ಈ ಪುಟವನ್ನು ಪರಿಶೀಲಿಸಲಾಗಿದೆ

೧೩೬

ಜನಪದ ಕಥೆಗಳು

ಮುಂದಿನ ಪೇಟೆಯಲ್ಲಿ ಗೊಂಬೆಗಳ ಅಂಗಡಿಯಿತ್ತು. ಅಲ್ಲಿ ಸತ್ತವರನ್ನು ಬದುಕಿಸುವ ಗೊಂಬೆಗಳಿದ್ದವು. ಅವುಗಳನ್ನು ಸಣ್ಣವನು ಕೊಂಡುಕೊಂಡನು.


ಅಷ್ಟಾಗುವುದಕ್ಕೆ ಊಟದ ಹೊತ್ತಾಗಿತ್ತು. ಮೂವರೂ ಹಸಿದಿದ್ದರು. ಅಕ್ಕ ಕಟ್ಟಿದ ಬುತ್ತಿಯಂತೂ ಇತ್ತು ಅದನ್ನು ತೆಗೆದುಕೊಂಡು ಊರಹೊರಗೆ ಹಳ್ಳದ ಕಡೆಗೆ ಊಟಕ್ಕೆಂದು ನಡೆದರು. ಹಳ್ಳದಲ್ಲಿ ಕೈಕಾಲು ತೊಳೆದುಕೊಂಡು ಬಂದು ಬುತ್ತಿ ಬಿಚ್ಚಿದರು. ಇನ್ನೇನು, ಊಟಕ್ಕೆ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ, ತಮ್ಮೂರ ಕಡೆಯ ಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಕನ್ನಡಿಯಲ್ಲಿ ನೋಡಿದರು. ದುರ್ದೈವ ಎದುರಿಗೇ ಬಂದಂತಾಯ್ತು ತಾವು ಮದುವೆಯಾಗಬೇಕೆಂದಿರುವ ಕನ್ನೆ ತೀರಿಕೊಂಡಿತ್ತು. ಗೋರಿಮರಡಿಗೆ ಒಯ್ಯುವ ಸಿದ್ಧತೆ ನಡೆದಿತ್ತು. ಬಿಚ್ಚಿದ ಬುತ್ತಿ ಕಟ್ಟಿದರು. ಇನ್ನೆಲ್ಲಿಯ ಊಟವೆಂದು ಕೂಡಲೇ ತೊಟ್ಟಿಲಲ್ಲಿ ಕುಳಿತರು. ಹಾಂ ಅನ್ನುವಷ್ಟರಲ್ಲಿ ಊರಿಗೆ ಬಂದು ತಲುಪಿದರು. ಸಣ್ಣ ತಮ್ಮನು ತನ್ನ ಬಳಿಯಲ್ಲಿರುವ ಗೊಂಬೆಯಿಂದ ಸತ್ತವಳನ್ನು ಎಬ್ಬಿಸಿದನು.

ಇನ್ನು ಹೇಳಿರಿ — ಅಕ್ಕನು ಯಾರಿಗೆ ಕೊಡಬೇಕು. ತನ್ನ ಮಗಳನ್ನು ?

 •