ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ pages ೧೩೩-೧೪೩

೧೫ ನೆಯ ಪ್ರಕರಣ

ಪ್ರತಿಜ್ಞೆ

ಈ ತರುಣ ಸ್ತ್ರೀಯು ಹೀಗೆ ಗಾಬರಿಯಾಗಿ ನಿಂತಳಷ್ಟೇ ಅಲ್ಲ, ಆಕೆಯು ಥರಥರ ನಡುಗಹತ್ತಿದಳು. ಅದನ್ನು ನೋಡಿದ ಕೂಡಲೆ ರಣಮಸ್ತಖಾನನು ಆಶ್ಚರ್ಯಮಗ್ನನಾದನು. ತರುಣಿಯು ಆನಂದ ವೃತ್ತಿಯವಳಿದ್ದು, ಆಕೆಯು ಕುಂಜವನದಲ್ಲಿ ಈಗ ಉಲ್ಲಾಸದಿಂದ ಗಾಯನ ಮಾಡುತ್ತ, ರಮಿಸಹತ್ತಿರ ಬಹುದೆಂದು ಆತನು ಆ ವೃದ್ಧದಾಸಿಯ ಮಾತಿನ ಮೇಲಿಂದ ತಿಳಿದಿದ್ದನು; ಆದರೆ ಅದರ ವಿರುದ್ಧ ಸ್ಥಿತಿಯು ರಣಮಸ್ತಖಾನನ ಕಣ್ಣಿಗೆ ಬಿದ್ದಿತು. ಆತನು ಆಕೆಯ ಮುಂದೆ ನಿಂತುಕೊಂಡಿದ್ದನು, ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು; ಅವಳು ನೆಲವನ್ನು ನೋಡುತ್ತಿದ್ದಳು ಆತನು ಆಕೆಯ ಬಾಡಿದ ಮೋರೆಯನ್ನು ನೋಡುತ್ತಿದ್ದನು. ತನ್ನ ಕಣ್ಣೊಳಗಿಂದ ಹೊರಸೂಸುವ ನೀರುಗಳು ಆತನ ಕಣ್ಣಿಗೆ ಬೀಳಬಾರದೆಂದು ಆಕೆಯು ಯತ್ನಿಸುತ್ತಿದ್ದಳು. ಆತನಾದರೂ ತನ್ನ ಕಣ್ಣೊಳಗಿಂದ ನೀರುಗಳು ಬರಬಾರದೆಂದು ಪ್ರಯತ್ನ ಮಾಡುತ್ತಿದ್ದನು. ಆಕೆಯ ದೇಹವು ಥರಥರ ನಡುಗುತ್ತಿತ್ತು, ಆತನ ಹೃದಯವು ಕಂಪಿಸತೊಡಗಿತ್ತು. ಮಾತಾಡುವ ಇಚ್ಛೆಯ ಅವಳಿಗಿತ್ತೋ ಇಲ್ಲವೋ ದೇವರಿಗೆ ಗೊತ್ತು. ಈತನು ಮಾತ್ರ ಯಾವಾಗ ಮಾತಾಡೇನೆಂದು ಆತುರಪಡುತ್ತಲಿದ್ದನು. ನೂರಜಹಾನಳು ಬಹಳ ಸುಂದರಿಯಿದ್ದಳು. ರಾಮರಾಜನ ದರ್ಬಾರದಲ್ಲಿ ಆಕೆಯು ಸಂತಪ್ತ ಮುದ್ರೆಯಿಂದಾಗ್ಯೂ ಆಕೆಯ ಸೌಂದರ್ಯದಲ್ಲಿ ಕೊರತೆಯುಂಟಾಗಿದ್ದಿಲ್ಲ. ಈಗ ಮನಸ್ಸಿನ ವ್ಯಾಕುಲತೆಯಿಂದ ಅತ್ಯಂತ ಮ್ಲಾನವದನಳಾಗಿದ್ದರೂ, ಆಕೆಯು ಸೌಂದರ್ಯದಲ್ಲಿ ಈಗಲೂ ಕೊರತೆಯುಂಟಾಗಿದ್ದಿಲ್ಲ. ಸ್ವಾಭಾವಿಕವಾಗಿಯೇ ಸುಂದರವಾಗಿದ್ದ ಅಪ್ಪರೆಯು, ಕ್ರೋಧದಿಂದ ಸಂತಪ್ತಳಾಗಿರಲಿ, ದುಃಖದಿಂದ ದಗ್ಧಳಾಗಿರಲಿ ಆಕೆಯ ಸೌಂದರ್ಯದಲ್ಲಿ ಕೊರತೆಯು ಹ್ಯಾಗೆ ಉಂಟಾಗಬೇಕು? ಬೇರೆ ಬೇರೆ ವಿಕಾರಗಳಿಂದ ಆ ಸೌಂದರ್ಯದ ಬೇರೆ ಬೇರೆ ಮನೋಹರ ದ್ರವ್ಯಸ್ವರೂಪಗಳು ಪ್ರಾಪ್ತವಾಗುತ್ತಿರುವವಷ್ಟೇ ? ನೂರಜಹಾನಳ ಸ್ಥಿತಿಯಾದರೂ ಹಾಗೆಯೇ ಆಯಿತು. ರಣಮಸ್ತಖಾನನ ಕಣ್ಣಿಗೆ ಆಕೆಯ ಸ್ವರೂಪ ಸೌಂದರ್ಯದಲ್ಲಿ ಏನು ಕೊರತೆಯು ಕಂಡು ಬರಲಿಲ್ಲ. ತನ್ನನ್ನು ಒತ್ತಾಯದಿಂದ ಇಲ್ಲಿ ಇಟ್ಟುಕೊಂಡಿರುವರೆಂಬ ಕಲ್ಪನೆಯಿಂದ ಈಕೆಯು ಇಷ್ಟು ಶೋಕಾಕುಲಳಾಗಿದ್ದರೆ, ಈಕೆಯನ್ನು ಇಂದೇ ಊರಿಗೆ ಕಳಿಸಿ ಕೊಡಬೇಕೆಂದು ರಣಮಸ್ತಖಾನನು ಯೋಚಿಸಿ, ಧೈರ್ಯದಿಂದ ಆಕೆಯನ್ನು ಕುರಿತು- “ನಾನು ಪಂಜರದಲ್ಲಿ ಸಿಕ್ಕುಬಿದ್ದೆನು, ಇಲ್ಲಿಂದ ಹಾರಿಹೋಗಬೇಕೆಂಬ ಇಚ್ಛೆಯು ಅರಗಿಳಿಗೆ ಆಗಿರುವದೇನು ? ಯಾಕೆ, ಮೌನವೇಕೆ ? ಅರಗಿಳಿಯು ಯಾಕೆ ಮಾತಾಡುವದಿಲ್ಲ? ನಾನು ಪಂಜರದಲ್ಲಿರುತ್ತೇನೆಂದು ಅರಗಿಳಿಯು ತಿಳಿಯಬಾರದು. ಹಾರಿಹೋಗುವ ಇಚ್ಛೆಯಾದ ಕೂಡಲೆ ಅದು ಹಾರಿ ಹೋಗಬಹುದು.”

ಈ ಅತ್ಯಂತ ಪ್ರೇಮಯುಕ್ತ ಭಾಷಣದಿಂದ ಧೈರ್ಯ ಬಂದದ್ದರಿಂದಲೋ ಏನೋ ನೂರಜಹಾನಳು ರಣಮಸ್ತಖಾನನ ಕುರಿತು- “ನಿಮ್ಮ ಮನೆಯ ಕುಂಭಗಳ ಮೇಲೆ ಕುಳಿತುಕೊಳ್ಳುವ ಕ್ಷುದ್ರ ಪಕ್ಷಿಗಳ ಯೋಗ್ಯತೆಯೂ ನನಗೆ ಇಲ್ಲದಿರಲು, ನನಗೆ ಅರಗಿಳಿಯಂಥ ಸುಂದರ ಪಕ್ಷಿಯ ಹೆಸರು ಕೊಡುವದೇಕೆ ? ಅರಗಿಳಿಯ ಯಾವ ಯೋಗ್ಯತೆಯನ್ನು ನನ್ನಲ್ಲಿ ನೋಡಿದಿರಿ ?” ಎಂದು ಮಾತಾಡಲು, ಆಕೆಯ ಈ ಅತ್ಯಂತ ಮಧುರ ಸ್ವರಯುಕ್ತ ವಿನಯವಾಣಿಯನ್ನು ಕೇಳಿ, ಆನಂದದಿಂದ ರಣಮಸ್ತಖಾನನ ಮೈಮೇಲಿನ ಕೂದಲುಗಳು ನೆಟ್ಟಗಾದವು. ತನ್ನ ಮಾತುಗಳಿಗೆ ಈಕೆಯು ಉತ್ತರವನ್ನು ಕೊಟ್ಟಾಳೋ ಎಂದು ಆತುರದಿಂದ ಆತನು ಎದುರು ನೋಡುತ್ತಿರುವಾಗ, ಆ ಸುಂದರಿಯು ಹೀಗೆ ಮಂಜುಳಸ್ವರದಿಂದ ನುಡಿದದ್ದನ್ನು ಕೇಳಿ ಖಾನನು ಅತ್ಯಾನಂದಿಂದ- “ನಾನು ಕೊಟ್ಟ ಹೆಸರು ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲ. ಬೇರೆ ಸುಂದರವಾದ ಹೆಸರು ಗೊತ್ತಾಗದ್ದರಿಂದ ಅದನ್ನೇ ನಾನು ನಿಮಗೆ ಕೊಟ್ಟೆನು; ಆದರೆ ನಿನ್ನೆ ನನಗೆ ಕೊಟ್ಟಿರುವ 'ನವಾಬ' ಎಂಬ ಹೆಸರು ಮಾತ್ರ ನಿಶ್ಚಯವಾಗಿ ನನ್ನ ಯೋಗ್ಯತೆಯನ್ನು ಮೀರಿದ್ದಿರುತ್ತದೆ, ಅದರೆ ಇಂಥ ಗೌರವದ ಹೆಸರನ್ನು ನನಗೆ ಕೊಡುವ ಕಾರಣವೇನು ? ಎಂದು ಕೇಳಲು ಆತನ ಮಾತುಗಳಿಂದ ನೂರಜಹಾನಳ ಅಂಜಿಕೆಯು ಮತ್ತಷ್ಟು ದೂರವಾಗಿ, ಅಕೆಯು ರಣಮಸ್ತಖಾನನನ್ನು ಕುರಿತು-ಅದಕ್ಕೂ ಯೋಗ್ಯವಾದ ಹೆಸರು ನೆನಪಾಗದ್ದರಿಂದಲೇ ಆಗ ಆ ಹೆಸರನ್ನು ತಮಗೆ ನಾನು ಕೊಟ್ಟೆನು, ಅದರಿಂದ ತಮಗೆ ಸಿಟ್ಟು ಬಂದಿದ್ದರೆ, ನಾನು ಕ್ಷಮೆಯನ್ನು ಯಾಚಿಸುತ್ತೇನೆ; ಆದರೆ ...........

ಈ ಮೇರೆಗೆ ನುಡಿದು ಅಷ್ಟಕ್ಕೆ ನೂರಜಹಾನಳು ಸುಮ್ಮನಾದಳು, ಮುಂದೆ ಆಡಬೇಕೆಂದಿದ್ದ ಮಾತುಗಳನ್ನು ಆಕೆಯು ನುಂಗಿಕೊಂಡಳು. ಅದನ್ನು ನೋಡಿ ರಣಮಸ್ತಖಾನನು- “ಮಾತುಗಳನ್ನು ನುಂಗುವದೇಕೆ ? ಆಡಿಬಿಟ್ಟರಾಯಿತು. ನಿಮ್ಮ ಬಹುಮಾನವಾಚಕ ಶಬ್ದದಿಂದ ನನ್ನನ್ನು ಕರೆಯುವಾಗ, ಅದರಲ್ಲಿ ಉಪಹಾಸ ಭಾವನೆಯಿರದಿದ್ದರೆ ಆಯಿತು”.

ನೂರಜಹಾನ-(ಗಂಭೀರ ಮುದ್ರೆಯಿಂದ) ಏನು ? ನಿಮ್ಮ ಸಲುವಾಗಿ ಉಪಹಾಸವೇ ? ನಿಮ್ಮನ್ನು ನಾನು ಉಪಹಾಸದಿಂದ ಕರೆಯುವೆನೆ ? ಛೇ, ಛೇ! ಯಾವ ಕೈಗಳು ನನ್ನ ಪ್ರಾಣವನ್ನು, ವಿಶೇಷವಾಗಿ ಪ್ರಾಣಕ್ಕಿಂತಲೂ ಹೆಚ್ಚಿನ ಮರ್ಯಾದೆಯನ್ನು ಒಳ್ಳೆ ಕಠಿಣಪ್ರಸಂಗದಲ್ಲಿ ರಕ್ಷಿಸಿದವೋ, ಅಂಥ ಕೈಗಳನ್ನು ಹರಿದುಕೊಳ್ಳುವಂಥ ದುಷ್ಟ ಡಾಕಿನಿಯು ನಾನಲ್ಲ ! ನಿಮ್ಮಿಂದಾದ ಉಪಕಾರವು ಹ್ಯಾಗೆ ತೀರೀತೆಂಬ ವಿಚಾರದಲ್ಲಿ ನಾನು ಮಗ್ನಳಾಗಿರುವೆನು !

ರಣಮಸ್ತಖಾನ-ಇದರಲ್ಲಿ ಉಪಕಾರವೇತರದು ? ಯಾರು ಯಾರ ಮೇಲೆ ಉಪಕಾರ ಮಾಡಿದರು ? ಅದನ್ನು ಯಾರು ತೀರಿಸಬೇಕು ? ನಿಜವಾದ ಸಾಲವಿದ್ದರೆ ಮಾತ್ರ ಅದನ್ನು ತೀರಿಸುವದು, ಅಥವಾ ಅದನ್ನು ತೀರಿಸುವದಕ್ಕಾಗಿ ಚಿಂತಿಸುವದು ಕಾಲ್ಪನಿಕ ಸಾಲವನ್ನು ತೀರಿಸುವದಕ್ಕಾಗಿ ಚಿಂತಿಸುವದು ಎಲ್ಲಿಯ ರೀತಿಯು? ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಅದರಲ್ಲಿ ಉಪಕಾರವೇತರದು? ಆದರೂ ಇಲ್ಲದ ಉಪಕಾರವನ್ನು ಕಲ್ಪಿಸಿ ಅದನ್ನು ತೀರಿಸಬೇಕೆಂದು ನೀವು ಇಚ್ಚಿಸುತ್ತಿದ್ದರೆ, ಅದಕ್ಕೆ ಹಾದಿಯಿಲ್ಲೆಂದು ಮಾತ್ರ ತಿಳಿಯಬೇಡಿರಿ.

ರಣಮಸ್ತಖಾನನು ಇಷ್ಟು ಮಾತಾಡಿ, ತನ್ನ ನಾಲಗೆಯನ್ನು ಕಚ್ಚಿಕೊಂಡನು. ನಾನು ಇದೇನು ಹುಚ್ಚನ ಹಾಗೆ ಮಾತಾಡಿದೆನು, ಎಂದು ಆತನು ತನ್ನ ನಾಲಗೆಯನ್ನು ಬಿಗಿಹಿಡಿದು ಸುಮ್ಮನಾದನು ಆತನ ಮಾತುಗಳ ಭಾವವು ನೂರಜಹಾನಳಿಗೆ ತಿಳಿಯಲಿಲ್ಲ. ಆತನ ಮುಖವನ್ನು ನೋಡುವದರಿಂದ ತಿಳಿದರೆ ನೋಡಬೇಕೆಂತಲೋ ಏನೋ ಆಕೆಯ ಮುಗುಳು ನಕ್ಕು, ಆಶ್ಚರ್ಯದಿಂದ ಆತನ ಮೋರೆಯನ್ನು ನೋಡಿದಳು. ಅಷ್ಟರಲ್ಲಿ ಇನ್ನೊಂದು ಮೋಜು ಆಯಿತು. ಆಕೆಯು ಮುಖವೆತ್ತಿ ನೋಡಲಿಕ್ಕೂ, ಗಾಳಿಯಿಂದ ಗಿಡದ ಎಲೆಗಳು ಒತ್ತಟ್ಟಿಗಾಗಿ ಒಂದು ಸೂರ್ಯಕಿರಣ ರೇಖೆಯು ಆಕೆಯ ಮುಖದ ಮೇಲೆ ಬೀಳಲಿಕ್ಕೂ ಗಂಟೆಬಿದ್ದಿತು. ಕಿಂಚಿತ್ ಹಾಸ್ಯ, ಕಿಂಚಿತ್ ಆಶ್ಚರ್ಯ ಗಿಡದ ಎಲೆಗಳ ಸಂದಿಯೊಳಗಿಂದ ಹಾದುಬಿದ್ದ ಸೂರ್ಯಕಿರಣದ ಕಾಂತಿ ಇವುಗಳ ಯೋಗದಿಂದ ಮೊದಲೇ ಸುಂದರವಾಗಿದ್ದ ಆಕೆಯ ಮುಖವು ಮತ್ತಷ್ಟು ಸುಂದರವಾಗಿ ತೋರಿ, ಖಾನನ ಮನಸ್ಸು ಚಂಚಲವಾಯಿತು. ಆತನು ಚಕಿತನಾಗಿ ನೂರಜಹಾನಳ ಮುಖವನ್ನು ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ಆತನ ಮನಸ್ಸಿನಲ್ಲಿ ಉತ್ಪನ್ನವಾಗಿದ್ದ ಪ್ರೇಮವಿಕಾರಾಂಕುರವು ದೊಡ್ಡದಾಯಿತು. ಆತನು ಪ್ರೇಮದ ಭರದಲ್ಲಿ ನೂರಜಹಾನಳನ್ನು ಅಪ್ಪಿಕೊಳ್ಳಬೇಕೆಂದು ಕೈಗಳನ್ನು ಇನ್ನು ಮುಂದಕ್ಕೆ ಚಾಚತಕ್ಕವನಿದ್ದನು ;ಅಷ್ಟರಲ್ಲಿ ಪರಸ್ತ್ರೀಯೆಂಬ ಎಚ್ಚರವು ಹುಟ್ಟಿದ್ದರಿಂದ ಆತನು ತನ್ನ ಕೈಗಳನ್ನು ಬಿಗಿಹಿಡಿದು. ಇನ್ನು ಇವು ಮುಂದಕ್ಕೆ ಹೋಗಬಾರದೆಂದು ಒಂದನ್ನೊಂದು ಹಿಡಿದುಕೊಂಡು ಪ್ರತಿಬಂಧಿಸಲ್ಪಡುವಂತೆ, ಅವನ್ನು ಸ್ವಸ್ತಿಕಾಕಾರವಾಗಿ ಎದೆಯ ಮೇಲೆ ಇಟ್ಟುಕೊಂಡನು; ಆದರೆ ಕಣ್ಣುಗಳ ಮೇಲೆ ಮಾತ್ರ ಅತನ ಆಜ್ಞಾ ಶಕ್ತಿಯು ನಡೆಯಲಿಲ್ಲ. ಅವು ಒಂದೇಸಮನೆ ನೂರಜಹಾನಳನ್ನು ನೋಡುತ್ತಲಿದ್ದವು. ತರುಣನ ಈ ಸಂಕಟವನ್ನು ತಿಳಿದು, ಅದನ್ನು ದೂರ ಮಾಡುವದಕ್ಕಾಗಿಯೋ ಅನ್ನುವಂತೆ ನೂರಜಹಾನಳು ರಣಮಸ್ತಖಾನನನ್ನು ಕುರಿತು- “ಸಾಲ ತೀರಿಸುವ ಉಪಾಯವಿರುವದೆಂದು ಹೇಳಿದಂತೆ, ಆ ಉಪಾಯವನ್ನಿಷ್ಟು ನನಗೆ ಹೇಳಿಬಿಡಬೇಕು; ಅಂದರೆ ಕೈಯೊಳಗಿದ್ದರೆ ನಾನು ಸಾಲ ತೀರಿಸಿಬಿಡುತ್ತೇನೆ.”

ರಣಮಸ್ತಖಾನ-ನಿಮ್ಮ ಕೈಯೊಳಗೇ ಇರುತ್ತದೆ, ಇಲ್ಲವೆನ್ನುವ ಹಾಗಿಲ್ಲ; ಆದರೆ ಮೂಲತಃ ಸಾಲವೇ ಇಲ್ಲ, ಇಲ್ಲದ ಸಾಲವನ್ನು ಕಲ್ಪಿಸಿ ಅದನ್ನು ತೀರಸಬೇಕೆಂದರೆ ನಿಮ್ಮ ಕೈಯೊಳಗಿದ್ದರೂ ಅದನ್ನು ತೀರಿಸಲಿಕ್ಕೆ ನಿಮಗೆ ಬರುವಹಾಗಿಲ್ಲ.

ನೂರಜಹಾನ-ಏನು ? ನನ್ನ ಕೈಯೊಳಗಿದ್ದರೂ ಅದನ್ನು ತೀರಿಸಲಿಕ್ಕೆ ಬರುವಹಾಗಿಲ್ಲವೇ ? ಅಂಥಾ ಉಪಾಯವಾದರೂ ಯಾವುದು ?

ರಣಮಸ್ತಖಾನ-ಅದನ್ನು ನನಗೆ ಹೇಳಲಿಕ್ಕೆ ಬರುವ ಹಾಗೂ ಇಲ್ಲ.

ನೂರಜಹಾನ-(ನಕ್ಕು) ಇದೊಳ್ಳೆಯ ಉಪಾಯವು ! ನೀವು ಹೇಳದಿದ್ದರೆ ನನಗಾದರೂ ಅದು ಹ್ಯಾಗೆ ಗೊತ್ತಾಬೇಕು ? ಗೊತ್ತಾಗದ ಹೊರತು ಅದನ್ನು ತೀರಿಸಲಿಕ್ಕೆ ಬರುವದೋ ಇಲ್ಲವೋ ಎಂಬದಾದರೂ ನನಗೆ ಹ್ಯಾಗೆ ತಿಳಿಯಬೇಕು? ಉಪಾಯವು ತಕ್ಕದಿರುತ್ತದೆಂಬದೇ ನನಗೆ ತಿಳಿಯದೆ ಹೋದಬಳಿಕ, ಸಾಲವನ್ನು ನಾನು ತೀರಿಸುವದಾದರೂ ಹ್ಯಾಗೆ ? ನನಗಂತೂ ಸಾಲ ತೀರಿಸುವ ಇಚ್ಛೆಯು ಬಹಳವಾಗಿರುತ್ತದೆ.

ಇದನ್ನು ಕೇಳಿ ರಣಮಸ್ತಖಾನನು ನಕ್ಕನು, ಆತನು ಬಹಳ ಹೊತ್ತು ಸುಮ್ಮನೆ ನಿಂತುಕೊಂಡನು. ಮಾತಾಡಬೇಕೆಂದರೆ ಆತನ ಮುಖದಿಂದ ಅಕರಗಳೇ ಹೊರಡಲೊಲ್ಲವು. ಇದು ನೂರಜಹಾನಳಿಗೆ ಗೊತ್ತಾಯಿತು. ಆತನು ಒಂದೇಸವನೆ ನೂರಜಹಾನಳನ್ನು ನೋಡುತ್ತಲಿದ್ದನು, ಆಗ ಆಕೆಯು ರಣಮಸ್ತಖಾನನ ಕಡೆಗೆ ನೋಡದೆ. ಮೊದಲಿನಂತೆ ನೆಲವನ್ನು ನೋಡುತ್ತ ಉಂಗುಷ್ಠದಿಂದ ನೆಲವನ್ನು ಗೀರತೊಡಗಿದಳು. ಹೀಗೆ ಬಹಳ ಹೊತ್ತಾದ ಮೇಲೆ ರಣಮಸ್ತಖಾನನು ನೂರಜಹಾನಳನ್ನು ಕುರಿತು-ನೂರಜಹಾನ, ಅರಗಿಳಿಯೇ ನನ್ನ ಮನಸ್ಸಿನಲ್ಲೇನಿರುತ್ತದೆಂಬದನ್ನು ನಾನು ಆಡಿಯೇ ತೋರಿಸಬೇಕೇನು ? ನನ್ನ ಮನಸ್ಸಿನ ಸ್ಥಿತಿಯೇನಾಗಿರುವದೆಂಬದು ನಿನಗೆ ಕಾಣುವದಿಲ್ಲವೆ ? ಆಡಿಯೇ ತೋರಿಸಬೇಕೆಂದು ನೀನು ಅಗ್ರಹಪಡುತ್ತಿದ್ದರೆ, ನಾನು ಅದಕ್ಕೆ ಈಗ ಹಿಂದುಮುಂದು ನೋಡುವದಿಲ್ಲ. ಆದರೆ ಆದರೆ ನನ್ನ ಮನೋದಯವು ಪೂರ್ಣವಾಗುವ ಆಶೆಯು ಸ್ವಲ್ಪವಾದರೂ ಇದ್ದರೆ, ನಾನು ಅದನ್ನು ಬಾಯಿಂದಲೂ ಆಡಿಬಿಡುವೆನು.

