ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೨೯೭–೩೦೧

೩೩ನೆಯ ಪ್ರಕರಣ


ದಂಪತಿಗಳ ಅಂತ್ಯವು


ಈ ಮೇರೆಗೆ ನಿಜಾಮಶಹನ ಆನೆಯು ತಮ್ಮ ಒಡೆಯನ ಪಲ್ಲಕ್ಕಿಯನ್ನು ಬೆನ್ನಟ್ಟಿರಲು, ರಾಮರಾಜನ ಜನರು ರಾಮರಾಜನ್ನನು ಪಲ್ಲಕ್ಕಿಯಿಂದ ಇಳಿಸಿ ರಥದಲ್ಲಿ ಕುಳ್ಳಿರಿಸಿಕೊಂಡು ವೇಗದಿಂದ ಸಾಗಿದರು. ಹೀಗೆ ರಾಮರಾಜನು ಓಡಿಹೋಗುವದನ್ನು ನೋಡಿ ಆತನ ಸೈನಿಕರೂ ಓಡಿಹೋಗುವ ಮನಸ್ಸು ಮಾಡಿದರು. ಈ ದುರ್ಬುದ್ದಿಯು ಸೈನಿಕರಿಗೆ ಉತ್ಪನ್ನವಾಗುವದೊಂದೇ ತಡ, ವಿಜಯನಗರದ ದಂಡಾಳುಗಳು ವಿಜಯನಗರದ ಕಡೆಗೆ ಓಡಹತ್ತಿದರು. ಅಂದಬಳಿಕ ಕೇಳುವದೇನು, ಮುಸಲ್ಮಾನ ಸೈನಿಕರು ಹಿಂದುಗಳನ್ನು ಬೆನ್ನಟ್ಟಿ ಸಂಹರಿಸಹತ್ತಿದರು. ಅಕಸ್ಮಾತ್ತಾಗಿ ಹೀಗೆ ಯಾಕಾಯಿತೆಂಬುದು ಯಾರಿಗೂ ತಿಳಿಯಲೊಲ್ಲದು. ವಿಜಯನಗರದ ಸೈನಿಕರು ಅಶ್ಚರ್ಯಚಕಿತರಾದರು; ಆದರೆ ಓಡಿಹೋಗುವದರ ಹೊರತು ಬೇರೆ ವಿಚಾರವೇ ಅವರಿಗೆ ಹೊಳೆಯಲಿಲ್ಲವು. ಹೀಗೆ ಒಂದು ಒಂದೂವರೆ ತಾಸಿನವರೆಗ ಓಡುವ ಕೆಲಸವು ನಡೆಯಿತು. ಅಷ್ಟರಲ್ಲಿ ಹಿಂದೂ ದಂಡಾಳುಗಳಿಗೆ ಅಕಸ್ಮಾತ್ತಾಗಿ ಮತ್ತೊಂದು ಗಂಡಾತರವು ಒದಗಿತು. ವಿಶ್ವಾಸಘಾತಕಿಯಾದ ರಣಮಸ್ತಖಾನನು ತನ್ನ ಅರಬ-ಪಠಾಣ ಸೈನ್ಯವನ್ನು ಓಡಿಬರುವ ಹಿಂದುಗಳ ಸೈನ್ಯದ ಮೇಲೆ ನೂಕಿದನು. ಹಿಂದೆ ಮುಸಲ್ಮಾನ ಬಾದಶಹರ ಸೈನ್ಯ, ಮುಂದೆ ರಣಮಸ್ತಖಾನನ ಸೈನ್ಯ ಹೀಗೆ ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂತೆ ಹಿಂದೂ ಸೈನಿಕರು ಹೆಜ್ಜೆಯಾಗಹತ್ತಿದರು. ಅವರಿಗೆ ಹಿಂದಿರುಗಿ ಕಾದಲಿಕ್ಕೆ ಬರಲೊಲ್ಲದು; ಮುಂದಕ್ಕೆ ಓಡಿಹೋಗಲಿಕ್ಕೂ ಬರಲೊಲ್ಲದು. ಹೀಗಾಗಿ ಭಯಂಕರವಾದ ಹತ್ಯೆ ಆರಂಭವಾಯಿತು. ಹಿಂದೂ ಸೈನಿಕರ ಹೆಣಗಳ ರಾಶಿಗಳು ಬಿದ್ದವು. ಸಾವಿರಾರು ಆನೆಗಳು-ಕುದುರೆಗಳು ದಿಂಡುರುಳಿದವು. ಇಂಥ ಪ್ರಸಂಗದಲ್ಲಿ ರಾಮರಾಜನ ಮುನ್ನೂರು ಜನ ಸ್ವಾಮಿ ಭಕ್ತ ದಂಡಾಳುಗಳು ತಮ್ಮ ಒಡೆಯನನ್ನಾದರೂ ಮುದಗಲ್ಲ ಕೋಟೆಯವರೆಗೆ ಸುರಕ್ಷಿತವಾಗಿ ಕರಕೊಂಡು ಹೋಗಬೇಕೆಂದು ನಿಶ್ಚಯಿಸಿ. ರಾಮರಾಜನ ರಥವನ್ನು ದಕ್ಷತೆಯಿಂದ ರಕ್ಷಿಸುತ್ತ ಅದನ್ನು ಭರದಿಂದ ಸಾಗಿಸಿಕೊಂಡು ಹೋಗುತ್ತಲಿದ್ದರು. ಆದರೆ ಭವಿತವ್ಯವನ್ನು ತಪ್ಪಿಸುವದು ಯಾರಿಂದಲೂ ಆಗದೆಂಬ ನ್ಯಾಯದಂತೆ, ರಾಮರಾಜನ ರಥವು ರಣಮಸ್ತಖಾನನ ಕಣ್ಣಿಗೆ ಬಿದ್ದಿತು. ಆಗ ದುಷ್ಟ ರಣಮಸ್ತನು ಬಹು ಸಮಾಧಾನ ಪಟ್ಟು ಇಂಥ ಪ್ರಸಂಗದಲ್ಲಿ ಸಾಧಿಸಿದರೇ ತನ್ನ ಪ್ರತಿಜ್ಞೆಯು ಸಾಧಿಸುವದೆಂದು ತಿಳಿದು ಆತನು ನೂರಾಐವತ್ತು ಜನರೊಡನೆ ರಾಮರಾಜನ ರಥವನ್ನು ಬೆನ್ನಟ್ಟಿ ನಡೆದನು. ರಾಮರಾಜನ ಜನರು ತಮ್ಮ ಒಡೆಯನನ್ನು ರಕ್ಷಿಸುವ ವಿಷಯವಾಗಿ ನಿಶ್ಚಯಮಾಡಿಕೊಂಡಿದ್ದರು. ಇತ್ತ ರಣಮಸ್ತಖಾನನೂ ತನ್ನ ಪ್ರತಿಜ್ಞೆಯನ್ನು ನೆರವೇರಿಸಲು ಆತುರಪಡುತ್ತಲಿದ್ದನು. ಮುದಗಲ್ಲಕೋಟೆಯೊಳಗೆ ರಾಮರಾಜನು ಹೋಗುವದರೊಳಗಾಗಿ ಎಲ್ಲಿಯಾದರೂ ಕಂದಕದ ಬಳಿಯಲ್ಲಿ ರಾಮರಾಜನಿಗೆ ಗಂಟುಬಿದ್ದು, ಆತನ ಕುತ್ತಿಗೆ ಕೊಯ್ಯಬೇಕೆಂದೇ ಆ ವಿಶ್ವಾಸಘಾತಕಿಯು ನಿಶ್ಚಯಿಸಿದ್ದು, ರಣಮಸ್ತನು ತನ್ನ ಪರಿವಾರದೊಡನೆ ತೀರ ಸನಿಯಕ್ಕೆ ಬಂದದ್ದನ್ನು ನೋಡಿ, ರಾಮರಾಜನ ರಕ್ಷಕರಾದ ಮುನ್ನೂರು ಜನರಲ್ಲಿ ನೂರಾಐವತ್ತು ಜನರು ರಾಮರಾಜನ ರಥವನ್ನು ಸಾಗಿಸಿಕೊಂಡು ಹೋಗಹತ್ತಿದರು. ಇದನ್ನು ನೋಡಿ ರಣಮಸ್ತನು ತನ್ನ ಸೈನ್ಯವನ್ನು ದ್ವಿಭಾಗಿಸಿ, ಎಪ್ಪತ್ತೈದು ಜನರನ್ನು ಹಿಂದಕ್ಕೆ ಕಾದಲು ಬಿಟ್ಟು, ಉಳಿದ ಎಪ್ಪತ್ತೈದು ಜನರನ್ನು ತನ್ನ ಸಂಗಡ ಕರಕೊಂಡ ರಾಮರಾಜನ ರಥದ ಮೇಲೆ ಸಾಗಿಹೋದನು, ದೈವವು ರಾಮರಾಜನಿಗೆ ತೀರ ಪ್ರತಿಕೂಲವಾಗಿತ್ತು. ರಣಮಸ್ತನ ಜನರ ದಾಳಿಯಲ್ಲಿ ರಾಮರಾಜನ ರಥದ ಒಂದು ಕುದುರೆಯ ಕಾಲು ಕಡಿದುಬಿದ್ದು ರಥವು ನಿಂತು ಬಿಟ್ಟಿತು. ರಾಮರಾಜನ ಜನರು ರಣಮಸ್ತನ ಜನರೊಡನೆ ಕಾದಹತ್ತಿದರು. ತಮ್ಮ ಒಡೆಯನ ದುರವಸ್ಥೆಯಿಂದ ರಾಮರಾಜನ ರಕ್ಷಕರು ಹತಾಶರಾಗಿ, ದಿಕ್ಕುಗೆಟ್ಟು ಓಡಹತ್ತಿದರು. ಆಗ ರಣಮಸ್ತನು ರಾಮರಾಜನ ಬಳಿಗೆ ಹೋದನು; ಆದರೆ ರಾಮರಾಜನು ಹೆದರದೆ ಕಾದುತ್ತಿರುವಾಗ ಆತನದೊಂದು ಕೈಯು ಕತ್ತರಿಸಿಬಿದ್ದಿತು. ಆಗ ರಣಮಸ್ತನು ರಾಮರಾಜನನ್ನು ಹಿಡಿದು ನಿಲ್ಲಿಸಿ-

