ಈ ಪುಟವನ್ನು ಪರಿಶೀಲಿಸಲಾಗಿದೆ

206 ಕರ್ನಾಟಕ ಕವಿಚರಿತೆ. [16 ನೆಯ

                      ಕೊಳ
  ಕೊಳರ್ವಕ್ಕಿಗಳ ಕೊಟ್ಟ ತುಂಬಿಯ ತುಳುಪಟ್ಟಿ | ಕಳಹಂಸೆಗಳ ಕಾಳೆಗದ |  
  ಕಳನೆಣೆವಕ್ಕಿಗಳೆಡೆಯೆನಲಾವೂ | ಗೊಳನೆಸೆದುದು ಕಣ್ಗಳಿಗೆ ||
                      ಚಂದ್ರ
  ಬೆಳುದಿಂಗಳೆಂದೆಂಬ ಪಾಲ್ಗಡಲಿಂ ಬಾಂ | ಬೊಳೈಗೆ ಜಲಕ್ರೀಡೆಗೆಂದು |     ತಳುವದೆಯ್ದುವ ಕಳಹಂಸನಂತಿಂದುಮಂ | ಡಳವೆಸೆದುದು ಗಗನದೊಳು ||
                     ಅಡಕೆಯಮರ
ಅಲರ್ವಿಲ್ಲನ ಪಸುರ್ವರಲ ಮಿಂಟೆಗಳ ಜ೦ | ಗುಳೆಯಂತೆ ಮೆಳೈವ ಬಿಣ್ಗೊನೆಯ | ತಳೆದಿರ್ಪಡಕೆಯಮರದ ಸಾಲಲ್ಲಿ ಕ | ಣ್ಗೊಸಿದುವೇನ ಬಣ್ಣಿಪೆನು ||
                     ----
              ವ್ಯಾಸರಾಯ, ಸು 1525
ಈತನು ಕೀರ್ತನೆಗಳನ್ನು ಬರೆದಿದ್ದಾನೆ. ಇವನು ಮಾಧ್ಯಕವಿ; ಸೋಸಲೆಯಲ್ಲಿರುವ ವ್ಯಾಸರಾಯಮಠಕ್ಕೆ ಸ್ವಾಮಿಯಾಗಿದ್ದನು. ಈತನ ಗುರು ಬ್ರಹ್ಮಣ್ಯತೀರ್ಥ, ವಿದ್ಯಾಗುರು ಶ್ರೀಪಾದರಾಯ, ವಿಜಯನಗರದ ಕೃಷ್ಣದೇವರಾಯನ (1509-1529) ಕಾಲದಲ್ಲಿ ಈತನು ಇದ್ದಂತೆ ಕೆಲವು ಶಾಸನಗಳಿಂದ ತಿಳಿಯುತ್ತದೆ. ಕುಹುಯೋಗವು ಪ್ರಪ್ತವಾದಾಗ ರಾಜನ ಪ್ರಾರ್ಥನಾನುಸಾರವಾಗಿ ಈತನು ವಿಜಯನಗರದ ಸಿಂಹಾಸನದಮೇಲೆ ಕುಳಿತು ಆಯೋಗವು ಮುಗಿವವರೆಗೆ ಆಳಿದಂತೆ ಪ್ರತೀತಿಯಿದೆ. ತಿರುಪತಿ ಯಲ್ಲಿ ಶ್ರೀನಿವಾಸದೇವರಿಗೆ 12ವರುಷ ಅರ್ಚಕನಾಗಿದ್ದಂತೆ ಹೇಳುತ್ತಾರೆ. ಈತನ ಹಾಡುಗಳಲ್ಲಿ ಕೃಷ್ಣ ಎಂಬ ಅಂಕಿತವಿದೆ. ಒಂದು ಹಾಡನ್ನು ಉದಾಹರಿಸುತ್ತವೆ_
              ರಾಗ ಮುಖಾರಿ, ಆದಿತಾಳ
 ಪಲ್ಲವಿ|| ನರನಾದಮೇಲೆ ಹರಿನಾಮ ಜಿಹ್ವೆಯಲಿರಬೇಕು ||           
ಭೂತದಯಾಪರನಾಗಿರಬೇಕು | ಪಾತಕವೆಲ್ಲಾ ಕಳೆಯಲಿಬೇಕು |
ಮಾತುಮಾತಿಗೆ ಹರಿಯೆನಬೇಕು ||1||
ಶಾಂತಿಕ್ಷಮೆದಮೆಹಿಡಿಯಲಿಬೇಕು | ಭ್ರಾಂತಿಕ್ರೋಧವ ಕಳೆಯಲಿಬೇಕು |
ಸಂತತ ಸನ್ಮಾರ್ಗದಲ್ಲಿ ಇರಬೇಕು ||2||