾಗಲಿ ಕರೆಸಿಕೊಳ್ಳದೆ, “ಮಹಾಮಂಡಲೇಶ್ವರ” ನೆಂಬ ಕಡಿಮೆ ದರ್ಜೆಯ ಹೆಸರಿನಿಂದಲೇ ಕರೆಸಿಕೊಳ್ಳಹತ್ತಿದನು. ಎರಡು ವರ್ಷಗಳಿಗೊಮ್ಮೆ, ಅಥವಾ ನಾಲ್ಕು ವರ್ಷಗಳಿಗೊಮ್ಮೆ ಯಾವಾಗಾದರೂ ದರ್ಬಾರ ನೆರೆಯಿಸಿ, ಆಗ ಸದಾಶಿವರಾಯನನ್ನು ಸಿಂಹಾಸನದ ಮೇಲೆ ಕೂಡ್ರಿಸಿ, ಎಲ್ಲ ಮುಖ್ಯ ಮರ್ಯಾದೆಗಳನ್ನು ಆತನಿಗೇ ಕೊಡಿಸುತ್ತಿದ್ದನು. ಇಸವಿ ಸನ್ ೧೫೪೩ ರಿಂದ ಅಂದರೆ, ತನ್ನ ನಿಜವಾದ ಆಳಿಕೆಗೆ ಆರಂಭವಾದಂದಿನಿಂದ ರಾಮರಾಜನು ವಿಜಯನಗರದ ರಾಜ್ಯದ ಉತ್ಕರ್ಷವನ್ನು ಮಾಡಲಾರಂಭಿಸಿದನು. ಆತನು ವಿಜಾಪುರದ ಇಬ್ರಾಹಿಂ ಆದಿಲಶಹನಿಗೂ, ಗೋವಳಕೊಂಡದ ಕುತುಬಶಹನಿಗೂ ಬಹಳ ತ್ರಾಸು ಕೊಡಹತ್ತಿದನು. ವಿಜಾಪುರದ ಆದಿಲಶಹನ ಮೇಲಂತು ಆತನ ಸಿಟ್ಟು ಇದ್ದೇ ಇತ್ತು. ಆತನ ಸೇಡು ತೀರಿಸಿಕೊಳ್ಳುವ ಸಂಧಿಯನ್ನು ರಾಮರಾಜನು ನೋಡುತ್ತಿದ್ದನು. ಈ ಸಂಧಿಯನ್ನು ಇಬ್ರಾಹಿಂ ಆದಿಲಶಹನೇ ಒದಗಿಸಿಕೊಟ್ಟನು, ಆತನು ಗೋವಳಕೊಂಡದ ಬಾದಶಹನ ರಾಜ್ಯವನ್ನು ಕಸಿದುಕೊಂಡು, ತನ್ನ ರಾಜ್ಯವನ್ನು ಬೆಳೆಸುವ ಇಚ್ಛೆಯಿಂದ ರಾಮರಾಜನ ಸಹಾಯವನ್ನು ಬೇಡಿದನು. ಆಗ ರಾಮರಾಜನು ಆದಿಲಶಹನಿಗೆ ಸಹಾಯ ಮಾಡಿ ತನ್ನ ರಾಜ್ಯದೊಳಗಿನ ಆತನ ವಕೀಲನನ್ನು ತಿರುಗಿ ಕಳುಹಿ, ಕುಂಜವನವನ್ನು ತನ್ನ ಕೈಯಲ್ಲಿ ತಕ್ಕೊಂಡನು. ಹೀಗೆ ಮುಸಲ್ಮಾನರ ನಾಲ್ವರು ಬಾದಶಹರಲ್ಲಿ ಕಲಹವನ್ನುಂಟು ಮಾಡಿ, ತಾನು ಒಮ್ಮೆ ಒಬ್ಬರಿಗೆ, ಮತ್ತೊಮ್ಮೆ ಮತ್ತೊಬ್ಬರಿಗೆ ಸಹಾಯ ಮಾಡುತ್ತ, ರಾಮರಾಜನು ಬಲಿಷ್ಠನಾಗಹತ್ತಿದನು. ಮುಂದೆ ೧೫೫೭ರಲ್ಲಿ ಇಬ್ರಾಹಿಂ ಆದಿಲಶಹನು ಮರಣಹೊಂದಲು, ವಿಜಾಪುರದಲ್ಲಿ ಅಲೀ ಆದಿಲಶಹನ ಆಳ್ವಿಕೆ ಆರಂಭವಾಯಿತು.

