ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೨೭೩–೨೭೮

೩೦ ನೆಯ ಪ್ರಕರಣ
ನೂರಜಹಾನಳ ಸಾಹಸ

ಮಾರ್ಜೀನೆಯು ದೊಡ್ಡ ಮನಸ್ಸಿನವಳಿದ್ದಳು. ತಾವಿಬ್ಬರು ನೂರಜಹಾನಳ ಮನಸ್ಸನ್ನು ನೋಯಿಸಿದ ಬಗ್ಗೆ ಆಕೆಗೆ ಅಸಮಾಧಾನವಾಗಿತ್ತು; ಆದರೆ ತನ್ನ ಮೆಹೆರ್ಜಾನಳ ಮನಸ್ಸಿನ ವಿರುದ್ಧ ನಡೆಯಲಾರದೆ, ನೂರಜಹಾನಳ ಸಂಗಡ ಆಕೆಯ ನಿಷ್ಠುರತನದಿಂದ ನಡಕೊಂಡಿದ್ದಳು. ಆಕೆಯು ಅದನ್ನು ಮರೆತು ನೂರಜಹಾನಳ ಬಳಿಗೆ ಹೋದಳು. ಅತ್ತ ನೂರಜಹಾನಳಿಗೂ ತಾನು ದುರುತ್ತರ ಕೊಟ್ಟ ಬಗ್ಗೆ ಪಶ್ಚಾತ್ತಾಪವಾಗಿತ್ತು. ಮಾರ್ಜೀನೆಯು ತನ್ನ ಬಳಿಗೆ ಪುನಃ ಬಂದ ಕೂಡಲೆ ನೂರಜಹಾನಳು ಸೌಮ್ಯದಿಂದ ಆಕೆಯನ್ನು ಬರಮಾಡಿಕೊಂಡು, ಅಮ್ಮಾ, ಮಾರ್ಜೀನೆ, ನೀನು ಹಿರಿಯ ಮನುಷ್ಯಳು, ಮಾಸಾಹೇಬರು ನನಗೆ ತಾಯಿಯ ಸಮಾನವು, ಹೀಗಿದ್ದು ನಾನು ನಿಮಗೆ ದುರುತ್ತರ ಕೊಟ್ಟಿದ್ದು ತಪ್ಪಾಯಿತು. ರಾಮರಾಜನ ಕೈಯಲ್ಲಿ ನಾನು ಅಕಸ್ಮಾತ್ತಾಗಿ ಸಿಕ್ಕು ಸೆರೆಯಾದ್ದರಿಂದ ನನಗೆ ಬಹಳ ವ್ಯಸನವಾಗಿರಲು, ನಿಮ್ಮಬ್ಬರನ್ನು ನೋಡಿ ನನಗೆ ಒಂದು ಆಧಾರ ದೊರೆತಂತಾಯಿತೆಂದು ತಿಳಿದಿದ್ದೆನು; ಆದರೆ ನೀವು ನಿಷ್ಠುರತನದಿಂದ ನನ್ನನ್ನು ನಿಷ್ಕಾರಣವಾಗಿ ದೂಡಿಕೂಡಲು, ನಾನು ರೇಗಿಗೆದ್ದು ಹಾಗೆ ಮಾತಾಡಿದೆನು. ನನ್ನಿಂದ ದೊಡ್ಡ ತಪ್ಪಾಯಿತು. ನಾನು ದುರ್ದೈವಿಯು, ಸಂಕಟದಲ್ಲಿ ಸಿಕ್ಕಿದ್ದೇನೆ. ನಾನು ಒಂದು ಮಾಡಲಿಕ್ಕೆ ಹೋದರೆ ದೈವವು ಮತ್ತೊಂದು ಮಾಡಿತು. ನನ್ನ ದುರ್ದೈವವೇ ನನ್ನನ್ನು ಅತ್ತ ಕರಕೊಂಡು ಬಂದಿತು, ಎಂದು ನುಡಿಯುತ್ತಿರಲು, ನೂರಜಹಾನಳ ಕಣ್ಣಲ್ಲಿ ನೀರುಗಳು ಬಂದವು. ಅದನ್ನು ನೋಡಿ ಮಾರ್ಜೀನೆಯ ಹೃದಯವು ಕರಗಿತು. ಆಕೆಯು ನೂರಜಹಾನಳನ್ನು