ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೨೮೮–೨೯೬

೩೨ ನೆಯ ಪ್ರಕರಣ
ಯುದ್ಧಪ್ರಸಂಗವು

ಬಳಿಕ ರಾಮರಾಜನು ಕುದುರೆಗೆ ಜೀನು ಹಾಕಿಕೊಂಡು ಬರುವಂತೆ ಸೇವಕನಿಗೆ ಆಜ್ಞಾಪಿಸಿ, ತನ್ನ ಉಡುಪು ತೊಡಪುಗಳನ್ನೂ, ಶಸ್ತ್ರಾಸ್ತ್ರಗಳನ್ನೂ ತರಹೇಳಿದನು. ಸ್ವಲ್ಪಹೊತ್ತಿನಲ್ಲಿಯೇ ಆತನ ಉಡಪು-ತೊಡಪುಗಳೂ, ಶಸ್ತ್ರಾಸ್ತ್ರಗಳೂ ಬಂದವು. ರಾಮರಾಜನು ಮೊದಲು ರೇಶಿಮೆಯ ತೆಳುವಾದ ವಸ್ತದ ಚಲ್ಲಣವನ್ನು ಹಾಕಿಕೊಂಡು, ಮೊಳಕಾಲತನಕ ಬರುವ ಅಂಥಾದ್ದೇ ಒಂದು ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಉಕ್ಕಿನ ತಂತಿಯ ಚಲ್ಲಣವನ್ನು ಅಂಥಾದ್ದೇ ಒಂದು ಅಂಗಿಯನೂ ತೊಟ್ಟು, ಅದರಮೇಲೆ ಕಾಲತನಕ ಉದ್ದಾದ ಒಂದು ಅಂಗಿಯನ್ನು ಹಾಕಿಕೊಂಡನು. ರೇಶಿಮೆಯ ಹೆಣಿಕೆಯ ಆ ಅಂಗಿಯು ಗಂಟುಗಂಟು ಹಾಕಿದ ಜಾಳಿಗೆಯಂಥಾ ಅರಿವೆಯದಿತ್ತು. ಈ ಅಂಗಿಯನ್ನು ಹಾಕಿಕೊಂಡ ಬಳಿಕ ಎಲ್ಲಕ್ಕೂ ಮೇಲೆ ತೀರ ಜಿನುಗಾದ ಮಲಮಲಿಯಂಥ ಅರಿಯೆವ ಕಾಲತನಕ ಬರುವ ಬಿಳಿಯ ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಟೊಂಕಕ್ಕೆ ಒಂದು ರೇಶಿಮೆಯ ಪಟ್ಟವನ್ನು ಸುತ್ತಿಕೊಂಡು, ಅದರಲ್ಲಿ ಒಂದು ಕಠಾರಿಯನ್ನೂ, ತಮಂಚಾ ಎಂಬ ಶಸ್ತವನ್ನೂ ಸಿಗಿಸಿಕೊಂಡನು ಆತನ ಬೆನ್ನಿಗೊಂದು ಬತ್ತಳಿಕೆಯೂ, ಹೆಗಲಿಗೊಂದು ಹೆದೆಯೇರಿಸಿದ ಧನುಷ್ಯವೂ ಒಪ್ಪುತ್ತಿದ್ದವು. ಈಗ ಇಪ್ಪತ್ತು ವರ್ಷಗಳ ಹಿಂದೆ ತನಗೆ ಒಬ್ಬ ಪೋರ್ತುಗೀಜ ವ್ಯಾಪಾರಿಯು ಕಾಣಿಕೆಯಾಗಿ ಕೊಟ್ಟಿದ್ದ ಒಂದು ಟುಲ್ಡೋ ಪಟ್ಟಣದ ಖಡ್ಗವನ್ನು ರಾಮರಾಜನು ತನ್ನ ಎಡಗೈಯಲ್ಲಿ ಹಿಡಕೊಂಡನು. ಆಮೇಲೆ ಒಬ್ಬ ಸೇವಕನು ಆತನ ತಲೆಗೆ ಒಂದು ಜಿರೆಟೋಪು ಹಾಕಿ, ಅದರ ಮೇಲೆ ತುರಾಯಿ ಹಚ್ಚಿದ ಆತನ ಸಣ್ಣ ಮುಂಡಾಸವನ್ನು ಹಾಕಿದನು. ಬಳಿಕ ಕೊರಳಿಗೆ ಬಹು ಬೆಲೆಯುಳ್ಳ ಒಂದು ರತ್ನಹಾರವು ಇಡಿಸಲ್ಪಟ್ಟಿತು. ಈ ಹಾರದ ಮಧ್ಯದಲ್ಲಿ ರತ್ನ ಖಚಿತವಾದ್ದೊಂದು ಪದಕವಿತ್ತು. ಆ ಪದಕದ ನಟ್ಟನಡವೆಯಿದ್ದ ಬಹುದೊಡ್ಡ ನೀಲರತ್ನವು ಅತ್ಯಂತ ಯಶಸ್ವಿಯಾದದ್ದೆಂದು ಭಾವಿಸಲ್ಪಟ್ಟಿತ್ತು, ಅದು ಕೊರಳಲ್ಲಿರುವತನಕ ಪ್ರತ್ಯಕ್ಷ ಯಮನ ಭಯವು ಕೂಡ ತನಗೆ ಇಲ್ಲವೆಂದು ರಾಮರಾಜನು ತಿಳಿದಿದ್ದನು. ಆ ತಿಳುವಿಕೆಯಂತೆ ಅವನು ಈಗ ಕೇವಲ ನಿರ್ಭೀತನಾಗಿದ್ದನು. ಈ ಪ್ರಕಾರದ ಯುದ್ಧದ ಉಡುಪು-ತೊಡುಪುಗಳಿಂದ ರಾಮರಾಜನು ಸಿದ್ದನಾಗಿ, ತನ್ನ ಡೇರೆಯ ಹೊರಗೆ ನಿಲ್ಲಿಸಿದ್ದ ಕುದುರೆಯನ್ನು ಹತ್ತಿದನು. ಆ ಕುದುರೆಯ ಮೈತುಂಬ ರೇಶಿಮೆಯ ಗಂಟುಗಂಟುಗಳುಳ್ಳ ಝೂಲವನ್ನು ಹಾಕಿದ್ದರಲ್ಲದೆ, ಅದರ ತಲೆಗೆ ಅಂಥಾದ್ದೇ ಒಂದು ಆವರಣವಿದ್ದು ಅದರ ತಲೆಯ ಮೇಲೊಂದು ಮುತ್ತಿನ ತುರಾಯಿಯೂ, ಹಣೆಯಲ್ಲೊಂದು ಬಹು ಬೆಲೆಯುಳ್ಳ ಪದಕವೂ ಒಪ್ಪುತ್ತಿದ್ದವು. ಕುದುರೆಯ ಝೂಲದ ಗಂಟುಗಳು ಬಹು ಸಮಸಮೀಪವಾಗಿದ್ದದ್ದರಿಂದ, ಕತ್ತಿಯ ಕಡತವು ಕುದುರೆಯ ಮೈಗೆಹತ್ತುವಂತೆ ಇದ್ದಿಲ್ಲ.

ಹೀಗೆ ಅಶ್ವಾರೂಢನಾಗಿದ್ದ ರಾಮರಾಜನ ಸವಾರಿಯು ತನ್ನ ಸೈನ್ಯವನ್ನು ನಿರೀಕ್ಷಿಸುವದಕ್ಕಾಗಿ ಹೊರಟಿತು. ಎಲ್ಲಕ್ಕೂ ಮುಂದುಗಡೆಯಲ್ಲಿ ಆನೆಗಳ ಮೇಲೆ ಕುಳಿತು ಯುದ್ಧಮಾಡುವ ಸೈನ್ಯವನ್ನು ಸಾಲಾಗಿ ನಿಲ್ಲಿಸಿದ್ದರು. ಅದರ ಹಿಂದೆ ಕುದುರೆಯ ಸವಾರರನ್ನೂ ಅವರ ಹಿಂದೆ ಕಾಲಾಳುಗಳನ್ನೂ ನಿಲ್ಲಿಸಿದ್ದರು. ಆನೆಗಳ ಮೈತುಂಬ ರೇಶಿಮೆಯ, ಅಥವಾ ತೊಗಲಿನ, ಆದರೆ ನಡನಡುವೆ ಧಾತುಗಳ ಚೂರುಗಳನ್ನು ಕೂಡ್ರಿಸಿದ ಝೂಲಗಳಿದ್ದವು. ಆನೆಗಳ ತಲೆಯಮೇಲೆ ಬಂಗಾರದ ಮುಲಾಮು ಮಾಡಿದ ಧಾತುಗಳ ತಗಡಿನ ಶಿರಸ್ತ್ರಾಣಗಳಿದ್ದವು. ಇದರಂತೆ ಕುದುರೆಯ ಮೈಗಳಾದರೂ ಇಂಥ ಝೂಲಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿದ್ದವು. ಈ ಆನೆ-ಕುದುರೆಗಳ ಮೇಲೆ ಕುಳಿತುಕೊಂಡಿದ್ದ ಯೋಧರು ಕವಚ ಶಿರಸ್ತ್ರಾಣಗಳಿಂದ ಒಪ್ಪುತ್ತಲಿದ್ದರು. ಅವರ ಟೊಂಕದಲ್ಲಿ ಒಂದು ಕಠಾರಿಯೂ ಒಂದು ಚಪ್ಪಕೊಡಲಿಯೂ, ಒಂದು ಖಡ್ಗವೂ, ಕೈಯಲ್ಲಿ ಭರ್ಚಿಯೂ ಇದ್ದು, ಕೆಲವರ ಬೆನ್ನಲ್ಲಿ ಬತ್ತಳಿಕೆಯೂ, ಹೆಗಲಲ್ಲಿ ಹೆದೆಯೇರಿಸಿದ ಧನುಷ್ಯವೂ ಒಪ್ಪುತ್ತಿದ್ದವು. ದಂಡಾಳುಗಳಲ್ಲಿ ಕನ್ನಡಿಗರು, ತೆಲುಗರು, ಮೈಸೂರಿನವರು, ಮಲಿಯಾಳದವರು, ತಮಿಳರು, ಮುಸಲ್ಮಾನರು ಮುಂತಾದವರು ಇದ್ದರು. ಪ್ರತಿಯೊಂದು ದಂಡಿನವರು ತಮ್ಮ ತಮ್ಮ ಪ್ರಾಂತದ ನಾಯಕನ ಕೂಡ ಬಂದಿದ್ದರು. ಒಂದೊಂದು ಆನೆಯ ಮೇಲೆ ಮೂರು-ನಾಲ್ಕು ಜನರು ಕುಳಿತು ಡಾಲು ಭರ್ಚಿಗಳನ್ನು ಧರಿಸಿದ್ದರು. ಕಾಲಾಳುಗಳಲ್ಲಿ ಕೆಲವರು ಬಿಲ್ಲು ಬಾಣಗಳನ್ನೂ, ಕೆಲವರು ತುಬಾಕಿಗಳನ್ನೂ ಹಿಡಿದಿದ್ದರು. ಇವರು ನಡುವಿನಲ್ಲಿ ಕಠಾರಿಯನ್ನೂ ಚಪ್ಪಕೊಡಲಿಯನ್ನೂ ಸಿಗಸಿದ್ದರು. ಹೀಗೆ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ನಿಂತಿದ್ದ, ಹಾಗೂ ಮಹಾ ಸಮುದ್ರದ ಹಾಗೆ ಬಹು ದೂರದವರೆಗೆ ಪಸರಿಸಿದ್ದ ತನ್ನ ಸೈನ್ಯವನ್ನು ನೋಡುತ್ತ ರಾಮರಾಜನು ಮನಸ್ಸಿನಲ್ಲಿ ಬಹಳವಾಗಿ ಹಿಗ್ಗಿದನು. ಇಂಥ ಪ್ರಚಂಡ ಸೈನ್ಯದ ಮುಂದೆ ಶತ್ರುಗಳ ಆಟವೇನು ನಡೆಯದಾದ್ದರಿಂದ ಅವರನ್ನು ಸಹಜವಾಗಿ ದಿಕ್ಕುಗೆಡಿಸಿ ಓಡಿಸಬಹುದೆಂದು ಆ ರಾಯನು ಭಾವಿಸಿ ಆನಂದಭರಿತನಾದನು. ಆತನು ಸೈನ್ಯದ ಪ್ರತಿ ಒಂದು ತುಂಡಿನ ಮುಖ್ಯಸ್ಥನೊಡನೆ ಸ್ವಲ್ಪ ಸ್ವಲ್ಪ ಮಾತಾಡುತ್ತ, ಉತ್ತೇಜಕ ಭಾಷಣದಿಂದ ಅವರನ್ನು ಪ್ರೋತ್ಸಾಹಿಸುತ್ತ ಮುಂದಕ್ಕೆ ಸಾಗುತ್ತಲಿದ್ದನು. ರಾಮರಾಜನ ಸೈನದವರಿಗೆಲ್ಲ ಅಲ್ಪ ಸ್ವಲ್ಪ ಧನುರ್ವಿದ್ಯೆಯ ಜ್ಞಾನವಿರುತ್ತಿದ್ದರೂ, ಕೇವಲ ಧನುರ್ವಿದ್ಯೆಯಲ್ಲಿ ಪ್ರವೀಣವಾದದ್ದೊಂದು ಸ್ವತಂತ್ರ ಸೈನ್ಯವನ್ನು ರಾಯನು ಸಿದ್ಧಮಾಡಿದ್ದನು. ಆ ಸೈನ್ಯದ ಯುದ್ಧ ಪ್ರಾವೀಣ್ಯವು ಶ್ಲಾಘನೀಯವಾಗಿತ್ತು. ಅದರಂತೆ ರಾಮರಾಜನ ಸೈನ್ಯದಲ್ಲಿ ತೋಫಖಾನೆಯೂ, ತುಬಾಕಿಗಳನ್ನು ಹಾರಿಸುವವರದೊಂದು ಸೈನ್ಯವೂ ಇದ್ದವು. ಹಿಂದೂ ಸೈನಿಕರಲ್ಲದೆ ಪಠಾಣ ಹಾಗೂ ಅರಬರ ಒಂದೊಂದು ಸೈನ್ಯಗಳು ರಾಮರಾಜನ ದಂಡಿನಲ್ಲಿ ಇದ್ದವು. ಇವೆರಡೂ ದಂಡುಗಳ ಅಧಿಪತಿಯು ರಣಮಸ್ತಖಾನನಾಗಿದ್ದನು. ಯಾವತ್ತು ಸೇನಾಸಮುದ್ರವನ್ನು ನೋಡುತ್ತನೋಡುತ್ತ ರಾಮರಾಜನ ಸವಾರಿಯು ರಣಮಸ್ತಖಾನನ ಸೈನ್ಯದ ಬಳಿಗೆ ಬಂದಿತು. ರಣಮಸ್ತಖಾನನ ಈಗಿನ ಉಡುಪು ತೊಡಪುಗಳು ಬೇರೆತರವಾಗಿದ್ದವು. ಯುದ್ದವೇಷದಿಂದ ಆ ತರುಣ ಸರದಾರನ ಸೌಂದರ್ಯವು ತುಂಬಿ ಹೊರಸೂಸುತ್ತಲಿತ್ತು. ಆತನನ್ನು ನೋಡಿ ರಾಮರಾಜನು ಬಹು ಕೌತುಕಪಟ್ಟನು. ರಣಮಸ್ತಖಾನನ ಆ ಎರಡೂ ಪಲಪಟಣಗಳಲ್ಲಿ ಮುಸಲ್ಮಾನ ಸೈನ್ಯದಲ್ಲಿ ತುರ್ಕರು, ಸಿದ್ದಿಗಳು, ಅರಬರು, ಕಾಬೂಲದ ಪಠಾಣರು ಇದ್ದರು. ಅವರವರ ಬೇರೆಬೇರೆ ಪ್ರಕಾರದ ಪೋಷಾಕುಗಳನ್ನು ನೋಡುವಾಗ ಪ್ರೇಕ್ಷಕರ ಮನೋರಂಜನವಾಗುತ್ತಿತ್ತು. ಅವರಲ್ಲಿ ಪಠಾಣರ ಭವ್ಯ ದೇಹಗಳೂ, ಎತ್ತರವಾದ ಅರಬರ ಆದರೆ ತೆಳ್ಳಗಿನ ದೇಹಗಳೂ, ಸಿದ್ದಿ ಜನರ ಗಿಡ್ಡಾದಕಪ್ಪು ದೇಹಗಳೂ ಬಹುವಿಚಿತ್ರವಾಗಿ ತೋರುತ್ತಿದ್ದವು. ಈ ಯಾವತ್ತು ಮುಸಲ್ಮಾನ ಸೈನಿಕರು ಕೇವಲ ದುಡ್ಡಿನ ಸಲುವಾಗಿ ರಾಮರಾಜನ ಪಕ್ಷದಿಂದ ಕಾಣುತ್ತ, ಆತನ ಆಜ್ಞೆಯಂತೆ ನಡಕೊಳ್ಳುತ್ತಿದ್ದರು. ರಾಮರಾಜನು ಆ ಮುಸಲ್ಮಾನ ಸೈನ್ಯವನ್ನು ನೋಡಿ ರಣಮಸ್ತಖಾನನೊಡನೆ ನಾಲ್ಕು ಮಾತುಗಳನ್ನಾಡಿ, ಆ ದುಷ್ಟ ಖಾನನ ಮುಖಾಂತರ ಆತನ ಸೈನಿಕರನ್ನು ಕುರಿತು ನಾಲ್ಕು ಉತ್ತೇಜನಪರ ಮಾತುಗಳನ್ನಾಡಿಸಿ, ರಣಮಸ್ತಖಾನನೊಡನೆ ತನ್ನ ಶಿಬಿರದ ಕಡೆಗೆ ಸಾಗಿದನು.

ಯಾವತ್ತು ಸೈನ್ಯದ ಅವಲೋಕನದಿಂದ ರಾಮರಾಜನ ಉತ್ಸಾಹವು ಅಭಿವೃದ್ಧವಾಗಿತ್ತು. ಶತ್ರುಗಳು ಈಗ ಮೈಮೇಲೆ ಏರಿಬಂದರೆ, ಯಾವ ಪಲಟಣದವರು ಯಾವ ಕಡೆಗೆ ನಿಂತುಕೊಳ್ಳಬೇಕು, ಯಾವಾಗ್ಗೆ ಏನು ಮಾಡಬೇಕು ಎಂಬುದನ್ನು ಕುರಿತು ಯಥಾಸ್ಥಿತವಾಗಿ ಅಪ್ಪಣೆಗಳನ್ನು ಕೊಡುತ್ತ, ಆತನು ತನ್ನ ಶಿಬಿರವನ್ನು ಸೇರಿದನು. ಬಹುತರ ಯಾವತ್ತು ಸೈನ್ಯಭಾಗಗಳ ಮುಖ್ಯಸ್ಥರು ರಾಮರಾಜನ ಸಂಗಡ ಆತನನ್ನು ಶಿಬಿರಕ್ಕೆ ಕಳಿಸುವದಕ್ಕಾಗಿ ಆತನ ಸಂಗಡ ಬಂದಿದ್ದರು. ಅವರೆಲ್ಲರನ್ನು ರಾಮರಾಜನನ್ನು ಪ್ರೋತ್ಸಾಹಿಸಿ ಅವರನ್ನು ಕುರಿತು-ವೀರರೇ, ಶತ್ರುಗಳು ಈಗ ಮೈಮೇಲೆ ಏರಿಬಂದರೆಂದರೆ ಅವರನ್ನು ಹಿಂದಕ್ಕೆ ದೂಡುತ್ತ ದೂಡುತ್ತ ವಿಜಾಪುರದವರೆಗೆ ಹೋಗಿ ಆ ಪಟ್ಟಣವನ್ನು ಕೈವಶ ಮಾಡಿಕೊಳ್ಳಬೇಕೆಂಬ ಮಾತನ್ನು ಲಕ್ಷ್ಮದಲ್ಲಿಟ್ಟು, ನೀವು ಯುದ್ಧ ಮಾಡತಕ್ಕದ್ದು. ವಿಜಾಪುರವು ಕೈವಶವಾದ ಬಳಿಕ ಅದನ್ನು ಸುಲಿಯುವದಕ್ಕಾಗಿ ನಿಮಗೆ ಐದು ದಿವಸಗಳವರೆಗೆ ಪರವಾನಿಗೆಯನ್ನು ಕೊಡುವೆವು. ಆ ಸುಲಿಗೆಯಲ್ಲಿ ಅವರವರಿಗೆ ಸಿಕ್ಕ ಪದಾರ್ಥಗಳು ಅವರವರವೇ, ಎಂದು ತಿಳಿಯಲಾಗುವದು; ಎಂದು ನಿಮ್ಮ ನಿಮ್ಮ ಜನರೊಳಗೇ ತಿಳಿಸತಕ್ಕದ್ದು, ಎಂದು ಹೇಳಿದನು. ರಾಮರಾಜನಿಗೆ ಸ್ವಂತದ ಪರಾಕ್ರಮದ ವಿಷಯವಾಗಿಯೂ, ತನ್ನ ಸೈನ್ಯದ ಸಾಮರ್ಥ್ಯದ ವಿಷಯವಾಗಿಯೂ ಒಳಿತಾಗಿ ಅನುಭವವಿತ್ತು. ಇಲ್ಲಿಯವರೆಗೆ ರಾಮರಾಜನ ಪೂರ್ವಜರು ಬಾಹಮನಿಯ ಬಾದಶಹರನ್ನು ಒಬ್ಬೊಬ್ಬರನ್ನಾಗಿ ಹಣಿದು ತಮ್ಮ ರಾಜ್ಯವನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರಲ್ಲದೆ, ತಮ್ಮ ರಾಜ್ಯದ ವಿಸ್ತಾರವನೂ, ಮಹತ್ವವನ್ನೂ ಭರದಿಂದ ಹೆಚ್ಚಿಸಿ, ತಮ್ಮ ವರ್ಚಸ್ಸನ್ನು ಎಲ್ಲರ ಮೇಲೆ ಕೂಡಿಸಿದ್ದರು; ಆದರೆ ಈಗ ಆ ಬಾಹಮನಿ ಬಾದಶಹರೆಲ್ಲ ಒಟ್ಟುಗೂಡಿ ಯುದ್ಧಕ್ಕೆ ಬಂದಿರುವದರಿಂದ, ಬಹು ಎಚ್ಚರದಿಂದ ಅವರೊಡನೆ ಯುದ್ಧ ಮಾಡಬೇಕಾಗುವದೆಂಬ ವಿಚಾರವು ರಾಮರಾಜನ ಮನಸ್ಸಿನಲ್ಲಿ ಬರಲೊಲ್ಲದು. ನಾನು ಅವರನ್ನು ಒಂದೇ ಹೊಡೆತಕ್ಕೆ ಹೊಡೆದುಹಾಕೆನೆಂಬ ಮನಸ್ಸಿನಲ್ಲಿಯೇ ಆತನು ತಲೆದೂಗುತ್ತಿದ್ದನು; ಆದ್ದರಿಂದ ತನ್ನ ಎಡಬಲ ಭಾಗಗಳ ರಕ್ಷಕರಾದ ತಿಲುಮಲ-ವೆಂಕಟಾದ್ರಿಗಳು ಈಗ ಬೇರೆ ಕಡೆಗೆ ಹೋಗಿದ್ದರೂ, ತಾನೊಬ್ಬನೇ ಶತ್ರು ಸೈನ್ಯದ ಮೇಲೆ ಬೀಳಬೇಕೆಂದು ರಾಮರಾಜನು ನಿಶ್ಚಯಿಸಿದನು; ಆದರೂ ತನ್ನ ಬಂಧುಗಳನ್ನು ಕರೆಸಿಕೊಂಡರೆ ಯವನರ ಪಾರುಪತ್ಯವು ಬೇಗನೆ ಆಗುವದೆಂದು ತಿಳಿದು, ತನ್ನ ಬಳಿಯಲ್ಲಿ ನಿಂತಿದ್ದ ರಣಮಸ್ತನಿಗೆ ತನ್ನ ಬಂಧುಗಳನ್ನು ಕರೆಯುವದಕ್ಕಾಗಿ ಸವಾರರನ್ನು ಕಳಿಸಲು ಸೂಚಿಸಿದನು; ಆದರೆ ವಿಶ್ವಾಸಘಾತಕಿಯಾದ ರಣಮಸ್ತನು ರಾಮರಾಜನ ಮುಂದೆ ಹಾಗೆ ಮಾಡುವೆನೆಂದು ಒಪ್ಪಿಕೊಂಡರೂ, ತಿರುಮಲ-ವೆಂಕಟಾದ್ರಿಗಳ ಕಡೆಗೆ ಆತನು ಸವಾರರನ್ನು ಕಳಿಸಲಿಲ್ಲ.

ಈ ಮೇರೆಗೆ ರಾಮರಾಜನು ತನ್ನ ಸೈನ್ಯದ ಸಿದ್ಧತೆಯನ್ನು ಮಾಡಿಕೊಂಡು ಕುಳಿತುಕೊಂಡನು. ಆತನಿಗೆ ತನ್ನ ಸೈನ್ಯದಲ್ಲಿ ಯಾವ ಪ್ರಕಾರದ ದೋಷವೂ ಕಂಡುಬರಲಿಲ್ಲ. ತನ್ನ ಸೈನ್ಯದ ಸಿದ್ಧತೆಯ ಅಭಿಮಾನವು ತಲೆಗೇರಿದ್ದರಿಂದ ಶತ್ರುಬಲದ ಕಲ್ಪನೆಯು ಕೂಡ ಆತನ ಮನಸ್ಸಿಗೆ ಹೊಳೆಯಲಿಲ್ಲ. ಹ್ಯಾಗೂ ತಿರುಮಲ-ವೆಂಕಟಾದ್ರಿಗಳನ್ನು ಕರೆಕಳುಹಿಸಿರುವೆನೆಂದು ಆತನು ಭಾವಿಸಿ, ನಿಶ್ಚಿಂತನಾಗಿದ್ದನು. ಅಷ್ಟರಲ್ಲಿ ಶತ್ರುಸೈನ್ಯವು ತಾವು ಬೀಡುಬಿಟ್ಟುಕೊಂಡು ಕುಳಿತ ಸ್ಥಳದಿಂದ ಸುಮಾರು ಮೂರು ಹರದಾರಿ ಮುಂದಕ್ಕೆ ಸಾಗಿ ಬಂದಿತೆಂಬ ವರ್ತಮಾನವನ್ನು ಚಾರರು ರಾಯನಿಗೆ ಹೇಳಿದರು, ಅದನ್ನು ಕೇಳಿ ರಾಮರಾಯನ ಒಂದು ಭ್ರಾಂತಿಯು ದೂರವಾಗಿ, ಆತನು ಸ್ವಲ್ಪ ಕಣ್ಣು ತೆರೆದನು, ತಿರುಮಲವೆಂಕಟಾದ್ರಿಗಳಿಂದ ಪೆಟ್ಟು ತಿಂದು ಮುಸಲ್ಮಾನ ಸೈನ್ಯವು ಓಡಿಬಂದಿಲ್ಲೆಂಬದು ಈಗ ಆತನಿಗೆ ಗೊತ್ತಾಯಿತು. ಈ ಪ್ರಸಂಗದಲ್ಲಿ ಶತ್ರುಗಳು ಮುಂದಕ್ಕೆ ಸಾಗಿಬರುವ ಹಾದಿಯನ್ನು ನೋಡುತ್ತ ಕುಳಿತುಕೊಳ್ಳದೆ, ತಾನು ಮುಂದಕ್ಕೆ ಸಾಗಿಹೋಗಬೇಕೆಂದು ರಾಮರಾಜನು