ಈ ಕಾಲದ ರಣಮಸ್ತಖಾನನ ಧ್ವನಿಯನ್ನು ಕೇಳಿದ ಕೂಡಲೇ ನೂರಜಹಾನಳುಚಕಿತಳಾಗಿ, ಕೂಡಲೆ ಆತನ ಮುಖದ ಕಡೆಗೆನೋಡಿದಳು. ಆಗ ಆತನ ಮುಖಲಕ್ಷಣವು ವಿಲಕ್ಷಣವಾಗಿತ್ತು. ಆತನ ಮನಸ್ಸಿನಲ್ಲಿರುವದನ್ನು ಒಡನುಡಿಯುವ ಅವಶ್ಯಕತೆಯು ನೂರಜಹಾನಳಿಗೆ ತೋರಲಿಲ್ಲ. ಖಾನನ ಭಾವವು ಆಕೆಗೆ ತಿಳಿದಿದ್ದರೂ, ಅದನ್ನು ಆಕೆಯು ಆಡಿ ತೋರಿಸದಾದಳು. ಆತನ ಮುಖದಿಂದಲೇ ಹೊರಟರೆ ನೆಟ್ಟಗೆಂದು ಆಕೆಯ ಮನಸ್ಸಿಗೆ ತೋರುತ್ತಿತ್ತು. ನೀವೇ ಹೇಳಿರೆಂದು ನುಡಿಯಲಿಕ್ಕೂ ಈಗ ಆಕೆಗೆ ಬಾಯಿ ಬರಲೊಲ್ಲದು. ಹೀಗಾಗಿ ಆಕೆಯು, ಖಾನನ ಮುಖಚರ್ಯದ ಕಡೆಗೆ ನೋಡುತ್ತ ನಿಂತುಕೊಂಡಳು. ಅದನ್ನು ನೋಡಿ ರಣಮಸ್ತಖಾನನು ಮತ್ತಷ್ಟು ಉತ್ಕಂಠಿತನಾದನು. ಆಕೆಯು ತನ್ನ ಮಾತಿಗೆ ಏನು ಉತ್ತರ ಕೊಡುವಳೆಂಬದನ್ನೂ, ತನ್ನ ಮಾತಿನ ಅರ್ಥವು ಈಕೆಗೆ ತಿಳಿಯಿತೋ ಇಲ್ಲವೋ ಎಂಬುದನ್ನೂ ನೋಡುವವನಂತೆ ಆತನೂ ನೂರಜಹಾನಳ ಕಡೆಗೆ ಎವೆಯಿಕ್ಕದೆ ನೋಡುತ್ತ ನಿಂತುಕೊಂಡನು. ತನ್ನ ಮನಸ್ಸಿನ ಭಾವವು ಈಕೆಗೆ ಗೊತ್ತಾಯಿತೆಂಬುದು ಕೂಡಲೇ ಆತನಿಗೆ ತಿಳಿಯಿತು; ಆದ್ದರಿಂದ ಆತನು ಮಾತಾಡಲಿಕ್ಕೆ ಧೈರ್ಯಗೊಂಡು-ಸುಂದರಿ, ಸ್ಪಷ್ಟವಾಗಿ ಮಾತಾಡಬೇಕಾದದ್ದರಿಂದ ನಿರ್ವಾಹವಿಲ್ಲದೆ ಮಾತಾಡುತ್ತೇನೆ, ಅದಕ್ಕಾಗಿ ನನ್ನನ್ನು ಕ್ಷಮಿಸು. ನನ್ನ ಜೀವದ ಸರ್ವಸ್ವವನ್ನು ನಿನ್ನ ಚರಣಕ್ಕೆ ಅರ್ಪಿಸಿದ್ದೇನೆ; ನೀನು ನನ್ನನ್ನು ಅಗಲಿ ಹೋದರೆ ನಾನು ಮೃತಪ್ರಾಯವಾಗುವೆನು. ನನ್ನ ಕೈಯಿಂದ ಏನಾದರೂ ಮಹತ್ಕಾರ್ಯಗಳಾಗ ಬೇಕಿದ್ದರೆ, ನೀನು ನನ್ನ ಕೈ ಹಿಡಿಯುವದರಿಂದಲೇ ಅವು ಆದಾವು, ಎಂದು ನುಡಿದು, ಈಕೆಯು ಏನು ಉತ್ತರ ಕೊಡುವಳೋ ನೋಡಿ ಮತ್ತೆ ಮಾತಾಡಬೇಕೆಂದು ಆತನು ಆತುರದಿಂದ ನೂರಜಹಾನಳ ಕಡೆಗೆ ನೋಡುತ್ತ ನಿಂತುಕೊಂಡನು. ನೂರಜಹಾನಳು ಸ್ತಬ್ಧಳಾಗಿ ನಿಂತುಕೊಂಡಿದ್ದಳು. ಆಕೆಗೆ ಏನು ಮಾತಾಡಬೇಕೆಂಬದು ತೋಚದಾಯಿತು. ಆದರೂ ಪ್ರಯತ್ನದಿಂದ ಆಕೆಯು ರಣಮಸ್ತಖಾನನನ್ನು ಕುರಿತು-

ನೂರಜಹಾನ- ಸ್ತ್ರೀಯರು ಕೇವಲ ಪರಾಧೀನರು. ಅದರಲ್ಲಿ ನಾನಂತೂ ನಿನ್ನಿನವರೆಗೆ ಕೇವಲ ಪರಾಧೀನಳಾಗಿದ್ದೆನು, ಆದರೆ ಇಂದು ಮುಂಜಾವಿನಿಂದ ನಾನು ಬೇರೆ ಸ್ತ್ರೀಯರಂತೆ ಪರಾಧೀನಳಾಗಿರುವದಿಲ್ಲ. ನಿನ್ನಿನವರೆಗೆ ನಾನು ನನ್ನ ಹಿರಿಯರ ಅಧೀನದಲ್ಲಿದ್ದೆನು. ಇಂದಿನಿಂದ ನನ್ನಷ್ಟಕ್ಕೆ ನಾನು ಸ್ವತಂತ್ರಳಾಗಿರುತ್ತೇನೆ.

ರಣಮಸ್ತಖಾನ- (ಅತ್ಯಂತ ಹರುಷದಿಂದ) ಹಾಗಾದರೆ ಮತ್ತೇನು ಬೇಕು? ನನ್ನ ಮನೋದಯವು ಪೂರ್ಣವಾಗಲಿಕ್ಕೆ ಪ್ರತಿಬಂಧವೇ ಇಲ್ಲದ ಹಾಗಾಯಿತಲ್ಲ?

ನೂರಜಹಾನ- (ಸುಮ್ಮನಿರಲು ಕೈಯಿಂದ ಸನ್ನೆಮಾಡಿ) ನಾನು ಸ್ವತಂತ್ರಳಾದೆನೆಂದು ಹೇಳಿದ್ದೇನೋ ನಿಜವು, ಆದರೆ ಕೆಲವೊಂದು ಸಂಗತಿಯಿಂದ ನಾನು ಪರಾಧೀನಳೇ ಇರುತ್ತೇನೆ.