ಅಲಿ ಆದಿಲಶಹನು ವಿಜಾಪುರದ ಸಿಂಹಾಸನವೇರಿದ ಬಳಿಕ ಆತನಿಗೂ ಅಹಮ್ಮದನಗರದ ಹುಸೇನ ನಿಜಾಮಶಹನಿಗೂ ದ್ವೇಷವುಂಟಾಯಿತು. ತನ್ನೊಬ್ಬನಿಂದ ನಿಜಾಮಶಹನ ಪಾರಪತ್ಯ ಮಾಡುವದಾಗದೆಂದು ತಿಳಿದು, ಅಲಿ ಆದಿಲಶಹನು ರಾಮರಾಜನ ಸಹಾಯವನ್ನು ಕೇಳಿಕೊಂಡನು. ಅದಕ್ಕೆ ರಾಮರಾಜನು ಸಂತೋಷದಿಂದ ಒಡಂಬಟ್ಟು ಅಲಿಗೆ ಸಹಾಯ ಮಾಡಿದನು. ಈ ಯುದ್ಧವು ೧೫೫೮ ಆಯಿತು. ಈ ಪ್ರಸಂಗದಲ್ಲಿ ಅಲೀ ಆದಿಲಶಹನೂ, ರಾಮರಾಜನೂ ಕೂಡಿ ಅಹಮ್ಮದನಗರ ರಾಜ್ಯದಲ್ಲಿ ಅನರ್ಥವನ್ನು ಎಸಗಿದರು. ಪರಿಂಡೆಯಿಂದ ಜುನ್ನರದವರೆಗೆ ಮತ್ತು ಅಹಮ್ಮದನಗರದಿಂದ ದೌಲತಾಬಾವದವರೆಗೆ ಒಂದು ಹಳ್ಳಿಯಲ್ಲಿ ಕೂಡ ಜನವಸತಿಯು ಉಳಿಯದಂತೆ ರಾಜ್ಯವನ್ನು ಬೇಚಿರಾಖು ಮಾಡಿದರು. ಮುಂದೆ ಬರಬರುತ್ತ ಅಲೀ ಆದಿಲಶಹನಿಗೂ ರಾಮರಾಜನಿಂದ ತ್ರಾಸವಾಗಹತ್ತಿತು. ರಾಮರಾಜನು ಎಲ್ಲ ಮುಸಲ್ಮಾನ ಬಾದಶಹರಿಗೂ ತಲೆಭಾರವಾದನು. ಆತನ ಉತ್ಕರ್ಷವನ್ನು ಆ ಬಾದಶಹರು ಸೈರಿಸದಾದರು. ಒಂದು ಸಾರೆ ಸಹಾಯ ಮಾಡಿದ್ದಕ್ಕಾಗಿಯೇ ಆದಿಲಶಹನು ರಾಮರಾಜನಿಗೆ ಗೋವಳಕೊಂಡ, ಷಾನಗಲ್ಲ, ಗಂಟೂರ ಕೋಟೆಗಳನ್ನು ಕೊಡಬೇಕಾಯಿತು. ತಮ್ಮತಮ್ಮೊಳಗೆ ಜಗಳಾಡುತ್ತಿದರಿಂದ ಈ ಹಿಂದು ರಾಜನು ಇಷ್ಟು ಬಲಿಷ್ಠನಾದನು; ನಾವೇ ಒಕ್ಕಟ್ಟಿನಿಂದ ಇದ್ದರೆ ಈತನ ನಾಶಮಾಡಲಿಕ್ಕೆ ಅವಕಾಶವು ಬೇಡವೆಂದು ಎಲ್ಲ ಮುಸಲ್ಮಾನ ಬಾದಶಹರು ಭಾವಿಸಿ, ತಮ್ಮೊಳಗೆ ಒಕ್ಕಟ್ಟು ಮಾಡಿಕೊಳ್ಳಲಿಚ್ಛಿಸಿದರು. ತಾವು ಒಕ್ಕಟ್ಟು ಬೆಳೆಸಿಕೊಳ್ಳದಿದ್ದರೆ ತಮ್ಮ ರಾಜ್ಯಗಳು ರಸಾತಳಕ್ಕೆ ಇಳಿಯುವದೇ ನಿಶ್ಚಯವೆಂದು ಅವರು ತಿಳಿದರು. ಅವರಲ್ಲಿ ವಿಶೇಷವಾಗಿ ಅಲೀ ಆದಿಲಶಹನ ಮನಸ್ಸಿಗೆ ರಾಮರಾಜನ ಉತ್ಕರ್ಷದ ಚಿಂತೆಯು ಬಹಳವಾಗಿ ಹತ್ತಿ, ಆತನು ತಮ್ಮೊಳಗೆ ಒಕ್ಕಟ್ಟು ಬೆಳೆಸುವ ಕೆಲಸದಲ್ಲಿ ಮುಂದುವರಿದು ಪ್ರಯತ್ನ ಮಾಡಹತ್ತಿದನು. ಎರಡು ಸಾರೆ ಆತನು ರಾಮರಾಜನ ಸಹಾಯವನ್ನು ಪಡೆದವನಾದ್ದರಿಂದ, ರಾಮರಾಜನ ಸಾಮರ್ಥ್ಯವೂ, ಆತನ ಸೊಕ್ಕೂ ಅಲೀ ಆದಿಲಶಹನಿಗೆ ಗೊತ್ತಾಗಿದ್ದವು. ಅಲಿ ಆದಿಲಶಹನು ತನ್ನ ವಿಶ್ವಾಸದ ಸರದಾರನಾದ ಕಿಷ್ಬರಖಾನನೊಡನೆ ಆಲೋಚಿಸಿ, ಎರಡು ಬಗೆಯ ತಂತ್ರಗಳನ್ನು ಹೂಡಿದನು. ಆ ತಂತ್ರಗಳಲ್ಲಿ ಒಂದನೆಯದು, ಉಳಿದ ಮೂವರು ಬಾದಶಹರ ಕಡೆಗೆ ವಕೀಲರನ್ನು ಕಳಿಸಿ ನಾವೆಲ್ಲರೂ ಕೂಡಿ ರಾಮರಾಜನನ್ನು ನಾಶಗೊಳಿಸಬೇಕೆಂದು ಆಲೋಚಿಸುವದು. ರಾಮರಾಜನ ಕಡೆಯ ವಕೀಲನನ್ನು ಕಳಿಸಿ, ನಾನೂ ನೀನೂ ಕೂಡಿ ಉಳಿದ ಮೂವರು ಮುಸಲ್ಮಾನ ಬಾದಶಹರನ್ನು ನಾಶಗೊಳಿಸಿ ರಾಜ್ಯವನ್ನು ಹಂಚಿಕೊಳ್ಳೋಣವೆಂದು ಆಲೋಚಿಸುವದು ಎರಡನೆಯ ತಂತ್ರವು. ಬಾದಶಹನು ಹಲವು ಉಪಾಯಗಳಿಂದ ಮುಸಲ್ಮಾನ ಬಾದಶಹರಲ್ಲಿ ಒಕ್ಕಟ್ಟು ಬೆಳೆಸುವದಕ್ಕಾಗಿ ೧೫೬೪ರಲ್ಲಿ ಕಿಷ್ಬರಖಾನನನ್ನು ನಿಯಮಿಸಿ ಆತನಿಗೆ ಸಂಪೂರ್ಣ ಅಧಿಕಾರ ಕೊಟ್ಟು ಕಳಿಸಿದನು.

