ಗೊತ್ತುಯಿದ್ದ ಒಂದು ಆಖ್ಯಾಯಿಕೆಯನ್ನು ಹೇಳುತ್ತೇನೆ ಕೇಳಬೇಕು.
ಒಂದು ಊರಲ್ಲಿ ಒಬ್ಬ ಸುವರ್ಣಕಾರನಿದ್ದನು. ಅವನಿಗೆ ಒಬ್ಬ ಮಗನಿದ್ದನು. ತಂದೆಯು ವೃದ್ಧನಾದ್ದರಿಂದ ಅವನ ಮಗನೆ ಯಾವತ್ತು ಕೆಲಸಗಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ, ವೃದ್ಧನು ಅಂಗಡಿಯ ಒಂದು ಮೂಲೆಯಲ್ಲಿ ಕುಳಿತುಕೊಂಡು "ರಾಮ ರಾಮ” ಎಂದು ಜಪಮಾಡುತ್ತ ಮಗನಿಗೆ ಆಭರಣಗಳನ್ನು ಮಾಡಲಿಕ್ಕೆ ಕಲಿಸುತ್ತ ಕಾಲಹರಣ ಮಾಡಹತ್ತಿದನು. ಒಂದು ದಿವಸ ಆ ವೃದ್ಧಸುವರ್ಣಕಾರನ ಮಗಳು, ಅತ್ತೆ ಮನೆಯಿಂದ ತವರುಮನೆಗೆ ಬರುವಾಗ ಆಭರಣಗಳನ್ನು ಮಾಡಿಸಬೇಕೆಂದು ಬಂಗಾರವನ್ನು ತೆಗೆದುಕೊಂಡು ಬಂದಿದ್ದಳು. ಅದನ್ನು ಎರಡನೇಯವರ ಹತ್ತರ ಆಭರಣಗಳನ್ನು ಮಾಡಿಸಲಿಕ್ಕೆ ಮನ ಒಪ್ಪದೇ ತನ್ನ ಅಣ್ಣನ ಹತ್ತರವೇ ಕೊಟ್ಟು ತಾನು ಅವನಯೆದುರಿಗೆ ಸ್ವಸ್ಥವಾಗಿ ಕುಳಿತುಕೊಂಡು ಬಿಟ್ಟಳು. ವೃದ್ಧನ ಮನಸ್ಸಿನಲ್ಲಿ ಆಗ ಒಂದು ಕಲ್ಪನೆಯು ಹುಟ್ಟಿತು ಏನಂದರೆ:- “ನನ್ನ ಮಗನು ತನ್ನ ತಂಗಿಯ ಬಂಗಾರದಲ್ಲಿ ಸ್ವಲ್ಪಾದರೂ ಕಳವು ಮಾಡಲಿಕ್ಕಿಲ್ಲ; ಅದರಿಂದ ಅವನಿಗೆ ಕದ್ದುಕೊ, ಎಂದು ಹೇಳಬೇಕು” ಎಂದು ಯೋಚಿಸಿ ಪ್ರಕಟವಾಗಿ ಹೇಳಲಿಕ್ಕೆ ಬರದಹಾಗೆ ಇದ್ದದರಿಂದ ಸಾಂಕೇತಿಕಕಶಬ್ದಗಳಿಂದ ಅವನಿಗೆ ತಿಳಿಯಬರುವಂತೆ- " ಎಲೈ ರಾಮನೇ! ನಿನಗೆ ಎಲ್ಲ ಪ್ರಾಣಿಗಳು ಸಮಾನರಷ್ಟೇ" ಎಂದು ಮೇಲಿಂದ ಮೇಲೆ ನುಡಿಯಹತ್ತಿದನು. ಮಗನಿಗೆ ವೃದ್ಧನ ಸಂಕೇತವು ತಿಳಿಯಿತು. ಆದರೆ ಆಗ ಯಾವ ಪ್ರಕಾರದಿಂದಲೂ ಪ್ರತ್ಯುತ್ತರವನ್ನು ಕೊಡದೆ ತನ್ನ ಕೈಯೊಳಗಿನ ಕೆಲಸವನ್ನೇ ಮಾಡಹತ್ತಿದನು. ಅವನ ತಂಗಿಯು ತಾನು ಕುಳಿತುಕೊಂಡೇ ಅವನ ಸಂಗಡ ಮಾತನಾಡಲಾರಂಭಿಸಿದಳು. ಈ ಪ್ರಕಾರ ಮಗನು ಪ್ರತ್ಯುತ್ತರವನ್ನೀಯದೆ ಕುಳಿತಿದ್ದರಿಂದ ತಾನು ಮಾಡಿದ ಸಂಕೇತವು ಮಗನಿಗೆ ತಿಳಿಯಲಿಲ್ಲವೆಂಬಂತೆ ಕಂಡುಬರುತ್ತದೆ ಆದ್ದರಿಂದ ಮತ್ತೊಂದುಸಾರೆಯಾದರೂ ತಿಳಿಸಿಹೇಳೋಣ ಎಂದು ಯೋಚಿಸಿ "ರಾಮನೆ ನಿನಗೆ ಎಲ್ಲಾ ಪ್ರಾಣಿಗಳು ಸಮಾನರೇ?” ಎಂಬ ವಾಕ್ಯವನ್ನು ಮೇಲಿಂದಮೇಲೆ ಅನ್ನ ಹತ್ತಿದನು. ಇದನ್ನು ಕೇಳಿಕೇಳಿ ಮಗನಿಗೆ ಬೇಸರಿಕೆಯು ಬಂತು. ತಾನು ಪ್ರತ್ಯುತ್ತರವನ್ನು ಕೊಡದೆಹೋದರೆ ಇವನು ಸುಮ್ಮನಾಗಲಾರನು ಎಂದು ತಿಳಿದು ಅಂದದ್ದೇನಂದರೆ, "ತಂದೆಯೇ, ಮೇಲಿಂದಮೇಲೆ ರಾಮ ರಾಮ ಎಂದು ಯಾಕೆ ಕೂಗಿಕೊಳ್ಳುತ್ತೀ; ರಾಮನು ಲಂಕೆಯನ್ನು ಸುಲಿಗೆ ಮಾಡಿ ಎಷ್ಟೋ ದಿವಸಗಳಾಗಿ ಹೋದವು ಈಗ ಅಲ್ಲಿ ಇರುವದಾದರೂ ಏನು?" ಎಂದು ನುಡಿದಕೂಡಲೇ ವೃದ್ಧನು ಸುಮ್ಮನೇ ಕುಳಿತುಕೊಂಡನು. ಅವನು