ಈ ಪುಟವನ್ನು ಪ್ರಕಟಿಸಲಾಗಿದೆ

50

ಇಪ್ಪತ್ತೆಂಟನೆಯ ಸಾರಿ ಭೋಜಮಹಾರಾಜನು ವಿಕ್ರಮಪೀಠದ ಸಮೀಪಕ್ಕೆ ಬರಲು, ಪೀಠದ ಮೇಲಿನ ಆ ಸಂಖ್ಯೆಯ ಪ್ರತಿಮೆಯು ಹೀಗೆಂದಿತು:-

"ಒಂದು ಸಲ ವಿಕ್ರಮಭೂಮಿಪನು ದೇಶಸಂಚಾರಮಾಡುತಿರಲು, ಒಂದೂರಿನಲ್ಲಿ ನಾಲ್ವರು ವಿದೇಶಿಗಳನ್ನು ಕಂಡನು. ಅವರನ್ನಾತನು ವಿಶೇಷವೇನೆಂದು ಕೇಳಲಾಗಿ, ಅವರೀರೀತಿ ವಿವರಿಸಿದರು: "ಅಯ್ಯಾ, ಇಲ್ಲಿಗೆ ಸ್ವಲ್ಪ ದೂರದಲ್ಲಿ ಭೇತಾಳಪುರಿಯೆಂಬ ಪಟ್ಟಣವುಂಟು. ಅಲ್ಲಿನ ಗ್ರಾಮದೇವತೆಯಾದ ಚಂಡೀದೇವಿಗೆ ಆವೂರಿನವರು ವರ್ಷಕ್ಕೊಂದು ಬಾರಿ ಜಾತ್ರೆ ನಡೆಯಿಸಿ, ಆ ಜಾತ್ರೆಯ ದಿನ ನರಬಲಿಯನ್ನರ್ಪಿಸುವರು. ಆ ಬಲಿಗಾಗಿ, ಆವೇಳೆಗೆ ಅಲ್ಲಿಗೆ ಬಂದಿರುವ ಪರದೇಶೀಯರನ್ನೇ ಅವರು ಹಿಡಿಯುವರು. ನಿನ್ನೆ ಅಲ್ಲಿ ನಾವುಗಳು ಈ ವರ್ತಮಾನವನ್ನು ಕೇಳಿ, ಭಯಭ್ರಾಂತರಾಗಿ, ಪ್ರಾಣವನ್ನುಳಿಸಿಕೊಳ್ಳುವ ನಿಮಿತ್ತ ಇಲ್ಲಿಗೆ ಓಡಿಬಂದಿರುವೆವು." ಈ ಸುದ್ದಿಯನ್ನು ಕೇಳಿದೊಡನೆಯೆ ವಿಕ್ರಮಾದಿತ್ಯನು ಭೇತಾಳಪುರಿಗೆ ಪಯಣವಾಡಿ, ಚಂಡಿಕಾಲಯಕ್ಕೆ ಹೋಗಿ ಅಲ್ಲಿನವರು ಬಲಿಕೊಡುವುದಕ್ಕೆ ತಂದಿದ್ದ ಕೃಶನಾದ ಮನುಷ್ಯರನ್ನು ಬಿಡಿಸಿ, ಪುಪ್ಪಾಂಗನಾದ ತಾನೇ ದೇವತೆಗೆ ಆಹುತಿಯಾಗಿರಲು ಒಪ್ಪಿಕ್ಕೊಂಡನು. ಆತನು ಬಲಿಕೊಡುವ ಹೊತ್ತಿಗೆ ಪಶುಸ್ಥಾನದಲ್ಲಿ ನಿಂತು ಶಿರಚ್ಛೇದನಕ್ಕಾಗಿ ಕತ್ತಿಯನ್ನೆತ್ತಲು, ದೇವತೆಯು ಪ್ರತ್ಯಕ್ಷಳಾಗಿ ಆತನ ಭೂತದಯೆಯನ್ನೂ, ಪರೋಪಕಾರ ಬುದ್ಧಿಯನ್ನೂ ಕೊಂಡಾಡಿ, ವಿಕ್ರಮನನ್ನು ಹರಸಿದಳು. ಅಲ್ಲಿಂದ ಮುಂದಕ್ಕೆ ನರಬಲಿಯನ್ನು ಮಾಡಿಸದಿರಬೇಕೆಂದು ಆತನು ಕೇಳಿಕೊಳ್ಳಲು, ಅದರಂತೆಯ ಒಪ್ಪಿ, ಆ ಊರಿನವರಲ್ಲಿ ಅನುಗ್ರಹಿಸಿದಳು.”