ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೩

ಈ ಪುಟವನ್ನು ಪ್ರಕಟಿಸಲಾಗಿದೆ
೫೮
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು



ಸಿರಿ ” ಎಂದು ಹೇಳಿದನು. ಬೀರಬಲನು ಹೇಳಿದ ಮಾತುಗಳನ್ನು ಕೇಳಿ ಪ್ರತಿವಾದಿಯು, " ಮಹಾರಾಜ ? ಈ ಕೆಲಸಕ್ಕೆ ನಾಲ್ಕು ಜನರು ಯಾಕೆಬೇಕು ಯಾವನಾದರೊಬ್ಬನಿಗೆ ಈ ನಾಲ್ಕೂ ಕೊಡಗಳನ್ನು ಒಪ್ಪಿಸಿಬಿಡಿರಿ, ಅಂದರೆ ಅವನು ಅವುಗಳನ್ನು ಮಾರಿ ಹಣವನ್ನು ನಿಮಗೆ ತಂದು ಒಪ್ಪಿಸುವನು, ” ಎಂದುಸುರಿದನು. ಆ ಮಾತಿಗೆ ಬೀರಬಲನು ಹಾಗೆಬೇಡ ಎಲ್ಲರೂ ನನಗೆ ಪ್ರಿಯರಾದವರೇ ಇರುವರು, ಇಂಥ ಅಲ್ಪ ಕಾರ್ಯದಲ್ಲಿ ಮನುಷ್ಯನ ಮನಸ್ಸನ್ನು ನೋಯಿಸುವದು ನ್ಯಾಯವಲ್ಲ; ಎಂದು ಹೇಳಿ ಒಂದೊಂದು ಕೊಡವನ್ನು ಒಬ್ಬೊಬ್ಬನ ಸ್ವಾಧೀನಪಡಿಸಿದನು. ಅವರಲ್ಲಿ ವಾದಿ ಪ್ರತಿವಾದಿಗಳಿಗೆ ಮಾತ್ರ ವರಹವನ್ನು ಹಾಕಿದ ಕೊಡವನ್ನೇ ಕೊಡಿಸಿದನು.

ವರ್ತಕರೆಲ್ಲರೂ ತಮ್ಮ ತಮ್ಮ ಕೊಡಗಳನ್ನು ತೆಗೆದುಕೊಂಡು ಹಿಂದಿರುಗಿ ಮನೆಗೆಬಂದರು, ತುಪ್ಪವು ಸ್ವಲ್ಪ ಕೆಟ್ಟದ್ದರಿಂದ ಅದನ್ನು ಕಾಯಿಸಲಿಕ್ಕಿಟ್ಟರು. ವಾದಿಯಾದ ವರ್ತಕನು ತುಪ್ಪವನ್ನು ಚೆನ್ನಾಗಿ ಕಾಯಿಸಿ, ಬೇರೆ ಕೊಡಕ್ಕೆ ಸುರುವುತ್ತಿರಲು ಅದರೊಳಗಿಂದ ವರಹವು ಕೆಳಗೆ ಬಿತ್ತು. ಆಗ ಅವನು ಕೂಡಲೆ ಅದನ್ನು ತೆಗೆದುಕೊಂಡು ಹೋಗಿ ಬೀರಬಲನ ವಶಕ್ಕೆ ಕೊಟ್ಟನು. ಅದರಿಂದ ವಾದಿಯು ಸತ್ಯವಂತನಿರುವನೆಂದು ಬೀರಬಲನ ಮನಸ್ಸಿನಲ್ಲಿ ನಂಬಿಗೆಯುಂಟಾಯಿತು, ಇದರಂತೆ ಪ್ರತಿವಾದಿಯಾದ ವರ್ತಕನ ಕೊಡದಲ್ಲಿಯೂ ಒಂದು ವರಹವು ಹೊರಡಲು ಅವನು ಆಶಾಬದ್ಧನಾಗಿ ಅದನ್ನು ಬೀರಬಲನಿಗೊಪ್ಪಿಸದೆ ತನ್ನ ಮಗನ ವಶಕ್ಕೆ ಕೊಟ್ಟು, ನಾನು ಬೇಡಿದಾಗ ಇದನ್ನು ನನಗೆ ಕೊಡು ಎಂದು ಅಪ್ಪಣೆಮಾಡಿ ಮಾರಿಬಂದಹಣವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು.

ನಾಲ್ಕನೇ ದಿವಸ ನಾಲ್ವರೂ ವರ್ತಕರು ತಮ್ಮ ಹತ್ತಿರ ಬಂದಷ್ಟು ಹಣವನ್ನು ತೆಗೆದುಕೊಂಡು ಬೀರಬಲನಿಗೆ ಒಪ್ಪಿಸುವದರ ಸಲುವಾಗಿ ಅವನ ಮನೆಗೆ ಬಂದರು ಮೂವರೂ ತಮ್ಮ ತಮ್ಮ ಹಣವನ್ನು ಕೊಟ್ಟು ಬಿಟ್ಟರು ಪ್ರತಿವಾದಿಯು ಹಣವನ್ನು ಕೊಡಹೋದನು ಆಗ ಬೀರಬಲನು ಅನ್ನುತ್ತಾನೆ;- ನೀನು ತೆಗೆದುಕೊಂಡು ಹೋದ ಕೊಡದಲ್ಲಿ ಒಂದೂ ಕಾಲುಮಣ ತುಪ್ಪವಿತ್ತು. ಪ್ರತಿವಾದಿ-ಮಹಾರಾಜ ನನ್ನ ಕೊಡದಲ್ಲಿ ಒಂದುಮಣಕ್ಕಿಂತ ಹೆಚ್ಚು ತುಪ್ಪವಿದ್ದಿಲ್ಲ.
ಬೀರಬಲ-ನೀನು ಅದನ್ನು ಸರಿಯಾಗಿ ತೂಕಮಾಡಿದಿಯೋ ! ಪ್ರತಿವಾದಿ-ಅಹುದು: ನಾವೇ ಸ್ವತಃ ತೂಕಮಾಡಿ ನೋಡಿದ್ದೇನೆ, ಆಕಾಲಕ್ಕೆ ನನ್ನ ಹಿರಿಯಮಗನೂ ಸಹ ಅಲ್ಲಿಯೇ ನಿಂತುಕೊಂಡಿದ್ದನು.