ಅವಶೇಷಗಳಿಂದಲೇ ನಾವು ಆ ಸ್ಮಶಾನಭೂಮಿಯಲ್ಲಿ ಸುಟ್ಟು ಬೂದಿಯಾಗಿ ಹೋದ ಜನರ ಮೈಕಟ್ಟು ನಿಲುವಿಕೆ ಮುಂತಾದುವುಗಳ ಬಗ್ಗೆ ಕಲ್ಪನೆಗಳನ್ನು ಮಾಡುವಂತೆ, ನಾವು ನಮ್ಮ ಪೂರ್ವವೈಭವದ ಅವಶೇಷಗಳಾದ ಈ ಕಟ್ಟಡಗಳಿಂದಲೇ ನಮ್ಮ ಪೂರ್ವಜರ ಸಾಮರ್ಥ್ಯದ ಕಲ್ಪನೆಯನ್ನು ಮಾಡಬೇಕಾಗಿದೆ. ಆದುದರಿಂದ ನಮ್ಮ ಕರ್ನಾಟಕ ಶಿಲ್ಪ ಕಲೆಯ ಇತಿಹಾಸವನ್ನು ಇಲ್ಲಿ ಸಂಕ್ಷೇಪ ವಾಗಿ ವರ್ಣಿಸುವೆವು.
ಜೈನ ಮತ್ತು ಬುದ್ದರ ಕಾಲದಲ್ಲಿ ವಿಹಾರಗಳನ್ನೂ ಚೈತ್ಯಾಲಯಗಳನ್ನೂ ಕಲ್ಲುಗಳಲ್ಲಿ ಕೊರೆಯುವ ಸಂಪ್ರದಾಯವಿತ್ತು. ಈ ಕೊರೆದ ಗುಡಿಗಳು ನಮ್ಮ ದೇಶದಲ್ಲಿ ವಿಪುಲವಾಗಿರುವುವು. ಹಿಂದುಸ್ಥಾನದಲ್ಲಿರುವ ಈ ತರದ ಗುಡಿಗಳಲ್ಲಿ ಹತ್ತರಲ್ಲಿ ಒಂಬತ್ತು ಪಾಲು ಗುಡಿಗಳು ಈ ಪಶ್ಚಿಮ ಹಿಂದುಸ್ಥಾನದಲ್ಲಿಯೇ ಇರುವುವು. ಪಶ್ಚಿಮ ಘಟ್ಟದ ಮಾರ್ಗಗಳ ನೆರೆಯಲ್ಲಿಯ ಗುಡ್ಡದ ಸಾಲುಗಳಲ್ಲಿ ಇಂಥ ಗುಡಿಗಳು ನೂರಾರು ಇರುವುವು. ನಾಶಿಕ, ಕಾರ್ಲೆ, ಅಜಂತಾ, ಕಾನ್ಹೆರಿ, ಭಾಜಾ, ನಾನಘಾಟ ಕೂಡ, ಜುನ್ನರ ಮುಂತಾದ ಸ್ಥಳಗಳಲ್ಲಿ ಈ ಮಾದರಿಯ ಗುಡಿಗಳು ತುಂಬಿವೆ. ಈ ತರದ ಹಲವು ಕೊರೆದ ಗುಡಿಗಳಲ್ಲಿ ಲಿಪಿಗಳೂ ದೊರೆಯುತ್ತವೆ. ಕಾರ್ಲೆ ಮತ್ತು ನಾಸಿಕ ಗುಡಿಗಳೇ ಅತ್ಯಂತ ಪ್ರಾಚೀನವಾದುವುಗಳು.
ಇವುಗಳ ತರುವಾಯದ ಗುಡಿಗಳೆಂದರೆ, ಇದೇ ಗವಿಗಳ ಮಾದರಿಯ ಮೇಲೆ ಕಟ್ಟಿದ ಗುಡಿಗಳು. ಈ ತರದ ಗುಡಿಗಳು ಐಹೊಳೆ, ಪಟ್ಟದಕಲ್ಲು, ಬಾದಾಮಿಗಳಲ್ಲಿ ದೊರೆಯುತ್ತವೆ. ಇವು ಪೂರ್ಣ ಗುಡಿಗಳೂ ಅಲ್ಲ, ಗವಿಗಳೂ ಅಲ್ಲ.
ಈ ಅಖಂಡವಾದ ಕಲ್ಲುಗುಡಿಗಳಲ್ಲಿ ಕಾರ್ಲೆ, ಕಾನ್ಹೇರಿ ಅಜಂತಾ ಇವುಗಳಲ್ಲಿಯ ಹಲವು ಗುಡಿಗಳು ನಮ್ಮ ಕರ್ನಾಟಕ ರಾಜರ ಆಳಿಕೆಯಲ್ಲಿಯೇ ಕೊರೆಯಲ್ಪಟ್ಟಿವೆ, ಎಂಬ ಸಂಗತಿಯು ನೆನಪಿನಲ್ಲಿಡತಕ್ಕುದಾಗಿದೆ. ಕಾರ್ಲೆಯೊಳಗಿನ ದೊಡ್ಡ ಸುಂದರವಾದ ಚೈತ್ಯಾಲಯವನ್ನು ಕದಂಬ ಅರಸರ ಆಳಿಕೆಯಲ್ಲಿ ಧನಶೆಟ್ಟಿಯೆಂಬೊಬ್ಬ ಧನವಂತನು ಕೂರಿಸಿದನಂತೆ. ಕಾನ್ಹೇರಿಯಲ್ಲಿ ನೂರಾರು ವಿಹಾರಗಳನ್ನು ರಾಷ್ಟ್ರಕೂಟ ಅರಸನಾದ ಅಮೋಘವರ್ಷ ಅಥವಾ ನೃಪ