ರಣಮಸ್ತಖಾನ- (ದೈನ್ಯದಿಂದ) ನನ್ನ ಅರಗಿಳಿಯೇ ಹೀಗೆ ನನ್ನನ್ನು ನಿರಾಶಗೊಳಿಸಬೇಡ, ನನ್ನನ್ನು ಸಂಶಯಗ್ರಸ್ತನಾಗಿಮಾಡಬೇಡ. ಏನು ಹೇಳುವದನ್ನು ಸ್ಪಷ್ಟವಾಗಿ ಹೇಳು, ಯಾವ ಬಾಬಿನಿಂದ ನೀನು ಪರಾಧೀನಳಾಗಿರುತ್ತಿ ? ನಿನ್ನ ಸಲುವಾಗಿ ಕೇವಲ ಪರಾಧೀನವಾಗಿರುವ ನನ್ನ ಮನಸ್ಸನ್ನು ಹೆಚ್ಚಿಗೆ ಗಾಸಿಮಾಡಬೇಡ. ನನ್ನ ಸ್ಥಿತಿಯು ನಿನ್ನ ಸ್ಥಿತಿಗೆ ಕೇವಲ ವಿರುದ್ಧವಾಗಿರುತ್ತದೆ. ನೀನು ನಿನ್ನನವರೆಗೆ ಪರತಂತ್ರಳಾಗಿದ್ದು ಇಂದಿನಿಂದ ಸ್ವತಂತ್ರಳಾದೆನೆಂದು ಹೇಳುತ್ತೀ. ಆದರೆ ನಿನ್ನನವರೆಗೆ ಸ್ವತಂತ್ರನಾಗಿದ್ದ ನಾನು, ನಿನ್ನನ್ನು ನೋಡಿದಾಗಿನಿಂದ ಪರತಂತ್ರನಾದೆನು. ನಿನ್ನ ಹಾಗೆ ನಾನು ಯಾವ ಬಾಬಿನಿಂದಲೂ ಈಗ ಸ್ವತಂತ್ರನಾಗಿರುವದಿಲ್ಲ; ನನ್ನ ಪ್ರಾಣಗಳನ್ನೆಲ್ಲ ನಿನಗೆ ಒಪ್ಪಿಸಿದ್ದೇನೆ ; ಆದ್ದರಿಂದ ನನ್ನನು ಉಳಿಸುವದು ಅಥವಾ ಕೊಲ್ಲುವದು ನಿನ್ನೀ ಕೈಯಲ್ಲಿಯೇ ಇರುತ್ತದೆ. ಜೀವದಾನವನ್ನು ಬೇಡಿಕೊಳ್ಳುವ ತಪ್ಪುಗಾರನು, ತಾನು ಹೇಳತಕ್ಕದ್ದನ್ನೆಲ್ಲ ಬಾದಶಹನ ಮುಂದೆ ಹೇಳಿಕೊಂಡನು. ದೇವರನ್ನು ಬೇಡಿಕೊಳ್ಳತಕ್ಕ ಹಾಗೆ ಬೇಡಿಕೊಂಡನು. ಇನ್ನು ಬಾದಶಹನು ಏನು ಅಪ್ಪಣೆ ಕೊಡುವನೆಂಬದರ ಕಡೆಗೆ ಆ ತಪ್ಪುಗಾರನು ನೋಡುತ್ತಿರುವನು. ಆಯಿತು, ನೂರಜಹಾನ, ಇನ್ನು ನಾನು ಏನೂ ಮಾತಾಡುವದಿಲ್ಲ. ಮಾತಾಡು, ಅರಗಿಳಿಯೇ ಮಾತಾಡು-ಸೋಕ್ಷವೋ ಮೋಕ್ಷವೋ ಎಂಬುದನ್ನು ಹೇಳಿಬಿಡು.

ನೂರಜಹಾನ- ನಾನು ಇಂದಿನಿಂದ ಸ್ವತಂತ್ರಳಾದೆನೆಂದು ಹೇಳಿದೆನಲ್ಲ? ಅದು ಎಷ್ಟು ಮಾತ್ರವೂ ನಿಜವಲ್ಲ.

ಇದನ್ನು ಕೇಳಿದ ಕೂಡಲೆ ರಣಮಸ್ತಖಾನನು ಏನೆ ಮಾತಾಡಬೇಕೆನ್ನುತ್ತಿರಲು, ನೂರಜಹಾನಳು ಪುನಃ ಕೈಯಿಂದ ಸಂಜ್ಞೆಮಾಡಿ ಸುಮ್ಮನಿರಿಸಿ- “ಇನ್ನು ನನ್ನ ಮಾತುಗಳನ್ನು ಕೇಳಿಕೊಳ್ಳಿರಿ,” ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು-ನಿನ್ನ ಮಾತುಗಳನ್ನೆಲ್ಲ ನಾನು ಕೇಳಿಕೊಳ್ಳುವದು ಆಶ್ಚರ್ಯವಲ್ಲ, ನೀನು ಯಾವಾಗಲು ನನ್ನ ಸಂಗಡ ಮಾತಾಡುತ್ತಲೇ ಇರಬೇಕೆಂದು ನನ್ನ ಉತ್ಕಟೇಚ್ಛೆಯಿರುತ್ತದೆ. ಅಮೃತವೃಷ್ಟಿಯಾಗುತ್ತಿರಲು, ಅದು ಮೈಮೇಲೆ ಬೀಳಬಾರದೆಂದು ಯಾರಾದರೂ ಇಚ್ಚಿಸಬಹುದೋ ? ಆದರೆ ವೃಷ್ಟಿಯಾಗುವ ಮೊದಲು ಅದು ಅಮೃತದ್ದೋ ವಿಷದೋ ಎಂಬುದು ಗೊತ್ತಾದರೆ ನೆಟ್ಟಗೆ ! ಒಂದು ಬಿಂದುವು ಮೊದಲೂ ನನ್ನ ಕಿವಿಯಲ್ಲಿ ಬೀಳಲಿ. ಅದು ಅಮೃತದ್ದೇ ಎಂಬುದು ನನ್ನ ಮನಸ್ಸಿಗೆ ಗೊತ್ತಾಗಲಿ, ಆಮೇಲೆ ನಾನಾಗಿಯೇ ಆ ದೃಷ್ಟಿಯಲ್ಲಿ ತಪ್ಪನೆ ತೋಯಿಸಿಕೊಳ್ಳಲಿಕ್ಕೆ ಸಿದ್ಧನಾಗುವೆನು. ಒಂದೇ ಮಾತು-ನಾನು ನಿನ್ನವನೋ, ನಿನ್ನವನಲ್ಲವೋ ? ಹೇಳು ಎಂದು ಕೇಳಲು, ನೂರಜಹಾನಳು ನಕ್ಕು-ಮೊದಲೂ ನನ್ನ ಮಾತುಗಳನ್ನೆಲ್ಲ ಸಮಾಧಾನದಿಂದ ಕೇಳಿಕೊಳ್ಳಿರಿ; ಅಂದರೆ ಎಲ್ಲ ನಿಮಗೆ ಗೊತ್ತಾಗುವದು. ಎಂದು ಹೇಳಿದಳು. ಇಷ್ಟು ಮಾತಾಡುವದರೊಳಗೆ ಆಕೆಯ ಸುಂದರಮುಖದಲ್ಲಿಯ ನಗೆಯು ಅಡಗಿ, ಆ ಮುಖವು ಬಹಳ ಗಂಭೀರವಾಯಿತು. ಬರಿಯ ಗಾಂಭೀರವಷ್ಟೇ ಅಲ್ಲ, ಬರಬರುತ್ತ ಆ ಮುಖದ ಗಾಂಭೀರ್ಯದಲ್ಲಿ ಸಂತಾಪಯುಕ್ತ ಖೇದದ ಮಿಶ್ರಣವಾದಂತೆ ತೋರಹತ್ತಿತು. ಆಕೆಯ ವಿಸ್ತೀರ್ಣವಾದ ಬಾಲಪ್ರದೇಶದಲ್ಲಿ ನಿರಿಗೆಗಳು ತೋರಹತ್ತಿದವು. ಆಕೆಯ ಹುಬ್ಬುಗಳು ಅಕುಂಚಿತವಾದದ್ದರಿಂದ, ಆಕೆಯ ವಿಶಾಲ ನೇತ್ರಗಳೂ ಅಕುಂಚಿತವಾಗಿ ಉಗ್ರವಾದವು. ಆಕೆಯ ಮುಖದಲ್ಲಿ ನಿಶ್ಚಯದ ಚಿಹ್ನವು ತೋರಹತ್ತಿತು. ಇದನ್ನೆಲ್ಲ ನೋಡಿ ರಣಮಸ್ತಖಾನನು ಬೆರಗಾದನು, ಒಮ್ಮಿಂದೊಮ್ಮೆ ಆದ ಈ ರೂಪಾಂತರವು ತನ್ನ ಅಶಾತಂತುವು ಹರಿದುಹೋಗುವದಕ್ಕೆ ಕಾರಣವಾಯಿತೆಂದು ಅವನು ತಿಳಿದುಕೊಂಡನು. ಆತನು ಏನೋ ಮಾತಾಡಬೇಕೆಂದು ತುಟಿಯನ್ನು ಅಲ್ಲಾಡಿಸುತ್ತಿರಲು, ಪುನಃ ನೂರಜಹಾನಳು ಸಂಜ್ಞೆಮಾಡಿ ಸುಮ್ಮನಿರಿಸಿ ಕೂಡಲೆ ಮಾತಾಡಹತ್ತಿದಳು-

ನವಾಬಸಾಹೇಬರೇ, ನಾನು ಒಬ್ಬ ಯಃಕಶ್ಚಿತ ಮನುಷ್ಯನ ಮಗಳಿರುವೆನು. ಯಾವನೊಬ್ಬ ಬಾದಶಹನ ಮಗಳಲ್ಲ, ಸ್ವರ್ಗದೊಳಗಿನ ದೇವತೆಯಲ್ಲ; ಆದರೆ ನನ್ನ ಶೀಲವು ನನಗೆ ಅತ್ಯಂತ ಪ್ರಿಯವಾಗಿರುವದು. ನಿನ್ನೆ ಒಬ್ಬ ಹಿಂದು ರಾಜನು, ಕೂಡಿದ ದರ್ಬಾರದಲ್ಲಿ ಎಲ್ಲ ಗಂಡಸರ ಮುಂದೆ ನನ್ನ ಲಜ್ಜಾಹರಣವನ್ನು ಮಾಡಿದನು. ಆ ನೀಚನು ಅಷ್ಟಕ್ಕೆ ಸುಮ್ಮನಿರದೆ, ಇಂದು ಬೆಳಗಿನಲ್ಲಿ ನನ್ನನ್ನು ಹರಣ ಮಾಡುವದಕ್ಕಾಗಿ ಈ ಕುಂಜವನಕ್ಕೆ ಬಂದಿದ್ದನು. ನನ್ನ ಶೋಧಮಾಡುತ್ತ ಮೊದಲು ಆತನು ಬಂಗಲೆಗೆ ಬಂದನು. ನಾನು ಕುಂಜವನದಲ್ಲಿರುವೆನೆಂದು ಗೊತ್ತಾದ ಕೂಡಲೇ, ಆತನು ನಿಮ್ಮನ್ನು ಕರೆದುಕೊಂಡು ಇಲ್ಲಿಗೆ ಬಂದನು. ಆ ದುಷ್ಟನು ಚಿಗರೆಯ ಬೇಟೆಯಾಡುವಂತೆ ಕುಂಜವನದ ತುಂಬ ನನ್ನನ್ನು ಹುಡುಕುತ್ತ ತಿರುಗಾಡಿದನು. ನಾನು ಅವನ ಕಣ್ಣಿಗೆ ಬಿದ್ದಿದ್ದರೆ, ಏನು ಮಾಡುತ್ತಿದ್ದನೆಂಬುದನ್ನು ಹೇಳಲಾರೆನು. ನಾನು ಅವನ ಮುಂದೆ ನನ್ನ ಬುರುಕಿಯನ್ನು ತೆಗೆದು ನಿಂತಾಗಿನಿಂದ ಅವನ ಮೈ ಮೇಲಿನ ಎಚ್ಚರವು ತಪ್ಪಿರಲೇಬೇಕು. ಇಲ್ಲದಿದ್ದರೆ ಅವನು ಇಷ್ಟು ಬೇಗನೆ ಕುಂಜವನಕ್ಕೆ ಬರುತ್ತಿದ್ದಿಲ್ಲ. ಇಷ್ಟು ಬೇಗನೆ ಇಲ್ಲಿ ಬರಬೇಕಾದರೆ ನಿನ್ನೆ ಅವನು ಯಾವಾಗ ಹೊರಟಿರಬಹುದೆಂಬದನ್ನು ನೀವೇ ಕಲ್ಪಿಸಿರಿ. ನನ್ನ ಮೇಲೆ ಆತನ ಅಭಿಲಾಷೆಯು ಇಲ್ಲದಿದ್ದರೆ ಆತನು ಇಷ್ಟು ಬೇಗನೆ ಕುಂಜವನಕ್ಕೆ ಬರುತ್ತಿದ್ದನೆ? ಹಿಂದಕ್ಕೆ ಎಂದಾದರೂ ಹೀಗೆ ಬಂದಿದ್ದನೆ ? ಬಂದರೂ ಬರಲಿ, ತಾನು ಯಾತರ ಸಲುವಾಗಿ ಬಂದನೆಂಬದನ್ನು ನಿಮ್ಮ ಮುಂದೆ ಹೇಳಿದನೋ ? ಆತನು ಬಂದು ಏನು ಮಾಡಿದನೆಂಬುದರ ಕಲ್ಪನೆಯಾದರೂ ನಿಮಗೆ ಇರುತ್ತದೆಯೋ ? ಇನ್ನು ಈ ದುಷ್ಟನು ಹೀಗೆಯೇ ಎಷ್ಟು ಜನ ಮುಸಲ್ಮಾನ ತರುಣಿಯರ ಲಜ್ಜಾಹರಣ ಮಾಡುವನು ? ನಿಮ್ಮ ಬಾದಶಹನು ಹೀಗೆಯೇ ಎಷ್ಟುದಿನ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವನು ? ಗಂಡಸರೆನಿಸುವ ನೀವು ಸುಮ್ಮನೆ ಈ ಅವಿಚಾರತನವನ್ನು ಸಹಿಸುತ್ತ ಹೋಗುವವರೆಗೆ, ನಮ್ಮಂಥ ಅನಾಥ ಅಬಲೆಯರ ಮೇಲೆ ಈ ತೋಳಗಳು ಹೀಗೆ ಮುಗಿಬೀಳುವುದೇ ಸರಿ! ದೂರವೇಕೆ, ಇಲ್ಲಿ ನೋಡಿರಿ, ಆ ದುಷ್ಟನು ನನ್ನ ಬೆನ್ನುಹತ್ತಿ ಇಂದು ಬಂದನೋ ಇಲ್ಲವೋ ? ನೀವು ಆತನ ಸಂಗಡ ಇರದೇ ನಾನು ಆತನ ಕೈಗೆ ಸಿಕ್ಕಿದ್ದರೆ, ಆತನು ನನ್ನನ್ನು ಎಲ್ಲಿಯೋ ಅಡಗಿಸಿ ಇಟ್ಟುಬಿಡುತ್ತಿದ್ದನು. ಆತನು ಒಬ್ಬನೇ ಬಂದಿದ್ದನೆಂದು ನಿಮ್ಮ ತಿಳುವಳಿಕೆಯಾಗಿರಬಹುದು;ಆದರೆ ಈ ಕಾರ್ಯಕ್ಕಾಗಿ ಆತನು ಎಷ್ಟು ಜನರನ್ನು ಕುಂಜವನದ ಹೊರಗೆ ನಿಲ್ಲಿಸಿದ್ದನೆಂಬುದು ನಿಮಗೆ ಗೊತ್ತಿದೆಯೋ ? ನೀವು ಅದರ ಶೋಧ ಮಾಡಿಸಿರುವಿರಾ ? ಇಷ್ಟು ದಿನ ಇಲ್ಲಿ ನೀವು ಇದ್ದರೂ ನಿಮಗೆ ಗೊತ್ತಾಗದ ಒಂದು ಸಂಗತಿಯನ್ನು ನಾನು ಹೇಳುತ್ತೇನೆ ಕೇಳಿರಿ. ಇದೇ ಈ ಕುಂಜವನದಲ್ಲಿ ಈ ದುಷ್ಟ ರಾಮರಾಜನು ಹಿಂದಕ್ಕೆ ನನ್ನಂಥ ಒಬ್ಬ ಅಬಲೆಯನ್ನು ತಂದಿಟ್ಟು, ಆಕೆಯ ಸುಖಸರ್ವಸ್ವವನ್ನು ಮಣ್ಣುಗೂಡಿಸಿದನು. ಈಗಿಷ್ಟು ಮುದುಕನಾಗಿದ್ದರೂ ಈ ಕಾಮಾಂಧನು ನನ್ನ ಅಭಿಲಾಷೆಯಿಂದ ಇಲ್ಲಿಗೆ ಬಂದನು. ಯಾಕೆ, ಮಾತಾಡಿದ ನನ್ನ ಮಾತಿನ ವಿರುದ್ಧವಾಗಿ ನಿಮ್ಮ ಕಲ್ಕನೆಯೇನಾಗಿರುತ್ತೆಂಬದನ್ನು ಸ್ಪಷ್ಟವಾಗಿ ಹೇಳಿರಿ. ನನ್ನ ಸ್ಪಷ್ಟ ಮಾತುಗಳಿಗಾಗಿ ವಿಕಲ್ಪವೆಣಿಸದೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ನವಾಬಸಾಹೇಬ, ನಿನ್ನ ದರ್ಬಾರದಲ್ಲಿ ಎಲ್ಲ ಗಂಡಸರ ಎದುರಿಗೆ ಬುರುಕಿಯನ್ನು ತೆಗೆದುನಿಂತಾಗಲೇ ನಾನು ನಾಚಿಕೆಯನ್ನು ಬಿಟ್ಟು ಬಿಟ್ಟಿರುತ್ತೇನೆ. ಇನ್ನು ಯಾವನು ಈ ದುಷ್ಟನ ಶಾಸನ ಮಾಡುವನೋ, ಹೀಗೆ ಸ್ತ್ರೀಯರ ಪಾತಿವ್ರತ್ಯ ಭಂಗವಾಗುತ್ತಿರುವ ಈ ವಿಜಯನಗರದ ರಾಜ್ಯವನ್ನು ಯಾವನು ನಷ್ಟಪಡಿಸುವನೋ, ಆ ಪುರುಷಶ್ರೇಷ್ಠನೇ ನನಗೆ ಪುನಃ ಬುರುಕಿಯನ್ನು ಹೊದಿಸಲಿಕ್ಕೆ ಅಧಿಕಾರಿಯಾಗುವನು !

