೩೧ನೆಯ ಪ್ರಕರಣ
ರಣಮಸ್ತನ ಐಂದ್ರಜಾಲವು
ಈ ಮೇರೆಗೆ ಕುಂಜವನದಲ್ಲಿ ಆ ದೈವಹೀನ ಪ್ರಾಣಿಗಳು ಕಷ್ಟದಿಂದ ಕಾಲಹರಣ ಮಾಡುತ್ತಿರಲು, ಇತ್ತ ರಾಮರಾಜನ ವೈರಿಗಳ ಕಡೆಯ ಸುದ್ದಿಯನ್ನು ಹೇಳಬಂದ ರಣಮಸ್ತಖಾನನ ಮುಂದೆ, ನೂರಜಹಾನಳು ಅಕಸ್ಮಾತ್ತಾಗಿ ತನ್ನ ಕೈಗೆ ಸಿಕ್ಕ ಸುದ್ದಿಯನ್ನು ಹೇಳಿದನು. ನೂರಜಹಾನಳ ಹೆಸರು ಕೇಳಿದ ಕೂಡಲೇ ರಣಮಸ್ತನು ಕಕ್ಕಾಬಿಕ್ಕಿಯಾದನು. ಈ ಪ್ರಸಂಗದಲ್ಲಿ ನೂರಜಹಾನಳು ರಾಮರಾಜನ ಕೈಗೆ ಹ್ಯಾಗೆ ಸಿಕ್ಕಿರಬಹುದೆಂದು ಆತನು ಆಲೋಚಿಸಹತ್ತಿದು. ಅಷ್ಟರಲ್ಲಿ ರಾಮರಾಜನು ರಣಮಸ್ತನನ್ನು ಕುರಿತು-ರಣಮಸ್ತ, ನಿನ್ನ ಅರಗಿಳಿಯು ಸಿಕ್ಕಿತೆಂದು ಉಬ್ಬಬೇಡ, ಆದನ್ನು ನಾನು ಎಲ್ಲಿ ಇಟ್ಟಿರುವೆನೆಂಬದನ್ನು ಈ ಯುದ್ಧವು ಮುಗಿಯುವವರೆಗೆ ನಿನ್ನ ಮುಂದೆ ಹೇಳುವದಿಲ್ಲ. ಯುದ್ದವು ಮುಗಿದ ಕೂಡಲೇ ನೂರಜಹಾನಳೊಡನೆ ನಿನ್ನ ಲಗ್ನವನ್ನು ಮಾಡುವೆನು, ಈಗಲೇ ನೀನು ನೂರಜಹಾನಳ ಮೋಹದಲ್ಲಿ ಸಿಕ್ಕರೆ, ನಿನ್ನ ಯುದ್ಧದ ಔತ್ಸುಕ್ಯವು ಕಡಿಮೆಯಾಗಬಹುದು ಅನ್ನಲು, ಅದನ್ನು ಕೇಳಿ ರಣಮಸ್ತನಿಗೆ ವಿಲಕ್ಷಣ ಸಂತಾಪವಾಯಿತು. ರಾಮರಾಜನು ನೂರಜಹಾನಳನ್ನು ತನ್ನ ರಾಣೀವಾಸದಲ್ಲಿ ಸೇರಿಸಿಕೊಂಡಿರಬಹುದೆಂದು ಕಲ್ಪಿಸಿ ಆತನು ಕ್ರೋಧಪರವಶನಾಗಿ ಕೆಂಪಡರಿದ ಕಣ್ಣುಗಳಿಂದ ರಾಮರಾಜನನ್ನು ನೋಡಹತ್ತಿದನು.
ರಣಮಸ್ತನ ಈ ಮನೋಭಾವವನ್ನರಿತ ರಾಮರಾಜನು ಕೂಡಲೇ ಆತನನ್ನು ಕುರಿತು-ರಣಮಸ್ತ, ಶಾಂತನಾಗು. ನಿನ್ನ ಅರಗಿಳಿಯು ಪರಪುರಷರ ಕಣ್ಣಿಗೆ ಸಹ ಬೀಳದಂತೆ ಯೋಗ್ಯವ್ಯವಸ್ತೆ ಮಾಡಿರುವೆನು. ನೂರಜಹಾನಳು ಇನ್ನು ಸರ್ವಥಾ ನಿನ್ನವಳೇ ಇರುತ್ತಾಳೆಂದು ತಿಳಿದುಕೊ. ಆಯಿತು, ಇನ್ನು ನಾನುಹೆಚ್ಚಿಗೆ ಮಾತಾಡುವದಿಲ್ಲ. ಈಗ ನೀನು ಯುದ್ಧದ ಯಾವಸುದ್ದಿಯನ್ನು ತರುತ್ತೀಯೆಂಬದನ್ನು ಹೇಳು, ಶತ್ರುಗಳ ಕಡೆಯ ಸುದ್ದಿಯೇನು? ಕೃಷ್ಣೆಯನ್ನು ದಾಟಿ ತಾಳೀಕೋಟೆಯ ಹತ್ತರ ಎಲ್ಲರೂ ಬಂದು ಕುಳಿತು ಒಬ್ಬರೊಬ್ಬರ ಆದರ ಸತ್ಕಾರ ಮಾಡುವಲ್ಲಿ ಮಗ್ನರಾಗಿರುತ್ತಾರೆ. ನಾವು ತುಂಗಭದ್ರೆಯನ್ನು ದಾಟಿ ಇಲ್ಲಿ ಬಂದು ಕುಳಿತಿದ್ದರೂ ಅವರ ಆದರ ಸತ್ಕಾರಗಳೇ ಮುಗಿಯಿಲೊಲ್ಲವಲ್ಲ! ತಮ್ಮ ಅನ್ನ ಸಾಮಗ್ರಿಗಳ ಬಂಡಿಗಳು ಯಾವ ಕಡೆಗೆ ಹೋಗುತ್ತಾವೆಂಬದರ ಅರಿವು ಸಹ ಅವರಿಗೆ ಇದ್ದಂತೆ ತೋರುವದಿಲ್ಲ. ಅವರು ಮಾಡುತ್ತರಾದರೂ ಏನು? ಮೂರು ನಾಲ್ಕು ಜನರು ಒಟ್ಟುಗೂಡಿ ಬಂದಿದ್ದರೂ ಮುಂದಕ್ಕೆ ಸಾಗಿಬರುವ ಧೈರ್ಯವು ಅವರಿಗಾಗಲೊಲ್ಲವಲ್ಲ ಅವರು ಏನು ಆಲೋಚಿಸುತ್ತಿರುವರೋ ಏನು? ನಮ್ಮನ್ನು ನೋಡಿದ ಕೂಡಲೇ ಅವರ ಎದೆಯೊಡೆದು ನೀರಾಯಿತೇನು? ನಾವು ಹಾದಿಯನ್ನು ನೋಡುವತನಕ ನೋಡಿ ಆಮೇಲೆ ಒಮ್ಮೆಲೆ ಅವರ ಮೈಮೇಲೆ ಬಿದ್ದು ದೂಳ ಹಾರಿಸುವೆವು ಅವರಿಗೆ ನೀರು ಬೇಡಲಿಕ್ಕೆ ಸಹ ಆಸ್ಪದ ಕೊಡಲಿಕ್ಕಿಲ್ಲ. ಯಾಕೆ ರಣಮಸ್ತ, ಮೂಢನಹಾಗೆ ಸುಮ್ಮನೆ ನಿಂತುಕೊಂಡೆಯಲ್ಲ, ಮಾತಾಡು.
