ಈ ಪುಟವನ್ನು ಪ್ರಕಟಿಸಲಾಗಿದೆ

- 13 -

ಹರಿದ್ರವಾಗಿರಲಿಲ್ಲ; ಹೊಂಗೇದಗೆಯಂತೆ ಹಳದಿಯಾಗಿರಲಿಲ್ಲ. ಹಿಮದಿಂದ ಆರ್ದ್ರವಾದ ಸುವರ್ಣಕಮಲವು ಹರಿತಪತ್ರದ ಛಾಯೆಯಿಂದ ಯಾವ ಕಾಂತಿಯನ್ನು ಧರಿಸುವುದೋ, ಚಂದ್ರಕಾಂತಿಯಿಂದ ನನೆದ ಹೊಂಗೇದಗೆಯು ಹಸುರೆಲೆಯ ಮರೆಯಲ್ಲಿ ಯಾವ ಬಣ್ಣದಿಂದ ಶೋಭಿಸುವುದೋ, ಆ ಕಾಂತಿಯೂ ಆ ವರ್ಣವೂ ಈ ಯುವತಿಯ ಪ್ರಫುಲ್ಲಿತ ದೇಹದಲ್ಲಿ ಸಮ್ಮಿಳಿತವಾಗಿದ್ದುವು.

ರಮಣಿಯರಿಬ್ಬರು ದೇವಸ್ಥಾನವನ್ನು ಪ್ರವೇಶಿಸಿದರು, ಕಾಳಿಕಾ ಮೂರ್ತಿಯ ಸಮ್ಮುಖದಲ್ಲಿ ಬದ್ಧಹಸ್ತದಿಂದ ಇಬ್ಬರೂ ಕಣ್ಮುಚ್ಚಿ ನಿಮಿಷ ಮಾತ್ರ ನಿಂತರು. ಬಳಿಕ ಕರಾಳವಾದ ಚಂಡಿಕಾ ವಿಗ್ರಹವನ್ನು ಬಲವಂದು ದೇವಿಯ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿದರು. ಪುನಃ ಎದ್ದು ನಿಂತು “ತಾಯೇ! ಚಂಡಿಕೇ! ನಮಗೆ ಬಂದಿದ್ದ ಆಪತ್ತನ್ನು ಪರಿಹರಿಸು! ಯುದ್ಧದಲ್ಲಿ ನಮ್ಮ ಪತಿಗಳಿಗೆ ಸಹಾಯಕಳಾಗು! ಅವರ ಹಸ್ತದಿಂದಲೇ ನಮ್ಮ ವೈರಿಗಳನ್ನು ಸಂಹರಿಸು!” ಎಂದು ಪ್ರಾರ್ಥಿಸಿದರು. ಪುನಃ ದೇವಗಿರಿ ದುರ್ಗದ ಅಧಿಷ್ಟಾತ್ರಿಯಾದ ದುರ್ಗಾಂಬಿಕೆಯನ್ನು ಪ್ರದಕ್ಷಿಣೆ ಮಾಡಿ, ಇಬ್ಬರೂ ಪಲ್ಲಕ್ಕಿಯನ್ನು ಹತ್ತು ವಷ್ಟರಲ್ಲಿ ಕುದುರೆಯ ಖುರಪುಟ ಧ್ವನಿಯು ಕೇಳಿಸಿದುದರಿಂದ, ಇಬ್ಬರೂ ಸ್ವಲ್ಪ ಸಂಭ್ರಾಂತರಾದಂತೆ ಅಲ್ಲಿಯೇ ತಡೆದರು. ಕೂಡಲೇ ಒಬ್ಬ ಆಶ್ವಾರೋಹಿಯು ಕುದುರೆಯಿಂದ ದುಮಿಕಿ, ಯುವತಿಯರ ಸವಿಾಪಕ್ಕೆ ಬರುತ್ತಿದ್ದನು. ಯುವತಿಯರು ಇವನನ್ನು ದೃಷ್ಟಿಸುತ್ತಲೇ ಆನಂದದಿಂದಲೂ ಆಶ್ಚರ್ಯದಿಂದಲೂ ಚಕಿತರಾಗಿಹೋದರು.

ಯುವಕ- “ವೀರಮತಿ! ನೀನು ಗೌರಿಯೊಡನೆ ಇಲ್ಲಿ ಏಕೆ ಬಂದಿ?”

ವೀರಮತಿಯು ಯುವಕನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, “ನಾವು ಇಲ್ಲಿ ಬಂದೆವೆಂದು ನಿನಗೆ ಹೇಗೆ ತಾನೇ ತಿಳಿಯಿತು?” ಎಂದು ಪ್ರಶ್ನಿಸಿದಳು.

ಯುವಕ:-"ರಾಜಮಂದಿರದಲ್ಲಿ ನೀವು ಇಲ್ಲದೆ ಇದ್ದುದನ್ನು ನೋಡಿ, ನಾನು ಕಾತರದಿಂದ ನಿಮ್ಮನ್ನು ಹುಡುಕಿ ಬಂದನು. ಕೋಟೆಯ ಪಹರೇಯವರು ನೀವು ಕಾಳಿಕಾ ಪೂಜೆಗೆ ಹೋಗಿರುವಿರಿ ಎಂದು ಹೇಳಿದನು. ನೀವು ಇಲ್ಲಿ ಏಕೆ ಬಂದಿರಿ?"