ಈ ಪುಟವನ್ನು ಪ್ರಕಟಿಸಲಾಗಿದೆ

೧೨೩

ಕೃಷ್ಣನ ಕುಹಕವ ನೋಡಲ್ಲಿ !
ಏನನು ನೋಡುವೆ ? ತಡೆಯುವೆ ಏಕೆ ?
ಕೌರವರಾಯನು ಮಡಿಯಲೆ ಬೇಕೆ ?
  ಯುವಕನೆ ತುಡುಕು ಕಠಾರಿಯನು !
    ಹೊಡೆ ರಣಭೇರಿಯನು !
ನಡೆ, ನಡೆ, ಊದು ತುತ್ತೂರಿಯನು !
   ಕರೆ, ರಣಮಾರಿಯನು !

ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
   ಕಲಿ ಕೆಚ್ಚಾಗುವನು !
   ಕವಿ ಹುಚ್ಚಾಗುವನು !

ಕೆ. ವಿ. ಪುಟ್ಟಪ್ಪ

೩೦. ಕನ್ನಡನಾಡಿನ ಸ್ಥಿತಿಯನ್ನು ನೆನೆದು

ಹರಿದು ತುಂಡಾಗಿಹುದು ಇಂದು ಕನ್ನಡನಾಡು ;
ಅಣ್ಣ ತಮ್ಮದಿರು ತಾವಣ್ಣ ತಮ್ಮದಿರೆಂದು
ತಿಳಿಯಲಾರರು ನಡೆಯಲಾರರು; ಬಾ ಬಂಧು
ಎಂದು ಕರೆಯಲು, ಸ್ವಾಮಿ ನನ್ನೂರು ಧಾರ್ವಾಡ
ನನ್ನೂರು ಮೈಸೂರು, ನನ್ನೂರು ಎರಕಾಡು
ಮರ್ಯಾದೆಯಿಂದ ಕರೆಯಿರಿ ನನ್ನ ಎನ್ನುವರು,
ಕನ್ನಡದ ನಾಡ ಜನವೆಲ್ಲವೂ ನನ್ನವರು,
ಬಡಗ ತೆಂಕಣ ಮೂಡ ಕೊಡಗ ತೌಳವ ತೋಡ
ಇನ್ನೆಲ್ಲ ಕನ್ನಡಿಗರೆನ್ನವರು ಎನ್ನುಸಿರು,
ನಾವೆಲ್ಲ ಒಂದು ಮನೆಯವರಣ್ಣ ತಮ್ಮದಿರು,
ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು,
ಎಂದು ನಾವರಿದೆವೇ ನಮಗೆ ಇನ್ನಾರೆದುರು !
ಹಾ ನನ್ನ ಸೋದರರೆ ಬನ್ನಿ ಒಂದಾಗಿ ;
ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ.

ಶ್ರೀನಿವಾಸ

(ಮಾಸ್ತಿ ವೆಂಕಟೇಶ ಐಯಂಗಾರ್)