ರಾಮರಾಜನ ಈ ಮಾತುಗಳನ್ನು ಕೇಳಿ ರಣಮಸನು ತೋರಿಕೆಗಾಗಿ ಮುಗುಳಗೆ ನಕ್ಕು ರಾಮರಾಜನ ಸಾಮರ್ಥ್ಯಾಶಯವನ್ನು ಒಪ್ಪಿಕೊಂಡಂತೆ ತೋರಿಸಿದನು. ರಾಮರಾಜನು ತನ್ನ ಇಬ್ಬರು ಬಂಧುಗಳನ್ನು ಬೇರೆ ಕಡೆಗೆ ಕಳಿಸಿ ರಾಯನ ಸೈನ್ಯದ ಕಸುವು ಕಡಿಮೆ ಮಾಡಬೇಕೆಂದು ಆತನು ಯೋಚಿಸುತ್ತಿದ್ದನು. ತನ್ನ ಈ ಯೋಜನೆಯನ್ನು ಸಾಧಿಸುವದಕ್ಕಾಗಿ ಆ ದುಷ್ಟ ರಣಮಸ್ತನು ರಾಮರಾಜನನ್ನು ಕುರಿತು ವಿನಯದಿಂದ-ಮಹಾರಾಜರೇ, ಮುಸಲ್ಮಾನರು ಮುಂದುವರಿದು ಬರುವ ಹಾದಿಯನ್ನು ನೋಡುತ್ತ ತಾವು ಸುಮ್ಮನೆ ಕುಳಿತುಕೊಳ್ಳಬಾರದು. ತುಂಗಭದ್ರೆಯ ಬೇರೆಯೊಂದು ಕಡೆಯ ಕಾಳಹೊಳೆಯು ವೈರಿಗಳಿಗೆ ಗೊತ್ತಾದಹಾಗೆ ತೋರುತ್ತದೆ. ನೀವು ಇಲ್ಲಿ ಸ್ವಸ್ಥವಾಗಿ ಕುಳಿತುಕೊಳ್ಳುವದನ್ನು ನೋಡಿ ಮುಸಲ್ಮಾನರು ತುಂಗಭದ್ರೆಯ ಕಾಳಹೊಳೆಯ ದಾರಿಯಿಂದ ನಮ್ಮ ರಾಜ್ಯವನ್ನು ಪ್ರವೇಶಿಸಿ, ವಿಜಯನಗರದವರೆಗೆ ಸಾಗಿಹೋಗಬೇಕೆಂದು ಎಣಿಕೆ ಹಾಕಿರುತ್ತಾರೆ. ಅವರು ನಿಮ್ಮ ತೋರಿಕೆಗಾಗಿ ಸ್ವಲ್ಪ ಸೈನ್ಯವನ್ನು ಇಲ್ಲಿ ಇಟ್ಟು, ತಮ್ಮ ಸೈನ್ಯದ ಮುಖ್ಯ ಮುಖ್ಯ ಭಾಗವನ್ನು ಆ ಕಾಳಹೊಳೆಯ ಕಡೆಗೆ ಸಾಗಿಸಿರುವರು, ಆ ಕಾಳಹೊಳೆಯು ಇಲ್ಲಿಂದ ಮೂರು ದಿನಗಳ ಹಾದಿಯ ಮೇಲೆ ಇರುತ್ತದೆಂದು ನನಗೆ ಸುದ್ದಿಯು ಗೊತ್ತಾಗಿರುತ್ತದೆ; ಆದ್ದರಿಂದ ತಾವು ತಮ್ಮ ಸೈನ್ಯದ ಬಹುದೊಡ್ಡ ಭಾಗವನ್ನು ಆ ಕಾಳಹೊಳೆಯ ಕಡೆಗೆ ಶತ್ರುಗಳಿಗೆ ಎದುರಾಗುವದಕ್ಕಾಗಿ ಕಳಿಸಿದರೆ ಬಹಳ ನೆಟ್ಟಗಾಗುವದು. ಶತ್ರುಗಳು ಹುಡುಕಿಕೊಂಡಿರುವ ಕಾಳಹೊಳೆಯನ್ನು ತೋರಿಸಲಿಕ್ಕೆ ನನ್ನ ಚಾರರು ಸಿದ್ಧರಿರುತ್ತಾರೆ. ಈ ಪ್ರಸಂಗದಲ್ಲಿ ತಾವು ಉದಾಸೀನ ಮಾಡಿದರೆ ಏನು ಪರಿಣಾಮವಾದೀತೆಂಬದನ್ನು ಹೇಳಲಾಗದು. ಇದರ ಮೇಲೆ ತಮ್ಮ ಇಚ್ಛೆಯು, ಎಂದು ಹೇಳಿದನು. ಅದನ್ನು ಕೇಳಿ ರಾಮರಾಜನು ನಕ್ಕು ರಣಮಸ್ತಖಾನನನ್ನು ಕುರಿತು- “ರಣಮಸ್ತ, ನೀನು ಹೇಳುವದೆಲ್ಲ ಸರಿ; ಆದರೆ ನಾನು ವೈರಿಗಳನ್ನು ಇಲ್ಲಿಂದ ಉಳಕಗೊಟ್ಟರಷ್ಟೇ ಅವರು ಕಾಳಹೊಳೆಯ ಕಡೆಗೆ ಹೋಗುವದು? ನಾನು ಇಲ್ಲಿಯೇ ಅವರ ಮೇಲೆ ಬಿದ್ದು ಅವರ ನಾಶಮಾಡಿಬಿಡುವೆನು; ಅಂದಬಳಿಕ ವೈರಿಗಳು ವಿಜಯನಗರದ ಮೇಲೆ ಸಾಗಿ ಹೋಗುವ ಭಯವೇಕೆ ? ಇಂದು ರಾತ್ರಿ ಅಥವಾ ನಾಳೆರಾತ್ರಿ ವೈರಿಗಳ ಮೇಲೆ ಬೀಳುವದಕ್ಕಾಗಿ ನಮ್ಮ ಸೈನ್ಯಕ್ಕೆ ಅಪ್ಪಣೆ ಕೊಡುವೆನು. ಅಷ್ಟರಲ್ಲಿ ಅವರು ಇಲ್ಲಿಂದ ಓಡಿಹೋದರೆ ಅವರ ಬೆನ್ನಟ್ಟಿ ಹೋಗತಕ್ಕದ್ದು. ರಣಮಸ್ತ, ನೀನು ನಿಶ್ಚಿಂತನಾಗಿರು ! ನೀನು ನಿನ್ನ ಸೈನ್ಯವನ್ನು ಹಿಂಬದಿಯಲ್ಲಿ ಇಟ್ಟಿರುವೆಯಷ್ಟೇ ? ನೆಟ್ಟಗಾಯಿತು ನಿನ್ನ ಸೈನ್ಯವನ್ನು ಆರಂಭಕ್ಕೆ ಶತ್ರುಗಳ ಬಾಯಿಗೆ ಕೊಡತಕ್ಕದ್ದಲ್ಲ. ಕಟ್ಟಕಡೆಯ ಪ್ರಸಂಗದಲ್ಲಿ ಆ ನಿನ್ನ ಸೈನ್ಯವನ್ನು ಉಯೋಗಿಸಿಕೊಳ್ಳತಕ್ಕದ್ದು. ಎಂದು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನಿಗೆ ಅಂತರಂಗದಲ್ಲಿ ಅಸಮಾಧಾನವಾದರೂ ಅದನ್ನು ಬಹಿರಂಗದಲ್ಲಿ ತೋರಗೊಡದೆ, ರಾಮರಾಜನ ಅನುಮತಿಯನ್ನು ಪಡೆದು, ಆತನು ಅಲ್ಲಿಯೇ ಸಮೀಪದಲ್ಲಿದ್ದ ತನ್ನ ಬಿಡಾರಕ್ಕೆ ಹೋದನು.
