ಈ ಪುಟವನ್ನು ಪ್ರಕಟಿಸಲಾಗಿದೆ

57

ದೇವಿಯು "ಹಾಗೆಯೇ ಆಗಲಿ” ಎಂದು ಅಂತರ್ಧಾನವಾದಳು.

ಕಾಪಾಲಿಕನು ಸಂತುಷ್ಟಚಿತ್ತನಾಗಿ ವಿಕ್ರಮನನ್ನು ಹೊಗಳುತ್ತಾ ನಡೆದನು. ವಿಕ್ರಮನು ಭೇತಾಳನ ಸ್ನೇಹವನ್ನು ಸಂಪಾದಿಸಿ ನಗರಕ್ಕೆ ತೆರಳಿದನು. ಇಂತಹ ಶೌರ್ಯದಾರ್ಯಗಳು ಭೋಜರಾಜನಲ್ಲಿರುವುವೆ?"

ಭೋಜನು ನಸುನಗುತ ಹಿಂದಕ್ಕೆ ತೆರಳಿದನು.

*** ಇನ್ನೊಂದುಸಲ -ಇದು ಮೂವತ್ತೆರಡನೆಯ ಸಲ-

ಭೋಜನು ವಿಕ್ರಮನ ಭದ್ರಾಸನದ ಬಳಿ ಬರಲು, ಕಡೆಯ ಸಾಲಭಂತಿಕೆಯು ಹೀಗೆ ನುಡಿಯಿತು:-

"ಎಲೈ ರಾಜನೆ, ನೀನು ಪುನಃ ಪುನ: ಈ ಸಿಂಹಾಸನವನ್ನು ಆರೋಹಿಸಲು ಏಕೆ ಬಯಸುವಿ? ವಿಕ್ರಮಾದಿತ್ಯನಲ್ಲಿದ್ದ ಶೌರ್ಯ, ಔದಾರ್ಯ, ಧೈರ್ಯ, ದಯೆ, ಕ್ಷಮೆ, ಭಕ್ತಿ, ಜ್ಞಾನ, ವೈರಾಗ್ಯ, ತೇಜಸ್ಸು, ಓಜಸ್ಸು, ಬಲ ಇವೇ ಮುಂತಾದ ಸದ್ಗುಣಗಳು ಇತರರಲ್ಲಿ ಇಲ್ಲವು. ನಾವಾದರೋ ದೇವಕನ್ಯೆಯರ ಹಿಂದೆ ನಾವು ಒಂದುವನದಲ್ಲಿ ವಿನೋದರಲ್ಲಿರಲು, ಅಲ್ಲಿಂದ ಹೋಗುತ್ತಿದ್ದ ಪರಮೇಶ್ವರನು ನನ್ನನ್ನು ಕಂಡು ನಮ್ಮಲ್ಲಿ ಅನುರಾಗವನ್ನು ತೋರಿದನು. ಪಾರ್ವತಿಯು ಅದನ್ನರಿತು, ತಮ್ಮಲ್ಲಿ ಅಸೂಯೆಪಟ್ಟು, “ ನೀವು ಇಂದ್ರಸಿಂಹಾಸನದ ಮೇಲಿನ ಪ್ರತಿಮೆಗಳಾಗಿರಿ" ಎಂದು ಶಪಿಸಿದಳು. ಆಗ ನಾವು ಆಕೆಯಲ್ಲಿ ಹೋಗಿ ಮೊರೆಯಿಡಲು, ಆಕೆಯು "ಕೆಲವುಕಾಲದ ಮೇಲೆ ಆ ಸಿಂಹಾಸನವು ಇಂದ್ರನಿಂದ ವಿಕ್ರಮಾದಿತ್ಯನಿಗೆ ಕೊಡಲ್ಪಡುವುದು. ಆರಾಜಶ್ರೇಷ್ಠನು ಸ್ವರ್ಗಸ್ಥನಾದ ಕೆಲವು ಕಾಲದಮೇಲೆ ಮತ್ತೊಬ್ಬ ರಾಜೋತ್ತಮನು ಆ ಪೀಠವನ್ನು ಹತ್ತಲು ಪ್ರಯತ್ನಿಸುವನು.