ರಣಮಸ್ತನ-ನೂರಜಹಾನಳನ್ನು ಎಲ್ಲಿ ಇಟ್ಟಿರುವೆ, ಮೊದಲು ಹೇಳು.

ರಾಮರಾಜ-ತಮ್ಮಾ, ರಣಮಸ್ತ, ನೀನು ನನ್ನ ಮೇಲೆ ತಿರುಗಿ ಬೀಳುವೆಯಾ? ನೀನು ನನ್ನ.........

ರಣಮಸ್ತ-ನನ್ನ ಮುಂದೆ ಬೇರೆ ಯಾವ ಮಾತೂ ಆಡಬೇಡ ನೂರಜಹಾನಳನ್ನು ಎಲ್ಲಿ ಇಟ್ಟಿರುತ್ತೀ ಮೊದಲು ಹೇಳು, ಇಲ್ಲದಿದ್ದರೆ ನಿನ್ನ ಶಿರಚ್ಛೇದ ಮಾಡುವೆನು.

ರಾಮರಾಜ-ನೀನೆ ? ನೀನು ನನ್ನ ಶಿರಚ್ಛೇದ ಮಾಡುವೆಯಾ ? ರಣಮಸ್ತ-ಹೌದು, ಮಾಡುವೆನು, ಆದರೆ ಮೊದಲು ನೂರಜಹಾನಳು ಎಲ್ಲಿ ಇರುತ್ತಾಳೆ ಹೇಳು.

ರಾಮರಾಜ-ನೂರಜಹಾನಳೆ ? ನೂರಜಹಾನಳು ಆ ಕುಂಜವನದಲ್ಲಿರುತ್ತಾಳೆ.

