೧೪೨
ಶಿಶಿರ ಸಾಮ್ರಾಜ್ಯಕ್ಕೆ ಚ್ಯುತಿಯು ಬಂದಿಲ್ಲ;
ಚ್ಯುತಿ ಬರುವುದೆಂಬೊಂದು ಚಿಹ್ನೆಯಿಲ್ಲ.
ತರಗೆಲೆಗಳುದಿರಿಲ್ಲ
ತಾರೆಮೊಗವರಳಿಲ್ಲ
ತರುವೊಂದು ಚಿಗುರಿಲ್ಲ
ಚಿಗುರ್ವಿಡಿವುದೆಂಬೊಂದು ಚಿಹ್ನೆಯಿಲ್ಲ;
ಹಿಮಕರನ ಬಿಳಿ ಕಿರಣ ನಗುಬೀರುವಂತಿಲ್ಲ,
ಬೆಳುದಿಂಗಳುಂಡಾರು ಆಡುವವರಿಲ್ಲ.
ಹಸುರಿನಿಸು ಕಾಣದಿಹ
ಬರಲು ಕೊಂಬೆಗಳೇರಿ
ಮರದ ತುದಿಯನ್ನು ಸಾರಿ
ಏಕಾಂಗಿ ನೀನೇಕೆ ಉಲಿಯುತಿಹೆ ಇ೦ತು?
ಆವ ಸಂತಸ ನಿನದು ಹೇಳು ಕೋಗಿಲೆಯೇ!
ಏಂ ಪ್ರಮತ್ತತೆ ಇಂದು ನಿನ್ನ ಕೂಗಿನಲಿ!
ಎತ್ತಲೇ೦ ಚೆಲುವಿಲ್ಲ
ಸಂಗಡಿಗರಾರಿಲ್ಲ
ಗಿಳಿವಿಂಡು ಗೊರವಂಕ
ಹೋ೦ಬಕ್ಕಿ ಹಾಡುತಿಹ ಸರ ಕೇಳುತ್ತಿಲ್ಲ;
ಆವ ಸೊಗ ಬರುವುದನು ನೀನಲ್ಲಿ ಕಾಣುತಿಹೆ,
ನಡುಚೈತ್ರವೆಂಬಂತೆ ಉಲಿಯುತಿಹೆಯೇ!
ನಿಡುಬಯಲನಿರಿಯುತಿಹೆ
ದೆಸೆಗಳನು ತುಂಬುತಿಹೆ
ಕಿವಿಗಳನು ಬಿರಿಸುತಿಹೆ
ಎದೆವೊಕ್ಕು ಆಸೆಗಳ ಕೆರಳಿಸುತ್ತಿದೆಯೇ!
ಬಂದೀತು ಬಂದೀತು ನಗುಗಾಲ, ಅಕ್ಕ ಓ
ಎಂದು ಕಂಠವನೆತ್ತಿ ಹಾಡುತಿಹೆಯೇ!
ನಮಗೆ ಗೋಚರಿಸದಿಹ
ಪರರಾರು ಅರಿಯದಿಹ
ನೀನೊರ್ವ ಕಾಣುತಿಹ
ಹೊಸಜೀವ ಸಂಚಾರವಾವುದಿಹುದೊ!
ನೆಲದಿಂದ ಬೇರಿಂಗೆ, ಬೇರಿ೦ದ ತರುವಿಂಗೆ
ಜೀವರಸವೇರುವುದ ಕಾಣುತಿಹೆಯಾ!