ರಾಮರಾಜನ ಸೈನ್ಯದ ದೊಡ್ಡ ಭಾಗವನ್ನು ಬೇರೆಕಡೆಗೆ ಕಳಿಸಿಬೇಕೆಂದು ಮಾಡಿದ ತನ್ನ ಹಂಚಿಕೆಯು ವ್ಯರ್ಥವಾದದ್ದರಿಂದ ರಣಮಸ್ತಖಾನನಿಗೆ ಬಹಳ ಅಸಮಾಧಾನವಾಯಿತು. ಅದರಲ್ಲಿ, ನೂರಜಹಾನಳನ್ನು ರಾಮರಾಜನು ಎಲ್ಲಿ ಇಟ್ಟಿರುವನೋ ಎಂಬದೊಂದು ಸಂಶಯವು ಅವನನ್ನು ವಿಶೇಷವಾಗಿ ಬಾಧಿಸಹತ್ತಿತು. ನೂರಜಹಾನಳು ಅನ್ನಸಾಮಗ್ರಿಯ ಬಂಡಿಗಳೊಳಗೆ ಪುರುಷವೇಷದಿಂದ ಬಂದು ರಾಮರಾಜನ ಕೈಸೇರಿದ್ದನ್ನು ರಣಮಸ್ತನು ತನ್ನ ವಿಶ್ವಾಸದ ಸೇವಕನ ಮುಖದಿಂದ ಕೇಳಿಕೊಂಡಿದ್ದನು. ರಾಮರಾಜನು ಸ್ತ್ರೇಣನಾದ್ದರಿಂದ, ನೂರಜಹಾನಳನ್ನು ತನ್ನ ಅಂತಗೃಹದಲ್ಲಿ ಸೇರಿಸಿಕೊಂಡಿರಬಹುದೆಂದು ಆತನು ಶಂಕಿಸಹತ್ತಿದನು. ಹೀಗೆ ಇತ್ತ ಈತನ ಶಂಕೆ ಪ್ರತಿ ಶಂಕೆಗಳಿಗೆ ಗುರಿಯಾಗಿ ತಳಮಳಿಸುತ್ತಿರಲು, ಅತ್ತ ರಾಮರಾಜನು ರಣಮಸ್ತನ ಮೇಲಿನ ಪುತ್ರ ವಾತ್ಸಲ್ಯದಿಂದ ಮೋಹಿತನಾಗಿ, ರಣಮಸ್ತನಿಗೆ “ನಾನು ನಿನ್ನ ತಂದೆ” ಎಂದು ಈಗ ಹೇಳಿಬಿಡುವದು ನೆಟ್ಟಗೆಂದು ಆಲೋಚಿಸತೊಡಗಿದನು. ನಾನು ತನ್ನ ತಂದೆಯೆಂಬದು ರಣಮಸ್ತಖಾನನಿಗೆ ಗೊತ್ತಾದರೆ, ಆತನು ಯುದ್ಧದಲ್ಲಿ ಅಭಿಮಾನದಿಂದ ಕಾಣಬಹುದೆಂದು ರಾಯನು ಭಾವಿಸಿದನು. ಕೂಡಲೆ ಆತನು ಮಧ್ಯರಾತ್ರಿಯಲ್ಲಿಯೇ ರಣಮಸ್ತಖಾನನನ್ನು ಕರೆಯಕಳುಹಿದನು. ರಣಮಸ್ತಖಾನನು ನಿದ್ದೆ ಹತ್ತಿ ಮಲಗಿದ್ದರೂ ಎಬ್ಬಿಸಿ ಕರಕೊಂಡು ಬರಬೇಕೆಂದು ರಾಮರಾಜನು ತನ್ನ ಸೇವಕನಿಗೆ ಹೇಳಿದನು. ಆದರಂತೆ ಸೇವಕನು ಹೋಗಿ ಕರೆಯಲು, ರಣಮಸ್ತನು ಕೂಡಲೆ ರಾಮರಾಜನ ಬಳಿಗೆ ಬಂದ- “ತಾವು ಇಷ್ಟು ಮಧ್ಯರಾತ್ರಿಯಲ್ಲಿಯೇ ಒಮ್ಮಿಂದೊಮ್ಮೆ ಕರೆಸಿದ ಕಾರಣವೇನೆಂದು ರಾಮರಾಜನನ್ನು ಕೇಳಹತ್ತಿದನು. ರಣಮಸ್ತನು ಪ್ರತ್ಯಕ್ಷನಾಗಿ ತನ್ನ ಎದುರಿಗೆ ಬಂದು ನಿಂತದ್ದನ್ನು ನೋಡಿ ರಾಮರಾಜನ ಮನಸ್ಸು ತಿರುಗಿತು. ಇವನ ಜನ್ಮವೃತ್ತಾಂತವನ್ನು ಈಗಲೇ ಹೇಳಿದರೆ ಎಲ್ಲಿ ಕ್ಷುಬ್ದನಾಗುವನೋ ಎಂದು ರಾಯನು ಶಂಕಿಸತೊಡಗಿದನು. ಈಗ ಬೇಡ, ಯುದ್ಧ ಮುಗಿದಬಳಿಕ ಹೇಳೋಣವೆಂದು ಅತನು ನಿಶ್ಚಯಿಸಿ, ಇನ್ನು ರಣಮಸ್ತನ ಸಂಗಡ ಯಾವ ಪ್ರಸಕ್ತಿಯನ್ನು ಕುರಿತು ಮಾತಾಡಬೇಕೆಂದು ರಾಯನು ಎಣಿಕೆ ಹಾಕಹತ್ತಿದನು. ಈ ಸ್ಥಿತಿಯಲ್ಲಿ ಆತನು ಸ್ತಬ್ದವಾಗಿ ಬಹಳ ಹೊತ್ತು ಕುಳಿತುಕೊಳ್ಳಬೇಕಾಯಿತು; ಆದರೂ ಯೋಗ್ಯ ಪ್ರಸಕ್ತಿಯು ಆತನ ಮನಸ್ಸಿಗೆ ಹೊಳೆಯಲೊಲ್ಲರು, ಆಗ ಆತನು ಏನಾದರೂ ಮಾತಾಡಬೇಕೆಂದು ತಿಳಿದು ರಣಮಸ್ತನನ್ನು ಕುರಿತು ರಣಮಸ್ತ, ಆಗಲೇ ನೀನು ಸೈನ್ಯವನ್ನು ಬೇರೆ ಕಡೆಗೆ ಕಳಿಸಬೇಕೆಂದು ಹೇಳಿದೆಯಲ್ಲ, ಆ ಮಾತನ್ನು ಕುರಿತು ನಾನು ಬಹಳವಾಗಿ ಆಲೋಚಿಸಿದೆನು; ಆದರೆ ನಾವು ಈಗ ತಡಮಾಡದೆ ಶತ್ರುಗಳ ಮೇಲೆ ಬೀಳುವದರಲ್ಲಿಯೇ ಲಾಭವಿರುತ್ತದೆಂದು ನನಗೆ ತೋರುತ್ತದೆ. ಶತ್ರುಗಳು ತಮ್ಮ ಸ್ಥಳಬಿಟ್ಟು ಕದಲುವದರೊಳಗೆ ಈ ಕಾರ್ಯವಾಗಲಿಕ್ಕೆ ಬೇಕು, ಅನ್ನಲು ರಣಮಸ್ತನು ವಿಚಾರಮಾಡುವವನಂತೆ ಸುಮ್ಮನೆ ಕುಳಿತು, ಬಳಿಕ ಗಟ್ಟಿಯಾಗಿ ನಕ್ಕು, ರಾಮರಾಜನಿಗೆ-ಸರಕಾರ್, ತಾವು ಈಗ ಶತ್ರುಗಳ ಮೇಲೆ ಬಿದ್ದರೆ ಅವರಿಗೆ ಅನುಕೂಲ ಮಾಡಿಕೊಟ್ಟಂತಾಗಬಹುದೆಂದು ನನಗೆ ತೋರುತ್ತದೆ; ಯಾಕೆಂದರೆ ಅದರಿಂದ ಅವರಿಗೆ ಅನಾಯಾಸವಾಗಿ ನೆವಸಿಕ್ಕಂತೆ ಆಗಿ, ಅವರು ಹಿಂದೆಗೆಯುತ್ತ ತಮ್ಮ ಸಂಕೇತದ ಕಾಳಹೊಳೆಯ ಸ್ಥಳದ ಕಡೆಗೆ ಹೋಗಿ ವಿಜಯನಗರದ ಮೇಲೆ ನುಗ್ಗಬಹುದು. ನೀವು ಮುಂದೆ ಸಾಗಿಬರಬಾರದೆಂದು ಕೆಲವು ಶತ್ರು ಸೈನ್ಯವು ನಿಮ್ಮ ಸಂಗಡ ಕಾದುತ್ತ ನಿಲ್ಲಬಹುದು, ನೀವು ಹೇಳುವ ವಿಚಾರವು ಯೋಗ್ಯವಿದ್ದರೂ ನಮ್ಮ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ, ಒಂದು ಭಾಗವನ್ನು ತುಂಗಭದ್ರೆಯ ನಿಟ್ಟಿನ ಕಡೆಗೆ ಕಳಿಸುವದು ನೆಟ್ಟಗೆ ಕಾಣುತ್ತದೆ. ಹಾಗೆ ಮಾಡಿದರೆ ವಿಜಯನಗರದ ಕಡೆಗೆ ಹೋದ ಶತ್ರು ಸೈನ್ಯವು ನಮ್ಮ ಎರಡೂನಿಟ್ಟಿನ ಸೈನ್ಯಗಳ ನಡುವೆಸಿಕ್ಕು ಅದಕ್ಕೆ ತುಂಗಭದ್ರೆಯಲ್ಲಿ ಜಲ ಸಮಾಧಿಯು ದೊರೆಯುವದು. ಇಲ್ಲದಿದ್ದರೆ ನಮ್ಮ ಬಳಿಯಲ್ಲಿ ಇಷ್ಟು ಪ್ರಚಂಡ ಸೈನ್ಯವೂ, ಇಂಥ ಅತ್ಯುತ್ತಮ ವ್ಯವಸ್ಥೆಯೂ ಇದ್ದು ವ್ಯರ್ಥವಾಗಬಹುದು. ನನಗೆ ಬಹು ಪ್ರಯತ್ನದಿಂದ ಸಂಪೂರ್ಣ ಗೊತ್ತಾಗಿದ್ದ ಶತ್ರುಗಳ ಕಡೆಯ ವಿಶ್ವಸನೀಯವಾದ ಮಹತ್ವದ ಸುದ್ದಿಯನ್ನು ತಮ್ಮ ಮುಂದೆ ಹೇಳಿಯೂ ಹೇಳದ ಹಾಗೆ ಆಗಿರುತ್ತದೆ. ನನ್ನ ಮೇಲೆ ತಮ್ಮ ವಿಶ್ವಾಸವಿಲ್ಲದ್ದರಿಂದ ಹೀಗಾಗುತ್ತದೆಯೋ, ಅಥವಾ ತಮಗೆ ವಿಚಾರಮಾಡುವ ಮನಸ್ಸು ಇಲ್ಲವೇ ಇಲ್ಲವೋ ಅಥವಾ ನಾನು ಹೇಳಿದಂತೆ ಮಾಡಲಿಕ್ಕೆ ನಿಮಗೆ ಧೈರ್ಯವಾಗಲೊಲ್ಲದೋ ಇದಾವದೂ ನನಗೆ ತಿಳಿಯದಾಗಿದೆ, ಬಾದಶಹನ ಮೇಲೆ ತಿರುಗಿಬಿದ್ದು ನಿಮ್ಮ ಕಡೆಗೆ ಬಂದಿರುವ ನಾನು, ನನ್ನ ಮೇಲೆಯೂ ಯಾಕೆ ತಿರುಗಿಬೀಳಲೆಕ್ಕಿಲ್ಲೆಂಬ ಸಂಶಯವು ನಿಮಗೆ ಬರಬಹುದೆಂಬದರಲ್ಲಿ ಆಶ್ಚರ್ಯವೇನೂ ಇಲ್ಲ. ನನ್ನ ಮಾತಿನಲ್ಲಿ ಅವಿಶ್ವಾಸವಿದ್ದರೆ, ತಾವು ನನ್ನ ಮಾತು ಕೇಳಬಾರದು.
ರಣಮಸ್ತನ ಈ ಮಾತುಗಳನ್ನು ಕೇಳಿದ ಕೂಡಲೆ ರಾಮರಾಜನು ಒಮ್ಮೆಲೆ ತಾನು ಕುಳಿತ ಸ್ಥಳದಿಂದ ಎದ್ದು ಖಾನನ ಬಳಿಗೆ ಹೋಗಿ, ಆತನ ಬೆನ್ನಮೇಲೆ ಕೈಯಾಡಿಸುತ್ತ- “ತಮ್ಮಾ ಹೀಗೆ ಯಾಕೆ ಅನ್ನುತ್ತೀ ? ನಿನ್ನ ಮೇಲೆ ನನ್ನ ವಿಶ್ವಾಸವಿದ್ದಷ್ಟು ಇಡಿಯ ನನ್ನ ರಾಜ್ಯದ ಬೇರೆ ಯಾರ ಮೇಲೆಯೂ ಇರುವದಿಲ್ಲ. ಹೊಟ್ಟೆಯ ಮಗನ ಮೇಲೆ ಅದರಲ್ಲಿಯೂ ನಿನ್ನ ಹಾಗೆ ಇರುವ ಹೊಟ್ಟೆಯ ಮಗನ ಮೇಲೆ ಯಾವ ತಂದೆಯ ವಿಶ್ವಾಸವಿಡಲಿಕ್ಕಿಲ್ಲ ?” ಎಂದು ನುಡಿಯುತ್ತಿರುವಾಗ, ರಾಮರಾಜನು ಭಯಪಟ್ಟು ತಾನು ಹೀಗೆ ನುಡಿಯತಕ್ಕದಿದಿಲ್ಲವೆಂದು ನಾಲಗೆ ಕಚ್ಚಿಕೊಂಡನು “ಹೊಟ್ಟೆಯ ಮಗನಮೇಲೆ” ಎಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ ರಣಮಸ್ತಖಾನನು ಸಂತಪ್ತನಾಗಿ ರಾಮರಾಜನನ್ನು ನೋಡಹತ್ತಿದನು. ಆಗ ರಾಮರಾಜನು ರಣಮಸ್ತನಿಗೆ- ಹೌದು ನಾನು ನಿನ್ನ ಮೇಲೆ ಹೊಟ್ಟೆಯ ಮಗನಂತೆಯೇ ಪ್ರೇಮ ಮಾಡುತ್ತೇನೆಂಬದು ನಿನಗೆ ಗೊತ್ತಿಲ್ಲವೆ ? ಹೊಟ್ಟೆಯ ಮಗನ ಮಾತನ್ನು ನಂಬುವಾಗ ಸಹ ಒಮ್ಮೊಮ್ಮೆ ವಿಚಾರಮಾಡಬೇಕಾಗುತ್ತದೆ; ಅದರಂತೆ ಈಗ ನಾನು ನಿನ್ನ ಮಾತಿನಂತೆ ನಡೆಯುವ ಮೊದಲು ವಿಚಾರಮಾಡಿದೆನು. ನೀನು ಇಷ್ಟು ನಂಬಿಗೆಯಿಂದ ಹೇಳಿದ ಬಳಿಕ ನಿನ್ನ ಮಾತಿನಂತೆ ನಮ್ಮ ಸೈನ್ಯದಲ್ಲಿ ಎರಡು ಭಾಗ ಮಾಡಿ, ನೀನು ಹೇಳಿದ ಕಡೆಗೆ ಒಂದು ಭಾಗವನ್ನು ಕಳಿಸುವೆನು, ಈಗಾದರೂ ಆಯಿತೆ ? ಎಂದು ಕೇಳಿದನು. ತನ್ನ ಸಂಗಡ ರಾಮರಾಜನು ಇಷ್ಟು ಸಲಿಗೆಯಿಂದ ಯಾಕೆ ನಡೆಯುತ್ತಿರುವನೆಂಬ ಬಗ್ಗೆ ರಣಮಸ್ತಖಾನನು ಮೊದಲೇ ಶಂಕಿಸುತ್ತಿರಲು ಅದರಲ್ಲಿ ರಾಮರಾಜನು “ನನ್ನ ಹೊಟ್ಟೆಯ ಮಗನ ಹಾಗೆ ನಿನ್ನ ಮೇಲೆ ಪ್ರೇಮ ಮಾಡುತ್ತೇನೆಂದು” ಈ ದಿನ ನುಡಿದದ್ದನ್ನು ಕೇಳಿ, ಆ ಖಾನನು ಬಹಳ ಅಸಮಾಧಾನಪಟ್ಟನು ತನ್ನ ತಂದೆಯು ಯಾರು ಎಂಬದು ರಣಮಸ್ತನಿಗೆ ಮೊದಲೇ ಗೊತ್ತಿಲ್ಲದಿರುವಾಗ, ರಾಮರಾಜನು ಹೀಗೆ ನುಡಿಯುವದು ಖಾನನಿಗೆ ಬಹು ಅಪಮಾನಾಸ್ಪದವಾಗಿ ತೋರಿ, ಆತನು ಬಹು ಉಗ್ರನಾದನು; ಆದರೆ ಕ್ರೋಧಕ್ಕೆ ಇದು ಸಮಯವಲ್ಲೆಂದು ತಿಳಿದು, ಆತನು ಅದನ್ನು ಬಹು ಕಷ್ಟದಿಂದ ನುಂಗಿಕೊಂಡು; ಆದರೂ ರಾಮರಾಜನು ಆತನ ಮನಸಿನ ಸ್ಥಿತಿಯನ್ನು ತಿಳಿದು ಆ ವಿಷಯವನ್ನು ಬದಲಿಸುವದಕ್ಕಾಗಿ ರಣಮಸ್ತಖಾನನಿಗೆ- “ಒಳ್ಳೇದು, ಹಾಗಾದರೆ ಈಗ ನೀನು ಮಲಗಿಕೊಳ್ಳಹೋಗು, ಈಗಲೇ ನಾನು ತಿರುಮಲ-ವೆಂಕಟಾದ್ರಿಗಳನ್ನು ಕರೆಸಿ, ನೀನು ಹೇಳಿದು ಸ್ಥಳದಲ್ಲಿ ಸೈನ್ಯದೊಡನೆ ಹೋಗಿ ಕುಳಿತುಕೊಳ್ಳುವಂತೆ ಅವರನ್ನು ಆಜ್ಞಾಪಿಸುವೆನು, ನೀನು ಅವರ ಸಂಗಡ ಹೋಗಿ ಆ ಸ್ಥಳವನ್ನು ಮಾತ್ರ ಅವರಿಗೆ ತೋರಿಸಬೇಕಾಗುವದು. ಹೋಗು, ಅವರು ಬಂದಕೂಡಲೆ ನಿನ್ನನ್ನು ಕರಿಸುವೆನು” ಎಂದು ಹೇಳಿದನು. ಅದನ್ನು ಕೇಳಿದ ಕೂಡಲೆ ರಣಮಸ್ತಖಾನನಿಗೆ ಬಹಳ ಸಮಾಧಾನವಾಯಿತು.
ಇತ್ತ ರಾಮರಾಜನು ತಾನು ಹೇಳಿದಂತೆ ತನ್ನ ಬಂಧುಗಳ ಕಡೆಗೆ ನಿಜವಾಗಿಯೇ ಸೇವಕರನ್ನು ಕಳಿಸಿದನು. ಸೇವಕರು ಹೋದಕೂಡಲೆ, ತಿರುಮಲ ವೆಂಕಟಾದ್ರಿಗಳು ರಾಮರಾಜನ ಬಳಿಗೆ ಬಂದರು. ಅಷ್ಟು ಹೊತ್ತಿಗೆ ರಣಮಸ್ತನ ಮೋಸದ ತಂತ್ರದಿಂದ ಸೈನ್ಯವನ್ನು ವಿಭಾಗಿಸಲಿಕ್ಕೆ ಅನುಕೂಲವಾದ ಸುದ್ದಿಗಳು ರಾಮರಾಜನ ಕಿವಿಗೆ ಮುಟ್ಟಿದವು. ಶತ್ರುಗಳು ಯಾವ ಕಡೆಗೋ ಒತ್ತರದಿಂದ ಹೋಗುತ್ತಿರುವರೆಂದು ಚಾರರು ರಾಯನಿಗೆ ಸುದ್ದಿಯನ್ನು ಹೇಳಿದರು. ರಾಮರಾಜನು ರಣಮಸ್ತಖಾನನ ವಿಚಾರಗಳನ್ನೂ ತನ್ನ ಬಂಧುಗಳಿಗೆ ತಿಳಿಸಿದನು. ಇಷ್ಟರಲ್ಲಿ ರಾಮರಾಜನ ಚಾರರು ಬಂದು- “ಮುಸಲ್ಮಾನ ಸೈನ್ಯವು ಹಿಂದಕ್ಕೆ ಕಾಲುದೆಗೆದು ಎಲ್ಲಿಗೋ ಹೋಗುತ್ತಿರುವದೆ”ಂಬ ಸುದ್ದಿಯನ್ನು ಹೇಳಿದರು. ಮುಸಲ್ಮಾನ ಸೈನಿಕರು ರಣಮಸ್ತನತಂತ್ರದಿಂದಲೇ ಓಡಿ ಹೋಗುವ ಸೋಗುಹಾಕಿದ್ದರು. ಈ ಮೋಸವು ರಾಮರಾಜನಿಗೂ, ಆತನ ಬಂಧುಗಳಿಗೂ ತಿಳಿಯಲಿಲ್ಲ. ಅವರು ರಣಮಸ್ತನ ಮಾತನ್ನು ನಿಜವೆಂದು ಸಂಪೂರ್ಣವಾಗಿ ನಂಬಿ, ತಮಗೆ ಮುಂಗಡ ತಿಳಿದ ಈ ಮಹತ್ವದ ಸುದ್ದಿಯ ಉಪಯೋಗವನ್ನು ಮಾಡಿಕೊಳ್ಳಬೇಕೆಂದು ಆ ಮೂವರು ಬಂಧುಗಳು ನಿಶ್ಚಯಿಸಿದರು ರಾಮರಾಜನು ಕೂಡಲೆ ರಣಮಸ್ತಖಾನನನ್ನು ಕರೆಸಿ, ನೀನು ಇವರಿಬ್ಬರ ಸೈನ್ಯದ ಸಂಗಡ
