೧೩
ಶಕವರ್ಷ ೧೨೯೦ನೆಯ ಕೀಲಕ ಸಂವತ್ಸರದ ಭಾದ್ರಪದ ಶು|| ೧೦
ಬೃ ಸ್ವಸ್ತಿ ಶ್ರೀಮನ್ಮಹಾಮಂಡಳೇಶ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ
ರಾಯರ ಗಂಡ ಶ್ರೀ ವೀರಬುಕ್ಕರಾಯನು ಪೃಥ್ವೀರಾಜ್ಯವ ಮಾಡುವ ಕಾಲದಲ್ಲಿ
ಜೈನರಿಗೂ ಭಕ್ತರಿಗೂ ಸಂವಾದವಾದಲ್ಲಿ ಆನೆಯಗೊಂದಿ ಹೊಸಪಟ್ಟಣ
ಪೆನುಗುಂಡೆ ಕಲ್ಲೆ ಹದಪಟ್ಟಣವೊಳಗಾದ ಸಮಸ್ತ ನಾಡ ಭವ್ಯಜನಂಗಳು
ಆ ಬುಕ್ಕರಾಯಂಗೆ ಭಕ್ತರು ಮಾಡುವ ಅನ್ಯಾಯಂಗಳನು ಬಿನ್ನ ಹಂ ಮಾಡಲಾಗಿ
ಕೋವಿಲ್ ತಿರುಮಲೆ ಪೆರುಮಾಳ್ ಕೋವಿಲ್ ತಿರುನಾರಾಯಣಪುರ ಮುಖ್ಯ
ವಾದ ಸಕಳಾಚಾರ್ಯರೂ ಸಕಳ ಸಮಯಿಗಳೂ ಸಕಳ ಸಾತ್ವಿಕರೂ ಮೋಷ್ಟಿ ಕರು
ತಿರುಪಣಿ ತಿರುವಿಡಿ ತಣ್ಣೀರವರು ನಾಲ್ವತ್ತೆಂಟು ಜನಂಗಳು ಸಾವಂತ
ಬೋವಕ್ಕಳು ತಿರಿಕುಲ ಜಾಂಬವಕುಲವೊಳಗಾದ ಹದಿನೆಂಟು ನಾಡ ಶ್ರೀವೈಷ್ಣ
ವರ ಕೈಯ್ಯಲು ಮಹಾರಾಯನು ವೈಷ್ಣವ ದರ್ಶನಕ್ಕೆಯೂ ಜೈನದರ್ಶನಕ್ಕೆಯೂ ಭೇದವಿಲ್ಲವೆಂದು ರಾಯನು ವೈಷ್ಣವರ ಕೈಯ್ಯಲು ಜೈನರ ಕೈವಿಡಿದುಕೊಟ್ಟು
ಈ ಜೈನದರ್ಶನಕ್ಕೆ ಪೂರ್ವ ಮರಿಯಾದೆಯಲು ಪಂಚಮಹಾವಾದ್ಯ೦ಗಳೂ
ಕಳಶವೂ ಸಲುವುದು ಚೈನದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾ
ದರೂ ವೈಷ್ಣವ ಹಾನಿವೃದ್ಧಿಯಾಗಿ ಪಾಲಿಸುವರು ಈ ಮರ್ಯಾದೆಯಲು
ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀವೈಷ್ಣವರು ಶಾಸನವ ನಟ್ಟು
ಪಾಲಿಸುವರು ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯವೂ ಜೈನದರ್ಶನವೂ
ರಕ್ಷಿಸಿಕೊಂಡು ಬಹೆವು ವೈಷ್ಣವರೂ ಜೈನರೂ ಒ೦ದು ಭೇದವಾಗಿ ಕಾಣಲಾ
ಗದು ಶ್ರೀ ತಿರುಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳ
ಅನುಮತದಿಂದ ಬೆಳುಗುಳದ ತೀರ್ಥದಲ್ಲಿ ವೈಷ್ಣವ ಅಂಗರಕ್ಷೆಗೋಸುಕ ಸಮಸ್ತ
ರಾಜ್ಯದೊಳಗುಳ್ಳ೦ತಹ ಜೈನರ ಬಾಗಿಲುಗಟ್ಟಳೆಯಾಗಿ ಮನೆಮನೆಗೆ ವರ್ಷಕ್ಕೆ
೧ ಹಣ ಕೊಟ್ಟು ಆ ಎತ್ತಿದ ಹೊನ್ನಿ೦ಗೆ ದೇವರ ಅಂಗರಕ್ಷೆಗೆ ಯಿಪ್ಪತ್ತಾಳನೂ
ಸಂತವಿಟ್ಟು ಮಿಕ್ಕ ಹೊನ್ನಿ೦ಗೆ ಜೀರ್ಣ ಜಿನಾಲಯಂಗಳಿಗೆ ಸೊದೆಯನಿಕ್ಕುವುದು
ಈ ಮರಿಯಾದೆಯಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಕ್ಕೆ
ಕೊಟ್ಟು ಕೀರ್ತಿಯನೂ ಪುಣ್ಯವನೂ ಉಪಾರ್ಜಿಸಿಕೊಂಬುದು ಈ ಮಾಡಿದ
ಕಟ್ಟಳೆಯನು ಆವನೊಬ್ಬನು ಮಾಜವವನು ರಾಜದ್ರೋಹಿ ಸಂಘಸಮುದಾ ಯಕ್ಕೆ
ದ್ರೋಹಿ ತಪಸ್ವಿಯಾಗಲಿ ಗ್ರಾಮಿಣಿಯಾಗಲಿ ಈ ಧರ್ಮವ ಕೆಡಿಸಿದ
ರಾದಡೆ ಗಂಗೆಯ ತಡಿಯಲ್ಲಿ ಕಪಿಲೆಯನೂ ಬ್ರಾಹ್ಮಣನನೂ ಕೊಂದ ಪಾಪದಲ್ಲಿ
ಹೋಹರು.
ಸ್ವದತ್ತಂ ಪರದತ್ತಂ ವಾ ಯೋ ಹರೇತಿ ವಸುಂಧರಾಂ
ಷಷ್ಟಿ ವರ್ಷಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