ಇತ್ತ ರಾಮರಾಜನ ಕಡೆಗೆ ಅಲೀ ಆದಿಲಶಹನು ಒಬ್ಬ ವಕೀಲನನ್ನು ಕಳಿಸಿ, ನಾವಿಬ್ಬರೂ ಒಂದಾಗಿ ಉಳಿದ ಮುಸಲ್ಮಾನ ರಾಜ್ಯಗಳನ್ನು ನಷ್ಟಪಡಿಸೋಣ, ಈ ಕೆಲಸವು ಪೂರ್ಣವಾಗುವವರೆಗೆ ನಮ್ಮ ಒಬ್ಬ ವಕೀಲನನ್ನು ನೀವು ನಿಮ್ಮ ರಾಜಧಾನಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿ ಕಳಿಸಿದನು. ಅದಕ್ಕೆ ರಾಮರಾಜನು ಸಂತೋಷದಿಂದ ಒಪ್ಪಿಕೊಂಡು, ವಕೀಲನಿಗೆ ಇರಲಿಕ್ಕೆ ಈ ಸಾರೆ ತಾನಾಗಿಯೇ ಕುಂಜವನವನ್ನು ಕೊಟ್ಟನು. ಆ ವಕೀಲನು ಬಂದು ಕುಂಜವನದಲ್ಲಿ ಇರಹತ್ತಿದನಂತರ ಕೆಲವು ದಿನಗಳ ಮೇಲೆ ರಾಮರಾಜನು ದರ್ಬಾರದ ನೆರೆಸುವ ದಿವಸವು ಬಂದಿತು. ಅಂದಿನ ದರ್ಬಾರಕ್ಕೆ ವಿಜಾಪುರದ ಹೊಸವಕೀಲನೂ ಬಂದಿದ್ದನು. ರಾಮರಾಜನು ಆ ವಕೀಲನ ಸುಂದರ ರೂಪವನ್ನೂ ತೇಜಸ್ಸನ್ನೂ, ತಾರುಣ್ಯವನ್ನೂ ನೋಡಿ ಸಮಾಧಾನಪಟ್ಟನು. ದರ್ಬಾರದ ಕೆಲಸಕ್ಕೆ ಆರಂಭವಾಗಲು, ಎಲ್ಲರೂ ಅತ್ಯಂತ ವಿನಯದಿಂದ ನಡೆಕೊಂಡರು; ವಿಜಾಪುರದ ತರುಣ ವಕೀಲನು ಮಾತ್ರ ಹಾಗೆ ನಡೆಯಲಿಲ್ಲ. ಆತನ ಸೊಕ್ಕಿನ ನಡತೆಯನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಇದಕ್ಕಾಗಿ ರಾಮರಾಜನಿಗೂ ಸಿಟ್ಟುಬಂದಿತು. ಆ ತರುಣ ಸರದಾರನ ವಿಷಯವಾಗಿ ರಾಮರಾಜನ ಮನಸ್ಸಿನಲ್ಲಿ ಆರಂಭಕ್ಕೆ ಉತ್ಪನ್ನವಾಗಿದ್ದ ಆದರವು ನಷ್ಟವಾಗಿ, ತಿರಸ್ಕಾರವು ಉತ್ಪನ್ನವಾಯಿತು. ಅದೇ ಕಾಲಕ್ಕೆ ಆ ತರುಣ ವಕೀಲನನ್ನು ಆತನ ಉದ್ಧಟತನದಿಂದ ಸಲುವಾಗಿ ಎಚ್ಚರಗೊಳಿಸಬೇಕೆಂದು ರಾಮರಾಜನು ಮಾಡಿದ್ದನು; ಆದರೆ ಇನ್ನೂ ತರುಣನಾಗಿದ್ದರಿಂದ ಇವನಿಗೆ ದರ್ಬಾರದ ನಡತೆಗಳು ಗೊತ್ತಿರಲಿಕ್ಕಿಲ್ಲೆಂತಲೂ ; ಇಂಥ ತರುಣನನ್ನು ವಕೀಲನನ್ನಾಗಿ ಕಳಿಸಿದ್ದರಲ್ಲಿ ಬಾದಶಹನದೇ ತಪ್ಪೆಂತಲೂ ತಿಳಿದು, ಈ ಸಂಬಂಧವಾಗಿ ಬಾದಶಹನನ್ನೇ ಬರೆದು ಕೇಳೋಣವೆಂದು ಆತನು ಸುಮ್ಮನಾದನು. ದರ್ಬಾರದ ಕಾರ್ಯವು ಮುಗಿದು, ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೊರಟುಹೋದರು. ವಿಜಾಪುರದ ತರುಣ ವಕೀಲನು ತನ್ನ ಕುಂಜವನಕ್ಕೆ ಹೋದನು, ಆತನ ದರ್ಬಾರದಲ್ಲಿ ಔದ್ಧತ್ಯದಿಂದ ನಡಕೊಂಡಿದ್ದಕ್ಕಾಗಿ ಆತನ ಜನರು ಆತನನ್ನು ಬಹಳವಾಗಿ ಶ್ಲಾಘಿಸಿದರು. ಅವರಲ್ಲಿ ಒಬ್ಬ ಸರದಾರನು ಆ ವಕೀಲನನ್ನು, ಅಂದರೆ ರಣಮಸ್ತಖಾನನ್ನು ಕುರಿತು- “ನೀವು ಇಂದು ದರ್ಬಾರದಲ್ಲಿ ನಡೆಕೊಂಡದ್ದು ನಮ್ಮ ಬಾದಶಹರ ಗೌವರವಕ್ಕೆ ಒಪ್ಪುವ ಹಾಗಿತ್ತು. ನಮ್ಮ ಬಾದಶಹರು ವಿಜನಗರದ ಮಾಂಡಲೀಕರಲ್ಲ ; ವಿಜನಗರದ ರಾಯರ ಸರಿ ಜೋಡಿಯವರು; ಅವರು ವಿಜಯನಗರದ ರಾಜರಿಗೆ ಬಗ್ಗಿ ಕುರ್ನಿಸಾತ ಮಾಡಲವಶ್ಯಯವಿಲ್ಲ. ಈ ಮಾತು ದರ್ಬಾರದೊಳಗಿನವರಿಗೆಲ್ಲ ಇಂದು ಚೆನ್ನಾಗಿ ಗೊತ್ತಾಯಿತು. ನಿಮ್ಮ ನಡತೆಯನ್ನು ನೋಡಿ ದರ್ಬಾರದವರೆಲ್ಲರಿಗೂ ಸಿಟ್ಟು ಬಂದಿತು ; ಆದರೆ ಸಿಟ್ಟು ಬಂದು ಮಾಡುತ್ತಾರೇನು ? ಎಲ್ಲರು ಮುಂಗೈ ಕಡಿಯುತ್ತ ಸುಮ್ಮನೆ ಕುಳಿತುಕೊಂಡರು! ಒಬ್ಬೊಬ್ಬರು ಇಷ್ಟಿಷ್ಟು ಗಡುತುರ ಕಣ್ಣು ತೆರೆದು ನಿಮ್ಮನ್ನು ನೋಡಹತ್ತಿದರು: ಆದರೆ ನೋಡಿ ಮಾಡುವದೇನು? ರಾಮರಾಜನಾದರೂ ಕಣ್ಣು ಕೆಕ್ಕರಿಸಿ ಕೆಕ್ಕರಿಸಿ ನಿಮ್ಮನ್ನು ನೋಡುತ್ತಿದ್ದನು; ಆದರೆ ಕಣ್ಣು ಹರಿಯುವ ಹಾಗೆ ಕೆಕ್ಕರಿಸಿ ನೋಡಿದರೂ ಆಗತಕ್ಕದ್ದೇನು ?” ಎಂದು ನುಡಿದು ರಣಮಸ್ತಖಾನನ ಸ್ತೋತ್ರ ಮಾಡಿದನು. ಅದನ್ನು ಕೇಳಿ ರಣ ಮಸ್ತಖಾನನು ಬಹಳ ಸಮಾಧಾನಪಟ್ಟು, ಆ ಸರದಾರರನ್ನು ಕುರಿತು-"ನಾವು ಬಾದಶಹನ ಪ್ರತಿನಿಧಿಗಳಾಗಿ ಬಂದಿರುವೆವು. ಪ್ರತ್ಯಕ್ಷ ಬಾದಶಹರು ಬಂದಾಗ ನಡಕೊಳ್ಳುವಂತೆ ನಾವು ಇಲ್ಲಿ ನಡೆಕೊಳ್ಳಬೇಕಾಗುವದು; ಮತ್ತು ವಿಜಯನಗರದ ರಾಯರು ಬಾದಶಹರಿಗೆ ಮಾನಕೊಡುವಂತೆ ನಮಗೆ ಮಾನಕೊಡಲಿಕ್ಕೇ ಬೇಕು. ಆ ರಾಮರಾಜನ ಸೊಕ್ಕು ತಲೆಗೇರಿರುವದು. ತನ್ನ ರಾಜ್ಯದ ಸುತ್ತಮುತ್ತಲಿನ ಮುಸಲ್ಮಾನ ರಾಜ್ಯಗಳನ್ನು ಮುರಿದು ಮಹಮ್ಮದ ಪೈಗಂಬರರ ನಿಶಾನಿಯು ಶೋಭಿಸುತ್ತಿದ್ದಲ್ಲಿ, ತಮ್ಮ ಹಿಂದುಗಳ ನಿಶಾನೆಯನ್ನು ಮೆರಿಸಬೇಕೆಂದು ಆತನು ಮಾಡಿರುವನು. ಒಳ್ಳೇದು ನೋಡೋಣ, ಆತನ ಇಚ್ಛೆಯು ಪೂರ್ಣವಾಗುತ್ತದೋ ನಮ್ಮ ಇಚ್ಛೆಯು ಪೂರ್ಣವಾಗುತ್ತದೋ,” ಅನ್ನಲು, ಆ ಸರದಾರನೂ “ಅಲ್ ಬತ್, ನಮ್ಮ ಇಚ್ಛೆಯೇ ಪೂರ್ಣವಾಗುವದು, ಅದರಲ್ಲಿಯೂ ಈ ಕಾರ್ಯವು ನೀವು ವಕೀಲರಾಗಿರುವಾಗಲೇ ಆಗುವದೆಂದು ನಮಗೆ ತೋರುತ್ತದೆ. ನಿಮ್ಮ ಯೋಗ್ಯತೆಯನ್ನರಿತೇ ಬಾದಶಹರು ಹಲವು ಅನುಭವಿಕರನ್ನು ಹಿಂದಕ್ಕೆ ದೂಡಿ ನಿಮ್ಮನ್ನು ಇಲ್ಲಿಗೆ ವಕೀಲರನ್ನಾಗಿ ಕಳಿಸಿರುವರು. ನಿಮ್ಮ ಮಾತನ್ನು ಬಾದಶಹರು ಅಕ್ಷರಶಃ ನಡೆಸುವರು. ಈ ಹೊತ್ತಿಗೆ ಬಾದಶಹರ ನಂಬಿಗೆಯು ನಿಮ್ಮ ಮೇಲೆ ಇದ್ದಷ್ಟು ಬೇರ ಯಾರ ಮೇಲೆಯೂ ಇರುವದಿಲ್ಲ” ಎಂದನು.

