೧೪೧
ನಭದೆಡೆಗೆ ಮೊಗವೆತ್ತಿ ಪೂಪತ್ರವೆರಚುತ್ತೆ
ಕರುಣಿಸೈ ಪರ್ಜನ್ಯ ಎಂಬುದಿಲ್ಲಾಯ್ತು
ಗುಡುಗು ಗರ್ಜನೆ ಕೇಳಿ ನಡುಗಿ ಬಲಿಯೊಪ್ಪಿಸುತೆ
ಒಡೆಯ ರುದ್ರನ ರೌದ್ರವಿಳಿದ ಪರಿ ಪೋಯ್ತು
ಗೋಧನವನುಳುಹಯ್ಯ ಹೆಚ್ಚಿಸೈ ಹೇ ಪೂಷ!
ದವಸಧಾನ್ಯಗಳೀಯೊ ದೇವ ದೇವೇಶ!
ಧನಕನಕ ವಾಹನವ ಕರುಣಿಸ್ಯೆ ಧನದ, ಭೋ
ಘನರನರ್ಘರೆ, ಎಂಬ ಮೊರೆಯು ಕೇಳಿಸದು.
ಅನ್ಯ ದೇವರ್ಕಳು ದಾಳಿಟ್ಟರೇರಿದರು
ಸುಮನಸರು ಪರಬ್ರಹ್ಮ ಹರಿಹರಾದಿಗಳು
ಇನ್ನೈದು ಸಾವಿರ ವರುಷವಾಳಿದರಿವರು
ಇಂದಿವರ ಆಳಿಕೆಗು ಚ್ಯುತಿಯು ಬಂದಿಹುದು.
ಹಳೆಯಕಾಲದ,-ತಂದೆತಾತದಿರ ದೇವರುಗ
ಳಳಿದು ಹೋಗುವ ಕಡಿದು ಕಾಲ ಬರುತಿಹುದು
ಇಳಿದಿಹುದು ಕಡುನಿಡಿದು ನೆಳಲೊಂದು ಮೇಲಿಂದ
ಅಳಿಸಿಹೋಗುತಲಿಹುವು ಅವರ ಮೂರ್ತಿಗಳೂ.
ಪೋಪವರ ಪದವಿಗಳಿಗಿನ್ನಾರು ಬಂದಪರೊ
ಕೋಪಿಗಳೊ ಕರುಣಿಗಳೊ ತಿಳಿಸ ಕೋವಿದರೊ
ಆರನರಸುತೆ ಹೋಗಿ ಹವಿಸನೀಯಲು ಬೇಕೊ
ಆವ ಶೀಲವನವರು ಜಗದಿ ಬಿತ್ತುವರೊ.
ಇಲ್ಲದಿರೆ ಬೇರಾವ ದೇವರೇ ಬಾರರೋ
ಇಲ್ಲದೊಂದಕೆ ಹೆಸರನ್ನು ಕರೆಯುವೆವೋ
ಇಲ್ಲದಿರೆ ಮಾನವನ ಸುಗುಣವೇ ದೈವವೋ
ಎಲ್ಲಿಗೂ ಹರಿಯದಿಹ ಸಂಶಯವೆ ಕೊನೆಯೊ!
೪೩. ಕೋಗಿಲೆ
ಹಿರಿಮಂಜು ಬಿಟ್ಟಿಲ್ಲ
ಚಳಿಗಾಳಿ ನಿಂತಿಲ್ಲ
ಮೈ ನಡುಕ ಪೋಗಿಲ್ಲ
ಇಬ್ಬನಿಯು ಸುರಿಮಳೆಯ ನಿಲ್ಲಿಸಿಲ್ಲ;