ರಣಮಸ್ತ-ಕುಂಜವನದಲ್ಲಿರುವಳೇ ? ಶಾಭಾಸ್! ಒಳ್ಳೇದಾಯಿತು ಬಹಳ ಒಳ್ಳೇದಾಯಿತು. ಬಹು ಯೋಗ್ಯವಾದ ಸ್ಥಳದಲ್ಲಿ ಆಕೆಯನ್ನು ಇಟ್ಟಿರುವೆ. ಇನ್ನು ಮೇಲೆ ನೀನು ಈ ಜಗತ್ತಿನಲ್ಲಿ ಇರಲವಶ್ಯವಿಲ್ಲ. ಇಲ್ಲಿ ನಿನ್ನ ಕೆಲಸವೇನೂ ಇಲ್ಲ. ನೂರಜಹಾನಳ ಪ್ರಾಪ್ತಿಗಾಗಿ ನಾನು ನಿನ್ನ ಶಿರಚ್ಛೇದ ಮಾಡಲೇಬೇಕಾಗಿರುವದು.

ಈ ಮೇರೆಗೆ ನುಡಿದು ರಣಮಸ್ತಖಾನನು ಒಮ್ಮೆಲೆ ರಾಮರಾಜನ ತಲೆಯಮೇಲಿನ ಮುಂಡಾಸವನ್ನು ಹಾರಿಸಿ, ಆತನ ಚಂಡಿಕೆ ಹಿಡಿದು, ಖಡ್ಗದಿಂದ ಅವನ ರುಂಡವನ್ನು ಮುಂಡದಿಂದ ಬೇರೆ ಮಾಡಿದನು. ಆಗ ಅವನ ರುಂಡವುತಮ್ಮಾ, ರಣಮಸ್ತ ನೀನು.......ಎಂದು ಏನೋ ನುಡಿಯುತ್ತಿತ್ತು. ತಮ್ಮ ಒಡೆಯನ ಈ ಕೃತಿಯನ್ನು ನೋಡಿ ರಣಮಸ್ತನ ಜನರು ಆತನನ್ನು ಬಹಳವಾಗಿ ಶ್ಲಾಘಿಷಿದರು, ರಣಮಸ್ತನು ರಕ್ತಸುರಿಯುತ್ತಿರುವ ರಾಮರಾಜನ ಶಿರಸ್ಸನ್ನು ಕುದುರೆಯ ರಿಕೀಬಿಗೆ ಕಟ್ಟಿ, ತನ್ನ ಜನರೊಡೆನೆ ಕುಂಜವನದ ಕಡೆಗೆ ಸಾಗಿದನು. ರಣಮಸ್ತನಿಗೆ ತುಂಗಭದ್ರೆಯ ಕಾಳಹೊಳೆಯು ಚೆನ್ನಾಗಿ ಗೊತ್ತಿದ್ದರಿಂದ, ಆತನು ಆ ಕಾಳ ಹೊಳೆಯಲ್ಲಿ ಕುದುರೆಯನ್ನು ನೂಕಿದನು. ಆಗ ತುಂಗಭದ್ರೆಯ ಪವಿತ್ರೋದಕದಲ್ಲಿ ರಾಮರಾಜ ರುಂಡದ ರಕ್ತವು ತೊಳೆಯುತ್ತಲಿತ್ತು. ಬರಬರುತ್ತ ಆ ಕೊಲೆಗಡುಕನು ಕುಂಜವನದ ಸನಿಯಕ್ಕೆ ಬಂದನು. ರಣಮಸ್ತನ ಕುದುರೆಯು ಯುದ್ಧದಲ್ಲಿ ಬಹಳವಾಗಿ ದಣಿದಿತ್ತು. ತುಂಗಭದ್ರೆಯನ್ನು ದಾಟುವಾಗಂತು ಅದು ತೀರಹಣ್ಣಾಗಿತ್ತು, ಆದರೆ ನೂರಜಹಾನಳ ಧ್ಯಾನಮಗ್ನನಾದ ರಣಮಸ್ತನು, ಕುದುರೆಯ ಕಡೆಗೆ ನೋಡದೆ ಆದನ್ನು ವೇಗದಿಂದ ಸಾಗಿಸಿಕೊಂಡು ಹೋಗಿ ಕುಂಜವನವನ್ನು ಪ್ರವೇಶಿಸಿದನು.

