ಈ ಪುಟವನ್ನು ಪ್ರಕಟಿಸಲಾಗಿದೆ

೧೪೬

ಮುಪ್ಪು ಹರೆಯ ಮರೆಯುತ,
ಬೆಪ್ಪ, ಜಾಣ ಬೆರೆಯುತ-
ಲಗ್ಗೆ ಚೆಂಡು, ಚಿಣ್ಣಿ ಕೋಲು,
ಏಣಿ ಉಯ್ಯಲಾಡಿರೈ,

ಹಬ್ಬದೂಟ ಉಣುವ ಮುನ್ನ
ಬೇವು ಬೆಲ್ಲ ಸವಿಯಿರಣ್ಣ:
'ನೂರು ವರುಷ ಬಾಳುವ,
ಸಾವ ದೂರ ಮಾಡುವ,
ವಜ್ರಕಾಯರಾಗುವ,
ಸಿರಿಯ ಸುಖವ ಕಾಣುವ
ಎಂದು ಬೆಲ್ಲ ಮು೦ದು ಮಾಡಿ
ಬೇವು ಬೆಲ್ಲ ಮೆಲ್ಲಿರಣ್ಣ.

ಹಿರಿಯ ಜನಕೆ ನಮಿಸಿರಯ್ಯ,
ಹರಸಿ 'ಸುಖಿಸಿ' ಎಂಬರಯ್ಯ
ಗಂಟೆನಾದ ಕೇಳಿರೈ,
ಗುಡಿಗೆ ನಡೆವ ಬನ್ನಿ ರೈ.
ಭಕ್ತಿಗೂಡಿ ನಲವನದುಮಿ,
ಆಸೆ ಸಲಿಸು, ಭಯವನೊರಸು,
ಇಂಥ ಹಬ್ಬ ನೂರ ಕರೆಸು
ಎಂದು ಕರವ ಮುಗಿಯರೈ.

ಅಕ್ಕ! ಬಲ್ಲೆ ನಿಮ್ಮ ಮನವ
ಹಳೆಯ ವರುಷದಳಲ ನಲವ
ನಿಂದು ನೆನೆದುಕೊಳ್ಳಿರಯ್ಯ,
ಮುಂದ ನೋಡಿ ಇರುಳ ಕಂಡು,
ಬೆಳಕನರಸಿ ದುಗುಡಗೊಂಡು
ಅಳಲಿ, ಬೆದರಿ, ಸುಯ್ವಿರಯ್ಯ,
ಬೆದರಲೇಕೆ?
ಸುಯ್ಯಲೇಕೆ?
ಭುಜವ ತಟ್ಟಿ ನಿಲ್ಲಿರಯ್ಯ.
ನಮ್ಮ ಹಕ್ಕು ಹರುಷವಯ್ಯ,
ಹೋದುದೆಲ್ಲ ಹೋದುದೈ.