ಈ ಸ್ತುತಿಪರ ಭಾಷಣದಿಂದ ಆ ತರುಣ ರಣಮಸ್ತಖಾನನಿಗೆ ಬಹಳ ಸಂತೋಷವಾಯಿತು. ಆದರೆ ಅವನು ವಿನಯದಿಂದ ಆ ಸರದಾರನನ್ನು ಕುರಿತು “ಬಾದಶಹನು ಕೈ ಹಿಡಿದರೆ ಬೇಕಾದವನು ಬೇಕಾದಂಥ ದೊಡ್ಡ ಪದವಿಗೇರಬಹುದು. ಈ ಅಧಿಕಾರದ ಮೇಲೆ ನನ್ನನ್ನು ಕಳಿಸುವಷ್ಟು ಯೋಗ್ಯತೆಯು ನನ್ನಲ್ಲಿಲ್ಲೆಂಬದು ನನಗೆ ಗೊತ್ತಿರುತ್ತದೆ. ಆದರೆ ಬಾದಶಹರ ಆಜ್ಞೆಯನ್ನು ಮೀರಲಿಕ್ಕೆ ಬರುವದಿಲ್ಲ. ನಮ್ಮ ಕೈಯಿಂದಾದಷ್ಟು ಯತ್ನಿಸಿ, ಬಾದಶಹರ ಹಿತಮಾಡಲು ಶಕ್ಯವಿದ್ದ ಮಟ್ಟಿಗೆ ಮಾಡಬೇಕು ಯಾಕೆ ಫಿದಾಹುಸೇನಖಾನ, ನನ್ನ ಮಾತು ಸರಿಯಾದದ್ದಷ್ಟೇ ? ನಿಮ್ಮ ಹಾಗು ಈ ಅಲೀ ಇಮಾಮಖಾನರ ಧೈರ್ಯದಿಂದ ನಾನು ಈ ಅಧಿಕಾರವನ್ನು ಪಡೆದಿರುತ್ತೇನೆ. ಇವರಿಬ್ಬರನ್ನು ನನ್ನ ಸಂಗಡ ಕಳಿಸಿದರೆ ಮಾತ್ರ ನಾನು ವಿಜಯನಗರದಲ್ಲಿ ಹೋಗಿ ನಿಂತುಕೊಳ್ಳುವೆನು, ಎಂದು ನಾನು ಬಾದಶಹರ ಮುಂದೆ ಸ್ಪಷ್ಟವಾಗಿ ಹೇಳಿದೆನು. ನಾನು ಸುಮ್ಮನೆ ಹೆಸರಿಗೆ ವಕೀಲನು. ನಿಜವಾದ ವಕೀಲರೂ, ಯೋಗ್ಯ ಆಲೋಚನೆಗಳನ್ನು ಹೇಳುವವರೂ ನೀವೇ ನಿಮ್ಮಿಬ್ಬರನ್ನು ನಾನು ಹಿರಿಯನೆಂದು ಭಾವಿಸಿರುವೆನು” ಎಂದು ಹೇಳಿದನು. ರಾತ್ರಿಯಾದ್ದರಿಂದ ಎಲ್ಲರೂ ಹೊರಟುಹೋದರು. ತರುಣ ರಣಮಸ್ತಖಾನನ ಮನಸಿನಲ್ಲಿ, ನಾನು ಬಾದಶಹನ ಕಾರ್ಯವನ್ನು ಸಾಧಿಸಿ ಹ್ಯಾಗೆ ಆತನ ಪ್ರೀತಿಗೆ ಪಾತ್ರನಾದೇನೆಂಬದೊಂದೇ ಮಾತು ಯಾವಾಗಲೂ ಕಟಿಯುತ್ತಿತ್ತು. ದರ್ಬಾರದಲ್ಲಿ ತಾನು ಉದ್ದಟತನದಿಂದ ನಡೆದದ್ದಕ್ಕಾಗಿ ತನ್ನ ಜನರು ಶ್ಲಾಘಿಸಿದ್ದರಿಂದ, ಇಂದು ಆತನಿಗೆ ಬಹಳ ಸಂತೋಷವಾಗಿತ್ತು, ತಾನು ಕಡೆತನಕ ಹೀಗೆಯೇ ಶ್ಲಾಘನೆಗೆ ಹ್ಯಾಗೆ ಪಾತ್ರನಾಗುತ್ತ ಹೋದೇನೆಂಬ ಚಿಂತೆಯಿಂದ ಆತನಿಗೆ ನಿದ್ದೆ ಬರಲೊಲ್ಲದು. ಆತನ ಮನಸ್ಸಿನಲ್ಲಿ ಒಂದರ ಹಿಂದೊಂದು ಕಲ್ಪನಾತರಂಗಗಳು ಉತ್ಪನ್ನವಾಗಹತ್ತಿದವು. ಈ ಕಲ್ಪನಾ ತರಂಗಗಳ ಅಲೆದಾಟದಿಂದ, ಅಂದು ಬೆಳತನಕ ಅತನಿಗೆ ನಿದ್ದೆ ಬರಲಿಲ್ಲವೆಂದು ಹೇಳಬಹುದು. ಬೆಳಗು ಹರಿಯುತ್ತಿರಲು, ಆತನು ಸ್ವಲ್ಪ ಕಣ್ಣಿಗೆ ಕಣ್ಣು ಹಚ್ಚಿದನು. ನಿದ್ದೆ ಹತ್ತಿ ಇನ್ನೂ ಎರಡು ತಾಸು ಪೂರ್ಣವಾಗಿದ್ದಿಲ್ಲ; ಅಷ್ಟರಲ್ಲಿ ಯಾರೋ ದೊಡ್ಡ ಧ್ವನಿಯಿಂದ ತನ್ನನ್ನು ಕೂಗಿ ಎಬ್ಬಿಸುವಂತೆ ಆತನಿಗೆ ಭಾಸವಾಗಿ ಆತನು ಎಚ್ಚತ್ತು ಲಗುಬಗೆಯಿಂದ ಹೋಗಿ ಬಾಗಿಲು ತೆರೆದನು, ಆಗ ಆತನ ಸಿಪಾಯಿಯು ಸಾಷ್ಟಾಂಗ ನಮಸ್ಕಾರ ಹಾಕಿ, ಕೈಯನ್ನು ರುಮಾಲದಿಂದ ಕಟ್ಟಿಕೊಂಡು ಬಾಗಿ ವಂದಿಸಿ-"ಗರೀಬ ಪರವರ, ತಮ್ಮನ್ನು ಸುಖ ನಿದ್ರೆಯಿಂದ ಎಚ್ಚರಗೊಳಿಸಿದ ಉದ್ಧಟತನಕ್ಕಾಗಿ ಈ ದಾಸನನ್ನು ಕ್ಷಮಿಸುವದಾಗಬೇಕು. ತಮ್ಮ ಪರಮ ಪೂಜ್ಯ ಮಾತೃಶ್ರೀಯವರ ಅಪ್ಪಣೆಯಿಂದ ಹೀಗೆ ಮಾಡಿದೆವು. ಅವರು ತಮ್ಮನ್ನು ಬೇಗನೆ ಕರೆಯ ಹೇಳಿದ್ದಾರೆ” ಅನ್ನಲು, ರಣಮಸ್ತಖಾನನು-ಏನು ! ನಮ್ಮ ಮಾಸಾಹೇಬರು ನನ್ನನ್ನು ಕರೆದಿದ್ದಾರೆಯೇ ? ಹೋಗು ಬೇಗನೆ ಬಿಸಿನೀರು ತಕ್ಕೊಂಡು ಬಾ. ಮೋರೆ ತೊಳಕೊಂಡು ನಮಾಜು ಮಾಡಿ ಬರುವೆನು. ಎಂದು ಹೇಳಿದನು. ಆಗ ಸಿಪಾಯಿಯು ಓಡುತ್ತ ಹೋಗಿ ಅಪ್ಪಣೆಯಂತೆ ಬಿಸಿ ನೀರು ತಂದು ರಣಮಸ್ತಖಾನನ ಕೈಗೂ ಕಾಲಿಗೂ ಹಾಕಿ ಆತನ ಕೈಕಾಲುಗಳನ್ನು ಒರಸಿದನು. ರಣಮಸ್ತಖಾನನು ಮೋರೆಯನ್ನು ಒರಸಿ ಕೊಂಡು, ನಮಾಜುಮಾಡಿ ತಾಯಿಯ ಬಳಿಗೆ ಹೋದನು.

****