ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಕಿಟ್ಟಣ್ಣ ಅವಳೊಡನೆ ಹಾಡಲು ಹೇಳಿದ ನಾನೂ ಅವನ ಮನೋಭಾವನರಿತು 'ಹೇಳಮ್ಮಾ ಪಾರೂ' ಎಂದೆ. ನನ್ನ ಮಾತು ಮೀರುವಂತಿಲ್ಲ. 'ನನಗೆ ಆರತಿ ಎತ್ತೋ ಹಾಡು ಬರೋದಿಲ್ಲ-ಬೇರೆ ಹೇಳಲೇ?' ಎಂದಳು. ನಾನು ಬೇಡವೆನ್ನುವೆನೋ ಎಂದು ಕಿಟ್ಟಣ್ಣ 'ಪರವಾ ಇಲ್ಲ- ಏನಾದರೊಂದು ಹೇಳಿಬಿಡು' ಎಂದ. ನಾನೂ ಹೂಂ-ಹೇಳು ' ಎಂದೆ.

ಅವಳು ಹೇಳತೊಡಗಿದಳು:-

'ಪರಮಾತ್ಮಾ ಹರೇ-ಪಾವನನಾಮಾ......'

ನಾವು ಆ ಕೀರ್ತನೆಯನ್ನು ಎಷ್ಟು ಸಾರಿ ಕೇಳಲಿಲ್ಲ ! ಅದೂ ಹೆಸರಾದ ಸಂಗೀತಗಾರರ ಕೊರಳಿನಿಂದ !! ಅವರ ವಿದ್ವುತ್ತೂ ಶಬ್ದ ಚಮತ್ಕಾರವೂ ಪಾರುವಿನ ಕೊರಳಿಗಿರಲಿಲ್ಲ; ಹೌದು. ಆದರೆ ಆ ಸ್ವರ, ಆ ಮಾಧುರ್ಯ, ಹೃದಯವನ್ನು ಕದಡಿಬಿಡುವ ಆ ಶಕ್ತಿ ಅದೆಲ್ಲಾ ನಾವು ನೂರಾರು ಸಾರಿ ಕೇಳಿ ಹಳೆಯದು ಎಂದು ಬಿಟ್ಟಿದ್ದ ಆ ಕೀರ್ತನೆಯಲ್ಲಿ ತುಂಬಿ ಹರಿಸಿದ್ದಳು ಪಾರು. ಪರಮಾತ್ಮಾ ಹರೇ-ಪಾವನ ನಾಮಾ...

ನಮ್ಮ ಮೆಚ್ಚಿಗೆಯ ಅರಿವಿಲ್ಲದೆಯೇ ಅವಳು ಹಾಡುತ್ತಿದ್ದಳು. ಯಾವಾಗಲೂ ನೆಲವನ್ನು ನೋಡುವ ಅವಳ ನೋಟವು ಅವಳ ಪರಿವೆಯಿಲ್ಲದೆಯೇ ಪರಮಾತ್ಮನನ್ನು ನೋಡುತ್ತಿದೆಯೋ ಏನೋ ಎಂಬಂತೆ ಆಕಾಶದ ಕಡೆ ನೋಡುತ್ತಿತ್ತು. ಅವಳನ್ನು ಕುರೂಪಿ ಎಂದು ಹೇಳಿದೆನಲ್ಲ ! ಎಂತಹ ಹುಚ್ಚು ನನಗೆ ! ಅವಳ ಆ ಸೌಂದರ್ಯದಿಂದ ತುಂಬಿದ ಹೃದಯದ ಕನ್ನಡಿಗಳಂತಿದ್ದ ಆ ಎರಡು ಕಣ್ಣುಗಳೇ ಸಾಲವೆ? ಆ ಸರ್ವಸಾಮಾನ್ಯ ಮುಖಕ್ಕೆ ಸ್ವರ್ಗೀಯ ಸೌಂದರ್ಯವನ್ನು ಕೊಟ್ಟಿದ್ದ ಆ ಕಣ್ಣುಗಳನ್ನು ನೋಡದೆ ಅವಳು ಕುರೂಪಿ ಎಂದಂದುಕೊಂಡಿದ್ದೆನಲ್ಲ- ಎಂತಹ ಅಕ್ಷಮ್ಯ ಮಢತನ ! ಬಿಳಿ ಚರ್ಮ, ಉದ್ದವಾದ ಕೇಶರಾಶಿ, ಎಳಸು ಮೂಗು, ಚಂದುಟಿಗಳು-ಇವೆಲ್ಲಾ ಇದ್ದರೇನೇ ಸೌಂದರ್ಯವೆಂದಿದ್ದ ನನ್ನ ಭಾವನೆ ಕ್ಷಣಮಾತ್ರದಲ್ಲಿ ಬದಲಾಯ್ತು. ಸುಂದರವಲ್ಲದ ರೂಪದ ಒಳಗೂ ಅತ್ಯಂತ ಸುಂದರವಾದ ಹೃದಯಗಳಿರುವವು