ಹೇಳಿಬಿಡಿರಿ.
ಗಂಗಕವಿ- ನಿರ್ವಾಹವಿಲ್ಲದೆ ನಿಮ್ಮೆಲ್ಲರ ಮಾತುಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ, ಈಕಾರ್ಯದಲ್ಲಿ ಒಂದು ವೇಳೆ ನನ್ನ ಜೀವದಮೇಲೆ ಏನಾದರೂ ಪ್ರಸಂಗವಬಂದರೆ ನೀವು ನನ್ನನ್ನು ರಕ್ಷಿಸಿಕೊಳ್ಳುವಿರಾ?
ಬೀರಬಲನು ಕೂಡಲೆ ನೇತ್ರಸಂಕೇತ ಮಾಡಿದನು. ಆಗ ಎಲ್ಲಾ ಸಭಾಸದರು ಮುಕ್ತಕಂಠದಿಂದ "ನಾವು ಹ್ಯಾಗಾದರೂ ಮಾಡಿ ನಿನ್ನ ಜೀವವನ್ನು ರಕ್ಷಿಸಿಕೊಳ್ಳುವೆವು ” ಎಂದು ಹೇಳಿದರು.
ಬೀರಬಲ -ಕವಿರಾಜ ! ಇವರೆಲ್ಲರ ಹಿತವು ನಿಮ್ಮನ್ನೇ ಅವಲಂಬಿಸಿರುವದು, ಈ ಜನರೆಲ್ಲರು ಹೇಳಿರುವ ಮಾತುಗಳನ್ನು ನೀವು ಬಾದಶಹನ ಸಮ್ಮುಖದಲ್ಲಿ ಹೇಳಿದರೆ ಅವನ ಮನಸ್ಸು ತಿರುಗದೆ ಹೋದೀತೇ ?
ತೋಡರಮಲ್ಲ-ಕವಿರಾಜ ! ನಿಮ್ಮ ಭಾಷಣವು ಬಾದಶಹನ ಕರ್ಣಪ್ರದೇಶಕ್ಕೆ ಬಿದ್ದ ಕೂಡಲೆ ದರಬಾರಕ್ಕೆ ಬಂದೇ ತೀರಬೇಕು. ಹೀಗೆ ಏನಾದರೂ ಒಂದು ಹಂಚಿಕೆಯನ್ನು ಹುಡುಕಿ ತೆಗೆಯಿರಿ.
ಗಂಗಕವಿ-ನೀವು ಹೇಳುವದೆಲ್ಲಾ ನಿಜವು, ಆದರೆ ಈಕಾರ್ಯಕ್ಕೆ ನನ್ನ ಮನಸ್ಸು ಹಿಂದುಮುಂದು ನೋಡುತ್ತದೆ. ಇಂಥ ಅಮರಕೀರ್ತಿಯು ಪ್ರಾಪ್ತವಾಗುವದೆಂದಮೇಲೆ ಉಳಿದ ಸಭಾಸದರು ಯಾಕೆ ಹಿಂದು ಮುಂದುನೋಡುತ್ತಾರೆ ? ಬೀರಬಲ, ತೋಡರಮಲ್ಲ, ಖಾನಖಾನ, ಮಾನಸಿಂಹ ಮೊದಲಾದ ಪ್ರಭೃತಿಗಳು ಈ ಕಾರ್ಯಭಾರವನ್ನು ತಮ್ಮ ಶಿರಸ್ಸಿನಮೇಲೆ ಯಾಕೆ ತೆಗೆದುಕೊಳ್ಳಬಾರದು ! ಯಾರಾದರೂ ಇದನ್ನು ಕೈಕೊಳ್ಳುವದಕ್ಕೆ ಸಿದ್ಧರಿದ್ದರೆ ನಾನು ಆನಂದದಿಂದ ಹಿಂದಕ್ಕೆ ಸರಿಯುತ್ತೇನೆ.
ರಾಜಾ ಮಾನಸಿಂಹನು ನಾವು ಸಾಹಸಪಟ್ಟು ಇಷ್ಟು ಹೊತ್ತಿನವರೆಗೆ ಬೋಧಮಾಡಿದ್ದೆಲ್ಲವೂ ವ್ಯರ್ಥವಾಗುವದೆಂದು ತಿಳಿದು ಅನ್ನುತ್ತಾನೆ "ಕವಿರಾಜ ! ಈಕಾರ್ಯವು ನಮ್ಮಂಥ ಪಾಮರರಿಂದ ಅಸಾಧ್ಯವು, ಈ ಕಾರ್ಯವು ಕವಿಗಳಿಂದ ಜರಗತಕ್ಕದ್ದೇ ಹೊರತು ಅನ್ಯರಿಂದಾಗತಕ್ಕದ್ದಲ್ಲ."
ಈಮಾತಿಗೆ ಮರುಳಾಗಿ ಗಂಗಕವಿಯು ಮೋಸಹೋದನು ಆಗ ಅವನು ಬಾದಹನನ್ನು ಹ್ಯಾಗಾದರೂ ಮಾಡಿ ದರಬಾರಕ್ಕೆ ಬರುವಹಾಗೆ ಮಾಡುತ್ತೇನೆ ಇದರಲ್ಲಿ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದು ಪ್ರತಿಜ್ಞೆ ಮಾಡಿ ಹೇಳಿದನು ಸಭಾಸದರಿಗೆಲ್ಲರಿಗೂ ಅತ್ಯಾನಂದವಾಯಿತು, ಎಲ್ಲರೂ ತಮ್ಮ ತಮ್ಮ ಗೃಹಗಳಿಗೆ ತೆರಳಿದರು.