ಯೋಚಿಸಿದನು. ಈಗ ರಾಮರಾಜನ ಸೈನ್ಯವು ಮುದ್ಗಲ್ಲಕೋಟೆಯ ಬಳಿಯಲ್ಲಿ ಇತ್ತು, ಶತ್ರುಸೈನ್ಯವು ತನ್ನ ಬಂಧುಗಳ ಕಣ್ಣುತಪ್ಪಿಸಿ ತಿರುಗಿ ಬಂದು ತನ್ನನ್ನು ಗಂಟುಬಿದ್ದಿತೆಂದು ಆತನು ತಿಳಿದನು, ಆದರೆ ಆತನು ಎದೆಗುಂದಲಿಲ್ಲ. ತನ್ನ ಸೈನ್ಯವು ಒಟ್ಟುಗೂಡಿದ ನಾಲ್ವರು ಬಾದಶಹರು ಸೈನ್ಯಕ್ಕೂ ಎದುರಾಗಲು ಸಮರ್ಥವಾಗಿರುತ್ತದೆಂಬ ನಂಬಿಗೆಯು ಆತನಿಗೆ ಸಂಪೂರ್ಣವಾಗಿ ಇತ್ತು ! ಅಂದಬಳಿಕ ಕೇಳುವದೇನು ? ಆತನು ಕೂಡಲೆ ತನ್ನ ಸೈನ್ಯಕ್ಕೆ ಮುಂದಕ್ಕೆ ಸಾಗಲು ಆಜ್ಞಾಪಿಸಿದನು. ಆಗ ಆತನ ನಿಜವಾದ ಹಿತಕಚಿಂತರು ಆತನಿಗೆ-“ಮಹಾರಾಜ, ತಮಗೆ ತಿರುಮಲ-ವೆಂಕಟಾದ್ರಿಗಳ ಬೆಂಬಲವಿಲ್ಲ. ಅವರನ್ನು ಕರೆಯಕಳುಹಿಸಿ, ಅವರು ಬಂದಬಳಿಕ ತಾವು ಮುಂದಕ್ಕೆ ಸಾಗಿಹೋಗತಕ್ಕದ್ದು. ಇಲ್ಲದಿದ್ರೆ ಶತ್ರುಗಳು ತಾವಾಗಿ ನಮ್ಮ ಮೈಮೆಲೆ ಸಾಗಿ ಬಂದಬಳಿಕ ನಿರ್ವಾಹವಿಲ್ಲದೆ ಏನು ಮಾಡುವದನ್ನು ಮಾಡಬೇಕು, ಈಗ ನಾವು ಮದ್ದಲ್ಲ ಕೋಟೆಯ ಆಶ್ರಯದಲ್ಲಿರುವೆವು. ಆ ಆಸರವನ್ನು ಬಿಟ್ಟು ಮುಂದಕ್ಕೆ ಹೋಗುವ ಸಾಹಸವನ್ನು ಮಾಡಬಾರದು” ಎಂದು ಹೇಳಿದರು. ಆದರೆ ರಾಮರಾಜನಿಗೆ ಅವರ ಮಾತುಗಳು ಎಷ್ಟುಮಾತ್ರವೂ ಸೇರಲಿಲ್ಲ. ನಾನು ಈಗ ಯೋಚಿಸಿರುವದೇ ಯೋಗ್ಯವಾಗಿರುತ್ತದೆ. ನಾನು ಮುಂದಕ್ಕೆ ಸಾಗಿ ಹೋಗದಿದ್ದರೆ, ನನ್ನ ಅಂಜುಬುರುಕತನವು ವ್ಯಕ್ತವಾಗುವದು. ಈಗ ಅಂಜಲಿಕ್ಕೆ ಅಂಥ ಪ್ರಸಂಗವೇನು ಬಂದಿರುವದಿಲ್ಲ. ಸುಮ್ಮನೆ ಯಾಕೆ ಅಂಜಬೇಕು ? ನಾವು ಮುಂದಕ್ಕೆ ಸಾಗಿಹೋಗಿ ಶತ್ರುಗಳು ಎದುರಾದಕೂಡಲೆ ಅವರನ್ನು ಸೋಲಿಸಿ, ಅವರನ್ನು ಓಡಿಸಿ ಕೊಂಡು ಹೋಗಿ ವಿಜಾಪುರವನ್ನು ಸೇರದಿದ್ದರೆ, ನಮ್ಮ ಪೌರುಷವೇನು ? ಎಂಬ ಅಭಿಮಾನೋಕ್ತಿಗಳನ್ನು ಆಡುತ್ತ, ತನ್ನ ಯಾವತ್ತೂ ಸೇನಾಪತಿಗಳಿಗೆ ತಳವನ್ನು ಕಿತ್ತಲು ಒತ್ತಾಯದಿಂದ ಆಜ್ಞಾಪಿಸಿದನು. ರಾಮರಾಜನ ಈ ಅಪ್ಪಣೆಗೆ ರಣಮಸ್ತನು ಒಳಿತಾಗಿ ಉತ್ತೇಜನ ಕೊಡುವನು. ಉಳಿದವರು ಪ್ರತಿಬಂಧ ಮಾಡುವರು. ರಾಮರಾಜನು ರಣಮಸ್ತನನ್ನು ಹೊಗಳುವನು; ಸ್ವಾಮಿಭಕ್ತರಾದ ತನ್ನ ಜನರನ್ನು ತಿರಸ್ಕರಿಸುವನು. ಇದರಿಂದ ರಾಮರಾಜನ ನಿಜವಾದ ಹಿತಚಿಂತಕರ ಮನಸುಗಳು ನೊಂದವು. ಅವರು ತಿರುಮಲ-ವೆಂಕಟಾದ್ರಿಗಳು ಬರುವವರೆಗೆ ಮುದ್ಗಲಕೋಟೆಯ ಆಶ್ರಯವನ್ನು ಬಿಟ್ಟು ಮುಂದಕ್ಕೆ ಹೋಗಲಾಗದೆಂದು ನಿಶ್ಚಯಿಸಿದರು; ಆದರೆ ರಾಮರಾಜನು ಮುಂದಕ್ಕೆ ಸಾಗಿಹೋಗಲೇಬೇಕೆಂದು ಒತ್ತಾಯ ಮಾಡಹತ್ತಿದನು. ಆತನು ಹಟಮಾರಿತನ ದುರಭಿಮಾನಗಳ ಮುಂದೆ ಯಾರ ಆಟವೂ ನಡೆಯಲೊಲ್ಲದು. ರಾಮರಾಜನು ತನ್ನ ಸೈನ್ಯದ ತಳವನ್ನೇ ಮೊದಲು ಎಬ್ಬಿಸಿಬಿಟ್ಟಿದ್ದರಿಂದ, ಉಳಿದವರು ನಿರ್ವಾಹವಿಲ್ಲದೆ ಮುಂದಕ್ಕೆ ಸಾಗಬೇಕಾಯಿತು. ವಿನಾಶಕಾಲಕ್ಕೆ ವಿಪರೀತ ಬುದ್ದಿಯೆಂಬ ಮಾತು ಇಲ್ಲಿ ಚೆನ್ನಾಗಿ ವ್ಯಕ್ತವಾಗುವದು.