ಎದೆಗವಚಿಕೊಂಡು "ತಂಗೀ, ಹೆದರಬೇಡ, ನೀನು ಇಲ್ಲಿಗೆ ಹ್ಯಾಗೆ ಬಂದೆ ಎಂಬದನ್ನು ನನ್ನ ಮುಂದೆ ಹೇಳು; ಅಂದರೆ ನಾನು ಅದನ್ನೆಲ್ಲ ಮಾಸಾಹೇಬರ ಮುಂದೆ ಹೇಳಿ ಅವರ ಸಿಟ್ಟು ಇಳಿಸುವೆನು" ಎಂದು ಹೇಳಲು, ನೂರಜಹಾನಳು ತನ್ನ ಯಾವತ್ತು ವೃತ್ತಾಂತವನ್ನು ಹೇಳತೊಡಗಿದಳು ಮಾರ್ಜೀನೆ, ನೀನು ಹಿರಿಯ ಮನುಷ್ಯಳು. ಈಗಿನ ಹುಡುಗರ ಚಾಳಿಯನ್ನು ನೋಡಿ ಸಿಟ್ಟಾಗಬೇಡ, ನಗಬೇಡ. ರಣಮಸ್ತಖಾನನು ನನ್ನನ್ನು ವಿಜಾಪುರಕ್ಕೆ ಕಳಿಸಿಹೋದ ಬಳಿಕ, ವಿಶೇಷವಾಗಿ ನೀನೂ ಮಾಸಾಹೇಬರೂ ನಮ್ಮ ಮನೆಗೆ ನನ್ನನ್ನು ರಣಮಸ್ತಖಾನನಿಗೆ ಕೊಡಬೇಕೆಂದು ಕೇಳಲಿಕ್ಕೆ ಬಂದು ಹೋದಬಳಿಕ, ರಣಮಸ್ತಖಾನನ ಆಸೆಯು ನನಗೆ ತಪ್ಪಿದಂತೆ ಆಯಿತು; ಯಾಕೆಂದರೆ, ಆತನ ಕುಲ ವೃತ್ತಾಂತವು ಯಾರಿಗೂ ಗೊತ್ತಿಲ್ಲ; ಆತನು ಕುಲೀನನೆಂಬುದು ಗೊತ್ತಾದರೂ, ಆತನು ಮಾಡಿದ ಪ್ರತಿಜ್ಞೆಯು ನೆರವೇರುವದು ಅಸಂಭವವಾಗಿತ್ತು. ಮುಂದೆ ಬರಬರುತ್ತ ರಣಮಸ್ತಖಾನನ ನೆನಪು ಸಹ ನನಗೆ ವಿಶೇಷವಾಗಿ ಆಗದಾಯಿತು; ಆದರೆ ರಾಮರಾಜನ ಸಂಗಡ ಮೂವರು ಬಾದಶಹರೂ ಯುದ್ಧವನ್ನು ಹೂಡಿ ಸೈನ್ಯದೊಡನೆ ವಿಜಯನಗರದ ಮೇಲೆ ಸಾಗಲು, ನನಗೆ ಪುನಃ ರಣಮಸ್ತಖಾನರ, ಅಥವಾ ನಮ್ಮ ನವಾಬ ಸಾಹೇಬರ ನೆನಪಾಯಿತು. ನವಾಬಸಾಹೇಬರು ತಮ್ಮ ಪ್ರತಿಜ್ಞೆಯನ್ನು ಈಡೇರಿಸಬಹುದೆಂಬ ಆಸೆಯು ನನಗೆ ಉತ್ಪನ್ನವಾಯಿತು. ತಮ್ಮ ಪ್ರತಿಜ್ಞೆಯನ್ನು ಕೊನೆಗಾಣಿಸುವದಕ್ಕಾಗಿಯೇ ಅವರು ರಾಮರಾಜನ ಕಡೆಗಾಗಿರುವರೆಂದು ನನ್ನ ಭಾವನೆಯಾಯಿತು. ಹೊತ್ತು ನೋಡಿ ಅವರು ರಾಮರಾಜನ ಕುತ್ತಿಗೆಯನ್ನು ಕೊಯ್ಯದೆ ಬಿಡರೆಂದು ನಾನು ಈಗಲೂ ಪೂರ್ಣವಾಗಿ ನಂಬಿದ್ದೇನೆ. ರಾಮರಾಜನ ಮೇಲೆ ನನ್ನ ಸಿಟ್ಟು ಇದ್ದಷ್ಟೇ ರಣಮಸ್ತಖಾನರ ಮೇಲೆ ನನ್ನ ಪ್ರೇಮವಿರುತ್ತದೆ. ಯುದ್ಧ ಪ್ರಸಂಗವು ಒದಗಿದ್ದರಿಂದ ಆ ಪ್ರೇಮವು ಮತ್ತಷ್ಟು ಜಾಗ್ರತವಾಯಿತು. ನಮ್ಮ ಮನೆಯೊಳಗಿನ ಗಂಡಸರೆಲ್ಲ ಯುದ್ಧಕ್ಕೆ ಹೋದದ್ದರಿಂದ ಬರಿಯ ಹೆಣ್ಣುಮಕ್ಕಳೇ ಮನೆಯಲ್ಲಿ ಉಳಿದೆವು. ನನಗೆ ಯುದ್ಧ ವಾರ್ತೆಗಳೇನೂ ತಿಳಿಯದಾದವು. ರಾಮರಾಜನ ನಾಶವನ್ನು ಕಣ್ಣುಮುಟ್ಟಿ ನೋಡುವ ಇಚ್ಛೆಯು ನನಗೆ ಉತ್ಪನ್ನವಾಯಿತು. ಮಾರ್ಜೀನೆ, ನನ್ನ ಸ್ವಭಾವವು ನಿನಗೆ ಅಲ್ಪಸ್ವಲ್ಪವಾದರೂ ಗೊತ್ತೇ ಇರುತ್ತದೆ. ನನ್ನ ಮನಸ್ಸಿನಲ್ಲಿ ಆ ಇಚ್ಚೆಯು ಉತ್ಪನ್ನವಾದ ಕೂಡಲೆ ಅದನ್ನು ಪೂರ್ಣಮಾಡಿಕೊಳ್ಳುವದನ್ನು ನಾನು ನಿಶ್ಚಯಿಸಿದೆನು; ಮನೆಯಲ್ಲಿ ಗಂಡಸರು ಇಲ್ಲದ್ದರಿಂದ ನನ್ನನ್ನು ಕೇಳುವವರೇ ಇಲ್ಲದಾಯಿತು. ಆಗ ನಾನು ಗಂಡಸರ ಯುದ್ದದ ಉಡುಪು-ತೊಡಪುಗಳನ್ನು ಶಸ್ತ್ರಾಸ್ತ್ರಗಳನ್ನೂ ಸಜ್ಜುಮಾಡಿಕೊಂಡು, ಮನೆಯಲ್ಲಿ ಬಿಟ್ಟುಹೋಗಿದ್ದ ಒಂದು ಕುದುರೆಯನ್ನು ಸಿದ್ದಗೊಳಿಸಿ, ಪುರುಷವೇಷದಿಂದ ನಾನು ಮನೆಯನ್ನು ಬಿಟ್ಟೆನು.

ಮಾರ್ಜೀನೆ, ನನ್ನ ಸಾಹಸಕ್ಕಾಗಿ ನೀನು ಮನಸ್ಸಿನಲ್ಲಿ ನನ್ನನ್ನು ಹಳಿಯುತ್ತಿರಬಹುದು; ನನಗೆ ಹೆಸರೂ ಇಡುತ್ತಿರಬಹುದು; ಆದರೆ ನಾನು ಅಂಥ ಸಾಹಸವನ್ನೇ ಮಾಡಿರುವದರಿಂದ ನೀನು ಎಷ್ಟು ಹೇಳಿದರೂ, ನನಗೆ ಎಷ್ಟು ಹೆಸರಿಟ್ಟರೂ ನಾನು ನಿನಗೆ ಬೇಡೆನ್ನುವದಿಲ್ಲ. ನಾನು ವಿಜಯನಗರದ ಹಾದಿಯನ್ನು ಹಿಡಿದು ಮುಂದಕ್ಕೆ ಸಾಗಿದೆನು. ನನ್ನನ್ನು ಮಾರ್ಗಸ್ಥರು ಕೌತುಕದಿಂದ ನೋಡುತ್ತಲಿದ್ದರು; ಆದರೆ ಸುದೈವದಿಂದಲೋ ದುರ್ದೈವದಿಂದಲೋ ಯಾರೂ ನನ್ನ ಗುರುತು ಹಿಡಿಯಲಿಲ್ಲ. ಕೆಲವು ಮಾರ್ಗವನ್ನು ಕ್ರಮಿಸಿ ಹೋದಬಳಿಕ ನನಗೆ ಹಾದಿಯಲ್ಲಿ ಮುಸಲ್ಮಾನ ಸೈನಕ್ಕೆ ಸಾಮಗ್ರಿಗಳನ್ನು ಒಯ್ಯುವ ಕೆಲವು ಬಂಡಿಗಳು ಭೆಟ್ಟಿಯಾದವು. ಆ ಬಂಡಿಗಳನ್ನು ಮುಸಲ್ಮಾನ ಸೈನಿಕರು ರಕ್ಷಿಸುತ್ತಲಿದ್ದರು. ಪ್ರಾಯಸ್ಥರೆಲ್ಲ ಯುದ್ಧಕ್ಕೆ ಹೋದದ್ದರಿಂದ ಮುದುಕರು ಬಂಡಿಗಳ ಸಂರಕ್ಷಣದ ಕಾರ್ಯವನ್ನು ಮಾಡಬೇಕಾಗಿತ್ತು. ಮುದುಕರಾದ ಮುಸಲ್ಮಾನ ರಕ್ಷಕರಿಬ್ಬರು ನನ್ನನ್ನು ನೋಡ ಕೌತುಕಪಟ್ಟು- “ನೀನು ಯಾರು ? ಇಷ್ಟು ಹುಡುಗತನದಲ್ಲಿ ನಿನಗೆ ಯುದ್ಧವು ಯಾಕೆ ಬೇಕಾಯಿತು ? ನೀನು ಮನೆಯಲ್ಲಿ ಹೇಳಿಕೇಳೀ ಹೊರಟಿರುವೆಯೋ ? ಕೇಳದೆ ಹೊರಟಿರುವೆಯೋ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು- “ನಮ್ಮ ಮನೆಯೊಳಗಿನವರೆಲ್ಲರು ಮೊದಲೇ ಯುದ್ಧಕ್ಕೆ ಹೋದರು. ನನಗೆ ಯುದ್ಧಕ್ಕೆ ಹೋಗುವ ಇಚ್ಛೆಯಾದ್ದರಿಂದ ನಾನೇ ಹೊರಟು ಬಂದಿದ್ದೇನೆ. ನಾನು ವಿಜಾಪುರದೊಳಗಿನವನೊಬ್ಬ ಸರದಾರನ ಮಗು” ಎಂದು ಹೇಳಿದನು. ಅದನ್ನು ಕೇಳಿ ಆ ವೃದ್ದರಿಗೆ ಆಶ್ಚರ್ಯವಾದಂತೆ ತೋರಿತು. ನನ್ನ ದನಿಯಿಂದ ಅವರಿಗೆ ನಾನು ಹೆಂಗಸೆಂಬ ಸಂಶಯ ಬಂದಂತೆ ತೋರಿತು. ಅದನ್ನರಿತು ನಾನು ಅವರೊಡನೆ ಮಾತಾಡುವದನ್ನೇ ಕಡಿಮೆ ಮಾಡಿದೆನು. ಮುಂದೆ ಅವರೂ ಅಷ್ಟು ಲಕ್ಷ್ಯಗೊಡಲಿಲ್ಲ. ಸಂಜೆಯವರೆಗೆ ಹಾದಿಯನ್ನು ನಡೆದು ಹೋದಬಳಿಕಾ ಕಾವಲುಗಾರರು ನನ್ನನ್ನು ಕುರಿತು- “ಬಚ್ಚಾ, ನೀನು ಬಹಳ ದಣಿದಂತೆ ತೋರುತ್ತದೆ; ಆದ್ದರಿಂದ ಯಾವುದಾದರೂ ಒಂದು ಬಂಡಿಯಲ್ಲಿ ಮಲಗಿಕೋ” ಎಂದು ಹೇಳಿದರು. ನನಗೂ ಅಷ್ಟೇ ಬೇಕಾಗಿತ್ತು. ಮುಂಜಾವಿನಿಂದ ಒಂದೇಸವನೆ ಕುದುರೆಯ ಮೇಲೆ ಕುಳಿತು ನನ್ನ ಟೊಂಕವು ನೋಯುತ್ತಿತ್ತು. ನಾನು ಸ್ವಲ್ಪ ಸಂಕೋಚಿಸಿದಂತೆ ತೋರಿಸಿ ಕಡೆಗೆ ಒಂದು ಬಂಡಿಯಲ್ಲಿ ಮಲಗಿಕೊಂಡೆನು ಬಂಡಿಗಳು ಮಧ್ಯರಾತ್ರಿಯವರೆಗೆ ಹಾದಿಯನ್ನು ನಡೆದು