ಆಗ ಇಳಿಹೊತ್ತಿನ ಸಮಯವಾಗಿತ್ತು. ಸೂರ್ಯಾಸ್ತಕ್ಕೆ ಇನ್ನು ತಾಸುಒಂದೂವರೆ ತಾಸಿನ ಅವಕಾಶವಿರಬಹದು. ಮೆಹೆರ್ಜಾನ-ನೂರಜಹಾನರಲ್ಲಿ ಮೊದಲಿನಂತೆ ಸಖ್ಯವು ಉತ್ಪನ್ನವಾಗಿರಲು, ಅವರು ಆಗ ಪುಷ್ಕರಣಿಯ ದಂಡೆಯ ಮೇಲೆ ಒಬ್ಬರೊಬ್ಬರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತ ಕುಳಿತುಕೊಂಡಿದ್ದರು, ರಣಮಸ್ತನು ಬಾದಶಹನ ಮೇಲೆ ತಿರುಗಿಬಿದ್ದು ರಾಮರಾಜನನ್ನು ಕೂಡಿಕೊಂಡದ್ದಕ್ಕಾಗಿ ಇಬ್ಬರೂ ವ್ಯಸನ ಪಡುತ್ತಲಿದ್ದರು. ನೂರಜಹಾನಳಿಗೆ ಮಾತ್ರ ರಣಮಸ್ತನು ಫಿತೂರ ಆದದ್ದು ಅಷ್ಟು ವಿಶ್ವಸನೀಯವಾಗಿ ತೋರುತ್ತಿಲ್ಲ, ಆಕೆಯು ಮೆಹೆರ್ಜಾನಳನ್ನು ಕುರಿತು-” ಮಾಸಾಹೇಬ, ನವಾಬಸಾಹೇಬರು ರಾಮರಾಜನನ್ನು ಕೂಡಿ ಕೊಂಡಿದ್ದು ಅವನ ನಾಶಕ್ಕಾಗಿಯೇ ಎಂಬಂತೆ ನನಗೆ ತೋರುತ್ತದೆ. ಕೂಡಿದ ದರ್ಬಾರದಲ್ಲಿ ನನ್ನ ಮಾನಖಂಡನ ಮಾಡಿದ್ದಕ್ಕಾಗಿ ರಣಮಸ್ತಖಾನರು ಘೋರ ಪ್ರತಿಜ್ಞೆಯನ್ನು ಮಾಡಿರಲು, ಅವರು ರಾಮರಾಜನ ನೌಕರರಾಗಿ ಇರಬಹುದೆ ? ಎಂದು ಕೇಳಿದಳು. ಆಕೆಯ ಈ ಪ್ರಶ್ನೆಯು ಮೆಹೆರ್ಜಾನಳಿಗೆ (ಮಾಸಾಹೇಬರಿಗೆ) ವಿಶ್ವಸನೀಯವಾಗಿ ತೋರಲಿಲ್ಲ. ಈ ವಿಷಯವನ್ನು ಕುರಿತು, ಪುಷ್ಕರಣಿಯ ತೀರದಲ್ಲಿ ಅವರ ಸಂಭಾಷಣಗಳು ನಡೆದಿದ್ದವು. ಇತ್ತ ರಣಮಸ್ತನು ಕುಂಜವನವನ್ನು ಪ್ರವೇಶಿಸಿ ನೆಟ್ಟಗೆ ಬಂಗಲೆಗೆ ಬರಲು, ಅಲ್ಲಿ ಮಾರ್ಜೀನೆಯು ಆತನಿಗೆ ಭೆಟ್ಟಿಯಾದಳು. ಆಗ ರಣಮಸ್ತನು ಆಕೆಯನ್ನು ಕುರಿತು

ರಣಮಸ್ತ-ಲೈಲೀ, ನೀನೋಬ್ಬಳೇ ಇಲ್ಲಿ ಯಾಕೆ ? ಮಾಸಾಹೇಬರು ಎಲ್ಲಿ ಇರುತ್ತಾರೆ ? ನೂರಜಹಾನಳು-ನನ್ನ ಅರಗಿಳಿಯು-ಎಲ್ಲಿ ಇರುತ್ತದೆ ? ಇಷ್ಟು ದಿನ ಕಪಟನಾಟಕವನ್ನು ಹೂಡಿ ಸಂಪಾದಿಸಿದ ಯಶಸ್ಸನ್ನು ಕಾಣಿಕೆಯಾಗಿ ಅವರ ಮುಂದೆ ಇಡಲಿಕ್ಕೆ ನಾನು ತಂದಿರುತ್ತೇನೆ, ಹೋಗು, ಒಂದ ಬೆಳ್ಳಿಯ ತಬಕವನ್ನು ತಕ್ಕೊಂಡು ಬಾ, ಕಾಣಿಕೆಯ ವಸ್ತುವನ್ನು ಅದರಲ್ಲಿಟ್ಟು ಅವರ ಮುಂದೆ ಇಡೋಣ.