ಈ ಮೇರೆಗೆ ನುಡಿದು ನೂರುಜಹಾನಳು ಸುಮ್ಮನಾದಳು. ರಣಮಸ್ತಖಾನನು ಆಕೆಯ ಮಾತುಗಳನ್ನು ಕೇಳಿ ಅತ್ಯಂತ ಚಕಿತನಾದನು. ಆಕೆಯ ಮುಂಗಾಲು ಪುಟಿಕೆಯ ಪ್ರತಿ ಒಂದು ಮಾತು ಆತನಿಗೆ ಅಕ್ಷರಶಃ ನಿಜವಾಗಿ ತೋರಿತು. ರಾಮರಾಜನು ಈ ದಿನ ಭ್ರಮಿಷ್ಟನ ಹಾಗೆ ಮಾಡಿದ್ದರ ಕಾರಣವು ಅವನ ಮನಸ್ಸಿಗೆ ಈಗ ಹೊಳೆದು, ಆತನು ಸಂತಾಪಗೊಂಡನು. ತಾನು ಇಲ್ಲಿಗೆ ಇಷ್ಟು ದೊಡ್ಡ ವಕೀಲನಾಗಿ ಬಂದಿದ್ದು ಇಷ್ಟು ಸ್ವಾಭಾವಿಕ ಮಾತಿನ ಕಲ್ಪನೆಯಾಗದ್ದಕ್ಕೆ ಆತನು ತನ್ನನ್ನು ಬಹಳವಾಗಿ ಹಳಿದುಕೊಂಡನು. ನಾನು ಮಹಾಮೂರ್ಖನು, ನನ್ನನ್ನು ಮೋಸಗಳಿಸಲಿಕ್ಕೆ ಆ ನೀಚನು ಬಂದಿದ್ದನು, ಎಂದು ಯೋಚಿಸುವಾಗ ಆತನ ಕಣ್ಣುಗಳು ಕೆಂಡದಂತಾಗಿದ್ದವು, ತುಟಿಗಳು ನಡುಗಹತ್ತಿದವು. ಏನು ಮಾಡಲಿ ಏನು ಬಿಡಲಿ ಅನ್ನುವಹಾಗಾಗಿ, ಆತನು ಏನೋ ಮಾತಾಡಬೇಕೆಂದು ನೂರಜಹಾನಳ ಕಡೆಗೆ ನೋಡಿದನು. ಆಗ ಆಕೆಯ ಕಣ್ಣೂಳಗಿಂದ ಒಂದೇಸವನೆ ನೀರು ಸುರಿಯುತ್ತಿದ್ದವು. ಆಕೆಗೆ ಉಂಟಾಗಿದ್ದ ಸಂತಾಪದಿಂದ ಆಕೆಯ ಅವಸಾನವು ಕುಗ್ಗಿದಂತೆ ಆಗಲು, ಆಕೆಯು ಗಿಡದ ಬೊಡ್ಡೆಗೆ ಆತುಕೊಂಡು ಅದರ ಆಶ್ರಯದಿಂದ ನಿಂತುಕೊಂಡಳು. ಆದರೆ ರಣಮಸ್ತಖಾನನು ತನ್ನ ಕಡೆಗೆ ನೋಡಿದ ಕೂಡಲೆ ಆಕೆಯು ಅವಸಾನಗೊಂಡು ತನ್ನ ಕಣ್ಣೀರುಗಳನ್ನು ಒರಸಿಕೊಂಡು ಆತನನ್ನು ಕುರಿತು- “ನಾನು ಒಬ್ಬ ಯಃಕಶ್ಚಿತ ಸ್ತ್ರೀಯು, ನನ್ನನ್ನು ಹಿಡಕೊಂಡು ಹೋಗಿ ಅವಮಾನಗೊಳಿಸಿದ್ದರೂ ಮಹತ್ವವಿದ್ದಿಲ್ಲ. ಆದರೆ ಈವರೆಗೆ ನನ್ನಂಥ ಎಷ್ಟು ಜನರನ್ನು ಆ ದುಷ್ಟನು ಅವಮಾನಗೊಳಿಸಿರುವನೋ ಯಾರಿಗೆ ಗೊತ್ತು ! ಒಬ್ಬ ಸುಂದರಿಯ ಸಂಸಾರಗೇಡನ್ನು ಇದೇ ದುಷ್ಟನೇ ಇದೇ ಕುಂಜವನದಲ್ಲಿ ಮಾಡಿದನೆಂದು ನಾನು ಕೇಳಿದ್ದೇನೆ ! ಇದರ ಮೇಲಿಂದ ನೋಡುತ್ತಿರಲು, ನಮ್ಮ ಮುಸಲ್ಮಾನ ಜನರಲ್ಲಿ ರಕ್ಷಕರು ಯಾರೂ ಉಳಿಯಲಿಲ್ಲೆಂದು ಅನ್ನಬೇಕಾಗುತ್ತದೆ. ಅಂದ ಬಳಿಕ ನಮ್ಮಂಥ ತರುಣಿಯರು ತಮ್ಮ ಜನ್ಮವನ್ನು ಹೀಗೆಯೇ ಅವಿವಾಹಿತ ಸ್ಥಿತಿಯಲ್ಲಿ ಯಾಕೆ ಕಳೆಯಬಾರದು ? ನಮ್ಮನ್ನು ಹಡೆದವರು ನಮ್ಮ ಲಗ್ನವನ್ನು ಯಾಕೆ ಮಾಡಿಕೊಡಬೇಕು ? ನಮ್ಮ ಗಂಡಂದಿರು, ತಮ್ಮ ಹೆಂಡಿರೆಂದು ನಮ್ಮನ್ನು ಯಾಕೆ ಕರೆಯಬೇಕು ? ಮೈಯಲ್ಲಿ ಸಾಮರ್ಥ್ಯವಿದ್ದರೆ ನಾವು ನಮ್ಮ ಸಂರಕ್ಷಣವನ್ನು ಮಾಡಿಕೊಳ್ಳತಕ್ಕದ್ದು. ಇಲ್ಲದಿದ್ದರೆ ಭಾವಿಕೆರೆಗಳ ಪಾಲಾಗತಕ್ಕದ್ದು ! ಅದೂ ಆಗದಿದ್ದರೆ, ಆ ದುಷ್ಟ ರಾಮರಾಜನ ರಾಣೀ ವಾಸವನ್ನು ಸೇರತಕ್ಕದ್ದು ! ನಾನಂತು ಹೀಗೆಯೇ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ನಾನು ಸರ್ವಥಾ ವಿವಾಹ ಮಾಡಿಕೊಳ್ಳುವದಿಲ್ಲ; ಯಾಕೆಂದರೆ, ತಮ್ಮ ಹೆಂಡಿರ ಮರ್ಯಾದೆಯನ್ನು ರಕ್ಷಿಸಿಕೊಳ್ಳುವ ಸಾಮರ್ಥವು ಮುಸಲ್ಮಾನ ಪುರುಷರಲ್ಲಿ ಉಳಿದಿರುವುದಿಲ್ಲ ! ದೇಶಾಂತರಕ್ಕೆ ತೆರಳಬೇಕಂತಲೂ ನನ್ನ ಮನಸ್ಸಿನಲ್ಲಿ ಮಾಡಿದ್ದೇನೆ. ಇದೇ ನನ್ನ ನಿರ್ಧಾರವು ; ಇದೇ ನನ್ನ ಪ್ರತಿಜ್ಞೆಯು, ನಾನು ಯಃಕಶ್ಚಿತ ಸ್ತ್ರೀಯಾಗಿದ್ದರೂ ನನ್ನಂಥ ತರುಣಿಯರಿಗೆ ನಾನು ಇದೇ ಮಾತನ್ನು ಉಪದೇಶಿಸುವೆನು. ಇನ್ನು ನಾನು ನನ್ನಷ್ಟಕ್ಕೆ ಸ್ವತಂತ್ರಳಾದೆನು. ನನ್ನ ದಾನ ಮಾಡಲಿಕ್ಕೆ ನನ್ನ ತಂದೆಯು ಮಾಲಕನಲ್ಲ, ನನ್ನ ದಾನ ತಕ್ಕೊಳ್ಳಲಿಕ್ಕೆ ಯಾವ ಪುರುಷನೂ ಸಮರ್ಥನಲ್ಲ. ದಾನ ತಕ್ಕೊಳ್ಳುವವನಲ್ಲಿಯಾದರೂ ದತ್ತ ವಸ್ತುವಿನ ಸಂರಕ್ಷಣ ಮಾಡುವ ಸಾಮರ್ಥ್ಯವಿರಬೇಕಾಗುತ್ತದಲ್ಲವೆ ?