ರಾಮರಾಜನ ಸೈನ್ಯವು ವಾಯಪುರದ ಬಳಿಯಲ್ಲಿ ಬಂದಿತು. ಶತ್ರುಗಳ ಸೈನ್ಯವೂ ಎದುರಿನಿಂದ ಅಲ್ಲಿಗೆ ಬಂದಿತು, ಎರಡೂ ಸೈನ್ಯಗಳು ಒಂದಕ್ಕೊಂದು ತಾಕಲಾಡಿ ಘನಚಕ್ರದ ಕಾಳಗಕ್ಕೆ ಆರಂಭವಾಯಿತು. ಈ ಯುದ್ಧವಾರ್ತೆಯು ಕೇವಲ ಏಕಪಕ್ಷೀಯ ಯವನರ (ಮುಸಲ್ಮಾನ) ಇತಿಹಾಸಕಾರರಿಂದಲೇ ನಮಗೆ ತಿಳಿದಿರುವದು ದುರ್ದೈವದ ಸಂಗತಿಯು. ಮುಸಲ್ಮಾನ ಇತಿಹಾಸಕಾರರು ಜಯಶಾಲಿಗಳಾದ ಮುಸಲ್ಮಾನರ ಪಕ್ಷವನ್ನೇ ಕಟ್ಟಿ ಹಿಂದೂ ಜನರನ್ನು ನಿರಾಕರಿಸಿ ಬರೆಯುವ ಸಂಭವ ವಿಶೇಷವಾಗಿರುತ್ತದೆ. ಫೇರಿಸ್ತನೆಂಬ ಮುಸಲ್ಮಾನ ಇತಿಹಾಸಕಾರನು ರಾಮರಾಜ ಸೈನ್ಯದ ಸಂಖ್ಯೆಯನ್ನು ಬೇರೆ ಬೇರೆ ಪ್ರಸಂಗಗಳಲ್ಲಿ ಬೇರೆ ಬೇರೆ ವಿಧವಾಗಿ ಕೊಟ್ಟಿರುತ್ತಾನೆ. ಒಂದು ಸ್ಥಳದಲ್ಲಿ ಆತನು ರಾಮರಾಜನ ಸೈನ್ಯದಲ್ಲಿ ೯,೦೦,೦೦೦ ಕಾಲಾಳುಗಳೂ, ೪೫,೦೦೦ ಕುದುರೆ ಸವಾರರೂ, ೨,೯೦೦ ಆನೆಗಳೂ, ೧೫,೦೦೦ ಬೇರೆ ಸೈನಿಕರೂ ಇದ್ದರೆಂದು ಉಲ್ಲೇಖಿಸಿರುವನು. ಈ ಸೈನ್ಯಕ್ಕೆ ಸರಿಯಾಗಿಯೇ ಮುಸಲ್ಮಾನರ ಸೈನ್ಯವಾದರೂ ಇರಬಹುದು. ಮುಸಲ್ಮಾನರ ಸೈನ್ಯವು ಮೂರು ತುಂಡುಗಳಾಗಿ ವಿಭಾಗಿಸಲ್ಪಟ್ಟಿತ್ತು. ಹಿಂದೂಸೈನ್ಯದ ಬಲಗಡೆಯ ಮಗ್ಗಲ ಮೇಲೆ ಸಾಗಿಹೋಗುವದುಕ್ಕಾಗಿ ವಿಜಾಪುರದ ಆದಿಲಶಹನ ಸೈನ್ಯವೂ, ಎಡಗಡೆಯ ಮಗ್ಗಲಿಗೆ ಸಾಗಿಹೋಗುವದಕ್ಕಾಗಿ ಬೀದರದ ಬಾದಶಹನ ಸೈನ್ಯವೂ, ಮಧ್ಯ ಕೇಂದ್ರದ ಮೇಲೆ ಸಾಗಿ ಬರುವದಕ್ಕಾಗಿ ಅಹಮ್ಮದನಗರದ ಹುಸೇನ ನಿಜಾಮಶಹನ ಸೈನ್ಯವೂ ಯೋಜಿಸಲ್ಪಟ್ಟಿದ್ದವು. ಈ ಮೂವರೂ ತಮ್ಮ ತಮ್ಮ ತೋಫಖಾನೆಗಳನ್ನು ಮಧ್ಯದಲ್ಲಿಟ್ಟು, ಅವು ಹಿಂದುಗಳಿಗೆ ಕಾಣದಹಾಗೆ ಅವುಗಳ ಮುಂದೆ ಧನುರ್ಧಾರಿಗಳ ಸೈನ್ಯವನ್ನು ನಿಲ್ಲಸಿದ್ದರು. ಪ್ರತಿ ಒಂದು ಪಥಕದವರು ತಮ್ಮ ಬಾರಾ ಇಮಾಮನ ನಿಶಾನೆಯನ್ನು ಸೈನ್ಯದ ಮುಂದೆ ಹಿಡಿದಿದ್ದರು. ನಿಜಾಮಶಹನ ತೋಫಖಾನೆಯು ದೊಡ್ಡದಿತ್ತು. ಅವುಗಳಲ್ಲಿ ತೋಫುಗಳು ಸಣ್ಣವು-ದೊಡ್ಡವು ಕೂಡಿ ೬೦೦ ಇದ್ದವು. ಸಣ್ಣ ತೋಪುಗಳನ್ನು ಹಿಂದುಗಡೆಯಲ್ಲಿ ನಿಲ್ಲಿಸಿ, ದೊಡ್ಡ ತೋಪುಗಳನ್ನು ಮುಂದುಗಡೆಯಲ್ಲಿ ನಿಲ್ಲಿಸಿದ್ದರು. ಈ ಮೇರೆಗೆ ತೋಪುಗಳನ್ನು ನಿಲ್ಲಿಸಿರುವದು ಹಿಂದೂ ಜನರಿಗೆ ಗೊತ್ತಾಗಿದ್ದಿಲ್ಲ. ಅದು ಗೊತ್ತಾಗಬಾರದೆಂತಲೇ ಮುಸಲ್ಮಾನರು ಧನುರ್ಧಾರಿಗಳನ್ನು ತೋಪುಗಳ ಮುಂದೆ ನಿಲ್ಲಿಸಿ ಮರೆಮಾಡಿದ್ದರು. ಮುಸಲ್ಮಾನ ಧನುರ್ಧಾರಿಗಳು ಬಾಣಗಳನ್ನು ಬಿಡಹತ್ತಿದಕೂಡಲೆ ಹಿಂದೂಜನರು ಅವರ ಮೇಲೆ ಬಾಣಗಳನ್ನು ಸುರಿಸ ಹತ್ತಿದರು. ಹಿಂದೂ ಧನುರ್ಧಾರಿಗಳಿಗೆ ತಮ್ಮ ಧನುರ್ಧಾರಿಗಳು ಈಡಾಗಲಾರರೆಂಬದು ಮುಸಲ್ಮಾನರಿಗೆ ಗೊತ್ತಿದ್ದರೂ, ಹಿಂದೂ ಸೈನಿಕರನ್ನು ತಮ್ಮ ಮೇಲೆ ಎಳಕೊಂಡು, ಕೂಡಲೆ ತಮ್ಮ ಬಿಲ್ಲಾಳುಗಳನ್ನು ಹಿಂದಕ್ಕೆ ಸರಿಸಿಕೊಂಡು ತೋಪುಗಳನ್ನು ಹಾರಿಸಿ, ಹಿಂದೂ ಸೈನ್ಯದ ಸಂಹಾರವನ್ನು ಮಾಡಿ ಜರ್ಜರಗೊಳಿಸಿಬೇಕೆಂದು ಮುಸಲ್ಮಾನರು ಯೋಚಿಸಿದ್ದರು, ಆ ಯೋಚನೆಯು ಚನ್ನಾಗಿ ಫಲಿಸಿತು. ಈ ಮುಸಲ್ಮಾನ ಧನುರ್ಧಾರಿಗಳ ಆಟವು ನಮ್ಮ ಮುಂದೆ ಏನೂ ನಡೆಯಲಾರದೆಂಬ ನಂಬಿಗೆಯಿಂದ ರಾಮರಾಜನು ತನ್ನ ಧನುರ್ಧಾರಿಗಳನ್ನು ಭರದಿಂದ ಮುಂದಕ್ಕೆ ಓಡುವವರಂತೆ ವಿಜಾಪುರದ ಕಡೆಗೆ ಸರಿಯಹತ್ತಿದರು. ಅದನ್ನು ನೋಡಿ ಹಿಂದೂಜನರು ಉಬ್ಬಿ ಜಯಘೋಷ ಮಾಡುತ್ತ ಆವೇಶದಿಂದ ಮುಂದಕ್ಕೆ ಸಾಗಿಹೋದರು. ಕೂಡಲೆ ಮುಸಲ್ಮಾನರು ತಮ್ಮ ತೋಪುಗಳನ್ನು ಹಾರಿಸಿ, ಹಿಂದು ಜನರ ಸಂಹಾರವನ್ನು ಮಾಡಹತ್ತಿದರು.