ಲೈಲಿ-(ಆಶ್ಚರ್ಯದಿಂದ ಮುಂಗಾಣದೆ) ಒಡೆಯರೇ, ನಿಮ್ಮ ಮಾತುಗಳ ಅರ್ಥವು ನನಗೆ ತಿಳಿಯೋಲೊಲ್ಲದು; ಆದರೆ ನೀವು ಹೀಗೆ ರಕ್ತದಿಂದ ಸ್ನಾನಮಾಡಿ ಎಲ್ಲಿಂದ ಬಂದಿರಿ ? ಅದರ ವೃತ್ತಾಂತವಾದರೂ ಏನು ?

ರಣಮಸ್ತ-ಆ ವೃತ್ತಾಂತವನ್ನು ಬೇಗನೆ ಕೇಳಿಕೊಳ್ಳಬೇಕೆಂಬ ಇಚ್ಛೆಯು ನಿನಗೆ ಇದ್ದರೆ, ನನ್ನ ಅರಗಿಳಿಯು ಎಲ್ಲಿ ಇರುತ್ತದೆಂಬದನ್ನು ಹೇಳು. ನನ್ನನ್ನು ಅತ್ತ ಕಡೆಗೆ ಕರಕೊಂಡು ಹೋಗು. ಆ ನೂರಜಹಾನಳು ಎಲ್ಲಿರುತ್ತಾಳೆ ? ಮಾಸಾಹೇಬರು ಎಲ್ಲಿರುತ್ತಾರೆ ?

ಲೈಲಿ-ಅವರಿಬ್ಬರೂ ಅತ್ತ ಆ ಪುಷ್ಕರಣಿಯ ತೀರದಲ್ಲಿ ಹೋಗಿ ಕುಳಿತುಕೊಂಡಿರುತ್ತಾರೆ.

ರಣಮಸ್ತ-ಹೀಗೋ ! ಒತ್ತಟ್ಟಿಗೇ ಅವರಿಬ್ಬರೂ ಇರುವರೇನು ? ಹಾಗಾದರೆ ಬಹಳ ನೆಟ್ಟಗಾಯಿತು ನಾನು ಅತ್ತಕಡೆಗೇ ಹೋಗುತ್ತೇನೆ.

