IX ಚಕ್ರವ್ಯೂಹದ ಪುರುಷಾಮೃಗ.
ಅಂತೂ ಇಂತೂ ಹಡಗು ಶತಪುರವನ್ನು ಮುಟ್ಟಿತು. ಎಲ್ಲರು ಹಡಗಿನಿಂದ ಇಳಿದರು, ಆ ರಾಜದೂತನು ಈ ಬಂದಿಯವರೆಲ್ಲರನ್ನು ಅರಮನೆಗೆ ಕರೆದುಕೊಂಡು ಹೋದನು. ಆಗ ಶತಬಲಿ ರಾಜನು ಹಾಲುಗಲ್ಲಿನ ಅರಮನೆಯಲ್ಲಿ ಕುಂದಣದ ಸಿಂಹಾಸನದ ಮೇಲೆ ಕುಳಿತಿದ್ದನು.
ಬಂದಿಯವರನ್ನು ಕಾಣುತ್ತಲೇ ಶತಬಲಿಯು "ಇವರನ್ನು ಸೆರೆಮನೆಗೆ ತೆಗೆದುಕೊಂಡು ಹೋಗಿ, ದಿನಕ್ಕೆ ಒಬ್ಬೊಬ್ಬನನ್ನು ಪುರುಷಾಮೃಗದ ಕೋಟೆಯೊಳಕ್ಕೆ ತಳ್ಳಿಬಿಡಿರಿ !” ಎಂದು ಆಳುಗಳಿಗೆ ಆಜ್ಞಾಪಿಸಿದನು.
ಕೂಡಲೆ ಅಜಿತನು "ಶತಬಲಿರಾಜನೆ, ಒಂದೇ ಒಂದು ವರವನ್ನು ನನಗೆ ಕರುಣಿಸು ! ನನ್ನನ್ನೇ ಮೊದಲು ತಳ್ಳಿಬಿಡಲಿ ! ಅದಕ್ಕಾಗಿಯೆ ನಾನು ಇಲ್ಲಿ ತನಕ ಬಂದುದು !” ಎಂದು ಕೂಗಿದನು.
ಆಗ ರಾಜನು ಆಶ್ಚರ್ಯದಿಂದ, "ಯುವಕನೆ, ನೀನು ಯಾರು ? ನಿನಗಿಷ್ಟು ಆತುರವೇಕೆ ?” ಎಂದು ಕೇಳಿದನು.
ಅದಕ್ಕೆ ಅಜಿತನು “ನಾನೇ ? ನೀನು ಯಾರನ್ನು ಅತಿ ಹೆಚ್ಚಾಗಿ ದ್ವೇಷಿಸುತ್ತಿರುವೆಯೊ ಆ ತಾರಾಪತಿಯ ಮಗ ! ಅವನು ಕಪ್ಪ ಕೊಡುವ ಪದ್ಧತಿಯನ್ನು ಮುರಿಯಬೇಕೆಂದು ಬಂದವನು ನಾನು" ಎಂದು ಗಂಭೀರವಾಗಿ ನುಡಿದನು.
ಈ ಮಾತುಗಳನ್ನು ಕೇಳಿದ ಶತಬಲಿಯು ಅಜಿತನ ಮುಖವನ್ನೇ ಎವೆಯಿಕ್ಕದೆ ದೃಷ್ಟಿಸಿ, “ಈತನು ತನ್ನ ತಂದೆಯ ಪಾತಕಕ್ಕೆ ತಕ್ಕ ಪರಿ