ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ಎನ್ನ ಜೀವನ ನಿನ್ನ ಸೊಗದಿನಾವರಿಸು
ಹಣ್ಣೆಲೆವೊಲೆನ್ನ ಹಳೆಗನಸುಗಳ ಹರಿಸು
ಚೆನ್ನ ಹೊಸಬಾಳ ಹೊಸ ರಸಗಳನೊಸರಿಸು
ಚೆನ್ನ ಹೊಸ ತಳಿರು ಸುಮಫಲಗಳನು ತರಿಸು.

ಅರಿಯದವರಾವು ಎಮ್ಮಯ ಮನದ ನೂರು
ವಿರಸತೆಯ ತೊಟ್ಟುಗಳ ಕಳಚಿ ಅವ ತೂರು
ಮರಣದಲಿ ಜೀವನದ ಮೊಳೆಯಿಹುದ ತೋರು
ಪರಮಾತ್ಮನುಂಟು ಸುಖದೊಳಮೆಂದು ಸಾರು.

ಮೆಲುಮೆಲನೆ ಪಸರಿಸುತ ತೆಂಕಣಿಂ ಬಾರ
ಪಲವಿಧದ ಸಿಂಗರವ ವನಗಳಿಗೆ ತಾರ
ನಲವಿನಂಕೆಯ ನಿತ್ಯತೆಯ ತೋರು ಧೀರ
ಚೆಲುವು ದೊರೆಯಾಳ್ವುದನು ಸಾರೈ ಸಮೀರ.

ಶ್ರೀನಿವಾಸ

(ಮಾಸ್ತಿ ವೆಂಕಟೇಶ ಐಯಂಗಾರ್)

೪೨. ಕಸ್ಮ್ಯೆ ದೇವಾಯ?


ಅಂದಿನಾ ದೇವರುಗಳೆಲ್ಲ ಮಡಿದುರುಳಿಹರು
ಇಂದ್ರ ವರುಣರು ಧನದ ಮಿತ್ರ ಪೂಷಣರು-
ಸಂದಿದ್ದ ದೈವತ್ವದಗ್ಗಳಿಕೆ ಹೋಗಿಹುದು
ಅಂದಿನವರುನ್ನತಿಯ ಕಳಶ ಕೂಲಿಹುದು

ಮಾನವರ ಸುಪ್ರಖರ ಮನದ ಮೊನೆಯಲುಗಿನ
ಘಾತದಲಿ ಕಡುನೊಂದು ಸೋಲನೊಸ್ಸಿವರು
ಧ್ಯಾನ ಪೂಜೆಗಳನ್ನು ತಮಗೆ ಸಲ್ಲವು ಎಂದು
ಮಾತಿನೊಪ್ಪಿಗೆಯಿತ್ತು ಶರಣು ಬೇಡಿದರು

ಅಚ್ಚರಿಯ ಮೋಹದಲಿ ಆಗಸವ ನೋಡುತ್ತೆ
ಉಚ್ಚ ಕಂಠದಿ ಹಾಡಿದಾ ಭಕ್ತರಳಿದಿಹರು
ನಯದಿಂದ ಭಯದಿ೦ದಲವರನೊಲಿಸುವ ಪಾಡು
ಭುವಿಯಿಂದ ಜನದಿಂದ ತೊಲಗಿ ಹೋಗಿಹುದು

ಸಾಗರನ ಸುರನೀಲ ನೀಲಿಮತೆಯನು ನೋಡಿ
ಭೋರ್ಗರೆಯುತುರ್ಕುಮಾರ್ಭಟೆಯ ಕೇಳಿ
ನಾಲ್ದೆಸೆಯೊಳೊಡಿರುವಪಾರ ಗಂಭೀರತೆಗೆ
ಬಾಗಿಗೈಯುವ ವರುಣ ಪೂಜೆ ಕಾಣಿಸದು