ಹೋದವು. ಬಂಡಿಯನ್ನು ಹೊಡೆಯುವವರು ತೂಕಡಿಸುತ್ತ ಸಾಗಿದರು. ಅವರು ಹಾದಿಯನ್ನು ಕ್ರಮಿಸುತ್ತಿರುವಾಗ ಹಾದಿಯು ತಪ್ಪಿದಂತೆ ಕಾಣುತ್ತದೆಂದು ಯಾರೋ ಒಬ್ಬರು ಶಂಕಿಸಿದರು. ಆದರೂ ಅತ್ತಿತ್ತ ಹಾದಿಯನ್ನು ನೋಡುತ್ತಿರಲು. ಅಷ್ಟರಲ್ಲಿ ಯಾರೋ ಒಬ್ಬನು ಅವರಿಗೆ ಭೆಟ್ಟಿಯಾಗಿ, ನಿಮಗೆ ಹಾದಿಯನ್ನು ತೋರಿಸುತ್ತೇನೆಂದು ಹೇಳಿ, ಬಂಡಿಗಳನ್ನು ಸಾಗಿಸಿಕೊಂಡು ಹೋದನು. ಮುಂದೆ ತಾಸೆರಡು ತಾಸು. ಬಂಡಿಗಳು ಹೋಗಿರಬಹುದು, ಅಷ್ಟರಲ್ಲಿ ಬಂಡಿಗಳನ್ನು ಸಾಗಿಸಿಕೊಂಡು ಹೋಗುವವನು ಸಿಳ್ಳುಹೊಡೆದನು. ಮುಂದೆ ಸ್ವಲ್ಪ ಹೊತ್ತಿನಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ಬಂಡಿಯನ್ನು ಸುತ್ತುಗಟ್ಟಿದರು. ಅವರ ಮಾತುಗಳು ನನಗೆ ತಿಳಿಯಲಿಲ್ಲ. ಅವೇನೋ ಕನ್ನಡ ಮಾತುಗಳಂತೆ ! ಮುಂದೆ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಇಪ್ಪತ್ತು ಇಪ್ಪತ್ತೈದು ಜನರು ಬಂದರು. ಅವರು, ವಿಜಯನಗರದ ದಂಡಾಳುಗಳೆಂದು ಗೊತ್ತಾಯಿತು. ಅವರಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ನಮ್ಮ ಬಂಡಿಗಳನ್ನು ಕಾಯಲಿಕ್ಕೆ ನಿಂತು, ಉಳಿದವರು ಎತ್ತ ಕಡೆಗೋ ಹೋದರು. ನಮ್ಮವರು ಸ್ವಲ್ಪಜನರು. ಮೇಲೆ ಮುದುಕರು; ಆದ್ದರಿಂದ ವಿಜಯನಗರದ ದಂಡಾಳುಗಳ ಮುಂದೆ ಅವರಾಟ ನಡೆಯಲಿಲ್ಲ. ಜನರ ಈ ಗದ್ದಲವನ್ನು ನೋಡಿ ನಾನು ಬಂಡಿಯಲ್ಲಿ ಸುಮ್ಮನೆ ಮಲಗಿ ಬಿಟ್ಟೆನು. ಬಂಡಿಯ ಒಂದೊಂದು ಮಗ್ಗಲಿಗೆ ಒಬ್ಬೊಬ್ಬರಂತೆ ಅವರು ಕಾಯಲಿಕ್ಕೆ ನಿಂತಿದ್ದರಿಂದ ನನಗೆ ಮಿಸುಕಾಡಲಿಕ್ಕೆ ಸಹ ಆಸ್ಪದ ದೊರೆಯಲಿಲ್ಲ. ಹೀಗೆ ನಾನು ಬಗೆಹರಿಯದ ಚಿಂತೆಯಿಂದ ಮಲಗಿರುಲು. ಬೆಳ್ಳಗೆ ಬೆಳಗಾಯಿತು.

ಬೆಳಗಾದ ಕೂಡಲೆ ವಿಜಯನಗರದ ದಂಡಿನವರು ಬಂಡಿಗಳನ್ನು ಶೋಧಿಸಲುಪಕ್ರಮಿಸಿದರು. ಆಗ ನಾನು ಮೇಲಕ್ಕೆ ಎದ್ದುನಿಂತುಕೊಳ್ಳಲು ಅವರೆಲ್ಲರ ದೃಷ್ಟಿಯು ನನ್ನ ಕಡೆಗೆ ತಿರುಗಿ, ಅವರು ನನ್ನ ಸುತ್ತುಮುತ್ತು ನೆರೆದು ಚೇಷ್ಟೆಮಾಡಹತ್ತಿದರು. ಅವರ ಕನ್ನಡ ಮಾತುಗಳು ನನಗೆ ಸರ್ವಥಾ ತಿಳಿಯುತ್ತಿದ್ದಿಲ್ಲ. ಅಂಥ ಮಾತುಗಳನ್ನು ನಾನು ಹಿಂದಕ್ಕೆ ವಿಜಯನಗರದ ದರ್ಬಾರದಲ್ಲಿ ರಾಮರಾಜನ ಮುಂದೆ ನಿಂತಾಗೂ, ನನ್ನನ್ನು ಆತನು ದಂಡಾಳುಗಳು ಹಿಡಕೊಂಡು ಹೋಗುತ್ತಿರುವಾಗೂ ಮಾತ್ರ ಒಮ್ಮೆ ಕೇಳಿದ್ದೆನು. ನನ್ನನ್ನು ನೋಡಿ ಅವರು “ಈತನು ಹೆಂಗಸಿರಬಹುದೆಂದು ಶಂಕಿಸುತ್ತಲಿದ್ದರು. ಅಷ್ಟರಲ್ಲಿ ನನ್ನ ತೆಲಯ ಮುಂಡಾಸುವು ಕೆಳಗೆ ಬಿದ್ದು, ನನ್ನ ತಲೆಕೂದಲುಗಳು ಬೆನ್ನಮೇಲೆ ಹರವಲು, ಅವರು ನಿಶ್ಯಂಕರಾಗಿ ಮನಸ್ಸಿಗೆ ಬಂದಂತೆ ನನಗೆ ಚೇಷ್ಟೆಮಾಡಿ ನಗಹತ್ತಿದರು. ಮುಂದೆ ಅವರು ನನ್ನನ್ನು ರಾಮರಾಜನ ಮುಂದೆ ನಿಲ್ಲಿಸಲು, ರಾಮರಾಜನು ಕೂಡಲೆ ನನ್ನ ಗುರುತು ಹಿಡಿದನು. ಆಗ ಆ ದುಷ್ಟನು ನನ್ನನ್ನು ಎಷ್ಟು ಹಂಗಿಸಿ ಉಪಹಾಸ ಮಾಡಿ ಮಾತಾಡಿರಬಹುದೆಂಬುದನ್ನು ನೀನೇ ತರ್ಕಿಸು. ಅದನ್ನೆಲ್ಲ ನಾನು ಹೇಳಲಾರೆನು. ಕಡೆಗೆ ಆತನು ಯುದ್ಧ ಮುಗಿದ ಬಳಿಕ ನನ್ನನ್ನು ರಣಮಸ್ತಖಾನನನಿಗೆ ಲಗ್ನ ಮಾಡಿಕೊಡಬೇಕಾಗಿದೆಯೆಂದು ಹೇಳಿ, ನನ್ನನ್ನು ಇಲ್ಲಿಗೆ ಕಳಿಸಿಕೊಟ್ಟನು; ಅಂದಬಳಿಕ ಮಾರ್ಜೀನೆ, ನಿಮ್ಮ ಬಳಿಗೆ ನಾನು ಬಂದದ್ದರಲ್ಲಿ ನನ್ನ ಅಪರಾಧವೇನಿದೆ ನೀನೇ ಹೇಳು ?

