ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮೀಗಿಂದೀಗಲೆ ಕುದುರೆಡವಿಗೆ ಹೊಂಟು ಬಂದು ನನ್ನ ಮಕ್ಕಳ ಕಣ್ಣೀರೊರೆಸಬೇಕವ್ವಾ.. ಧಯರ ತುಂಬಬೇಕವ್ವಾ ಯಂದು ಹೇಳುತ ಹಂಗೆss ಕರಗಿ ಗಪ್ಪಂತ ಮಾಯವಾಗಿಬಿಟ್ಟಿತು.. ಯದ್ದು ಯಚ್ಚರಾಗಿ ಜಗಲೂರೆವ್ವ ಸುತ್ತಮುತ್ತ ನೋಡುತ್ತಾಳೆ.. ಅದಾದೂ ಯಿಲ್ಲ... ಅರಮನೇನೇ ಮುದುಕಿ ರೂಪಧಾರಣ ಮಾಡಿ ತನ್ನಷ್ಟು ಕೇಳಿಕೊಂಡಿರುವಳೆಂದ ಮ್ಯಾಲ ತಾನು ತನ್ನ ಸ್ವಾರಕ್ಕಾಗಿ ಬಡೇಲಡುಕಿಗೆ ಹೋಗುವುದು ಥರವಲ್ಲ... ಬಡೇಲಡಕೊಳಗಿರುವ ಅಂಜಿಣೆಪ್ಪನ ಅಂಗಯ್ಯ ಅಂಜಣ ದರುಪಣದೊಳಗ ಕಾಣುವ ತನ್ನ ಗಂಡನ ಮುಖವನ್ನು ನೋಡಿ ಯೇನು ಮಾಡೋದಯ್ದೆ ಯಂದು ಭಾವಿಸಿದ ತಾನು ಚೆನ್ನವ್ವ, ಧರಮದೇವತೆಯನ್ನು ಯಡ ಬಲಕ ಯೆಟುಕೊಂಡು ವಂದೊಂದು ಫರಲಾಂಗಿಗೆ ವಂದೊಂದು ಹೆಜ್ಜೆಯನಿಕ್ಕುತ... ಅಂತೂ ವಂದೇ ಮಾತಿಗೆ ಬಂದಳಲ್ಲ.. ಧರುಮದ ಕಾವಲುಗಿತ್ತಿ ಅನಾಥ ರಕ್ಷಕಿ.. ತಾನಿನ್ನು ನಿಶ್ಚಿಂತೆಯಿಂದರಬೌದು ಯಂದು ಭಾವಿಸಿದ ಅರಮನೆಯು ನೆಮ್ಮದಿಯ ವುಸುರು ಬಿಡುತ ತನ್ನ ಮಯ್ಯ ಮ್ಯಾಲಿದ್ದ ನೂರೆಂಟು ಕಿಟಕಿ, ಕಿಂಡಿ, ಜಾಲಂದರ, ಡಬಾಕಲಿ, ಗಬಾಕಲಿ, ಆ ಬಾಗಿಲು, ಯೇ ಬಾಗಿಲು ಸಹಿತ ಹೆಬ್ಬಾಗಿಲನ್ನು ತೆರೆದು ಸ್ವಾಗತ ಪಲುಕಿತು. ಅದು ತನ್ನ ತವರುಮನೆಯಂಬಂತೆ ವಳ ಹೋದಳು. “ಪಾಡದಿರೇನವ್ವಾ” ಅಂತ ರಾಜಪರಿವಾರದ ಹೆಣ್ಣು ಮಂದಿಯ ಕ್ಷೇಮಲಾಭ ಯಿಚಾರಿಸಿದಳು. ಪಲ್ಲಂಗದ ಮ್ಯಾಲ ವುಸುರು ಬಿಡುತ ಕೂಕಂಡಿದ್ದ ರಾಜಮಾತೆಯ ಸನೀಕ ಹೋಗಿ “ಭೇ, ಯವ್ವಾ.. ನೀನೇ ಹಿಂಗ ಯದೆ ಹೊಡಕೊಂಡು ಕೂಕಂಡಿದ್ದರೆಂಗಭೇ? ಯಿಲ್ಲೊಬ್ಬ ಗಂಡ ದೂರ ಆಗಿದ್ರೂಹೆಂಗ ಕಲ್ಲುಗುಂಡಿದ್ದಂಗದೀನಿ ನೋಡು? ರಾಜಮಾತೆಯಾಗಿ ನೀನ್ಯಾಕೆ ಅಳೋಗಿಯವ್ವಾ... ಧಯರ ತಂದುಕೊಂಡು ಬಂದ ಯದುರಿಸಬೇಕಛೇ.. ನೀನ್ನವ್ವನ. ಅದಿಲ್ಲಿ ಯಲ್ಲಮ್ಮೆ ನಿನ್ನೆಲಡಕಿ ಚೀಲ” ಅಂತಂದು ಆಕಿ ಮಗ್ಗುಲಿದ್ದ ತೊಂಬಲದ ಸಂಚೀನ ತಗಂಡು ಎಂದು ಹಿಡಿ ಅಡಕೇನ ಬಾಯೊಳಗೆಸೆದುಕೊಂಡು ಕಡದು ಕಟುಂಕಟುಂ ಯಂದು ಸಬುಧ ಮಾಡಲದು ರಣದುಂದುಭಿ ಬಾರಿಸಿದಂತೆ ಕೇಳಿಸಿತು. ಯೇಳೆಂಟು ಯಲೆಗೆ ಸುಣ್ಣ ಹಚ್ಚಿಕೊಂಡು ಆಕೆ ತನ್ನ ಬಾಯೊಳಗಿರಿಸಿಕೊಂಡಿದ್ದೂ ತಡ ಆಗಲಿಲ್ಲ... ಎಂದು ಸಿವುಡು ತಂಬಾಕನ್ನು ನೀವಳಿಸಿ ಬಾಯೊಳಗೆ ತುಂಬಿಕೊಂಡು ನಮಲಿದ್ದು ತಡ ಆಗಲಿಲ್ಲ... ಬಾಯಿ ವಟ್ಟರಿಸಿದ ಚರಕಲಿಗಾತುರದಷ್ಟು ರಸವನ್ನು ಅಲ್ಲೇಯಿದ್ದ ಅಯ್ತಿಹಾಸಿಕ ಪಿಕದಾನಿಯೊಳಗೆ ವುಗುಳಿ ತುಂಬಿದ್ದು ತಡ ಆಗಲಿಲ್ಲ.