ಈ ಪುಟವನ್ನು ಪ್ರಕಟಿಸಲಾಗಿದೆ

ಗರಡಿಯ ಗೆಳೆಯರು

ಒಂದೂರಲ್ಲಿ ಕಲ್ಲಣ್ಣ ಮಲ್ಲಣ್ಣ ಎಂಬ ಇಬ್ಬರು ಗರಡಿಯಾಳುಗಳು, ಸಮವಯಸ್ಕರು, ಸಮಾನಶೀಲರು ಆಗಿದ್ದರು. ಅವರ ಸ್ನೇಹವೇ ಸ್ನೇಹ, ಹಾಲು ಸಕ್ಕರೆ ಬೆರೆದಂತೆ. ದಿನಾಲು ಗರಡಿ ಮನೆಯಲ್ಲಿ ಕೂಡಿಯೇ ಸಾಮು- ಬೈಠಕುಗಳಿಲ್ಲದೆ ಲೋಡು ತಿರುವುಹುದು, ಮಲ್ಲಕಂಬ ಆಡುವುದು ಮೊದಲಾದ ಶಾರೀರಕ ಶಿಸ್ತುಗಲ್ಲಿ ನಿಪುಣರಾಗಿದ್ದರು. ಕ್ರಮವರಿತು ಕತ್ತಿಢಾಲುಗಳನ್ನು ಉಪಯೋಗಿಸುವ ಕಲೆಯನ್ನು ಸಾಧಿಸಿದವರು, ಈ ಊರಿನಲ್ಲಿ ಅವರಿಬ್ಬರೇ ಆಗಿದ್ದರು. ಇಂದು ಅನ್ಯೋನ್ಯವಾಗಿ ಅವರು ತಪ್ಪದೆ ಒಂದೆಡೆಯಲ್ಲಿಯೇ ಇರುತ್ತಿದ್ದರೂ ಕಲ್ಲಣ್ಣನ ಮನೆ ಯಾವ ಓಣಿಯಲ್ಲಿದೆ ಏನ್ನುವುದು ಮಲ್ಲಣ್ಣನಿಗೆ ತಿಳಿಯದು. ಮಲ್ಲಣ್ಣನ ಮನೆಯೆಲ್ಲಿ ಎನ್ನುವುದು ಕಲ್ಲಣ್ಣನಿಗೆ ತಿಳಿಯದು. ಕಲ್ಲ — ಮಲ್ಲ ಹೆಸರಿಗೆ ಒಪ್ಪುವಂತೆ ಅವರಿದ್ದರು.

ಹನುಮಂತದೇವರು ಗುಡಿಯ ಮಗ್ಗುಲಲ್ಲಿರುವ ಗರಡಿಮನೆಯಲ್ಲಿ ಅವರಿಬ್ಬ್ರರು ಸಾಧನೆಮಾಡುತ್ತಿರುವಾಗ, ಕಲ್ಲಣ್ಣನು ಕೊಡಹೊತ್ತು ಸಾಗಿದ ಒಬ್ಬ ತರುಣೆಯನ್ನು ಕಂಡನು. ಆಕೆಯನ್ನು ಕಂಡು ಆತ್ತನಿಗೆ ಬವಳಿಕೆಯೇ ಬಂತು. ಕಣ್ಣು ಕುಕ್ಕಿ ಹೋದವು. ಮನಸ್ಸು ಕಕ್ಕಾವಿಕ್ಕಿ ಆಯಿತು. ಮಲ್ಲಣ್ಣನನ್ನು ಹತ್ತಿರ ಕರೆದು ಕೇಳಿದನು -"ಆ ಚೆಲುವೆಯಾರು? ಆಕೆ ಒಂದು ರಾತ್ರಿಮಟ್ಟಿಗಾದರೂ ನನ್ನವಳಾಗುವಂತೆ ಮಾಡಿ ಈ ಮಿತ್ರನನ್ನು ಬದುಕಿಸು."

ಆ ಮಾತು ಕೇಳಿ ಮಲ್ಲಣ್ಣನಿಗೆ ದಿಕ್ಕೀ ತೋಚದಂತಾಯಿತು. ಅಲ್ಲಿ ಹಾದು ಹೋದ ಚೆಲುವೆ ಆತನ ಹೆಂಡತಿಯೇ ಆಗಿದ್ದಳು. ಅದನ್ನು ಹೇಳಿಬಿಟ್ಟರೆ ತಮ್ಮ ಗೆಳೆತನಕ್ಕೇನಾದರೂ ಭಂಗವುಂಟಾದೀತೆಂದು ಭಾವಿಸಿ-"ಆಕೆ ಈ ಊರಿನ ಸೂಳೆ" ಎಂದು ಗಟ್ಟಿ ಜೀವಮಾಡಿ, ದೃಢಮನದಿಂದ ನುಡಿದನು. ಅದೇ ಯೋಚನೆಯಲ್ಲಿಯೇ ಮನೆಗೆ ಬಂದನು ಮಲ್ಲಣ್ಣ.

ಮೆಲ್ಲನೆ ಹೆಂಡತಿಯ ಬಳಿಗೆ ಹೋಗಿ ಆಕೆಯನ್ನು ಒಲಿಸಲು ಯತ್ನಿಸಿದ್ದು ಹೇಗೆಂದರೆ — "ರಾಣೀ, ನನ್ನ ಗೆಳೆಯನೊಬ್ಬ ನಿನ್ನ ಚೆಲುವಿಕೆಗೆ ಮಾರುವೋಗಿದ್ದಾನೆ. ಅವನನ್ನು ತಿರಸ್ಕರಿಸಬೀಡ. ನನ್ನ ಮಾತು ನಡೆಸಿಕೊಡು".