ಈ ಮೇರೆಗೆ ನೂರಜಹಾನಳು ತನ್ನ ವೃತ್ತಾಂತವನ್ನೆಲ್ಲ ಹೇಳಿದ್ದನ್ನು ಕೇಳಿ ಮಾರ್ಜೀನೆಯು ಆಶ್ಚರ್ಯಪಟ್ಟು, ಇಂಥ ಸಾಹಸ ಮಾಡಿದ್ದಕ್ಕಾಗಿ ಆಕೆಯು ನೂರಜಹಾನಳಿಗೆ ಬಹಳ ಸಿಟ್ಟುಮಾಡಿದಳು. ನೂರಜಹಾನಳು ಪಟ್ಟ ಕಷ್ಟವನ್ನು ನೆನಿಸಿ ಮಾರ್ಜೀನೆಯು ಬಹಳವಾಗಿ ಮರುಗಿದಳು. ಆಕೆಯು ನೂರಜಹಾನಳಿಗೆ ನಾನು ಮಾಸಾಹೇಬರ ಬಳಿಗೆ ಹೋಗಿ ಅವರ ಸಿಟ್ಟನ್ನು ಇಳಿಸುವೆನು, ಚಿಂತೆಮಾಡಬೇಡ, ಎಂದು ಹೇಳಿ, ಮಾಸಾಹೇಬರ ಬಳಿಗೆ ಹೋಗಿ ಎಲ್ಲ ವೃತ್ತಾಂತವನ್ನು ಹೇಳಿದಳು. ಅದನ್ನು ಕೇಳಿ ಮಾಸಾಹೇಬರು ಬಹಳ ಆಶ್ಚರ್ಯಪಟ್ಟರು. ನೂರಜಹಾನಳ ದುರವಸ್ಥೆಯನ್ನು ಕೇಳಿ ಅವರು ಮರುಗಿದರು. ನೂರಜಹಾನಳು ಕಣ್ಣಿರು ಹಾಕಿದಳೆಂಬದನ್ನು ಕೇಳಿ ಅವರು ಮಾರ್ಜೀನೆಗೆ ಹೋಗು, ನೂರಜಹಾನಳನ್ನು ಕರಕೊಂಡು ಬಾ, ಎಂದು ಹೇಳಿದರು. ಮಾರ್ಜೀನೆಯು ಕೂಡಲೆ ಹೋಗಿ ನೂರಜಹಾನಳನ್ನು ಕರಕೊಂಡು ಮಾಸಾಹೇಬರ ಬಳಿಗೆ ಬಂದಳು, ಮಾಸಾಹೇಬರು ನೂರಜಹಾನಳನ್ನು ಕರೆದು ಆದರಿಸಿದರು. ಸಮದುಃಖಿಗಳಾದ ಅವರಲ್ಲಿ ಪರಸ್ಪರ ಸಖ್ಯವು ಹೆಚ್ಚುತ್ತ ಹೋಯಿತು. ತನ್ನ ಮಗನು ರಾಮರಾಜನನ್ನು ಕೂಡಿಕೊಂಡು ಬಾದಶಹರ ದ್ರೋಹವನ್ನು ಚಿಂತಿಸಿರುವೆನೆಂದು ಮಾಸಾಹೇಬರು ತಿಳಕೊಡಿದ್ದರು; ಆದರೆ ರಾಮರಾಜನ ಘಾತಮಾಡಿ ಬಾದಶಹನ ಹಿತ ಮಾಡುವದಕ್ಕಾಗಿಯೇ ರಣಮಸ್ತಖಾನನು ರಾಮರಾಜನನ್ನು ಕೂಡಿರುವನೆಂದು ನೂರಜಹಾನಳು ಹೇಳಹತ್ತಿದಳು. ಹಿಂದಕ್ಕೆ ನೂರಜಹಾನಳ ಮುಂದೆ ತಮ್ಮ ಮಗನು ಕುಂಜವನದ ಏಕಾಂತದಲ್ಲಿ ಮಾಡಿದ ಪ್ರತಿಜ್ಞೆಯನ್ನು ಮರೆಗೆ ನಿಂತು ಮಾಸಾಹೇಬರು ಕೇಳಿದ್ದರಿಂದ, ನೂರಜಹಾನಳ ಮಾತು ಅವರಿಗೆ ಅಷ್ಟು ಅಶಕ್ಯವಾಗಿ ತೋರಲಿಲ್ಲ. ಹಾಗೆ ಇದ್ದರೂ ಇರಬಹುದೆಂದು ಭಾವಿಸಿ, ಅವರು ಸ್ವಲ್ಪ ಸಮಾಧಾನಪಟ್ಟು, ತಾವು ರಾಮರಾಜನ ಈ ಪ್ರತಿಬಂಧದಿಂದ ಪಾರಾಗಿಹೋಗಲಿಕ್ಕೆ ಹಂಚಿಕೆಯನ್ನು ಯೋಚಿಸಹತ್ತಿದರು. ಧನಮಲ್ಲನನ್ನು ಒಲಿಸಿಕೊಂಡ ಹೊರತು ಯಾವ ಹಂಚಿಕೆಗಳೂ ಕೈಗೂಡವಹಾಗಿದ್ದಿಲ್ಲ. ಧನಮಲ್ಲನ ದುಷ್ಟ ಬುದ್ದಿಯನ್ನು ಮಾಸಾಹೇಬರು ಅರಿತಿದ್ದರೂ, ಕಾರ್ಯವು ಸಾಧಿಸುವವರೆಗೆ ಆತನ ಅನುವರ್‍ತನ ಮಾಡಲೇಬೇಕೆಂದು ತಿಳಿದು, ಅವರು ತಮ್ಮಸಿಟ್ಟನ್ನೆಲ್ಲ ನುಂಗಿಕೊಂಡು ಧನಮಲ್ಲನನ್ನು ರಮಿಸುತ್ತಲಿದ್ದರು. ನೂರಜಹಾನಳೂ ಧನಮಲ್ಲನನ್ನು ಸವಿಮಾತುಗಳಿಂದ ಮೋಹಗೊಳಿಸಹತ್ತಿದಳು. ಆಕೆಯು ಆ ದುಷ್ಟನಿಗೆ ದೊಡ್ಡ ದೊಡ್ಡ ಉಚಿತಗಳ ಆಸೆಯನ್ನು ತೋರಿಸಹತ್ತಿದಳು. ಇದರಿಂದ ಧನಮಲ್ಲನ ವೃತ್ತಿ ಹೆಚ್ಚುಕಡಿಮೆಯಾಯಿತು. ಆತನು ತನ್ನ ಮೌನವನ್ನು ಬಿಟ್ಟುಕೊಟ್ಟಿದ್ದನು. ಯುಕ್ತಿಯಿಂದ ಯುದ್ದದ ವಾರ್ತೆಗಳನ್ನು ಕೇಳಿ, ಅವನ್ನೆಲ್ಲ ಮೆಹೆರ್ಜಾನ-ನೂರಜಹಾನರಿಗೆ ಹೇಳುತ್ತಲಿದ್ದನು; ಆದರೆ ಆತನು ತನ್ನ ಸರ್ಪಗಾವಲು ಮಾತ್ರ ಸಡಿಲಿಸಿದ್ದಿಲ್ಲ. ಇವರು ಕಣ್ಣುತಪ್ಪಿಸಿ ಓಡಿ ಹೋಗುವ ಹವಣಿಕೆಯಲ್ಲಿದ್ದಾರೆಂದು ಆತನು ತಿಳಿದುಕೊಂಡಿದ್ದನು. ನೂರಜಹಾನಳು ಹೋದರೂ ಚಿಂತೆಯಿಲ್ಲ, ಮಾಸಾಹೇಬರು (ಮೆಹೆರ್ಜಾನಳು) ಮಾತ್ರ ಹೋಗಬಾರದೆಂದು ಆತನು ಜಾಗರೂಕನಾಗಿದ್ದನು. ಆತನು ಆ ಸ್ತ್ರೀಯರಿಗೆ “ನಾನು ನಿಮ್ಮ ಬಿಡುಗಡೆಯನ್ನು ನಿಶ್ಚಯವಾಗಿ ಮಾಡುತ್ತೇನೆ. ನನ್ನ ಕಾವಲು ಇರುವತನಕ ನಿಮ್ಮ ಕೂದಲು ಕೂಡ ಕೊಂಕಲಾರದು. ನಿಮ್ಮ ಬಿಡುಗಡೆ ಮಾಡಲಿಕ್ಕೆ ಯೋಗ್ಯ ಸಂಧಿಯು ಮಾತ್ರ ಒದಗಲಿಕ್ಕೆ ಬೇಕು. ಆ ಸಂಧಿಯು ಒದಗುವವರೆಗೆ ಸಮಾಧಾನ ತಾಳಿರಿ” ಎಂದು ಹೇಳುತ್ತಲಿದ್ದನು. ನಿರುಪಾಯರಾಗಿ ಆ ದೈವಹೀನ ಪ್ರಾಣಿಗಳು ಕಷ್ಟದಿಂದ ಕಾಲಹರಣ ಮಾಡಹತ್ತಿದರು.

****