ಆಯಿತು, ನೂರಜಹಾನಳ ಮಾತುಗಳ ಪರಮಾವಧಿಯಾಯಿತು. ಪ್ರಯತ್ನಪೂರ್ವಕವಾಗಿ ಒಟ್ಟುಗೂಡಿಸಿದ ಆಕೆಯ ಧೈರ್ಯವೆಲ್ಲ ಲುಪ್ತವಾಗಿ ಹೋಗಿ ಗಿಡದ ಬೊಡ್ಡೆಗೆ ಆತು ನಿಲ್ಲುವಷ್ಟು ಅವಕಾಶವೂ ಆಕೆಯಲ್ಲಿ ಈಗ ಉಳಿಯಲಿಲ್ಲ. ಆಕೆಯು ಹಾಗೆಯೇ ನೆಲಕ್ಕೆ ಕುಳಿತಳು. ಆಕೆ ಮೂರ್ಛಿತಳಾಗಿ ಬೀಳುವ ಹಾಗೆ ತೋರಿತು. ಆದರೆ ಆಕೆಯನ್ನು ಹಿಡಿಯಬೇಕೆಂಬ ಎಚ್ಚರವೂ ರಣಮಸ್ತಖಾನನಿಗೆ ಉಳಿದಿದ್ದಿಲ್ಲ. ನೂರಜಹಾನಳ ಮಾತಿನ ಪೆಟ್ಟುಗಳಿಂದ ಆತನು ತೀರ ಶೂನ್ಯಚಿತ್ತನಾಗಿದ್ದನು. ಆತನಿಗೆ ಬಧಿರತ್ವವು ಪ್ರಾಪ್ತವಾದಂತಾಗಿತ್ತು. ಆಕೆಯ ಪ್ರತಿಯೊಂದು ಶಬ್ದವು ಕಾದಸೀಸದ ರಸದಂತೆ ಆತನ ಕಿವಿಯೊಳಗಿಂದ ಹಾದುಹೋಗಿ ಆತನ ಹೃದಯದಲ್ಲಿ ತುಂಬಿಕೊಂಡಿತ್ತು ! ಅದರಿಂದ ಆತನ ಮೈಮೇಲಿನ ಎಚ್ಚರವು ತಪ್ಪಿತ್ತು. ತಾನಾಡುವ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ನೂರಜಹಾನಳು ಇರುವಳೋ, ಇಲ್ಲವೋ ಎಂಬದನ್ನು ತಿಳಕೊಳ್ಳುವಷ್ಟು ಎಚ್ಚರವೂ ಆತನ ಮೈಮೇಲೆ ಇದ್ದಿದ್ದಿಲ್ಲ. ಸಂತಾಪದಿಂದ ಅವನ ಸರ್ವಾಂಗವು ತಪ್ತವಾಗಿತ್ತು. ಆತನು ಕಡೆಗೆ ನೂರಜಹಾನಳನ್ನು ಕುರಿತು- “ನೆಟ್ಟಗಾಯಿತು, ನೀನು ಇಂದು ನನ್ನ ಕಣ್ಣುಗಳನ್ನು ತೆರದೆ ! ನಾನು ಈಗ ಬಹಳ ಮಾತಾಡುವದಿಲ್ಲ. ನನ್ನಲ್ಲಿ ಏನಾದರೂ ಸಾಮರ್ಥ್ಯವಿದ್ದದ್ದೇ ನಿಜವಿದ್ದರೆ, ಆ ದುಷ್ಟನ ಶಾಸನವನ್ನು ಮಾಡಿ ತೀರುವೆನು. ನನ್ನ ಭರ್ಜಿಯ ತುದಿಗೆ ಆ ದುಷ್ಟನ ರುಂಡವನ್ನು ಚುಚ್ಚಿಕೊಂಡು ಬಂದು, ನಿನ್ನ ಚರಣದ ಮೇಲೆ ಕೆಡವುವೆನು, ಈ ಅಧರ್ಮದ ರಾಜ್ಯವನ್ನು ಮಣ್ಣುಗೂಡಿಸಿದ ಬಳಿಕ ನಿನ್ನ ಪ್ರಾಣಿಗ್ರಹಣದ ಮಾತು. ಅಲ್ಲಿಯವರೆಗೆ ನೀನು ಮಾತ್ರ ಈಗ ಇದ್ದ ಹಾಗೆಯೇ ಇರು ನನ್ನ ಈ ಪ್ರತಿಜ್ಞೆಯು ಒಂದು ವರ್ಷದೊಳಗೆ ನಿಜವಾಗದಿದ್ದರೆ, ನಿನಗೆ ಮೋರೆ ತೋರಿಸಲಿಕ್ಕಿಲ್ಲ !” ಎಂದು ನುಡಿದು ರಣಮಸ್ತಖಾನನು ತಟ್ಟನೆ ಅಲ್ಲಿಂದ ಹೊರಟುಹೋದನು. ಮಗನ ಈ ಪ್ರತಿಜ್ಞೆಯನ್ನು ಅಕಸ್ಮಾತ್ತಾಗಿ ಅಲ್ಲಿಗೆ ಬಂದು ಮರೆಗೆ ನಿಂತಿದ್ದ ಮಸಾಹೇಬರು ಕೇಳಿ ಚಕಿತರಾದರು.

****