ಹೋಗಿ ಇವರಿಗೆ ಆ ಕಾಳಹೊಳೆಯ ಸ್ಥಳವನ್ನು ತೋರಿಸು, ಎಂದು ಅಜ್ಞಾಪಿಸಿದನು. ಅದಕ್ಕೆ ರಣಮಸ್ತನು ಹಿಂದೆ-ಮುಂದೆ ನೋಡಹತ್ತಲು, ರಾಮರಾಜನು ಆತನನ್ನು ಕುರಿತು-ಯಾಕೆ, ಇಷ್ಟು ಅಸಂತೋಷವೇಕೆ ? ನೀನು ಈ ಕೆಲಸವನ್ನು ಬಹಳ ಉತ್ಸುಕತೆಯಿಂದ ಮಾಡಲಿಕ್ಕೆಬೇಕು. ಅನ್ನಲು ರಣಮಸ್ತನು ಸರಕಾರ್, ನನ್ನ ಅಸಂತೋಷಕ್ಕೆ ಒಂದೇ ಕಾರಣವಿರುವುದು. ತಮ್ಮನ್ನು ಅಗಲಿ ದೂರ ಹೋಗಲಿಕ್ಕೆ ನನ್ನ ಮನಸ್ಸು ಮೆಚ್ಚುವದಿಲ್ಲ. ನನ್ನನ್ನು ತಾವು ಅಂಗರಕ್ಷಕನನ್ನಾಗಿ ನಿಯಮಿಸಿಕೊಂಡಿದ್ದು, ನಮ್ಮನ್ನು ಆಗಲಿ ಎಲ್ಲಿಯೂ ಹೋಗಲಾಗದೆಂದು ತಾವು ನನ್ನನ್ನು ಈ ಮೊದಲೆ ಆಜ್ಞಾಪಿಸಿರುವದರಿಂದ ಸ್ವಲ್ಪ ಅನುಮಾನಿಸಿದೆನು ಎಂದು ಹೇಳಿದನು.
ರಣಮಸ್ತನ ಈ ಮಾತುಗಳನ್ನು ಕೇಳಿ, ರಾಮರಾಜನಿಗೆ ಬಹಳ ಕೌತುಕವಾಯಿತು. ಆತನು ಕೂಡಲೆ ರಣಮಸ್ತವನ್ನು ಕುರಿತು- ಸರಿ, ಒಳ್ಳೆಯ ಮಾತು ಸೂಚಿಸಿದೆ, ನನ್ನ ಇಚ್ಚೆಯಾದರೂ ನೀನು ನನ್ನನ್ನು ಅಗಲಿ ಹೋಗಬಾರದೆಂತಲೇ ಇರುವದು. ನಿನ್ನ ನಂಬಿಗೆಯ ಇಬ್ಬರು ಚಾರರನ್ನು ಇವರ ಸಂಗಡ ಆ ಸ್ಥಳವನ್ನು ತೋರಿಸಲಿಕ್ಕೆ ಕಳಿಸಿಕೊಟ್ಟರಾಯಿತು, ಎಂದು ಹೇಳಿದನು. ಕೂಡಲೆ ರಣಮಸ್ತನು ತನ್ನ ನಂಬಿಗೆಯ ಇಬ್ಬರು ಸೇವಕರನ್ನು ಕಳಿಸಲು, ತಿರುಮಲ-ವೆಂಕಟಾದ್ರಿಗಳು ತಮ್ಮ ತಮ್ಮ ಸೈನ್ಯಗಳನ್ನು ಕಟ್ಟಿಕೊಂಡು ಆ ಸೇವಕರೊಡನೆ ನಡೆದರು, ಇತ್ತ ಸ್ವತಃ ರಾಮರಾಜನ ಆಧಿಪತ್ಯಕ್ಕೆ ಒಳಪಟ್ಟಿದ್ದ ಸೈನ್ಯವೂ ಮಾತ್ರ ಉಳಿದವು. ರಾಮರಾಜನು ತಾನು ಮಾಡಿದ ಈ ವ್ಯವಸ್ಥೆಯೆಲ್ಲ ತನಗೆ ಬಹು ಅನುಕೂಲವಾದದ್ದೆಂದು ತಿಳಿದು ಸಂತೋಷಪಟ್ಟನು. ರಾಮರಾಜನು ಶತ್ರುಗಳ ಸುಳಿದಾಟವನ್ನು ಕಣ್ಣು ಮುಟ್ಟಿ ನೋಡುವನೋ ಅನ್ನುವಂತೆ ಆತನ ಚಾರರೂ, ರಣಮಸ್ತಖಾನನ ಚಾರರೂ ಆಗಾಗ್ಗೆ ಶತ್ರುಗಳ ಕಡೆಯ ಸುದ್ದಿಗಳನ್ನು ಹೇಳುತ್ತಲಿದ್ದರು. ಹೀಗೆ ಒಂದೆರಡು ದಿನ ರಾಮರಾಜನು ಸಮಾಧಾನದಿಂದ ಕಾಲಹರಣ ಮಾಡಿರಬಹುದು; ಆದರೆ ಅಷ್ಟರಲ್ಲಿ ಆತನ ಮನಸ್ಸು ವಿಕಲ್ಪಕ್ಕೆ ಒಳಗಾಯಿತು. ಆತನು ರಣಮಸ್ತಖಾನನನ್ನು ಕರಸಿ- “ಶತ್ರುಗಳು ಹೀಗೆ ದೌಡು ಮಾಡಿದರೆ ಹಾಗ್ಯಾದೀತು ? ನಾವು ಅವರ ಮೇಲೆ ಈ ಕಡೆಯಿಂದ ಸಾಗಿಹೋದರೆ ಹ್ಯಾಗಾದಿತು” ಇತ್ಯಾದಿ ಹಲವು ಪ್ರಶ್ನೆಗಳನ್ನು ಕೇಳಿದ ಮೇಲೆ- “ರಣಮಸ್ತ ನಮ್ಮನ್ನು ಮೋಸಗೊಳಿಸುವದಕ್ಕಾಗಿ ಶತ್ರುಗಳು ಹೀಗೆ ಹಿಂದೆಗೆಯುವ ಸೋಗು ಹಾಕಿರಬಹುದೇನು ? ಒಟ್ಟುಗೂಡಿದ ನಮ್ಮ ಸೈನ್ಯದ ಕಸುವು ಕಡಿಮೆ ಮಾಡುವದಕ್ಕಾಗಿ ಅವರು ಈ ಹಂಚಿಕೆ ತೆಗೆದಿರಬಹುದೋ?” ಎಂದು ಪ್ರಶ್ನೆಮಾಡಿದನು. ಅದನ್ನು ಕೇಳಿದ ಕೂಡಲೆ ರಣಮಸ್ತನ ಮೋರೆಯು ಹುಚ್ಚಿಟ್ಟಿತು; ಆದರೆ ಅಷ್ಟರಲ್ಲಿ ಆ ನೀಚನು ಗಟ್ಟಿಯಾಗಿ ನಕ್ಕು - “ಸರಕಾರ್, ಪ್ರತ್ಯಕ್ಷ ತಮಗೆ ಎದುರಾಗಿ ಬರುವ ಧೈರ್ಯವು ಮುಸಲ್ಮಾನ ಸೈನ್ಯಕ್ಕೆ ಸರ್ವಥಾ ಆಗಲಾರದು. ಮುಸಲ್ಮಾನರು ಬೇಕಾದವರ ಸಂಗಡ ಯುದ್ದ ಮಾಡಬಹುದು; ಆದರೆ ಅವರು ತಮಗೆ ಎದುರಾಗಿ ಮಾತ್ರ ಯುದ್ಧಮಾಡುವದು ತೀರ ಅಸಂಭವವು. ಆದ್ದರಿಂದ ತಾವು ನಿಶ್ಚಿಂತರಾಗಿರಬೇಕು. ನಾವೇನು ಸುಮ್ಮನೆ ಕುಳಿತುಕೊಂಡಿರುವದಿಲ್ಲ. ಸರ್ವಸನ್ನಾಹದೊಡನೆ ಪೂರ್ಣ ಜಾಗರೂಕರಾಗಿದ್ದೇವೆ. ಶತ್ರುಗಳು ನಮ್ಮ ಮೇಲೆ ಸಾಗಿಯೊಂದು ಬರಲಿ, ಅವರ ಧೂಳಹಾರಿಸಿಬಿಡೋಣ. ಮುಸಲ್ಮಾನ ಬಾದಶಹರು ನಿಮಗೆ ಎಷ್ಟು ಹೆದರುವರೆಂಬದನ್ನು ನಾನು ಪೂರಾ ಬಲ್ಲೆನು. ರಾಮರಾಜನು ಇರುವವರೆಗೆ ನಾವು ನಾಲ್ವರು ಬಾದಶಹರು ಒಟ್ಟುಗೂಡಿಯಂತು ಇರಲಿ, ಉತ್ತರಹಿಂದುಸ್ತಾನದ ಮುಸಲ್ಮಾನರನ್ನು ಸಹಾಯಕ್ಕೆ ಕರಕೊಂಡರೂ ನಮ್ಮ ಆಟವೇನೂ ನಡೆಯದು, ಎಂದು ಅವರು ನಿಶ್ಚಯಿಸಿಕೊಂಡರು. ಅವರು ಹೀಗೆ ಅಂಜುವದು ಆಶ್ಚರ್ಯವಲ್ಲ. ತಮ್ಮ ಪ್ರತಾಪವೇ ಅಂಥಾದ್ದು ತಾವು ಯಾವತ್ತು ರಾಜ್ಯದ ಸಂರಕ್ಷಕರಾಗಿರಲು, ನಮ್ಮಂಥ ಪಾಮರರಾದ ಅಂಗರಕ್ಷಕರು ತಮ್ಮನ್ನು ರಕ್ಷಿಸುವೆವೆಂಬ ಮಾತು ವ್ಯರ್ಥವಾದದ್ದು; ಆದರೂ ತಮ್ಮ ಸಲುವಾಗಿ ರಣಾಂಗದಲ್ಲಿ ದೇಹವಿಡಲು ನಾವು ಹಿಂದೆ ಮುಂದೆ ನೋಡುವಹಾಗಿಲ್ಲ. ಈಗ ಬಹಳ ಮಾತುಗಳಿಂದ ಪ್ರಯೋಜನವೇನು ? ಪ್ರಸಂಗ ಬಂದಾಗ ಪರೀಕ್ಷಿಸಬಹುದು.
ರಣಮಸ್ತನ ಈ ಮುಖಸ್ತುತಿಯಿಂದ ರಾಮರಾಜನಂಥ ಚಾಣಾಕ್ತನ ಕೂಡ ಕಾಲಮಹಿಮೆಯಿಂದ ಉಬ್ಬಿದನು. ರಣಮಸ್ತನು ತನ್ನ ಸಲುವಾಗಿ ಪ್ರಾಣಕೊಡಲು ಸಿದ್ಧನಾದದ್ದನ್ನು ನೋಡಿ ಆ ರಾಯನು ಬಹು ಸಮಾಧಾನಪಟ್ಟು, ರಣಮಸ್ತನನ್ನು ಮುಂದಕ್ಕೆ ಕರೆದು, ಆತ ನನ್ನ ಪುತ್ರವಾತ್ಸಲ್ಯದಿಂದ ಬಿಗಿಯಾಗಿ ಅಪ್ಪಿಕೊಂಡು, ನೆತ್ತಿಯನ್ನು ಮೂಸಿನೋಡಿ, ಆತನನ್ನು ಕುರಿತು ಏನೂ ಮಾತಾಡಬೇಕೆನ್ನುತ್ತಿರಲು, ಒಬ್ಬಚಾರನು ಅವಸರದಿಂದ ಬಂದು ರಾಯನನ್ನು ಕುರಿತು ಪ್ರಭುವೇ, ಈ ಮೊದಲೇ ಶತ್ರುಗಳು ಕಾಲುದೆಗೆದದ್ದರಲ್ಲಿ ಏನೋ ಮೋಸವಿದ್ದಂತೆ ತೋರುತ್ತದೆ, ಈಗ ಎರಡು ದಿನ ವಿಜಯನಗರದ ಕಡೆಗೆ ನುಗ್ಗಿದ್ದ ಶತ್ರು ಸೈನ್ಯವು ಈಗ ಒಮ್ಮೆಲೆ ಇತ್ತ ಕಡೆಗೆ ಭರದಿಂದ ಸಾಗಿಬರಹತ್ತಿದೆ. ನಮ್ಮ ಸೈನ್ಯದ ಕಸುವು ಕಡಿಮೆಮಾಡುವದಕ್ಕಾಗಿ ಶತ್ರುಗಳು ಈ ಹಂಚಿಕೆಮಾಡಿ ತಮ್ಮ ಹಂಚಿಕೆಯು ಸಾಧಿಸಿದ ಕೂಡಲೇ ಈಗ ಎಲ್ಲರೂ ಒಟ್ಟುಗೂಡಿ ನಮ್ಮ ಅಲ್ಪಸಂಖ್ಯಾಕರವಾದ ಸೈನ್ಯದ ಮೇಲೆ ಬೀಳಬೇಕೆಂದು ಯೋಚಿಸಿದ ಹಾಗೆ ತೋರುತ್ತದೆ. ಇದ್ದ ಸಂಗತಿಯನ್ನು ಸನ್ನಿಧಿಗೆ ಅರಿಕೆಮಾಡಿಕೊಂಡಿದ್ದೇನೆ; ಎಂದು ನುಡಿಯುತ್ತಿರಲು, ರಣಮಸ್ತನು ನಡುವೆಬಾಯಿಹಾಕಿ-ಎಲಾ, ಇಷ್ಟೇಕೆ ಅಂಜಿಕೆಯೋ ನಿನಗೆ ? ತಮ್ಮ ತಿರುಮಲ-ವೆಂಕಟಾದ್ರಿಗಳ ಸೈನ್ಯವು ಒಳಿತಾಗಿ ಥಳಿಸಿದ್ದರಿಂದ, ಶತ್ರು ಸೈನ್ಯವು ತೇಕುತ್ತ ತಿರುಗಿ ಓಡಿಬರಹತ್ತಿರಬಹುದು; ಇಲ್ಲದಿದ್ದರೆ ಇಷ್ಟುಬೇಗನೆ ಶತ್ರುಸೈನ್ಯವು ತಿರುಗುವದುಂಟೆ ? ಹೋಗು ಇನ್ನೊಮ್ಮೆ ನೆಟ್ಟಗೆ ನೋಡಿಬಂದು ಹೇಳು, ಎಂದು ನುಡಿಯಲು, ವಿನಾಶದ ಪಥವನ್ನು ಹಿಡಿದಿದ್ದ ರಾಮರಾಜನು ರಣಮಸ್ತನ ಮಾತಿಗೆ ಸೋ ಅಂದನು ಆಗ ಚಾರನು ಅಸಮಾಧಾನದಿಂದ ಹೊರಟುಹೋಗಲು, ಮುಂದೆ ಸ್ವಲ್ಪ ಹೊತ್ತಿನಲ್ಲಿ ಮತೊಬ್ಬ ಚಾರನು ಬಹು ದೂರದಿಂದ ರಾಮರಾಜನ ಬಳಿಗೆ ಬಂದು- “ಶತ್ರುಗಳ ಬಹು ಒತ್ತರದಿಂದ ನಮ್ಮ ಮೇಲೆ ಸಾಗಿಬರುತ್ತಿರುವರು” ಎಂದು ಹೇಳಿದನು. ಆ ಮಾತನ್ನೂ ರಾಮರಾಜನು ಸಮಾಧಾನದಿಂದ ಕೇಳಿಕೊಂಡು- “ಶಾಭಾಸ್! ಇದಂತು ಬಹು ಆನಂದದಾಯಕ ಸುದ್ದಿಯು! ಆ ಯವನರು ನಮ್ಮ ಅಳವಿನತಯಂತು ಬರಲಿ ಅವರಿಗೆ ನಮ್ಮ ಕೈ ತೋರಿಸೋಣ. ರಣಮಸ್ತ ನಡೆ. ಸೈನ್ಯವನ್ನು ಸಜ್ಜುಗೊಳಿಸಿ, ವೈರಿಗಳಿಗೆ ಎದುರಾಗಲು ಸಿದ್ಧವಾಗುವದಕ್ಕಾಗಿ ಅದಕ್ಕೆ ಅಪ್ಪಣೆಯನ್ನು ಕೊಡು. ನಾನು ಅರ್ಧಗಳಿಗೆಯೊಳಗಾಗಿ ಪೋಷಾಕು ಹಾಕಿಕೊಂಡು ಸೈನ್ಯದ ಸಿದ್ಧತೆಯನ್ನು ಕಣ್ಣುಮುಟ್ಟನೋಡುವದಕ್ಕಾಗಿ ಬರುತ್ತೇನೆ” ಎಂದು ಹೇಳಿದನು.
- ೩೨ ನೆಯ ಪ್ರಕರಣ
ಯುದ್ಧಪ್ರಸಂಗವು
-
ಬಳಿಕ ರಾಮರಾಜನು ಕುದುರೆಗೆ ಜೀನು ಹಾಕಿಕೊಂಡು ಬರುವಂತೆ ಸೇವಕನಿಗೆ ಆಜ್ಞಾಪಿಸಿ, ತನ್ನ ಉಡುಪು ತೊಡಪುಗಳನ್ನೂ, ಶಸ್ತ್ರಾಸ್ತ್ರಗಳನ್ನೂ ತರಹೇಳಿದನು. ಸ್ವಲ್ಪಹೊತ್ತಿನಲ್ಲಿಯೇ ಆತನ ಉಡಪು-ತೊಡಪುಗಳೂ, ಶಸ್ತ್ರಾಸ್ತ್ರಗಳೂ ಬಂದವು. ರಾಮರಾಜನು ಮೊದಲು ರೇಶಿಮೆಯ ತೆಳುವಾದ ವಸ್ತದ ಚಲ್ಲಣವನ್ನು ಹಾಕಿಕೊಂಡು, ಮೊಳಕಾಲತನಕ ಬರುವ ಅಂಥಾದ್ದೇ ಒಂದು ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಉಕ್ಕಿನ ತಂತಿಯ ಚಲ್ಲಣವನ್ನು ಅಂಥಾದ್ದೇ ಒಂದು ಅಂಗಿಯನೂ ತೊಟ್ಟು, ಅದರಮೇಲೆ ಕಾಲತನಕ ಉದ್ದಾದ ಒಂದು ಅಂಗಿಯನ್ನು ಹಾಕಿಕೊಂಡನು. ರೇಶಿಮೆಯ ಹೆಣಿಕೆಯ ಆ ಅಂಗಿಯು ಗಂಟುಗಂಟು ಹಾಕಿದ ಜಾಳಿಗೆಯಂಥಾ ಅರಿವೆಯದಿತ್ತು. ಈ ಅಂಗಿಯನ್ನು ಹಾಕಿಕೊಂಡ ಬಳಿಕ ಎಲ್ಲಕ್ಕೂ ಮೇಲೆ ತೀರ ಜಿನುಗಾದ ಮಲಮಲಿಯಂಥ ಅರಿಯೆವ ಕಾಲತನಕ ಬರುವ ಬಿಳಿಯ ಅಂಗಿಯನ್ನು ತೊಟ್ಟುಕೊಂಡನು. ಆಮೇಲೆ ಟೊಂಕಕ್ಕೆ ಒಂದು ರೇಶಿಮೆಯ ಪಟ್ಟವನ್ನು ಸುತ್ತಿಕೊಂಡು, ಅದರಲ್ಲಿ ಒಂದು ಕಠಾರಿಯನ್ನೂ, ತಮಂಚಾ ಎಂಬ ಶಸ್ತವನ್ನೂ ಸಿಗಿಸಿಕೊಂಡನು ಆತನ ಬೆನ್ನಿಗೊಂದು ಬತ್ತಳಿಕೆಯೂ, ಹೆಗಲಿಗೊಂದು ಹೆದೆಯೇರಿಸಿದ ಧನುಷ್ಯವೂ ಒಪ್ಪುತ್ತಿದ್ದವು. ಈಗ ಇಪ್ಪತ್ತು ವರ್ಷಗಳ ಹಿಂದೆ ತನಗೆ ಒಬ್ಬ ಪೋರ್ತುಗೀಜ ವ್ಯಾಪಾರಿಯು ಕಾಣಿಕೆಯಾಗಿ ಕೊಟ್ಟಿದ್ದ ಒಂದು ಟುಲ್ಡೋ ಪಟ್ಟಣದ ಖಡ್ಗವನ್ನು ರಾಮರಾಜನು ತನ್ನ ಎಡಗೈಯಲ್ಲಿ ಹಿಡಕೊಂಡನು. ಆಮೇಲೆ ಒಬ್ಬ ಸೇವಕನು ಆತನ ತಲೆಗೆ ಒಂದು ಜಿರೆಟೋಪು ಹಾಕಿ, ಅದರ ಮೇಲೆ ತುರಾಯಿ ಹಚ್ಚಿದ ಆತನ ಸಣ್ಣ ಮುಂಡಾಸವನ್ನು ಹಾಕಿದನು. ಬಳಿಕ ಕೊರಳಿಗೆ ಬಹು ಬೆಲೆಯುಳ್ಳ ಒಂದು ರತ್ನಹಾರವು ಇಡಿಸಲ್ಪಟ್ಟಿತು. ಈ ಹಾರದ ಮಧ್ಯದಲ್ಲಿ ರತ್ನ ಖಚಿತವಾದ್ದೊಂದು ಪದಕವಿತ್ತು. ಆ ಪದಕದ ನಟ್ಟನಡವೆಯಿದ್ದ ಬಹುದೊಡ್ಡ ನೀಲರತ್ನವು ಅತ್ಯಂತ ಯಶಸ್ವಿಯಾದದ್ದೆಂದು ಭಾವಿಸಲ್ಪಟ್ಟಿತ್ತು, ಅದು ಕೊರಳಲ್ಲಿರುವತನಕ ಪ್ರತ್ಯಕ್ಷ ಯಮನ ಭಯವು ಕೂಡ