೯೩
೧೦. ಕನ್ನಡಿಗರ ತಾಯಿ
ತಾಯೆ ಬಾರ ಮೊಗವ ತೋರ, ಕನ್ನಡಿಗರ ಮಾತೆಯೆ !
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ !
ನಮ್ಮ ತಪ್ಪನೆನಿತೊ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣ್ ನಮ್ಮ ಬಾಳ್ವೆ,
ನಿನ್ನ ಕರೆಯಲಮ್ಮೆವು
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು.
ಹಣ್ಣನೀವ ಕಾಯನೀವ ಪರಿ ಪರಿಯ ಮರಂಗಳೊ,
ಪತ್ರಮಾವ ಪುಷ ಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿ ನಗರ ನಗಾಳಿಯೊ !
ಇಲ್ಲಿಲ್ಲದುದುಳಿದುದೆ ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ ?
ಬುಗರಿಯಾಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನ ಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ ?
ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
ಕುರುಕುಲ ಮು೦ಗದನಮೆದ್ದ
ನಾಡು ನೋಡಿದಲ್ಲವೇ ?
ನಂದನಂದನನಿಲ್ಲಿ೦ದ ಸಂದಿಗಯ್ದನಲ್ಲವೇ ?
ಶಕವಿಜೇತನಮರ ಶಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ!
ಚಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದಲ್ಲಿ ತಾಯೇ ಮೆಣಲೂಪರು ?