ಹೀಗೆಂದು ರಣಮಸ್ತನು ಕುದುರೆಯಿಂದ ಕೆಳಗೆ ಧುಮುಕಿ, ರಾಮರಾಜನ ರುಂಡವನ್ನು ತನ್ನ ಕರವಸ್ತ್ರದಲ್ಲಿ ಅಲ್ಲಿ ಅವರಿಬ್ಬರು ಮೇಲೆ ಹೇಳಿದಂತೆ ರಣಮಸ್ತನ ಫಿತೂರಿಯನ್ನು ಕುರಿತು ಮಾತನಾಡುತ್ತ ಕುಳಿತುಕೊಂಡಿದ್ದರು. ಮೆಹೆರ್ಜಾನಳು ನೂರಜಹಾನಳಿಗೆ-ತಂಗೀ, ನಿನ್ನ ಮಾತು ನನಗೆ ನಂಬಿಗೆಯಾಗಿ ತೋರುವದಿಲ್ಲ. ಒಂದು ಪಕ್ಷದಲ್ಲಿ ರಣಮಸ್ತನು ರಾಮರಾಜನ ಮೇಲೆ ತಿರುಗಿ ಬಿದ್ದರೂ ಆತನು ರಾಮರಾಜನ ಶಿರಸ್ಸನ್ನು ತರುವ ಬಗೆ ಹ್ಯಾಗೆ ? ಎಂದು ಪ್ರಶ್ನೆಮಾಡುತ್ತಿರಲು, ಅದಕ್ಕೆ ನೂರಜಹಾನಳು ಉತ್ತರಕೊಡುವ ಮೊದಲೇ ರಣಮಸ್ತನು ರಾಮರಾಜನ ಶಿರಸ್ಸನ್ನು ಅವರಿಬ್ಬರ ನಡುವೆ ದೊಪ್ಪನೆ ಒಗೆದು- “ಇದೇ ಆ ರಾಮರಾಜನ ಶಿರಸ್ಸು; ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡಿದ ನಿಶಾನೆಯಿದು; ಇದನ್ನು ನಿಮ್ಮಿಬ್ಬರಿಗೂ ಕಾಣಿಕೆಯಾಗಿ ಅರ್ಪಿಸಿರುತ್ತೇನೆ! ಅರಗಿಳಿಯೇ, ಯಾವನು ನೆರೆದ ದರ್ಬಾರದಲ್ಲಿ ನಿನ್ನ ಮಾನಖಂಡನ ಮಾಡಿದ್ದನೋ, ಅವನ ತಲೆಯಿದು ನೋಡು! ಇದನ್ನು ಕೈಮುಟ್ಟ ನಾನು ಕೊಯ್ದು ತಂದಿರುತ್ತೇನೆ” ಎಂದು ನುಡಿಯುತ್ತಿರಲು, ಮೆಹೆರ್ಜಾನಳು ಆ ರುಂಡದ ಗುರುತು ಹಿಡಿದು, ಅತ್ಯಂತ ದುಃಖದಿಂದ ತಟ್ಟನೆ ರಣಮಸ್ತನಿಗೆ-

ಮೆಹೆರ್ಜಾನ-ಮಗುವೇ, ನೀನು-ನೀನು ಈ ಶಿರಸ್ಸನ್ನು ಕೈಮುಟ್ಟ ತುಂಡರಿಸಿದೆಯಾ ?

ರಣಮಸ್ತ-ಅಹುದಹುದು ಮಾಸಾಹೇಬ, ಯಾವನ ದ್ವೇಷಮಾಡುವಂತೆ ನೀವು ಚಿಕ್ಕಂದಿನಿಂದಲೇ ನನಗೆ ಕಲಿಸಿದಿರೋ, ಆ ದುಷ್ಟ ರಾಮರಾಜನ ಶಿರಸ್ಸನ್ನು ನಾನು ಕೈಮುಟ್ಟ ತುಂಡರಿಸಿದೆನು.

ಮೆಹೆರ್ಜಾನ-ತಮ್ಮಾ, ಮಗುವೇ. ಅಲ್ಲೋ. ಅವನು ನಿಮ್ಮ ತಂದೆಯು! ಆದರೆ ಇನ್ನು ಪ್ರಯೋಜನವೇನು? ಈಗಾಗುವ ಪ್ರಯೋಜನವು ಇಷ್ಟೇ.........

ಈ ಮೇರೆಗೆ ನುಡಿಯುವ ಮೆಹೆರ್ಜಾನಳ ಮಾತು ಕೇಳೀ ರಣಮಸ್ತನ ಮನಸ್ಸಿಗೆ ಹ್ಯಾಗಾದರೂ ಆಗಿರಲಿ; ಆದರೆ ಮೆಹೆರ್ಜಾನಳು ಆ ಶಿರಸ್ಸನ್ನು ಬಲಗೈಯಿಂದ ಎತ್ತಿಹಿಡಿದು, ಅದನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಇನ್ನು ಮೇಲೆ ಈಕೆಯು ಏನು ಮಾಡುವಳೆಂಬದರ ತರ್ಕ ಮಾಡುವದದೊಳಗೆ ಆ ಪತಿಘಾತಕಳಾದ ಕರ್ಕಶ ಸ್ವಭಾವದ ಮೆಹೆರ್ಜಾನಳು, ತನ್ನ ಪತಿಯ ರುಂಡದೊಡನೆ ಆ ಪುಷ್ಕರಣಿಯ ಗಂಭೀರ ಜಲದಲ್ಲಿ ಹಾರಿಕೊಂಡಳು. ಹೀಗೆ ಆ ದಂಪತಿಗಳಿಬ್ಬರ ಅಂತ್ಯವಾಯಿತು.