ಹೀಗಾಗಿ ಶೂರರಾದ ಹಿಂದೂ ಧನುರ್ಧಾರಿಗಳು ಪಟಪಟ ಸಾಯಹತ್ತಿದರು ಇಷ್ಟರಿಂದ ರಾಮರಾಜನ ಸೈನಿಕರೇನು ಹಿಂಜರಿಯಲಿಲ್ಲ. ಕೂಡಲೇ ಮುಸಲ್ಮಾನ ತೋಪುಗಳಿಗೆ ಎದುರಾಗಿ ಹಿಂದೂ ಜನರ ತೋಫುಗಳೂ ಮುಂದಕ್ಕೆ ಬಂದು ಹಾರಹತ್ತಿದವು, ಇದರಿಂದ ಎರಡೂ ಸೈನ್ಯಗಳಲ್ಲಿ ಭಯಂಕರವಾದ ಸಂಹಾರಕಾರ್ಯವು ನಡೆಯಿತು. ಅಷ್ಟರಲ್ಲಿ ಬೇರೆ ಚಾರರ ಮುಖಾಂತರವಾಗಿ ಶತ್ರುಗಳ ಮೋಸವು ಗೊತ್ತಾಗಿ, ತಿರುಮಲ-ವೆಂಕಟಾದ್ರಿಗಳೂ ತಮ್ಮ ಸೈನ್ಯಗಳೊಡನೆ ವೇಗದಿಂದ ಬಂದು, ಮುಸಲ್ಮಾನ ಸೈನ್ಯದ ಎಡಬಲಗಳಲ್ಲಿ ಭಯಂಕರ ರೀತಿಯಿಂದ ಏರಿಹೋದರು. ಮಧ್ಯಭಾಗದಲ್ಲಿಯಂತೂ ರಾಮರಾಜನು ಸ್ವತಃ ಆನೆಯ ಮೇಲೆ ಕುಳಿತು ಕೊಂಡು ಸಂಚರಿಸುತ್ತ ತನ್ನ ದಂಡಾಳುಗಳಿಗೆ ಧೈರ್ಯ ಹೇಳುತ್ತಲಿದ್ದನು. ಆತನ ಅಲೌಕಿಕ ಧೈರ್ಯದಿಂದ ಬಹಳ ಪ್ರಯೋಜನವಾಯಿತು. ಅವನ ಸೈನ್ಯದವರು ಒಳಿತಾಗಿ ಸ್ಪುರಣಗೊಂಡರು, ಶತ್ರುಗಳ ತೋಪುಗಳು ಸುಮ್ಮನಾದವು. ರಾಮರಾಜನು ಶತ್ರುಗಳನ್ನು ಹಿಂದೆ ಸರಿಸುತ್ತ ಹೋದನು. ಶತ್ರುಗಳು ಹಿಂದಕ್ಕೆ ಸರಿಯುತ್ತ ಹೋದಂತೆ ರಾಮರಾಜನು ವಿಲಕ್ಷಣ ರೀತಿಯಿಂದ ಆವೇಶಗೊಂಡನು. ವೃದ್ಧ ರಾಮರಾಜನ ಈಗಿನ ಮಹಾ ಶೌರ್ಯಕ್ಕೆ ಭಾರತೀಯ ವೀರಾಗ್ರಣಿ ಭೀಷ್ಮನ ಶೌರ್ಯವನ್ನು ಹೋಲಿಸಬಹುದು. ಈಗಿನ ಕಾಲದಲ್ಲಿ ರಾಮರಾಜನ ಮನಸ್ಸು ೯೦ ವರ್ಷದ್ದಿತ್ತೆಂದು ಕೆಲವರು ಹೇಳಿರುತ್ತಾರೆ; ಆದರೆ ಇದು ಆತಿಶಯೋಕ್ತಿಯೆಂದು ಭಾವಿಸಿದರೂ, ರಾಮರಾಜನು ಈ ಕಾಲದಲ್ಲಿ ವೃದ್ದಾಪ್ಯದೆಶೆಯನ್ನು ಹೊಂದಿದ್ದನೆಂದು ಹೇಳಲಿಕ್ಕೆ ಬಾಧಕವಿಲ್ಲ. ಉಭಯ ಸೈನಿಕರು ಎದೆಗೆ ಎದೆಯಾನಿಸಿ ಕಾದುತ್ತಲಿದ್ದರು. ಇನ್ನು ಮೇಲೆ ತನಗೆ ಪೂರ್ಣ ಜಯಪ್ರಾಪ್ತಿಯಾಗುವದೆ೦ಬ ನ೦ಬಿಗೆಯು ರಾಮರಾಜನಲ್ಲಿ ಉತ್ಪನ್ನವಾಗತೊಡಗಿತ್ತು; ಮುಸಲ್ಮಾನರು ಇನ್ನು ಓಡಿಹೋಗತಕ್ಕವರು ಅಷ್ಟರಲ್ಲಿ ದುರ್ದೈವದಿಂದ ರಾಮರಾಜನು ಹತ್ತಿಕೊಂಡಿದ್ದ ಆನೆಗೆ ಗಾಯವಾಗಿ ಅದು ದೊಪ್ಪನೆ ನೆಲಕ್ಕೆ ಕುಳಿತಿತು. ಆದರೆ ರಾಮರಾಜನು ಎದೆಗುಂದಲಿಲ್ಲ; ಆತನು ಅಂಬಾರಿಯಿಂದ ಕೆಳಗೆ ಇಳಿದು, ತನ್ನ ಸಲುವಾಗಿ ಒಂದು ಸಿಂಹಾಸನವನ್ನು ಸಿದ್ಧಮಾಡುವದಕ್ಕಾಗಿ ತನ್ನ ಸೈನಿಕರಿಗೆ ಆಜ್ಞಾಪಿಸಿದನು. ಮುಂದೆ ಸ್ವಲ್ಪ ವೇಳೆಯಲ್ಲಿ ಸಿಂಹಾಸನವು ಸಿದ್ಧವಾಗಲು, ರಾಮರಾಜನು ಅದರ ಮೇಲೆ ಕುಳಿತು ಸೈನ್ಯದಲ್ಲಿ ಮಹಾ ಪರಾಕ್ರಮವನ್ನು ಮಾಡಿದವರಿಗೆ ಕೈಗೆ ಬಂದಂತೆ ಉಚಿತಗಳನ್ನು ಕೊಡಹತ್ತಿದನು. ಶತ್ರುಗಳ ತೋಫಖಾನೆಯಲ್ಲಿ ಜೀವವೇನು ಉಳಿದಿರುವದಿಲ್ಲೆಂದು ಆತನು ಸಂಪೂರ್ಣವಾಗಿ ನಂಬಿಕೊಂಡಿದ್ದನು. ರಾಮರಾಜನ ಸೈನಿಕರಾದರೂ ಆವೇಶದಿಂದ ಕಾದುತ್ತಲಿದ್ದರು. ಅಷ್ಟರಲ್ಲಿ ಶತ್ರುಗಳ ಕಡೆಯ ಒಳ್ಳೆ ಜಾಣರಾದ ಗೋಲಂದಾಜಿಗಳು ತಮ್ಮ ತೋಪುಗಳಲ್ಲಿ ತಾಮ್ರದ ದುಡ್ಡುಗಳನ್ನೂ ಚೂರುಗಳನ್ನೂ ತುಂಬಿ ಒಮ್ಮೆಲೆ ಹಾರಿಸಹತ್ತಿದರು. ಇದರಿಂದ ರಾಮರಾಜನ ಸೈನಿಕರು ಅಕಸ್ಮಾತಾಗಿ ಗಾಯ ಪಟ್ಟು ನೆಲಕ್ಕೆ ಉರುಳಹತ್ತಿದರು. ಈ ಸುದ್ದಿಯನ್ನು ರಾಮರಾಜನ ಕಡೆಯ ಜನರು ರಾಮರಾಜನಿಗೆ ಹೇಳಿ, ಇನ್ನು ನೀವು ಬೇಗನೆ ಕುದುರೆಯನ್ನು ಹತ್ತಿ ಹಿಂದಕ್ಕೆ ಸರಿಯಬೇಕೆಂದು ಸೂಚಿಸಿದರು; ಆದರೆ ಹೀಗೆ ಮಾಡುವದರಿಂದ ತನ್ನ ದಂಡಾಳುಗಳು ಎದೆಗೆಟ್ಟಾರೆಂದು ತಿಳಿದು ಸಾಯುವವರೆಗೆ ಶತ್ರುಗಳಿಗೆ ಬೆನ್ನು ತೋರಿಸಬಾರದೆಂದು ರಾಯನು ನಿಶ್ಚಯಿಸಿ, ತನ್ನ ಸಿಂಹಾಸನವನ್ನು ಬಿಟ್ಟು ಏಳದಾದನು.

ರಾಮರಾಜನ ಈ ನಿಶ್ಚಯವು ಕಡೆತನಕ ತಡೆಯಲಿಲ್ಲ. ತಾಮ್ರದ ದುಡ್ಡುಗಳ ಹಾಗೂ ಚೂರುಗಳ ಹೊಡೆತವನ್ನು ತಾಳಲಾರದೆ, ಹಿಂದೂ ಜನರು ಹಿಂದಕ್ಕೆ ಸರಿಯಹತ್ತಿದರು. ಅವರು ಹಿಂದಕ್ಕೆ ಸರಿಯುತ್ತ ಹೋದಂತೆ ಮುಸಲ್ಮಾನರು ಮುಂದಕ್ಕೆ ಬರಹತ್ತಿದರು. ಅಷ್ಟರಲ್ಲಿ ಹುಸೇನ ನಿಜಾಮಶಹನಿಗೆ, ರಾಮರಾಜನು ಸೈನ್ಯ ಮಧ್ಯದಲ್ಲಿ ಸಿಂಹಾಸನದ ಮೇಲೆ ಕುಳಿತಿರುವೆನೆಂಬ ಸುದ್ದಿಯು ಹತ್ತಿತು. ಕೂಡಲೇ ಆತನು ರಾಮರಾಜನ ತಲೆಯನ್ನು ತಂದು ಕೊಟ್ಟವರಿಗೂ, ಆ ಕಾರ್ಯಕ್ಕಾಗಿ ಸಹಾಯ ಮಾಡಿದವರಿಗೂ ಬಹುದೊಡ್ಡ ಇನಾಮು ಕೊಡುವೆನೆಂದು ಡಂಗುರ ಸಾರಿದನು. ಆಗ ನಿಜಾಮಶಹನ ದಂಡಿನವರು ಆವೇಶದಿಂದ ಹಿಂದುಗಳ ಸೈನ್ಯದ ಮೇಲೆ ನುಗ್ಗಿದರು. ಅಷ್ಟರಲ್ಲಿ ನಿಜಾಮಶಹನ ಆನೆಯು ಬೆದರಿ ರಾಮರಾಜನಿದ್ದ ಕಡೆಗೆ ಓಡಿಬಂದಿತು. ಹಿಂದುಗಳು ನಿಜಾಮಶಹನನ್ನು ಕೊಲ್ಲಬೇಕೆಂದು ಆನೆಯನ್ನು ಮುತ್ತಲು, ಅದು ಮತ್ತಷ್ಟು ಬೆದರಿ ಕರ್ಮಧರ್ಮ ಸಂಯೋಗದಿಂದ ರಾಮರಾಜನು ಕುಳಿತಿರುವಲ್ಲಿಗೆ ಬಂದಿತು. ಕೂಡಲೇ ರಾಮರಾಜನ ಜನರು ರಾಮರಾಜನನ್ನು ಪಲ್ಲಕ್ಕಿಯಲ್ಲಿ ಹಾಕಿಕೊಂಡು ವೇಗದಿಂದ ಹಿಂದಕ್ಕೆ ಓಡಹತ್ತಿದರು. ಹುಸೇನಶಹನ ಆನೆಯು ಪಲ್ಲಕ್ಕಿಯ ಬೆನ್ನುಹತ್ತಿಯೇ ಸಾಗಿತ್ತು.


****